ಬುಧವಾರ, ಡಿಸೆಂಬರ್ 12, 2012

ಹೊಸ ಆರಂಭ

೧೨ ಡಿಸೆಂಬರ್ ೨೦೧೨
ಬೆಂಗಳೂರು, ಭಾರತ

ಬ್ಬ ವ್ಯಕ್ತಿಯು ಧ್ಯಾನ ಮಾಡಿದರೆ, ಅದನ್ನು ತಪಸ್ಸೆನ್ನುವರು (ತನುಶುದ್ಧಿ ಹಾಗೂ ಜ್ಞಾನೋದಯದತ್ತ ಕರೆದೊಯ್ಯುವ ಕೇಂದ್ರೀಕೃತ ಪರಿಶ್ರಮ). ಆದರೆ ವಿಶ್ವದಾದ್ಯಂತ ಎಲ್ಲರೂ ಸೇರಿ ಮಾಡುವ ಧ್ಯಾನಕ್ಕೆ ಯಜ್ಞ ಎನ್ನುವರು. ಇದು ಇನ್ನೂ ಹೆಚ್ಚು ವಿಶೇಷವಾದುದು ಕಾರಣ ಇಂದು ಅತ್ಯವಶ್ಯಕವಾಗಿರುವ ಸತ್ವ ಹಾಗೂ ಸಾಮರಸ್ಯದ ವಲಯವನ್ನು ಸೃಷ್ಟಿಸುತ್ತದೆ.
ನಾವು ನೆನೆಪಿನಲ್ಲಿಡಬೇಕಾದ ಅಂಶವೆಂದರೆ, ನಾವು ಪ್ರಾಚೀನ ಆದರೂ ನವೀನ.
ಸೂರ್ಯನನ್ನು ನೋಡಿ, ಎಷ್ಟು ಹಳೆಯದಾಗಿದೆಯಲ್ಲವೇ! ಆದರೂ ಇಂದು ಎಷ್ಟು ತಾಜಾತನದಿಂದಿದೆ! ಸೂರ್ಯನ ಕಿರಣಗಳು ಹೊಸದಾಗಿದೆ, ಗಾಳಿ ತಾಜಾ, ಮರಗಳು ನವೀನವಾಗಿದೆ - ಹಳೆಯ ಮರ ಹೊಸ ಚಿಗುರು! ಹಾಗೆಯೇ ನೀವೂ ಕೂಡ ಪ್ರಾಚೀನ ಆದರೂ ನವೀನ.
ಹೀಗೆಯೇ ನೀವೂ ಜೀವಿಸಬೇಕು - ಪ್ರಾಚೀನ ಮತ್ತು ನವನವೀನ; ಅಜರಾಮರರು.
ಆದ್ದರಿಂದ ತಾಜಾತನ ಹಾಗೂ ಹೊಸತನವನ್ನು ಅನುಭವಿಸಿ, ಮತ್ತು ನಿಮ್ಮ ಎಲ್ಲ ಆರೋಪಗಳು ಮತ್ತು ಪಶ್ಚಾತ್ತಾಪಗಳು ಹಾಗೆಯೇ ಮಾಯವಾಗುವುದನ್ನು ಗಮನಿಸುವಿರಿ. ಅಂತರ್ಯದಿಂದ ಸ್ವೀಕೃತಿಯು ಮೂಡುವುದು, ಬದುಕಿನಲ್ಲಿ ಕ್ರಿಯಾಶಿಲತೆಯು ಸ್ಫುರಿಸುವುದು ಮತ್ತು ಪ್ರತಿ ಹೆಜ್ಜೆಯಲ್ಲೂ ಸಾಮರಸ್ಯವುಂಟಾಗುವುದು.
ಜೀವನದಲ್ಲಿ ಈ ಮೂರು ಅಗತ್ಯ – ಅನುಕಂಪ, ಆಸಕ್ತಿ ಮತ್ತು ವೈರಾಗ್ಯ. ನೀವು ದುಃಖದಲ್ಲಿದ್ದಾಗ ವಿರಕ್ತರಾಗಿರಿ, ಸಂತೋಷದಲ್ಲಿದ್ದಾಗ ಆಸಕ್ತರಾಗಿರಿ. ಜೀವನದಲ್ಲಿ ಸ್ವಲ್ಪ ಆಸಕ್ತಿಯಿರಬೇಕು. ಆಕಾಂಕ್ಷೆಗಳಲ್ಲಿ ಅಪೂರ್ವವಾದುದು ಸೇವೆ ಮಾಡುವ ಹಂಬಲ.
ಆದ್ದರಿಂದ ನೀವು ಸಂತೋಷವಾಗಿದ್ದಾಗ ಸೇವೆ ಮಾಡಲು ಆಸಕ್ತರಾಗಿರಿ. ದುಃಖದಲ್ಲಿದ್ದಾಗ ವೈರಾಗ್ಯವನ್ನು ಹೊಂದಿರಿ ಮತ್ತು ಸರ್ವದಾ ದಯಾಮಯಿಗಳಾಗಿ!

