ಮಂಗಳವಾರ, ಅಕ್ಟೋಬರ್ 23, 2012

ಅಂತರಾಳದ ಅಗ್ನಿ


23 ಅಕ್ಟೋಬರ್ 2012
ಬೆಂಗಳೂರು, ಭಾರತ


(ವಿಶ್ವದಾದ್ಯಂತದ ಭಕ್ತರೆಲ್ಲರೂ ತಮ್ಮ ತಮ್ಮ ರಾಷ್ಟ್ರಭಾಷೆಗಳಲ್ಲಿ ಗೀತೆ ಹಾಗೂ ಭಜನೆಗಳನ್ನು ಹಾಡುವುದರೊಂದಿಗೆ
ಸತ್ಸಂಗವು ಆರಂಭವಾಯಿತು. ಪ್ರಪಂಚದ ಅನೇಕ ದೇಶಗಳ ಹಾಗೂ ಭಾರತದ ಎಲ್ಲ ಭಾಗಗಳ ಜನರು ಸಂಗೀತದ ಮೂಲಕ
ಇತರರೊಂದಿಗೆ ಒಂದುಗೂಡಿದರು.)
ಇದೇ ನವರಾತ್ರಿಯ ನಿಜವಾದ ಅರ್ಥ - ಇಡೀ ವಿಶ್ವವನ್ನು ಒಂದುಗೂಡಿಸುವುದು. ಪುರಾತನ ಕಾಲದಲ್ಲಿಯೂ ಕೂಡ
ಪ್ರತಿಯೊಬ್ಬ ವ್ಯಕ್ತಿಯು ಒಂದೊಂದು ಬೇರೆ ಬೇರೆ ವೇದದಲ್ಲಿ, ಜ್ಞಾನದ ಒಂದೊಂದು ವಿಭಾಗದಲ್ಲಿ ಪರಿಣತಿಯನ್ನು
ಹೊಂದುತ್ತಿದ್ದರು. ನವರಾತ್ರಿಯಲ್ಲಿ ಎಲ್ಲರೂ ಒಂದೆಡೆ ಸೇರಿ ತಮ್ಮ ತಮ್ಮ ಪ್ರಾಂತ್ಯದ ಜ್ಞಾನ, ಸಂಗೀತ, ನೃತ್ಯ, ಸಂಸ್ಕøತಿ -
ಹೀಗೆ ಎಲ್ಲವನ್ನೂ ಒಂದೆಡೆ ಮೇಳೈಸುತ್ತಿದ್ದರು.
ನೀವು ನೋಡಿರಬಹುದು, ನೆನ್ನೆ ನಾವು ಕೊಳಲು, ತಬಲ, ಮೃದಂಗ ಹಾಗೂ ಸಂಗೀತವನ್ನು ಹಮ್ಮಿಕೊಂಡಿದ್ದೆವು.
ಬ್ರಹ್ಮಾಂಡದಲ್ಲಿರುವ ವೈವಿಧ್ಯತೆಯು 'ಒಂದು ಆತ್ಮ'; 'ಒಂದು ಪ್ರಜ್ಞೆ', ಒಂದೇ ದೈವತ್ವವೆಂಬ ಜ್ಞಾನದಲ್ಲಿ ಅಡಕವಾಗಿದೆ.
ನೀವು ದೇವರ ಬಗ್ಗೆ ಭಯ ಪಡಬೇಕಾಗಿಲ್ಲ ಏಕೆಂದರೆ ಅದು ನಿಮ್ಮನ್ನು ಪಾಲಿಸುವ, ಪ್ರೀತಿಸುವ, ಮುದ್ದಿಸುವ, ಉದ್ಧಾರ
ಮಾಡುವ ಒಂದು ತಾಯಿಯ ಹಾಗೆ. ಮಾತೃತ್ವದ ಎಲ್ಲ ಗುಣಗಳೂ ದೇವರಲ್ಲಿವೆ. ಸಾಮಾನ್ಯವಾಗಿ ನಾವು ಹೇಳುತ್ತೇವೆ, '
ದೇವರ ಬಗ್ಗೆ ಭಯವಿರಲಿ; ದೇವರು ನಿಮ್ಮನ್ನು ಶಿಕ್ಷಿಸುತ್ತಾನೆ' ಎಂದು, ಇಲ್ಲ! ಇದು ತಪ್ಪು ಕಲ್ಪನೆ. ದೇವರು ಎಂದಿಗೂ
ನಿಮ್ಮನ್ನು ಶಿಕ್ಷಿಸುವುದಿಲ್ಲ, ಕೇವಲ ವಿದ್ಯೆಯನ್ನು ಬೋಧಿಸಿ ನಿಮ್ಮನ್ನು ಉದ್ಧರಿಸುತ್ತಾನೆ.
