ಬುಧವಾರ, ಅಕ್ಟೋಬರ್ 3, 2012

ನಾನೆ೦ಬುದನ್ನು ಮರೆಯಲು ಏನು ಮಾಡಬೇಕು?

03
2012
Oct
ಬೆಂಗಳೂರು ಆಶ್ರಮ, ಭಾರತ



ಪ್ರಶ್ನೆ: ಅಹಂಕಾರ ಮತ್ತು ಸ್ವಾಮಿತ್ವದ ನಡುವೆ ಸಂಬಂಧವಿದೆಯೇ, ಮತ್ತು ಇವೆರಡರಿಂದಲೂ ನಾವು ಹೊರಬರುವುದು ಹೇಗೆ? 
ಶ್ರೀ ಶ್ರೀ ರವಿಶಂಕರ್: ಹೌದು.
ಅಹಂಕಾರ, ಸ್ವಾಮಿತ್ವ, ಮಾತ್ಸರ್ಯ, ಕೋಪ, ಲೋಭ ಇವುಗಳೆಲ್ಲಾ ಪರಸ್ಪರ ಸಂಬಂಧ ಹೊಂದಿವೆ. ಅವುಗಳು ಅಹಂಕಾರದೊಂದಿಗೆ ಸಂಬಂಧ ಹೊಂದಿವೆ. ಈಗ, ಅಹಂಕಾರವನ್ನು ತೊಡೆದು ಹಾಕುವುದು ಹೇಗೆ? ಇದೊಂದು ದೊಡ್ಡ ಸಮಸ್ಯೆ. ನಿಜವಾಗಿ ಪರಿಹಾರವು ಬಹಳ ಸರಳವಾಗಿದೆ. ಕೇವಲ ಒಂದು ದಿನದ ಮಟ್ಟಿಗೆ ಹುಚ್ಚರಾಗಲು ಒಪ್ಪಿಗೆ ನೀಡಿ. ಕೇವಲ ಒಂದು ದಿನದ ಮಟ್ಟಿಗೆ, ಒಬ್ಬ ಹುಚ್ಚನಂತೆ ವರ್ತಿಸಿ. ಅಷ್ಟು ಸಾಕು.
ಅಹಂಕಾರವೆಂದರೆ ನೀವು ಇತರರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುವುದು. ಅಹಂಕಾರವು ಅಲ್ಲಿರಬೇಕಾದರೆ, ಇನ್ನೊಬ್ಬರ ಅಗತ್ಯವಿದೆ. ಒಂದು ಜಾಗದಲ್ಲಿ ನೀವೊಬ್ಬರೇ ಇರುವಾಗ, ಅಲ್ಲಿ ಯಾವುದೇ ಅಹಂಕಾರವಿರಲು ಸಾಧ್ಯವಿಲ್ಲ. ಅಹಂಕಾರವು ತೋರಿಸಿಕೊಳ್ಳುವುದು ಇನ್ನೊಬ್ಬರು ಅಲ್ಲಿರುವಾಗ. ನೀವೊಂದು ಮಗುವಿನಂತಿದ್ದರೆ, ನೀವು ಸ್ವಾಭಾವಿಕವಾಗಿದ್ದರೆ ಮತ್ತು ಮನೆಯಲ್ಲಿರುವ ಭಾವನೆಯಲ್ಲಿದ್ದರೆ, ಅದು ಅಹಂಕಾರಕ್ಕಿರುವ ಅತ್ಯುತ್ತಮ ಪ್ರತ್ಯೌಷಧವಾಗಿದೆ. ಸ್ವಾಭಾವಿಕತೆಯು ಅಧಿಕಾರ ವಹಿಸಿಕೊಂಡಾಗ, ಮತ್ತು ನೀವು ಎಲ್ಲರೊಂದಿಗೂ ಹಾಯಾಗಿರುವಾಗ ಹಾಗೂ ಎಲ್ಲರೊಂದಿಗೂ ಆತ್ಮೀಯತೆಯ ಒಂದು ಭಾವದಲ್ಲಿರುವಾಗ  ಅಹಂಕಾರವು ನಡೆಯದು ಅಥವಾ ಬದುಕುಳಿಯದು. ಈ ಎಲ್ಲಾ ಗುಣಗಳು ನಿಮ್ಮನ್ನು ಪರಿವರ್ತಿಸಬಹುದು. ಆಗಲೂ ಕೂಡಾ ಅಹಂಕಾರವು, "ನಾನು" ಎಂದು ಹೇಳುತ್ತಿದ್ದರೆ, ಆಗ ಆ ಅಹಂಕಾರವನ್ನು ವಿಸ್ತರಿಸಬೇಕು.
