ಶುಕ್ರವಾರ, ಅಕ್ಟೋಬರ್ 5, 2012

ಭಕ್ತಿಯ ಬಣ್ಣಗಳು


೫ ಅಕ್ಟೋಬರ್, ೨೦೧೨ 
ಬೆಂಗಳೂರು ಆಶ್ರಮ, ಭಾರತ
1581ನಿಯತ್ತು ಎಂಬುದು ಒಬ್ಬ ವ್ಯಕ್ತಿಯ ಸ್ವಭಾವದಲ್ಲಿರುವ ಒಂದು ಗುಣ. ಒಬ್ಬ ವ್ಯಕ್ತಿಯು ನಿಯತ್ತಿನವನಾಗಿದ್ದರೆ, ಆತನು ಮನೆಯಲ್ಲಿ ನಿಯತ್ತಿನವನಾಗಿರುತ್ತಾನೆ ಮತ್ತು ಕೆಲಸದಲ್ಲಿಯೂ ಕೂಡಾ ನಿಯತ್ತಿನವನಾಗಿರುತ್ತಾನೆ. ಒಬ್ಬ ಗಂಡನಾಗಿಯಾದರೂ ಅಥವಾ ಒಬ್ಬಳು ಹೆಂಡತಿಯಾಗಿಯಾದರೂ, ಅವರು ತಮ್ಮ ಸಂಗಾತಿಯ ಕಡೆಗೆ ನಿಯತ್ತಿನಲ್ಲಿರುತ್ತಾರೆ. ಅವರೆಲ್ಲೇ ಹೋದರೂ, ನಿಯತ್ತು ಅವರ ನಡತೆಯಲ್ಲಿ ಸ್ವಾಭಾವಿಕವಾಗಿ ಪ್ರಕಾಶಿಸುತ್ತದೆ.
ಇದುವೇ ಭಕ್ತಿಗೂ ಅನ್ವಯಿಸುತ್ತದೆ. ದೇವರ ಒಬ್ಬ ಭಕ್ತನು ದೇಶಕ್ಕೆ ಮತ್ತು ಸೃಷ್ಟಿಯ ಕಡೆಗೆ ಕೂಡಾ ಭಕ್ತಿಯಲ್ಲಿರುತ್ತಾನೆ. ಅವರ ಪ್ರೀತಿ ಮತ್ತು ಭಕ್ತಿಯು, ಜೀವನದ ಎಲ್ಲಾ ವಲಯದಲ್ಲಿಯೂ ಪ್ರತಿಫಲಿಸುತ್ತದೆ.
ದೇವರ ಒಬ್ಬ ಭಕ್ತನು ಹೇಗೆ ದೇಶಭಕ್ತನಾಗಿರಬಲ್ಲನು ಎಂದು ಜನರು ಹೆಚ್ಚಾಗಿ ಪ್ರಶ್ನಿಸುತ್ತಾರೆ. ನಾನು ಹೇಳುತ್ತೇನೆ, ಖಂಡಿತವಾಗಿ ಒಬ್ಬನು ಅದಾಗಿರಬಲ್ಲನು. ಒಬ್ಬನು ತನ್ನ ದೇಶದ ಮೇಲೆ ಭಕ್ತಿಯನ್ನು ಹೊಂದಿದ್ದರೆ, ಅದರರ್ಥ ಅವರು ಇನ್ನೊಂದು ದೇಶದ ಅಥವಾ ಇತರ ದೇಶಗಳ ಶತ್ರುಗಳೆಂದಲ್ಲ. ನಾವು ದೇಶಭಕ್ತಿಯನ್ನು ಬಹಳ ಸಂಕುಚಿತ ದೃಷ್ಟಿಕೋನದಿಂದ ಅರ್ಥೈಸಿಕೊಂಡಿದ್ದೇವೆ.
ಸಾಧಾರಣವಾಗಿ, ನಾವು ನಮ್ಮ ದೇಶಭಕ್ತಿಯನ್ನು ಹೇಗೆ ವ್ಯಕ್ತಪಡಿಸುತ್ತೇವೆ?  ಇನ್ನೊಂದು ದೇಶವನ್ನು ವಿರೋಧಿಸುವುದರ ಮೂಲಕ ಅಥವಾ ಅದರೊಂದಿಗೆ ಶತ್ರುತ್ವವನ್ನು ಹೊಂದಿರುವುದರ ಮೂಲಕ ನಾವು ನಮ್ಮದೇ ದೇಶದ ಬಗ್ಗೆ ನಮಗಿರುವ ದೇಶಭಕ್ತಿಯನ್ನು ವ್ಯಕ್ತಪಡಿಸುತ್ತೇವೆ. ಭಾರತವನ್ನು ಬ್ರಿಟಿಷರು ಆಳುತ್ತಿದ್ದ ದಿನಗಳಲ್ಲಿ, ನೀವು ಬ್ರಿಟಿಷರ ವಿರುದ್ಧ ಎದ್ದು ನಿಂತರೆ ನಿಮ್ಮನ್ನು ದೇಶಭಕ್ತರೆಂದು ಪರಿಗಣಿಸಲಾಗುತ್ತಿತ್ತು. ಈ ದಿನಗಳಲ್ಲಿ, ನೀವು ಪಾಕಿಸ್ತಾನದ ವಿರುದ್ಧವಾಗಿ ಮಾತನಾಡಿದರೆ ನಿಮ್ಮನ್ನು ದೇಶಭಕ್ತರೆಂದು ಪರಿಗಣಿಸುತ್ತಾರೆ. ಅದು ಸರಿಯಲ್ಲ. ನಿಮ್ಮ ದೇಶಭಕ್ತಿಯ ಭಾವನೆಗಳು ಇತರ ಯಾವುದೇ ದೇಶವನ್ನು ವಿರೋಧಿಸಬೇಕಾಗಿಲ್ಲ ಅಥವಾ ತುಳಿಯಬೇಕಾಗಿಲ್ಲ.
ನೀವು ಅಮೇರಿಕಾದಲ್ಲಿ ನೋಡಿದರೆ, ತಮ್ಮನ್ನು ತಾವೇ ದೇಶಭಕ್ತರೆಂದು ಕರೆದುಕೊಳ್ಳುವವರು ಕೇವಲ ತಮ್ಮ ದೇಶದ ಕಡೆಗೆ ಮಾತ್ರ ಭಕ್ತಿಯನ್ನು ಹೊಂದಿದ ದೇಶಭಕ್ತರು. ಅವರು ಬೇರೆ ಯಾವುದೇ ದೇಶದ ಕಡೆಗೂ ವಿರೋಧವಾಗಿಲ್ಲ.
ಆದುದರಿಂದ, ಒಬ್ಬ ದೇಶಭಕ್ತ, ಅಥವಾ ತನ್ನ ಸ್ವಂತ ದೇಶದ ಬಗ್ಗೆ ಭಕ್ತಿಯಿರುವ ಒಬ್ಬನು, ಸಂಪೂರ್ಣ ಪ್ರಪಂಚದ ಬಗ್ಗೆಯೂ; ಸಂಪೂರ್ಣ ಸೃಷ್ಟಿಯ ಬಗ್ಗೆಯೂ ಭಕ್ತಿಯಿಂದಿರುತ್ತಾನೆ.
