ಭಾನುವಾರ, ಅಕ್ಟೋಬರ್ 28, 2012

ನಕಾರಾತ್ಮಕ ಅಭಿಪ್ರಾಯಗಳೊಂದಿಗೆ ವ್ಯವಹರಿಸುವುದು


೨೮ ಅಕ್ಟೋಬರ್ ೨೦೧೨
ಬೆಂಗಳೂರು, ಭಾರತ

ದೇವರನ್ನು ಆಳವಾದ ವಿಶ್ರಾಂತಿಯಲ್ಲಿ(ಧ್ಯಾನ) ಮಾತ್ರ ಕಂಡುಕೊಳ್ಳಬಹುದಾಗಿದೆ. ಆಳವಾದ ವಿಶ್ರಾಂತಿಗಿರುವ ಅಡಚಣೆಗಳು ಯಾವುವೆಂಬುದು ನಿಮಗೆ ತಿಳಿದಿದೆಯೇ? ಅದು, ಮನಸ್ಸಿನಲ್ಲಿರುವ ಕಡುಬಯಕೆಗಳು ಮತ್ತು ತಿರಸ್ಕಾರಗಳು. ಮನಸ್ಸು ಕಡುಬಯಕೆಗಳು ಮತ್ತು ತಿರಸ್ಕಾರಗಳಿಂದ ತುಂಬಿದ್ದರೆ, ವಿಶ್ರಾಂತಿಯು ಸಾಧ್ಯವಿಲ್ಲ, ಮತ್ತು ವಿಶ್ರಾಂತಿಯಿಲ್ಲದಿದ್ದರೆ, ಸಾಧನೆಯ ಗುರಿಯನ್ನು ತಲುಪಲು ಸಾಧ್ಯವಿಲ್ಲ. ಅದಕ್ಕಾಗಿಯೇ ನಾವು ನಮ್ಮ ಮನಸ್ಸಿನಲ್ಲಿರುವ ಕಡುಬಯಕೆಗಳು ಮತ್ತು ತಿರಸ್ಕಾರಗಳಿಂದ ಮುಕ್ತರಾಗಬೇಕು.
ಹಾಗಾದರೆ, ನಾವದನ್ನು ಮಾಡುವುದು ಹೇಗೆ? ’ನನಗೆ ಯಾರಿಂದಲೂ ಏನೂ ಬೇಡ ’, ಇದನ್ನೇ ನಾವು ನಮ್ಮ ಮನಸ್ಸಿನಲ್ಲಿ ಇಡಬೇಕಾದುದು. ನಮಗೆ ಯಾರಿಂದಲೂ ಏನೂ ಬೇಡದಿರುವಾಗ, ನಮ್ಮಲ್ಲಿ ಯಾರ ಕಡೆಗೂ ಬಯಕೆಗಳಿರಲಾರವು. ಬಯಕೆಯಿಲ್ಲದಿರುವಾಗ, ಅಲ್ಲಿ ತಿರಸ್ಕಾರವಿರುವುದಿಲ್ಲ.
ಯಾರನ್ನೂ ಒಬ್ಬ ಕೆಟ್ಟ ವ್ಯಕ್ತಿಯೆಂದು ಯೋಚಿಸಬೇಡಿ. ಜಗತ್ತಿನಲ್ಲಿ ಯಾವುದೇ ಕೆಟ್ಟ ವ್ಯಕ್ತಿಯಿಲ್ಲ. ಜನರು ಏನಾದರೂ ಕೆಟ್ಟದನ್ನು ಮಾಡಿದರೆ, ಅದು ಅವರ ಅಜ್ಞಾನ ಅಥವಾ ಅರಿವಿನ ಕೊರತೆಯ ಕಾರಣದಿಂದ ಅಥವಾ ಅವರ ಮನಸ್ಸು ನೊಂದಿರುವುದರಿಂದ. ಆದುದರಿಂದ ಯಾರ ಬಗ್ಗೆಯೂ ನಕಾರಾತ್ಮಕ ಅಭಿಪ್ರಾಯಗಳನ್ನು ಹೊಂದಬೇಡಿ.