ನಾವು ಜೀವನವನ್ನು ಸಂಭ್ರಮದಿಂದ ಆಚರಿಸಬೇಕು. ನಾವು ಈಗ ತಾನೇ 'ಲಾ-ಇಲಾಹ-ಇಲ್ಲಲಾಹ್' - ಒಂದೇ ದಿವ್ಯ
ಶಕ್ತಿಯು ಎಲ್ಲೆಡೆ ಇರುವುದು ಎಂಬ ಹಾಡನ್ನು ಆಲಿಸಿದೆವು. ಆ ದಿವ್ಯ ಶಕ್ತಿಯು ಎಲ್ಲೋ ಮೇಲೆ ಸ್ವರ್ಗದಲ್ಲಿಲ್ಲ, ಅದು
ಪಂಚಭೂತಗಳಾದ ಪೃಥ್ವಿ, ಜಲ, ಅಗ್ನಿ, ವಾಯು ಹಾಗೂ ಆಕಾಶದಲ್ಲಿದೆ. ಹಾಗಾಗಿ, ಭೂಮಾತೆಯನ್ನು ಆದರಿಸಿ, ಜಲವನ್ನು
ಆದರಿಸಿ ಮತ್ತು ಬೆಂಕಿಯ ಉತ್ತಮ ಉಪಯೋಗವನ್ನು ಮಾಡಿ. ಕೇವಲ ಹೊರಗಿನ ಬೆಂಕಿ ಮಾತ್ರವಲ್ಲ; ನಿಮ್ಮ ಅಂತರಾಳದ
ಅಗ್ನಿಯನ್ನೂ ಕೂಡ.
ಎಲ್ಲರೊಳಗೂ ಒಂದು ಅಗ್ನಿ ಇದೆ, ಒಂದು ಕಿಚ್ಚು ಇರುವುದು - ಅದನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿ.
ಅಗ್ನಿಯು ನಾಶ ಮಾಡಬಲ್ಲದು ಹಾಗೂ ಸೃಷ್ಟಿಯನ್ನೂ ಸಹ ಮಾಡಬಲ್ಲದು. ಹಾಗಾಗಿ ಅಗ್ನಿಗೆ
ಸೃಜನಾತ್ಮಕವಾದುದೇನನ್ನಾದರೂ ಮಾಡಲು ಅವಕಾಶ ಕೊಡಿ. ನಿಮ್ಮೊಳಗಿರುವ ಆ ಅಗ್ನಿಗೆ ಒಂದು ದಿಕ್ಕನ್ನು ನೀಡಿ. ನೀರು
ಬಾಯಾರಿಕೆಯನ್ನು ನಿವಾರಿಸಬಹುದು ಹಾಗೆಯೇ ನಿಮ್ಮನ್ನು ಮುಳುಗಿಸಲೂಬಹುದು. ದೇವಿಯನ್ನು ನೆನೆಯಿರಿ; ದಿವ್ಯತೆಯು
ಪಂಚಭೂತಗಳಲ್ಲಿ ಹಾಗೂ ಆತ್ಮದಲ್ಲಿದೆ. ನಿಜವಾದ ಸಂಭ್ರಮಾಚರಣೆಯೆಂದರೆ ಶಾಂತವಾಗಿ ಹಾಗೂ ಅನಾಯಾಸವಾಗಿ
ಆತ್ಮದಲ್ಲಿ ಅಂತರ್ಮುಖವಾಗುವುದು.
'ಪರಮಾತ್ಮನು ನನ್ನನ್ನು ಅತ್ಯಂತ ಆತ್ಮೀಯವಾಗಿ ಪ್ರೀತಿಸುತ್ತಾನೆ' ಎಂಬ ಆತ್ಮವಿಶ್ವಾಸವನ್ನು ನಾವು ಹೊಂದಿರಬೇಕು.
ಯಾವುದೇ ಪ್ರಶ್ನೆ ಅಥವಾ ಸಂಶಯಗಳಿಲ್ಲದೆ !
