ಸೋಮವಾರ, ಅಕ್ಟೋಬರ್ 29, 2012

ಹೃದಯ, ಬುದ್ಧಿ, ಮತ್ತು ಮನಸ್ಸು

೨೯ ಅಕ್ಟೋಬರ್ ೨೦೧೨
ಬೆಂಗಳೂರು ಆಶ್ರಮ


ಪ್ರಶ್ನೆ: ಮನಸ್ಸಿನ ಖಿನ್ನತೆಯನ್ನು ಹೋಗಲಾಡಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಮೊದಲನೆಯದಾಗಿ, ಎಚ್ಚೆತ್ತುಕೊಳ್ಳಿ ಮತ್ತು ಜೀವನವು ತಾತ್ಕಾಲಿಕವಾದುದೆಂಬುದನ್ನು ತಿಳಿಯಿರಿ. ನಾವು ಇನ್ನೊಂದು ೧೫-೨೦ ವರ್ಷಗಳ ವರೆಗೆ ಬದುಕಬಹುದು, ಮತ್ತು ನಂತರ ನಾವೆಲ್ಲರೂ ಸಾಯಲೇಬೇಕು. ನೀವು ಬದುಕುವ ಈ ೧೫-೨೦ ವರ್ಷಗಳಲ್ಲಿ, ಇತರರಿಗೆ ಸಂತೋಷವನ್ನು ಹರಡುವುದರ ಬಗ್ಗೆ ಯೋಚಿಸಿ. ಇತರರೊಂದಿಗೆ ಚೆನ್ನಾಗಿ ವರ್ತಿಸುವುದರ ಬಗ್ಗೆ ಯೋಚಿಸಿ. ಆಗ ಖಿನ್ನತೆಯೆಲ್ಲಿರುತ್ತದೆ? "ನನಗೇನಾಗಬಹುದು? ನನಗೇನಾಗಬಹುದು?" ಎಂಬುದರ ಬಗ್ಗೆ ನಾವು ಹಗಲಿರುಳು ಚಿಂತಿಸುತ್ತಾ ಇರುವಾಗ ಖಿನ್ನತೆಯುಂಟಾಗುತ್ತದೆ. ಇದು ಖಿನ್ನತೆಗೊಳಗಾಗಲಿರುವ ಖಚಿತವಾದ ಮಾರ್ಗ: "ನನಗೇನಾಗಬಹುದು?"

ಪ್ರಶ್ನೆ: ಒಬ್ಬರು ನಮಗೆ ನೋವುಂಟುಮಾಡುವಾಗ, ನಾವು ಖಿನ್ನತೆಗೊಳಗಾಗುತ್ತೇವೆ.
ಶ್ರೀ ಶ್ರೀ ರವಿ ಶಂಕರ್: ಇತರರು ನಿಮಗೆ ನೋವುಂಟುಮಾಡಲು ಹೇಗೆ ಸಾಧ್ಯ? ಇತರರಿಗೆ ನೋವುಂಟುಮಾಡುವವರು ಮೂರ್ಖರು. ನಿಜವಾಗಿ ಮೂರ್ಖರಾಗಿರುವ ಅಥವಾ ಮಾನಸಿಕವಾಗಿ ಅಸ್ವಸ್ಥರಾಗಿರುವ ಯಾರನ್ನಾದರೂ ನೀವು ನಿಂದಿಸುವಿರಾ? ಇಲ್ಲ. ಆದುದರಿಂದ, ನಿಮಗೆ ನೋವುಂಟುಮಾಡುವವರು ಮೂರ್ಖರು ಅಥವಾ ಅಸ್ವಸ್ಥರು ಎಂಬುದಾಗಿ ಯೋಚಿಸಿ. ನೀವು ಈ ರೀತಿಯಲ್ಲಿ ಯೋಚಿಸಿದರೆ, ಆಗ ನಿಮಗೆ ನೋವಾಗುವುದಿಲ್ಲ.
ಎಲ್ಲರೂ ಬುದ್ಧಿವಂತರು ಮತ್ತು ಅವರು ಬುದ್ಧಿವಂತಿಕೆಯಿಂದ ವ್ಯವಹರಿಸಬೇಕು ಎಂದು ನೀವು ಯೋಚಿಸಿದರೆ, ಅದು ಹೇಗೆ ಸಾಧ್ಯ? ಎಲ್ಲರಿಗೂ ಅವರದ್ದೇ ಆದ ಚಿಕ್ಕ ಮನಸ್ಸು, ಅವರದ್ದೇ ಆದ ಬಯಕೆಗಳು, ಸಮಸ್ಯೆಗಳು ಮತ್ತು ಅಜ್ಞಾನಗಳಿರುತ್ತವೆ. ಕೇವಲ ಅವರನ್ನು ಸ್ವೀಕರಿಸಿ. ನಾವು ಅವರಿಗೆ ಅನುಮತಿ ನೀಡುವ ವರೆಗೆ ಯಾರಿಗೂ ನಮ್ಮನ್ನು ನೋಯಿಸಲು ಸಾಧ್ಯವಿಲ್ಲ.

ಪ್ರಶ್ನೆ: ಗುರುದೇವ, ನಾನು ಪ್ರತಿಕ್ಷಣವೂ ನಿಮ್ಮ ಪ್ರೀತಿ ಮತ್ತು ಮಮತೆಯನ್ನು ಅನುಭವಿಸುತ್ತೇನೆ, ಆದರೆ ಕೆಲವೊಮ್ಮೆ (ನೀವು ನೀಡುವ) ದೈವಿಕ ಜ್ಞಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ಪ್ರೀತಿ ಮತ್ತು ಜ್ಞಾನ ಎರಡನ್ನೂ ಪಡೆಯಲು ಸಾಧ್ಯವಾಗಲು ನಾನೇನು ಮಾಡಬೇಕು? 
ಶ್ರೀ ಶ್ರೀ ರವಿ ಶಂಕರ್: ಯಾವುದನ್ನೆಲ್ಲಾ ಅರ್ಥ ಮಾಡಿಕೊಳ್ಳುವುದು ನಿನಗೆ ಕಷ್ಟವಾಗುವುದೋ ಅದನ್ನು ಅರ್ಥ ಮಾಡಿಕೊಳ್ಳಬೇಕಾಗಿಯೇ ಇಲ್ಲ. ಅದೆಲ್ಲವೂ ನಿನ್ನ ತಲೆಯ ಮೇಲಿನಿಂದಾಗಿ ಹೋಗುತ್ತಿರುವುದಾದರೆ, ಅದನ್ನು ಹೋಗಲು ಬಿಡು. ನಿನಗೆ ಯಾವುದು ಅರ್ಥವಾಗುವುದೋ ಅದನ್ನು ಮಾತ್ರ ತೆಗೆದುಕೋ.
ನೋಡು, ಜ್ಞಾನವನ್ನು ಪಡೆಯಲಿರುವ ಸಾಮರ್ಥ್ಯವು ಪ್ರತಿಯೊಬ್ಬರಲ್ಲೂ ಬೇರೆ ಬೇರೆಯಾಗಿದೆ, ಆದರೆ ಅನುಭವಿಸಲು ಮತ್ತು ಭಕ್ತಿಯಲ್ಲಿರಲು, ಯಾವುದೇ ಸಾಮರ್ಥ್ಯದ ಪರಿಕಲ್ಪನೆಯಿಲ್ಲ. ಎಲ್ಲರೂ ಒಂದೇ ಮತ್ತು ಸರಿಸಮಾನವಾಗಿ ಸಮರ್ಥರು. ಅದಕ್ಕಾಗಿ ಅಲ್ಲಿ ಯಾವುದೇ ವಿಶೇಷ ಯೋಗ್ಯತೆ ಬೇಕಿಲ್ಲ. ಆದರೆ, ಜ್ಞಾನವನ್ನು ಗಳಿಸುವುದರ ಬಗ್ಗೆ ನೀನು ಮಾತನಾಡುವಾಗ, ಜನರಿಗೆ ಒಂದು ಬೇರೆಯ ಸಾಮರ್ಥ್ಯವಿರುತ್ತದೆ. ಕೆಲವು ಜನರು ಹೆಚ್ಚು ಗಳಿಸುತ್ತಾರೆ, ಕೆಲವರು ಕಡಿಮೆ; ಆದರೆ ನಿನ್ನಲ್ಲಿ ಭಕ್ತಿಯಿರುವಾಗ ಮತ್ತು ಏಕತೆಯ ಒಂದು ಭಾವನೆಯಿರುವಾಗ ಅದು ಯಾವುದೇ ವ್ಯತ್ಯಾಸವನ್ನುಂಟುಮಾಡುವುದಿಲ್ಲ.
ನೀನು ಬಹಳ ಬುದ್ಧಿವಂತನಾಗಿದ್ದರೆ ಮಾತ್ರ ದೇವರು ನಿನ್ನ ಬಗ್ಗೆ ಸಂತೋಷಗೊಳ್ಳುವರು ಅಥವಾ ನೀನು ಅವರ ಅಚ್ಚುಮೆಚ್ಚಿನವನಾಗುವೆ ಎಂದು ಯೋಚಿಸಬೇಡ. ಜ್ಞಾನದ ಉದ್ದೇಶವು, ನಿನ್ನ ಸ್ವಂತ ಆನಂದಕ್ಕಾಗಿ.
ನಿಮ್ಮ ಬುದ್ಧಿಯನ್ನು ಶುದ್ಧಗೊಳಿಸಲು, ನಿಮಗೆ ಜ್ಞಾನ ಬೇಕು;
ನಿಮ್ಮ ಹೃದಯವನ್ನು ಶುದ್ಧಗೊಳಿಸಲು, ನಿಮಗೆ ಪ್ರೀತಿ ಬೇಕು;
ನಿಮ್ಮ ಕರ್ಮವನ್ನು ಶುದ್ಧಗೊಳಿಸಲು, ನಿಮಗೆ ಸೇವೆ ಬೇಕು;
ಎಲ್ಲಾ ಮೂರೂ ಜೊತೆಯಲ್ಲಿ ಸಾಗಬೇಕು.

