ಬುಧವಾರ, ಡಿಸೆಂಬರ್ 26, 2012

ಮನಸ್ಸು ಮಿತ್ರನೇ ಅಥವಾ ಶತ್ರುವೇ?

೨೬ ಡಿಸೆಂಬರ್ ೨೦೧೨
ಬಾಡ್ ಆಂಟಗಾಸ್ಟ್, ಜರ್ಮನಿ

ಪ್ರಶ್ನೆ: ನನಗೆ ತೊಂದರೆಯನ್ನುಂಟುಮಾಡುವ ಮನಸ್ಸನ್ನು ಸೋಲಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಅದು ಅದರ ಸ್ವಭಾವ. ನೀನು ಮನಸ್ಸಿಗಿಂತ ದೊಡ್ಡವನು ಎಂಬುದು ನಿನಗೆ ತಿಳಿದಿದೆಯೇ? ಎಚ್ಚೆತ್ತುಕೋ. ಮನಸ್ಸು ಅಲ್ಲಿರಲಿ ಬಿಡು.

ಪ್ರಶ್ನೆ: ಗುರುದೇವ, ನಾನು ನನ್ನ ಆತ್ಮ-ಸಂಗಾತಿಯನ್ನು ಗುರುತಿಸುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಮೊದಲು ನೀನು ನಿನ್ನ ಆತ್ಮವನ್ನು ಗುರುತಿಸಿಕೊಳ್ಳಬೇಕು ಮತ್ತು ನಂತರ ನಿನ್ನ ಆತ್ಮ-ಸಂಗಾತಿಯನ್ನು. ನಿನಗೆ ನಿನ್ನ ಬಗ್ಗೆ ತಿಳಿದಿಲ್ಲ, ನೀನು ಯಾರೆಂಬುದು ನಿನಗೆ ತಿಳಿಯದು. ನಿನಗೆ ನಿನ್ನ ಬಗ್ಗೆ ಏನೂ ತಿಳಿಯದು. ನಿನಗೆ ನಿನ್ನ ಮನಸ್ಸು ತಿಳಿಯದು; ನಿನ್ನದೇ ಮನಸ್ಸು ನಿನ್ನನ್ನು ಹುಚ್ಚನನ್ನಾಗಿಸುತ್ತದೆ. ಒಂದು ನಿಮಿಷ ಅದು ಏನನ್ನೋ ಬಯಸುತ್ತದೆ ಮತ್ತು ಮುಂದಿನ ನಿಮಿಷ ಅದು ಬೇರೇನನ್ನೋ ಬಯಸುತ್ತದೆ. ಮನಸ್ಸು ತನ್ನ ಮನಸ್ಸನ್ನು ಎಲ್ಲಾ ಸಮಯದಲ್ಲೂ ಬದಲಾಯಿಸುತ್ತಾ ಇರುತ್ತದೆ ಮತ್ತು ಅದು ಸಿಕ್ಕಿಹಾಕಿಕೊಳ್ಳುತ್ತದೆ.
ಅದಕ್ಕಾಗಿಯೇ ಭಗವದ್ಗೀತೆಯಲ್ಲಿ ಒಂದು ಮಾತಿದೆ, "ನಿನ್ನ ಬಂಧನ ಮತ್ತು ನಿನ್ನ ಮೋಕ್ಷಕ್ಕೆ ಜವಾಬ್ದಾರವಾಗಿರುವುದು ನಿನ್ನದೇ ಮನಸ್ಸು, ಬೇರೇನೂ ಅಲ್ಲ."
ನಿಮ್ಮದೇ ಮನಸ್ಸು, ಅದು ನಿಮ್ಮ ಮಿತ್ರನಂತೆ ವರ್ತಿಸಿದರೆ, ಅದು ನಿಮ್ಮ ಶತ್ರುವಿನಂತೆ ಕೂಡಾ ವರ್ತಿಸುತ್ತದೆ. ಸಾಧನೆಯ (ಆಧ್ಯಾತ್ಮಿಕ ಅಭ್ಯಾಸಗಳು) ಮೂಲಕ ನಿಮ್ಮ ಮನಸ್ಸನ್ನು ಚೆನ್ನಾಗಿ ತರಬೇತುಗೊಳಿಸಿದರೆ, ಅದು ನಿಮ್ಮ ಸ್ನೇಹ ಬೆಳೆಸುತ್ತದೆ ಮತ್ತು ಅದು ನಿಮಗೆ ಸಹಾಯ ಮಾಡುತ್ತದೆ. ಅಲ್ಲದಿದ್ದರೆ ನಿಮ್ಮ ಸ್ವಂತ ಮನಸ್ಸು ಒಂದು ಶತ್ರುವಿನಂತೆ ವರ್ತಿಸುತ್ತದೆ. ಇದು ಬಹಳ ಸರಿಯಾದುದು ಅಲ್ಲವೇ? ಇದು ಎಷ್ಟೊಂದು ನಿಜ!
ಕಳೆದ ವಾರ, ನಾನು ಇಲ್ಲಿಗೆ ಬರುವುದರ ಸ್ವಲ್ಪ ಮೊದಲು ನಡೆದ ಘಟನೆಯೊಂದನ್ನು ನಾನು ನಿಮಗೆ ಹೇಳಲು ಬಯಸುತ್ತೇನೆ. ಆಶ್ರಮದ ಎದುರು ನಮ್ಮದೊಂದು ಆಶ್ರಮದ ನಾಮಫಲಕವಿದೆ. ಏನಾಯಿತೆಂದರೆ, ಒಂದು ನಿರ್ದಿಷ್ಟ ರಾಜಕೀಯ ಪಕ್ಷದವರು, ಅವರ ಜನರು ಬಂದು ಆ ನಾಮಫಲಕದ ಮೇಲೆ ತಮ್ಮ ಭಿತ್ತಿಪತ್ರಗಳನ್ನು ಹಾಕಿದರು, ಕೇವಲ ತುಂಟತನ ಸೃಷ್ಟಿಸಲು. ಅವರು ದೊಡ್ಡ ಭಿತ್ತಿಪತ್ರಗಳನ್ನು ಹಾಕಿದ್ದರು, ಯಾಕೆಂದರೆ ಆ ರಾಜಕೀಯ ಪಕ್ಷದ ಮುಖಂಡನ ಜನ್ಮದಿನಾಚರಣೆಯಿತ್ತು. ಆದುದರಿಂದ ನಮ್ಮ ಭದ್ರತೆಯವರು ಮತ್ತು ಇತರರು ಸಹಜವಾಗಿ ಅದನ್ನು ಕೆಳಕ್ಕೆಳೆದರು ಯಾಕೆಂದರೆ, ಆಶ್ರಮಕ್ಕೆ ಬರುವ ಜನರಿಗೆ ನಾಮಫಲಕ ಕಾಣಿಸುತ್ತಿರಲಿಲ್ಲ ಮತ್ತು ಎಲ್ಲಿಗೆ ಹೋಗಬೇಕೆಂಬುದು ತಿಳಿಯುತ್ತಿರಲಿಲ್ಲ.
