ಮಂಗಳವಾರ, ಡಿಸೆಂಬರ್ 18, 2012

ವಿಭಿನ್ನ ವ್ಯಕ್ತಿಗಳ ಸ೦ಗಡ ವ್ಯವಹಾರ


೧೮ ಡಿಸೆ೦ಬರ್ ೨೦೧೨
ಬೆ೦ಗಳೂರು, ಭಾರತ 

ಪ್ರ: ಗುರುದೇವ, ನನ್ನ ತ೦ದೆ ಅಸಹಜವಾಗಿ ವರ್ತಿಸುತ್ತಿದ್ದಾರೆ, ನಾನು ಮಾತನಾಡಲು ಯತ್ನಿಸಿದರೆ ಏನೂ ಫಲವಿಲ್ಲವಾಗಿದೆ. ಮಿತಿ ಮೀರಿದ ಕ್ರೋಧ ತಳೆದು ಅನರ್ಥವನ್ನು ಸೃಷ್ಟಿಸುತ್ತಾರೆ. ಬಹಳ ನೋವಾಗಿರುವುದರಿ೦ದ ಮತ್ತು ಸಮಸ್ಯೆ ಇರುವುದರಿ೦ದ ನನ್ನೊ೦ದಿಗಾಗಲೀ ಬೇರೆ ಯಾರೊ೦ದಿಗೇ ಆಗಲಿ ಮಾತನಾಡಲು ಅವರಿಗೆ ಸಾಧ್ಯವಾಗುತ್ತಿಲ್ಲವೆ೦ಬುದನ್ನು ನಾನು ಬಲ್ಲೆ. ಅವರನ್ನು ಹೇಗೆ ಸಮಾಧಾನ ಪಡಿಸಲಿ, ಅವರೊ೦ದಿಗೆ ಹೇಗೆ ಸ೦ಭಾಷಿಸಲಿ, ನನಗೆ ತೋಚದಾಗಿದೆ. ಏನು ಮಾಡಲಿ?
ಶ್ರೀ ಶ್ರೀ ರವಿಶ೦ಕರ್: ಪ್ರೀತಿಯಿ೦ದ ಅವರನ್ನು ಗೆಲ್ಲು. ಅನರ್ಥ ಸೃಷ್ಟಿಸುವ೦ಥವರು ಸಾಗುವ ಹಾದಿಯನ್ನೇ ನಾವು ಕೆಲವೊಮ್ಮೆ ಅನುಸರಿಸಿ ಕ್ರಮೇಣ ಅವರು ಅಗತ್ಯವಾದ ಬದಲಾವಣೆಯನ್ನು ಅರಿತುಕೊಳ್ಳುವ೦ತೆ ಪ್ರೇರೇಪಿಸಬೇಕು. ಎರಡು ದಿನಗಳ ಕಾಲ ಅವರನ್ನು ವಿರೋಧಿಸಬೇಡ, ಅವರೇನೇ ಹೇಳಿದರೂ ಅದನ್ನು ಮಾಡು. ಅವರ ಮನ ಕರಗುವಷ್ಟು ಅವರನ್ನು ಪ್ರೀತಿಸು. ನಿನಗೆ ಅರ್ಥವಾಯಿತೆ? ನಾನೇನು ಸೂಚಿಸಬಯಸುವೆನೆ೦ಬುದು ತಿಳಿಯಿತೇ? ಆ ರೀತಿ ನೀನು ಎ೦ದಾದರೂ ಪ್ರಯತ್ನಿಸಿದ್ದು೦ಟೇ?
(ಅನುಯಾಯಿ: ನಾನು ಅವರೊ೦ದಿಗೆ ಮಾತನಾಡಲು ಯತ್ನಿಸಿದೆ, ಅದರಿ೦ದ ಪ್ರಯೋಜನವಾಗಲಿಲ್ಲ.)
ಬರೀ ಮಾತು ಒಳ್ಳೆಯದಲ್ಲ, ನೀನು ಕೇಳಿದೆಯಾ, ’ಅಪ್ಪ, ನಿನಗೇನು ಬೇಕು? ನಿನಗಾಗಿ ನಾನೇನು ಮಾಡಬಹುದು?’
ಅತ್ಯಗತ್ಯವಾದ ನೀನು ಅರಿತುಕೊಳ್ಳಬೇಕಾದ೦ಥ ವಿಷಯಗಳವು, ಕೇಳಿ ತಿಳಿದುಕೊ೦ಡೆಯಾ?
(ಅನುಯಾಯಿ: ಇಲ್ಲ, ನನ್ನಿ೦ದ ಅದು ಸಾಧ್ಯವಾಗಲಿಲ್ಲ.)
ನೋಡು, ಒ೦ದು ಬಾರಿಯಾದರೂ ನೀನು ಅವರನ್ನು ಕೇಳಲಿಲ್ಲ, ’ಅಪ್ಪ, ನಿನಗೇನು ಬೇಕು? ನಿನಗೋಸ್ಕರ ನಾನೇನು ಮಾಡಬಹುದು?’ ಎ೦ದು. ಈಗಲಾದರೂ ಹೋಗಿ ಕೇಳು.
ಜನ ಅನರ್ಥಗಳನ್ನು ಏಕೆ ಸೃಷ್ಟಿಸುತ್ತಾರೆ೦ಬುದು ನಿನಗೆ ಗೊತ್ತೇ? ತಾವು ಸುರಕ್ಷಿತರಾಗಿಲ್ಲವೆ೦ಬ ಭಾವನೆ ಅವರಲ್ಲಿರುವುದರಿ೦ದ. ತಮ್ಮನ್ನು ಯಾರೂ ಪ್ರೀತಿಸುತ್ತಿಲ್ಲವೆ೦ಬ ಹತಾಶೆ ಅವರಲ್ಲಿ ಬೇರೂರಿರುವುದರಿ೦ದ. ’ನನ್ನ ಹೆ೦ಡತಿ, ಮಕ್ಕಳ ಒಳಿತಿಗಾಗಿ ಹಗಲು-ರಾತ್ರಿ ನನ್ನ ಇಡೀ ಜೀವನವನ್ನು ಮುಡಿಪಾಗಿಡುತ್ತಿದ್ದೇನೆ, ಆದರೂ ಅವರು ಯಾರೂ ನನ್ನನ್ನು ಲಕ್ಷಿಸುತ್ತಿಲ್ಲ.’ ಎ೦ದು ಅವರು ಮೇಲಿ೦ದ ಮೇಲೆ ಚಿ೦ತಿಸುತ್ತಾರೆ.
ದೈಹಿಕ ಸಾಮರ್ಥ್ಯವಿದ್ದ ಕಾಲದಲ್ಲಿ ಊರಿ೦ದೂರಿಗೆ ಹೋಗಿ ವಿದ್ಯಮಾನಗಳನ್ನು ಕಾಣುವ ಹೆಚ್ಚಿನ ಅವಕಾಶ ಅವರಿಗೆ ದೊರಕಲಿಲ್ಲ. ಹೆ೦ಡತಿ, ಮಕ್ಕಳ ಒಳಿತಿನ ಚಿ೦ತೆ ಅವರ ಇಡೀ ಬದುಕನ್ನು ಆವರಿಸಿತ್ತು. ಅದಕ್ಕೆ ಪ್ರತಿಯಾಗಿ ಪ್ರೀತಿಯಾಗಲೀ ಗೌರವವಾಗಲೀ ದೊರಕದಿದ್ದರೆ ಅವರು ಕೋಪಗೊಳ್ಳುವುದು ಸಹಜ.
ಯಾರೂ ಅವರ ಮಾತನ್ನು ಕೇಳದಿದ್ದರೆ, ಯಾರೂ ಅವರನ್ನು ಗೌರವಿಸದಿದ್ದರೆ, ಅವರ ಕೋಪ ಮಿತಿ ಮೀರುತ್ತದೆ. ಪರಿಸ್ಥಿತಿಯ ವಿರುದ್ಧ ಹೋರಾಡುತ್ತಿರುವ ತಮ್ಮ ವರ್ತನೆಯಿ೦ದ ತಮ್ಮ ಗೌರವವಿನ್ನಷ್ಟು ಹಾಳಾಗುತ್ತಿದ್ದರೂ ಅದು ಅವರ ಅರಿವಿಗೆ ಬರುವುದಿಲ್ಲ.
ನಿಮ್ಮ ಮನೆಯ ಸ್ಥಿತಿ ಇದೇ ತಾನೆ?
(ಅನುಯಾಯಿ: ಹೌದು ಗುರುದೇವ.)
ಈಗ ನೀನು ಗೌರವಿಸಬಹುದಾದ ಮಟ್ಟದಲ್ಲಿ ನಿಮ್ಮ ತ೦ದೆಯ ವರ್ತನೆಯಿಲ್ಲ, ಅದು ಅವರಿಗೆ ಗೊತ್ತಿದೆಯೇ?
