ಭಾನುವಾರ, ಡಿಸೆಂಬರ್ 30, 2012

ನೀವು ಎಲ್ಲವನ್ನೂ ಮೀರಿ ನಿಲ್ಲಬಲ್ಲಿರಿ


ಬಾಡ್ ಅಂತೋಗಸ್ಟ್
ದಶಂಬರ ೩೦, ೨೦೧೨

ನೀವೆಲ್ಲರೂ ಸ್ಫೂರ್ತಿಯಿ೦ದ ತು೦ಬಿರುವುದನ್ನು ಮತ್ತು ಜ್ಞಾನದಲ್ಲಿ ಬೆಳೆಯುವುದನ್ನು ಕಾಣುವುದು ಆನಂದ. ನಿಮ್ಮೆಲ್ಲರ ಪರಿಪೂರ್ಣ ಜ್ಞಾನ ವಿಕಾಸ ಇನ್ನೂ ಹೆಚ್ಚಿನ ಆನಂದ. ಜ್ಞಾನವೆಂದರೆ, ನೀವು ಗಟ್ಟಿಯಾಗಿರುವ, ಅಲ್ಲಾಡಿಸಲು ಸಾಧ್ಯವಾಗದೇ ಇರುವ ಮತ್ತು ಹಸನ್ಮುಖದಿ೦ದಿರುವ ಸ್ಥಿತಿಯೇ ಸರಿ.

ಪ್ರಶ್ನೆ: ಸಲಿಂಗಕಾಮಿಯಾಗಿರುವುದು ಮನಸ್ಸಿನ ಒಂದು ಸಂಸ್ಕಾರವೇ?
ಶ್ರೀ ಶ್ರೀ ರವಿ ಶಂಕರ್: ಅದಾಗಿರಬಹುದು, ಅಥವಾ ಅದು ಜೀವಶಾಸ್ತ್ರಕ್ಕೆ ಸಂಬಂಧಿಸಿದುದೂ ಆಗಿರಬಹುದು.
ನೀವು ಗಂಡು ಮತ್ತು ಹೆಣ್ಣು, ಎರಡೂ ವರ್ಣತಂತುಗಳಿಂದ ಮಾಡಲ್ಪಟ್ಟಿರುವಿರಿ. ನಿಮ್ಮಲ್ಲಿನ ಸ್ತ್ರೀ ವರ್ಣತಂತುಗಳು ಕ್ರಿಯಾಶೀಲವಾಗಿದ್ದರೆ, ಆದರೆ ಶರೀರವು ಗಂಡಾಗಿದ್ದರೆ, ಆಗ ಪ್ರವೃತ್ತಿಗಳು ಬದಲಾಗಬಹುದು. ಹೀಗಿದ್ದರೂ, ಇದು ಒಂದು ಜೀವಮಾನವಿಡೀ ಅಲ್ಲ. ಈ ಪ್ರವೃತ್ತಿಗಳು ಸ್ವಲ್ಪ ಸಮಯದ ಕಾಲ ಬರಬಹುದು ಮತ್ತು ಮಾಯವಾಗುತ್ತದೆ. ನೇರವಾಗಿರುವ ಹಲವಾರು ಜನರು ಅಚಾನಕ್ಕಾಗಿ ಸಲಿಂಗಕಾಮಿಗಳಾಗುವುದನ್ನು ನೀವು ಕಾಣಬಹುದು, ಮತ್ತು ಒಂದು ದೀರ್ಘಕಾಲದ ವರೆಗೆ ಸಲಿಂಗಕಾಮಿಗಳಾಗಿರುವ ಅನೇಕ ಜನರು ವಿವಾಹವಾಗಲು ತೊಡಗುತ್ತಾರೆ. ಜನರಲ್ಲಿ ಈ ಎಲ್ಲಾ ವಿವಿಧ ಕ್ರಮ ವ್ಯತ್ಯಾಸಗಳು (ಪರಿವರ್ತನೆಗಳು), ಸಂಯೋಗಗಳು, ಮನೋಭಾವಗಳನ್ನು ನಾನು ನೋಡಿರುವೆನು. ಆದುದರಿಂದ, ನಿಮಗೆ ಹಣೆಪಟ್ಟಿ ಹಚ್ಚಿಕೊಳ್ಳದಿರುವುದು ಅತ್ಯುತ್ತಮವಾದುದು.
