ಶುಕ್ರವಾರ, ಡಿಸೆಂಬರ್ 21, 2012

ಬುದ್ಧಿವಂತರು ಧ್ಯಾನ ಮಾಡುವರು

೨೧ ದಶಂಬರ ೨೦೧೨
ಬೆಂಗಳೂರು, ಭಾರತ

ಪ್ರಶ್ನೆ: ಪ್ರೀತಿಯ ಗುರುದೇವ, ಭಕ್ತಿಯ ಸಂಕೇತವೆಂದರೆ ಯಾವಾಗಲೂ ಸಂತೋಷವಾಗಿರುವುದು ಎಂದು ಹೇಳಲಾಗಿದೆ. ಹಾಗಾದರೆ, ದೇವರು ಹೆಚ್ಚಾಗಿ, ಒಬ್ಬ ಭಕ್ತನು ನೋವಿನಿಂದ, ದುಃಖದಿಂದ, ಅಥವಾ ಹಾತೊರೆತದಿಂದ ಅಳುವಾಗ ಪ್ರತಿಕ್ರಿಯಿಸುವುದು ಯಾಕೆ? ನಾನು ಗೊಂದಲಕ್ಕೊಳಗಾಗಿದ್ದೇನೆ. ಅಳದೆಯೇ ನಾನು ದೇವರ ಗಮನವನ್ನು ಸೆಳೆಯಲು ಸಾಧ್ಯವೇ? ಸಂತೋಷವಾಗಿರುವ ಭಕ್ತನೊಬ್ಬನು ದೇವರಿಂದ ಅದೇ ಗಮನವನ್ನು ಪಡೆಯಲು ಸಾಧ್ಯವೇ?
ಶ್ರೀ ಶ್ರೀ ರವಿ ಶಂಕರ್: ಖಂಡಿತಾ! ಒಬ್ಬ ಅಳುವ ಭಕ್ತನ ಕಡೆಗೆ ಗಮನ ನೀಡುವುದು ದೇವರಿಗೆ ಅನಿವಾರ್ಯವಾಗುತ್ತದೆ, ಮತ್ತು ಒಬ್ಬ ಸಂತೋಷವಾಗಿರುವ ಭಕ್ತನ ಕಡೆಗೆ ಗಮನ ನೀಡಲು ಆನಂದವಾಗುತ್ತದೆ.

ಪ್ರಶ್ನೆ: ಗುರುದೇವ, ಒಂದು ಕೆಟ್ಟ ಘಟನೆಯು ಇಡೀ ದೇಶವನ್ನು ಅಲ್ಲಾಡಿಸುತ್ತದೆ, ಆದರೆ ಸುತ್ತಲೂ ನಡೆಯುತ್ತಿರುವ ಹಲವಾರು ಒಳ್ಳೆಯ ಸಂಗತಿಗಳು ಒಂದು ಅಲೆಯನ್ನು ಕೂಡಾ ಸೃಷ್ಟಿಸದೆಯೇ, ಗಮನಕ್ಕೆ ಬಾರದೇ ಹೋಗುವುದು ಯಾಕೆ?
ಶ್ರೀ ಶ್ರೀ ರವಿ ಶಂಕರ್: ಆಂದೋಲನಕ್ಕೆ ಅಂತಹ ಯಾವುದಾದರೂ ಕೆಟ್ಟ ಘಟನೆ ಬೇಕಾಗುತ್ತದೆ. ಜನರು ಸುಲಭವಾಗಿ ಕ್ಷೋಭೆಗೊಳ್ಳಲು ಸಿದ್ಧರಿದ್ದಾರೆ. ಇದು ಯಾಕೆಂದರೆ, ಒತ್ತಡವು ಈಗಾಗಲೇ ಇದೆ ಮತ್ತು ಆ ಒತ್ತಡಕ್ಕೆ ಒಂದು ಹೊರಹೋಗುವ ಮಾರ್ಗ ಬೇಕಾಗಿದೆ. ಆದುದರಿಂದ ಆಂದೋಲನವು ಬಹಳ ಸುಲಭವಾದ ಒಂದು ಕೆಲಸವಾಗುತ್ತದೆ. ನಾವೊಂದು ಆಂದೋಲನಕ್ಕೆ ಕರೆಯಿತ್ತರೆ, ಎಲ್ಲರೂ ಸೇರುವುದನ್ನು ನೀವು ನೋಡುವಿರಿ, ಆದರೆ ಧ್ಯಾನಕ್ಕೆ ಕೇವಲ ಬುದ್ಧಿವಂತರು ಮಾತ್ರ ಸೇರುವರು.
