ಮಂಗಳವಾರ, ಅಕ್ಟೋಬರ್ 9, 2012

ಗುರು ಮತ್ತು ಆಧ್ಯಾತ್ಮಿಕ ಪಥ


೯ ಅಕ್ಟೋಬರ್, ೨೦೧೨
ಬೆಂಗಳೂರು ಆಶ್ರಮ, ಭಾರತ

ಪ್ರಶ್ನೆ: ಗುರೂಜಿ, ಉಪನಿಷತ್ತುಗಳಲ್ಲಿ ಸಮಿತ್ ಪಾಣಿ(ಗುರುವಿಗೆ ಒಣಗಿದ ಕಡ್ಡಿಗಳನ್ನು ಅರ್ಪಿಸುವ ಪದ್ಧತಿ)ಯ ಉಲ್ಲೇಖಗಳು ನಮಗೆ ಸಾಮಾನ್ಯವಾಗಿ ಕಾಣಸಿಗುತ್ತವೆ. ಗುರೂಜಿ, ಇದರ ಮಹತ್ವವೇನೆಂದು ನೀವು ನಮಗೆ ದಯವಿಟ್ಟು ಹೇಳುವಿರಾ?
ಶ್ರೀ ಶ್ರೀ ರವಿಶಂಕರ್: ಸಮಿತ್  ಎಂದರೆ ಬೆಂಕಿ ಹಿಡಿಯಲು ಸಿದ್ಧವಾಗಿರುವ ಕಡ್ಡಿ. ಇಲ್ಲಿ, ಅದು, ಜ್ಞಾನವನ್ನು ಕೊಡಲ್ಪಟ್ಟಾಗ ನೀವದನ್ನು ಥಟ್ಟನೆ ಹಿಡಿದುಕೊಳ್ಳಲು ಸಿದ್ಧವಾಗಿರುವ ಒಂದು ಸಂಕೇತ.
ಸಮಿತ್ ಪಾಣಿ ಎಂಬುದಕ್ಕೆ ಹಲವಾರು ಅರ್ಥಗಳಿವೆ. ಒಂದು, ’ಲಕ್ಷ್ಯವಿಟ್ಟಿರು’; ಎರಡನೆಯದು, ’ನೂರು ಶೇಕಡಾ ನೀಡಲು ಸಿದ್ಧವಾಗಿರು’. ನಿಮಗೆ ಗೊತ್ತಾ, ಸಮಿತ್ತನ್ನು ಬೆಂಕಿಯಲ್ಲಿ ಹಾಕಿದಾಗ, ಅದು ಏನನ್ನೂ ಉಳಿಸದೇ ಸಂಪೂರ್ಣವಾಗಿ ಉರಿಯುತ್ತದೆ. ಆದುದರಿಂದ, ಸಮಿತ್ ಪಾಣಿಯ ಅರ್ಥವೇನೆಂದರೆ, ’ಜ್ಞಾನವನ್ನು ಹೀರಿಕೊಂಡು, ಅದನ್ನು ಜೀವಿಸಲು ಸಿದ್ಧವಾಗಿರು. ನಿನ್ನ ನೂರು ಶೇಕಡಾವನ್ನು ನೀಡು.’
ಸಮಿತ್ ಎಂದರೆ, ’ಸ್ಥಿರತೆಯೊಂದಿಗೆ ಹೋಗು (ಗುರುವಿನ ಬಳಿಗೆ)' ಎಂಬ ಅರ್ಥ ಕೂಡಾ ಇದೆ. ಒಬ್ಬ ವಿದ್ಯಾರ್ಥಿಯಲ್ಲಿ ಸ್ವಲ್ಪ ಸ್ಥಿರತೆ ಮತ್ತು ಸಹಿಷ್ಣುತೆಯಿರುವ ಅಗತ್ಯವಿದೆ. ಸ್ವಲ್ಪ ಕಷ್ಟ ಉಂಟಾದಾಗ ವಿದ್ಯಾರ್ಥಿಯು ಓಡಿ ಹೋದರೆ, ಆಗ ಆ ವಿದ್ಯಾರ್ಥಿಗೆ ಏನನ್ನೂ ಅಧ್ಯಯನ ಮಾಡಲು ಸಾಧ್ಯವಿಲ್ಲ. ಸಾಧಾರಣವಾಗಿ ಹೀಗೆ ಆಗುತ್ತದೆ, ಒಂದನೆಯ ವರ್ಷದ ವೈದ್ಯಕೀಯ ಕಾಲೇಜು ಅಥವಾ ತಾಂತ್ರಿಕ ಕಾಲೇಜಿನ ಬಳಿಕ ಮಕ್ಕಳು ತಮ್ಮ ಕೈತೊಳೆದು ಓಡಿಹೋಗಲು ಬಯಸುತ್ತಾರೆ. ಈ ರೀತಿ ನಿಮಗಾಗಲಿಲ್ಲವೇ? ತಾಂತ್ರಿಕ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಎಷ್ಟು ಮಂದಿಗೆ ಆ ರೀತಿ ಅನ್ನಿಸಿದೆ? ಇದು ಯಾಕೆಂದರೆ, ಅದು ಬಹಳ ಕಷ್ಟಕರವಾಗಿ ತೋರುತ್ತದೆ. ಆದರೆ ನೀವು ಅದರ ಮೂಲಕ ಹಾದು ಹೋಗಬೇಕು. ನೀವು ಆ ಕಷ್ಟಕಾಲವನ್ನು ಎದುರಿಸಿ ನಿಲ್ಲಬೇಕು. ಆದುದರಿಂದ ಸಮಿತ್ ಪಾಣಿ ಎಂದರೆ, ಆ ಸಮಚಿತ್ತತೆ ಮತ್ತು ಸಹಿಷ್ಣುತೆಯನ್ನು ಕಾಪಾಡುವುದು ಎಂಬ ಅರ್ಥ ಕೂಡಾ.
ಹಿಂದಿನ ದಿನಗಳಲ್ಲಿ ಹೇಳುತ್ತಿದ್ದರು, "ಬರಿಗೈಯಲ್ಲಿ ಹೋಗಬೇಡ. ಒಬ್ಬರು ಗುರುವಿನ ಬಳಿಗೆ ಹೋಗುವಾಗ, ನೀನು ಏನನ್ನಾದರೂ ತೆಗೆದುಕೊಂಡು ಹೋಗು."
ಗುರುವು ನಿಮಗೆ ಜ್ಞಾನವನ್ನು ಕೊಡುತ್ತಾರೆ, ಆದುದರಿಂದ ನೀವೇನು ಮಾಡಬಹುದೆಂದರೆ, ಅದನ್ನು ಸ್ವಲ್ಪ ಕಡ್ಡಿಗಳೊಂದಿಗೆ ವಿನಿಮಯ ಮಾಡಿಕೊಳ್ಳುವುದು. ಪ್ರತಿಯಾಗಿ ಏನನ್ನಾದರೂ ಕೊಡಿ, ಯಾಕೆಂದರೆ ಜ್ಞಾನವು ಒಂದು ಪರಸ್ಪರ ವಿನಿಮಯದೊಂದಿಗೆ ಹರಿಯುತ್ತದೆ. ಏನಾದರೂ ಬರುತ್ತದೆ ಮತ್ತು ಏನಾದರೂ ಹೋಗುತ್ತದೆ.
ಆದುದರಿಂದ ಈ ರೀತಿಯಲ್ಲಿ, ಸಮಿತ್ ಪಾಣಿಗೆ ಹಲವಾರು ಅರ್ಥಗಳಿವೆ. ಹುರುಪು, ಉತ್ಸಾಹ ಮತ್ತು ಅರ್ಪಣೆಯೊಂದಿಗೆ ಅಧ್ಯಯನ ನಡೆಸಲು ಹೋಗುವುದು, ಹಾಗೂ ಜ್ಞಾನವನ್ನು ಸ್ವೀಕರಿಸಲು; ಕಠೋರತೆಗೆ ಒಳಗಾಗಲು ಸಿದ್ಧವಾಗುವುದು.
’ನೀವೊಬ್ಬ ವಿದ್ಯಾರ್ಥಿಯಾಗಿದ್ದರೆ, ಆಗ ನಿಮಗೆ ಯಾವುದೇ ಸುಖವಿಲ್ಲ, ಮತ್ತು ನೀವೊಬ್ಬ ಸುಖದ ಅನ್ವೇಷಕನಾಗಿದ್ದರೆ, ಆಗ ನಿಮಗೆ ಯಾವುದೇ ಜ್ಞಾನವಿಲ್ಲ’ ಎಂಬ ಒಂದು ಗಾದೆ ಕೂಡಾ ಇದೆ. ಆದುದರಿಂದ, ಒಬ್ಬ ವಿದ್ಯಾರ್ಥಿಯು ಕಷ್ಟದ ಪರಿಸ್ಥಿತಿಯ ಮೂಲಕ ಹಾದುಹೋಗಲೇ ಬೇಕು. ಇದರರ್ಥ, ನೀವು ಕೇವಲ ಸುಖವನ್ನು ಪ್ರೀತಿಸುವವರಾಗಿದ್ದರೆ, ನಿಮಗೆ ಅಧ್ಯಯನ ನಿಷ್ಠರಾಗಿರಲು ಸಾಧ್ಯವಿಲ್ಲ.