ವಿಶ್ವಾತ್ಮನ ಭಕ್ತರಾಗಿರುವವರು, ದೇವರ ಕಡೆಗಿರುವ ತಮ್ಮ ಭಕ್ತಿ ಮತ್ತು ತಮ್ಮ ದೇಶದ ಮೇಲೆ ತಮಗಿರುವ ಭಕ್ತಿಯ ನಡುವೆ ಯಾವುದೇ ಸಂಘರ್ಷವನ್ನು ಅನುಭವಿಸುವುದಿಲ್ಲ. ನೋಡಿ, ನೀವು ನಿಮ್ಮ ಸ್ವಂತ ಕುಟುಂಬವನ್ನು ನೋಡಿಕೊಳ್ಳುವಾಗ ಮತ್ತು ಅವರ ಪಾಲನೆ ಮಾಡುವಾಗ, ಅದರರ್ಥ ನೀವು ನಿಮ್ಮ ಸುತ್ತಲಿರುವ ಇತರ ಜನರ ಶತ್ರುವೆಂದಲ್ಲ. ನೀವು ನಿಮ್ಮ ಸುತ್ತಲಿರುವ ಇತರ ಜನರ ಬಗ್ಗೆಯೂ ಕಾಳಜಿ ವಹಿಸುತ್ತೀರಿ ಮತ್ತು ನೀವು ನಿಮ್ಮ ಸ್ವಂತ ಕುಟುಂಬದವರನ್ನು ಪ್ರೀತಿಸುವಂತೆ ಅವರನ್ನು ಪ್ರೀತಿಸುತ್ತೀರಿ, ಅಲ್ಲವೇ? ಒಬ್ಬಳು ತಾಯಿಯು ತನ್ನ ಸ್ವಂತ ಮಕ್ಕಳನ್ನು ಬಹಳ ಪ್ರೀತಿಸುವುದಾದರೆ, ಅವಳಿಗೆ ಸುತ್ತುಮುತ್ತಲಿನ ಇತರ ಮಕ್ಕಳ ಮೇಲೂ ಪ್ರೀತಿಯಿರಲು ಸಾಧ್ಯವಿದೆ. ತನ್ನ ಸ್ವಂತ ಮಕ್ಕಳ ಮೇಲೆ ಅವಳಿಗೆ ವಾತ್ಸಲ್ಯವಿದ್ದರೆ, ಇತರ ಮಕ್ಕಳ ಮೇಲೆ ಕೂಡಾ ಅವಳಿಗೆ ವಾತ್ಸಲ್ಯವಿರಲು ಸಾಧ್ಯವಿಲ್ಲವೆಂದಲ್ಲ. ಆಗ ಅದು ಪ್ರೀತಿಯಲ್ಲ; ಅದು ಭಕ್ತಿಯಲ್ಲ.
ಭಕ್ತಿಯೆಂದರೆ ಹೇಗಿರುತ್ತದೆಯೆಂದರೆ, ಅದು ಎಲ್ಲಿಯೇ ಇರಲಿ, ತನ್ನ ಸುವಾಸನೆಯನ್ನು ಸುತ್ತಲೆಲ್ಲಾ ಹರಡುತ್ತದೆ; ಒಂದು ಹೂವಿನಂತೆ.
ನೋಡಿ, ನೀವು ಈ ಹೂವನ್ನು ತೆಗೆದುಕೊಂಡರೆ, ನೀವು ಅದನ್ನು ಎಲ್ಲಿಯೇ ಇರಿಸಿ, ಅದು ತನ್ನ ಸುವಾಸನೆಯನ್ನು ಎಲ್ಲೆಡೆಯೂ ಹರಡುತ್ತದೆ. ನೀವೊಂದು ಮಲ್ಲಿಗೆ ಹೂವನ್ನು ಅಡುಗೆಮನೆಯಲ್ಲಿರಿಸಿ, ಅಥವಾ ನಿಮ್ಮ ಬಚ್ಚಲುಮನೆಯಲ್ಲಿರಿಸಿ, ಅದು ತನ್ನ ಸುವಾಸನೆಯನ್ನು ಹೊರಸೂಸುತ್ತದೆ. ಒಂದು ಹೂ, ನಾನು ಸುವಾಸನೆಯನ್ನು ಇಲ್ಲಿ ಹರಡುತ್ತೇನೆ, ಆದರೆ ಅಲ್ಲಲ್ಲ ಎಂದು ಹೇಳುತ್ತಾ ಭೇದ ತೋರದು.
ಅದೇ ರೀತಿಯಲ್ಲಿ, ನೀವು ನಿಮ್ಮ ಭಕ್ತಿಯನ್ನು ಎಲ್ಲೇ ಇರಿಸಿದರೂ ಅಥವಾ ಪ್ರವರ್ತಿಸಿದರೂ, ಅದು ಅಲ್ಲಿ ಹರಡುತ್ತದೆ. ಅದು ಫಲ ನೀಡುತ್ತದೆ ಮತ್ತು ಹೆಚ್ಚು ಹೆಚ್ಚು ಅರಳುತ್ತದೆ.
ಆದುದರಿಂದ ನಿಮಗೆ ನಿಮ್ಮ ಕೆಲಸದ ಕಡೆಗೆ ಕೂಡಾ ಭಕ್ತಿ ಮತ್ತು ಸಮರ್ಪಣಾ ಭಾವವಿರಲು ಸಾಧ್ಯವಿದೆ.
ಹೆಸರುವಾಸಿಯಾದ ಕನ್ನಡದ ಸಂತರೊಬ್ಬರು ಒಮ್ಮೆ ಹೇಳಿದರು, ’ಕಾಯಕವೇ ಕೈಲಾಸ’, ಅದರರ್ಥ, ತನ್ನ ಕರ್ಮವನ್ನು ಚೆನ್ನಾಗಿ ಮಾಡುವವನೊಬ್ಬನು ಕೈಲಾಸ (ಪರಮಾನಂದದ ವಾಸಸ್ಥಾನ)ವನ್ನು ಪಡೆಯುತ್ತಾನೆ. ಇದನ್ನು ಸಂಸ್ಕೃತದ ಹಲವಾರು ಧರ್ಮಗ್ರಂಥಗಳಲ್ಲಿ ಕೂಡಾ ಹೇಳಲಾಗಿದೆ.
ಆದುದರಿಂದ, ನಿಜವಾದ ಪೂಜೆಯೆಂದರೆ ಸಮಾಜದ ಸೇವೆ. ಪೂಜೆ ಮತ್ತು ಸೇವೆಯ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಯಾಕೆ? ಯಾಕೆಂದರೆ ಎರಡರ ಅಡಿಪಾಯ ಅಥವಾ ಮೂಲವು ಭಕ್ತಿಯಾಗಿದೆ ಮತ್ತು ಕೊನೆಯ ಫಲಿತಾಂಶವೂ ಭಕ್ತಿಯಾಗಿದೆ.