ಪ್ರಶ್ನೆ: ಗುರುದೇವ, ನಾವು ಬಹಿರ್ಮುಖವಾಗಿ ನೋಡುವಾಗ ನಮ್ಮಲ್ಲಿ ಮಾತ್ಸರ್ಯವುಂಟಾಗುತ್ತದೆ. ಅದೇ ರೀತಿಯಲ್ಲಿ ನಾವು ಗುರುವನ್ನು ಕೂಡಾ ಬಹಿರ್ಮುಖವಾಗಿ ನೋಡುವಾಗ ನಾವು ಮಾತ್ಸರ್ಯದಲ್ಲಿ ಸಿಕ್ಕಿಹಾಕಿಕೊಳ್ಳಬಹುದೇ?
ಶ್ರೀ ಶ್ರೀ ರವಿ ಶಂಕರ್: ಹೌದು. ನೀವು, "ನೋಡು, ಗುರೂಜಿಯವರು ಅವನಿಗೆ ಒಂದು ಹೂವಿನ ಹಾರವನ್ನು ಕೊಟ್ಟಿದ್ದಾರೆ, ಆದರೆ ನನಗೆ ಕೊಡಲಿಲ್ಲ" ಅಥವಾ "ಗುರೂಜಿಯವರು ಅವನೊಂದಿಗೆ/ಅವಳೊಂದಿಗೆ ಮಾತನಾಡಿದರು ಆದರೆ ನನ್ನೊಂದಿಗೆ ಮಾತನಾಡಲಿಲ್ಲ" ಅಥವಾ "ಅವರು ನನ್ನನ್ನು ದಾಟಿ ಹೋದರು, ಆದರೆ ನನ್ನಲ್ಲಿ ನಗಲಿಲ್ಲ. ಅವರು ನನ್ನಲ್ಲಿ ಕೋಪಗೊಂಡಿದ್ದಾರಾ?" ಈ ರೀತಿ ಯೋಚಿಸುವಾಗ, ನೀವು ನಿಮ್ಮದೇ ಮನಸ್ಸನ್ನು ಅಭಿವ್ಯಕ್ತಗೊಳಿಸುವುದಾಗಿರುತ್ತದೆ.
ನಾನು ಯಾಕೆ ನಿಮ್ಮಲ್ಲಿ ಕೋಪಗೊಳ್ಳಬೇಕು? ನೀವೊಂದು ತಪ್ಪನ್ನು ಮಾಡಿದರೆ, ನಾನು ಯಾಕೆ ಕೋಪಗೊಳ್ಳಬೇಕು? ಇಲ್ಲವೇ ಇಲ್ಲ. ಯಾರಾದರೊಬ್ಬರು ಏನಾದರೂ ತಪ್ಪು ಮಾಡಿದರೆ, ಅವನು ಸ್ವತಃ ತನ್ನಿಂತಾನೇ ಅದರ ಬೆಲೆ ತೆರುತ್ತಾನೆ. ಆದುದರಿಂದ, ಗುರುಗಳು ನಿಮ್ಮೊಂದಿಗೆ ಕೋಪಗೊಂಡಿರುವರೆಂದು ಅಥವಾ ನಿಮ್ಮನ್ನು ನಿರ್ಲಕ್ಷಿಸುತ್ತಿರುವರೆಂದು ಯೋಚಿಸಬೇಡಿ. ಅದು ಹಾಗಲ್ಲ.
ಬಾಹ್ಯ ತೋರಿಕೆ ಮತ್ತು ವರ್ತನೆಗಳು ಹಾಗಿರುತ್ತವೆ. ಬಾಹ್ಯ ವರ್ತನೆಗಳ ಕಡೆಗೆ ನೋಡಬೇಡಿ, ಆಂತರಿಕವಾಗಿ ನೋಡಿ ಮತ್ತು ಬೇರೆ ಯಾರೊಬ್ಬರಂತೆಯೇ ನೀವು ಕೂಡಾ ದೇವರಿಗೆ ಅಷ್ಟೇ ಪ್ರಿಯವಾದವರು ಎಂಬುದನ್ನು ತಿಳಿಯಿರಿ. ಈ ಯೋಚನೆಯು ನಿಮ್ಮ ಮನಸ್ಸಿನಲ್ಲಿ ಘನೀಕರಿಸಿದರೆ, ಆಗ ಅಲ್ಲಿ ಯಾವುದೇ ಮಾತ್ಸರ್ಯವಿರಲಾರದು.

ಪ್ರಶ್ನೆ: ನಾವು ಗುರು ಅಥವಾ ಗುರು ತತ್ವದ ಕಡೆಗೆ ನೋಡಬೇಕಾದರೆ, ನಮ್ಮಲ್ಲಿ ಯಾವ ರೀತಿಯ ದೃಷ್ಟಿಯಿರಬೇಕು?
ಶ್ರೀ ಶ್ರೀ ರವಿ ಶಂಕರ್: ಎಲ್ಲರೂ ತನಗೆ ಸೇರಿದವರು ಎಂದು ಒಬ್ಬನು ಭಾವಿಸಬೇಕು; ಮತ್ತು ಒಬ್ಬನಲ್ಲಿ ತಾಳ್ಮೆಯಿರಬೇಕು. ಒಂದು ದಿನದಲ್ಲಿ ನಾನು ೨೦೦೦ದಿಂದ ೩೦೦೦ ಪ್ರಶ್ನೆಗಳನ್ನು ಆಲಿಸಬೇಕಾಗಿ ಬರುತ್ತದೆ. ನಾನು ಅವುಗಳನ್ನು ಕೇಳಿಸಿಕೊಳ್ಳುವೆನೇ ಇಲ್ಲವೇ? ಎಷ್ಟೇ ಪ್ರಶ್ನೆಗಳಿರಲಿ, ನಾನು ಅವುಗಳನ್ನೆಲ್ಲಾ ಕೇಳಿಸಿಕೊಳ್ಳುತ್ತೇನೆ. ನಾನು ಅವುಗಳನ್ನು ಸಂತೋಷದಿಂದ ಕೇಳಿಸಿಕೊಳ್ಳುವೆನೇ ಇಲ್ಲವೇ?
ಆದುದರಿಂದ, ಮನಸ್ಸಿನ ಸ್ಥಿರತೆ; ಬುದ್ಧಿಯ ತೀಕ್ಷ್ಣತೆ; ಹೃದಯದ ಕೋಮಲತೆ. ಈ ಮೂರು ಜೀವನದಲ್ಲಿ ಮುಖ್ಯವಾಗಿವೆ.
ಹೃದಯವು ಕೋಮಲವಾಗಿರಬೇಕು,
ಬುದ್ಧಿಯು ತೀಕ್ಷ್ಣವಾಗಿರಬೇಕು ಮತ್ತು
ಮನಸ್ಸು ಪ್ರಸನ್ನವಾಗಿರಬೇಕು.
ಈ ಮೂರನ್ನು ಕಳೆದುಕೊಳ್ಳಬೇಡಿ.
ಅದು ಕಳೆದುಹೋದಂತೆ ಅನ್ನಿಸಿದರೂ, ಅದು ದೂರ ಹೋಗಿಲ್ಲ, ಆದರೆ ಅಲ್ಲೇ ಇದೆ ಮತ್ತು ಕೇವಲ ಅಡಗಿದೆ ಎಂದು ಯೋಚಿಸಿ.

ಪ್ರಶ್ನೆ: ಗುರುದೇವ, ದೇವರು ಮತ್ತು ಆಕಾಶದ ನಡುವಿನ ವ್ಯತ್ಯಾಸವೇನು? ನಾವದನ್ನು ತಿಳಿದುಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಮೊದಲನೆಯದಾಗಿ, ನೀನು ಯಾರೆಂಬುದನ್ನು ನೀನು ತಿಳಿದುಕೊಂಡಿರುವೆಯಾ? ನೀನು ಯಾರು? ನೀನು ಕಂಡುಹಿಡಿದಿದ್ದೀಯಾ? ಇಲ್ಲ. ನೀನು ಇಲ್ಲಿರುವೆ, ಅಲ್ಲವೇ? ನೀನು ಖಚಿತವಾಗಿರುವೆಯಾ? ಕುಳಿತುಕೊಂಡು "ನಾನು ಯಾರು" ಎಂಬುದರ ಬಗ್ಗೆ ವಿಚಾರ ಮಾಡು. ನಿಜವಾದ ಉತ್ತರವನ್ನು ನೀನು ಕಂಡುಹುಡುಕಿದಾಗ, ಅಲ್ಲಿ ಯಾವುದೇ ಉತ್ತರವಿಲ್ಲವೆಂಬುದು ನಿನಗೆ ತಿಳಿಯುತ್ತದೆ. ನೀನು, "ನಾನು ಇದು" ಅಥವಾ "ನಾನು ಅದು" ಎಂಬ ಪರಿಕಲ್ಪನೆಗಳನ್ನು ಒಂದೊಂದಾಗಿ ಬದಿಗಿರಿಸಬೇಕು ಮತ್ತು ಆಗ ನಿನಗೆ ಆಕಾಶ ತತ್ವ ಮಾತ್ರ ಅನುಭವವಾಗುತ್ತದೆ.
ಆದುದರಿಂದ, ಮೊದಲು ನೀನು ನಿನ್ನನ್ನೇ ತಿಳಿದುಕೋ, ನಂತರ ದೇವರು ನಿನ್ನನ್ನು ಹಿಂಬಾಲಿಸುವರು. ನೀವು ಕಬೀರನ ದ್ವಿಪದಿಯ ಬಗ್ಗೆ ಕೇಳಿರಬಹುದು:
ಜಬ್ ಮೈ ಹರಿ ಹರಿ ಕೆಹಕೇ ಜಾ ರಹಾ ಥಾ, ಹರಿ ಮಿಲೆ ನಹೀಂ ಕಹೀಂ;
ಅಬ್ ಜಬ್ ಮೈ ಅಪ್ನೇ ಆಪ್ ಮೆ ಬೈಠಾ, ಅಬ್ ಲಾಗೆ ಹರಿ ಪೀಛೆ ಕಬೀರ್ ಕಬೀರ್.
(ನಾನು ಹರಿಯನ್ನು (ದೇವರನ್ನು) ಕರೆಯುತ್ತಿದ್ದಾಗ, ನನಗೆ ಅವನು ಎಲ್ಲೂ ಸಿಗಲಿಲ್ಲ; ಮತ್ತು ನಾನು ಹುಡುಕುವುದನ್ನು ನಿಲ್ಲಿಸಿ ನನ್ನೊಳಗೆಯೇ ನೋಡಿದಾಗ, ಅವನು ನನ್ನನ್ನು ಹಿಂಬಾಲಿಸುತ್ತಿರುವುದು ಕಾಣಿಸುತ್ತಿದೆ.)
ಈ ರೀತಿಯಲ್ಲಿ ದೇವರು ನಿಮ್ಮನ್ನು ಹಿಂಬಾಲಿಸಲಿ.