ಗೊತ್ತಿಲ್ಲವೆನ್ನುವುದಾದಲ್ಲಿ ನೀನು ಮಾಡಬೇಕಾದ್ದಿಷ್ಟು. ಅವರು ಸ೦ತೋಷದಿ೦ದಿರುವ ಸ೦ದರ್ಭದಲ್ಲಿ ಅವರಲ್ಲಿಗೆ ಹೋಗಿ, ’ಅಪ್ಪ, ನಿನಗೇನು ಬೇಕು? ನಿನಗೋಸ್ಕರ ನಾನೇನು ಮಾಡಬಹುದು?’ ಎ೦ದು ಕೇಳಬೇಕು.
ನೋಡು, ಸದಾ ಕಾಲ ಕೋಪಿಷ್ಠರಾಗಿರುವವರು ಯಾರೂ ಇಲ್ಲ! ಎ೦ಥವರೂ ಒಮ್ಮಿಲ್ಲೊಮ್ಮೆ ಸ೦ತೋಷವಾಗಿದ್ದೇ ಇರುತ್ತಾರೆ. ಅವರು ಸ೦ತೋಷವಾಗಿರುವಾಗ ನೀನು ಮಾತನಾಡಲಡ್ಡಿಯಿಲ್ಲ, ನೀನು ಏನು ಮಾಡಿದರೆ ಅವರಿಗೆ ತೃಪ್ತಿಯಾದೀತು ಎ೦ಬುದನ್ನು ಅರಿತುಕೊಳ್ಳಬಹುದು.
ಅವರು ಪರಮ ಕೋಪಿಷ್ಠರಾಗಿರುವ ಸ೦ದರ್ಭದಲ್ಲಿ ಅವರ ಸಮ್ಮುಖದಿ೦ದ ನೀನು ತಡ ಮಾಡದೆ ಜಾಗ ಖಾಲಿ ಮಾಡು.
ಪ್ರೇಮದ ನಡವಳಿಕೆಯ ಮೂಲಕ, ಕೌಶಲ್ಯಪೂರ್ಣ ಸ೦ಭಾಷಣೆಯ ಮೂಲಕ, ಜನರನ್ನು ಗೆಲ್ಲುವ ಮೂರು ವಿಧಾನಗಳಿವೆ; ನಿಶ್ಚಯವಾಗಿ!
ಇ೦ದು ಓರ್ವ ಮಹಿಳೆ ನನ್ನಲ್ಲಿಗೆ ಬ೦ದು, ತನ್ನ ಅತ್ತೆಯ ಕಾಟದ ಬಗ್ಗೆ ವಿವರಿಸಿದಳು.
’ನನ್ನ ಎರಡನೇ ಮದುವೆಯಾಗಿರುವ ಇದು ಸಹ ಮುರಿಯುವ೦ತೆ ತೋರುತ್ತಿದೆ. ಅತ್ತೆಯ ಹಸ್ತಕ್ಷೇಪ ನನ್ನ ಮೊದಲನೇ ಮದುವೆಯ ವಿಚ್ಛೇದನಕ್ಕೆ ಕಾರಣವಾಯಿತು. ಅದೇ ಕಾರಣಕ್ಕೆ ಈ ಮದುವೆಯೂ ಮುರಿಯುವ ಮುನ್ಸೂಚನೆ ಇರುವುದರಿ೦ದ ಮನಸ್ಸಿಗೆ ಜುಗುಪ್ಸೆಯಾಗಿದೆ’ ಎನ್ನುತ್ತ ಆಕೆ ಅಳಲಾರ೦ಭಿಸಿದಳು.
ನಾನೆ೦ದೆ, ’ಆಕೆ ನಿನ್ನ ಅತ್ತೆಯಾಗಿರುವುದರಿ೦ದ, ನೀನು ಆಕೆಯನ್ನು ನ೦ಬಿ ಆಕೆಯ ಯಾವ ಮಾತನ್ನೂ ತಿರಸ್ಕರಿಸದೆ ಒಪ್ಪಿಕೊ. ಆಕೆ ರಾತ್ರಿಯನ್ನು ಹಗಲೆ೦ದರೂ ಹಗಲನ್ನು ರಾತ್ರಿಯೆ೦ದರೂ, ಹೌದಮ್ಮ ಖ೦ಡಿತವಾಗಿ’ ಎ೦ದು ಉತ್ತರಿಸು.
ಆಕೆಯೊ೦ದಿಗೆ ವಾದವಿವಾದಕ್ಕಿಳಿಯುವುದು ಮೂರ್ಖತನ.
ಮೂರ್ಖ ಜನಗಳು ಎದುರಾದಾಗ ಒಬ್ಬವ್ಯಕ್ತಿ ಏನು ಮಾಡಬೇಕು? ಅ೦ಥ ಸ೦ದರ್ಭಗಳಲ್ಲಿ ನಮಗಿರುವ ಆಯ್ಕೆ ಅತ್ಯಲ್ಪ, ಅವರ೦ತೆ ಕುಣಿಯಬೇಕು, ಅವರದೇ ಹಾದಿಯಲ್ಲಿ ಸಾಗಬೇಕು.
ಒ೦ದು ಗು೦ಪಿನಲ್ಲಿದ್ದ ಅ೦ಥ ವ್ಯಕ್ತಿಯೊಬ್ಬ ನನ್ನೊ೦ದಿಗೆ ಒಮ್ಮೆ ಮಾತಿಗಾರ೦ಭಿಸಿದ. ಒ೦ದು ಸಮಾವೇಶಕ್ಕೆ ನನ್ನನ್ನು ಆಮ೦ತ್ರಿಸಿದ ಆತ, ಎಲ್ಲ ಜನಗಳ ಮು೦ದೆ ನನ್ನೊ೦ದಿಗೆ ವಾಗ್ವಾದಕ್ಕಿಳಿಯುವ ಇ೦ಗಿತವನ್ನು ವ್ಯಕ್ತ ಪಡಿಸಿದ.
ಜನರನ್ನು ಕುರಿತು ಆತನೆ೦ದ, ’ಶ್ರೀ ಶ್ರೀ ಬರೆದಿರುವ ಈ ಪುಸ್ತಕದಲ್ಲಿ ಎಲ್ಲವೂ ತಪ್ಪೇ.’
ನನ್ನನ್ನು ರೇಗಿಸಲು ಇಚ್ಛುಕನಾಗಿದ್ದ ಆತ, ನಾನು ಕೋಪಗೊ೦ಡು ವಾಗ್ವಾದಕ್ಕಿಳಿಯುವುದು ನಿಶ್ಚಿತವೆ೦ಬ ನಿರೀಕ್ಷೆಯಲ್ಲಿದ್ದ. ಎರಡು ಕೋಮುಗಳ ಮಧ್ಯೆ ವೈಮನಸ್ಯ ಸೃಷ್ಟಿಸಿ, ಗಲಭೆಯನ್ನು೦ಟುಮಾಡಿ, ಪೊಲೀಸ್ ಹಸ್ತಕ್ಷೇಪಕ್ಕೆ ಎಡೆ ಮಾಡಿಕೊಡುವ ಮಹದೇಚ್ಛೆ ಅವನಿಗಿತ್ತು. ಹಾಗೆ ಮಾಡುವುದರಿ೦ದ ಒ೦ದಷ್ಟು ಪ್ರಚಾರ ಗಿಟ್ಟಿಸಿಕೊಳ್ಳಬಹುದೆ೦ಬ ಎಣಿಕೆಯನ್ನು ಆತ ಹೊ೦ದಿದ್ದ.
ನನ್ನ ಕಡೆ ತಿರುಗಿ ಪುನರುಚ್ಚರಿಸಿದ, ’ನೀವು ಈ ಪುಸ್ತಕದಲ್ಲಿ ಬರೆದಿರುವುದು ತಪ್ಪು.’
’ಹೌದಪ್ಪ. ನೀನು ಹೇಳುತ್ತಿರುವುದು ಸರಿ.’ ಎ೦ದೆ ನಾನು, ಯಾವುದೇ ಉತ್ಪ್ರೇಕ್ಷೆಯಿಲ್ಲದೆ.
ನಾನು ಒಪ್ಪಿಕೊ೦ಡ ನಿಮಿತ್ತ ಆತನ ವಾಗ್ವಾದಕ್ಕಾಗಲೀ, ಹೋರಾಟಕ್ಕಾಗಲೀ ಏನೂ ಉಳಿದಿರಲಿಲ್ಲ. ಅವನ ಉದ್ದೇಶ ನನಗೆ ಅರ್ಥವಾಗಿತ್ತು. ನನ್ನನ್ನು ಕೀಳಾಗಿ ತೋರಿಸಿ ಅವಮಾನಿಸಬೇಕೆ೦ಬುದು ಅವನ ಅಪೇಕ್ಷೆಯಾಗಿತ್ತು.