ಪ್ರಶ್ನೆ: ಗುರುದೇವ, ಯಾರನ್ನೂ ಕೆಟ್ಟವರೆಂದು ಪರಿಗಣಿಸಬಾರದೆಂದು ನೀವು ಈಗಷ್ಟೇ ಹೇಳಿದಿರಿ. ಇತರರು ನಮ್ಮ ಜೊತೆ ಕೆಟ್ಟದಾಗಿ ನಡೆದುಕೊಂಡರೆ, ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸಬೇಕು?
ಶ್ರೀ ಶ್ರೀ ರವಿ ಶಂಕರ್: ಇತರರಿಗೆ ನಿಮ್ಮ ಬಗ್ಗೆ ಒಂದು ನಕಾರಾತ್ಮಕ ಅಭಿಪ್ರಾಯವಿದ್ದರೆ, ಅದು ಅವರ ಸಮಸ್ಯೆ, ನಿಮ್ಮದಲ್ಲ. ನಿಮ್ಮ ಕಡೆಯಿಂದ, ಯಾರನ್ನೂ ಕೆಟ್ಟವರಾಗಿ ಪರಿಗಣಿಸಬೇಡಿ. ಹೀಗೆ ಮಾಡುವುದರಿಂದ, ನಿಮ್ಮ ಮನಸ್ಸು ಸ್ಪಷ್ಟವಾಗಿಯೂ ಆಹ್ಲಾದಕರವಾಗಿಯೂ ಇರುವುದು ಮತ್ತು ನಿಮ್ಮ ಬುದ್ಧಿಯು ತೀಕ್ಷ್ಣವಾಗಿರುವುದು. ಇಲ್ಲದಿದ್ದರೆ, ಯಾವ ಜನರನ್ನು ನೀವು ಕೆಟ್ಟವರೆಂದು ಪರಿಗಣಿಸುವಿರೋ ಅವರು ಒಂದು ಭೂತದಂತೆ ನಿಮ್ಮ ಮನಸ್ಸನ್ನು ಕಾಡಲು ತೊಡಗುವರು. ಅಂತಹ ಯೋಚನೆಗಳು ನಿಮ್ಮ ಮನಸ್ಸನ್ನು ಹೊಕ್ಕಾಗ, ಸೃಜನಾತ್ಮಕವಾದ ಏನನ್ನಾದರೂ ಮಾಡಲು ನಿಮಗೆ ಸಾಧ್ಯವಾಗದು.

ಪ್ರಶ್ನೆ: ಯಾರಾದರೂ ನಿಜವಾಗಿ ನಮಗೆ ಏನಾದರೂ ಕೆಟ್ಟದನ್ನು ಮಾಡಿದ್ದರೆ, ನಾವೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ಯಾರಾದರೂ ನಿಮಗೆ ಏನಾದರೂ ಕೆಟ್ಟದನ್ನು ಮಾಡುವಾಗ, ಅವರು ಹಾಗೆ ಯಾಕೆ ಮಾಡುವರು ಎಂಬುದಾಗಿ ಯೋಚಿಸು. ಅವರು ಆರೋಗ್ಯವಂತರಾಗಿಲ್ಲವೆಂಬುದು ಒಂದು ಕಾರಣವಾಗಿರಬಹುದು.
ಒಬ್ಬ ಮೂರ್ಖನನ್ನು ಅಥವಾ ಒಬ್ಬ ಮಾನಸಿಕವಾಗಿ ಅಸ್ವಸ್ಥನಾದ ವ್ಯಕ್ತಿಯನ್ನು ನೀವು ಒಬ್ಬ ಅಪರಾಧಿಯನ್ನಾಗಿ ನೋಡುವಿರೇ? ಇಲ್ಲ! ಒಬ್ಬ ಮಾನಸಿಕವಾಗಿ ಅಸ್ವಸ್ಥನಾದ ವ್ಯಕ್ತಿಯು ನಿಮಗೆ ಏನಾದರೂ ಕೆಟ್ಟದನ್ನು ಹೇಳಿದರೆ, ನೀವು ಅವನ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಿರೇ? ಇಲ್ಲ. ಅವನು ಮಾನಸಿಕವಾಗಿ ಅಸ್ವಸ್ಥನೆಂಬುದನ್ನು ತಿಳಿದುಕೊಂಡು ನೀವು ಸುಮ್ಮನೇ ಮುಂದೆ ಸಾಗುವಿರಿ. ಆದುದರಿಂದ, ಯಾರಾದರೂ ನಿಮಗೆ ಏನಾದರೂ ಕೆಟ್ಟದಾಗಿ ಹೇಳುವಾಗ, ಅದರ ಬಗ್ಗೆ ಇದೇ ರೀತಿಯಲ್ಲಿ ಯೋಚಿಸಿ. ಒಬ್ಬ ಮನ ನೊಂದ ವ್ಯಕ್ತಿಯು ಏನಾದರೂ ಕೆಟ್ಟದನ್ನು ಹೇಳುವಾಗ, ನೀವು ಯಾಕೆ ತೊಂದರೆಗೊಳಗಾಗಬೇಕು?

