ಶನಿವಾರ, ಡಿಸೆಂಬರ್ 29, 2012

ಗುರು ಸಾಮೀಪ್ಯ


೨೯ ಡಿಸೆಂಬರ್ ೨೦೧೩
ಬಾಡ್ ಆಂಟೋಗಾಸ್ಟ್, ಜರ್ಮನಿ

ಪ್ರ: ಉಪನಿಷತ್ತಿನಲ್ಲಿ ಗುರುಗಳ ಸಾಮೀಪ್ಯದ ಬಗ್ಗೆ ತಿಳಿಸಿದಿರಿ. ಇದರ ಅರ್ಥ ಭೌತಿಕ ಸಾಮೀಪ್ಯವೂ ಆಗಿದೆಯೇ?
ಶ್ರೀಶ್ರೀರವಿಶಂಕರ್: ನಾವಿಲ್ಲೇ ಹತ್ತಿರವೇ ಕುಳಿತ್ತಿದ್ದೇವೆ, ಅಲ್ಲವೇ?
ಮನಸ್ಸು ಮತ್ತು ಹೃದಯದಿಂದ ಸಾಮೀಪ್ಯದ ಅನುಭವವಾಗುವುದು. ನಿಮ್ಮ ಮನಸ್ಸು ಬೇರೆಲ್ಲೋ ಇದ್ದರೆ, ಅನುಮಾನ ಮತ್ತು ನಕಾರಾತ್ಮಕತೆಯಿಂದ ತುಂಬಿದ್ದಾಗ, ನನ್ನ ಪಕ್ಕ ಕುಳಿತ್ತಿದ್ದರೂ ಪ್ರಯೋಜನವಾಗುವುದಿಲ್ಲ.
ಆದರೆ ನಿಮ್ಮ ಹೃದಯ ಸ್ಫುಟವಾಗಿದ್ದು, ಮನಸ್ಸು ಪರಿಶುದ್ಧವಾಗಿದ್ದು, ಸ್ಪಷ್ಟವಾದ ಗುರಿಯನ್ನು ಹೊಂದಿದ್ದರೆ, ನೀವು ಸಾವಿರಾರು ಮೈಲಿ ದೂರದಲ್ಲಿದ್ದರೂ ನನ್ನ ಸಮೀಪದಲ್ಲಿರುವಿರಿ.
ಆಗ ನಿಮಗೆ ತಿಳಿಯುವುದು ನಾವು ಒಂದೇ ಎಂದು, ಒಟ್ಟಿಗೆ ಇರುವೆವೆಂದು.
ಸಂಪೂರ್ಣ ಅರಿವಿದ್ದಾಗ ಸಾಮೀಪ್ಯವೂ ಇರುತ್ತದೆ.
ಆದರೆ ನೀವಿಲ್ಲಿ ಕುಳಿತು, ‘ಓಹ್, ಗುರೂಜೀ ಏನು ಮಾಡುತ್ತಿದ್ದಾರೆ? ಅವರಿಗೆ ಅಧಿಕಾರ ಬೇಕೇನೋ,’ ಎಂದು ಕುತೂಹಲಪಟ್ಟರೆ, ಸಾಮೀಪ್ಯವು ಸಾಧ್ಯವಾಗುವುದಿಲ್ಲ.
ಒಬ್ಬ ಮಹಿಳೆಯು ಕೇಳಿದಳು, ‘ಯಾವುದನ್ನು ಮಾಡುವುದರಿಂದ ಜನರ ಮೇಲೆ ನೀವಿಷ್ಟು ಪ್ರಭಾವಶಾಲಿಗಳಾಗಿದ್ದೀರ?’
ನಾವು ಹೇಳಿದೆವು, ‘ಜನರ ಮೇಲೆ ಪ್ರಭಾವ? ನಾನೇ ಸ್ವತಃ ಬಲಶಾಲಿ. ನನಗೆ ಯಾರಿಂದಲೂ ಬಲ ಬೇಡ. ನನಗೆ ಯಾರಿಂದಲೂ ಏನೂ ಬೇಡ.’
