ಭಾನುವಾರ, ಡಿಸೆಂಬರ್ 30, 2012

ನಮ್ಮ ಬದುಕಿನಲ್ಲಿ ಬದಲಾವಣೆಯು೦ಟಾಗಲು ಏನು ಮಾಡಬೇಕು?


ಬಾಡ್ ಅಂತೋಗಸ್ಟ್, ಜರ್ಮನಿ
ದಶಂಬರ ೩೦, ೨೦೧೨

ಪ್ರಶ್ನೆ: ಪ್ರೀತಿಯ ಗುರುದೇವ, ಭಾರತದಲ್ಲಿ ಬಲಾತ್ಕಾರಕ್ಕೊಳಪಟ್ಟವಳ ಮರಣದಿಂದ ನಾನು ಜರ್ಜರಿತಗೊಂಡಿರುವೆನು. ಭಾರತದಲ್ಲಿ ಯಾಕೆ ಅಂತಹ ಕ್ರೂರ ಬಲಾತ್ಕಾರ ಅಪರಾಧಗಳು ಆಗುತ್ತವೆ?
ಶ್ರೀ ಶ್ರೀ ರವಿ ಶಂಕರ್: ಕೇಳು, ಅದು ಕೇವಲ ಒಂದು ಜಾಗದಲ್ಲಲ್ಲ, ಮತ್ತು ಅದು ಕೇವಲ ಭಾರತದಲ್ಲಿ ಮಾತ್ರವಲ್ಲ. ಈ ಘಟನೆಯು ಅಷ್ಟೊಂದು ಪ್ರಚಾರವನ್ನು ಪಡೆಯಿತೆಂದು ಮಾತ್ರ. ಅಂತಹ ಅಪರಾಧಗಳು ಪ್ರಪಂಚದಾದ್ಯಂತ ಹಲವಾರು ನಡೆಯುತ್ತಿವೆ. ಕೇವಲ ಮಹಿಳೆಯರ ಮೇಲೆ ಮಾತ್ರವಲ್ಲ, ಆದರೆ ಮಕ್ಕಳ ಮೇಲೆ, ಮತ್ತು ವಯಸ್ಸಾದವರ ಮೇಲೆ ಕೂಡಾ!
ನಮ್ಮ ಸ್ವಯಂಸೇವಕರಲ್ಲಿ ಒಬ್ಬಳು, ಕೆನ್ಯಾದ ನೈರೋಬಿಯಲ್ಲಿ ಏನಾಗುತ್ತಿದೆಯೆಂಬುದರ ಬಗ್ಗೆ ಈಗಷ್ಟೇ ನನಗೆ ಹೇಳಿದಳು. ಅದು ಭೀಕರವಾಗಿದೆ; ಜನರು ಅಲ್ಲಿ ಸುರಕ್ಷಿತವಾಗಿಲ್ಲ. ಅವಳು ಹೇಳಿದುದನ್ನು ಕೇಳಿ, ಜನರು ತಮ್ಮ ಮನೆಗಳಿಂದ ಹೊರಗೆ ಹೋಗಬಾರದೆಂದು ನಾನು ಹೇಳಿದೆ. ಅದಕ್ಕೆ ಅವಳು, ’ಜನರಿಗೆ ತಮ್ಮ ಮನೆಗಳೊಳಗೆ ಇರಲು ಇನ್ನೂ ಹೆಚ್ಚು ಭಯವಾಗುತ್ತಿದೆ, ಯಾಕೆಂದರೆಅಲ್ಲಿ ಬಹಳಷ್ಟು ಕಳ್ಳತನಗಳಾಗುತ್ತವೆ. ತಮ್ಮ ಕಾರುಗಳಲ್ಲಿ ಹೊರಗೆ ಹೋಗುವುದು ಹೆಚ್ಚು ಸುರಕ್ಷಿತವೆಂದು ಅವರಿಗೆ ಅನ್ನಿಸುತ್ತದೆ’ ಎಂದು ಹೇಳಿದಳು.
ನೀವು ನಿಮ್ಮ ಸ್ವಂತ ಮನೆಯೊಳಗೇ ಸುರಕ್ಷಿತವಾಗಿಲ್ಲ! ಅಂತಹ ಘಟನೆಗಳು ಹೆಚ್ಚಾಗುತ್ತಿವೆ; ಮುಂಬೈಯಲ್ಲಿ ಕೂಡಾ. ಒಬ್ಬಂಟಿಯಾಗಿ ವಾಸಿಸುವಂತಹ ವಯಸ್ಸಾದ ಜನರನ್ನು ನೋಡಿಕೊಂಡು, ನಂತರ ಅವರನ್ನು ಗುರಿಯಾಗಿಸುತ್ತಾರೆ. ಅಂತಹ ಅಪರಾಧಗಳು ಬಹುತೇಕ ಎಲ್ಲೆಡೆಯೂ ಆಗುತ್ತಿವೆ. ಇಟೆಲಿಯಲ್ಲಿ, ಸ್ಪೈನಿನಲ್ಲಿ ಮತ್ತು ಟರ್ಕಿಯಲ್ಲಿ ಹಲವಾರು ಅಪರಾಧಗಳು ವರದಿಯಾಗಿವೆ; ಇಲ್ಲಿ ಜರ್ಮನಿಯಲ್ಲಿ ಕೂಡಾ, ಅಲ್ಲವೇ? ರಷ್ಯಾದಲ್ಲಿ ಅದು ಎಷ್ಟೊಂದು ಹೆಚ್ಚೆಂದರೆ, ಅಲ್ಲಿ ರಸ್ತೆಗಳಲ್ಲಿ ನಡೆಯುವುದು ಕೂಡಾ ಸುರಕ್ಷಿತವಲ್ಲ ಎಂಬುದನ್ನು ನಾನು ಕೇಳಿದ್ದೇನೆ.  
