ಗುರುವಾರ, ಅಕ್ಟೋಬರ್ 11, 2012

ಐದು ಹೆಡೆಯ ಸರ್ಪದ ಸಾಂಕೇತಿಕತೆ


೧೧ ಅಕ್ಟೋಬರ್ ೨೦೧೨
ಬೆಂಗಳೂರು ಆಶ್ರಮ


ನೀವು ಪುರಾಣದ ಚಿತ್ರಗಳನ್ನು ಗಮನಿಸಿದರೆ, ಮಹಾವೀರನು ತನ್ನ ಬೆನ್ನ ಹಿಂದೆ ಐದು ಹೆಡೆಯ ಸರ್ಪದೊಂದಿಗೆ ಕುಳಿತಿರುವುದನ್ನು ನೋಡಬಹುದು, ಅಥವಾ ಭಗವಾನ್ ವಿಷ್ಣು ಧ್ಯಾನಸ್ಥನಾಗಿ ಕುಳಿತಿರುವನು ಮತ್ತು ಅವನ ಬೆನ್ನ ಹಿಂದೆ ಐದು ಹೆಡೆಯ ಸರ್ಪವಿದೆ.
ಋಷಿಗಳ ಚಿತ್ರಗಳಲ್ಲೂ ಅವರ ಹಿಂದೆ ನೀವು ಒಂದು ಐದು ಹೆಡೆಯ ಸರ್ಪವು ಹೆಡೆ ಬಿಚ್ಚಿರುವುದನ್ನು ನೋಡುತ್ತೀರಿ. ನೀವು ಅಂಥ ಚಿತ್ರಗಳನ್ನು ನೋಡಿದ್ದೀರಾ?
ಇದು ಒಂದು ಬಹಳ ಸೂಕ್ಷ್ಮ ವಿಚಾರ!
ನೋಡಿ, ನೀವು ಧ್ಯಾನದಲ್ಲಿ ಕುಳಿತಿರುವಾಗ, ಏನಾಗುತ್ತಿದೆ? ನಿಮ್ಮ ಚೈತನ್ಯ ಎಚ್ಚರಗೊಳ್ಳುತ್ತಿದೆ, ತೆರೆದುಕೊಳ್ಳುತ್ತಿದೆ ಮತ್ತು ಜಾಗೃತವಾಗುತ್ತಿದೆ, ನಿಮ್ಮ ಹಿಂದೆ ಒಂದು ಸಾವಿರ ಹೆಡೆಯ ಸರ್ಪವಿರುವಂತೆ. ಸರ್ಪವು ಎಚ್ಚರಿಕೆಯನ್ನು ಸೂಚಿಸುತ್ತದೆ.
ನಿಮ್ಮಲ್ಲಿ ಎಷ್ಟು ಮಂದಿ ಧ್ಯಾನದಲ್ಲಿರುವಾಗ ನಿಮ್ಮ ತಲೆಯ ಹಿಂಬದಿಯಲ್ಲಿ ಬಹಳ ಎಚ್ಚರಿಕೆಯನ್ನು ಅನ್ನುಭವಿಸುತ್ತೀರಿ? ಒಂದು ರೀತಿಯ ಜಾಗೃತಿ!
ಹಾಗಾಗಿ ಸರ್ಪವು ಆ ಉದಯಿಸಿ ಅರಳುವ ಶಕ್ತಿಯ; ಜಾಗೃತವಾಗಿರುವಾಗಲೇ ವಿಶ್ರಾಂತವಾಗಿರುವಂಥ ಶಕ್ತಿಯ ಒಂದು ಸಂಕೇತವಾಗಿದೆ.
ನಿಜವಾಗಿಯೂ ಒಂದು ಸರ್ಪವು ಅವರ ಹಿಂದೆ ಇತ್ತು ಎಂದಲ್ಲ ಅದರರ್ಥ, ಅದು ಆಳವಾದ ವಿಶ್ರಾಂತಿಯ ಸ್ಥಿತಿಯಲ್ಲಿ ಜಾಗೃತಿಯ ಒಂದು ಸಂಕೇತ, ಮತ್ತು ಆ ಸ್ಥಿತಿಯು ಧ್ಯಾನ - ಸಂಪೂರ್ಣವಾಗಿ ವಿಶ್ರಾಂತ, ಬೇಕುಗಳಿಲ್ಲದ, ನಿಷ್ಕ್ರಿಯಾತ್ಮಕ, ಏನೂ ಮಾಡದಿರುವ ಮತ್ತು ಸರ್ಪದ ಹೆಡೆಯಂತೆ ತೆರೆದುಕೊಂಡಿರುವ, ಪ್ರಯತ್ನವಿಲ್ಲದೆ ಎಚ್ಚರವಾಗಿರುವ ಸ್ಥಿತಿ.
ಇದಕ್ಕೆ ಎರಡು ರೀತಿಯ ವ್ಯಾಖ್ಯಾನಗಳಿವೆ. ಒಂದರಲ್ಲಿ ಅವರು ಸರ್ಪದ ಬಗ್ಗೆ ವಿವರಿಸುತ್ತಾರೆ, ಮತ್ತೊಂದರಲ್ಲಿ ಅವರು ಒಂದು ಹೂವಿನ ಬಗ್ಗೆ ಹೇಳುತ್ತಾರೆ; ಇದು ಒಂದು ಸಾವಿರ ಪಕಳೆಗಳ ಕಮಲವು ತಲೆಯ ಮೇಲ್ಭಾಗದಲ್ಲಿ, ಶಿರದ ಚಕ್ರದ ಮೇಲೆ ಅರಳುತ್ತಿರುವಂತೆ.