ಒಂದು ಪಾರದರ್ಶಕ ಅಹಂಕಾರ; ಇನ್ನೊಂದು ವಿಸ್ತರಿಸಿದ ಅಹಂಕಾರ. ಎರಡರ ಅರ್ಥವೂ ಒಂದೇ. ವಿಸ್ತರಿಸಿದ ಅಹಂಕಾರವೆಂದರೆ - ಎಲ್ಲರೂ ಒಳಗೊಂಡಿದ್ದಾರೆ - ಎಲ್ಲರೂ ನನಗೆ ಸೇರಿದವರು, ನಾನು ಎಲ್ಲವೂ ಆಗಿದ್ದೇನೆ. ಅದು ಬಹಳ ಒಳ್ಳೆಯದು.
ಆದುದರಿಂದ, ಒಂದೋ ನಿಮ್ಮ ಅಹಂಕಾರವನ್ನು ಉಬ್ಬಿಸಿ ಅದನ್ನು ಬಹಳ ದೊಡ್ಡದು ಮಾಡಿ, ಅಥವಾ ಸರಳತೆ ಮತ್ತು ಮುಗ್ಧತೆಗಳಂತಹ ಸರಳ ಕ್ರಿಯೆಗಳಿಂದ ಅದನ್ನು ಪರಿವರ್ತಿಸಿ. ಅದು ಅಹಂಕಾರವನ್ನು ಪಾರದರ್ಶಕಪಡಿಸುತ್ತದೆ.

ಪ್ರಶ್ನೆ: ಗುರೂಜಿ, ಕ್ಷಮಾಪಣೆ ನೀಡಲೂ ಸಾಧ್ಯವಾಗದ, ಮರೆತುಬಿಡಲೂ ಸಾಧ್ಯವಾಗದ ಒಂದು ಪರಿಸ್ಥಿತಿಯಲ್ಲಿ ನಾನಿದ್ದೇನೆ. ಏನು ಮಾಡಬೇಕೆಂದು ದಯವಿಟ್ಟು ನನಗೆ ಮಾರ್ಗದರ್ಶನ ಮಾಡಿ.
ಶ್ರೀ ಶ್ರೀ ರವಿಶಂಕರ್: ಹಾಗಾದರೆ ಕೇವಲ ನಿನ್ನ ಸಾವಿನ ಬಗ್ಗೆ ಯೋಚಿಸು; ನೀನು ಸಾಯುವವನಿದ್ದೀಯೆಂದು.
ನೀನು ಹಿಡಿದಿಟ್ಟುಕೊಂಡರೂ, ಆಗಲೂ ನೀನು ಕೊನೆಯಾಗುವೆ; ನೀನು ಈ ಪ್ರಪಂಚದಿಂದ ದೂರ ಹೋಗುವೆ.
