ಶನಿವಾರ, ಡಿಸೆಂಬರ್ 15, 2012

ಆನ೦ದದ ಸಮ್ಮುಖದಲ್ಲಿ ಎಲ್ಲವೂ ಗೌಣ


ಅಮೃತಬಿ೦ದು’ ಸರಣಿಯ ಬರಹಗಳು

ಹತ್ತನೆಯ ಕ೦ತು

ಆಲಸ್ಯದಿಂದ ದೂರವಾಗಿ


(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೯/೦೫/೨೦೦೩ರ೦ದು ಪ್ರಕಟವಾಗಿತ್ತು)

"ಪ್ರಯತ್ನ ಸಾಧಕ"

ಆಲಸ್ಯ ದೂರವಾದರೆ ಜೀವನದಲ್ಲಿ ಆನಂದ. ನಿನಗೆ ಬಂದಿರುವ ದುಃಖ ಆಲಸ್ಯದಿಂದ ಬಂದಿದೆ. ಅದನ್ನು ಹೋಗಲಾಡಿಸಿಕೊಳ್ಳಲು ಪ್ರಯತ್ನ ಮಾಡು.

ಕೆಲವರು ಬಂದು ಕೇಳ್ತಾರೆ ’ಧ್ಯಾನ ಎರಡು ಹೊತ್ತು ಮಾಡಬೇಕಾ? ಒಂದು ಹೊತ್ತು ಮಾಡಿದರೆ ಸಾಲದಾ?’ ಅಂತ. ’ಕೋರ್ಸಿಗೆ ಬನ್ನೀಪ್ಪಾ, ಸ್ವಲ್ಪ ಸ್ಥಿರವಾಗಿ ಕೂತ್ಕೊಂಡು ಧ್ಯಾನ ಗೀನ ಮಾಡಿ’ ಅಂದರೆ ’ಎಷ್ಟು ದಿನ?’ ಅನ್ನೋ ಪ್ರಶ್ನೆ. ನಾಲ್ಕೈದು ದಿನ ಬರಬೇಕು ಅ೦ದೊಡನೆ, ’ನಾಲ್ಕು ದಿನ ಬಂದ್ರೆ ಸಾಕಾ? ಐದನೇ ದಿನ ಬರಕ್ಕಾಗಲ್ಲ’. ಅನ್ನೋ ಉತ್ತರ. ’ಆಯ್ತು, ನಾಲ್ಕು ದಿನ ಬನ್ನಿ” ಅಂದ್ರೆ ’ಮೂರು ದಿನ ಬಂದ್ರೆ ಸಾಕಾ?’ ಅ೦ತ ಕೇಳ್ತಾರೆ. ’ಒಂದು ದಿನ” ಅಂದ್ರೆ ’ಒಂದು ಘಂಟೆ ಬಂದ್ರೆ ಸಾಕಾ?’ ಅನ್ನಲು ಹಿ೦ಜರಿಯುವುದಿಲ್ಲ. ನಂತರ ಅಷ್ಟೊತ್ತಿಗೆ ನೆಂಟರು ಬರ್ತಾ ಇದ್ದಾರೆ. ಕರೆದುಕೊಂಡು ಬರಲು ರೈಲ್ವೇ ಸ್ಟೇಷನ್ನಿಗೆ ಹೋಗಬೇಕು’ ಅಂತಾರೆ...

ನೀನು ಯಾವುದಕ್ಕೆ ಪ್ರಾಮುಖ್ಯ ಕೊಡ್ತೀಯಾ?

ಸಮಯ ಇಲ್ಲ ಅಂತ ತಿಳಿದುಕೊಳ್ಳುವುದು ತೀರಾ ನಮ್ಮ ಬುದ್ಧಿಹೀನತನ. ’ನನಗೆ ಟೈಮೇ ಇಲ್ಲ’ ಅನ್ನೋದು ಬರೀ ನೆಪ ಅಷ್ಟೆ! ಯಾರಿಗಿದೆ ಸಮಯ? ಯಾವುದೇ ಉದ್ಯೋಗವನ್ನು ಮಾಡುವ ಯಾರನ್ನು ಬೇಕಾದರೂ ಕೇಳಿ ನೋಡಿ ’ಏನಪ್ಪಾ ನಿನಗೆ ಟೈಮ್ ಇದೆಯಾ?’ ಅಂತ. ’ಎಲ್ಲಿದೆ ಸ್ವಾಮಿ ಟೈಮ್? ಬೆಳಗಿನಿಂದ ಸಂಜೆಯ ತನಕ ಕೆಲಸಾನೇ ಆಗುತ್ತೆ, ಮನೆಗೆ ಬಂದ ತಕ್ಷಣ ಸುಸ್ತಾಗಿ ಮಲಗಿಬಿಡ್ತೀನಿ." ಅನ್ನೋ ಉತ್ತರ ದೊರೆಯುವುದು ಖಚಿತ.

ಪ್ರಧಾನಿಯಿಂದ ಹಿಡಿದು ಪೇದೆಯ ತನಕ ಯಾರಿಗೂ ಸಮಯ ಇಲ್ಲ. ಆದರೆ ಅವರು ಮಾಡತಕ್ಕಂಥ ಕೆಲಸಗಳೆಲ್ಲಾ ಬೇರೆಬೇರೆ. ಕೆಲವರು ಹೇಗೆ ಅಷ್ಟೊಂದು ಕೆಲಸ ಮಾಡಲು ಸಾಧ್ಯ? ಸಮಯ ಇಲ್ಲ ಅನ್ನುವುದು ಬರೀ ಒಂದು ನೆಪ ಅಷ್ಟೆ. ಯಾಕೆ?ನಮ್ಮ ಆಲಸ್ಯವನ್ನು ನಾವು ಮುಚ್ಚಿಟ್ಟುಕೊಳ್ಳುವುದಕ್ಕೆ, ನಾವು ಸಮಯ ಇಲ್ಲ ಅಂತ ಸಮಯದ ಮೇಲೆ ಹಾಕ್ತೀವಿ. ಆಲಸ್ಯದಿಂದ ದೂರ ಮಾಡಿಕೋಬೇಕು ನಿನ್ನನ್ನು, ಆಗಲೇ ಆನಂದ!
* * * * *

ಕೊರತೆಯಿಂದ ಪಾರಾಗು
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೦/೦೫/೨೦೦೩ರ೦ದು ಪ್ರಕಟವಾಗಿತ್ತು)

