ಸೋಮವಾರ, ಅಕ್ಟೋಬರ್ 8, 2012

ಕಾಮ ಮತ್ತು ಆಸೆಗಳನ್ನು ದಾಟಿ ಬೆಳೆಯುವಿಕೆ

೮ ಅಕ್ಟೋಬರ್ ೨೦೧೨
ಬೆಂಗಳೂರು ಆಶ್ರಮ, ಭಾರತ



ಪ್ರಶ್ನೆ: ಆಪ್ತ ಗುರೂಜಿ, ಕೆಲವೊಮ್ಮೆ ನನ್ನ ಸುತ್ತಲಿನ ಜನರ ಅಪೇಕ್ಷೆಗಳು ಮತ್ತು ನನ್ನ ಸ್ವಂತ ಅಪೇಕ್ಷೆಗಳು ನನ್ನನ್ನು ಸಹಜವಾಗಿರಲು ಬಿಡುವುದಿಲ್ಲ. ಸಹಜವಾಗಿರಲು ಏನು ಮಾಡಬೇಕು?
ಶ್ರೀ ಶ್ರೀ ರವಿಶಂಕರ್: ಯಾವತ್ತೂ ಅಲ್ಲ, ಕೆಲವೊಮ್ಮೆಯಷ್ಟೇ ಅಲ್ಲವೇ?
ಅದು ಯಾವತ್ತೂ ಹಾಗಿದ್ದರೆ, ಆಗ ನಿನಗೆ ನಾನೊಂದು ಪರಿಹಾರ ನೀಡುತ್ತೇನೆ. ಕೆಲವೊಮ್ಮೆ ಪರವಾಗಿಲ್ಲ. ನೀವು ವಿವೇಕದಲ್ಲಿ ಹೆಚ್ಚು ಬೆಳೆದಂತೆ, ನೀವು ಈ ಜಗತ್ತಿನ ಸ್ವಪ್ನ(ಮಾಯಾ)-ಗುಣವನ್ನು ನೋಡಿ ಅರಿತುಕೊಳ್ಳುತ್ತಲೇ - ಇಲ್ಲಿ ಎಲ್ಲವೂ ಒಂದು ಸ್ವಪ್ನದಂತೆ, ಎಲ್ಲವೂ ಸಾಗಿ ಹೋಗುತ್ತಿದೆ, ಎಲ್ಲವೂ ಬದಲಾಗುತ್ತಿದೆ; ಆಗ ಘಟನೆಗಳು ನಿಮ್ಮನ್ನು ಕಾಡುವುದು ಕಡಿಮೆಯಾಗುತ್ತಾ ಹೋಗುತ್ತದೆ. ಘಟನೆಗಳಿಂದ ವಿಚಲಿತರಾಗದಿರಲು ಒಂದೇ ಮಾರ್ಗವೆಂದರೆ ಈ ಸಂಪೂರ್ಣ ಸಂಗತಿಯನ್ನು(ಜಗತ್ತನ್ನು) ಒಂದು ದಾಟಿಹೋಗುತ್ತಿರುವ ಸ್ವಪ್ನವಾಗಿ ಕಾಣುವುದು.

ಪ್ರಶ್ನೆ: ಆತ್ಮೀಯ ಗುರೂಜಿ, ಆತ್ಮ-ಶೋಧನೆಗೂ ತನ್ನ ಬಗೆಗಿನೆ ತೀರ್ಪುಗಾರ ಮನೋಭಾವಕ್ಕೂ ಏನು ವ್ಯತ್ಯಾಸ? ನೀವು ಕೆಲವೊಮ್ಮೆ ನಮಗೆ ತೀರ್ಪುಗಾರತನವನ್ನು ಬಿಡಲು ಹೇಳುತ್ತೀರಿ, ದಯವಿಟ್ಟು ಇದನ್ನು ಬಿಡಿಸಿ ವಿವರಿಸಬಹುದೇ?
ಶ್ರೀ ಶ್ರೀ ರವಿಶಂಕರ್: ನೀವು ಮಧ್ಯ-ಮಾರ್ಗವನ್ನು ಅನುಸರಿಸಬೇಕು.