ಪ್ರಶ್ನೆ: ಸತಿಯು ಕೂಡಾ ಪಾರ್ವತಿಯಂತೆಯೇ ದೇವಿಯ ಒಂದು ರೂಪವಾಗಿದ್ದಳು. ಸತಿಯು ಆತ್ಮ ಸಾಕ್ಷಾತ್ಕಾರವನ್ನು ಹೊಂದಿದರೆ ಪಾರ್ವತಿಯು ಶಿವನ ಪತ್ನಿಯಾದಳು. ಅಂತಹದ್ದೇನಾಯಿತು?
ಶ್ರೀ ಶ್ರೀ ರವಿ ಶಂಕರ್: ದೇವಿಗಿರುವುದು ಕೇವಲ ಒಂದು ರೂಪವಲ್ಲ, ಅವಳಿಗೆ ಹಲವಾರು ರೂಪಗಳಿವೆ. ಅದಕ್ಕಾಗಿಯೇ ಅವಳು ಲೀಲಾ ಎಂದು ಅರಿಯಲ್ಪಡುತ್ತಾಳೆ. ಬೇರೆ ಬೇರೆ ವಿಷಯಗಳನ್ನು ಕಲಿಸುವುದಕ್ಕಾಗಿ ಅವಳು ಬೇರೆ ಬೇರೆ ರೂಪಗಳಲ್ಲಿ ಬರುತ್ತಾಳೆ. ಅದು ಅವಳ ಲೀಲೆ. ಕೇವಲ ಇಷ್ಟನ್ನು ತಿಳಿದುಕೊಳ್ಳಿ.

ಪ್ರಶ್ನೆ: ಒಬ್ಬ ಭಕ್ತನಿಗೆ ಯಾವುದು ಪ್ರಧಾನವಾದುದು: ಆಕಾರವನ್ನು ಆರಾಧಿಸುವುದೇ ಅಥವಾ ನಿರಾಕಾರವನ್ನೇ?
ಶ್ರೀ ಶ್ರೀ ರವಿ ಶಂಕರ್: ಮೊದಲು ನನಗೆ ಹೇಳು, ನಿನಗೊಂದು ಆಕಾರವಿದೆಯೇ ಇಲ್ಲವೇ ಎಂದು.
ಭಕ್ತ: ನನಗೊಂದು ಆಕಾರವಿದೆ.
ಶ್ರೀ ಶ್ರೀ ರವಿ ಶಂಕರ್: ನಿನಗೊಂದು ಆಕಾರವಿದೆಯೇ? ಎಲ್ಲಿದೆ ಆಕಾರ? ನಿನ್ನ ಮನಸ್ಸಿನ ಆಕಾರವೇನು?
ಭಕ್ತ: ಮನಸ್ಸಿಗೊಂದು ಆಕಾರವಿಲ್ಲ.
ಶ್ರೀ ಶ್ರೀ ರವಿ ಶಂಕರ್: ನೋಡು, ನಿನ್ನ ಶರೀರಕ್ಕೊಂದು ಆಕಾರವಿದೆ, ಆದರೆ ನಿನ್ನ ಮನಸ್ಸಿಗಿಲ್ಲ. ನೀನು ಎರಡರ ಒಂದು ಸಂಯೋಗವಾಗಿರುವೆಯಲ್ಲವೇ? ನೀನು ಶರೀರ ಮತ್ತು ಮನಸ್ಸು ಎರಡೂ ಆಗಿರುವೆ, ಅಲ್ಲವೇ? ಆದುದರಿಂದ ನೀನು ಆಕಾರ ಮತ್ತು ನಿರಾಕಾರಗಳ ಒಂದು ಸಂಯೋಗವಾಗಿರುವೆ. ಅದೇ ರೀತಿಯಲ್ಲಿ, ದೇವರು ನಿರಾಕಾರನಾಗಿದ್ದರೂ, ಸಂಪೂರ್ಣ ಸೃಷ್ಟಿಯು ಅವನ ವ್ಯಕ್ತವಾಗಿರುವ ಸ್ವರೂಪವಾಗಿದೆ. ಪ್ರಜ್ಞೆಯು ಆಕಾರರಹಿತವಾಗಿದೆ ಮತ್ತು ಪ್ರಕೃತಿಯಲ್ಲಿ ವ್ಯಕ್ತವಾಗಿರುವ ಸೃಷ್ಟಿಗೆ ಆಕಾರವಿದೆ.
ಅದಕ್ಕಾಗಿಯೇ ನಮ್ಮ ದೇಶದಲ್ಲಿ ದನಗಳು ಕೂಡಾ ಪೂಜ್ಯನೀಯವಾಗಿವೆ ಮತ್ತು ಪವಿತ್ರವೆಂದು ಪರಿಗಣಿಸಲ್ಪಡುತ್ತವೆ. ಅಶ್ವತ್ಥ ಮರಗಳು ಪವಿತ್ರವೆಂದು ಪರಿಗಣಿಸಲ್ಪಡುತ್ತವೆ. ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮನು, ಮರಗಳಲ್ಲಿ ನಾನು ಅಶ್ವತ್ಥ ಎಂದು ಹೇಳುತ್ತಾನೆ. ಅದೇ ರೀತಿಯಲ್ಲಿ ಅವನು, ’ಭೂತಾನಾಂ ಚೇತನಶ್ಚಾಸ್’ (ನಾನು ಚೇತನನಾಗಿದ್ದೇನೆ) ಎಂದು ಹೇಳಿದ್ದಾನೆ. ’ಜೀವನಂ ಸರ್ವ ಭೂತೇಷು’ ಎಂದು ಹೇಳಿದ್ದಾನೆ, ಅಂದರೆ, ಜೀವಿಗಳಲ್ಲಿರುವ ಪ್ರಾಣವು ನಾನು ಎಂದು. ಗೋಪಿಯರು ಕೂಡಾ ಆಕಾರವನ್ನು ಆರಾಧಿಸುವುದರಿಂದ, ನಿರಾಕಾರವನ್ನು ಆರಾಧಿಸುವುದರ ಕಡೆಗೆ ಹೋದರು, ಮತ್ತು ಇದು ಅವರಿಗೆ ಬಹಳ ಸಹಜವಾಗಿ ಆಯಿತು. ಅವರು ಅವನನ್ನು ಎಲ್ಲದರಲ್ಲಿಯೂ ಮತ್ತು ಎಲ್ಲಾ ಜಾಗಗಳಲ್ಲಿಯೂ ನೋಡಲು ಪ್ರಾರಂಭಿಸಿದರು. ಅವನಿಲ್ಲದೆ ಒಂದು ಕ್ಷಣ ಕೂಡಾ ಅವರಿಗೆ ಜೀವಿಸಲು ಸಾಧ್ಯವಾಗುತ್ತಿರಲಿಲ್ಲ. ಇದು ಭಕ್ತಿಯ ಪರಾಕಾಷ್ಠೆ, ಭಕ್ತಿಯ ಉತ್ತುಂಗ.
ಭಕ್ತಿಯು ಯಾವತ್ತೂ ಆಕಾರದೊಂದಿಗೆ ಪ್ರಾರಂಭವಾಗಿ ನಿರಾಕಾರದೊಂದಿಗೆ ಕೊನೆಯಾಗುತ್ತದೆ. ಸಾಂಪ್ರದಾಯಿಕ ಅಭ್ಯಾಸವೇ ಈ ರೀತಿಯಾಗಿದೆ - ಮೊದಲು ಪಾದಗಳನ್ನು ಪೂಜಿಸುವುದು, ನಂತರ ಮೂರ್ತಿಯನ್ನು ಪೂಜಿಸುವುದು, ನಂತರ ಸಾಲಿಗ್ರಾಮವನ್ನು (ಕಪ್ಪು ಕಲ್ಲಿನ ರೂಪದಲ್ಲಿ ವಿಷ್ಣುವಿನ ಪೂಜೆ)ಪೂಜಿಸುವುದು, ನಂತರ ಯಂತ್ರವನ್ನು ಪೂಜಿಸುವುದು. (ಯಂತ್ರ - ಪವಿತ್ರ ಚಿಹ್ನೆ, ಮಂತ್ರ ಹಾಗೂ ಚಿತ್ರಗಳನ್ನೊಳಗೊಂಡ ಲೋಹದ ಹಾಳೆ)
ಯಂತ್ರವಿಲ್ಲದೆ, ಮೂರ್ತಿಗೆ ಯಾವುದೇ ಶಕ್ತಿ ಲಭಿಸುವುದಿಲ್ಲ. ಪ್ರತೀ ದೇವತೆಯೊಂದಿಗೆ ಒಂದು ನಿರ್ದಿಷ್ಟ ಯಂತ್ರವು ಸಂಬಂಧ ಹೊಂದಿದೆ. ಯಂತ್ರಕ್ಕಿಂತ ಹೆಚ್ಚು ಶ್ರೇಷ್ಠವಾದುದು ಮಂತ್ರವಾಗಿದೆ. ಮಂತ್ರವಿಲ್ಲದೆ ಯಂತ್ರವು ಕಾರ್ಯನಿರ್ವಹಿಸುವುದಿಲ್ಲ. ಆದುದರಿಂದ, ಯಂತ್ರವಿಲ್ಲದೆ ಮೂರ್ತಿಗೆ ಯಾವುದೇ ಮಹತ್ವವಿಲ್ಲ ಮತ್ತು ಮಂತ್ರವಿಲ್ಲದೆ ಯಂತ್ರಕ್ಕೆ ಯಾವುದೇ ಮಹತ್ವವಿಲ್ಲ. ಒಬ್ಬ ಸಂತ ಅಥವಾ ಒಬ್ಬ ಅನ್ವೇಷಕನಿಲ್ಲದಿದ್ದರೆ ಮಂತ್ರದಿಂದಲೂ ಯಾವುದೇ ಉಪಯೋಗವಿಲ್ಲ. ನೀವು ಯಾರಿಂದಲಾದರೂ ಸುಮ್ಮನೇ ಒಂದು ಮಂತ್ರವನ್ನು ತೆಗೆದುಕೊಂಡರೆ, ಅದು ಕೆಲಸ ಮಾಡದು. ಮಂತ್ರವು ಕೆಲಸ ಮಾಡಬೇಕಾದರೆ ಅದನ್ನು ಪವಿತ್ರವಾದ ಸಂಪ್ರದಾಯ ಮತ್ತು ಶಾಸ್ತ್ರಗಳ ಪ್ರಕಾರ ಪಡೆಯಬೇಕು. ಆದುದರಿಂದ ಪ್ರತಿಯೊಂದಕ್ಕೂ ತನ್ನದೇ ಆದ ಮಹತ್ವವಿದೆ.

