ಬುಧವಾರ, ಡಿಸೆಂಬರ್ 19, 2012

ಅನ್ಯಾಯವನ್ನು ವಿರೋಧಿಸಿ


೧೯ ಡಿಸೆಂಬರ್ ೨೦೧೨
ಬೆಂಗಳೂರು ಆಶ್ರಮ

ಪ್ರಶ್ನೆ: ಗುರುದೇವ, ಯುದ್ಧಕ್ಕೆ ಬರುವ ಮೊದಲು ಕೃಷ್ಣ ಪರಮಾತ್ಮನೊಂದಿಗಿರಲು ಅರ್ಜುನನಿಗೆ ಧಾರಾಳ ಸಮಯವಿದ್ದಿದ್ದರೂ ಅವನು ಯುದ್ಧಭೂಮಿಯಲ್ಲೇ ಸಂಶಯವನ್ನು ಕೇಳಿದುದು ಯಾಕೆ?
ಶ್ರೀ ಶ್ರೀ ರವಿ ಶಂಕರ್: ಕೇಳು, ಅರ್ಜುನನು ಒಂದು ಸಂಶಯವನ್ನು ಕೂಡಾ ಕೇಳಲಿಲ್ಲ, ಅವನು ಸುಮ್ಮನೇ ಅಂದನು, "ನಾನು ಯುದ್ಧ ಮಾಡಲು ಬಯಸುವುದಿಲ್ಲ", ಅಷ್ಟೆ.
ಮೊದಲು ಪ್ರಶ್ನೆ ಕೇಳಿದುದು ಕೃಷ್ಣ. ಅವನಂದನು, "ಅರ್ಜುನ, ನೀನು ದುಃಖಿತನಾಗಿರುವೆ. ಯಾವುದಕ್ಕೆ ನೀನು ರೋದಿಸಬಾರದೋ ಅಂತಹ ವಿಷಯಗಳಿಗಾಗಿ ನೀನು ರೋದಿಸುತ್ತಿರುವೆ ಮತ್ತು ನೀನು ಒಬ್ಬ ಪಂಡಿತನಂತೆ ಮಾತನಾಡುತ್ತಿರುವೆ."
ಅವನಂದನು, "ಅಶೋಚ್ಯಾನ್ ಅನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ ಗತಾಸೂನಗತಾಸೂಂಶ್ಚ ನಾನುಶೋಚಂತಿ ಪಂಡಿತಾಃ" (ಭಗವದ್ಗೀತೆ ಅಧ್ಯಾಯ ೨, ಶ್ಲೋಕ ೧೧). ಕೃಷ್ಣ ಪರಮಾತ್ಮನು ಭಗವದ್ಗೀತೆಯನ್ನು ಪ್ರಾರಂಭಿಸುವುದು ಹಾಗೆ.
ಅವನು ಹೇಳುತ್ತಾನೆ, "ಯಾವುದಕ್ಕಾಗಿ ನೀನು ದುಃಖಿಸಬಾರದೋ ಅದಕ್ಕಾಗಿ ನೀನು ದುಃಖಿಸುತ್ತಿರುವೆ."
ನೋಡಿ, ನೀವೊಬ್ಬ ಸೈನಿಕನಾಗಿದ್ದರೆ ಅಥವಾ ನೀವೊಬ್ಬ ಪೋಲಿಸ್ ಆಗಿದ್ದರೆ, ನೀವು ನಿಮ್ಮ ಕೆಲಸವನ್ನು ಮಾಡಬೇಕು.
ಇವತ್ತು, ದಿಲ್ಲಿಯಲ್ಲಿ ದೊಡ್ಡದೊಂದು ಜಾಥಾ ಇದೆ. ನಿನ್ನೆ ಸಾವಿರಾರು ಆರ್ಟ್ ಆಫ್ ಲಿವಿಂಗ್ ಸ್ವಯಂಸೇವಕರು (ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ) ಇಂಡಿಯಾ ಗೇಟಿನಲ್ಲಿ ಒಂದು ದೊಡ್ಡ ಮೊಂಬತ್ತಿ ನಡಿಗೆಯನ್ನು ಪ್ರಾರಂಭಿಸಿದರು ಮತ್ತು ಇವತ್ತು ಹಲವಾರು ಜನರು ಸೇರಿದ್ದಾರೆ. ಜೆ.ಎನ್.ಯು. (ಜವಹರ್ಲಾಲ್ ನೆಹರೂ ಯುನಿವರ್ಸಿಟಿ) ಸೇರಿದೆ, ಐ.ಐ.ಟಿ. (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಸೇರಿದೆ, ದಿಲ್ಲಿ ವಿಶ್ವವಿದ್ಯಾಲಯ ಸೇರಿದೆ. ಕೇವಲ ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಲು ಯಾರಾದರೂ ಬೇಕಿತ್ತು.