ಇಂತಹ ವಿಷಯಗಳನ್ನು ಕೇಳುವಾಗ, ನಾವೆತ್ತ ಸಾಗುತ್ತಿರುವೆವೆಂದು ನನಗೆ ಅಚ್ಚರಿಯಾಗುತ್ತದೆ. ಈ ಒಂದು ಘಟನೆಯು ಅಷ್ಟೊಂದು ದೊಡ್ಡ ಅಲೆಯನ್ನು ಸೃಷ್ಟಿಸಿತು. ನಿಮಗೆ ಗೊತ್ತಾ, ಈ ಘಟನೆಯ ಬಗ್ಗೆ ಅರಿವನ್ನು ಮೂಡಿಸುವುದರಲ್ಲಿ ಆರ್ಟ್ ಆಫ್ ಲಿವಿಂಗ್ ಒಂದು ಅಗ್ರಗಾಮಿ ಆಗಿತ್ತೆಂಬುದು? ಮೊದಲನೆಯ ದಿನವೇ, ಇಂಡಿಯಾ ಗೇಟಿಗೆ ಮೋಂಬತ್ತಿ ಬೆಳಕಿನ ನಡಿಗೆಯನ್ನು ಕೈಗೊಂಡದ್ದು ಯೆಸ್ ಪ್ಲಸ್ ವಿದ್ಯಾರ್ಥಿಗಳಾಗಿದ್ದರು. ನೋಡಿ, ನಾವು ಯಾವುದನ್ನೆಲ್ಲಾ ಪ್ರಾರಂಭಿಸಿದೆವೋ ಅದು ಇನ್ನೂ ಒಂದು ದೊಡ್ಡ ಆಯಾಮವನ್ನು, ದೊಡ್ಡ ಪ್ರಮಾಣವನ್ನು ತೆಗೆದುಕೊಂಡಿದೆ; ಎಲ್ಲೆಡೆಗಳಲ್ಲಿಯೂ ಈಗ ಜನರು ಜಾಗೃತರಾಗಿದ್ದಾರೆ. ಎಲ್ಲೆಡೆಗಳಲ್ಲಿಯೂ ಇಂತಹ ಅಪರಾಧಗಳಾಗುವುದನ್ನು ಕಡಿಮೆಗೊಳಿಸುವುದರಲ್ಲಿ ಇದು ಸಹಾಯಕವಾಗಬಹುದೆಂದು ನಾನು ಆಶಿಸುತ್ತೇನೆ, ಮತ್ತು ನನಗೆ ಇದರ ಬಗ್ಗೆ ಖಾತ್ರಿಯಿದೆ. ಅದಕ್ಕಾಗಿಯೇ ನಾವೆಲ್ಲರೂ ಒಂದು ಹಿಂಸಾ-ಮುಕ್ತವಾದ ಮತ್ತು ಒತ್ತಡ-ಮುಕ್ತವಾದ ಸಮಾಜಕ್ಕಾಗಿ ಕೆಲಸ ಮಾಡಬೇಕು.
ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಜನರು ಬೇಡಿಕೆಯೊಡ್ಡುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ. ಆದರೆ, ತಮ್ಮ ಕಾಮ ಮತ್ತು ಭಾವನೆಗಳ ಮೇಲೆ ನಿಯಂತ್ರಣವಿಲ್ಲದ ಹತ್ತು ಇತರ ಜನರು ಏಳುವರು. ಅವರು ತಮ್ಮ ಪ್ರವೃತ್ತಿಗಳಲ್ಲಿ ಬಹಳ ಹಿಂಸಾತ್ಮಕ ಪ್ರವೃತ್ತಿಗಳುಳ್ಳವರಾಗುತ್ತಾರೆ. ನೀವೇನು ಮಾಡುವಿರಿ? ಎಷ್ಟು ಜನರನ್ನು ನೀವು ಗಲ್ಲಿಗೇರಿಸುತ್ತಾ; ಶಿಕ್ಷಿಸುತ್ತಾ ಹೋಗುವಿರಿ? ನಾವು ಸುಧಾರಣೆ ಮಾಡಬೇಕಾಗಿದೆ.
ಸಾವಿರಾರು ಯುವಜನರು ಹಲವಾರು ಹಿಂಸಾತ್ಮಕ ಸಿನೆಮಾಗಳನ್ನು ನೋಡುತ್ತಾರೆ, ಮತ್ತು ಹಿಂಸಾತ್ಮಕವಾದ ವಿಡಿಯೋ ಗೇಮುಗಳನ್ನು ಆಡುತ್ತಾರೆ. ಅವುಗಳು ಕೂಡಾ ಪ್ರಪಂಚದಲ್ಲಿ ಹೆಚ್ಚುತ್ತಿರುವ ಅಪರಾಧಕ್ಕೆ ಹೊಣೆಯಾಗಿವೆ. ಮಕ್ಕಳು ವಿಡಿಯೋ ಗೇಮುಗಳಲ್ಲಿ ಬಂದೂಕಿನಿಂದ ಗುಂಡಿಕ್ಕಲು ಶುರು ಮಾಡಿದಾಗ, ಅಲ್ಲಿನ ಕಾಲ್ಪನಿಕ ಪ್ರಪಂಚ ಮತ್ತು ವಾಸ್ತವದ ನಡುವಿನ ವ್ಯತ್ಯಾಸವನ್ನು ತಿಳಿಯುವಲ್ಲಿ ಅವರು ವಿಫಲರಾಗುತ್ತಾರೆ. ಅವರ ಮನಸ್ಸಿನಲ್ಲಿ, ಎರಡರ ನಡುವೆ ಒಂದು ಬಹಳ ತೆಳ್ಳಗಿನ ಗೆರೆಯಿರುತ್ತದೆ. ಕಾಲ್ಪನಿಕ ಪ್ರಪಂಚದಲ್ಲಿ ಅವರು ಜನರಿಗೆ ಗುಂಡಿಕ್ಕಲು ಸಾಧ್ಯವಾದರೆ, ನಿಜ ಪ್ರಪಂಚದಲ್ಲಿ ಒಂದು ಬಂದೂಕು ತೆಗೆದುಕೊಂಡು ಜನರಿಗೆ ಗುಂಡಿಕ್ಕುವುದು ಒಂದು ದೊಡ್ಡ ವಿಷಯವೆಂದು ಅವರಿಗೆ ಅನ್ನಿಸುವುದಿಲ್ಲ. ಇದುವೇ ಅಮೇರಿಕಾದ ಕನೆಕ್ಟಿಕಟ್ ನಲ್ಲಿ ಸಂಭವಿಸಿದುದು. ಬಹಳ ಸಾಧು ಹುಡುಗನೊಬ್ಬನು ತನ್ನ ತಾಯಿಗೆ, ಹಲವಾರು ಮಕ್ಕಳಿಗೆ ಗುಂಡಿಕ್ಕಿ ನಂತರ ತನಗೆ ತಾನೇ ಗುಂಡಿಕ್ಕಿಕೊಂಡನು!
