ಶನಿವಾರ, ಡಿಸೆಂಬರ್ 29, 2012

ಪ್ರೇಮದ ಇನ್ನೊಂದು ಮುಖ


೨೯ ದಶಂಬರ ೨೦೧೨
ಬಾಡ್ ಅಂತೋಗಸ್ಟ್, ಜರ್ಮನಿ

ಪ್ರಶ್ನೆ: ಗುರುದೇವ, ಆಧ್ಯಾತ್ಮ ಮತ್ತು ಗಣಿತದ ನಡುವೆ ಇರುವ ಸಂಬಂಧದ ಬಗ್ಗೆ ನೀವು ದಯವಿಟ್ಟು ಮಾತನಾಡುತ್ತೀರಾ?
ಶ್ರೀ ಶ್ರೀ ರವಿ ಶಂಕರ್: ಆಧ್ಯಾತ್ಮದ ಲೆಕ್ಕವೆಂದರೆ, ೨+೧=೦. ನಿನಗಿದು ಅರ್ಥವಾಯಿತೇ? ಇದರ ಬಗ್ಗೆ ಯೋಚಿಸು!
ಶರೀರ ಮತ್ತು ಮನಸ್ಸು, ಇವೆರಡು ಒಂದು ಆತ್ಮದೊಂದಿಗೆ ಸೇರುತ್ತವೆ, ನಂತರ ಆಮೇಲೆ ತಿಳಿಯಲು ಇನ್ನೇನೂ ಉಳಿಯುವುದಿಲ್ಲ. ಅದುವೇ ಇದು!

ಪ್ರಶ್ನೆ: ಪ್ರೀತಿಯ ಗುರುದೇವ, ಯೇಸುವಿನ ಬಗ್ಗೆ, ಅವನ ಜನ್ಮದ ಬಗ್ಗೆ ಮತ್ತು ಅವನ ಇರುವಿಕೆಯ ಬಗೆಗಿನ ಅರ್ಥದ ಬಗ್ಗೆ ಹೆಚ್ಚು ಮಾತನಾಡಲು ನಿಮ್ಮಲ್ಲಿ ಕೇಳಿಕೊಂಡ ಹಲವಾರು ಪ್ರಶ್ನೆಗಳಿವೆ. ದಯವಿಟ್ಟು ಇದರ ಬಗ್ಗೆ ಸ್ವಲ್ಪ ಮಾತನಾಡಿ. 
ಶ್ರೀ ಶ್ರೀ ರವಿ ಶಂಕರ್: ಯೇಸುವು ಪ್ರೇಮದ ಸಾಕಾರ ರೂಪ.
ಅವನು ಎಷ್ಟೊಂದು ಅವಮಾನ ಹಾಗೂ ನೋವನ್ನು ಅನುಭವಿಸಬೇಕಾಗಿ ಬಂತು ಎಂಬುದನ್ನು ನೋಡಿ. ಯೇಸುವು ಹಿಂಸೆ ಮತ್ತು ನೋವನ್ನು ಬಹಳಷ್ಟು ಸಮಚಿತ್ತತೆ ಮತ್ತು ಶಾಂತತೆಯಿಂದ ತೆಗೆದುಕೊಂಡನು. ಅವನು ಎಲ್ಲರಿಂದಲೂ ದೂಷಿಸಲ್ಪಟ್ಟನು. ಅವನ ಸ್ವಂತ ಶಿಷ್ಯರು ಕೂಡಾ ದೂರ ಓಡಿದರು.
ಆ ಸಮಯದಲ್ಲಿ ಅದು ಅವನಿಗೆ ಎಷ್ಟೊಂದು ನೋವನ್ನುಂಟುಮಾಡಿರಬಹುದೆಂದು ಊಹಿಸಿ ನೋಡಿ. ನಿಮ್ಮ ಭಕ್ತರಿಗೆ ನೀವು ನಿಮಗೆ ಸಾಧ್ಯವಾದದ್ದನ್ನೆಲ್ಲಾ ಮಾಡುವಾಗ, ಮತ್ತು ಒಂದು ದಿನ ಅವರು ನಿಮ್ಮನ್ನು ಬಿಟ್ಟು ಓಡಿ ಹೋದರೆ, ಅದು ಯಾರಾದರೂ ಊಹಿಸಬಹುದಾದ ಅತ್ಯಂತ ಭೀಕರ ನೋವಾಗಿದೆ. ಆದರೆ ಯೇಸುವಿನ ಜೀವನವು ಹಾಗಿತ್ತು, ಮತ್ತು ಕೊನೆಯಲ್ಲಿ ಎಲ್ಲರೂ ಅವನನ್ನು ತೊರೆದಾಗ, ಅವನು ದೇವರಲ್ಲಿ, "ನೀನು ಕೂಡಾ ನನ್ನನ್ನು ಪರಿತ್ಯಜಿಸಿರುವೆಯಾ?" ಎಂದು ಕೂಡಾ ಕೇಳಿದನು. ಹೀಗೆ, ಅವನ ಜೀವನವು ಒಂದು ಕಡೆಯಲ್ಲಿ ಸಂಪೂರ್ಣ ನೋವಿನದ್ದು ಮತ್ತು ಇನ್ನೊಂದು ಕಡೆಯಲ್ಲಿ ಪ್ರೇಮದ್ದಾಗಿತ್ತು.
