ಬುಧವಾರ, ಅಕ್ಟೋಬರ್ 10, 2012

ತಲೆಕೆಳಗಾಗಿರುವ ಮರ!

ಬೆಂಗಳೂರು ಆಶ್ರಮ, ಭಾರತ

10 ಅಕ್ಟೋಬರ್ ೨೦೧೨ 


ಪ್ರಶ್ನೆ: ಗುರೂಜಿ, ಗೀತೆಯ ಹದಿನೈದನೆಯ ಅಧ್ಯಾಯದಲ್ಲಿ, ತಲೆಕೆಳಗಾಗಿರುವ ಒಂದು ಮರದ ವಿವರಣೆಯಿದೆ. ರೆಂಬೆಗಳು ನೆಲದೊಳಗಿವೆ ಮತ್ತು ಬೇರುಗಳು ಆಕಾಶದಲ್ಲಿವೆ. ದಯವಿಟ್ಟು ನೀವು ಇದರ ಮಹತ್ವವನ್ನು ವಿವರಿಸಬಲ್ಲಿರಾ?
ಶ್ರೀ ಶ್ರೀ ರವಿಶಂಕರ್: ಇದು, ನಿಮ್ಮ ಮೂಲವು ದೈವತ್ವ; ಪ್ರಜ್ಞೆ ಎಂಬುದನ್ನು ಸೂಚಿಸುವ ಒಂದು ಸಂಕೇತವಾಗಿದೆ. ಅದು ನಿಮ್ಮ ಬೇರುಗಳು. ಮನಸ್ಸು ಮತ್ತು ಅದರ ಎಲ್ಲಾ ಸಾಮಗ್ರಿಗಳು ರೆಂಬೆಗಳಂತೆ, ಮತ್ತು ಜೀವನದಲ್ಲಿನ ಎಲ್ಲಾ ವಿವಿಧ ರೀತಿಗಳ ಲಯಗಳು, ಎಲ್ಲಾ ವಿವಿಧ ಭಾವನೆಗಳು ಮೊದಲಾದವುಗಳು ಎಲೆಗಳಂತೆ. ಅವುಗಳು ಶಾಶ್ವತವಾಗಿ ಉಳಿಯುವುದಿಲ್ಲ, ಅವುಗಳು ಒಣಗಿ ಹೋಗುತ್ತವೆ. ಆದುದರಿಂದ, ನೀವು ಎಲೆಗಳ ಮೇಲೆ ಗಮನ ಹರಿಸುತ್ತಿದ್ದರೆ ಮತ್ತು ನೀವು ಬೇರುಗಳಿಗೆ ನೀರು ಹಾಕಲು ಮರೆತರೆ, ಆಗ ಮರವು ಉಳಿಯದು. 
ಆದುದರಿಂದ, ’ಅಶ್ವತ್ಥಮೇನಂ ಸುವಿರೂಢಮೂಲಂ ಅಸಂಗಶಸ್ತ್ರೇಣ ದೃಢೇನ ಛಿತ್ವಾ’ (ಭಗವದ್ಗೀತೆ, ಅಧ್ಯಾಯ ೧೫, ಶ್ಲೋಕ ೩) ಎಂದು ಅದು ಹೇಳುತ್ತದೆ. 
ನೀನು ಈ ವಿವಿಧ ಭಾವನೆಗಳಲ್ಲ, ಜೀವನದ ಈ ವಿವಿಧ ಮಗ್ಗಲುಗಳಲ್ಲ ಎಂಬುದನ್ನು ಗಮನಿಸು. ಈ ಎಲ್ಲಾ ಶಾಖೆಗಳಿಂದ ಇರುವ ದೂರವನ್ನು ಅನುಭವಿಸು ಮತ್ತು ಪುನಃ ಹಿಂದಕ್ಕೆ ಬಾ. ಇದನ್ನೇ ಅದು ಹೇಳುವುದು. ಇಲ್ಲದಿದ್ದರೆ ನಾವು ಹೊರಗಿನದರಲ್ಲಿ ಎಷ್ಟೊಂದು ಮುಳುಗಿಹೋಗುತ್ತೇವೆಯೆಂದರೆ, ಪ್ರಧಾನ ಬೇರನ್ನು ನಾವು ಮರೆತುಬಿಡುತ್ತೇವೆ. 