ನೋಡಿ, ನಿಮಗೆ ಅಧಿಕಾರ ಚಲಾಯಿಸಲು ಆಸಕ್ತಿಯಿದೆ ಏಕೆಂದರೆ ನಿಮಗೆ ಜನರಿಂದ ಏನೋ ಬೇಕಾಗಿದೆ ಮತ್ತು ಅದನ್ನು ಪಡೆಯಲು ಬಯಸುತ್ತೀರ. ಆದರೆ ನಮಗೇನೂ ಬೇಡ. ನಮಗೆ ಎಲ್ಲರೂ ಸಂತೋಷವಾಗಿರುವುದು ಹಾಗೂ ಆಧ್ಯಾತ್ಮದ ಹಾದಿಯಲ್ಲಿ ತೊಡಗುವುದಷ್ಟೇ ಬೇಕಾಗಿರುವುದು.
ನೋಡಿ, ಇಂದು ಜಗತ್ತಿಗೆ ಆಧ್ಯಾತ್ಮ ಜ್ಞಾನದ ಅವಶ್ಯಕತೆಯಿದೆ. ಹಿಂಸಾ-ಮುಕ್ತ ಸಮಾಜದ ಅಗತ್ಯವಿದೆ. ಭಾರತದಲ್ಲಿ ಏನಾಯಿತೆಂದು ಗೊತ್ತಿದೆಯಾ? ಎಂತಹ ಭಯಾನಕವಾದ ಘಟನೆ ನಡೆಯಿತು. ಇದು ಬಹಳ ದುರದೃಷ್ಟಕರ; ಇಡೀ ದೇಶವೇ ಉರಿಯುತ್ತಿದೆ. ಬಹಳ ಅಪರಾಧಗಳು ನಡೆಯುತ್ತಿರುವುದರಿಂದ ಇಂದು ಮಹಿಳೆಯರು ಸುರಕ್ಷಿತವಾಗಿಲ್ಲ. ಜನರನ್ನು ಜನರಂತೆ, ಮನುಷ್ಯರಂತೆ ಕಾಣುವುದಿಲ್ಲ.
ನಮಗೆ ಬೇಕಾಗಿರುವುದು ಹಿಂಸಾ-ಮುಕ್ತ, ಸುರಕ್ಷಿತ ಜಗತ್ತು. ಇದನ್ನೇ ನಾವೆಲ್ಲರೂ ಬಯಸಬೇಕು. ನಾವೆಲ್ಲರೂ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕು, ಅಲ್ಲವೇ?
ಯಾರೋ, ‘ಗುರೂಜೀ, ನಿಮಗೆ ಬಹಳ ಅಧಿಕಾರವಿದೆ’ ಎಂದರು; ಯಾವ ಅಧಿಕಾರ?!
ನಾವೆಂದೆವು, ‘ಎಲ್ಲರ ಮೇಲೆ ಅಧಿಕಾರವಿದೆಯೆನ್ನುವುದನ್ನು ನಿಂದನೆಯೆಂದು ಭಾವಿಸುತ್ತೇನೆ.’
ಇದೆಲ್ಲ ಜನರ ತಪ್ಪು ತಿಳುವಳಿಕೆಯಷ್ಟೇ, ‘ಓಹ್, ಆ ಆಧ್ಯಾತ್ಮ ಸಂಸ್ಥೆ ಅಥವಾ ಪಂಥಕ್ಕೆ, ಎಲ್ಲರ ಮೇಲೂ ಅಧಿಕಾರವಿದೆ,’  ಇವು ಹುರುಳಿಲ್ಲದ ಮಾತುಗಳು.
ನಾವು ಆ ಮಹಿಳೆಯನ್ನು ಕೇಳಿದೆವು, ‘ಮದರ್ ತೆರೆಸಾಗೆ ಇದೇ ಪ್ರಶ್ನೆಯನ್ನು ಕೇಳುವಿರಾ? ಇಲ್ಲ! ಏಕಿಲ್ಲ? ಏಕೆಂದರೆ ಅವರೊಬ್ಬ ಅಂಗೀಕೃತ ಧಾರ್ಮಿಕ ಪರಂಪರೆಗೆ (ಕ್ರೈಸ್ತ ಮತಕ್ಕೆ) ಸೇರಿರುವರೆಂದು.