ಇಂಗ್ಲೀಷಿನಲ್ಲಿ, ಸ್ಟುಡಿಯಸ್ (ಅಂದರೆ ಅಧ್ಯಯನ ನಿಷ್ಠ) ಎಂಬ ಶಬ್ದದ ಅರ್ಥ, ಹೆಚ್ಚು ಗಮನ ಕೊಡುವುದು ಮತ್ತು ಸುಖಗಳು ಅಥವಾ ಹಾಯಾಗಿರುವುದರ ಹಿಂದೆ ಓಡದಿರುವುದು, ಆದರೆ ಆರಾಮ ವಲಯದಿಂದಾಚೆಗೆ ಹೋಗುವುದು ಎಂದು.

ಪ್ರಶ್ನೆ: ಗುರೂಜಿ, ಹೆಚ್ಚಾಗಿ ಪುರಾಣಗಳಲ್ಲಿ ನಾವು, ಇಂದ್ರನು ಯಾವುದಾದರೂ ಪಾಪವನ್ನು ಮಾಡುವುದರ ಬಗ್ಗೆ ಓದುತ್ತೇವೆ. ಅಗ್ನಿ ಅಥವಾ ವರುಣ ಅಥವಾ ವಾಯು ಅಥವಾ ಇತರ ಯಾವುದೇ ದೇವತೆಗಳು ಪಾಪ ಮಾಡುವುದರ ಬಗ್ಗೆ ನಾವು ಓದಿಯೇ ಇಲ್ಲ. ಗಣೇಶನ ಕಥೆಯಂತೆಯೇ, ಇದರಲ್ಲಿ ಕೂಡಾ ಏನೋ ಮಹತ್ವ ಅಥವಾ ಏನೋ ಕಲಿಯಬೇಕಾದುದು ಇರಲೇಬೇಕು.  ದಯವಿಟ್ಟು ನೀವು ಇದರ ಆಧ್ಯಾತ್ಮಿಕ ಅರ್ಥದ ಬಗ್ಗೆ ವಿವರಿಸುವಿರಾ?
ಶ್ರೀ ಶ್ರೀ ರವಿಶಂಕರ್: ಇಂದ್ರ ಎಂದರೆ ಗುಂಪು ಮನೋಭಾವ. ನಾವು ಯಾವುದನ್ನು ಗುಂಪು ಮನೋಧರ್ಮವೆಂದು ಕರೆಯುತ್ತೇವೆ? ಒಂದು ಗುಂಪಿಗೆ ಅದರದ್ದೇ ಆದ ಮನಸ್ಸಿದೆ. ಆ ಗುಂಪಿನ ಮನಸ್ಸು ಇಂದ್ರ ಎಂದು ಕರೆಯಲ್ಪಡುತ್ತದೆ.
ಇಂದ್ರನಿಗೆ ಒಂದು ಸಾವಿರ ಕಣ್ಣುಗಳಿವೆಯೆಂದು ಭಾವಿಸಲಾಗಿದೆ. ಒಂದು ಸಾವಿರ ಕಣ್ಣುಗಳೆಂದರೆ, ಒಬ್ಬರಿಗೆ ಎಲ್ಲೆಡೆಗಳಲ್ಲಿಯೂ ಕಣ್ಣುಗಳಿವೆಯೆಂದು ಅರ್ಥವಲ್ಲ. ಅದು, ಐನೂರು ಜನರಿರುವ ಒಂದು ಗುಂಪನ್ನು; ಒಂದು ಜನಸಮೂಹವನ್ನು ಸೂಚಿಸುತ್ತದೆ.
ಹೀಗೆ ಗುಂಪು ಒಂದು ಪ್ರಜ್ಞೆಯನ್ನು, ಒಂದು ಮನೋಧರ್ಮವನ್ನು ಸೃಷ್ಟಿಸುತ್ತದೆ ಮತ್ತು ಅದುವೇ ಇಂದ್ರ. ಅದಕ್ಕಾಗಿಯೇ, ಒಬ್ಬ ಜ್ಞಾನೋದಯವಾದ ವ್ಯಕ್ತಿಯು ಹುಟ್ಟಿದಾಗ, ಇಂದ್ರನು ಬಹಳ ಉದ್ರಿಕ್ತನಾಗುತ್ತಾನೆ, ಯಾಕೆಂದರೆ ಆಗ ಗುಂಪು ಮನೋಭಾವ ಇರಲು ಸಾಧ್ಯವಿಲ್ಲ. ಜ್ಞಾನೋದಯವಾಗಿರುವ ಹಾಗೂ ಜಾಗೃತಿಯಿರುವ ಒಬ್ಬ ವ್ಯಕ್ತಿಯು ಗುಂಪು ಮನೋಭಾವವನ್ನು ಬೆಳೆಯಲು ಬಿಡುವುದಿಲ್ಲ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಅವನು ಜನರ ಮನಸ್ಸಿನೊಳಕ್ಕೆ ವಿವೇಕವನ್ನು ಹಾಕುತ್ತಾನೆ. ಅವನು ಎಲ್ಲರಿಗೂ, "ಹೇ! ನಿಮ್ಮ ಮನಸ್ಸಿನಿಂದ ಯೋಚಿಸಿ! ಎಚ್ಚೆತ್ತುಕೊಳ್ಳಿ! ನಿಮ್ಮಲ್ಲಿ ಪ್ರತಿಯೊಬ್ಬರೂ,  ಯೋಚಿಸಿ!’ ಎಂದು ಹೇಳುತ್ತಾನೆ. ಅದಕ್ಕಾಗಿಯೇ, ಒಬ್ಬರು ಋಷಿ ಧ್ಯಾನ ಮಾಡುವಾಗಲೆಲ್ಲಾ ಇಂದ್ರನು ಹೆದರುವುದು.
ಜನಸಮೂಹ, ಸಾಮೂಹಿಕ ಪ್ರಜ್ಞೆಯು ಇಂದ್ರ ಎಂದು ಕರೆಯಲ್ಪಡುವುದು. ಅದು, ಯಾವುದೋ ವ್ಯಕ್ತಿಯು ಮೇಲೆ ಸ್ವರ್ಗದಲ್ಲಿ ಕುಳಿತಿರುವುದಲ್ಲ. ಇಂದ್ರನು ಇಲ್ಲಿಯೇ ಇದ್ದಾನೆ. ನಮ್ಮಲ್ಲಿ ಎಲ್ಲಾ ಪಂಚಭೂತಗಳಿರುವಂತೆ; ಪೃಥ್ವಿ, ಜಲ, ಅಗ್ನಿ, ವಾಯು ಮತ್ತು ಈಥರ್; ಇಂದ್ರನೆಂದರೆ ಸಾಮೂಹಿಕ ಪ್ರಜ್ಞೆ.
ಗುಂಪು ಮನೋಭಾವದಲ್ಲಿ ಸಾಧಾರಣವಾಗಿ ಏನಾಗುತ್ತದೆ? ಒಬ್ಬರು ಹೇಳುತ್ತಾರೆ, "ಓ, ನಮ್ಮ ನಾಯಕನಿಗೆ ಕೆಡುಕನ್ನುಂಟುಮಾಡಲಾಗಿದೆ", ಮತ್ತು ಎಲ್ಲರೂ ನಂತರ ಶುರು ಮಾಡುತ್ತಾರೆ. ಅವರು ಬಸ್ಸಿಗೆ ಬೆಂಕಿ ಹಚ್ಚುವುದು, ಪ್ರತಿಮೆಗಳನ್ನು ಕೆಡಿಸುವುದು ಮೊದಲಾದವನ್ನು ಮಾಡುತ್ತಾರೆ ಹಾಗೂ ಜನಸಮೂಹವು, ತಾವೇನು ಮಾಡುತ್ತಿರುವೆವೆಂಬುದನ್ನು ತಿಳಿಯದೆಯೇ ಮುಂದಕ್ಕೆ ಹೋಗುತ್ತಿರುತ್ತದೆ.
ಒಂದು ಜನಸಮೂಹವು, ಜನರನ್ನು, ಜೀವನವನ್ನು ಮತ್ತು ಆಸ್ಥಿಯನ್ನು ನಾಶ ಮಾಡುತ್ತಾ ಆವೇಶದಿಂದ ವರ್ತಿಸುತ್ತದೆ. ಅಲ್ಲವೇ? ಆದುದರಿಂದ, ಅದು ಗುಂಪು ಮನೋಭಾವ. ಜ್ಞಾನ, ಬುದ್ಧಿವಂತಿಕೆ ಮತ್ತು ಜಾಗರೂಕತೆಯಿರುವಾಗ ಆ ಗುಂಪು ಮನೋಭಾವ ನಿಲ್ಲಲು ಸಾಧ್ಯವಿಲ್ಲ.