ಪ್ರಯತ್ನ ಸಾಧಕಃ

ಪ್ರಯತ್ನದಿಂದ ಪೂರ್ಣವಾಗಿ ಮಾಡದಿದ್ದರೆ ಮನಸ್ಸಿನಲ್ಲಿ ಯಾವಾಗಲೂ ಒಂದು ಕೊರತೆ ಕಂಡುಬರುತ್ತೆ. ಕೊರತೆಯಿಂದ, ಜಿಗುಪ್ಸೆಯಿಂದ ಪಾರಾಗಲು ನೂರಕ್ಕೆ ನೂರು ಪೂರ್ಣ ಪ್ರಯತ್ನ ಮಾಡಬೇಕು. ಆಗ ಮನಸ್ಸು ಬೇಸರಿಕೆಯಿಂದ ಪಾರಾಗಿ ಶಾಂತವಾಗಿಬಿಡುತ್ತದೆ. ನಮ್ಮಲ್ಲಿ ಎಷ್ಟು ಆಲಸ್ಯ ಇದೆ ಎಂದರೆ ಹೇಳಲು ಸಾಧ್ಯವೇ ಆಗಲ್ಲ. ಹಾಸಿಗೆಯ ಪಕ್ಕದಲ್ಲೇ ಬೆಡ್ ಸ್ವಿಚ್, ಹಾಸಿಗೆಯಲ್ಲಿ ಕುಳಿತೇ ಬೆಡ್ ಟೀ ಕುಡಿಯಬೇಕು. ನಮಗೆ ಸೌಕರ್ಯ ವಿಪರೀತ ಹೆಚ್ಚಾದಷ್ಟೂ ನಮ್ಮ ಶರೀರದಲ್ಲಿ ರೋಗಗಳೂ ಹೆಚ್ಚಾಗುತ್ತವೆ. ನೋಡಿ, ಚೆನ್ನಾಗಿ ದುಡಿದವನು ಚೆನ್ನಾಗಿ ನಿದ್ರೆನೂ ಮಾಡ್ತಾನೆ. ಕೆಲಸವನ್ನೇ ಮಾಡದಿರುವವನಿಗೆ ನಿದ್ರೆನೂ ಬರಲ್ಲ. ಉತ್ತಮವಾದ ಪ್ರಯತ್ನ ಬೇಕು ಸಾಧಕರಿಗೆ. ಸಾಧಕನೇ ಪ್ರಯತ್ನವಾಗಬೇಕು.

ನೀನು ಮಂತ್ರ ಹೇಳಿದ್ದೀಯ, ಜಪ ಮಾಡಿದ್ದೀಯ, ಬೇಕು ಅಂದಾಗ ಹನುಮಂತನ್ನ ಜ್ಞಾಪಿಸ್ಕೊಕೊಂಡಿದ್ದೀಯ. ಪರೀಕ್ಷೆ ಬಂದಾಗ ಗುಡೀಲಿ ತೆಂಗಿನಕಾಯಿ ಒಡೆಸಿದ್ದೀಯ. ರಾಯರ ಮಠದಲ್ಲಿ ಸುತ್ತು ಸುತ್ತಿ ಬಂದಿದ್ದೀಯ. ಆದರೆ, ಬೇಕಾದಾಗ ಮಾತ್ರ! ಏನೋ ಆಪತ್ತು ಬಂದುಬಿಟ್ಟಾಗ, ಏನೋ ಸಮಸ್ಯೆ ಬಂದಾಗ ನನ್ನ ಕೈಲಿ ಆಗಲ್ಲಪ್ಪಾ ಅಂತ ತಿಳಿದುಕೊಂಡಾಗ!!

ಸ್ವಲ್ಪ ಎಚ್ಚೆತ್ತುಕೊಂಡು ನೋಡಬೇಕು. ನಮ್ಮ ಪ್ರಯತ್ನ ಪರಿಶ್ರಮ ಅದರಲ್ಲಿ ಪೂರ್ಣವಾಗಿದೆಯಾ ಅಂತ. ಸತ್ತ ಮೇಲೆಯೂ ವಿಶ್ರಾಂತಿಯೇ, ಮಲಗೋದೇನೆ!
ಪೂರ್ತಿ ಉಸಿರಿದ್ದಾಗಲೂ, ಉಸಿರೆಲ್ಲ ಹಾಸಿಗೆಯ ಮೇಲೆ ಮಲಗಿ ಮಲಗಿ ಕಾಲ ಕಳೆಯುವುದು ಬೇಡ, ಪ್ರಯತ್ನಮಾಡು. ಪರಿಪೂರ್ಣವಾಗಿ ಪ್ರಯತ್ನ ಮಾಡು. ಅದಕ್ಕೇ ಹೇಳಿದರು ಪ್ರಯತ್ನ ಸಾಧಕಃ

ಮುಂದಿನ ಸೂತ್ರ ಬಹಳ ಮಹತ್ವಪೂರ್ಣವಾದ ಸೂತ್ರ.
* * * * *

ಗುರುವೇ ಉಪಾಯ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೧/೦೫/೨೦೦೩ರ೦ದು ಪ್ರಕಟವಾಗಿತ್ತು)

ಮುಂದಿನ ಸೂತ್ರ ’ಗುರುರುಪಾಯಃ’.  ಗುರುವೇ ಉಪಾಯ! ಬಹಳ ಮಹತ್ವಪೂರ್ಣವಾದ ಸೂತ್ರ.

ಗುರುವಿನ ಬಳಿ ಬಂದು ’ನನಗೆ ಏನಾದರೂ ಉಪಾಯ ಹೇಳಿ’ ಎಂದು ಕೇಳುವ ಅವಶ್ಯಕತೆಯೇ ಇಲ್ಲ. ’ಗುರುವೇ ಒಂದು ಉಪಾಯ’.ಆತ್ಮಜ್ಜಾನಿಯಾದ ಸದ್ಗುರುವನ್ನು ’ಗುರು’ ಅಂತ ಕಂಡುಕೊಂಡರೇ ಸಾಕು. ಮನಸ್ಸಿನಲ್ಲಿ ಅಷ್ಟು ಮುಗ್ಧತೆ, ತೆರೆದ ಮನಸ್ಸಿದ್ದರೆ ಗುರುವಿನ ಶಕ್ತಿ ತನ್ನಷ್ಟಕ್ಕೆ ತಾನೇ ಸಿಕ್ಕಿಬಿಡುತ್ತದೆ. ಎಷ್ಟೋ ಜನ ಆಲಸಿಗಳಾಗಿರುತ್ತಾರೆ, ಸತ್ಸಂಗದಲ್ಲಿ ಬಂದು ಕುಳಿತುಕೊಳ್ಳುತ್ತಿದ್ದ ಹಾಗೇ ಚೈತನ್ಯ ಉದಯವಾಗಿಬಿಡುತ್ತದೆ, ಶಕ್ತಿ ಬರುತ್ತದೆ. ಮನಸ್ಸಿನಲ್ಲಿ ಉತ್ಸಾಹ ಉಲ್ಲಾಸ ಉಂಟಾಗುತ್ತದೆ. ಇದು ಗುರು ಸನ್ನಿಧಿಯ ಲಕ್ಷಣ.