ಯಾರೂ ಕೂಡ ಮದರ್ ತೆರೆಸಾ ಬಹಳ ಪ್ರಭಾವಶಾಲಿಯೆಂದು, ಕುಶಲತೆಯಿಂದ ಎಲ್ಲರನ್ನು ನಿಭಾಯಿಸುವರೆಂದು ಹೇಳುತ್ತಿರಲಿಲ್ಲ.
ಅವರ ಆಶ್ರಮದಲ್ಲೇ ನಾಲ್ಕು ಸಾವಿರ ಜನರು ಜೀವನ ನಡೆಸುತ್ತಿದ್ದರು. ಅವರೆಲ್ಲರೂ ತಮ್ಮ ತಮ್ಮ ಮನೆಗಳನ್ನು ಬಿಟ್ಟು ಬಡತನದ ಶಪಥವನ್ನು ಮಾಡಿದ್ದರು.
ನಾವು ಯಾರನ್ನೂ ಮನೆ ಬಿಟ್ಟು ಬನ್ನಿರೆಂದು ಹೇಳುವುದಿಲ್ಲ. ನಾವು ಸದಾ ನಿಮ್ಮ ಮನೆಯ ಜವಾಬ್ದಾರಿಯನ್ನು ನಿಭಾಯಿಸಿ ಹಾಗೂ ಎಲ್ಲೇ ಇದ್ದರೂ ಸಂತೋಷವಾಗಿರಿ ಎಂದು ಹೇಳುತ್ತೇವೆ; ಸಮಾಜದಲ್ಲಿರಿ.
ಮುಕ್ತಿ ಲಭ್ಯವಾಗುವುದೆಂಬ ಭರವಸೆಯಿಂದ ನಾಲ್ಕು ಸಾವಿರ ಮಹಿಳೆಯರು ಎಲ್ಲ ತೊರೆದು ಬಂದು, ಅವರ ಜೊತೆಯಿದ್ದರು. ಆದರೆ ನೀವು, ಎಲ್ಲರ ಮೇಲೆ ಪ್ರಭಾವ ಹೊಂದಿರುವಿರೆಂದು ಮದರ್ ತೆರೆಸಾಗೆ ಹೇಳುವುದಿಲ್ಲ.
ಇದು ಮನಸ್ಸಿನ ಭ್ರಮೆ.
ಖಂಡಿತವಾಗಿಯೂ, ಆಧ್ಯಾತ್ಮದ ಪಥದಲ್ಲಿ ಬಹಳ ಮಂದಿ ಪ್ರಾಮಾಣಿಕರಿಲ್ಲವೆಂಬುದರಲ್ಲಿ ಸಂಶಯವಿಲ್ಲ. ಆದ್ದರಿಂದಲೇ ನಾವು ಆಧ್ಯಾತ್ಮದ ಶಾಪಿಂಗ್‍ಗೆ ಹೋಗುವುದನ್ನು ಪುರಸ್ಕರಿಸುವುದಿಲ್ಲ. ಜ್ಞಾನವನ್ನು ಅನುಸರಿಸಿ, ಒಂದು ಆಧ್ಯಾತ್ಮದ ಪಥವನ್ನು ಅನುಸರಿಸಿ.
ವಿಶ್ವದಲ್ಲಿ, ಎಲ್ಲ ಬಗೆಯ ಜನರು ಆಧ್ಯಾತ್ಮದ ಹೆಸರಿನಲ್ಲಿ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಇದು ಇವತ್ತಿಗೆ ನಿಜವಿದ್ದರೂ, ಅದರ ಬಗ್ಗೆ ಭ್ರಮೆ ಬೇಡ. ಎಲ್ಲ ಆಧ್ಯಾತ್ಮ ಸಂಸ್ಥೆಯು ಜನರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವರೆಂದು ಹೇಳುವಂತಿಲ್ಲ. ಇದು ಇತರರಲ್ಲೂ ಭ್ರಮೆ ಸೃಷ್ಟಿಸುತ್ತಿದೆ.