ಕೆಲವೊಮ್ಮೆ, ನಿರ್ದಿಷ್ಟ ವರ್ಗಗಳಲ್ಲಿ ಹೊಂದಿಕೆಯಾಗಲು ಜನರು ತಮ್ಮ ಮೇಲೆ ಬಲವಂತ ಹೇರುತ್ತಾರೆ. ಅವರನ್ನುತ್ತಾರೆ, "ಸರಿ, ನಾನು ಸಲಿಂಗಕಾಮಿನಿ" ಅಥವಾ "ನಾನು ಸಲಿಂಗಕಾಮಿ", ಮತ್ತು ಈ ಪ್ರವೃತ್ತಿಗಳು ಬದಲಾಗುವಾಗ, ನಂತರ ಅವರು ಛಿದ್ರವಾಗುತ್ತಾರೆ. ಕೆಲವೊಮ್ಮೆ ಜನರು ಸಲಿಂಗಕಾಮಿಗಳ ಬಗ್ಗೆ ಎಷ್ಟೊಂದು ಭಯಭೀತರಾಗುವರೆಂದರೆ, ಅಂತಹ ಪ್ರವೃತ್ತಿಗಳಿರುವ ಜನರನ್ನು ಅವರು ದ್ವೇಷಿಸಲು ತೊಡಗುತ್ತಾರೆ, ಇದು ಒಳ್ಳೆಯದಲ್ಲ. ಶರೀರದ ಯಾವುದೋ ಪ್ರವೃತ್ತಿಯ ಆಧಾರದ ಮೇಲೆ ನಿಮ್ಮ ಮೇಲೆಯೇ ಹಣೆಪಟ್ಟಿ ಹಚ್ಚಿಕೊಳ್ಳುವುದರಿಂದ ಹೊರಬರಬೇಕೆಂಬುದು ನನ್ನ ಸಲಹೆಯಾಗಿದೆ. ನೀವು ಪ್ರಜ್ಞೆಯಾಗಿರುವಿರಿ ಎಂಬುದನ್ನು ತಿಳಿಯಿರಿ. ನೀವು ಪ್ರೇಮವಾಗಿರುವಿರಿ. ನೀವು ಮಿನುಗುವ ಶಕ್ತಿಯಾಗಿರುವಿರಿ. ಶಕ್ತಿಯಾಗಿ, ಪ್ರೇಮವಾಗಿ ಮತ್ತು ಒಬ್ಬ ಸುಂದರ ವ್ಯಕ್ತಿಯಾಗಿ ನಿಮ್ಮನ್ನು ಗುರುತಿಸುವುದು, ನಿಮ್ಮಲ್ಲೇಳುವ ಶಾರೀರಿಕ ಪ್ರವೃತ್ತಿಯೊಂದಿಗೆ ನಿಮ್ಮನ್ನು ಗುರುತಿಸಿಕೊಳ್ಳುವುದಕ್ಕಿಂತ, ಹಣೆಪಟ್ಟಿ ಹಚ್ಚಿಕೊಳ್ಳುವುದಕ್ಕಿಂತ ಎಷ್ಟೋ ಹೆಚ್ಚು ಉತ್ತಮವಾಗಿದೆ.
ಅಂತಹ ಪ್ರವೃತ್ತಿಗಳು ಬರುವಾಗ, ನೀವು ದುಃಖಿಸಬೇಕಾಗಿ ಅಥವಾ ಆತ್ಮಗ್ಲಾನಿ ಭಾವನೆ ಹೊಂದಬೇಕಾಗಿ ಏನೂ ಇಲ್ಲ. ಅದು ಇರುವುದೇ ಹಾಗೆ! ಅದನ್ನು ಸ್ವೀಕರಿಸಿ! ಅದು ಪ್ರಕೃತಿಯಲ್ಲಿನ ಒಂದು ಆಗುವಿಕೆ - ನಿಮ್ಮೊಳಗೆ ಏಳುವ ವಿವಿಧ ಗಂಡು ಅಥವಾ ಹೆಣ್ಣು ಪ್ರವೃತ್ತಿಗಳು ಅಥವಾ ಭಾವನೆಗಳು ಅಥವಾ ಆಕರ್ಷಣೆಗಳು ಇರುತ್ತವೆ. ಅದರಲ್ಲೇನೂ ತಪ್ಪಿಲ್ಲ. ನೀವು ಅದನ್ನು ಮೀರಿ ಹೋಗಬೇಕು! ಅದರಾಚೆಗೆ ಇರುವುದು ಆತ್ಮವಾಗಿದೆ.
