ಶುಕ್ರವಾರ, ಡಿಸೆಂಬರ್ 28, 2012

ನೃತ್ಯ ಮತ್ತು ನರ್ತಕ


೨೮ ಡಿಸೆಂಬರ್ ೨೦೧೨
ಬಾಡ್ ಅಂತೋಗಾಸ್ತ್, ಜರ್ಮನಿ

ಪ್ರ: ಪೂಜ್ಯ ಗುರೂಜಿ, ದಯವಿಟ್ಟು ನಮಗೆ ಗುರುಪರಂಪರೆಯ ಬಗ್ಗೆ ಇನ್ನೂ ಹೆಚ್ಚು ತಿಳಿಸುವಿರಾ?
ಶ್ರೀಶ್ರೀ: ಅದು ಹಲವು ಸಾವಿರ ವರ್ಷಗಳಿಂದ ನಡೆಯುತ್ತಿರುವುದರಿಂದ, ಸರಿಯಾಗಿ ಯಾವಾಗ ಪ್ರಾರಂಭವಾಯಿತು ಎಂಬುದು ನಮಗೆ ತಿಳಿದಿಲ್ಲ.

ಯೋಗದ ಜ್ಞಾನ, ಧ್ಯಾನ ಮತ್ತು ಈ ಸಂಪೂರ್ಣ ಬ್ರಹ್ಮಾಂಡವು ಒಂದು ಶಕ್ತಿಯಿಂದ ಸೃಷ್ಟಿಯಾಗಿದೆ ಎಂಬ ಜ್ಞಾನ, ಈ ಗುರುಪರಂಪರೆಯ ಮೂಲಕ ಮುಂದೆ ಸಾಗಿಸಲಾಗಿದೆ.
ಸಾಮಾನ್ಯವಾಗಿ ನೀವು ಏನನ್ನಾದರೂ ತಯಾರಿಸಿದಾಗ, ತಯಾರಿಸುವವನು ಆ ವಸ್ತುವಿನಿಂದ ಬೇರೆಯಾಗಿರುತ್ತಾನೆ. ಉದಾಹರಣೆಗೆ, ನೀವೊಂದು ಮೋಂಬತ್ತಿಯನ್ನು ತಯಾರಿಸಬೇಕಿದ್ದರೆ, ನೀವು ಆ ಮೋಂಬತ್ತಿಯು ನನ್ನಿಂದ ಬೇರೆ ಎಂದು ಯೋಚಿಸುತ್ತೀರಿ ಮತ್ತು ನೀವದನ್ನು ನಿಮ್ಮಿಂದ ಬೇರೆಯಾಗಿ ದೂರದಲ್ಲಿಡುತ್ತೀರಿ, ’ಅದು ನನ್ನ ಸೃಷ್ಟಿ ಆದರೆ ಅದು ನಾನಲ್ಲ.’

ಹಾಗೆ ಜನರು ಈ ರೀತಿಯಾಗಿ ಯೋಚಿಸುತ್ತಾರೆ, ಸೃಷ್ಟಿಕರ್ತ ಮತ್ತು ಸೃಷ್ಟಿ ಎರಡು ಬೇರೆ ಬೇರೆ ವಸ್ತುಗಳು ಎಂದು. ಆದರೆ ನೀವು ದೇವರು ಸರ್ವಾಂತರ್ಯಾಮಿ ಎಂದು ಹೇಳಿದರೆ, ಅಂದರೆ ಎಲ್ಲಾ ಕಡೆ ಇರುವವನಾಗಿದ್ದರೆ, ಅವನು ಸೃಷ್ಟಿಯ ಒಳಗೂ ಇರಬೇಕು.