ನೀನು ಮರವನ್ನು ಆಗಾಗ ಕತ್ತರಿಸಬೇಕಾಗುತ್ತದೆ, ಇಲ್ಲದಿದ್ದರೆ ಅದು ಅತ್ತಿತ್ತ ಹೋಗುತ್ತದೆ. ಆದುದರಿಂದ ಅವುಗಳನ್ನೆಲ್ಲಾ ಕತ್ತರಿಸು, ಮತ್ತು ನಿನ್ನ ಮೂಲವು ಎಲ್ಲೋ ಮೇಲಿದೆಯೆಂಬುದನ್ನು ತಿಳಿ. 
ಆದಿ ಶಂಕರಾಚಾರ್ಯರು ಇದನ್ನು ಸುಂದರವಾಗಿ ಹೇಳಿದ್ದಾರೆ, 
’ಸುರಮಂದಿರ್ ತರುಮೂಲನಿವಾಸಃ ಸಯ್ಯಾ ಭೂತಲಮಜಿನಂ ವಾಸಃ
ಸರ್ವಪರಿಗ್ರಹ ಭೋಗತ್ಯಾಗಃ ಕಸ್ಯ ಸುಖಂ ನ ಕರೋತಿ ವಿರಾಗಃ’
ಅವರು ಹೇಳುತ್ತಿರುವುದು, ’ನನ್ನ ಮೂಲ ಸ್ಥಾನವಿರುವುದು ಸ್ವರ್ಗದಲ್ಲಿ, ನಾನಿಲ್ಲಿಗೆ ಬಂದಿರುವುದು ಕೇವಲ ಕೆಲವೇ ದಿನಗಳ ಮಟ್ಟಿಗೆ; ಕೇವಲ ವಿನೋದಕ್ಕಾಗಿ. ಇವತ್ತು ನಾನು ಕೇವಲ ವಿಶ್ರಾಮ ಮಾಡುವ ಉದ್ದೇಶಕ್ಕಾಗಿ ಬಂದಿದ್ದೇನೆ, ಆದರೆ ಇದು ನನ್ನ ಮೂಲ ಸ್ಥಾನವಲ್ಲ, ಅದು ಬೇರೆಲ್ಲೋ ಇದೆ.’ ಈ ಒಂದು ಯೋಚನೆಯೇ - ’ನನ್ನ ಮನೆಯು ಬೇರೆಲ್ಲೋ ಇದೆ, ನಾನು ಕೇವಲ ಭೇಟಿ ನೀಡಲು ಬಂದಿದ್ದೇನೆ ’ ನಿಮ್ಮಲ್ಲಿ ಒಂದು ದೂರದ ಭಾವನೆಯನ್ನು ಸೃಷ್ಟಿಸುತ್ತದೆ. 
ಈ ಪ್ರಪಂಚವು ಒಂದು ವಿರಾಮ ಕೋಣೆಯಾಗಿದೆ. ನಿಮಗೆ ಗೊತ್ತಿದೆಯಾ, ವಿಮಾನ ನಿಲ್ದಾಣಗಳಲ್ಲಿ ಮತ್ತು ರೈಲು ನಿಲ್ದಾಣಗಳಲ್ಲಿ ಕೋಣೆಗಳಿರುತ್ತವೆ, ಮತ್ತು ಒಂದು ಕೋಣೆಯಲ್ಲಿ ನೀವೇನು ಮಾಡುತ್ತೀರಿ? ನೀವು ನಿಮ್ಮ ಪೆಟ್ಟಿಗೆಗಳನ್ನು ಇಡುತ್ತೀರಿ ಮತ್ತು ತಿನ್ನಲು ಶುರು ಮಾಡುತ್ತೀರಿ. ನೀವು ಬಚ್ಚಲುಮನೆಗೆ ಹೋಗುವುದು ಇದೆಲ್ಲಾ ಮಾಡುತ್ತೀರಿ, ಆದರೆ ನೀವು ನಿಮ್ಮ ಪೆಟ್ಟಿಗೆಯನ್ನು ತೆರೆದು, ಆ ಜಾಗದಲ್ಲೆಲ್ಲಾ ನಿಮ್ಮ ಬಟ್ಟೆಗಳನ್ನು ನೇತು ಹಾಕುವುದಿಲ್ಲ. ಒಂದು ವಿರಾಮ ಕೋಣೆಯಲ್ಲಿ ನೀವದನ್ನು ಮಾಡುವುದಿಲ್ಲ. ನೀವು ನಿಮ್ಮ ವಸ್ತುಗಳನ್ನು ಪ್ಯಾಕ್ ಮಾಡಿ ಇಟ್ಟಿರುತ್ತೀರಿ. 