ಆತ್ಮಕ್ಕೆ ಯಾವುದೇ ಲಿಂಗವಿಲ್ಲ, ಅದು ಲಿಂಗವನ್ನು ಮೀರಿದುದಾಗಿದೆ. ಆತ್ಮವು ಪ್ರೇಮವಾಗಿದೆ, ಮತ್ತು ಅದುವೇ ನೀವಾಗಿರುವಿರಿ. ಇದನ್ನು ನೀವು ತಿಳಿದಾಗ, ನೀವು ಬಹಳ ಗಟ್ಟಿಯಾಗುವಿರಿ.

ಪ್ರಶ್ನೆ: ಪ್ರೀತಿಯ ಗುರುದೇವ, ನನ್ನ ಮೇಲೆ ಎಲ್ಲದಕ್ಕೂ ಸಿಡಿಮಿಡಿಗೊಳ್ಳುವ ಒಬ್ಬಳು ಹೆಂಗಸನ್ನು ನೋಡಿಕೊಳ್ಳುವುದು ಹೇಗೆ! ದಯವಿಟ್ಟು ಸಹಾಯ ಮಾಡಿ, ನಾನವಳನ್ನು ಬಹಳ ಪ್ರೀತಿಸುತ್ತೇನೆ.
ಶ್ರೀ ಶ್ರೀ ರವಿ ಶಂಕರ್: ಈ ವಿಷಯದಲ್ಲಿ ನಾನು ಬಹಳ ಅನನುಭವಿ! ನೀನೊಬ್ಬ ತಪ್ಪಾದ ವ್ಯಕ್ತಿಯನ್ನು ಕೇಳುತ್ತಿರುವೆ!
ನಿನ್ನಲ್ಲಿ ಸಿಡಿಮಿಡಿಗೊಳ್ಳುವ ಹಾಗೂ ನೀನು ಬಹಳವಾಗಿ ಪ್ರೀತಿಸುವ ಒಬ್ಬ ವ್ಯಕ್ತಿಯೊಡನೆ ನೀನೇನು ಮಾಡುವೆ? ನನ್ನ ಊಹೆಯ ಪ್ರಕಾರ, ನೀನದನ್ನು ಸುಮ್ಮನೆ ಸ್ವೀಕರಿಸಬೇಕು ಮತ್ತು ಸುಮ್ಮನೇ ಮುಂದೆ ಸಾಗಬೇಕು.
ತನ್ನ ಪತ್ನಿಯಿಂದ ಬಹಳ ತೊಂದರೆಗೀಡಾಗಿದ್ದ ಒಬ್ಬ ವ್ಯಕ್ತಿಯ ಒಂದು ಕಥೆಯಿದೆ. ಅವಳು ಮಾಡುತ್ತಿದ್ದುದೆಲ್ಲವೂ, ಅವನು ಬಯಸಿದುದರ ವಿರುದ್ಧವಾಗಿತ್ತು. ಅವನು, "ನಾನಿವತ್ತು ಪಾಸ್ತಾ ತಿನ್ನಲು ಬಯಸುವುದಿಲ್ಲ" ಎಂದು ಹೇಳಿದರೆ, ಅವನಿಗೆ ಆ ದಿನ ಕೇವಲ ಪಾಸ್ತಾ ಮಾತ್ರ ಸಿಗುವುದನ್ನು ಅವಳು ಖಾತ್ರಿ ಮಾಡುತ್ತಿದ್ದಳು. ಅವನು, "ನನಗೆ ನೀಲಿ ಜೀನ್ಸ್ ಇಷ್ಟವಿಲ್ಲ" ಎಂದು ಹೇಳಿದರೆ, ಆ ದಿನ ಅವಳು ನೀಲಿ ಜೀನ್ಸ್ ಧರಿಸುತ್ತಿದ್ದಳು.
ಅವನು ಅವಳನ್ನು ಏನನ್ನೇ ಕೇಳಲಿ, ಅವಳು ಅದರ ವಿರುದ್ಧವಾಗಿಯೇ ಮಾಡುತ್ತಿದ್ದಳು. ಅವನು, "ನನಗೆ ಹೊರಗೆ ಹೋಗಲು ಮನಸ್ಸಿಲ್ಲ" ಎಂದು ಹೇಳಿದರೆ, ಅವಳು, "ಇಲ್ಲ, ನಾನು ಹೊರಗೆ ಹೋಗಲು ಬಯಸುತ್ತೇನೆ" ಎಂದು ಹೇಳುತ್ತಿದ್ದಳು. ಅವನು ಹೊರಗೆ ಹೋಗಲು ಬಯಸಿದಾಗ ಅವಳು, "ನಾನು ಮನೆಯಿಂದ ಹೊರಗೆ ಕಾಲಿಡಲು ಬಯಸುವುದಿಲ್ಲ" ಎಂದು ಹೇಳುತ್ತಿದ್ದಳು!