ಹಾಗಾಗಿ ಕೆಲವರು ಅದನ್ನು ಒಂದು ಹೂವೆಂದು ವರ್ಣಿಸುತ್ತಾರೆ, ಬಹಳ ಸೂಕ್ಷ್ಮ, ಮತ್ತೆ ಕೆಲವರು ಅದನ್ನು ಸರ್ಪವೆಂದು ವರ್ಣಿಸುತ್ತಾರೆ ಅಂದರೆ ಎಚ್ಚರಿಕೆ. ಎರಡೂ ಬಹಳ ಚೆನ್ನಾಗಿ ಹೊಂದಿಕೊಳ್ಳುತ್ತವೆ.
ನಿಮಗೀಗ ಹಾಗನ್ನಿಸದಿದ್ದರೆ, ಅದರ ಅರ್ಥ ನೀವು ಜಾಸ್ತಿ ಆಹಾರದೊಂದಿಗೆ ಹೊಟ್ಟೆ ತುಂಬಿಸಿಕೊಂಡಿದ್ದೀರಿ. ಆಗ ಯಾವುದೇ ಸರ್ಪವು ನಿಮಗೆ ವ್ಯಕ್ತವಾಗುವುದಿಲ್ಲ, ಬರೇ ಎಮ್ಮೆ ವ್ಯಕ್ತವಾಗುತ್ತದೆ, ಯಾಕೆಂದರೆ ನೀವು ಅಷ್ಟೊಂದು ಆಹಾರ ಸೇವಿಸಿದ್ದೀರಿ ಮತ್ತು ನಿಮಗೆ ಅಷ್ಟು ಜಡತೆ ಅನ್ನಿಸುತ್ತಿದೆ.
ಆದ್ದರಿಂದಲೇ ಜಗತ್ತಿನಾದ್ಯಂತ ಜನರು ಉಪವಾಸ ಮತ್ತು ಭಜನೆ; ಉಪವಾಸ ಮತ್ತು ಧ್ಯಾನದ ಬಗ್ಗೆ ಮಾತನಾಡುತ್ತಾರೆ.
ಅದೇ ವೇಳೆ, ನೀವು ಅತಿಯಾಗಿಯೂ ಉಪವಾಸ ಮಾಡಬಾರದು.ಕೆಲವೊಮ್ಮೆ ಜನರು ದಿನವಿಡೀ ಉಪವಾಸ ಮಾಡುತ್ತಾರೆ ಮತ್ತೆ ನಂತರ ರಾತ್ರಿಯಲ್ಲಿ ಬಹಳ ತಿನ್ನುತ್ತಾರೆ. ಅದು ಒಳ್ಳೆಯದಲ್ಲ. ಉಪವಾಸ ಮಾಡುವಾಗ ಪಾಲಿಸಬೇಕಾದ ಕೆಲವು ನಿಯಮಗಳಿವೆ. ಉಪವಾಸವನ್ನು ಹೇಗೆ ಆರಂಭಿಸುವುದು ಮತ್ತು ಅದರಿಂದ ನಿಧಾನವಾಗಿ ಹೇಗೆ ಹೊರಗೆ ಬರುವುದು ಎಂಬುದನ್ನು ಪ್ರಕೃತಿ ಚಿಕಿತ್ಸಕರು ಮತ್ತು ವೈದ್ಯರು ನಿಮಗೆ ಹೇಳುತ್ತಾರೆ, .
ಕೆಲವೊಂದು ಸಲ ನಾವು ನವರಾತ್ರಿ ಉಪವಾಸ ಮಾಡುತ್ತಾ, ಉಪವಾಸದ ಹೆಸರಿನಲ್ಲಿ ಹಬ್ಬದೂಟ ಮಾಡುತ್ತೇವೆ. ಜನರು ಹೇಳುತ್ತಾರೆ, ’ನಾವು ಯಾವುದೇ ಕಾಳುಗಳನ್ನು ಸೇವಿಸುವುದಿಲ್ಲ, ನಾವು ಕೇವಲ ಆಲೂಗಡ್ಡೆ ತೆಗೆದುಕೊಳ್ಳುತ್ತೇವೆ’, ಮತ್ತು ನಾವು ಫ಼್ರೆಂಚ್ ಫ್ರೈಸ್ ಮತ್ತೆ ಅವೆಲ್ಲವನ್ನೂ ತಿನ್ನುತ್ತೇವೆ. ’ನಾವು ಅನ್ನ ತಿನ್ನುವುದಿಲ್ಲ, ಆದರೆ ಬರೇ ಇಡ್ಲಿ ತಿನುತ್ತೇವೆ.’ ಇದು ಮೋಸವೆಂದು ನಾನು ಹೇಳುತ್ತೇನೆ. ನಿಜವಾದ ಉಪವಾಸದಲ್ಲಿ ಹಲ್ವಾ(ಸಿಹಿ ತಿನಿಸುಗಳು) ಮತ್ತು ಪೂರಿ(ಎಣ್ಣೆಯಲ್ಲಿ ಕಾಯಿಸಿದ ತಿನಿಸುಗಳು) ತಿನ್ನಬಾರದು. ಇದು ತಪ್ಪು ರೀತಿಯ ಉಪವಾಸ. ನೀವು ಆ ರೀತಿ ಉಪವಾಸ ಮಾಡಬಾರದು.