ನಿನ್ನೆ ಬೆಳಗ್ಗೆ ದಿಲ್ಲಿಯ ಶಿಕ್ಷಕರು ನನ್ನಲ್ಲಿ ಕೇಳಿದರು, "ಗುರುದೇವ, ನಾವು ಮೋಂಬತ್ತಿ ಬೆಳಕಿನ ನಡಿಗೆಯ ಪ್ರಾರ್ಥನೆಯನ್ನು ಮಾಡಲು ಬಯಸುತ್ತೇವೆ." ಅಲ್ಲಿ ಯಾವುದೇ ಘೋಷಣಾ ವಾಕ್ಯವನ್ನು ಕೂಗುವುದಾಗಲೀ, ದೂಷಿಸುವುದಾಗಲೀ, ಯಾರ ಮೇಲಾದರೂ ಚೀರಾಡುವುದಾಗಲೀ ಇರಲಿಲ್ಲ, ಬದಲಿಗೆ ಎಲ್ಲರೂ ಶಾಂತಿಯುತವಾಗಿ ಅಲ್ಲಿಗೆ ಹೋಗಿ ಕುಳಿತರು. ಅವರು ಕೆಲವು ನಿಮಿಷಗಳ ವರೆಗೆ ಧ್ಯಾನ ಮಾಡಿದರು, ಮೋಂಬತ್ತಿಗಳನ್ನು ಹಚ್ಚಿದರು ಮತ್ತು ಕೇವಲ, ಮಹಿಳೆಯರು ಸುರಕ್ಷಿತವಾಗಿರಬೇಕೆಂಬ ಜಾಗೃತಿಯನ್ನು ಸೃಷ್ಟಿಸಿದರು.
ಈ ದೇಶದಲ್ಲಿ ಮಹಿಳೆಯರು ಬಹಳ ಸುರಕ್ಷಿತವಾಗಿದ್ದ ಕಾಲವೊಂದಿತ್ತು, ಆದರೆ ಇದೀಗ ಹಳ ವ್ಯತ್ಯಸ್ತವಾದ ಒಂದು ಜಾಗವಾಗಿ ಮಾರ್ಪಡುತ್ತಿದೆ.
ಹೀಗೆ ಆರ್ಟ್ ಆಫ್ ಲಿವಿಂಗಿನ ನಮ್ಮ ಸ್ವಯಂಸೇವಕರು ಮತ್ತು ಶಿಕ್ಷಕರು ನಿನ್ನೆ ಮಧ್ಯಾಹ್ನವಷ್ಟೇ ಮೋಂಬತ್ತಿ ಬೆಳಕಿನ ನಡಿಗೆ ಹಾಗೂ ಪ್ರಾರ್ಥನೆ ಮಾಡುವ ಈ ನಿರ್ಧಾರವನ್ನು ತೆಗೆದುಕೊಂಡರು ಮತ್ತು ೬ ಗಂಟೆಯಾಗುವಷ್ಟರಲ್ಲಿ ಎಲ್ಲೆಡೆಯಿಂದ ಜನರು ಬಂದಿದ್ದರು.
ಆಂತರಿಕ ಶಾಂತಿ ಅಥವಾ ಆಂತರಿಕ ಪ್ರಪಂಚದ ಒಂದು ಚಿಕ್ಕ ಮಿನುಗುನೋಟ ಕಂಡ ಜನರೊಂದಿಗೆ ಹೋಲಿಸಿದರೆ, ತಮ್ಮ ಭಾವನೆಗಳ ಬಗ್ಗೆ ತಿಳಿಯದ ಅಥವಾ ಮನಸ್ಸನ್ನು ಶಾಂತವಾಗಿಸದ ಜನರಲ್ಲಿ, ನನಗೆ ದೊಡ್ದದೊಂದು ವ್ಯತ್ಯಾಸವು ಕಾಣಿಸುತ್ತದೆ. ಅಂತಹ ಜನರು ಒಂದು ಕೆಲಸವನ್ನು ಕೈಗೆತ್ತಿಕೊಂಡಾಗ, ಅವರು ಬಹಳ ಕ್ಷೋಭೆಗೊಳಗಾಗುತ್ತಾರೆ, ಆಕ್ರಮಣಕಾರಿಯಾಗುತ್ತಾರೆ, ಎಲ್ಲದಕ್ಕೂ ಅಡ್ಡಿ ಪಡಿಸುತ್ತಾರೆ.