ಅವನು ಬಹಳ ತೊಂದರೆಗೀಡಾಗಿದ್ದ, ಬಹಳ ಚಿಂತೆಗೊಳಗಾಗಿದ್ದ ಮತ್ತು ಒಂದು ಬಹಳ ಉದ್ದನೆಯ ಮುಖ ಹೊಂದಿದ್ದ.
ಒಂದು ದಿನ ಬೆಳಗ್ಗೆ ಅವನು ನಡೆಯಲು ಹೋದಾಗ, ಅವನಿಗೆ ಒಬ್ಬರು ಗುರು ಕಾಣಲು ಸಿಕ್ಕಿದರು. ಗುರುವು ಅವನಲ್ಲಿ ಕೇಳಿದರು, "ಆತ್ಮೀಯನೇ, ನೀನು ಸಂತೋಷವಾಗಿರುವೆಯಾ? ನೀನು ಸಂತೋಷವಾಗಿರುವಂತೆ ಕಾಣಿಸುವುದಿಲ್ಲ. ನಿನಗೇನು ಬೇಕು?"
ಅವನಂದನು, "ನನಗೊಂದು ದೊಡ್ಡ ಸಮಸ್ಯೆಯಿದೆ. ನಾನೇನೇ ಹೇಳಿದರೂ, ನನ್ನ ಪತ್ನಿಯು ಅದಕ್ಕೆ ತದ್ವಿರುದ್ಧವಾಗಿ ಮಾಡುತ್ತಾಳೆ."
ಆಗ ಜ್ಞಾನಿ ವ್ಯಕ್ತಿಯು ಅವನ ಕಿವಿಯಲ್ಲಿ ಏನನ್ನೋ ಪಿಸುಗುಟ್ಟಿದನು.
ಮೂರು ತಿಂಗಳುಗಳ ಬಳಿಕ, ಒಂದು ದಿನ ಬೆಳಗ್ಗೆ ಆ ವ್ಯಕ್ತಿಯು ಸಂತೋಷವಾಗಿ ನಡೆದುಕೊಂಡು ಹೋಗುತ್ತಿದ್ದಾಗ, ಪುನಃ ಅವನಿಗೆ ಗುರುವು ಕಾಣಲು ಸಿಕ್ಕಿದರು. ಗುರು ಅಂದರು, "ಹೇ, ನೀನು ಹೆಚ್ಚು ಸಂತೋಷವಾಗಿರುವಂತೆ ಕಾಣಿಸುತ್ತಿರುವೆ!" ಅವನಂದನು, "ಹೌದು, ನಿಮ್ಮ ಉಪಾಯ ಫಲಿಸಿತು."
ಈಗ, ಉಪಾಯವೇನಾಗಿತ್ತು?
ಗುರುವು ಅವನಿಗೆ, "ನಿನ್ನ ಹೃದಯದಲ್ಲಿರುವುದನ್ನು ನಿನ್ನ ಪತ್ನಿಗೆ ಹೇಳಬೇಡ. ನಿನಗೇನು ಬೇಕೋ, ಅದರ ವಿರುದ್ಧವಾದುದನ್ನು ಹೇಳು! ನಿನಗೆ ಹೊರಗೆ ಹೋಗಬೇಕಿದ್ದರೆ, ನೀನು ಮನೆಯಿಂದ ಹೊರಗೆ ಹೆಜ್ಜೆಯಿಡಲು ಬಯಸುವುದಿಲ್ಲವೆಂದು ಅವಳಿಗೆ ಹೇಳು. ನಿನಗೆ ಆಪಲ್ ಪೈ (ಸೇಬಿನಿಂದ ಮಾಡಿದ ಸಿಹಿತಿಂಡಿ) ಬೇಕಿದ್ದರೆ, ಅದನ್ನು ಮಾಡುವುದು ಬೇಡವೆಂದು ಅವಳಿಗೆ ಹೇಳು. ಅವಳು ನೀಲಿ ಜೀನ್ಸ್ ಧರಿಸುವುದು ನಿನಗೆ ಬೇಡವಾಗಿದ್ದರೆ, ಆ ದಿನ ನೀಲಿ ಜೀನ್ಸ್ ಧರಿಸುವಂತೆ ಅವಳಲ್ಲಿ ಹೇಳು."
