ಗುರುವಾರ, ಡಿಸೆಂಬರ್ 27, 2012

ಪುನರ್ಜನ್ಮ


೨೭ ದಶಂಬರ ೨೦೧೨
ಬಾಡ್ ಅಂತೋಗಸ್ಟ್, ಜರ್ಮನಿ

ಪ್ರಶ್ನೆ: ನಾವು ಪುನರ್ಜನ್ಮವನ್ನು ಯಾಕೆ ತಪ್ಪಿಸಬೇಕೆಂದು ನೀವು ದಯವಿಟ್ಟು ವಿವರಿಸುವಿರಾ?
ಶ್ರೀ ಶ್ರೀ ರವಿ ಶಂಕರ್: ನೀವು ಎಚ್ಚೆತ್ತು ನೋಡಿದರೆ, ಜೀವನದಲ್ಲಿ ಬಹಳಷ್ಟು ದುಃಖವಿದೆ, ಮತ್ತು ನೀವು ಇಷ್ಟಪಡದೇ ಇರುವುದು ದುಃಖವನ್ನು. ನೀವು ದುಃಖವನ್ನು ಬಯಸುವುದಿಲ್ಲ. ನಾವು ಯಾವುದನ್ನು ಹೊಂದಲು ಬಯಸುವುದಿಲ್ಲವೋ ಅದು ದುಃಖವೆಂದು ಕರೆಯಲ್ಪಡುತ್ತದೆ ಮತ್ತು ಅದು ಜೀವನದಲ್ಲಿದೆ. ಪತಿ ಮತ್ತು ಪತ್ನಿಯ ನಡುವೆ, ತಂದೆ ಮತ್ತು ತಾಯಿಯ ನಡುವೆ, ತಾಯಿ ಮತ್ತು ಮಗಳ ನಡುವೆ, ಮಗಳು ಮತ್ತು ಮಗನ ನಡುವೆ, ಸ್ನೇಹಿತರೊಂದಿಗೆ ಮತ್ತು ಶತ್ರುಗಳೊಂದಿಗೆ, ದುಃಖವಿದೆ. ನಿಮ್ಮ ಶರೀರ ಕೂಡಾ ನಿಮಗೆ ಇನ್ನೂ ಹೆಚ್ಚಿನ ದುಃಖವನ್ನು ತರುತ್ತದೆ. ನೀವೇನೇ ಮಾಡಿದರೂ, ಅಲ್ಲಿ ಸ್ವಲ್ಪ ದುಃಖವಿದೆ.
ನೀವು ಈ ಜಗತ್ತಿನಲ್ಲಿ ಹುಟ್ಟುವಾಗ, ನೀವು ಅವಲಂಬಿತರಾಗುತ್ತೀರಿ. ನೀವೊಂದು ಶಿಶುವಾಗಿರುವಾಗ, ನಿಮಗೆ ನೀವೇ ಆಗಿ ಎದ್ದು ನಿಲ್ಲಲೂ ಸಾಧ್ಯವಿರುವುದಿಲ್ಲ, ಯಾರಾದರೂ ನಿಮ್ಮನ್ನು ಎತ್ತಬೇಕು ಮತ್ತು ಯಾರಾದರೂ ನಿಮ್ಮನ್ನು ಒರೆಸಬೇಕು. ನೀವು ಹುಟ್ಟಿದಂದಿನಿಂದ ನೀವು ಅವಲಂಬಿತರಾಗಿರುವಿರಿ, ಮತ್ತು ವಯಸ್ಸಾಗುವಾಗ ಕೂಡಾ ನೀವು ಅವಲಂಬಿತರಾಗುವಿರಿ, ಆದರೆ ಹಣವು, ನೀವು ನಿರಾವಲಂಬಿಗಳೆಂಬ ಒಂದು ಸುಳ್ಳು ಅಭಿಪ್ರಾಯವನ್ನು ನಿಮಗೆ ನೀಡುತ್ತದೆ. ಅದಕ್ಕಾಗಿಯೇ ಅದು ಮಾಯೆಯೆಂದು ಕರೆಯಲ್ಪಡುವುದು. ಮಾಯೆಯೆಂದರೆ ಅದೊಂದು ಛಾಪನ್ನು ಸೃಷ್ಟಿಸುತ್ತದೆಯೆಂದು ಅರ್ಥ.
ನೀವು ಯಾರಿಗಾದರೂ ಕೆಲವು ಡಾಲರ್ ನೋಟುಗಳನ್ನು ನೀಡಿದರೆ, ಅವರು ಬಂದು ನಿಮಗಾಗಿ ಕೆಲಸ ಮಾಡುತ್ತಾರೆ, ಮತ್ತು ಅದು ನಿಮಗೆ ನೀವು ನಿರಾವಲಂಬಿಗಳೆಂಬ ಭಾವನೆಯನ್ನು ನೀಡುತ್ತದೆ. ಜೀವನದಲ್ಲಿ ಅವಲಂಬನೆಯಿದೆ. ಎಲ್ಲಿ ಅವಲಂಬನೆಯಿರುವುದೋ ಅಲ್ಲಿ ದುಃಖವಿದೆ. ಯಾವುದು ದುಃಖದಾಯಕವಾಗಿರುವುದೋ ಅದು ಹಿತವಾಗಿರುವುದಿಲ್ಲ ಮತ್ತು ಅದನ್ನು ಹೊಂದಲು ನೀವು ಬಯಸುವುದಿಲ್ಲ. ಆದುದರಿಂದ ಜನರು, "ನನಗೆ ಇನ್ನು ಪುನರ್ಜನ್ಮ ಬೇಡ. ಸಾಕಪ್ಪಾ ಸಾಕು" ಎಂದು ಹೇಳುತ್ತಾರೆ.
ಸುಮ್ಮನೇ ಕಲ್ಪಿಸಿಕೊಳ್ಳಿ, ನೀವು ಪುನಃ ಶಾಲೆಗೆ ಹೋಗಬೇಕಾಗುತ್ತದೆ, ಹೊಡೆಸಿಕೊಳ್ಳಬೇಕಾಗುತ್ತದೆ. ನಂತರ ಕಾಲೇಜಿಗೆ ಹೋಗಬೇಕಾಗುತ್ತದೆ ಮತ್ತು ಪುನಃ ಎಲ್ಲಾ ಹದಿಹರೆಯದ ಬಿಕ್ಕಟ್ಟುಗಳ ಮೂಲಕ ಹಾದುಹೋಗಬೇಕಾಗುತ್ತದೆ. ಆ ಎಲ್ಲಾ ಹದಿಹರೆಯದ ಮಕ್ಕಳ ಕಡೆಗೊಮ್ಮೆ ನೋಡಿ, ಅವರ ಮುಖಗಳು ಊದಿಕೊಂಡು; ಬಹಳ ಕೋಪದಲ್ಲಿ. ಅವರು ತಮ್ಮ ಹೆತ್ತವರಲ್ಲಿ ಕೋಪಗೊಂಡಿರುತ್ತಾರೆ ಮತ್ತು ಏನು ಮಾಡಬೇಕೆಂಬುದು ಅವರಿಗೆ ತಿಳಿದಿರುವುದಿಲ್ಲ.