ಕಾಣದೇ ಇರುವಂಥ ದೇವರಲ್ಲಿ ಎಲ್ಲರಿಗೂ ನಂಬಿಕೆ ಬರುವುದಿಲ್ಲ. ಕಾಣುವ ಗುರುವಿನಲ್ಲಿ ವಿಶ್ವಾಸ, ಪ್ರೇಮ, ಶಾಂತಿ, ಸಹಜತೆ, ಶಕ್ತಿ ಎಲ್ಲವೂ ನಮ್ಮ ಕಣ್ಣಿಗೆ ಕಂಡುಬರುತ್ತೆ. ಕಣ್ಣಿಗೆ ಕಾಣುವ ಗುರುವಿನಲ್ಲಿ, ಗುರುವಿನ ಸಂಬಂಧವನ್ನು ನೀವು ಭಾವಿಸಿದ ತಕ್ಷಣ ಅವರ ಗುಣಗಳನ್ನು ನಮ್ಮಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಾಗಿಯೇ ಬಿಡುತ್ತದೆ. ’ಗುರುವೇ ಉಪಾಯ!’

ಗುರು ಭಕ್ತಿ ಒಂದೇ ಸಾಕಾಗುತ್ತದೆ. ಕನಕದಾಸರು ಯಾವ ಯೂನಿವರ್ಸಿಟಿಗೂ ಹೋಗಲಿಲ್ಲ. ಆದರೂ ಅವರು ಅಮೋಘವಾದ ಕಾವ್ಯ ಕವಿತೆಗಳನ್ನು ರಚನೆ ಮಾಡಿದರು. ಅವರಲ್ಲಿ ಅಂಥ ಶ್ರದ್ಧೆ ಇತ್ತು, ಭಕ್ತಿ ಇತ್ತು. ಒಮ್ಮೆ ಅವರ ಗುರುಗಳು "’ಕೋಣ’ ನಿನ್ನ ಮಂತ್ರ ನಡೆಯೋ’ ಅಂದರು. ಕನಕದಾಸರು ಅದನ್ನೇ ಪೂರ್ಣ ಶ್ರದ್ಧೆ, ಅನನ್ಯ ಭಕ್ತಿಯಿಂದ ಸ್ವೀಕರಿಸಿ ಧ್ಯಾನಿಸುತ್ತಾ ಕುಳಿತಾಗ ಆ ಕೋಣನೇ ಪ್ರತ್ಯಕ್ಷವಾಗಿ ಬಂತು. ಇದನ್ನು ಕಥೆ ಅಷ್ಟೇ ಎಂದು ಭಾವಿಸಬಾರದು. ಇದರಲ್ಲಿ ಸತ್ಯ ಇದೆ.
* * * * *

ಗುರು ಸನ್ನಿಧಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೨/೦೫/೨೦೦೩ರ೦ದು ಪ್ರಕಟವಾಗಿತ್ತು)

ಹಳ ಮುಖ್ಯವಾದ ಎರಡು ಸೂತ್ರಗಳನ್ನು ಕೊಟ್ಟಿದ್ದಾರೆ. "ಪ್ರಯತ್ನ ಸಾಧಕಃ"... ಪೂರ್ಣವಾಗಿ ಪ್ರಯತ್ನ ಮಾಡು. ಒಂದು ವೇಳೆ ಪ್ರಯತ್ನ ಮಾಡುವುದಕ್ಕೆ ಸಾಧ್ಯವಾಗಲಿಲ್ಲವೆಂದರೆ ತೆರೆದ ಮನಸ್ಸಿನಿಂದಲಾದರೂ ಬಾ. ಎಷ್ಟೋ ಸಲ ಪ್ರಯತ್ನದಲ್ಲಿ ನಿನ್ನ ಅಹಂಕಾರ ಹೆಚ್ಚಾಗುತ್ತದೆ, ’ನಾನು ಮಾಡಿದ್ದೀನಿ, ನಾನು ಮಾಡ್ತೀನಿ’ ಅಂತ. ಪೂರ್ಣವಾಗಿ ಪ್ರಯತ್ನ ಮಾಡು, ಹಾಗೆ ಪ್ರಯತ್ನ ಮಾಡಿಯೂ ಸೋಲಪ್ಪಿಕೊಂಡು ಗುರುವಿನ ಹತ್ತಿರ ಬಾ. ಗುರು ಹೇಳಿದ ಹಾಗೆ ಕೇಳು.

"ಗುರುರುಪಾಯಃ" - ಪ್ರಪಂಚದಲ್ಲಿ ಪೂರ್ಣಜ್ಞಾನಿಗಳಾದ ಗುರು ಸಿಗುವುದು ತುಂಬ ಕಷ್ಟ. ಯಾವಾಗಲೋ ಮಾಡಿದ ಯಾವುದೋ ಒಂದು ಒಳ್ಳೆಯ ಕರ್ಮಕ್ಕೆ ಗುರು ಸಿಗುತ್ತಾರೆ. ಹಾಗೆ ಗುರು ಸಿಕ್ಕಿದರೂ ಅದನ್ನು ಉಪಯೋಗಿಸಿಕೊಳ್ಳತಕ್ಕಂಥವರು ಬಹಳ ಕಡಿಮೆ ಜನ. ಎಲ್ಲಾ ಉಪಾಯಾನೂ ಮಾಡಿ ಮಾಡಿ ಜೀವನದಲ್ಲಿ ಸೋತಿದ್ದೀಯ, ಇದು ಕೊನೆಯ ಉಪಾಯ. ಗುರು ಯಾವಾಗ ಉಪಾಯವಾದರೋ, ಇನ್ನು ಮುಂದೆ ಜೀವನದಲ್ಲಿ ಸೋಲಿಲ್ಲ, ಜೀವನದ ದೃಷ್ಟಿಕೋನವೇ ಬದಲಾಗುತ್ತದೆ.

