ಗುರುವಾರ, ಅಕ್ಟೋಬರ್ 25, 2012

ಜೀವನದ ರಹಸ್ಯ

೨೫ ಅಕ್ಟೋಬರ್ ೨೦೧೨

ಬೆಂಗಳೂರು ಆಶ್ರಮ
 
ಪ್ರಶ್ನೆ: ಗುರುದೇವ, ಜೀವನದ ರಹಸ್ಯವನ್ನು ಜೀವಿಸುವುದು ಎಂಬ ಶೀರ್ಷಿಕೆಯುಳ್ಳ ನಿಮ್ಮ ಪುಸ್ತಕದಲ್ಲಿ ನೀವು, "ಈ ಪ್ರಪಂಚದಲ್ಲಿ ಕೆಲಸ ಮಾಡಿ, ಆದರೆ ಅದು ನಿಮ್ಮ ತಲೆಯನ್ನು ಪ್ರವೇಶಿಸಲು ಬಿಡಬೇಡಿ" ಎಂದು ಹೇಳಿದ್ದೀರಿ. ದಯವಿಟ್ಟು ನೀವು ಇದನ್ನು ಮತ್ತೊಮ್ಮೆ ವಿವರಿಸುವಿರಾ? ಅದು ವೈರಾಗ್ಯದಂತೆಯೇ?
ಶ್ರೀ ಶ್ರೀ ರವಿ ಶಂಕರ್:
ಸರಿಯಾಗಿ ಇದನ್ನೇ ನಾವೀಗ ಧ್ಯಾನದಲ್ಲಿ ಮಾಡಿರುವುದು. ಕಣ್ಣುಗಳು ತೆರೆದಿರುವಾಗ, ನಾವು ದೃಶ್ಯವನ್ನು ನೋಡುತ್ತೇವೆ ಮತ್ತು ನಾವು ನಮ್ಮ ಕಣ್ಣುಗಳನ್ನು ಮತ್ತು ನಮ್ಮ ಮನಸ್ಸನ್ನು ಮುಚ್ಚಿದಾಗ ಅಲ್ಲಿ ಇನ್ನೊಂದು ಪ್ರಪಂಚವಿರುತ್ತದೆ. ನೀನಿದನ್ನು ಗಮನಿಸಿದ್ದೀಯಾ? ಆದುದರಿಂದ ಇದಕ್ಕಿರುವ ಮಾರ್ಗವು ಧ್ಯಾನವಾಗಿದೆ.
ನೋಡು, ನೀನು ಕುಳಿತುಕೊಂಡು, "ಓ, ನನ್ನ ಸೊಸೆಯು ಇದನ್ನು ಮಾಡಿದಳು. ನನ್ನ ಮಗನು ನನಗೆ ಗೌರವ ನೀಡಲಿಲ್ಲ" ಮೊದಲಾದವನ್ನು ಯೋಚಿಸುತ್ತಿರುವೆಯೆಂದು ಇಟ್ಟುಕೊಳ್ಳೋಣ. ನೀನು ಕುಳಿತುಕೊಂಡು ಇದರ ಬಗ್ಗೆ ಇಡೀ ರಾತ್ರಿ, ಮಾರನೇ ದಿನ ಬೆಳಗ್ಗೆ ಮತ್ತು ಮರುದಿನವಿಡೀ ಯೋಚಿಸಬಹುದು ಹಾಗೂ ಅದೆಲ್ಲವೂ ನಿನಗೆ ಸುಮ್ಮನೇ ತೊಂದರೆಯನ್ನುಂಟುಮಾಡಬಹುದು.
