ಗುರುವಾರ, ಡಿಸೆಂಬರ್ 20, 2012

ಸಜ್ಜನರ ಮೌನ


೨೦ ದಶಂಬರ ೨೦೧೨
ಬೆಂಗಳೂರು

ಪ್ರಶ್ನೆ: ಮಾನವರ ಈ ಜಗತ್ತನ್ನು ನಾನು ನೋಡುವಾಗ, ನನ್ನ ಬಗ್ಗೆ ಅಥವಾ ಯಾರ ಬಗ್ಗೆಯಾದರೂ ಕಾಳಜಿ ವಹಿಸುವ ಒಂದು ಜಗತ್ತು ನನಗೆ ಕಾಣಿಸುವುದಿಲ್ಲ. ಅವರಲ್ಲಿ ಒಳ್ಳೆಯತನವಿದೆ ಆದರೆ ಅಧಿಕವಾಗಿ ಅವರು ತಮ್ಮ ಬಲಹೀನತೆಗಳು, ಲೋಭ ಮತ್ತು ಅಭದ್ರತೆಗಳಿಂದ ಪ್ರೇರಿತರಾಗುತ್ತಾರೆ. ಜನರು ಈ ಭೂಮಿಗೆ ಹಾಗೂ ಪರಸ್ಪರರಿಗೆ ಏನು ಮಾಡುತ್ತಿರುವರೆಂಬುದನ್ನು ನೋಡಿದರೆ, ಒಬ್ಬರು ಇದನ್ನು ಒಪ್ಪದಿರಲು ಸಾಧ್ಯವಿಲ್ಲ. ಎಲ್ಲವೂ ಪ್ರೀತಿಯಿಂದ ಮಾಡಲ್ಪಟ್ಟಿದೆ ಎಂದು ನೀವು ಹೇಳುವಾಗ, ನಾನದನ್ನು ನಂಬಲು ಬಹಳ ಇಚ್ಛೆ ಪಡುತ್ತೇನೆ, ಆದರೆ ಕೆಲವೊಮ್ಮೆ ಈ ಜಗತ್ತಿನೊಂದಿಗೆ ಸಹಾನುಭೂತಿ ಹೊಂದಲು ನನಗೆ ಕಷ್ಟವಾಗುತ್ತದೆ. ಈ ಅಸಹ್ಯವೇ ಒಂದು ದಿನ ಗುಂಡಿಯನ್ನು ಅದುಮಿ, ಜನರು ಭಯೋತ್ಪಾದಕರಾಗಲು ಅಥವಾ ಮನಬಂದಂತೆ ಕೊಲ್ಲಲು ಶುರು ಮಾಡಲು ಅಥವಾ ಒಬ್ಬರು ಮುಗ್ಧರನ್ನು ಅತ್ಯಾಚಾರ ಮಾಡಲು ನಿರ್ಧರಿಸುವಂತೆ ಮಾಡುವುದು ಎಂದು ನನಗನ್ನಿಸುತ್ತದೆ. ಈ ಜಗತ್ತಿನ ಬಗ್ಗೆ ಕಾಳಜಿ ತೋರುವುದನ್ನು ನಾನು ಮುಂದುವರಿಸುವುದು ಹೇಗೆ? 
ಶ್ರೀ ಶ್ರೀ ರವಿ ಶಂಕರ್: ಯಾವುದೇ ಪ್ರಶ್ನೆಗೆ ಒಂದೇ ಒಂದು ಸರಿಯಾದ ಉತ್ತರವಿರಲು ಸಾಧ್ಯ. ಎರಡು ಸರಿಯುತ್ತರಗಳಿರಲು ಸಾಧ್ಯವಿಲ್ಲ. ಇದೊಂದು ಪ್ರಶ್ನೆಯಾಗಿದ್ದರೆ, ನೀನು ಉತ್ತರಕ್ಕಾಗಿ ಹುಡುಕುತ್ತಾ ಇರಬೇಕೆಂದು ನಾನು ಬಯಸುತ್ತೇನೆ. ಆದರೆ, ಇದನ್ನೊಂದು ಪ್ರಶ್ನೆಯಾಗಿ ನೋಡುವ ಬದಲು, ನೀನಿದನ್ನು ಒಂದು ಪಥವಾಗಿ ನೋಡಿದರೆ, ನೀನಿದರ ಮೇಲೆ ಹಲವು ಸಾರಿ ನಡೆದಾಡಬಹುದು, ಮತ್ತು ಪ್ರತಿಸಲವೂ, ನಿನಗೊಂದು ಹೊಸ ಉತ್ತರ ಲಭಿಸುವುದು.
ಈಗ, ಇದನ್ನು ಎಲ್ಲರಿಗೂ ಅನ್ವಯಿಸಬೇಡ! ಜನರಲ್ಲಿ ಪ್ರೀತಿಯೇ ಇಲ್ಲವೆಂದು, ಈ ಭೂಮಿಯ ಮೇಲೆ ಸಹಾನುಭೂತಿಯುಳ್ಳ ಜನರೇ ಇಲ್ಲವೆಂದು ಯೋಚಿಸಬೇಡ - ಇದು ತಪ್ಪು. ಎಲ್ಲರೂ ಸ್ವಾರ್ಥಿಗಳೆಂದು ನಾವು ಸಾಮಾನ್ಯೀಕರಿಸಲು ಸಾಧ್ಯವಿಲ್ಲ. ನಿಸ್ವಾರ್ಥಿಗಳಾಗಿ ಸಮಾಜ ಸೇವೆ ಮಾಡುತ್ತಿರುವ ಹಲವಾರು ಜನರಿದ್ದಾರೆ. ಎಲ್ಲರೂ ಭ್ರಷ್ಟರೆಂದು ನೀನು ಮುದ್ರೆಯೊತ್ತಲು ಸಾಧ್ಯವಿಲ್ಲ.