ಪ್ರಶ್ನೆ: ನನ್ನಲ್ಲಿ ಮೂರು ಪ್ರಶ್ನೆಗಳಿವೆ. ದೇವರು ಪ್ರತಿಯೊಬ್ಬರಲ್ಲೂ ಪ್ರಜ್ಞೆಯಾಗಿ ಇರುವುದಾದರೆ, ನಾವು ಅವನನ್ನು ನಮ್ಮೊಳಗೆಯೇ ಆತ್ಮವಾಗಿ ಹುಡುಕುವುದು ಯಾಕೆ? ಅವನು ಭ್ರಮೆಗಳನ್ನು ಸೃಷ್ಟಿಸುವುದು ಯಾಕೆ? ಅವನು ಯಾಕೆ ಪ್ರಪಂಚದಲ್ಲಿ ಕೆಟ್ಟದಾಗಲು ಬಿಡುತ್ತಾನೆ?
ಶ್ರೀ ಶ್ರೀ ರವಿ ಶಂಕರ್: ಹೌದು. ನೀನೊಂದು ಒಳ್ಳೆಯ ಪ್ರಶ್ನೆಯನ್ನು ಕೇಳಿರುವೆ. ಇದಕ್ಕಿರುವ ಉತ್ತರವೆಂದರೆ, ಅವನು ಸುಮ್ಮನಿರಲು ಇಷ್ಟ ಪಡುವುದಿಲ್ಲ. ಸ್ವಲ್ಪ ಅವ್ಯವಸ್ಥೆ ಇದ್ದರೆ ಮಾತ್ರ, ಅದನ್ನು ಪರಿಹರಿಸಲು ಅವನು ಒಂದು ಅವತಾರವಾಗಿ ಕೆಳಗಿಳಿದು ಬರಲು ಸಾಧ್ಯ. ಅದೊಂದು ಆಟ.
ನಾನು ನಿನಗೆ ಇದೇ ರೀತಿಯ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ಜನರು ಯಾಕೆ ಫುಟ್ಬಾಲ್ ಅಥವಾ ಕ್ರಿಕೆಟನ್ನು ಆಡುತ್ತಾರೆ? ೧೧ ಮಂದಿ ಈ ಬದಿಯಲ್ಲಿ ನಿಂತಿದ್ದಾರೆ ಮತ್ತು ೧೧ ಮಂದಿ ಇನ್ನೊಂದು ಬದಿಯಲ್ಲಿ ನಿಂತಿದ್ದಾರೆ. ಅವರು ಚೆಂಡನ್ನು ಒದೆಯುತ್ತಾರೆ. ಇದೆಲ್ಲದರ ಲಾಭವೇನು?
ಭಕ್ತ: ಅವನು ಕೇವಲ ಅದನ್ನೊಂದು ಅನುಭವವಾಗಿ ತೆಗೆದುಕೊಳ್ಳುತ್ತಾನೆ ಅಥವಾ ಅದನ್ನು ಆನಂದಿಸುತ್ತಾನೆ.
ಶ್ರೀ ಶ್ರೀ ರವಿ ಶಂಕರ್: ಹೌದು, ಅವನು ಅದರಿಂದ ಆನಂದ ಪಡೆಯುತ್ತಾನೆ.
ಭಕ್ತ: ಆದರೆ ಸಮಾಜದಲ್ಲಿ ಕೊಲ್ಲುವುದೇ ಮೊದಲಾದಂತಹ ತಪ್ಪು ಕೆಲಸಗಳನ್ನು ಮಾಡಿ ಜನರು ಆನಂದ ಪಡೆಯುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ನೀನು ರೋಮಾಂಚಕ ಸಿನೆಮಾಗಳನ್ನು ನೋಡುವುದಿಲ್ಲವೇ? ಸಿನೆಮಾಗಳಲ್ಲಿ ಕೇವಲ ಒಳ್ಳೆಯ ವಿಷಯಗಳು ಮಾತ್ರ ಆಗುತ್ತವೆಯೇ? ಅಲ್ಲಿ ಅವ್ಯವಸ್ಥೆ ಅಥವಾ ಖಳನಾಯಕನಿರುವುದಿಲ್ಲವೇ? ಯಾವುದೇ ಕೆಟ್ಟದಾಗುವುದಿಲ್ಲವೇ? ರಾಮಾಯಣದಲ್ಲಿ ರಾವಣನಿರಲಿಲ್ಲವೆಂಬುದಾಗಿ ಸುಮ್ಮನೇ ಊಹಿಸು. ಆಗ ರಾಮಾಯಣವು ಕೇವಲ ಮತ್ತೊಂದು ಕಥೆಯಾಗಿರುತ್ತಿತ್ತು: ರಾಮನೆಂಬ ಒಬ್ಬ ರಾಜನಿದ್ದ. ಅವನಿಗೆ ಮದುವೆಯಾಗಿ ಪುತ್ರರಾದರು, ಮತ್ತು ಅಷ್ಟೇ. ಅಲ್ಲಿಗೆ ಕೊನೆಯಾಯಿತು. ಆಗ ನೀನು ನಾಯಕನನ್ನು ಗುರುತಿಸುವುದು ಹೇಗೆ? ಯಾವುದೇ ಚಲನಚಿತ್ರದಲ್ಲಾದರೂ, ನಿನಗೇನು ಕಾಣಿಸುತ್ತದೆ? ಯಾವುದೋ ಗೂಂಡಾಗಿರಿ ಮತ್ತು ದುಷ್ಟತನವಿರುವಾಗ ನಾಯಕನು ೧೪ನೆಯ ಮಹಡಿಯಿಂದ ಕೆಳಗೆ ಹಾರುತ್ತಾನೆ. ಅವನು ಕಾರು ಹಾರುವಂತೆ, ಮೊದಲಾದವನ್ನು ಮಾಡುತ್ತಾನೆ. ಅವನು ಕಾರಿನಿಂದ ದೋಣಿಗೆ ಹಾರುತ್ತಾನೆ. ಅವರು ಅಷ್ಟೊಂದು ಅಪಾಯವನ್ನು ಯಾಕೆ ತೆಗೆದುಕೊಳ್ಳುತ್ತಾರೆ?

ಪ್ರಶ್ನೆ: ಮಹತ್ ಎಂದರೇನು ಮತ್ತು ಮಹತ್ ತತ್ವವನ್ನು ನಾವು ಗುರುತಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಮೊದಲು ಮನಸ್ಸು ಹೆಚ್ಚು ಸೂಕ್ಷ್ಮವಾಗಬೇಕು. ನಂತರ ಬುದ್ಧಿಯು ಹೆಚ್ಚು ತೀಕ್ಷ್ಣವಾಗಬೇಕು. ಇದಾಗುತ್ತಿದ್ದಂತೆ, ಅಹಂಕಾರವು ಕರಗುತ್ತದೆ. ಅಹಂಕಾರವು ಕರಗುವಾಗ ಮಹತ್ ತತ್ವವು ತನ್ನಿಂತಾನೆಯೇ ತೆರೆಯುತ್ತದೆ ಮತ್ತು ಪ್ರಕಟಗೊಳ್ಳುತ್ತದೆ. ಮಹತ್ ತತ್ವವನ್ನು ಬೆಳಕಿಗೆ ತರಬೇಕಾದರೆ, ಅಹಂಕಾರವು ಮಾಯವಾಗಬೇಕು, ಅದು ಕರಗಬೇಕು. ಯಾರ ಅಹಂಕಾರವು ಕರಗಿರುತ್ತದೆಯೋ ಅಂತಹ ಜನರು ಮಹಾತ್ಮ ಎಂದು ಕರೆಯಲ್ಪಡುತ್ತಾರೆ.