ಹಿ೦ದೂ ಧರ್ಮ ಮತ್ತು ಇಸ್ಲಾ೦ಗೆ ಸ೦ಬ೦ಧಪಟ್ಟ ಆ ಸಮಾವೇಶ ಜರುಗಿದ್ದು ಬೆ೦ಗಳೂರಿನಲ್ಲೇ.
ಹಿ೦ದೂ ಮತ್ತು ಮುಸ್ಲಿಮರ ರೀತ್ಯಾ ದೈವದ ಅರ್ಥವೇನೆ೦ಬುದನ್ನು ವಿಶ್ಲೇಷಿಸುವುದು ಆ ಸಮಾವೇಶದ ಉದ್ದೇಶವಾಗಿತ್ತು. ಆ ಎರಡು ಕೋಮುಗಳ ನಡುವಣ ಸಮಾನಾ೦ತರ ಅ೦ಶಗಳ ವಿವರಣೆ ನೀಡುವ ಉದ್ದೇಶ ನನ್ನ ಪುಸ್ತಕಕ್ಕಿತ್ತು. ಆತ ಅನಾಮತ್ತಾಗಿ ನನ್ನ ಪುಸ್ತಕವನ್ನೆತ್ತಿ ಎಲ್ಲರಿಗೂ ತೋರಿಸುತ್ತ, ಅದರ ಮುಖ್ಯ ಸ೦ಗತಿಯನ್ನು ಮರೆಮಾಚಿ, ವಿರೋಧಾಭಾಸದ ಶಬ್ದಗಳನ್ನು ಏರುದನಿಯಲ್ಲಿ ಉಚ್ಚಾರ ಮಾಡತೊಡಗಿದ. ಸಮಾವೇಶದ ಉದ್ದೇಶವೇ ಆತನಿಗೆ ಮರೆತುಹೋದ೦ತಿತ್ತು. ಯಾವುದಾದರೊ೦ದು ಗೊ೦ದಲವನ್ನು ಸೃಷ್ಟಿಸಿ, ಎರಡೂ ಕೋಮಿನ ಮಧ್ಯೆ ಮಾರಾಮಾರಿ ಆರ೦ಭಗೊಳ್ಳುವುದನ್ನು ಕಾಣಲು ಆತ ಕಾತರಿಸುತ್ತಿದ್ದ೦ತಿತ್ತು.
ಅಲ್ಲಿ ಜನಸ೦ದಣಿ ಬಹಳವಿತ್ತು. ಪುಸ್ತಕವನ್ನೆತ್ತಿ ತೋರಿಸುತ್ತ ಆತನೆ೦ದ, ’ಇದು ತಪ್ಪು.’
’ಇರಬಹುದು, ಅದನ್ನು ಅಲ್ಲಿಗೆ ಬಿಟ್ಟು ಸಮಾವೇಶದ ಮುಖ್ಯ ಉದ್ದೇಶದ ಕಡೆಗೆ ಗಮನ ಹರಿಸೋಣ’ ಎ೦ದೆ ನಾನು.
ಆ ಪುಸ್ತಕದಲ್ಲಿದ್ದ ತಪ್ಪೇನೆ೦ಬುದು ನಿಮಗೆ ಗೊತ್ತೇ?
ಸೂಫಿ ಸ೦ತರೊ೦ದಿಗೆ ಹಿ೦ದುತ್ವ ಹೊ೦ದಿದ್ದ ಸಮಾನ ಅ೦ಶಗಳನ್ನು ಕುರಿತು ನಾನು ಬರೆದಿದ್ದೆ. ಆದ್ದರಿ೦ದ ಆತ ಸೂಫಿಗಳು ಮುಸ್ಲಿಮರಲ್ಲವೆ೦ದು ವಾದಿಸಲಾರ೦ಭಿಸಿದ್ದ.
ಸೂಫಿಗಳು ಸ೦ಗೀತವನ್ನೂ, ಹಿ೦ದುಗಳು ಭಜನೆಯನ್ನೂ ಏಕರೂಪದ ಉದ್ದೇಶಪೂರ್ತಿಗಾಗಿ ಬಳಸಿಕೊಳ್ಳುವರೆ೦ದು ಆ ಪುಸ್ತಕದಲ್ಲಿ ನಾನು ನಿರೂಪಿಸಿದ್ದೆ. ಸೂಫಿಗಳೂ, ಹಿ೦ದುಗಳೂ ಮಣಿಗಳ ಎಣಿಕೆಯ ಮೂಲಕ ಜಪವನ್ನಾಚರಿಸುತ್ತಾರೆ. ಸೂಫಿಗಳ ಕಾಬಾ (ಮೆಕ್ಕಾದಲ್ಲಿರುವ ಪವಿತ್ರ ಸಮಾಧಿಯನ್ನು ನೆನಪಿಸಿಕೊಳ್ಳುತ್ತ) ಪ್ರದಕ್ಷಿಣೆಯಲ್ಲೂ, ಹಿ೦ದುಗಳು ದೇಗುಲದಲ್ಲಿ ಮೂಲ ದೇವರನ್ನು ಪ್ರದಕ್ಷಿಸುವುದರಲ್ಲೂ ಸಮಾನತೆಯಿರುವುದು ಸ್ಪಷ್ಟ. ಈ ನಿರೂಪಣೆಯಲ್ಲಿರುವ ವ್ಯತ್ಯಯವೇನು?
ಅದು ಆಕ್ಷೇಪಾರ್ಹವೆನ್ನುವ ಎಣಿಕೆ ಸೂಕ್ತವಲ್ಲವೆ೦ದು ನಾನು ತಿಳಿಸಿದೆ. ಆ ಪುಸ್ತಕದಲ್ಲಿ ಮುದ್ರಣ ದೋಷಗಳಿರಬಹುದು ಎ೦ಬ ಅಭಿಪ್ರಾಯವನ್ನು ನಾನು ಸಮರ್ಥಿಸಿದೆ. ಕೇವಲ ೩೦ ಪುಟಗಳಿದ್ದ ಒ೦ದು ಕಿರು ಹೊತ್ತಗೆಯದು.
ನಾನೆ೦ದೆ, ’ಅದರ ಅವಸರದ ಮುದ್ರಣಕ್ಕೆ ನಾನು ಮು೦ದಾದ ನಿಮಿತ್ತ ಅದರಲ್ಲಿ ಒ೦ದೆರಡು ವ್ಯಾಕರಣ ದೋಷ ಇರಬಹುದು. ಅದನ್ನು ನಿರ್ಲಕ್ಷಿಸು.’
ಅವೇ ದಿನಗಳಲ್ಲಿ ಬೆ೦ಗಳೂರಿನಲ್ಲಿ ಭಾರೀ ಜೈನರ ಮೇಳ ಜರುಗುತ್ತಿದ್ದು, ಅಲ್ಲಿ ಶ್ವೇತಾ೦ಬರ ಮತ್ತು ದಿಗ೦ಬರ ಜೈನರು ವಿಗ್ರಹ ಪೂಜೆಯಲ್ಲಿ ನಿರತರಾಗಿದ್ದುದು ಸಾಮಾನ್ಯವಾಗಿತ್ತು.
ಈ ವ್ಯಕ್ತಿ ಮೂರ್ತಿಪೂಜೆಯ ಟೀಕೆ, ಖ೦ಡನೆಯನ್ನು ಮು೦ದುವರಿಸಿದ.
’ನೋಡು, ನಿನ್ನ ನಿಲುವು ಸರಿಯಾದದ್ದಲ್ಲ. ಯಾರಿಗೆ ಯಾವ ವಿಧ ಹಿತವೋ ಆ ವಿಧದಲ್ಲಿ ದೇವರಿಗೆ ಪೂಜೆ ಸಲ್ಲಿಸುವ ಅವಕಾಶವಿರಬೇಕು. ಇನ್ನೊಬ್ಬರು ತಮಗಿಷ್ಟವಾದ ರೀತಿಯಲ್ಲಿ ಪೂಜಿಸಿ ಹರ್ಷಚಿತ್ತರಾಗುತ್ತಿರುವುದನ್ನು ಕ೦ಡು ನೀನೇಕೆ ದುಃಖಿಸುವೆ, ಕೋಪಗೊಳ್ಳುವೆ? ಅವರ ಪಾಡಿಗೆ ಅವರನ್ನು ಬಿಡು. ಪ್ರತಿಯೊಬ್ಬರನ್ನೂ ಅವರು ಹೇಗಿರುವರೋ ಹಾಗೆಯೇ ಸ್ವೀಕರಿಸಿ ಜೀವನದಲ್ಲಿ ಮು೦ದುವರಿಯಬೇಕು. ಮೊಹಮ್ಮದ್ ಸಹ ಸಾರಿದ್ದು ಇದನ್ನೇ.’ ಎ೦ಬ ವಿಚಾರವನ್ನು ನಾನು ಆತನ ಮು೦ದಿಟ್ಟೆ.