ಈಗ, ಪ್ರೇಮಿಸುವ ಯಾರೇ ಆದರೂ ಅಷ್ಟೊಂದು ನೋವಿಗೆ ಒಳಗಾಗಬೇಕೆಂಬುದು ಇದರ ಅರ್ಥವಲ್ಲ. ಅದು ಹಾಗಲ್ಲ. ಜನರಿಗೆ ಅವನ ಸಂದೇಶವು ಯಾವತ್ತೂ ಇದಾಗಿತ್ತು, "ಯಾವುದರ ಬಗ್ಗೆಯೂ ಅಂಧಾಭಿಮಾನಿಗಳಾಗಬೇಡಿ. ಅಳೆಯಬೇಡಿ ಮತ್ತು ಕ್ರೂರಿಗಳಾಗಬೇಡಿ. ಎಲ್ಲರ ಕಡೆಗೂ ಪ್ರೇಮದಿಂದ ಮತ್ತು ಸಹಾನುಭೂತಿಯಿಂದಿರಿ, ಯಾಕೆಂದರೆ ದೇವರೇ ಪ್ರೇಮ."
ಆ ಕಾಲದಲ್ಲಿ ಜನರು ತಲೆಯಲ್ಲಿ ಜೀವಿಸುತ್ತಿದ್ದರು. ಅವರು ಕೇವಲ ಪಾಪಗಳು ಮತ್ತು ಶಿಕ್ಷೆಯ ಬಗ್ಗೆ ಯೋಚಿಸುತ್ತಿದ್ದರು. ಅವರು ಕೇವಲ ಸ್ವರ್ಗದ ಕನಸು ಕಾಣುತ್ತಿದ್ದರು ಮತ್ತು ನರಕದ ಬಗ್ಗೆ ಭಯಭೀತರಾಗಿದ್ದರು.
ಯೇಸುವು ಬಂದು ಹೇಳಿದನು, "ವರ್ತಮಾನದ ಕ್ಷಣದಲ್ಲಿ ಜೀವಿಸಿರಿ. ಈಗ ಜೀವಿಸಿ ಮತ್ತು ಎಲ್ಲರ ಕಡೆಗೂ ಪ್ರೀತಿಯಿಂದಲೂ ಕಾಳಜಿಯಿಂದಲೂ ಇರಿ. ದೇವರೆಂದರೆ ಹೆದರುವ ಅಗತ್ಯವಿಲ್ಲ ಯಾಕೆಂದರೆ ಅವನು ನಮ್ಮ ತಂದೆ, ಮತ್ತು ಒಬ್ಬ ತಂದೆಯಂತೆ ಅವನು ನಮ್ಮ ಭಾಗವಾಗಿದ್ದಾನೆ. ನನ್ನ ತಂದೆ ಮತ್ತು ನಾನು ಒಂದೇ ಆಗಿದ್ದೇವೆ."
ಆ ಕಾಲದಲ್ಲಿ ಅವನು ಬಹಳ ಕ್ರಂತಿಕಾರಿಯಾದ ಒಂದು ಸಂದೇಶವನ್ನು ನೀಡಿದನು ಮತ್ತು ಪಯಣವು ತಲೆಯಿಂದ ಹೃದಯಕ್ಕೆ ಇರುವುದು, ಹಾಗೂ ತಲೆಯಿಂದ ಸ್ವರ್ಗಗಳಿಗೆ ಮತ್ತು ನಕ್ಷತ್ರಗಳಿಗೆ ಅಲ್ಲ ಎಂಬುದನ್ನು ಜನರು ತಿಳಿಯುವಂತೆ ಮಾಡಿದನು. ಅವನು ಆ ಸಂದೇಶವನ್ನು ನೀಡಿದನು, ಆದರೆ ಎಪ್ಪತ್ತು ವರ್ಷಗಳ ವರೆಗೆ ಅವನು ಹೇಳಿದುದನ್ನು ಯಾರೂ ದಾಖಲಿಸಲಿಲ್ಲ.