ಆ ವ್ಯಕ್ತಿಯು ಗುರುವಿಗಂದನು, "ನಾನು, ನೀವು ಏನು ಹೇಳಿದಿರೋ ಅದನ್ನು ಮಾಡಿದೆ, ಮತ್ತು ಅದು ಕೆಲಸ ಮಾಡಿತು. ನಾನು ನನಗೆ ಬೇಕಾಗಿರುವ ಎಲ್ಲದರ ವಿರುದ್ಧವನ್ನು ಹೇಳುತ್ತೇನೆ, ಮತ್ತು ನಾವೀಗ ಸಂತೋಷವಾಗಿದ್ದೇವೆ."
ಅದೇ ರೀತಿ, ಯಾವುದು ಅವಳಿಗೆ ಸಂತೋಷವನ್ನುಂಟುಮಾಡಬಹುದು ಎಂಬುದನ್ನು ನೀನು ಕಂಡುಹಿಡಿ, ಮತ್ತು ಅವಳು ಸಿಡಿಮಿಡಿಗೊಳ್ಳುವುದನ್ನು ತಪ್ಪಿಸು.
ಕೆಲವೊಮ್ಮೆ, ಕಿರಿಕಿರಿಗೊಳ್ಳುವುದು ಜನರ ಸ್ವಭಾವವಾಗುತ್ತದೆ. ಏನೇ ಬಂದರೂ, ಅವರು ದೂರುತ್ತಾ ಇರುತ್ತಾರೆ. ನೀವೇನೇ ಮಾಡಿದರೂ, ದೂರಲು ಅವರು ಏನನ್ನಾದರೂ ಕಂಡುಹುಡುಕುತ್ತಾರೆ. ವಿಶೇಷವಾಗಿ ಅವರು ೭೦ ಅಥವಾ ೮೦ ವರ್ಷ ವಯಸ್ಸು ದಾಟಿದ ಬಳಿಕ, ಅದು ಇನ್ನೂ ಹೆಚ್ಚು. ತಮ್ಮ ಜೀವನವಿಡೀ ಅವರು ತಮ್ಮ ಮನಸ್ಸು ಮತ್ತು ಮೆದುಳನ್ನು ಆ ರೀತಿಯಲ್ಲಿ ತಯಾರಿ ಮಾಡಿದುದರಿಂದ - ದೂರುವುದು, ದೂರುವುದು, ದೂರುವುದು ಮತ್ತು ದೂರುವುದು. ಆಗ ಅದು ಅವರ ಜೀವನದಲ್ಲಿ ಪ್ರಮುಖ ನಡವಳಿಕೆಯ ಮಾದರಿಯಾಗುತ್ತದೆ. ನೀವದನ್ನು ಸುಮ್ಮನೇ ನುಂಗಬೇಕಾಗುತ್ತದೆ, ಸ್ವೀಕರಿಸಬೇಕಾಗುತ್ತದೆ. ಅವರನ್ನು ಪ್ರಸನ್ನಗೊಳಿಸಲು ಪ್ರಯತ್ನಿಸಬೇಡಿ.
ನಿಮ್ಮ ಅತ್ಯಂತ ದೊಡ್ಡ ಕಷ್ಟವೆಂದರೆ, ಜನರು ನಿಜವಾಗಿ ತಮ್ಮ ದೂರುವ ಪ್ರಕ್ರಿಯೆಯಲ್ಲಿ ಸಂತೋಷವಾಗಿರುವಾಗ ನೀವು ಅವರನ್ನು ಮೆಚ್ಚಿಸಲು ಪ್ರಯತ್ನಪಡುವಿರಿ. ನೀವವರನ್ನು ಬದಲಾಯಿಸಲು, ಅವರನ್ನು ಸಂತೋಷಪಡಿಸಲು ಪ್ರಯತ್ನಿಸುವಿರಿ ಮತ್ತು ಅದು ಕೆಲಸ ಮಾಡುವುದಿಲ್ಲ! ಅವರು ಏನನ್ನು ಬಯಸುವರೋ ಅದನ್ನು ಮಾಡಲು ನೀವು ಅವರನ್ನು ಬಿಡಬೇಕು, ಆದರೆ ಅವರ ದೂರುಗಳು ನಿಮ್ಮ ತಲೆಯನ್ನು ಪ್ರವೇಶಿಸಲು ಬಿಡಬೇಡಿ. ಅವರು ದೂರುವರೆಂದು ನೀವು ದೂರಬೇಡಿ. ತಿಳಿಯಿತೇ? ಎಷ್ಟೇ ಬೆಲೆ ತೆತ್ತಾದರೂ, ನಿಮ್ಮ ಮನಸ್ಸನ್ನು ಕಾಪಾಡಿಕೊಳ್ಳಿ. ಇತರರು ದೂರುತ್ತಿದ್ದರೆ, ದೂರಲಿ ಬಿಡಿ! ನೀವು ಅವರನ್ನು ತಿದ್ದಲು ಸಾಧ್ಯವಿಲ್ಲದಿದ್ದರೆ, ನೀವವರನ್ನು ಸುಮ್ಮನೇ ಸ್ವೀಕರಿಸಿ ಮತ್ತು ಮುಂದೆ ಸಾಗಿ.