ಪ್ರಶ್ನೆ: ಗುರೂಜಿ, ಹಲವಾರು ಜನರನ್ನು ಗುಣಪಡಿಸಿದ, ಆತ್ಮಸಾಕ್ಷಾತ್ಕಾರ ಹೊಂದಿದ ಬಹಳಷ್ಟು ಗುರುಗಳು ಬಹಳ ಸಂಕಟವನ್ನು ಅನುಭವಿಸಬೇಕಾಗಿ ಬಂದುದು ಯಾಕೆ?
ಶ್ರೀ ಶ್ರೀ ರವಿಶಂಕರ್: ನೋಡಿ, ಆತ್ಮಕ್ಕೆ ಅಥವಾ ಮನಸ್ಸಿಗೆ ಯಾವುದೇ ಯಾತನೆಯಿಲ್ಲ. ಮಿತಿಗಳಿರುವುದು ಶರೀರಕ್ಕೆ. ನೀವು ಶರೀರವನ್ನು ಬಹಳಷ್ಟು ಎಳೆದರೆ, ಆಗ ಖಂಡಿತವಾಗಿ ಶರೀರವು ತನ್ನ ನಿತ್ಯಕ್ರಮಕ್ಕೆ ಒಳಗಾಗಬೇಕಾಗುತ್ತದೆ. ಆದುದರಿಂದ ಶರೀರಕ್ಕೆ ಶೀತ, ಕೆಮ್ಮು  ಮತ್ತು ಈ ಎಲ್ಲಾ ರೋಗಗಳು ಬರುತ್ತವೆ.
ಒಬ್ಬ ಸಂತನ ಶರೀರವು ಶ್ರದ್ಧೆ ಮತ್ತು ಪ್ರೀತಿಯಿಂದ ಮಾಡಲ್ಪಟ್ಟಿದೆ. ಆದುದರಿಂದ, ಶ್ರದ್ಧೆ ಮತ್ತು ಪ್ರೀತಿಯು ಮುರಿದು ಬೀಳುವಾಗ, ಶರೀರಕ್ಕೆ ಕೂಡಾ ಧಕ್ಕೆಯಾಗುತ್ತದೆ.
ಪ್ರಾಚೀನ ಕಾಲದಲ್ಲಿ, ಸಂತರು ಮತ್ತು ಜ್ಞಾನಿಗಳು ಹೆಚ್ಚಾಗಿ ತಮಗೆ ಅತೀ ಹತ್ತಿರದವರನ್ನು ನಿಂದಿಸುತ್ತಿದ್ದರು. ಇದು ಯಾಕೆಂದರೆ, ಕೋಪ ಅಥವಾ ಕೆಟ್ಟ ಯೋಚನೆಗಳು ಅವರಿಗೆ ಪ್ರಿಯರಾದ ಒಬ್ಬ ವ್ಯಕ್ತಿಯಲ್ಲಿ ಏಳುವಾಗ, ಅದು ಅವರ ಮೇಲೂ ಪ್ರಭಾವ ಬೀರುತ್ತದೆ.  ಉದಾಹರಣೆಗೆ, ನಿಮ್ಮ ಮನೆಯೊಳಗೆ ಕುಳಿತುಕೊಂಡು ಹಾನಿಯನ್ನುಂಟುಮಾಡುವ ಒಬ್ಬ ವ್ಯಕ್ತಿಯು, ಹೊರಗಡೆ ರಸ್ತೆಯಲ್ಲಿ ನಿಂತು ಹಾನಿಯನ್ನುಂಟುಮಾಡುವ ಒಬ್ಬನಿಗಿಂತ ಹೆಚ್ಚು ನಿಮ್ಮ ಮೇಲೆ ಪ್ರಭಾವ ಬೀರುತ್ತಾನೆ. ಕಸವು ರಸ್ತೆಯ ಮೇಲಿರುವಾಗ ಅದು, ನಿಮ್ಮ ಮನೆಯೊಳಗೆ ಇರುವಾಗಿನಷ್ಟು ನಿಮ್ಮ ಮೇಲೆ ಪ್ರಭಾವ ಬೀರುವುದಿಲ್ಲ. ಅಲ್ಲವೇ? ಅದೇ ರೀತಿ!
ಅದಕ್ಕಾಗಿಯೇ, ಪ್ರಾಚೀನ ಕಾಲದಿಂದ, ಶೀಲವೆಂಬುದು ಬಹಳ ಆವಶ್ಯಕವೆಂದು ಹೇಳಲಾಗಿದೆ.
ಒಬ್ಬನಲ್ಲಿ ಷಟ್ ಸಂಪತ್ತಿಗಳು ಇರಬೇಕು:
ಶಮ (ಮನಸ್ಸಿನ ಶಾಂತತೆ)
ದಮ (ಇಂದ್ರಿಯಗಳ ನಿಯಂತ್ರಣ ಅಥವಾ ಸಂಯಮ)
ಉಪರತಿ (ಸಂತೃಪ್ತಿ)
ತಿತಿಕ್ಷ (ಸಹಿಷ್ಣುತೆ)
ಶ್ರದ್ಧಾ
ಸಮಾಧಾನ
ಒಬ್ಬ ವ್ಯಕ್ತಿಯಲ್ಲಿ ಈ ಎಲ್ಲಾ ಆರು ಗುಣಗಳು ಬರುವ ವರೆಗೆ ಅವನು ಒಬ್ಬ ಮುಮುಕ್ಷು (ಮೋಕ್ಷವನ್ನು ಬಯಸುವವನು) ಆಗುವುದಿಲ್ಲ, ಮತ್ತು ಒಬ್ಬನು ಮುಮುಕ್ಷುವಾಗುವಲ್ಲಿಯವರೆಗೆ ಅವನಿಗೆ ಜ್ಞಾನವನ್ನು ನೀಡಲಾಗುವುದಿಲ್ಲ.
ಆದ್ದರಿಂದ, ಮುಮುಕ್ಷುವಾಗಲು ಒಬ್ಬನಲ್ಲಿ ವಿವೇಕ, ವೈರಾಗ್ಯ ಮತ್ತು ಷಟ್ ಸಂಪತ್ತಿಗಳು ಇರಬೇಕು. ಆಗ ಮಾತ್ರ ಅವನಿಗೆ, ಶಿಷ್ಯ, ವಿದ್ಯಾರ್ಥಿ ಅಥವಾ ಭಕ್ತನ ಪದವಿಯನ್ನು ಪಡೆಯಲು ಸಾಧ್ಯ. ಅಲ್ಲದಿದ್ದರೆ ಅದು, ದೋಣಿಯಲ್ಲಿ ಒಬ್ಬ ಹುಚ್ಚನಿರುವಂತೆ. ಅವನು ಸ್ಥಿಮಿತ ಕಳೆದುಕೊಳ್ಳಲ ಪ್ರಾರಂಭಿಸಿದರೆ ಅಥವಾ ನರ್ತಿಸಲು ತೊಡಗಿದರೆ, ಆಗ ಅವನು ಮುಳುಗುವನು ಮತ್ತು ದೋಣಿ ಹಾಗೂ ಇತರ ಪ್ರಯಾಣಿಕರೂ ಕೂಡಾ ಮುಳುಗುವರು.
ಅದಕ್ಕಾಗಿಯೇ ಭಗವಾನ್ ಬುದ್ಧನೂ, ಒಬ್ಬ ಶಿಷ್ಯನಲ್ಲಿ ಶೀಲ, ಸಮಾಧಿ (ಇಲ್ಲಿ, ಸಮಚಿತ್ತತೆ) ಮತ್ತು ಪ್ರಜ್ಞೆ ಇರಬೇಕು ಎಂದು ಹೇಳಿದನು. ಒಬ್ಬ ಶಿಷ್ಯನಲ್ಲಿ ಅಹಿಂಸೆ, ಶೀಲ ಮೊದಲಾದ ಗುಣಗಳಿರಬೇಕು. ಅವನಿಗೆ ಸಮಾಧಿಯ ಸ್ಥಿತಿಯ ಒಂದು ಅನುಭವವಿರಬೇಕು. ಆಗ ಮಾತ್ರ ಅವನಿಗೆ ಪ್ರಜ್ಞಾವಂತನಾಗಲು ಸಾಧ್ಯ.