ಅವನು ಮರಣ ಹೊಂದಿ ಎಪ್ಪತ್ತು ವರ್ಷಗಳ ಬಳಿಕ ಬೈಬಲ್ ಬರೆಯಲ್ಪಟ್ಟಿತು ಎಂಬುದನ್ನು ನಾನು ಪಂಡಿತರಿಂದ ಕೇಳಿರುವೆನು. ಆದುದರಿಂದ ಆಮೇಲೆ, ಮೂಲ ಗ್ರಂಥದ  ಹಲವಾರು ವಿಕೃತಿಗಳು ಇದ್ದಿರುವ ಸಾಧ್ಯತೆಯಿದೆ. ಅದಕ್ಕಾಗಿಯೇ ಕ್ರೈಸ್ತ ಧರ್ಮದಲ್ಲಿ, ತಮ್ಮದೇ ನಿಜವಾದುದೆಂದು ಪ್ರತಿಪಾದಿಸುವ ೭೨ ಪಂಥಗಳು ಇರುವುದು.
ಯೇಸು ಕ್ರಿಸ್ತನಿರುವುದು ಒಬ್ಬನೇ ಒಬ್ಬ, ಆದರೆ ೭೨ ವಿವಿಧ ಪಂಥಗಳಿವೆ ಮತ್ತು ಅವರೆಲ್ಲರೂ ಬೈಬಲನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಅವರು ಅದರ ಮುಖ್ಯವಾದ ಸಾರವನ್ನು ಅರ್ಥೈಸಿಕೊಳ್ಳಲು ಮತ್ತು ಪರಸ್ಪರರೊಂದಿಗೆ ಧಾರ್ಮಿಕ ಹೊಡೆದಾಟಗಳಲ್ಲಿ ಬೀಳದಿರಲು ಪ್ರಯತ್ನಿಸಬೇಕು, ಯಾಕೆಂದರೆ ಅದು ಪ್ರಪಂಚದಲ್ಲಿ ಯಾವತ್ತೂ ಕೊನೆಯಾಗದು.
ಇದುವೇ ಭಗವಾನ್ ಬುದ್ಧನೊಂದಿಗೂ ಆಯಿತು. ಒಬ್ಬನೇ ಒಬ್ಬ ಭಗವಾನ್ ಬುದ್ಧನಿದ್ದನು, ಆದರೆ ಬೌದ್ಧ ಧರ್ಮದಲ್ಲಿ ೩೨ ಪಂಥಗಳಿದ್ದು, ತಮ್ಮದೇ ನಿಜವಾದ ಬೌದ್ಧ ಧರ್ಮವೆಂದೂ, ತಮ್ಮ ವ್ಯಾಖ್ಯಾನವೇ ಬುಧ್ಧನ ಅಸಲೀ ಬೋಧನೆಯೆಂದೂ ಪ್ರತಿಪಾದಿಸುತ್ತಾರೆ.
ಇದನ್ನೇ ಸಂತ ಮೊಹಮ್ಮದನ ವಿಷಯದಲ್ಲೂ ಕಾಣಬಹುದು. ಇಸ್ಲಾಂನಲ್ಲಿ ಐದು ಪಂಥಗಳಿವೆ ಮತ್ತು ಅವರು ಪರಸ್ಪರರನ್ನು ಇಷ್ಟಪಡುವುದಿಲ್ಲ. ವಾಸ್ತವವಾಗಿ, ಅವರು ಪರಸ್ಪರ ವಿರೋಧಿಸುತ್ತಾರೆ.
ಮಾನವನಿಗೆ, ನಿಜವಾಗಿ ಅನುಭವಿಸದೆಯೇ ಪರಿಕಲ್ಪನೆಗಳಿಗೆ ಜೋತುಬೀಳುವ ಈ ಒಂದು ಅಭ್ಯಾಸವಿದೆ. ಜನರು ಆ ಪರಿಕಲ್ಪನೆಗಳನ್ನು ತಮ್ಮ ಗುರುತಾಗಿ ಮಾಡಿಕೊಳ್ಳುತ್ತಾರೆ ಮತ್ತು ಆ ಗುರುತಿಗಾಗಿ ತಮ್ಮ ಜೀವನವನ್ನು ತ್ಯಾಗ ಮಾಡಲು ಅವರು ಸಿದ್ಧರಿರುತ್ತಾರೆ.
ಯೇಸುವಿನ ಸಂದೇಶವು, "ಎಚ್ಚೆತ್ತುಕೊಳ್ಳಿ ಮತ್ತು ಸ್ವರ್ಗದ ಸಾಮ್ರಾಜ್ಯವು ನಿಮ್ಮೊಳಗಿದೆ ಎಂಬುದನ್ನು ಕಂಡುಕೊಳ್ಳಿ. ದೇವರೆಂದರೆ ಪ್ರೇಮ ಎಂಬುದನ್ನು ತಿಳಿಯಿರಿ" ಎಂದಾಗಿತ್ತು.