ಕೆಲವರು ತಮ್ಮ ಕೆಲಸಗಳನ್ನು ಯಾವತ್ತೂ ಸಮರ್ಥಿಸುತ್ತಿರುತ್ತಾರೆ, ಮತ್ತೆ ಕೆಲವರು ತಮ್ಮಲ್ಲಿ ಯಾವತ್ತೂ ದೋಷಗಳನ್ನು ಕಾಣುತ್ತಿರುತ್ತಾರೆ. ಈ ಎರಡೂ ಒಂದು ರೀತಿಯ ಅಸಮತೋಲನವನ್ನು ಸೃಷ್ಟಿಸುತ್ತವೆ.
ನೀವು ನಿಮ್ಮ ಕೆಲಸಗಳನ್ನು ಅವಲೋಕಿಸಿ, ಅವುಗಳನ್ನು ಹೇಗೆ ಸುಧಾರಿಸಬಹುದು ಎಂದು ನೋಡಿಕೊಂಡು ಜೊತೆಗೇ ಮುಂದಿನದನ್ನು ನೋಡುವ ಒಂದು ಮಧ್ಯಮಾರ್ಗವನ್ನು ನೀವು ಅನುಸರಿಸಬೇಕು.
ನೀವೇನು ಮಾಡಬೇಕೆಂದಿದ್ದೀರಿ ಎಂಬುದನ್ನು ನೋಡಿಕೊಳ್ಳಿ, ಮುಂದೆ ನಡೆಯಿರಿ ಮತ್ತು ಹಿಂದಿನದನ್ನು ಬಿಟ್ಟುಬಿಡಿ. ಯಾವತ್ತೂ ಭೂತಕಾಲದ ಮರಣೋತ್ತರ ಪರೀಕ್ಷೆ (ಪೋಸ್ಟ್ ಮಾರ್ಟಮ್) ಮಾಡುತ್ತಾ ಹೋಗಬೇಡಿ.
ಭೂತಕಾಲವನ್ನು ನೀವು ಇಷ್ಟೇ ನೋಡಬೇಕು (’ಒಂದು ಚೂರು’ ಎಂಬಂತೆ ತಮ್ಮ ಬೆರಳುಗಳಿಂದ ಸೂಚಿಸುತ್ತಾ).
ನೋಡಿ, ಇದು ಒಂದು ಕಾರಿನಲ್ಲಿ ಮುಂದಿನ ಗಾಜು(ವಿಂಡ್ ಶೀಲ್ಡ್) ದೊಡ್ಡದಾಗಿದ್ದು ಮತ್ತೆ ಹಿಂದಿನ ದೃಶ್ಯ ತೋರಿಸುವ ಕನ್ನಡಿ(ರೇರ್ ವ್ಯೂ ಮಿರರ್) ಚಿಕ್ಕದಾಗಿರುವಂತೆ. ಕಾರಿನ ಹಿಂಭಾಗ ತೋರಿಸುವ ಕನ್ನಡಿ ದೊಡ್ಡದಾಗಿದ್ದು ಮುಂದಿನ ಗಾಜು ಚಿಕ್ಕದಾಗಿದ್ದರೆ ಹೇಗಿರುತ್ತಿತ್ತು ಎಂದು ಕಲ್ಪಿಸಿಕೊಳ್ಳಿ. ಈಗ ನಿಮ್ಮ ಕಾರಿನ ಪರಿಸ್ಥಿತಿ ಅದು. ನಿಮ್ಮ ರೇರ್ ವ್ಯೂ ಮಿರರ್ ಕನಿಷ್ಠ ವಿಂಡ್ ಶೀಲ್ಡಿನ ಅರ್ಧದಷ್ಟು ಮುಚ್ಚುತ್ತದೆ, ಅದರಿಂದ ನೀವು ಹಿಂದೆಯೇ ನೋಡುತ್ತಿರುತ್ತೀರಿ. ಅದು ಸರಿಯಲ್ಲ.
ನೀವು ನಿಮ್ಮ ಹಿಂದನ್ನು(ಭೂತಕಾಲವನ್ನು) ಸ್ವಲ್ಪ ನೋಡಿ, ಮುಂದನ್ನು(ಭವಿಷ್ಯವನ್ನು) ಹೆಚ್ಚು ನೋಡಬೇಕಾಗಿದೆ.