ನಮ್ಮ ಶಿಕ್ಷಕರಲ್ಲೊಬ್ಬರಾದ, ಗುಜರಾತಿನ ಒಬ್ಬರು ಐ.ಎ.ಎಸ್. ಅಧಿಕಾರಿಯ ಬಗ್ಗೆ ನಾನು ನಿಮಗೆ ಹೇಳಲು ಬಯಸುತ್ತೇನೆ. ಈ ಸಜ್ಜನರಿಗೆ ಒಬ್ಬರು ಕೈಗಾರಿಕೋದ್ಯಮಿಯು ೫೧ ಕೋಟಿ ರೂಪಾಯಿಗಳನ್ನು ನೀಡಲು ಮುಂದಾದರು. ಅವರು ಮಾಡಬೇಕಿದ್ದುದೆಂದರೆ, ಕೈಗಾರಿಕೋದ್ಯಮಿಯು ಅದಾಗಲೇ ಬಳಸುತ್ತಿದ್ದ ಭೂಮಿಯನ್ನು ಹಂಚಿಕೊಡಲು ಕೇವಲ ಒಂದು ಸಹಿ ಹಾಕುವುದು ಅಷ್ಟೇ. ಅವರು, "ಇದೇನೂ ನ್ಯಾಯ ಬಾಹಿರವಲ್ಲ, ಇದು ಕೇವಲ ಒಂದು ಕಾರ್ಯವಿಧಾನವಷ್ಟೇ" ಎಂದು ಹೇಳುವ ಮೂಲಕ ಸುಲಭವಾಗಿ ಅದನ್ನು ಸಮರ್ಥಿಸಬಹುದಾಗಿತ್ತು ಅಥವಾ ಅವರು, "ಈ ೫೧ ಕೋಟಿ ನನಗಾಗಿ ಬೇಕಾಗಿಲ್ಲ, ನಾನಿದನ್ನು ಬಡವರಿಗೆ ಕೊಡಬಹುದು" ಎಂದು ಹೇಳಬಹುದಾಗಿತ್ತು. ಮನಸ್ಸಿಗೆ ಇತರ ಹಲವಾರು ಸಮರ್ಥನೆಗಳು ಬರಬಹುದು. ಆದರೆ ಈ ಸಜ್ಜನರು ಎದ್ದುನಿಂತು, "ಇಲ್ಲ, ನನಗಿದು ಬೇಕಾಗಿಲ್ಲ" ಎಂದು ಹೇಳಿದರು. ಒಂದು ಸರಕಾರಿ ನೌಕರಿಯಲ್ಲಿ, ಅವರು ಮೂರು ಜೀವಮಾನಗಳ ಕಾಲ ಸೇವೆಯನ್ನು ಮುಂದುವರಿಸಿದರೂ ಕೂಡಾ, ಅವರಿಗೆ ೫೧ ಕೋಟಿ ಸಂಪಾದಿಸಲು ಸಾಧ್ಯವಿಲ್ಲ. ಅದೊಂದು ಚಿಕ್ಕ ಮೊತ್ತವಲ್ಲ. ಆದರೆ ಈ ವ್ಯಕ್ತಿಯು ಎದ್ದುನಿಂತು, "ಇಲ್ಲ, ನಾನದನ್ನು ತೆಗೆದುಕೊಳ್ಳುವುದಿಲ್ಲ" ಎಂದು ಹೇಳಿದರು. ನಮ್ಮಲ್ಲಿ ಇನ್ನೂ ಅಂತಹ ಜನರಿದ್ದಾರೆ.
ಜನರು ಆಧ್ಯಾತ್ಮಿಕ ಪಥಕ್ಕೆ ಬರುವಲ್ಲಿಯ ವರೆಗೆ ಮತ್ತು ಬಾರದ ಹೊರತು ಅವರು ಸಂವೇದನಾಶೀಲರಾಗುವುದಿಲ್ಲ ಅಥವಾ ಉನ್ನತ ಮಟ್ಟದ ವಿವೇಚನೆಯನ್ನು ಹೊಂದುವುದಿಲ್ಲ. ಸಂವೇದನಾಶೀಲತೆ ಮತ್ತು ವಿವೇಚನೆ, ಇವೆರಡೂ ಕೇವಲ ಧ್ಯಾನ ಮತ್ತು ಜ್ಞಾನದ ಮೂಲಕ ಮಾತ್ರ ವೃದ್ಧಿಯಾಗಲು ಸಾಧ್ಯ. ಅದಕ್ಕಾಗಿಯೇ ಈ ಜ್ಞಾನವನ್ನು ಪ್ರತಿಯೊಂದು ಬಾಗಿಲ ಮೆಟ್ಟಿಲಿಗೂ, ಪ್ರತಿಯೊಂದು ಶಾಲೆಗೂ, ಪ್ರತಿಯೊಂದು ಹೃದಯಕ್ಕೂ ತರುವುದು ಬಹಳ ಮುಖ್ಯವಾದುದು. ನೀವಿದನ್ನು ಮಾಡುತ್ತಾ ಇರಬೇಕು.
ನಾನು ಹೇಳಿದಂತೆ, ಜಗತ್ತು ಕೆಟ್ಟದಾಗಿರುವುದು ಕೆಲವು ಕೆಟ್ಟ ಜನರಿರುವುದರಿಂದಾಗಿಯಲ್ಲ, ಒಳ್ಳೆಯ ಜನರ ಮೌನದಿಂದಾಗಿ.
ಇತರರ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಡಿ ಎಂದು ಕೂಡಾ ನಾನು ನಿಮಗೆ ಹೇಳಲು ಬಯಸುತ್ತೇನೆ. ನಿಮಗೆ ತಿಳಿಯದು. ನೀವು ನಿಮ್ಮನ್ನೇ ತಿಳಿದಿರುವಿರೇ? ನೀವು ಯಾವಾಗ ಸಹಾನುಭೂತಿಯಿಂದಿರುವಿರಿ ಅಥವಾ ನೀವು ಯಾವಾಗ ನಿಷ್ಠುರರಾಗಿರುವಿರಿ ಎಂಬುದು ನಿಮಗೆ ತಿಳಿದಿದೆಯೇ? ನಿಮಗೆ ತಿಳಿಯದು!
ಕೆಲವೊಮ್ಮೆ ನೀವು ಜನರೊಂದಿಗೆ ನಿಷ್ಠುರರಾಗಿರುತ್ತೀರಿ ಮತ್ತು ನೀವು ನಿಷ್ಠುರರಾಗಿರುವುದನ್ನು ಸಮರ್ಥಿಸಿಕೊಳ್ಳುತ್ತೀರಿ. ನೀವನ್ನುವಿರಿ, "ಅವರು ಅದಕ್ಕೆ ಅರ್ಹರಾಗಿದ್ದರು." ನಿಮಗೆ ಹಾಗೆ ಅನ್ನಿಸುವುದಿಲ್ಲವೇ? ಮತ್ತು ಕೆಲವೊಮ್ಮೆ ನೀವು ಸಹಾನುಭೂತಿಯಿಂದಿರುವಾಗ ಕೂಡಾ ನೀವು ನಿಮ್ಮ ಸಹಾನುಭೂತಿಯನ್ನು ಸಮರ್ಥಿಸಿಕೊಳ್ಳುತ್ತೀರಿ, ಅಲ್ಲವೇ?
ಆದುದರಿಂದ ನಿಮಗೆ ನಿಮ್ಮದೇ ಭಾವನೆಗಳು ಮತ್ತು ನಿಮ್ಮದೇ ವರ್ತನೆಗಳು ತಿಳಿಯದು, ಹಾಗಾದರೆ ನೀವು ಬೇರೆಯವರೊಬ್ಬರ ಬಗ್ಗೆ ಯಾಕೆ ನಿರ್ಣಯ ತೆಗೆದುಕೊಳ್ಳುವಿರಿ ಮತ್ತು ಎಲ್ಲರ ಬಗ್ಗೆಯೂ ನೀವು ಯಾಕೆ ನಿರ್ಣಯ ತೆಗೆದುಕೊಳ್ಳುವಿರಿ?