ಅಲ್ಲದೇ, ನಿಮ್ಮನ್ನು ಇತರರೊಂದಿಗೆ ಹೋಲಿಸಬೇಡಿ. ಇದು ಕೂಡ ಬಹುಮುಖ್ಯ.
'ಓಹ್, ಆ ವ್ಯಕ್ತಿಯು ಹಾಡಬಲ್ಲ ಆದರೆ ನನಗೆ ಹಾಡಲು ಬರುವುದಿಲ್ಲ!'; 'ಅವರು ಎಷ್ಟು ಜಾಣರು; ನಾನು ಜಾಣನಲ್ಲ'
ಎಂದು. ಇಲ್ಲ! ನಿಮ್ಮೊಳಗೆ ನೀವು ಎಲ್ಲವನ್ನೂ ಹೊಂದಿದ್ದೀರಿ. ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ವಿಷಯಗಳು
ವ್ಯಕ್ತವಾಗುವುವು, ತಾಳ್ಮೆಯನ್ನು ಹೊಂದಿ.
ಇನ್ನೊಂದು ವಿಷಯ - ನಮಗೆ ಆರ್ಶೀವಾದ ಮತ್ತು ಅನುಗ್ರಹ ಬೇಕೆಂದು ನಾವು ಬೇಡುತ್ತೇವೆ, ಅಲ್ಲವೇ? ಆರ್ಶೀವಾದವು
ಯಥೇಚ್ಛವಾಗಿದೆ ಆದರೆ ನಿಮ್ಮ ಪಾತ್ರೆಯು ಚಿಕ್ಕದಾಗಿದ್ದರೆ ಏನು ಮಾಡುವುದು?
ನೀವು ಈ ಲೋಟವನ್ನು (ಶ್ರೀ ಶ್ರೀಯವರು ಒಂದು ಲೋಟವನ್ನು ಹಿಡಿಯುತ್ತಾ) ತಂದು 'ನನಗೆ ಇದರಲ್ಲಿ ಎರಡು ಲೀಟರ್
ಹಾಲು ಕೊಡಿ' ಎಂದು ಕೇಳಿದರೆ ಈ ಸಣ್ಣ ಲೋಟದಲ್ಲಿ ಅಷ್ಟೊ೦ದು ಹಾಲು ಹೇಗೆ ಹಿಡಿಯಲು ಸಾಧ್ಯ? ಲೋಟ ಚಿಕ್ಕದು
ಆದರೆ ನೀವು ಕೇಳುತ್ತಿರುವುದು ಅದಕ್ಕಿಂತ ಎಷ್ಟೋ ಹೆಚ್ಚು. ನೀವು ಮೂರು ಲೀಟರ್ ಪ್ರಮಾಣದ ಪಾತ್ರೆಯನ್ನು ತಂದರೆ ಆಗ
ನಾವು ನಿಮಗೆ ¨ಬೇಕಾದಷ್ಟು, ಎರಡು ಅಥವಾ ಮೂರು ಲೀಟರ್ ಕೊಡಬಹುದು.
ಹಾಗಾಗಿ, ನೀವು ನೆನಪಿಡಬೇಕು, 'ನಿಮ್ಮ ಸಾಮರ್ಥ್ಯಕ್ಕನುಸಾರವಾಗಿ ನಿಮಗೆ ದೊರೆಯುವುದು; ಮತ್ತು ನಿಮಗೆ ಹೆಚ್ಚು
ಬೇಕಿದ್ದಲ್ಲಿ ಪ್ರತೀಕ್ಷೆ ಮಾಡಿ, ನಿಮ್ಮ ಸಾಮಥ್ರ್ಯವನ್ನು ವಿಸ್ತರಿಸಿ. ನಮ್ಮ ಸಾಮಥ್ರ್ಯವು ಹೆಚ್ಚಿದಾಗ ಖಂಡಿತವಾಗಿಯೂ ನಮಗೆ
ಇನ್ನೂ ಹೆಚ್ಚು ದೊರೆಯುವುದು. ಜನರು ದುಃಖಿತರಾಗಿರುವುದು ಈ ಕಾರಣದಿಂದಲೇ. ಸಣ್ಣ ಲೋಟವನ್ನು ಹಿಡಿದು ಅವರು
'ಇದರಲ್ಲಿ ಒಂದು ಲೀಟರ್ ಹಾಲು ಕೊಡಿ' ಎನ್ನುತ್ತಾರೆ. ಆಗ ಆ ಲೋಟವು ತುಂಬಿ ಹರಿಯುತ್ತದೆ. ನಾವು ಇದನ್ನು
ತಿಳಿದುಕೊಳ್ಳಬೇಕು.