ಗುರುವಿನ ಹತ್ತಿರ ಬಂದ ಮೇಲೆ ನಮ್ಮನ್ನು ನಾವು ಹೀಯಾಳಿಸೋದಕ್ಕೆ ಆಗೋದೇ ಇಲ್ಲ. ಆತ್ಮನಿಂದೆಗೆ ಅಲ್ಲಿ ಜಾಗವೇ ಇಲ್ಲ. ನಿಂದೆ ಇದ್ದರೆ ನಾವು ಗುರುವಿನ ಬಳಿ ಬಂದ ಹಾಗೆ ಆಗಲಿಲ್ಲ. ಗುರುವಿನ ಹತ್ತಿರ ಬರುವುದೆಂದರೆ, ಸುಮ್ಮನೆ ಬರುವುದಲ್ಲ. ಮನಸ್ಸಿನಲ್ಲಿ ಆ ಸ್ಥಾನವನ್ನು, ಆ ವಿಶ್ವಾಸವನ್ನು, ನಂಬಿಕೆಯನ್ನು ಕಲ್ಪಿಸಿಕೊಳ್ಳುವುದು. ’ಗುರು ಇದ್ದಾರೆ ನಮ್ಮ ಜೊತೆಯಲ್ಲಿ, ನಮಗೆ ಬೇಕಾದುದನ್ನು ಮಾಡುತ್ತಾರೆ, ಮಾರ್ಗದರ್ಶನ ಸಿಗುತ್ತೆ, ಜೀವನ ಸುಗಮವಾಗುತ್ತೆ ಎನ್ನುವ ಆಳವಾದ ನಂಬಿಕೆ ತನ್ನಷ್ಟಕ್ಕೆ ತಾನೇ ಉಂಟಾಗುತ್ತೆ. ಅದಕ್ಕೇ ಹೇಳುವುದು ಗುರುವೇ ಉಪಾಯ ಅಂತ.
* * * * *

ಶರೀರವೇ ಹವಿಸ್ಸು
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೩/೦೫/೨೦೦೩ರ೦ದು ಪ್ರಕಟವಾಗಿತ್ತು)

ಮುಂದಿನ ಸೂತ್ರ "ಶರೀರಂ ಹವಿಃ’
ಹವಿ ಎಂದರೆ ಯಜ್ಞದಲ್ಲಿ, ಹೋಮದಲ್ಲಿ ಹಾಕುವ ’ಆಹುತಿ’. ನಮ್ಮ ಶರೀರ ಪವಿತ್ರವಾದುದು. ಈ ಇಡೀ ಪ್ರಪಂಚದಲ್ಲಿ ಒಂದು ಯಜ್ಞ ನಡೀತಾ ಇದೆ. ಕಾಲದ ಅಗ್ನಿಯಲ್ಲಿ ನಮ್ಮ ಶರೀರ ಆಹುತಿಯಾಗುತ್ತಲೇ ಇದೆ. ಕಾಲ ಎನ್ನುವುದು ನಿನ್ನ ಶರೀರವನ್ನು ದಿನ ದಿನ ಸುಡುತ್ತಿದೆ. ನಿನ್ನ ಆಯುಸ್ಸು ಉರಿಯುತ್ತಿದೆ.

ನೀನು ನೋಡುತ್ತಿದ ಹಾಗೇ ಇಪ್ಪತ್ತು, ಮೂವತ್ತು, ನಲ್ವತ್ತು ಹೀಗೇ ವರ್ಷಗಳು ಕಳೆದುಹೋಯ್ತು. ಜೀವನ ಮುಗಿಯುತ್ತಾ ಬಂತು ಆಗಲೇ. ನೀನುಇನ್ನೂ ಎಚ್ಚೆತ್ತುಕೊಂಡೇ ಇಲ್ಲ. ಶರೀರ ಹವಿಯಾಯ್ತು, ಉರಿದು ಹೋಗುತ್ತಿರುವ ಜೀವನವನ್ನು ಸನ್ಮಾನದಿಂದ ನೋಡು. ಅದು ಹೇಗೇ ಇದ್ದರೂ ಅದನ್ನು ಅರ್ಪಣೆ ಮಾಡಿಬಿಡು ಹಿಡಿದಿಟ್ಟುಬಿಡಬೇಡ. ಶರಣಾಗತಿ ಇರಬೇಕು. ಪೂರ್ಣವಾಗಿ ಶರಣಾಗಿಬಿಡು.

ಬೆಂಕಿಯಲ್ಲಿ ಹಾಕಿ ದಹವಿಭಸ್ಮವಾಗಿಬಿಡು, ಪರಿಣಾಮ ಉಂಟಾಗಿಬಿಡುತ್ತೆ ಅದಕ್ಕೆ. ಹವಿ ಹಾಗೆಯೇ ಹೊರಗೆ ಬರುವುದು ಸಾಧ್ಯವಿಲ್ಲ, ಅಗ್ನಿಯ ಲಕ್ಷಣ ಹಾಗೇ. ಹಾಗೇ ನಿನ್ನ ಜೀವನ ಒಂದು ಸಲ ಕಾಲದಲ್ಲಿ ಉರಿಯಲು ಶುರುವಾಯ್ತು ಎಂದರೆ ಹಾಗೇ ಇರುವುದಿಲ್ಲ, ನಿಲ್ಲುವುದಿಲ್ಲ. ಮನುಷ್ಯ ಪರಿಣಾಮಿ.