ಈಗ, ಆ ನೆನಪನ್ನು  ನೀನು ಕೊಂಡೊಯ್ಯಲು ಬಯಸುವಿಯಾ? ಬಾ, ಎಚ್ಚೆತ್ತುಕೋ! ಜೀವನವು ಬಹಳ ಚಿಕ್ಕದು ಮತ್ತು ಎಲ್ಲರೂ ಒಂದು ಚಿಂದಿಯಿಂದ ಮಾಡಿದ ಗೊಂಬೆಯಂತೆ. ಅವುಗಳಿಗೆ ತಮ್ಮದೇ ಆದ ಒಂದು ಮನಸ್ಸಿಲ್ಲ. ಪ್ರತಿಯೊಬ್ಬರೂ ಒಂದು ಗೊಂಬೆಯಂತೆ, ಮತ್ತು ಎಲ್ಲರ ಮೂಲಕವಾಗಿಯೂ ಕೆಲಸ ಮಾಡುವ ಒಂದು ಶಕ್ತಿ ಮತ್ತು ಚೈತನ್ಯವಿದೆ. ಆ ಒಂದು ಪರಮಕಾರಣಕಾರಣವು ಎಲ್ಲಾ ಕಾರಣಗಳ ಕಾರಣವಾಗಿದೆ. ಶಿವ ತತ್ವವು ಬೇರೆ ಬೇರೆ ಜನರ ಮನಸ್ಸುಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಹಾಕುತ್ತಾ ಆಟವಾಡುತ್ತಿದೆ. ಈ ಅದ್ವೈತ ಜ್ಞಾನವನ್ನು ತಿಳಿದುಕೊಳ್ಳಿ; ಅದನ್ನು ಅನುಭವಿಸಿ.
ನಾವೆಲ್ಲರೂ ಒಂದೇ ವಸ್ತುವಿನಿಂದ ಮಾಡಲ್ಪಟ್ಟಿದ್ದೇವೆ. ಈ ಎಲ್ಲಾ ಚಿಕ್ಕ ಮನಸ್ಸುಗಳಿವೆ, ಆದರೆ ಈ ಮನಸ್ಸು ಕೂಡಾ ಒಂದು ದೊಡ್ಡ ಮನಸ್ಸಿನಿಂದ ಮತ್ತು ಕರ್ಮಕ್ಕನುಗುಣವಾಗಿ ಪ್ರಭಾವಕ್ಕೊಳಗಾಗಿದೆ. ಆದುದರಿಂದ, ಬೇರೆ ಬೇರೆ ಜನರು ಬೇರೆ ಬೇರೆ ರೀತಿಗಳಲ್ಲಿ ವರ್ತಿಸುತ್ತಾರೆ.
ನೀವು ಗಮನಿಸಿದ್ದೀರಾ, ಕೆಲವೊಮ್ಮೆ, ನೀವು ಯಾರಿಗೂ ಯಾವುದೇ ಕೆಡುಕನ್ನೂ ಮಾಡಿರುವುದಿಲ್ಲ ಮತ್ತು ಹಾಗಿದ್ದರೂ ಅವರು ನಿಮ್ಮ ಶತ್ರುಗಳಾಗುತ್ತಾರೆ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ? ವಿಶೇಷವಾಗಿ, ಯಾರಿಗೆ ನೀವು ಬಹಳಷ್ಟು ಒಳ್ಳೆಯದನ್ನು ಮಾಡಿರುತ್ತೀರೋ, ಅವರು ನಿಮ್ಮ ಶತ್ರುಗಳಾಗುತ್ತಾರೆ. ನಿಮಗೆ ಆಶ್ಚರ್ಯವಾಗುತ್ತದೆ, ಈ ವ್ಯಕ್ತಿಯು ನನ್ನ ಅತ್ಯುತ್ತಮ ಸ್ನೇಹಿತ, ನಾನು ಅವನಿಗಾಗಿ ಅಷ್ಟೊಂದು ಮಾಡಿದೆ, ಮತ್ತು ಈ ವ್ಯಕ್ತಿಯು ನನ್ನ ಶತ್ರುವಾದನು! ಅಲ್ಲವೇ?