ಇದುವೇ ಅಹಂಕಾರಕ್ಕೆ ಕೂಡಾ ಅನ್ವಯಿಸುತ್ತದೆ. ನೀವು ನಿಮ್ಮ ಅಹಂಕಾರವನ್ನು ಎಲ್ಲೆಲ್ಲಾ ನಿರ್ದೇಶಿಸುವಿರೋ ಅದೇ ವಿಷಯದೊಂದಿಗೆ ಅದು ಜೋಡಿಕೊಳ್ಳುತ್ತದೆ. ಅದು ಅದೇ ವಸ್ತುವಿನ ರೂಪವನ್ನು ಪಡೆದುಕೊಳ್ಳುತ್ತದೆ. ನೀವು ನಿಮ್ಮ ಅಹಂಕಾರವನ್ನು ಬ್ರಹ್ಮನ ಕಡೆಗೆ ತಿರುಗಿಸಿದರೆ, ನೀವು ಅಹಂ ಬ್ರಹ್ಮಾಸ್ಮಿಯ ಸ್ಥಿತಿಯನ್ನು ಗಳಿಸುವಿರಿ. (’ಅಹಂ’ ಎಂದರೆ ’ನಾನು’, ಚಿಕ್ಕದಾದ, ಸೀಮಿತವಾದ ಅಹಂಕಾರವನ್ನು ವೈಯಕ್ತಿಕವಾಗಿಸುವುದು ಮತ್ತು ’ಬ್ರಹ್ಮಾಸ್ಮಿ’ ಎಂದರೆ ’ಬ್ರಹ್ಮನಾಗಿರುವೆನು’. ಹೀಗೆ ಒಂದು ಆತ್ಮವನ್ನು, ಸೃಷ್ಟಿಯ ಎಲ್ಲೆಡೆಯೂ ವ್ಯಾಪಿಸಿರುವ ಬ್ರಹ್ಮನೊಂದಿಗೆ ಗುರುತಿಸಿಕೊಳ್ಳುವುದರಿಂದ ಅಹಂಕಾರವು ಕರಗುತ್ತದೆ).
ನೀವು ನಿಮ್ಮ ಅಹಂಕಾರವನ್ನು ಚಿಕ್ಕ ಮತ್ತು ಕ್ಷುಲ್ಲಕ ವಿಷಯಗಳಿಗೆ ಜೋಡಿಸಿದಾಗ, ಅದು ತನ್ನನ್ನು ಈ ಚಿಕ್ಕ ವಿಷಯಗಳೊಂದಿಗೆ ಗುರುತಿಸಿಕೊಳ್ಳುತ್ತದೆ ಮತ್ತು ಆ ವಸ್ತುಗಳಂತೆಯೇ ಸಂಕುಚಿತ ಹಾಗೂ ಸೀಮಿತವಾಗುತ್ತದೆ. ಅದು ನಿಮಗೆ ’ನಾನು ಏನೋ ಆಗಿದ್ದೇನೆ’; ’ನಾನೊಬ್ಬ ಮಂತ್ರಿ’; ಅಥವಾ ’ನಾನೊಬ್ಬ ಪಾಪಿ’; ಅಥವಾ ’ನಾನೊಬ್ಬ ಬಹಳ ಪವಿತ್ರ ಆತ್ಮ’; ’ನಾನು ಬುದ್ಧಿವಂತ’; ’ನಾನು ಮೂರ್ಖ’, ಮೊದಲಾದ ಒಂದು ಭಾವನೆಯನ್ನು ನೀಡುತ್ತದೆ. ನೀವು ನಿಮ್ಮ ಅಹಂಕಾರವನ್ನು ಯಾವುದರ ಕಡೆಗೆಲ್ಲಾ ತಿರುಗಿಸುವಿರೋ ಅಥವಾ ಜೋಡಿಸುವಿರೋ, ಅದುವೇ ಹೇರಳವಾಗಿ ಬೆಳೆಯುವುದು ಮತ್ತು ಫಲಗಳನ್ನು ನೀಡುವುದು.
ಆದುದರಿಂದ, ಹೇಗೆ ಅಹಂಕಾರವು ಹೇರಳವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆಯೋ, ಅದೇ ರೀತಿಯಲ್ಲಿ ಭಕ್ತಿ ಕೂಡಾ ಹೇರಳವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ.
ಇದನ್ನು ಯೋಗ ವಿದ್ಯೆಯಲ್ಲಿ ಕೂಡಾ ಹೇಳಲಾಗಿದೆ. ’ತಸ್ಯ ಭೂಮೀಷು ವಿನಿಯೋಗಃ’ ಎಂದು ಹೇಳಲಾಗಿದೆ. (ವಿಭೂತಿ ಪಾದ #೬, ಪತಂಜಲಿ ಯೋಗ ಸೂತ್ರಗಳು)
ಯೋಗದ ನಿಯಮಿತವಾದ ಅಭ್ಯಾಸದಿಂದ ಒಬ್ಬನು ಪಡೆಯುವ ಯೋಗ-ಸಿದ್ಧಿಗಳು (ಯೋಗದ ಫಲವಾಗಿ ಲಭಿಸಿದ ಅಸಾಮಾನ್ಯ ಪವಾಡಸದೃಶ ಸಾಮರ್ಥ್ಯಗಳು), ಮತ್ತು ಉತ್ತುಂಗಕ್ಕೇರಿದ ಜಾಗೃತಿ ಅಥವಾ ಪ್ರಜ್ಞೆಯನ್ನು, ಭೂಮಿ ಮತ್ತು ಸಮಾಜಕ್ಕೆ ಪ್ರಯೋಜನಕಾರಿಯಾಗುವಂತಹ ವಿವಿಧ ಚಟುವಟಿಕೆಗಳ ಕಡೆಗೆ ಹರಿಸಬೇಕು.

ಪ್ರಶ್ನೆ: ಪ್ರೀತಿಯ ಗುರೂಜಿ, ವೇದ ಗ್ರಂಥಗಳ ಪ್ರಕಾರ, ಆಕಾಶಗಂಗೆ, ವಿಶ್ವ ಮೊದಲಾದವುಗಳನ್ನು ಒಳಗೊಂಡಂತೆ ಸಂಪೂರ್ಣ ಪ್ರಪಂಚವು ಒಂದು ಮಾಯೆಯಾಗಿದೆ. ನನಗೆ ಇದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನೀವು ಇದರ ಬಗ್ಗೆ ಹೆಚ್ಚು ವಿವರಿಸಬಲ್ಲಿರಾ?