ನೋಡಿ, ನಿಮಗೆ ತೊಂದರೆಯನ್ನುಂಟುಮಾಡುವುದು ಕೇವಲ ನಿಮ್ಮ ಶತ್ರುಗಳಲ್ಲ, ನಿಮ್ಮ ಮಿತ್ರರು ಕೂಡಾ ನಿಮಗೆ ತೊಂದರೆಯನ್ನುಂಟುಮಾಡುತ್ತಾರೆ. ಎಲ್ಲವೂ ಒಂದು ತೊಂದರೆ. ನಿಮ್ಮ ಮನಸ್ಸು ನಿಮ್ಮ ಶತ್ರುಗಳಿಂದ ಎಷ್ಟು ತುಂಬಿ ಹೋಗಿರುವುದೋ ಅಷ್ಟೇ ನಿಮ್ಮ ಮಿತ್ರರಿಂದಲೂ ತುಂಬಿಹೋಗಿರುತ್ತದೆ. ಆದುದರಿಂದ ಅವರೆಲ್ಲರೂ ನಿಮಗೆ ತೊಂದರೆಯನ್ನುಂಟುಮಾಡುತ್ತಾರೆ. ಮೇಲಾಗಿ, ಎಲ್ಲಾ ತೊಂದರೆಗಳನ್ನು ಒಂದು ಬದಿಯಲ್ಲಿರಿಸಿ, ನಿಮ್ಮ ಮನಸ್ಸೇ ನಿಮ್ಮ ದೊಡ್ದ ತೊಂದರೆ.
ನಾನು ಹೇಳುವುದೇನೆಂದರೆ, ನಿಮ್ಮ ಸ್ವಂತ ಮನಸ್ಸು ನಿಮಗೆ ತೊಂದರೆಯುಂಟು ಮಾಡುವಷ್ಟು ಜಗತ್ತಿನಲ್ಲಿ ಬೇರೆ ಯಾವುದೂ ಮಾಡಲಾರದು. ವಾಸ್ತವವಾಗಿ, ಇತರರು ನಿಮಗೆ ತೊಂದರೆಯುಂಟು ಮಾಡುತ್ತಿರುವಂತೆ ತೋರುತ್ತದೆ, ಆದರೆ ಅದು ಇತರರಲ್ಲ, ಅದು ನಿಮ್ಮದೇ ಮನಸ್ಸು.
ನಿಮಗೆ ನಿಮ್ಮದೇ ಮನಸ್ಸಿನಿಂದ ಮುಕ್ತಿ ಬೇಕಾಗಿದೆ ಮತ್ತು ಹಾಗಾಗಿ ನೀವು, "ನನಗೆ ಇನ್ನೊಂದು ಜನ್ಮ ಬೇಡ" ಎಂದು ಹೇಳುತ್ತೀರಿ. ಆದರೆ ನಿಮಗೆ ತೊಂದರೆಯುಂಟುಮಾಡುತ್ತಿರುವುದು ನಿಮ್ಮದೇ ಮನಸ್ಸು, ಬೇರೆ ಯಾರೋ ಅಲ್ಲ ಎಂಬುದು ಒಮ್ಮೆ ನಿಮಗೆ ಗೊತ್ತಾದರೆ, ಆಗ ಅದು ಜ್ಞಾನ, ಮತ್ತು ಜ್ಞಾನವು ಉದಯಿಸಿದಾಗ ನೀವು, "ನಾನು ಹತ್ತು ಸಲ ಅಥವಾ ಒಂದು ನೂರು ಸಲ ಅಥವಾ ಒಂದು ಸಾವಿರ ಸಲ ಜನ್ಮವೆತ್ತಬೇಕಾಗಿ ಬಂದರೂ ಪರವಾಗಿಲ್ಲ, ನಾನು ಬರುವೆನು" ಎಂದು ಹೇಳುವಿರಿ. ಆಗ, ಜೀವನವು ಆನಂದ, ಜೀವನವು ಪರಮಾನಂದವೆಂಬುದು ನಿಮಗೆ ತಿಳಿಯುತ್ತದೆ. ಇದು ಜ್ಞಾನ!
ನಿನ್ನೆ ನಾನಂದೆ, ಮನಸ್ಸು ನಮ್ಮ ಅತ್ಯುತ್ತಮ ಮಿತ್ರ ಮತ್ತು ಮನಸ್ಸು ನಮ್ಮ ಅತ್ಯಂತ ಕೆಟ್ಟ ಶತ್ರುವೆಂದು. ಅದು ಒಬ್ಬ ಮಿತ್ರನಲ್ಲಿ ಒಬ್ಬ ಶತ್ರುವನ್ನು ಮತ್ತು ಒಬ್ಬ ಶತ್ರುವಿನಲ್ಲಿ ಒಬ್ಬ ಮಿತ್ರನನ್ನು ನೋಡುತ್ತದೆ. ನಿಮ್ಮ ಮನಸ್ಸು ತಿರುಚಬಹುದು, ವಿಕಾರವಾಗಬಹುದು, ತನ್ನದೇ ಆದ ನರಕವನ್ನು, ತನ್ನದೇ ಆದ ಸ್ವರ್ಗವನ್ನು ಸೃಷ್ಟಿಸಬಹುದು.
ಆದುದರಿಂದ ನಮಗೆ ನಿಜವಾಗಿ ಬೇಕಾದುದೇನೆಂದರೆ ಮನಸ್ಸಿನಿಂದ ಮುಕ್ತಿ, ಆದರೆ ನೀವು, "ನಾನು ಪುನಃ ಹುಟ್ಟಿಬರಲು ಬಯಸುವುದಿಲ್ಲ" ಎಂದು ಹೇಳುತ್ತೀರಿ.

ಪ್ರಶ್ನೆ: ಒಂದು ಬಹಳ ದೊಡ್ಡದಾದ ಅಹಂಕಾರವಿರುವ ಜನರೊಂದಿಗೆ ವ್ಯವಹರಿಸುವುದು ಹೇಗೆ, ವಿಶೇಷವಾಗಿ ಅವರ ವರ್ತನೆಯು ಜೀವನದ ಮೇಲೆ ಮತ್ತು ಇತರರ ಮೇಲೆ ಕೆಟ್ಟ ರೀತಿಯಲ್ಲಿ ಪರಿಣಾಮ ಬೀರುತ್ತಿರುವಾಗ?
