ಬುಧವಾರ, ಡಿಸೆಂಬರ್ 5, 2012

ಸ್ವಯಂಸೇವಕ


೫ ಡಿಸೆಂಬರ್ ೨೦೧೨
ಹೊಸ ದಿಲ್ಲಿ


ನಾನು ದೀಪವನ್ನು ಹಚ್ಚಲು ಸ್ವಲ್ಪ ಸಮಯ ಹಿಡಿಯಿತು. ನಾನಂದೆ, "ಎಣ್ಣೆ ದೀಪಕ್ಕೆ ಬೆಂಕಿ ಹಿಡಿಯಲು ಸ್ವಲ್ಪ ಸಮಯ ಹಿಡಿಯುತ್ತದೆ, ಆದರೆ ಒಮ್ಮೆ ಅದಕ್ಕೆ ಬೆಂಕಿ ಹಿಡಿದ ನಂತರ ಅದು ಉರಿಯುತ್ತದೆ." ಅದುವೇ ಈ ದೇಶದ ಜನರಿಗೂ ಅನ್ವಯಿಸುತ್ತದೆ. ಆರಂಭದಲ್ಲಿ ಅವರು ಸ್ವಲ್ಪ ನಿಧಾನ, ಆದರೆ ಒಮ್ಮೆ ಅವರು ಆರಂಭಿಸಿದ ಮೇಲೆ ನಿಲ್ಲಿಸುವುದಿಲ್ಲ.
ನಿಮಗೆ ಗೊತ್ತಾ, ಭ್ರಷ್ಟಾಚಾರವು ಶುರುವಾಗುವುದು, ಎಲ್ಲಿ ಆತ್ಮೀಯತೆಯು ಕೊನೆಯಾಗುವುದೋ ಅಲ್ಲಿ. ಯಾರು ಕೂಡಾ ತಮ್ಮ ಮಿತ್ರರು ಮತ್ತು ಕುಟುಂಬಗಳ ವ್ಯಾಪ್ತಿಯೊಳಗೆ, ಅಥವಾ ಯಾರು ತಮಗೆ ಸೇರಿದವರು ಎಂದು ಅಂದುಕೊಳ್ಳುವರೋ ಅಂತಹ ಜನರೊಂದಿಗೆ ಭ್ರಷ್ಟರಾಗಿ ನಡೆದುಕೊಳ್ಳುವುದಿಲ್ಲ. ಆತ್ಮೀಯತೆಯ ಭಾವವು ಕೊನೆಗೊಂಡಾಗ, ಆ ಗಡಿಯಿಂದ ಭ್ರಷ್ಟಾಚಾರವು ಆರಂಭವಾಗುತ್ತದೆ.
ಆರ್ಟ್ ಆಫ್ ಲಿವಿಂಗಿನಲ್ಲಿ, ಎಲ್ಲಾ ಸ್ವಯಂಸೇವಕರು, ಶಿಕ್ಷಕರು ಮತ್ತು ಇತರರು ಮಾಡಲು ಪ್ರಯತ್ನಿಸುತ್ತಿರುವುದು ಅದನ್ನೇ, ಅಂದರೆ ಆತ್ಮೀಯತೆಯ ಭಾವವನ್ನು ಹರಡುವುದು - ಸಂಪೂರ್ಣ ಪ್ರಪಂಚವು ನಮಗೆ ಸೇರಿದುದು.