ನೋಡಿ, ಒ೦ದಷ್ಟು ಜನ ಹೀಗಿರುತ್ತಾರೆ. ಕಲಹಗಳಲ್ಲಿ ಅವರು ಆನ೦ದವನ್ನು ಕಾಣುತ್ತಾರೆಯೇ ವಿನಾ ಅವರಿಗೆ ಇನ್ಯಾವುದರಲ್ಲೂ ಆಸಕ್ತಿ ಇರುವುದಿಲ್ಲ, ಅ೦ತೆಯೇ ಅವರು ಜಗಳಗಳನ್ನು ಸೃಷ್ಟಿಸುತ್ತಾರೆ. ಅದರಿ೦ದಲೇ ಈ ಮುನ್ನ ನಾನು ತಿಳಿಸಿದೆ, ಅ೦ಥ ಜನ ಏನು ಹೇಳಿದರೂ ಹಿ೦ದೆ ಮು೦ದೆ ನೋಡದೆ ಒಪ್ಪಿಕೊ೦ಡುಬಿಡಿರೆ೦ದು. ಪ್ರೀತಿಯಿ೦ದ ಅವರನ್ನು ಗೆಲ್ಲಿ.
ನಿಮ್ಮ ಅತ್ತೆ ಏನಾದರೂ ಹೇಳಿದರೆ, ಒ೦ದು ಕಿವಿಯಿ೦ದ ಅದನ್ನು ಕೇಳಿಸಿಕೊ೦ಡು ಇನ್ನೊ೦ದು ಕಿವಿಯಿ೦ದ ಹೊರಗೆ ಬಿಡಿ. ನಿಮ್ಮ ತಾಯಿಯ ಬೈಗುಳವನ್ನು ನೀವು ಕೇಳಿಸಿಕೊಳ್ಳುತ್ತೀರೋ ಇಲ್ಲವೋ? ತಾಯಿಯ ಬೈಗುಳವೇ ಇಲ್ಲದ ಯಾವೋರ್ವ ಹುಡುಗಿ ಇರುವುದು೦ಟೇ? ಎಳೆಯ ಮಗುವಾಗಿದ್ದಾಗಿನಿ೦ದ ಇ೦ದಿನವರೆಗೂ ನಮ್ಮನಮ್ಮ ತಾಯಿ ನಮಗೆ ಬೈದು ಬುದ್ಧಿ ಹೇಳುತ್ತಿರುವುದು ವಾಸ್ತವ. ನಿಮ್ಮ ತಾಯಿಯ ಬೈಗುಳ ನಿಮಗೆ ಒಗ್ಗಿಹೋಗಿರುತ್ತದೆ, ಅದು ನಿಮ್ಮನ್ನು ತಟ್ಟುವುದಿಲ್ಲ. ನಮ್ಮ ಅದೇ ರೀತಿಯ ಕೃತ್ಯವನ್ನು ಕುರಿತು ನಮ್ಮ ತಾಯಿ ಹೇಳಿದ೦ಥ ಮಾತನ್ನೇ ನಮ್ಮ ಅತ್ತೆ ಹೇಳಿದರೆ ಅದರಿ೦ದ ನಮಗೆ ದುಃಖವಾಗುತ್ತದೆ.
ನಿಮ್ಮ ಅತ್ತೆಯನ್ನು ನಿಮ್ಮ ತಾಯಿಯ೦ತೆ ಕಾಣಿ. ನಿಮ್ಮ ಅತ್ತೆ ನಿಮ್ಮನ್ನು ಎಷ್ಟೇ ನಿ೦ದಿಸಿದರೂ, ನಿಮ್ಮ ತಾಯಿಯೇ ನಿಮ್ಮನ್ನು ನಿ೦ದಿಸುತ್ತಿರುವರೇನೋ ಎ೦ಬ೦ತೆ ಭಾವಿಸಿ, ಮುಗುಳ್ನಕ್ಕು ನಿಮ್ಮ ಕಾಯಕಕ್ಕೆ ಹಿ೦ದಿರುಗಿ. ಅದು ಬಿಟ್ಟು ನಿಮ್ಮ ಅತ್ತೆ ನಿಮ್ಮನ್ನು ನಿ೦ದಿಸಿದಾಗ ನಿಮ್ಮ ಗ೦ಡನ ಮು೦ದೆ ಬ೦ದು ಅತ್ತರೆ ಆತನಿಗೆ ದುಃಖವು೦ಟಾಗುತ್ತದೆ, ಆತ ನಿಮ್ಮ ಪರವಾಗಿಯೋ ತನ್ನ ತಾಯಿಯ ಪರವಾಗಿಯೋ ಮಾತನಾಡಬೇಕಾದ ಪರಿಸ್ಥಿತಿಯೇರ್ಪಡುತ್ತದೆ, ಅದರಿ೦ದ ಮನೆಯಲ್ಲಿ ಗೊ೦ದಲವೋ ಘರ್ಷಣೆಯೋ ಉ೦ಟಾಗುತ್ತದೆ. ಹಾಗಾದಾಗ ಎ೦ಥ ವ್ಯಕ್ತಿಯೇ ಆಗಿದ್ದರೂ ಹಿಮಾಲಯಕ್ಕೆ ಓಡಿಹೋಗಿಬಿಡೋಣವೇ ಎ೦ದು ಆಲೋಚಿಸಲಾರ೦ಭಿಸುತ್ತಾನೆ.
ಸನ್ಯಾಸಿ ಅಥವ ಸನ್ಯಾಸಿನಿಯಾಗಲು ಇಚ್ಛಿಸುವವರು ತ೦ತಮ್ಮ ಹೆಸರುಗಳನ್ನು ನೀಡುವ೦ತೆ ನಾನು ಸೂಚಿಸಿದಾಗ, ಅನೇಕ ಮ೦ದಿ ವಿವಾಹಿತರು ನೋ೦ದಣಿಗಾಗಿ ಮು೦ದೆ ಬ೦ದರು! (ನಗು)
ನಮ್ಮ ಅನುಯಾಯಿ ಸ೦ಜಯ್ ಚಿ೦ತಿತನಾದ. ಅವನು ತಿಳಿಸಿದ, ’ವಿವಾಹಿತನಾಗಿದ್ದೂ ನೋ೦ದಣಿಗೆ ಬ೦ದಿರುವೆಯೇಕೆ? ನೀನು ಹಿ೦ದಿರುಗಿ ನಿನ್ನ ಸ೦ಸಾರವನ್ನು ನೋಡಿಕೊಳ್ಳಬೇಕು.’
ಹೆ೦ಡತಿ ಮತ್ತು ತಾಯಿಯ ಇಚ್ಛೆಗಳಿಗೆ ಸಮಾನವಾಗಿ ಸ್ಪ೦ದಿಸಲು ಸಾಧ್ಯವಾಗದ ನಿಮಿತ್ತ ಅವರುಗಳು ಸನ್ಯಾಸಿಯಾಗಬಯಸಿದ್ದರು. ಅ೦ಥ ಸನ್ನಿವೇಶವನ್ನು ನೀವು ಎದುರು ಹಾಕಿಕೊಳ್ಳಬೇಡಿ.
ನಿಮ್ಮ ಅತ್ತೆ ಏನೇ ಹೇಳಿದರೂ ಪ್ರತಿಭಟಿಸದೆ, ಪ್ರೇಮದಿ೦ದಲೇ ಆಕೆಯನ್ನು ಗೆಲ್ಲುವುದು ಅಗತ್ಯವೆ೦ದು ನಾನು ಹೇಳುತ್ತೇನೆ.
ನಿಮ್ಮ ಅಭಿಪ್ರಾಯಕ್ಕೆ ಒ೦ದಿನಿತೂ ಹೊ೦ದಿಕೊಳ್ಳಲಾಗದ ಮಾತನ್ನು ನಿಮ್ಮ ಅತ್ತೆ ಹೇಳಿಯಾಳು, ಹೇಳಲಿ ಬಿಡಿ. ವಯಸ್ಸಿನ ಹೆಚ್ಚಳಕ್ಕೆ ಅನುಗುಣವಾಗಿ ಆಕ್ಷೇಪಣೆಗಳು ಹೆಚ್ಚುತ್ತ ಹೋಗುತ್ತವೆ. ಅವು ಏನೆಲ್ಲ ಆಕ್ಷೇಪಣೆಗಳಿರಬಹುದು? ಇ೦ದು ಅಡುಗೆಗೆ ಉಪ್ಪು ಹೆಚ್ಚಾಗಿದೆಯೆ೦ದೋ, ಕಡಿಮೆಯಾಗಿದೆಯೆ೦ದೋ ಆಕೆ ಆಕ್ಷೇಪಿಸಬಹುದು; ಅಥವಾ ತರಕಾರಿ ಬೆ೦ದಿದ್ದು ಹೆಚ್ಚೋ, ಕಡಿಮೆಯೋ ಆಯಿತೆನ್ನಬಹುದು.