ಅಕ್ಕಮಹಾದೇವಿ ಹಾಡಿದ್ದಾರಲ್ಲ  ’ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲಯ್ಯ ನೀನು’ ಅಂತ. ಜೀವನವೇ ನೈವೇದ್ಯ- ಈ ಶರೀರವೇ ಹವಿ, ನೈವೇದ್ಯ, ಅಂತ ಸಮರ್ಪಣೆ ಮಾಡು, ಎಚ್ಚೆತ್ತು ನೋಡಿಕೋ. ಆಗ ಚಿಂತೆ ಇರುವುದಕ್ಕೆ ಸಾಧ್ಯವೇ ಇಲ್ಲ. ಜೀವನದಲ್ಲಿ ಮತ್ತೆ "ಸ್ವಾತ್ಮಾನಂದ ಪ್ರಕಾಶ ವಪುಷೇ" ಉಂಟಾಗುತ್ತದೆ. ಶರೀರದಿಂದ ಆನಂದ ತುಂಬಿತುಳುಕುತ್ತಾ ಇರುತ್ತೆ. ಪೂರ್ತಿ ಆನಂದಮಯವಾದ ತರಂಗಗಳಿಂದ, ಪ್ರಸನ್ನತೆಯಿಂದ ತುಂಬಿಬಿಡುತ್ತೀವಿ.\
* * * * *

ಜ್ಞಾನವೇ ಅನ್ನ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೪/೦೫/೨೦೦೩ರ೦ದು ಪ್ರಕಟವಾಗಿತ್ತು)

ರೀರಕ್ಕೆ ಹೇಗೆ ಊಟ ಬೇಕೋ, ನಿದ್ರೆ ಬೇಕೋ ಹಾಗೆ ನಿನ್ನಲ್ಲಿರುವ ಆತ್ಮಕ್ಕೆ ಜ್ಞಾನ, ತಿಳುವಳಿಕೆ ಬೇಕಾಗಿದೆ. ಅರಿವು ಇಲ್ಲದೇ ಇರುವುದರಿಂದ ನಿನಗೆ ತಾಪತ್ರಯ, ಚಿಂತೆ, ಮನಸ್ತಾಪ, ದುಃಖ ಎಲ್ಲಾ ಉಂಟಾಗುತ್ತಿರುವುದು. ಅರಿವಿದ್ದರೆ ದುಃಖ ಇಲ್ಲ, ದುಃಖ ಇದ್ದರೆ ಅರಿವಿಲ್ಲ, ಅರಿತುಕೋ ಇದನ್ನು. ಹೊಟ್ಟೆ ತುಂಬಿದ್ದರೆ ಹಸಿವಿಲ್ಲ, ಹಸಿವಿದ್ದರೆ ಹೊಟ್ಟೆ ತುಂಬಿಲ್ಲ ಅಂತ.

’ಜ್ಞಾನಿಗಳೆಂದರೆ ದುಃಖ, ಚಿಂತೆಯಲ್ಲಿ ಮುಳುಗಿರುವವರಲ್ಲ, ಪ್ರಸನ್ನವಾಗಿ, ಆನಂದದಿಂದ ತುಂಬಿರುತ್ತಾರೆ. ಅದಕ್ಕೇ "ಜ್ಞಾನಂ ಅನ್ನಂ" ಅಂದರು.

ನೀನು ದುಃಖಿಯಾಗಿದ್ದಾಗ ನಿನಗೆ ಜ್ಞಾನದ ಅವಶ್ಯಕತೆಯಿದೆ. ನಿನ್ನ ಜೀವನವನ್ನು ನೋಡು...ಅರಿವು ಮಾಡಿಕೋ, ಎಷ್ಟೋ ಸಲ ಈ ತರಹ ಜನ್ಮವೆತ್ತಿ ಬಂದಿದ್ದೀಯ, ಗೋಳಾಡಿದ್ದೀಯ, ಹೋಗಿದ್ದೀಯ. ಈಗ ಎಚ್ಚೆತ್ತು ನೋಡಿಕೋ. ಜೀವನವನ್ನು ಒಂದು ಉತ್ಸವವನ್ನಾಗಿಸಿಕೋ. ಜ್ಞಾನವೇ ನಿನಗೆ ಅನ್ನ. ಜ್ಞಾನವಿದ್ದರೆ ನಿನ್ನಲ್ಲಿ ಪ್ರಸನ್ನತೆ, ಉತ್ಸಾಹ, ಚಿಲುಮೆ ಉಕ್ಕಿ ಬರುತ್ತಾ ಇರುತ್ತೆ.ಆ ಜ್ಞಾನ ಇದ್ದಾಗ ನಿನ್ನ ಮನಸ್ಸಿನಲ್ಲಿ ನೆಲೆಯಾದ ಸಂತೋಷ ತುಂಬಿರುತ್ತದೆ. ದುಃಖ ನಿನ್ನ ಸ್ವಭಾವವಲ್ಲ. ಒಳಗಡೆ ಎಲ್ಲೋ ದುಃಖ ಇದೆ ಅಂತ ಹುಡುಕುವುದಕ್ಕೆ ಹೋಗಬೇಡ. ಜ್ಞಾನದ ಮಾತುಗಳನ್ನು ಕೇಳು, ಚಿತ್ತ ಪ್ರಸನ್ನವಾಗಿಬಿಡುತ್ತೆ. ಜ್ಞಾನದ ಜೊತೆ ವಿವಾಹವಾಗು ನೀನು, ಜೀವನವೇ ಒಂದು ಸಂಭ್ರಮದ ಉತ್ಸವ ಆಗ. ’ಜ್ಞಾನಂ ಅನ್ನಂ’ ಸೊಗಸಾದ ಸೂತ್ರ. ಈ ಜ್ಞಾನದ ಅನ್ನ ಕಡಿಮೆಯಾದಾಗ ಸ್ವಪ್ನ ಕಾಣುವುದು ಹೆಚ್ಚಾಗುತ್ತೆ. ಸ್ವಪ್ನದಲ್ಲಿ ನೀನು ನಿನ್ನೆಯಲ್ಲಿ ಅಥವಾ ನಾಳೆಯಲ್ಲಿರ್ತೀಯ. ಅದನ್ನು ವರ್ತಮಾನಕ್ಕೆ ತಂದುಕೊಳ್ಳಲು ಬೇಕು ಜ್ಞಾನವೆಂಬ ಅನ್ನ.
* * * * *

ಸ್ವಪ್ನದ ಉದಯ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೫/೦೫/೨೦೦೩ರ೦ದು ಪ್ರಕಟವಾಗಿತ್ತು)

ಹಿಂದಿನ ಸೂತ್ರಗಳಲ್ಲಿ "ಗುರುರುಪಾಯಃ , ಶರೀರಂ ಹವಿಃ , ಜ್ಞಾನಂ ಅನ್ನಂ" ಈ ಬಗ್ಗೆ ತಿಳಿದುಕೊಂಡೆವು. ಈಗ ಮುಂದಿನ ಸೂತ್ರ -
"ವಿದ್ಯಾ ಸಂಹಾರೇ ತದುಕ್ತ ಸ್ವಪ್ನ ದರ್ಶನಂ"