ಅಲ್ಪಾಹಾರ ಮಿತಾಹಾರ - ಸ್ವಲ್ಪ ಆಹಾರ ಮತ್ತು ಸುಲಭದಲ್ಲಿ ಜೀರ್ಣವಾಗಬಲ್ಲ ಆಹಾರ. ಅದೂ ಕೂಡ ಉಪವಾಸವೆಂದು ಪರಿಗಣಿಸಲಾಗುತ್ತದೆ. ಸ್ವಲ್ಪ ಹಣ್ಣುಗಳು ಮತ್ತು ನೀರು. ಹಾಗಾಗಿ ದೇಹ ಅಷ್ಟೊಂದು ಭಾರ ಮತ್ತು ಜಡವಾಗಿಲ್ಲದಿದ್ದಾಗ, ಆಗ ನಮ್ಮ ಚೈತನ್ಯ ಅರಳಿ ಧ್ಯಾನ ಇನ್ನೂ ಚೆನ್ನಾಗಿ ಆಗುತ್ತದೆ. ಅದೇ ಸಮಯದಲ್ಲಿ, ನಾವು ಅತಿ ಉಪವಾಸ ಮಾಡಿದರೆ ಅದು ನಮ್ಮ ಪಿತ್ತವನ್ನು ಏರಿಸುತ್ತದೆ ಮತ್ತೆ ಆಗಲೂ ನಿಮಗೆ ಧ್ಯಾನ ಮಾಡಲು ಆಗುವುದಿಲ್ಲ.
ಹಾಗಾಗಿ ಸಾಕಷ್ಟು ನೀರು ಕುಡಿದು ನಿಮ್ಮ ಶರೀರದ ಪಿತ್ತ ಏರದಂತೆ ನೋಡಿಕೊಳ್ಳಿ.

ಪ್ರ: ಗುರುದೇವ್, ಭಗವಾನ್ ವಿಷ್ಣು ಮತ್ತು ಭಗವಾನ್ ಶಿವನ ನಡುವೆ ವ್ಯತ್ಯಾಸವಿಲ್ಲದಿದ್ದರೂ, ಯಾರು ಯಾರಿಂದ ಉಂಟಾದರು? ವಿಷ್ಣು ಪುರಾಣ ವಿಷ್ಣುವೇ ಪರಮವೆನ್ನುತ್ತದೆ ಮತ್ತು ಶಿವ ಪುರಾಣ ಶಿವನೇ ಪರಮವೆನ್ನುತ್ತದೆ.
ಶ್ರೀ ಶ್ರೀ: ಯಾರು ಯಾರಿಂದ ಉಂಟಾದರು ಎಂದು ನೀವು ಯೋಚಿಸಿದಾಗ, ನೀವು ಒಂದೇ ನೇರಕ್ಕೆ ಯೋಚಿಸುತ್ತಿರುತ್ತೀರಿ. ಆದರೆ ಸತ್ಯವು ರೇಖಾತ್ಮಕವಲ್ಲ, ಅದು ಗೋಳಾತ್ಮಕ(ಬಹುಮುಖವಾದುದು). ಹಾಗಾಗಿ ಇದೂ ಸತ್ಯ ಮತ್ತು ಅದೂ ಸತ್ಯ. ನೀವು ಯಾವ ದಿಕ್ಕಿನಿಂದ ನೋಡುತ್ತೀರೋ, ಅದು ಅಲ್ಲಿಂದ ಬರುವುದು. ನೀವು ಆ ದಿಕ್ಕಿನಿಂದ ನೋಡಿದರೆ ಆಗ ಅದು ಸತ್ಯ. ನೀವು ಅದನ್ನು ಈ ದಿಕ್ಕಿನಿಂದ ನೋಡಿದರೆ ಆಗ ಇದು ಸತ್ಯ. ಆದರೆ ವಾಸ್ತವದಲ್ಲಿ ಎರಡೂ ಒಂದೇ. ಗೋಳಾತ್ಮಕ ಆಲೋಚನೆ ಎಂದರೆ ಇದು. ನೀವು ಎಲ್ಲಿಂದ ಆರಂಭಿಸಿ ಎಲ್ಲಿಗೆ ಹೋಗುತ್ತೀರಿ ಎಂಬುದರ ಮೇಲೆ ಅದು ಅವಲಂಬಿಸಿದೆ.
ಶಿವ ಹಾಗೂ ವಿಷ್ಣು ಬೇರೆ ಬೇರೆ, ಆದರೂ ಇಬ್ಬರೂ ಒಂದೇ.

ಪ್ರ: ಅಷ್ಟಾವಕ್ರ ಗೀತೆಯಲ್ಲಿ ಹೇಳಲಾಗಿದೆ, ’ನೀವು ಧರ್ಮಗ್ರಂಥಗಳನ್ನು ಓದುತ್ತಾ ಹೋಗಬಹುದು, ಆದರೆ ನಿಮಗೆ ಮುಕ್ತಿ ಸಿಗುವುದು ನೀವು ಧರ್ಮಗ್ರಂಥಗಳನ್ನು ಮರೆತಾಗಲೇ.’ ಹಾಗಾದರೆ ಮತ್ತೆ, ಧರ್ಮಗ್ರಂಥಗಳನ್ನು ಓದುವುದರ ಉದ್ದೇಶವೇನು?
ಶ್ರೀ ಶ್ರೀ: ನೋಡಿ, ನೀವು ಬಸ್ ಹತ್ತುತ್ತೀರಿ, ಆದರೆ ನಂತರ ನೀವು ಬಸ್ಸಿನಿಂದ ಇಳಿಯಲೂ ಬೇಕು. ಈಗ ನೀವು ’ನಾನು ಬಸ್ಸಿನಿಂದ ಇಳಿಯಬೇಕಾದರೆ ನಾನು ಅದನ್ನೇಕೆ ಹತ್ತಬೇಕು?’ ಎಂದು ನನ್ನೊಡನೆ ವಾದ ಮಾಡಿದರೆ? ನೀವು ಬಸ್ ಹತ್ತುವುದು ಎಲ್ಲೋ ಬೇರೆ ಸ್ಥಳದಲ್ಲಿ ಮತ್ತು ಹೊರಗೆ ಇಳಿಯುವುದು ಎಲ್ಲೋ ಬೇರೆ ಸ್ಥಳದಲ್ಲಿ.