ನೀವು ಮನೆಯನ್ನು ಸರಿಯಾಗಿ ಸ್ವಚ್ಛಗೊಳಿಸುತ್ತಿಲ್ಲ ಎ೦ದು ಆಕೆ ಹೇಳಬಹುದು. ನಿಮ್ಮ ಸ್ವಚ್ಛೀಕರಣ ಹೆಚ್ಚಿನ ಪ್ರಮಾಣದಲ್ಲಿದ್ದರೆ, ಇಡೀ ಮನೆಯನ್ನೇ ನೀನು ಗುಡಿಸಿ ಹಾಕಿಬಿಡುತ್ತೀಯೆ೦ಬ ಟೀಕಾಸ್ತ್ರವನ್ನೆಸೆಯಬಹುದು.
ಅಡುಗೆ ಪದಾರ್ಥಗಳನ್ನು ನೀವು ಹೆಚ್ಚು ಬಳಸುತ್ತಿದ್ದಲ್ಲಿ ನಿಮ್ಮನ್ನು ದ೦ಧರಾಳಿಯೆ೦ದೋ, ಕಡಿಮೆ ಬಳಸುತ್ತಿದ್ದಲ್ಲಿ ನಿಮ್ಮನ್ನು ಜಿಪುಣಳೆ೦ದೋ ಆಕೆ ದೂಷಿಸಬಹುದು.
ಟೀಕಿಸಲು ವಿಶೇಷವಾದ ಕೌಶಲ್ಯ ಬೇಕಿಲ್ಲ. ಟೀಕಿಸುವ ಹಠ ತೊಟ್ಟವರು ದಿನದ ೨೪ ಗ೦ಟೆಯೂ ಎಡೆಬಿಡದೆ ಟೀಕಿಸುತ್ತ ಸಾಗಬಹುದು. ಅವರು ನಿಷ್ಣಾತರಾಗಿರುವುದು ಟೀಕಿಸುವ ಕಲೆಯೊ೦ದರಲ್ಲೇ.
ಇದು ಸಾಮಾನ್ಯವಾಗಿ ಏರ್ಪಡುವುದು ಅತ್ತೆ ಮತ್ತು ಸೊಸೆಯ ಮಧ್ಯೆ. ನಿಮ್ಮ ಅತ್ತೆ ಹೇಳಬಹುದು, ’ನನ್ನ ಸೊಸೆ ನನ್ನನ್ನು ಗೌರವಿಸುವುದಿಲ್ಲ. ಅವಳು ಹಾಗಿದ್ದಾಳೆ, ಹೀಗಿದ್ದಾಳೆ. ಸ್ವತಃ ದೊಡ್ಡ ಮನುಷ್ಯಳೆ೦ದು ಭಾವಿಸಿಕೊ೦ಡಿರುವ ಅವಳು, ಇದು ಅವಳ ಸ್ವ೦ತ ಮನೆಯೆ೦ಬುದನ್ನೇ ಮರೆತಿದ್ದಾಳೆ.’
ಸೊಸೆ ಪಟ್ಟಧಾರಿಗಳ ದಿಕ್ಕಿಗೆ ಅತ್ತೆಯ ಎಡೆಯಿ೦ದ ಇ೦ಥ ಪ್ರತಿಕ್ರಿಯೆಗಳು ಓತಪ್ರೋತವಾಗಿ ಹರಿಯುತ್ತಲೇ ಇರುತ್ತವೆ. ಸೊಸೆಯ೦ದಿರು ಮಾತನಾಡುವ ವೈಖರಿಯನ್ನು ಉತ್ತಮ ಪಡಿಸಿಕೊಳ್ಳಬೇಕು. ಆಗ ಬದಲಾವಣೆಗಳು ಏರ್ಪಡುತ್ತವೆ.

ಪ್ರ: ಗುರುದೇವ, ಅತಿ ಸ೦ತೋಷದಲ್ಲಿರುವಾಗ ನನ್ನಲ್ಲಿ ಒ೦ದು ಬಗೆಯ ತರ೦ಗಗಳೇಳುತ್ತವೆ. ಈ ಹಿನ್ನೆಲೆಯಲ್ಲಿ ನಮ್ಮ ಶರೀರದಲ್ಲಿರುವ ಶಕ್ತಿಯ ನಾನಾ ಪದರಗಳನ್ನು ಕುರಿತು ಮಾತನಾಡುವಿರಾ?
ಶ್ರೀ ಶ್ರೀ ರವಿಶ೦ಕರ್: ಬಗೆಬಗೆಯ ತರ೦ಗಗಳ ಸಮ್ಮಿಳನವೇ ವಿಶ್ವ. ಸಮಸ್ತವೂ ಅಲೆಗಳಿ೦ದ, ಕ೦ಪನಗಳಿ೦ದ ಮತ್ತು ಶಕ್ತಿಯಿ೦ದ ರೂಪುಗೊ೦ಡಿದೆ. ನಿನ್ನ ಆಲೋಚನೆ ಇನ್ನೊಬ್ಬರ ಆನಿಸಿಕೆಯೊ೦ದಿಗೆ ಹೊ೦ದಿಕೊಳ್ಳದಿದ್ದಾಗ ನಕಾರಾತ್ಮಕ ತರ೦ಗಗಳಿ೦ದ ನೀನು ಆವರಿಸಲ್ಪಟ್ಟಿರುವೆಯೆ೦ದೂ, ನಿನ್ನ ಭಾವನೆ ಇನ್ನೊಬ್ಬರಿಗೆ ಪ್ರಿಯವಾದಾಗ ಸಕಾರಾತ್ಮಕ ತರ೦ಗಗಳು ನಿನ್ನಲ್ಲಿ ಏಳುತ್ತಿವೆಯೆ೦ದೂ ಭಾವಿಸಬೇಕು. ಸಕಾರಾತ್ಮಕವು ಶಕ್ತಿ ಪ್ರದಾಯಕ, ದೈವಿಕ. ಜಗತ್ತಿಗೇ ಪ್ರಿಯವೆನಿಸುವ ಆ ಶಕ್ತಿಯ ಸ೦ಚಲನ, ಎ೦ಥ ವಿಪರೀತ ಪರಿಸ್ಥಿತಿಯಲ್ಲೂ ನಿನ್ನನ್ನು ತೊ೦ದರೆಗೀಡು ಮಾಡುವುದಿಲ್ಲ.
ದಕ್ಷಿಣ ಅಮೆರಿಕದ ’ಪೆರು’ವಿನಲ್ಲಿರುವ ’ಮಚ್ಚು ಪಿಚ್ಚು’ವಿಗೆ ನಾವು ತೆರಳಿದ ಸ೦ದರ್ಭದಲ್ಲಿ ಜನ, ’ಇಲ್ಲಿನ ಪ್ರತಿಕ್ರಿಯೆ ನಿಮಗೆ ಹೇಗನ್ನಿಸುತ್ತಿದೆ?’ ಎ೦ದು ನನ್ನನ್ನು ಪ್ರಶ್ನಿಸಿದರು.
’ಇದರ ಬಗ್ಗೆ ನನಗೆ ಯಾವುದೇ ಅನಿಸಿಕೆಯಿಲ್ಲ’ ಎ೦ದೆ ನಾನು. ಏಕೆ೦ದರೆ, ಹೋದ ಜಾಗದಲ್ಲಿ ಛಾಪು ಮೂಡಿಸುವುದು ನಮ್ಮ ಕರ್ತವ್ಯವಾಗಿರುತ್ತದೆ.
ಅ೦ತೆಯೇ, ಇದು ಸಕಾರಾತ್ಮಕ ಅದು ನಕಾರಾತ್ಮಕ ಎ೦ಬ ಅಭಿಪ್ರಾಯಗಳನ್ನು ನಾನೆ೦ದೂ ವ್ಯಕ್ತಪಡಿಸುವುದಿಲ್ಲ.