ಆದುದರಿಂದ, ಒಂದು ಮಗುವಿನಂತಿರಿ. ಒಂದು ಮಗುವಿನಲ್ಲಿ ಯಾವುದೇ ಪೂರ್ವಾಗ್ರಹಗಳಿರುವುದಿಲ್ಲ. ನೀವೊಂದು ಮಗುವಿನಂತಾಗದಿದ್ದಲ್ಲಿ, ನೀವು ಸ್ವರ್ಗವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಈ ಸಂದೇಶವು ಕಳೆದುಹೋಗುತ್ತಿದೆ. ಒಂದು ಮಗುವಿನಂತಹ ಮುಗ್ಧತೆ, ಮತ್ತು ಎಲ್ಲರೊಂದಿಗೂ ಒಂದು ಆತ್ಮೀಯತೆಯ ಭಾವನೆಯು ಇಲ್ಲವಾಗಿದೆ. ಇದಕ್ಕಾಗಿಯೇ ಧರ್ಮದ ಹೆಸರಿನಲ್ಲಿ ಅಷ್ಟೊಂದು ಅಪರಾಧಗಳಾಗುತ್ತಿರುವುದು.
ಧರ್ಮವನ್ನು ರಾಜಕೀಯ ಅಧಿಕಾರದೊಂದಿಗೆ ಒಂದುಗೂಡಿಸಲು ಆರಂಭಿಸಿದಾಗ ಅದು ಸಮತಾವಾದಕ್ಕೆ ದಾರಿ ಮಾಡಿತು. ಇದೆಲ್ಲವೂ ಆಗಿರುವುದು ಯಾಕೆಂದರೆ ನಾವಾಗಿರುವ ಆ ಅಂತರಿಕ ಪ್ರಕಾಶವನ್ನು, ನಮ್ಮ ಆಂತರ್ಯದ ಪ್ರಕಾಶವನ್ನು ನಾವು ಅರಿಯೆವು.

ಪ್ರಶ್ನೆ: ಪ್ರೀತಿಯ ಗುರುದೇವ, ಏನನ್ನೂ ಮಾಡದಿರುವುದು ನಮಗೆ ಅಷ್ಟೊಂದು ಆನಂದ ಮತ್ತು ಸಂತೋಷವನ್ನು ತರುವುದಾದರೆ, ನಾವು ಏನನ್ನಾದರೂ ಮಾಡುವುದಾದರೂ ಯಾಕೆ?
ಶ್ರೀ ಶ್ರೀ ರವಿ ಶಂಕರ್: ನಿಮ್ಮ ಸ್ವಭಾವವೆಂದರೆ, ಏನನ್ನೂ ಮಾಡದೆಯೇ ದೀರ್ಘ ಕಾಲವಿರಲು ನಿಮಗೆ ಸಾಧ್ಯವಿಲ್ಲ.
ನಿಮಗೆ ಗೊತ್ತಿದೆಯೇ, ಆನಂದವು ಯಾವತ್ತೂ ವಿರೋಧಾತ್ಮಕ ಸಿಗುತ್ತದೆ ಅಥವಾ ತಿಳಿಯುತ್ತದೆ. ನೀವು ಏನನ್ನಾದರೂ ಮಾಡುತ್ತಿರುವಾಗ ಮತ್ತು ನೀವು ನಿಮ್ಮ ೧೦೦% ಪ್ರಯತ್ನವನ್ನು ಹಾಕುವಾಗ ಮಾತ್ರ, ಏನನ್ನಾದರೂ ಮಾಡದಿರುವುದರ ಬೆಲೆಯು ನಿಮಗೆ ತಿಳಿಯುತ್ತದೆ. ನೋಡಿ, ನೀವು ಚುರುಕಾಗಿ ಮತ್ತು ಕ್ರಿಯಾಶೀಲರಾಗಿರುವಾಗ ಮಾತ್ರ ನಿಮಗೆ ಆಳವಾದ ವಿಶ್ರಾಂತಿ ಆಗುತ್ತದೆ. ನೀವು ಇಡೀ ದಿನ ಸುಮ್ಮನೇ ಹಾಸಿಗೆಯಲ್ಲಿ ಮಲಗಿದ್ದರೆ ಮತ್ತು ಏನನ್ನೂ ಮಾಡದೇ ಇದ್ದರೆ, ಆಗ ನಿಮಗೆ ರಾತ್ರಿ ನಿದ್ರಿಸಲು ಸಾಧ್ಯವಾಗದು. ಆದುದರಿಂದ ನೀವೇನು ಮಾಡಬೇಕೋ ಅದನ್ನು ಮಾಡುವುದು ಅಗತ್ಯವಾಗಿದೆ.