ಇದು ಎಲ್ಲದಕ್ಕಿಂತ ಉತ್ತಮ ಉದಾಹರಣೆ. ನಿಮ್ಮ ಕಾರ್, ಆ ವಿಂಡ್ ಶೀಲ್ಡ್ ಮತ್ತು ರೇರ್ ವ್ಯೂ ಮಿರರ್.ನ ಬಗ್ಗೆ ಯೋಚಿಸಿ. ನಿಮಗೆ ಹಿಂದಿನ ದೃಷ್ಟಿ ಸ್ವಲ್ಪವೆ ಬೇಕಾಗಿರುವುದು.

ಪ್ರಶ್ನೆ: ಗುರೂಜಿ, ನಿರ್ಲಿಪ್ತತೆ ಮತ್ತು ನಿಃಸ್ವಾರ್ಥತೆಯನ್ನು ನಾನು ಬೌದ್ಧಿಕ ಸ್ಥರದಲ್ಲಿ ಅರ್ಥಮಾಡಿಕೊಳ್ಳಬಲ್ಲೆ, ಆದರೆ ನನಗದನ್ನು ಅಭ್ಯಸಿಸುವುದು ಕಷ್ಟವಾಗುತ್ತದೆ. ನಾನೇನು ಮಾಡಬಹುದು?
ಶ್ರೀ ಶ್ರೀ ರವಿಶಂಕರ್: ಜೀವನ ನಿಮಗೆ ಆ ಪಾಠವನ್ನು ಕಲಿಸುತ್ತದೆ.
ನೀವು ಏನನ್ನಾದರೂ ವಿವೇಕವಿಲ್ಲದೆ ತುಂಬಾ ಹಚ್ಚಿಕೊಂಡಿದ್ದಾಗ, ಅದು ನಿಮಗೆ ಹೆಚ್ಚು ನೋವು ತರುತ್ತದೆ.

ಪ್ರಶ್ನೆ: ಪೂಜ್ಯ ಗುರೂಜಿ, ನಮ್ಮಲ್ಲಿ ಕೆಲವರು ಆರ್ಟ್ ಆಫ್ ಲಿವಿಂಗಿಗೆ ಬಹಳ ನಂತರ ಬಂದೆವು, ಆದರೆ ಕೆಲವರು ಸಾಕಷ್ಟು ಬೇಗ ಬಂದಿದ್ದರು. ಇದೂ ನಮ್ಮ ಪ್ರಾರಬ್ಧ ಕರ್ಮಗಳ ಫಲವೇ? ನಾನು ಜೀವನದಲ್ಲಿ ನಿಮ್ಮನ್ನು ಮೊದಲೇ ಭೇಟಿಯಾಗಿದ್ದರೆ ಬಹಳ ಮಾನಸಿಕ ಆಘಾತದಿಂದ ಪಾರಾಗುತ್ತಿದ್ದೆ.
ಶ್ರೀ ಶ್ರೀ ರವಿಶಂಕರ್: ಮತ್ತೊಮ್ಮೆ ನಿಮಗೆ ಹೇಳುತ್ತಿದ್ದೇನೆ- ರೇರ್ ವ್ಯೂ ಮಿರರನ್ನು ತುಂಬಾ ನೋಡಬೇಡಿ.

ಪ್ರಶ್ನೆ: ಪೂಜ್ಯ ಗುರೂಜಿ, ಒಬ್ಬ ಸಾಧಕನಿಗೆ ಏನು ಗುರಿಯಿರಬೇಕು? ಅಥವಾ ಒಬ್ಬ ಸಾಧಕ ಪ್ರಕೃತಿಗೆ ತನ್ನ ಕಾರ್ಯನಿರ್ವಹಿಸಲು ಬಿಟ್ಟು, ತಾನು ಸುಮ್ಮನೆ ಇರಬೇಕೆ?
ಶ್ರೀ ಶ್ರೀ ರವಿಶಂಕರ್: ಹೌದು, ಅಷ್ಟೇ ಮಾಡಬೇಕಾದದ್ದು, ಸುಮ್ಮನೆ ಇರಿ! ನೀವು ಸರಿಯಾದ ಸ್ಥಳದಲ್ಲಿದ್ದೀರಿ, ಸುಮ್ಮನೆ ಇದ್ದು ಮತ್ತೆ ನೋಡಿ ಹೇಗೆ ಎಲ್ಲವೂ ಮುಂದೆ ಸಾಗುತ್ತದೆ ಎಂದು.