ನೋಡಿ, ಜೀವನದಲ್ಲಿ ನಿಮ್ಮನ್ನು ಕೆರಳಿಸುವ ಅನೇಕ ಸಂಗತಿಗಳು ಬರುತ್ತವೆ. 'ಓಹ್. ಆ ವ್ಯಕ್ತಿಯು ಸರಿ ಇಲ್ಲ; ನಾನು
ಇವರ ಜೊತೆಯಲ್ಲಿ ಇರಲಾರೆ, ಇವರು ನನಗೆ ಅವಮಾನ ಮಾಡುತ್ತಾರೆ', ಈ ರೀತಿಯ ಸಣ್ಣ ಸಂಗತಿಗಳು ಮನಸ್ಸಿನಲ್ಲಿ
ಬರುತ್ತವೆ, ಮತ್ತು ನೀವು ಧ್ಯಾನಕ್ಕೆ ಕುಳಿತಾಗ, ಇವುಗಳೆಲ್ಲ ಬಂದು ನಿಮಗೆ ತೊಡಕನ್ನುಂಟು ಮಾಡುತ್ತವೆ. ಅಲ್ಲವೇ? ಕೈ
ಎತ್ತಿ ಪ್ರಾಮಾಣಿಕವಾಗಿ ಹೇಳಿ ನೀವು ಧ್ಯಾನಕ್ಕೆ ಕುಳಿತಾಗ ನೀವು ಇವುಗಳ ಬಗ್ಗೆ ಯೋಚಿಸುವುದಿಲ್ಲವೇ - 'ಓಹ್, ನನ್ನ
ಪತಿಯು ಹೀಗೆ ಮಾಡಿದರೆ ಉತ್ತಮ, ಓಹ್, ನನ್ನ ಮಗು ನನ್ನ ಮಾತು ಕೇಳುವುದಿಲ್ಲ' ಎಂದು.
ನಿಮ್ಮ ನೆರೆಹೊರೆಯವರ, ಸ್ನೇಹಿತರ, ಪರಿಚಿತರ, ಅಪರಿಚಿತರ ಎಲ್ಲ ಸಣ್ಣ ರಗಳೆಗಳು ಬಂದು ನಿಮ್ಮೊಳಗೆ ಸಿಟ್ಟು, ರೊಚ್ಚು
ಮತ್ತು ಹತಾಶೆಯನ್ನು ತರುತ್ತವೆ. ಹಾಗಾದರೆ ಈ ಸನ್ನಿವೇಶಗಳನ್ನು ಹೇಗೆ ನಿಭಾಯಿಸುವುದು? ನೀವು ಯಾವುದಾದರೂ
ಮುಖ್ಯವಾದ ಕಾರ್ಯವನ್ನು ಮಾಡುತ್ತಿದ್ದೀರಿ ಎಂದು ತಿಳಿಯಿರಿ, ಆಗ ಒಂದು ನೊಣ ಬಂದು ನಿಮ್ಮ ಮೇಲೆ ಕುಳಿತರೆ, ನೀವು
ಆ ನೊಣದ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುವಿರಾ? ಇಲ್ಲ, ನೀವು ಅದರ ಬಗ್ಗೆ ಹೆಚ್ಚು ಯೋಚನೆ ಮಾಡುವುದಿಲ್ಲ, ಸುಮ್ಮನೆ
ಹಗುರವಾಗಿ ಅದನ್ನು ಓಡಿಸುವಿರಿ. ಈ ಎಲ್ಲ ಸಂದರ್ಭಗಳೂ ಕೂಡ ಹಾಗೆಯೇ ಎಂದು ತಿಳಿಯಿರಿ.
ಈ ಸಣ್ಣ ಸಣ್ಣ ರಗಳೆಗಳು ನಿಮ್ಮೊಳಗೆ ಸ್ವೀಕಾರಭಾವವನ್ನು ತರಲು ಸಹಾಯ ಮಾಡುತ್ತವೆ. ರಗಳೆ ಎಂದರೆ ಸ್ವೀಕಾರ
ಮಾಡದಿರುವುದು. ಸ್ವೀಕಾರ ಮಾಡದಿರುವುದೆಂದರೆ ನಿಮ್ಮ ಮುಷ್ಟಿಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಂತೆ. ಸ್ವೀಕಾರವೆಂದರೆ
ನಿಮ್ಮ ಮುಷ್ಟಿಯನ್ನು ಬಿಡಿಸಿದಂತೆ. ರಗಳೆಯು ಬಿಗಿತ. ನಿಮಗೆ ಸಿಟ್ಟು ಬಂದಾಗ ನೀವು ಬಿಗಿತವನ್ನು ಅನುಭವಿಸುವುದಿಲ್ಲವೇ?