ಪ್ರ: ಗುರುದೇವ, ಇಂದಿನ ನಿರಾಶಾದಾಯಕವಾದ ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಾಪಂಚಿಕ ವಿಷಯಗಳಲ್ಲಿ ಆಸಕ್ತಿಯುಳ್ಳವರಿಗೆ ಧ್ಯಾನದ ಮಹತ್ವ ಹಾಗೂ ಅವಶ್ಯಕತೆಯ ಬಗ್ಗೆ ಹೇಗೆ ಅರಿವು ಮೂಡಿಸುವುದು?
ಶ್ರೀಶ್ರೀರವಿಶಂಕರ್: ಇಲ್ಲಿ ಭೂತಕಾಲದ ಸ್ಮರಣೆ ನಿಮಗೆ ಉಪಯೋಗಕ್ಕೆ ಬರುವುದು. ನೋಡಿ, ಎರಡನೆಯ ವಿಶ್ವ ಯುದ್ಧದಲ್ಲಿ ಅಥವಾ ಅದಕ್ಕಿಂತ ಹಿಂದೆ, ವಿಶ್ವವು ವಿಷಮ ಪರಿಸ್ಥಿತಿಯಲ್ಲಿತ್ತು. ಅತಿ ಕಡಿಮೆ ಆಹಾರ ಮತ್ತು ಸೀಮಿತವಾದ ಸಂಪನ್ಮೂಲಗಳಿದ್ದವು ಏಕೆಂದರೆ ಎಲ್ಲವನ್ನೂ ನಾಶಗೊಳಿಸಲಾಗಿತ್ತು, ಆದರೂ ಜನ ಬದುಕುಳಿದರು.
ಈ ಭೂಮಿಯಲ್ಲಿ ಹೀನ ಪರಿಸ್ಥಿತಿಗಳನ್ನು ನೋಡಿದ್ದೇವೆ. ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಅನೇಕ ವಿಷಮ ಪರಿಸ್ಥಿತಿಗಳು ಎದುರಾದವು. ನಾನಾ ರೀತಿಯ ಸಂಕ್ಷೋಭೆಗಳನ್ನು ಎದುರಿಸಿದ್ದೇವೆ - ಬರಗಾಲ, ಪ್ರವಾಹ ಮತ್ತು ಪ್ಲೇಗ್. ಇವೆಲ್ಲಾ ಕಷ್ಟಗಳನ್ನು ಜನರು ಎದುರಿಸಿದ್ದಾರೆ.
ಕಳೆದ ಶತಮಾನಗಳಲ್ಲಿ ಇದ್ದಂತಹ ಕಷ್ಟಗಳಿಗಿಂತ, (ಇದು) ಕಷ್ಟವೇನಲ್ಲ ಬಿಡಿ. ಚಿಂತಿಸಬೇಡಿ, ಅಂತಹ ಕಷ್ಟಗಳನ್ನೆದುರಿಸಿ ಪಾರಾಗಿದ್ದೇವೆ.
ಪ್ರಸ್ತುತ ಮಾನವೀಯ ಮೌಲ್ಯಗಳನ್ನು ಹೆಚ್ಚು ಪೆÇ್ರೀತ್ಸಾಹಿಸಬೇಕು. ಪರಸ್ಪರ ನೆರವಾಗುತ್ತಾ, ಹಂಚಿಕೊಂಡು ಒಟ್ಟಾಗಿ ಬಾಳಬೇಕು. ನಮ್ಮ ಸುತ್ತಮುತ್ತಲಿನವರೊಂದಿಗೆ ಉತ್ತಮವಾದ ಸಂಪರ್ಕವನ್ನು ಹೊಂದಿರಬೇಕು. ಈ ಕಷ್ಟಗಳಿಂದ ಪಾರಾಗಲು ಮಾನವ ಸ್ಪರ್ಶ ಬಲ ನೀಡುತ್ತದೆ.
ನಿಮಗೆ ಅನೇಕರು ಬೆಂಬಲ ನೀಡುವರೆಂದು ತಿಳಿದಾಗ ಯಾವುದರಿಂದ ತಾನೆ ನಿಮಗೆ ಭಯವಾಗುವುದು?
ಪ್ರಜ್ಞೆಯಲ್ಲಿ, ದೈವತ್ವದಲ್ಲಿ ನಿಮಗೆ ವಿಶ್ವಾಸವಿದ್ದರೆ ಅದು ನಿಮ್ಮನ್ನು ಖಂಡಿತವಾಗಿ ರಕ್ಷಿಸುವುದು. ಹೇಗೆ ದುಃಖಿತರಾಗುವಿರಿ?
ಆದ್ದರಿಂದ ನೀವು ಪ್ರತಿಯೊಂದು ಕಷ್ಟವನ್ನು ಅವಕಾಶವನ್ನಾಗಿ ಪರಿವರ್ತನೆಗೊಳಿಸಿ, ದೈವೀಕತೆಯ ಕಡೆಗೆ, ಮಾನವೀಯತೆಯ ಕಡೆಗೆ ಮತ್ತು ಆ ಅಂತರಂಗದ ಬೆಳಕಿನೆಡೆಗೆ ಹೊರಳಿರಿ.