ನೋಡಿ, ಹೆಚ್ಚು ಸಮಯ ಇಲ್ಲ! ಎಲ್ಲವೂ ಅಂತ್ಯದ ಕಡೆಗೆ ಸಾಗುತ್ತಿದೆ; ನಾವೆಲ್ಲರೂ ಸಾವಿನ ಕಡೆಗೆ ಸಾಗುತ್ತಿದ್ದೇವೆ. ಎಷ್ಟು ಕಾಲ ನೀವು ಒಬ್ಬರನ್ನು ಸಂತೈಸಲು ಪ್ರಯತ್ನ ಪಡುತ್ತಾ ಇರಲು ಸಾಧ್ಯ? ಅದರರ್ಥ ನೀವು ಯಾರೊಂದಿಗಾದರೂ ನಿಷ್ಠುರರಾಗಿರಬೇಕೆಂದಲ್ಲ. ನೀವು ಜನರೊಂದಿಗೆ ನಯವಾಗಿರಿ, ಹೀಗಿದ್ದರೂ, ಸಿಕ್ಕಿಬೀಳಬೇಡಿ, "ಓ, ಅವರು ಕಿರಿಕಿರಿಗೊಂಡಿರುವರು, ನಾನೇನು ಮಾಡಲಿ?" ನೀವು ಹೆಚ್ಚೇನೂ ಮಾಡಲಾರಿರಿ! ನಡೆಯುತ್ತಾ ಇರಿ!
ಈ ಸಮಸ್ಯೆ ನನಗೆ ಎಲ್ಲೆಡೆಗಳಲ್ಲಿಯೂ, ಪ್ರಪಂಚದ ಪ್ರತಿಯೊಂದು ಭಾಗದಲ್ಲಿಯೂ ಕಾಣಸಿಗುತ್ತದೆ. ಬಹುತೇಕ ಪ್ರತಿಯೊಂದು ಮನೆಯಲ್ಲಿ, ಎಲ್ಲರನ್ನೂ ಕಿರಿಕಿರಿಗೊಳಿಸುವ ಒಬ್ಬರಿರುತ್ತಾರೆ ಮತ್ತು ಎಲ್ಲರೂ ಯಾರಾದರೊಬ್ಬರಿಂದ ಕಿರಿಕಿರಿಗೊಳ್ಳುತ್ತಾರೆ. ಆಗ ಅಲ್ಲಿ ಒಂದು ಮಾತಿನ ಯುದ್ಧ ನಡೆಯುತ್ತದೆ. ಪ್ರಪಂಚವಿರುವುದೇ ಹಾಗೆ ಎಂದು ನಾನು ಹೇಳಿದುದು ಅದಕ್ಕೇ! ಅದಕ್ಕೇ ಇದು ಮಾಯೆಯೆಂದು ಕರೆಯಲ್ಪಡುತ್ತದೆ; ಅದು ಏನೋ ಆಗಿ ತೋರುತ್ತದೆ, ಮತ್ತು ಅದು ನಿಜವಾಗಿ ಅದಲ್ಲ.

ಪ್ರಶ್ನೆ: ನನಗೆ ನನ್ನದೇ ಮತ್ತು ನನ್ನ ಪ್ರೀತಿಪಾತ್ರರ ಸಾವಿನ ಬಗ್ಗೆ ಬಹಳಷ್ಟು ಭಯವಿದೆ. ಈ ಭಯದಿಂದ ಹೊರಬರಲು ದಯವಿಟ್ಟು ಏನಾದರೂ ಸಲಹೆ ನೀಡಿ. 