ಪ್ರಶ್ನೆ: ಶಾಂತಿಯಿಂದಿರಬೇಕಾದರೆ, ಇತರರಿಂದ ನಿರೀಕ್ಷಿಸದೇ ಇರಲು ನಾವು ಕಲಿಯಬೇಕು. ಆದರೆ ದೈನಂದಿನ ಜೀವನದಲ್ಲಿ; ಕಛೇರಿಯಲ್ಲಿ ಅಥವಾ ಮನೆಯಲ್ಲಿ, ಬೇರೆ ಬೇರೆ ಜನರು ಬೇರೆ ಬೇರೆ ಕೆಲಸಗಳನ್ನು ಮಾಡಬೇಕಾಗುತ್ತದೆ. ಅವರದನ್ನು ಮಾಡದೇ ಇದ್ದರೆ, ಆಗ ಸಮಸ್ಯೆಗಳು ಏಳುತ್ತವೆ. ಪ್ರತಿಯೊಬ್ಬರೂ ಅವನ ಅಥವಾ ಅವಳ ಕೆಲಸವನ್ನು ಮಾಡಲೇಬೇಕು. ದಯವಿಟ್ಟು ಇದರ ಬಗ್ಗೆ ನಮಗೆ ಮಾರ್ಗದರ್ಶನ ನೀಡಿ. 
ಶ್ರೀ ಶ್ರೀ ರವಿ ಶಂಕರ್: ಒಬ್ಬನು ಅಥವಾ ಒಬ್ಬಳು ತಾನು ಮಾಡಬೇಕಾದ ಕೆಲಸವನ್ನು ಮಾಡದಿದ್ದರೆ, ಆಗ ನಾವು ಅವರಿಗೆ ಅದನ್ನು ಮಾಡಲು ಹೇಳಬೇಕು. ನಾವು ನಮ್ಮ ಅಧಿಕಾರವನ್ನು ಅಲ್ಲಿ ಚಲಾಯಿಸಬೇಕು. ತಮ್ಮ ಕೆಲಸವನ್ನು ಮಾಡದ ಆಲಸಿ ಜನರಿದ್ದರೆ, ನಾವು ಸುಮ್ಮನೇ ಕುಳಿತುಕೊಳ್ಳಲು ಸಾಧ್ಯವಿಲ್ಲ. ತಮ್ಮ ಕರ್ತವ್ಯದ ಬಗ್ಗೆ ಅವರಿಗೆ ಅರಿವು ಮೂಡುವಂತೆ ನಾವು ಮಾಡಬೇಕಾಗಿದೆ. ನಮಗೆ ಅವರ ಕಡೆಗೆ ಬಯಕೆ ಅಥವಾ ತಿರಸ್ಕಾರವಿದ್ದರೆ, ಆಗ ಅವರಲ್ಲಿ ಅರಿವು ಮೂಡಿಸಲು ನಮಗೆ ಸಾಧ್ಯವಿಲ್ಲ. ಅದು ನಮ್ಮನ್ನು ಕ್ರೋಧಗೊಳ್ಳುವಂತೆ ಮಾತ್ರ ಮಾಡುವುದು.

ಪ್ರಶ್ನೆ: ಕಾರಣ ಮತ್ತು ಪರಿಣಾಮ ಇದರ ಅರ್ಥವೇನು? 