ಏನಾದರೂ ಸರ್ವವ್ಯಾಪಿಯಾಗಿದ್ದರೆ, ಬೇರೇನಾದರೂ ಇದರಿಂದ ಹೊರಗಿರಲು ಎಲ್ಲಿ ಸ್ಥಳವಿದೆ? ಅಲ್ಲವೇ?! ನಾನು ಸರ್ವಶಕ್ತನಾಗಿದ್ದರೆ, ಏನಾದರೂ ಬೇರೆ ನನಗಿಂತಲೂ ಹೆಚ್ಚು ಶಕ್ತಿಯುತವಾದದ್ದು ಇರಲು ಸಾಧ್ಯವೇ? ಸಾಧ್ಯವಿಲ್ಲ. ಹಾಗಾಗಿ ಈ ಸೃಷ್ಟಿ ಮತ್ತು ಸೃಷ್ಟಿಕರ್ತ ಎರಡು ಬೇರೆ ವಸ್ತುಗಳಲ್ಲ. ಇರುವುದು ಕೇವಲ ಒಂದೇ.

ಈಗ ನಾವಿದನ್ನು ಹೇಗೆ ಅರ್ಥಮಾಡಿಕೊಳ್ಳುವುದು - ಸೃಷ್ಟಿ ಮತ್ತು ಸೃಷ್ಟಿಕರ್ತ ಒಂದೇ ಎಂಬುದನ್ನು?
ನೃತ್ಯ ಮತ್ತು ನರ್ತಕನ ಉದಾಹರಣೆಯಿಂದ. ನಿಮಗೆ ಒಂದು ನೃತ್ಯವನ್ನು ಆ ನರ್ತಕನಿಂದ ಬೇರ್ಪಡಿಸಲು ಸಾಧ್ಯವೇ? ಇಲ್ಲ! ಅದು ಅಸಾಧ್ಯ. ನಿಮಗೆ ಆ ನೃತ್ಯ ನೋಡಬೇಕಿದ್ದರೆ, ನೀವು ಅದನ್ನು ಕೇವಲ ಆ ನರ್ತಕನ ಮೂಲಕ ನೋಡಬಲ್ಲಿರಿ. ಒಬ್ಬ ಕಲಾಕಾರ ಮತ್ತು ಅವನ ಚಿತ್ರಕಲೆ ಬೇರೆ ಬೇರೆಯಾಗಿವೆ. ಒಬ್ಬ ಕಲಾಕಾರ ಒಂದು ಚಿತ್ರವನ್ನು ಬಿಡಿಸಿ ಅದರಿಂದ ದೂರವಾಗಬಹುದು, ಮತ್ತು ಆಗಲೂ ಆ ಚಿತ್ರ ಇರುತ್ತದೆ.ಆದರೆ ಆ ನರ್ತಕ ತನ್ನ ನೃತ್ಯದಿಂದ ಬೇರೆಯಾಗಲು ಸಾಧ್ಯವಿಲ್ಲ.

ಹಾಗಾಗಿ ಈ ಸೃಷ್ಟಿ ಮತ್ತು ಸೃಷ್ಟಿಕರ್ತ, ಆ ನೃತ್ಯ ಮತ್ತು ನರ್ತಕರಿದ್ದ ಹಾಗೆ. ಯಾವ ಶಕ್ತಿಯನ್ನು ನಾವು ಭಗವಂತ ಅಥವಾ ಪ್ರೀತಿ ಅಥವಾ ಬೆಳಕು ಎಂದು ಕರೆಯುತ್ತೇವೋ, ಅದು ಈ ಸಂಪೂರ್ಣ ಸೃಷ್ಟಿಯನ್ನು ಮತ್ತು ಈ ಬ್ರಹ್ಮಾಂಡದ ಪ್ರತಿಕಣವನ್ನೂ ವ್ಯಾಪಿಸಿಕೊಂಡಿದೆ.

ಇದು ಆ ಪ್ರಾಚೀನ ಜ್ಞಾನದ ಸಾರ, ಮತ್ತು ಆಧುನಿಕ ವಿಜ್ಞಾನ ಹಾಗೂ ಕ್ವಾಂಟಂ ಭೌತಶಾಸ್ತ್ರ ಇದನ್ನೇ ವಿವರಿಸುವುದು. ಈ ಸಂಪೂರ್ಣ ಜಗತ್ತು ಒಂದು ಕ್ಷೇತ್ರದಿಂದ, ಒಂದು ಶಕ್ತಿಯಿಂದ ರಚಿಸಲ್ಪಟ್ಟಿದೆ. ಇದು ವೇದಾಂತಿಗಳ ಹಲವಾರು ಒಗಟುಗಳನ್ನು ಬಿಡಿಸುತ್ತದೆ.