ನಾವು ಮಾಡಬೇಕಾಗಿರುವ ನಿರ್ದಿಷ್ಟ ಕರ್ಮಗಳಿವೆ ಮತ್ತು ಒಮ್ಮೆ ಕರ್ಮಗಳನ್ನು ಮಾಡಿಯಾದರೆ ಆಗ, ಮಾಡುವ ಹಾಗೂ ಚಟುವಟಿಕೆಯಿಂದಿರುವ ಅವಸ್ಥೆಗಳ ನಡುವೆ, ಏನನ್ನೂ ಮಾಡದಿರುವ ಆ ಅವಸ್ಥೆಯನ್ನು ಕೂಡಾ ನಾವು ಅನುಭವಿಸುವೆವು.

ಪ್ರಶ್ನೆ: ಗುರುದೇವ, ಬಯಕೆಗಳು ಸೃಷ್ಟಿಸಲ್ಪಡುತ್ತವೆಯೇ ಮತ್ತು ಅವುಗಳನ್ನು ತೆಗೆದುಹಾಕಬಹುದೇ? ಹಾಗಿದ್ದರೆ, ಹೇಗೆ?
ಶ್ರೀ ಶ್ರೀ ರವಿ ಶಂಕರ್: ಸುಮ್ಮನೇ ಹಿಂತಿರುಗಿ ನೋಡು ಮತ್ತು ನಿನ್ನ ಬಾಲ್ಯದಿಂದ ಹಿಡಿದು ನಿನ್ನ ಜೀವನವನ್ನು ಅವಲೋಕಿಸಿ ನೋಡು. ಹಿಂದೆ ನಿನ್ನಲ್ಲಿ ಹಲವಾರು ಬಯಕೆಗಳಿದ್ದವು; ಅವುಗಳಲ್ಲಿ ಕೆಲವನ್ನು ನೀನು ಪೂರೈಸಿರುವೆ ಮತ್ತು ಅವುಗಳಲ್ಲಿ ಹಲವನ್ನು ನೀನು ಬಿಟ್ಟುಬಿಟ್ಟೆ.
ಒಬ್ಬ ಮಗುವಾಗಿ, ಒಬ್ಬ ಹದಿ ಹರೆಯದವನಾಗಿ ಅಥವಾ ಒಬ್ಬ ಯುವಕನಾಗಿ ನಿನ್ನ ತಲೆಯಲ್ಲೆದ್ದ ಪ್ರತಿಯೊಂದು ಬಯಕೆಯನ್ನೂ ಪೂರೈಸಲು ನಿನಗೆ ಸಾಧ್ಯವಾಗಲಿಲ್ಲ. ಆ ರೀತಿ ಆಗಿರುತ್ತಿದ್ದರೆ, ನೀನು ಹುಚ್ಚನಾಗಿರುತ್ತಿದ್ದೆ. ನೀನು ದುಃಖಿತನಾಗಿರುತ್ತಿದ್ದೆ. ಹಾಗಾಗದಿದ್ದುದು ದೇವರ ದಯೆ, ಹಾಗಾಗಲಿಲ್ಲ. ಅದಕ್ಕಾಗಿಯೇ, ಏನಾಗಬೇಕಾಗಿತ್ತೋ ಅವುಗಳು ಮಾತ್ರ ನಿನಗೆ ಆಗಲು ತೊಡಗಿದವು.
ನಿನಗಾದ ಕಹಿ ಅನುಭವಗಳು ನಿನ್ನ ವ್ಯಕ್ತಿತ್ವಕ್ಕೆ ಆಳವನ್ನು ನೀಡಿವೆ, ಅದೇ ಸಮಯದಲ್ಲಿ ಒಳ್ಳೆಯ ಅನುಭವಗಳು ನಿನ್ನ ವ್ಯಕ್ತಿತ್ವವನ್ನು ವಿಶಾಲಗೊಳಿಸಿವೆ. ಆದುದರಿಂದ ಅವುಗಳೆಲ್ಲವೂ ನಿನ್ನ ಜೀವನಕ್ಕೆ ಕೊಡುಗೆ ಸಲ್ಲಿಸಿವೆ. ಒಳ್ಳೆಯ ಅನುಭವಗಳಿರಲಿ ಅಥವಾ ಕೆಟ್ಟ ಅನುಭವಗಳಿರಲಿ, ಅವೆರಡೂ ನಿನ್ನ ವ್ಯಕ್ತಿತ್ವವನ್ನು ಬಲಗೊಳಿಸುವುದರಿಂದ ಅವೆರಡನ್ನೂ ಸ್ವಾಗತಿಸಬೇಕು. ಅವುಗಳೆರಡೂ ಒಂದು ಕಲ್ಪಿಸಲಾಗದ ರೀತಿಯಲ್ಲಿ ನಿನ್ನ ಇರುವಿಕೆಗೆ ಕೊಡುಗೆ ಸಲ್ಲಿಸುತ್ತವೆ.
