ಶುಕ್ರವಾರ, ಅಕ್ಟೋಬರ್ 12, 2012

ಮನವು ವಿಚಾರಾತ್ಮಕವಾಗಿರಲಿ

ಬೆಂಗಳೂರು, ಭಾರತ
೧೨ ಅಕ್ಟೋಬರ್, ೨೦೧೨

ಗತ್ತಿನಲ್ಲಿ ಮೂಲಭೂತವಾಗಿ ಎರಡು ರೀತಿಯ ಮನೋಭಾವಗಳಿವೆ ಅಥವಾ ಎರಡು ರೀತಿಯ ಜನರಿದ್ದಾರೆ.

ಎಲ್ಲಾ ಜನರೂ ಸ್ವಾಭಾವಿಕವಾಗಿ ಕೆಟ್ಟವರೆಂದು; ಒಳಗಿನಿಂದ ಅವರು ತುಂಬಾ ಕೆಟ್ಟವರೆಂದು ಒಂದು ರೀತಿಯವರು ಯೋಚಿಸುತ್ತಾರೆ.

ಮೂಲತಃ ಒಳಗೆ ಆಳದಲ್ಲಿ ಪ್ರತಿಯೊಬ್ಬರೂ ಒಳ್ಳೆಯವರೆಂದೂ, ಅವರ ವರ್ತನೆಯು ಸ್ವಲ್ಪ ಕೆಟ್ಟದಾಗಿದ್ದರೂ ಅದು ಕೇವಲ ಹೊರವಲಯದಲ್ಲಿ ಮಾತ್ರವೆಂದೂ ಅವರು ಯೋಚಿಸುತ್ತಾರೆ.

ಹೀಗೆ, ಮೊದಲನೆಯ ರೀತಿಯ ಜನರು ಯಾರನ್ನೂ ನಂಬಲಾರರು ಮತ್ತು ಎರಡನೆಯ ರೀತಿಯ ಜನರು ಯಾರನ್ನೂ ಅತಿಯಾಗಿ ಸಂಶಯಿಸುವುದಿಲ್ಲ. ನಿಮಗೆ ವ್ಯತ್ಯಾಸವು ಕಾಣಿಸುತ್ತಿದೆಯೇ? ಸ್ವಾಭಾವಿಕವಾಗಿ ಪ್ರತಿಯೊಬ್ಬರೂ ಒಳ್ಳೆಯವರೆಂದು ನೀವು ಯೋಚಿಸಿದರೆ, ಆಗ ನಿಮ್ಮ ಸಂಶಯವು ಕೇವಲ ಹೊರನೋಟದ್ದಾಗಿರುತ್ತದೆ. ನೀವು ಯಾರನ್ನೂ ಆಳವಾಗಿ ಸಂಶಯಿಸುವುದಿಲ್ಲ ಯಾಕೆಂದರೆ, ಪ್ರತಿಯೊಬ್ಬರಲ್ಲೂ ಒಳ್ಳೆಯತನವಿದೆಯೆಂಬುದು ನಿಮಗೆ ತಿಳಿದಿರುತ್ತದೆ. ಪ್ರತಿಯೊಬ್ಬರ ಒಳ್ಳೆಯತನದಲ್ಲಿ ನಿಮಗೆ ನಂಬಿಕೆಯಿರುತ್ತದೆ. ಇನ್ನೊಂದು ಗುಂಪಿನ ಜನರಲ್ಲಿ ವಿಶ್ವಾಸದ ದೊಡ್ದ ಸಮಸ್ಯೆಯಿರುತ್ತದೆ,

ಯಾಕೆಂದರೆ, ಸ್ವಾಭಾವಿಕವಾಗಿ ಎಲ್ಲರೂ ಕೆಟ್ಟವರೆಂದು ಅವರು ಯೋಚಿಸುತ್ತಾರೆ. ಅವರು ಹೊರಗಿನಿಂದ ಒಳ್ಳೆಯವರಾಗಿ ಕಾಣಿಸಿದರೂ ಕೂಡಾ, ಒಳಗೆ ಆಳದಲ್ಲಿ ಅವರು ಒಳ್ಳೆಯವರಲ್ಲ, ನಿಮ್ಮ ಮನಸಿನಲ್ಲಿನ ಈ ಮನೋಭಾವ, ಈ ಕಲ್ಪನೆಯು,
ನೀವು ಯಾರನ್ನೂ ನಂಬದಿರಲು ಕಾರಣವಾಗುತ್ತದೆ.

ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ?

ಒಬ್ಬ ವ್ಯಕ್ತಿಯಲ್ಲಿ ನೀವು ಏನೋ ತಪ್ಪನ್ನು ಕಂಡುಹಿಡಿದರೆ, ಅದು ಆ ವ್ಯಕ್ತಿಯ ನಿಜವಾದ ಸ್ವಭಾವವೆಂದು ನೀವು ಯೋಚಿಸುತ್ತೀರಿ - ಇದು ನೋಡಲು ಬಹಳ ಆಸಕ್ತಿಕರವಾಗಿದೆ.

ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಬಯಸುತ್ತೇನೆ.

ಕಳೆದ ವರ್ಷ, ಉತ್ತರ ಭಾರತದ ಒಂದು ನಗರದಲ್ಲಿ, ಒಂದು ದೊಡ್ದ ಸತ್ಸಂಗಕ್ಕೆ ನಾನು ಹೋದೆ ಮತ್ತು ಅಲ್ಲಿ ಈ ಕುಖ್ಯಾತ ವ್ಯಕ್ತಿಯೊಬ್ಬನು ಒಳಗೆ ಬಂದ, ವೇದಿಕೆಗೆ ಹತ್ತಿದ ಮತ್ತು ಅತ್ತಿತ್ತ ಚಲಿಸತೊಡಗಿದ. ಎಲ್ಲಾ ಪತ್ರಕರ್ತರು ಮತ್ತು ಎಲ್ಲರೂ ಹೇಳಿದರು, "ಈ ವ್ಯಕ್ತಿಯು ಒಬ್ಬ ಕುಖ್ಯಾತ ಅಪರಾಧಿಯಾಗಿದ್ದಾನೆ, ಅವನು ಗುರುದೇವರ ಬಳಿಗೆ ಹೇಗೆ ಪ್ರವೇಶಿಸಿದ? ಅವನು ಗುರುದೇವರೊಂದಿಗೆ ಹೇಗೆ ನಿಂತಿದ್ದಾನೆ?"

ಅಲ್ಲಿದ್ದ ಲಕ್ಷಾಂತರ ಜನರ ಮಧ್ಯೆ, ಈ ಕುಖ್ಯಾತ ವ್ಯಕ್ತಿಯು ಸುತ್ತಲೂ ಚಲಿಸುತ್ತಿದ್ದ ಮತ್ತು ಅವನು ಎಷ್ಟೊಂದು ಕುಖ್ಯಾತನೆಂದರೆ ಅವನು, "ನಾನೊಂದು ಕರೆಯನ್ನು ಮಾಡಿ ಯಾವುದೇ ವಿಮಾನವನ್ನಾದರೂ ನಿಲ್ಲಿಸಬಲ್ಲೆ" ಎಂದು ಹೇಳುತ್ತಾನೆ. ಅವನು ಸುಮ್ಮನೆ ಯಾವುದೇ ಟ್ಯಾಕ್ಸಿ ಚಾಲಕನನ್ನು ಕಾರಿನಿಂದ ಇಳಿಯುವಂತೆ ಹೇಳಿ, ತಾನು ಟ್ಯಾಕ್ಸಿಯನ್ನು ತೆಗೆದುಕೊಂಡು ಹೋಗುತ್ತಿದ್ದ. ಅವನು ಒಂದು ದೊಡ್ಡ ಅಪರಾಧದ ದಾಖಲೆಯನ್ನು ಹೊಂದಿದವನಾಗಿದ್ದ.

ಹೀಗೆ ಅವನು ವೇದಿಕೆಗೆ ಬರುತ್ತಾನೆ ಮತ್ತು ಎಲ್ಲರೂ ಅಚ್ಚರಿಪಡುತ್ತಿದ್ದಾರೆ, "ಗುರುದೇವರು ಅದು ಹೇಗೆ ಅವನನ್ನು ಅಲ್ಲಿರಲು ಬಿಟ್ಟರು?" ಇದೊಂದು ಪ್ರಶ್ನೆಯಾಗಿತ್ತು.