ಪ್ರತಿ ಸಲ ಪಟಾಕಿಯೊಂದು ’ಢಂ’ ಎಂದಾಗಲೂ ನಿಮ್ಮ ಮನಸ್ಸು, ನಿಮ್ಮ ಚೇತನ ವರ್ತಮಾನಕ್ಕೆ ಬರುತ್ತವೆ. ಪಟಾಕಿಯ ವಿಸ್ಫೋಟ ನಿಮಗೊಂದು ’ಶಾಕ್ ಟ್ರೀಟ್ಮೆಂಟ್’ ಇದ್ದ ಹಾಗೆ! ಪ್ರತಿಯೊಂದು ಸೂತ್ರವೂ ಒಂದೊಂದು ಪಟಾಕಿ ಇದ್ದಂತೆ. ನಿರಂತರವಾಗಿ ತೊಳಲಾಡುತ್ತಾ ಕನಸು ಕಾಣುತ್ತಿರುವ ಮನಸ್ಸನ್ನು ಎಚ್ಚರ ಮಾಡಿಕೊಳ್ಳುವುದಕ್ಕೋಸ್ಕರವೇ, ವರ್ತಮಾನಕ್ಕೆ ತರುವುದಕ್ಕೋಸ್ಕರವೇ ಈ ಪಟಾಕಿ!

ಸಮಾಜದಲ್ಲಿ ನಾವು ಜನಗಳ ಮಧ್ಯೆ ಇರಬೇಕಾದರೆ ಏನೋ ಒಂದು ರಾಗ ದ್ವೇಷ ಉಂಟಾಗುತ್ತಾ ಇರುತ್ತೆ ಅಲ್ವಾ? ಏನೋ ಒಂದು ಕಿತಾಪತಿ. ಚೆನ್ನಾಗಿರುವವರ ಜೊತೆ ಜಗಳವಾಗುತ್ತೆ. ನಮಗೆ ಆಗಿರುವಂಥ ಮನಸ್ತಾಪವೆಲ್ಲ, ವಿರೋಧಿಗಳ ಹತ್ತಿರ ಮಾತ್ರವಲ್ಲ, ಮಿತ್ರರ ಹತ್ತಿರವೇ ಆಗಿರುತ್ತೆ. ಈ ರಾಗ ದ್ವೇಷಗಳನ್ನು ನಮ್ಮ ಮನಸ್ಸಿನ ಯಾವುದೋ ಒಂದು ಮೂಲೆಯಲ್ಲಿ ತುಂಬಿಕೊಳ್ತಾ ಇರ್ತೀವಿ. ಪಟಾಕಿಯೊಂದು ಸ್ಫೋಟಿಸಿದಾಗ ಅದರೊಂದಿಗೇ ಅವುಗಳೂ ಒಂದೇ ಸಲ ಕಿತ್ತು ಹೊರಗಡೆ ವಿಸ್ಫೋಟವಾಗುತ್ತದೆ ಅದಕ್ಕೇ ಪಟಾಕಿ ಹೊಡೆಯುವುದು.

ಜೀವನದಲ್ಲಿ ನಮಗೇಕೆ ಆನಂದವಿಲ್ಲ ಅಂದರೆ ಅದಕ್ಕೆ ಹೇಳಿದರು - ’ವಿದ್ಯಾ ಸಂಹಾರೇ’. ಅಂದರೆ ವಿದ್ಯೆಯ ನಷ್ಟವಾಯ್ತು, ವಿದ್ಯೆಯ ಸಂಹಾರವಾಯ್ತು, ವಿವೇಕ ಕಮ್ಮಿಯಾಯ್ತು ಅದಕ್ಕೇ ಸ್ವಪ್ನದ ಉದಯವಾಯ್ತು. ಅಂದರೆ ಎಲ್ಲೋ ಒಂದು ಜ್ಞಾನದ ತಂತು ಮುರಿಯಿತು. ’ಸ್ವಪ್ನ ದರ್ಶನಂ’ - ಮೂರು ತರಹದ ಕನಸು ಕಾಣ್ತೀರ. ಇದರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳೋಣ.
* * * * *

ಯಶಸ್ಸಿನ ಕನಸು
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೬/೦೫/೨೦೦೩ರ೦ದು ಪ್ರಕಟವಾಗಿತ್ತು)

ಮೂರು ತರಹದ ಕನಸು ಕಾಣ್ತೀರ. ಮೊದಲನೆಯದು ಯಶಸ್ಸಿನ ಕನಸು..."ನಾಳೆ, ನನಗೆ ಎಲ್ಲರೂ ಹೂವಿನ ಹಾರ ಹಾಕಬೇಕು, ಚಪ್ಪಾಳೆ ಹೊಡೀಬೇಕು, ಎಲ್ಲರೂ ’ಭಲೆ, ಶಹಭಾಸ್’ ಎನ್ನಬೇಕು..." ಹೊಗಳಿಕೆ ಆಸೆ ಪ್ರತಿಯೊಬ್ಬರ ಮನಸ್ಸಿನಲ್ಲೂ ಕನಸಿಗೆ ಕಾರಣವಾಗಿದೆ. ’ಹೊಗಳಿಕೆಯ ಆಸೆ’...ಎಷ್ಟು ಹೊಗಳಿದರೂ ಸಾಲುವುದಿಲ್ಲ ನೋಡಿ..!

ಹಾಗೆ ಹೊಗಳಿದರೂ, ಸನ್ಮಾನವೇ ಸಿಕ್ಕಿದರೂ ನಮ್ಮವರು, ನಮಗೆ ಬೇಕಾದವರು, ಪರಿಚಿತರು ಆ ಸಮಾರಂಭದಲ್ಲಿಲ್ಲದಿದ್ದರೆ ತೃಪ್ತಿ ಸಿಗುವುದಿಲ್ಲ. ’ನಮ್ಮೋರು’ ಹೊಗಳಬೇಕು ಅಂತಿರುತ್ತೆ.