ಪ್ರ: ನಾವು ಕೊರತೆಯ ಆಲೋಚನೆಗಳನ್ನು ಸಮೃದ್ಧಿಯ ಆಲೋಚನೆಗಳಾಗಿ ಹೇಗೆ ಪರಿವರ್ತಿಸುವುದು?
ಶ್ರೀಶ್ರೀ: ನಿಮಗೆ ಅದನ್ನು ಮಾಡಬೇಕೆಂಬ ಆಲೋಚನೆಯಿರುವುದರ ಅರ್ಥ ನೀವು ಆಗಲೇ ಆ ಮಾರ್ಗದಲ್ಲಿ ನಡೆಯಲು ಆರಂಭಿಸಿದ್ದೀರಿ ಎಂದು.
ನಿಮ್ಮ ಅಗತ್ಯಗಳೇನೆಂಬುದನ್ನು ನೋಡಿ, ಮತ್ತು ಅವು ಯಾವಾಗಲೂ ಪೂರೈಸಲ್ಪಡುತ್ತವೆ ಎಂಬುದನ್ನು ನೀವು ನೋಡುತ್ತೀರಿ. ನಿಮಗೇನೇ ಬೇಕಿದ್ದರೂ ಅದು ಸದಾ ನಿಮ್ಮನ್ನು ತಲುಪುತ್ತದೆ. ಆದರೆ ಅದನ್ನು ಒಂದು ಮಿತಿ ಮೀರಿ ತೆಗೆದುಕೊಂಡು ಹೋಗಿ, ’ನಾನು ಏನೂ ಮಾಡದೇ, ಎಲ್ಲವೂ ನನ್ನ ಬಳಿಗೆ ಬರಲಿ’ ಎಂದು ಹೇಳಬೇಡಿ. ಇಲ್ಲ, ಅದು ಸರಿಯಲ್ಲ. ನೀವು ನಿಮ್ಮ ಪ್ರಯತ್ನವನ್ನು ಹಾಕಬೇಕು, ಮತ್ತು ನಿಮಗೆ ಧೈರ್ಯಬೇಕು. ಈ ಎರಡು ವಿಷಯಗಳು ನಿಮಗೆ ಸಂಪತ್ತನ್ನು ತರುತ್ತವೆ.

ಸಂಸ್ಕೃತದಲ್ಲಿ ಒಂದು ಸುಭಾಷಿತ ಹೀಗೆ ಹೇಳುತ್ತದೆ: ’ಉದ್ಯೋಗಿನೋ ಪುರುಷ ಸಿಂಹಂ ಉಪೈತಿ ಲಕ್ಷ್ಮೀ’.
ಅದರ ಅರ್ಥ ಒಂದು ಸಿಂಹದ ಧೈರ್ಯ ಹಾಗೂ ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುವವನ ಬಳಿ ಸಂಪತ್ತು ಬರುತ್ತದೆ. ಹಾಗಾಗಿ ನಿಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡಿ ಮತ್ತು ಸಿಂಹದಂತೆ ಇರಿ. ನಿಮಗೆ ಗೊತ್ತೇ ಸಿಂಹವು ಅತ್ಯಂತ ಸೋಮಾರಿ ಮೃಗ. ಸಿಂಹಿಣಿಯು ಆಹಾರಕ್ಕಾಗಿ ಬೇಟೆಯಾಡುವುದು ಮತ್ತು ಅದನ್ನು ಸಿಂಹಕ್ಕೆ ನೀಡುವುದು. ಸಿಂಹವು ಸುಮ್ಮನೆ ಹೋಗಿ ಬೇಟೆಯನ್ನು ತಿನ್ನುತ್ತದೆ. ಸಿಂಹಿಣಿಯು ಕೆಲಸವನ್ನು ಮಾಡುವುದು. ಸಿಂಹವು ಆಹಾರಕ್ಕಾಗಿ ಬೇಟೆಯಾಡುವ ಕೆಲಸವನ್ನೂ ಮಾಡುವುದಿಲ್ಲ. ಅವನು ಆಲಸಿಯಾದರೂ ಅವನು ವನದ ರಾಜ ಮತ್ತು ಅವನಲ್ಲಿ ಆತ್ಮ ವಿಶ್ವಾಸವಿದೆ. ಹಾಗಾಗಿ ನಿಮ್ಮಲ್ಲಿ ಇರಬೇಕಾದುದು ಇದೇ – ಆತ್ಮ ವಿಶ್ವಾಸ ಮತ್ತು ಸಿಂಹದ ಘನತೆಯ ಪ್ರಜ್ಞೆ.