ನಾನು ಏನನ್ನು ಹೇಳಲು ಪ್ರಯತ್ನಿಸುತ್ತಿರುವೆನೆಂದರೆ, ಒಬ್ಬ ಪೋಲಿಸ್, "ನಾನು ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿಯನ್ನು ವಹಿಸಲು ಬಯಸುವುದಿಲ್ಲ" ಎಂದು ಹೇಳಿದರೆ ಏನಾಗಬಹುದು?
ಅರ್ಜುನನು ಹಾಗಿದ್ದನು. ಅವನೊಬ್ಬ ಯೋಧನಾಗಿದ್ದನು ಮತ್ತು ಅವನ ಕೆಲಸವು ಜನರನ್ನು ಅನ್ಯಾಯದಿಂದ ರಕ್ಷಿಸುವುದಾಗಿತ್ತು ಹಾಗೂ ಅವನು, "ನಾನು ಯಾರನ್ನೂ ಅನ್ಯಾಯದಿಂದ ರಕ್ಷಿಸಲು ಬಯಸುವುದಿಲ್ಲ" ಎಂದು ಹೇಳುತ್ತಿದ್ದನು.
ಆಗ ಕೃಷ್ಣ ಪರಮಾತ್ಮನು ಹೇಳುತ್ತಾನೆ, "ಕೇಳು, ನೀನೊಬ್ಬ ಪಂಡಿತನಂತೆ ಮಾತನಾಡುವೆ, ಆದರೆ ನೀನು ಜನರನ್ನು ರಕ್ಷಿಸುವ ನಿನ್ನ ಕರ್ತವ್ಯದಿಂದ ದೂರ ಓಡುತ್ತಿರುವೆ." ದಿಲ್ಲಿ ಪೋಲೀಸರು ಹೇಳುವಂತೆಯೇ, "ಇದು ನನ್ನ ವ್ಯವಹಾರವಲ್ಲ"; ಅಥವಾ ರಾಜಕಾರಣಿಗಳು, "ಇದು ನನ್ನ ಕೆಲಸವಲ್ಲ" ಎಂದು ಹೇಳುವಂತೆ. ಒಂದು ರೀತಿಯಲ್ಲಿ ನಾನು ಅವರು ಹೇಳುವುದನ್ನು ಒಪ್ಪುತ್ತೇನೆ, ಯಾಕೆಂದರೆ ಜನರಲ್ಲಿ ಮಾನವೀಯ ಮೌಲ್ಯಗಳನ್ನು ತುಂಬದಿದ್ದಲ್ಲಿ, ಕೇವಲ ಕೆಲವು ಪೋಲೀಸರು ತಾನೇ ಏನನ್ನಾದರೂ ಹೇಗೆ ಮಾಡಲು ಸಾಧ್ಯ? ಆದರೂ!
ನಿಮಗೆ ಗೊತ್ತಾ, ಹಲವು ಸಲ ಪೋಲೀಸ್ ದಳದ ನೈತಿಕ ಪತನವಾಗುತ್ತದೆ. ಯಾಕೆಂಬುದು ನಿಮಗೆ ಗೊತ್ತಾ? ಪೋಲೀಸರು ತಮ್ಮ ಜೀವವನ್ನು ಅಪಾಯಕ್ಕೊಡ್ಡುತ್ತಾರೆ, ಅವರು ಹೋಗಿ ಹುಡುಕಿ ಒಬ್ಬ ವ್ಯಕ್ತಿಯನ್ನು ಬಂಧಿಸಿ ಒಳಕ್ಕೆ ಹಾಕುತ್ತಾರೆ ಹಾಗೂ ರಾಜಕಾರಣಿಗಳು ಅವರಿಗೊಂದು ಫೋನ್ ಮಾಡಿ, "ಇಲ್ಲ, ಈ ವ್ಯಕ್ತಿಯ ವಿರುದ್ಧ ಯಾವುದೇ ದೂರು ಮಾಡಬೇಡ, ಅವನನ್ನು ಸುಮ್ಮನೇ ಬಿಡು" ಎಂದು ಹೇಳುತ್ತಾರೆ ಮತ್ತು ಅವರು ಅವನನ್ನು ಬಿಡಲೇ ಬೇಕಾಗುತ್ತದೆ. ಒಬ್ಬ ವ್ಯಕ್ತಿಯನ್ನು ಈ ರೀತಿಯಲ್ಲಿ ನೀವು ಬಿಡುವಾಗ, ಆ ವ್ಯಕ್ತಿಯು ನಿಮ್ಮ ಹಿಂದೆ ಬೀಳುತ್ತಾನೆ ಮತ್ತು ನೈತಿಕ ಪತನವಾಗುತ್ತದೆ. ಇದು ಅಧರ್ಮ.