ಶ್ರೀ ಶ್ರೀ ರವಿ ಶಂಕರ್: ಅದನ್ನು ’ಕಾರಣ’ ಮತ್ತು ’ಕಾರ್ಯ’ ಎನ್ನುತ್ತೇವೆ. ಹಸುವು ಕಾರಣವಾಗಿದೆ, ಹಾಲು ಕಾರ್ಯವಾಗಿದೆ. ಅಲ್ಲಿ ಹಾಲಿದ್ದರೆ, ಅದು ಹಸುವಿನಿಂದಾಗಿ. ಹಸುವಿನ ಕಾರಣವೆಂದರೆ ಹುಲ್ಲು. ಹುಲ್ಲಿನ ಕಾರಣವೆಂದರೆ ಭೂಮಿ. ಭೂಮಿಯ ಕಾರಣವೆಂದರೆ ಸೂರ್ಯ. ಪ್ರತಿಯೊಂದು ಸಂಭವದ ಹಿಂದೆಯೂ ಒಂದು ಕಾರಣವಿದೆ.
ಪರಮಕಾರಣ, ಎಲ್ಲಾ ಕಾರಣಗಳ ಕಾರಣವು ದೇವರು. ಅದಕ್ಕಾಗಿಯೇ, ’ತಸ್ಮೈ ನಮಃ ಪರಮಕಾರಣ ಕಾರಣಾಯ ’ ಎಂದು ಹೇಳಲಾಗಿದೆ. ಎಲ್ಲಾ ಕಾರಣಗಳ ಕಾರಣವು ಶಿವನಾಗಿರುವನು.

ಪ್ರಶ್ನೆ: ಗುರುದೇವ, ನಾವು ’ಆಚಮನೀಯಂ ಸಮರ್ಪಯಾಮಿ’ ಎಂದು ಹೇಳುತ್ತೇವೆ. ನೀರು ’ಅಪ’ ಎಂದು ಕರೆಯಲ್ಪಡುತ್ತದೆ, ಹಾಗಾದರೆ ನಾವು ಅದನ್ನು ’ಆಚಮನೀಯಂ’ ಎಂದು ಯಾಕೆ ಕರೆಯುತ್ತೇವೆ? ನೀರನ್ನು ಅರ್ಪಿಸುವುದರ ಮಹತ್ವವೇನು?
ಶ್ರೀ ಶ್ರೀ ರವಿ ಶಂಕರ್: ಹೌದು, ನೀರು ಆಚಮನೀಯಂ ಎಂದು ಕೂಡಾ ಕರೆಯಲ್ಪಡುತ್ತದೆ.
ಇದು ಯುಗಗಳಿಂದ ನಡೆದುಕೊಂಡು ಬರುತ್ತಿರುವ ಒಂದು ಪದ್ಧತಿಯಾಗಿದೆ. ಯಾವುದನ್ನಾದರೂ ಪ್ರಾರಂಭಿಸುವ ಮತ್ತು ಮುಕ್ತಾಯಗೊಳಿಸುವ ಮೊದಲು, ಆಚಮನೀಯಂನ್ನು ಅರ್ಪಿಸಲಾಗುತ್ತದೆ. ಅದು, ನಾವು ಅಭಿಮಂತ್ರ (ನೀರಿನ ಮೇಲೆ ಮಂತ್ರವನ್ನು ಉಚ್ಛರಿಸುವುದು. ನೀವೊಂದು ನೀರಿನ ಪಾತ್ರೆಯನ್ನು ತೆಗೆದುಕೊಂಡು, ಅದರ ಮೇಲೆ ನಿಮ್ಮ ಕೈಯನ್ನಿಟ್ಟು, ನಂತರ ಮಂತ್ರಗಳನ್ನು ಉಚ್ಛರಿಸುವಿರಿ. ಮಂತ್ರಗಳು ನೀರಿನೊಳಗೆ ಹೀರಲ್ಪಡುತ್ತವೆ)ವನ್ನು ಮಾಡಿ ನಂತರ ಅದನ್ನು ಅರ್ಪಿಸುವ ಪ್ರಕ್ರಿಯೆಯಾಗಿದೆ. ಅದು ಕೇವಲ ಕುಡಿಯುವ ನೀರಲ್ಲ. ಮಂತ್ರದ ಕಂಪನಗಳ ಮೂಲಕ ನೀರನ್ನು ಚಾರ್ಜ್ ಮಾಡಲಾಗುತ್ತದೆ.