ನೀವು ನಿಮ್ಮ ೧೦೦% ಪ್ರಯತ್ನ ಹಾಕಬೇಕು ಮತ್ತು ಆಗಲೇ ಸಂಪತ್ತು ನಿಮ್ಮ ಬಳಿ ಬರುವುದು. ಕುಳಿತು ಅದರ ಬಗ್ಗೆ ಹಗಲುಗನಸು ಕಾಣುವುದು ಅಥವಾ ಅದರ ಬಗ್ಗೆ ಜ್ವರತೆಯಿಂದಿರುವುದು ನಿಮಗೆ ಫಲ ನೀಡುವುದಿಲ್ಲ. ಅದರ ಬಗ್ಗೆ ಜ್ವರತೆಯನ್ನು ಬಿಡಿ, ಸುಮ್ಮನೆ ಒಂದು ಕೆಲಸವನ್ನು ಕೈಗೆತ್ತಿಕೊಂಡು ಅದನ್ನು ಮಾಡಿ. ಮುಂದೊಮ್ಮೆ,  ಅದರೊಂದಿಗೆ ನೀವು ಸಂಪತ್ತನ್ನೂ ಪಡೆಯುತ್ತೀರಿ ಎಂಬುದನ್ನು ನೀವು ನೋಡುತ್ತೀರಿ.

ಪ್ರ: ಪೂಜ್ಯ ಗುರೂಜಿ, ಬೇರೆ ಬೇರೆ ವಿಧದ ಪ್ರಾಣಗಳು (ಜೀವದ ಸೂಕ್ಷ್ಮಶಕ್ತಿ) ಇವೆಯೆಂದು ನೀವು ಹೇಳಿದಿರಿ. ದಯವಿಟ್ಟು ಅವುಗಳ ಬಗ್ಗೆ ನೀವು ಇನ್ನೂ ಬಿಡಿಸಿ ಹೇಳಬಹುದೆ?
ಶ್ರೀಶ್ರೀ: ಹತ್ತು ಬಗೆಯ ಪ್ರಾಣಗಳಿವೆ (ಜೀವದ ಸೂಕ್ಷ್ಮಶಕ್ತಿ). ಇವುಗಳಲ್ಲಿ, ಐದು ಪ್ರಮುಖ ಮತ್ತು ಐದು ಸಣ್ಣ ಪ್ರಾಣಗಳಿವೆ. ಇವತ್ತು ನಾನು ಕೇವಲ ಪ್ರಮುಖ ಪ್ರಾಣಗಳ ಬಗ್ಗೆ ಮಾತನಾಡುತ್ತೇನೆ. ಪ್ರಮುಖ ಪ್ರಾಣಗಳಲ್ಲಿ ಮೊದಲನೆಯದನ್ನು ಪ್ರಾಣವೆಂದು ಕರೆಯುತ್ತಾರೆ, ಇದು ನಾಭಿ ಪ್ರದೇಶದಿಂದ ಉದ್ಭವಿಸಿ ತಲೆಯ ಮೇಲ್ಭಾಗದತ್ತ ಹರಿಯುತ್ತದೆ.