ಆದರೆ, ನನಗನಿಸುತ್ತದೆ, ಕಾಲವು ಬದಲಾಗುತ್ತಿದೆ. ನಾವೆಲ್ಲಿಗೇ ಹೋದರೂ, ಧ್ಯಾನ ಮಾಡಲು ನಮಗೆ ಆಂದೋಲನ ಮಾಡಲು ಇರುವುದಕ್ಕಿಂತ ಹೆಚ್ಚಿನ ಜನಸಂದಣಿ ಸಿಗುತ್ತದೆ. ಅದಕ್ಕಾಗಿಯೇ ನಾನು ಹೇಳಿದುದು, ಸಮಾಜದಲ್ಲಿ ಒಂದು ಸಕಾರಾತ್ಮಕ ಬದಲಾವಣೆಯಿದೆ.
ಆಂದೋಲನವನ್ನು ಹೆಚ್ಚು ಇಷ್ಟಪಡುವುದು ಮಾಧ್ಯಮವಾಗಿದೆ. ನೋಡಿ, ನಾವು ಸಾವಿರಾರು ಮಂದಿ ಇಲ್ಲಿ ಕೂತಿದ್ದೇವೆ, ಮತ್ತು ಇಲ್ಲಿರುವ ಜನರ ಕಾಲು ಭಾಗದಷ್ಟು ಜನರು ಕೂಡಾ ಪುರಭವನದಲ್ಲಿಲ್ಲ. ಅವರು ಘೋಷಣೆಗಳನ್ನು ಕೂಗುತ್ತಾ, ಆಂದೋಲನ ಮಾಡುತ್ತಿದ್ದಾರೆ. ಆದರೆ ಅಲ್ಲಿ ಕೇವಲ ಐನೂರು ಜನರಿದ್ದರೂ, ಮಾಧ್ಯಮವು ಆ ಕಾರ್ಯಕ್ರಮದಲ್ಲಿ ಆಸಕ್ತವಾಗಿದೆ. ಮಾಧ್ಯಮವು ನಕಾರಾತ್ಮಕ ಸಮಾಚಾರವನ್ನು ಉತ್ತಮವಾಗಿ ಮತ್ತು ಹೆಚ್ಚು ಹುರುಪಿನಿಂದ ಪ್ರಸ್ತುತ ಪಡಿಸುತ್ತದೆ.

ಪ್ರಶ್ನೆ: ಗುರುದೇವ, ಒಬ್ಬ ಯುವಕನಾಗಿ, ನಾನು ನಿಮ್ಮ ಸುತ್ತಲಿರುವ ಶಾಂತಿ ಮತ್ತು ನಿರಾಳತೆಯ ಕಡೆಗೆ ಸೆಳೆಯಲ್ಪಟ್ಟಿದ್ದೇನೆ ಹಾಗೂ ಪ್ರಪಂಚವು ಅದಕ್ಕೆ ತದ್ವಿರುದ್ಧವಾಗಿರುವುದಾಗಿ ತೋರುತ್ತದೆ. ನಾನು ಪ್ರಪಂಚದಿಂದ ಬೇರ್ಪಟ್ಟು ಒಬ್ಬ ಸನ್ಯಾಸಿಯಾದರೆ, ಅದರರ್ಥ ನಾನು ನನ್ನ ಜವಾಬ್ದಾರಿಗಳಿಂದ ದೂರ ಓಡುತ್ತಿರುವೆನೆಂದು ಆಗುವುದೇ? 