ಈಗ, ಪಕ್ಷದ ಸ್ಥಳೀಯ ನಾಯಕನು ಬಹಳ ಕೋಪಗೊಂಡನು ಮತ್ತು ಅವನು, "ನಾನು ಬಹಳ ಜನರನ್ನು ಕರೆದುಕೊಂಡು ಬರುತ್ತೇನೆ ಮತ್ತು ನಾವೊಂದು ಧರಣಿ ಮಾಡುತ್ತೇವೆ. ಅದರ ಮುಂದೆ ನಾವು ಉಪವಾಸ ಸತ್ಯಾಗ್ರಹ ಮಾಡುತ್ತೇವೆ" ಎಂದು ಚೀರಾಡಲು ಮತ್ತು ನಮ್ಮ ಶಿಕ್ಷಕರಲ್ಲೊಬ್ಬರನ್ನು ಹೆದರಿಸಲು ತೊಡಗಿದನು, ಹಾಗೂ ದೊಡ್ಡ ವಾಗ್ಯುದ್ಧವೇ ನಡೆಯಿತು. ನಮ್ಮ ಭದ್ರತಾ ಸಿಬ್ಭಂದಿಗಳೂ ಕೂಡಾ ಹೇಳಿದರು, "ಸರಿ, ನೀವು ಬನ್ನಿ. ನೋಡೋಣ, ನಾವು ಕೂಡಾ ಬಹಳ ಬಲಶಾಲಿಗಳು."
ಹಾಗೆ, ಇನ್ನೊಂದು ಕಾರ್ಯಕ್ರಮಕ್ಕಾಗಿ ನಾನು ನಗರಕ್ಕೆ ಪ್ರಯಾಣಿಸುತ್ತಿದ್ದಾಗ, ನನ್ನ ಕಾರ್ಯದರ್ಶಿಯು ನನಗೆ ಈ ಕಥೆಯನ್ನು ಹೇಳಿದನು. ನಾನು ಅವನಿಗಂದೆ, "ಈ ಸ್ಥಳೀಯ ನಾಯಕನನ್ನು ಕರೆದು ಅವನೊಂದಿಗೆ ಮಾತನಾಡು."
ಹಾಗೆ ನನ್ನ ಕಾರ್ಯದರ್ಶಿಯು ಅವನನ್ನು ಕರೆದು, ಅವನಿಗೆ ಹೇಳಿದನು, "ಗುರುದೇವ ಈಗಷ್ಟೇ ಬಂದಿದ್ದಾರೆ, ನೀನು ಬುಟ್ಟಿ ತುಂಬಾ ಹಣ್ಣುಗಳನ್ನು, ಒಂದು ಹೂವಿನ ಹಾರವನ್ನು ಮತ್ತು ಒಂದು ಶಾಲನ್ನು ಜನ್ಮದಿನವನ್ನಾಚರಿಸುತ್ತಿರುವ ವ್ಯಕ್ತಿಗೆ ತೆಗೆದುಕೊಂಡು ಹೋಗಿ, ಅವನಿಗೆ ಗುರುದೇವರ ಕಡೆಯಿಂದ ಆಶೀರ್ವಾದಗಳನ್ನು ನೀಡಬೇಕೆಂದು ಗುರುದೇವರು ಬಯಸುತ್ತಾರೆ", ಮತ್ತು ಅವನು ಒಪ್ಪಿದನು.
ನಂತರ ಅವನು ಕೇಳಿದನು, "ಅವರು ಯಾಕೆ ನಮ್ಮ ಭಿತ್ತಿಪತ್ರಗಳನ್ನು ಹೊರಕ್ಕೆಳೆದರು?"
ನನ್ನ ಕಾರ್ಯದರ್ಶಿಯು ಮುಗ್ಧನಂತೆ ನಟಿಸುತ್ತಾ ಹೇಳಿದನು, "ಓ, ನಿಮಗೇನಾದರೂ ಕಷ್ಟವಾಯಿತೇ?! ನೀವು ಯಾಕೆ ನನಗೆ ಹೇಳಲಿಲ್ಲ? ನೀವು ನನಗೆ ತಿಳಿಸಬೇಕಿತ್ತು. ಗುರುದೇವರು ಈಗಷ್ಟೇ ಬಂದಿದ್ದಾರೆ, ಅವರೊಂದು ಯಾತ್ರೆಯಲ್ಲಿದ್ದರು. ಒಂದು ಜನ್ಮದಿನಾಚರಣೆಯಿದೆಯೆಂಬುದಾಗಿ ಅವರು ಕೇಳಿದರು ಮತ್ತು ಅವರು ಆಶೀರ್ವಾದವನ್ನು ಕಳುಹಿಸಲು ಬಯಸುತ್ತಾರೆ. ಆದುದರಿಂದ ನೀವು ಹೋಗಿ ಈ ವಸ್ತುಗಳನ್ನು ನಿಮ್ಮ ಮುಖಂಡರಿಗೆ ಕೊಡಿ ಮತ್ತು ಅವರಿಗೆ ಆಶೀರ್ವಾದಗಳನ್ನು ನೀಡಿ."
ಸಂಪೂರ್ಣ ಪರಿಸ್ಥಿತಿಯು ತಿಳಿಯಾಯಿತು ಮತ್ತು ತಾನು ಬಹಳ ಶಕ್ತನಾಗಿರುವಂತೆ ಅವನಿಗನ್ನಿಸಿತು. ಈಗ ಅವನು, ನನ್ನಿಂದ ಒಂದು ಹಾರ ಮತ್ತು ಆಶೀರ್ವಾದವನ್ನು ತೆಗೆದುಕೊಂಡು ತನ್ನ ಮುಖಂಡನ ಬಳಿಗೆ ಹೋಗಬಹುದಿತ್ತು ಮತ್ತು ಪಕ್ಷದ ತನ್ನ ಮುಖಂಡನ ಬಳಿಗೆ ಹೋಗಲು ಪ್ರವೇಶಾಧಿಕಾರವೂ ಕೂಡಾ ಲಭಿಸಿತು.
ಅವನು ಮಾಡಲು ಹೊರಟಿದ್ದ ಎಲ್ಲಾ ದೊಡ್ಡ ನಾಟಕವೂ ಒಂದು ದೂರವಾಣಿ ಕರೆಯೊಂದಿಗೆ ಅಂತ್ಯವಾಯಿತು. ಅವನು ತನ್ನ ಪಕ್ಷದ ಮುಖಂಡನ ಬಳಿಗೆ ಹೆಮ್ಮೆಯಿಂದ ಹೋಗಿ, "ಗುರುದೇವರು ನಿಮಗೆ ಒಂದು ಹೂವಿನ ಹಾರವನ್ನು ಕೊಡಲು ನನ್ನನ್ನು ಕಳುಹಿಸಿದ್ದಾರೆ" ಎಂದು ಹೇಳಲು ಸಾಧ್ಯವಾಯಿತು.
ಹೀಗೆ, ತಾನು ಪ್ರಬಲನೆಂದು ಅವನಿಗನ್ನಿಸಿತು ಮತ್ತು ನಮ್ಮ ಜನರಿಗೆ ನಿರಾಳವಾಯಿತು.