ಮತ್ತೆ ಇನ್ನೊಂದು ಪ್ರಾಣ ನಾಭಿಯಿಂದ ಕೆಳಮುಖವಾಗಿ ಹರಿಯುತ್ತದೆ, ಅದನ್ನು ಅಪಾನ ಎಂದು ಕರೆಯುತ್ತಾರೆ. ಪ್ರಾಣದ ಮಟ್ಟವು ಬಹಳ ಹೆಚ್ಚಿದ್ದಾಗ, ನಿಮಗೆ ನಿದ್ರಿಸಲಾಗುವುದಿಲ್ಲ; ನಿಮಗೆ ನಿದ್ರಾಹೀನತೆ ಉಂಟಾಗಬಹುದು ಮತ್ತು ನಿಮಗೆ ಆತಂಕ ಉಂಟಾಗಬಹುದು. ಅಲ್ಲದೇ ಅಪಾನದ ಮಟ್ಟವು ಏರಿದಾಗ, ನಿಮಗೆಷ್ಟು ಉದಾಸೀನವೆನಿಸಬಹುದೆಂದರೆ ನಿಮಗೆ ಹಾಸಿಗೆಯಿಂದ ಏಳಲೂ ಮನಸ್ಸಾಗದಿರಬಹುದು. ನಿಮಗೆ ಈ ಅನುಭವ ಉಂಟಾಗಿದೆಯೇ? ಕೆಲವೊಮ್ಮೆ ನಿಮಗೆ ಅಷ್ಟೊಂದು ಭಾರ ಮತ್ತು ಒಟ್ಟಾರೆ ಉದಾಸೀನತೆ ಅನಿಸುತ್ತದೆ. ಇದು ಅಪಾನದ ಅಸಮತೋಲನದಿಂದ ಉಂಟಾಗುತ್ತದೆ.

ಮೂರನೇ ರೀತಿಯ ಪ್ರಾಣವು ಸಮಾನ, ಯಾವುದು ನಮ್ಮ ಜೀರ್ಣ ಮಂಡಲದಲ್ಲಿ ಜೀರ್ಣಿಸುವ ಅಗ್ನಿಯಾಗಿ ಅಂದರೆ ಜಠರಾಗ್ನಿಯಾಗಿ ಉಪಸ್ಥಿತವಾಗಿದೆ ಅದು. ಈ ಅಗ್ನಿಯು ಆಹಾರವನ್ನು ಜೀರ್ಣಿಸಲು ಸಹಾಯಕವಾಗುವಂತಹ ಅಗ್ನಿ. ಸಮಾನ ಎಂಬುದು ಜೀರ್ಣ ಕ್ರಿಯೆಯಲ್ಲಿ ಸಹಾಯಕವಾದುದು, ಮತ್ತು ಅನ್ಯ ಶಾರೀರಿಕ ವ್ಯವಸ್ಥೆಗಳಲ್ಲು ಸಹಾಯಕವಾಗಿದೆ. ಅದು ಆ ವ್ಯವಸ್ಥೆಯ ಸಮತೋಲನ ಕಾಪಾಡುವುದರಲ್ಲಿ ಸಹಾಯಕವಾಗಿದೆ.

ಮತ್ತೆ ಉದಾನ ವಾಯು ಅಥವಾ ಉದಾನ ಪ್ರಾಣ ಇದೆ, ಇದು ಹೃದಯ ಭಾಗದ ಸಮೀಪದಲ್ಲಿರುವುದು ಮತ್ತು ಇದು ಎಲ್ಲಾ ಭಾವನೆಗಳಿಗೆ ಕಾರಣ.

ಮತ್ತೆ, ಐದನೆಯ ಪ್ರಾಣವನ್ನು ವ್ಯಾನ ಎನ್ನಲಾಗುತದೆ, ಇದು ಶರೀರದ ಎಲ್ಲಾ ಚಲನಗಳಿಗೆ ಕಾರಣ. ಇದು ಸಂಪೂರ್ಣ ಶರೀರದಲ್ಲಿ ಹಬ್ಬಿಕೊಂಡಿದೆ.
ಸುದರ್ಶನ ಕ್ರಿಯೆಯಲ್ಲಿ ನಿಮಗೆ ಒಂದು ಜೋಮುಹಿಡಿದ, ಸಂಪೂರ್ಣ ಶರೀರದಲ್ಲಿ ಒಂದು ಶಕ್ತಿಯ ಅನುಭವವಾಗುತ್ತದೆ. ನೀವೆಲ್ಲರೂ ಇದನ್ನು ಅನುಭವಿಸಿದ್ದೀರಾ? ಸುದರ್ಶನ ಕ್ರಿಯೆಯಲ್ಲಿ ಏನಾಗುವುದೆಂದರೆ, ಎಲ್ಲಾ ಪಂಚಪ್ರಾಣಗಳು ಸಮತೋಲನಗೊಳ್ಳುತ್ತವೆ, ಮತ್ತು ಅದರಿಂದಲೇ ನೀವು ಅಳುವುದು, ಅಥವಾ ನಗುವುದು, ಮತ್ತು ಮೈಯೆಲ್ಲ ಜೋಮುಹಿಡಿದಂತೆ ಅನುಭವವಾಗುವುದು. ಇದು ಸುದರ್ಶನ ಕ್ರಿಯೆಯ ವೈಶಿಷ್ಟ್ಯ. ಕ್ರಿಯೆಯ ಬಳಿಕ ನಿಮಗೆ ಬಹಳ ಹಸಿವೂ ಅನುಭವವಾಗುವುದುಂಟು, ಅಲ್ಲವೇ?