ಸ್ವೀಕಾರವೆಂದರೆ ತೆರೆದ ಮನ, ನಮ್ಮ ಹಸ್ತಗಳು ತೆರೆದಿದ್ದಾಗ, ಆಕಾಶವೇ ಮಿತಿ; ಎಲ್ಲವೂ ನಿಮ್ಮೊಳಗೆ ಇದೆ (ತೆರೆದ
ಮುಷ್ಟಿಯನ್ನು ತೋರುತ್ತಾ). ಆದರೆ ನೀವು ಮುಷ್ಟಿಯನ್ನು ಮುಚ್ಚಿದರೆ (ಬಿಗಿದ ಮುಷ್ಟಿಯನ್ನು ತೋರುತ್ತಾ) ಆಗ ಒಳಗೆ
ಏನೂ ಇಲ್ಲ. ಹಾಗಾಗಿ, ಬಿಟ್ಟುಬಿಡುವುದು ಬಹಳ ಮುಖ್ಯ. ಈಗ ಪ್ರಶ್ನೆ ಮೂಡುವುದು, 'ನಾನು ಬಿಟ್ಟುಬಿಟ್ಟರೆ, ಕ್ರಮ
ತೆಗೆದುಕೊಳ್ಳುವುದು ಹೇಗೆ?' ಯಾರಾದರೂ ಅನ್ಯಾಯ ಮಾಡುತ್ತಿರುವಾಗ ನೀವು ಯೋಚಿಸಬಹುದು ' ಓಹ್, ಗುರುದೇವರು
ಸ್ವೀಕಾರ ಭಾವದ ಬಗ್ಗೆ ಹೇಳಿರುವರು, ಆದ್ದರಿಂದ ನಾನು ಇದನ್ನು ಸ್ವೀಕರಿಸುತ್ತೇನೆ'. ಇಲ್ಲ ! ನೋಡಿ, ಆ ಅಗ್ನಿಯು
ನಿಮ್ಮೊಳಗೆ ಇದೆ, ಅದಕ್ಕೆ ಸರಿಯಾದ ದಿಕ್ಕನ್ನು ತೋರಿ.
ಸಿಟ್ಟಿಗೆದ್ದು ಕ್ರಮ ತೆಗೆದುಕೊಳ್ಳುವುದರಿಂದ ಯಾವುದೇ ಉಪಯೋಗವಿಲ್ಲ. ಮೊದಲು ಸ್ವೀಕರಿಸಿ ಮತ್ತು ನಂತರ ಸರಿಯಾದ
ಕ್ರಮವನ್ನು ತೆಗೆದುಕೊಳ್ಳಿ. ಇದಕ್ಕೆ ಬಹಳ ಧೈರ್ಯ ಮತ್ತು ಸಹನೆ ಬೇಕು.
ಇನ್ನೊಂದು ಕಳವಳವೆಂದರೆ ಅವಮಾನಕ್ಕೊಳಗಾಗುವುದು. ನಾವು ನಿಮಗೆ ಹೇಳುತ್ತೇವೆ. ಅವಮಾನವು ತುಂಬಾ ಒಳ್ಳೆಯದು.