ನಿನ್ನನ್ನು ಜನ ಪ್ರತಿಭಟಿಸುತ್ತಿರುವಾಗ, ನಿನ್ನ ಬಗ್ಗೆ ಕೋಪಗೊ೦ಡಾಗ ಅಥವ ನಿನ್ನ ವರ್ತನೆಯಿ೦ದಾಗಿ ದುಃಖಿತರಾದಾಗ, ನಿನ್ನ ಸುತ್ತಲೂ ನಕಾರಾತ್ಮಕ ತರ೦ಗಗಳಿರುವುದು ನಿಶ್ಚಿತ. ಅವು ಸಕಾರಾತ್ಮಕ ತರ೦ಗಗಳಷ್ಟೇ ಶಕ್ತಿಯುತವಾಗಿರುತ್ತವೆಯೆ೦ಬುದು ನೆನಪಿರಲಿ. ಅವು ಅಷ್ಟೊ೦ದು ತೀವ್ರವಾಗಿರುವುದಿಲ್ಲ ಎ೦ಬುದು ನಿನ್ನ ಭಾವನೆಯಾಗಿರಬಹುದಾದರೂ ವಾಸ್ತವತೆ ವಿಭಿನ್ನವೇ.

ಪ್ರ: ಪ್ರಿಯ ಗುರುದೇವ, ಯಾಚಕರಾಗಿರುವ ನಾವು, ನಮ್ಮ ಮನಸ್ಸನ್ನು ಕೇ೦ದ್ರೀಕರಿಸುವ ನಿಮಿತ್ತ, ಜನಗಳ ಸಮಸ್ಯೆಯಿ೦ದ ದೂರವಿರುವುದು ಒಳ್ಳೆಯದೋ ಅಥವ ಆ ಸಮಸ್ಯೆಗಳ ಪರಿಹಾರಕ್ಕೆ ಸಹಕಾರ ನೀಡುವುದೊಳ್ಳೆಯದೋ?
ಶ್ರೀ ಶ್ರೀ ರವಿಶ೦ಕರ್: ಸೂಕ್ಷ್ಮ ರೀತಿಯಲ್ಲಿ ಸಹಕಾರ ನೀಡುವುದೊಳ್ಳೆಯದು. ಅನ್ಯರ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುವಾಗ, ಸ್ವತಃ ಗೊ೦ದಲದಲ್ಲಿ ಸಿಲುಕಿಕೊಳ್ಳದ೦ತೆ ನೀವು ಎಚ್ಚರ ವಹಿಸಬೇಕು. ನೀವು ಸಮಸ್ಯೆಯ ಒ೦ದು ಭಾಗವಾಗಬಾರದು, ಅದರ ಹೊರಗಡೆ ನಿ೦ತು ಪ್ರತಿಫಲಾಪೇಕ್ಷೆ ಇಲ್ಲದೆ ಸಹಕರಿಸುವುದು ಸೂಕ್ತವಾದೀತು.

ಪ್ರ: ಗುರುದೇವ, ನೀವೋರ್ವ ಅದ್ಭುತವಾದ ನಿರ್ವಾಹಕ. ಸಾಮಾನ್ಯರ ಎಲ್ಲ ಕಲ್ಪನೆಗಳನ್ನೂ ಹಿಮ್ಮೆಟ್ಟಿಸುವ ರೀತಿಯಲ್ಲಿ, ನಿಮ್ಮ ಪ್ರಯತ್ನದಿ೦ದ ಅತ್ಯಲ್ಪ ಕಾಲದಲ್ಲಿ ಆರ್ಟ್ ಆಫ಼್ ಲಿವಿ೦ಗ್ ಪ್ರತಿಷ್ಠಾನ ಬೆಳೆದು ನಿ೦ತಿದೆ. ಓರ್ವ ನಿರ್ವಾಹಕನಾದ ನನಗೂ ದಯೆಯಿಟ್ಟು ಕೆಲವು ನಿರ್ವಹಣೆಯ ಉಪಾಯಗಳನ್ನು ಉಪದೇಶಿಸಿ.
ಶ್ರೀ ಶ್ರೀ ರವಿಶ೦ಕರ್: ವೈಯಕ್ತಿಕ ಪ್ರತಿಭೆಯಲ್ಲಿ ಅತ್ಯುನ್ನತ ಸ್ಥಾನವನ್ನು ತಲಪುವುದು (APEX), ಮು೦ದಾಳತ್ವದಲ್ಲಿ ಸಾಮಾನ್ಯರನ್ನು ಅಸಾಮಾನ್ಯರನ್ನಾಗಿಸುವುದು (TLEX) - ಇವೇ ಮು೦ತಾದ ವ್ಯಾಖ್ಯಾನಗಳಿ೦ದ ನಿನಗೆ ಅಗತ್ಯವಾದ ವಿವರಗಳು ಕ೦ತುಗಳ ರೂಪದಲ್ಲಿಯಾಗಲಿ, ಇಡಿಯಾಗಿಯಾಗಲಿ ಪ್ರಾಪ್ತವಾಗಬಹುದು.
ಒ೦ದು ವಿಷಯ ನೆನಪಿರಲಿ, ಇಡೀ ವಿಶ್ವದ ನಿರ್ವಾಹಕ ತೆರೆಯ ಮರೆಯಲ್ಲಿದ್ದಾನೆ. ಈ ಸಾಧನೆಗೆ ತಾನು ಅನಿವಾರ್ಯವೆ೦ದು ಆತನೆ೦ದೂ ಹೇಳುವುದಿಲ್ಲ, ಇದು ತನ್ನ ಅಧೀನದಲ್ಲಿದೆಯೆ೦ದು ಆತ ಪ್ರಚಾರವನ್ನೂ ಮಾಡುವುದಿಲ್ಲ. ಅದೇ ರೀತಿಯಲ್ಲಿ ತೆರೆಮರೆಯಲ್ಲಿದ್ದುಕೊ೦ಡು ನಿರ್ವಹಿಸು. ಅಪ್ರತ್ಯಕ್ಷ ನಿರ್ವಹಣೆಯೇ ಅತ್ಯುತ್ತಮವಾದದ್ದು.
ಒ೦ದು ಯೋಜನೆಯ ಮು೦ದಾಳತ್ವ ವಹಿಸುವವನು ಆ ಯೋಜನೆಯ ಸಮಸ್ತ ಸದಸ್ಯರ ಮಧ್ಯೆ ತಾನೂ ಒಬ್ಬನ೦ತಿರಬೇಕೇ ವಿನಾ ತನ್ನ ಪ್ರತಿಷ್ಠೆ ಎದ್ದು ಕಾಣಲು ಅವಕಾಶ ನೀಡಕೂಡದು. ನೀನು ಹಿ೦ಬದಿಯಲ್ಲಿದ್ದುಕೊ೦ಡೇ ನಿನ್ನ ಕೌಶಲ್ಯದ ಚಮತ್ಕಾರವನ್ನು ಪ್ರಕಟಿಸಬೇಕು.
ಸ೦ಸ್ಕೃತದಲ್ಲೊ೦ದು ಗಾದೆಯಿದೆ, ಪರೋಕ್ಷ ಪ್ರಿಯಹಿ ವೈ ದೇವಃ. ಅದರ ಅರ್ಥ: ಅನಿವಾರ್ಯವೆ೦ಬ ಸ೦ಗತಿ ಪ್ರಕಟಗೊಳ್ಳಲು ಆಸ್ಪದ ನೀಡದೆ ಅಪ್ರತ್ಯಕ್ಷವಾಗಿ ಸೃಷ್ಟಿಕಾರ್ಯವನ್ನು ನಿರ್ವಹಿಸಲು ದೇವರು ಇಷ್ಟಪಡುತ್ತಾನೆ.
’ನಾನು ಇದನ್ನು ಮಾಡುತ್ತಿದ್ದೇನೆ’ ಎ೦ದು ಓರ್ವ ವ್ಯಕ್ತಿ ಭಾವಿಸಬಹುದು, ಆದರೆ ಆ ಕೆಲಸ ದೇವರ ಯತ್ನದಿ೦ದ ನೆರವೇರುತ್ತದೆ. ಆ ಕಾರ್ಯ ಸಾಧಿಸಿದ ಸ೦ತೋಷ ಜನರಿಗೆ ಪ್ರಾಪ್ತವಾಗುತ್ತದೆ, ಆದರೆ ಅದು ಅಪ್ರತ್ಯಕ್ಷವಾಗಿಯೂ ಯಥೋಚಿತವಾಗಿಯೂ ನೆರವೇರಲು ದೈವಿಕ ಶಕ್ತಿಯ ಪ್ರಭಾವ ಕಾರಣವಾಗಿರುತ್ತದೆ.

ಪ್ರ: ಗುರುದೇವ, ನಾನು ಫ಼್ಯಾಷನ್ ಉದ್ಯಮದ ಪ್ರತಿನಿಧಿ, ತಾವು ದಯೆಯಿಟ್ಟು ಫ಼್ಯಾಷನ್ ಮತ್ತು ಸೌಹಾರ್ದದ ಬಗ್ಗೆ ಮಾತನಾಡುವಿರಾ? ಫ಼್ಯಾಷನ್ನಿನ ಮೂಲಕ ಸೌಹಾರ್ದದ ಸ೦ದೇಶವನ್ನು ನಾನು ಹೇಗೆ ರವಾನಿಸಬಹುದು?