ಪ್ರಶ್ನೆ: ಗುರೂಜಿ, ಅತಿ ವ್ಯಾಮೋಹ, ಕಾಮವಾಸನೆ ಮತ್ತು ಆಸೆಯ ಆಲೋಚನೆಗಳನ್ನು ದಾಟಿ ಬೆಳೆಯಲು ಅತ್ಯಂತ ಸರಳವಾದ ಮಾರ್ಗ ಯಾವುದು?
ಶ್ರೀ ಶ್ರೀ ರವಿಶಂಕರ್: ನಿಮ್ಮನ್ನು ಕೆಲಸಗಳಲ್ಲಿ ಮಗ್ನವಾಗಿಟ್ಟುಕೊಳ್ಳಿ.
ನಿಮ್ಮ ಧನಾತ್ಮಕ ದಾಹವನ್ನು ಇನ್ನೂ ದೊಡ್ಡ(ಪ್ರಯೋಜನಕರ) ಉದ್ದೇಶದ ಕಡೆಗೆ ಹಾಕಿ. ಏನನ್ನಾದರೂ ಸೃಷ್ಟಿಸುವ ಅಥವಾ ತಯಾರಿಸುವ ಬಗ್ಗೆ ದಾಹವಿರಲಿ.
ಜ್ಞಾನವನ್ನು ಹರಡುವುದರಲ್ಲಿ ಮತ್ತು ಧರ್ಮವನ್ನು ಹರಡುವುದರಲ್ಲಿ ನಿರತರಾಗಿರಿ. ಹಗಲು ರಾತ್ರಿ ನೀವು ಜನರನ್ನು ಹೇಗೆ ತಲುಪಬಹುದು ಎಂದು ಯೋಚಿಸಿ, ಮತ್ತು ಜೀವನದಲ್ಲಿ ಕೆಲವು ಒಳ್ಳೆಯ ಕೆಲಸಗಳನ್ನು ಮಾಡಿ. ಅಥವಾ ಕೆಲವು ಲೇಖನಗಳನ್ನು ಬರೆಯಿರಿ, ಸಂಗೀತ, ಹಾಡುಗಳನ್ನು ರಚಿಸಿ.
ನೀವು ಅಷ್ಟೊಂದು ಕಾರ್ಯನಿರತರಾಗಿದ್ದಾಗ ಯಾವುದೇ ಗೀಳು (ಚಟ ಅಥವಾ ಅತಿವ್ಯಾಮೋಹ) ನಿಮ್ಮನ್ನು ಕಾಡುವುದಿಲ್ಲವೆಂದು ನಿಮಗೆ ಅನುಭವವಾಗುತ್ತದೆ. ವಿಶೇಷವಾಗಿ ಯುವಕರು ತಮ್ಮನ್ನು ತಾವು ಅತ್ಯಂತ ಕಾರ್ಯಮಗ್ನರನ್ನಾಗಿಟ್ಟುಕೊಳ್ಳಬೇಕು. ಬೆಳಗ್ಗೆ ನೀವು ಎದ್ದಾಗಿನಿಂದ ರಾತ್ರಿಯವರೆಗೆ ನೀವು ನಿಮ್ಮನ್ನು ಬಹಳ ಚಟುವಟಿಕೆಗಳಲ್ಲಿ ಮಗ್ನರನ್ನಾಗಿಟ್ಟುಕೊಂಡರೆ, ಈ ಯಾವುದೂ ನಿಮ್ಮನ್ನು ಕಾಡುವುದಿಲ್ಲ.
ನಾವಿದ್ದದ್ದು ಹಾಗೆಯೇ; ೨೦ರಿಂದ ೨೫ರವರೆಗೆ ನಾನು ಬಹಳ ಕೆಲಸಗಳಲ್ಲಿ ನಿರತನಾಗಿದ್ದೆ. ಬೆಳಗ್ಗೆ ೬ರಿಂದ ರಾತ್ರಿ ೧ ಅಥವಾ ೨ರವರೆಗೆ ನಾನು ಓಡಾಡುತ್ತಲೇ ಇದ್ದೆ.
ಹಾಗಾಗಿ ನಿಮ್ಮನ್ನು ನೀವು ಬಹಳ ಕೆಲಸಗಳಲ್ಲಿ ತೊಡಗಿಸಿಕೊಂಡಿರಿ, ವಿಶೇಷವಾಗಿ ರಕ್ತ ಬಿಸಿಯೇರುವ ವಯಸ್ಸಿನಲ್ಲಿ. ನೀವು ಸುಲಭವಾಗಿಯೇ ಆ ಎಲ್ಲಾ ಗೀಳುಗಳನ್ನು, ಕಾಮವಾಸನೆ ಮತ್ತು ಎಲ್ಲವನ್ನೂ ದಾಟಿ ಸಾಗಬಹುದು ಎಂದು ಪ್ರತ್ಯಕ್ಷವಾಗಿ ನೋಡುತ್ತೀರಿ.