ಪ್ರಶ್ನೆ: ಗುರೂಜಿ, ನೀವು ನಮ್ಮಲ್ಲಿ ವೈರಾಗ್ಯದಿಂದಿರಲು ಹೇಳುತ್ತೀರಿ. ನಾನು ನಿಮ್ಮ ಬಗ್ಗೆ ವೈರಾಗ್ಯದಿಂದಿರುವುದು ಹೇಗೆ? ನಾನು ನಿಮ್ಮನ್ನು ಪ್ರೀತಿಸುತ್ತೇನೆ ಮತ್ತು ದಿನದಿಂದ ದಿನಕ್ಕೆ ಮೋಹವು  ಹೆಚ್ಚಾಗುತ್ತಾ ಹೋಗುತ್ತಿದೆ.
ಶ್ರೀ ಶ್ರೀ ರವಿಶಂಕರ್: ಈ ಮೋಹವು ನಿನ್ನನ್ನು ಇತರ ಬೇಡದಿರುವ ವಿಷಯಗಳಿಂದ ದೂರಕ್ಕೊಯ್ಯಲು ಸಹಾಯ ಮಾಡುತ್ತಿರುವುದಾದರೆ, ಆಗ ಅದು ಪರವಾಗಿಲ್ಲ. ಅದು ನಿನಗೊಂದು ಏಕಾಗ್ರತೆ ನೀಡುತ್ತಿರುವುದಾದರೆ, ಅದು ಒಳ್ಳೆಯದು. ಆದರೆ ಅದು, ಮಾತ್ಸರ್ಯ, ಕೋಪ, ಲೋಭ ಮತ್ತು ಆ ಎಲ್ಲಾ ನಕಾರಾತ್ಮಕ ಭಾವನೆಗಳಿಗೆ ಕಾರಣವಾದರೆ, ನೀನು ನಿನ್ನ ಮೇಲೆ ಕೆಲಸ ಮಾಡುವುದು ಉತ್ತಮ. ನಿನ್ನೊಳಗೆ ಆಳಕ್ಕೆ ಹೋಗು, ಧ್ಯಾನ ಮಾಡು ಮತ್ತು ಅದನ್ನು ತಿಳಿದುಕೋ.
ಯಾವುದೇ ಮೋಹವು, ಅದು ನಿಮ್ಮನ್ನು ಪರಮಾತ್ಮನೆಡೆಗೆ ಅಥವಾ ಒಂದು ಉನ್ನತ ಗುರಿಯೆಡೆಗೆ ಕೊಂಡೊಯ್ಯುವುದಾದರೆ, ಅದು ಪರವಾಗಿಲ್ಲ. ಆದರೆ, ಅದು ನಿಮ್ಮನ್ನು ಕೆಳಕ್ಕೆಳೆಯುತ್ತಿದ್ದರೆ, ನೀವು ಜ್ಞಾನದ ಕಡೆಗೆ ಮರಳಿ ಬರಬೇಕು.
ನಮ್ಮ ಪ್ರತಿಯೊಂದು ಕ್ರಿಯೆಗೆ, ನಾವು ನಮ್ಮೊಳಗೆ ನೋಡಬೇಕು. ನಾವು ಯಾವುದನ್ನಾದರೂ ದೂಷಿಸುತ್ತಿದ್ದರೆ, ಅದರರ್ಥವೇನೆಂದರೆ ನಮಗೆ ಅದನ್ನು ಬಿಟ್ಟಿರಲು ಸಾಧ್ಯವಿಲ್ಲವೆಂದು.
ಸಾಮಾನ್ಯವಾಗಿ, ನೀವು ನೋಡುತ್ತೀರಿ, ಒಬ್ಬರು ಬಹಳ ಕೆಟ್ಟವರಾಗಿದ್ದರೆ, ನೀವು ಅವರಿಂದ ಹಾಗೆಯೇ ದೂರ ಸರಿಯುತ್ತೀರಿ. ಆದರೆ ನೀವು ಅವರನ್ನು ದ್ವೇಷಿಸುವಾಗ, ಅದರರ್ಥ, ನಿಮಗೆ ದೂರ ಹೋಗಲು ಸಾಧ್ಯವಾಗದೇ ಇರುವಂತಹ ಒಂದು ಆಳವಾದ ಸಂಬಂಧವಿದೆಯೆಂದು. ನೀವು ಅವರೊಂದಿಗಿರಲು ಬಯಸುತ್ತೀರಿ, ಅದಕ್ಕಾಗಿಯೇ ನೀವು ಅವರನ್ನು ಇಷ್ಟಪಡದೇ ಇರಲು ತೊಡಗುತ್ತೀರಿ.
ಮನಸ್ಸು ಬಹಳ ಸಂಕೀರ್ಣವಾದುದೆಂದು ನಾನು ಹೇಳುತ್ತೇನೆ. ಅದಕ್ಕಾಗಿಯೇ ನಾನು ಹೇಳುತ್ತಿರುವುದು, ನಿಮಗೆ ಬೇರೆ ಯಾವುದೇ ಮನೋರಂಜನಾ ಚ್ಯಾನೆಲಿನ ಅಗತ್ಯವಿಲ್ಲ. ಮನಸ್ಸು ಸಾಕಷ್ಟು ಮನೋರಂಜನೆಯನ್ನು ನೀಡುತ್ತದೆ. ಎಲ್ಲಾ ಚ್ಯಾನೆಲ್ಲುಗಳೂ ಇಲ್ಲಿಯೇ ನಿಮ್ಮ ಮನಸ್ಸಿನಲ್ಲಿವೆ.
ಮನಸ್ಸಿನ ಸುಳಿಯಲ್ಲಿ ಸಿಕ್ಕಿಹಾಕಿಕೊಂಡವನೊಬ್ಬನು, ಕರುಣೆಗೆ ಮಾತ್ರ ಅರ್ಹನಾಗಿದ್ದಾನೆ, ಕೋಪಕ್ಕಲ್ಲ. ಸಾಧಾರಣವಾಗಿ ನೀವೇನು ಮಾಡುತ್ತೀರಿ? ಯಾರಾದರೂ ನಕಾರಾತ್ಮಕವಾಗಿದ್ದರೆ, ಅಥವಾ ಅವರು ನಿಮಗೆ ವಿರೋಧವಾಗಿದ್ದರೆ, ನೀವು ಅವರ ಮೇಲೆ ಕೋಪಗೊಳ್ಳುತ್ತೀರಿ. ಅವರಿಗೆ ಸ್ವಾತಂತ್ರ್ಯವಿದೆಯೆಂದು ನೀವು ಯೋಚಿಸುತ್ತೀರಿ. ನನಗೆ ಅದಕ್ಕೆ ವಿರುದ್ಧವಾಗಿ ಅನ್ನಿಸುತ್ತದೆ. ನನಗೆ ಬಹಳ ಕರುಣೆಯುಂಟಾಗುತ್ತದೆ, ಯಾಕೆಂದರೆ ಅವರು ತಮ್ಮದೇ ಮನಸ್ಸಿನ ಸುಳಿಯಲ್ಲಿ ಸಿಕ್ಕಿಹಾಕಿರುತ್ತಾರೆ. ತಾವೇನು ಮಾಡುತ್ತಿರುವೆವೆಂಬುದು ಅವರಿಗೆ ತಿಳಿದಿಲ್ಲ ಮತ್ತು ಇದು ಅವರ ವರ್ತನೆಯಿಂದ ಬಹಳ ಸ್ಪಷ್ಟವಾಗುತ್ತದೆ. ಹಾಗೂ, ಎಲ್ಲಾದರೂ ಏನದರೂ ತಪ್ಪಾಗುತ್ತಿದ್ದರೆ ಈ ಜನರಿಗೆ ಬಹಳ ಸಂತೋಷವಾಗುತ್ತದೆ. ಒಂದು ಒಳ್ಳೆಯ ಕಾರ್ಯಕ್ರಮವಾಗುತ್ತಿರುತ್ತದೆ ಮತ್ತು ಮಳೆ ಬಂದು ಒದ್ದೆಯಾಗುತ್ತದೆ. ಅವರನ್ನುತ್ತಾರೆ, "ಒಳ್ಳೆಯದು! ನೋಡಿ ಮಳೆ ಬಂತು, ಪ್ರಕೃತಿ ಕೂಡಾ ಅದನ್ನು ಬೆಂಬಲಿಸುವುದಿಲ್ಲ." ಅವರಿಗೆ ಅದರ ಬಗ್ಗೆ ಬಹಳ ಸಂತೋಷವಾಗುತ್ತದೆ. ಇದು ತಪ್ಪು.