ಹಾಗಾಗಿ ಶರೀರದಲ್ಲಿನ ಈ ಪಂಚಪ್ರಾಣಗಳು ನಮ್ಮ ಜೀವನವನ್ನು ನಡೆಸುತ್ತವೆ. ಸಮಾನ ವಾಯು ಅಸಮತೋಲನವಾದರೆ, ಅದು ಜೀರ್ಣಕ್ಕೆ ಸಂಬಂಧಿಸಿದ ತೊಂದರೆಗಳನ್ನು ಉಂಟು ಮಾಡುತ್ತದೆ, ಮತ್ತು ನಿಮಗೆ ಆಹಾರವನ್ನು ಸರಿಯಾಗಿ ಜೀರ್ಣಿಸಲಾಗುವುದಿಲ್ಲ, ಅಥವಾ ನಿಮಗೆ ಹೊಟ್ಟೆ ತೊಳಸಿದಂತಾಗಬಹುದು. ಇವೆಲ್ಲಾ ಸಮಾನ ಪ್ರಾಣದ ಅಸಮತೋಲನದಿಂದಾಗುವುದು.

ಉದಾನ ಪ್ರಾಣ ಸಿಕ್ಕಿಕೊಂಡಾಗ,  ನೀವು ಭಾವನೆಗಳಲ್ಲಿ ಅಡೆತಡೆಗಳನ್ನು ಅನುಭವಿಸುತ್ತೀರಿ ಮತ್ತು ಅದು ನಿಮ್ಮ ಆಲೋಚನೆಗಳ ಹಾಗೂ ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.

ಸಂಪೂರ್ಣ ಶರೀರದಲ್ಲಿರುವ ವ್ಯಾನ ಅಸಮತೋಲನಗೊಂಡಾಗ, ನಿಮಗೆ ಸಂಧಿಗಳಲ್ಲಿ ನೋವು, ಅಥವಾ ಚಲನೆಯಲ್ಲಿ ತೊಂದರೆ, ಮತ್ತು ನೀವು ಅತಿ ಗಾಬರಿ ಹಾಗೂ ಅವಿಶ್ರಾಂತಿ ಅನುಭವಿಸುತ್ತೀರಿ, ಅಥವಾ ನಿಮಗೆ ಏನನ್ನೂ ಮಾಡಲು ಮನಸ್ಸಾಗದಿರಬಹುದು. ಅಂಥ ಸ್ಥಿತಿಯಲ್ಲಿ ಓಡಾಡಿದಾಗ ಅಸಮಾಧಾನ ಮತ್ತು ಶರೀರದಲ್ಲಿ ಚಡಪಡಿಸುವಿಕೆಯನ್ನು ಉಂಟುಮಾಡುತ್ತದೆ. ಇವೆಲ್ಲಾ ವ್ಯಾನ ಪ್ರಾಣದ ಅಸಮತೋಲನದಿಂದ ಉಂಟಾಗುವುದು.