ಪ್ರ: ಪ್ರೀತಿಯ ಗುರುದೇವ, ಪ್ರತಿಯೊಂದು ಸನ್ನಿವೇಶದಲ್ಲೂ ಸದಾ ನವೀನ ಹಾಗೂ ಕಾಲಾತೀತರಾಗುವುದು ಹೇಗೆ? ಉದಾಹರಣೆಗೆ, ಜನರನ್ನು ಭೇಟಿಯಾದಾಗ ಮನಸ್ಸಿನಲ್ಲಿ ಅಚ್ಚಾಗಿರುವ ಹಿಂದಿನ ಸಂಪರ್ಕಗಳು ಮಿಸುಕಾಡುವುದು. 
ಶ್ರೀಶ್ರೀರವಿಶಂಕರ್: ಹೌದು, ನಿಜ. ಆದ್ದರಿಂದಲೇ ನಾವು ಹೇಳುವುದು, ನಾವು ಪ್ರಾಚೀನ ಮತ್ತು ನವೀನ. ಹಾಗೆಂದ ಮಾತ್ರಕ್ಕೆ ನೀವು ಯಾರದೋ ಹೆಸರನ್ನು ಮರೆತಿರುವಿರೆಂದಲ್ಲ. ಯಾರನ್ನಾದರು ಭೇಟಿ ಮಾಡುವಾಗ, ಪ್ರತಿ ಬಾರಿಯೂ, ‘ನಿಮ್ಮ ಹೆಸರೇನು?’ ಎಂದು ಕೇಳುವುದಿಲ್ಲ.
ಚಿರನೂತನವೆಂದರೆ ಅಮ್ನೀಷಿಯಾ (ಎಲ್ಲವನ್ನೂ ಮರೆತಿರುವ ಸ್ಥಿತಿ) ಎಂಬರ್ಥವಲ್ಲ! ಜ್ಞಾಪಕ ಶಕ್ತಿಯ ಆಳವು ಖಂಡಿತವಾಗಿಯೂ ಇರುವುದು, ಆದರೆ ಸ್ಮರಣಾ ಶಕ್ತಿಯಿಂದ ತಾಜಾತನವಿರುತ್ತದೆ. ಪುನರುತ್ಸಾಹದ ಸತ್ವವಿರುತ್ತದೆ.
ಇದನ್ನು ವಿವರಿಸಲು ಕಷ್ಟ ಆದರೂ ಇದು ಹೇಗೆಯೇ ಇರುವುದು. ಆದ್ದರಿಂದ ಹೊಸ ಆರಂಭ ಅಥವಾ ಈ ಕ್ಷಣದಲ್ಲಿ ಬದುಕುವುದೆಂದರೆ ಅಮ್ನೀಷಿಯಾ ಎಂದು ತಿಳಿಯಬೇಡಿ, ಸರಿಯೇ!