ನಿಮಗೆ ಬಸ್ಸಿನ ಹೊರಗೆ ಬರಬೇಕಿದ್ದರೆ ಮೊದಲನೆಯದಾಗಿ ನೀವು ಬಸ್ ಏರುವ ಅಗತ್ಯವೇನಿದೆ - ಈ ತರ್ಕ ನಡೆಯುವುದಿಲ್ಲ.
ಹಾಗಾಗಿ ಧರ್ಮಗ್ರಂಥಗಳು ಇರುವುದು ನಿಮಗೆ ನಿಮ್ಮ ಸಹಜ ಗುಣವನ್ನು ಅರ್ಥ ಮಾಡಿಕೊಳ್ಳುವುದಕ್ಕಾಗಿ, ಈ ಬ್ರಹ್ಮಾಂಡದ ಪ್ರಕೃತಿ ಮತ್ತು ಸಣ್ಣ ವಿಷಯಗಳಲ್ಲಿ ಸಿಕ್ಕಿಕೊಂಡಿರುವ ಈ ಮನಸ್ಸಿನ ಪ್ರಕೃತಿ ಅರ್ಥ ಮಾಡಿಕೊಳ್ಳುವುದಕ್ಕಾಗಿ ಮತ್ತು ಅದಕ್ಕೆ ಒಂದು ವಿಶಾಲ ದೃಷ್ಟಿಯನ್ನು ನೀಡುವುದಕ್ಕಾಗಿ.
ಹಾಗೆ ಜ್ಞಾನವು ಒಂದು ಸಾಬೂನಿನಂತೆ. ನೋಡಿ ನಿಮ್ಮ ದೇಹಕ್ಕೆ ನೀವು ಸಾಬೂನನ್ನು ಹಚ್ಚಿಕೊಳ್ಳುತ್ತೀರಿ ಆದರೆ ಒಂದು ನಿರ್ದಿಷ್ಟ ಸಮಯದಲ್ಲಿ ಅದನ್ನು ತೊಳೆದೂ ಬಿಡುತ್ತೀರಿ, ಅಲ್ಲವೇ?!
ಅಂತೆಯೇ, ನಿಮಗೆ ಈ ಒಂದು ಆಸೆಯಿದೆ, ’ನಾನು ಮುಕ್ತವಾಗಬೇಕು’, ಮತ್ತು ಆ ಆಸೆ ನಿಮ್ಮನ್ನು ಉಳಿದೆಲ್ಲಾ ಸಣ್ಣ ಆಸೆಗಳಿಂದ ದೂರ ಮಾಡುತ್ತದೆ. ಆದರೆ ನೀವು ಆ ಆಲೋಚನೆಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡರೆ, ಆಗ ಅದೂ ಒಂದು ಸಮಯದಲ್ಲಿ ತೊಂದರೆಯನ್ನುಂಟು ಮಾಡುತ್ತದೆ. ನೀವು ಅದನ್ನೂ ತೊಳೆದು ಮುಕ್ತರಾಗಬೇಕು.
’ನನಗೆ ಮುಕ್ತಿ ಬೇಕು, ನನಗೆ ಮುಕ್ತಿ ಬೇಕು, ನನಗೆ ಮುಕ್ತಿ ಬೇಕು’, ನಿಮಗೆ ಮುಕ್ತಿ ಸಿಗುವುದಿಲ್ಲ. ಆದರೆ ಆ ಆಸೆ ನೀವು ಉಳಿದ ಚಿಕ್ಕ ಆಸೆಗಳಿಂದ ಮುಕ್ತರಾಗುವವರೆಗೆ ಅಗತ್ಯ. ನಂತರ ನೀವು ’ನನಗೆ ಮುಕ್ತಿ ಸಿಗುವುದಿದ್ದರೆ ಸಿಗುತ್ತದೆ, ಇಲ್ಲವಾದರೆ ನಿಮ್ಮ ಇಚ್ಚೆಯಂತೆ ನಡೆಯಲಿ’ ಎಂದು ಹೇಳುವ ಒಂದು ಹಂತ ತಲುಪುತ್ತೀರಿ.
ಆ ಕ್ಷಣದಲ್ಲಿ ನೀವು ಆಗಲೇ ಮುಕ್ತರಾಗಿರುತ್ತೀರಿ.

ಪ್ರ: ಮಹಾಲಯ ಅಮವಾಸ್ಯೆಯ ಮಹತ್ವವೇನು?
ಶ್ರೀ ಶ್ರೀ: ಈ ಅಮವಾಸ್ಯೆಯನ್ನು ಅಗಲಿ ಹೋದ ಆತ್ಮಗಳಿಗೆ ಮುಡಿಪಾಗಿಡಲಾಗಿದೆ.
ನೀವು ಈ ಶರೀರವನ್ನು ಬಿಟ್ಟಾಗ ನಿಮ್ಮನ್ನು ದೇವತೆ ಅಥವಾ ದೂತರಿಂದ ಇನ್ನೊಂದು ಲೋಕಕ್ಕೆ ಮಾರ್ಗದರ್ಶನ ಪಡೆಯುತ್ತೀರಿ. ಪುರುರವ ಮತ್ತು ವಿಶ್ವೇದೇವ ಎಂಬುದು ಅವರ ಹೆಸರು. ಅವರು ಬಂದು ನಿಮ್ಮನ್ನು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ತಲುಪಿಸುತ್ತಾರೆ.