ಯಾವಾಗೆಲ್ಲಾ ಮನೆಗೆ ಅತಿಥಿಗಳು ಬರುವರೋ, ಆಗ ಅವರ ಪಾದಗಳನ್ನು ತೊಳೆಯುವುದಕ್ಕಾಗಿ ನೀರನ್ನು ಬಳಸಲಾಗುತ್ತದೆ. ನಂತರ, ಅವರ ಕೈಗಳಿಗೆ ನೀರನ್ನು ಕೊಡಲಾಗುತ್ತದೆ. ಇದರ ಬಳಿಕ, ತಮ್ಮ ದಾಹವನ್ನು ತಣಿಸುವುದಕ್ಕಾಗಿ ಅವರಿಗೆ ಕುಡಿಯಲು ನೀರನ್ನು ಕೊಡಲಾಗುತ್ತದೆ. ಹಳೆಯ ಕಾಲದಲ್ಲಿ ಈ ಮೂರು ಪದ್ಧತಿಗಳನ್ನು ಅಭ್ಯಸಿಸಲಾಗುತ್ತಿತ್ತು.
ಒಬ್ಬರು ನಿಮ್ಮ ಮನೆಗೆ ಬರುವಾಗ ನೀವು, "ನೀವು ಕುಡಿಯಲು ಏನು ತೆಗೆದುಕೊಳ್ಳುವಿರಿ? ಸ್ವಲ್ಪ ನಿಂಬೆಹಣ್ಣಿನ ಶರಬತ್ತು, ಹಾಲು, ಚಹಾ ಅಥವಾ ಕಾಫಿ ತೆಗೆದುಕೊಳ್ಳುವಿರಾ?" ಎಂದು ಕೇಳುವುದಿಲ್ಲವೇ? ನೀವವರಿಗೆ ಕುಡಿಯಲು ಸ್ವಲ್ಪ ನೀರನ್ನು ಕೊಡುವುದಿಲ್ಲವೇ?ಅದೇ ರೀತಿಯಲ್ಲಿ, ಹಳೆಕಾಲದಲ್ಲಿ, ಪಾದ್ಯ, ಅರ್ಘ್ಯ ಮತ್ತು ಆಚಮನೀಯಂಗಳ ಪದ್ಧತಿಯಿತ್ತು.
ಪಾದ್ಯವೆಂದರೆ, ಪಾದಗಳಲ್ಲಿರುವ ಕೊಳೆಯು ಮನೆಯನ್ನು ಪ್ರವೇಶಿಸದೇ ಇರಲಿ ಎಂಬ ಕಾರಣಕ್ಕಾಗಿ, ಮನೆಯ ಪ್ರವೇಶದ್ವಾರದಲ್ಲಿ ಅತಿಥಿಯ ಪಾದಗಳನ್ನು ತೊಳೆಯುವುದು. ಅರ್ಘ್ಯವೆಂದರೆ ಅವರ ಕೈಗಳನ್ನು ತೊಳೆಯುವುದು. ಆಚಮನೀಯಂ ಎಂದರೆ ಅವರಿಗೆ ಕುಡಿಯಲು ನೀರು ಕೊಡುವುದು, ಇದರ ಮೂಲಕ ಮಾತುಕತೆಯನ್ನು ಪ್ರಾರಂಭಿಸಬಹುದೆಂಬ ಸೂಚನೆಯನ್ನು ಕೊಡುವುದು.

ಪ್ರಶ್ನೆ: ಪಂಚಾಮೃತ ಅಭಿಷೇಕದ ಮಹತ್ವವೇನು? ಈ ವಸ್ತುಗಳನ್ನು ಮಾತ್ರ ಯಾಕೆ ಆಯ್ಕೆ ಮಾಡಲಾಯಿತು?
ಶ್ರೀ ಶ್ರೀ ರವಿ ಶಂಕರ್: ಈ ಐದು ವಸ್ತುಗಳು ಅಮೃತದಂತೆ: ಹಾಲು, ಮೊಸರು, ಜೇನು, ಬೆಲ್ಲ ಮತ್ತು ತುಪ್ಪ. ಬೆಲ್ಲವನ್ನು ಬಳಸಬೇಕಾಗಿರುವುದಾದರೂ ಸಹ, ಈ ದಿನಗಳಲ್ಲಿ ಬೆಲ್ಲದ ಬದಲು ಸಕ್ಕರೆಯನ್ನು ಬಳಸಲಾಗುತ್ತಿದೆ.