ನೋಡಿ, ಘರ್ಷನೆಗಳನ್ನು ತಿಳಿ ಮಾಡುವುದು ಹೇಗೆಂಬುದು ನಿಮಗೆ ತಿಳಿದಿರುವಾಗ, ಅದು ಸುಲಭ. ಬೆಲೆತೆರಬೇಕಾಗಿ ಬಂದುದು ಕೇವಲ ದೂರವಾಣಿ ಕರೆಯದ್ದು ಮಾತ್ರ. ಆದರೆ ಒಂದು ಉಪಾಯವು ಎಲ್ಲೆಡೆಯೂ ಕೆಲಸ ಮಾಡುವುದಿಲ್ಲ. ಬೇರೆ ಬೇರೆ ಸ್ಥಳಗಳಲ್ಲಿ ನೀವು ಬೇರೆ ಬೇರೆ ರೀತಿ ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ನೀವು ಕಠಿಣವಾದ ನಿಲುವನ್ನು ತೆಗೆದುಕೊಳ್ಳಬೇಕಾಗುತ್ತದೆ, ನಿಮ್ಮ ಧೃಡವಾಗಿ, ಇಲ್ಲವೆಂದು  ಹೇಳಬೇಕಾಗುತ್ತದೆ. ಕೆಲವೊಮ್ಮೆ ನೀವು ವ್ಯಾವಹಾರಿಕ ಕುಶಲತೆಯಿಂದ ಮತ್ತು ಜಾಣ್ಮೆಯಿಂದಿರಬೇಕಾಗುತ್ತದೆ.
ಯಾವತ್ತೂ ಉಪಟಳ ಸೃಷ್ಟಿಸುವ ಜನರಿರುತ್ತಾರೆ. ಅಂತಹ ಎಲ್ಲಾ ಪರಿಸ್ಥಿತಿಗಳನ್ನು ನಿಭಾಯಿಸುವ ಕುಶಲತೆಯು ನಿಮ್ಮಲ್ಲಿರಬೇಕು.
ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ನಾಲ್ಕು ಮಾರ್ಗಗಳಿವೆ ಎಂದು ಪ್ರಾಚೀನ ಜನರು ಹೇಳಿದ್ದಾರೆ - ಸಾಮ, ದಾನ, ಭೇದ ಮತ್ತು ದಂಡ.
೧. ಸಾಮ ಎಂದರೆ, ಮಾತುಕತೆಯೊಂದಿಗೆ, ಮನವೊಲಿಕೆಯೊಂದಿಗೆ, ಸ್ವಲ್ಪ ಚರ್ಚೆ ಮತ್ತು ಸಂಪರ್ಕದೊಂದಿಗೆ.
೨. ದಾನ ಎಂದರೆ ಕ್ಷಮಿಸುವುದು. ’ಪರವಾಗಿಲ್ಲ, ಪ್ರತಿಯೊಬ್ಬರೂ ತಪ್ಪುಗಳನ್ನು ಮಾಡುತ್ತಾರೆ’, ಮತ್ತು ಹಾಗೆ ನೀವು ಅವರಿಗೆ ಒಂದು ಅವಕಾಶವನು ನೀಡುವಿರಿ.
೩. ಭೇದ ಅಂದರೆ ಸಮಭಾವದಲ್ಲಿರುವುದು. ಸ್ವಲ್ಪ ಖಡಾಖಂಡಿತವಾಗಿ ಒಂದು ವಿಷಯವನ್ನು ತಿಳಿಸುವುದು.
೪.  ದಂಡ ಎಂದರೆ ಒಂದು ಕೋಲನ್ನು ತೆಗೆದುಕೊಳ್ಳುವುದು. ಅದು ಕಡೆಯ ಆಶ್ರಯ. ಸಾಧಾರಣವಾಗಿ ನಾವು ಕಡೆಯ ಎರಡು ಮಾರ್ಗಗಳನ್ನು ಪ್ರಾರಂಭದಲ್ಲೇ ಉಪಯೋಗಿಸುತ್ತೇವೆ. ನಾವು ಸಾಮರಸ್ಯದ ಪಥದೊಂದಿಗೆ ಹೋಗುವುದಿಲ್ಲ. ನೀವು ಮೊದಲು ಸಾಮರಸ್ಯದ ಪಥವನ್ನು ತೆಗೆದುಕೊಳ್ಳಬೇಕು ಮತ್ತು ನಂತರ ಒಂದು ಅವಕಾಶವನ್ನು ಕೊಡಬೇಕು, ಮತ್ತು ನಂತರ ವಿವೇಚಿಸಬೇಕು ಮತ್ತು ಅಂತಿಮವಾಗಿ, ಯಾವುದೂ ಕೆಲಸ ಮಾಡದಿದ್ದರೆ, ದಂಡ, ಅಂದರೆ ಕೋಲು ಹಿಡಿಯುವುದು.
ಇವುಗಳು, ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲಿರುವ ನಾಲ್ಕು ಕುಶಲತೆಯ ಮಾರ್ಗಗಳೆಂದು ಕರೆಯಲ್ಪಡುತ್ತವೆ.

ಪ್ರಶ್ನೆ: ಗುರುದೇವ, ನಾವು ಜನರಿಗೆ ವಿವರಣೆಗಳನ್ನು ನೀಡಬಾರದೆಂದು ನೀವು ಹೇಳಿರುವಿರಿ. ಆದರೆ ನಮ್ಮ ಹೃದಯದಲ್ಲಿ ಭಾರವಾದುದೇನಾದರೂ ಇದ್ದು ಅದರ ಬಗ್ಗೆ ಮಾತನಾಡುವುದು ಅಗತ್ಯವೆಂದು ಅನ್ನಿಸಿದರೆ, ಆಗ ಏನು ಮಾಡುವುದು?
ಶ್ರೀ ಶ್ರೀ ರವಿ ಶಂಕರ್: ಅದಕ್ಕಾಗಿ ಒಂದು ನಿಯಮವಿಲ್ಲ. ಕೆಲವೊಮ್ಮೆ ನೀವು ಮಾತನಾಡಲು ಬಯಸುವಿರಿ ಮತ್ತು ಶಾಂತರಾಗುವಿರಿ ಹಾಗೂ ಕೆಲವೊಮ್ಮೆ ಮಾತನಾಡುವುದರಿಂದ ಯಾವುದೇ ರೀತಿಯ ಸಹಾಯವೂ ಆಗುವುದಿಲ್ಲ.
ಎಚ್ಚೆತ್ತುಕೊಳ್ಳಿ ಮತ್ತು ನೋಡಿ, ಸಂಪೂರ್ಣ ಜಗತ್ತು ಒಂದು ಕನಸಿನಂತೆ. ಆ ಎಲ್ಲಾ ಯೋಚನೆಗಳು ಹೋಗಿವೆ, ಜನರ ವರ್ತನೆಗಳು ಮಾಯವಾಗುವುವು. ಕೆಲವು ಜನರು ಚೆನ್ನಾಗಿ ವರ್ತಿಸುತ್ತಾರೆ ಮತ್ತು ಕೆಲವರು ಕೆಟ್ಟದಾಗಿ ವರ್ತಿಸುತ್ತಾರೆ, ಆದರೆ ಪ್ರತಿಯೊಬ್ಬರೂ ಸಾಯಲಿದ್ದಾರೆ ಮತ್ತು ಜಗತ್ತು ಮುಕ್ತಾಯವಾಗಲಿದೆ.