ಕಳೆದ ವರ್ಷ ನೋರ್ವೆಯಲ್ಲಿ ಕೂಡಾ ಏನಾಯಿತೆಂಬುದನ್ನು ನೋಡಿ. ಅದು ಭೀಕರವಾದುದು! ಅಂತಹ ಅಪರಾಧಗಳು ಪ್ರಪಂಚದ ಎಲ್ಲೆಡೆಯಲ್ಲಿ ನಡೆಯುತ್ತಿವೆ.
ಮೆಕ್ಸಿಕೋದಲ್ಲಿ, ಒಂದು ಟ್ರಾಫಿಕ್ ದೀಪದ ಬಳಿ ಇಬ್ಬರು ಟ್ಯಾಕ್ಸಿ ಚಾಲಕರ ನಡುವೆ ವಾದವುಂಟಾಯಿತು. ಅವರ ಪ್ರಯಾಣಿಕರು ಕಾರುಗಳಲ್ಲಿ ಇನ್ನೂ ಕುಳಿತಿದ್ದಂತೆಯೇ, ಅವರು ಕಾರಿನಿಂದ ಹೊರಗಿಳಿದು ಪರಸ್ಪರರಿಗೆ ಗುಂಡಿಕ್ಕಿದರು! ಅವರ ನಡುವೆ ಕೇವಲ ಒಂದು ವಾದ ನಡೆದಿತ್ತಷ್ಟೇ! ನಮ್ಮ ಸಹಿಷ್ಣುತೆಯ ಮಟ್ಟವು ಬಹಳ ಕೆಳಮಟ್ಟಕ್ಕೆ ಇಳಿದಿದೆ.
ಪಾಕಿಸ್ತಾನದಲ್ಲಿ ಇವತ್ತು, ಮತ್ತೆ ಹಲವಾರು ಜನರು ಗಾಯಗೊಂಡಿದ್ದಾರೆ; ಒಂದು ಕಾರ್ ಬಾಂಬಿನಲ್ಲಿ ಹಲವಾರು ಜನರು ಸಾವಿಗೀಡಾದರು. ಪಾಕಿಸ್ತಾನದಲ್ಲಿ ಹಲವು ಜನರು ಸಾಯುತ್ತಿದ್ದಾರೆ.
ಇರಾಕಿನಲ್ಲಿ, ಜನರು ಈ ಸಂಖ್ಯೆಗಳ ಕಡೆಗೆ ಈಗ ಜಡವಾಗಿದ್ದಾರೆ. ಇರಾಕಿನಲ್ಲಿ ನಲುವತ್ತು ಜನರು ಸಾವಿಗೀಡಾದರು. ಅವರು ಪ್ರತಿದಿನವೂ ಸಾಯುತ್ತಿರುವುದಾದರೂ ಕೂಡಾ ಯಾರಿಗೂ ಅದರ ಪರಿವೆಯಿಲ್ಲ! ಸಿರಿಯಾದಲ್ಲಿ, ಈಜಿಪ್ಟಿನಲ್ಲಿ ಏನಾಗುತ್ತಿದೆ ನೋಡಿ? ಅರ್ಧದಷ್ಟು ಜನತೆಯು ಅಳಿಸಿ ಹೋಗುತ್ತಿದೆ. ನಾವು ಮಾಡುತ್ತಿರುವುದು ಬಹಳ ಪ್ರಧಾನವಾದುದೆಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕಾದುದು ಇಂತಹ ಸಮಯಗಳಲ್ಲೇ!
ಒಂದು ಹಿಂಸಾ-ಮುಕ್ತ ಮತ್ತು ಒತ್ತಡ-ಮುಕ್ತ ಸಮಾಜವನ್ನು ಸೃಷ್ಟಿಸುವುದು ಬಹಳ ಪ್ರಧಾನವಾಗಿದೆ. ಇನ್ನೂ ಹೆಚ್ಚಿನ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಶಿಕ್ಷಕರನ್ನು ನಾವು ಹೊಂದಬೇಕಾಗಿದೆ. ನಾವು ಹರಡಬೇಕಾಗಿದೆ ಮತ್ತು ಜನರ ಮನಸ್ಸನ್ನು ಬದಲಾಯಿಸಬೇಕಾಗಿದೆ.
ನಮ್ಮ ಶಿಕ್ಷಕರು ಜೈಲುಗಳಲ್ಲಿ ಕೆಲಸ ಮಾಡುತ್ತಿರುವುದರ ಬಗ್ಗೆ ನನಗೆ ಬಹಳ ಸಂತಸವಿದೆ. ಇತ್ತೀಚೆಗೆ, ನಾನು ಅರ್ಜೆಂಟೀನಾದಲ್ಲಿ ಒಂದು ಜೈಲಿಗೆ ಹೋದೆ. ಅಲ್ಲಿ ಬಹಳಷ್ಟು ಹಿಂಸೆ ಮತ್ತು ಅಪರಾಧಗಳಿದ್ದವು; ಜೈಲಿನ ಕೋಣೆಗಳಲ್ಲಿ ಕೂಡಾ. ಅಲ್ಲಿ ಆರ್ಟ್ ಆಫ್ ಲಿವಿಂಗ್ ಶಿಬಿರವನ್ನು ನಡೆಸಿದಂದಿನಿಂದ, ಎಲ್ಲಾ ಖೈದಿಗಳೂ, "ನಾವು ಯಾವುದೇ ಹಿಂಸಾತ್ಮಕ ಚಟುವಟಿಕೆಯಲ್ಲಿ ತೊಡಗುವುದಿಲ್ಲ" ಎಂದು ಹೇಳುವ ಒಂದು ಬ್ಯಾಂಡನ್ನು ಧರಿಸಲು ಪ್ರಾರಂಭಿಸಿದ್ದಾರೆ. ಅರ್ಜೆಂಟೀನಾದ ಜೈಲಿನಲ್ಲಿದ್ದ ೫,೨೦೦ ಪೌರುಷತ್ವ ಹೊಂದಿದ ಗಂಡಸರ ಕಣ್ಣುಗಳಲ್ಲಿ ಕಣ್ಣೀರುಗಳಿದ್ದವು! ಅವರಂದರು, "ನಮ್ಮ ಜೀವನ ಬದಲಾಗಿದೆ! ನಮಗೆ ಈ ಜ್ಞಾನ ಮೊದಲೇ ಯಾಕೆ ಸಿಗಲಿಲ್ಲ?"