ಪ್ರಶ್ನೆ: ಕೆಟ್ಟ ದೃಷ್ಟಿ ಮೊದಲಾದ ಸಾಂಪ್ರದಾಯಿಕ ಮೂಢನಂಬಿಕೆಗಳು ಎಷ್ಟು ಪ್ರಸ್ತುತ? ಅವುಗಳು ಸರಿಯೇ ತಪ್ಪೇ?
ಶ್ರೀ ಶ್ರೀ ರವಿ ಶಂಕರ್: ಯೋಚನೆಗಳ ಪ್ರಪಂಚವು ಒಂದು ಸೂಕ್ಷ್ಮ ಪ್ರಪಂಚವಾಗಿದೆ. ಇವುಗಳೆಲ್ಲದರದ್ದು ಸ್ವಲ್ಪ ಪ್ರಭಾವವಿದೆ ಮತ್ತು ಈ ಪ್ರಭಾವಗಳನ್ನು ತೊಡೆದುಹಾಕಲು ಒಂದು ಸರಳ ಮಾರ್ಗವಿದೆ. ಇದೆಲ್ಲವೂ ಕಂಪನಗಳ ಮೇಲೆ ಆಧರಿಸಿದೆ.
ಎಲ್ಲೆಡೆಯೂ ಕಂಪನಗಳಿವೆ. ಸಂಪೂರ್ಣ ಜೀವನವು ಒಂದು ಕಂಪನವಾಗಿದೆ. ಪ್ರತಿಯೊಂದು ವಸ್ತುವೂ ಒಂದು ಕಂಪನವಾಗಿದೆ. ಆದುದರಿಂದ, ಸ್ವಲ್ಪ ನಕಾರಾತ್ಮಕ ಕಂಪನವು ನಿಮ್ಮ ಕಡೆಗೆ ಬರಲೂಬಹುದು. ನೀವು ಸ್ವಲ್ಪ ಅಸುಖವನ್ನು ಅನುಭವಿಸಲೂಬಹುದು. ಯಾರಾದರೂ ನಿಮ್ಮನ್ನು ನಿಂದಿಸಿದರೆ, ಆಗ ನಿಮ್ಮ ಮನಸ್ಸು ಚಲ್ಲಾಪಿಲ್ಲಿಯಾಗಿ ತನ್ನ ಗಮನವನ್ನು ಕಳೆದುಕೊಳ್ಳುವುದಿಲ್ಲವೇ? ಇದು ನಿಮಗಾಗುವುದಿಲ್ಲವೇ?
ನಮ್ಮ ಪ್ರಾಚೀನ ಜನರು ಒಂದು ಸರಳವಾದ ಪರಿಹಾರವನ್ನು ಕಂಡುಹಿಡಿದರು - ಸ್ವಲ್ಪ ಉಪ್ಪನ್ನು ಶರೀರದ ಸಮೀಪ ಸುತ್ತಿ ಅದನ್ನು ಚಿಮುಕಿಸುವುದರಿಂದ ಈ ಕಂಪನಗಳನ್ನು ತೆಗೆದುಹಾಕಬಹುದು ಎಂದು ಯೋಚಿಸಿದರು. ಹೊರದೇಶಗಳಲ್ಲಿ ಕೂಡಾ, ಜನರಿಗೆ ಯಾವುದಾದರೂ ಮಾನಸಿಕ ತೊಂದರೆಗಳಿರುವಾಗ, ಅವರು ಸಮುದ್ರ ತೀರದ ಬಳಿಗೆ ಹೋಗುತ್ತಾರೆ. ಉಪ್ಪು ನೀರು ತಮ್ಮ ಪ್ರಜ್ಞೆಯನ್ನು ಬಲಗೊಳಿಸುತ್ತದೆ ಮತ್ತು ಅದಕ್ಕೆ ಶಕ್ತಿ ನೀಡುತ್ತದೆ ಎಂದು ಅವರು ಭಾವಿಸುತ್ತಾರೆ. ಕೇವಲ ಉಪ್ಪು ಮತ್ತು ನೀರನ್ನು ಉಪಯೋಗಿಸುವುದರ ಮೂಲಕ ನೀವು ನಿಮ್ಮ ಸೂಕ್ಷ್ಮ ಪ್ರಭಾವಲಯವನ್ನು ಶುದ್ಧಗೊಳಿಸಬಹುದು; ಇದಕ್ಕಿಂತ ಹೆಚ್ಚಿನದೇನೂ ಅಗತ್ಯವಿಲ್ಲ.  
ಹಲವಾರು ಮೂಢನಂಬಿಕೆಗಳು ಮತ್ತು ತಪ್ಪು ನಂಬಿಕೆಗಳಿವೆ - ಉದಾಹರಣೆಗೆ ಶಿಶುಗಳನ್ನು ದೇವಸ್ಥಾನಗಳಲ್ಲಿ ತಲೆ ಕೆಳಗಾಗಿ ಹಿಡಿಯುವುದು; ಒಂದು ನಿಮಿಷಗಳವರೆಗೇನೋ ಮಗುವನ್ನು ಮರಳಿನಲ್ಲಿ ಹುಗಿಯುವುದು ಮೊದಲಾದವು. ಇದೆಲ್ಲಾ ಬಹಳ ತಪ್ಪು ಮತ್ತು ಇದನ್ನು ಮಾಡಬಾರದು. ನಮ್ಮ ಸಮಾಜದಲ್ಲಿ ಹಲವಾರು ತಪ್ಪು ನಂಬಿಕೆಗಳಿವೆ ಮತ್ತು ಇದಕ್ಕೆ ಧರ್ಮಗ್ರಂಥಗಳಲ್ಲಿ ಯಾವುದೇ ಆಧಾರವಿಲ್ಲ.
ಯಾವುದು ನಿಮ್ಮ ಬುದ್ಧಿಗೆ ಸರಿಬೀಳುವುದಿಲ್ಲವೋ ಅಥವಾ ಪ್ರಾಯೋಗಿಕವಲ್ಲವೋ ಮತ್ತು ಒಂದು ತಪ್ಪು ವರ್ತನೆಯಾಗಿ ಕಾಣಿಸುವುದೋ, ಅದನ್ನು ನೀವು ಮಾಡಲೇಬಾರದು ಎಂದು ಧರ್ಮಗ್ರಂಥಗಳಲ್ಲಿ ಬಹಳ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸನಾತನ ಧರ್ಮವು ಅಂತಹ ಮೂಢನಂಬಿಕೆಗಳಿಗೆ ವಿರುದ್ಧವಾಗಿದೆ. ಆದರೆ ಅಂತಹ ಮೂಢನಂಬಿಕೆಗಳು ಎಲ್ಲಾ ಧರ್ಮಗಳೊಳಗೂ ನುಗ್ಗಿವೆ. ನಾವು ಮೂಢನಂಬಿಕೆಗಳನ್ನು ತೊಡೆದುಹಾಕಬೇಕು ಮತ್ತು ಕೇವಲ ಒಳ್ಳೆಯ ಅಭ್ಯಾಸಗಳನ್ನು ಸ್ವೀಕರಿಸಬೇಕು.