ಶ್ರೀ ಶ್ರೀ ರವಿ ಶಂಕರ್: ಅವರಲ್ಲಿ ದೊಡ್ಡ ಅಹಂಕಾರವಿರಲಿ, ನೀನು ಯಾಕೆ ಚಿಂತಿಸುವೆ? ನೀನು ಅವರಲ್ಲಿರುವುದಕ್ಕಿಂತ ದೊಡ್ಡದಾದ ಅಹಂಕಾರವನ್ನು ಪೋಷಿಸು, ಅಲ್ಲಿಗೆ ಕಥೆ ಮುಗಿಯಿತು. ನಾನು ಹೇಳುವುದೇನೆಂದರೆ, ವಾಸ್ತವವಾಗಿ ನಿನ್ನಲ್ಲಿ ಅದಕ್ಕಿಂತ ದೊಡ್ಡದಾದ ಅಹಂಕಾರವಿದೆಯೆಂಬುದು ನಿನಗೆ ಕಂಡುಬರುತ್ತದೆ. ಇತರರಲ್ಲಿ ಒಂದು ಅಹಂಕಾರವಿರಲಿ, ಅದರಿಂದೇನಾಯಿತು? ಎಲ್ಲರ ಅಹಂಕಾರವನ್ನು ನಾಶಗೊಳಿಸುವ ಅಥವಾ ಎಲ್ಲರ ಅಹಂಕಾರವನ್ನು ಚಿಕ್ಕದಾಗಿಸುವ ಒಂದು ಒಪ್ಪಂದಕ್ಕೆ ನೀನು ಯಾಕೆ ಸಹಿ ಹಾಕುತ್ತಿರುವೆ? ಒಬ್ಬರಲ್ಲಿ ಒಂದು ದೊಡ್ಡ ಅಹಂಕಾರವಿದ್ದರೆ, ಪ್ರಕೃತಿಯು ಅವರಿಗೆ ಕಲಿಸುತ್ತದೆ. ಒಂದಲ್ಲ ಒಂದು ದಿನ ಅವರು ದುಃಖಿತರಾಗುವರು. ಅದನ್ನು ಅವರಿಗೆ ಬಿಡು. ಅವರು ಸಂಗೀತವನ್ನು ಆನಂದಿಸಲಿ ಬಿಡು.
ಇತರರ ಅಹಂಕಾರದ ಕಡೆಗೆ ನೋಡಿ ನೀನು ಯಾಕೆ ಅಷ್ಟೊಂದು ದುಃಖಿಯಾಗುವೆ? ನನಗದು ಅರ್ಥವಾಗುತ್ತಿಲ್ಲ. ನೀನೇನು ಮಾಡಬೇಕೋ ಅದನ್ನು ನೀನು ಮಾಡು; ನಿನ್ನಿಂದ ಎಷ್ಟು ಸಾಧ್ಯವೋ ಅಷ್ಟು ನೀನು ಮಾಡು ಮತ್ತು ಮುಂದೆ ಸಾಗು. ಅಷ್ಟೇ. ಜೀವನದಲ್ಲಿ ನಾವು ಕೇವಲ ಮುಂದೆ ಸಾಗಬೇಕು.
ಯಾರಾದರೂ ನಿಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದರೆ, ನೀವು ಎದ್ದು ನಿಂತು ಅವರ ಮೇಲೆ ರೇಗಾಡಬಹುದು ಅಥವಾ ಅವರ ಮೇಲೆ ಚೀರಬಹುದು, "ನೀನು ಯಾಕೆ ನನಗೆ ನಿನ್ನೆ; ಮೊನ್ನೆ ಮತ್ತು ಹತ್ತು ವರ್ಷಗಳ ಹಿಂದೆ ಈ ರೀತಿ ಮಾಡಿದೆ?"
ಆದರೆ ನಾನು ಹೇಳುವುದೇನೆಂದರೆ, ನಿನ್ನೆ ಅಥವಾ ಒಂದು ತಿಂಗಳು ಮೊದಲು ಆದ ಒಂದು ತಪ್ಪಿನ ಬಗ್ಗೆ ಮಾತನಾಡುವುದರಿಂದ ನೀವು ಖಂಡಿತವಾಗಿಯೂ ಈ ಕ್ಷಣವನ್ನು ಕೂಡಾ ಹಾಳು ಮಾಡುತ್ತೀರಿ. ಈ ಕ್ಷಣದ ಸೌಂದರ್ಯವನ್ನು ನೀವು ಹಾಳು ಮಾಡುತ್ತಿರುವಿರಿ.
ನೀವು ಈಗಲೇ ಒಂದು ನಿರ್ಧಾರವನ್ನು ಮಾಡಬೇಕೆಂದು ನಾನು ಬಯಸುತ್ತೇನೆ, ’ಹಿಂದೆ ಏನಾಯಿತೆಂಬುದರ ಬಗ್ಗೆ ನಾನು ಚಿಂತಿಸುವುದಿಲ್ಲ, ಇದೀಗ ಈ ಕ್ಷಣವನ್ನು ನಾನು ಹಾಳು ಮಾಡುವುದಿಲ್ಲ’, ಮುಗಿಯಿತು.
ಜಗತ್ತು ಒಂದು ಸಾಗರದಂತೆ, ಈ ರೀತಿಯ ವಿಷಯಗಳು ಆಗುತ್ತವೆ. ಅವುಗಳು ಆಗುತ್ತವೆ ಮತ್ತು ಅವುಗಳು ಹೋಗುತ್ತವೆ ಕೂಡಾ. ಯಾವುದೇ ಸ್ಪಷ್ಟ ಕಾರಣವಿಲ್ಲದೆ ಮಿತ್ರರು ಶತ್ರುಗಳಾಗುತ್ತಾರೆ ಮತ್ತು ಶತ್ರುಗಳು ಮಿತ್ರರಾಗುತ್ತಾರೆ.
ಕೆಲವು ಜನರಿಗೆ ನೀವು ಕೇವಲ ಒಳ್ಳೆಯದನ್ನು ಮಾತ್ರ ಮಾಡಿದ್ದರೂ, ಯಾವುದೇ ಕಾರಣವಿಲ್ಲದೆಯೇ ಅವರು ನಿಮ್ಮ ಶತ್ರುಗಳಾಗಿದ್ದಾರೆ, ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ?
(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ನೀವು ಅಚ್ಚರಿ ಪಡುತ್ತೀರಿ, "ಓ ದೇವರೇ, ಈ ವ್ಯಕ್ತಿಗೆ ನಾನು ಕೇವಲ ಒಳ್ಳೆಯದನ್ನು ಮಾತ್ರ ಮಾಡಿದೆ, ಅವನು ಯಾಕೆ ನನ್ನನ್ನು ದೂಷಿಸುತ್ತಿದ್ದಾನೆ? ಈ ವ್ಯಕ್ತಿಯು ಯಾಕೆ ಒಬ್ಬ ಶತ್ರುವಾದನು?"