ಅದೇ ರೀತಿ, ಬ್ರೆಝಿಲಿನಲ್ಲಿ, ನಾನು ರಿಯೋದಲ್ಲಿದ್ದಾಗ, ನಾನೊಂದು ಸೆರೆಮನೆಯ ಕೋಣೆಯನ್ನು ಸಂದರ್ಶಿಸಿದೆ. ಸೆರೆಮನೆಯ ಒಳಗೆ ಅವರು ಒಂದು ಆರ್ಟ್ ಆಫ್ ಲಿವಿಂಗ್ ಕೇಂದ್ರವನ್ನು ಹೊಂದಿದ್ದಾರೆ. ಒಂದು ಕೋಣೆಯಲ್ಲಿ ಅವರು, ನನ್ನ ಚಿತ್ರವನ್ನು ಮತ್ತು ಬಹಳಷ್ಟು ಆರ್ಟ್ ಆಫ್ ಲಿವಿಂಗ್ ಸಾಹಿತ್ಯಗಳನ್ನು ಇಟ್ಟಿದ್ದಾರೆ. ಯಾರಿಗೂ ಅಲ್ಲಿ ಪಾದರಕ್ಷೆಗಳೊಂದಿಗೆ ಒಳಹೋಗಲು ಅನುಮತಿಯಿಲ್ಲ. ಅವರು ಯೋಗದ ಹಾಸುಗಳನ್ನು ಹಾಕಿದ್ದಾರೆ. ಜನರು ಅಲ್ಲಿಗೆ ಹೋಗಿ ಕುಳಿತುಕೊಂಡು, ಯೋಗ, ಧ್ಯಾನಗಳು, ಚಿತ್ರಗಳನ್ನು ಮಾಡುತ್ತಾರೆ ಮತ್ತು ಅವರ ಜೀವನದ ಮೇಲೆ ಬಹಳ ಪರಿಣಾಮವಾಗಿದೆ!
ಬರುವ ಪೀಳಿಗೆಗಾಗಿ ಈ ಪ್ರಪಂಚವನ್ನು ಒಂದು ಉತ್ತಮ ಸ್ಥಳವನ್ನಾಗಿ ಮಾಡಲು, ಪ್ರಪಂಚದಲ್ಲಿ ನಾವು ಮಾಡುವುದು ಬಹಳಷ್ಟಿದೆ! ಇಲ್ಲವಾದರೆ ನಿಮ್ಮ ಮಕ್ಕಳು, ನಿಮ್ಮ ಮೊಮ್ಮಕ್ಕಳು ನಿಮ್ಮನ್ನು ಕ್ಷಮಿಸಲಾರರು. ಅವರು, "ನೀವು ನಮಗೆ ಯಾವ ರೀತಿಯ ಒಂದು ಪ್ರಪಂಚವನ್ನು ನೀಡಿರುವಿರಿ?" ಎಂದು ಹೇಳುವರು. ನೀವವರಿಗೆ ಒಂದು ಉತ್ತಮ ಪ್ರಪಂಚವನ್ನು ಕೊಡಬೇಕೆಂದು ಅವರು ಬಯಸುತ್ತಾರೆ - ಹೆಚ್ಚಿನ ಪ್ರೀತಿಯಿರುವ ಮತ್ತು ಹಿಂಸೆಯಿಂದ ಮುಕ್ತವಾದ ಒಂದು ಪ್ರಪಂಚ.
ನಿಮ್ಮ ಚಿಕ್ಕ ಚಿಕ್ಕ ಅವಶ್ಯಕತೆಗಳಲ್ಲಿ ಮತ್ತು ಮಿತ್ರರೊಂದಿಗಿನ ಹಾಗೂ ಇತರ ಜನರೊಂದಿಗಿನ ಚಿಕ್ಕ ಚಿಕ್ಕ ವಾಗ್ವಾದಗಳಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ದೊಡ್ಡದಾಗಿ ಯೋಚಿಸಿ ಮತ್ತು ಪ್ರಪಂಚದಲ್ಲಿನ ಹಿಂಸೆ, ಒತ್ತಡ ಹಾಗೂ ಬಿಗಿತಗಳನ್ನು ಕಡಿಮೆ ಮಾಡಲು ನೀವೇನು ಮಾಡಬಲ್ಲಿರಿ ಎಂದು ನೋಡಿ. ಇದರ ಕಡೆಗೆಯೇ ನಾವು ನೋಡಬೇಕಾದುದು!