ಈ ಜನರ ಗುಂಪೆಲ್ಲಾ ದೂರ ಹೋಗಲಿದೆ. ನಂತರ ಹೊಸ ಜನರು ಬರುವರು ಮತ್ತು ಅವರೆಲ್ಲಾ ಸಾಯುವರು. ನಂತರ ಇನ್ನೊಂದು ಜನರ ಗುಂಪು ಬರುವುದು, ಅವರು ತಮ್ಮೊಳಗೆ ಜಗಳ ಮಾಡುವರು, ಅವರು ತಬ್ಬಿಕೊಳ್ಳುವರು, ಪ್ರೀತಿಸುವರು, ಚುಂಬಿಸುವರು, ಎಲ್ಲವನ್ನೂ ಮಾಡುವರು ಮತ್ತು ಅವರೆಲ್ಲರೂ ಸಾಯುವರು.
ಇವತ್ತು ಭೂಗ್ರಹದ ಮೇಲೆ ಏಳು ಬಿಲಿಯನ್ ಜನರಿದ್ದಾರೆ ಮತ್ತು ಈ ಎಲ್ಲಾ ಏಳು ಬಿಲಿಯನ್ ಜನರು ಸಾಯಲಿದ್ದಾರೆ. ಅದು ಕೇವಲ ಕೆಲವೇ ವರ್ಷಗಳ ಮಾತಷ್ಟೆ. ಇನ್ನೊಂದು ನೂರು ವರ್ಷಗಳಲ್ಲಿ, ಅದೇ ಜನರು ಇಲ್ಲಿರುವರೆಂದು ನಿಮಗನಿಸುತ್ತದೆಯೇ? ಇವತ್ತು ಇಲ್ಲಿರುವವರಲ್ಲಿ ಒಬ್ಬ ವ್ಯಕ್ತಿಯೂ ಕೂಡಾ ಜೀವಂತವಾಗಿರುವುದಿಲ್ಲ, ಮತ್ತು ಇನ್ನೂರು ವರ್ಷಗಳ ನಂತರ, ಮೊಮ್ಮಕ್ಕಳು ಕೂಡಾ ಇರುವುದಿಲ್ಲ.
ನೋಡಿ, ಪ್ರಪಂಚವು ಒಂದು ನದಿಯಂತೆ, ಈ ನದಿಯಲ್ಲಿ ಪ್ರತಿಕ್ಷಣವೂ ತಾಜಾ ನೀರು ಹರಿಯುತ್ತಿರುತ್ತದೆ. ನೀವು ಯಾವುದರ ಬಗ್ಗೆ ಅಷ್ಟೊಂದು ಚಿಂತೆ ಮಾಡುವುದು?
ನೀವು ಏನನ್ನಾದರೂ ಹಿಂದೆ ಬಿಟ್ಟು ಹೋಗಲು ಬಯಸುವುದಾದರೆ, ಅದು ಯಾರಿಗಾದರೂ ಸಹಾಯ ಮಾಡಬಹುದಾದ, ಯಾರಿಗಾದರೂ ಪ್ರಯೋಜನವಾಗುವ ಸ್ವಲ್ಪ ಜ್ಞಾನವಾಗಿರಬೇಕು. ಅವನೇನಂದನು, ಅವಳೇನಂದಳು, ಮತ್ತು ಇಂತಿಂತಹ ಪರಿಸ್ಥಿಯ ಬಗ್ಗೆ ನೀವೇನು ಯೋಚಿಸುವಿರಿ - ಇದಲ್ಲ. ಇದೆಲ್ಲಾ ಅವಿವೇಕ! ಅವುಗಳನ್ನೆಲ್ಲಾ ಕಿಟಿಕಿಯಾಚೆಗೆ ಬಿಸಾಡಿ. ಅದಕ್ಕೆ ಯಾವುದೇ ಅರ್ಥವಿಲ್ಲ.
ಗಂಟೆಗಟ್ಟಲೆ ಕಾಲವನ್ನು ನೀವು ವಿವರಣೆ ನೀಡುವುದರಲ್ಲಿ ವ್ಯರ್ಥ ಮಾಡುತ್ತೀರಿ: ನಿಮಗೆ ಅನ್ನಿಸಿದ ರೀತಿಯಲ್ಲಿ ನಿಮಗೆ ಯಾಕೆ ಅನ್ನಿಸಿತು ಹಾಗೂ ಇತರರಿಗೆ ಅನ್ನಿಸುವ ರೀತಿಯಲ್ಲಿ ಅವರಿಗೆ ಹೇಗೆ ಮತ್ತು ಯಾಕೆ ಅನ್ನಿಸಿತು.
ನಿಮಗೆ ಗೊತ್ತಾ, ಸಮಯವು ಬದಲಾಗುವಾಗ, ಮನಸ್ಸು ಕೂಡಾ ಬದಲಾಗುತ್ತದೆ. ಇದರ ಬಗ್ಗೆ ಒಂದು ಸುಂದರವಾದ ವಿಜ್ಞಾನವಿದೆ. ಜ್ಯೋತಿಷ್ಯ ಶಾಸ್ತ್ರದ ಪಟ್ಟಿಯಿಂದ ಕೂಡಾ, ಮನಸ್ಸು ಹೇಗೆ ಸಮಯದೊಂದಿಗೆ ಸಂಬಂಧ ಹೊಂದಿದೆ ಎಂಬುದರ ಬಗ್ಗೆ ಒಂದು ಸುಳಿವು ಸಿಗುತ್ತದೆ.
ಮನಸ್ಸು, ಸಮಯ ಮತ್ತು ಗ್ರಹಗಳ ನಡುವಿನ ಸಂಬಂಧದ ಬಗ್ಗೆ ಯಾವಾಗಲಾದರೂ ನಾವೊಂದು ಶಿಬಿರವನ್ನು ಪ್ರಾರಂಭಿಸೋಣ. ನೋಡಿ, ಜ್ಯೋತಿಷ್ಯ ಶಾಸ್ತ್ರ ಎಂದು ಹೇಳಲು ನಾನು ಬಯಸುವುದಿಲ್ಲ ಯಾಕೆಂದರೆ, ಬಹಳಷ್ಟು ಸಲ ಅದನ್ನು ದುರುಪಯೋಗ ಮಾಡಲಾಗಿದೆ ಮತ್ತು ಅಪಾರ್ಥ ಮಾಡಲಾಗಿದೆ. ಇವತ್ತು ಇದು, ಅತೀ ಹೆಚ್ಚು ಅವ್ಯವಸ್ಥಿತವಾದ ವಿಜ್ಞಾನಗಳಲ್ಲಿ ಒಂದಾಗಿದೆ. ಜ್ಯೋತಿಷ್ಯ ಶಾಸ್ತ್ರವು ಒಂದು ವಿಜ್ಞಾನವೆಂಬುದರಲ್ಲಿ ಸಂದೇಹವಿಲ್ಲ ಆದರೆ ಅದನ್ನು ಎಷ್ಟೊಂದು ತಿರುಚಲಾಗಿದೆಯೆಂದರೆ, ಅದರ ಮೂಲ ಯಾವುದು ಎಂಬುದನ್ನು ಕೂಡಾ ನಿಮಗೆ ನೋಡಲು ಸಾಧ್ಯವಿಲ್ಲ.