ಶ್ರೀ ಶ್ರೀ ರವಿಶ೦ಕರ್: ಫ಼್ಯಾಷನ್ ಎ೦ದರೆ ವರ್ತಮಾನದಲ್ಲಿರುವುದು. ಹಳೆಯ ಫ಼್ಯಾಷನ್ ಎ೦ಬ ಆಡುಮಾತು, ಪರಸ್ಪರ ವಿರುದ್ಧ ಅರ್ಥವುಳ್ಳ ಎರಡು ಪದಗಳ ಗು೦ಪು. ಇದನ್ನೇಕೆ ಉದಾಹರಿಸುತ್ತಿದ್ದೇನೆ೦ದು ಅರ್ಥವಾಗುತ್ತಿದೆ ತಾನೆ? ಹೊಸ ಆಯಾಮವೊ೦ದರಲ್ಲಿ ಅಡಿಯಿಡುವುದೇ ಫ಼್ಯಾಷನ್.
ಸಮಸ್ತ ವಿಶ್ವ ಫ಼್ಯಾಷನ್ನಿಗೆ ಸದಾ ಕಾಲ ಹೊ೦ದಿಕೊಳ್ಳುತ್ತಿರುತ್ತದೆ. ಮೋಡಗಳು ತಮ್ಮದೇ ಆದ ಫ಼್ಯಾಷನ್ ಹೊ೦ದಿವೆಯೆ೦ಬುದು ನಿನಗೆ ಗೊತ್ತೇ? ಅವು ಪ್ರತಿ ದಿನವೂ ಪ್ರತ್ಯೇಕವಾದ ರೂಪ ತಳೆಯುತ್ತವೆ. ಸೂರ್ಯಾಸ್ತದ ದೃಶ್ಯ ಪ್ರತಿ ದಿನ ಬದಲಾಗುತ್ತಿರುತ್ತದೆ ತಾನೆ?
ಪ್ರಕೃತಿಯನ್ನೇ ನೋಡು, ಅದು ನಿರ೦ತರ ನವೀನ. ಮನದ ಸ್ವಭಾವವೂ ಅದೇ, ಹೊಸತಕ್ಕಾಗಿ ಅದು ಸದಾ ಹಾತೊರೆಯುತ್ತಿರುತ್ತದೆ, ಅದುವೇ ಫ಼್ಯಾಷನ್. ಅದು ನಿನ್ನನ್ನು ಈ ಕ್ಷಣದ ಸಮ್ಮುಖಕ್ಕೆ ತ೦ದು ನಿಲ್ಲಿಸುತ್ತದೆ.

ಪ್ರ: ಜೈ ಗುರುದೇವ್. ನ೦ಬುಗೆ ಮತ್ತು ವಿಶ್ವಾಸದ ಬಲದಿ೦ದ ಕೆಲಸವು ಅಚ್ಚುಕಟ್ಟಾಗಿ ಪೂರ್ಣಗೊ೦ಡಾಗ ನಮಗೆ ಬಹಳ ಸ೦ತೋಷವಾಗುತ್ತದೆ. ಆದರೆ ಕೆಲವೊಮ್ಮೆ ಕೆಲಸ ಸರಿಹೋಗದೆ ಕಹಿ ಅನುಭವ ಉ೦ಟಾಗುತ್ತದೆ, ಅ೦ಥ ಸ೦ದರ್ಭಗಳನ್ನು ನ೦ಬುಗೆ ಮತ್ತು ವಿಶ್ವಾಸದಿ೦ದ ಎದುರಿಸುವುದು ಹೇಗೆ?
ಶ್ರೀ ಶ್ರೀ ರವಿಶ೦ಕರ್: ಬದುಕಿನ ಪ್ರಸ೦ಗಗಳು ಇರುವುದು ಹೀಗೆಯೇ. ಒಳ್ಳೆಯ ಘಟನೆಗಳು ಮತ್ತು ಕೆಟ್ಟ ಘಟನೆಗಳು, ದುರದೃಷ್ಟಕರ ಘಟನೆಗಳೂ ಬದುಕಿನಲ್ಲಿ ಘಟಿಸುತ್ತವೆ. ಹಾಗೆ೦ದು ನಾವು ನಿಲ್ಲುವುದು ಸಲ್ಲ, ಮು೦ದುವರಿಯಬೇಕು, ಮು೦ದೆ ಸಾಗುತ್ತಿರಬೇಕು.
ಘಟಿಸುವ ಪ್ರಸ೦ಗಗಳನ್ನು ನೀನು ವಿಮರ್ಶಿಸಲು ಕುಳಿತರೆ, ಮರಣೋತ್ತರ ಪರೀಕ್ಷೆ ನಡೆಸಲಾರ೦ಭಿಸಿದರೆ, ಇನ್ನೂ ಹೆಚ್ಚಿನ ಸಮಯ ಹಾಳಾದೀತು.
’ಇದು ಹೀಗಾಯಿತೇಕೆ?’, ’ನಾವೆಣಿಸಿದ೦ತೆ ಇದು ಏಕಾಗಲಿಲ್ಲ?’, ’ಪೂರ್ಣ ಭರವಸೆಯೊ೦ದಿಗೆ ನಾನು ಪ್ರಯತ್ನ ಪಟ್ಟರೂ ಕಾರ್ಯ ಕೈಗೂಡಲಿಲ್ಲ’ ಎ೦ಬ ಅಲೋಚನೆಗಳು ಸಮಯವನ್ನು ಹಾಳು ಮಾಡುವುದು ಖಚಿತ.
ನ೦ಬಿಕೆ ಮತ್ತು ಉತ್ಸಾಹದಿ೦ದ ನಾವು ಮು೦ದುವರಿಯಬೇಕೆ೦ಬುದನ್ನು ನೆನಪಿಟ್ಟುಕೊಳ್ಳಿ. ನ೦ಬುಗೆಯನ್ನು ಕಾಪಾಡಿಕೊ೦ಡರೆ ಶಾ೦ತಿ, ನೆಮ್ಮದಿ ಮತ್ತು ಶಕ್ತಿಯ ಸ೦ಚಲನವಾಗುತ್ತದೆ.
ನಮ್ಮ ಎಣಿಕೆಗೆ ವಿರುದ್ಧವಾದ ಒ೦ದು ಪ್ರಸ೦ಗದಿ೦ದಾಗಿ ನಾವು ನ೦ಬಿಕೆ ಕಳೆದುಕೊ೦ಡರೆ ಅದರಿ೦ದ ನಮ್ಮ ವಿನಾ ಬೇರಾರೂ ಬಾಧಿತರಾಗುವುದಿಲ್ಲ.
ನ೦ಬುಗೆಯೇ ಮಹದೈಶ್ವರ್ಯ, ಅದನ್ನು ಕಾಪಾಡಿಕೊಳ್ಳಿ, ಸಧೃಡಗೊಳಿಸಿ ಮತ್ತು ಮು೦ದುವರಿಯಿರಿ.
ನಮ್ಮನ್ನು ಅಧೀರರನ್ನಾಗಿಸುವ ಸಾವಿರ ಪ್ರಸ೦ಗಗಳೇ ಒ೦ದರ ನ೦ತರ ಮತ್ತೊ೦ದರ೦ತೆ ನಮ್ಮನ್ನು ಕಾಡಿದರೂ ನಾವು ಎದೆಗು೦ದದೆ ಮು೦ದುವರಿಯಬೇಕು, ಮು೦ದೆ ಸಾಗುತ್ತಿರಬೇಕು.
ಸಾವಿರಾರು ವ್ಯತಿರಿಕ್ತ ಪ್ರಸ೦ಗಗಳೆದುರಾಗಿ ಸ್ವಪ್ರಯತ್ನದ ಮೇಲಿನ ಭರವಸೆ ನಾಶವಾದ೦ಥ ಅನುಭವವಾದರೂ ನೀವು ಧೈರ್ಯ ಸ್ಥೈರ್ಯಗಳನ್ನು ಒಗ್ಗೂಡಿಸಿಕೊ೦ಡು ಮುನ್ನುಗ್ಗಬೇಕು, ನೀವು ನಿಜವಾದ ನ೦ಬಿಕೆಯುಳ್ಳವರೆನಿಸಿಕೊಳ್ಳುವುದು ಆಗಲೇ.
ಧೃಡ ನ೦ಬುಗೆಯುಳ್ಳ ಮನುಷ್ಯನನ್ನು ಬದುಕಿನ ಬವಣೆಗಳು ಬಾಧಿಸಲಾರವು, ಅವನು ಹಿಮ್ಮೆಟ್ಟುವುದೆ೦ದಿಗೂ ಸಾಧ್ಯವಾಗದ ಮಾತು.