ಸುದರ್ಶನ ಕ್ರಿಯೆಯ ನಂತರ, ನೀವು ಗಮನಿಸಿರಬೇಕು, ಈ ಎಲ್ಲಾ ಅಸಮತೋಲನಗಳು ಹೋಗಿಬಿಡುತ್ತವೆ. ಇದು ನಿಮ್ಮೆಲ್ಲರಿಗೂ ಆಗಿಲ್ಲವೇ? ಹಿಂದೆ ಶರೀರದ ಚಲನೆಯಲ್ಲಿ ಇದ್ದಂಥ ಎಲ್ಲಾ ಅಹಿತ ಅನುಭವ, ಅಥವಾ ರಕ್ತ ಪರಿಚಲನೆಯಲ್ಲಿನ ತೊಂದರೆ, ಅಥವಾ ವ್ಯಾನ ಅಸಮತೋಲನದ ಒಂದು ನೋವು, ಎಲ್ಲವೂ ಸುದರ್ಶನ ಕ್ರಿಯೆಯ ನಂತರ ಕಣ್ಮರೆಯಾಗುತ್ತವೆ.

ಹಾಗೆ, ಇವು ಐದು ವಿವಿಧ ಪ್ರಾಣಗಳು.
ಐದು ಉಪ ಪ್ರಾಣಗಳೂ ಇವೆ, ಆದರೆ ನಾವು ಅದರ ಬಗ್ಗೆ ಇನ್ನೊಮ್ಮೆ ಮಾತನಾಡೋಣ.

ಪ್ರ: ಬಾಳ ಸಂಗಾತಿಯ ಜೊತೆಗೆ ಪ್ರೀತಿ ಮತ್ತು ವಿರಕ್ತಿಗಳು ಎಷ್ಟು ಸಮಂಜಸ?
ಶ್ರೀಶ್ರೀ: ನಿಮಗೆ ಜೀವನದಲ್ಲಿ ಅನುರಾಗ ಮತ್ತು ವೈರಾಗ್ಯ ಎರಡೂ ಆವಶ್ಯಕ. ಸಾಮಾನ್ಯವಾಗಿ ನಾವು ಯೋಚಿಸುತ್ತೇವೆ, ’ನನಗೆ ಅನುರಾಗವಿರುವಾಗ, ಹೇಗೆ ವಿರಕ್ತಿ ನನ್ನಲ್ಲಿರಬಹುದು? ನಾನು ವಿರಕ್ತನಾಗಿದ್ದರೆ, ನಾನು ಹೇಗೆ ಯಾವುದೇ ವಿಷಯದ ಕುರಿತು ಅನುರಾಗದಿಂದಿರುವುದು?’
ಇದು ಜನರ ಮನಸ್ಸಿನಲ್ಲಿ ಇರುವ ಸಾಮಾನ್ಯ ಪರಿಕಲ್ಪನೆ. ನಾನು ನಿಮಗೆ ಹೇಳುತ್ತೇನೆ, ಅದು ಆ ರೀತಿಯಲ್ಲ. ಅದು ಹೀಗಿರುವುದು, ನೀವು ಎಳೆಯುವ ಉಸಿರು ಅನುರಾಗ, ಹೊರಗೆ ಬಿಡುವ ಉಸಿರು ವಿರಕ್ತಿ ಮತ್ತು ಇವುಗಳೆರಡರ ನಡುವಿನಲ್ಲಿರುವುದು ಸಹಾನುಭೂತಿ. ನಮಗೆ ಎಲ್ಲಾ ಮೂರು ಅಗತ್ಯ.

ನಿಮಗೆ ಜೀವನದಲ್ಲಿ ಯಾವುದಾದರೊಂದರ ಬಗ್ಗೆ ಅನುರಾಗವಿರಬೇಕು, ಇಲ್ಲವಾದರೆ ನೀವು ಖಿನ್ನತೆಗೊಳಗಾಗುತ್ತೀರಿ. ಜ್ಞಾನದ ಬಗ್ಗೆ ಅನುರಾಗದಿಂದಿರಿ, ಸೇವೆ ಮಾಡುವುದರಲ್ಲಿ ಆಸಕ್ತಿಯಿರಲಿ, ಯೋಚಿಸುವುದರಲ್ಲಿ ಅಥವಾ ಯಾವುದರ ಬಗ್ಗೆಯಾದರೂ ಆಸಕ್ತಿಯಿಂದಿರಿ. ಜೀವನದಲ್ಲಿ ಒಂದಾದರೂ ವಿಷಯದ ಬಗ್ಗೆ ದಾಹ, ಆಸಕ್ತಿ ಖಂಡಿತ ಇರಬೇಕು. ನೀವು ವಿವೇಕದ ಬಗ್ಗೆಯೂ ಆಸಕ್ತಿ ಇಟ್ಟುಕೊಳ್ಳಬಹುದು. ಹಾಗಾಗಿ ಆಸಕ್ತಿಯು ಅತ್ಯಗತ್ಯ!