ಶ್ರೀ ಶ್ರೀ ರವಿಶಂಕರ್: ಹೌದು, ಅದು ಸ್ಪಷ್ಟವಾಗಿದೆ. ನೀನು ಕ್ವಾಂಟಮ್ ಫಿಸಿಕ್ಸನ್ನು ಓದಿದರೆ, ಅದು ಅದೇ ವಿಷಯವನ್ನು ಹೇಳುತ್ತದೆ. ವಸ್ತುಗಳ ಹೆಸರು ಮತ್ತು ಆಕಾರಗಳು ನಿಜವಲ್ಲ. ನಿಜವೇನೆಂದರೆ, ಅವುಗಳೆಲ್ಲಾ ಒಂದು ತರಂಗ ಕ್ರಿಯೆಯ ಭಾಗವಾಗಿವೆ. ಎಲ್ಲವೂ ಒಂದು ಶಕ್ತಿಯಿಂದ ಮಾಡಲ್ಪಟ್ಟಿವೆ. ಇದನ್ನೇ ವೇದಾಂತವು ಯಾವತ್ತೂ ಹೇಳಿದುದು.
ಮಾಯೆ ಎಂದರೇನು? ’ಅದು ಅಸ್ತಿತ್ವದಲ್ಲಿಲ್ಲ’ ಎಂದಲ್ಲ, ಅದರರ್ಥ ಅದು ಬದಲಾಗುತ್ತದೆ ಎಂದು. ಇಲ್ಲಿರುವ ಪ್ರತಿಯೊಂದು ವಸ್ತುವೂ ಬದಲಾಗುತ್ತದೆ ಮತ್ತು ಬದಲಾಗುವುದೆಲ್ಲವೂ ಮಾಯೆ ಎಂದು ಕರೆಯಲ್ಪಡುತ್ತದೆ. ಅಳತೆ ಮಾಡಲು ಸಾಧ್ಯವಿರುವಂತಹದ್ದೆಲ್ಲಾ ಮಾಯೆ ಎಂದು ಕರೆಯಲ್ಪಡುತ್ತದೆ. ಮಾಯೆಯನ್ನು ಭ್ರಮೆಯೆಂದು ಅನುವಾದಿಸುವುದು ತಪ್ಪು.
ನಮ್ಮ ಕಾಲದ ಶ್ರೇಷ್ಠ ಪ್ರಾಧ್ಯಾಪಕರಲ್ಲೊಬ್ಬರಾದ ಡಾ.ಹಾನ್ಸ್-ಪೀಟರ್ ಡರ್ರ್ ಅವರು ಕೆಲವು ವರ್ಷಗಳ ಹಿಂದೆ ಇಲ್ಲಿ ಆಶ್ರಮದಲ್ಲಿದ್ದರು. ಅವರು ಏನು ಹೇಳಿದರೆಂದು ನಿಮಗೆ ಗೊತ್ತೇ? ಅವರಂದರು, "ಗುರೂಜಿ, ನಾನು ವಸ್ತುವಿನ ಬಗ್ಗೆ ೩೫ ವರ್ಷಗಳ ಕಾಲ ಅಧ್ಯಯನ ಮಾಡಿದೆ. ತಿಳಿದುದೇನೆಂದರೆ, ಅದು ಅಸ್ತಿತ್ವದಲ್ಲಿಯೇ ಇಲ್ಲವೆಂಬುದು. ಅಸ್ತಿತ್ವದಲ್ಲಿರುವುದೇನೆಂದರೆ ಕೇವಲ ಶಕ್ತಿ." ಅವರು, "ನಾನು ಮಾತನಾಡುವಾಗ, ನಾನು ಯಾವುದೋ ಪೌರಾತ್ಯ ತತ್ವಜ್ಞಾನದ ಬಗ್ಗೆ ಮಾತನಾಡುತ್ತಿರುವಂತೆ ತೋರುತ್ತದೆ" ಎಂದು ಕೂಡಾ ಹೇಳಿದರು.
ಆಧುನಿಕ ವಿಜ್ಞಾನಿಗಳು ಇವತ್ತು ಏನನ್ನು ಹೇಳುತ್ತಿರುವರೋ ಅದನ್ನು, ಪೌರಾತ್ಯ ತತ್ವಜ್ಞಾನವು ಸಾವಿರಾರು ವರ್ಷಗಳ ಮೊದಲೇ ಹೇಳಿದೆ. ಆದುದರಿಂದ, ಯಾವುದು ತೋರುತ್ತದೋ  ಅದು ಅದಲ್ಲ. ಈ ಫ್ಲಾಸ್ಕ್ ಒಂದು ಘನ ವಸ್ತುವಿನಂತೆ ತೋರುತ್ತದೆ, ಆದರೆ ಒಬ್ಬ ಭೌತವಿಜ್ಞಾನಿಯು, "ಇಲ್ಲ, ಇದು ಕೇವಲ ಪರಮಾಣುಗಳು" ಎಂದು ಹೇಳಬಹುದು. ಇನ್ನೂ ಮುಂದಕ್ಕೆ ಹೋಗಿ ಆತನು, "ಇದೆಲ್ಲಾ ಕೇವಲ ಶಕ್ತಿ" ಎಂದು ಹೇಳಬಹುದು.
ಪ್ರತಿಯೊಂದು ವಸ್ತುವಿನ ಒಳಗೆ ವಿಶಾಲವಾದ ಜಾಗವಿದೆ. ನಾವು ಗ್ರಹಿಸುವ ರೀತಿ; ಅಂದರೆ ನಮ್ಮ ಗ್ರಹಿಕೆಯು ವಾಸ್ತವವಲ್ಲ. ನಾವು ಗ್ರಹಿಸುವುದು ಇಂದ್ರಿಯಗಳ ಮೂಲಕ, ಮತ್ತು ವಾಸ್ತವಿಕತೆಯನ್ನು ನಿರ್ಣಯಿಸಲು ವಿಜ್ಞಾನಿಗಳು ಈ ಗ್ರಹಿಕೆಯನ್ನು ಮೀರಿ ಹೋಗುತ್ತಾರೆ.
ನೋಡಿ, ಒಂದು ಪರಮಾಣುವು ಬರಿಗಣ್ಣಿಗೆ ಕಾಣಿಸುವುದಿಲ್ಲ. ನಿಮಗೆ ಒಂದು ಪರಮಾಣುವನ್ನು ನೋಡಲು ಸಾಧ್ಯವಿಲ್ಲ ಮತ್ತು ನಿಮಗೆ ಶಕ್ತಿಯನ್ನು ನೋಡಲು ಸಾಧ್ಯವಿಲ್ಲ, ಆದರೆ ಅದಲ್ಲಿದೆಯೆಂಬುದು ನಿಮಗೆ ತಿಳಿದಿದೆ. ಆದುದರಿಂದ ಸಂಪೂರ್ಣ ಪ್ರಪಂಚವು ಅಸ್ತಿತ್ವದಲ್ಲಿಲ್ಲ ಎಂದರೆ, ಕೇವಲ ಎಚ್ಚೆತ್ತುಕೊಳ್ಳಿ ಮತ್ತು ನೋಡಿ, ಹಿಂದೆ ಆಗಿಹೋದುದೆಲ್ಲಾ, ಈಗ ಅದು ಅಸ್ತಿತ್ವದಲ್ಲಿದೆಯೇ? ಇಲ್ಲ! ಅದಿರುವುದು ಕೇವಲ ಒಂದು ನೆನಪಾಗಿ ಮಾತ್ರ.