ಅದೇ ರೀತಿಯಲ್ಲಿ, ಕೆಲವು ಜನರಿರುತ್ತಾರೆ, ಅವರಿಗೆ ನೀವು ಯಾವುದೇ ವಿಶೇಷ ಉಪಕಾರಗಳನ್ನು ಮಾಡಿರುವುದಿಲ್ಲ, ಹಾಗಿದ್ದರೂ ಅವರು ನಿಮ್ಮ ಮಿತ್ರರಾದರು. ಇದು ಆಗಿಲ್ಲವೇ? ನೀವು ಯಾರನೋ ರೈಲಿನಲ್ಲಿ ಭೇಟಿಯಾದಿರಿ ಮತ್ತು ನಂತರ ಅವರು ಹೊರಬಂದು ನಿಮಗೆ ಬಹಳಷ್ಟು ಸಹಾಯ ಮಾಡಿದರು.
ಆದುದರಿಂದ ಎರಡೂ; ಗೆಳೆತನ ಮತ್ತು ವೈರ ಆಗುವುದು ಕರ್ಮದ ಕೆಲವು ವಿಚಿತ್ರವಾದ ನಿಯಮಗಳಿಂದ. ಆದುದರಿಂದಲೇ ಮಿತ್ರರು ಅಥವಾ ಶತ್ರುಗಳು ಎಲ್ಲರೂ ಒಂದೇ. ಯಾಕೆಂದರೆ, ಇನ್ನೊಂದು ಶಕ್ತಿಯು ಅವರ ಮೂಲಕ ಕೆಲಸ ಮಾಡುತ್ತಿದೆ. ಇದನ್ನು ತಿಳಿದುಕೊಂಡು ವಿಶ್ರಾಮ ಮಾಡಿ.
ಅದೇ ರೀತಿಯಲ್ಲಿ, ನೀವು ಒಳ್ಳೆಯ ಕೆಲಸವನ್ನು ಮಾಡುವಾಗ, ನಿಮ್ಮನ್ನು ಟೀಕಿಸುವ ಜನರಿರುತ್ತಾರೆ. ಭಯಾನಕ ಕೆಲಸಗಳನ್ನು ಮಾಡುವ ಜನರಿರುತ್ತಾರೆ ಮತ್ತು ಅವರನ್ನು ಹೊಗಳುವ ಕೆಲವು ಜನರೂ ಇರುತ್ತಾರೆ. ನಿಮಗಿದು ಬಹಳ ವಿಚಿತ್ರವಾಗಿ ಕಾಣಿಸುತ್ತದೆ.
ಆದುದರಿಂದ, ಅವುಗಳನ್ನೆಲ್ಲಾ ಬಿಟ್ಟುಬಿಡಿ ಮತ್ತು ವಿಶ್ರಾಮ ಮಾಡಿ.

ಪ್ರಶ್ನೆ: ಗುರೂಜಿ, ಜೀವನದಲ್ಲಿ ಒಂದು ಗುರಿಯಿರುವುದು ಆವಶ್ಯಕವೇ ಅಥವಾ ನಮ್ಮ ಬಳಿಗೆ ಏನು ಬರುತ್ತದೋ ಅದರೊಂದಿಗೆ ನಾವು ಹೋಗಬೇಕೇ?
ಶ್ರೀ ಶ್ರೀ ರವಿಶಂಕರ್: ನೀವು ಜೀವನದಲ್ಲಿ ಏನು ಮಾಡಲು ಬಯಸುವಿರೆಂಬುದರ ಬಗ್ಗೆ ನಿಮ್ಮಲ್ಲಿ ಒಂದು ವೈಯಕ್ತಿಕ ಗುರಿಯಿರಬೇಕು. ಒಂದು ಗುರಿಯಿರುವಾಗ, ಜೀವನವು ಒಂದು ನದಿಯಂತೆ ಓಡುತ್ತದೆ. ಗುರಿಯಿಲ್ಲದಿರುವಾಗ, ನೀರು ಎಲ್ಲೆಡೆಯೂ ಹರಡುತ್ತದೆ. ಒಂದು ಗುರಿಯಿರುವುದು ಬದ್ಧತೆಗಾಗಿ. ಅದಕ್ಕಾಗಿಯೇ ನಿಮಗೊಂದು ಗುರಿ, ಒಂದು ಲಕ್ಷ್ಯವಿರಬೇಕು.