ನೀವದನ್ನು ಇನ್ನೊಂದು ರೀತಿಯಲ್ಲಿ ಕಾಣಬೇಕು. ಮಳೆಯ ನಡುವೆಯೂ, ಜನರು ಇನ್ನೂ ಕುಳಿತುಕೊಂಡು ಧ್ಯಾನ ಮಾಡುತ್ತಿದ್ದಾರೆ ಅಥವಾ ಸೇವೆ ಮಾಡುತ್ತಿದ್ದಾರೆ ಅಥವಾ ಕಾರ್ಯಕ್ರಮವನ್ನು ಮುಂದುವರಿಸುತ್ತಿದ್ದಾರೆ. ಆದರೆ, ಒಳಗೆ ಆಳದಲ್ಲಿ ನಕಾರಾತ್ಮಕವಾಗಿರುವ ಒಬ್ಬ ವ್ಯಕ್ತಿಯು, ಯಾವುದಾದರೂ ಕೆಲಸ ನಡೆಯದೇ ಇರುವಾಗ ಸಂತೋಷಗೊಳ್ಳುವನು ಮಾತ್ರ. ಇದು ಬಹಳ ತಮಾಷೆ ಮತ್ತು ಬಹಳ ವಿಚಿತ್ರ ಸಂಗತಿ. ಇದೊಂದು ಖಾಯಿಲೆಗೊಂಡ ಮನಸ್ಸನ್ನು ಸೂಚಿಸುತ್ತದೆ. ಪ್ರಪಂಚದಲ್ಲಿ ಎಲ್ಲಿಯಾದರೂ ಯಾರಿಗಾದರೂ ಒಂದು ಒಳ್ಳೆಯದಾಗುತ್ತಿದ್ದರೆ, ಅವರದನ್ನು ಸಹಿಸಲಾರರು. ಆದುದರಿಂದ, ಪ್ರಪಂಚದಲ್ಲಿರುವ ಅಂತಹ ಜನರ ಬಗ್ಗೆ ನೀವು ಕೇವಲ ಕರುಣೆಯಿಂದಿರಬಹುದಷ್ಟೆ.

ಪ್ರಶ್ನೆ: ಗುರೂಜಿ, ನಾವು ನಮ್ಮ ಚಪ್ಪಲಿಯನ್ನು ಕಳೆದುಕೊಂಡರೆ ಅಥವಾ ಯಾರಾದರೂ ಅದನ್ನು ತೆಗೆದುಕೊಂಡು ಹೋದರೆ, ಅವರು ನಮ್ಮ ಕೆಟ್ಟ ಕರ್ಮಗಳನ್ನು ತೆಗೆದುಕೊಂಡುಹೋಗುವರೆಂಬುದು ನಿಜವೇ?
ಶ್ರೀ ಶ್ರೀ ರವಿಶಂಕರ್: ಅದೊಂದು ದುಬಾರಿ ಬೂಟ್ಸಾಗಿದ್ದರೆ, ಆಗ ಹೌದು, ಆ ರೀತಿ ಯೋಚಿಸುವುದು ಉತ್ತಮ. ಕಡಿಮೆಪಕ್ಷ ನಿಮಗೆ ರಾತ್ರಿಯಲ್ಲಿ ನೆಮ್ಮದಿಯ ನಿದ್ರೆ ಬರಬಹುದು. ಆದರೆ ಅದೊಂದು ಅಗ್ಗದ ಚಪ್ಪಲಿಯಾಗಿದ್ದರೆ.... (ಶ್ರೀ ಶ್ರೀಯವರು ತಲೆಯಾಡಿಸುತ್ತಾರೆ).
ನೋಡಿ, ಮುಖ್ಯ ಉದ್ದೇಶವೆಂದರೆ, ವರ್ತಮಾನದ ಕ್ಷಣದಲ್ಲಿರಲು ಜನರಿಗೆ ಹೇಳುವುದಾಗಿತ್ತು. ಆಗಿಹೋದುದಕ್ಕೆ ಜೋತುಬಿದ್ದು, ಅದರ ಬಗ್ಗೆ ಹಪಹಪಿಸಿ ಈ ಕ್ಷಣವನ್ನು ಕೆಡಿಸಬೇಡಿ. ಏನಾಯಿತೋ ಅದು ಆಗಿಹೋಯಿತು! ಮುಗಿಯಿತು!
ನೀವು ಟ್ರ್ಯಾಫಿಕ್ಕಿನಲ್ಲಿ ಸಿಕ್ಕಿಹಾಕಿಕೊಂಡಿರಿ, ಮುಗಿಯಿತು! ಈಗ, ನೀವು ಮನೆ ತಲುಪಿದಾಗ, ನೀವು ಹೇಗೆ ಬೇರೆ ದಾರಿಯನ್ನು ಬಳಸಬೇಕಿತ್ತು ಎಂಬುದರ ಬಗ್ಗೆ ಮಾತನಾಡುತ್ತಾ ನಿಮ್ಮ ಮುಂದಿನ ಎರಡು ಗಂಟೆಗಳನ್ನು ವ್ಯರ್ಥ ಮಾಡಬೇಡಿ. ಅದೊಂದು ನಿಷ್ಪ್ರಯೋಜಕವಾದ, ಕಾಲಹರಣ.
ನಮ್ಮ ಪೂರ್ವಿಕರಲ್ಲಿ ಎಷ್ಟೊಂದು ಒಳ್ಳೆಯ ಉಪಾಯಗಳಿದ್ದವೆಂದರೆ, ಅವರು ಹೇಳಿದರು, "ಓ!ನಿನಗೆ ಈ ರೀತಿ ಆಗಿರುವುದು ನಕ್ಷತ್ರಗಳಿಂದಾಗಿ." ಈಗ ನೀವು ನಕ್ಷತ್ರಗಳ ಮೇಲೆ ಕೋಪಗೊಳ್ಳಲು ಸಾಧ್ಯವಿಲ್ಲ.
ಆದುದರಿಂದ, ನಿಮ್ಮ ಸುತ್ತಲಿರುವ ಜನರ ಮೇಲೆ ಕೋಪಗೊಳ್ಳುವ ಬದಲು, ನೀವು, "ಓ, ಇದು ನನ್ನ ಕರ್ಮದಿಂದಾಗಿ, ನನ್ನ ನಕ್ಷತ್ರಗಳಿಂದಾಗಿ ಈ ರೀತಿ ಆಗಿರುವುದು" ಎಂದು ಹೇಳುತ್ತೀರಿ.
ಹೀಗೆ ನಿಮಗೆ ಒಂದು ನಿರ್ದಿಷ್ಟ ಪ್ರಮಾಣದ ಸ್ವೀಕಾರ ಮನೋಭಾವ ಮತ್ತು ಶಾಂತಿ ದೊರಕುತ್ತದೆ ಹಾಗೂ ಇದು, ಕಹಿಯಾಗದೆಯೇ ನೀವು ಜೀವನದಲ್ಲಿ ಮುಂದುವರಿಯಲು ಸಹಾಯ ಮಾಡುತ್ತದೆ.
ಇದು ಭಾರತದ ಬಗೆಗಿನ ಒಂದು ಸುಂದರವಾದ ವಿಷಯ.
ಭಾರತೀಯ ಸಮಾಜದಲ್ಲಿ, ಕೆಟ್ಟ ವಿಷಯಗಳು ನಡೆಯಬಹುದು, ಆದರೆ ನಾವು ಅದರ ಬಗ್ಗೆ ಕಹಿ ಭಾವನೆ ಹೊಂದಿ, ಅದರ ಬಗ್ಗೆ ಹಪಹಪಿಸುವುದಿಲ್ಲ.
ಸಂಪೂರ್ಣ ಪ್ರಪಂಚವು ಈ ಪಾಠವನ್ನು ಕಲಿಯಲೆಂದು ನಾನು ಹಾರೈಸುತ್ತೇನೆ.
ಇದು ನಮ್ಮ ಸಂಸ್ಕೃತಿಯಲ್ಲಿ; ನಮ್ಮ ರಕ್ತದಲ್ಲಿ ಬರುವ ಒಂದು ವಿಷಯ. ಸಮಾಜದಲ್ಲಿ ಏನಾದರೂ ಕೆಟ್ಟದಾದರೆ, ನಾವು ಕೂಡಲೇ ಚೇತರಿಸಿಕೊಳ್ಳುತ್ತೇವೆ. ಅದರ ಬಗ್ಗೆ ಗೊಣಗಾಡದೆಯೇ ನಾವು ಮುಂದಕ್ಕೆ ಸಾಗುತ್ತೇವೆ. ಇದು ಬಹಳ ಆಸಕ್ತಿದಾಯಕವಾದುದು.
ಸಾಧಾರಣವಾಗಿ ಜನರು ಹೇಳುತ್ತಾರೆ, "೫೦ ವರ್ಷಗಳ ಹಿಂದೆ ನೀನು ನನಗೆ ಹೀಗೆ ಮಾಡಿದೆ ಮತ್ತು ಈಗಲೂ ನೀನು ನನ್ನ ಶತ್ರುವಾಗಿರುವೆ." ಆ ದ್ವೇಷವನ್ನು ಹಾಗೂ ವೈರವನ್ನು ಜನರು ತಮ್ಮ ಮನಸ್ಸು ಮತ್ತು ಹೃದಯಗಳಲ್ಲಿರಿಸುತ್ತಾರೆ. ಆದರೆ ಇಲ್ಲಿ, ಇದೊಂದು ಬಹಳ ಅನನ್ಯವಾದ ವಿಷಯ. ವೈರತ್ವವನ್ನು ಹಾಗೂ ದ್ವೇಷವನ್ನು ನಾವು ಪೋಷಿಸುವುದಿಲ್ಲ.