ಮಹಾಲಯ ಅಮವಾಸ್ಯೆ ಎಂಬುದು ನೀವು ಎಲ್ಲಾ ಮೃತರನ್ನು ನೆನಪಿಸಿಕೊಂಡು ಅವರಿಗೆ ಧನ್ಯವಾದ ಅರ್ಪಿಸುವ ಮತ್ತು ಅವರಿಗೆ ಶಾಂತಿಯನ್ನು ಕೋರುವ ದಿನವಾಗಿದೆ.
ಪ್ರಾಚೀನ ಪದ್ದತಿಯ ಪ್ರಕಾರ ಕುಟುಂಬದವರು ಸ್ವಲ್ಪ ಎಳ್ಳನ್ನು ಮತು ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು, ತಮ್ಮ ಪೂರ್ವಜರನ್ನು ನೆನಪಿಸಿಕೊಂಡು ’ನಿಮಗೆ ತೃಪ್ತಿಯಿರಲಿ, ನಿಮಗೆ ತೃಪ್ತಿಯಿರಲಿ, ನಿಮಗೆ ತೃಪ್ತಿಯಿರಲಿ’ ಎಂದು ಹೇಳುತ್ತಾರೆ. ಅವರು ಇದನ್ನು ಮೂರು ಸಲ ಹೇಳಿ ಆ ಎಳ್ಳಿನ ಚಿಕ್ಕ ಕಾಳುಗಳನ್ನ ನೀರಿನೊಂದಿಗೆ ಕೆಳಗೆ ಬಿಡುತ್ತಾರೆ.
ಈ ಶಾಸ್ತ್ರದ ಮಹತ್ವವೆಂದರೆ, ತೀರಿಹೋದವರಿಗೆ ಇದನ್ನು ಹೇಳುವುದು - ನಿಮ್ಮ ಮನಸ್ಸಿನಲ್ಲಿ ಇನ್ನೂ ಆಸೆಗಳಿದ್ದರೆ, ಅವು ಎಳ್ಳಿನ ಕಾಳುಗಳಂತೆ ಎಂದು ತಿಳಿಯಿರಿ. ಅವು ಮಹತ್ವವುಳ್ಳದ್ದಲ್ಲ, ಅವುಗಳನ್ನು ಸುಮ್ಮನೆ ಬಿಟ್ಟುಬಿಡಿ. ನಾವು ಅದನ್ನು ನಿಮಗಾಗಿ ನೆರವೇರಿಸುತ್ತೇವೆ. ನೀವು ಮುಕ್ತವಾಗಿ, ಸಂತೋಷದಿಂದ ಮತ್ತು ತೃಪ್ತಿಯಿಂದ ಇರಿ! ನಿಮ್ಮ ಮುಂದೆ ಬೃಹತ್ತಾದ ಬ್ರಹ್ಮಾಂಡವಿದೆ. ಬ್ರಹ್ಮಾಂಡವು ಅಪರಿಮಿತವಾಗಿದೆ, ಹಾಗಾಗಿ ಮುಂದೆ ನೋಡಿಕೊಂಡು ಹೋಗಿ; ನಿಮ್ಮನ್ನು ಏನೇ ಹಿಂದೆ ಸೆಳೆಯುತ್ತಿದ್ದರೆ ಅದನ್ನು ಬಿಟ್ಟುಬಿಡಿ.
ಇದನ್ನು ತರ್ಪಣ ಎಂದು ಕರೆಯಲಾಗುತ್ತದೆ.
ತರ್ಪಣ ಎಂದರೆ ತೀರಿಹೋಗಿರುವವರಿಗೆ ತೃಪ್ತಿಯನ್ನು ಮತ್ತು ಸಮಾಧಾನವನ್ನು ತರುವುದು.
ಅದನ್ನು ಅವರು ತೃಪ್ತರಾಗಿ ಮುಂದೆ ನಡೆಯಲು ಹೇಳುವುದಕ್ಕಾಗಿ ನಡೆಸಲಾಗುತ್ತದೆ.
ನೀರು ಪ್ರೀತಿಯ ಸಂಕೇತ. ಯಾರಿಗಾದರೂ ನೀರು ಕೊಡುವುದೆಂದರೆ ಅವರಿಗೆ ಪ್ರೀತಿ ಕೊಡುವುದು ಎಂದು ಅರ್ಥ.
ಸಂಸ್ಕೃತದಲ್ಲಿ ಅಪ್ ಅಂದರೆ ನೀರು ಮತ್ತು ಪ್ರೀತಿ ಕೂಡ, ಮತ್ತು ಸಂಸ್ಕೃತದಲ್ಲಿ ಯಾರಾದರೂ ಬಹಳ ಒಲವಿನವರನ್ನು ಆಪ್ತರು ಎಂದು ಕರೆಯಲಾಗುತ್ತದೆ.
ಹಾಗಾಗಿ ಅವರ ನೆನಪಿನಲ್ಲಿ ನೀವು ಪ್ರೀತಿಯ ಮತ್ತು ಜೀವನದ ದ್ಯೋತಕವಾಗಿ ಅವರಿಗೆ ನೀರು ನೀಡುತ್ತೀರಿ, ಅದಕ್ಕಾಗಿ ಇದನ್ನು ಮಹಾಲಯ ಅಮವಾಸ್ಯೆ ಎಂದು ಕರೆಯಲಾಗುತ್ತದೆ.
ಈ ದಿನದಂದು ನಿಮ್ಮ ಎಲ್ಲಾ ಪೂರ್ವಜರನ್ನು ನೆನಪಿಸಿಕೊಳ್ಳಿ.