ಪ್ರ: ಪ್ರೀತಿಯ ಗುರುದೇವ, ಧ್ಯಾನದಿಂದ ನಮ್ಮ ಐಕ್ಯೂ ವೃದ್ಧಿಸುವುದೇ? ಹಾಗಾದರೆ ಧ್ಯಾನದಿಂದ ಹೇಗೆ ನಮ್ಮ ಬುದ್ಧಿಶಕ್ತಿಯನ್ನು ವೃದ್ಧಿಗೊಳಿಸುವುದು?
ಶ್ರೀಶ್ರೀರವಿಶಂಕರ್: ಧ್ಯಾನ ಮೆದುಳಿಗೆ ಅಗತ್ಯವಿರುವ ವಿಶ್ರಾಮವನ್ನು ನೀಡುತ್ತದೆ. ವಿಶ್ರಾಮ ಮತ್ತು ಮೌನ ಸೃಜನಶೀಲತೆ ಮತ್ತು ಬೌದ್ಧಿಕತೆಗೆ ಆಧಾರ. ಹೀಗೆ ನಮ್ಮ ಬುದ್ಧಿಯನ್ನು ವೃದ್ಧಿಸುತ್ತದೆ.

ಪ್ರ: ನಮ್ಮ ಸಂಪೂರ್ಣ ಜೀವನವನ್ನು ಧ್ಯಾನದಂತೆ ಜೀವಿಸಬಹುದೆಂದು ಹೇಳುತ್ತಾರೆ. ಇದು ಹೇಗೆ ಸಾಧ್ಯ? ನನ್ನ ಬದುಕು ಧ್ಯಾನವಾಗುವುದು ಹೇಗೆ?
ಶ್ರೀಶ್ರೀರವಿಶಂಕರ್: ಪ್ರತಿ ಕ್ಷಣವೂ ಒಂದು ಹೊಸ ಆರಂಭ. ನೀವು ಎಚ್ಚರಗೊಂಡು ಹೇಳುವಿರಿ, ‘ಇದು ಹೊಸ ಆರಂಭ!’ ಆಷ್ಟೇ! ಇಲ್ಲಿ ‘ಹೇಗೆ’ ಎಂಬುದಿಲ್ಲ. ಅದು ಹೀಗೆಯೇ ಇರುವುದು. ಎಲ್ಲವನ್ನೂ ಬಿಟ್ಟುಬಿಡಿ.

ಪ್ರ: ಗುರೂಜೀ, ಇಡೀ ವಿಶ್ವಕ್ಕೆ ವೈದಿಕ ಜ್ಞಾನವು ಹೇಗೆ ಲಾಭದಾಯಕವಾಗಿದೆಯೆಂದು ತಿಳಿಸಿ.
ಶ್ರೀಶ್ರೀರವಿಶಂಕರ್: ಅದು ಪ್ರಯೋಜನಕ್ಕೆ ಬಂದಿದೆಯೆಂದು ಸ್ವಷ್ಟವಾಗಿದೆ - ಯೋಗ, ಧ್ಯಾನ, ಪ್ರಾಣಾಯಾಮ, ಆಯುರ್ವೇದ ಇವೆಲ್ಲವೂ ವೈದಿಕ ಜ್ಞಾನವೇ.
ವೇದ ಎಂದರೆ ಜ್ಞಾನ; ಪ್ರಾಚೀನ ಮತ್ತು ನವೀನ. ಪ್ರಾಚೀನ ಜ್ಞಾನಕ್ಕೆ ತನ್ನದೇ ಆದ ಮೌಲ್ಯವಿದೆ, ನವೀನ ಜ್ಞಾನಕ್ಕೂ ಮೌಲ್ಯವಿದೆ. ಇವೆರಡೂ ಒಟ್ಟಾಗಿ ಇಂದಿನ ಸಮಾಜಕ್ಕೆ ಅಗತ್ಯವಿರುವ ಪರಿವರ್ತನೆಯನ್ನುಂಟು ಮಾಡುವುದು.