ಪ್ರಶ್ನೆ: ಸಮಾಜದಲ್ಲಿರುವ ಭ್ರಷ್ಟಾಚಾರವು, ಸಮಾಜದಲ್ಲಿನ ಆಧ್ಯಾತ್ಮಿಕತೆಯೊಂದಿಗೆ ಸಂಬಂಧ ಹೊಂದಿದೆ ಎಂದು ನೀವು ಹೇಳುತ್ತೀರಿ. ಆದರೆ, ಪಾಶ್ಚಾತ್ಯ ದೇಶಗಳಲ್ಲಿ ಭಾರತಕ್ಕಿಂತಲೂ ಕಡಿಮೆ ಆಧ್ಯಾತ್ಮಿಕತೆಯಿದ್ದರೂ,  ಅಲ್ಲಿರುವ ಭ್ರಷ್ಟಾಚಾರವೂ ಭಾರತಕ್ಕೆ ಹೋಲಿಸಿದರೆ ಬಹಳಷ್ಟು ಕಡಿಮೆಯಾಗಿದೆ, ಇದು ಹೇಗೆ? ಚೈನಾದಲ್ಲಿ ಕೂಡಾ, ಆಧ್ಯಾತ್ಮಿಕತೆಯು ಕಡಿಮೆಯಾಗಿದೆ, ಆದರೂ ಅಭಿವೃದ್ಧಿಯ ವಿಷಯ ಬಂದಾಗ ಅವರು ಭಾರತಕ್ಕಿಂತ ಉತ್ತಮವಾಗಿದ್ದಾರೆ.
ಶ್ರೀ ಶ್ರೀ ರವಿಶಂಕರ್: ಭಾರತವು ಈಗಲೂ ಅದರ ಹಿಂದಿನ ಆಧ್ಯಾತ್ಮಿಕ ರುಚಿಯಲ್ಲಿ ಬದುಕುತ್ತಿದೆ. ಅದು ಹೇಗೆಂದರೆ, ಅಡುಗೆಮನೆಯಲ್ಲಿ ಈಗಲೂ ಆಹಾರದ ಪರಿಮಳ ಬರುತ್ತಿದೆ, ಆದರೆ ಪಾತ್ರೆಗಳಲ್ಲಿ ಆಹಾರವಿಲ್ಲ ಎಂಬಂತೆ. ಅದುವೇ ಆಗಿರುವುದು.
ನೀವು ಅಡುಗೆಮನೆಯನ್ನು ಪ್ರವೇಶಿಸುತ್ತೀರಿ ಮತ್ತು ಬಜ್ಜಿ ಹಾಗೂ ಬೋಂಡಾಗಳ ಸುವಾಸನೆ ಬರುತ್ತದೆ, ಆದರೆ ಬೋಂಡಾಗಳು ಈಗಲೂ ಪಾತ್ರೆಯಲ್ಲಿವೆಯೆಂದು ಯೋಚಿಸಬೇಡಿ. ಆದುದರಿಂದ, ಇದು ಹಿಂದಿನಿಂದ ಭಾರತಕ್ಕೆ ಲಭಿಸಿದ ಕೊಡುಗೆ. ಅವರು ಬಹಳಷ್ಟು ಬೋಂಡಾಗಳನ್ನು ಮಾಡಿದರು ಮತ್ತು ಎಲ್ಲರೂ ತಿಂದರು.
ಭಾರತವು ಒಂದು ಉನ್ನತವಾದ ಆಧ್ಯಾತ್ಮಿಕ ಸ್ಥಿತಿಯಲ್ಲಿತ್ತು. ಆದರೆ ಇವತ್ತು ಮತ್ತು ೨೦ ವರ್ಷಗಳಿಂದೀಚೆಗೆ ಸಮಾಜವು, ಬೇಜವಾಬ್ದಾರಿತನ, ಆತ್ಮೀಯತೆಯ ಅಭಾವ ಮತ್ತು ಸಮಗ್ರತೆಯ ಅಭಾವದ ಮಟ್ಟಕ್ಕೆ ಇಳಿದಿದೆ; ವಿಶೇಷವಾಗಿ ರಾಜಕೀಯ ರಂಗದಲ್ಲಿ  ಹಾಗೂ ಇದು ದೇಶದ ಮೇಲೆ ಪರಿಣಾಮ ಬೀರುತ್ತಿದೆ.
ಜನಸಾಮಾನ್ಯನು ಬಹಳ ಪ್ರಾಮಾಣಿಕನಾಗಿದ್ದರೂ, ನಾಯಕತ್ವವು ಪ್ರಾಮಾಣಿಕವಾಗಿಲ್ಲದಿರುವಾಗ, ಭ್ರಷ್ಟಾಚಾರವು ಒಳನುಸುಳಲು ತೊಡಗುತ್ತದೆ.
ಒಂದು ಮಾತಿದೆ, ’ಯಥಾ ರಾಜ ತಥಾ ಪ್ರಜ’. ಅದು, ’ಯಥಾ ಪ್ರಜ, ತಥಾ ರಾಜ!’ ಎಂದಲ್ಲ. ಅದು ಮೇಲಿನಿಂದ ಕೆಳಕ್ಕೆ ಸಾಗುತ್ತದೆ. ಆದುದರಿಂದ, ಮೇಲೆ ಭ್ರಷ್ಟಾಚಾರವಿರುವಾಗ, ಅದು ಒಳನುಸುಳಲು ಶುರುವಾಗುತ್ತದೆ.
ಕನಿಷ್ಠಪಕ್ಷ ಭಾರತವು ಈಗಲೂ ಅಖಂಡವಾಗಿಯೇ ಇದೆ. ಇದು ಯಾಕೆಂದರೆ, ಸ್ವಲ್ಪ ಆಧ್ಯಾತ್ಮಿಕತೆಯ ಭಾವನೆಯು ಇದೆ, ಅದು ವಿಷಯಗಳನ್ನು ಉತ್ತಮ ರೀತಿಯಲ್ಲಿಟ್ಟಿದೆ ಮತ್ತು ಜನರನ್ನು ಒಟ್ಟಾಗಿರಿಸಿದೆ. ಇಲ್ಲದಿದ್ದರೆ, ಭಾರತವು ಬಹಳ ಸಮಯ ಮೊದಲೇ ತುಂಡು ತುಂಡಾಗಿ ಹೋಗಿರುತ್ತಿತ್ತು.

ಪ್ರಶ್ನೆ: ಗುರೂಜಿ, ಆಧ್ಯಾತ್ಮಿಕ ಪಥದಲ್ಲಿ ಪ್ರಗತಿ ಹೊಂದಲು, ಸರಳತೆ ಮತ್ತು ಸ್ವಾಭಾವಿಕತೆಗಳಂತಹ ಸಕಾರಾತ್ಮಕ ಗುಣಗಳನ್ನು ಬೆಳೆಸಲು ನಾವು ಪ್ರಯತ್ನ ಪಡಬೇಕೇ ಅಥವಾ ಅವುಗಳು ಅವುಗಳಾಗಿಯೇ ವರ್ಧಿಸುತ್ತವೆಯೇ? 
ಶ್ರೀ ಶ್ರೀ ರವಿಶಂಕರ್: ಇಲ್ಲ, ಒಳ್ಳೆಯ ಗುಣಗಳನ್ನು ವರ್ಧಿಸಲು ಒಬ್ಬನು ಯಾವುದೇ ಪ್ರಯತ್ನವನ್ನೂ ಮಾಡಬೇಕಾಗಿಲ್ಲ. ಒಳ್ಳೆಯ ಗುಣಗಳು ನಿಮ್ಮಲ್ಲಿ ಅವುಗಳಾಗಿಯೇ ಅರಳುತ್ತವೆ. ಹೇಗೆ ಒಂದು ಮೊಗ್ಗು ತಾನಾಗಿಯೇ ಒಂದು ಹೂವಾಗಿ ಅರಳುತ್ತದೆಯೋ, ಅದೇ ರೀತಿಯಲ್ಲಿ ಒಳ್ಳೆಯ ಗುಣಗಳು ನಿಮ್ಮಲ್ಲಿ ಸ್ವಾಭಾವಿಕವಾಗಿ ಅರಳುತ್ತವೆ. ನೀವು ಮಾಡಬೇಕಾಗಿರುವುದೇನೆಂದರೆ, ಮುಚ್ಚಳವನ್ನು ತೆಗೆಯುವುದು.