ಶ್ರೀ ಶ್ರೀ ರವಿ ಶಂಕರ್: ಒಬ್ಬ ಸನ್ಯಾಸಿಯು ಜವಾಬ್ದಾರಿಯಿಂದ ದೂರ ಓಡುವುದಿಲ್ಲ. ಅದು, ಹೆಚ್ಚು ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿದೆ. ಅದು, ಸಂಪೂರ್ಣ ಪ್ರಪಂಚದ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ, ಒಬ್ಬ ಸನ್ಯಾಸಿಯೆಂದರೆ ಅವನು. ಈಗ ತಾನೇ ನಾನು ನಮ್ಮ ಆಶ್ರಮವಾಸಿಗಳಿಗೆ ಹೇಳುತ್ತಿದ್ದೆ, ನಾವಿಲ್ಲಿ ಒಂದು ಧಾಮದಲ್ಲಿರುವೆವೆಂದೂ, ಚಟುವಟಿಕೆಗಳು ನಡೆಯುವ ನಗರಕ್ಕೆ ನಾವು ಹೋಗಬೇಕೆಂದು. ಎಲ್ಲಾ ಯುವಕರು ಮತ್ತು ಪ್ರತಿಭೆಗಳನ್ನು ಇಲ್ಲಿ ಆಶ್ರಮದಲ್ಲಿ ಹಿಡಿದಿರಿಸಲು ನಾನು ಬಯಸುವುದಿಲ್ಲ. ನೀವು ಹೊರಗೆ ಸಮಾಜದಲ್ಲಿ ಸಕ್ರಿಯರಾಗಬೇಕೆಂದು ನಾನು ಬಯಸುತ್ತೇನೆ. ಎಲ್ಲಿ ಅಗತ್ಯವಿದೆಯೋ ಅಲ್ಲಿ ಶಾಂತಿಯನ್ನು ತರಬೇಕಾದುದು ನಾವು. "ನಾನು ಬಹಳ ಶಾಂತಿಯುತವಾಗಿದ್ದೇನೆ, ನಾನು ಇಲ್ಲಿಯೇ ಇರಲು ಬಿಡಿ" ಎಂದು ನೀವು ಹೇಳುವಂತಿಲ್ಲ. ಖಂಡಿತಾ, ಇಲ್ಲಿಗೆ ಬರುವುದರ ಅಗತ್ಯವಿದೆ. ಸ್ವಲ್ಪ ಹೊತ್ತಿಗೊಮ್ಮೆ ನೀವು ನಿಮ್ಮ ಮೊಬೈಲ್ ಫೋನನ್ನು ಚಾರ್ಜ್ ಮಾಡಲು ಇಡಬೇಕು, ಆದರೆ ನೀವು ನಿಮ್ಮ ಮೊಬೈಲ್ ಫೋನನ್ನು ಎಲ್ಲಾ ಸಮಯವೂ ಚಾರ್ಜರಿನಲ್ಲಿ ಬಿಡಲು ಸಾಧ್ಯವಿಲ್ಲ. ನೀವು ಮೊಬೈಲನ್ನು ಹೇಗೆ ಉಪಯೋಗಿಸುವಿರಿ? ಆಗ ಅದು ಒಂದು ಮೊಬೈಲೇ ಆಗಿರುವುದಿಲ್ಲ. ನೀವು ನಿಮ್ಮ ಮೊಬೈಲನ್ನು ಚಾರ್ಜ್ ಮಾಡುವಿರಿ ಮತ್ತು ನಂತರ ನಿಮ್ಮ ಮೊಬೈಲನ್ನು ಚಾರ್ಜರಿನಿಂದ ಹೊರತೆಗೆಯುವಿರಿ. ಅದು ಎಲ್ಲಾ ಸಮಯವೂ ಚಾರ್ಜರಿನಲ್ಲಿ ನೇತಾಡುತ್ತಿರಲು ಸಾಧ್ಯವಿಲ್ಲ.
ಅದೇ ರೀತಿಯಲ್ಲಿ, ನೀವಲ್ಲಿ ಕೆಲಸ ಮಾಡಬೇಕು, ಮತ್ತು ನೀವು ಇಲ್ಲಿಗೆ ಕೂಡಾ ಬರಬೇಕು; ಎರಡೂ!

ಪ್ರಶ್ನೆ: ಗುರುದೇವ, ವಿವಾಹ ಸಮಾರಂಭದ ಮಹತ್ವವೇನು? ಇಬ್ಬರು ಪರಸ್ಪರ ಪ್ರೀತಿಸುತ್ತಿರುವುದಾದರೆ ಮತ್ತು ಗೌರವಿಸುತ್ತಿರುವುದಾದರೆ, ಅವರು ಜೊತೆಯಲ್ಲಿ ಜೀವಿಸುವ ಒಂದು ನಿರ್ಧಾರವನ್ನು ಮಾಡಬಹುದೇ?