ಪ್ರ: ಧರ್ಮವು ಜನರನ್ನು ಒಟ್ಟುಗೂಡಿಸಿ ದೇವರೆಡೆಗೆ ಕರೆದೊಯ್ಯುವ ಬದಲಿಗೆ ವಿಂಗಡಿಸಿ ಬೇರ್ಪಡಿಸುವುದು ಏಕೆ?
ಶ್ರೀಶ್ರೀರವಿಶಂಕರ್: ಅಹಂ ಪ್ರವೇಶಿಸಿದಾಗ ಧರ್ಮದಲ್ಲಿ ಘರ್ಷಣೆ ಪ್ರ್ರಾರಂಭವಾಗುವುದು. ಒಂದು ಧರ್ಮ ಶ್ರೇಷ್ಠ ಏಕೆಂದರೆ ಅದು ‘ನನ್ನದು’, ಅದರ ಅಸ್ಥಿತ್ವದಿಂದಲ್ಲ.
ಅದು ‘ನನ್ನ ಧರ್ಮ’, ಆದ್ದರಿಂದ ಅದು ಶ್ರೇಷ್ಠ. ಇಲ್ಲಿ ‘ನಾನು’ ಎಂಬುದೇ ಕಾರಣ; ಘರ್ಷಣೆಗೆ ಮೂಲ ಕಾರಣ ಅಹಂ, ಧರ್ಮವಲ್ಲ. ಆದರೆ ನಾವು ಧರ್ಮವನ್ನು ನೆಪವಾಗಿರಿಸಿಕೊಂಡು, ಸ್ವವ್ಯಕ್ತಿತ್ವವನ್ನು ಕಲ್ಪಿಸಲು ಪ್ರಪಂಚದಲ್ಲಿ ಅನೇಕ ಘರ್ಷಣೆಗಳನ್ನು ಹುಟ್ಟುಹಾಕುತ್ತಾವೆ, ಅಲ್ಲವೇ?
ಆದರೆ ಕೇವಲ ದೇವರೊಂದಿಗೆ ಸಂಪರ್ಕ ಹೊಂದಲು ಧರ್ಮವನ್ನು ಉಪಯೋಗಿಸುವುದಾದರೆ, ರಾಜಕೀಯ ಕಾರಣಗಳಿಗಲ್ಲದ್ದಿದ್ದರೆ, ಆಗ ಧರ್ಮ ಆಧ್ಯಾತ್ಮವಾಗುವುದು.

ಪ್ರ: ಗುರುದೇವ, ಯಾವುದನ್ನು ಎಂದಿಗೂ ವಿಚಲಿತಗೊಳಿಸಲಾಗದೋ, ಅಂತಹ ಯಾವುದನ್ನು ಆಶ್ರಯಿಸಲಿ?     
ಶ್ರೀಶ್ರೀರವಿಶಂಕರ್: ಅದು ಆತ್ಮ.
ಯಾವ್ಯಾವುದನ್ನೋ ಏಕೆ ಆಶ್ರಯಿಸಬೇಕು? ವಿಶ್ರಮಿಸಿ!
ವಿಶ್ರಮಿಸಿ ಮತ್ತು ಎಲ್ಲವೂ ಸ್ವಸ್ಥಳ ಸೇರುವುದನ್ನು ಕಾಣುವಿರಿ.
ಯಾವುದಾದರೊಂದು ವಿಷಯ ನಿಮಗೆ ತೊಂದರೆ ಕೊಡುತ್ತಿದ್ದರೆ ಅದನ್ನು ಇಲ್ಲಿ ಬಿಟ್ಟು ಬಿಡಿ. ನನಗೆ ಕೊಡಿ. ನಾನು ನಿಮ್ಮೊಂದಿಗಿದ್ದೇನೆ, ಖಂಡಿತ!