ಶ್ರೀ ಶ್ರೀ ರವಿ ಶಂಕರ್: ಏನೂ ಇಲ್ಲವೇ ಇಲ್ಲ! ಕೇವಲ ಭಯದೊಂದಿಗಿರು ಮತ್ತು ಅದು ಹೇಗೆ ಆರಿಹೋಗುವುದೆಂದು ನೋಡು. ಅದೊಂದು ನೀರಿನ ಗುಳ್ಳೆಯಂತೆ. ನೀನು ಭಯವನ್ನು ತೊಲಗಿಸಲು ಪ್ರಯತ್ನಿಸುವೆ ಮತ್ತು ಅದು ಇನ್ನೂ ಹೆಚ್ಚಾಗುತ್ತದೆ. ಸುಮ್ಮನೆ ಉಸಿರಾಟ ನಡೆಸು. ಕ್ರಿಯೆ ಮತ್ತು ಧ್ಯಾನ ಸಾಕು, ಹಾಗೂ ನಿನ್ನನ್ನು ಅದರಿಂದ ಹೊರತೆಗೆಯಲು ಈ ಎಲ್ಲಾ ಜ್ಞಾನ ಸಾಕು.

ಪ್ರಶ್ನೆ: ನಮಗೆ ಮತ್ತು ನಮ್ಮ ಸಂಬಂಧಗಳಿಗೆ ತೊಂದರೆಯುಂಟುಮಾಡುವ ಶಾರೀರಿಕ ಬಯಕೆಗಳನ್ನು ನಾವು ಹೇಗೆ ತೊಲಗಿಸಬಹುದು?
ಶ್ರೀ ಶ್ರೀ ರವಿ ಶಂಕರ್: ನಿಮ್ಮ ಪ್ರಾಣವನ್ನು ವರ್ಧಿಸುವುದರಿಂದ.
ಕಾಮವಿರುವಾಗ, ಅಲ್ಲಿ ಬಾಚಿಕೊಳ್ಳಲು ಬಯಸುವ ಒಂದು ಭಾವನೆಯಿರುತ್ತದೆ. ಪ್ರೇಮವಿರುವಾಗ, ಕೊಡಲು ಬಯಸುವ ಒಂದು ಭಾವನೆಯಿರುತ್ತದೆ.
ಕಾಮದ ಭಾವನೆಯನ್ನು ಪ್ರೇಮವಾಗಿ ಹೇಗೆ ಪರಿವರ್ತನೆಗೊಳಿಸಬಹುದು? ನಮ್ಮ ಶಾರೀರಿಕ ವ್ಯವಸ್ಥೆಯಲ್ಲಿರುವ ಶಕ್ತಿಯ ಮಟ್ಟವನ್ನು ಹೆಚ್ಚಿಸುವುದರಿಂದ. ಶಕ್ತಿಯು ಕೆಳಗಿನ ಚಕ್ರದಲ್ಲಿ (ಬೆನ್ನುಹುರಿಯ ಬುಡದಿಂದ ಎರಡು-ಮೂರು ಅಂಗುಲಗಳಷ್ಟು ಮೇಲೆ) ಸಿಕ್ಕಿಹಾಕಿಕೊಂಡಾಗ, ಅಲ್ಲಿ ಕಾಮದ ಒಂದು ಭಾವನೆಯಿರುತ್ತದೆ. ಹೀಗಿದ್ದರೂ, ಶಕ್ತಿ ಪ್ರವಹಿಸುವ ವಾಹಿನಿಗಳು ತೆರೆದುಕೊಂಡಾಗ, ಶಕ್ತಿಯು ಏರುತ್ತದೆ. ಆಗ ಅಲ್ಲಿ ಹೆಚ್ಚು ಪ್ರೇಮ, ಸಹಾನುಭೂತಿ, ಅರಿವು ಇರುತ್ತದೆ. ಈ ಎಲ್ಲಾ ಇತರ ಸುಂದರವಾದ, ಒಳ್ಳೆಯ ಸೂಕ್ಷ್ಮ ಭಾವನೆಗಳು ಕೂಡಾ ತೆರೆದುಕೊಳ್ಳುತ್ತವೆ. ಆಗ ಶಾರೀರಿಕ ವ್ಯವಸ್ಥೆಯಿಂದ ಹಿಂಸೆಯು ಮಾಯವಾಗುತ್ತದೆ.

ಪ್ರಶ್ನೆ: ಆತ್ಮ ಸಾಕ್ಷಾತ್ಕಾರವು ಎಲ್ಲಿ ಮತ್ತು ಯಾವಾಗ ಆಗುವುದು?