ಕಾಲದ ಪ್ರವಾಹದಲ್ಲಿ, ಘಟನೆಗಳು ವಿಲೀನವಾಗುತ್ತಿವೆ, ಆದುದರಿಂದ ಘಟನೆಗಳು ಅಸ್ತಿತ್ವದಲ್ಲಿಲ್ಲ.  ಈಗ ಯಾವುದು ಅಸ್ತಿತ್ವದಲ್ಲಿದೆ, ಮಾರನೇ ಕ್ಷಣದಲ್ಲಿ, ಅದು ಅದಾಗಲೇ ಹೋಗಿರುತ್ತದೆ. ನದಿಯಲ್ಲಿ ಪ್ರತಿಕ್ಷಣವೂ ತಾಜಾ ನೀರಿರುವಂತೆ. ಅದೇ ರೀತಿಯಲ್ಲಿ, ಪ್ರಕೃತಿಯು ಯಾವಾಗಲೂ ಬದಲಾಗುತ್ತಿರುತ್ತದೆ, ಮತ್ತು ಯಾವುದು ಬದಲಾಗುವುದೋ, ಅದು ಮಾಯೆಯೆಂದು ಕರೆಯಲ್ಪಡುತ್ತದೆ. ಯಾವುದನ್ನು ಅಳೆಯಲು ಸಾಧ್ಯವಿದೆಯೋ, ಅದು ಮಾಯೆಯೆಂದು ಕರೆಯಲ್ಪಡುತ್ತದೆ.
ಆದುದರಿಂದ, ಒಂದು ಪ್ರವಾಹವಾಗಿ, ಅದೆಲ್ಲವೂ ಅಸ್ತಿತ್ವದಲ್ಲಿದೆ, ಆದರೆ ಒಂದು ವಾಸ್ತವಿಕತೆಯಾಗಿಯಲ್ಲ.
ಸಂಪೂರ್ಣ ಪ್ರಪಂಚವು ಹೆಸರು ಮತ್ತು ರೂಪವಾಗಿದೆ. ಹೆಸರಾಗಲೀ ರೂಪವಾಗಲೀ ಶಾಶ್ವತವಲ್ಲ - ಇದು ಇರುವ ಸಂದೇಶ. ಹೆಸರುಗಳು ಬೇರೆ ಬೇರೆಯಾಗಿರಬಹುದು. ನೀವು ಏನೋ ಒಂದನ್ನು ಇಲ್ಲಿ ಒಂದು ಹೆಸರಿನಿಂದ ಕರೆಯುತ್ತೀರಿ ಮತ್ತು ಅದನ್ನೇ ನೀವು ಬೇರೆ ಯಾವುದೋ ದೇಶದಲ್ಲಿ ಇನ್ನೊಂದು ಹೆಸರಿನಿಂದ ಕರೆಯುತ್ತೀರಿ. ಮತ್ತೊಂದು ದೇಶದಲ್ಲಿ, ಅದು ಯಾವುದೋ ಬೇರೆ ಹೆಸರಿನಿಂದ ಕರೆಯಲ್ಪಡುತ್ತದೆ. ಆದುದರಿಂದ ಹೆಸರುಗಳು ಶಾಶ್ವತವಾದುದಲ್ಲ, ಅದಿರುವುದು ಅನುಕೂಲಕ್ಕಾಗಿ. ಅದೇ ರೀತಿಯಲ್ಲಿ ರೂಪಗಳು ಕೂಡಾ.

ಪ್ರಶ್ನೆ: ಪ್ರೀತಿಯ ಗುರೂಜಿ, ’ಸತ್ಯವು ಬಹು ಆಯಾಮವುಳ್ಳದ್ದು’ ಎಂಬುದರ ಅರ್ಥವೇನು?
ಶ್ರೀ ಶ್ರೀ ರವಿಶಂಕರ್: ಹೌದು, ಅದುವೇ ಅದನ್ನು ಹೇಳುತ್ತದೆ.
ನೋಡು, ಈ ಜಾಗಕ್ಕೆ ಬರಲು, ಒಬ್ಬರು ಹೇಳಬಹುದು, "ಹೋಗಬೇಕಾದ ದಾರಿಯೆಂದರೆ, ನೇರವಾಗಿ ಹೋಗಿ ಎಡಕ್ಕೆ ತಿರುಗುವುದು."
ಅದು ಸರಿಯೆಂದು ನಾನು ಹೇಳುತ್ತೇನೆ.
ಇನ್ನೊಬ್ಬ ವ್ಯಕ್ತಿಯು ಸೂಚನೆಯನ್ನು ಈ ರೀತಿಯಲ್ಲಿ ಕೊಡಬಹುದು, "ನೇರವಾಗಿ ಹೋಗಿ ಬಲಕ್ಕೆ ತಿರುಗು."
ಅದು ಕೂಡಾ ಸರಿಯೆಂದು ನಾನು ಹೇಳುತ್ತೇನೆ.
ಮೂರನೆಯ ವ್ಯಕ್ತಿಯು ಹೇಳಬಹುದು, "ಕೇವಲ ನೇರವಾಗಿ ಹೋಗು, ಎಡಕ್ಕೆ ಮತ್ತು ಬಲಕ್ಕೆ ತಿರುಗಬೇಡ."
ಅದು ಕೂಡಾ ಸರಿಯೆಂದು ನಾನು ಹೇಳುತ್ತೇನೆ.
ಈಗ ನೀನು ನನ್ನಲ್ಲಿ, "ಒಂದೇ ಒಂದು ಸರಿಯಾದ ದಾರಿಯಿರಲು ಸಾಧ್ಯ. ಸರಿಯಾದ ಮೂರು ದಾರಿಗಳಿರಲು ಸಾಧ್ಯವಿಲ್ಲ" ಎಂದು ಹೇಳಿದರೆ, ನಾನು, "ಸತ್ಯವು ಬಹು ಆಯಾಮವುಳ್ಳದ್ದು" ಎಂದು ಹೇಳುವೆನು.
ಈ ಜಾಗ ಬಹು ಆಯಾಮವುಳ್ಳದ್ದು. ಈ ಜಾಗಕ್ಕೆ ಬರಲು, ಹಲವಾರು ಸೂಚನೆಗಳು, ಹಲವಾರು ದಾರಿಗಳು ಇರಬಹುದು ಮತ್ತು ಅವುಗಳೆಲ್ಲಾ ಸರಿ.

ಪ್ರಶ್ನೆ: ಈ ಸೃಷ್ಟಿಯ ಉದ್ದೇಶವೇನು?