ನಾನು ಹೇಳುತ್ತಿರುವುದೇನೆಂದರೆ, ಅವರೇನೇ ಮಾಡಿರಲಿ, ಅದು ಅಲ್ಲಿರಲಿ. ನೀನು ನಿನ್ನ ಕಣ್ಣುಗಳನ್ನು ಮುಚ್ಚಿದಾಗ, ನೀನು ನಿನ್ನ ಸ್ಥಾನದಲ್ಲಿರು. ಹೊರ ಪ್ರಪಂಚವು ನಿನಗೆ ತೊಂದರೆಯನ್ನುಂಟುಮಾಡಲು ಬಿಡಬೇಡ. ಅದು ಕಷ್ಟ, ನನಗೆ ಗೊತ್ತು, ಅದು ಅಷ್ಟೊಂದು ಸುಲಭವಲ್ಲ. ಆದರೆ ನಾವು ಮುಂದುವರಿಯಬೇಕಾಗಿರುವುದು ಆ ದಿಕ್ಕಿನಲ್ಲಿ.
ಎರಡು ಪ್ರಪಂಚಗಳಿವೆ ಮತ್ತು ಸತ್ಯವಿರುವುದು ಎರಡು ಪ್ರಪಂಚಗಳ ನಡುವೆ. ಒಂದು ಮನೋರಾಜ್ಯ ಎಂದು ಕರೆಯಲ್ಪಡುತ್ತದೆ - ಒಬ್ಬನ ಸ್ವಂತ ಮನಸ್ಸಿನಲ್ಲಿರುವ ರಾಜ್ಯ. ಇನ್ನೊಂದು ಸಮಾಜ  - ಹೊರ ಪ್ರಪಂಚದ ಪರಿಸರ. ಸಮಾಜ ಮತ್ತು ಮನೋರಾಜ್ಯದ ನಡುವೆ ಸತ್ಯವಿದೆ.
 
ಪ್ರಶ್ನೆ: ಗುರುದೇವ, ನಾವು ಧ್ಯಾನಕ್ಕೆ ಕುಳಿತಾಗ, ಕೆಲವು ಯೋಚನೆಗಳು ಮೋಡಗಳಂತೆ ಹಾಗೆಯೇ ಹಾದುಹೋಗುತ್ತವೆ, ಆದರೆ ಇತರ ಕೆಲವು ಯೋಚನೆಗಳಿರುತ್ತವೆ, ಅವುಗಳು ನಾವೊಂದು ದೀರ್ಘ ಪಯಣವನ್ನು ಕೈಗೊಳ್ಳುವಂತೆ ಮಾಡುತ್ತವೆ. ನಾನೊಂದು ಪಯಣದಲ್ಲಿರುವೆನೆಂಬುದು ನನಗೆ ಅಚಾನಕ್ಕಾಗಿ ತಿಳಿದು ಬಂತು. ಆ ದೀರ್ಘ ಪಯಣಕ್ಕೆ ನಮ್ಮನ್ನು ಕಳುಹಿಸುವಂತಹ ಯಾಂತ್ರಿಕ ವ್ಯವಸ್ಥೆ ಯಾವುದು ಮತ್ತು ಅವುಗಳೆಲ್ಲಾ ಯಾಕೆ ಮೋಡಗಳಂತೆ ಹಾದು ಹೋಗುವುದಿಲ್ಲ?
ಶ್ರೀ ಶ್ರೀ ರವಿ ಶಂಕರ್:
ಅವುಗಳಿರುವುದೇ ಹಾಗೆ. ಕೆಲವು ಯೋಚನೆಗಳು ಈ ರೀತಿ ಇರುತ್ತವೆ, ಕೆಲವು ಆ ರೀತಿ ಇರುತ್ತವೆ. ಕೆಲವು ನಿಮಗೆ ತೊಂದರೆಯನ್ನುಂಟುಮಾಡುತ್ತವೆ, ಕೆಲವು ಮಾಡುವುದಿಲ್ಲ. ಅದಕ್ಕಾಗಿಯೇ ನಿಮ್ಮ ಮನಸ್ಸನ್ನು ಕೇಂದ್ರಕ್ಕೆ ತರಲು ಹಲವಾರು ಉಪಾಯಗಳು ಮತ್ತು ಹಲವಾರು ಮಾರ್ಗಗಳಿರುವುದು.