ಪ್ರತಿಯೊಂದು ಸಮುದಾಯ, ಪ್ರತಿಯೊಂದು ಶ್ರದ್ಧೆ, ಎಲ್ಲಾ ವಯೋಮಾನದ ಜನರು, ಗ್ರಾಮೀಣ ಅಥವಾ ನಗರ - ಅವರೆಲ್ಲರೂ ನಮ್ಮ ಭಾಗ ಮತ್ತು ಅವರೆಲ್ಲರೂ ನಮಗೆ ಸೇರಿದವರು. ನೈತಿಕವಾದ ಮತ್ತು ನ್ಯಾಯವಾದ ಸಮಾಜವಿರಬೇಕಾದರೆ, ಸಂಪೂರ್ಣ ಮಾನವಕುಲವು ಒಂದು ಕುಟುಂಬವೆಂಬ, ಪರಸ್ಪರರಿಗೆ ಸೇರಿದವರು ಎಂಬ ಭಾವನೆಯು ನಮ್ಮಲ್ಲಿರುವುದು ಆವಶ್ಯಕವಾಗಿದೆ. ಅದೊಂದು ರಾಮರಾಜ್ಯದಂತೆ ಅನ್ನಿಸಿದರೂ ಅನ್ನಿಸಬಹುದು, ಆದರೆ ನಾವು ಈ ಕನಸನ್ನು ಯಾವತ್ತೂ ಬಿಡಬಾರದು. ನಾವು ಅದರ ಬಗ್ಗೆ ಕನಸು ಕಾಣಬೇಕು ಮತ್ತು ಆ ದಿಕ್ಕಿನಲ್ಲಿ ಸಾಗಬೇಕು. ಈ ಸರಿಯಾದ ದಿಕ್ಕಿನಲ್ಲಿ ಒಂದು ಚಿಕ್ಕ ಹೆಜ್ಜೆಯನ್ನಿರಿಸಿದರೂ ಅದು ನಮ್ಮನ್ನು ಬಹಳ ಮುಂದೆ ಕೊಂಡೊಯ್ಯಬಹುದು, ಮತ್ತು ಹೀಗಾಗುವುದನ್ನು ನಾವು ನೋಡಿದ್ದೇವೆ.
ಸಮಾಜವು ಅಪರಾಧ ಮತ್ತು ಭ್ರಷ್ಟಾಚಾರಗಳಿಂದ ಪೀಡಿತವಾದಾಗ, ಯಾರೊಬ್ಬರೂ ಅದರಲ್ಲಿ ಜೀವಿಸಲು ಅದು ಸುರಕ್ಷಿತವಾಗಿರುವುದಿಲ್ಲ, ಎಲ್ಲಿ ಜನರಲ್ಲಿ ಸುರಕ್ಷತೆಯ ಭಾವನೆಯಿಲ್ಲವೋ, ಭಾರತವು, ಅಂತಹ ಭಯ ಹಾಗೂ ಅನ್ಯಾಯದ ಅಭ್ಯಾಸಗಳನ್ನು ಹೊಂದಿದ ಒಂದು ಕ್ಷೇತ್ರವಾಗಿ ಮಾರ್ಪಾಡಾಗುವುದನ್ನು ನಾವು ಬಯಸುವುದಿಲ್ಲ. ಅದು ಭಾರತವಲ್ಲ.
ಇಲ್ಲಿ ಜನರು ಯಾವಾಗಲೂ ನಿರ್ಭೀತರಾಗಿರುತ್ತಾರೆ. ಪ್ರತಿಯೊಂದು ಧರ್ಮ, ಪ್ರತಿಯೊಂದು ಸಂಸ್ಕೃತಿ, ಪ್ರತಿಯೊಂದು ಭಾಷೆಯೂ ಈ ನೆಲದಲ್ಲಿ ಆಶ್ರಯವನ್ನು ಪಡೆಯಿತು. ಆದರೆ ಇವತ್ತು, ಜನರು ವಿವಿಧ ರೀತಿಯ ಭಯಗಳೊಂದಿಗೆ ಮುಂದುವರಿಯಬೇಕಾಗಿರುವ ಒಂದು ವ್ಯತ್ಯಸ್ತವಾದ ಚಿತ್ರಣವನ್ನು ನಾವು ನೋಡುತ್ತಿದ್ದೇವೆ. ಮಹಿಳೆಯರ ವಿರುದ್ಧ ಅಪರಾಧ ಮತ್ತು ಮಕ್ಕಳ ವಿರುದ್ಧ ಅಪರಾಧಗಳು ಹೆಚ್ಚಾಗುತ್ತಿವೆ.
ಆದುದರಿಂದ ನಾವೀಗ, ಜನರನ್ನು ಒಂದುಗೂಡಿಸುವ ಮತ್ತು ತಾವು ಸುರಕ್ಷಿತವಾಗಿರುವೆವೆಂಬ ಭಾವನೆಯನ್ನು ಅವರಲ್ಲಿ ಮೂಡಿಸುವ ಈ ಹೆಜ್ಜೆಯನ್ನು ತೆಗೆದುಕೊಳ್ಳಬೇಕಾಗಿದೆ.