ಶ್ರೀ ಶ್ರೀ ರವಿ ಶಂಕರ್: ವಿವಾಹ ಸಮಾರಂಭವು ಒಂದು ಬದ್ಧತೆಯಾಗಿದೆ. ನೀವು ಒಂದು ಬದ್ಧತೆಯೊಂದಿಗೆ ಜೊತೆಯಲ್ಲಿ ಜೀವಿಸುತ್ತೀರಿ. ಒಂದು ಬದ್ಧತೆಯಿರುವಾಗ, ನಿಮಗೆ ಪರಸ್ಪರರ ಮೇಲೆ ಸಂಪೂರ್ಣ ನಂಬಿಕೆಯಿರುತ್ತದೆ. ನಿಮ್ಮ ಜೀವನದ ಒಂದು ಮಗ್ಗುಲು ನೆಲೆಯೂರುತ್ತದೆ. ಅದುವೇ ವಿವಾಹ.
ಅಲ್ಲದಿದ್ದರೆ, ಮನಸ್ಸು ಒಬ್ಬ ಸಂಗಾತಿಗಾಗಿ ಹುಡುಕುತ್ತಿರುತ್ತದೆ. ವಿವಾಹದಲ್ಲಿ, ಆ ಸಂಗಾತಿಗಾಗಿರುವ ಹುಡುಕಾಟವು ಕೊನೆಯಾಗುತ್ತದೆ, "ಸರಿ, ನನಗೊಬ್ಬ ಸಂಗಾತಿಯು ಸಿಕ್ಕಿದ್ದಾನೆ/ಸಿಕ್ಕಿದ್ದಾಳೆ, ನಾನು ನೆಲೆನಿಂತೆ." ಆದುದರಿಂದ ಈಗ ನೀವು ಇತರ ವಿಷಯಗಳ ಬಗ್ಗೆ ಗಮನ ಹರಿಸಬಹುದು. ಅಲ್ಲಿ ಬದ್ಧತೆಯಿರುವಾಗ, ಅದು ನಿಮ್ಮನ್ನು ದಾರಿಯಲ್ಲಿರಿಸುತ್ತದೆ.

ಪ್ರಶ್ನೆ: ಗುರುದೇವ, ಜೀವನದಲ್ಲಿ ಚೆನ್ನಾಗಿ ಹೊಂದಿಕೊಳ್ಳದವರು ವಿವಾಹವಾಗಲ್ಪಡುತ್ತಾರೆ, ಅದೇ ವೇಳೆ ಯಾರು ನಿಜವಾಗಿ ಚೆನ್ನಾಗಿ ಹೊಂದಿಕೊಳ್ಳುವರೋ ಅವರು ಒಟ್ಟಿಗೆ ಜೋಡಿಯಾಗುವುದಿಲ್ಲ. ಇದು ದೇವರ ಯೋಜನೆಯೇ? ಅವನಿದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿರುವನೇ?
ಶ್ರೀ ಶ್ರೀ ರವಿ ಶಂಕರ್: ನೀನು ನಿನ್ನ ವಿವಾಹದ ಬಗ್ಗೆ ಹೇಳುತ್ತಿರುವುದೇ?
ನಿಮಗೆ ಗೊತ್ತಾ, ನೀವು ಹೊಂದಿಕೊಳ್ಳದೇ ಇರುವಾಗ, ನೀವು ಬಹಳ ಚೆನ್ನಾಗಿ ಹೊಂದಿಕೊಂಡ ಆ ಎಲ್ಲಾ ದಿನಗಳನ್ನು ಮರೆಯುತ್ತೀರಿ. ಯಾಕೆಂದರೆ ಆ ದಿನಗಳಲ್ಲಿ, ನೀವು ಚೆನ್ನಾಗಿ ಹೊಂದಿಕೊಳ್ಳಲಿಲ್ಲವಾದುದರಿಂದ ನಿಮಗನ್ನಿಸುತ್ತದೆ, "ಓ, ಮೊದಲಿನಿಂದಲೇ ನಾವು ಹೊಂದಿಕೊಳ್ಳಲಿಲ್ಲ."
೪೦ ವರ್ಷಗಳಿಂದ ವಿವಾಹಿತರಾಗಿದ್ದ ಅಮೇರಿಕಾದ ಒಬ್ಬರು ದಂಪತಿಗಳು ನನ್ನ ಬಳಿಗೆ ಬಂದರು ಮತ್ತು ತಾವು ವಿಚ್ಛೇದನ ಪಡೆಯಲು ಬಯಸಿದುದಾಗಿ ಹೇಳಿದರು. ಮಹಿಳೆಯು ಹೇಳಿದಳು, "ನಿಮಗೆ ಗೊತ್ತಾ ಗುರುದೇವ, ನಾವು ೪೦ ವರ್ಷಗಳಿಂದ ವಿವಾಹಿತರಾಗಿದ್ದೇವೆ, ಆದರೆ ಒಂದೇ ಒಂದು ದಿನವೂ ನಾವು ಹೊಂದಿಕೊಂಡು ಇರಲಿಲ್ಲ."