"ಸಂಪೂರ್ಣ ಜಗತ್ತು ಕರುಣೆಯಿಲ್ಲದ, ಭ್ರಷ್ಟರಾದ ಮತ್ತು ಕೆಟ್ಟ ಜನರಿಂದ ತುಂಬಿದೆ", ಅವರೆಲ್ಲರೂ ಕೆಟ್ಟ ಜನರೆಂದು ನೀನು ಯಾಕೆ ಯೋಚಿಸುವೆ? ಇಲ್ಲ! ವಿಷಯ ಹಾಗಲ್ಲ. ನೀನು ನಿನ್ನದೇ ಹೇಳಿಕೆಯ ಕಡೆಗೆ ಪುನಃ ನೋಡಬೇಕು.
ನಿನಗೆ ನಿನ್ನ ಬಗ್ಗೆ ಒಳ್ಳೆಯದಾಗಿ ಅನ್ನಿಸುತ್ತದೆಯೇ? ನೀನೊಬ್ಬ ಒಳ್ಳೆಯ ವ್ಯಕ್ತಿಯೆಂದು ನಿನಗನ್ನಿಸುವುದೇ? ನೀನೊಬ್ಬ ಒಳ್ಳೆಯ ವ್ಯಕ್ತಿಯೆಂದು ನಿನಗನ್ನಿಸುತ್ತದೆ, ಆದರೆ ನಿನ್ನ ಜೊತೆ ಒಡನಾಡಿದ ಇತರ ಎಲ್ಲರೊಡನೆ ಕೇಳಿ ನೋಡು, ನಿನ್ನ ಬಗ್ಗೆ ಅವರ ಅಭಿಪ್ರಾಯವೇನೆಂದು. ಅದು, ನಿನಗೇ ನಿನ್ನ ಬಗ್ಗೆಯಿರುವ ಕಲ್ಪನೆಗಿಂತ ಸಂಪೂರ್ಣವಾಗಿ ವ್ಯತ್ಯಸ್ತವಾಗಿರಬಹುದು. ನೀನು ಸ್ವಾರ್ಥಿಯೆಂದು ಬೇರೊಬ್ಬರು ನಿನಗೆ ಹೇಳಿದರೆ ಅದು ನಿನಗೆ ಹೇಗೆ ಇಷ್ಟವಾಗುತ್ತದೆ? ನೀನು ಸ್ವಾರ್ಥಿಯೆಂದು ಒಳಗೆ ಆಳದಲ್ಲಿ ನೀನು ಯೋಚಿಸುವುದಿಲ್ಲ, ಆದರೆ ನೀನು ಬಹಳ ಸ್ವಾರ್ಥಿಯೆಂದು ಬೇರೊಬ್ಬರು ನಿನಗೆ ಹೇಳಿದರೆ ಅಥವಾ ಅವರು ನಿನ್ನಲ್ಲಿ ನಕಾರಾತ್ಮಕ ಪ್ರವೃತ್ತಿಗಳನ್ನು ನೋಡಿದರೆ, ಅವರಿಗೆ ನೀನು ಏನು ಹೇಳುವೆ? "ಹೇ ನೋಡು, ನನ್ನಲ್ಲಿ ಒಳ್ಳೆಯ ಪ್ರವೃತ್ತಿಗಳು ಕೂಡಾ ಇವೆ." ನೀನವರಿಗೆ ಹಾಗೆ ಹೇಳುವುದಿಲ್ಲವೇ?
ಒಳ್ಳೆಯ ಪ್ರವೃತ್ತಿಗಳಿರದ ಮತ್ತು ಒಂದು ಒಳ್ಳೆಯ ಹೃದಯವಿರದ ಯಾವುದೇ ಮನುಷ್ಯನಿಲ್ಲ.
ಕೇವಲ ಇದನ್ನು ನೆನಪಿನಲ್ಲಿರಿಸು, ಒಳ್ಳೆಯತನವಿರದ ಯಾವುದೇ ಮಾನವನಿಲ್ಲ. ಕೆಲವೊಮ್ಮೆ ಅದು ಒತ್ತಡ ಮತ್ತು ಅಜ್ಞಾನಗಳ ಕೆಳಗೆ ಹುಗಿದು ಹೋಗುತ್ತದೆ.
ಆ ಮಹಿಳೆಯ ಮೇಲೆ ಭೀಕರ ಅಪರಾಧಗೈದ ಆ ಜನರು ಕೂಡಾ ಈಗ ಹೇಳುತ್ತಿದ್ದಾರೆ, "ದಯವಿಟ್ಟು ನನ್ನನ್ನು ಗಲ್ಲಿಗೇರಿಸಿ, ನಾನೊಂದು ದೊಡ್ಡ ತಪ್ಪು ಮಾಡಿದೆ." ಅವರೊಂದು ಮೋಡದೊಳಕ್ಕೆ ಸಿಲುಕಿದರು; ಅವರಿಗೆ ಪ್ರಜ್ಞೆಯಿರಲಿಲ್ಲ. ಅವರೀಗ ಭಯಾನಕವಾದ ಪಶ್ಚಾತ್ತಾಪದಿಂದ ನರಳಾಡುತ್ತಿರಬೇಕು. ಬಹಳಷ್ಟು ಅಪರಾಧ ಮನೋಭಾವ ಮತ್ತು ನರಳಾಟ. ಅದಕ್ಕಾಗಿಯೇ, ನೀವು ನಿಮ್ಮ ದೃಷ್ಟಿಯನ್ನು ವಿಶಾಲಗೊಳಿಸಿದಾಗ, ನಿಮಗೆ ಸಹಾನುಭೂತಿಯಿಲ್ಲದೇ ಇರುವುದಿಲ್ಲ; ತಪ್ಪಿತಸ್ಥರ ಕಡೆಗೂ ಕೂಡಾ.
ನೋಡಿ, ಕೆಲವು ಸಲ ನೀವು ಕೆಲವು ತಪ್ಪುಗಳನ್ನು ಮಾಡಿರುವಿರಿ. ಒಬ್ಬರು ಯಾವತ್ತೂ ನೀವು ಮಾಡಿದ ತಪ್ಪುಗಳನ್ನೇ ಹೇಳಿದರೆ ನಿಮಗೆ ಅದು ಹೇಗೆ ಇಷ್ಟವಾಗಬಹುದು? ಆ ಪರಿಸ್ಥಿತಿಯು ನಿಮಗೆ ಇಷ್ಟವಾಗಬಹುದೇ? ಖಂಡಿತಾ ಇಲ್ಲ! ನೀವು ಖಂಡಿತವಾಗಿಯೂ, "ಹೇ, ಅದನ್ನು ಬಿಟ್ಟು ಬಿಡು ಮತ್ತು ಮುಂದೆ ಸಾಗು" ಎಂದು ಹೇಳುವಿರಿ. ಇದನ್ನೇ ನೀವು ಹೇಳುವುದು, ಅಲ್ಲವೇ? ಆದುದರಿಂದ ನಾವು ಈ ವಾಸ್ತವಿಕತೆಯ ಕಡೆಗೆ ಎಚ್ಚೆತ್ತುಕೊಳ್ಳಬೇಕು!