ಅವುಗಳಲ್ಲಿ ಐದು ದೇವತೆಯರು ವಾಸಿಸುತ್ತಾರೆ. ಸಕ್ಕರೆಯಲ್ಲಿ ಸವಿತ್ರು, ಜೇನಿನಲ್ಲಿ ವಿಶ್ವೇದೇವ, ತುಪ್ಪದಲ್ಲಿ ಸೂರ್ಯ, ಮೊಸರಿನಲ್ಲಿ ವಾಯು ಮತ್ತು ಹಾಲಿನಲ್ಲಿ ಸೋಮ. ಹೀಗಾಗಿ, ಅವುಗಳನ್ನು ನೀವು ಅಭಿಷೇಕವಾಗಿ ಅರ್ಪಿಸುವಾಗ, ಅದರ ಉದ್ದೇಶವೆಂದರೆ - ದೇವತೆಯರ ಗುಣಗಳು ನಮ್ಮ ಜೀವನದಲ್ಲಿ ಅರಳಲಿ ಎಂಬುದಾಗಿದೆ.
ನಾವು, ಪ್ರತಿಯೊಬ್ಬರ ಮನಸ್ಸಿನ ಶಾಂತಿಗಾಗಿಯೂ ಪ್ರಾರ್ಥಿಸುತ್ತೇವೆ.
ಎಲ್ಲರ ಮನಸ್ಸಿನಲ್ಲಿಯೂ ಆನಂದವಿರಲಿ.
ಜನರ ಜೀವನಗಳಲ್ಲಿ ಶಕ್ತಿ, ಧೈರ್ಯ ಮತ್ತು ದೀರ್ಘಾಯುಷ್ಯವಿರಲಿ.
ಜನರ ಜೀವನಗಳಲ್ಲಿ ತೃಪ್ತಿ ಮತ್ತು ಸಮೃದ್ಧಿಯಿರಲಿ.
ಜೀವನದಲ್ಲಿ ಕಾಂತಿಯಿರಲಿ.
ಮಾರುತಗಳು ಮತ್ತು ನದಿಗಳು ಮಧುರವಾಗಿ ಹರಿಯುತ್ತಿರಲಿ.
ನಮ್ಮ ಹಗಲುಗಳು ಮತ್ತು ರಾತ್ರಿಗಳು ಮಧುರವಾಗಿರಲಿ.
ಮಣ್ಣಿನ ಪ್ರತಿಯೊಂದು ಕಣವೂ ನಮಗೆ ಸಿಹಿಯನ್ನು ತರಲಿ.
ಆಕಾಶದಿಂದ, ದೇವತೆಯರಿಂದ ಮತ್ತು ಪಿತೃಗಳಿಂದ ನಮಗೆ ಸಿಹಿ ಲಭಿಸಲಿ.
ನಮ್ಮ ಮಾತು ಮತ್ತು ಯೋಚನೆಗಳು ಮಧುರವಾಗಿರಲಿ.
ಸಮಾಜವು ನಮಗೆ ಸಿಹಿಯನ್ನು ತರಲಿ.
ವನಸ್ಪತಿ (ಅರಣ್ಯದ ದೇವತೆ)ಯು ನಮಗೆ ಸಿಹಿಯನ್ನು ತರಲಿ.
ಸೂರ್ಯನು ನಮ್ಮ ಜೀವನಗಳಿಗೆ ಸಿಹಿಯನ್ನು ತರಲಿ.
ನಮ್ಮ ಸಂಪೂರ್ಣ ಜೀವನವು ಇತರ ಜನರ ಜೀವನಗಳಿಗೆ ಸಿಹಿಯನ್ನು ತರಲಿ.
ಸಾಮೂಹಿಕ ಪ್ರಜ್ಞೆಗೆ ನಾವು ಸಿಹಿಯನ್ನು ತರೋಣ.  