ಪ್ರತಿಯೊಂದು ಮನೆಯಲ್ಲೂ ಗಂಡನಿಗೆ ತನ್ನ ಹೆಂಡತಿ ಹೊಗಳಿದರೆ ಮನಸ್ಸು ತೃಪ್ತಿಯಾಗುತ್ತೆ. ಊರೆಲ್ಲಾ ಹೊಗಳಿದರೂ, ಹೆಂಡತಿ ಹೊಗಳಿರೋದಿಲ್ಲ...! ಹಾಗೇ ಹೆಂಡತಿಗೂ ಯಾರಾದರೂ ತನ್ನನ್ನು ಹೊಗಳಿದಾಗ, "ಅಯ್ಯೋ, ಅವರು ಕೇಳಿದ್ದರೆ..." ಎನಿಸುತ್ತೆ. ಅದನ್ನು ತನ್ನ ಗಂಡ ಕೇಳಿಸಿಕೊಳ್ಳಬೇಕು ಅನ್ನುವ ತವಕ ಇರುತ್ತದೆ.

ಪ್ರತಿ ದೃಷ್ಟಿಯಲ್ಲೂ ನಾವು ಬೇರೆಯವರಿಗೆ ಹೇಳ್ತಾ ಇರ್ತೀವಿ, ’ನಾನ್ಯಾರು ಗೊತ್ತೇ’...ಈ ಧೋರಣೆಯಲ್ಲೇ ನಾವು ಜೀವನ ನಡೆಸುತ್ತಾ ಇರ್ತೀವಿ! ಹೊಗಳಿಕೆಯ ಬಗ್ಗೆ ಕನಸು - ಕುಳಿತಿದ್ದಲ್ಲೇ ಕನಸು ಕಾಣುತ್ತೀವಿ. ಮೊದಲು ಚಿಕ್ಕದಾಗಿ ಪ್ರಾರಂಭವಾಗಿ, ಬೆಳೆಯುತ್ತದೆ ಕನಸು... ಮೊದಲು ಈ ಊರಲ್ಲೆಲ್ಲಾ ನಾನು ಹೆಸರುವಾಸಿಯಾಗಿಬಿಟ್ರೆ ಚೆನ್ನಾಗಿರುತ್ತೆ.. ಮೊದಲು ಊರು, ಆಮೇಲೆ ದೇಶ, ಆಮೇಲೆ ಇಡೀ ಪ್ರಪಂಚದಲ್ಲಿ ಆಗಿಬಿಟ್ರೆ! ಎಲ್ಲಾ ವಾರಪತ್ರಿಕೆಗಳು, ದಿನಪತ್ರಿಕೆಗಳಲ್ಲೂ ನನ್ನ ಚಿತ್ರ ಬಂದುಬಿಟ್ಟರೆ.. ನನ್ನ ಹೆಸರು ಬಂದುಬಿಟ್ಟರೆ?

ಅಹಂಕಾರದ ಉತ್ಪತ್ತಿಯ ಲಕ್ಷಣ ಏನು? "ಸ್ವಪ್ನ ದರ್ಶನ"! ಕನಸು ಕಾಣ್ತಾ ಹೋಗೋದು, ’ನಾನು ಅದಾಗಬೇಕು, ಇದಾಗಬೇಕು. ಪ್ರಪಂಚದಲ್ಲೆಲ್ಲಾ ಏನೋ ಮಾಡಿಬಿಡಬೇಕು’ ಅಂತ...

ಎರಡನೆಯದು: ಹೆಸರಿನ ಕನಸು.
* * * * *

ಅಹಂಕಾರ - ಅವಿದ್ಯೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೭/೦೫/೨೦೦೩ರ೦ದು ಪ್ರಕಟವಾಗಿತ್ತು)

ಮೊದಲನೆಯದು ಯಶಸ್ಸಿನ ಕನಸು. ಎರಡನೆಯದು ಹೆಸರಿನ ಕನಸು. ಮೊದಲು ಹೆಸರು ಗಳಿಸಬೇಕು ಅನ್ನುವ ತವಕ ಇರುತ್ತದೆ. ಹೆಸರು ಗಳಿಸಿದ ಮೇಲೆ ಆ ಮಟ್ಟಕ್ಕೆ ಬೇರೆಯವರು ಬರಕೂಡದು, ತಾವೊಬ್ಬರೇ ಇರಬೇಕು ಎನ್ನುವ ಭಯ ಆತಂಕ ಇರುತ್ತದೆ. ಈ ಹೆಸರು ಕಳೆದುಕೊಳ್ಳದೆ ಉಳಿಸಿಕೊಳ್ಳಬೇಕಲ್ಲ ಎನ್ನುವ ದೊಡ್ಡ ಫಜೀತಿ ಇರುತ್ತೆ.

ಎಲ್ಲರ ಮನಸ್ಸಿನಲ್ಲೂ ’ನನ್ನಂತಹವರಿಲ್ಲ’! ಎನ್ನುವ ಭಾವನೆ ಬೇಕು. ಪ್ರಪಂಚದಲ್ಲಿ ನನ್ನಂತಹವರು ಯಾರಾದರೂ ಇದ್ದುಬಿಟ್ಟರೆ ಕಷ್ಟ ನೋಡಿ!

’ಒಬ್ಬ ದೊಡ್ಡ ಸಾಧುಗಳನ್ನು ಹೃಷೀಕೇಶದಲ್ಲಿ ಯಾರೋ ಭೇಟಿಯಾಗಿ ಹೇಳಿದರು. "ನೋಡಿ ನಿಮ್ಮಂತಹ ತ್ಯಾಗಿಗಳನ್ನು ಎಲ್ಲೂ ನೋಡಿಲ್ಲ. ಬೇರೆ ಮಠದ ಸ್ವಾಮಿಗಳೆಲ್ಲ ’ಗುರು’ ಆಗಬೇಕು ಅಂತ, ಶಿಷ್ಯರನ್ನು ಮಾಡಿಕೊಳ್ಳಬೇಕು ಅಂತ ಇರ್ತಾರೆ. ನೀವು ನೋಡಿ... ಶಿಷ್ಯರೂ ಇಲ್ಲ, ಯಾರೂ ಇಲ್ಲ, ನೀವು ನಿಜವಾದ ವೈರಾಗಿಗಳು" ಅಂತ ಹೇಳಿದರು. ಅವರು ತುಂಬ ಖುಷಿಯಾಗಿಬಿಟ್ಟರು. "ಹೌದೌದು, ಅವರೆಲ್ಲ ಮಠ ಗಿಠ ಕಟ್ಕೊಂಡಿರ್ತಾರೆ. ನಾನು ನಿಜವಾದ ಸಾಧು ನಿಜವಾದ ಮಹಾತ್ಮ" ಅಂತ ಅಂದರು.