ನಾನಂದೆ, "ಒಂದೇ ಒಂದು ದಿನವೂ ಹೊಂದಿಕೊಂಡಿರದೆ ನೀವು ೪೦ ವರ್ಷಗಳನ್ನು ಕಳೆಯಲು ಹೇಗೆ ಸಾಧ್ಯ?!"
ಅವರು ಅದಾಗಲೇ ಸುಮಾರು ಅರುವತ್ತರಿಂದ ಎಪ್ಪತ್ತು ವರ್ಷ ವಯಸ್ಸಿನವರಾಗಿದ್ದರು. ಕಳೆದ ನಲುವತ್ತು ವರ್ಷಗಳಲ್ಲಿ ಅವರಿಗೆ ಪರಸ್ಪರ ಹೊಂದಿಕೊಂಡಿರಲು ಸಾಧ್ಯವಾಗಲಿಲ್ಲ ಮತ್ತು ಹಾಗಿದ್ದರೂ ಅವರು ಮುಂದುವರಿಸಿಕೊಂಡು ಹೋಗಿದ್ದರು. ಅಮೇರಿಕಾದ ಸಮಾಜದಲ್ಲಿ ಸಾಧಾರಣವಾಗಿ ಇದು ಸಂಭವಿಸುವುದಿಲ್ಲ. ಇಬ್ಬರು ವ್ಯಕ್ತಿಗಳಿಗೆ ಹೊಂದಾಣಿಕೆಯಾಗದಿದ್ದರೆ, ಅಷ್ಟೇ, ಅವರು ಜೊತೆಯಲ್ಲಿ ಇರುವುದೇ ಇಲ್ಲ.
ಇದ್ದಕ್ಕಿದ್ದಂತೆ ಯಾವುದೋ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ನೀವು ಯೋಚಿಸುತ್ತೀರಿ, "ಓ, ನಾವು ಹಿಂದೆಯೂ ಕೂಡಾ ಹೊಂದಿಕೊಂಡಿರಲಿಲ್ಲ."
ಪ್ರಪಂಚವಿರುವುದು ಹಾಗೆಯೇ. ಯಾರೊಂದಿಗೆ ನೀವು ಬಹಳ ಚೆನ್ನಾಗಿ ಹೊಂದಿಕೊಳ್ಳುವಿರೆಂದು ನೀವು ಯೋಚಿಸುವಿರೋ, ಅವರೊಂದಿಗೆ ನಿಜವಾಗಿ ನೀವು ಬಹಳ ಚೆನ್ನಾಗಿ ಹೊಂದಿಕೊಳ್ಳುವಿರೆಂಬುದಕ್ಕೆ ಯಾವುದೇ ಭರವಸೆಯಿಲ್ಲ. ಇನ್ನೊಂದು ಬದಿಯ ಹುಲ್ಲು ಯಾವತ್ತೂ ಹೆಚ್ಚು ಹಸಿರಾಗಿ ಕಾಣಿಸುತ್ತದೆ.

ಪ್ರಶ್ನೆ: ಗುರುದೇವ, ನೀವು ದಯವಿಟ್ಟು ಅಷ್ಟ ಗಣಪತಿಯ ಬಗ್ಗೆ ಮಾತನಾಡುವಿರಾ?
ಶ್ರೀ ಶ್ರೀ ರವಿ ಶಂಕರ್: ಎಂಟು ಎಂಬ ಸಂಖ್ಯೆಯು ಎಂಟು ಪ್ರಕೃತಿಗಳಿಗೆ ಸಂಬಂಧಿಸಿದೆ - ಅಷ್ಟ ಪ್ರಕೃತಿ.
ಆಷ್ಟ ಪ್ರಕೃತಿ ಯಾವುವು? ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ ಮತ್ತು ಅಹಂಕಾರ. ಇವುಗಳೆಲ್ಲವೂ ನಮ್ಮ ಪ್ರಕೃತಿಯಲ್ಲಿ ಬರುತ್ತವೆ.
ಒಬ್ಬರು ಸಂತರು ಅಥವಾ ಬುದ್ಧಿಶಾಲಿ ವ್ಯಕ್ತಿಗಳು ಅಂದಿದ್ದರು, ಈ ಪ್ರಕೃತಿಗಳಲ್ಲಿ ಪ್ರತಿಯೊಂದಕ್ಕೂ ಒಬ್ಬ ಗಣಪತಿಯಿರಲಿ, ಅಷ್ಟೇ.