ನೋಡಿ, ಇತ್ತೀಚೆಗಿನ ಪೂಜೆಗಳಲ್ಲಿ, ಅವರು ಯಾಕೆ ಅಷ್ಟೊಂದು ಸಂಗೀತ ಉಪಕರಣಗಳನ್ನು ಉಪಯೋಗಿಸಿದರು? ತಾಳಗಳಿಂದ ಒಂದು ದೊಡ್ಡ ಸದ್ದು ಮಾಡಲಾಯಿತು, ನಾದಸ್ವರವನ್ನು ನುಡಿಸಲಾಯಿತು, ಮಂತ್ರೋಚ್ಛಾರಣೆಯು ನಡೆಯುತ್ತಿತ್ತು. ಮನಸ್ಸು ಒಳಗಡೆ ಯೋಚಿಸುವುದನ್ನು ನಿಲ್ಲಿಸುವುದಕ್ಕಾಗಿ ಹೊರಗಡೆ ಬಹಳಷ್ಟು ಸದ್ದನ್ನು ಮಾಡಲಾಯಿತು. ಹೀಗೆ ಹಲವಾರು ಮಾರ್ಗಗಳಿವೆ. ನಾವು ಮನಸ್ಸನ್ನು ಕೇಂದ್ರಕ್ಕೆ ತರಬೇಕಾದುದು ಕೆಲವು ಕುಶಲತೆಗಳನ್ನು ಉಪಯೋಗಿಸುವುದರ ಮೂಲಕ.
ನಾವು ಇದರ ಬಗ್ಗೆ ದೂರಲು ಸಾಧ್ಯವಿಲ್ಲ, ಯಾಕೆಂದರೆ ಮನಸ್ಸು ಇರುವುದೇ ಹಾಗೆ. ಕೆಲವೊಮ್ಮೆ ಅದು ಸಂಪೂರ್ಣವಾಗಿ ಕ್ಷುಲ್ಲಕವಾದ ಹಾಗೂ ಮೂರ್ಖ ವಿಷಯಗಳಿಗೆ ಜೋತು ಬೀಳುತ್ತದೆ ಮತ್ತು ಅದು ಇರುವುದೇ ಹಾಗೆ. ಅದಕ್ಕಾಗಿಯೇ ಕೆಲವೊಮ್ಮೆ ಮನಸ್ಸಿನ ಆಳವನ್ನರಿಯಲಾಗುವುದಿಲ್ಲ.
ಭಗವದ್ಗೀತೆಯಲ್ಲಿ ಅರ್ಜುನನು ಕೃಷ್ಣ ಪರಮಾತ್ಮನಲ್ಲಿ ಹೇಳುತ್ತಾನೆ, "ಈ ಮನಸ್ಸು ಒಂದು ರಾಕ್ಷಸನಂತೆ. ನನಗದನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಅದು ನಾನು ಹೇಳುವುದನ್ನು ಕೇಳುವುದಿಲ್ಲ."
ಕೃಷ್ಣ ಪರಮಾತ್ಮನು ಅವನಲ್ಲಿ ಅನ್ನುತ್ತಾನೆ, "ಖಂಡಿತಾ, ನಾನು ನೀನು ಹೇಳುವುದನ್ನು ಒಪ್ಪುತ್ತೇನೆ."
ಆದರೆ ಒಂದು ಮಾರ್ಗವಿದೆಯೆಂದು ಕೊನೆಯಲ್ಲಿ ಅವನು ಹೇಳುತ್ತಾನೆ.