ಅದೆಲ್ಲವೂ ನಿಮ್ಮದೇ ಕಣ್ಣುಗಳಲ್ಲಿರುವುದು, ನೀವು ಜಗತ್ತನ್ನು ಹೇಗೆ ನೋಡುವಿರೆಂದು. ಪ್ರತಿಯೊಬ್ಬರೂ ಒಬ್ಬ ಮೋಸಗಾರರೆಂದು ನೀವು ಯೋಚಿಸಿದರೆ, ಆಗ ಎಲ್ಲರ ಕಡೆಗಿರುವ ನಿಮ್ಮ ವರ್ತನೆಯು ನಿಷ್ಠುರವಾಗಿ ಮತ್ತು ಅಹಿತಕರವಾಗಿರುತ್ತದೆ ಹಾಗೂ ನೀವದರ ಭಾಗವಾಗುವಿರಿ.
ಇದಕ್ಕಾಗಿಯೇ ಒಂದು ಮಾತಿದೆ, - ನಿಮ್ಮ ದೃಷ್ಟಿಯಂತೆಯೇ ಇರುವುದು ಸೃಷ್ಟಿ. ನೀವು ಹೇಗೆ ಆಲೋಚಿಸುವಿರೋ, ಸೃಷ್ಟಿಯು ಹಾಗಾಗುವುದು - ಯಥಾ ದೃಷ್ಟಿ ತಥಾ ಸೃಷ್ಟಿ.

ಪ್ರಶ್ನೆ: ಮಹಾಭಾರತದಲ್ಲಿ, ಭೀಷ್ಮರಂತಹ ಒಬ್ಬರು ಬುದ್ಧಿವಂತ ವ್ಯಕ್ತಿಯು, ಸೂಕ್ಷ್ಮ ವಿಚಾರಗಳ ಬಗ್ಗೆ ಮೌನವಾಗಿ ಉಳಿಯಲು ನಿರ್ಧರಿಸಿದುದು ಮತ್ತು ದುರ್ಯೋಧನನ ಪಕ್ಕದಲ್ಲಿದ್ದುಕೊಂಡು ಯುದ್ಧ ಮಾಡಲು ತಯಾರಾದುದು ಯಾಕೆ?
ಶ್ರೀ ಶ್ರೀ ರವಿ ಶಂಕರ್: ನಾನು ಮಹಾಭಾರತದ ಬಗ್ಗೆ ಮಾತನಾಡಬೇಕೆಂದು ನೀನು ಯಾಕೆ ಬಯಸುವೆ? ಅಲ್ಲೇನಾಯಿತೆಂಬುದನ್ನು ಭೀಷ್ಮರು ಅದಾಗಲೇ ಹೇಳಿದ್ದಾರೆ. ಅವರು ಬಹಳಷ್ಟು ನಿರ್ಬಂಧವನ್ನು ಅನುಭವಿಸುತ್ತಾರೆ. ದುರ್ಯೋಧನನು ಉನ್ನತಾಧಿಕಾರದಲ್ಲಿದ್ದನು ಮತ್ತು ಒಳ್ಳೆಯ ಜನರು ಅವನ ಉನ್ನತಾಧಿಕಾರದಲ್ಲಿ ಸಿಕ್ಕಿಬಿದ್ದರು. ಅದು ಸಮಸ್ಯೆ. ಒಳ್ಳೆಯ ಜನರಿದ್ದಾರೆ, ಆದರೆ ತಪ್ಪಾದ ಪಕ್ಷದಲ್ಲಿ, ಒಬ್ಬ ತಪ್ಪಾದ ಪಕ್ಷದ ನಾಯಕನೊಂದಿಗೆ, ಮತ್ತು ತಪ್ಪಾದ ವ್ಯಕ್ತಿಗಳು ಒಬ್ಬ ಒಳ್ಳೆಯ ಪಕ್ಷದ ನಾಯಕನೊಂದಿಗೆ ಕೂಡಾ ಇದ್ದಾರೆ. ನೀವೇನು ಮಾಡುವಿರಿ? ಇದುವೇ ಆಗುತ್ತಿರುವುದು.
ಪ್ರತಿಯೊಂದು ಪಕ್ಷವೂ ಒಬ್ಬ ಅಪರಾಧಿ ಅಂಶಕ್ಕೆ ಟಿಕೆಟ್ ನೀಡಲು ಉತ್ಸುಕವಾಗಿದೆ. ಯಾಕೆಂದು ನಿಮಗೆ ಗೊತ್ತಾ? ಅವರ ಬಳಿ ಮತಗಳಿಕೆಗಾಗಿ ಮನವೊಲಿಸಿಕೊಂಡ ಮತದಾರರ ಗುಂಪಿದೆ. ಅಪರಾಧಿ ಜನರಲ್ಲಿ ಹಣ ಮತ್ತು ಜನಶಕ್ತಿಯಿದೆ, ಆದುದರಿಂದ ನೀವವರಿಗೆ ಒಂದು ಟಿಕೆಟ್ ನೀಡಿ ಮತ್ತು ಅವರು ಚುನಾಯಿತರಾಗುತ್ತಾರೆ. ಈ ಪ್ರಜಾಪ್ರಭುತ್ವದಲ್ಲಿ ಎಲ್ಲವೂ ಕೇವಲ ಸಂಖ್ಯೆಗಳ ಒಂದು ಆಟವಾಗಿದೆ. ಆದುದರಿಂದ ಅನಿವಾರ್ಯವಾಗಿ ಅವರು ಹೋಗಿ ಚುನಾಯಿಸಲ್ಪಡುತ್ತಾರೆ ಯಾಕೆಂದರೆ ಒಳ್ಳೆಯ ಜನರು ಮನೆಯಲ್ಲಿ ಕುಳಿತುಕೊಂಡು, "ಯಾರು ಹೋಗಿ ಮತ ಹಾಕುವುದು ಮತ್ತು ಇದೆಲ್ಲವನ್ನೂ ಮಾಡುತ್ತಾರೆ. ಹೇಗಿದ್ದರೂ ಎಲ್ಲರೂ ಭ್ರಷ್ಟರು ಮತ್ತು ಎಲ್ಲಾ ಪಕ್ಷಗಳು ನಿರಾಶಾದಾಯಕವಾದವು" ಎಂದು ಹೇಳುತ್ತಾರೆ.
ಹೀಗೆ ಜಡತೆಯ ಒಂದು ಭಾವವಿದೆ ಮತ್ತು ಅವರು ಹೋಗಿ ಮತದಾನ ಮಾಡುವುದಿಲ್ಲ. ಅದು ಕಾರಣ.