ವಿರಕ್ತಿಯೂ ಅತ್ಯಗತ್ಯವೇ. ವಿರಕ್ತಿಯಿಲ್ಲದೇ ಯಾವುದೇ ಆನಂದವಿಲ್ಲ; ಸಂತೋಷವಿಲ್ಲ. ನಿಮಗೆ ಚೂರೂ ವಿರಕ್ತಿಯಿಲ್ಲದಿದ್ದರೆ ನೀವು ದೀನತೆಗೊಳಗಾಗುತ್ತೀರಿ. ಮತ್ತೆ, ನಿಸ್ಸಂಶಯವಾಗಿ ಜೀವನದಲ್ಲಿ ದಯೆಯು ಆವಶ್ಯಕ. ಹಾಗಾಗಿ ಈ ಮೂರರಲ್ಲಿ ಎಲ್ಲವೂ ಅತ್ಯಗತ್ಯ.

ಪ್ರ: ನಾವು ಈ ಬಾರಿ ಮುಕ್ತಿ ಹೊಂದಲು ಅಸಫಲರಾದರೆ ಏನಾಗುತ್ತದೆ? ನಾವು ಮುಂದಿನ ಜನ್ಮದಲ್ಲಿ ನಿಮ್ಮ ಜೊತೆಗಿರಬಹುದೇ?
ಶ್ರೀಶ್ರೀ: ಹೌದು, ಖಂಡಿತವಾಗಿ. ಅದರ ಬಗ್ಗೆ ಚಿಂತಿಸಬೇಡಿ.

ಪ್ರ: ಆಪ್ತ ಗುರೂಜಿ, ಅಷ್ಟೊಂದು ದಂಪತಿಗಳು ಮಕ್ಕಳನ್ನು ಪಡೆಯದಿರುವುದು ನನಗೆ ಆಶ್ಚರ್ಯವಾಗುತ್ತದೆ. ಪಾಶ್ಚಾತ್ಯ ಜಗತ್ತಿನಲ್ಲಿ ಏನಾಗುತ್ತಿದೆ?
ಶ್ರೀಶ್ರೀ: ಹ್ಞಾಂ, ಅದನ್ನುನೀವು ವೈದ್ಯರಲ್ಲಿ ಕೇಳಬೇಕು. ಅವರು ನಿಮ್ಮ ಸರಿಯಾದ ಪರಿಶೀಲನೆ ನಡೆಸುತ್ತಾರೆ. ನಾವು ಇದರ ಕುರಿತು ಸಾರ್ವತ್ರಿಕಗೊಳಿಸಲಾಗುವುದಿಲ್ಲ. ಅಲ್ಲದೇ ಮದ್ಯ ಮತ್ತು ಮಾದಕದ್ರವ್ಯಗಳ ಉಪಯೋಗ ಇದರ ಕಾರಣಗಳಲ್ಲಿ ಒಂದಾಗಿದೆ. ಅದರಲ್ಲೇನೂ ಒಳಿತಿಲ್ಲ. ಜನರು ತಮ್ಮ ಕಾಲೇಜು ದಿನಗಳಲ್ಲೇ ಅಥವಾ ಶಾಲಾದಿನಗಳಲ್ಲೇ ಮದ್ಯಪಾನ ಶುರುಮಾಡುತ್ತಾರೆ. ಅದು ಒಳ್ಳೆಯದಲ್ಲ. ಜನರು ಮಾದಕದ್ರವ್ಯಗಳಿಂದ ದೂರವಿದ್ದರೆ ಈ ಜಗತ್ತು ಇನ್ನೂ ಏಷ್ಟೋ ಒಳ್ಳೆಯದಾಗಿರುವುದು.