ಗುರಿಯೇನು? ಗುರಿಯೆಂದರೆ, ಉನ್ನತವಾದುದನ್ನು ಸಾಧಿಸಲು, ಒಬ್ಬ ಯೋಗಿಯಾಗಲು; ಒಬ್ಬ ಧ್ಯಾನಿಯಾಗಲು ಮತ್ತು ಪ್ರಪಂಚಕ್ಕೆ ಸೇವೆ ಮಾಡಲು. ಪ್ರಪಂಚಕ್ಕೆ ಸೇವೆ ಮಾಡುವುದೇ ನಿಜವಾದ ಪೂಜೆಯಾಗಿದೆ.

ಪ್ರಶ್ನೆ: ಗುರೂಜಿ, ಕೆಲವು ಸಂದರ್ಭಗಳಲ್ಲಿ ನನಗೆ ಜನರನ್ನು ಮತ್ತು ಪರಿಸ್ಥಿತಿಗಳನ್ನು ಅವುಗಳಿದ್ದಂತೆಯೇ ಸ್ವೀಕರಿಸಲು ಸಾಧ್ಯವಾಗುತ್ತದೆ, ಆದರೆ ಕೆಲವು ಸಂದರ್ಭಗಳಲ್ಲಿ ನನಗೆ ಅದನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಯಾಕೆಂದು ನನಗೆ ಗೊತ್ತಿಲ್ಲ. ಜನರು ಮತ್ತು ಪರಿಸ್ಥಿತಿಗಳನ್ನು ಯಾವಾಗಲೂ ಸ್ವೀಕರಿಸುವುದು ಹೇಗೆಂದು ನನಗೆ ತಿಳಿಯದು. 
ಶ್ರೀ ಶ್ರೀ ರವಿಶಂಕರ್: ಅದರ ಅಗತ್ಯವಿಲ್ಲ. ನೀನದನ್ನು ಯಾವಾಗಲೂ ಮಾಡಬೇಕಾಗಿಲ್ಲ. ನೀನು ಅವುಗಳನ್ನು ಸ್ವೀಕರಿಸಬೇಕಾಗಿಲ್ಲ. ಹೋರಾಡು!
ಎಷ್ಟೊಂದು ದೊಡ್ಡ ಸಮಾಧಾನ, ಅಲ್ಲವೇ? ನಿನಗೆ ಹೋರಾಡಲು ಅನುಮತಿ ಸಿಕ್ಕಿತು! ಹೋಗಿ ಸಂತೋಷವಾಗಿ ಹೋರಾಡು, ನಾನು ಹೇಳುತ್ತೇನೆ.
ನೋಡು, ನಿನಗೆ ಮಾಡಲು ಸಾಧ್ಯವಿಲ್ಲದ ಯಾವುದನ್ನೂ ನೀನು ಮಾಡಬೇಕಾದ ಅಗತ್ಯವಿಲ್ಲ. ನಿನಗೆ ಯಾವುದನ್ನು ಮಾಡಲು ಸಾಧ್ಯವೋ, ಅದನ್ನು ಮಾತ್ರ ಮಾಡು. ಸ್ವೀಕರಿಸುವುದು ಅಷ್ಟೊಂದು ಕಷ್ಟವಾದರೆ, ಅದನ್ನು ಮಾಡಬೇಡ.