ಒಂದು ಸಂಸ್ಥೆಯೆಂದರೆ ಫ಼ೋಟೋವನ್ನು ಹಿಡಿದಿಡುವ ಒಂದು ಫ್ರೇಮ್‍ನಂತೆ ಎಂದು ನಾವು ಸದಾ ಹೇಳುತ್ತಿರುತ್ತೇವೆ. ಅದು ಆವಶ್ಯಕವಾಗಿದೆ. ಸಂಸ್ಥೆಯಿಲ್ಲದೇ ಕೆಲಸ-ಕಾರ್ಯಗಳು ನಡೆಯುವುದಿಲ್ಲ.
ನಿಮಗೆ ವಸತಿ, ಆಹಾರ ಮತ್ತಿನ್ನೆಲ್ಲವನ್ನು ಒದಗಿಸಲು ಅನೇಕ ಜನರು ಶ್ರಮಿಸುತ್ತಿದ್ದಾರೆಂದು ನಿಮಗೆ ಗೊತ್ತೇ? ಇಂತಹ ಸ್ವಾದಿಷ್ಟವಾದ ಇಟಾಲಿಯನ್ ಆಹಾರವನ್ನು ತಯಾರಿಸಿದವರೆಲ್ಲರಿಗೂ ನೀವು ಧನ್ಯವಾದಗಳನ್ನು ತಿಳಿಸಬೇಕು. ಅವರು ಈ ಕೆಲಸವನ್ನು ಕೆಲಸವೆಂದೋ, ಇಲ್ಲವೇ ವೃತ್ತಿಯೆಂದೋ ಮಾಡುವುದಿಲ್ಲ, ಬದಲಿಗೆ ನಿಸ್ವಾರ್ಥ ಸೇವೆಯೆಂದು ನಿರ್ವಹಿಸುತ್ತಿದ್ದಾರೆ.
ಸೇವೆ ಮಾಡುವಾಗ ಭಕ್ತಿಯಿಂದ, ಹೃನ್ಮನಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ನಾವು ಸ್ವಯಂ ಮಾಡುತ್ತೇವೆ! ವಿಶ್ವದಾದ್ಯಂತ ನಾವು ಸಂಚರಿಸಿ ಶಿಬಿರದಲ್ಲಿ ಹೇಳಿಕೊಡುತ್ತೇವೆ. ನಾವು ಯಾರಿಂದಲೂ ಹಣವನ್ನು ತೆಗೆದುಕೊಳ್ಳುವುದಿಲ್ಲ, ಇಲ್ಲವೇ ಯಾವುದನ್ನು ನಮಗಾಗಿ ಇಟ್ಟುಕೊಳ್ಳುವುದಿಲ್ಲ. ಹೀಗಾಗಿ ಎಲ್ಲರೂ ನಮ್ಮಿಂದ ಸ್ಫೂರ್ತಿಯನ್ನು ಪಡೆದಿದ್ದಾರೆ.
ನಾವೇನಾದರೂ ಹಣವನ್ನೆಲ್ಲಾ ನಮ್ಮ ಬಳಿಯೇ ಇಟ್ಟುಕೊಂಡಿದ್ದರೆ, ಇಷ್ಟು ವೇಳೆಗೆ ಬಿಲಿಯನೇರ್ ಆಗುತ್ತಿದ್ದೆವು. ನಾವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬಂದು, ಶಿಬಿರ ನಡೆಸಿ ಮತ್ತೆ ಹೊರಡುತ್ತೇವೆ. ವರ್ಷಕ್ಕೊಮ್ಮೆ ಇಲ್ಲಿಗೆ ಬರದಿದ್ದರೆ, ಆಗ ಈ ಆಶ್ರಮವನ್ನು ಮುಚ್ಚಬೇಕಾಗುತ್ತದೆ. ತಾವೆ ಸ್ವತಃ ಇದನ್ನು ನಡೆಸಲು ಅಸಮರ್ಥರಾಗಿದ್ದಾರೆ. ಆದ್ದರಿಂದ  ಇಲ್ಲಿಗೆ ಬಂದು ಅವರಿಗೆ ನೆರವನ್ನು ನೀಡುತ್ತೇವೆ.