ಪ್ರಶ್ನೆ: ಕೊನೆಯಾಗದ ಮತ್ತು ದೃಢವಾದ ಭಕ್ತಿಯನ್ನು ಹೊಂದಲಿರುವ ಮಾರ್ಗವನ್ನು ನಮಗೆ ದಯವಿಟ್ಟು ತಿಳಿಸಿ. 
ಶ್ರೀ ಶ್ರೀ ರವಿ ಶಂಕರ್: ನಿನ್ನಲ್ಲಿ ದೃಢವಾದ ಭಕ್ತಿಯಿದೆಯೆಂಬುದಾಗಿ ಭಾವಿಸು. ಭಕ್ತಿ ಸೂತ್ರಗಳಲ್ಲಿ ನಾರದ ಮಹರ್ಷಿಯು, ಭಕ್ತಿಯೆಂದರೆ ಗಳಿಸುವಂತಹ ಒಂದು ವಸ್ತುವಲ್ಲ ಎಂದು ಹೇಳುತ್ತಾರೆ. ನೀನು ಎಲ್ಲಾ ಸಂಶಯಗಳನ್ನು ಬಿಟ್ಟರೆ, ಭಕ್ತಿಯು ಅಲ್ಲಿ ಈಗಾಗಲೇ ಇದೆ.

ಪ್ರಶ್ನೆ: ನಾವು ಕಾನೂನನ್ನು ಕಲಿತರೆ, ಒಬ್ಬ ವಕೀಲನಾಗುವ ಖಚಿತತೆ ಅಲ್ಲಿದೆ. ನಾವು ಎಂಜಿನಿಯರಿಂಗ್ ಕಲಿತರೆ, ನಮ್ಮ ಪ್ರಯತ್ನಗಳನ್ನು ಹಾಕಿದರೆ ನಾವೊಬ್ಬ ಎಂಜಿನಿಯರ್ ಆಗುವ ಭರವಸೆಯಿದೆ. ಆದರೂ, ನಾವು ನಮ್ಮ ಸಾಧನೆಯನ್ನು ಮಾಡುತ್ತಿದ್ದರೆ ಮತ್ತು ಈ ಪಥದಲ್ಲಿ ನಡೆಯುತ್ತಿದ್ದರೂ ಮೋಕ್ಷವನ್ನು ಪಡೆಯುವ ಯಾವುದೇ ಭರವಸೆಯಿಲ್ಲ.
ಶ್ರೀ ಶ್ರೀ ರವಿ ಶಂಕರ್: ಖಂಡಿತವಾಗಿ ಅದರ ಭರವಸೆಯಿದೆ.
ಭಗವದ್ಗೀತೆಯಲ್ಲಿ ಅರ್ಜುನನು ಇದೇ ಪ್ರಶ್ನೆಯನ್ನು ಕೇಳುತ್ತಾನೆ. ಹಾಗಾಗಿ ಕೃಷ್ಣ ಪರಮಾತ್ಮನು ಉತ್ತರಿಸುತ್ತಾನೆ, ’ನ ಹಿ ಕಲ್ಯಾಣಕೃತ್ಕಶ್ಚಿದ್ ದುರ್ಗತಿಂ ತಾತ ಗಚ್ಛತಿ’, (ಅಧ್ಯಾಯ ೬, ಶ್ಲೋಕ ೪೦).
ಯಾರು ಆಧ್ಯಾತ್ಮಿಕ ಪಥದಲ್ಲಿ ನಡೆಯುವರೋ, ಅವರು ಕೇವಲ ಎತ್ತರೆತ್ತರಕ್ಕೆ ಮಾತ್ರ ಏರುತ್ತಾರೆ.

ಪ್ರಶ್ನೆ: ಹಲವಾರು ಶ್ರೇಷ್ಠ ಸಂತರು, ಅವರು ಜ್ಞಾನೋದಯವನ್ನು ಗಳಿಸಿದ್ದರೂ ಕೂಡಾ ಅದನ್ನು ಯಾರಿಗೂ ನೇರವಾಗಿ ಕೊಡಲಿಲ್ಲ. ಅವರು ಕೇವಲ ಅದನ್ನು ಗಳಿಸಲಿರುವ ಹೆಜ್ಜೆಗಳನ್ನು ಮಾತ್ರ ಹೇಳಿಕೊಟ್ಟರು. ದೇವರು ಯಾಕೆ ಎಲ್ಲರಿಗೂ ನೇರವಾಗಿ ಜ್ಞಾನೋದಯವನ್ನು ನೀಡುವುದಿಲ್ಲ? ಇದಕ್ಕೆ ಸಂಸ್ಕಾರಗಳು ಅವಶ್ಯವೇ?