ಶ್ರೀ ಶ್ರೀ ರವಿಶಂಕರ್: ಯಾವುದಾದರೂ ಕ್ರೀಡೆಯ ಉದ್ದೇಶವೇನು?
(ಉತ್ತರ: ಗೆಲ್ಲುವುದು ಅಥವಾ ಮನೋರಂಜನೆ )
ಹೌದು, ಕೇವಲ ಮನೋರಂಜನೆ ಅಥವಾ ವಿನೋದ, ಅಲ್ಲವೇ! ಅದೇ ರೀತಿಯಲ್ಲಿ!
ಅದು ಕೇವಲ, ಆರಂಭದಲ್ಲಿ ಬ್ರಹ್ಮನು ಒಬ್ಬನಾಗಿದ್ದನು ಮತ್ತು ಅವನಿಗೆ ಸ್ವಲ್ಪ ಬೇಜಾರಾಯಿತು. ಆದುದರಿಂದ ಅವನಂದನು, "ನಾನು ಹಲವರಾಗೋಣ." ಈ ಯೋಚನೆಯು ಒಂದು ಪ್ರಜ್ಞೆಗೆ ಬಂದ ಕೂಡಲೇ, ಅವನು ತನ್ನನ್ನು ಹಲವರಾಗಿ ಹೆಚ್ಚಿಸಿಕೊಂಡನು.
ಒಂದು ಸಾವಿರ ಚಿಕ್ಕ ಕನ್ನಡಿಗಳನ್ನೊಳಗೊಂಡ ಒಂದು ದೊಡ್ಡ ಕನ್ನಡಿಯನ್ನು ನೀವು ನೋಡಿದ್ದೀರಾ? ಒಬ್ಬ ವ್ಯಕ್ತಿಯು ಅಂತಹ ಒಂದು ಕನ್ನಡಿಯ ಮುಂದೆ ನಿಲ್ಲುತ್ತಾನೆ ಮತ್ತು ಅವನಿಗೆ ತನ್ನದೇ ಸಾವಿರ ಆಕೃತಿಗಳು ಒಂದು ಕನ್ನಡಿಯಲ್ಲಿ ಕಾಣಿಸುತ್ತವೆ, ಹಾಗೂ ಆ ಕನ್ನಡಿಗಳಲ್ಲಿ ಪ್ರತಿಯೊಂದೂ ಆ ವ್ಯಕ್ತಿಯನ್ನು ಸಂಪೂರ್ಣವಾಗಿ ಪ್ರತಿಫಲಿಸುತ್ತದೆ. ಎಲ್ಲಾ ಸಾವಿರ ಕನ್ನಡಿಗಳಲ್ಲಿ ನೀವು ನಿಮ್ಮ ಮುಖವನ್ನು ಸಂಪೂರ್ಣವಾಗಿ ಕಾಣಬಹುದು. "ಒಂದು ಕನ್ನಡಿಯು ನಿಮ್ಮ ಚಿತ್ರವನ್ನು ಸಂಪೂರ್ಣವಾಗಿ ಹಿಡಿದಿರುವಾಗ, ಅದು ಇನ್ನೊಂದರೊಳಕ್ಕೆ ಹೋಗಲು ಹೇಗೆ ಸಾಧ್ಯ?" ಎಂದು ಹೇಳಲು ಸಾಧ್ಯವಿಲ್ಲ. ಇಲ್ಲ! ಈ ತರ್ಕವು ಕೆಲಸ ಮಾಡುವುದಿಲ್ಲ, ಸರಿಯಾ?!
ಇದೂ ಅದುವೇ, ಒಬ್ಬ ಪರಮಾತ್ಮನು ತನ್ನನ್ನು ತಾನೇ ಸಾವಿರಾರು ಮತ್ತು ಲಕ್ಷಾಂತರ ಮೂರ್ತಿಗಳಾಗಿ ಮಾಡಿದನು, ಆದರೆ ಸತ್ಯವು ಒಂದು.

ಪ್ರಶ್ನೆ: ಪ್ರೀತಿಯ ಗುರೂಜಿ, ಸಾಧನೆಯನ್ನು ಅಭ್ಯಾಸ ಮಾಡುವುದರ ಹೊರತಾಗಿ, ನಾವು ಪುನಃ ಪುನಃ ಹಿಂತಿರುಗಿ ಬರುವುದಿಲ್ಲವೆಂಬುದನ್ನು ಮತ್ತು ಮೋಕ್ಷ ಪಡೆಯುವೆವು ಎಂಬುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ? 
ಶ್ರೀ ಶ್ರೀ ರವಿಶಂಕರ್: ಸಮಾಧಾನ! ತೃಪ್ತಿ!
ನೀವು ಮಾಡುವುದೆಲ್ಲವನ್ನೂ, ತೃಪ್ತಿಯಿಂದ ಸಂತೋಷವಾಗಿ ಮಾಡಿ. ನೀವು ಇವತ್ತಿನ ಕೆಲಸವನ್ನು ಮಾಡಿದ್ದೀರಿ ಮತ್ತು ಸಮಾಧಾನಗೊಂಡಿದ್ದೀರಿ. ನಾಳೆ ನೀವು ಯಾವ ಕೆಲಸವನ್ನು ಮಾಡುವಿರೋ, ತೃಪ್ತಿಯಿಂದ ಮಾಡಿ.
ಜೀವನದಲ್ಲಿನ ಪ್ರತಿಯೊಂದು ಕ್ಷಣವನ್ನೂ ತೃಪ್ತಿಯಿಂದ ಜೀವಿಸಿ ಮತ್ತು ಅದು ನಿಮಗೆ ಹುಟ್ಟು-ಸಾವಿನ ಚಕ್ರದಿಂದ ಮೋಕ್ಷವನ್ನು ತರುತ್ತದೆ.

ಪ್ರಶ್ನೆ: ಗುರೂಜಿ, ನಾನು ನೀವು ಹೇಳಿರುವ ಅಷ್ಟಾವಕ್ರ ಗೀತೆಯ ಮೇಲಿರುವ ಪುಸ್ತಕವನ್ನು ಓದುತ್ತಿದ್ದೇನೆ. ನಾನು ಓದುವ ಪ್ರತಿಯೊಂದು ಶಬ್ದವೂ ನನಗೆ ಬಹಳ ಸಂತೋಷವನ್ನು ನೀಡುತ್ತದೆ. ಹೀಗಿದ್ದರೂ, ಧರ್ಮ (ಸಾಮಾಜಿಕ ಮತ್ತು ನೈತಿಕ ನ್ಯಾಯಪರತೆಯ ಕಡೆಗೆ ಒಬ್ಬನಿಗಿರುವ ಕರ್ತವ್ಯ), ಅರ್ಥ (ವಸ್ತು ಮತ್ತು ಆರ್ಥಿಕ ಸಮೃದ್ಧಿಯ ಬೆನ್ನಟ್ಟುವಿಕೆ) ಮತ್ತು ಕಾಮ (ಲೈಂಗಿಕ ಸುಖ)ಗಳು ಬಂಧನದ ಕಾರಣಗಳಾಗಿರುವುವು ಎಂದು ನೀವು ಹೇಳಿರುವುದು ನಿಜವಾಗಿಯೂ ಬಹಳ ಸರಿಯಾಗಿದೆ. ಆದರೆ ಈ ಬಂಧನದಿಂದ ನನ್ನನ್ನು ಬಿಡಿಸಿಕೊಳ್ಳಲು ನನಗೆ ಸಾಧ್ಯವಾಗುತ್ತಿಲ್ಲ. ನಾನು ನನ್ನ ಪುರುಷಾರ್ಥವನ್ನು (ಮಾನವ ಜೀವನದ ನಾಲ್ಕು ಉದಾತ್ತ ಅನ್ವೇಷಣೆಗಳು - ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ) ಮಾಡಿದ್ದೇನೆ, ಆದರೆ ಈಗ ಇದು ಕೇವಲ ನಿಮ್ಮ ಆಶೀರ್ವಾದದ ಮೂಲಕ ಮಾತ್ರ ಸಾಧ್ಯವೆಂದು ನನಗನಿಸುತ್ತದೆ.  