ಇತರರ ಕ್ಷೇಮದ ಕಡೆಗೆ ಕುರುಡರಾಗಿರುವ, ತೀವ್ರವಾದ ಲೈಂಗಿಕ ಪ್ರವೃತ್ತಿಗಳಿರುವವರಿಗೆ ಒಂದು ಪಾಠದ ಅಗತ್ಯವಿದೆ. ಒಬ್ಬ ವ್ಯಕ್ತಿಯು ಅಂತಹ ನೀಚ ಅಪರಾಧಗಳನ್ನು ಮಾಡುವಂತೆ ಮಾಡುವುದು ಹಾರ್ಮೋನುಗಳಲ್ಲಿನ ಅಸಮತೋಲನ ಮತ್ತು ಒತ್ತಡ. ಅದು ಅವರ ಮನಸ್ಸುಗಳನ್ನು, ಅವರ ಕಣ್ಣುಗಳನ್ನು ಮತ್ತು ಅವರ ಬುದ್ಧಿಯನ್ನು ಕುರುಡಾಗಿಸುತ್ತದೆ. ಬಸ್ಸಿನಲ್ಲಿ ಬಲಾತ್ಕಾರ, ಹಲವಾರು ಜನರು ಜೊತೆಯಲ್ಲಿ! ಈ ಎಲ್ಲಾ ವಿಷಯಗಳನ್ನು ನಾವು ಒಂದು ಹೆಚ್ಚಿನ ಮಾನವೀಯ ನೆಲೆಯಲ್ಲಿ ಸಂಭೋದಿಸಬೇಕೆಂದು ನನಗನ್ನಿಸುತ್ತದೆ. ನಾವು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಮರಳಿ ತರಬೇಕಾಗಿದೆ. ಜನರನ್ನು ಆಧ್ಯಾತ್ಮದಲ್ಲಿ ಸುಶಿಕ್ಷಿತರನ್ನಾಗಿಸಿ. ಆಗ ಅವರ ಮನೋಭಾವವು ಬದಲಾಗುವುದು. ಆಧ್ಯಾತ್ಮಿಕವಾಗಿರುವ ಜನರು ಎಂದೆಂದಿಗೂ ಅಂತಹ ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಲಾರರು.
ಸಂಪೂರ್ಣವಾಗಿ ಹಿಂಸೆಯಿಂದ ಮುಕ್ತವಾದ ಪ್ರಪಂಚವನ್ನು ಸಾಧಿಸಲು ನಮಗೆ ಈ ಪೀಳಿಗೆಯಲ್ಲಿ ಸಾಧ್ಯವಾಗದೇ ಇರಬಹುದು, ಆದರೆ ನಾವು ಯಾವತ್ತೂ ಅದರ ಕಡೆಗೆ ಕೆಲಸ ಮಾಡಬೇಕು. ಪ್ರಪಂಚದಲ್ಲಿನ ಹಿಂಸೆಯನ್ನು ನಾವು ಖಂಡಿತವಾಗಿ ಕಡಿಮೆ ಮಾಡಲು ಸಾಧ್ಯವಿದೆಯೆಂದು ನನಗೆ ಭರವಸೆಯಿದೆ.
ಇತ್ತೀಚೆಗೆ, ದಿಲ್ಲಿಯ ಒಂದು ಭಾಗದಲ್ಲಿ, ಪೋಲೀಸರು ೭೫೬ ಅಪರಾಧಿಗಳನ್ನು ಒಟ್ಟು ಸೇರಿಸಿ, ಅವರು ಐದು ದಿನಗಳ ವರೆಗೆ ಆರ್ಟ್ ಆಫ್ ಲಿವಿಂಗ್ ಕೋರ್ಸ್ ಮಾಡುವಂತೆ ಮಾಡಿದರು. ಅವರು ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯೆ ಮಾಡಿದರು. ಈ ಜನರು ಹಂಚಿಕೊಂಡ ಅನುಭವಗಳನ್ನು ನೀವು ಕೇಳಬೇಕಿತ್ತು, ಅದು ಬಹಳ ಹೃದಯಸ್ಪರ್ಷಿಯಾಗಿತ್ತು. ಮಾದಕ ದ್ರವ್ಯಗಳನ್ನು ಬಳಸುತ್ತಿದ್ದ ಜನರು ಅಲ್ಲಿದ್ದರು ಮತ್ತು ಐದು ದಿನಗಳಲ್ಲಿ ಮಾದಕ ದ್ರವ್ಯಗಳ ಕಡೆಗೆ ಅವರಲ್ಲಿ ತಿರಸ್ಕಾರ ಬೆಳೆಯಿತು.
ಚೈನುಗಳನ್ನು ಕಸಿಯುತ್ತಿದ್ದ ಮತ್ತು ಅಂತಹ ಇತರ ಚಟುವಟಿಕೆಗಳಲ್ಲಿ ತೊಡಗಿದ್ದ ಜನರು ಸಂಪೂರ್ಣವಾಗಿ ಬದಲಾದರು ಮತ್ತು ಕೊಳಗೇರಿಗಳಲ್ಲಿ ಸಮಾಜ ಸೇವೆ ಮಾಡಲು ಶುರು ಮಾಡಿದರು. ಈ ಜನರಿಗೆ ತರಬೇತಿ ನೀಡಲು ನಮ್ಮ ಶಿಕ್ಷಕರಿಗೆ ಸಾಧ್ಯವಾಯಿತು.
ಕೋರ್ಸಿನ ಕಡೆಯ ದಿನ ನಾನು ಹೋಗಿ ಅವರನ್ನು ಭೇಟಿಯಾದೆ. ಪ್ರಪಂಚವನ್ನು ಒಂದು ಉತ್ತಮ ಸ್ಥಳವನ್ನಾಗಿ ಮಾಡಬಲ್ಲೆವೆಂಬ ಭರವಸೆ ನಮಗಿನ್ನೂ ಇದೆ ಎಂಬುದನ್ನು ಅವರ ಅನುಭವಗಳು ಸೂಚಿಸುತ್ತವೆ. ನಾವೊಂದು ಉತ್ತಮ ಸಮಾಜವನ್ನು ಸೃಷ್ಟಿಸಬಲ್ಲೆವು.

ಪ್ರಶ್ನೆ: ಗುರುದೇವ, ಕೋರ್ಸ್ ನಡೆಯುತ್ತಿರುವಾಗ ಮತ್ತು ಕೋರ್ಸಿನ ನಂತರ ಅದ್ಭುತ ಶಕ್ತಿಯಿರುತ್ತದೆ. ಅದೊಂದು ಸ್ಫೋಟದಂತೆ. ಆದರೆ ನಂತರ, 2-3 ದಿನಗಳಲ್ಲಿ ನನ್ನ ಶಕ್ತಿಯು ಕಡಿಮೆಯಾಗುವಂತಹ ವಿಷಯಗಳನ್ನು ನಾನು ಮಾಡುತ್ತೇನೆ. ಈ ಸಲ ಅದನ್ನು ತಡೆಯಲು ನಾನು ಏನು ಮಾಡಬಹುದು?