ಅವಮಾನವು ನಿಮ್ಮ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ; ನಿಮ್ಮ ಪಾತ್ರೆಯನ್ನು ದೊಡ್ಡದಾಗಿಸುತ್ತದೆ. ಅವಮಾನವೇ ನಿಮ್ಮ
'ನಾನು'ತನವನ್ನು ವಿಲೀನಗೊಳಿಸುತ್ತದೆ, ನಿಮ್ಮ ಅಹಂಭಾವವನ್ನು ಹೋಗಲಾಡಿಸುತ್ತದೆ, ಮತ್ತು ನೀವು ಸಣ್ಣ ಮಗುವಿನ
ಹಾಗೆ ಆಗುವಿರಿ. ನಿಮಗೆ ಗೊತ್ತೇ, ನೀವು ಎಂದಿಗೂ ಮಗುವನ್ನು ಹೀಯಾಳಿಸಲಾರಿರಿ ಏಕೆಂದರೆ ಅದು ಟೊಳ್ಳು ಹಾಗೂ
ಖಾಲಿಯಾಗಿರುತ್ತದೆ! ಆದರೆ ನಾವು ಒಂದು ಅಸ್ತಿತ್ವವನ್ನು ಬೆಳೆಸಿಕೊಂಡಾಗ, ನಾವು ನಮ್ಮ ಬಗೆಗಿನ ಒಂದು ಕಲ್ಪನೆಯನ್ನು
ಹಿಡಿದಿಟ್ಟುಕೊಂಡಾಗ 'ಓಹ್, ಇದು ಅವಮಾನ' ಎಂದು ಭಾವಿಸುತ್ತೇವೆ. ಯಾರೋ 'ಬರಬೇಡಿ' ಅಥವಾ 'ಹೀಗೆ
ಮಾಡಬೇಡಿ' ಎಂದರೆ ಈ ಸಣ್ಣ ವಿಷಯಗಳು ನಿಮ್ಮನ್ನು ಕಾಡುತ್ತವೆ. ಆದ್ದರಿಂದಲೇ ಇದನ್ನು 'ಮಾಯೆ' ಎಂದು
ಕರೆಯುವುದು. ಏಕೆಂದರೆ ಗಮನ ನೀಡಲು ಯೋಗ್ಯವಲ್ಲದ ವಿಷಯಗಳೆಡೆಗೆ ಮನಸ್ಸು ಸೆಳೆಯಲ್ಪಡುತ್ತದೆ. ಯಾವಾಗ ನೀವು
'ಇದೂ ನನ್ನದಲ್ಲ' ಎನ್ನುವಿರೋ ಆಗ ಅದು 'ಮಹಾಮಾಯೆ', ದೈವಕ್ರೀಡೆ. ಏಕೆಂದರೆ ಆಗ ನೀವು ಅದರೊಂದಿಗೆ
ಹೋರಾಡಲು ಪ್ರಾರಂಭಿಸುವಿರಿ, ಆಗ ಈ ಹೋರಾಟ ಅದನ್ನು ಇನ್ನೂ ಹದಗೆಡಿಸುತ್ತದೆ. ನೀವು ಮದದಲ್ಲಿ ಸಿಲುಕುವಿರಿ.
ಹಾಗಾಗಿ ಅವಮಾನದಿಂದ ದೂರ ಸರಿಯಬೇಡಿ. ಅವಮಾನವಾದರೆ ಅದನ್ನು ತಪಸ್ಸಿನಂತೆ ಪರಿಗಣಿಸಿ. 'ಆಯಿತು, ಇದು
ತಪಸ್ಸು. ನಾನು ಇದನ್ನು ಸಹಿಸುತ್ತೇನೆ, ಸ್ವೀಕರಿಸುತ್ತೇನೆ'. ತಪಸ್ಸು ನಿಮ್ಮನ್ನು ಸುಂದರ ಹಾಗೂ ಪ್ರಬಲರನ್ನಾಗಿಸುತ್ತದೆ.
'ಜ್ಞಾನಿನಾಮಪಿ ಚೇತಾಂಸಿ ದೇವಿ ಭಗವತಿ ಹಿ ಸಾ, ಬಲಾದಾಕೃಷ್ಯ ಮೋಹಾಯ ಮಹಾಮಾಯಾ ಪ್ರಯಚ್ಛತಿ'. ನಾವು ನೆನ್ನೆ
ಹಾಡಿದ ದುರ್ಗಾ ಸಪ್ತಶತಿಯಲ್ಲಿ ಹೀಗೆ ಬರೆದಿದೆ. ಮಾಯೆಯ ಶಕ್ತಿ, ಅಜ್ಞಾನದ ಶಕ್ತಿ ಎಷ್ಟು ಬಲವಾಗಿದೆಯೆಂದರೆ ಅತ್ಯಂತ
ಜ್ಞಾನಿಗಳೂ ಪಂಡಿತರೂ ಕೂಡ ಆಕೆಯ ಪ್ರಭಾವಕ್ಕೊಳಗಾಗುವರು. ಆಕೆ ಎಲ್ಲರನ್ನೂ ಆಡಿಸಬಹುದು, ಹಾಗಾಗಿ, 'ನನ್ನ
ದೇವಿಮಾತೆಯೇ, ನೀನು ನಮ್ಮನ್ನು ಮನಸ್ಸಿನ ಈ ಮಾಯೆಯ ಆಟದಲ್ಲಿ ತೂಗಿಸಿರುವೆ' ಎಂದು ಹೇಳಲಾಗಿದೆ. ನಾವು
ಪ್ರಾಮುಖ್ಯತೆಗೆ ಯೋಗ್ಯವಲ್ಲದ ವಿಷಯಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತೇವೆ. ನಶ್ವರ ಹಾಗೂ ಕ್ಷಣಿಕವಾದ ವಿಷಯಗಳಿಗೆ
ನಾವು ಅತಿಯಾದ ಪ್ರಾಮುಖ್ಯತೆಯನ್ನು ನೀಡುತ್ತೇವೆ. ಅವೆಲ್ಲವೂ ಬರುತ್ತವೆ ಮತ್ತು ಹೋಗುತ್ತವೆ. ಹಾಗಾಗಿಯೇ ಇದನ್ನು
ಮಹಾಮಾಯೆ ಎಂದು ಕರೆಯುವುದು.