ಎಲ್ಲರೂ ಕೆಲಸ ಮಾಡುತ್ತಾ ತಮ್ಮ ಕರ್ಮ ಫಲಗಳನ್ನು ಗುರುಗಳಿಗೆ ಸಮರ್ಪಿಸುತ್ತಾರೆಂದು ತಿಳಿಯಬೇಡಿ. ಅದರ ಬದಲಿಗೆ ಗುರುಗಳು ಕೆಲಸ ಮಾಡುತ್ತಾ ಎಲ್ಲರಿಗೂ ನೆರವು ನೀಡುತ್ತಾರೆಂದು ತಿಳಿಯಿರಿ. ನಾವು ಪ್ರತಿನಿತ್ಯ ೧೯ಗಂಟೆಗಳ ಕಾಲ ಕೆಲಸ ಮಾಡಿ ಅನೇಕ ಜನರಿಗೆ ಆಶ್ರಯ ನೀಡುತ್ತೇವೆ. ಇದನ್ನು ಆನಂದದಿಂದ, ಪ್ರತಿಫಲಾಕ್ಷೆಯಿಲ್ಲದೇ ಮಾಡುತ್ತೇವೆ, ಅವರು ಸಂತೋಷವಾಗಿರುವುದೇ ನಮಗೆ ಬೇಕಾಗಿರುವುದು. ಅವರು ಸಂತೋಷವಾಗಿಲ್ಲವೆಂದರೆ ನಾವು ಸಂತೋಷವಾಗಿರುವುದಿಲ್ಲ.
ನಿಮಗೆ ಗೊತ್ತೇ, ಇತ್ತೀಚಿನ ದಿನಗಳಲ್ಲಿ ವಿಶ್ವದಲ್ಲಿ ಅಪನಂಬಿಕೆಯು ಹೆಚ್ಚಾಗಿದೆ.
ಗಂಡ-ಹೆಂಡತಿಯರಲ್ಲಿ, ತಂದೆ-ತಾಯಿ ಮತ್ತು ಮಕ್ಕಳ ನಡುವೆ, ನೆರೆಹೊರೆಯವರ ಮೇಲೆ ಅವಿಶ್ವಾಸ ಇತ್ಯಾದಿ. ಖಂಡಿತವಾಗಿಯೂ, ಈ ರೀತಿಯಲ್ಲಿ ಇಡೀ ವಿಶ್ವವವೇ ಅವಿಶ್ವಾಸ ಹೊಂದಲು ಪ್ರಾರಂಭಿಸಿದರೆ, ಆಗ ಒಂದು ಅಸ್ವಸ್ಥ ಸಮಾಜದ ನಿರ್ಮಾಣವಾಗುತ್ತದೆ. ಇದು ಬದಲಾಗಬೇಕಾಗಿದೆ.
ಜನರಿಗೆ ತಮ್ಮ ಮೇಲೂ ವಿಶ್ವಾಸವಿರುವುದಿಲ್ಲ. ಆತ್ಮವಿಶ್ವಾಸ, ಸಮಾಜದ ಒಳ್ಳೆಯತನದ ಮೇಲೆ ವಿಶ್ವಾಸ ಮತ್ತು ಅಗೋಚರವಾದ ಶಕ್ತಿ, ಸರ್ವವ್ಯಾಪಿಯಾದ ದೈವತ್ವದ ಮೇಲೆ ವಿಶ್ವಾಸವನ್ನು ಹೊಂದಿರಬೇಕು. ಈ ಮೂರು ಬಗೆಯ ವಿಶ್ವಾಸ ಅತ್ಯವಶ್ಯಕ. ಇದೇ ಆಧ್ಯಾತ್ಮ.

ಪ್ರ: ಪ್ರೀತಿಯ ಗುರೂಜೀ, ಕಾಲವು ಬದಲಾಗುತ್ತಿರುತ್ತದೆ ಆದರೆ ಆಕಾಶವು ಸ್ಥಿರವಾಗಿರುತ್ತದೆಂದು ವೈಜ್ಞಾನಿಕ ಪರಂಪರೆಯು ಹೇಳುತ್ತದೆ. ಪುರಾತನ ಗ್ರಂಥಗಳು ಹೇಳುವುದು, ಕಾಲವು ಸ್ಥಿರವಾದುದು ಹಾಗೂ ಆಕಾಶವು ಬದಲಾಗುತ್ತದೆಂದು. ಈ ಸಂಗತಿಯನ್ನು ವಿವರಿಸುವಿರಾ?