 
ಪ್ರಶ್ನೆ: ಪ್ರೀತಿಯ ಗುರುದೇವ, ನಿಮ್ಮ ಆಶೀರ್ವಾದಗಳನ್ನು ಪಡೆದುಕೊಳ್ಳಲಿರುವ ನನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ನಾನೇನು ಮಾಡಬೇಕು? ನಾನು ನನ್ನ ಲೋಟವನ್ನು ದೊಡ್ಡದಾಗಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್:
ಉನ್ನತ ಶಿಬಿರದಲ್ಲಿ ನೀವೆಲ್ಲರೂ ಷಟ್ ಸಂಪತ್ತಿಯ ಬಗ್ಗೆ ಕೇಳಿರುವಿರಿ (ಆರು ಸಂಪತ್ತುಗಳು ಅಥವಾ ಆರು ಗುಣಗಳು)
ಸಮ (ಮನಸ್ಸಿನ ಶಾಂತಿ)
ದಮ (ಸ್ವ-ನಿಯಾಂತ್ರಣ ಅಥವಾ ಇಂದ್ರಿಯಗಳ ಸಂಯಮ)
ಉಪರತಿ (ಪೂರ್ಣ ಸಂತೃಪ್ತಿ)
ತಿತಿಕ್ಷ (ಸಹಿಷ್ಣುತೆ)
ಶ್ರದ್ಧೆ
ಸಮಾಧಾನ
ನಿಮ್ಮ ಜೀವನದಲ್ಲಿ ನೀವು ಗಮನ ಕೊಡಬೇಕಾಗಿರುವುದು, ಇದನ್ನು ಹೆಚ್ಚಿಸುವುದರ ಕಡೆಗೆ. ಈ ಗುಣಗಳನ್ನು ವರ್ಧಿಸುವುದರಿಂದ, ಆಶೀರ್ವಾದಗಳನ್ನು ಪಡೆಯಲಿರುವ ನಿಮ್ಮ ಸಾಮರ್ಥ್ಯವು ಹೆಚ್ಚಾಗುತ್ತದೆ.
ಜ್ಞಾನದ ನಾಲ್ಕು ಕಂಬಗಳಲ್ಲಿ, ಮೂರನೆಯದು ಈ ಆರು ಸಂಪತ್ತುಗಳನ್ನು ಹೊಂದಿದೆ. ಅದನ್ನೇ ನಾವು ಹೆಚ್ಚಿಸಿಕೊಳ್ಳಬೇಕಾಗಿರುವುದು.
ಹಾಗೆಯೇ ನಾವು ಸೇವೆ ಮತ್ತು ಸಾಧನೆಗಳನ್ನು (ಆಧ್ಯಾತ್ಮಿಕ ಅಭ್ಯಾಸಗಳು) ಮಾಡಬೇಕು.
 
ಪ್ರಶ್ನೆ: ಗುರುದೇವ, ನಮ್ಮ ಧರ್ಮಗ್ರಂಥಗಳು ನಮ್ಮನ್ನು, "ನನಗೇನು ಸಿಗುತ್ತದೆ" ಎಂಬ ರೀತಿಯ ಯೋಚನೆಗಳಿಂದಾಚೆಗೆ ಕರೆದೊಯ್ಯಬೇಕೆಂದು ಭಾವಿಸಲಾಗಿದೆ. ಹಾಗಾದರೆ, ಪ್ರತಿಯೊಂದು ಧರ್ಮಗ್ರಂಥದಲ್ಲೂ ಕೂಡಾ ಫಲಶ್ರುತಿ (ಧರ್ಮಗ್ರಂಥದ ಲಾಭ) ಯ ಬಗ್ಗೆ ಯಾಕೆ ಅಷ್ಟೊಂದು ವಿವರವಾಗಿ ಸ್ಪಷ್ಟೀಕರಿಸಲಾಗಿದೆ?
ಶ್ರೀ ಶ್ರೀ ರವಿ ಶಂಕರ್:
ಅದನ್ನು ಮಾಡುವಂತೆ ನಿಮಗೆ ಆಸೆ ಬರಿಸುವುದಕ್ಕಾಗಿ ನೀಡುವುದಕ್ಕಾಗಿ ಮಾತ್ರ! (ನಗು) ಅದೊಂದು ಮಾರಾಟದ ಕಾರ್ಯತಂತ್ರ.