ಈ ಎಲ್ಲಾ ವಿಷಯಗಳೊಳಗೆ ಹೋಗಬೇಡಿ; ಯಾಕೆ ಹನ್ನೆರಡು ಜ್ಯೋತಿರ್ಲಿಂಗಗಳು ಅಥವಾ ಅಷ್ಟಗಣಪತಿ? ಪ್ರಾಚೀನ ದಿನಗಳಲ್ಲಿ, ಇವುಗಳು ಸಮಾಜವನ್ನು ಏಕೀಕರಿಸುವ ಮಾರ್ಗಗಳಾಗಿದ್ದವು. ಪ್ರಾಚೀನ ದಿನಗಳಲ್ಲಿ ಜನರು, ಜನತೆಯನ್ನು ಏಕೀಕರಿಸಲು ಬಯಸಿದ್ದರು ಯಾಕೆಂದರೆ ಈ ದೇಶದಲ್ಲಿ ಪ್ರತಿ ಆರುನೂರು ಕಿಲೋಮೀಟರುಗಳಿಗೆ ಭಾಷೆ ಮತ್ತು ಸಂಸ್ಕೃತಿಗಳು ಬದಲಾಗುತ್ತವೆ.
ದಕ್ಷಿಣ, ಉತ್ತರ, ಪೂರ್ವ ಮತ್ತು ಪಶ್ಚಿಮಗಳ ನಡುವೆ ಸಾಮಾನ್ಯವಾದುದು ಏನೂ ಇಲ್ಲ. ಹಾಗಾದರೆ ನೀವು ದೇಶವನ್ನು ಏಕೀಕೃತಗೊಳಿಸುವುದು ಹೇಗೆ? ಆಗ ಅವರಂದರು, "ಹನ್ನೆರಡು ಜ್ಯೋತಿರ್ಲಿಂಗಗಳಿಗೆ ಹೋಗಿ. ಕಾಶಿಗೆ ಹೋಗಿ, ರಾಮೇಶ್ವರಂಗೆ ಹೋಗಿ, ತ್ರಯಂಬಕೇಶ್ವರಕ್ಕೆ ಹೋಗಿ, ಮತ್ತು ಹೀಗೇ. ಹಾಗೆ ಅವರು ಒಂದು ರೀತಿಯ ಆಧ್ಯಾತ್ಮಿಕ ಪ್ರವಾಸವನ್ನು ಮತ್ತು ರಾಷ್ಟ್ರೀಯ ಏಕೀಕರಣವನ್ನು ಪ್ರಚಾರಗೊಳಿಸಿದರು. ಅಷ್ಟೇ.
ಅದೇ ರೀತಿಯಲ್ಲಿ ಅಷ್ಟ ಗಣಪತಿ ಕೂಡಾ. ಜನರು ಮಹಾರಾಷ್ಟ್ರದ ವಿವಿಧ ಪ್ರದೇಶಗಳಿಗೆಲ್ಲಾ ಹೋಗಬೇಕೆಂಬುದು ಆಲೋಚನೆಯಾಗಿತ್ತು. ಅವರು ಜನರನ್ನು ಒಗ್ಗೂಡಿಸಲು, ಯಾತ್ರಿಕರಾಗಿ ಸುತ್ತಲೂ ಸಂಚರಿಸುವಂತೆ ಮಾಡಲು ಬಯಸಿದ್ದರು. ಆ ದಿನಗಳಲ್ಲಿ ಬೇರೆ ರಜಾದಿನಗಳಾಗಲೀ ಅಥವಾ ಪ್ರವಾಸವಾಗಲೀ ಇರಲಿಲ್ಲ. ತೀರ್ಥಯಾತ್ರೆಯೇ ಪ್ರವಾಸವಾಗಿತ್ತು. ಒಂದು ಪವಿತ್ರವಾದ ಪ್ರವಾಸವಾಗಿರುವಾಗ ಜನರು, "ನಾನಿದನ್ನು ಮಾಡಲೇಬೇಕು" ಎಂದು ಅಂದುಕೊಳ್ಳುತ್ತಾರೆ, ಮತ್ತು ಆದುದರಿಂದ ಅವರು, ಹೋಗಿ ಸಂದರ್ಶಿಸಲು ಈ ಎಲ್ಲಾ ವಿವಿಧ ದೇವಸ್ಥಾನಗಳನ್ನು ಸೃಷ್ಟಿಸಿದರು.