ಪ್ರಶ್ನೆ: ಹದಿ ಹರೆಯದವರನ್ನು ಸಾಮಾಜಿಕ ಕುಡಿತದಿಂದ ಹೇಗೆ ನಿರುತ್ಸಾಹಗೊಳಿಸುವುದು?
ಶ್ರೀ ಶ್ರೀ ರವಿಶಂಕರ್: ಅದು ಅತ್ಯಂತ ಅಪಾಯಕಾರಿ ಎಂದು ಅವರಿಗೆ ಹೇಳಿ, ಅದು ಸಾಮಾಜಿಕ ಕುಡಿತವಾಗಿರಲಿ ಅಥವಾ ಖಾಸಗಿ ಕುಡಿತವಾಗಿರಲಿ - ಅದು ವಿಷಯವಲ್ಲ. ಅದಕ್ಕೆ ಕೇವಲ ’ಇಲ್ಲ’ ಅಂದು ಹೇಳಿ, ಅಷ್ಟೇ, ಅಲ್ಲಿಗೆ ಮುಗಿಯಿತು!
ನಿಜವೆಂದರೆ ನಿಮಗೆ ಸಾಮಾಜಿಕ ಗುಂಪುಗಳಲ್ಲಿ ’ಇಲ್ಲ’ ಎನ್ನಲು ಹೆಮ್ಮೆಯೆನಿಸಬೇಕು.ನಿವು ಇದಕ್ಕೆ ಹೆಮ್ಮೆಯನ್ನು ಜೋಡಿಸಿದರೆ, ’ನಾನೊಬ್ಬ ಮದ್ಯಪರಿತ್ಯಾಗಿ, ನಾನೆಂದೂ ಮದ್ಯವನ್ನು ಮುಟ್ಟುವುದಿಲ್ಲ’, ಆಗ ನೀವು ನಿಮ್ಮ ಸ್ನೇಹಿತರೊಳಗೂ ಒಂದು ಸ್ವಾಭಿಮಾನವನ್ನು ಸಂಪಾದಿಸಿಕೊಳ್ಳುತ್ತೀರಿ.
ನೀವು ನಿಮ್ಮ ಸ್ವಂತ ಮೌಲ್ಯಗಳನ್ನು ಒತ್ತಿಹೇಳಬೇಕು. ಗುಂಪಿನಲ್ಲಿದ್ದಾಗಲೂ, ನಿಮ್ಮ ಸ್ವಂತ ವ್ಯಕ್ತಿತ್ವದೊಂದಿಗೆ ಮತ್ತು ನಿಮ್ಮ ವೈಯಕ್ತಿಕ ಇಷ್ಟ-ಒಪ್ಪಿಗೆಗಳೊಂದಿಗೆ ಮುಂದುವರಿಯಿರಿ.
ನಾವು ಅದನ್ನು ಯಾವತ್ತೂ ಮಾಡುತ್ತೇವೆ. ನಾವು ಈ ಎಲ್ಲಾ ದೊಡ್ಡ ಗೋಷ್ಠಿಗಳಿಗೆ ಹೋಗುತ್ತೇವೆ, ಎಲ್ಲ ಕಡೆಯೂ ನಾವು ನಮ್ಮ ವೈಯಕ್ತಿಕ ಇಷ್ಟ-ಒಪ್ಪಿಗೆಗಳನ್ನು ಇಟ್ಟುಕೊಳ್ಳುತ್ತೇವೆ.
ನಿಮಗೆ ಗೊತ್ತೇ, ಈ ಜಗತ್ತು ಇದನ್ನು ಗುರುತಿಸಲು ಪ್ರಾರಂಭಿಸಿದೆ. ನನಗೆ ಡಾಕ್ಟರೇಟ್ ಪದವಿ ನೀಡಿದ ಯಾವುದೇ ಸಂಸ್ಥೆಯಾಗಿರಲಿ, ಹಲವು ಸ್ಥಳಗಳಲ್ಲಿ, ಮತ್ತು ನಾನೆಲ್ಲೇ ಹೋದರೂ, ಕೇವಲ ನನ್ನನ್ನು ಆದರಿಸಲು ಅವರು ಕೇವಲ ಸಸ್ಯಾಹಾರವನ್ನು ಇಡುತ್ತಾರೆ ಮತ್ತು ಮದ್ಯವಿರುವುದಿಲ್ಲ.