ನಿಮಗೆ ಗೊತ್ತಾ, "ಯಾವುದೇ ಲಾಭ ದೊರಕದಿದ್ದಲ್ಲಿ ಯಾರೂ ಏನನ್ನೂ ಮಾಡುವುದಿಲ್ಲ" ಎಂಬ ಒಂದು ಮಾತಿದೆ. ತನಗೆ ಅದರಿಂದ ಏನಾದರೂ ಸಿಗಬಹುದು ಎಂದು ಯೋಚಿಸದಿದ್ದಲ್ಲಿ ಒಬ್ಬ ಮಂದ ವ್ಯಕ್ತಿಯು ಏನನ್ನೂ ಮಾಡನು. ಪ್ರಾಚೀನ ಕಾಲದ ಋಷಿಗಳಿಗೆ ಇದು ತಿಳಿದಿತ್ತು ಮತ್ತು ಅದಕ್ಕಾಗಿಯೇ ಅವರು, ಇದನ್ನು ಮಾಡುವುದರಿಂದ ನಿಮಗೆ ಇಂತಿಂಥ ಲಾಭಗಳು ದೊರೆಯುವುವು ಎಂಬುದನ್ನು ನಿಮಗೆ ಹೇಳಲಿಕ್ಕಾಗಿ ಫಲಶ್ರುತಿಯನ್ನು ಸೇರಿಸಿದರು. ಅದಕ್ಕಾಗಿಯೇ ಅದು ಅಪರ ಎಂದು ಕರೆಯಲ್ಪಡುತ್ತದೆ.
ಅಪರ ವಿದ್ಯೆ ಎಂದರೆ, ಯಾವುದರಲ್ಲಿ ನೀವು ಯಾವತ್ತೂ ಅಭ್ಯಾಸದೊಂದಿಗೆ ಕೆಲವು ಲಾಭಗಳನ್ನು ಜೋಡಿಸುವಿರೋ ಅದು. ಅದಕ್ಕಿಂತ ಸೂಕ್ಷ್ಮವಾದುದೆಂದರೆ ಪರಾ-ಪರ, ಮತ್ತು ಕೊನೆಯಲ್ಲಿ ಪರ ವಿದ್ಯೆ  ಎಂದಿದೆ, ಅಲ್ಲಿ ಇದು ಯಾವುದೂ ಗಣನೆಗೇ ಇಲ್ಲ . ಪರಾ ವಿದ್ಯೆಯನ್ನು ಪಡೆಯಲು ಯಾವುದೇ ಮಾರ್ಗವಿಲ್ಲ.
 
ಪ್ರಶ್ನೆ: ಗುರುದೇವ, ನವರಾತ್ರಿಯು ರಜಸ್ಸು ಮತ್ತು ತಮಸ್ಸುಗಳ ಮೇಲೆ ಸತ್ವದ ವಿಜಯ ಎಂಬುದನ್ನು ನಾವು ಕೇಳಿದ್ದೇವೆ. ಆದರೆ ಜೀವನವು ಅಸ್ತಿತ್ವದಲ್ಲಿರಲು ಎಲ್ಲಾ ಮೂರು ಗುಣಗಳೂ ಸಮಾನವಾಗಿ ಮುಖ್ಯವಲ್ಲವೇ? ಒಂದಕ್ಕಿಂತ ಇನ್ನೊಂದರ ಮೇಲೆ ನಾವು ಹೆಚ್ಚು ಒಲವನ್ನು ತೋರಿಸಲು ಹೇಗೆ ಸಾಧ್ಯ?
ಶ್ರೀ ಶ್ರೀ ರವಿ ಶಂಕರ್:
ಇಲ್ಲ, ಅದು ಯಾವತ್ತೂ ಹಾಗೆಯೇ. ಮೂರರಲ್ಲಿ ಒಂದು ಅಧಿಕಾರ ನಡೆಸುತ್ತದೆ.