ನಾನು ನಿಮಗೆ ಹೇಳುವುದೇನೆಂದರೆ, ಒಳ್ಳೆಯ ಜನರು ಒಂದು ಮತದಾರರ ಗುಂಪನ್ನು ರೂಪಿಸಬೇಕು. ಆಗ ಯಾವ ಪಕ್ಷವೂ, ಅಪರಾಧದ ದಾಖಲೆಗಳಿರುವ ಜನರಿಗೆ ಅಥವಾ ಭ್ರಷ್ಟ ರಾಜಕಾರಣಿಗಳಿಗೆ ಟಿಕೆಟ್ ನೀಡಲಾರವು. ಅವರೆಲ್ಲರೂ ಸೇವಾ ಮನೋಭಾವವಿರುವ ಜನರಿಗಾಗಿ ಹುಡುಕುವರು.

ಪ್ರಶ್ನೆ: ಗುರುದೇವ, ದಿಲ್ಲಿಯ ಘಟನೆಯಿಂದಾಗಿ ಜನರಲ್ಲಿ ಬಹಳಷ್ಟು ಕ್ರೋಧವಿದೆ. ಇದಕ್ಕಾಗಿ ಮರಣದಂಡನೆಯ ಬೇಡಿಕೆಯೊಡ್ಡುವುದು ಸರಿಯೇ? ಹೆಚ್ಚಿನ ಜನರು ಭಯದಿಂದಾಗಿ ಸದಾಚಾರಿಗಳಾಗುವರೇ?
ಶ್ರೀ ಶ್ರೀ ರವಿ ಶಂಕರ್: ನೋಡಿ, ಮರಣದಂಡನೆಯನ್ನು ಪಡೆದ ಹಲವಾರು ಜನರಿದ್ದಾರೆ, ಆದರೆ ಅದನ್ನು ಅವರಿಗೆ ಕೊಡಲಾಗಿಲ್ಲ. ಜೈಲಿನಲ್ಲಿರುವ, ಘೋರ ಅಪರಾಧಗಳನ್ನು ಮಾಡಿದ ಭಯೋತ್ಪಾದಕರಿಗೆ ಕೂಡಾ ಮರಣದಂಡನೆಯನ್ನು ಕೊಡಲಾಗಿದೆ, ಆದರೆ ಜಾರಿಯಾಗುತ್ತಿಲ್ಲ. ಕಸಬ್ ಗೆ ನೀಡಿದ್ದರಲ್ಲಿ ಕೂಡಾ; ೩೧ ಕೋಟಿ ರೂಪಾಯಿಗಳನ್ನು ಅವನ ಮೇಲೆ ಖರ್ಚು ಮಾಡಲಾಯಿತು ಮತ್ತು ನಂತರ ಅವರು ಅವನಿಗೆ ಮರಣದಂಡನೆಯನ್ನು ನೀಡಿದರು. ೩೧ ಕೋಟಿಗಳನ್ನು ಒಬ್ಬ ಭಯೋತ್ಪಾದಕನ ಮೇಲೆ ಖರ್ಚು ಮಾಡುವುದು!
ಸುಮ್ಮನೇ ಕಲ್ಪಿಸಿಕೊಳ್ಳಿ, ೩೧ ಕೋಟಿ ರೂಪಾಯಿಗಳಲ್ಲಿ ಎಷ್ಟೊಂದು ಹಳ್ಳಿಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತಿತ್ತು? ಎಷ್ಟೊಂದು ರಸ್ತೆಗಳಿಗೆ ಮತ್ತು ಎಷ್ಟೊಂದು ಮನೆಗಳಿಗೆ ದೀಪ ಹಾಗೂ ವಿದ್ಯುತ್ ದೊರೆಯುತ್ತಿತ್ತು.
ಕೇವಲ ನಿಯಮವೊಂದೇ ಸಾಕಾಗುವುದಿಲ್ಲ, ನಾವೊಂದು ಸಾಮಾಜಿಕ ಬದಲಾವಣೆಯನ್ನು  ಮತ್ತು ನಮ್ಮ ಸಚಿವರು ಹಾಗೂ ಶಾಸಕರ ಮನೋಭಾವದಲ್ಲಿ ಒಂದು ಬದಲಾವಣೆಯನ್ನು ತರಬೇಕಾಗಿದೆ; ಅದು ಜಾರಿಯಾಗಬೇಕು.

ಪ್ರಶ್ನೆ: ತಾನು ಮಾಡುತ್ತಿರುವುದರ ಬಗ್ಗೆ ಬಹಳಷ್ಟು ಲೆಕ್ಕಾಚಾರ ಮಾಡುವ ಒಬ್ಬ ವ್ಯಕ್ತಿಯೊಂದಿಗೆ ನಾನು ಸಂಬಂಧದಲ್ಲಿದ್ದೇನೆ. ಸಂಬಂಧದಲ್ಲಿರಲು ಅವನು ಭಯಗೊಳ್ಳುತ್ತಾನೆ ಯಾಕೆಂದರೆ, ಅದು ಅವನ ಆಧ್ಯಾತ್ಮಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದೆಂದು ಅವನು ನಂಬುತ್ತಾನೆ. ಇದು ಸರಿಯೇ?
ಶ್ರೀ ಶ್ರೀ ರವಿ ಶಂಕರ್: ಒಬ್ಬರಲ್ಲಿ ಅವರಿಗೆ ನಿಮ್ಮ ಮೇಲಿರುವ ಪ್ರೀತಿಯನ್ನು ಸಾಬೀತುಪಡಿಸುವಂತೆ ಕೇಳಬೇಡಿ. ಆಗಲೇ ಈ ಎಲ್ಲಾ ವಿಷಯಗಳೂ ಬರುವುದು. ಒಬ್ಬರಿಗೆ ನಾವು ಅತಿಯಾಗಿ ಪ್ರೀತಿಯನ್ನು ತೋರಿಸಿದರೆ, ಅದನ್ನು ಹೇಗೆ ನಿರ್ವಹಿಸಬೇಕೆಂದು ಅಥವಾ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ಅವರಿಗೆ ತಿಳಿಯುವುದಿಲ್ಲ, ಅಲ್ಲವೇ? ಜನರಿಗೆ ಗೊಂದಲವಾಗುತ್ತದೆ.