ಸಾಮಾನ್ಯವಾಗಿ ವಿಶ್ವವಿದ್ಯಾನಿಲಯಗಳಲ್ಲಿ ಅವರು ಪೇಯಗಳನ್ನು ಮತ್ತು ಮಾಂಸಾಹಾರವನ್ನು ಇಡುತ್ತಾರೆ. ಆದರೆ ನಾನೆಲ್ಲೇ ಹೋಗಿದ್ದಾಗಲಾದರೂ, ಅದು ಕೊಲರಾಡೋ, ಅಥವಾ ನೆದರ್ಲಾಂಡ್ಸ್, ಅಥವಾ ನೇನ್ರ್ಹೋಡ್ ಯುನಿವರ್ಸಿಟಿ ಆಗಿರಬಹುದು, ಅವರು ನನಗೆ ಡಾಕ್ಟರೇಟ್ ಪದವಿ ನೀಡಿದಾಗ, ಸ್ವಾಗತ ವಿಭಾಗದಲ್ಲಿ ಅವರು ಕೇವಲ ಸಸ್ಯಾಹಾರ ಮತ್ತು ತಂಪು ಪಾನೀಯಗಳನ್ನು ಒದಗಿಸಿದ್ದರು.
ಜಗತ್ತಿನ ಬೃಹತ್ ಅಧಿವೇಶನಗಳಲ್ಲೂ, ಉದಾಹರಣೆಗೆ ಎಚ್.ಐ.ವಿ-ಏಡ್ಸ್ ಮೇಲೆ ಯು.ಎನ್.(ಅಂತಾರಾಷ್ಟ್ರೀಯ ದೇಶಗಳ ಒಕ್ಕೂಟ) ಸಮಾವೇಷ, ಅವರು ಸಸ್ಯಾಹಾರದ ಒಂದು ವಿಭಾಗವನ್ನಿಡಲು ಪ್ರಾರಂಭಿಸಿದ್ದಾರೆ. ಇದು ಹಿಂದೆ ಎಂದೂ ನಡೆಯುತ್ತಿರಲಿಲ್ಲ.
ವರ್ಲ್ಡ್ ಇಕಾನಮಿಕ್ ಫ಼ೋರಮ್ (ಅಂತಾರಾಷ್ಟ್ರೀಯ ವಾಣಿಜ್ಯ ವೇದಿಕೆ)ನಲ್ಲೂ ನೀವು ಸಸ್ಯಾಹಾರಿಯಾಗಿದ್ದರೆ ಅವರು ಅದನ್ನು ಆದರಿಸುತ್ತಾರೆ ಮತ್ತು ಮಾಂಸಾಹಾರಕ್ಕೆ ಪ್ರತ್ಯೇಕ ವಿಭಾಗವಿದೆ.
ಇದು ಮೊದಲು ಇರಲಿಲ್ಲ. ಸುಮಾರು ೧೦ರಿಂದ ೨೦ ವರ್ಷಗಳ ಹಿಂದೆ ಇದನ್ನು ಯೋಚಿಸಲೂ ಸಾಧ್ಯವಿರಲಿಲ್ಲ. ೧೦ ವರ್ಷಗಳ ಹಿಂದೆಯೂ ನೀವು ಇದನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಡೆಯುತ್ತಿರಲಿಲ್ಲ. ಆದರೆ ಅದು ಈಗ ಬದಲಾಗಿದೆ ಮತ್ತು ಇದಕ್ಕೆ ಕಾರಣ ನಾವು ಯಾವತ್ತೂ ಮದ್ಯ ಮತ್ತು ಮಾಂಸಾಹಾರವನ್ನು ಸ್ವೀಕರಿಸುವುದಿಲ್ಲವೆಂದು ನಮ್ಮ ಸ್ಥಾನವನ್ನು ಸಾಧಿಸಿ ನಿಂತಿದ್ದೇವೆ, ಮತ್ತು ಈ ಜಗತ್ತು ಅದನ್ನು ಗೌರವಿಸುತ್ತದೆ. ಹಾಗಾಗಿ ನಿಮ್ಮ ಸ್ನೇಹಿತರೂ ಅದನ್ನು ಗೌರವಿಸುತ್ತಾರೆ.