ಈ ಪ್ರಪಂಚವು ಕೇವಲ ಒಂದು ವಿರಾಮ ಕೋಣೆಯಾಗಿದೆ. ಇದನ್ನು ನಿಮ್ಮ ಮನೆಯೆಂದು ತಪ್ಪುತಿಳಿಯಬೇಡಿ.  

ಪ್ರಶ್ನೆ: ನನ್ನ ಮಗನಿಗೆ ಐದು ವರ್ಷಗಳಿಂದ ಬೈಪೋಲಾರ್ ಇದೆ. ಅವನು ನನ್ನ ಒಬ್ಬನೇ ಮಗ ಮತ್ತು ಅವನ ನೋವಿನ ಪ್ರತಿಕ್ಷಣವನ್ನೂ ನಾನು ಅನುಭವಿಸುತ್ತಿದ್ದೇನೆ. ಇದರ ಮೊದಲು ನಾನು ಬಹಳ ಸಂತೋಷವಾಗಿದ್ದ ಮಹಿಳೆಯಾಗಿದ್ದೆ, ಆದರೆ ಈಗ ನಾನು ೧೫೦ ಮಿ.ಗ್ರಾಂ ಗಳ ಖಿನ್ನತೆಗಿರುವ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದೇನೆ. ಈಗ, ಉನ್ಮಾದಗ್ರಸ್ತ ಖಿನ್ನತೆ ಅಥವಾ ಗುಣಪಡಿಸಲು ಸಾಧ್ಯವಿಲ್ಲದ ಬೇರೆ ಯಾವುದೇ ರೋಗಗಳು ಇಲ್ಲವಾಗುವುವೆಂಬ ಭರವಸೆಯನ್ನು ನೀವು ನನಗೆ ಕೊಡಬೇಕೆಂದು ನಾನು ಬಯಸುತ್ತೇನೆ.
ಶ್ರೀ ಶ್ರೀ ರವಿಶಂಕರ್: ಹೌದು, ನನಗೆ ನಿನ್ನ ನೋವು ಅರ್ಥವಾಗುತ್ತಿದೆ. 
ಕೆಲವೊಮ್ಮೆ ಸ್ವಲ್ಪ ಖಿನ್ನತೆಯು ಬರುತ್ತದೆ ಮತ್ತು ಒಬ್ಬ ವ್ಯಕ್ತಿಗೆ ಔಷಧಿಗಳನ್ನು ಅಧಿಕ ಪ್ರಮಾಣದಲ್ಲಿ ಕೊಡಲಾಗುತ್ತದೆ, ಹಾಗೂ ನಂತರ ಅದು ಇನ್ನಷ್ಟು ಕೆಟ್ಟದಾಗುತ್ತದೆ. ಇದಾಗುವುದನ್ನು ನಾನು ನೋಡಿದ್ದೇನೆ. ಚಿಕ್ಕ ಸರಳ ಖಿನ್ನತೆಯು ಉನ್ಮಾದಗ್ರಸ್ತ ಖಿನ್ನತೆಗೆ ತಿರುಗುತ್ತದೆ ಮತ್ತು ನಂತರ ಅವರು ಅವರಿಗೆ ಲಿಥಿಯಂನ್ನು ಕೊಡುತ್ತಾರೆ. 
ಇಡಿಯ ವೈದ್ಯಕೀಯ ಮಂಡಲವು ಈ ಸಮಸ್ಯೆಯ ಬಗ್ಗೆ ಬಹಳಷ್ಟು ಗೊಂದಲಗೊಂಡಿದೆ. ಅದಕ್ಕಾಗಿಯೇ ಮಾನಸಿಕ ಸ್ವಾಸ್ಥ್ಯವು ಬಹಳ ಮುಖ್ಯವಾಗಿದೆ. 