ಪ್ರಶ್ನೆ: ರಾವಣನು ಒಬ್ಬ ಕಲಿತ ಬ್ರಾಹ್ಮಣನಾಗಿದ್ದನು ಮತ್ತು ತನ್ನ ಸಹೋದರಿಯನ್ನು ರಕ್ಷಿಸಲು ಧಾವಿಸಿದನು. ರಾಮನು ತನ್ನ ಹೆತ್ತವರಿಗೆ ದುಃಖವನ್ನುಂಟುಮಾಡಿದನು, ಅನ್ಯಾಯದಿಂದ ವಾಲಿಯನ್ನು ಸೋಲಿಸಿದನು, ಇತರ ಜನರ ಅಭಿಪ್ರಾಯಗಳಿಗೆ ಫುಟ್ಬಾಲ್ ಆಗಿದ್ದನು ಮತ್ತು ತನ್ನ ಪತ್ನಿಯನ್ನು ಹೊರಗಟ್ಟಿದನು. ನಾವು ಯಾಕೆ ರಾಮನನ್ನು ಒಳ್ಳೆಯವನೆಂದು ಮತ್ತು ರಾವಣನನ್ನು ಕೆಟ್ಟವನೆಂದು ಪರಿಗಣಿಸುತ್ತೇವೆ?
ಶ್ರೀ ಶ್ರೀ ರವಿ ಶಂಕರ್: ಇದು ಶ್ರೀಲಂಕಾದ ರಾಮಾಯಣದಂತೆ ತೋರುತ್ತದೆ! (ನಗು) ಪ್ರತಿಯೊಂದು ಕಥೆಗೂ ಎರಡು ಬದಿಗಳಿವೆ. ಬೇರೆಯ ಕೋನದಿಂದ ರಾಮಾಯಣವನ್ನು ನೋಡಿದರೆ, ರಾವಣನು ಒಬ್ಬ ಒಳ್ಳೆಯ ವ್ಯಕ್ತಿಯಾಗಿದ್ದನು ಎಂಬುದನ್ನು ಅದು ತೋರಿಸುತ್ತದೆ. ಭಗವಂತ ರಾಮನೇ ಹಾಗೆ ಹೇಳಿದ್ದಾನೆ. ರಾವಣನು ಕೆಟ್ಟವನೆಂದು ಅವನು ಯಾವತ್ತೂ ಹೇಳಲೇ ಇಲ್ಲ. ರಾಮನು ಲಕ್ಷ್ಮಣನಲ್ಲಿ, ರಾವಣನು ಒಬ್ಬ ಬುದ್ಧಿವಂತ ವಿದ್ವಾಂಸನೆಂದು ಮತ್ತು ತಾನು (ಭಗವಂತ ರಾಮ) ರಾವಣನ ಬಳಿಗೆ ಹೋಗುವುದಕ್ಕಿಂತ ಮೊದಲೇ ಲಕ್ಷ್ಮಣನು ರಾವಣನಲ್ಲಿರುವ ಜ್ಞಾನವನ್ನು ಕಲಿಯಬೇಕೆಂದು ಹೇಳಿದನು.
ಇನ್ನೊಂದು ಬಹಳ ಸುಂದರವಾದ ಕಥೆಯಿದೆ. ರಾಮೇಶ್ವರಂನಲ್ಲಿ ಭಗವಾನ್ ಶಿವನನ್ನು ಪ್ರಾರ್ಥಿಸಲು ಭಗವಾನ್ ರಾಮನು ಶಿವಲಿಂಗವನ್ನು ಪ್ರತಿಷ್ಠಾಪಿಸಲು ಇಚ್ಛಿಸಿದಾಗ, ಅವನಿಗೆ ಅದನ್ನು ತನ್ನ ಪತ್ನಿ ಮತ್ತು ಒಬ್ಬ ಬ್ರಾಹ್ಮಣ ಪುರೋಹಿತನಿಲ್ಲದೆ ಮಾಡಲು ಸಾಧ್ಯವಿರಲಿಲ್ಲ. ಅವನು ಸಹಾಯ ಮಾಡುವಂತೆ ರಾವಣನಲ್ಲಿ ವಿನಂತಿಸಿಕೊಂಡನು. ರಾವಣನು ತಾನೇ ಸೀತೆಯನ್ನು ಕರೆದು ತಂದನು ಮತ್ತು ಪೂಜೆಯ ಶಾಸ್ತ್ರಕ್ಕೆ ಪುರೋಹಿತನಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸುವುದಕ್ಕೆ ಸಹಾಯ ಮಾಡಿದನು. ಪೂಜೆಯ ಬಳಿಕ ಭಗವಾನ್ ರಾಮನು ರಾವಣನ ಪಾದಗಳಿಗೆ ನಮಸ್ಕರಿಸಿದಾಗ ಅವನು ಭಗವಾನ್ ರಾಮನಿಗೆ ದೀರ್ಘಾಯುಷಿಯಾಗಿರುವಂತೆಯೂ ಆಶೀರ್ವದಿಸಿದನು.   ಆ ಕ್ಷಣದಲ್ಲಿ ಒಬ್ಬ ಪುರೋಹಿತನಾಗಿ ಭಗವಾನ್ ರಾಮನನ್ನು ಆಶೀರ್ವದಿಸಲು ತಾನು ಕರ್ತವ್ಯದಿಂದ ಬಂಧಿತನಾಗಿರುವುದಾಗಿ ರಾವಣನು ಹೇಳಿದನು.  ಒಬ್ಬನು ಒಬ್ಬ ಪುರೋಹಿತನಲ್ಲಿ ಆಶೀರ್ವದಿಸಲು ಕೇಳಿಕೊಂಡಾಗ, ಅದನ್ನು ನೀಡಲು ಅವನು ಬದ್ಧನಾಗಿರುತ್ತಾನೆ.
ಪುರೋಹಿತನು ಯಜಮಾನ(ಯಾರಿಗಾಗಿ ಪೂಜೆಯನ್ನು ಮಾಡಲಾಗುವುದೋ ಅವರು)ನಿಗಾಗಿ ಪೂಜೆಯ ಸಾಮಗ್ರಿಗಳ ವ್ಯವಸ್ಥೆ ಮಾಡಬೇಕೆಂಬುದು ಒಂದು ಸಂಪ್ರದಾಯ ಕೂಡಾ ಆಗಿದೆ. ಭಗವಾನ್ ರಾಮನ ಪತ್ನಿಯು ಪೂಜೆಗೆ ಲಭ್ಯವಿಲ್ಲದಿದ್ದುದರಿಂದ, ಭಗವಾನ್ ರಾಮನ ಪತ್ನಿಯಾದ ಸೀತೆಯನ್ನು ಪೂಜೆಗಾಗಿ ಆತನ ಬಳಿಗೆ ಕರೆದುತರುವ ವ್ಯವಸ್ಥೆಯನ್ನು ರಾವಣನು ಮಾಡಿದನು. ಇಲ್ಲಿ ನಿಮ್ಮಲ್ಲಿ ಎಷ್ಟು ಮಂದಿ ಈ ಕಥೆಯನ್ನು ಕೇಳಿರಲಿಲ್ಲ?
ಭಗವಾನ್ ಶಿವನನ್ನು ಪ್ರಾರ್ಥಿಸದೆ ಅವನಿಗೆ ಯುದ್ಧದಲ್ಲಿ ಗೆಲ್ಲಲು ಸಾಧ್ಯವಿಲ್ಲವೆಂಬುದಾಗಿ ಅಗಸ್ತ್ಯ ಋಷಿಯು ಭಗವಾನ್ ರಾಮನಿಗೆ ಸಲಹೆ ನೀಡಿದ್ದನು. ಅದಕ್ಕಾಗಿ ಅವನು ಭಗವಾನ್ ಶಿವನ ಮೂರ್ತಿಯನ್ನು (ಶಿವಲಿಂಗ) ರಾಮೇಶ್ವರಂನಲ್ಲಿ ಪ್ರತಿಷ್ಠಾಪಿಸಬೇಕಾಗಿತ್ತು. ಆದುದರಿಂದ ಭಗವಾನ್ ರಾಮನು ಇದಕ್ಕಾಗಿ ವ್ಯವಸ್ಥೆಗಳನ್ನು ಮಾಡಿದನು. ತಾನು ಕಾಶಿ(ವಾರಣಾಸಿ)ಯಿಂದ ಶಿವಲಿಂಗವನ್ನು ತರುವುದಾಗಿ ಭಗವಾನ್ ಹನುಮಂತನು ಹೇಳಿದನು. ಮುಹೂರ್ತಕ್ಕಾಗಿ, ಭಗವಾನ್ ಹನುಮಂತನು ಮರಳಿ ಬರುವ ಮೊದಲು ಒಬ್ಬ ಪುರೋಹಿತನು ಬೇಕಾಗಿತ್ತು. ಆ ಸಮಯದಲ್ಲಿ ರಾವಣನಿಗಿಂತ ಶ್ರೇಷ್ಠನಾದ ಶಿವ ಭಕ್ತ ಮತ್ತು ಪುರೋಹಿತನು ಬೇರೆ ಯಾರೂ ಇರಲಿಲ್ಲವೆಂದು ನಂಬಲಾಗಿತ್ತು.
ನೀವು ರಾಮೇಶ್ವರಂನ ಚಿತ್ರವನ್ನು ನೋಡಿದ್ದೀರಾ? ಆ ಚಿತ್ರದಲ್ಲಿ ರಾವಣನಿದ್ದಾನೆ, ವಿಭೀಷಣ (ಯುದ್ಧದ ಮೊದಲು ರಾಮನ ಸೈನ್ಯಕ್ಕೆ ತೆರಳಿದ, ರಾವಣನ ತಮ್ಮ) ಕೂಡಾ ಇದ್ದಾನೆ. ಚಿತ್ರಗಳನ್ನು ಆ ಸ್ಥಳದಲ್ಲಿ ಮಾರುತ್ತಾರೆ. ಪ್ರಾಣಪ್ರತಿಷ್ಠೆಯ ಬಳಿಕ ಭಗವಾನ್ ರಾಮನು ಪುರೋಹಿತನ ಅಂದರೆ ರಾವಣನ ಆಶೀರ್ವಾದವನ್ನು ಕೋರಿದಾಗ, ಅವನು ’ವಿಜಯೀಭವ’  (ನೀನು ವಿಜಯಿಯಾಗು!) ಎಂದು ಅವನನ್ನು ಆಶೀರ್ವದಿಸಿದನು. ಪೂಜೆಯು ಮುಗಿದ ಬಳಿಕ, ಭಗವಾನ್ ಹನುಮಂತನು ಮರಳಿ ಬಂದನು ಮತ್ತು ತಾನು ಕಾಶಿಯಿಂದ ಶಿವಲಿಂಗವನ್ನು ತಂದರೂ ಪೂಜೆಯು ಅದಾಗಲೇ ಮುಗಿದಿರುವುದನ್ನು ನೋಡಿ ಬೇಸರಗೊಂಡನು. ಆದುದರಿಂದ ನಂತರ ಭಗವಾನ್ ರಾಮನು ಭಗವಾನ್ ಹನುಮಂತನನ್ನು ಶಾಂತಗೊಳಿಸಲು, ಅವನು ತಂದ ಶಿವಲಿಂಗವನ್ನು ಕೂಡಾ ಪ್ರತಿಷ್ಠಾಪಿಸಿದನು. ಆದುದರಿಂದ ಅಲ್ಲಿ ಎರಡು ಶಿವಲಿಂಗಗಳಿವೆ - ಒಂದು ರಾಮೇಶ್ವರಂ ಮತ್ತು ಇನ್ನೊಂದು ಹನುಮತದ್ ಲಿಂಗಂ ಎಂದು ಕರೆಯಲ್ಪಡುತ್ತದೆ. ಇದು ಕಥೆ.
ಆದುದರಿಂದ ನೀವು ಪ್ರತಿಯೊಬ್ಬರಿಂದಲೂ ಕೇವಲ ಒಳ್ಳೆಯ ಗುಣಗಳನ್ನು ಮಾತ್ರ ಹೀರಬೇಕು ಮತ್ತು ತೆಗೆದುಕೊಳ್ಳಬೇಕು. ನೀವು ಕೇವಲ ದೋಷಗಳನ್ನು ಮಾತ್ರ ಹುಡುಕುತ್ತಿದ್ದರೆ, ಆಗ ನಿಮಗೆ ಕೇವಲ ದೋಷಗಳೇ ಕಾಣಸಿಗುತ್ತವೆ. ನಿಮಗೆ ಭಗವಾನ್ ರಾಮನಲ್ಲಿ ತಪ್ಪುಗಳು ಕಂಡುಬರಬಹುದು ಮತ್ತು ಭಗವಾನ್ ಕೃಷ್ಣನಲ್ಲಿ ಅದಕ್ಕಿಂತಲೂ ಹೆಚ್ಚು ತಪ್ಪುಗಳು ಕಂಡುಬರಬಹುದು. ಅದಕ್ಕಾಗಿಯೇ ಜೈನರು ಭಗವಾನ್ ಕೃಷ್ಣನನ್ನು ನರಕದಲ್ಲಿರಿಸಿದ್ದಾರೆ. ಅವನು ಅಲ್ಲಿ ಎಂದೆಂದಿಗೂ ಇರಲಾರನೆಂದು, ಮುಂದಿನ ಸಲ ಅವನು ಮೊದಲನೆಯ ತೀರ್ಥಂಕರನಾಗುವನೆಂದು,. ಅವನು ಅಷ್ಟೊಂದು ಶ್ರೇಷ್ಠ ಆತ್ಮಜ್ಞಾನಿಯಾಗಿರುವನು ಎಂದು ಅವರು ಹೇಳುತ್ತಾರೆ.
ನಮ್ಮ ಸಂಸ್ಕೃತಿಯು ಬಹಳ ಅನನ್ಯವಾಗಿದೆ. ಒಬ್ಬನು ಚಪಲ ಮತ್ತು ತಿರಸ್ಕಾರಗಳ ನಕಾರಾತ್ಮಕತೆಗಳಲ್ಲಿ ಸಿಕ್ಕಿಬೀಳಬಾರದು. ಅವುಗಳಿಂದ ಪಾರಾಗಿ ಸತ್ಯಕ್ಕಾಗಿ ಹುಡುಕಿ.