ನಿಮಗೆ ಗೊತ್ತಾ, ಯಾವುದೇ ಕೋರ್ಸ್ ಅಥವಾ ಏನನ್ನೂ ಮಾಡದೇ ಇದ್ದ ಅದೇ ವ್ಯಕ್ತಿಯು, ಮೂರು ತಿಂಗಳುಗಳ ಬಳಿಕ ಇಲ್ಲಿಗೆ, ಬೆಂಗಳೂರು ಆಶ್ರಮಕ್ಕೆ ಶಿವರಾತ್ರಿಯಂದು ಬಂದನು. ಹೀಗೆ ಅವನು ನನ್ನನ್ನು ಭೇಟಿಯಾಗಲು ಬರುತ್ತಾನೆ, ತನ್ನ ಜೇಬಿನೊಳಗಿನಿಂದ ನನ್ನ ಚಿತ್ರವನ್ನು ತೆಗೆಯುತ್ತಾನೆ ಮತ್ತು ಹೇಳುತ್ತಾನೆ, "ಗುರುದೇವ, ನಾನು ಈ ಚಿತ್ರವನ್ನು ನನ್ನ ಜೇಬಿನಲ್ಲಿ ಇಟ್ಟುಕೊಂಡಂದಿನಿಂದ, ನನಗೆ ನನ್ನ ಕೆಲಸವನ್ನು ಮಾಡಲು ಸಾಧ್ಯವಾಗುತ್ತಿಲ್ಲ."

ಅವನು ಹೇಳುತ್ತಾನೆ, "ನನಗೆ ನನ್ನ ಕೆಲಸವನ್ನು ಮಾಡಲು ಸಾಧ್ಯವಾಗಲೇ ಇಲ್ಲ. ಏನಾಯಿತು? ನೀವೇನು ಮಾಡಿದಿರಿ? ನನ್ನ ಜೀವನವೆಲ್ಲಾ ತಿರುಗು-ಮುರುಗಾಗಿದೆ; ನನ್ನ ಇಡೀ ಜೀವನ ಬದಲಾಗಿದೆ. ಇಲ್ಲಿ ಬಹಳಷ್ಟು ಆನಂದವಿದೆ! ಈಗ ನಾನು ಈ ಆನಂದವನ್ನು ನನ್ನ ರಾಜ್ಯಕ್ಕೆ ಮತ್ತು ಪ್ರತಿಯೊಂದು ಮನೆಗೂ ತೆಗೆದುಕೊಂಡು ಹೋಗಲು ಬಯಸುತ್ತೇನೆ."

ಇದು ಅದೇ ವ್ಯಕ್ತಿ, ಅತ್ಯಂತ ಸಾಮಾಜಿಕ-ವಿರೋಧಿ ಅಂಶವೆಂದು ಎಲ್ಲರಿಂದಲೂ ಪರಿಗಣಿಸಲ್ಪಟ್ಟಿದ್ದವನು. ಪತ್ರಕರ್ತರು ಕೂಡಾ ಅವನಿಗೆ ಹೆದರುತ್ತಾರೆ. ಪತ್ರಕರ್ತರು, ಸಾಧಾರಣವಾಗಿ, ಯಾರಿಗೂ ಹೆದರುವುದಿಲ್ಲ. ಆದರೆ ಅವರಂದರು, "ಈ ವ್ಯಕ್ತಿಯು ಭೀಕರನಾಗಿದ್ದಾನೆ."

ನಿಮಗೆ ಗೊತ್ತಾ, ನಾವು ಜನರನ್ನು ಹೇಗೆ ನೋಡುತ್ತೇವೆಯೋ, ಜಗತ್ತು ಹಾಗೆಯೇ ಆಗುತ್ತದೆ. ಸಂಸ್ಕೃತದಲ್ಲಿ ಒಂದು ಗಾದೆ ಮಾತಿದೆ, ಅದು ಹೇಳುತ್ತದೆ, ’ಯಥಾ ದೃಷ್ಟಿ, ತಥಾ ಸೃಷ್ಟಿ’. ನೀವು ಜಗತ್ತನ್ನು ಹೇಗೆ ನೋಡುವಿರೋ, ಜಗತ್ತು ನಿಮಗೆ ಹಾಗೆ ಇರುತ್ತದೆ.

ಜಗತ್ತು ಭಯಾನಕ ಜನರಿಂದ ತುಂಬಿದೆಯೆಂಬಂತೆ ನೀವು ನೋಡಿದರೆ, ನಿಮ್ಮ ಅನುಭವದಲ್ಲಿ, ಕೇವಲ ಅಂತಹ ರೀತಿಯ ವಿಷಯಗಳು ಆಗುವುವು. ಜಗತ್ತು ಒಳ್ಳೆಯ ಜನರಿಂದ ತುಂಬಿದೆಯೆಂಬಂತೆ ನೀವು ನೋಡಿದರೆ, ಅತ್ಯಂತ ಕೆಟ್ಟ ಅಪರಾಧಿಯಲ್ಲಿ ಕೂಡಾ ಒಬ್ಬ ಬಹಳ ಒಳ್ಳೆಯ ವ್ಯಕ್ತಿಯು ಒಳಗೆ ಆಳದಲ್ಲಿ ಅಡಗಿರುವನೆಂಬುದನ್ನು ನೀವು ಕಾಣುವಿರಿ. ನೀವದನ್ನು ಗುರುತಿಸುವಿರಿ.

ಇತ್ತೀಚೆಗೆ ನಾನು ದಕ್ಷಿಣ ಅಮೇರಿಕಾದಲ್ಲಿದ್ದೆ ಮತ್ತು ನಾನು ಅಲ್ಲಿ ಹಲವಾರು ಸೆರೆಮನೆಗಳನ್ನು ಸಂದರ್ಶಿಸಿದೆ. ಈ ಸೆರೆಮನೆಗಳಲ್ಲಿ ಬಹಳ ಕುಖ್ಯಾತ ಜನರಿದ್ದಾರೆ ಗೊತ್ತಾ. ನಾನು ಅಲ್ಲಿಗೆ ಹೋದಾಗ, ಅಷ್ಟೊಂದು ಆನಂದ ಮತ್ತು ಪ್ರೀತಿಯ ಕಣ್ಣೀರ ಹನಿಗಳು ಅವರ ಕಣ್ಣುಗಳಲ್ಲಿ ಇದ್ದುದನ್ನು ನನಗೆ ನೋಡಲು ಸಾಧ್ಯವಾಯಿತು. ಅವರಂದರು, "ಮೊದಲು ನಾವು ಹೊರಗಡೆಯಿದ್ದೆವು ಮತ್ತು ನಮಗೆ ಸ್ವಾತಂತ್ರ್ಯವಿರಲಿಲ್ಲ. ಈಗ ನಾವು ಸೆರೆಮನೆಯಲ್ಲಿದ್ದೇವೆ, ಆದರೆ ನಾವು ಮೊದಲೆಂದೂ ಇಲ್ಲದಿದ್ದಂತೆ ಸ್ವತಂತ್ರರಾಗಿರುವೆವು. ನಾವು ಬಹಳ ಮುಕ್ತರಾಗಿರುವೆವು ಮತ್ತು ಬಹಳ ಸಂತೋಷವಾಗಿರುವೆವು."

ಇವುಗಳು ಅವರ ಮಾತಾಗಿದ್ದವು. ಆದುದರಿಂದ, ಜನರ ಬಗ್ಗೆ ನಿರ್ಣಯಿಸಬೇಡಿ ಅಥವಾ ಅವರಿಗೆ ಕೆಟ್ಟ ಜನರು ಅಥವಾ ಒಳ್ಳೆಯ ಜನರೆಂಬುದಾಗಿ ಹಣೆಪಟ್ಟಿ ಹಚ್ಚಬೇಡಿ. ಹಲವಾರು ರೀತಿಗಳಲ್ಲಿ, ಹಲವಾರು ಜನರಲ್ಲಿ, ಹಲವಾರು ಮನಃಸ್ಥಿತಿಗಳಲ್ಲಿ, ಹಲವಾರು ಬಣ್ಣಗಳಲ್ಲಿ ತನ್ನನ್ನು ತಾನೇ ವ್ಯಕ್ತಪಡಿಸುವುದು ಕೇವಲ ಒಂದೇ ಒಂದು ದೈವತ್ವವಾಗಿದೆ. ಅದು ಒಂದು ಪ್ರಕಾಶವಾಗಿದೆ.