ಇನ್ನೊಂದು ಅಧರ್ಮವೆಂದರೆ ಮೀಸಲಾತಿಯ ಮೇಲಿರುವ ಮಸೂದೆ. ನಾನು ಹೇಳುವುದೇನೆಂದರೆ, ಯಾರಾದರೂ ಮೀಸಲಾತಿ ಪಡೆಯುವುದು ತಪ್ಪೆಂದು. ಒಂದು ನೌಕರಿಗಾಗಿ ಮೀಸಲಾತಿ ಪಡೆಯುವುದು ಪರವಾಗಿಲ್ಲ, ಆದರೆ ಬಡ್ತಿಗಾಗಿ ಮೀಸಲಾತಿ ಪಡೆಯುವುದು ಸರಿಯಲ್ಲ.
ನೋಡಿ, ಒಬ್ಬ ವ್ಯವಸ್ಥಾಪಕನಿದ್ದಾನೆ ಮತ್ತು ಅವನು ತನ್ನ ಕೈಕೆಳಗೆ ಒಬ್ಬ ಗುಮಾಸ್ತನನ್ನು ನೇಮಿಸಿದ್ದಾನೆ. ಗುಮಾಸ್ತನು ಒಂದು ನಿರ್ದಿಷ್ಟ ಜಾತಿಗೆ ಸೇರಿದವನು ಎಂಬ ಕಾರಣಕ್ಕಾಗಿ ಮಾತ್ರ, ಮೂರು ವರ್ಷಗಳಲ್ಲಿ ಅವನು ಮೇಲಾಧಿಕಾರಿಯಾದರೆ, ಆಗ ವ್ಯವಸ್ಥಾಪಕನ ಮನೋಬಲಕ್ಕೇನಾಗಬಹುದು?
ಈ ದೇಶದ ಇಡೀ ಆಡಳಿತ ದುಷ್ಟರ ಕೈಗೆ ಹೋಗುತ್ತದೆ. ಕಿರಿಯಾಧಿಕಾರಿಗಳನ್ನು ಹಿರಿಯಾಧಿಕಾರಿಗಳ ಹಿರಿಯಾಧಿಕಾರಿಗಳನ್ನಾಗಿ ಮಾಡಿದರೆ ಅದು ಸಂಪೂರ್ಣವಾಗಿ ನಾಶವಾಗುವುದು.
ನೀವೊಬ್ಬ ಮೇಲ್ವಿಚಾರಕನೆಂದು, ಮತ್ತು ನಿಮ್ಮ ಕೆಳಗಿನ ಅಧಿಕಾರಿಯು ಕೆಲವು ವರ್ಷಗಳಲ್ಲಿ ನಿಮ್ಮ ಹಿರಿಯ ಅಧಿಕಾರಿಯಾಗುವನೆಂದು ಸುಮ್ಮನೇ ಊಹಿಸಿ. ಆಗ ಅವನೇನೇ ಮಾಡುತ್ತಿದ್ದರೂ ಅದಕ್ಕೆ ಅವನನ್ನು ಜವಾಬ್ದಾರನನ್ನಾಗಿಸುವ ಧೈರ್ಯವು ನಿಮ್ಮಲ್ಲಿರಬಹುದೇ? ಮೊದಲನೆಯದಾಗಿ, ಇಲ್ಲ!