ಪ್ರಶ್ನೆ: ಗುರುದೇವ, ನಾವು ಧ್ಯಾನ ಮಾಡುವಾಗ ನಮ್ಮ ಸುತ್ತಲಿರುವ ಜನರ ಮೇಲೆ ಒಂದು ಸಕಾರಾತ್ಮಕ ಪ್ರಭಾವವಿರುತ್ತದೆ. ನಮ್ಮ ಪೂರ್ವಜರು ಮತ್ತು ಮುಂಬರುವ ಪೀಳಿಗೆಯವರು ಕೂಡಾ ಧ್ಯಾನದಿಂದ ಲಾಭಪಡೆಯುತ್ತಾರೆಯೇ? ಇದನ್ನು ಅರಿಯುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಹೌದು, ನಾವು ಧ್ಯಾನ ಮಾಡುವಾಗ, ಅದು ಎಲ್ಲರ ಮೇಲೂ ಪ್ರಭಾವ ಬೀರುತ್ತದೆ. ಈಗ ಜೀವಿಸುತ್ತಿರುವವರನ್ನು ಧ್ಯಾನ ಮಾಡುವಂತೆ ಪ್ರೋತ್ಸಾಹಿಸಿ. ಕೇವಲ ಕರ್ಮಕಾಂಡದಲ್ಲಿ (ಶಾಸ್ತ್ರ ಮತ್ತು ಆರಾಧನೆ) ತೊಡಗಿದರೆ ಸಾಕಾಗುವುದಿಲ್ಲ. ನೀವು ಧ್ಯಾನ ಮಾಡುವಾಗ, ಮಡಿದು ಹಾದುಹೋದವರು ಬಹಳ ಪ್ರಸನ್ನರಾಗುತ್ತಾರೆ.

ಪ್ರಶ್ನೆ: ಬುದ್ಧಿವಂತಿಕೆ ಮತ್ತು ಮುಗ್ಧತೆಗಳ ನಡುವೆ ಸಂತುಲನವಿರಿಸುವುದು ಹೇಗೆ? ನಾವು ನಮ್ಮ ಮುಗ್ಧತೆಯನ್ನು ಕಳೆದುಕೊಳ್ಳುತ್ತಿರುತ್ತೇವೆ.
ಶ್ರೀ ಶ್ರೀ ರವಿ ಶಂಕರ್: ಇಲ್ಲ, ಇಲ್ಲ, ನೀವು ನಿಮ್ಮ ಮುಗ್ಧತೆಯನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ, ಅದು ನಿಮ್ಮ ಸ್ವಭಾವದಲ್ಲಿದೆ. ನೀವದನ್ನು ಕಳೆದುಕೊಂಡಿರುವಿರೆಂದು ತೋರಿದರೆ, ಅದಕ್ಕೆ ಮರಳಿ ಬನ್ನಿ. ಅದು ಒಂದು ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ನಿಮಗೆ ಅದರ ಅರಿವಾದ ಕ್ಷಣದಲ್ಲಿಯೇ ನೀವು ಮರಳಿರುತ್ತೀರಿ. ಮುಗ್ಧತೆಯು ಯಾವತ್ತೂ ವರ್ತಮಾನದ ಕ್ಷಣದಲ್ಲಿರುತ್ತದೆ. ನಾವು ವರ್ತಮಾನದ ಕ್ಷಣದಲ್ಲಿ ಮುಗ್ಧರಾಗಿರುತ್ತೇವೆ.