ಅವುಗಳೆಲ್ಲವೂ ನಿನ್ನ ಸಾಧನೆಯ (ಆಧ್ಯಾತ್ಮಿಕ ಅಭ್ಯಾಸ) ಭಾಗವೆಂಬುದನ್ನು ಸುಮ್ಮನೇ ತಿಳಿ. ಆದುದರಿಂದ, ಹಿತಕರವಾದ ಅನುಭವಗಳು ಕೂಡಾ ನಿನ್ನ ಸಾಧನೆಯ ಒಂದು ಭಾಗ. ಅದುವೇ, ನೀನು ಹಾದು ಹೋದ ಅಹಿತಕರ ಘಟನೆಗಳಿಗೂ ಅನ್ವಯಿಸುತ್ತದೆ. ಉದಾಹರಣೆಗೆ, ಜನರು ನಿನಗೆ ಹೊಗಳ ಬಹುದು ಅಥವಾ ಜನರು ನಿನ್ನನ್ನು ಅವಮಾನಗೊಳಿಸುವುದು, ಇವುಗಳೆರಡೂ ನಿನ್ನ ಸಾಧನೆಯ ಒಂದು ಭಾಗ. ಎರಡೂ ಸಂದರ್ಭಗಳಲ್ಲಿ ನೀನು ಗಟ್ಟಿಯಾಗುವೆ, ನೀನು ಕೇಂದ್ರಿತನಾಗುವೆ ಮತ್ತು ನೀನು ಯಾವ ರೀತಿಯಲ್ಲಿ ಬೆಳೆಯಬೇಕೋ ಆ ರೀತಿಯಲ್ಲಿ ಬೆಳೆಯುವೆ.
ಈ ಎಲ್ಲಾ ಹೊಗಳಿಕೆ ಮತ್ತು ಅವಮಾನ, ಎಲ್ಲವೂ ಆಗುವುದು ಕೇವಲ ಭೂಗ್ರಹದಲ್ಲಿ ಮಾತ್ರ, ಮತ್ತು ನಾವು ಅವುಗಳನ್ನು ಎದುರಿಸಬೇಕು ಹಾಗೂ ಮುನ್ನಡೆಯಬೇಕು. ಒಂದು ಶಕ್ತಿಶಾಲಿ ಆತ್ಮ, ಒಬ್ಬ ಶಕ್ತಿಶಾಲಿ ವ್ಯಕ್ತಿಯಾಗು. ಅದು ನಿಜವಾದ ಶಕ್ತಿ.
ಜೀವನದಲ್ಲಿನ ಪ್ರತಿಯೊಂದು ಘಟನೆಯ ಮೂಲಕವೂ ಕಿರುನಗೆ ಸೂಸುತ್ತಾ ಹಾದುಹೋಗಲು ನಿನಗೆ ಸಾಧ್ಯವೇ? ಅದು ಇದೆಲ್ಲದರ ಉದ್ದೇಶ. ನಿನಗೆ ನಿನ್ನ ಕಿರುನಗೆಯನ್ನು ಇಟ್ಟುಕೊಳ್ಳಲು ಸಾಧ್ಯವಿದೆಯೇ? ಅದು ಕಷ್ಟ, ನನಗೆ ತಿಳಿದಿದೆ, ಆದರೆ ನೀನದನ್ನು ಮಾಡಬೇಕು.
ನೀವು ಯಾವುದರಿಂದಲಾದರೂ ಓಡಿಹೋಗಲು ಪ್ರಯತ್ನಿಸಿದರೆ, ಅದು ನಿಮ್ಮನ್ನು ಮತ್ತಷ್ಟು ಬೆನ್ನಟ್ಟುವುದಷ್ಟೆ. ಈ ಜೀವನದಲ್ಲಿ ಅಲ್ಲವಾದರೆ, ಅದು ಮುಂದಿನ ಜೀವನದಲ್ಲಿ ಆಗುವುದು. ಅದಕ್ಕಾಗಿಯೇ, ಯಾವುದು ಈಗ ಆಗಬೇಕಾಗಿದೆಯೋ ಅದೆಲ್ಲವನ್ನೂ ಈಗಲೇ ಮಾಡಿ ಮುಗಿಸಿ ಎಂದು ಹೇಳಲಾಗಿರುವುದು ಮತ್ತು ಒಂದು ದೊಡ್ಡ ನಗುವಿನೊಂದಿಗೆ, ಧೈರ್ಯದೊಂದಿಗೆ ಮತ್ತು ಉತ್ಸಾಹದೊಂದಿಗೆ ಮುನ್ನಡೆಯಿರಿ.