ಹಾಗೆಯೇ, ಕೆಲವು ಜನರಿದ್ದಾರೆ, ಅವರಿಗೆ ನೀವು ಯಾವುದೇ ಉಪಕಾರವನ್ನು ಮಾಡಲಿಲ್ಲ ಮತ್ತು ಹಾಗಿದ್ದರೂ ಅವರು ನಿಮಗೆ ಬಹಳಷ್ಟು ಸಹಾಯ ಮಾಡಿದ್ದಾರೆ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಿದೆ?
(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ನೋಡಿ, ಒಬ್ಬರು ನಿಮ್ಮ ಮಿತ್ರರಾದರೂ ಅಥವಾ ನಿಮ್ಮ ಶತ್ರುವಾದರೂ, ಅದೆಲ್ಲವೂ ಕರ್ಮದ ವಿಚಿತ್ರವಾದ ನಿಯಮಗಳಿಂದ ಆಗುತ್ತದೆ. ಅದಕ್ಕಾಗಿಯೇ, ಅದೆಲ್ಲವನ್ನೂ ಒಂದು ಬುಟ್ಟಿಯಲ್ಲಿ ಹಾಕಿ ಮತ್ತು ವಿಶ್ರಾಮ ಮಾಡಿ. ಇದನ್ನು ನಾನು ನನ್ನ ಕಾರ್ಯನೀತಿಯಾಗಿ ಅಳವಡಿಸಿಕೊಂಡಿದ್ದೇನೆ.
ಒಬ್ಬ ವ್ಯಕ್ತಿಗೆ ನೀವು ಬಹಳಷ್ಟು ಒಳ್ಳೆಯದನ್ನು ಮಾಡುತ್ತೀರಿ ಮತ್ತು ಆದರೂ ಆ ವ್ಯಕ್ತಿಯು ನಿಮ್ಮಲ್ಲಿ ಕೋಪಿಸಿಕೊಂಡಿದ್ದರೆ ಅಥವಾ ಅವರು ನಿಮ್ಮನ್ನು ದೂಷಿಸಿದರೆ, ನೀವೇನು ಮಾಡಲು ಸಾಧ್ಯ?
ಆದುದರಿಂದ, ಅದನ್ನೇ ಜಗಿಯುತ್ತಾ ಹೋಗಬೇಡಿ ಮತ್ತು ಹಿಂದಿನದರೊಂದಿಗೆ ವರ್ತಮಾನದ ಕ್ಷಣವನ್ನು ಹಾಳು ಮಾಡಬೇಡಿ.
ಅದೊಂದು ಒಳ್ಳೆಯ ವಿಚಾರವಲ್ಲವೇ? ಈ ಕ್ಷಣವನ್ನು ನಾವು ಆಚರಿಸೋಣ.
ಹಿಂದೆ ನಾನು ಜನರು ಹೇಳುವುದನ್ನು ಕೇಳಿಸಿಕೊಳ್ಳುತ್ತಿದ್ದೆ, ಅವರೆಲ್ಲರ ಕಥೆಗಳು ಮತ್ತು ಅವರು ಒಬ್ಬರು ಇನ್ನೊಬ್ಬರನ್ನು ದೂಷಿಸುವುದು. ಇದ್ದಕ್ಕಿದ್ದಂತೆ ನಾನು ಅರಿತುಕೊಂಡೆ, "ಇಲ್ಲ, ಇನ್ನು ಮುಂದೆ ನಾನು ಯಾರದ್ದೇ ದೂರನ್ನು ಕೇಳಿಸಿಕೊಳ್ಳುವುದಿಲ್ಲ. ಈ ಕ್ಷಣದ ಶಕ್ತಿಯನ್ನು ನಾನು ಹಾಳು ಮಾಡಲು ಬಯಸುವುದಿಲ್ಲ."
ನಿಮ್ಮ ವಿಷಯಗಳೊಂದಿಗೆ ವ್ಯವಹರಿಸಿ, ಅದು ನಿಮ್ಮ ಕರ್ಮ. ಪ್ರಾಚೀನ ಜನರು ಹೇಳುತ್ತಿದ್ದುದು ಇದನ್ನೇ.
ಅವರು ಸಲಹೆಗಾರರಂತೆ ಕುಳಿತುಕೊಂಡು ನಿಮ್ಮೆಲ್ಲಾ ಕಥೆಗಳನ್ನು ಕೇಳಿಸಿಕೊಳ್ಳುತ್ತಿರಲಿಲ್ಲ. ಅವರು ಹೇಳುತ್ತಿದ್ದರು, "ಬಾ, ಈ ಕ್ಷಣ ಎಚ್ಚೆತ್ತುಕೋ; ಈಗ (ತಮ್ಮ ಬೆರಳುಗಳನ್ನು ಚಿಟಿಕೆ ಹೊಡೆಯುತ್ತಾ)", ಮತ್ತು ಅದು ಮನಸ್ಸಿನಲ್ಲಿ, ಶಕ್ತಿಯಲ್ಲಿ ಹಾಗೂ ಸಮಯದಲ್ಲಿ ಒಂದು ಬಹುದೊಡ್ಡ ಬದಲಾವಣೆಯನ್ನು ತರುತ್ತಿತ್ತು.
ಆದರೆ ನೀವದನ್ನು ಒಮ್ಮಿಂದೊಮ್ಮೆಗೇ ಮಾಡಲು ಶುರು ಮಾಡಬೇಡಿ, ಆಗ ನೀವು ಅತ್ಯಂತ ಅಸಂವೇದನಾಶೀಲ ಮತ್ತು ಒರಟು ವ್ಯಕ್ತಿಯೆಂದು ಕರೆಯಿಸಿಕೊಳ್ಳುವಿರಿ. ತಿಳಿಯಿತೇ?
ಅದನ್ನು ನಿಧಾನವಾಗಿ ಮಾಡಿ. ನೀವು ಜನರು ಹೇಳುವುದನ್ನು ಕೇಳಿಸಿಕೊಳ್ಳಬೇಕು, ಅದನ್ನು ನಾನು ಕೂಡಾ ಹಲವಾರು ವರ್ಷಗಳ ವರೆಗೆ ಮಾಡಿದ್ದೇನೆ. ಆದರೆ ಒಂದು ಹಂತ ಬರಬೇಕು, ವಿಶೇಷವಾಗಿ ಜನರೊಂದಿಗೆ, ಆಗ ನೀವು ಹೇಳಬೇಕು, "ಸರಿ, ಈಗ ಇನ್ನಿಲ್ಲ."
ಕೆಲವೊಮ್ಮೆ ಹಾಗಾಗುತ್ತದೆ, ಮನೆಯಲ್ಲಿರುವ ವಯಸ್ಸಾದವರು ಹೇಳುತ್ತಾ ಹೋಗುತ್ತಾರೆ. ದೂರುವುದನ್ನು ಅವರು ಆನಂದಿಸುತ್ತಾರೆ. ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಅನುಭವಿಸಿರುವಿರಿ?