ಶ್ರೀಶ್ರೀರವಿಶಂಕರ್: ಕಾಲದಲ್ಲೂ ಎರಡು ಬಗೆಯಿದೆ.
ಒಂದು, ಬದಲಾಗುವ ಕಾಲ - ಭೂತ, ವರ್ತಮಾನ ಮತ್ತು ಭವಿಷ್ಯತ್; ಮತ್ತೊಂದು ಬದಲಾಗದೇ ಇರುವ ಮಹಾಕಾಲ; ಇನ್ನಿತರ ಎಲ್ಲ ಕಾಲಗಳಿಗೂ ಉಲ್ಲೇಖ ಬಿಂದು. ಅದನ್ನು ಮಹಾಕಾಲವೆನ್ನುವರು.
ಕಾಲವನ್ನು ನಿರ್ಣಯಿಸಲು ಉಲ್ಲೇಖ ಬಿಂದುವಿನ ಅವಶ್ಯಕತೆಯುಂಟಾಗುತ್ತದೆ. ಆಕಾಶ ಅಥವಾ ಕಾಲದ ಬಗ್ಗೆ ತಿಳಿಯಲು, ಬದಲಾವಣೆಯನ್ನು ನಿರ್ಣಯಿಸಲು ಯಾವುದೋ ಬದಲಾಗದೇ ಇರುವುದು ಇರಬೇಕು.
ಆದ್ದರಿಂದ ಉಲ್ಲೇಖ ಬಿಂದು ಹಾಗೂ ಎಲ್ಲಾ ಬದಲಾವಣೆಗಳಿಗೂ ಅದೇ ಆಧಾರ.
ನೀವು ಕಾಲವನ್ನು ತಿಳಿಯಲು, ಮನಸ್ಸನ್ನು ತಿಳಿಯಬೇಕು. ಮನಸ್ಸಿನ ಬಗ್ಗೆ ತಿಳಿಯದೆ ಕಾಲವನ್ನು ಅರಿಯಲಾಗದು, ಮತ್ತು ಮನಸ್ಸಿನ ಆಳವನ್ನು ಅರಿಯಲಾಗದು. ಅದನ್ನು ಸಂಪೂರ್ಣವಾಗಿ ಅರಿಯಲಾರಿರಿ.
ಆದ್ದರಿಂದಲೇ, ಎಷ್ಟರ ಮಟ್ಟಿಗೆ ನಿಮ್ಮ ಮನಸ್ಸನ್ನು ಅರಿತಿರುವಿರೋ, ಅಷ್ಟರ ಮಟ್ಟಿಗೆ ಕಾಲವನ್ನು ಅರಿತಿರುವಿರಿ.

ಪ್ರ: ಗುರೂಜೀ, ಆಶೀರ್ವಾದವು ಹೇಗೆ ಕೆಲಸ ಮಾಡುವುದೆಂದು ದಯವಿಟ್ಟು ವಿವರಿಸುವಿರಾ?
ಶ್ರೀಶ್ರೀರವಿಶಂಕರ್: ಆಶೀರ್ವಾದವು ನಿರ್ಮಲ ಹೃದಯದಿಂದ ಹರಿಯುವ ಸಕಾರಾತ್ಮಕ ಶಕ್ತಿಯಲ್ಲದೇ ಬೇರೇನಿಲ್ಲ.

ಪ್ರ: ಪ್ರೀತಿಯ ಗುರೂಜೀ, ವೈರಾಗ್ಯ ಮತ್ತು ಜ್ವರ ಪೀಡನೆಯಿಲ್ಲದಿರುವುದರ ಬಗ್ಗೆ ತಾವು ಬಹಳ ಸೊಗಸಾಗಿ ಮಾತನಾಡಿದಿರಿ. ಆದರೆ ನೀವು ನಮ್ಮ ಹತ್ತಿರವಿರುವಾಗ ಈ ಜ್ಞಾನವು ಬಹಿರ್ಮುಖವಾಗಿ ಕೇವಲ ಜ್ವರದ ತಪಿಸುವಿಕೆಯಿರುತ್ತದೆ.  