ಪ್ರಶ್ನೆ: ಗುರುದೇವ, ಕ್ರಿಯೆಯನ್ನು ಮಾಡಿದ ಬಳಿಕ, ಹಲವು ಸಲ ನಾನು ನನಗರಿವಿಲ್ಲದೆಯೇ ನಗುತ್ತಿರುತ್ತೇನೆ. ನಾನು ಒಬ್ಬಂಟಿಯಾಗಿರುವಾಗ ಕೂಡಾ ನಾನು ನಗುತ್ತಿರುತ್ತೇನೆ. ನಾನು ನಗುತ್ತಿರುವೆನೆಂದು ನನಗೇ ತಿಳಿಯುವುದಿಲ್ಲ. ನನಗೇನೋ ಆಗಿದೆಯೆಂದು ಎಲ್ಲರೂ ಯೋಚಿಸುತ್ತಾರೆ. ನಾನವರಿಗೆ ಏನು ಹೇಳಲಿ?
ಶ್ರೀ ಶ್ರೀ ರವಿ ಶಂಕರ್: ನಿನಗೇನೋ ಆಗಿದೆಯೆಂದು ಎಲ್ಲರೂ ಯೋಚಿಸುವುದಾದರೆ ನೀನು ನಿನ್ನ ಕಡೆಗೆ ಒಂದು ಗಂಭೀರವಾದ ನೋಟವನ್ನು ಹಾಯಿಸಬೇಕು. ನೀನೊಂದು ಗಂಭೀರವಾದ ನೋಟವನ್ನು ಬೀರಲೇ ಬೇಕು. ಎಲ್ಲರೂ ಹಾಗೆ ಹೇಳುತ್ತಿರುವುದಾದರೆ, ಅದು ಸರಿಯಲ್ಲ. ನೀನು ಅವರ ಅಭಿಪ್ರಾಯಗಳನ್ನು ಪರಿಗಣಿಸಬೇಕು. ಇಲ್ಲಿ ನಾನು, "ಇತರರ ಅಭಿಪ್ರಾಯಕ್ಕೆ ಕಾಲ್ಚೆಂಡಾಗಬೇಡ" ಎಂದು ಹೇಳಲಾರೆ.
ನಿನಗೇನು ಅನ್ನಿಸುತ್ತದೆಯೆಂಬುದು ಒಂದು ವಿಷಯ, ಮತ್ತು ನೀನು ನಿನ್ನನ್ನು ಹೇಗೆ ವ್ಯಕ್ತಪಡಿಸುವೆಯೆಂಬುದು ಇನ್ನೊಂದು ವಿಷಯ. ನಿನಗೆ ಬಹಳ ಶಾಂತತೆಯ, ಬಹಳ ಸಂತೋಷದ ಅನುಭವವಾಗುತ್ತಿರಬಹುದು, ಆದರೆ ನೀನದನ್ನು ವ್ಯಕ್ತಪಡಿಸುವಾಗ, ನೀನದನ್ನು ಹೇಗೆ ವ್ಯಕ್ತಪಡಿಸಬಹುದು ಮತ್ತು ನೀನದನ್ನು ಎಲ್ಲಿ ವ್ಯಕ್ತಪಡಿಸಬೇಕು ಎಂಬುದನ್ನು ನೋಡಬೇಕು.

ಪ್ರಶ್ನೆ: ಪ್ರೀತಿಯ ಗುರುದೇವ, ನಿಮಗೆ ಅತ್ಯಂತ ಮೆಚ್ಚಿನದು ಏನಾದರೂ ಇದೆಯೇ? ನಿಮ್ಮ ಮೆಚ್ಚಿನ ವ್ಯಕ್ತಿ ಯಾರು? ನಿಮ್ಮ ಮೆಚ್ಚಿನ ರಾಗ ಯಾವುದು ಮತ್ತು ನಿಮ್ಮ ಮೆಚ್ಚಿನ ಕ್ರೀಡೆ ಯಾವುದು?
ಶ್ರೀ ಶ್ರೀ ರವಿ ಶಂಕರ್: ನಾನು ಇದರಲ್ಲಿ ಯಾವುದಕ್ಕೂ ಉತ್ತರ ಹೇಳುವುದಿಲ್ಲ, ಯಾಕೆಂದರೆ ನನಗೆ ಯಾವುದೂ ಇಲ್ಲ.