ಶ್ರೀ ಶ್ರೀ ರವಿಶಂಕರ್: ನೋಡು, ಅಷ್ಟಾವಕ್ರಗೀತೆಯಲ್ಲಿ, ’ನ ಗ್ರಾಹ್ಯಂ ನ ತ್ಯಾಜ್ಯಂ’ ಎಂದು ಹೇಳಲಾಗಿದೆ. ನೀನು ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿರಲೂಬಾರದು ಮತ್ತು ಅದನ್ನು ಬಿಟ್ಟುಬಿಡಲು ಕಷ್ಟಪಟ್ಟು ಪ್ರಯತ್ನಿಸಲೂಬಾರದು. ಕೇವಲ ಟೊಳ್ಳು ಮತ್ತು ಖಾಲಿಯಾಗು, ಹಾಗೂ ವಿಷಯಗಳನ್ನು ಅವುಗಳಿರುವ ರೀತಿಯಲ್ಲೇ ನೋಡು.
’ಯೆ ದೃಷ್ಟಾ ಲಾಭ ಸಂತುಷ್ಟಂ’ ಎಂದು ಹೇಳಲಾಗಿದೆ. ಅದರರ್ಥ, ನೀನು ಏನನ್ನು ಪಡೆಯುತ್ತೀಯೋ, ಮತ್ತು ನೀನು ಎಷ್ಟು ಪಡೆಯುತ್ತೀಯೋ, ಅದರಲ್ಲಿ ತೃಪ್ತನಾಗು. ಇದೊಂದು ಬಹಳ ಮುಖ್ಯವಾದ ವಿಷಯ - ತೃಪ್ತಿ.
ಒಬ್ಬ ಅನ್ವೇಷಕನಲ್ಲಿ ಎರಡೂ ಇರಬೇಕು, ತೃಪ್ತಿ ಮತ್ತು ಕೆಲಸದಲ್ಲಿ ದಕ್ಷತೆ. ನಾನು ಯಾವಾಗಲೂ ತೃಪ್ತಿಯ ಪರವಾಗಿರುತ್ತೇನೆ. ಆದರೆ ನಾನು ತೃಪ್ತನಾಗಿರುವಾಗ ನನ್ನ ಸುತ್ತಲಿರುವ ಜನರು ಅದನ್ನು ಸಂತೃಪ್ತಿಯಾಗಿ ತಪ್ಪು ತಿಳಿಯುತ್ತಾರೆ. ಆದುದರಿಂದ ಆಗ, ಸಮಯದಿಂದ ಸಮಯಕ್ಕೆ, ಏನಾಗುತ್ತಿದೆಯೋ ಅದರಿಂದ ನಾನು ಸಂಪೂರ್ಣವಾಗಿ ತೃಪ್ತನಾಗಿಲ್ಲದಿರುವಂತೆ ನಾನು ನಟಿಸುತ್ತೇನೆ, ಮತ್ತು ಇದನ್ನು ಅದನ್ನು ಮಾಡುವಲ್ಲಿ ಅವರನ್ನು ತೊಡಗಿಸುತ್ತೇನೆ; ಇದನ್ನು ಅಥವಾ ಅದನ್ನು, ಯಾವುದನ್ನಾದರೂ, ಏನನ್ನಾದರೂ ಸರಿಪಡಿಸುವುದರಲ್ಲಿ. ಇದರ ಹಿಂದಿರುವ ಉದ್ದೇಶವೆಂದರೆ, ನೀವು ಆಲಸಿಗಳು ಮತ್ತು ನಿಷ್ಕ್ರಿಯರಾಗದೇ ಇರುವಂತೆ ನೋಡಿಕೊಳ್ಳುವುದು.
ಆದುದರಿಂದ, ಪ್ರಯತ್ನಶೀಲರಾಗಿರಿ, ಆದರೆ ಅದೇ ವೇಳೆಯಲ್ಲಿ, ನಿಮ್ಮೊಳಗೆ ತೃಪ್ತಿಯ ಒಂದು ಭಾವನೆಯಿರಲಿ. ಇದು ಬಹಳ ಮುಖ್ಯವಾದುದು.
ಸಕ್ರಿಯರಾಗಿರುವ ಮತ್ತು ಎಲ್ಲಾ ಸಮಯದಲ್ಲೂ ಕೆಲಸ ಮಾಡುವ, ಆದರೆ ಏನೂ ತೃಪ್ತಿಯಿಲ್ಲದ ಕೆಲವು ಜನರಿರುತ್ತಾರೆ. ಇನ್ನು ಕೆಲವು ಜನರಿರುತ್ತಾರೆ, ಅವರು ಆಂತರಿಕವಾಗಿ ಬಹಳ ತೃಪ್ತಿಯನ್ನು ಅನುಭವಿಸುತ್ತಾರೆ, ಮತ್ತು ಇದರಿಂದಾಗಿ ಅವರು ಆಲಸಿಗಳಾಗುತ್ತಾರೆ. ಅವರಿಗೆ ಕೆಲಸದ ಬಗ್ಗೆ ನಿಷ್ಠೆ ಇರುವುದಿಲ್ಲ. ಅದು ಸರಿಯಲ್ಲ.
ನಾವೊಂದು ನಡುಮಾರ್ಗವನ್ನು ಬಳಸಬೇಕು. ನಮ್ಮಲ್ಲಿ ಎರಡೂ ಜೊತೆಯಲ್ಲಿರಬೇಕು - ತೃಪ್ತಿಯ ಒಂದು ಭಾವನೆಯ ಜೊತೆಯಲ್ಲಿ ಕಾರ್ಯದಲ್ಲಿ ದಕ್ಷತೆ. ಅದು ನಮ್ಮ ವಿಶೇಷತೆಯಾಗಿರಬೇಕು.