(ಹಲವರು ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ನೋಡಿ! ಅವರು ದೂರುವುದನ್ನು ಆನಂದಿಸುತ್ತಾರೆ ಮತ್ತು ಒಬ್ಬರು ಕೇಳಿಸಿಕೊಳ್ಳುವಾಗ, ಅವರು ಇನ್ನೂ ಹೆಚ್ಚು ದೂರುತ್ತಾರೆ. ಅಂತಹ ಕ್ಷಣಗಳಲ್ಲಿ ನೀವು ಸುಮ್ಮನೇ ಸಂಗೀತವನ್ನು ಹಾಕಬೇಕು ಮತ್ತು, "ಬನ್ನಿ, ನಾವು ನೃತ್ಯ ಮಾಡೋಣ. ದೂರುವುದನ್ನು ನಿಲ್ಲಿಸಿ" ಎಂದು ಹೇಳಬೇಕು.

ಪ್ರಶ್ನೆ: ಗುರುದೇವ, ೨೦೧೨ ’ನಂದ’ ವರ್ಷವಾಗಲಿದೆಯೆಂದು ನೀವು ಹೇಳಿದ್ದಿರಿ. ಅದು ಹೇಗೆ ಇದು ಅಷ್ಟೊಂದು ಕಠಿಣವಾದ ವರ್ಷವಾಯಿತು?
ಶ್ರೀ ಶ್ರೀ ರವಿ ಶಂಕರ್: ನಂದ ವರ್ಷವು ಇನ್ನೂ ಮುಗಿದಿಲ್ಲ, ಅದು ಮಾರ್ಚ್ ಕೊನೆಯಲ್ಲಿ ಮುಗಿಯುವುದು. ಇನ್ನೂ ಮೂರು ತಿಂಗಳುಗಳಿವೆ.
ನಿಮಗೆ ಗೊತ್ತಾ, ವಿಷಯಗಳು ನಿಮ್ಮೊಳಗೆ ಮಂಥನವಾಗುವಾಗ, ಅದು ಒಳ್ಳೆಯದು. ಆಗ ನೀವು ಎಚ್ಚೆತ್ತುಕೊಳ್ಳುವಿರಿ. ಅದು ಹೊರಜಗತ್ತಿನಲ್ಲಿ ಮಾತ್ರ ಆಗುತ್ತದೆಯೆಂದಲ್ಲ, ಆದರೆ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಕೂಡಾ ಅದು ಆಗುತ್ತದೆ.
ಜನರು ಇಲ್ಲಿಗೆ ಆಧ್ಯಾತ್ಮಕ್ಕೋಸ್ಕರ ಬರುತ್ತಾರೆ, ಆದರೆ ಅವರು ಹಲವಾರು ಇತರ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.
ಒಂದು ದಿನ ಒಬ್ಬ ವ್ಯಕ್ತಿಯು ನನ್ನ ಬಳಿ ಬಂದನು ಮತ್ತು ನಾನಂದೆ, "ನೀನು ಯಾಕೆ ನನ್ನ ಬಳಿಗೆ ಬಂದೆ? ನೀನು ಜ್ಞಾನಕ್ಕಾಗಿ ನನ್ನ ಬಳಿಗೆ ಬಂದೆ ಮತ್ತು ನೀನು ಜ್ಞಾನವನ್ನು ಬಿಟ್ಟು ಇತರ ಎಲ್ಲಾ ವಿಷಯಗಳ ಬಗ್ಗೆ ಯೋಚಿಸುತ್ತಿರುವೆ."
ಆ ವ್ಯಕ್ತಿ ಅಂದನು, "ಈ ವ್ಯಕ್ತಿಯು ನನಗೆ ಈ ರೀತಿ ಹೇಳಿದನು."
ಅರೆ! ಜಗತ್ತು ಕೆಟ್ಟದಾಗಿದ್ದರೆ, ಅದೊಂದು ಒಳ್ಳೆಯ ಕಾರಣಕ್ಕಾಗಿ; ನೀವು ನಿಮ್ಮನ್ನೇ ಸರಿಪಡಿಸಿಕೊಳ್ಳಿರೆಂದು. ನೀವು ನಿಮ್ಮ ಸ್ವಂತ ನ್ಯೂನತೆ ನೋಡದಿರುವಾಗ, ನೀವು ಇತರ ಎಲ್ಲರಲ್ಲೂ ನ್ಯೂನತೆಗಳನ್ನು ನೋಡುವಿರಿ ಮತ್ತು, "ಎಲ್ಲರೂ ಕೆಟ್ಟವರು, ನಾನು ಮಾತ್ರ ಒಳ್ಳೆಯವನು" ಎಂದು ಯೋಚಿಸುವಿರಿ.
ನಾನು ಹೇಳುವುದೇನೆಂದರೆ, ಹಾಗೆ ಯೋಚಿಸುವ ಜನರು ತುಂಬಾ ತಪ್ಪಾಗಿರುತ್ತಾರೆ. ಅವರು ಸಾಧಕರಲ್ಲ (ಆಧ್ಯಾತ್ಮಿಕ ಅನ್ವೇಷಕರು). ಒಬ್ಬ ಸಾಧಕನಾಗುವುದೆಂದರೆ, ತನ್ನ ಕಡೆಗೆ ನೋಡಿ, "ನನ್ನಲ್ಲಿ ನಾನು ಏನನ್ನು ತಿದ್ದಿಕೊಳ್ಳಬೇಕು, ನಾನದನ್ನು ತಿದ್ದಿಕೊಳ್ಳುತ್ತೇನೆ" ಎಂದು ಹೇಳುವವನು.
ಛಳಿಗಾಲದಲ್ಲಿ ಜರ್ಮನಿಯಲ್ಲಿ ಛಳಿಯಿದೆಯೆಂದು ನೀವು ದೂರಲು ಸಾಧ್ಯವಿಲ್ಲ. ಅದು ಹಾಗೆಯೇ ಇರುತ್ತದೆ. ಒಳಗೆ ಕುಳಿತುಕೊಳ್ಳುವುದು ಒಳ್ಳೆಯದು.