ನಾವಿದನ್ನು ಗುರುತಿಸಬಲ್ಲೆವಾದರೆ, ಆಗ ನಮಗೆ ನಮ್ಮ ಹೃದಯಗಳಲ್ಲಿ ಎಷ್ಟೊಂದು ಆಳವಾದ ಶಾಂತಿ, ಎಷ್ಟೊಂದು ವಿಶ್ವಾಸ ಮತ್ತು ಶ್ರದ್ಧೆ ಇರುವುದೆಂದರೆ, ಯಾವುದಕ್ಕೂ ನಮ್ಮನ್ನು ಅಲುಗಾಡಿಸಲು ಸಾಧ್ಯವಾಗದು.

ಜನರು ಸ್ವಭಾವತಃ ಕೆಟ್ಟವರೆಂದು ನಾವು ಯೋಚಿಸಿದರೆ, ಆಗ ನಾವು ಎಲ್ಲರನ್ನೂ ಸಂಶಯಿಸುವೆವು. ಅತ್ಯಂತ ಧಾರ್ಮಿಕ ವ್ಯಕ್ತಿಯೊಂದಿಗೆ ಕೂಡಾ, ’ಈ ವ್ಯಕ್ತಿಯು ಬಹಳ ಧಾರ್ಮಿಕನಾಗಿದ್ದಾನೆ, ಆದರೆ ಒಳಗಿನಿಂದ ಅವನು  ಬೇರೆ ಏನೋ ಇರಬೇಕು’ ಎಂದು ನೀವು ಯೋಚಿಸುವಿರಿ. ಅವನು ಯಾವುದಕ್ಕೋ ಗುರಿಯಿಡುತ್ತಿರಬೇಕು. ಅವನು ಸ್ವಾರ್ಥಿಯಾಗಿರಬೇಕು, ಅವನು ಲೋಭಿಯಾಗಿರಬೇಕು, ಅವನು ಮತ್ಸರ ಪಡುತ್ತಿರಬೇಕು, ಅವನು ಕೋಪಗೊಂಡಿರಬೇಕು. ಈ ಎಲ್ಲಾ ನಕಾರಾತ್ಮಕ ಗುಣಗಳನ್ನು ನೀವು ಇನ್ನೊಬ್ಬ ಮನುಷ್ಯನ ಮೇಲೆ ಹಾಕುವಿರಿ, ಮತ್ತು ನಿಮ್ಮಲ್ಲಿ ವಿಶ್ವಾಸವು ನಿರ್ಮಾಣವಾಗುವ ಬದಲಾಗಿ ನಿಮ್ಮಲ್ಲಿರುವ ಸಂಶಯವು ನಿರ್ಮಾಣವಾಗುತ್ತಾ ಹೋಗುವುದು ಹೀಗೆಯೇ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ನಕಾರಾತ್ಮಕತೆಯಿದ್ದರೂ, ಅದು ಕೇವಲ ಹೊರವಲಯದಲ್ಲಿ ಮಾತ್ರವೆಂಬುದನ್ನು ಕಾಣುವುದು ಬುದ್ಧಿವಂತಿಕೆಯಾಗಿದೆ. ಈ ನಕಾರಾತ್ಮಕತೆಯು ಕೇಂದ್ರದಲ್ಲಿದೆಯೆಂದು, ಅದು ವ್ಯಕ್ತಿಯ ಸ್ವಭಾವ, ಕೇವಲ ಪರಿಧಿಯಲ್ಲಿ ಮಾತ್ರವಲ್ಲವೆಂದು ನೀವು ನೋಡುವಾಗ ಅದು ಅಜ್ಞಾನವಾಗಿದೆ. ಜನರು ಸ್ವಭಾವತಃ ಕೆಟ್ಟವರೆಂದು ಯೋಚಿಸುವುದು ಅಜ್ಞಾನವಾಗಿದೆ.

ದುರದೃಷ್ಟವಶಾತ್, ಇವತ್ತು ಎಲ್ಲಿ ಜ್ಞಾನವಿಲ್ಲವೋ, ಅಲ್ಲಿ ಹರಡಲಾಗುತ್ತಿರುವುದು ಏನೆಂದರೆ, "ಎಚ್ಚರಿಕೆಯಿಂದಿರಿ! ಎಚ್ಚರಿಕೆಯಿಂದಿರಿ!" ಎಲ್ಲದಕ್ಕೂ ಎಚ್ಚರಿಕೆಯಿದೆ.

’ಜೀವನವು ಅಪಾಯದಲ್ಲಿದೆ. ನೀವು ಅಪಾಯದಲ್ಲಿರುವಿರಿ’, ಭಯ, ಅಭದ್ರತೆ, ಸಂಶಯ, ಅನಿಶ್ಚಿತತೆ, ಮೊದಲಾದ ಭಾವನೆಯನ್ನು ಸಮಾಜದೊಳಕ್ಕೆ ಹರಿಸಲಾಗುತ್ತಿದೆ.

ಕಾರುಗಳ ಮೇಲೆ ಕೂಡಾ, ಕೆಲವೊಮ್ಮೆ ’ಮಾರಕ’ ಎಂದು ಬರೆಯಲಾಗುತ್ತದೆ. ಎಚ್ಚರಿಕೆಗಳನ್ನು ಎಲ್ಲೆಡೆಗಳಲ್ಲೂ ಬರೆಯಲಾಗುತ್ತದೆ, ’ಎಚ್ಚರಿಕೆ! ಇದು ಸಾವಿಗೆ ಕಾರಣವಾಗಬಹುದು.’

ನೀವೊಂದು ಪ್ಲಾಸ್ಟಿಕ್ ಚೀಲವನ್ನು ಖರೀದಿಸುವಾಗ ಅದರಲ್ಲಿ ಹೇಳಿರುತ್ತದೆ, ’ಎಚ್ಚರಿಕೆ, ಇದು ನಿಮ್ಮನ್ನು ಉಸಿರುಗಟ್ಟಿಸಬಹುದು ಮತ್ತು ಸಾವಿಗೆ ಕಾರಣವಾಗಬಹುದು!’

ಇದರ ಅರ್ಥ, ನೀವೆಲ್ಲೇ ತಿರುಗಿದರೂ, ಅಲ್ಲಿ ಎಚ್ಚರಿಕೆಯಿದೆ. ಎಲ್ಲವೂ ಕೆಟ್ಟದು, ಎಲ್ಲವೂ ’ಎಚ್ಚರಿಕೆ, ಎಚ್ಚರಿಕೆ! ತಿಳಿದಿರಲಿ, ತಿಳಿದಿರಲಿ!’ ಎಂದು ಹೇಳುತ್ತಿದೆ. ನೀವು ಆ ಎಚ್ಚರಿಕೆಯನ್ನು ಪ್ಲಾಸ್ಟಿಕುಗಳ ಮೇಲೆ ಹಾಕಲೇಬೇಕಾಗಿದೆ. ಅಮೇರಿಕಾದ ಸಂಯುಕ್ತ ಸಂಸ್ಥಾನಗಳಲ್ಲಿ ಇದೊಂದು ಕಾನೂನು ಎಂದು ನನಗನಿಸುತ್ತದೆ. ನೀವು ತೆಗೆದುಕೊಳ್ಳುವ ಎಲ್ಲದರ ಮೇಲೂ ಒಂದು ಎಚ್ಚರಿಕೆ ಇರುತ್ತದೆ.

’ಜನರ ಮನಸ್ಸುಗಳೊಳಕ್ಕೆ ನಾವು ಹೇಗೆ ಭಯವನ್ನು ತುಂಬುತ್ತಿದ್ದೇವೆ’ ಎಂಬುದರ ಬಗ್ಗೆ ಒಬ್ಬರು ಒಂದು ಬಹಳ ಒಳ್ಳೆಯ ಸಾಕ್ಷ್ಯಚಿತ್ರವನ್ನು ಮಾಡಿದ್ದರು. ’ಹೇ, ಎಚ್ಚರಿಕೆಯಿಂದಿರು!’ ಎಂದು ಹೇಳುವ ಮೂಲಕ, ಅರಿವಿಲ್ಲದೆಯೇ, ನಾವು ಅವರಲ್ಲಿ ಭಯವನ್ನು ಹುಟ್ಟಿಸುತ್ತೇವೆ. ಒಂದು ಪ್ಲಾಸ್ಟಿಕ್ ಅಥವಾ ಪೋಲಿಥೀನ್ ಚೀಲವನ್ನು ಉಪಯೋಗಿಸುವುದಕ್ಕೆ, ಅಥವಾ ಯಾವುದಕ್ಕಾದರೂ ಮತ್ತು ಪ್ರತಿಯೊಂದು ಚಿಕ್ಕ ಪುಟ್ಟ ವಿಷಯಗಳಿಗೂ, ಅಲ್ಲೊಂದು ಎಚ್ಚರಿಕೆಯಿದೆ. ಆಟದ ಸಾಮಾನುಗಳಲ್ಲಿ ಕೂಡಾ ಅವರು, ’ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೂಕ್ತವಲ್ಲ. ಎಚ್ಚರಿಕೆ, ಇದು ಸಾವಿಗೆ ಮತ್ತು ಅಪಾಯಕ್ಕೆ ಕಾರಣವಾಗಬಹುದು’ ಎಂದು ಹೇಳುತ್ತಾರೆ.