ವಿಮಾನ ಯಾನಗಳಲ್ಲೂ ಅವರು ಇದನ್ನು ಹಿಂದಿನ ೧೦ ವರ್ಷಗಳಲ್ಲಿ ಪ್ರಾರಂಭಿಸಿದ್ದಾರೆ. ಹಿಂದೆ ಅದು ಹಾಗಿರಲಿಲ್ಲ. ಈಗ, ಜೈನರ ಆಹಾರವೂ ಅಂದರೆ ಆಲೂಗಡ್ಡೆ, ಗಜ್ಜರಿ (ಕ್ಯಾರೆಟ್) ಗಳಿಲ್ಲದ ಆಹಾರವೂ ವಿಮಾನಗಳಲ್ಲಿ ಲಭ್ಯ, ನಿಮಗೆ ಎಂಥ ಆಹಾರ ಬೇಕು ಎಂದು ನೀವು ನಿರ್ದಿಷ್ಟವಾಗಿ ಹೇಳಬಹುದು.
ಹಾಗಾಗಿ, ನೀವು ನಿಮ್ಮ ವೈಯಕ್ತಿಕ ಅಭ್ಯಾಸಗಳನ್ನು ಇಟ್ಟುಕೊಂಡು ಅದನ್ನು ಒತ್ತಿಹೇಳಬೇಕು. ಇಲ್ಲವಾದರೆ ಮೊದಲು ನೀವು ಸಾಮಾಜಿಕ ಕುಡಿತವನ್ನು ಪ್ರಾರಂಭಿಸಿ, ನಂತರ ನಿಧಾನವಾಗಿ ಅದು ವೈಯಕ್ತಿಕ ಚಟವಾಗಿ ಹಾನಿಕಾರಕವಾಗುತ್ತದೆ.

ಪ್ರಶ್ನೆ: ಭಗವಾನ್ ನಾರಾಯಣನ ಸೇವಕರಾದ ಜಯ ಮತ್ತು ವಿಜಯರು ಭಗವಂತನ ಸೇವೆ ಮಾಡುತ್ತಿದ್ದರು, ಆದರೂ ಅವರು ಶಾಪಗ್ರಸ್ಥರಾದರು. ಒಬ್ಬರು ಕೇವಲ ಸೇವೆ ಮಾಡುತ್ತಿದ್ದರೆ, ಆಗಲೂ ಅವರು ಶಾಪಕ್ಕೆ ಅರ್ಹರೇ?
ಶ್ರೀ ಶ್ರೀ ರವಿಶಂಕರ್: ಆ ಶಾಪಗಳ ಹಿಂದೆ ಅಡಗಿದ್ದದ್ದು ಮನುಷ್ಯತ್ವದ ಅತ್ಯಂತ ಶ್ರೇಷ್ಠವಾದ ಒಳಿತು. ಒಬ್ಬ ಸಾಧುವಿನ ಶಾಪದಿಂದಾಗಿ ಎಂದೂ ಯಾವುದೇ ಹಾನಿ ಅಥವಾ ನಷ್ಟವಾಗಿಲ್ಲ. ಸಾಧುಗಳ ಈ ಶಾಪಗಳಿಂದಲೇ ಈ ಜಗತ್ತು ಇಷ್ಟೊಂದು ಸದುಪಯೋಗ ಪಡೆಯಿತು- ಭಗವಾನ್ ರಾಮ ಮತ್ತು ಭಗವಾನ್ ಕೃಷ್ಣ ಬಂದರು, ಅವರ ನಂತರ ನಡೆದದ್ದೆಲ್ಲಾ ಸಾಧ್ಯವಾಯಿತು.
ಆದ್ದರಿಂದಲೇ ಹೇಳುತ್ತಾರೆ - ಒಬ್ಬ ಮೂರ್ಖನ ಪ್ರೀತಿಯೂ ತೊಂದರೆಗಳನ್ನುಂಟು ಮಾಡಬಹುದು, ಮತ್ತು ಒಬ್ಬ ಸಾಧುವಿನ ಕ್ರೋಧವೂ ಅದರೊಂದಿಗೆ ಆಶೀರ್ವಾದಗಳನ್ನು ತರಬಹುದು.