ಎರಡನೆಯದಾಗಿ, ನೀವು ನಿಮ್ಮ ವಿಭಾಗದಲ್ಲಿ ಬಹಳ ಚೆನ್ನಾಗಿ ಆಡಳಿತ ನಡೆಸುತ್ತಿರುವಿರಿ ಮತ್ತು ನಾಳೆ ಒಬ್ಬ ಕಿರಿಯ ಅಧಿಕಾರಿಯು ನಿಮ್ಮ ಹಿರಿಯಾಧಿಕಾರಿಯಾಗಿ ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳುತ್ತಾನೆಂದಿಟ್ಟುಕೊಳ್ಳೋಣ, ಅದು ಎಷ್ಟೊಂದು ದೊಡ್ಡ ಅವಮಾನ.
ಯಾವುದೇ ಆಡಳಿತ ವ್ಯವಸ್ಥೆಯಲ್ಲಿ ಕಿರಿಯಾಧಿಕಾರಿಗಳು ಹಿರಿಯಾಧಿಕಾರಿಗಳಾಗುವಾಗ ಜನರಿಗೆ ಅದೊಂದು ದೊಡ್ಡ ಅವಮಾನವಾಗುತ್ತದೆ. ಅದರಿಂದ ಆಡಳಿತ ವ್ಯವಸ್ಥೆಗೆ ಕೊನೆಯುಂಟಾಗುತ್ತದೆ. ಇದು ದೇಶದ ಆಡಳಿತ ವ್ಯವಸ್ಥೆಯ ಬಹಳ ಶೋಚನೀಯ ಸ್ಥಿತಿಯಾಗಿದೆ.
ಇವತ್ತು ಬೆಳಗ್ಗಿನಿಂದ ನಾನು ಹಲವಾರು ಜನರಿಗೆ ಕರೆ ಮಾಡಿ, ಇದು ಅವಿವೇಕವೆಂದು ಹೇಳಿದ್ದೇನೆ. ರಾಜ್ಯಸಭೆಯು ಈ ದೇಶದ ಬುದ್ಧಿವಂತರ ಸದನವಾಗಿರಬೇಕು. ಈ ದೇಶದ ಬುದ್ಧಿವಂತರ ಸದನವು ಇಂತಹ ಒಂದು ಕಾನೂನನ್ನು ಹೇಗೆ ಜಾರಿಗೊಳಿಸಲು ಸಾಧ್ಯ? ಅದು ಅಪಾಯಕಾರಿ. ಭವಿಷ್ಯದಲ್ಲಿ, ಇದಕ್ಕಾಗಿ ಜನರು ಅವರನ್ನು ಕ್ಷಮಿಸಲಾರರು. ಇದು ಜಾತಿಯ ಬಗ್ಗೆಯಲ್ಲ. ಕೇವಲ ಒಂದು ಜಾತಿಗೆ ಸೇರಿದವರು ಎಂಬ ಕಾರಣಕ್ಕಾಗಿ ನಿಮ್ಮ ಕಿರಿಯಾಧಿಕಾರಿಗಳಾಗಿರುವ ಜನರ ಒಂದು ಗುಂಪಿಗೆ, ನಿಮ್ಮ ಹಿರಿಯಾಧಿಕಾರಿಗಳಾಗಲು ಬಡ್ತಿ ನೀಡಲಾಗುತ್ತದೆ, ಇದು ಸರಿಯಲ್ಲ. ಇದು ಅನ್ಯಾಯ.
ಇದು ಸರ್ವೋಚ್ಛ ನ್ಯಾಯಾಲಯದಲ್ಲಿ ನಿಲ್ಲಬಹುದೆಂದು ನನಗನಿಸುವುದಿಲ್ಲ. ಮೇಲಾಗಿ, ಸರ್ವೋಚ್ಛ ನ್ಯಾಯಾಲಯವು ಈಗಾಗಲೇ ಈ ಕಾನೂನನ್ನು ಎರಡು ಸಲ ತಳ್ಳಿ ಹಾಕಿದೆ ಮತ್ತು ಆದರೂ ಈ ಜನರು ಅಂತಹ ಕಾನೂನನ್ನು ಮಾಡುತ್ತಿದ್ದಾರೆ. ಇದು ಸಂಪೂರ್ಣವಾಗಿ ಅಸ್ವೀಕಾರಾರ್ಹ. ಇದು ಅನ್ಯಾಯವೆಂದು ಮತ್ತು ಸಂಪೂರ್ಣ ಕಾರ್ಯವಿಧಾನವನ್ನು ತಪ್ಪಿಸಿ ಮಾಡುವ ಪ್ರಯತ್ನವೆಂದು ನ್ಯಾಯಾಂಗವು ಹೇಳುವಾಗ, ಯಾರೂ ಇಂತಹುದನ್ನು ಮಾಡುವುದು ಸರಿಯಲ್ಲ, ಮತ್ತು ನಾವು, ಜನರು, ನಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಸುಮ್ಮನೇ ಕುಳಿತುಕೊಳ್ಳಲು ಸಾಧ್ಯವಿಲ್ಲ.