ಆಟಿಕೆಗಳಿಂದ ಅಡಿಗೆ ಪಾತ್ರೆಗಳ ವರೆಗೆ, ಆಹಾರದಿಂದ ಎಲ್ಲದರ ವರೆಗೆ, ನಾವು ಜನರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ, ’ಜಾಗ್ರತೆಯಾಗಿರಿ, ಜಾಗ್ರತೆಯಾಗಿರಿ, ಜಾಗ್ರತೆಯಾಗಿರಿ’, ಮತ್ತು ಈ ಎಚ್ಚರಿಕೆಯು ಜನರಲ್ಲಿ ಬಹಳಷ್ಟು ಆತಂಕ ಮತ್ತು ಭಯವನ್ನು ಹುಟ್ಟಿಸುತ್ತದೆ.

ನೀವು ಎಚ್ಚರಿಕೆಯಿಂದಿರಬಾರದೆಂದು ನಾನು ಹೇಳುತ್ತಿಲ್ಲ. ನೀವು ಎಚ್ಚರಿಕೆಯಿಂದಿರಬೇಕು, ಆದರೆ ಅದು ಅತಿಯಾಗುವುದರಿಂದ, ಆ ರೀತಿಯ ಸಂವೇದನೆಯೊಂದಿಗೆ, ಪ್ರಜ್ಞೆಯಲ್ಲಿ ಗೊಂದಲ ಹುಟ್ಟುವಂತೆ ಮಾಡುತ್ತದೆ.

ಯಾರನ್ನೂ ನಂಬಲು ಸಾಧ್ಯವಾಗದೇ ಇರುವಂತಹ ಜನರಿದ್ದಾರೆ. ಅವರು ತಮ್ಮ ಸಂಗಾತಿಯನ್ನು ಅಥವಾ ತಮ್ಮ ಮಗುವನ್ನು ನಂಬಲಾರರು.

ತಮ್ಮ ಹೆತ್ತವರನ್ನು ನಂಬಲು ಸಾಧ್ಯವಾಗದೇ ಇರುವಂತಹ ಮಕ್ಕಳಿದ್ದಾರೆ. ಅವರು ಮಾಧ್ಯಮಗಳಲ್ಲಿ ಬರುವ ಎಲ್ಲಾ ಸಮಾಚಾರಗಳನ್ನು ನೋಡುತ್ತಾರೆ ಮತ್ತು ಈ ಯುವ ಮನಸ್ಸುಗಳು ಕೆಲವೊಮ್ಮೆ ಅದನ್ನು ತಮ್ಮ ಮೇಲೆಯೇ ಹೇರಿಕೊಳ್ಳುತ್ತಾರೆ. ಅವರು ಯೋಚಿಸುತ್ತಾರೆ, ನನ್ನ ತಂದೆಯು ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿರಬಹುದು; ನನಗೆ ಲೈಂಗಿಕ ಕಿರುಕುಳ ನೀಡಿರಬಹುದು ಎಂದು.

ಒಂದು ದಿನ, ಒಬ್ಬ ಸಜ್ಜನನು ನನ್ನನ್ನು ಭೇಟಿಯಾಗಲು ಬಂದನು ಮತ್ತು ಅವನು ಬಹಳ ತಳಮಳಗೊಂಡಿದ್ದನು. ಅವನು ಅಳುತ್ತಿದ್ದನು ಯಾಕೆಂದರೆ ಅವನ ಸ್ವಂತ ಮಗಳು, ತಾನು ಮೂರು ವರ್ಷದವಳಿದ್ದಾಗ ತನ್ನ ತಂದೆಯು ತನ್ನನ್ನು ಸರಿಯಲ್ಲದ ರೀತಿಯಲ್ಲಿ ಮುಟ್ಟಿದನೆಂದು ಸಂಶಯಿಸಲು ತೊಡಗಿದ್ದಳು. ಇದನ್ನು ಅವಳು ಟಿವಿಯಲ್ಲಿ ಕೇಳಿಸಿಕೊಂಡಿದ್ದಳು ಮತ್ತು ಅವಳು ಅದನ್ನು ಹಿಡಿದುಕೊಂಡು ತನ್ನ ಸ್ವಂತ ತಂದೆಯನ್ನೇ ಸಂಶಯಿಸಲು ತೊಡಗಿದಳು. ಅವಳ ತಂದೆ ಹೇಳಿದನು, "ನಾನು ಆಣೆ ಮಾಡಿ ಹೇಳುತ್ತಿದ್ದೇನೆ, ನಾನು ಎಂದಿಗೂ, ಯಾವತ್ತಿಗೂ ಇಂತಹುದನ್ನು ನನ್ನ ಕನಸಿನಲ್ಲಿ ಕೂಡಾ ಕಲ್ಪಿಸಲಿಲ್ಲ, ನಾನು ಅಂತಹುದೇನನ್ನೂ ಮಾಡಿಲ್ಲ."

ಪತಿ, ಪತ್ನಿ ಇಬ್ಬರೂ ಅಳುತ್ತಿದ್ದಾರೆ ಯಾಕೆಂದರೆ ಮಗಳು ತಂದೆಯ ಪ್ರೀತಿಯನ್ನು ಸಂಶಯಿಸುತ್ತಿದ್ದಾಳೆ, ಮಗಳು ತಂದೆಯ ನಡತೆಯ ಬಗ್ಗೆ ಸಂಶಯಿಸುತ್ತಿದ್ದಾಳೆ. ಹೆತ್ತವರು ಬಹಳ ತಳಮಳಗೊಂಡಿದ್ದಾರೆ. ಮಗಳನ್ನು ಮನಃಶಾಸ್ತ್ರಜ್ಞರಲ್ಲಿಗೆ ಕರೆದೊಯ್ಯಲಾಯಿತು ಮತ್ತು ಮನಃಶಾಸ್ತ್ರಜ್ಞರಂದರು, "ನಿನ್ನ ಮನಸ್ಸಿಗೆ ಏನೆಲ್ಲಾ ಬರುತ್ತಿದೆಯೋ ಅದನ್ನು ಹೇಳು", ಮತ್ತು ಮಗುವು ತಾನು ಟಿವಿಯಲ್ಲಿ ನೋಡಿದುದನ್ನು, ಅದು ತನ್ನದೇ ಅನುಭವವೇನೋ ಎಂಬ ರೀತಿಯಲ್ಲಿ ಪುನರುಚ್ಛರಿಸುತ್ತಿದ್ದಾಳೆ!

ನಾನು ಹೇಳುತ್ತೇನೆ ಕೇಳಿ, ನಮಗೆ ನಮ್ಮ ಪ್ರಜ್ಞೆಯ ಯಂತ್ರಶಾಸ್ತ್ರದ ಬಗ್ಗೆ ತಿಳಿಯದು ಮತ್ತು ನಾವು ಈ ರೀತಿಯ ಅರೆ-ಬೆಂದ ಜ್ಞಾನದೊಂದಿಗೆ ಆಟವಾಡುತ್ತೇವೆ. ಅದಕ್ಕಾಗಿಯೇ ನಮ್ಮ ಪ್ರಜ್ಞೆಯನ್ನು, ನಮ್ಮ ಮನಸ್ಸನ್ನು, ನಮ್ಮ ವರ್ತನೆಯನ್ನು ಮತ್ತು ನಮ್ಮ ಸ್ವಭಾವವನ್ನು ತಿಳಿಯುವುದು ಮುಖ್ಯವಾದುದು.

ಒಬ್ಬ ತಂದೆಗೆ ಎಷ್ಟು ಭೀಕರವಾದ ಅನುಭವವಾಗಬಹುದೆಂದು ನಿಮಗೆ ಊಹಿಸಲು ಸಾಧ್ಯವೇ? ಮತ್ತು ಅವನಂದನು, "ಓ, ನನ್ನ ಹನ್ನೊಂದು ವರ್ಷದ ಮಗಳು ನನ್ನನ್ನು ಸಂಶಯಿಸುತ್ತಿದ್ದಾಳೆ."