ಶ್ರೀ ಶ್ರೀ ರವಿ ಶಂಕರ್: ಶಕ್ತಿಯು ಹೆಚ್ಚು ಕಡಿಮೆಯಾಗುತ್ತಿರುತ್ತದೆ, ಆದರೆ ಅದರ ಬಗ್ಗೆ ಅತಿಯಾದ ಕಾಳಜಿ ವಹಿಸಬೇಡ.
ನಿನ್ನದೇ ಶಕ್ತಿಯ ಕಡೆಗೆ ನೋಡುವುದು, ಅದು ಮೇಲಕ್ಕೆ ಹೋಗುತ್ತಿದೆಯೇ ಅಥವಾ ಕೆಳಕ್ಕೆ ಬರುತ್ತಿದೆಯೇ ಎಂದು ನೋಡುವುದನ್ನು ನೋಡಿದರೆ, ನಿನಗೆ ಬಹಳಷ್ಟು ವಿರಾಮದ ಸಮಯವಿದೆಯೆಂದು ತೋರುತ್ತದೆ. ನಿನ್ನನ್ನು ಕಾರ್ಯನಿರತನನ್ನಾಗಿರಿಸು. ನೀನು ಕಾರ್ಯನಿರತನಾಗಿರುವಾಗ ಎಲ್ಲವೂ ಸರಿಹೋಗುತ್ತದೆ. ನೀನು ಬಹಳ ಕಾರ್ಯನಿರತನಾಗಿರುವಾಗ ದುಃಖಪಡಲು ಸಮಯವೆಲ್ಲಿರುವುದು? ನೀನು ಎಚ್ಚೆತ್ತಾಗ, ನಿನಗೆ ಮಾಡಲು ಏನೋ ಇರುತ್ತದೆ. ನೀನು ಮರಳಿ ಬರುವಾಗ ನಿನಗೆ ಎಷ್ಟೊಂದು ಆಯಾಸವಾಗಿರುವುದೆಂದರೆ, ನೀನು ಮರಳಿ ನಿದ್ದೆಗೆ ಜಾರುವೆ. ನೀವು ನಿಮ್ಮನ್ನು ಕಾರ್ಯನಿರತರನ್ನಾಗಿರಿಸಿದರೆ, ನಿಮಗೆ ದೂರಲು ಸಮಯವಿರುವುದಿಲ್ಲ, ದುಃಖಪಡಲು ಸಮಯವಿರುವುದಿಲ್ಲ. ಕ್ರಿಯಾಶೀಲರಾಗಿರುವ ಜನರಿಗೆ ಖಿನ್ನರಾಗಿರಲು ಸಮಯವಿರುವುದಿಲ್ಲ. ಖಿನ್ನತೆಯನ್ನು ಅನುಭವಿಸುವುದು ಬಿಡುವಾಗಿರುವ ಜನರು ಮಾತ್ರ.
ಕುಳಿತುಕೊಂಡು ಜ್ಞಾನದಲ್ಲಿ ಸ್ವಲ್ಪ ಸಮಯವನ್ನು ಕಳೆ. ಯೋಗ ವಾಸಿಷ್ಠವನ್ನು ಓದು, ಅದು ಅಷ್ಟೊಂದು ಉತ್ತಮವಾದ ಜ್ಞಾನ. ನಾರದ ಭಕ್ತಿ ಸೂತ್ರ ಅಥವಾ ಅಷ್ಟಾವಕ್ರ ಗೀತೆಯ ಧ್ವನಿಸುರುಳಿಗಳನ್ನು ಕೇಳು. ಈ ಎಲ್ಲಾ ಜ್ಞಾನವು ಎಲ್ಲಾ ಸಮಯವೂ ನಿನ್ನ ಶಕ್ತಿಯನ್ನು ಹೆಚ್ಚಾಗಿಸಿ ಇಟ್ಟಿರುತ್ತದೆ ಮತ್ತು ಹಾಡು ಹೇಳು! ನೀನು ಒಬ್ಬಂಟಿಯಾಗಿ ಹಾಡಬಹುದು, ಅಥವಾ ಸ್ನಾನ ಮಾಡುವಾಗ ಐದು ನಿಮಿಷ ಹೆಚ್ಚಿಗೆ ತೆಗೆದುಕೋ ಮತ್ತು ಹಾಡು. ನೀನು ಸ್ನಾನ ಮಾಡುವಾಗ, ನೀನು ಹಾಡು ಹೇಳುವುದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ!
ಈಗ, ಸಂತೋಷವಾಗಿರಲು ನಾನು ನಿನಗೆ ಹಲವಾರು ಆಯ್ಕೆಗಳನ್ನು ನೀಡಿದ್ದೇನೆ. ಇದೆಲ್ಲದರ ಹೊರತಾಗಿ, ಸಂತೋಷವಾಗಿಲ್ಲದಿರಲು ನೀನು ನಿರ್ಧರಿಸಿರುವೆಯಾದರೆ, ನಾನು ಏನು ಹೇಳಲು ಸಾಧ್ಯ?
ನೀನು ಜಗತ್ತಿಗೆ ಬಣ್ಣವನ್ನು ಸೇರಿಸುವೆ; ವಿರುದ್ಧ ಮೌಲ್ಯಗಳು ಪೂರಕವಾಗಿವೆ. ಅದನ್ನು ಇರಿಸಿಕೋ. ನೀನಿರುವ ಹಾಗೆಯೇ ಇರು, ನಾನು ನಿನ್ನನ್ನು ಸ್ವೀಕರಿಸುತ್ತೇನೆ!