ಶ್ರೀ ಶ್ರೀ ರವಿ ಶಂಕರ್: ಆತ್ಮ ಸಾಕ್ಷಾತ್ಕಾರದ ಅನುಭವವು ಇಲ್ಲಿಯೇ ಆಗುವುದು! ನಾನು, "ನಿಮ್ಮ ಕಣ್ಣುಗಳನ್ನು ಮುಚ್ಚಿ" ಎಂದು ಹೇಳಿ, ನಾವು ಧ್ಯಾನ ಮಾಡುವಾಗ, ಆ ಸಮಯದಲ್ಲಿ, ನಿಮಗೆ ನಿಮ್ಮ ಗುರುತು ನೆನಪಿರುತ್ತದೆಯೇ? ನೀವೊಬ್ಬ ಗಂಡಸೋ, ಒಬ್ಬಳು ಹೆಂಗಸೋ, ಅಥವಾ ಒಬ್ಬ ಉಪನ್ಯಾಸಕನೋ? ನಿಮಗೆ ನಿಮ್ಮ ವಯಸ್ಸು ತಿಳಿದಿರುತ್ತದೆಯೇ? ನೀವು ಅಜರಾಮರರಾಗಿರುವಿರೆಂಬುದನ್ನು ನೀವು ಕಾಣುವಿರೇ? ನೀವು ನಿಮ್ಮ ವಯಸ್ಸನ್ನು, ನಿಮ್ಮ ವ್ಯಕ್ತಿತ್ವವನ್ನು ಮೀರಿದವರು. ಅದುವೇ ಆತ್ಮ ಸಾಕ್ಷಾತ್ಕಾರ. ನಿಧಾನವಾಗಿ, ಹಂತ ಹಂತವಾಗಿ ನೀವು ಈ ದಿಕ್ಕಿನಲ್ಲಿ ಸಾಗುತ್ತೀರಿ. ನಂತರ ನಿಮಗೆ ತಿಳಿಯುತ್ತದೆ, "ನಾನು ಕೇವಲ ಶರೀರ ಮಾತ್ರವಲ್ಲ, ನಾನು ಶುದ್ಧ ಚೈತನ್ಯವಾಗಿರುವೆನು."
ಇದು ನಿನ್ನ ಮೊದಲನೆಯ ಉನ್ನತ ಶಿಬಿರವೇ? ನಿನಗೆ ಇನ್ನೂ ಕೆಲವು ಹೆಚ್ಚಿನ ಉನ್ನತ ಶಿಬಿರ ಮಾಡಬೇಕಾಗಬಹುದು. ಅದು ಪರವಾಗಿಲ್ಲ. ಮೊದಲನೆಯ ದಿನ ಮನಸ್ಸು ಎಲ್ಲಾ ಕಡೆ ಹೋಗುತ್ತಿತ್ತು ಎಂಬುದನ್ನು ನೀನು ಗಮನಿಸಿದ್ದೀಯಾ? ಎರಡನೆಯ ದಿನ, ಅದು ನೆಲೆಯೂರಲು ಪ್ರಾರಂಭಿಸಿತು. ಮೂರನೆಯ ದಿನ, ಇವತ್ತು, ಧ್ಯಾನವು ಇನ್ನೂ ಉತ್ತಮವಾಗಿತ್ತು. ಹೀಗೆ, ನಿಧಾನವಾಗಿ, ನೀನು ಆ ದಿಕ್ಕಿನಲ್ಲಿ ಸಾಗುವೆ.

ಪ್ರಶ್ನೆ: ಪ್ರೀತಿಯ ಗುರುದೇವ, ನಾನು ಜ್ಞಾನದ ಮಾತುಗಳನ್ನು ಕೇಳಿಸಿಕೊಳ್ಳುವಾಗ, ನನ್ನೊಳಗಿರುವ ಏನೋ ಒಂದು ನಡುಗುತ್ತದೆ. ನಡುಗುವ ಅದು ಏನು?
ಶ್ರೀ ಶ್ರೀ ರವಿ ಶಂಕರ್: ಅದುವೇ ಶಕ್ತಿ, ನಿಜವಾದ ಚೈತನ್ಯ, ನಿಜವಾದ ನೀನು. ಅದುವೇ ಪ್ರಜ್ಞೆಯೆಂದು ಕರೆಯಲ್ಪಡುವುದು; ನಿನ್ನೊಳಗೆ ಚಲಿಸುವ ಆ ಏನೋ ಒಂದು; ಶಕ್ತಿ. ನೀನು ಆ ಶಕ್ತಿಯಿಂದ ಮಾಡಲ್ಪಟ್ಟಿರುವೆ.