ಶಿಕ್ಷಣದಲ್ಲಿ ಮೀಸಲಾತಿ, ಉದ್ಯೋಗದಲ್ಲಿ ಮೀಸಲಾತಿ ಸರಿ, ಆದರೆ ಬಡ್ತಿಯಲ್ಲಿನ ಮೀಸಲಾತಿಯು ಆಡಳಿತ ವ್ಯವಸ್ಥೆಯನ್ನು ನಾಶಗೊಳಿಸುತ್ತದೆ. ಇದೊಂದು ಅತ್ಯಂತ ಗಂಭೀರವಾದ ವಿಷಯ. ನಿಮಗೆ ಹಾಗನ್ನಿಸುವುದಿಲ್ಲವೇ? ನಿಮ್ಮಲ್ಲಿ ಎಷ್ಟು ಮಂದಿಗೆ ಆ ರೀತಿ ಅನ್ನಿಸುತ್ತದೆ? (ಎಲ್ಲರೂ ತಮ್ಮ ಕೈಗಳನ್ನು ಮೇಲೆತ್ತುತ್ತಾರೆ)
ಅದನ್ನೇ ಕೃಷ್ಣ ಪರಮಾತ್ಮನು ಹೇಳಿದುದು, "ದುರ್ಯೋಧನನು ಅಷ್ಟೊಂದು ಹಾನಿಯನ್ನುಂಟುಮಾಡುತ್ತಿದ್ದಾನೆ ಮತ್ತು ನೀನು ನಿನ್ನ ಕಣ್ಣುಗಳನ್ನು ಮುಚ್ಚಿ ಸುಮ್ಮನೇ ಕುಳಿತುಕೊಳ್ಳಲು ಬಯಸುವೆ. ಯುದ್ಧ ಮಾಡುವುದು ನಿನ್ನ ಕರ್ತವ್ಯ. ಬಾ, ಎದ್ದೇಳು."
ಮತ್ತು ಅವನು ಯುದ್ಧ ಮಾಡಲು ಸಿದ್ಧವಾದಾಗ, ಅವನು ಅವನಿಗೆ ಜ್ಞಾನವನ್ನು ನೀಡಿದನು, "ಯೋಗಸ್ಥ: ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ’, (ಭಗವದ್ಗೀತೆ ಅಧ್ಯಾಯ ೨, ಶ್ಲೋಕ ೪೮)
ಅವನು ಹೇಳುತ್ತಾನೆ, "ಮೊದಲು ಒಳಗೆ ಹೋಗು ಮತ್ತು ನಿನ್ನನ್ನೇ ಶುದ್ಧಪಡಿಸು. ದ್ವೇಷದೊಂದಿಗೆ ಯುದ್ಧ ಮಾಡಬೇಡ, ಆದರೆ ನ್ಯಾಯಕ್ಕಾಗಿ ಯುದ್ಧ ಮಾಡು; ಸಮಚಿತ್ತತೆಯೊಂದಿಗೆ ಯುದ್ಧ ಮಾಡು."
ನೀವು ಆವೇಶದೊಂದಿಗೆ ಮತ್ತು ಕ್ರೋಧದೊಂದಿಗೆ ಹೋರಾಡುತ್ತಿದ್ದರೆ, ನೀವು ನಿಮಗೇ ಹಾನಿಯನ್ನುಂಟು ಮಾಡುವಿರಿ, ಯಾಕೆಂದರೆ ನೀವು ಆವೇಶದಲ್ಲಿರುವಾಗ ಮತ್ತು ಒಂದು ಭಾವನಾತ್ಮಕ ಒತ್ತಡದಲ್ಲಿರುವಾಗ, ನಿಮ್ಮ ಬುದ್ಧಿ ಮತ್ತು ನಿಮ್ಮ ಮನಸ್ಸು ಸರಿಯಾಗಿ ಕೆಲಸ ಮಾಡಲಾರದು.