ನೋಡಿ, ಒಂದು ಮೊಗ್ಗಿನ ಮೇಲೆ ನೀವೊಂದು ಮುಚ್ಚಳವನ್ನು ಇಟ್ಟರೆ, ಅದು ಹೇಗೆ ಅರಳಬಲ್ಲದು? ನೀವು ಆ ಮುಚ್ಚಳವನ್ನು ತೆಗೆಯಬೇಕು ಮತ್ತು ನಂತರ ಅದು ಅರಳುತ್ತದೆ. ಅದೇ ರೀತಿಯಲ್ಲಿ ಒಳ್ಳೆಯ ಗುಣಗಳು ಕೂಡಾ. ಕೇವಲ ಪ್ರಯತ್ನಗಳ ಮೂಲಕ ಒಳ್ಳೆಯ ಗುಣಗಳು ನಮ್ಮೊಳಗೆ ಅರಳಲಾರವು. ಆಳವಾದ ವಿಶ್ರಾಂತಿ ಅಂದರೆ, ಧ್ಯಾನದ ಮೂಲಕ ಅದು ಆಗುವುದು. ನೀವು ಒತ್ತಡ ರಹಿತರಾಗಿದ್ದಾಗ, ವಿಶ್ರಾಮದಲ್ಲಿರುವಾಗ ಮತ್ತು ನಿಮ್ಮ ಆತ್ಮದಲ್ಲಿ ವಿರಮಿಸುವಾಗ, ಒಳ್ಳೆಯ ಗುಣಗಳು ಹಾಗೆಯೇ ನಿಮ್ಮೊಳಗಿನಿಂದ ಅರಳುತ್ತವೆ.

ಪ್ರಶ್ನೆ: ಗುರೂಜಿ, ಹೆಚ್ಚಾಗಿ ಕಛೇರಿಗಳಲ್ಲಿ ಬಹಳಷ್ಟು ಕೆಲಸ ಮಾಡಲು ಬಾಕಿ ಉಳಿದಿರುವಾಗ, ಮನಸ್ಸು ಅಶಾಂತವಾಗುತ್ತದೆ ಮತ್ತು ನಾವು ಕಳೆದುಹೋದ ಅನುಭವವಾಗುತ್ತದೆ ಹಾಗೂ ಏನಾಗುತ್ತಿದೆಯೆಂಬುದು ತಿಳಿಯುವುದಿಲ್ಲ. ಅಂತಹ ಸಮಯದಲ್ಲಿ ಏನು ಮಾಡುವುದು?
ಶ್ರೀ ಶ್ರೀ ರವಿಶಂಕರ್: ನೀನು ಏನನ್ನೆಲ್ಲಾ ಮಾಡಬೇಕೋ ಅವುಗಳನ್ನು ಒಂದು ಪಟ್ಟಿ ಮಾಡು ಮತ್ತು ನಂತರ ಆದ್ಯತೆಯನ್ನು ನೀಡು, ಮತ್ತು ಆ ಆದ್ಯತೆಗಳ ನಡುವೆ, ಧ್ಯಾನವನ್ನು ಒಂದು ಅಂಶವನ್ನಾಗಿರಿಸು. ನಿನ್ನ ಎಲ್ಲಾ ಬಯಕೆಗಳು ಈಡೇರುತ್ತವೆಯೆಂಬ ನಂಬಿಕೆ ನಿನ್ನಲ್ಲಿರಬೇಕು, ಮತ್ತು ಆ ಭಾವನೆಯೊಂದಿಗೆ ಸ್ವಲ್ಪ ಹೊತ್ತು ಧ್ಯಾನ ಮಾಡಲು ಕುಳಿತುಕೋ.
ಯಾರು ತನ್ನ ಮನಸ್ಸು ಮತ್ತು ಬುದ್ಧಿಯನ್ನು ನನ್ನ ಕಡೆಗೆ ಹರಿಸುತ್ತಾನೋ, ನಾನು ಅವನಿಂದ ಯಾವತ್ತೂ ದೂರವಿರುವುದಿಲ್ಲ ಮತ್ತು ಅವನು ನನ್ನಿಂದ ಯಾವತ್ತೂ ದೂರವಿರುವುದಿಲ್ಲ ಎಂದು ಕೃಷ್ಣ ಪರಮಾತ್ಮನು ಭಾಷೆ ನೀಡಿದ್ದಾನೆ. ಆದುದರಿಂದ ಕೇವಲ ಇದನ್ನು ನೆನಪಿನಲ್ಲಿರಿಸು.
ಪ್ರತಿದಿನವೂ ಸ್ವಲ್ಪ ಹೊತ್ತು ಧ್ಯಾನ ಮಾಡುವೆವೆಂಬ ಒಂದು ತೀರ್ಮಾನವನ್ನು ನಾವು ತೆಗೆದುಕೊಳ್ಳಬೇಕು. ಆಗ ದೇವರು ಖಂಡಿತವಾಗಿ ನಮ್ಮ ಪ್ರಾರ್ಥನೆಗಳನ್ನು ಪೂರೈಸುತ್ತಾರೆ. ವಾಸ್ತವವಾಗಿ, ಆಗ ನಮಗೆ ಬೇಡಿಕೆಯನ್ನೊಡ್ಡಲೂ ಅಧಿಕಾರವಿರುತ್ತದೆ. ಅದು ಹೇಗೆಂದರೆ, ನೀವು ಸಾಕಷ್ಟು ಅಂಕಗಳನ್ನು ಶೇಖರಿಸಿದಾಗ, ನಿಮಗೆ ಆ ಅಂಕಗಳ ಮೇಲೆ ಹಕ್ಕು ಸಾಧಿಸಲು ಸಾಧ್ಯವಾಗುತ್ತದೆ. ಆದುದರಿಂದ ನೀವು ಸೇವೆ ಮಾಡುವಾಗ, ನಿಮಗೆ ಅಂಕಗಳು ದೊರೆಯುತ್ತವೆ. ಅವುಗಳ ಮೇಲೆ ನೀವು ಹಕ್ಕು ಸಾಧಿಸಬಹುದು.
ಹಲವು ಸಲ ನಾನು ಹೊರಗಡೆ ಯಾವುದಾದರೂ ಸತ್ಸಂಗಕ್ಕೆ ಹೋಗುವಾಗ, ಜನರು ನನ್ನನ್ನು ಈ ರೀತಿಯಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಾರೆ! (ನಗು) ಕಾರ್ಯಕ್ರಮ ಮುಗಿದ ಬಳಿಕ ವಿಶ್ರಾಂತಿ ತೆಗೆದುಕೊಳ್ಳಲು ನಾನು ನನ್ನ ಕೋಣೆಗೆ ಹೋದ ಬಳಿಕವೂ, ರಾತ್ರಿ ೧೧ ಅಥವಾ ೧೨ ಗಂಟೆಗೆ ಜನರು ದರ್ಶನಕ್ಕಾಗಿ ಬರುತ್ತಾರೆ. ಅವರು ನನ್ನಲ್ಲಿ ಹೇಳುತ್ತಾರೆ, "ಈ ಜನರು ಬಹಳಷ್ಟು ಸೇವೆ ಮಾಡಿದ್ದಾರೆ ಮತ್ತು ನಿಮ್ಮ ಆಶೀರ್ವಾದವನ್ನು ಕೇಳಲು ಬಂದಿದ್ದಾರೆ. ದಯವಿಟ್ಟು ಅವರನ್ನು ಭೇಟಿಯಾಗಿ ಗುರೂಜಿ." ಆಗ ನಾನು ಹೇಳುತ್ತೇನೆ, "ಸರಿ, ನಾನು ಬರುತ್ತೇನೆ."
ಅವರು ಅಷ್ಟೊಂದು ಸೇವೆಯನ್ನು ಮಾಡಿದ ಕಾರಣ, ದರ್ಶನ ನೀಡದೆ ನನಗೆ ಬೇರೆ ದಾರಿಯಿಲ್ಲ! (ನಗು)
ಆದುದರಿಂದ, ಈ ರೀತಿಯಲ್ಲಿ ನಾವು ನಮ್ಮ ಅಂಕಗಳನ್ನು ಹೆಚ್ಚಿಸುತ್ತಾ ಇರಬೇಕು.
ಒಬ್ಬ ಭಕ್ತನು, ದೇವರು ತನ್ನ ಪ್ರಾರ್ಥನೆಗಳನ್ನು ಪೂರೈಸುವಂತೆ ಮಾಡಬಲ್ಲದುದು ಹೀಗೆಯೇ. ತನ್ನ ಭಕ್ತರ ಕೆಲಸಗಳನ್ನು ಈಡೇರಿಸುವುದರ ಹೊರತಾಗಿ ದೇವರಿಗೆ ಬೇರೆ ದಾರಿಯಿಲ್ಲ. ಅದೇ ರೀತಿಯಲ್ಲಿ ನಾವು ಪ್ರಪಂಚದಲ್ಲಿ ಕೂಡಾ ಗೆಲ್ಲಬಹುದು.