ನೀನು ಜ್ಞಾನವನ್ನು ಅರಗಿಸಿರುವುದಾದರೆ, ನೀನು ದೀನನಾಗಿರಲು ಸಾಧ್ಯವೇ ಇಲ್ಲ. ಜ್ಞಾನವೆಂದರೆ ಹೇಗಿರುತ್ತದೆಯೆಂದರೆ, ಹಿತಕರವಾದ ದಿನಗಳಿರುತ್ತವೆ ಮತ್ತು ಅಹಿತಕರವಾದ ದಿನಗಳಿರುತ್ತವೆ ಎಂಬುದು ನಿಮಗೆ ತಿಳಿದಿರುತ್ತದೆ. ಒಳ್ಳೆಯ ಜನರಿರುತ್ತಾರೆ ಮತ್ತು ಕೆಟ್ಟ ಜನರಿರುತ್ತಾರೆ. ಕೆಲವೊಮ್ಮೆ ನಿಮ್ಮ ಮಿತ್ರರು ನಿಮ್ಮ ಶತ್ರುಗಳಂತೆ ವರ್ತಿಸುತ್ತಾರೆ ಮತ್ತು ಕೆಲವೊಮ್ಮೆ ನಿಮ್ಮ ಶತ್ರುಗಳು ನಿಮ್ಮ ಒಳ್ಳೆಯ ಮಿತ್ರರಾಗುತ್ತಾರೆ. ಇದೆಲ್ಲವೂ ಜೀವನದ ಒಂದು ರೀತಿ, ಈ ವಿಷಯಗಳು ನಡೆಯುತ್ತವೆ. ನೀವು ಕೇಂದ್ರಿತರಾಗಲು ಮತ್ತು ದೃಢವಾಗಲು ಅವುಗಳು ನಿಮಗೆ ಸಹಾಯ ಮಾಡುತ್ತವೆ. ಆಗ, ಯಾವುದೇ ಬಿರುಗಾಳಿಗೂ ನಿಮ್ಮನ್ನು ಅಲ್ಲಾಡಿಸಲು ಸಾಧ್ಯವಿಲ್ಲ.
ನನ್ನ ಇತರ ಎಲ್ಲಾ ಮಾತುಗಳನ್ನು ನೀವು ಮರೆತರೂ ಸಹ, ನಾನು ಹೇಳಿದ ಈ ಐದು ವಾಕ್ಯಗಳು ನಿಮ್ಮೊಂದಿಗೆ ಉಳಿದರೆ, ನೀವದನ್ನು ಸಾಧಿಸಿದಿರಿ ಎಂದು ನಾನು ಹೇಳುತ್ತೇನೆ! ನೀವು ವಿಜಯಿಗಳಾದಿರಿ! ಅದಕ್ಕೇ ಇದು ಮಾಯೆಯೆಂದು ಕರೆಯಲ್ಪಡುವುದು. ಯಾವುದನ್ನು ನಾವು ನಿಜವೆಂದು ಅಂದುಕೊಳ್ಳುವೆವೋ, ಆ ಎಲ್ಲಾ ಯೋಚನೆಗಳು ಮತ್ತು ಭಾವನೆಗಳು ಅಸತ್ಯವಾದವು, ಒಂದು ಭ್ರಮೆ. ಇತರರ ಬಗ್ಗೆ, ನಮ್ಮ ಬಗ್ಗೆ ನಮ್ಮಲ್ಲಿರುವ ಪರಿಕಲ್ಪನೆಗಳು, ಅವುಗಳೆಲ್ಲವೂ ಅಸತ್ಯವಾದವು. ಅವುಗಳನ್ನೆಲ್ಲಾ ಕೊಡವಿಕೊಂಡು ಎಚ್ಚೆತ್ತುಕೊಳ್ಳಿ! ನೀವು ಕೇವಲ ಶಕ್ತಿಯ ಚಿಲುಮೆಗಳು, ಉತ್ಸಾಹದ ಚಿಲುಮೆಗಳೆಂಬುದನ್ನು ನೀವು ಕಾಣುವಿರಿ! ನೀವು ಪ್ರೇಮದ ಕಾರಂಜಿಯಾಗಿರುವಿರಿ!

ಪ್ರಶ್ನೆ: ಪ್ರೀತಿಯ ಗುರುದೇವ, ಎಟರ್ನಿಟಿ ಪ್ರಕ್ರಿಯೆ ಮತ್ತು ನಮಗೆ ಅದರಿಂದಾಗುವ ಲಾಭಗಳ ಬಗ್ಗೆ ನೀವು ದಯವಿಟ್ಟು ವಿವರಿಸುವಿರಾ?
ಶ್ರೀ ಶ್ರೀ ರವಿ ಶಂಕರ್: ಎಟರ್ನಿಟಿ ಪ್ರಕ್ರಿಯೆಯೆಂದರೆ ಕೇವಲ ನಿಮ್ಮ ಸ್ಮರಣೆಯನ್ನು ಹಿಂದಕ್ಕೆ ಕೊಂಡುಹೋಗುವುದು, ಅಲ್ಲಿರುವ ಸಂಸ್ಕಾರಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಪುನಃ ಜೀವಿಸುವುದು ಹಾಗೂ ಅವುಗಳನ್ನು ನಿವಾರಿಸುವುದು.

ಪ್ರಶ್ನೆ: ಪ್ರೀತಿಯ ಗುರುದೇವ, ಅಂಗಾಂಶ ಕಸಿ ಮಾಡುವುದರ ಅಗತ್ಯವಿರುವವರಿಗೆ ಸಹಾಯವಾಗಲು ಜನರು ಶರೀರವನ್ನು ದಾನ ಮಾಡಬೇಕೆಂದು ನೀವು ಸಲಹೆ ಕೊಡುವಿರೇ?
ಶ್ರೀ ಶ್ರೀ ರವಿ ಶಂಕರ್: ಖಂಡಿತವಾಗಿ, ನೀವು ನಿಮ್ಮ ಶರೀರದ ಅಂಗಗಳನ್ನು ದಾನ ಮಾಡಬಹುದು. ಅದರಲ್ಲೇನೂ ತಪ್ಪಿಲ್ಲ.