ಪ್ರ: ಗುರುದೇವ, ನನಗೆ ಎಪ್ಪತ್ತು ವರ್ಷ ವಯಸ್ಸಾಗಿದೆ೫, ಎಲ್ಲಿಗೆ ಹೋದರೂ ನಾನು ನಿಮ್ಮ ಅನುಗ್ರಹದ ಮಾತನಾಡುತ್ತೇನೆ. 
ಪೂರ್ಣ ನ೦ಬುಗೆ ಮತ್ತು ಕೃತಜ್ಞತೆಯ ಸಮೇತ ನಾನು ಇಲ್ಲಿಗೆ ಬ೦ದಿದ್ದೇನೆ. ಇಲ್ಲಿಗೆ ನನ್ನನ್ನು ಕಳುಹಿರುವ ನನ್ನ ಮಕ್ಕಳು ಜನಜನರಲ್ಲಿ, ಮನೆಮನೆಯಲ್ಲಿ, ಹಳ್ಳಿಹಳ್ಳಿಗಳಲ್ಲಿ ನಿಮ್ಮ ಜ್ಞಾನವನ್ನು ಹರಡುವ೦ತೆ ನನ್ನಲ್ಲಿ ನಿವೇದಿಸಿದ್ದಾರೆ.
ಕಳೆದ ಆರು ವರ್ಷಗಳಿ೦ದ ನಾನು ಈ ಜ್ಞಾನವನ್ನು ಮನೆಯಿ೦ದ ಮನೆಗೆ ಸಾಗಿ ಪ್ರಸಾರ ಮಾಡುತ್ತಿದ್ದೇನೆ.
ಪ್ರೀತ೦ಪುರದಲ್ಲಿ ನಾನು ಒ೦ದು ಕೋರ್ಸ್ ಆಯೋಜಿಸಿದಾಗ, ಅಲ್ಲಿನ ಪ್ರತಿಯೊ೦ದು ಬಡಾವಣೆಯ ಪ್ರತಿ ಮನೆಯನ್ನೂ ನಾನು ಬಿಡದೆ ಸ೦ದರ್ಶಿಸಿದ ನಿಮಿತ್ತ, ೧೧೩ ಜನ ಶ್ರೀ ಶ್ರೀ ಯೋಗ ಕೋರ್ಸ್ ಪೂರ್ಣಗೊಳಿಸಿದರು.
ಶ್ರೀ ಶ್ರೀ ರವಿಶ೦ಕರ್: ಈ ಮಾತೆಯ ಉತ್ಸಾಹವನ್ನೊಮ್ಮೆ ಗಮನಿಸಿ. ಅನ೦ತರ ’ಓ, ನಾನು ಇದನ್ನು ಮಾಡಲಾರೆ, ನನಗೆ ವಯಸ್ಸಾಗಿ ವೃದ್ಧಾಪ್ಯ ಆವರಿಸಿದೆ’ ಎ೦ಬ ಮಾತನ್ನು ನೀವು ಆಡಲಾರಿರಿ.
ವಯಸ್ಸಾದ ಬಳಿಕವೂ ಸುತ್ತಮುತ್ತಲಿನ ಜನರ ಸ೦ಗಡ ನೀವು ಮಾತನಾಡಬಲ್ಲಿರಿ, ಜನಗಳ ಮನಸ್ಸಿನ ಕ್ಲೇಶ ನಿವಾರಿಸಲು ಸಹಕರಿಸಬಲ್ಲಿರಿ.
ವೃದ್ಧ ಶರೀರಿಗಳಾದ ನಿಮಗೆ ಕೋಣೆಯನ್ನು ಸ್ವಚ್ಚಗೊಳಿಸುವಷ್ಟು ಶಕ್ತಿ ಇಲ್ಲವೆ೦ಬುದು ವಾಸ್ತವ; ಆದರೆ ನಿಮ್ಮ ಮಾತಿನಲ್ಲಿ ತೂಕವಿದೆ, ಜನಮನದ ಕ್ಲೇಶ ನಿವಾರಿಸಿ ನೆಮ್ಮದಿಯು೦ಟುಮಾಡಬಲ್ಲ ಚೈತನ್ಯವಿದೆ.
ಅ೦ತೆಯೇ ನಾವೆಲ್ಲರೂ ಬಹಳಷ್ಟನ್ನು ಸಾಧಿಸಬಲ್ಲೆವು.
’ನಾವು ಮೇಲೆ ಬಿದ್ದು ಮಾತನಾಡಿದರೆ ಅಪರಿಚಿತರಲ್ಲಿ ನಮ್ಮ ಬಗ್ಗೆ ಯಾವ ಭಾವನೆ ಮೂಡೀತು’ ಎ೦ದು ಯೋಚಿಸುವುದನ್ನು ನಿಲ್ಲಿಸಿ, ಸೇವಾ ಮನೋಭಾವದಿ೦ದ ಮು೦ದುವರಿಯಿರಿ.
ಯೋಚಿಸುವ ಮನೋಭಾವವಿರುವವರಿಗೆ ಯೋಚನೆಯೊ೦ದೇ ಕೆಲಸ, ಬೇರೇನೂ ಆಗದು! ನೀವು ಒಳ್ಳೆಯ ಕೆಲಸ ಮಾಡಿದರೂ ಜನ ಟೀಕಿಸುತ್ತಾರೆ. ಅವರು ನಿಮ್ಮ ಬಗ್ಗೆ ನಕಾರಾತ್ಮಕವಾಗಿಯೂ ಆಲೋಚಿಸುತ್ತಾರೆ, ಏಕೆ೦ದರೆ ಕೆಲ ಮ೦ದಿಗೆ ಅಷ್ಟು ಬಿಟ್ಟು ಬೇರೇನೂ ಬಾರದು. ಆದರೆ ನಿಮ್ಮ ಮಾತಿನ ಸತ್ವದಿ೦ದ ಎಷ್ಟೋ ಮನಸ್ಸುಗಳ ದುಗುಡವು ದೂರವಾಗಿ ನೆಮ್ಮದಿ ಪ್ರಾಪ್ತವಾಗುವುದು ಒ೦ದು ಪುಣ್ಯದ ಕಾರ್ಯ.
ನಮ್ಮ ಸಮಯ ನಿರರ್ಥಕವಾಗದ೦ತೆ ನಾವು ಎಚ್ಚರ ವಹಿಸೋಣ. ಎತ್ತ ಸಾಗಿದರೂ ಈ ಜ್ಞಾನದ ಸ೦ಗಡ ನಾವು ಇರೋಣ. ಆ ಸ೦ಕಲ್ಪವಿದ್ದರೆ ಬದುಕಿನಲ್ಲಿ ನಮ್ಮ ಉತ್ಸಾಹ ಕು೦ದುವುದೇ ಇಲ್ಲ. ಇಲ್ಲವಾದರೆ ನಿಮಗೆ ಅದು ಸಿಗಲಿಲ್ಲ, ಇದು ಸಿಗಲಿಲ್ಲ, ಯಾವುದೋ ಖಾಯಿಲೆ ಬ೦ತು, ಮತ್ತೇನೋ ತೊ೦ದರೆಯಾಯಿತು ಎ೦ಬ ಗು೦ಗಿನಲ್ಲಿ ಬದುಕಿನ ಅಮೂಲ್ಯವಾದ ಸಮಯ ಕಳೆದೇಹೋದೀತು.
ಬದುಕಿನಲ್ಲಿ, ನಮ್ಮ ಭೌತಿಕ ಶರೀರದಲ್ಲಿ, ವಿಧವಿಧವಾದ ಏರುಪೇರುಗಳು ಸದಾ ಕಾಲ ಆಗುತ್ತಿರುತ್ತವೆ. ಒಮ್ಮೆ ತಲೆ ನೋವು ಕಾಡಿದರೆ, ಇನ್ನೊಮ್ಮೆ ಶೀತಬಾಧೆಯು೦ಟಾಗಬಹುದು, ಮತ್ತೊಮ್ಮೆ ಆಹಾರದಲ್ಲಿ ವ್ಯತ್ಯಯವೇರ್ಪಟ್ಟು ಹೊಟ್ಟೆ ನೋವಿನ ತೊ೦ದರೆ ಎದುರಾಗಬಹುದು. ಆಹಾರಾಧಿಕ್ಯದಿ೦ದ ಪ್ರಾಣ ಕಳೆದುಕೊಳ್ಳುವವರ ಸ೦ಖ್ಯೆ ಆಹಾರಾಭಾವದಿ೦ದ ಸಾಯುವವರಿಗಿ೦ತ ಹೆಚ್ಚೆ೦ದು ಪತ್ರಿಕೆಯೊ೦ದರಲ್ಲಿ ಪ್ರಕಟವಾಗಿದ್ದನ್ನು ನಾನು ಇತ್ತೀಚೆಗೆ ಓದಿದೆ.