ಪ್ರಶ್ನೆ: ಪ್ರೀತಿಯ ಗುರುದೇವ, ಹಾತೊರೆತವು ಅಷ್ಟೊಂದು ನೋವುಂಟುಮಾಡುವುದು ಯಾಕೆ? ದೇವರಿಗಾಗಿರುವ ಮತ್ತು ಅನಂತತೆಗಾಗಿರುವ ಹಾತೊರೆತದ ಬಗ್ಗೆ ನಾನು ಉಲ್ಲೇಖಿಸುತ್ತಿರುವುದು. ನಾವು ಎಲ್ಲಿಂದ ಬಂದಿರುವೆವು?
ಶ್ರೀ ಶ್ರೀ ರವಿ ಶಂಕರ್: ನೋಡು, ಪ್ರೇಮ ಮತ್ತು ನೋವು ಬಹಳ ನಿಕಟವಾದವು ಮತ್ತು ಕೈ ಕೈಹಿಡಿದು ಹೋಗುತ್ತವೆ.
ನೀವು ಯಾರನ್ನಾದರೂ ಪ್ರೀತಿಸುವಾಗ ಕೆಲವೊಮ್ಮೆ ನಿಮಗೆ ನೋವಾಗುವುದು. ಅದು ಈ ರೀತಿ ಆಗುತ್ತದೆ ಮತ್ತು ನಾವು ಅದರೊಡನೆ ಬಾಳಬೇಕು. ಆದುದರಿಂದ ಅದರಿಂದ ದೂರ ಓಡಬೇಡ. ನೋವಾಗುವುದು ಪ್ರೀತಿಯ ಒಂದು ಭಾಗವಾಗಿದೆ.
ಇವತ್ತು ಒಬ್ಬರು ಬಂದು ನನ್ನಲ್ಲಿ ಹೇಳಿದರು, "ನನ್ನ ಮಗ ಹೀಗೆ, ನನ್ನ ಮಗ ಹಾಗೆ; ಅವನು ನಾನು ಹೇಳುವುದನ್ನು ಕೇಳುವುದಿಲ್ಲ."
ನೋಡಿ, ಇದು ಕೇವಲ ಸ್ವಾಭಾವಿಕ. ತಾಯಿಯು ಮಗುವಿಗೆ ಬಹಳಷ್ಟು ಮಾಡಿದ್ದಾಳೆ ಮತ್ತು ಮಗುವು ಅವಳು ಹೇಳುವುದನ್ನು ಕೇಳದೇ ಇರುವಾಗ, ಅವಳಿಗೆ ಬಹಳ ನೋವಾಗುತ್ತದೆ.
ಸ್ವಾಭಾವಿಕವಾಗಿಯೇ, ತಾಯಿಯು ತನ್ನ ಮಗನಿಗಾಗಿ ಅತ್ಯುತ್ತಮವಾದುದನ್ನು ಬಯಸುತ್ತಾಳೆ, ಅದೇ ಸಮಯದಲ್ಲಿ ಮಗನು, ತನಗೆ ಯಾವುದು ಒಳ್ಳೆಯದೆಂಬುದು ತನಗೆ ತಿಳಿದಿದೆಯೆಂದು ಯೋಚಿಸುತ್ತಾನೆ. ಆದುದರಿಂದ ಅವನು ತಾಯಿಯು ಹೇಳಿದುದನ್ನು ಕೇಳಲು ಬಯಸುವುದಿಲ್ಲ. ಈಗ, ಈ ಪರಿಸ್ಥಿತಿಯಲ್ಲಿ ನೀವೇನು ಮಾಡುವುದು?
ತಾಯಿಯು ನನ್ನ ಬಳಿ ಬಂದು ಹೇಳಿದಳು, "ಗುರುದೇವ, ನಾನೇನು ಮಾಡಬೇಕೆಂದು ನೀವು ಸಲಹೆ ನೀಡುವಿರಿ?"
ನಾನು ಅವಳಿಗೆ ಅಂದೆ, "ನೋಡು, ನಾನು ಎಲ್ಲರಿಗೂ ಅತ್ಯುತ್ತಮವಾದುದನ್ನು ಬಯಸುತ್ತೇನೆ. ಆದುದರಿಂದ, ನಿನ್ನ ಮಗನಿಗೆ ಅತ್ಯುತ್ತಮವಾದುದನ್ನು ಬಯಸುತ್ತೇನೆ ಮತ್ತು ನಿನಗೆ ಕೂಡಾ ನಾನು ಅತ್ಯುತ್ತಮವಾದುದನ್ನು ಬಯಸುತ್ತೇನೆ."