 ಶ್ರೀಶ್ರೀರವಿಶಂಕರ್: ಯಾವುದಾದರೊಂದು ವಿಷಯವನ್ನು ಹಿಡಿದುಕೊಳ್ಳುವುದು ಮನಸ್ಸಿನ ಸ್ವಭಾವ. ಆದ್ದರಿಂದ ಎಲ್ಲ ವಿಚಾರಗಳಿಂದ ಮುಕ್ತರಾಗುವ ತನಕ ಒಂದು ವಿಚಾರವನ್ನು ಹಿಡಿದುಕೊಂಡರೆ ಪರವಾಗಿಲ್ಲ.
ಆದರೆ ಕಾಲ ಕಳೆದಂತೆ ಅದರಿಂದಲೂ ಮುಕ್ತಿಯನ್ನು ಹೊಂದುವಿರಿ, ಮನಸ್ಸು ಶಾಂತವಾಗುವುದು.

ಪ್ರ: ಗುರೂಜೀ, ಮಕ್ಕಳಾಗದಿರುವುದು ಮತ್ತು ಸಂಬಂಧದಲಿಲ್ಲದಿರುವುದರ ಪರಿಣಾಮ ಕರ್ಮಗಳು ಕಳೆಯುವುದೆಂದು ಹೇಳುವುದು ಸರಿಯೇ ಅಥವಾ ಅದು ನಮ್ಮ ಆಯ್ಕೆಗೆ ಸಂಬಂಧಿಸಿದುದೇ?
ಶ್ರೀಶ್ರೀರವಿಶಂಕರ್: ಅದು ನಿಮ್ಮ ಆಯ್ಕೆಗೆ ಸಂಬಂಧಿಸಿದುದು. ಅದು ನಿಮ್ಮ ಮನಸ್ಸನ್ನು ನೀವು ಹೇಗೆ ನಿಭಾಯಿಸುವಿರೆಂಬುದನ್ನು ಅವಲಂಬಿಸುತ್ತದೆ.

ಪ್ರ: ಪ್ರೀತಿಯ ಗುರೂಜೀ, ಮಾನವೀಯತೆ, ಭೂಮಿ ಮತ್ತು ವಿಶ್ವದ ಮೇಲೆ ದಿ.12.12.12ರಂದು ನಡೆಸಿದ ಮೂರು ಧ್ಯಾನಗಳ ಪರಿಣಾಮವೇನೆಂದು ತಿಳಿಸಿ. 
ಶ್ರೀಶ್ರೀರವಿಶಂಕರ್: ನೋಡಿ, ಸೀಮಿತ ಮಾನದಂಡಗಳಿಂದ ಧ್ಯಾನದ ಪರಿಣಾಮವನ್ನು ಅಳೆಯಲಾಗದು. ನಮಗೆ ತಿಳಿದಿರುವ ಮಾನದಂಡಗಳಿಗೂ ಮೀರಿ ಕಾರ್ಯ ನಿರ್ವಹಿಸುತ್ತದೆ. ಪರಿಣಾಮವು ಖಂಡಿತವಾಗಿಯೂ ಇರುತ್ತದೆ. ಅದನ್ನು ಕಾಲ ತಿಳಿಸುವುದು.

ಪ್ರ: ಪ್ರೀತಿಯ ಗುರೂಜೀ, ಸೀಮಿತ ಸಮಯದವರೆಗೆ ಮಾತ್ರ ಈ ದೇಹವಿರುವುದೆಂದು ನೀವು ಹೇಳುವಿರಿ. ಹಾಗಾದರೆ ಮಹಾಭಾರತದ ಭೀಷ್ಮ ಪಿತಾಮಹನು (ಮಹಾಭಾರತದಲ್ಲಿ ಕೌರವ ಹಾಗೂ ಪಾಂಡವರ ಮುತ್ತಾತ) ಅಷ್ಟು ದೀರ್ಘಕಾಲ ಹೇಗೆ ಬದುಕಿದ್ದನು ಮತ್ತು ಹೇಗೆ ಇಚ್ಛಾಮರಣಿಯಾಗಿದ್ದನು?