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹನ್ನೆರಡು ತಾರಾಪುಂಜಗಳು ಮತ್ತು ಒಂಭತ್ತು ಗ್ರಹಗಳಿವೆ. ಗುರುಗ್ರಹವು, ನೀವು ಹುಟ್ಟಿದ ಸಮಯದಿಂದ ಹಿಡಿದು ಎಂಟನೆಯ ಮನೆಯಲ್ಲಿ ಸಾಗುವಾಗ, ನಿಮ್ಮ ಮನಸ್ಸಿನ ಮೇಲೆ ಅದರ ಪ್ರಭಾವವಾಗುತ್ತದೆ ಎಂದು ಹೇಳಲಾಗಿದೆ. ಅದೇ ರೀತಿಯಲ್ಲಿ, ಶನಿಯು ಎಂಟನೆಯ ಮನೆಯಲ್ಲಿ ಸಾಗುವಾಗ ಅದು, ನಿಮ್ಮ ಭಾವನೆಗಳು ತಲೆಕೆಳಗಾಗುವಂತೆ ಮಾಡುತ್ತದೆ. ಗುರು ಗ್ರಹವು ಎಂಟನೆಯ ಮನೆಯಲ್ಲಿರುವಾಗ, ನೀವು ನಿಮ್ಮೆಲ್ಲಾ ವಿವೇಕವನ್ನು ಕಳೆದುಕೊಳ್ಳುತ್ತೀರಿ. ಆದರೆ ಅದು ಕೇವಲ ಹನ್ನೊಂದು ತಿಂಗಳ ವರೆಗೆ ಮಾತ್ರ, ಮತ್ತು ಈ ಹನ್ನೊಂದು ತಿಂಗಳುಗಳಲ್ಲಿ, ಕೇವಲ ಮೂರು ತಿಂಗಳುಗಳ ವರೆಗೆ ಮಾತ್ರ ಅದು ನಿಮ್ಮನ್ನು ಬಹಳ ದುಃಖಿತರನ್ನಾಗಿ ಮಾಡುವುದು. ನೀವು ಆಳವಾದ ಆಧ್ಯಾತ್ಮಿಕ ಜ್ಞಾನದಲ್ಲಿ ಇಲ್ಲದಿದ್ದಲ್ಲಿ ಮತ್ತು ಅಲ್ಲಿಯವರೆಗೆ ಅಥವಾ ನಿಮಗೆ ಜ್ಞಾನೋದಯವಾಗಿರದೇ ಇದ್ದಲ್ಲಿ, ಇದು ಖಂಡಿತವಾಗಿಯೂ ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವುದು. ಆದರೆ, "ಈ ಮೂರು ತಿಂಗಳುಗಳು ನನ್ನ ಮನಸ್ಸಿನ ಮತ್ತು ಭಾವನೆಗಳ ಮೇಲೆ ಸ್ವಲ್ಪ ಕಷ್ಟವನ್ನು ಹಾಕಲಿವೆ" ಎಂಬುದು ನಿಮಗೆ ತಿಳಿದಿದ್ದರೆ, ಆಗ ನೀವು ಆ ತಿಂಗಳುಗಳಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಏನಾದರೂ ಮಾಡುವುದಿಲ್ಲ.
ಅದೇ ರೀತಿಯಲ್ಲಿ, ಪ್ರತಿ ಎರಡೂವರೆ ದಿನಗಳಿಗೊಮ್ಮೆ ಮನಸ್ಸಿನ ಸ್ಥಿತಿ ಬದಲಾಗುತ್ತದೆ. ನೀವು ದುಖಿತರಾಗಿದ್ದರೆ, ಅದು ಎರಡೂವರೆ ದಿನಗಳಿಗಿಂತ ಜಾಸ್ತಿಯಿರುವುದಿಲ್ಲ. ಅಲ್ಲೊಂದು ವಿರಾಮವಿರುತ್ತದೆ ಮತ್ತು ನಂತರ ಅದು ಪುನಃ ಬರಲೂಬಹುದು.
ಈ ರೀತಿಯಲ್ಲಿ, ಬ್ರಹ್ಮಾಂಡದ ಪ್ರಭಾವವು ಮನಸ್ಸಿನ ಮೇಲಾಗುತ್ತದೆ. ಈ ಪ್ರಭಾವದಿಂದ ನಿಮ್ಮನ್ನು ಯಾವುದು ರಕ್ಷಿಸಬಲ್ಲದೆಂದರೆ, ಅದು ಸತ್ಸಂಗ, ಧ್ಯಾನ, ಮಂತ್ರ ಪಠಣ. ಇವುಗಳೆಲ್ಲಾ ಒಂದು ಕವಚವನ್ನು ತೊಡುವಂತೆ. ಒಂದು ಬಾಣ ಬರುತ್ತಿತ್ತು, ಆದರೆ ನಿಮ್ಮಲ್ಲೊಂದು ಕವಚವಿದೆ, ಆದುದರಿಂದ ಅದು ನಿಮ್ಮನ್ನು ನಿಜವಾಗಿ ಚುಚ್ಚಲಿಲ್ಲ.
ಆದುದರಿಂದ, ಹಲವು ಸಲ ’ಓಂ ನಮಃ ಶಿವಾಯ’ ಎಂದು ಜಪಿಸುವುದು ಮತ್ತು ಹಾಡುವುದು ನಿಮ್ಮ ಸುತ್ತಲೂ ಒಂದು ಕವಚವನ್ನು ಸೃಷ್ಟಿಸುತ್ತದೆ ಮತ್ತು ಈ ಎಲ್ಲಾ ಹುಚ್ಚು ಸಂಗತಿಗಳಿಂದ ನೀವು ಪ್ರಭಾವಿತರಾಗುವುದರಿಂದ ನಿಮ್ಮನ್ನು ರಕ್ಷಿಸುತ್ತದೆ.
ಸಂಪೂರ್ಣ ಪ್ರಪಂಚದ ಕ್ಷೇಮಕ್ಕಾಗಿ ಮತ್ತು ನಮ್ಮೆಲ್ಲಾ ಭಕ್ತರಿಗಾಗಿ ನಾವು ಬೆಂಗಳೂರು ಆಶ್ರಮದಲ್ಲಿ ಯಜ್ಞಗಳನ್ನು ಮಾಡುತ್ತೇವೆ. ಪ್ರತಿ ತಿಂಗಳೂ ಆರು ಸಲ ಒಂದು ಚಿಕ್ಕ ಯಜ್ಞವನ್ನು ಮಾಡಲಾಗುತ್ತದೆ ಮತ್ತು ನವರಾತ್ರಿಯ ಕಾಲದಲ್ಲಿ, ಪ್ರಪಂಚಕ್ಕೆ ಮತ್ತು ನಮ್ಮೆಲ್ಲಾ ಭಕ್ತರಿಗೆ ಶಾಂತಿ, ಸಮೃದ್ಧಿ ಮತ್ತು ರಕ್ಷಣೆಗಳನ್ನು ತರುವುದಕ್ಕಾಗಿ ನಾವೊಂದು ದೊಡ್ಡ ಯಜ್ಞವನ್ನು ಮಾಡುತ್ತೇವೆ.
ಇವುಗಳು ಪ್ರಾಚೀನ ಜನರ ರೀತಿಗಳಾಗಿದ್ದವು. ಭವಿಷ್ಯದಲ್ಲಿ ನಾವು ಇವುಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಮತ್ತು ಕೋರ್ಸುಗಳನ್ನು ನಡೆಸೋಣ.