ಪ್ರಶ್ನೆ: ಜೈನ ಧರ್ಮದಲ್ಲಿ, ಯಜ್ಞಗಳನ್ನು ಆಚರಿಸಬಾರದು ಯಾಕೆಂದರೆ ಬೆಂಕಿಯು ಜೀವಿಗಳನ್ನು ಕೊಲ್ಲುತ್ತದೆ ಎಂದು ಹೇಳಲಾಗಿದೆ. ನಾನು ಇಲ್ಲಿನ ಯಜ್ಞಗಳಲ್ಲಿ ಪಾಲ್ಗೊಂಡಿದ್ದೇನೆ ಮತ್ತು ಅವುಗಳು ಬಹಳ ಚೆನ್ನಾಗಿದ್ದವು; ಶಬ್ದಗಳನ್ನೂ ಮೀರಿ. ಜೈನರ ಧರ್ಮಗ್ರಂಥಗಳಲ್ಲಿ ಹೇಳಿರುವುದನ್ನು ನಾನು ಅರ್ಥ ಮಾಡಿಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಜೈನ ಧರ್ಮದ ಮುಖ್ಯ ಸಾರವೆಂದರೆ ಧ್ಯಾನ. ಎರಡನೆಯದು ಅಹಿಂಸೆ. ಅವುಗಳೆರಡೂ ಜೊತೆಯಲ್ಲಿ ಸಾಗುತ್ತವೆ - ಅಹಿಂಸೆ ಮತ್ತು ಧ್ಯಾನ.
ಧರ್ಮಗಳು ಬೇರೆ ಬೇರೆ ಕಾಲಗಳಲ್ಲಿ ಮತ್ತು ಬೇರೆ ಬೇರೆ ಜಾಗಗಳಲ್ಲಿ ಅರಳಿದವು. ಸಮಯ ಮತ್ತು ಜಾಗಕ್ಕನುಗುಣವಾಗಿ ಜ್ಞಾನವನ್ನು ನೀಡಲಾಯಿತು. ಉದಾಹರಣೆಗೆ, ಮರುಭೂಮಿಯಲ್ಲಿ ಯಾವುದೇ ಮರಗಳಿರಲಿಲ್ಲ. ಬೆಂಕಿಯನ್ನು ಮಾಡಲು ಏನೂ ಇರಲಿಲ್ಲ ಮತ್ತು ಎಲ್ಲಿ ಸಾಕಷ್ಟು ಮರವಿರಲಿಲ್ಲವೋ, ಆ ಜಾಗದಲ್ಲಿ ಈ ಸಂಪ್ರದಾಯವು (ಯಜ್ಞಗಳನ್ನು ಮಾಡದಿರುವುದು) ಆ ಸಮಯದಲ್ಲಿ ಒಗ್ಗಿತು.
ಜೈನ ಧರ್ಮದಲ್ಲಿ, ನೀರನ್ನು ಕುಡಿಯುವ ಮೊದಲು ನೀವದನ್ನು ಒಂದು ಬಟ್ಟೆಯಿಂದ ಸೋಸಬೇಕು ಎಂದು ಹೇಳಲಾಗಿದೆ. ಇದೊಂದು ಪರಿಪೂರ್ಣ ವಿಜ್ಞಾನ. ಆದರೆ ಇವತ್ತು ಜನರೇನು ಮಾಡುತ್ತಾರೆ? ಅವರು ನಲ್ಲಿಯ ಬಾಯಿಯ ಸುತ್ತಲೂ ಒಂದು ಬಟ್ಟೆಯನ್ನು ಕಟ್ಟುತ್ತಾರೆ (ನೀರನ್ನು ಸೋಸಲು). ನನಗೆ ನೆನಪಿದೆ, ಒಮ್ಮೆ ಸೂರತ್ತಿನಲ್ಲಿ ನಾನೊಂದು ಜೈನ ಕುಟುಂಬದೊಂದಿಗೆ ಉಳಕೊಂಡಿದ್ದೆ. ಅವರು ಮನೆಯಲ್ಲಿದ್ದ ಎಲ್ಲಾ ನಲ್ಲಿಗಳಿಗೂ ಬಟ್ಟೆ ಕಟ್ಟಿದ್ದರು. ನೊಣಗಳು ಮತ್ತು ಧೂಳು ಬಟ್ಟೆಯ ಮೇಲೆ ಬರಬಹುದು ಮತ್ತು ನೀವು ನಲ್ಲಿಯನ್ನು ತೆರೆದಾಗ, ನೀರು ಆ ಎಲ್ಲಾ ಧೂಳು ಮತ್ತು ಕೊಳೆಯೊಂದಿಗೆ ಬರುತ್ತದೆ. ಉದ್ದೇಶವು (ಬಟ್ಟೆ ಕಟ್ಟುವ) ಬೇರೆಯದಾಗಿತ್ತು, ಆದರೆ ನಾವು ಧರ್ಮಗ್ರಂಥವನ್ನು ಬೇರೊಂದು ರೀತಿಯಲ್ಲಿ ಅರ್ಥ ಮಾಡಿಕೊಂಡೆವು ಮತ್ತು ಕುಡಿಯಲಿದ್ದ ಒಳ್ಳೆಯ ನೀರು ಇನ್ನೂ ಹೆಚ್ಚು ಕಲುಷಿತವಾಗುವಂತೆ ಮಾಡಿದೆವು. ಆದುದರಿಂದ ಕೆಲವೊಮ್ಮೆ ನಾವು ಅಹಿಂಸೆಯನ್ನು ಬಹಳಷ್ಟು ಎಳೆಯುತ್ತೇವೆ. ಅದೇ ರೀತಿಯಲ್ಲಿ, ಜನರು ಯಜ್ಞವನ್ನು ಬಹಳವಾಗಿ ಎಳೆದಿದ್ದಾರೆ. ಅವರು ಬಹಳಷ್ಟು ಖರ್ಚು ಮಾಡುತ್ತಾರೆ ಮತ್ತು ಅಗತ್ಯವಿಲ್ಲದಿರುವ ಹಲವಾರು ವಸ್ತುಗಳನ್ನು ಸುಡುತ್ತಾರೆ. ಪ್ರತಿಯೊಂದು ಸಂಪ್ರದಾಯದಲ್ಲೂ ಮೆಚ್ಚಲು ಯೋಗ್ಯವಾದ, ಅಮೂಲ್ಯವಾದ ಕೆಲವು ವಿಷಯಗಳಿವೆ.
ಜೈನ ಧರ್ಮದಲ್ಲಿ ಕೂಡಾ ಕೇವಲ ಒಂದು ಸಂಪ್ರದಾಯ ಮಾತ್ರವಿರುವುದಲ್ಲ. ಒಂದು ನಿರ್ದಿಷ್ಟ ಜೈನ ಸಂಪ್ರದಾಯದಲ್ಲಿ ಅವರೊಂದು ಹವನವನ್ನು ಮಾಡುತ್ತಾರೆ. ಹವನವು ಕೆಲವು ಜೈನ ಸಂಪ್ರದಾಯಗಳ ಒಂದು ಭಾಗವೂ ಆಗಿದೆ. ಬೌದ್ಧ ಧರ್ಮದಲ್ಲಿ ಕೂಡಾ.
ಜೈನ ಧರ್ಮದಲ್ಲಿ ಕೆಲವು ವ್ಯತ್ಯಾಸಗಳಿವೆ, ಉದಾಹರಣೆಗೆ ಸ್ಥಾನಕವಸಿ (ಆತ್ಮವು ನಿರಾಕಾರವಾದುದು ಎಂದು ನಂಬುವ ಹಾಗೂ ಈ ಕಾರಣಕ್ಕಾಗಿ ಮೂರ್ತಿ ಪೂಜೆಯನ್ನು ಮಾಡದಿರುವ, ಜೈನರ ಒಂದು ಒಳಪಂಗಡ), ತೇರಾಪಂಥಿ, ದೇರಾವಸಿ ಅಥವಾ ಮೂರ್ತಿಪೂಜಕ್ (ಮೂರ್ತಿ ಪೂಜೆಯನ್ನು ಮಾಡುವ ಜೈನರ ಒಂದು ಒಳಪಂಗಡ) ಮೊದಲಾದವು.
ಕೆಲವು ಜನರು ಆಕಾರವನ್ನು ಪೂಜಿಸುತ್ತಾರೆ, ಕೆಲವರು ಪೂಜಿಸುವುದಿಲ್ಲ. ಹೀಗೆ ಹಲವಾರು ವಿವಿಧ ಕಲ್ಪನೆಗಳಿವೆ, ಇಲ್ಲವೇ? ಕೆಲವು ನಿರ್ದಿಷ್ಟ ಜೈನ ಸಂಪ್ರದಾಯಗಳಲ್ಲಿ, ಅವರು ಯಾವುದೇ ಮೂರ್ತಿಗಳನ್ನಿಡುವುದಿಲ್ಲ ಮತ್ತು ಬೇರೆ ಜೈನ ಸಂಪ್ರದಾಯಗಳಲ್ಲಿ; ಉದಾಹರಣೆಗೆ ದಿಗಂಬರ, ಶ್ವೇತಾಂಬರ, ಸ್ಥಾನಕವಸಿ ಮೊದಲಾದವುಗಳಲ್ಲಿ ಅವರ ಸಂಪ್ರದಾಯ ಮತ್ತು ಪೂಜಾ ಶಾಸ್ತ್ರಗಳು ಬೇರೆಯಾಗಿವೆ.
ಆದರೆ ಮುಖ್ಯ ಸಾರವು ಧ್ಯಾನವಾಗಿದೆ. ಯಜ್ಞಗಳನ್ನು ಮಾಡುವುದು ಒಂದು ಸೂಕ್ಷ್ಮ ಕಂಪನವನ್ನು, ಒಂದು ಸೂಕ್ಷ್ಮ ಶಕ್ತಿಯನ್ನು ಸೃಷ್ಟಿಸುವುದಕ್ಕಾಗಿ. ಅದಕ್ಕೆ ಅದರದ್ದೇ ಆದ ಮೌಲ್ಯವಿದೆ. ಕೆಲವು ಜೈನ ಸಂಪ್ರದಾಯಗಳಲ್ಲಿ, ನಿಮ್ಮ ಬಾಯಿಗೆ ಒಂದು ಕವಚವಿಲ್ಲದೆ ನೀವು ಮಾತನಾಡಲೂ ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ಅದು ಪ್ರಾಯೋಗಿಕವಲ್ಲ. ಪ್ರಪಂಚದಲ್ಲಿರುವ ಜನರೆಲ್ಲರೂ ಬಾಯಿಯ ಮೇಲೆ ಒಂದು ಕವಚ ಹಾಕಿಕೊಂಡರೆ ಹೇಗಿರುತ್ತದೆಯೆಂದು ಸುಮ್ಮನೇ ಊಹಿಸಿ.
ಜೈನರ ಕೆಲವು ಒಳಪಂಗಡಗಳ ಜನರು ವಿದ್ಯುಚ್ಛಕ್ತಿಯನ್ನು ಉಪಯೋಗಿಸುವುದೇ ಇಲ್ಲ. ಮೈಕಾಗಲೀ ಅಥವಾ ಬಲ್ಬಾಗಲೀ ಅಥವಾ ಏನನ್ನೂ ಇಲ್ಲ. ನಾನು ಹೇಳುವುದೆಂದರೆ ಇದು, ಭಗವಾನ್ ಮಹಾವೀರನು ಹೇಳಿರುವುದನ್ನು ಅತಿಯಾಗಿ ಎಳೆಯುವುದೆಂದು. ನಾವು, ತೀರ್ಥಂಕರರು (ಆತ್ಮ ಸಾಕ್ಷಾತ್ಕಾರ ಹೊಂದಿದವರು) ಹೇಳಿರುವುದರ ನಿಜವಾದ ಅರ್ಥವನ್ನು ಮೀರಿ ಹೋಗುತ್ತಿದ್ದೇವೆ.
ಇವುಗಳು ಸುಧಾರಣೆ ಹೊಂದಬೇಕಾಗಿರುವಂತಹ ವಿಷಯಗಳು. ಕೆಲವು ಜೈನ ಮುನಿಗಳು ಈಗಾಗಲೇ ಸುಧಾರಣೆ ಮಾಡಲು ಪ್ರಾರಂಭಿಸಿರುವುದು ಬಹಳ ಒಳ್ಳೆಯ ವಿಷಯ. ಅವರು ಕಾರುಗಳು ಮತ್ತು ವಿಮಾನಗಳಲ್ಲಿ ಹೋಗಲು ಪ್ರಾರಂಭಿಸಿದ್ದಾರೆ. ಪ್ರಾಚೀನ ದಿನಗಳಲ್ಲಿ, ನೀವು ಯಾವುದೇ ವಾಹನಗಳನ್ನು ಉಪಯೋಗಿಸಬಾರದೆಂದು ಹೇಳಲಾಗುತಿತ್ತು ಯಾಕೆಂದರೆ ವಾಹನಗಳನ್ನು ಪ್ರಾಣಿಗಳಿಂದ ನಡೆಸಲಾಗುತಿತ್ತು. ಅದು ಪ್ರಾಣಿಗೆ ಹಿಂಸೆ ನೀಡಿದಂತೆ. ಅದು ಬಹಳ ಸರಿಯಾದುದು. ಆದರೆ ಇವತ್ತು ವಾಹನಗಳನ್ನು ಪ್ರಾಣಿಗಳಿಂದ ನಡೆಸಲಾಗುವುದಿಲ್ಲ, ಅವುಗಳನ್ನು ಪೆಟ್ರೋಲಿನಿಂದ ನಡೆಸಲಾಗುತ್ತದೆ. ಸಂಪ್ರದಾಯಗಳಲ್ಲಿ ನಾವು ಅಷ್ಟು ವಿವೇಕವನ್ನು ಉಪಯೋಗಿಸಬೇಕು.