ಇಲ್ಲಿರುವ ನೀವೆಲ್ಲರೂ, ನಿಮ್ಮ ಮಕ್ಕಳನ್ನು ಮತ್ತು ನಿಮ್ಮ ಮಿತ್ರರ ಮಕ್ಕಳನ್ನು ಆರ್ಟ್ ಎಕ್ಸೆಲ್, ಯೆಸ್ ಹಾಗೂ ಯೆಸ್ ಪ್ಲಸ್ ಶಿಬಿರಗಳಿಗೆ ಸೇರಿಸಬೇಕು. ಹೇಗಾದರೂ ಮಾಡಿ ಅವರು ಪ್ರಾಣಾಯಾಮ ಮತ್ತು ಧ್ಯಾನ ಮಾಡುವಂತೆ ಮಾಡಿ. 
ಇದು ಹೇಗೆ ಆಗುತ್ತದೆಯೆಂಬುದು ನಿಮಗೆ ಗೊತ್ತಾ? ಮೊದಲು ಮನಸ್ಸಿನಲ್ಲಿ ಸ್ವಲ್ಪ ಒತ್ತಡವಿರುತ್ತದೆ, ಮತ್ತು ನಂತರ ಅದು ಹೆಚ್ಚು ಹೆಚ್ಚು ಆಗಲು ಶುರುವಾಗುತ್ತದೆ. ನಂತರ ಅದು ಎಷ್ಟು ದೊಡ್ಡದಾಗುತ್ತದೆಯೆಂದರೆ, ಅದು ಮೆದುಳಿನಲ್ಲಿರುವ ಎಲ್ಲಾ ಪ್ರಮುಖ ಸಂಪರ್ಕಗಳನ್ನು ಕಡಿಯುತ್ತದೆ. ಇಡಿಯ ವಿಷಯವು ಶುರುವಾಗುವುದು ಹೀಗೆಯೇ. 
ಇದರ ಬಗ್ಗೆ ನಾವು ಒಂದು ಬಹಳ ಆರಂಭಿಕ ಹಂತದಲ್ಲಿಯೇ ಕಾಳಜಿ ವಹಿಸಬೇಕು. ತಡೆಗಟ್ಟುವಿಕೆಯು ಚಿಕಿತ್ಸೆಗಿಂತ ಉತ್ತಮವಾಗಿದೆ, ಮತ್ತು ಇದನ್ನು ತಡೆಗಟ್ಟಲು ನೀವು ನಿಮ್ಮ ಮಕ್ಕಳನ್ನು ಸಂತೋಷವಾಗಿಡಬೇಕು ಮತ್ತು ತಮ್ಮ ನಕಾರಾತ್ಮಕ ಭಾವನೆಗಳನ್ನು ಹಾಗೂ ತಮ್ಮಲ್ಲಿರುವ ನಕಾರಾತ್ಮಕತೆಗಳನ್ನು ನಿರ್ವಹಿಸುವುದು ಹೇಗೆಂಬುದನ್ನು ಅವರಿಗೆ ಕಲಿಸಬೇಕು. ಇದು ಬಹಳ ಮುಖ್ಯವಾದುದು.

ಪ್ರಶ್ನೆ: ಗುರೂಜಿ, ಅಷ್ಟಲಕ್ಷ್ಮಿಯರಲ್ಲಿ ವಿಜಯಲಕ್ಷ್ಮಿಯೆಂಬ ಹೆಸರಿನವಳೊಬ್ಬಳು. ನಮಗೆ ವಿಜಯಲಕ್ಷ್ಮಿ ಬೇಕೆಂದು ನೀವು ಹೇಳಿದ್ದೀರಿ. ಅದು ಯಾವುದರಲ್ಲಾದರೂ ಜಯಶಾಲಿಯಾಗಲು ಅಥವಾ ಯಶಸ್ವಿಯಾಗಲು ಇರುವ ಶಕ್ತಿ. ದಯವಿಟ್ಟು ನೀವು ಇದರ ಬಗ್ಗೆ ವಿವರಿಸುವಿರಾ?