ಪ್ರ: ನಾನು ಸೋಲಿನ ಬಗ್ಗೆ ಹೆಚ್ಚು ಚಿಂತಿಸುತ್ತೇನೆ, ಅದರಲ್ಲೂ ಮುಖ್ಯವಾದ ಕೆಲಸವನ್ನು ಮಾಡುತ್ತಿರುವಾಗ. ಅದು ನನ್ನ ಸಾಮಥ್ರ್ಯವನ್ನು ಕುಂಠಿತಗೊಳಿಸುತ್ತದೆ. ಇದರಿಂದ ಹೇಗೆ ಮುಕ್ತನಾಗುವುದು?     
ಶ್ರೀಶ್ರೀರವಿಶಂಕರ್: ಒಂದು ಹೊಸ ಆರಂಭ.
ಅದು ಕಳೆದುಹೋದ್ದದ್ದು - ಬಿಟ್ಟು ಬಿಡಿ. ನಿಮ್ಮ ಜೀವನದಲ್ಲಿ ಇನ್ನೂ ಅನೇಕ ಹೊಸ ಹೊಸ ಸಂಗತಿಗಳು ಬರಲಿವೆಯೆಂಬ ವಿಶ್ವಾಸವಿರಲಿ.
ಒಂದು ವಿಷಯವನ್ನು ನೀವಿಲ್ಲಿ ತಿಳಿಯಬೇಕೇನೆಂದರೆ ನಿಮಗೆ ನಿಮ್ಮ ಬಗ್ಗೆ ಅರಿವಿಲ್ಲ.
ನೀವು ಹಿಂದೇನು ಮಾಡಿದಿರೆಂದು ಗಮನಿಸಿದಾಗ ಅಥವಾ ನಿಮ್ಮ ದೌರ್ಬಲ್ಯಗಳನ್ನು ಹಿಂತಿರುಗಿ ನೋಡಿದಾಗ, ಆತ್ಮವಿಶ್ವಾಸವನ್ನು ಗಳಿಸುವ ಮೊದಲ ಹೆಜ್ಜೆಯೆಂದರೆ ನಿಮಗೆ ನಿಮ್ಮ ಬಗ್ಗೆ ಅರಿವಿಲ್ಲ ಎಂಬುದನ್ನು ತಿಳಿಯುವುದು.
ನಿಮಗೆಲ್ಲ ತಿಳಿದಿದೆಯೆಂದು ಯೋಚಿಸಿದಾಗಲೇ ಇಂತಹ ನಕಾರಾತ್ಮಕ ಸಂದರ್ಭಗಳು ಮತ್ತು ಗುಣಗಳೊಂದಿಗೆ ಬಂಧಿತರಾಗುವುದು. ಆದರೆ ನೀವು ಎಚ್ಚರಗೊಂಡು, ‘ನನಗೆ ನನ್ನ ಬಗ್ಗೆ ತಿಳಿದಿಲ್ಲ’ ಎಂದು ಅರಿತರೆ, ಆಗ ಒಂದು ಹೊಸ ಆರಂಭವಾಗುವುದು.
ನಂತರ ನಿಮ್ಮೊಳಗೇ ಎಷ್ಟೊಂದು ಬಲವರ್ಧನೆಗೊಳಿಸುವ ಶಕ್ತಿಯಿದೆಯೆಂದು, ಅದರ ಬಗ್ಗೆ ನಿಮಗೆ ಅರಿವಿಲ್ಲದಿರುವುದೆಂದು, ತಿಳಿಯುವುದು.

ಪ್ರ: ಪ್ರತಿಫಲಾಪೇಕ್ಷೆಯಿಲ್ಲದೇ ಮತ್ತು ನಿರ್ಬಂಧವಿಲ್ಲದೇ ಸ್ವತಂತ್ರನಾಗಿ ಹೇಗೆ ಪ್ರೀತಿಸಲಿ?     
ಶ್ರೀಶ್ರೀರವಿಶಂಕರ್: ನಿಮಗೆ ಪ್ರೀತಿಯಲ್ಲಿ ರಕ್ಷಣೆ ಬೇಕು ಮತ್ತು ಅದೇ ವೇಳೆಗೆ ಬದ್ಧತೆಗೆ ಹೆದರುವಿರಿ. ನಿಮ್ಮ ಅನೇಕ ಭಾವೋದ್ವೇಗಗಳು ಸೇರಿ ಒಂದೇ ರೂಪ ಹೊಂದಿದೆ, ಇದನ್ನು ಗೊಂದಲ ಎನ್ನುತ್ತೇವೆ.
ಪ್ರೀತಿಯಲ್ಲಿ ಗೊಂದಲವಿದ್ದಾಗ ಇನ್ನೂ ಹೆಚ್ಚು ಧ್ಯಾನ ಮಾಡಿ ಮತ್ತು ವಿಶ್ರಮಿಸಿ. ಎಲ್ಲವೂ ಸ್ವಸ್ಥಿತಿಗೆ ಬರುವುದು.

ಪ್ರ: ಗುರುದೇವ, ಯಾವುದು ನೂತನ ಮತ್ತು ಪ್ರಾಚೀನತೆಯ ಮಧ್ಯೆ ನೆಲೆಸಿರುವುದು?     
ಶ್ರೀಶ್ರೀರವಿಶಂಕರ್: ಸ್ವಯಂ.