ನೆನ್ನೆ ನಾವು ಹೇಳಿದೆವು, 'ಯಾ ದೇವಿ ಸರ್ವ¨ಭೂತೇಷು ಭ್ರಾಂತಿರೂಪೇಣ ಸಂಸ್ಥಿತಾ ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ
ನಮಃ' ಎಂದು. ಪ್ರಜ್ಞೆಯು ಮಾಯೆಂiÀi ರೂಪದಲ್ಲಿಯೂ ಇದೆ, ಕೇವಲ ಶಾಂತಿ ಹಾಗೂ ಶಕ್ತಿಯಾಗಿ ಮಾತ್ರವಲ್ಲ. ಅದು
ಹಸಿವು, ಗೊಂದಲ, ಮಾಯೆ ಹಾಗೂ ಇವೆಲ್ಲವುಗಳ ಆವಿರ್ಭಾವದ ರೂಪದಲ್ಲಿಯೂ ಇದೆ. ನೀವು ಇದನ್ನು ಗಮನಿಸಿದಾಗ
ಮನಸ್ಸಿನ ಆಟದೆಡೆಗೆ ನಸುನಗುತ್ತೀರಿ. ಆಗ ಸಣ್ಣ ಮನಸ್ಸು ಆಟಗಳಲ್ಲಿ ತೊಡಗಿದಾಗ, ನೀವು ಅದರೊಂದಿಗೆ ನಿಮ್ಮನ್ನು
ಗುರುತಿಸಿಕೊಳ್ಳುವುದಿಲ್ಲ; ನೀವು ಅದನ್ನು ಮೀರಿ ಹೋಗುವಿರಿ, ಆಗ ಅಲ್ಲಿಯೇ ನಿಮಗೆ ಚಿರಶಾಂತಿ ದೊರೆಯುವುದು. ಮನಸ್ಸು
ಪ್ರಶಾಂತವಾಗಿ ಅಟಲವಾಗಿರುತ್ತದೆ. ಈ ಸ್ಥಿತಿಯು ಜೀವನದಲ್ಲಿ ಹೊಂದಲು ಯೋಗ್ಯವಾದುದು, ಇದಕ್ಕಾಗಿಯೇ ಎಲ್ಲ
ಆಶೀರ್ವಾದ ಅಗತ್ಯ.
ಇಂದು ನಾವು ಋಷಿ ಹೋಮವನ್ನು ಆಚರಿಸಿದೆವು. ಬಹುಕಾಲದಿಂದ ಹಲವಾರು ಸಂತರು ಈ ಜ್ಞಾನವನ್ನು ಸಂರಕ್ಷಿಸಿದ್ದಾರೆ.
ಗುರುಪರಂಪರೆಯಲ್ಲಿ ಪೂಜಾ ವಿಧಾನವು ಪರಾಶರರ ವಿಷೇಷತೆಯಾಗಿತ್ತು. ಗುರುಪೂಜೆಯಲ್ಲಿ ನಾವು 'ನಾರಾಯಣಂ ಪದ್ಮಭವಂ
ವಸಿಷ್ಠ೦ ಶಕ್ತಿಂ ಚ ತತ್ಪುತ್ರ ಪರಾಶರಂ ಚ' ಎಂದು ಹಾಡುತ್ತೇವೆ. ಈ ಪರಂಪರೆಯಲ್ಲಿ ಐದನೆಯ ಋಷಿಯು ಪರಾಶರ.