ಪ್ರಶ್ನೆ: ಗುರುದೇವ, ಪೂರ್ಣಾವಧಿ ಆರ್ಟ್ ಆಫ್ ಲಿವಿಂಗ್ ಶಿಕ್ಷಕರಾಗುವುದೆಂಬುದರ ಅರ್ಥವೇನು? ಮತ್ತು ಯಾವ ರೀತಿಯ ವ್ಯಕ್ತಿಯು ಅದನ್ನು ಮಾಡಬಹುದು?
ಶ್ರೀ ಶ್ರೀ ರವಿ ಶಂಕರ್: ನೀನು ಒಬ್ಬ ಪೂರ್ಣಾವಧಿ ಶಿಕ್ಷಕನಾಗಬೇಕಾದ ಅಗತ್ಯವಿಲ್ಲ. ನೀನೊಬ್ಬ ಅರೆಕಾಲಿಕ ಶಿಕ್ಷಕನಾಗಬಹುದು. ಕಲಿಸುವುದು ನಿನ್ನ ಸಮಯದ ಕೇವಲ ಎರಡು ಘಂಟೆಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ಕೋರ್ಸುಗಳನ್ನು ಸಾಮಾನ್ಯವಾಗಿ ಸಂಜೆಗಳಲ್ಲಿ, ಜನರು ತಮ್ಮ ಕೆಲಸವನ್ನು ಮುಗಿಸಿರುವಾಗ ನಡೆಸಲಾಗುತ್ತದೆ. ರಚನೆಯನ್ನು ಆಧರಿಸಿ ನೀನು ಮೂರು ದಿನಗಳ, ನಾಲ್ಕು ದಿನಗಳ ಅಥವಾ ಐದು ದಿನಗಳವರೆಗಿನ ಕೋರ್ಸನ್ನು ತೆಗೆದುಕೊಳ್ಳಬಹುದು. ನೀನು ಒಂದು ತಿಂಗಳಿಗೆ ಒಂದು ಅಥವಾ ಎರಡು ಕೋರ್ಸುಗಳನ್ನು ಕಲಿಸಬಹುದು.
ಮೇಲಾಗಿ, ನೀನು ಎರಡು ಅಥವಾ ಮೂರು ಶಿಕ್ಷಕರನ್ನು ಜೊತೆಸೇರಿಸಿಕೊಂಡು, ಒಟ್ಟಾಗಿ ಕೋರ್ಸುಗಳನ್ನು ತೆಗೆದುಕೊಳ್ಳಬಹುದು. ಇದರಿಂದ ನಿನ್ನ ಮೇಲೆ ಭಾರದ ಅನುಭವವಾಗುವುದಿಲ್ಲ. ಅದು ನಿನ್ನಿಂದ ಒತ್ತಡವನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ನೀನು ನಿನ್ನ ಮಗುವನ್ನು ಯಾವುದೋ ಶಾಪಿಂಗ್ ಮಾಡಲು ಕರೆದೊಯ್ಯಬೇಕೆಂದು ಅಂದುಕೋ, ಆಗ ನೀನು, "ಓ, ನನಗೊಂದು ಕೋರ್ಸಿದೆ, ನಾನದನ್ನು ಹೇಗೆ ಮಾಡಲಿ" ಎಂದು ಯೋಚಿಸಬೇಕಾಗಿಲ್ಲ. ಆಗ, ಅದರ ಕಾಳಜಿ ವಹಿಸಲು ನಿನ್ನೊಂದಿಗೆ ಇನ್ನೊಬ್ಬರು ಶಿಕ್ಷಕರಿರುತ್ತಾರೆ. ಆದುದರಿಂದ, ಇಬ್ಬರು ಶಿಕ್ಷಕರು ಜೊತೆಯಲ್ಲಿ ಒಂದು ಕೋರ್ಸನ್ನು ತೆಗೆದುಕೊಳ್ಳಬೇಕೆಂಬುದಾಗಿ ನಾನು ಶಿಫಾರಸು ಮಾಡುತ್ತೇನೆ. ಆಗ ನೀವು ನಿಮ್ಮ ನೌಕರಿಯನ್ನು ಇಟ್ಟುಕೊಳ್ಳಬಹುದು, ವೃತ್ತಿಪರವಾಗಿ ನೀವೇನು ಮಾಡುತ್ತಿರುವಿರೋ ಅದರೊಂದಿಗೆ ಮುಂದುವರೆಯಬಹುದು ಮತ್ತು ಬದಿಯಲ್ಲಿ ನೀವು ಕಲಿಸಬಹುದು ಹಾಗೂ ಸುತ್ತಲಿನ ಜನರಿಗೆ ಸಹಾಯ ಮಾಡಬಹುದು.
ನಿಮಗೆ ಯಾವುದೇ ಅಗತ್ಯಗಳು (ವೈಯಕ್ತಿಕ) ಇಲ್ಲದಿರುವುದಾದರೆ, ಸುತ್ತಲೂ ಯಾವುದೇ ಒತ್ತಡವಿಲ್ಲದಿರುವುದಾದರೆ, ಆಗ ನೀವು ನಿಮ್ಮ ಜೀವನವನ್ನು ಮೀಸಲಿಡಬಹುದು. ನೀವು, "ನನಗಾಗಿ ಬೇಕಾಗಿರುವುದು ಬಹಳ ಸ್ವಲ್ಪ ಮಾತ್ರ, ಮತ್ತು ನಾನು ಪೂರ್ಣಾವಧಿ ಕಲಿಸಲು ಬಯಸುತ್ತೇನೆ" ಎಂದು ಹೇಳಬಲ್ಲಿರಾದರೆ, ಆಗ ನೀವು ಅದನ್ನು ಕೂಡಾ ಮಾಡಬಹುದು. ಆದರೆ ನಾನು ಹೇಳುವುದೆಂದರೆ, ಮೊದಲು ಒಬ್ಬ ಅರೆಕಾಲಿಕ ಶಿಕ್ಷಕನಾಗು, ಸ್ವಲ್ಪ ಕೆಲಸ ಮಾಡು.