ಅದಕ್ಕಾಗಿಯೇ, ನಿಮ್ಮ ಮನಸ್ಸು ಮೊದಲಿಗೆ ಶಾಂತವಾಗಬೇಕು. ಅದು ಶಾಂತ ಹಾಗೂ ಪ್ರಸನ್ನವಾಗಿರುವಾಗ ನ್ಯಾಯವು ಬರುತ್ತದೆ, ಸರಿಯಾದ ಯೋಚನೆಗಳು ಬರುತ್ತವೆ ಮತ್ತು ನಿಮ್ಮ ಆಲೋಚನೆಗಳು ಹೆಚ್ಚು ಸೃಜನಶೀಲ, ಫಲದಾಯಕ ಮತ್ತು ಸಕಾರಾತ್ಮಕವಾಗಿರುತ್ತವೆ. ನಕಾರಾತ್ಮಕ ಆಲೋಚನೆಗಳು ಬರುವುದು ನೀವು ಆವೇಶದಲ್ಲಿರುವಾಗ ಮಾತ್ರ. ನೀವು ಶಾಂತವಾಗಿ ಮತ್ತು ಸಕಾರಾತ್ಮಕವಾಗಿರುವಾಗ, ನಿಮ್ಮಿಂದ ಸೃಜನಾತ್ಮಕ ವಿಚಾರಗಳು ಹೊರಬರುತ್ತವೆ. ಇದು ಭಗವದ್ಗೀತೆಯ ಸಾರವಾಗಿದೆ. ಅವನನ್ನುತ್ತಾನೆ, "ಯುಧ್ಯಸ್ವ ವಿಗತ-ಜ್ವರಃ." ಅಂದರೆ ಆ ಜ್ವರ, ಆ ಕೋಪ ಮತ್ತು ದ್ವೇಷ; ಮೊದಲಿಗೆ ಅದನ್ನು ಹೋಗಲು ಬಿಡು ಮತ್ತು ನಂತರ ಹೋರಾಡು.
ನೋಡಿ ಗೀತೆಯು ಹೇಗೆ ವರ್ತಮಾನ ದಿನದ ಪರಿಸ್ಥಿತಿಯೊಂದಿಗೆ ಸಂಬಂಧ ಹೊಂದಿದೆಯೆಂದು.  ಇದು ಬಹಳ ಸ್ಪಷ್ಟವಾಗಿದೆ.
ನಿನ್ನೆ ಮತ್ತು ಇವತ್ತಿನ ಇಡಿಯ ದಿನವನ್ನು, ಇಂಡಿಯಾ ಗೇಟಿಗೆ ಹೋಗಿ ಜಾಗೃತಿಯನ್ನು ಸೃಷ್ಟಿಸುವುದರಲ್ಲಿ ಮತ್ತು ದೇಶದಲ್ಲಿಡೀ ಒಂದು ದೊಡ್ದ ಅಲೆಯನ್ನುಂಟುಮಾಡುವುದರಲ್ಲಿ ಕಳೆದ ಆ ಸ್ವಯಂಸೇವಕರ ಬಗ್ಗೆ ನನಗೆ ಸಂತೋಷವಿದೆ. ನಮ್ಮ ಆರ್ಟ್ ಆಫ್ ಲಿವಿಂಗಿನ ಸ್ವಯಂಸೇವಕರು ನಿನ್ನೆ ದಿಲ್ಲಿಯಲ್ಲೇನು ಮಾಡಿದರೋ ಅದು ಇವತ್ತು ದೇಶದಲ್ಲಿಡೀ ಹರಡಿದೆ. ಎಲ್ಲೆಡೆಯೂ ಮೋಂಬತ್ತಿ ಬೆಳಕಿನ ನಡಿಗೆ ನಡೆಯುತ್ತಿದೆ ಮತ್ತು ಜನರು ಎದ್ದುನಿಂತು ಮಹಿಳೆಯರ ಮೇಲಿನ ಹಿಂಸೆಯ ವಿರುದ್ಧವಾಗಿ ಮಾತನಾಡುತ್ತಿದ್ದಾರೆ. ಇದೊಂದು ಬಹಳ ಸ್ವಾಗತಾರ್ಹ ಹೆಜ್ಜೆ.