ನಾವು ಒಳ್ಳೆಯ ಕೆಲಸಗಳನ್ನು ಮಾಡುವಾಗ, ಯಾರಾದರೂ ನಮ್ಮನ್ನು ಯಾಕೆ ಇಷ್ಟಪಡದೇ ಇರುತ್ತಾರೆ? ಏನಾದರೂ ಒಳ್ಳೆಯದನ್ನು ಮಾಡುವವರೊಬ್ಬರನ್ನು ಯಾರಾದರೂ ಇಷ್ಟಪಡದಿರುತ್ತಾರೆಯೇ? ಅದು ಯಾವತ್ತಿಗೂ ಆಗಲು ಸಾಧ್ಯವಿಲ್ಲ. ನಾವು ಸಾಧಾರಣವಾಗಿ ಏನು ಮಾಡುತ್ತೇವೆಂದರೆ, ನಾವು ನಮ್ಮದೇ ಅನುಕೂಲ ವಲಯದಲ್ಲಿ ಉಳಿಯುತ್ತೇವೆ ಮತ್ತು ನಮ್ಮದೇ ಸುಖಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತೇವೆ ಹಾಗೂ ನಾವು ಏನನ್ನು ಮಾಡಲು ಇಷ್ಟಪಡುತ್ತೇವೆಯೋ ಅದನ್ನು ಮಾತ್ರ ಮಾಡುತ್ತೇವೆ. ಆಗ ಯಾರಾದರೂ ನಮ್ಮನ್ನು ಯಾಕೆ ಇಷ್ಟಪಡುವರು?

ಪ್ರಶ್ನೆ: ಗುರೂಜಿ, ನೀವು ಧರ್ಮದ ೧೦ ಗುಣಲಕ್ಷಣಗಳ ಬಗ್ಗೆ ಮಾತನಾಡಿರುವಿರಿ. ಈ ಗುಣಗಳನ್ನು ನಾವು ಹೇಗೆ ವರ್ಧಿಸಬಹುದು ಮತ್ತು ಈ ಭೂಮಿಯಲ್ಲಿ ಧರ್ಮವನ್ನು ಹೇಗೆ ತರಬಹುದು ಎಂಬುದರ ಬಗ್ಗೆ ನೀವು ಮಾತನಾಡುವಿರಾ?
ಶ್ರೀ ಶ್ರೀ ರವಿಶಂಕರ್: ನಾವೀಗ ಏನನ್ನು ಮಾಡುತ್ತಿರುವೆವೋ ಸರಿಯಾಗಿ ಅದನ್ನೇ ಮಾಡುವುದರಿಂದ! ಅಧರ್ಮವಿರುವುದು, ಮನಸ್ಸಿನಲ್ಲಿ ಸ್ಪಷ್ಟತೆಯ ಕೊರತೆಯಿಂದಾಗಿ ಮತ್ತು ಒತ್ತಡದ ಕಾರಣದಿಂದಾಗಿ. ಮನಸ್ಸು ಕೇಂದ್ರೀಕೃತವಾಗಿಲ್ಲದಿರುವಾಗ ಮತ್ತು ಹೃದಯಕ್ಕೆ ನೋವಾದಾಗ ಅಧರ್ಮವುಂಟಾಗುತ್ತದೆ. ಆದುದರಿಂದ, ಜ್ಞಾನ ಮತ್ತು ಬುದ್ಧಿವಂತಿಕೆಗಳೇ ನಿಮ್ಮನ್ನು ಧರ್ಮದ ಪಥದಲ್ಲಿಡುವುದು.

ಪ್ರಶ್ನೆ: ಗುರೂಜಿ, ಪ್ರಾಣವು ಶರೀರವನ್ನು ಬಿಟ್ಟುಹೋಗುವಂತೆ ಮಾಡುವುದು ಯಾವುದು ಮತ್ತು ಅದು ಯಾವಾಗ ಒಳಕ್ಕೆ ಬರುವುದೆಂಬುದನ್ನು ನಿರ್ಧರಿಸುವುದು ಯಾವುದು?
ಶ್ರೀ ಶ್ರೀ ರವಿಶಂಕರ್: ಸರಿ, ನಾನು ನಿನಗೊಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ! ನೀನು ನಿನ್ನ ಉಡುಪನ್ನು ಯಾಕೆ ಬದಲಾಯಿಸುವೆ? ನೀನು ನಿನ್ನ ಉಡುಪನ್ನು ಬದಲಾಯಿಸುವಂತೆ ಮಾಡುವುದು ಯಾವುದು? ನಿನ್ನ ಜೀವಮಾನವಿಡೀ ನೀನು ಒಂದೇ ಅಂಗಿಯನ್ನು ಯಾಕೆ ಧರಿಸುವುದಿಲ್ಲ? ನೀನು ನಿನ್ನ ಬಟ್ಟೆಗಳನ್ನು ಬದಲಾಯಿಸುವೆ, ಸವೆದಿರುವ ಅಥವಾ ಯಾವುದೇ ಕಾರಣಕ್ಕಾದರೂ, ಅಲ್ಲವೇ? ಉತ್ತರ ಸಿಕ್ಕಿತೇ!

ಪ್ರಶ್ನೆ: ಪ್ರೀತಿಯ ಗುರೂಜಿ, ಮೇರು ಪರ್ವತ ಎಲ್ಲಿದೆ ಮತ್ತು ಮೇರು ಪರ್ವತದ ಮಹತ್ವವೇನು?
ಶ್ರೀ ಶ್ರೀ ರವಿಶಂಕರ್: ಮೇರು ಪರ್ವತವು ಶಕ್ತಿಯ ಸಾಂಕೇತಿಕ ಪರ್ವತವಾಗಿದೆ. ಮೇರು ಪರ್ವತಕ್ಕೆ ಯಾವುದೇ ಭೌತಿಕ ನೆಲೆಯಿಲ್ಲ.

ಪ್ರಶ್ನೆ: ಗುರೂಜಿ, ನನಗೆ ೨೧ ವರ್ಷ ವಯಸ್ಸು ಮತ್ತು ಹಲವಾರು ಹುಡುಗಿಯರು ನನ್ನಿಂದ ಆಕರ್ಷಿತರಾಗುತ್ತಾರೆ. ಅವರು ನನ್ನಲ್ಲಿರುವ ಗುರು ಶಕ್ತಿಗೆ ಆಕರ್ಷಿತರಾಗುತ್ತಾರೆ ಎಂದು ನನ್ನ ಶಿಕ್ಷಕರು ನನಗೆ ಹೇಳುತ್ತಾರೆ. ನಾನು ಇದನ್ನು ನಿರ್ವಹಿಸುವುದು ಹೇಗೆ?
ಶ್ರೀ ಶ್ರೀ ರವಿಶಂಕರ್: ೨೧ ವರ್ಷವು, ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಬಹಳ ಚಿಕ್ಕ ವಯಸ್ಸಾಗಿದೆ. ನಿನಗೆ ಹಲವಾರು ಆಯ್ಕೆಗಳಿವೆ, ಆದರೆ ಒಂದು ಆಯ್ಕೆಯನ್ನು ಮಾಡಲು ನೀನು ಕೆಲವು ವರ್ಷಗಳ ಕಾಲ ಕಾಯಬೇಕು, ಸರಿಯಾ!
ನೋಡು, ಯಾರೂ ನಿನ್ನಿಂದ ಆಕರ್ಷಿತರಾಗದಿದ್ದರೆ, ಆಗ ಅದೊಂದು ಸಮಸ್ಯೆ. ಜನರು ನಿನಗೆ ಆಕರ್ಷಿತರಾಗುತ್ತಿದ್ದರೆ, ನಿನಗೆ ಅದೊಂದು ಸಮಸ್ಯೆಯಾಗಿ ಕಾಣುತ್ತದೆ. ಜೀವನವೆಲ್ಲಾ, ಪ್ರತಿಯೊಂದು ಕೋನದಲ್ಲೂ ಸವಾಲಾಗಿದೆ. ಅದು ಹೇಗಿದ್ದರೂ ಸುಮ್ಮನೇ ಅದನ್ನು ತೆಗೆದುಕೋ ಮತ್ತು ಹೇಗಾದರೂ ಅದನ್ನು ಆಸ್ವಾದಿಸು!
ಆದುದರಿಂದ, ಎಲ್ಲಾ ಗಮನವನ್ನು ಆಸ್ವಾದಿಸು, ಆದರೆ ಈಗಿನ ಮಟ್ಟಿಗೆ ಅದರಿಂದ ದೂರವಾಗಿರು. ಈಗಲೂ ನೀನು ತಯಾರಿಯಲ್ಲಿರುವುದಾಗಿ ಹಾಗೂ ಇನ್ನು ಎರಡರಿಂದ ಮೂರು ವರ್ಷಗಳು ಸರಿಯಬೇಕು ಎಂದು ಅವರಿಗೆ ಹೇಳು.