ಪ್ರೀತಿಯನ್ನು ಕೊಡುವುದಿರಲಿ, ಪ್ರೀತಿಯನ್ನು ಹೇಗೆ ತೆಗೆದುಕೊಳ್ಳುವುದು ಎಂಬುದು ಗೊತ್ತಿಲ್ಲದ ಹಲವಾರು ಜನರಿದ್ದಾರೆ. ಅದಕ್ಕಾಗಿಯೇ ನಾನು ನಿಮಗೆ ಹೇಳುವುದು, ಇದೆಲ್ಲದರಲ್ಲಿ ಸಿಕ್ಕಿಬೀಳಬೇಡಿ. ಕೇವಲ ವಿಶ್ರಾಮ ಮಾಡಿ ಮತ್ತು ಸಂತೋಷವಾಗಿರಿ. ನಾನು ಎಲ್ಲರನ್ನೂ ಪ್ರೀತಿಸುತ್ತೇನೆ ಮತ್ತು ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ ಎಂಬುದಾಗಿ ಭಾವಿಸಿ. ಆಗ ಯಾವುದನ್ನೆಲ್ಲಾ ವ್ಯಕ್ತಪಡಿಸಬೇಕಾಗುವುದೋ ಅದೆಲ್ಲವೂ ಸುಮ್ಮನೇ ವ್ಯಕ್ತಪಡಿಸಲ್ಪಡುತ್ತದೆ. ಅದು ಸ್ವಾಭಾವಿಕವಾಗಿ ಆಗುತ್ತದೆ.
ಒಬ್ಬರು, "ನನಗೆ ಬಂಧನದ ಬಗ್ಗೆ ಭಯವಾಗುತ್ತದೆ" ಎಂದು ಹೇಳುವಾಗ ಅದರರ್ಥ, ಎಲ್ಲೋ ಅವರು ಬಂಧನದಲ್ಲಿರುವರು ಎಂದು. ಆದುದರಿಂದ ಜನರು ಹೇಳುವುದನ್ನು ಬಾಹ್ಯನೋಟಕ್ಕನುಗುಣವಾಗಿ ತೆಗೆದುಕೊಳ್ಳಬೇಡಿ. ಜನರು ಏನು ಬೇಕಾದರೂ ಹೇಳಬಹುದು, ಆದರೆ ವಾಸ್ತವವಾಗಿ ಅದು ಬೇರೇನೋ ಇರಬಹುದು. ನೋಡಿ, ನೀವೊಬ್ಬ ವ್ಯಕ್ತಿಯನ್ನು ಅವನ ಮಾತುಗಳಾಚೆಗೆ ಅರ್ಥ ಮಾಡಿಕೊಂಡಾಗಲೇ ಒಂದು ನಿಜವಾದ ಸಂಬಂಧವು ನಿರ್ಮಾಣವಾಗುವುದು. ಆದರೆ ನೀವೊಬ್ಬ ವ್ಯಕ್ತಿಯ ಮಾತುಗಳಿಗೆ ಜೋತು ಬಿದ್ದರೆ, ಆಗ ನೀವೊಂದು ಬಹಳ ಬಾಹ್ಯ ಮಟ್ಟದಲ್ಲಿರುತ್ತೀರಿ; ಒಂದು ಬಹಳ ಮೇಲ್ಮೈಯ ಮಟ್ಟದಲ್ಲಿರುತ್ತೀರಿ ಮತ್ತು ಆಗ ಅದು ದೀರ್ಘ ಕಾಲ ಉಳಿಯುವುದಿಲ್ಲ.
ನಿಮ್ಮ ಸಂಬಂಧವು ಶಬ್ದಗಳಿಂದಾಚೆಗೆ ಮತ್ತು ಭಾವನೆಯ ಮಟ್ಟದಿಂದಾಚೆಗೆ; ಅಂದರೆ ಭಾವನೆಗಳಿಂದಾಚೆಗೆ ಹೋಗಬೇಕು, ಯಾಕೆಂದರೆ ಶಬ್ದಗಳೂ ಬದಲಾಗುತ್ತವೆ ಮತ್ತು ಭಾವನೆಗಳೂ ಬದಲಾಗುತ್ತವೆ. ಆಗ ಅದು ಒಂದು ನಿಜವಾದ ಒಳ್ಳೆಯ ಮತ್ತು ಬದ್ಧವಾಗಿರುವ ಸಂಬಂಧವಾಗುವುದು. ಸಂಬಂಧವು ಯಾವುದೇ ಆಗಿರಲಿ, ಒಂದು ಗೆಳೆತನವಾಗಿರಲಿ ಅಥವಾ ಒಂದು ವಿವಾಹವಾಗಿರಲಿ, ನೀವು ಭಾವನೆಗಳಾಚೆಗೆ ನೋಡುವಾಗ ಅದು ಬಹಳ ಗಟ್ಟಿಯಾಗುತ್ತದೆ.
ನೀವು ಭಾವನೆಯ ಪ್ರತಿಯೊಂದು ಸವಿಯನ್ನೂ ಸ್ವೀಕರಿಸುವಾಗ ಮತ್ತು ಯೋಚನೆಗಳ ಅಥವಾ ಶಬ್ದಗಳ ಪ್ರತಿ ಎಳೆಯನ್ನೂ ಸ್ವೀಕರಿಸುವಾಗ, ಅಲುಗಾಡದ ಮತ್ತು ತುಂಡಾಗದ ಒಂದು ವೇದಿಕೆಗೆ ನೀವು ಪ್ರವೇಶಿಸುವಿರಿ.

ಪ್ರಶ್ನೆ: ಗುರುದೇವ, ವಿವಾಹ ವಿಚ್ಛೇದನ ಪಡೆಯುವುದು ಆಧ್ಯಾತ್ಮಿಕ ಪಥದಲ್ಲಿ ಒಂದು ಅಡ್ಡಿಯಾಗುವುದೇ? ವಿವಾಹವಾದಂದಿನಿಂದ ನಾನು ನನ್ನ ಜೀವನದ ಬಗ್ಗೆ ಬಹಳ ಅಸಾಮಧಾನಗೊಂಡಿದ್ದೇನೆ.
ಶ್ರೀ ಶ್ರೀ ರವಿ ಶಂಕರ್: ನೋಡು, ನಿನ್ನ ೧೦೦% ವನ್ನು ನೀಡು. ನಿನ್ನ ವಿವಾಹ ಉಳಿದರೆ ಅದು ಒಳ್ಳೆಯದು. ಅಲ್ಲವಾದರೆ, ನೀವಿಬ್ಬರೂ ದುಃಖಿತರಾಗಿದ್ದರೆ ಮತ್ತು ಅಲ್ಲಿ ಲವಮಾತ್ರದ ಆನಂದವೂ ಇಲ್ಲವಾದರೆ, ಆಗ ಅಂತಹ ಒಂದು ದುಃಖದ ಸ್ಥಿತಿಗೆ ಜೋತುಬೀಳುವುದರಲ್ಲಿ ಅರ್ಥವಿಲ್ಲ. ಆಗ ಸ್ನೇಹಭಾವದಿಂದ ನೀವಿಬ್ಬರೂ ಪರಸ್ಪರರಿಗೆ ಹೇಳಬೇಕು, "ನೀನು ನಿನ್ನ ದಾರಿಯಲ್ಲಿ ಸಾಗು ಮತ್ತು ಹಾಗಿದ್ದರೂ ನಾವು ಸ್ನೇಹಿತರಾಗಿಯೇ ಇರೋಣ."