ಪ್ರಶ್ನೆ: ಆಲೋಚನೆಗಳು ಬರುವುದು ಎಲ್ಲಿಂದ?
ಶ್ರೀ ಶ್ರೀ ರವಿ ಶಂಕರ್: ಈ ಆಲೋಚನೆ ನಿನಗೆ ಈಗಷ್ಟೇ ಬಂತೇ? ಈ ಆಲೋಚನೆ ಎಲ್ಲಿಂದ ಬಂತು? ಅದು ನಿನ್ನಲ್ಲಿ ಬಂತು, ಆದುದರಿಂದ ಅದು ಎಲ್ಲಿಂದ ಬರುವುದೆಂಬುದನ್ನು ನೀನು ಯಾಕೆ ಕುಳಿತುಕೊಂಡು ನೋಡಬಾರದು?
ಆಲೋಚನೆಯ ಮೂಲವು ಯಾವುದೆಂಬುದನ್ನು ನೀವು ಕುಳಿತುಕೊಂಡು ಯೋಚಿಸಿದ ಕ್ಷಣವೇ ಮನಸ್ಸು ಖಾಲಿಯಾಗುತ್ತದೆ. ಆಲೋಚನೆಗಳು ಎಲ್ಲಿಂದ ಬರುವುವು ಎಂಬುದನ್ನು ಅದು ಸೂಚಿಸುತ್ತದೆ. ಆಲೋಚನೆಗಳು, ಉಪಾಯಗಳು ಮತ್ತು ಭಾವನೆಗಳು ಎಲ್ಲಿಂದ ಬರುವುವೋ ಅವುಗಳ ಮೂಲಸ್ಥಾನವು ನೀವೇ ಆಗಿರುವಿರಿ - ಆ ಆಂತರಿಕ ಆಕಾಶ. ಇದು, "ಮೋಡಗಳು ಬರುವುದು ಎಲ್ಲಿಂದ?" ಎಂದು ಯಾರಾದರೂ ಕೇಳುವಂತೆ. ಮೋಡಗಳು ಆಕಾಶದಲ್ಲಿ ಹಾಗೆಯೇ ತೇಲಾಡುತ್ತಿರುತ್ತವೆ. ಅದೇ ರೀತಿಯಲ್ಲಿ, ನಮ್ಮ ಆಂತರಿಕ ಆಕಾಶದಲ್ಲಿ ಮೂರು ಆಕಾಶಗಳಿವೆ - ಒಂದನೆಯದು ಬಾಹ್ಯ ಆಕಾಶ, ಎರಡನೆಯದು ಆಲೋಚನೆಗಳು ಹಾಗೂ ಭಾವನೆಗಳು ಬರುವ ಆಂತರಿಕ ಆಕಾಶ ಮತ್ತು ಒಂದು ಸಾಕ್ಷಿಯಾಗಿರುವ ಮೂರನೆಯ ಆಕಾಶವಿದೆ. ಅಲ್ಲಿ ಏನೂ ಇಲ್ಲ, ಕೇವಲ ಆನಂದ.

ಪ್ರಶ್ನೆ: ಯಾವತ್ತಿಗೂ ಅಚಲ ನಂಬಿಕೆಯನ್ನು ಪಡೆಯುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಅದು ನಿಜವಾದ ನಂಬಿಕೆಯಾದರೆ, ಅಲುಗಾಡಲಿ ಬಿಡು. ಸತ್ಯವು ಯಾವತ್ತಿಗೂ ಹೋಗಲಾರದು ಮತ್ತು ನಂಬಿಕೆಯು ಸತ್ಯದ ಜೊತೆಗಿದ್ದರೆ, ಅದು ಅಲುಗಾಡಲಿ ಬಿಡು. ಅದು ಯಾವತ್ತಿಗೂ ಕಾಣೆಯಾಗಲಾರದು. ವಾಸ್ತವವಾಗಿ, ನೀವು ಎಷ್ಟು ಸಾಧ್ಯವೋ ಅಷ್ಟು ಸಂಶಯಿಸಬೇಕು.
ಒಂದು ವಸ್ತುವು ಅಪ್ಪಟವಾಗಿಲ್ಲದಿರುವಾಗ ಮಾತ್ರ ನಿಮಗೆ, "ಸಂಶಯಿಸಬೇಡ" ಎಂದು ಹೇಳಲು ಸಾಧ್ಯ. ಅದು ಅಪ್ಪಟ ಬಂಗಾರವಾಗಿದ್ದರೆ, ಎಷ್ಟು ಸಾಧ್ಯವೋ ಅಷ್ಟು ಕೆರೆಯುತ್ತಾ ಹೋಗಿ ಎಂದು ನಾನು ಹೇಳುತ್ತೇನೆ. ಆದರೆ ಅದು ಕೇವಲ ಬಂಗಾರದಲ್ಲಿ ಸುತ್ತಿರುವುದಾಗಿದ್ದರೆ ಅಥವಾ ಬಂಗಾರದ ಮೆರುಗು ಹಾಕಿರುವುದಾಗಿದ್ದರೆ, ಆಗ ನೀವು, "ಅತಿಯಾಗಿ ಕೆರೆಯಬೇಡ ಯಾಕೆಂದರೆ ಅದು ಮಾಯವಾಗಬಹುದು" ಎಂದು ಹೇಳುವಿರಿ. ನಿಜವಾದ ಬಂಗಾರದೊಂದಿಗೆ, ಎಷ್ಟೇ ಕೆರೆದರೂ ಅದು ಹೋಗುವುದಿಲ್ಲ.
ಸಂಶಯವೆಂದರೆ ಕೇವಲ ಶಕ್ತಿಯ ಕೊರತೆ. ನಿಮ್ಮಲ್ಲಿ ಶಕ್ತಿಯು ಹೆಚ್ಚಿರುವಾಗ, ಸಂಶಯವೆಲ್ಲಿದೆ? ಸಂಶಯ ಬರುವುದು ಶಕ್ತಿಯು ಕಡಿಮೆಯಾಗಿರುವಾಗ. ನಿಜವಾದ ನಂಬಿಕೆಯೆಂದರೆ, ಯಾವುದನ್ನು ನೀವು ನೂರು ಸಲ ಅಲುಗಾಡಿಸಿದರೂ ಉಳಿಯುವುದೋ ಅದು. ಅದು ನಿಜವಾದ ನಂಬಿಕೆ ಮತ್ತು ಅದು ಉಳಿಯುವುದು.

ಪ್ರಶ್ನೆ: ನಾವು ಆಶ್ರಮಕ್ಕೆ ಬಂದು ಪುನರುಜ್ಜೀವನ ಹೊಂದುತ್ತೇವೆ ಎಂದು ನೀವು ಹೇಳಿರುವಿರಿ - ಪ್ರಪಂಚವು ಯಾಕೆ ಒಂದು ಆಶ್ರಮವಲ್ಲ?