ಶ್ರೀ ಶ್ರೀ ರವಿ ಶಂಕರ್: ಸಂಸ್ಕಾರಗಳು ಆವಶ್ಯಕ. ನೀವಿಲ್ಲಿರುವುದಾದರೆ, ಅದರರ್ಥ ಎಲ್ಲೋ ಒಂದು ಕಡೆ ನಿಮ್ಮಲ್ಲಿ ಬರುವ ಆಸಕ್ತಿ ಮತ್ತು ಕುತೂಹಲವಿತ್ತೆಂದು. ಆ ಆಸಕ್ತಿಯಿಲ್ಲದೆ, ನೀವಿಲ್ಲಿಗೆ ಬಂದಿರಲು ಹೇಗೆ ಸಾಧ್ಯ? ಆದುದರಿಂದ, ಸ್ವಲ್ಪ ಸಂಸ್ಕಾರಗಳು ಆವಶ್ಯಕವಾಗಿವೆ.
ಹೀಗಿದ್ದರೂ, ಕೇವಲ ಸಂಸ್ಕಾರಗಳು ಸಾಕಾಗುವುದಿಲ್ಲ. ಜೀವನದಲ್ಲಿ, ಸಂಸ್ಕಾರಗಳು, ಅವಕಾಶಗಳು ಮತ್ತು ಅನುಗ್ರಹ ಎಲ್ಲವೂ ಬೇಕು. ಇವುಗಳೊಂದಿಗೆ, ಸ್ವಪ್ರಯತ್ನ ಕೂಡಾ ಬೇಕು. ನಿಮಗೆ ಸತ್ಸಂಗಕ್ಕೆ ಬರುವ ಬಯಕೆಯಿದ್ದರೆ, ಆದರೆ ನಿಮ್ಮ ಹಾಸಿಗೆಯಲ್ಲಿ ಮಲಗಿದ್ದರೆ, ಅದು ಸಹಾಯ ಮಾಡುವುದೇ? ಆದುದರಿಂದ, ಸ್ವಪ್ರಯತ್ನ, ಸಂಸ್ಕಾರಗಳು, ಅವಕಾಶಗಳು ಮತ್ತು ಅನುಗ್ರಹ ಎಲ್ಲವೂ ಅಗತ್ಯವಾಗಿದೆ.

ಪ್ರಶ್ನೆ: ಸಾಧನೆಯನ್ನು ನಿಯಮಿತವಾಗಿ ಮಾಡುವವರಿಗೆ ಕೂಡಾ ಅಪಸ್ಮಾರ ದಾಳಿಯಾಗುವ ಸಾಧ್ಯತೆಗಳಿವೆಯೇ?
ಶ್ರೀ ಶ್ರೀ ರವಿ ಶಂಕರ್: ಆ ವ್ಯಕ್ತಿಯು ಏನನ್ನು ತಿನ್ನುತ್ತಾನೆ, ಕುಡಿಯುತ್ತಾನೆ ಮತ್ತು ದಿನವಿಡೀ ಏನನ್ನು ಮಾಡುತ್ತಾನೆ ಎಂಬುದರ ಮೇಲೆ ಅದು ಆಧರಿಸಿದೆ. ತಿನ್ನುವ, ಕುಡಿಯುವ ಮತ್ತು ಜೀವನ ಶೈಲಿ ಸರಿಯಿಲ್ಲದಿದ್ದರೆ, ಅದರ ಸಾಧ್ಯತೆಯಿದೆ.
ನರಮಂಡಲದಲ್ಲಿ ಅತಿಯಾದ ಒತ್ತಡವಿದ್ದರೆ, ಆಗ ಅಂತಹ ದಾಳಿಗಳ ಸಾಧ್ಯತೆಗಳಿವೆ. ಒಬ್ಬನು ಆರೋಗ್ಯಕರ ಜೀವನವನ್ನು ಜೀವಿಸಿದರೆ, ಹಾಗಾಗದು.