ಅದೇ ರೀತಿಯಲ್ಲಿ, ಗಂಡ ಮತ್ತು ಹೆಂಡತಿ ಪರಸ್ಪರರ ಬಗ್ಗೆ ಸಂಶಯಿಸುತ್ತಾರೆ. ಅವರು ಅಷ್ಟೊಂದು ನಿಕಟವಾಗಿದ್ದರು ಮತ್ತು ಹಾಗಿದ್ದರೂ ಸಂಶಯ. ಒಂದು ದಿನ ಒಬ್ಬರು ಹೂಗಳನ್ನು ಮಾರುತ್ತಾ ಬಂದರು ಮತ್ತು ಗಂಡನು ಕೆಲವನ್ನು ಹೆಕ್ಕಿಕೊಂಡು ಮನೆಗೆ ತಂದನು. ಹೆಂಡತಿಯು ಅದನ್ನು ತೆಗೆದುಕೊಂಡು ಹೇಳುತ್ತಾಳೆ, "ಓ, ಇದೇನು? ಇವತ್ತು ನೀವು ನನಗೆ ಹೂ ತರುತ್ತಿರುವಿರಿ. ನನಗೆ ನಿಜ ಹೇಳಿ, ನೀವು ಯಾರನ್ನು ಭೇಟಿಯಾದಿರಿ? ನೀವೇನು ಮಾಡಿದಿರಿ?"

ಹೀಗೆ ಆಗುವುದಿಲ್ಲವೇ?

ಭಾರತದ ಒಬ್ಬಳು ಅಮೇರಿಕಾದ ಒಬ್ಬ ಸಜ್ಜನನೊಂದಿಗೆ ವಿವಾಹವಾದಳು. ಅವಳು ಅವನಿಗೆ ದೂರವಾಣಿ ಕರೆಯನ್ನು ಮಾಡಿದಳು, ಮತ್ತು ಆ ಸಮಯದಲ್ಲಿ ಅವನು ಕಾರು ಚಲಾಯಿಸುತ್ತಿದ್ದನು, ಹಾಗೂ ಅಲ್ಲಿ ಒಂದು ಜಿ.ಪಿ.ಎಸ್. ಸಾಧನದಿಂದ, ’ಇನ್ನು ಅರ್ಧ ಕಿಲೋಮೀಟರುಗಳಲ್ಲಿ, ಎಡಕ್ಕೆ ತಿರುಗಿ’ ಎಂದು ನಿರ್ದೇಶನ ನೀಡುತ್ತಿದ್ದ ಒಬ್ಬಳು ಸ್ತ್ರೀಯ ಸ್ವರ ಕೇಳಿಸಿತು. ಈಗ ಹೆಂಡತಿಯು ಕೇಳಿದಳು, "ನಿಮಗೆ ನಿರ್ದೇಶನವನ್ನು ನೀಡುತ್ತಿರುವ ಈ ಹೆಂಗಸು ಯಾರು?" ಅವನಂದನು, "ಹಾಂ, ನಾನು ಅವಳನ್ನು ಎಲ್ಲಾ ಸಮಯದಲ್ಲೂ ಅನುಸರಿಸುತ್ತೇನೆ." ನಂತರ ಅವನು, ಅದೊಂದು ಸಾಧನವೆಂದು ಅವಳಿಗೆ ವಿವರಿಸಿದನು.
ಮುಂದಿನ ಕೆಲವು ದಿನಗಳಲ್ಲಿ, ಹೆಂಡತಿ ಕರೆದಾಗಲೆಲ್ಲಾ, ಮತ್ತೆ ಮತ್ತೆ, ಅದೇ ಸ್ವರ ಬರುವುದು ಅವಳಿಗೆ ಕೇಳಿಸಿತು. ಅವಳು ಪುನಃ ಕೇಳಿದಳು, "ಈ ಹೆಂಗಸು ಯಾರು? ನೀವು ನನಗೆ ನಿಜ ಹೇಳುತ್ತಿಲ್ಲ."

ಕೊನೆಗೆ, ಹೆಂಡತಿಯು ಅವಳ ಗಂಡನಿಗೆ ವಿವಾಹ ವಿಚ್ಛೇದನ ಪತ್ರಗಳನ್ನು ಕಳುಹಿಸುತ್ತಾಳೆ. ಆ ವ್ಯಕ್ತಿಯು ನನ್ನಲ್ಲಿಗೆ ಬಂದು ಹೇಳುತ್ತಾನೆ, "ಗುರುದೇವ, ಅವಳು ನನಗೆ ಒಂದು ಜಿ.ಪಿ.ಎಸ್.ನ ಕಾರಣದಿಂದ ವಿವಾಹ ವಿಚ್ಛೇದನವನ್ನು ನೀಡಿದಳು. ಅವಳು ನನಗೆ ಇನ್ನೊಬ್ಬಳು ಸ್ತ್ರೀಯೊಂದಿಗೆ ಸಂಬಂಧವಿದೆಯೆಂದು ಹೇಳುತ್ತಾಳೆ. ’ಪ್ರತಿಸಲವೂ ನಾನು ಕರೆ ಮಾಡುವಾಗ ಈ ಸ್ತ್ರೀಯು ನಿಮ್ಮ ಪಕ್ಕದಲ್ಲಿರುತ್ತಾಳೆ ಮತ್ತು ಎಲ್ಲಿ ತಿರುಗಬೇಕು, ಎಲ್ಲಿಗೆ ಹೋಗಬೇಕೆಂದು ಅವಳು ನಿಮಗೆ ಮಾರ್ಗದರ್ಶನ ಮಾಡುತ್ತಾಳೆ. ಆದುದರಿಂದ ನನಗೆ ಸುಳ್ಳು ಹೇಳಬೇಡಿ’ ಎಂದು ಹೇಳುತ್ತಾಳೆ."

ಅವನಂದನು, "ಭಾರತದಲ್ಲಿ, ಒಂದು ಜಿ.ಪಿ.ಎಸ್. ಇರುವುದರ ಬಗ್ಗೆ ಅವರಿಗೆ ತಿಳಿಯದು, ಮತ್ತು ಸಾಧಾರಣವಾಗಿ

ಜಿ.ಪಿ.ಎಸ್.ನಲ್ಲಿರುವುದು ಒಬ್ಬಳು ಸ್ತ್ರೀಯ ಸ್ವರ."

ಹೀಗೆ, ಮದುವೆಯಾದ ಈ ವ್ಯಕ್ತಿಯು, ಒಂದು ವರ್ಷದಲ್ಲಿ ಒಂದು ವಿವಾಹ ವಿಚ್ಛೇದನ ಪತ್ರವನ್ನು ಪಡೆಯುತ್ತಾನೆ ಯಾಕೆಂದರೆ, ಅವಳಲ್ಲಿರುವ ಸಂಶಯದಿಂದ; ಯಾಕೆಂದರೆ, ಸ್ವಭಾವತಃ ಜನರು ಕೆಟ್ಟವರಾಗಿರಬೇಕು ಎಂದು ಅವಳು ಯೋಚಿಸುತ್ತಾಳೆ: ಪ್ರತಿಫಲವಾಗಿ ಅವರಿಗೇನೋ ಸಿಗುತ್ತಿರಬೇಕು, ಇಲ್ಲದಿದ್ದರೆ ಅವರು ಯಾಕೆ ಏನನ್ನಾದರೂ ಮಾಡುವರು ಎಂದು.

ಕಳೆದ ಮೂವತ್ತು ವರ್ಷಗಳಲ್ಲಿ ಈ ಪ್ರಶ್ನೆಯನ್ನು ನಾನು ಹಲವು ಸಲ ಎದುರಿಸಬೇಕಾಯಿತು. "ನೀವು ಯಾಕೆ ನಮ್ಮ ದೇಶಕ್ಕೆ ಬಂದಿರುವಿರಿ?" ನಾನು ಯಾವುದಾದರೂ ಹೊಸ ದೇಶಕ್ಕೆ ಹೋಗುವಾಗ ಅವರು ಕೇಳುತ್ತಾರೆ, "ನೀವು ಇಲ್ಲಿಗೆ ಯಾಕೆ ಬಂದಿರುವಿರಿ?"

ನಾನು ಹೇಳುತ್ತೇನೆ, "ನಾನು ಯಾಕೆ ಬರಬಾರದು?"