ಎಲ್ಲರಲ್ಲೂ ಸತ್ವವು ಯಾವತ್ತೂ ಇರುತ್ತದೆ. ಹಾಗೆಯೇ ರಜೋ ಗುಣ ಮತ್ತು ತಮೋ ಗುಣಗಳೂ ಇರುತ್ತವೆ. ಎಲ್ಲಾ ಮೂರು ಗುಣಗಳೂ ಯಾವತ್ತೂ ಜೊತೆಯಲ್ಲಿ ಇರುತ್ತವೆ. ಆದರೆ  ಯಾವುದು ಅಧಿಕಾರ ನಡೆಸುತ್ತದೆ ಎಂಬುದು, ಆ ಸಮಯದ ಗುಣವನ್ನು ನಿರ್ಧರಿಸುತ್ತದೆ.
ತಮೋಗುಣವು ಆಳುತ್ತಿದ್ದರೆ, ಅಲ್ಲಿ ದುಃಖವಿರುತ್ತದೆ.
ರಜೋಗುಣವು ಆಳುವಾಗ, ಅಲ್ಲಿ ಸಂಘರ್ಷವಿರುತ್ತದೆ.
ಸದ್ಗುಣವು ಆಳುವಾಗ, ಅಲ್ಲಿ ಅರಿವು, ಜ್ಞಾನ ಮತ್ತು ಸಂತೋಷವಿರುತ್ತವೆ.
ಯಾವುದು ಆಳುತ್ತಿದೆಯೆಂಬುದನ್ನು ನೀವು ಗಮನಿಸಬೇಕು, ಯಾಕೆಂದರೆ ಅದುವೇ ಆ ಸಮಯಕ್ಕೆ ಗುಣಮಟ್ಟವನ್ನು ನೀಡುವುದು.
 
ಪ್ರಶ್ನೆ: ಪ್ರೀತಿಯ ಗುರುದೇವ, ನಮ್ಮ ವಿಧಿಯನ್ನು ಕೂಡಾ ಒಳಗೊಂಡಂತೆ ನಾವು ಹಲವಾರು ಸಂಗತಿಗಳನ್ನು ಬದಲಾಯಿಸಬಹುದೆಂದು ನಿನ್ನೆ ನೀವು ನಮಗೆ ಹೇಳಿದ್ದಿರಿ. ನನ್ನ ಜೀವನದಲ್ಲಿ ಏನನ್ನೆಲ್ಲಾ ಸಾಧ್ಯವೋ ಅದನ್ನೆಲ್ಲಾ ಬದಲಾಯಿಸಲು ನಾನು ನನಗೆ ಸಾಧ್ಯವಿರುವಷ್ಟು ಪ್ರಯತ್ನಿಸುತ್ತಿದ್ದೇನೆ. ಆದರೆ, ನನ್ನ ವಿಧಿಯಲ್ಲೇನಿದೆಯೋ ಅದರ ಮೂಲಕವೇ ನಾನು ಹಾದುಹೋಗುತ್ತಿರುವೆನು ಎಂದು ನನಗನ್ನಿಸುತ್ತದೆ. ಯಾಕೆ?
ಶ್ರೀ ಶ್ರೀ ರವಿ ಶಂಕರ್:
ನೋಡು, ಜೀವನವೆಂಬುದು ಹಿತ ಮತ್ತು ಅಹಿತಗಳ ಒಂದು ಮಿಶ್ರಣವಾಗಿದೆ. ನಿನ್ನ ಜೀವನದಲ್ಲಾದ ಒಳ್ಳೆಯ ವಿಷಯಗಳ ಮೇಲೆ ಹೆಚ್ಚು ಗಮನವನ್ನು ಹಾಕು. ಆಗ ಅದು ಬೆಳೆಯುತ್ತದೆ.
ನೀವು ಜ್ಞಾನದಲ್ಲಿರುವಾಗ ಕೂಡಾ ವಿಧಿಯು ಬದಲಾಗುತ್ತದೆ.