ಆದುದರಿಂದ, ಜ್ಞಾನವನ್ನು ಹಿಡಿದುಕೊಳ್ಳಿ. ಇರುವ ಸತ್ಯವೆಂದರೆ ಅದೊಂದೇ ಮತ್ತು ಅದೊಂದೇ ವಾಸ್ತವ. ಮತ್ತು ಅದಕ್ಕಾಗಿಯೇ ಈ ಎಲ್ಲಾ ಜ್ಞಾನ, ಧ್ಯಾನ ಹಾಗೂ ಸಾಧನೆಗಳಿರುವುದು. ಅದು ನಿಮಗೆ ಎಷ್ಟೊಂದು ಆಂತರಿಕ ಶಕ್ತಿಯನ್ನು ನೀಡುತ್ತದೆಯೆಂದರೆ, ಯಾವುದೇ ಪರಿಸ್ಥಿತಿಯಲ್ಲೂ ನೀವೊಂದು ನಗೆಯೊಂದಿಗೆ ಮುನ್ನಡೆಯಬಹುದು. ಅದಕ್ಕಾಗಿಯಲ್ಲವೇ ಎಲ್ಲರೂ ಹಂಬಲಿಸುತ್ತಿರುವುದು? ಎಂತಹ ಆಂತರಿಕ ಶಕ್ತಿಯೆಂದರೆ, ಏನೇ ಬರಲಿ ಯಾರಿಗೂ ನಿಮ್ಮ ನಗೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಇದು ಅತ್ಯಂತ ಅಗತ್ಯವಾದುದು.

ಪ್ರಶ್ನೆ: ಒಬ್ಬರು ಆಂತರಿಕ ಶಕ್ತಿಯನ್ನು ಸಾಧಿಸುವುದು ಮತ್ತು ಕಾಪಾಡಿಕೊಳ್ಳುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಈ ಜ್ಞಾನದ ಕಡೆಗೆ ಎಚ್ಚೆತ್ತುಕೊಳ್ಳುವುದರಿಂದ. ನೀವು ವರ್ಷಕ್ಕೊಮ್ಮೆ  ಬಂದು ಸ್ವಲ್ಪ ಜ್ಞಾನವನ್ನು ಕೇಳಿಸಿಕೊಂಡು ಹೋಗುವುದೆಂದು ಆಗಬಾರದು. ಇದನ್ನು ಕಾಪಾಡಿಕೊಳ್ಳುವುದಕ್ಕಾಗಿ, ಇದನ್ನು ನಿಮ್ಮ ದೈನಂದಿನ ದಿನಚರಿಯ ಭಾಗವನ್ನಾಗಿ ಮಾಡಿ.
ಹಾಗೆಯೇ, ವಿನಯತೆಯು ಮುಖ್ಯವಾದುದು. ಕೆಲವೊಮ್ಮೆ, ಜನರು ಜ್ಞಾನದ ಕಡೆಗೆ ಬಹಳ ಜಡರಾಗಿ ಬಿಡುತ್ತಾರೆ. ಅವರು, "ನನಗೆ ಅದೆಲ್ಲಾ ಗೊತ್ತಿದೆ" ಎಂದು ಯೋಚಿಸುತ್ತಾರೆ. "ನನಗೆ ಜ್ಞಾನ ತಿಳಿದಿದೆ, ತಿಳಿಯಲು ಅಲ್ಲೇನಿದೆ" ಒಬ್ಬರು ಆ ದುರಹಂಕಾರಕ್ಕೆ ಬೀಳಬಾರದು.
ಜ್ಞಾನದ ನಿರಂತರವಾದ ಪುನರುಜ್ಜೀವನ; ನಿಮಗೆ ತಿಳಿದಿರುವ ಅದೇ ಅಂಶಗಳ ಬಗ್ಗೆ; ಮತ್ತು ಅದನ್ನು ಪುನಃ ಜೀವಿಸುವುದು ಮುಖ್ಯವಾದುದು.
ಇದೊಂದು ಬಹಳ ಕಠಿಣವಾದ ಅಥವಾ ಕಷ್ಟವಾದ ಕೆಲಸವಲ್ಲ, ಮತ್ತು ಒಂದು ಕ್ಷಣ ನೀವು ಜ್ಞಾನವನ್ನು ಕಳೆದುಕೊಂಡರೂ ಕೂಡಾ, ಅದು ಹಾಗೆಯೇ ಹಿಂದಿರುಗಿ ಬರುತ್ತದೆ. ಅದು ಹಿಂದಿರುಗಿ ಬರುವುದೆಂಬುದನ್ನು ತಿಳಿದುಕೊಂಡು, ನೀವದನ್ನು ನಿಜವಾಗಿ ಕಳಕೊಳ್ಳುವುದಿಲ್ಲ, ಅದು ಅಲ್ಲಿರುತ್ತದೆ.

ಪ್ರಶ್ನೆ: ಪ್ರೀತಿಯ ಗುರುದೇವ, ನಾವು ಸುರಕ್ಷತೆಯನ್ನು ಅನುಭವಿಸುವ ಸೌಕರ್ಯ ವಲಯದಿಂದ ಹೊರಬಂದು, ನಾವು ಮಾಡಲು ಇಷ್ಟಪಡದಿರುವ ಅಥವಾ ಮಾಡಲು ನಮಗೆ ಹಿತವೆನಿಸದ ಕಾರ್ಯಗಳನ್ನು ಮಾಡುವುದು ಯಾಕೆ ಒಳ್ಳೆಯದೆಂದು ನೀವು ನಮಗೆ ಹೇಳುವಿರಾ?
ಶ್ರೀ ಶ್ರೀ ರವಿ ಶಂಕರ್: ಸಮಯದಿಂದ ಸಮಯಕ್ಕೆ ಮತ್ತೆ ಮತ್ತೆ ನಿಮ್ಮ ಸೌಕರ್ಯ ವಲಯದಿಂದ ಹೊರಬರುವುದರಿಂದ ನಿಮ್ಮ ಸಾಮರ್ಥ್ಯ ಮತ್ತು ನಿಮ್ಮ ಶಕ್ತಿಗಳು ವಿಸ್ತಾರವಾಗುತ್ತವೆ; ನೀವು ಹೆಚ್ಚು ಶಕ್ತಿಶಾಲಿಗಳಾಗುವಿರಿ.
ನೀವು ನಿಮ್ಮ ಸೌಕರ್ಯ ವಲಯದಲ್ಲಿ ಬಹಳವಾಗಿ ಸಿಕ್ಕಿಹಾಕಿಕೊಂಡಿರುವಿರಿ. ಅದುವೇ ನಿಮ್ಮ ಭಯ, ನಿಮ್ಮ ಆತಂಕ ಮತ್ತು ನಿಮ್ಮ ಬಂಧನಗಳ ಕಾರಣ. ನಿಮ್ಮ ಸೌಕರ್ಯ ವಲಯವು ನಿಮ್ಮ ಬಂಧನವಾಗಿದೆ.
ಕೆಲವೊಮ್ಮೆ ನೀವು ಎದ್ದುನಿಂತು, "ನಾನಿದರಿಂದ ಹೊರಬರುತ್ತೇನೆ" ಎಂದು ಹೇಳುವಾಗ, ಅದು ನಿಮಗೆ ಆ ಶಕ್ತಿಯನ್ನು ಹಿಂದೆ ತರುತ್ತದೆ.

ಪ್ರಶ್ನೆ: ನಾವು ಪ್ರೀತಿಸುವ ಜನರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ? ಅವರಿಗೆ ನಮ್ಮ ಪ್ರೀತಿಯ ಅನುಭವವಾಗುವುದಿಲ್ಲವೇ?