ಶ್ರೀ ಶ್ರೀ ರವಿಶಂಕರ್: ನಾನು ಆ ಎಲ್ಲಾ ಎಂಟು ಲಕ್ಷ್ಮಿಯರ ಬಗ್ಗೆ ಸಾಕಷ್ಟು ಮಾತನಾಡಿರುವೆನೆಂದು ನನಗನಿಸುತ್ತದೆ. ಬುದ್ಧಿವಂತರು ಯಾವುದರ ಬಗ್ಗೆಯೂ ಹೆಚ್ಚು ವಿವರಿಸುವುದಿಲ್ಲ. ಅವರು ಕೇವಲ ಸಾರವನ್ನು ಚಿಕ್ಕ ಸುಳಿವುಗಳಾಗಿ ಕೊಡುತ್ತಾರೆ. 
’ಅಲ್ಪಾಕ್ಷರಂ ಅಸಂದಿಗ್ಧಂ ಸಾರವತ್ ವಿಶ್ವತೋ ಮುಖಂ’ ಎಂದು ಹೇಳಲಾಗಿದೆ. ಅಲ್ಪಾಕ್ಷರಂ ಎಂದರೆ, ಕೇವಲ ಕೆಲವೇ ಶಬ್ದಗಳು. ಸೂತ್ರಗಳು ಹಾಗೆಯೇ; ಅದರಲ್ಲಿ ಸಾರವಿರುತ್ತದೆ ಮತ್ತು ಅದು ಅನೇಕ ಆಯಾಮಗಳುಳ್ಳದು. ಅದರಲ್ಲಿ ಹಲವಾರು ಆಯಾಮಗಳಿರುತ್ತವೆ. ಬುದ್ಧಿವಂತರು ಸಂಪರ್ಕಿಸುವುದು ಹಾಗೆ, ಕೇವಲ ಕೆಲವೇ ಶಬ್ದಗಳೊಂದಿಗೆ. ಕಡಿಮೆ ಬುದ್ಧಿವಂತರು ಮಾತ್ರ, ಏನೂ ಅಲ್ಲದುದಕ್ಕೆ ಉದ್ದವಾದ ವಿವರಣೆಯನ್ನು ನೀಡುವರು. 
ನೀವು ಓದುವ ಕೆಲವು ಪುಸ್ತಕಗಳು ಪುಟಗಳ ಮೇಲೆ ಪುಟಗಳ ಮೇಲೆ ಪುಟಗಳಷ್ಟು ಇರುತ್ತವೆ. ಅವರು ಬರೆಯಬೇಕಾಗಿರುವುದು ಕೇವಲ ಒಂದು ಸಾಲು. ಅಷ್ಟೆ! 
ಎಲ್ಲಾ ಪ್ರಾಚೀನ ಋಷಿಗಳು ಅದನ್ನೇ ಮಾಡಿದುದು.  
’ಹೇಯಂ ದುಃಖಂ ಅನಾಗತಂ’; ಅಷ್ಟೇ, ಮುಗಿಯಿತು!
’ತದ ದೃಷ್ಟುಃ ಸ್ವರೂಪೆ ವಸ್ಥನಂ’; ಮುಗಿಯಿತು!

ಪ್ರಶ್ನೆ: ಗುರೂಜಿ, ಪ್ರೇಮದಲ್ಲಿರುವ ಸ್ಥಿತಿಯು ಜ್ಞಾನೋದಯಕ್ಕಿಂತ ಉನ್ನತವಾದುದೇ?