ಪ್ರಶ್ನೆ: ಸಾಧಾರಣವಾಗಿ, ಧರ್ಮಶೀಲ ಕೆಲಸಗಳನ್ನು ಮಾಡುವ ಜನರು ದುಃಖಿತರಾಗಿರುತ್ತಾರೆ ಮತ್ತು ದುರಾಚಾರಗಳನ್ನು ಮಾಡುವ ಜನರು ಬಹಳ ತೃಪ್ತರಾಗಿರುತ್ತಾರೆ ಮತ್ತು ಸಂತೋಷವಾಗಿರುತ್ತಾರೆ. ಅವರು ನಿಜವಾಗಿ ಹೊಗಳಲ್ಪಡುತ್ತಾರೆ ಮತ್ತು ಉತ್ತಮ ಸ್ಥಾನದಲ್ಲಿರುತ್ತಾರೆ. ಹೇಗೆ ಸಾಧ್ಯ?
ಶ್ರೀ ಶ್ರೀ ರವಿಶಂಕರ್: ನಾನು ದುಃಖಿತನಾಗಿರುವಂತೆ ಕಾಣಿಸುತ್ತೇನೆಯೇ? ಇಲ್ಲಿರುವ ಸ್ವಾಮೀಜಿಯವರು ದುಃಖಿತರಾಗಿರುವಂತೆ ಕಾಣಿಸುತ್ತಾರೆಯೇ? ನೋಡಿ, ಸ್ವಾಮೀಜಿಯವರು ನಗುತ್ತಿದ್ದಾರೆ.
ಸುತ್ತಲೂ ನೋಡು; ಇವರೆಲ್ಲಾ ಸಾಮಾನ್ಯ ಜನರು. ಅವರು ನಿನಗೆ ದುಃಖಿತರಾಗಿರುವಂತೆ ಕಾಣಿಸುತ್ತಾರೆಯೇ? ಅವರೆಲ್ಲರೂ ಇಲ್ಲಿ ಸಂತೋಷವಾಗಿರುವಂತೆ ಕಾಣಿಸುತ್ತಿಲ್ಲವೇ? ಅಡುಗೆಮನೆಯಲ್ಲಿ, ಸ್ವಾಗತ ಕೋಣೆಯಲ್ಲಿ ನೀನು ನೋಡಿದ್ದೀಯಾ, ಜನರು ಸಂತೋಷವಾಗಿದ್ದಾರೆ, ಸರಿಯಾ?
(ಉತ್ತರ: ಹೌದು)
ನೀವು ಮೋಜನ್ನು ಹಿಂಬಾಲಿಸಿದರೆ, ದುಃಖವು ನಿಮ್ಮನ್ನು ಹಿಂಬಾಲಿಸುತ್ತದೆ. ನೀವು ಜ್ಞಾನವನ್ನು ಹಿಂಬಾಲಿಸಿದರೆ, ಸಂತೋಷವು ನಿಮ್ಮನ್ನು ಹಿಂಬಾಲಿಸುತ್ತದೆ.