ನಂತರ ನಾನು ಅವರಿಗೆ ಒಂದು ಉದಾಹರಣೆಯನ್ನು ನೀಡಿದೆನು. ನೀವೊಂದು ಒಳ್ಳೆಯ ಸಿನೆಮಾವನ್ನು ನೋಡಿದರೆ, ನೀವೇನು ಮಾಡುವಿರಿ? ನೀವು ಫೋನನ್ನು ತೆಗೆದುಕೊಂಡು ನಿಮ್ಮ ಮಿತ್ರರಲ್ಲಿ, "ಹೇ, ನಾನೊಂದು ಒಳ್ಳೆಯ ಸಿನೆಮಾವನ್ನು ನೋಡಿದೆ, ನೀನು ಕೂಡಾ ಅದನ್ನು ನೋಡಲೇಬೇಕು" ಎಂದು ಹೇಳುವುದಿಲ್ಲವೇ?

ಸಿನೆಮಾದ ನಿರ್ಮಾಪಕರು ಅಥವಾ ನಿರ್ದೇಶಕರು ಅದಕ್ಕಾಗಿ ನಿಮಗೆ ಏನಾದರೂ ಹಣವನ್ನು ನೀಡುವರೇ? ಇಲ್ಲ! ಅದು ಕೇವಲ ಹಂಚುವಿಕೆಯ ಆನಂದವಾಗಿದೆ. ಆನಂದದ ಸ್ವಭಾವವೆಂದರೆ, ಅದು ಹರಡಲು ಬಯಸುತ್ತದೆ. ನೀವು ಆನಂದಪೂರ್ಣರಾಗಿರುವಾಗ, ನೀವು ಎಲ್ಲರೊಂದಿಗೂ ಹಂಚಿಕೊಳ್ಳಲು ಬಯಸುವಿರಿ. ಹಲವು ಸಲ ಜನರಿಗೆ ಇದು ಅರ್ಥವಾಗುವುದಿಲ್ಲ.

ಆರಂಭದಲ್ಲಿ, ಸುಮಾರು ಏಳು ವರ್ಷಗಳ ವರೆಗೆ ನಾನು ಉಚಿತವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೆ. ಭಾರತದಲ್ಲಾಗಲೀ ಅಥವಾ ವಿದೇಶಗಳಲ್ಲಾಗಲೀ, ನಾನು ಯಾರಿಂದಲೂ ಯಾವುದೇ ಹಣವನ್ನೂ ತೆಗೆದುಕೊಳ್ಳಲಿಲ್ಲ. ಎಲ್ಲೂ ಇಲ್ಲ, ಏನೂ ಇಲ್ಲ. ಆದರೆ ಆಗ ಈ ಸಂಶಯವು ಇನ್ನೂ ಹೆಚ್ಚಾಗಿತ್ತು. ನೀವು ಕೋರ್ಸನ್ನು ಉಚಿತವಾಗಿ ನಡೆಸುತ್ತಿರುವಿರಿ, ಹಾಗಾದರೆ ಅಲ್ಲಿ ಏನೋ ಇರಬೇಕು, ಇಲ್ಲದಿದ್ದರೆ ನೀವು ಯಾಕೆ ಹಾಗೆ ಮಾಡುವಿರಿ? ನಿಮ್ಮಲ್ಲೇನೋ ದುರುದ್ದೇಶವಿದೆ, ಯಾವುದೋ ಉದ್ದೇಶ.
ನಂತರ ನಾವು ಶಿಕ್ಷಕರನ್ನು ಹೊಂದಲು ಶುರುವಾದಾಗ, ಎಲ್ಲಾ ಶಿಕ್ಷಕರು ಬಂದು ನನಗೆ ಸಲಹೆ ನೀಡಿದರು, "ಗುರುದೇವ, ನಾವಿದನ್ನು ಉಚಿತವಾಗಿ ಮಾಡಬಾರದು. ಮೊದಲನೆಯದಾಗಿ, ನಮಗೆ ಖರ್ಚು ವೆಚ್ಚಗಳನ್ನು ಭರಿಸಲು ಸಾಧ್ಯವಿಲ್ಲ. ಎರಡನೆಯದಾಗಿ, ಜನರು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ."

ಅವರನ್ನುತ್ತಾರೆ, "ನೀವು ಬರುವಾಗ, ಕಡಿಮೆಪಕ್ಷ ಜನರು ಹೇಗೋ ಬಂದು ಕುಳಿತುಕೊಳ್ಳುತ್ತಾರೆ. ಆದರೆ ಶಿಕ್ಷಕರಾಗಿ, ನಾವು ಕೋರ್ಸುಗಳನ್ನು ನಡೆಸುವಾಗ, ಅದು ಸಾಧ್ಯವಾಗದು. ನೀವು ಶುಲ್ಕ ವಿಧಿಸಲೇಬೇಕು."

ಆದುದರಿಂದ, ನನಗನಿಸುತ್ತದೆ, ಆರ್ಟ್ ಆಫ್ ಲಿವಿಂಗಿನ ಏಳನೆಯ ಅಥವಾ ಎಂಟನೆಯ ವರ್ಷದಲ್ಲಿ, ನಾವು ಮೊದಲ ಬಾರಿಗೆ ಶುಲ್ಕ ವಿಧಿಸಲು ಶುರು ಮಾಡಿದೆವು. ಈಗ ಜನರು ಯೋಚಿಸುತ್ತಾರೆ, "ಓ, ಅವರಿಗೆ ಹಣ ಸಿಗುತ್ತಿದೆ, ಆದುದರಿಂದ ಅವರು ಇದನ್ನು ಹಣಕ್ಕಾಗಿ ಮಾಡುತ್ತಿದ್ದಾರೆ." ಆದುದರಿಂದ ಈಗ ಜನರು ಸಂಶಯಿಸುವುದಿಲ್ಲ.

ಮನಸ್ಸೆಂಬುದು ವಿಶ್ವದಲ್ಲಿನ ಅತ್ಯಂತ ಅದ್ಭುತ ವಿಷಯವಾಗಿದೆ.

ಒಂದು ರೀತಿಯಲ್ಲಿ, ನಾವು ಶುಲ್ಕ ವಿಧಿಸಲು ಶುರು ಮಾಡಿದುದು ಒಳ್ಳೆಯದಾಯಿತು. ನಾವು ಹಲವಾರು ಶಾಲೆಗಳನ್ನು ಪ್ರಾರಂಭಿಸಿದೆವು. ನಮಗೆ ಬಹಳಷ್ಟು ಕೆಲಸವನ್ನು ಮಾಡಲು ಸಾಧ್ಯವಾಯಿತು. ಇವತ್ತು ನಾವು ಇನ್ನೂರ ಮೂರು ಉಚಿತ ಶಾಲೆಗಳನ್ನು ಹೊಂದಿದ್ದೇವೆ. ಅಲ್ಲಿ ಸಾವಿರಾರು ಮಕ್ಕಳು ಓದುತ್ತಿದ್ದಾರೆ.

ನಾವು ಹಲವಾರು ಸಾವಿರಾರು ಯುವಕರಿಗೆ ಕೂಡಾ, ತಮ್ಮ ಜೀವನದಲ್ಲಿ ಮೇಲೆ ಬರಲು ಬೆಂಬಲ ನೀಡುತ್ತಿದ್ದೇವೆ. ಒಂದರ ನಂತರ ಇನ್ನೊಂದರಂತೆ, ಹಲವಾರು ಯೋಜನೆಗಳಿವೆ.

ಈ ಆಶ್ರಮವೇ ಒಂದು ದೊಡ್ಡ ಯೋಜನೆಯಾಗಿದೆ. ಪ್ರಪಂಚದ ಸುತ್ತಲೂ ಇರುವ ನಮ್ಮ ಎಲ್ಲಾ ಆಶ್ರಮಗಳು ಬಿಳಿಯ ಆನೆಗಳಾಗಿವೆಯೆಂದು ನಾನು ಹೇಳುತ್ತೇನೆ. ಅವುಗಳನ್ನು ನಡೆಸುವುದು ಒಂದು ದೊಡ್ಡ ವಿಷಯವಾಗಿದೆ. ಒಂದು ಆಶ್ರಮವನ್ನು ನಡೆಸುವುದು ಸುಲಭದ ಸಂಗತಿಯಲ್ಲ, ಮತ್ತು ಈ ಎಲ್ಲಾ ಆಶ್ರಮಗಳು ಸಾವಿರಾರು ಜನರಿಗೆ ಬಹಳಷ್ಟು ಸಂತೋಷವನ್ನು, ಸಾಂತ್ವನವನ್ನು ಮತ್ತು ಶಾಂತಿಯನ್ನು ತರುತ್ತಿವೆ.