ಶ್ರೀ ಶ್ರೀ ರವಿ ಶಂಕರ್: ನನಗೆ, ಪ್ರಪಂಚವೇ ನನ್ನ ಆಶ್ರಮ. ಯಾವಾಗಲೂ ಧ್ಯಾನಗಳು ನಡೆಯುವ ಒಂದು ಭೌತಿಕ ಸ್ಥಳ ಅಥವಾ ಒಂದು ಆಶ್ರಮವು ಆ ತರಂಗಗಳನ್ನು ಹಿಡಿದಿರಿಸುತ್ತದೆ. ನೋಡಿ ನಿಮ್ಮ ಮನೆಯಲ್ಲಿ, ಊಟ ಮಾಡಲು ಒಂದು ಜಾಗ, ವಿಶ್ರಾಂತಿ ತೆಗೆದುಕೊಳ್ಳಲು ಒಂದು ಜಾಗ ಮತ್ತು ಕಸ ಹಾಕಲು ಒಂದು ಜಾಗವಿದೆ. ಅದರಂತೆಯೇ, ಪ್ರಪಂಚದಲ್ಲಿ, ಎಲ್ಲದಕ್ಕೂ ಒಂದು ಜಾಗವಿದೆ.
ನಿಮ್ಮಲ್ಲಿನ ಪ್ರತಿಯೊಬ್ಬರೂ ನಿಮ್ಮ ಮನೆಯನ್ನು ಒಂದು ಆಶ್ರಮವನ್ನಾಗಿ ಮಾಡಿದರೆ ನನಗೆ ಸಂತೋಷವಾಗುತ್ತದೆ ಮತ್ತು ಆಶ್ರಮವೆಂದರೇನು? ಅದು, ಎಲ್ಲಿ ಜ್ಞಾನವಿರುವುದೋ ಮತ್ತು ಎಲ್ಲಿ ಪ್ರೀತಿಯಿರುವುದೋ ಅಂತಹ ಸ್ಥಳ. ಅದು, ಯಾರು ಬೇಕಾದರೂ ಬಂದು ವಿಶ್ರಾಮ ಮಾಡಲು ಸಾಧ್ಯವಾಗಲು, ಅವರನ್ನು ಸ್ವಾಗತಿಸಿ ಅವರಿಗೆ ಸ್ವಲ್ಪ ಆಹಾರವನ್ನು ಕೊಡುವಂತಹ ಒಂದು ಸ್ಥಳ.
ನಿಮಗೆ ಅಂತಹ ಒಂದು ಶಕ್ತಿಯನ್ನು ಸೃಷ್ಟಿಸಲು ಸಾಧ್ಯವಾದರೆ, ಆಗ ಸಂಪೂರ್ಣ ಪ್ರಪಂಚವು ಒಂದು ಆಶ್ರಮವಾಗುತ್ತದೆ. ವಾಸ್ತವವಾಗಿ, ನೀವು ಹೋಗಿ ಕಾಡಿನಲ್ಲಿ ಪ್ರಕೃತಿಯ ಜೊತೆಗಿರುವಾಗ, ಅದೆಲ್ಲವೂ ಒಂದು ಆಶ್ರಮವೇ ಆಗಿದೆ.
ಪ್ರಪಂಚದಲ್ಲಿರುವ ಪ್ರತಿಯೊಂದು ಮರವೂ ನನ್ನದೇ ತೋಟದಲ್ಲಿ; ನನ್ನದೇ ಆಶ್ರಮದಲ್ಲಿದೆಯೆಂದು ನಾನು ಹೇಳುತ್ತೇನೆ. ಇದು ನಿಜಸ್ಥಿತಿ, ಆದರೆ ಕೆಲವೊಮ್ಮೆ, ಇದು ಸಹಾಯಮಾಡುವುದಿಲ್ಲವೆಂದು; ಹೋಗಿ ನಿಮ್ಮಲ್ಲಿ ಶಕ್ತಿ ತುಂಬಲು ನಿಮಗೊಂದು ಸ್ಥಳದ ಅಗತ್ಯವಿದೆಯೆಂದು  ನಿಮಗನ್ನಿಸುವಾಗ, ನೀವು ಇಲ್ಲಿಗೆ (ಆಶ್ರಮ) ಬನ್ನಿ.
ಇಲ್ಲಿನ ಶಕ್ತಿಯು ಅನುಭವಕ್ಕೆ ಬರುವುದು ನಿಮಗೆ ಬಹಳ ಸ್ಪಷ್ಟವಾಗುವುದು. ನಿಮ್ಮ ಮನೆಯಲ್ಲಿರುವಂತೆಯೇ, ನೀವು ಎಲ್ಲಿ ಬೇಕಾದರೂ ಇರಬಹುದು, ಆದರೆ ಭೋಜನದ ಸುವಾಸನೆಯನ್ನು ಅನುಭವಿಸಬೇಕಿದ್ದರೆ, ನೀವು ಅಡುಗೆಮನೆಯೊಳಕ್ಕೆ ನಡೆಯಬೇಕು. ನೀವು ಎಲ್ಲಿ ಬೇಕಾದರೂ ತಿನ್ನಬಹುದು, ಆದರೆ ಅಡುಗೆಮನೆಯಲ್ಲಿ ಅಥವಾ ಭೋಜನಶಾಲೆಯಲ್ಲಿ, ಸುವಾಸನೆ ಇರುತ್ತದೆ.

ಪ್ರಶ್ನೆ: ಆತ್ಮಕ್ಕೆ ಒಂದು ಗುರಿಯಿರುವುದೇ?
ಶ್ರೀ ಶ್ರೀ ರವಿ ಶಂಕರ್: ಹೌದು, ಆತ್ಮಕ್ಕೆ ಖಂಡಿತವಾಗಿಯೂ ಒಂದು ಗುರಿಯಿದೆ; ಪರಮಾತ್ಮನೊಡನೆ ಒಂದಾಗುವುದು. ಚಿಕ್ಕ ಮನಸ್ಸಿನ ಗುರಿಯೆಂದರೆ, ದೊಡ್ಡ ಮನಸ್ಸಿನೊಂದಿಗೆ ಒಂದಾಗುವುದು. ಪ್ರತಿಯೊಂದು ಅಲೆಯೂ ತೀರವನ್ನು ಅಪ್ಪಳಿಸಿ ತೀರವನ್ನು ತೊಳೆದು, ಅದು ಈಗಾಗಲೇ ಆಗಿರುವ ಸಮುದ್ರದೊಂದಿಗೆ ಒಂದಾಗಲು ಬಯಸುತ್ತದೆ!

ಪ್ರಶ್ನೆ: ಸಮಯವೆಂದರೇನು?
ಶ್ರೀ ಶ್ರೀ ರವಿ ಶಂಕರ್: ಎರಡು ಘಟನೆಗಳ ನಡುವಿನ ದೂರ. ದೂರವೆಂದರೇನೆಂದು ನೀನು ನನ್ನಲ್ಲಿ ಕೇಳಿದರೆ, ಅದು ಎರಡು ವಸ್ತುಗಳ ನಡುವಿನ ಜಾಗ.

ಪ್ರಶ್ನೆ: ಮೂಲಕ್ಕೆ ಮರಳಿ ಹೋಗುವುದು ಹೇಗೆ?
ಶ್ರೀ ಶ್ರೀ ರವಿ ಶಂಕರ್: ಕೇವಲ ಮೌನವಾಗಿರುವುದರಿಂದ, ಕಲಿತಿದ್ದನ್ನು ಮನಸ್ಸಿನಿಂದ ತೆಗೆದುಹಾಕುವುದರಿಂದ ಮತ್ತು ವಿಶ್ರಮಿಸುವುದರಿಂದ ನೀವು ಮೂಲಕ್ಕೆ ತಿರುಗಿ ಬರುವಿರಿ.