ಕೆಲವೊಮ್ಮೆ ಜನರು ಆಶ್ಚರ್ಯಗೊಳ್ಳುತ್ತಾರೆ, ಗುರೂಜಿ ಯಾಕೆ ಈ ರೀತಿ ವರ್ತಿಸುತ್ತಿದ್ದಾರೆ? ಅವರು ಯಾಕೆ, ’ಇದನ್ನು ಮಾಡು, ಅದನ್ನು ಮಾಡು’ ಮೊದಲಾದವನ್ನು ಹೇಳುತ್ತಿದ್ದಾರೆ. ಅವರು ಯಾಕೆ ತೃಪ್ತರಾಗಿರುವ ಬಗ್ಗೆ ಮತ್ತು ಏನನ್ನೂ ಮಾಡದೆ ಇರುವ ಬಗ್ಗೆ ಮಾತನಾಡುತ್ತಿಲ್ಲ?
ಆದರೆ ನಾನು ಎಲ್ಲದರ ಮೇಲೆಯೂ ಒಂದು ಕಣ್ಣಿಟ್ಟಿರುತ್ತೇನೆ, ಮತ್ತು ಒಬ್ಬರು ಏನೇನೆಲ್ಲಾ ಮಾಡಬೇಕಾಗಿರುತ್ತದೆಯೋ, ಆ ದಿಕ್ಕಿನಲ್ಲಿ ನಾನು ಅವರಿಗೆ ಮಾರ್ಗದರ್ಶನ ನೀಡುತ್ತೇನೆ.
ಯಾರಿಗೆ ಬಹಳ ಚಡಪಡಿಕೆಯಿರುವುದೋ, ಅವರಿಗೆ ನಾನು ಮೌನವಾಗಿರಲು ಮತ್ತು ವಿಶ್ರಾಮ ಮಾಡಲು ಹೇಳುತ್ತೇನೆ. ಯಾರು ಬಹಳ ಮೌನವಾಗಿ ಮತ್ತು ಸಂಕೋಚದವರಾಗಿರುವರೋ ಅವರಲ್ಲಿ ನಾನು, "ಬನ್ನಿ, ಎದ್ದೇಳಿ! ಏನಾದರೂ ಮಾಡಿ. ಇದನ್ನು ಮಾಡಿ, ಅದನ್ನು ಮಾಡಿ! ಓ, ಇಂತಿಂತವರು ಎಷ್ಟು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ನೋಡಿ. ನೀವು ಸುಮ್ಮನೇ ಕುಳಿತಿದ್ದೀರಿ ಮತ್ತು ಏನನ್ನೂ ಮಾಡುತ್ತಿಲ್ಲ" ಎಂದು ಹೇಳುತ್ತೇನೆ. ಈ ರೀತಿಯಲ್ಲಿ, ಅವರು ಕೆಲಸ ಮಾಡುವಂತೆ ನಾನು ಅವರಿಗೆ ಒತ್ತಾಯ ಮಾಡುತ್ತೇನೆ.
ಭಗವದ್ಗೀತೆಯಲ್ಲಿ, ಕೃಷ್ಣ ಪರಮಾತ್ಮನು ಕೂಡಾ ಇದೇ ರೀತಿಯಲ್ಲಿ ಜ್ಞಾನವನ್ನು ನೀಡಿದ್ದಾನೆ. ಕೃಷ್ಣ ಪರಮಾತ್ಮನು ಅರ್ಜುನನಿಗೆ ಹೇಳುತ್ತಾನೆ, "ನೀನು ಯುದ್ಧ ಮಾಡುವುದಿಲ್ಲವೇ? ನೀನು ಏನು ಹೇಳುತ್ತಿರುವೆ? ಜನರು ನಿನ್ನನ್ನು ಗೇಲಿ ಮಾಡುವರು. ಹಲವಾರು ಜನರ ಅವಮಾನಗಳನ್ನು ಸಹಿಸುವುದಕ್ಕಿಂತ ಸಾಯುವುದು ಮೇಲು!"
ಹೀಗೆ ಯುದ್ಧ ಮಾಡಲು ಅರ್ಜುನನನ್ನು ಪ್ರೇರೇಪಿಸಲು ಕೃಷ್ಣ ಪರಮಾತ್ಮನು ಈ ಮಟ್ಟಕ್ಕೆ ಹೋಗುತ್ತಾನೆ. ಅವನು ಅರ್ಜುನನಿಗೆ ಹೇಳುತ್ತಾನೆ, "ಹೇಡಿಯಂತೆ ಬದುಕುವುದರಲ್ಲಿ ಯಾವುದೇ ಬೆಲೆಯಿಲ್ಲ. ಈ ರೀತಿಯಲ್ಲಿ ಜೀವಿಸುವುದಕ್ಕಿಂತ ನೀನು ಸಾಯುವುದು ಒಳ್ಳೆಯದು."
ನಂತರ ಅವನು ಅರ್ಜುನನಿಗೆ ಹೇಳುತ್ತಾನೆ,
’ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ
ಅಹಂ ತ್ವಾಂ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ’
(ಭಗವದ್ಗೀತೆ, ಅಧ್ಯಾಯ ೧೮, ಶ್ಲೋಕ ೬೬)
ಎಲ್ಲಾ ಧರ್ಮಗಳನ್ನು ಪರಿತ್ಯಜಿಸಿ ಬಂದು ನನಗೆ ಶರಣಾಗು. ನಾನು ನಿನ್ನನ್ನು ಮುಕ್ತಗೊಳಿಸುವೆನು ಮತ್ತು ನಿನ್ನನ್ನು ನಿನ್ನ ಎಲ್ಲಾ ಪಾಪಗಳಿಂದ ಬಿಡುಗಡೆಗೊಳಿಸುವೆನು. ನೀನು ನಿನ್ನನ್ನು ನಿನ್ನದೇ ಆದ ಪಾಪಗಳಿಂದ ಬಿಡುಗಡೆಗೊಳಿಸಲು ಸಾಧ್ಯವಿಲ್ಲ. ನಾನು ನಿನ್ನನ್ನು ನಿನ್ನ ಎಲ್ಲಾ ಪಾಪಗಳಿಂದ ಮುಕ್ತಗೊಳಿಸುವೆನು. ಆದುದರಿಂದ ನಿನ್ನ ಪಾಪಗಳ ಬಗ್ಗೆ ಚಿಂತಿಸಬೇಡ, ಅವುಗಳನ್ನೆಲ್ಲಾ ನಾನು ನಿರ್ವಹಿಸುವೆನು. ನೀನು ಸಂತೋಷವಾಗಿರು, ಮತ್ತು ಖಿನ್ನನಾಗಬೇಡ.
ಆದುದರಿಂದ ನೋಡಿ, ಜ್ಞಾನದಲ್ಲಿ ವಿವಿಧ ಹಂತಗಳಿವೆ ಮತ್ತು ಪ್ರತಿಯೊಂದು ಹಂತಕ್ಕೂ ಅದರದ್ದೇ ಆದ ಉದ್ದೇಶವಿದೆ.