ಶ್ರೀ ಶ್ರೀ ರವಿ ಶಂಕರ್: ಅದು ಯಾಕೆಂದರೆ ಅವರು ಜ್ಞಾನಕ್ಕೆ ಒಡ್ಡಲ್ಪಡಲಿಲ್ಲ ಮತ್ತು ಜೀವಂತವಾಗಿರುವುದೆಂದರೇನು ಅಥವಾ ಸಾಯುವುದೆಂದರೇನೆಂಬುದು ಅವರಿಗೆ ತಿಳಿಯದು.
ತಮ್ಮ ಪ್ರಾಣದ ಬಗ್ಗೆ ಅಥವಾ ತಮ್ಮ ಜೀವನದ ಬಗ್ಗೆ ಅವರಿಗೆ ಯಾವುದೇ ತಿಳುವಳಿಕೆಯಿಲ್ಲ. ಅವರು ತಮ್ಮ ಸೌಕರ್ಯದ ಬಗ್ಗೆ ಬಹಳ ಗೀಳು ಹಚ್ಚಿಕೊಂಡಿರುತ್ತಾರೆ, ಆದುದರಿಂದ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವುದು ಯಾರೆಂದರೆ, ಯಾರಿಗೆ ಅತಿಯಾದ ಸೌಕರ್ಯದ ಬಯಕೆಯಿರುತ್ತದೋ ಅವರು. ಅವರಲ್ಲಿ ಯಾವುದೇ ತಾಳ್ಮೆಯಿರುವುದಿಲ್ಲ; ಸ್ವಲ್ಪ ಅಸೌಕರ್ಯವನ್ನೂ ಅವರು ಸಹಿಸಲಾರರು. ಅಲ್ಲಿಯೇ ನಿಮಗೆ ಹೆಚ್ಚು ಪ್ರಾಣ ಮತ್ತು ಹೆಚ್ಚು ಶಕ್ತಿ ಬೇಕಾಗಿರುವುದು.
ಒಬ್ಬರಲ್ಲಿ ನೀವು ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಹೆಚ್ಚು ಹೇಳಿದಷ್ಟೂ ಅವರು, "ಇಲ್ಲ, ನಾನು ಆತ್ಮಹತ್ಯೆ ಮಾಡಿಕೊಳ್ಳಲು ಬಯಸುತ್ತೇನೆ" ಎಂದು ಹೇಳುತ್ತಾರೆ. ಕೆಲವೊಮ್ಮೆ ನಾನವರಿಗೆ ಹೇಳುತ್ತೇನೆ, "ಸರಿ, ಆತ್ಮಹತ್ಯೆ ಮಾಡಿಕೋ, ಆದರೆ ಎವರೆಸ್ಟ್ ಶಿಖರವನ್ನು ಹತ್ತು ಮತ್ತು ಅಲ್ಲಿಂದ ನೀನು ಜಿಗಿ. ಮನೆಯಲ್ಲಿ ನೇಣು ಹಾಕಿಕೊಳ್ಳಬೇಡ. ಯಾವುದಾದರೂ ಸಾಹಸ ಮಾಡಲು ಹೋಗು ಮತ್ತು ನೀನು ಸತ್ತರೆ ಸಾಯುವೆ. ಒಳ್ಳೆಯದಾಗಲಿ."
ಆತ್ಮಹತ್ಯೆ ಮಾಡುವುದು ಮೂರ್ಖತನವಾಗಿದೆ. ಅವರು ಈ ಸುಂದರವಾದ ಜ್ಞಾನಕ್ಕೆ ತೆರೆಯಲ್ಪಡಲಿಲ್ಲ ಮತ್ತು ಅವರಿಗೆ ಜೀವನದ ಮೌಲ್ಯವು ತಿಳಿಯದು. ಅದಕ್ಕಾಗಿಯೇ ನಾವು ಎಲ್ಲರಿಗೂ ಅವರ ಉಸಿರಿನ ಬಗ್ಗೆ ಕಲಿಸಿಕೊಡುವುದು ಬಹಳ ಮುಖ್ಯವಾದುದು. ಪ್ರಾಣದ ಮಟ್ಟವು ನಿಜವಾಗಿ ಕಡಿಮೆಯಿರುವಾಗಲೇ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಗಳು ಏಳುವುದು. ಪ್ರಾಣವು ಹೆಚ್ಚಿರುವಾಗ, ಈ ಯೋಚನೆಯು ಬಾರದು. ಪ್ರಾಣವು ಹೆಚ್ಚಿದ್ದರೆ ಯಾವುದೇ ಅಪರಾಧವೂ ಆಗುವುದಿಲ್ಲ. ನಿಮ್ಮ ಪ್ರಾಣವು ಹೆಚ್ಚಿರುವಾಗ ನೀವು ನಿಮ್ಮ ಕಡೆಗಾಗಲೀ ಅಥವಾ ಇತರರ ಕಡೆಗಾಗಲೀ ಹಿಂಸಾತ್ಮಕವಾಗಿ ಇರುವುದಿಲ್ಲ. ಅದಕ್ಕಾಗಿಯೇ ಸುದರ್ಶನ ಕ್ರಿಯೆ, ಪ್ರಾಣಾಯಾಮ, ಧ್ಯಾನ, ಈ ಎಲ್ಲಾ ಅಭ್ಯಾಸಗಳನ್ನು ಜನರಿಗೆ ಕಲಿಸಬೇಕಾಗಿರುವುದು.
ಹಾಗೆಯೇ, ಯಾರಲ್ಲಿ ಅಂತಹ ಪ್ರವೃತ್ತಿಗಳಿರುವುದೋ ಅಂತಹ ಜನರು ತಮ್ಮನ್ನು ಇತರರ ಸೇವೆ ಮಾಡುವುದರಲ್ಲಿ ತೊಡಗಿಸಿಕೊಳ್ಳಬೇಕು.
ಪ್ರಾಚೀನ ಭಾರತದಲ್ಲಿ, ಸ್ವಲ್ಪ ಸೇವೆ ಮಾಡಲು ತಮ್ಮ ಮೂಳೆಗಳನ್ನು ಮುರಿಸಿಕೊಳ್ಳದ ಹೊರತು ಯಾರಿಗೂ ಜ್ಞಾನವನ್ನು ನೀಡಲಾಗುತ್ತಿರಲಿಲ್ಲ. ೧೦ರಿಂದ ೧೨ ವರ್ಷಗಳು, ಜನರು ಒಂದು ಆಶ್ರಮದಲ್ಲಿರುತ್ತಿದ್ದರು ಮತ್ತು ಅವರು ಬಹಳಷ್ಟು ಸೇವೆ ಮಾಡುತ್ತಿದ್ದರು. ಆಗ ಮಾತ್ರ ಅವರಿಗೆ ಸ್ವಲ್ಪ ಜ್ಞಾನವನ್ನು ನೀಡಲಾಗುತ್ತಿತ್ತು.