ಶ್ರೀ ಶ್ರೀ ರವಿಶಂಕರ್: ಉನ್ನತ ಮತ್ತು ಕೆಳಮಟ್ಟದ, ಇವುಗಳೆಲ್ಲಾ ತುಂಬಾ ಮೊದಲೇ ಇಲ್ಲವಾಗುತ್ತವೆ. ಎತ್ತರವಾದುದು ಏನೂ ಇಲ್ಲ ಅಥವಾ ತಗ್ಗಾದುದು ಏನೂ ಇಲ್ಲ; ಈ ಏಣಿಯು ಮಾಯವಾಗುತ್ತದೆ. ನೀವು ವಿಶ್ವದಲ್ಲಿ ಆಕಾಶದಲ್ಲಿರುವುದಾಗಿ ಸುಮ್ಮನೇ ಊಹಿಸಿ. ಮೇಲೆ ಎಲ್ಲಿದೆ ಮತ್ತು ಕೆಳಗೆ ಎಲ್ಲಿದೆ? ಪೂರ್ವ ಮತ್ತು ಪಶ್ಚಿಮ ಎಲ್ಲಿದೆ? ಅಲ್ಲಿ ಏನೂ ಇಲ್ಲ. ಅಲ್ಲಿ ಯಾವುದೇ ಎತ್ತರ ಅಥವಾ ತಗ್ಗು ಇಲ್ಲ. 

ಪ್ರಶ್ನೆ: ನಾವು ನಿಮ್ಮಿಂದ ಅಷ್ಟೊಂದು ಜ್ಞಾನವನ್ನು ಪಡೆದುಕೊಂಡಿದ್ದರೂ ಸಹ, ನನಗೆ ಅದನ್ನು ಸಂಪೂರ್ಣವಾಗಿ ಜೀವಿಸಲು ಸಾಧ್ಯವಾಗುತ್ತಿಲ್ಲ.
ಶ್ರೀ ಶ್ರೀ ರವಿಶಂಕರ್: ಕಡಿಮೆಪಕ್ಷ ನಿನಗೆ ಅದನ್ನು ಭಾಗಶಃ ಜೀವಿಸಲು ಸಾಧ್ಯವಾದರೆ, ನನಗೆ ಸಂತೋಷವಾಗುತ್ತದೆ. ಅದು ಕೂಡಾ ಸಾಕು. ನೀನು ಇಂಚಿಂಚಾಗಿ ಮೇಲಕ್ಕೆ ಸಾಗುತ್ತಾ ಇರುವೆ. 

ಪ್ರಶ್ನೆ: ಗುರೂಜಿ, ಮನೆಯಲ್ಲಿ ಒಂದು ಅಶ್ವತ್ಥ ಮರವಿರುವುದು ಮಂಗಳಕರವೇ?
ಶ್ರೀ ಶ್ರೀ ರವಿಶಂಕರ್: ಹೌದು, ಅದು ಬಹಳ ಒಳ್ಳೆಯದು ಮತ್ತು ಬಹಳ ಮಂಗಳಕರವಾದುದು. ನಿಮ್ಮ ಮನೆಯ ಎದುರಿನಲ್ಲಿ ಒಂದು ಅಶ್ವತ್ಥ ಮರವಿರುವುದೆಂದರೆ, ದೇವರೇ ಅಲ್ಲಿ ನಿಂತಿರುವಂತೆ. ಕೃಷ್ಣ ಪರಮಾತ್ಮನು ಹೇಳುತ್ತಿರುವುದು ಇದನ್ನು, "ಮರಗಳಲ್ಲಿ, ನಾನು ಅಶ್ವತ್ಥ ". ಅಶ್ವತ್ಥ ಮರವು ಬಹಳ ಮಹತ್ವವುಳ್ಳದ್ದು ಯಾಕೆಂದರೆ, ದಿನದ ಎಲ್ಲಾ ೨೪ ಗಂಟೆಗಳಲ್ಲಿ ಅದು ಕೇವಲ ಆಮ್ಲಜನಕವನ್ನು ಕೊಡುತ್ತದೆ. ಆದುದರಿಂದ ಈ ಮರವು ನಿಮ್ಮ ಮನೆಯ ಎದುರಿರುವುದು ಬಹಳ ಒಳ್ಳೆಯದು. 
ಮನೆಯ ಎದುರು ಒಂದು ಹುಣಸೆ ಮರವಿರುವುದು ಅಷ್ಟೊಂದು ಒಳ್ಳೆಯದಲ್ಲ ಎಂದು ಹೇಳುವ ಜನರಿದ್ದಾರೆ. ಅದರಲ್ಲಿ ಯಾವ ಕಂಪನವಿರುತ್ತದೆಯೆಂಬುದು ನನಗೆ ತಿಳಿಯದು, ಆದರೆ ಹೇಳುವುದು ಹೀಗೆ. 