ವೈದಿಕ ಸಂಪ್ರದಾಯದಲ್ಲಿ, ತಾಯಿಯ ಕಡೆಯ ಮೂರು ಪೀಳಿಗೆಗಳನ್ನು, ತಂದೆಯ ಕಡೆಯ ಮೂರು ಪೀಳಿಗೆಗಳನ್ನು ನೆನಪಿಸಿಕೊಳ್ಳುತ್ತಾರೆ, ಮತ್ತು ಉಳಿದ ಎಲ್ಲಾ ಸ್ನೇಹಿತರನ್ನು, ಸಂಬಂಧಿಕರನ್ನು ಮತ್ತು ಇಹ ಲೋಕವನ್ನು ದಾಟಿದ ಯಾರನ್ನಾದರೂ ನೆನಪಿಸಿಕೊಳ್ಳುತ್ತಾರೆ. ಅವರ ಬಗ್ಗೆ ಯೋಚಿಸಿ ಅವರಿಗೆ ತೃಪ್ತರಾಗಿರಲು ಹೇಳಿ.
ಸಾಮಾನ್ಯವಾಗಿ ಅವರ ನೆನಪಿನಲ್ಲಿ, ಜನರು ಕೆಲವು ದಾನಗಳನ್ನು ಮಾಡುತ್ತಾರೆ, ಕೆಲವು ಜನರಿಗೆ ಊಟ ನೀಡುತ್ತಾರೆ ಮತ್ತು ಕೆಲವು ಪಶುಗಳಿಗೆ ಆಹಾರ ನೀಡುತ್ತಾರೆ.
ಇದು ಬಹುಮಟ್ಟಿಗೆ ಜಗತ್ತಿನ ಎಲ್ಲಾ ಸಂಸ್ಕೃತಿಗಳಲ್ಲಿ ಇದೆ. ಇದು ಮೆಕ್ಸಿಕೋನಲ್ಲೂ ಇದೆ ಎಂದು ನಾನು ತಿಳಿದಾಗ ನನಗೆ ಆಶ್ಚರ್ಯವಾಯಿತು. ಮೆಕ್ಸಿಕೋನಲ್ಲಿ, ಪ್ರತಿ ವರ್ಷ ನವೆಂಬರ್ ೨ರಂದು ಜನರು ಇದನ್ನು ಆಚರಿಸುತ್ತಾರೆ.
ಹಾಗೆಯೇ ಇದನ್ನು ಚೈನಾದಲ್ಲೂ ಆಚರಿಸುತ್ತಾರೆ. ಚೈನೀಸ್ ಸಂಪ್ರದಾಯದಲ್ಲಿ, ಅವರು ಒಂದು ನಿರ್ದಿಷ್ಟ ದಿನದಂದು ತಮ್ಮ ಪೂರ್ವಜರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅವರ ಪೂರ್ವಜರಿಗೆ ಏನೆಲ್ಲ ಪ್ರಿಯವಾಗಿತ್ತೋ ಅದನ್ನು ಅವರಿಗೆ ಸಮರ್ಪಿಸುತ್ತಾರೆ.
ಇದನ್ನು ಸಿಂಗಾಪುರದಲ್ಲೂ ನಡೆಸುತ್ತಾರೆ.ಸಿಂಗಾಪುರ ಒಂದು ಬಹಳ ಸ್ವಚ್ಛ ಪಟ್ಟಣವಾಗಿದೆ, ಆದರೆ ವರ್ಷದಲ್ಲಿ ಒಂದು ದಿನ ಕೆಲವು ಘಂಟೆಗಳ ಕಾಲ ಅದು ಬಹಳ ಹೊಲಸಾಗುತ್ತದೆ ಏಕೆಂದರೆ ಅವರು ಇದನ್ನು ಬೀದಿಗಳಲ್ಲಿ ಆಚರಿಸುತ್ತಾರೆ.
ಅವರೇನು ಮಾಡುತ್ತಾರೆಂದು ನಿಮಗೆ ಗೊತ್ತೇ? ಅವರು ದೊಡ್ಡ ಕಾರು ಮತ್ತು ಮನೆಗಳನ್ನು ರಟ್ಟಿನಿಂದ ತಯಾರಿಸಿ, ತಮ್ಮ ಪೂರ್ವಜರಿಗೆ ತಲುಪಿಸಲು ಅವುಗಳನ್ನು ಬೀದಿಗಳಲ್ಲಿ ಸುಡುತ್ತಾರೆ.
ಅವರು ಬಹಳಷ್ಟು ನಕಲಿ ಹಣದ ನೋಟುಗಳನ್ನೂ ಖರೀದಿಸಿ ಆ ಲೋಕದಲ್ಲಿರುವ ಪೂರ್ವಜರಿಗೆ ಸಮರ್ಪಿಸಲು ಮತ್ತು ಆಶೀರ್ವಾದ ಪಡೆಯಲು ಅವುಗಳನ್ನು ಸುಡುತ್ತಾರೆ.
ಬಹುಮಟ್ಟಿಗೆ ಈ ಭೂಗೋಳದಾದ್ಯಂತ, ಪ್ರಾಚೀನ ನಾಗರಿಕತೆಯಿಂದ, ಎಲ್ಲರೂ ಇದನ್ನು ಆಚರಿಸುತ್ತಾರೆ.
ಕ್ರೈಸ್ತರಲ್ಲೂ ’ಎಲ್ಲಾ ಸಂತರ ದಿನ’ (ಆಲ್ ಸೈಂಟ್ಸ್ ಡೇ) ಎಂಬ ಒಂದು ದಿನದಂದು ಪೂರ್ವಜರನ್ನು ನೆನಪಿಸಿಕೊಳ್ಳುತ್ತಾರೆ. ಈ ದಿನದಂದು ಜನರು ಸ್ಮಶಾನಕ್ಕೆ ಹೋಗಿ ತೀರಿಹೋದವರಿಗಾಗಿ ಪ್ರಾರ್ಥಿಸುತ್ತಾರೆ.