ಶ್ರೀಶ್ರೀರವಿಶಂಕರ್: ನೋಡಿ, ಭೀಷ್ಮನ ಅಥವಾ ಇನ್ಯಾವುದೇ ಪಾತ್ರಕ್ಕೆ ನಾನು ವಕೀಲನಾಗಲಾರೆ. ನೀವು ಬೇಕಾದರೆ ಒಬ್ಬ ವಕೀಲ ಮತ್ತು ಮಾನವಶಾಸ್ತ್ರಜ್ಞನೊಂದಿಗೆ ಕುಳಿತುಕೊಂಡು ಇವೆಲ್ಲವುದರ ಬಗ್ಗೆ ಸಂಶೋಧನೆ ನಡೆಸಬಹುದು.
ನಾವು ಮಕ್ಕಳಾಗಿದ್ದಾಗ, ಹೇಗೆ ಒಂದು ಹಕ್ಕಿಯು ಜನರನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ಹೋಗುವುದೆಂದು ಆಶ್ಚರ್ಯಪಟ್ಟಿದ್ದೆವು. ಅಷ್ಟು ಚಿಕ್ಕದಾದ ಹಕ್ಕಿಯ ಮೇಲೆ ಒಂದು ಮಂಟಪವು ಹೇಗಿರಬಹುದೆಂದು ವಿಸ್ಮಯಗೊಂಡಿದ್ದೆವು.
ಸಾಮಾನ್ಯವಾಗಿ ಪುರಾಣದ ಚಿತ್ರಗಳಲ್ಲಿ ಮತ್ತು ಕತೆಗಳಲ್ಲಿ, ಒಂದು ಹಕ್ಕಿಯು ತನ್ನ ಬೆನ್ನ ಹಿಂದೆ ಒಂದು ಮಂಟಪವನ್ನು ಹೊತ್ತುಕೊಂಡಿರುವ ಚಿತ್ರವನ್ನು ನೋಡಿರುವೆವು ಅಥವಾ ಓದಿರುವೆವು.
ಆದರೆ ನೋಡಿ, ನೀವು ವಿಜ್ಞಾನದಲ್ಲಿ ಆಳವಾಗಿ ಹೋದಾಗ, ವೈಜ್ಞಾನಿಕರೂ ಸಹ ಸುಮಾರು 300 ಟನ್‍ಗಳಷ್ಟು ತೂಕದ ಭಾರೀ ಗಾತ್ರದ ಹಕ್ಕಿಗಳಿದ್ದವೆಂದು ಹೇಳುತ್ತಾರೆ.
ಡೈನಾಸರ್ ಯುಗದಲ್ಲಿ ಏರ್ ಪ್ಲೇನ್‍ಗಳಂತೆ ಬಹಳ ದೊಡ್ಡದಾದಂತಹ ಹಕ್ಕಿಗಳಿದ್ದವು. ಅವು ಅಷ್ಟು ಭಾರಿಯಾಗಿದ್ದರೆ, ಅವುಗಳ ಮೇಲೆ ಹತ್ತು ಜನರನ್ನು ಖಂಡಿತವಾಗಿಯೂ ಕೂರಿಸಬಹುದು. ಹತ್ತೇಕೆ, ಅವುಗಳ ಮೇಲೆ ನೂರು ಜನರನ್ನು ಕೂರಿಸಬಹುದು.
ಅಂತಹ ಹಕ್ಕಿಗಳನ್ನು ಈ ರೀತಿಯ ಕಾರ್ಯಗಳಿಗೆ ತರಬೇತಿ ನೀಡಬಹುದಾಗಿತ್ತು. ಇವು ಖಂಡಿತವಾಗಲೂ ಸಾಧ್ಯ. ಎಲ್ಲವೂ ಸಾಧ್ಯವೆಂದು ನಾವು ಸದಾ ಹೇಳಬೇಕು.