ಇದನ್ನೇ ನಾನು ಹೇಳುತ್ತಾ ಇರುವುದು, ನಿಮ್ಮ ಶಕ್ತಿಯನ್ನು ಅಲ್ಪವಾಗಿ ತಿಳಿಯಬೇಡಿ. ನಮ್ಮಲ್ಲಿರುವ ಶಕ್ತಿಯು ವಿಷಯಗಳನ್ನು ಸರಿ ದಿಕ್ಕಿನಲ್ಲಿ ಬದಲಾಯಿಸಬಹುದು. ನಿಮ್ಮಲ್ಲಿನ ಪ್ರತಿಯೊಬ್ಬರೂ ಈಗಾಗಲೇ ಒಬ್ಬ ಮುಂದಾಳುವಾಗಿರುವಿರಿ, ಮತ್ತು ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಸಮಾಜದಲ್ಲಿ ಒಂದು ದೊಡ್ಡ ಬದಲಾವಣೆಯನ್ನು ತರಲು ಸಾಧ್ಯವಿದೆ. ನೀವೆಲ್ಲರೂ ಒಟ್ಟಾಗಿ ಬಂದು ಏನನ್ನಾದರೂ ಮಾಡಿದರೆ, ಆಗ ಈ ದೇಶವು ಬದಲಾಗುವುದು ಮತ್ತು ಇಲ್ಲಿರುವ ಜನರು ಬದಲಾಗುವರು. ಖಂಡಿತಾವಾಗಿಯೂ ಇದಾಗುವುದು ಯಾಕೆಂದರೆ ಪ್ರತಿಯೊಬ್ಬರಲ್ಲೂ ಒಂದು ಕೂಡಲೇ ಚೇತರಿಸಿಕೊಳ್ಳುವ ಜಾಗೃತಿಯಿದೆ. ಮುಖ್ಯವಾದುದೇನೆಂದರೆ, ನಾವೆಲ್ಲರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ನಾವು ಕೇವಲ ಒಬ್ಬ ವ್ಯಕ್ತಿಯ ಕಡೆಗೆ ಬೆರಳು ಮಾಡಿ, ಅವರನ್ನು ಜವಾಬ್ದಾರರನ್ನಾಗಿಸಲು ಸಾಧ್ಯವಿಲ್ಲ. ದೇಶದ ಜನಸಂಖ್ಯೆಯು ಬಹಳ ದೊಡ್ಡದಾಗಿದೆ. ಈ ಒಬ್ಬ ಪೋಲೀಸ್ ತನ್ನ ಕೆಲಸವನ್ನು ಮಾಡಲಿಲ್ಲವೆಂದು ನಾವು ಹೇಳಲು ಸಾಧ್ಯವಿಲ್ಲ.
ಜನರು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಬೇಕು ಮತ್ತು ಅದು ಈಗಾಗಲೇ ಆಗುತ್ತಿದೆ. ಅದು ಬಹಳ ಒಳ್ಳೆಯ ಸಮಾಚಾರ.

ಪ್ರಶ್ನೆ: ನಮ್ಮ ಸಾವಿನ ದಿನವು ಪೂರ್ವನಿರ್ಧಾರಿತವೇ ಅಥವಾ ನಮ್ಮ ಜೀವಮಾನದ ಸಮಯದಲ್ಲಿ ಅದು ಬದಲಾಗಬಲ್ಲದೇ?
ಶ್ರೀ ಶ್ರೀ ರವಿ ಶಂಕರ್: ಹೌದು, ಅದು ಬದಲಾಗಬಲ್ಲದು.
ಅದು ಹೇಗೆಂದರೆ, ನೀವು ಹೆದ್ದಾರಿಯಲ್ಲಿರುವಾಗ, ನೀವು ಹೊರಹೋಗಬಲ್ಲಂತಹ ಕೆಲವು ನಿರ್ಗಮನ ಸ್ಥಳಗಳಿರುತ್ತವೆ, ಅಲ್ಲವೇ?! ಅದೇ ರೀತಿಯಲ್ಲಿ, ಪ್ರತಿಯೊಬ್ಬರ ಜೀವನದಲ್ಲೂ, ಕೆಲವು ನಿರ್ಗಮನ ಸ್ಥಳಗಳು ಬರುತ್ತವೆ. ನೀವು ಒಂದು ಸ್ಥಳವನ್ನು ತಪ್ಪಿಸಿಕೊಂಡರೆ, ಆಗ ಮುಂದಿನ ನಿರ್ಗಮನ ಸ್ಥಳಕ್ಕೆ ಹೋಗಿ.