ಇದನ್ನು ನಮಗೆ ಈ ನೆನಪನ್ನು ತರಲಿಕ್ಕಾಗಿಯೂ ನಡೆಸುತ್ತೇವೆ: ಜೀವನ ತಾತ್ಕಾಲಿಕ, ಮತ್ತು ಈ ಜನರು ಇಲ್ಲಿ ಇಷ್ಟೊಂದು ವರ್ಷಗಳ ಕಾಲ ಬದುಕಿ ಈಗ ಹೋಗಿದ್ದಾರೆ. ನಾವು ಈ ಲೋಕಕ್ಕೆ ಬಂದಿದ್ದೇವೆ ಮತ್ತು ಒಂದು ದಿನ ನಾವೂ ಹೋಗುತ್ತೇವೆ.
ಹಾಗಾಗಿ ನೀವು ಅವರಿಗೆ ಶಾಂತಿಯನ್ನು ಕೋರಿ ಅವರಿಗೆ ಧನ್ಯತೆಗಳನ್ನು ಸಲ್ಲಿಸುತ್ತೀರಿ. ಅದು ಮುಖ್ಯವಾದ ಉದ್ದೇಶ.
ಭಾರತದಲ್ಲಿ ಶಾಶ್ತ್ರಗಳೆಲ್ಲವೂ ಸಂಸ್ಕೃತದಲ್ಲಿವೆ ಮತ್ತು ಆದ್ದರಿಂದ ಜನರಿಗೆ ಅದು ಅರ್ಥವಾಗುವುದಿಲ್ಲ. ಪುರೋಹಿತರು ಮಂತ್ರಗಳನ್ನು ಹೇಳಿ ನಿಮಗೆ ಅದನ್ನು ಇದನ್ನು ಮಾಡಲು ಹೇಳುತ್ತಾರೆ, ಮತ್ತು ನೀವು ಅಷ್ಟನ್ನೇ ಶ್ರದ್ಧೆಯಿಂದ ಮಾಡುತ್ತೀರಿ. ಅದು ತಪ್ಪಲ್ಲ ಆದರೆ ಅದನ್ನು ಸ್ವಲ್ಪ ಅರ್ಥ ಮಾಡಿಕೊಂಡು ನೆರವೇರಿಸುವುದು ಒಳ್ಳೆಯದು.

ಪ್ರ: ನಮ್ಮ ಪೋಷಕರ ಮತ್ತು ಪೂರ್ವಜರ ಕರ್ಮಗಳು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಅವರ ಕೆಟ್ಟ ಕರ್ಮಗಳಿಂದಾಗಿ ನಮ್ಮಗೂ ಶಿಕ್ಷೆ ಸಿಗುವುದೇ?
ಶ್ರೀ ಶ್ರೀ: ಕೇಳಿ, ನಿಮ್ಮ ಪೂರ್ವಜರು ನಿಮಗೆ ಒಂದು ಮನೆ ಬಿಟ್ಟಿದ್ದರೆ, ಅದು ನಿಮಗೀಗ ವರವಾಗಿಲ್ಲವೇ?
ನೀವು ಇಂಥ ಉತ್ತರ ನೇರವಾಗಿರುವಂಥ ಪ್ರಶ್ನೆಗಳನ್ನು ಏಕೆ ಕೇಳುತ್ತಿದ್ದೀರಿ?!
ಅವರು ಬಹಳ ಹಣ ಸಂಪಾದಿಸಿದ್ದಾರೆ, ಕಷ್ಟಪಟ್ಟು ದುಡಿದು ಒಂದು ಮನೆ ಕಟ್ಟಿ ಅದನ್ನು ನಿಮಗೆಂದು ಬಿಟ್ಟಿದ್ದಾರೆ.ನೀವು ಅವರ ಕರ್ಮ ಫಲದಿಂದ ಸುಖ ಅನುಭವಿಸುತ್ತಿದ್ದೀರಿ ಅಲ್ಲವೇ?!ಮತ್ತೆ ಅವರು ಬ್ಯಾಂಕಿನಲ್ಲಿ ಸಾಲ ಮಾಡಿ ಹೋಗಿದ್ದರೆ, ಅದನ್ನು ನೀವು ತೀರಿಸಬೇಕಾಗಿದ್ದರೆ ಆಗ ಅದೂ ನಿಮ್ಮ ಕರ್ಮ. ಆದ್ದರಿಂದ ಅದು ಸಹಜವಾಗಿ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ
ಪೋಷಕರಷ್ಟೇ ಅಲ್ಲ ನಿಮ್ಮ ಒಡನಾಟವೂ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ.
ನೀವು ಬಹಳ ಖಿನ್ನರಾದ ವ್ಯಕ್ತಿಗಳೊಡನೆಯೇ ಕುಳಿತ್ತಿದ್ದರೆ, ನೀವು ಖಿನ್ನತೆಯನ್ನನುಭವಿಸುತ್ತೀರಿ. ನೀವು ಸಂತುಷ್ಟ ಮತ್ತು ಆಧ್ಯಾತ್ಮಿಕ ವ್ಯಕ್ತಿಗಳೊಡನೆ ಬೆರೆತುಕೊಂಡಿದ್ದರೆ ನಿಮ್ಮ ಕರ್ಮ ಸುಧಾರಿಸುತ್ತದೆ.