ಅವರು ಪೂಜೆಗಳ ಮೂಲಕ ಭಕ್ತಿ ಹಾಗೂ ಪ್ರೀತಿಯ ಅಭಿವ್ಯಕ್ತಿಗೆ ಪ್ರಾಮುಖ್ಯತೆಯನ್ನು ನೀಡಿದರು. ಇಂದು ಆಯುಧ
ಪೂಜೆಯನ್ನೂ ಕೂಡ ಮಾಡಲಾಗುತ್ತದೆ. ನಾವು ಉಪಯೋಗಿಸುವ ಎಲ್ಲ ಉಪಕರಣಗಳನ್ನು ಆದರಿಸಲು ಇದನ್ನು
ಆಚರಿಸಲಾಗುತ್ತದೆ. ನಾಳೆ ನೀವು ನಗರಕ್ಕೆ ಹೋದಾಗ ಎಲ್ಲ ಬಸ್ಸುಗಳೂ ಕುಂಕುಮ, ಗಂಧ, ಹೂವುಗಳಿಂದ
ಅಲಂಕೃತವಾಗಿರುತ್ತವೆ. ಜನರು ತಮ್ಮ ವಾಹನಗಳಿಗೆ ಅಲಂಕಾರ ಮಾಡುತ್ತಾರೆ. ಇದರ ಅರ್ಥ, ಒಂದು ಸೂಜಿಯಿಂದ ಹಿಡಿದು
ಕಂಬದವೆರೆಗೆ ಎಲ್ಲದರಲ್ಲಿಯೂ ದಿವ್ಯತೆಯು ಒಳಹೊಕ್ಕಿದೆ ಎಂದು. ಆದ್ದರಿಂದ ಎಲ್ಲ ಉಪಕರಣಗಳ ಪೂಜೆ.
ಸೂಜಿ, ಚಾಕು, ಕತ್ತರಿ, ಸ್ಪ್ಯಾನರ್ ಮು೦ತಾದ ಸಣ್ಣ ಸಣ್ಣ ವಸ್ತುಗಳೂ ಸಹ ಸತ್ಕರಿಸಲ್ಪಡುತ್ತವೆ. ದೇವಿಯು ಎಲ್ಲ
ಉಪಕರಣಗಳಲ್ಲಿಯೂ ನೆಲೆಸಿದ್ದಾಳೆ, ಹಾಗಾಗಿ ಅವುಗಳನ್ನು ಪೂಜಿಸಬೇಕು ಎಂದು ಹೇಳಲಾಗುತ್ತದೆ. ಇಂದು ಜನರು
ಉಪಕರಣಗಳು, ವಾಹನಗಳು, ಬಸ್ಸು, ಕಾರು, ಎಲ್ಲವನ್ನೂ ಆದರಿಸಿ ತಮ್ಮ ಕೃತಜ್ಞತೆಯನ್ನು ತೋರುತ್ತಾರೆ. ಏಕೆಂದರೆ
ದಿವ್ಯತೆಯು ಎಲ್ಲೆಡೆಯೂ ವ್ಯಾಪಿಸಿದೆ. ಆಯುಧ ಪೂಜೆಯನ್ನು ನವರಾತ್ರಿಯ ಒಂಭತ್ತನೆಯ ದಿನದಂದು ಮಾಡುತ್ತಾರೆ. ನಾಳೆ
ವಿಜಯದಶಮಿ, ವಿಜಯದ ಸುದಿನ. ಹಾಗಾಗಿ, ಯಾವಾಗ ಮಾಯೆಯು ಮನಸ್ಸನ್ನು ಆವರಿಸುತ್ತದೆಯೋ ಆಗ ಅದು
ಮನಸ್ಸಿನ ಮಾಯೆ ಎಂದು ಅರಿವಿಗೆ ತಂದುಕೊಳ್ಳಿ. ಎಲ್ಲೆಲ್ಲೂ ಓಡಾಡಿ ಇದೆಲ್ಲವನ್ನೂ ಮಾಡುತ್ತಿರುವುದು ಮನಸ್ಸು. ಅದನ್ನು
ಬಿಟ್ಟುಬಿಡಿ.
ಇದು ನವರಾತ್ರಿಯ ಪ್ರಮುಖವಾದ ಸಂದೇಶ.