ಆರಂಭದ ವರ್ಷಗಳಲ್ಲಿ, ಆಶ್ರಮಗಳನ್ನು ಮತ್ತು ಇತರ ವಿಷಯಗಳನ್ನು ಪ್ರಾರಂಭಿಸಲು ನಾನು ಅಷ್ಟೊಂದು ಉತ್ಸುಕನಾಗಿರಲಿಲ್ಲ. ಆದರೆ ನಂತರ ನಿಮಗೆ ಗೊತ್ತಾ, ಅದು ಅಗತ್ಯವಾಯಿತು. ನಾನಂದೆ, "ಸರಿ.’ ಉನ್ನತ ಶಿಬಿರಗಳನ್ನು ನಡೆಸಬೇಕಾಗಿ ಬಂದಾಗ ಅದು ಅಗತ್ಯವಾಯಿತು. ಸ್ಥಳದಿಂದ ಸ್ಥಳಕ್ಕೆ, ಹಲವಾರು ಸಲ ನಾವು ಸ್ಥಳಗಳನ್ನು ಬಾಡಿಗೆಗೆ ಪಡೆಯಬೇಕಾಗಿ ಬಂತು.

ಹೀಗೆ, ಮನೋಭಾವವನ್ನು ಅರ್ಥಮಾಡಿಕೊಳ್ಳುವುದು ಬಹಳ ಆಸಕ್ತಿಕರವಾಗಿದೆ. ಸ್ವಭಾವತಃ ಪ್ರತಿಯೊಬ್ಬ ಮನುಷ್ಯನೂ ದೇವರ ಒಂದು ಕಿಡಿ; ದೈವತ್ವದ ಒಂದು ಕಿಡಿ, ಆದುದರಿಂದ ಅವರು ಕೆಟ್ಟವರಾಗಿರಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಂಡಿರಬೇಕಾದವನೊಬ್ಬನೇ ಅನ್ವೇಷಕನಾಗಿರುವನು. ಸೃಷ್ಟಿಕರ್ತನಿಂದ ಯಾವುದೇ ಕೆಟ್ಟ ಮನುಷ್ಯನು ಸೃಷ್ಟಿಸಲ್ಪಟ್ಟಿಲ್ಲವೆಂದು ನಾನು ಹೇಳುತ್ತೇನೆ. ಇದನ್ನು ನನ್ನಿಂದ ತೆಗೆದುಕೊಳ್ಳಿರಿ; ಕೆಟ್ಟ ವ್ಯಕ್ತಿ ಇಲ್ಲವೇ ಇಲ್ಲ. ಪ್ರತಿಯೊಬ್ಬರಲ್ಲೂ ಪ್ರಕಾಶವಿದೆ. ಒಂದೋ, ಅದು ಭಾಗಶಃ ಗೋಚರವಾಗುತ್ತದೆ ಅಥವಾ ಹೆಚ್ಚು ಹೆಚ್ಚು ಗೋಚರವಾಗುತ್ತದೆ, ಅಷ್ಟೇ. ಎಲ್ಲೋ ಅದು ಅಡಗಿರುತ್ತದೆ, ಎಲ್ಲೋ ಅದು ನಿದ್ರಿಸುತ್ತಿರುತ್ತದೆ ಮತ್ತು ಎಲ್ಲೋ ಅದು ಹೆಚ್ಚು ನಿಷ್ಕ್ರಿಯವಾಗಿರುತ್ತದೆ.

ಸ್ವಭಾವತಃ ಎಲ್ಲರೂ ಒಳ್ಳೆಯವರೆಂದು ನೀವು ಯೋಚಿಸಿದರೆ, ಆಗ ನಿಮ್ಮಲ್ಲಿ ಶಾಂತಿಯಿರುತ್ತದೆ, ನೀವು ಆಧ್ಯಾತ್ಮಿಕವಾಗಿ ಬೆಳೆಯುವಿರಿ ಮತ್ತು ನೀವು ನಿಮ್ಮದೇ ಆದ ಸಕಾರಾತ್ಮಕ ಗುಣಗಳಲ್ಲಿ ಅರಳುವಿರಿ. ಆದರೆ ನೀವು, ಸ್ವಭಾವತಃ ಜನರು ಕೆಟ್ಟವರಾಗಿರಬೇಕು ಎಂದು ಯೋಚಿಸಿದರೆ, ಆಗ ನಿಮ್ಮ ಆತ್ಮದೊಳಕ್ಕೆ ಪ್ರವೇಶಿಸುವ ಮೊದಲ ಸಂಗತಿಯೆಂದರೆ ಸಂಶಯ. ನಂತರ ಕ್ರೋಧ, ದ್ವೇಷ, ಲೋಭ, ಮಾತ್ಸರ್ಯ ಮತ್ತು ನಿರಾಶೆ, ಈ ಎಲ್ಲಾ ನಕಾರಾತ್ಮಕ ಗುಣಗಳು ನಿಮ್ಮಲ್ಲಿ ಮೊಳಕೆಯೊಡೆಯಲು ಪ್ರಾರಂಭಿಸುತ್ತವೆ. ಆಗ ನೀವು ನಿಮ್ಮನ್ನೇ ಇಷ್ಟಪಡದಿರುವುದು ಮಾತ್ರವಲ್ಲ, ನೀವು ಸುತ್ತಲಿರುವ ಎಲ್ಲರನ್ನೂ ಇಷ್ಟಪಡದಿರಲು ತೊಡಗುವಿರಿ.

ಇತರರನ್ನು ಮತ್ತು ನಿಮ್ಮನ್ನು ನೀವೇ ಇಷ್ಟಪಡದಿರುವುದು, ಇವುಗಳು ಯಾವತ್ತೂ ಸಂಬಂಧ ಹೊಂದಿವೆ. ನಾನು ಹೇಳುತ್ತಿರುವುದು ನಿಮಗೆ ಅರ್ಥವಾಗುತ್ತಿದೆಯೇ? ಒಬ್ಬರು ಎಲ್ಲರನ್ನೂ ಇಷ್ಟಪಡದೇ ಇದ್ದರೆ, ಎಲ್ಲೋ ಒಳಗೆ ಆಳದಲ್ಲಿ, ಅವನು ಅಥವಾ ಅವಳು ತನ್ನನ್ನು ತಾನೇ ಕೂಡಾ ಇಷ್ಟಪಡದಿರುತ್ತಾನೆ ಅಥವಾ ಇಷ್ಟಪಡದಿರುತ್ತಾಳೆ. ಹಾಗೂ ಆಧ್ಯಾತ್ಮಿಕ ಪಥದಲ್ಲಿ ಅಥವಾ ಜೀವನದಲ್ಲಿ ಇದು ಅತ್ಯಂತ ಕೆಟ್ಟ ವಿಷಯವಾಗಿದೆ; ತನ್ನನ್ನು ತಾನು ಇಷ್ಟಪಡದಿರುವುದು ಮತ್ತು ಇತರರನ್ನು ಇಷ್ಟಪಡದಿರುವುದು, ಯಾವುದೇ ಕಾರಣಕ್ಕಾಗಿಯಾದರೂ.

ಅದು ನಿಮಗೆ ಸ್ಪಷ್ಟವಾಯಿತೇ?

ಹೀಗೆ ಇವುಗಳು ಎರಡು ಮಾರ್ಗಗಳಾಗಿವೆ. ನಿಮ್ಮ ಮನಸ್ಸಿನಲ್ಲಿ ನೋಡಿ, ನೀವು ಯಾವ ಬದಿಗೆ ಹೋಗುತ್ತಿರುವಿರೆಂದು. ನೀವು ಈ ಬದಿಯಲ್ಲಿ ವಿಶ್ವಾಸದ ಕಡೆಗೆ ಹೋಗುತ್ತಿರುವಿರೇ ಅಥವಾ ಇನ್ನೊಂದು ಬದಿಯಲ್ಲಿ ಸಂಶಯದ ಕಡೆಗೆಯೇ? ಇತರರನ್ನು ಇಷ್ಟಪಡದಿರುವ ಅಥವಾ ನಿಮ್ಮನ್ನೇ ಇಷ್ಟಪಡದಿರುವ ಬದಿಯಲ್ಲಿ ನೀವು ಹೋಗುತ್ತಿರುವುದಾದರೆ, ಆಗ ಅದಕ್ಕೊಂದು ಸ್ಥಳಾಂತರವನ್ನು ನೀಡಿ, "ಇಲ್ಲ, ಸ್ವಭಾವತಃ ಎಲ್ಲರೂ ಒಳ್ಳೆಯವರು" ಎಂದು ಹೇಳುವ ಸಮಯ ಇದಾಗಿದೆ.