ಒಮ್ಮೆ ಬಹಳ ಸಮಯದ ಹಿಂದೆ ನಾನು ಇಂಗ್ಲೇಂಡಿನಲ್ಲಿದ್ದೆ ಮತ್ತು ಒಬ್ಬಳು ಮಹಿಳೆಯು ನನ್ನಲ್ಲಿ ಕೇಳಿದಳು, "ಗುರುದೇವ, ಬೆಳಗಿನ ತಿಂಡಿಗಾಗಿ ನಿಮಗೆ ನಾನು ಏನು ಮಾಡಲಿ?"
ನಾನಂದೆ, "ಏನು ಬೇಕಾದರೂ ಮಾಡು, ನಿನಗೇನು ಇಷ್ಟವೋ ಅದು."
ನಂತರ ಅವಳಂದಳು, "ನಾನು ಧೋಕ್ಲಾ (ಗುಜರಾತ್ ಮೂಲದ ಒಂದು ಸಸ್ಯಾಹಾರಿ ತಿಂಡಿ) ಮಾಡಲೇ?"
ನಾನಂದೆ, "ಸರಿ, ನೀನು ಧೋಕ್ಲಾ ಮಾಡಬಹುದು."
ಅವಳು ನನ್ನಲ್ಲಿ ಕೇಳಿದಳು, "ನಿಮಗದು ಇಷ್ಟವೇ?"
ನಾನಂದೆ, "ಹೌದು."
ಹಾಗೆ, ಅವಳು ಧೋಕ್ಲಾ ತಯಾರಿಸಿದಳು ಮತ್ತು ನಂತರ ಅವಳು ಇತರ ಎಲ್ಲರನ್ನೂ ಕರೆದು ಅಂದಳು, "ಗುರುದೇವರಿಗೆ ಧೋಕ್ಲಾ ಅಂದರೆ ಪ್ರೀತಿ." ಏನಾಯಿತೆಂದು ಸುಮ್ಮನೇ ಕಲ್ಪಿಸಿ. ಪ್ರತಿದಿನವೂ, ಮುಂದಿನ ಹದಿನೈದು ದಿನಗಳ ಕಾಲ ನಾನೆಲ್ಲಿಗೇ ಹೋದರೂ, ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟ, ನನಗೆ ಸಿಕ್ಕಿದ್ದು ಧೋಕ್ಲಾಗಳು ಮಾತ್ರ.

ಪ್ರಶ್ನೆ: ಗುರುದೇವ, ನನಗೆ ನಿಮ್ಮಂತೆ ಒಂದು ಒಳ್ಳೆಯ ಹಾಸ್ಯ ಪ್ರಜ್ಞೆ ಸಿಗುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ನಿನ್ನಲ್ಲಿ ಈಗಾಗಲೇ ಅದು ಇದೆ. ಕೇವಲ ವಿಶ್ರಾಮ ಮಾಡು. ಯಾರನ್ನೂ ಮೆಚ್ಚಿಸಲು ಪ್ರಯತ್ನಿಸಬೇಡ. ಕೇವಲ ನೀನಾಗಿಯೇ ಇರು.
ತಮಾಷೆಯಾಗಿರಲು ಪ್ರಯತ್ನಿಸುವ ಜನರ ಬಗ್ಗೆ ನನಗೆ ಬಹಳ ಖೇದವಾಗುತ್ತದೆ. ಹಾಸ್ಯಗಾರರೆಂದು ಕರೆಯಲ್ಪಡುವವರು, ಅವರು ಜನರು ನಗುವಂತೆ ಮಾಡುವುದಕ್ಕಾಗಿ ಹೊಸ ಹಾಸ್ಯಗಳನ್ನು ಹುಡುಕಲು ದಿನವೂ ಹೋರಾಡುತ್ತಾರೆ, ಮತ್ತು ಅದು ಅಷ್ಟೊಂದು ಕೃತಕವಾದ ನಗು. ಆ ಹಾಸ್ಯಗಳನ್ನು ಮಾಡುವ ಆ ಎಲ್ಲಾ ಹಾಸ್ಯಗಾರರನ್ನು ನೀವು ನೋಡಿದರೆ, ಅವರ ಸ್ಥಿತಿ ಶೋಚನೀಯವಾಗಿರುತ್ತದೆ. ಅದು ನಿಜವಾಗಿ ತಮಾಷೆಯಲ್ಲ, ಅವರನ್ನು ನೋಡಿದರೆ ನಿಮಗೆ ಅಳಬೇಕೆಂದೆನಿಸುತ್ತದೆ.