ನಾನು ಹೇಳಿದಂತೆ, ಯಾವುದೇ ಆವೇಗದ ಭಾವನೆಯೊಂದಿಗೆ ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಒಂದು ಶಾಂತವಾದ ಹಾಗೂ ಕ್ರೋಡೀಕೃತ ಮನಸ್ಸಿನಿಂದ ಯೋಚಿಸಿ ಮತ್ತು ನಿಮಗೇನು ಬೇಕು ಎಂಬುದನ್ನು ನೋಡಿ.

ಪ್ರಶ್ನೆ: ನಾವು ಭೂಮಿಗೆ ಬರುವುದು ಪ್ರೀತಿಯನ್ನು ಅನುಭವಿಸಲು ಮಾತ್ರವೆಂದೂ, ಸ್ವರ್ಗದಲ್ಲಿ ಪ್ರೀತಿಯಿಲ್ಲವೆಂದೂ ಹೇಳಲಾಗುತ್ತದೆ. ಹಾಗಾದರೆ ಎಲ್ಲರೂ ಸ್ವರ್ಗಕ್ಕೆ ಹೋಗಲು ಬಯಸುವುದು ಯಾಕೆ?
ಶ್ರೀ ಶ್ರೀ ರವಿ ಶಂಕರ್: ಅದು ಯಾಕೆಂದರೆ ಅವರಿಗೆ ಪ್ರೀತಿ ತಿಳಿದಿಲ್ಲ. ಅವರು ಪ್ರೀತಿಗಾಗಿ ಹಾತೊರೆಯುತ್ತಿರುವರು, ಆದರೆ ಅವರು ಪ್ರೀತಿಯನ್ನು ಅನುಭವಿಸಿಲ್ಲ. ಒಮ್ಮೆ ಅವರಿಗೆ ದೈವಿಕ ಪ್ರೀತಿಯ ರುಚಿ ಸಿಕ್ಕರೆ, ಆಗ ಅವರಿಗೆ ಈ ಅಪಾರ ತೃಪ್ತಿಯು ಸಿಗುತ್ತದೆ. ನಾರದ ಭಕ್ತಿ ಸೂತ್ರದಲ್ಲಿ ನಾರದರು ಹೇಳಿದ್ದಾರೆ, ’ತೃಪ್ತೋ ಭವತಿ’ , ಒಮ್ಮೆ ದೈವಿಕ ಪ್ರೇಮವನ್ನು ಅನುಭವಿಸಿದ ಬಳಿಕ ಒಬ್ಬನು ಬಹಳ ತೃಪ್ತನಾಗುವನು.

ಪ್ರಶ್ನೆ: ಪ್ರೀತಿಯ ಗುರುದೇವ, ನಿನ್ನೆ ನೀವು, ’ಸಮಚಿತ್ತತೆಯೊಂದಿಗೆ ಹೋರಾಡಿ’ ಎಂದು ಹೇಳಿದ್ದಿರಿ. ನಾವದನ್ನು ಮಾಡುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ನಿನ್ನಲ್ಲಿ ಕೇವಲ ಆ ಉದ್ದೇಶ ಇರಬೇಕು ಮತ್ತು ಅದು ಆಗಲು ತೊಡಗುತ್ತದೆ. ನೀವು ಒಂದು ಉದ್ದೇಶಕ್ಕಾಗಿ ಹೋರಾಡುವಾಗ ಮತ್ತು ಒಬ್ಬರ ಮೇಲಿನ ದ್ವೇಷದ ಕಾರಣದಿಂದ ಅಲ್ಲವಾಗಿರುವಾಗ, ಆಗ ನಿಮ್ಮ ಮೆದುಳು ಹಾಗೂ ನಿಮ್ಮ ಮನಸ್ಸು ಜಾಗರೂಕವಾಗಿರುತ್ತದೆ.
ಜನರು ಕ್ರೋಧದಲ್ಲಿ ಮತ್ತು ದ್ವೇಷದಲ್ಲಿರುವಾಗ, ಅವರ ಮೆದುಳು ಕೆಲಸ ಮಾಡುವುದಿಲ್ಲ; ಅಥವಾ ಅದು ತಪ್ಪಾದ ದಿಕ್ಕಿನಲ್ಲಿ ಕೆಲಸ ಮಾಡುತ್ತದೆ.

ಪ್ರಶ್ನೆ: ಗುರುದೇವ, ಒಬ್ಬನು ಅಥವಾ ಒಬ್ಬಳು ತನ್ನ ಪ್ರಾರ್ಥನೆಗಳಲ್ಲಿ ಪ್ರಾಮಾಣಿಕವಾಗಿರುವಾಗ ಉತ್ತರಗಳು ಒಳಗಿನಿಂದ ಬರುತ್ತವೆ. ಆದರೆ ಯಾವುದು ಸರಿಯಾದ ಉತ್ತರ ಮತ್ತು ಯಾವುದು ಕಲ್ಪನೆಯೆಂಬ ವ್ಯತ್ಯಾಸವನ್ನು ತಿಳಿಯುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಸಮಯವು ನಿನಗೆ ಹೇಳುತ್ತದೆ.

ಪ್ರಶ್ನೆ: ಗುರುದೇವ, ನಾನು ನನ್ನ ಯಮ್.ಟೆಕ್ ಪರೀಕ್ಷೆಗಳನ್ನು ಬರೆದಿದ್ದೇನೆ. ಅದು ಬಹಳ ಸ್ಪರ್ಧಾತ್ಮಕವಾದುದು. ನನಗೆ ಇಷ್ಟವಿರುವ ಕಾಲೇಜಿನಲ್ಲಿ ನನಗೆ ಪ್ರವೇಶ ಸಿಗದಿದ್ದರೆ ಏನು ಮಾಡುವುದು? ನನ್ನ ಜೀವನವು ಹಾಳಾಗುವುದು. ಒಂದು ಒಳ್ಳೆಯ ಕಾಲೇಜಿಗೆ ಪ್ರವೇಶ ದೊರೆಯದಿದ್ದರೆ, ಆಗಲೂ ಕೂಡಾ ನಾನು ಜೀವನದಲ್ಲಿ ಯಶಸ್ವಿಯಾಗಬಹುದೇ?
ಶ್ರೀ ಶ್ರೀ ರವಿ ಶಂಕರ್: ಖಂಡಿತಾ! ನಾನು ಹೇಳುವುದೇನೆಂದರೆ, ನಿನ್ನ ಎಲ್ಲಾ ಯಶಸ್ಸನ್ನು ಒಂದು ಚಿಕ್ಕ ಘಟನೆಗೆ, ಅಥವಾ ಜೀವನದಲ್ಲಿನ ಒಂದು ಚಿಕ್ಕ ಆಗುವಿಕೆಗೆ ಹಾಕಬೇಡ. ನಿನ್ನ ಜೀವನದ ಒಂದು ಮಗ್ಗುಲಿನಲ್ಲಿ ಸೋಲು ಬಂದರೂ ಕೂಡಾ ನೀನು ನಿಜವಾಗಿ ಯಶಸ್ವಿಯಾಗಬಹುದು.