ಈಗ ನಿಮ್ಮ ಮನೆಯ ಎದುರು ಒಂದು ಹುಣಸೆ ಮರವಿದ್ದರೆ, ನಾನು ಹೇಳುವುದೇನೆಂದರೆ, ಅದನ್ನು ಕಡಿಯಬೇಡಿ, ಬೇರೆ ಯಾವುದಾದರೂ ಗಿಡಗಳನ್ನು ಅದರ ಸುತ್ತಲೂ ನೆಡಿ.

ಪ್ರಶ್ನೆ: ಗುರೂಜಿ, ಭಾವನೆಗಳು ಏಳುವುದು ಎಲ್ಲಿಂದ? ಅವುಗಳು ಶರೀರದವೇ ಅಥವಾ ಮನಸ್ಸಿನವೇ?
ಶ್ರೀ ಶ್ರೀ ರವಿಶಂಕರ್: ಭಾವನೆಗಳು ಮನಸ್ಸಿನಲ್ಲಿವೆ, ಆದರೆ ಅವುಗಳಿಗೆ ಅನುಗುಣವಾದ ಹಾರ್ಮೋನ್ ಅಥವಾ ಸಂವೇದನೆಗಳು ಶರೀರದಲ್ಲಿರುತ್ತವೆ. ಆದುದರಿಂದ ಅದು ಎರಡರ ಒಂದು ಸಂಯೋಗ. 
ನಿಮ್ಮ ಎಡ್ರಿನಲ್ ಗ್ರಂಥಿಯು ಬಹಳ ವೇಗವಾಗಿ ಕೆಲಸ ಮಾಡಲು ತೊಡಗಿದರೆ, ಆಗ ನಿಮಗೆ ಭಯ ಮತ್ತು ಅಧೀರತೆಯ ಅನುಭವವಾಗುತ್ತದೆ. ಆ ಎಲ್ಲಾ ಅನುಭವಗಳು ಮೇಲಕ್ಕೇಳುತ್ತವೆ. 
ಆದುದರಿಂದ ಬೇರೆ ಬೇರೆ ಹಾರ್ಮೋನುಗಳು ಅಥವಾ ಬೇರೆ ಬೇರೆ ಗ್ರಂಥಿಗಳು ಬೇರೆ ಬೇರೆ ಭಾವನೆಗಳನ್ನು ಉತ್ಪಾದಿಸುತ್ತವೆ. ಅದು ಇದೂ ಅಲ್ಲ, ಅದೂ ಅಲ್ಲ. ಅದು ಎಲ್ಲವೂ ಒಟ್ಟು ಸೇರಿದುದು. 

ಪ್ರಶ್ನೆ: ಗುರೂಜಿ, ಒಬ್ಬ ಅನ್ವೇಷಕನಿಗೆ, ಒಳ್ಳೆಯ ಸಂಗದ ಪ್ರಾಮುಖ್ಯತೆಯೇನು? ಮತ್ತು ಅಂತಹ ಸಂಗವು ಲಭ್ಯವಿಲ್ಲದಿದ್ದರೆ, ಆಗ ಒಬ್ಬನು ಏನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: ನೀವು ಸಾಕಷ್ಟು ಸಮರ್ಥರಿರುವಿರೆಂದು ಹಾಗೂ ನಿಮ್ಮ ಸಂಗದ ಮೇಲೆ ಪ್ರಭಾವ ಬೀರಬಲ್ಲಿರೆಂದು ನಿಮಗನ್ನಿಸಿದರೆ, ಆಗ ಅವರನ್ನು ಬದಲಾಯಿಸಿ. ಅವರು ನಿಮ್ಮಂತೆ ಇರುವಂತೆ ಮಾಡಿ. ಆದರೆ ನೀವು ಅಷ್ಟೊಂದು ಸಮರ್ಥರಲ್ಲದಿದ್ದರೆ, ಆಗ ಕೆಟ್ಟ ಸಂಗದಿಂದ ದೂರಕ್ಕೆ ಸರಿಯಿರಿ. ಹಾಗೆ ಮಾಡಲು ನಿಮಗೆ ಸ್ವಾತಂತ್ರ್ಯವಿದೆ.