ಪ್ರಶ್ನೆ: ನನ್ನ ಮನೋಬಲವು ಬಹಳ ದುರ್ಬಲವಾಗಿದೆ. ನಾನು ಹಲವು ಸಾರಿ ಪ್ರಯತ್ನಿಸಿದೆ, ಆದರೆ ಹತ್ತರಲ್ಲಿ ಎಂಟು ಸಾರಿ, ಜೀವನದಲ್ಲಿ ನಾನು ಸೋಲುತ್ತೇನೆ. ನನ್ನ ಮನೋಬಲವನ್ನು ಹೆಚ್ಚಿಸಲು ನಾನೇನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: ಮೊದಲನೆಯದಾಗಿ, ನಿನ್ನ ಮನೋಬಲವು ದುರ್ಬಲವಿರುವುದಾಗಿ ನೀನು ನಿನಗೇ ಒಂದು ಹಣೆಪಟ್ಟಿಯನ್ನು ಹಚ್ಚಿಕೊಂಡಿರುವೆ. ಅಲ್ಲಿಗೆ ಕಥೆ ಮುಗಿಯಿತು. ನೀನು ನಿನಗೆ ಹಣೆಪಟ್ಟಿಯನ್ನು ಹಚ್ಚಿಕೊಳ್ಳಬಾರದು. ನಂತರ, ಚಿಕ್ಕ ವಿಷಯಗಳೊಂದಿಗೆ ಅಭ್ಯಾಸ ಮಾಡು. ಅಲ್ಪಾವಧಿಯ, ಕಾಲಾವಧಿಗೊಳಪಟ್ಟ ಸಂಕಲ್ಪಗಳನ್ನು ಇಟ್ಟುಕೋ. ಉದಾಹರಣೆಗೆ, ಹತ್ತು ದಿನಗಳ ವರೆಗೆ, ದಿನವೂ ನಾನು ವ್ಯಾಯಾಮ ಮಾಡುತ್ತೇನೆ. ಹತ್ತು ದಿನಗಳ ವರೆಗೆ ನಾನು ಯಾವುದೇ ಕೆಟ್ಟ ಪದಗಳನ್ನು ಬಳಸುವುದಿಲ್ಲ. ಒಮ್ಮೆ ನಿನಗೆ ಅದನ್ನು ಮಾಡಲು ಸಾಧ್ಯವಾದರೆ, ಆಗ ನೀನದನ್ನು ದೀರ್ಘಾವಧಿಯ ವರೆಗೆ ಮಾಡಬಹುದು.

ಪ್ರಶ್ನೆ: ಬಹಳ ಕಾಲದಿಂದ ನಾನು ಧ್ಯಾನ ಮಾಡುತ್ತಿದ್ದೇನೆ. ಇತ್ತೀಚೆಗಿನ ಒಂದು ಧ್ಯಾನದ ಸಂದರ್ಭದಲ್ಲಿ, ನೀವು ಕಾಣಿಸಿದಿರಿ ಮತ್ತು ನನಗೊಂದು ಪ್ರಸಾದವನ್ನು ನೀಡಿದಿರಿ. ನನ್ನ ಕಣ್ಣುಗಳು ಮುಚ್ಚಿದ್ದವು, ಆದರೆ ನೀವು ಎಲ್ಲವನ್ನೂ ನೋಡುತ್ತಿದ್ದಿರಿ. ನನ್ನ ಪ್ರಶ್ನೆಯೆಂದರೆ, ಅದು ನೀವಾಗಿದ್ದಿರೇ ಅಥವಾ ಅದು ದೇವರು ನಿಮ್ಮ ರೂಪದಲ್ಲಿ ಬಂದುದಾಗಿತ್ತೇ?
ಶ್ರೀ ಶ್ರೀ ರವಿಶಂಕರ್: ಒಬ್ಬ ಸಾಧಕನಿಗೆ ತನ್ನ ಜೀವನದಲ್ಲಿ ಹಲವಾರು ಅನುಭವಗಳಾಗುತ್ತವೆ. ಅದರ ಒಳಹೊಕ್ಕು ವಿವರವಾಗಿ ಪರೀಕ್ಷಿಸುವುದರ ಅಗತ್ಯವಿಲ್ಲ. ಕೇವಲ ಮುಂದೆ ಸಾಗು. ನಿನ್ನೆಯ ಅನುಭವವು ನಿನ್ನೆಯದು; ಇವತ್ತಿನ ಅನುಭವವು ಇವತ್ತಿಗೆ ಮತ್ತು ನಾಳೆ ನಿನಗೆ ಒಂದು ಹೊಸ ಅನುಭವವಾಗಬಹುದು. ಅದೊಂದು ಹಿತಕರವಾದ ಅನುಭವವಾಗಿದ್ದರೂ, ಅಹಿತಕರವಾದ ಅನುಭವವಾಗಿದ್ದರೂ, ಒಬ್ಬನು ಮುಂದೆ ಸಾಗಬೇಕು.