ಅಷ್ಟೊಂದು ಸೇವೆ, ಅಷ್ಟೊಂದು ಕೆಲಸವನ್ನು ಮಾಡಿ ಶರೀರವು ಯೋಗ್ಯವಾದಾಗ, ಮನಸ್ಸು ಯೋಗ್ಯವೂ ನಮ್ರವೂ ಆಗುವುದು. ಅದು ಸಮರಕಲೆ (ಮಾರ್ಷಿಯಲ್ ಆರ್ಟ್ಸ್) ಯಲ್ಲಿ ತರಬೇತಿ ನೀಡುವಂತೆ. ಮಾರ್ಷಿಯಲ್ ಆರ್ಟ್ ತರಬೇತಿಯನ್ನು ನೀವು ನೋಡಿರುವಿರೇ? ಮನಸ್ಸು ಮತ್ತು ಶರೀರಗಳು ಸಂಘಟಿತಗೊಳ್ಳುತ್ತವೆ. ನಿಮ್ಮ ಭಾವನೆಗಳು ಚೆಲ್ಲಾಪಿಲ್ಲಿಯಾಗದಿರಲೆಂದು ಮತ್ತು ನೀವು ಯಾವತ್ತೂ ’ನನ್ನ’ ಬಗ್ಗೆ ಚಿಂತಿಸದಿರಲೆಂದು ಸೇನೆಯಲ್ಲಿ ಕೂಡಾ ನೀವು ಅದೇ ರೀತಿ ತರಬೇತಿಗೊಳಿಸಲ್ಪಡುವಿರಿ.
 
ಪ್ರಶ್ನೆ: ಪ್ರೀತಿಯ ಗುರುದೇವ, ನಮಗೆ ಕೆಲವು ಸಮಸ್ಯೆಗಳಿರುವಾಗ ಅಥವಾ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿರುವಾಗ ಮತ್ತು ನಮ್ಮೊಳಗಿರುವ ದನಿಯಿಂದ ನಾವು ಉತ್ತರವನ್ನು ಪಡೆಯುವಾಗ, ಯಾರು ಮಾತನಾಡುತ್ತಿರುವುದೆಂದು ನಮಗೆ ತಿಳಿಯುವುದು ಹೇಗೆ? ಅದು ನಮ್ಮ ಮನಸ್ಸೇ, ಅಂತಃಸ್ಫುರಣೆಯೇ ಅಥವಾ ದೇವರೇ?
ಶ್ರೀ ಶ್ರೀ ರವಿ ಶಂಕರ್: ಅದೆಲ್ಲವೂ ಒಂದೇ, ಅದರ ಬಗ್ಗೆ ಚಿಂತಿಸಬೇಡ. ಅದನ್ನು ಅತಿಯಾಗಿ ವಿಶ್ಲೇಷಿಸುವ ಅಗತ್ಯವಿಲ್ಲ, ಕೇವಲ ನಿರಾತಂಕವಾಗಿರು. ನಾವು ನಿರಾತಂಕವಾಗಿರುವಾಗ, ಸರಿಯಾದ ಉತ್ತರವು ಸಿಗುತ್ತದೆ. ನಮ್ಮನ್ನೇ ಬಲವಂತಪಡಿಸುವುದರಿಂದ ಅಂತಃಸ್ಫುರಣೆಯು ಬರಲು ಸಾಧ್ಯವಿಲ್ಲ. ಅದೊಂದು ಸಹಜ ಪ್ರಕ್ರಿಯೆಯಾಗಿದೆ.

ಪ್ರಶ್ನೆ: ಪ್ರೀತಿಯ ಗುರುದೇವ, ಕ್ರೋಧದಂತಹ ಶಕ್ತಿಶಾಲಿ ಭಾವನೆಗಳು ಏಳುವಾಗ, ಅವುಗಳನ್ನು ನಿಯಂತ್ರಿಸುವುದು ಕಷ್ಟ ಮತ್ತು ನಂತರ ನಾನು ಮರುಗುವಂತಹ ಕೆಲಸಗಳನ್ನು ನಾನು ಮಾಡುತ್ತೇನೆ. ಅದರೊಂದಿಗೆ ವ್ಯವಹರಿಸುವುದು ಹೇಗೆ? 
ಶ್ರೀ ಶ್ರೀ ರವಿ ಶಂಕರ್: ಅದು ಮೊದಲಿಗಿಂತ ಉತ್ತಮವಾಗಿಲ್ಲವೇ? ಮೊದಲು ಕೂಡಾ ನೀನು ಕೋಪಗೊಳ್ಳುತ್ತಿದ್ದೆ, ಆದರೆ ಈಗ ಅದು ಸುಧಾರಿಸಿದೆ. ಯೋಗ ಮಾಡುತ್ತಾ ಇರು, ಎಲ್ಲಾ ಅಭ್ಯಾಸಗಳನ್ನು ಮಾಡುತ್ತಾ ಇರು. ಅದು ನಿನ್ನ ಕೋಪವನ್ನು ಕಡಿಮೆ ಮಾಡುತ್ತದೆ. ಅದು ನಿನ್ನ ಕೋಪವನ್ನು ಕಡಿಮೆ ಮಾಡದಿದ್ದರೆ, ಆಗ ದೇವರು ಮಾತ್ರ ನಿನಗೆ ಸಹಾಯ ಮಾಡಲು ಸಾಧ್ಯ; ಒಳ್ಳೆಯದಾಗಲಿ! ಆಗಲೂ ನೀನು ಕೋಪಗೊಂಡಿದ್ದರೆ, ಕೋಪಗೊಂಡಿರು. ನೀನು ಬೆಲೆ ತೆತ್ತು, ಅದು ಇತರರಿಗೆ ಸ್ವಲ್ಪ ಮನೋರಂಜನೆಯಾಗಬಹುದು. ಜಗತ್ತಿನಲ್ಲಿ ಅದು ಕೂಡಾ ಬೇಕು. ಅಲ್ಲಿ ಇಲ್ಲಿ ಸ್ವಲ್ಪ ಮಸಾಲೆ, ಅಲ್ಲಿ ಇಲ್ಲಿ ಸ್ವಲ್ಪ ಉಪ್ಪಿನಕಾಯಿ, ಅಲ್ಲಿ ಇಲ್ಲಿ ಸ್ವಲ್ಪ ಮೆಣಸು. ಎಲ್ಲಿಯವರೆಗೆ ಅದು ನಿಮ್ಮ ಕಣ್ಣುಗಳೊಳಕ್ಕೆ ಹೋಗುವುದಿಲ್ಲವೋ, ಮೆಣಸು ಕೂಡಾ ಆಗಬಹುದು.