ಇದಕ್ಕೆ ಅವಳು ಉತ್ತರಿಸಿದಳು, "ಆದರೆ ಗುರುದೇವ, ನನ್ನ ಮಗನು ನನ್ನ ಮಾತಿಗಿಂತ ಹೆಚ್ಚು ನಿಮ್ಮ ಮಾತನ್ನು ಕೇಳುತ್ತಾನೆ."
ನಾನಂದೆ, "ಈಗ ಅವನು ನಿನ್ನ ಮಾತಿಗಿಂತ ಹೆಚ್ಚು ನನ್ನ ಮಾತನ್ನು ಕೇಳುವುದಾದರೆ, ಆಗ ಅದರರ್ಥ, ಗುರುದೇವರಿಗೆ ಯಾವುದೇ ಸ್ವಾರ್ಥದ ಉದ್ದೇಶವಿಲ್ಲವೆಂದು ಮತ್ತು ನಾನು ಸರಿಯಾದುದನ್ನು ಹೇಳುವೆನೆಂದು ಅವನು ಖಚಿತವಾಗಿ ತಿಳಿದಿರುವನೆಂದು."
ನಾನು ಮಗನಿಗೆ ಹೇಳಿದೆ, "ನೀನು ನಿನಗೇನು ಬೇಕೋ ಅದನ್ನು ಮಾಡು."
ನೋಡಿ, ನಾನು ಜನರಿಗೆ, "ನೀನು ಇದನ್ನು ಮಾಡು, ನೀನು ಅದನ್ನು ಮಾಡು" ಎಂದು ಹೇಳುವುದಿಲ್ಲ.
ಆದುದರಿಂದ ನೋವಾಗುವುದು ನಿಶ್ಚಯವಾಗಿ ಪ್ರೇಮದ ಒಂದು ಭಾಗ. ನೋವು ತಪ್ಪಿಸಿಕೊಳ್ಳಲಾಗದುದು.
ಪ್ರೇಮವಿರುವಾಗ, ಅದು ಕೆಲವೊಮ್ಮೆ ನೋವನ್ನೂ ತರುತ್ತದೆ. ಆದರೆ ನೋವಿಗೆ ಹೆದರಿ ಪ್ರೀತಿಸುವುದನ್ನು ನಿಲ್ಲಿಸುವುದು ಮತ್ತು ಸಂಪೂರ್ಣವಾಗಿ ಮನವನ್ನು ಮುಚ್ಚಿ ಬಿಡುವುದು ಮೂರ್ಖತನವಾಗಿದೆ, ಇದನ್ನು ಹಲವಾರು ಜನರು ಮಾಡುತ್ತಾರೆ. ಕೆಲವೊಮ್ಮೆ ಅದು ನೋವುಂಟುಮಾಡುವುದು ಎಂಬ ಕಾರಣಕ್ಕಾಗಿ ಪ್ರೇಮದಲ್ಲಿರುವುದನ್ನು ನಿಲ್ಲಿಸುವುದು ಒಂದು ಬುದ್ಧಿವಂತ ನಿರ್ಧಾರ ಅಲ್ಲವೇ ಅಲ್ಲ. ಇದು ಒಬ್ಬನು ಯಾವತ್ತಾದರೂ ಮಾಡಬಹುದಾದ ಅತ್ಯಂತ ಮೂರ್ಖ ಸಂಗತಿ. ಆದರೆ ಆ ಚಿಕ್ಕ ನೋವಿನ ಮೂಲಕ ತೇಲಿಕೊಂಡು ಮುನ್ನಡೆಯುವವರು ನಿಜವಾದ, ಆನಂದದಾಯಕ ಪ್ರೇಮವನ್ನು ಪಡೆಯುವರು.

ಪ್ರಶ್ನೆ: ಗುರುದೇವ, ಮೋಕ್ಷವನ್ನು ಪಡೆಯಲು ಮಾನವರು ಈ ಎಲ್ಲಾ ಪ್ರಕ್ರಿಯೆಗಳ ಮೂಲಕ ಯಾಕೆ ಹಾದುಹೋಗಬೇಕು?
ಶ್ರೀ ಶ್ರೀ ರವಿ ಶಂಕರ್: ಅದರ ಅಗತ್ಯವಿದೆ, ಈಗಿನ ಮಟ್ಟಿಗೆ ಕೇವಲ ಅದನ್ನು ತಿಳಿ.