"ಹೌದು, ನೀವು ನಿಜವಾದ ಋಷಿ. ನಿಮ್ಮಂತಹವರನ್ನೇ ಒಬ್ಬರನ್ನು ಅಲ್ಲಿ ಮೇಲೆ ಉತ್ತರ ಕಾಶಿಯಲ್ಲಿ ನೋಡಿ ಬಂದೆ.ನೀವು ಕಮಂಡಲನಾದರೂ ಇಟ್ಕೊಂಡಿದೀರಾ, ಬಟ್ಟೆನಾದರೂ ಉಟ್ಕೊಂಡಿದೀರಾ ಅವರು ಅದೂ ಇಲ್ಲ, ಬರೀ ಒಂದು ಕೌಪೀನದಲ್ಲೇ ಓಡಾಡ್ತಾ ಇದ್ದರು" ಅಂದರು.

ಸಾಧುಗಳ ಮುಖ ಇಳಿದುಹೋಯ್ತು! ಅಹಂಕಾರ!! ’ನಮ್ಮ ಅಹಂಕಾರ ಎಂದರೆ ಅವಿದ್ಯೆ. ವಿದ್ಯೆಯ ಸಂಹಾರ ಆಗುತ್ತಿದ್ದ ಹಾಗೆಯೇ ಅಹಂಕಾರದ ಉತ್ಪತ್ತಿಯಾಗುತ್ತದೆ. ಅಹಂಕಾರದ ಲಕ್ಷಣ ಸ್ವಪ್ನ ದರ್ಶನ!
* * * * *

ಅಧಿಕಾರದ ಕನಸು
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ.೨೮/೦೫/೨೦೦೩ರ೦ದು ಪ್ರಕಟವಾಗಿತ್ತು)

"ವಿದ್ಯಾ ಸಂಹಾರೇ ತದುಕ್ತ ಸ್ವಪ್ನ ದರ್ಶನಂ"
ಅಧಿಕಾರ ಬಲದ ಕನಸು ಕಾಣ್ತೀವಿ. ಏನಾಗಬೇಕು? ಮೇಯರ್ ಆಗಬೇಕು, ಮುಖ್ಯಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಿಬಿಟ್ಟರೆ ಪ್ರಧಾನಮಂತ್ರಿ ಆಗುವ ತನಕ ತೃಪ್ತಿಯಿಲ್ಲ!!
ತುಂಬಾ ಹೆಸರು ಗಳಿಸಬೇಕು, ತುಂಬಾ ಯಶಸ್ಸು ಗಳಿಸಬೇಕು, ತುಂಬಾ ದುಡ್ಡು ಮಾಡಬೇಕು. ಆ ’ತುಂಬಾ’ಗೆ ಒಂದು ಎಲ್ಲೇನೇ ಇರೋದಿಲ್ಲ.
ನಮ್ಮ ಮನಸ್ಸು ಸಂತೋಷವಾಗಿಲ್ಲದೇ ಇರುವುದಕ್ಕೆ ಒಂದು ಕಾರಣ ’ತುಂಬಾ’. ತುಂಬದೇ ಇರುವ ಮನಸ್ಸಿನಲ್ಲಿ ತುಂಬಾ ಬೇಕು ಅಂತ ಅನಿಸುತ್ತಿರುತ್ತದೆ. ತುಂಬಿದ ಮನಸ್ಸು ತೃಪ್ತಿಯಿಂದಿರುತ್ತದೆ.

ಅಧಿಕಾರದ ಆಕಾಂಕ್ಷೆ ನಿರ್ಬಲರಿಗೆ ಮಾತ್ರ ಇರುತ್ತೆ. ಯಾವುದರ ಮೇಲೆ ಆಕಾಂಕ್ಷೆ ಇರುತ್ತೋ ಅದರ ಮೇಲೆ ಭಯವೂ ಇರುತ್ತೆ. ನಿರ್ಬಲ ವ್ಯಕ್ತಿಗೆ ಯಾರಾದರೂ ಸ್ವಲ್ಪ ಜೋರು ಮಾಡಿದರೆ ಭಯವಾಗಿಬಿಡುತ್ತದೆ, ಕೋಪ ಬಂದುಬಿಡುತ್ತೆ. ಸಮೂಹದಿಂದ ಶಕ್ತಿ ಬರುತ್ತೆ ಅಂತ ಭಾವಿಸುವವರು ನಿರ್ಬಲರು. ಗುಂಪು ಯಾವತ್ತೂ ಜವಾಬ್ದಾರಿಯಲ್ಲ, ಗುಂಪು ಸೇರಿಕೊಂಡು ಮಾಡಿದ ಕೆಲಸಕ್ಕೆ ಯಾರೂ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ನಿರ್ಬಲರೆಲ್ಲ ಸೇರಿ ಗುಂಪು ಕಟ್ಟುತ್ತಾರೆ.

ಯಾರಿಗೆ ಅಧಿಕಾರ ವ್ಯಾಮೋಹ ಬರುತ್ತೆ ಗೊತ್ತಾ? ನಿರ್ಬಲ ವ್ಯಕ್ತಿಗೆ ಅಧಿಕಾರದ ಲಾಲಸೆ, ಆಸೆ ಇರುತ್ತದೆ.

ಬಲಹೀನ ವ್ಯಕ್ತಿಗೆ ಅಧಿಕಾರ ಬೇಕು ಅನಿಸುತ್ತೆ, ಬಲಿಷ್ಠನಾದ ವ್ಯಕ್ತಿ ಅಧಿಕಾರಕ್ಕೆ ಆಸೆ ಪಡಲ್ಲ, ಸೇವೆ ಮಾಡಲು ಇಷ್ಟ ಪಡ್ತಾನೆ.ಅವನಿಗೆ ಯಾರೂ ಏನೇ ಅಂದರೂ ಕೂಡ ಸಹನಶೀಲತೆಯಿರುತ್ತೆ, ಪ್ರಸನ್ನತೆ ಇರುತ್ತೆ. ಅವನ ಸಂತೋಷವನ್ನ, ತೃಪ್ತಿಯನ್ನ ಬೇರೆಯವರು ಕಿತ್ತುಕೊಳ್ಳುವುದಕ್ಕೆ ಸಾಧ್ಯವಿಲ್ಲ.