ಪ್ರಶ್ನೆ: ನೀವು ನಮಗೆ ಕಲಿ ಯುಗದ ಬಗ್ಗೆ ಹೇಳುವಿರಾ?
ಶ್ರೀ ಶ್ರೀ ರವಿ ಶಂಕರ್: ನಾಲ್ಕು ಯುಗಗಳಿವೆ; ಸಮಯವು ನಾಲ್ಕು ಮಗ್ಗಲುಗಳಾಗಿ ವಿಭಜಿಸಲ್ಪಟ್ಟಿದೆ.
೧. ಸತ್ಯ ಯುಗ, ಯಾವಾಗ ಬಹಳಷ್ಟು ಸಕಾರಾತ್ಮಕತೆಯಿರುವುದೋ ಆಗ.
೨. ತ್ರೇತಾ ಯುಗ, ಯಾವಾಗ ಸಕಾರಾತ್ಮಕತೆಯು ಸ್ವಲ್ಪ ಕೆಳಗಿಳಿಯುವುದೋ ಆಗ.
೩. ದ್ವಾಪರ ಯುಗ, ಯಾವಾಗ ಸಕಾರಾತ್ಮಕತೆಯು ಇನ್ನೂ ಸ್ವಲ್ಪ ಹೆಚ್ಚು ಕೆಳಗಿಳಿಯುವುದೋ ಆಗ, ಮತ್ತು
೪. ಕಲಿ ಯುಗ, ಯಾವಾಗ ಸಕಾರಾತ್ಮಕತೆಯು ಇನ್ನೂ ಹೆಚ್ಚು ಕೆಳಗಿಳಿಯುವುದೋ ಆಗ.
ಕಲಿಯುಗದ ಬಗ್ಗೆ ಹೇಳಲಾಗಿರುವುದು ಇದನ್ನೇ. ಆದರೆ, ಕಲಿಯುಗದ ಒಳಗೆ ಸತ್ಯಯುಗವಿದೆಯೆಂದು ನಾನು ಹೇಳುತ್ತೇನೆ.
ನೀವು ಸಂತೋಷವನ್ನು ಅನುಭವಿಸುವ ದಿನಗಳಲ್ಲಿ, ನೀವು ಸತ್ಯ ಯುಗದಲ್ಲಿರುವಿರಿ ಎಂಬುದನ್ನು ತಿಳಿಯಿರಿ, ಮತ್ತು ನೀವು ಸಂಪೂರ್ಣವಾಗಿ ದುಃಖಿತರಾಗಿರುವಾಗ, ನೀವು ಕಲಿಯುಗದಲ್ಲಿರುತ್ತೀರಿ. ಆ ಅರ್ಥದಲ್ಲಿ, ದೊಡ್ಡ ಕಲಿಯುಗದ ಒಳಗೆ ಕೂಡಾ, ಒಳ್ಳೆಯ ಸಮಯಗಳಿವೆ.

ಪ್ರಶ್ನೆ: ಸತ್ಯವು ವಿರೋಧಾತ್ಮಕವಾದುದು ಎಂದು ನೀವು ಹೇಳಿದ್ದೀರಿ. ಇದನ್ನು ಅರ್ಥ ಮಾಡಿಕೊಳ್ಳಲಿರುವ ಒಂದು ಸುಲಭವಾದ ಮಾರ್ಗವನ್ನು ನೀವು ನಮಗೆ ತೋರಿಸಬಲ್ಲಿರೇ?
ಶ್ರೀ ಶ್ರೀ ರವಿ ಶಂಕರ್: ಹಾಲು ಒಳ್ಳೆಯದು ಮತ್ತು ಹಾಲು ಕೆಟ್ಟದು. ನೀವು ಒಂದು ಲೋಟ ಕುಡಿದರೆ, ಹಾಲು ಒಳ್ಳೆಯದು. ನೀವು ಎರಡು ಲೀಟರ್ ಕುಡಿದರೆ, ಅದು ಕೆಟ್ಟದು. ತಿಳಿಯಿತಾ?!
ನೀವು ಫ್ರೂದೆನ್ಸ್ಟಾಟಿನಿಂದ ಬಾಡ್ ಆಂಟಗಾಸ್ಟಿಗೆ ಬರಬೇಕಾದರೆ, ನೀವು ನೇರವಾಗಿ ಕೆಳಗೆ ಹೋಗಿ ನಿಮ್ಮ ಬಲಕ್ಕೆ ತಿರುಗಬೇಕು. ಆದರೆ ಒಪ್ಪೆನೌನಿಂದಾದರೆ, ನೀವು ನೇರವಾಗಿ ಹೋಗಿ ಎಡಕ್ಕೆ ತಿರುಗಬೇಕು.
ಎರಡೂ ಸೂಚನೆಗಳು ಸರಿ, ಆದರೆ ಅವುಗಳು ವಿರೋಧಾತ್ಮಕವಾಗಿವೆ.
ಸತ್ಯವು ಗೋಳಾತ್ಮಕವಾದುದು, ಅದು ರೇಖಾತ್ಮಕವಲ್ಲ. ಯಾವುದಾದರೂ ಗೋಳಾತ್ಮಕವಾಗಿರುವಾಗ, ಅದನ್ನು ತಲುಪಲು ಅನೇಕ ಮಾರ್ಗಗಳಿರುತ್ತವೆ.

ಪ್ರಶ್ನೆ: ಭಾರತವು, ೨,೦೦೦ ವರ್ಷಗಳ ಮೊದಲು ಹೇಗಿತ್ತೋ ಅಂತಹ ದೇಶವಾಗುವ ಅಂಚಿನಲ್ಲಿದೆಯೇ?
ಶ್ರೀ ಶ್ರೀ ರವಿ ಶಂಕರ್: ರಾಜಕಾರಣಿಗಳು ಹಾಗಾಗಲು ಬಿಟ್ಟರೆ, ಆಗಬಹುದು. ಇಟೆಲಿಯಲ್ಲಿ, ಭಾರತದಲ್ಲಿ ಮತ್ತು ಗ್ರೀಸಿನಲ್ಲಿ ರಾಜಕಾರಣಿಗಳು ಒಂದು ಸಮಸ್ಯೆಯಾಗಿದ್ದಾರೆ. ದೇಶವನ್ನು ದಿವಾಳಿತನದ ಕಡೆಗೆ ಕೊಂಡೊಯ್ಯುತ್ತಿರುವುದು ರಾಜಕಾರಣಿಗಳು. ಪ್ರತಿಯೊಂದು ದೇಶವೂ ಸಾಕಷ್ಟು ಸಂಪನ್ಮೂಲಗಳನ್ನು ಮತ್ತು ಒಳ್ಳೆಯ ಜನರನ್ನು ಹೊಂದಿದೆ. ಅಲ್ಲಿ  ಕ್ರಿಯಾಶೀಲತೆಯಿದೆ, ಆದರೆ ಭ್ರಷ್ಟಾಚಾರವು ದೇಶಗಳನ್ನು ಒಂದು ಆದಿಕಾಲದ, ಮಧ್ಯಕಾಲೀನ ಯುಗದ ಕಡೆಗೆ ಕರೆದೊಯ್ಯುತ್ತಿದೆ.