ಲೋಕದಲ್ಲಿ ನಿಮಗೆ ಒಳ್ಳೆಯ ಕರ್ಮದಿಂದ ಮತ್ತು ಕೆಟ್ಟ ಕರ್ಮದಿಂದ ಪಾರಾಗಲು ಸಾಧ್ಯವಿಲ್ಲ. ನಾವು ಇದರೊಂದಿಗೆ ಸಾಗಬೇಕು, ಯಾಕೆಂದರೆ ಅಸ್ವಸ್ಥ ವ್ಯಕ್ತಿಗಳೊಡನೆ ನಾವು ವ್ಯವಹರಿಸಬೇಕಾದ ಕೆಲವು ಕಾಲಗಳಿರುತ್ತವೆ. ನಾನು ಅಸ್ವಸ್ಥ ವ್ಯಕ್ತಿಗಳೊಡನೆ ಇರುವುದಿಲ್ಲ ಎಂದು ನಿಮಗೆ ಹೇಳಲಾಗುವುದಿಲ್ಲ. ಎಲ್ಲರೂ ಹಾಗೆ ಹೇಳಿದರೆ ಆಗ ಆಸ್ಪತ್ರೆಗಳ ಮತ್ತು ರೋಗಿಗಳ ಗತಿ ಏನಾಗಬಹುದು?
ಹಾಗಾಗಿ ಈ ಲೋಕದಲ್ಲಿ, ನಾವು ಎಲ್ಲರೊಂದಿಗೂ ಇರಬೇಕು, ಆದ್ದರಿಂದಲೇ ಜ್ಞಾನ ಮತ್ತು ಸೇವೆಗಳಲ್ಲಿ ನಿರತರಾಗಿದ್ದಾಗ, ಅವುಗಳು ನಿಮ್ಮನ್ನು ರಕ್ಷಿಸಲು ಸಹಾಯಕವಾಗುತ್ತವೆ. ಇವನ್ನು ಕವಚವೆಂದು ಹೇಳುತ್ತಾರೆ.
ಓಂ ನಮಃ ಶಿವಯ ಜಪವು ನಿಮ್ಮ ಸುತ್ತ ಒಂದು ರಕ್ಷಣಾ ಕವಚದಂತೆ. ಅದು ನಿಮ್ಮನ್ನು ಎಲ್ಲಾ ಅನಗತ್ಯ ಕರ್ಮಗಳಿಂದ ರಕ್ಷಿಸುತ್ತದೆ, ಮತ್ತು ಇತರ ದುಷ್ಪರಿಣಾಮಗಳನ್ನು ತಡೆಗಟ್ಟುತ್ತದೆ.
ಆದರೆ ನೀವು ದಿನದ ೨೪ ಘಂಟೆ ಕಾಲ ಓಂ ನಮಃ  ಶಿವಾಯ ಜಪಿಸಬೇಕಾಗಿಲ್ಲ. ನೀವದನ್ನು ಮಾಡಿದರೆ, ನಿಮ್ಮ ಬುದ್ಧಿ ಬಹಳ ಮಂದವಾಗುತ್ತದೆ. ನೀವು ಹಲ್ಲುಜ್ಜಿದಂತೆ ಪ್ರತಿದಿನ ಕೆಲವು ನಿಮಿಷಗಳ ಕಾಲವಷ್ಟೇ. ನೀವು ಪ್ರತಿ ಘಂಟೆಗೊಮ್ಮೆ ಹಲ್ಲುಜ್ಜುವುದಿಲ್ಲವಷ್ಟೇ? ನಿಮ್ಮಲ್ಲಿ ಯಾರಾದರೂ ಘಂಟೆಗೊಮ್ಮೆ ಹಲ್ಲುಜ್ಜುತ್ತಿದ್ದರೆ ಮತ್ತೆ ನಂತರ ನೀವು ಯಾವುದೇ ಹಲ್ಲನ್ನು ಹೊಂದಿರುವುದಿಲ್ಲ. ಎಲ್ಲಾ ಬಿದ್ದು ಹೋಗುತ್ತವೆ. ನೀವು ಯಾವತ್ತೂ ಹಲ್ಲುಜ್ಜದೇ ಇದ್ದರೆ, ಆಗಲೂ ಕೂಡ ಅದು ಒಳ್ಳೆಯದಲ್ಲ.
ಅದೇ ರೀತಿ, ಹಲ್ಲಿನ ಸ್ವಚ್ಛತೆಯಂತೆಯೇ, ಮಾನಸಿಕ ಸ್ವಚ್ಛತೆಯೂ ನಿಮಗೆ ಅಗತ್ಯ. ಸ್ವಲ್ಪ ನಿಮಿಷಗಳ ಜಪ, ಸ್ವಲ್ಪ ನಿಮಿಷಗಳ ಧ್ಯಾನ, ಇವೆಲ್ಲಾ ನಿಮಗೆ ಸಹಾಯಕವಾಗುತ್ತವೆ.
ನಾವು ಸ್ವಲ್ಪ ನಿಮಿಷಗಳಷ್ಟೇ ಹೊತ್ತು ಸ್ನಾನ ಮಾಡುತ್ತೇವೆ ಅಲ್ಲವೇ?!
ಅಂದ ಹಾಗೆ, ಎಲ್ಲರೂ ನೀರನ್ನು ಸಂರಕ್ಷಿಸಬೇಕು. ಜಗತ್ತಿನಾದ್ಯಂತ ಮತ್ತು ಬೆಂಗಳೂರಿನಲ್ಲೂ ಒಂದು ದೊಡ್ಡ ಪ್ರಮಾಣದ ನೀರಿನ ಕೊರತೆ ಕಂಡುಬಂದಿದೆ. ಎಲ್ಲಾ ಕೆರೆಗಳು ಬತ್ತಿವೆ ಮತ್ತು ಈ ವರ್ಷ ಹೆಚ್ಚು ನೀರಿಲ್ಲ. ಹಾಗಾಗಿ ನಾವೆಲ್ಲರೂ ನೀರನ್ನು ಸಂರಕ್ಷಿಸೋಣ. ನಿಮಗೆ ಎಷ್ಟು ಅಗತ್ಯವಿದೆಯೋ ಅಷ್ಟೇ ನೀರನ್ನು ಉಪಯೋಗಿಸಿ.