ನಾನು ಹೇಳಿದಂತೆ, ಆ ಕುಖ್ಯಾತ ಅಪರಾಧಿ, ನಿಮಗೆ ಗೊತ್ತಾ, ಅವನು ಬಂದಾಗ, ಅವನಲ್ಲಿ ನಾನು ಅಪರಾಧತ್ವವನ್ನು ನೋಡಲಿಲ್ಲ. ಆ ವ್ಯಕ್ತಿಯಲ್ಲಿ ನಾನೊಬ್ಬ ಮುಗ್ಧ ಮನುಷ್ಯನನ್ನು ನೋಡಿದೆ. "ಓ, ಅಪರಾಧಿ, ನನ್ನ ಹತ್ತಿರಕ್ಕೆ ಬರಬೇಡ" ಎಂದು ನಾನು ಹೇಳಬಹುದಿತ್ತು. ಇಲ್ಲ!

ಕೆಲವೊಮ್ಮೆ ಜನರು ನನ್ನಲ್ಲಿ ಕೇಳುತ್ತಾರೆ, "ಈ ಎಲ್ಲಾ ಭ್ರಷ್ಟ ಜನರು ನಿಮ್ಮ ಬಳಿಗೆ ಯಾಕೆ ಬರುತ್ತಾರೆ ಗುರುದೇವ? ನೀವು ಪವಿತ್ರತೆಯ, ಪ್ರಾಮಾಣಿಕತೆಯ ಸಾಕಾರತೆಯಾಗಿರುವಿರಿ. ಅಪರಾಧಿಗಳು ಬರಲು ನೀವು ಯಾಕೆ ಅನುಮತಿಸುವಿರಿ?"
ನಾನಂದೆ, "ಹೌದು, ದಯವಿಟ್ಟು ಎಲ್ಲಾ ಅಪರಾಧಿಗಳನ್ನು, ಎಲ್ಲಾ ಭ್ರಷ್ಟ ಜನರನ್ನು ನನ್ನ ಬಳಿಗೆ ಕಳುಹಿಸಿ. ಅವರನ್ನು ಕಳುಹಿಸಿ. ಅವರ ಒಳಗೆ ಕೂಡಾ ಒಬ್ಬ ಒಳ್ಳೆಯ ಮನುಷ್ಯನಿದ್ದಾನೆಂಬುದು ನನಗೆ ತಿಳಿದಿದೆ."

ನೋಡಿ, ಭಗವದ್ಗೀತೆಯಲ್ಲಿ, ಕೃಷ್ಣ ಪರಮಾತ್ಮನು ಅನಸೂಯ ಎಂಬ ಪದವನ್ನು ಬಳಸುತ್ತಾನೆ. ಅದೊಂದು ಬಹಳ ಸುಂದರವಾದ ಪದವಾಗಿದೆ.

ಅವನು ಅರ್ಜುನನಿಗೆ ಹೇಳುತ್ತಾನೆ, "ನನ್ನ ಪ್ರೀತಿಯ ಅರ್ಜುನ, ನಾನು ನಿನಗೆ ಈ ಅತ್ಯಂತ ಶ್ರೇಷ್ಠವಾದ ಜ್ಞಾನವನ್ನು ಕೊಡಲಿದ್ದೇನೆ ಯಾಕೆಂದರೆ ನೀನು ಅನಸೂಯನಾಗಿರುವೆ. ನೀನು, ಇತರರಲ್ಲಿ ತಪ್ಪುಗಳನ್ನು ಕಂಡುಹುಡುಕುತ್ತಾ ಇರುವವನಲ್ಲ. ಕೇವಲ ತಪ್ಪುಗಳನ್ನು ಕಂಡುಹುಡುಕಿ, ನಿನ್ನ ಕಣ್ಣುಗಳು ಮಸುಕಾಗಿಲ್ಲ. ಆದುದರಿಂದ ನೀನು ಶ್ರೇಷ್ಠ ಜ್ಞಾನವನ್ನು ಪಡೆಯಲು ಅರ್ಹನಾಗಿರುವೆ. ನೀನು ಅನಸೂಯನಾಗಿರುವೆ". ಇದನ್ನೇ ಅವನು ಹೇಳುವುದು.

ಅದೊಂದು ಬಹಳ ಸುಂದರವಾದ ಪದ, ಅನಸೂಯ. ಅದೊಂದು ಹೆಸರು ಕೂಡಾ ಆಗಿದೆ.

ಹಲವು ಸಲ, ಸ್ವಲ್ಪ ಮಾತ್ಸರ್ಯದ ಕಾರಣದಿಂದ, ಇತರರು ಕೆಟ್ಟವರೆಂದು ನಿಮಗೆ ಕಾಣಿಸಲು ತೊಡಗುತ್ತದೆ. ಅಸೂಯ ಎಂದರೆ ಮತ್ಸರ. ಅನಸೂಯ ಎಂದರೆ, ಇತರರಲ್ಲಿ ತಪ್ಪುಗಳನ್ನು ಕಂಡುಹುಡುಕದೇ ಇರುವ ಒಬ್ಬನು; ಇತರರಲ್ಲಿರುವ ಒಳ್ಳೆಯ ಗುಣಗಳ ಬಗ್ಗೆ ಮತ್ಸರ ಪಡದೇ ಇರುವವನು.

ನೋಡಿ, ಮತ್ಸರವಿರುವ ಒಬ್ಬರಿಗೆ, ಇತರ ಜನರಲ್ಲಿರುವ ಒಳ್ಳೆಯ ಗುಣಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಸ್ವಲ್ಪ ಒಳ್ಳೆಯ ಗುಣಗಳನ್ನು ಅವರು ನೋಡಿದರೂ ಕೂಡಾ, ತಾವು ತೃಪ್ತರಾಗುವುದಕ್ಕೋಸ್ಕರ ಅವರು ಅವರಲ್ಲಿ ಸ್ವಲ್ಪ ನಕಾರಾತ್ಮಕತೆಯನ್ನು ಕೂಡಾ ಕಂಡುಹುಡುಕಲು ಪ್ರಯತ್ನ ಪಡುವರು.

ಅವರನ್ನುತ್ತಾರೆ, "ಓ, ನಾನು ಹಾಯಾಗಿದ್ದೇನೆ ಯಾಕೆಂದರೆ ಆ ವ್ಯಕ್ತಿಯು ತಪ್ಪಾಗಿರುವನು. ನೀನು ತಪ್ಪಾಗಿರುವಾಗ, ನಾನು ಸಂತೋಷಗೊಳ್ಳುತ್ತೇನೆ." ಇದು ಮಾತ್ಸರ್ಯ, ಇತರರಲ್ಲಿ ತಪ್ಪನ್ನು ಕಂಡುಹುಡುಕಲು ಪ್ರಯತ್ನಿಸುವುದು.

ಆದುದರಿಂದ ಒಂದು ಬದಲಾವಣೆಯು ಆಗಬೇಕಿದೆ, ಜನರು ಸ್ವಭಾವತಃ ಕೆಟ್ಟವರು ಎಂಬುದರಿಂದ, ಸ್ವಭಾವತಃ ಒಳ್ಳೆಯವರು ಎಂಬುದರ ಕಡೆಗೆ. ಎಲ್ಲರೂ ಒಳ್ಳೆಯವರು, ಮತ್ತು ಅವರು ಒಂದು ತಪ್ಪನ್ನು ಮಾಡಿದರೂ ಕೂಡಾ, ಅದು ಸ್ವಲ್ಪ ಅಜ್ಞಾನದ ಕಾರಣದಿಂದ ಮತ್ತು ಅದು ಕೇವಲ ಮೇಲ್ಮೈಯಲ್ಲಿ ಮಾತ್ರ. ಈ ಮನೋಭಾವವು, ಅವರನ್ನು ಆಳವಾಗಿ ಅರ್ಥಮಾಡಿಕೊಳ್ಳುವುದರಲ್ಲಿ ಮತ್ತು ನಿಮ್ಮನ್ನು ನೀವೇ ಆಳವಾಗಿ ಅರ್ಥಮಾಡಿಕೊಳ್ಳುವುದರಲ್ಲಿ ನಿಮಗೆ ಸಹಾಯ ಮಾಡುತ್ತದೆ.