ಪ್ರಶ್ನೆ: ಗುರುದೇವ, ನನಗೆ ಹೊಸ ವಿಷಯಗಳನ್ನು ಕಲಿಯಲು ಮತ್ತು ಮನದಟ್ಟು ಮಾಡಿಕೊಳ್ಳಲು ಸಾಧ್ಯವಾಗುತ್ತದೆ, ಆದರೆ ನನ್ನ ಉತ್ಸಾಹವು ಅರ್ಧದಲ್ಲಿಯೇ ಕುಂದಿಹೋಗುತ್ತದೆ. ಅದರ ಫಲವಾಗಿ ನಾನು ಎಲ್ಲಾ ವಹಿವಾಟನ್ನು ಬಲ್ಲವ ಮತ್ತು ಯಾವುದರಲ್ಲೂ ನಿಷ್ಣಾತನಲ್ಲದವನಾಗಿದ್ದೇನೆ. ನಾನು ನಿಮ್ಮಂತೆ ಎಲ್ಲದರಲ್ಲೂ ನಿಷ್ಣಾತನಾಗುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ನಿಲ್ಲದೇ ಹೋಗುತ್ತಾ ಇರು. ನಿನ್ನ ಪ್ರಯತ್ನವನ್ನು ಹಾಕುತ್ತಾ ಇರು. ಜೀವನವು, ಪ್ರಯತ್ನ ಮತ್ತು ಪ್ರಯತ್ನವಿಲ್ಲದಿರುವಿಕೆ ಇವೆರಡರ ಒಂದು ಸಂಯೋಗವಾಗಿದೆ. ಪ್ರತಿದಿನವೂ ಕನಿಷ್ಠಪಕ್ಷ ಸ್ವಲ್ಪ ಸಮಯವಾದರೂ ಸಂಪೂರ್ಣವಾಗಿ ಪ್ರಯತ್ನವಿಲ್ಲದೇ ಇರು - ಅದುವೇ ಧ್ಯಾನ ಮತ್ತು ನಂತರ ನೂರು ಶೇಕಡಾ ಪ್ರಯತ್ನವನ್ನು ಹಾಕು. ಅದು ಆಳವಾದ ವಿಶ್ರಾಂತಿ ಮತ್ತು ಕ್ರಿಯಾತ್ಮಕ ಚಟುವಟಿಕೆಯ ಹಾಗೆ.
ಈಗ, ನೀನು ವಿಶ್ರಾಂತಿ ತೆಗೆದುಕೊಳ್ಳದೇ ಇದ್ದರೆ, ಆಗ ನಿನ್ನ ಚಟುವಟಿಕೆಯು ಕ್ರಿಯಾತ್ಮಕವಾಗಿರಲು ಸಾಧ್ಯವಿಲ್ಲ. ನಿನ್ನಲ್ಲಿ ನಿರ್ಲಿಪ್ತತೆ ಇಲ್ಲದಿದ್ದರೆ, ಆಗ ನಿನ್ನಲ್ಲಿ ನಿಜವಾಗಿ ಸಂಪೂರ್ಣವಾದ ಅನುರಾಗವಿರಲೂ ಸಾಧ್ಯವಿಲ್ಲ. ಆದುದರಿಂದ, ಜೀವನವು ಈ ವಿರೋಧಾತ್ಮಕಗಳ ಸಂಯೋಗವಾಗಿದೆ - ಅನುರಾಗ ಮತ್ತು ನಿರ್ಲಿಪ್ತತೆ; ಪ್ರಯತ್ನವಿಲ್ಲದಿರುವಿಕೆ ಮತ್ತು ನೂರು ಶೇಕಡಾ ಪ್ರಯತ್ನ.

ಪ್ರಶ್ನೆ: ಚಂದ್ರನು ಭೂಮಿಯ ಸುತ್ತಲೂ ಸುತ್ತುತ್ತಾನೆ, ಭೂಮಿಯು ಸೂರ್ಯನ ಸುತ್ತಲೂ ಸುತ್ತುತ್ತದೆ, ಕೆಲವರು ಹಣ ಮತ್ತು ಅಧಿಕಾರಗಳ ಸುತ್ತಲೂ ಸುತ್ತುತ್ತಾರೆ. ಈಗ ನಾನು ನಿಮ್ಮ ಸುತ್ತಲೂ ಸುತ್ತುತ್ತಿರುವುದು ಕಂಡುಬರುತ್ತದೆ. ಈ ಸುತ್ತುವುದರ ಮಹತ್ವವೇನು?
ಶ್ರೀ ಶ್ರೀ ರವಿ ಶಂಕರ್: ಈಗ ನೀನೇನು ಮಾಡುತ್ತಿರುವೆಯೆಂಬುದನ್ನು ನೀನು ಕಂಡುಕೊಂಡಿರುವೆಯಾದ್ದರಿಂದ, ಅದರ ಮಹತ್ವವೇನೆಂಬುದನ್ನು ಮತ್ತು ನೀನದನ್ನು ಯಾಕೆ ಮಾಡುವಿಯೆಂಬುದನ್ನು ನೀನೇ ವಿವರಿಸು. ನನಗನ್ನಿಸುತ್ತದೆ, ಭೂಮಿಗೆ ಸೂರ್ಯನ ಕಡೆಗಿರುವ ಆಕರ್ಷಣೆಯಿಂದಾಗಿ ಅದು ಸೂರ್ಯನ ಸುತ್ತಲೂ ಹೋಗುತ್ತಿದೆಯೆಂದು ಮತ್ತು ಚಂದ್ರನಿಗೆ ನಮ್ಮ ಕಡೆಗೆ ಆಕರ್ಷಣೆಯಿದೆ, ಆದುದರಿಂದ ಅದು ಭೂಮಿಯ ಸುತ್ತಲೂ ಹೋಗುತ್ತಿದೆಯೆಂದು.

ಪ್ರಶ್ನೆ: ಗುರುವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಮತ್ತು ಗುರುವಿನಿಂದ ಜ್ಞಾನವನ್ನು ಪಡೆದುಕೊಳ್ಳಬೇಕಾದರೆ ಒಬ್ಬ ಶಿಷ್ಯನು ಗುರುವಿನೊಂದಿಗೆ ಹೇಗಿರಬೇಕು?
ಶ್ರೀ ಶ್ರೀ ರವಿ ಶಂಕರ್: ಸಹಜತೆಯಿಂದ. ನಿಮ್ಮ ಅತೀ ಹತ್ತಿರದವರೊಂದಿಗೆ ನೀವು ಹೇಗಿರುವಿರೋ ಅದೇ ರೀತಿಯಲ್ಲಿ ನೀವು ಒಬ್ಬರು ಗುರುವಿನೊಂದಿಗಿರಬೇಕು; ಅಂದರೆ ಸಹಜತೆಯೊಂದಿಗೆ.