ನಿನ್ನೆ ನಾನು ಸುಮಾರು ೭೫೬ ಅಪರಾಧಿಗಳನ್ನು ಸಂಭೋದಿಸಿ ಮಾತನಾಡುತ್ತಿದ್ದೆ. ಅವರು ಗೂಂಡಾಗಳು, ಡಕಾಯಿತರು ಅಥವಾ ರೌಡಿ-ಶೀಟರುಗಳು ಎಂದು ಕರೆಯಲ್ಪಡುತ್ತಾರೆ. ನಾವು ಅವರಿಗೆ ನಿನ್ನೆ ಒಂದು ಬೇರೆ ಹೆಸರನ್ನು ನೀಡಿದೆವು - ಕರ್ನಾಧರರು, ಅಂದರೆ ಸಮಾಜದಲ್ಲಿ ಒಂದು ಹೊಸ ಬೆಳಕಿಗೆ, ಒಂದು ಹೊಸ ಭರವಸೆಗೆ ದೀವಟಿಗೆ ಧಾರಕನೆಂದು. ತಮ್ಮ ಜೀವನವು ಕೇವಲ ಒಂದು ವಾರದ ಸಮಯದಲ್ಲಿ ಹೇಗೆ ಬದಲಾಯಿತು ಎಂಬುದನ್ನು ಅವರಿಂದ ನಾವು ಆಲಿಸಿದಾಗ (ಆರ್ಟ್ ಆಫ್ ಲಿವಿಂಗಿನ ವೈ.ಎಲ್.ಟಿ.ಪಿ. ಕಾರ್ಯಕ್ರಮವನ್ನು ಪೂರೈಸಿದ ಬಳಿಕ) ನಮ್ಮ ಭರವಸೆಯು ನಿಜವಾಗಿ ಗಗನವನ್ನು ಮುಟ್ಟಿತು.
ಕೊಳಗೇರಿಯಲ್ಲಿ ಕ್ಷುಲ್ಲಕದಿಂದ ಹಿಡಿದು ದೊಡ್ಡ ಅಪರಾಧಗಳನ್ನು ಮಾಡುವ ಈ ಜನರ ಮನಸ್ಸುಗಳು ಮತ್ತು ಹೃದಯಗಳನ್ನು ಬದಲಾಯಿಸಲು ಸಾಧ್ಯವಾದರೆ, ಆಗ ನಮಗೆ ಬಹಳಷ್ಟು ಭರವಸೆಯಿರುತ್ತದೆ ಮತ್ತು ಕೇವಲ ಭರವಸೆ ಮಾತ್ರವಲ್ಲ, ಆದರೆ ಇದು ನಮ್ಮ ಮೇಲೆ ಬಹಳಷ್ಟು ಜವಾಬ್ದಾರಿಯನ್ನು ಹಾಕುತ್ತದೆ. ನಮಗೇನಾದರೂ ಮಾಡಲು ಸಾಧ್ಯವಿದೆಯೆಂಬುದು ನಮಗೆ ತಿಳಿದಾಗ, ನಾವದನ್ನು ಮಾಡಬೇಕು. ನಾವು ಹಾಗೇ ಸುಮ್ಮನೇ ಕುಳಿತುಕೊಳ್ಳಲು ಸಾಧ್ಯವಿಲ್ಲ.
ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ ಎಂಬುದು ಒಂದು ಸುಂದರವಾದ ಪ್ರಾರಂಭವಾಗಿದೆ. ಒಂದು ಅಪರಾಧ-ರಹಿತ, ಭ್ರಷ್ಟಾಚಾರ-ರಹಿತ ಮತ್ತು ನ್ಯಾಯವಾದ ಭಾರತದ ಸಂದೇಶವನ್ನು ತರಲು ಇಲ್ಲಿರುವ ನಿಮ್ಮಲ್ಲಿ ಪ್ರತಿಯೊಬ್ಬರೂ ಸಾವಿರಾರು ಸ್ವಯಂಸೇವಕರ ಗುಂಪುಗಳಾಗಿ ನಿಮ್ಮನ್ನು ಹೆಚ್ಚಿಸಿಕೊಳ್ಳುವಿರಿ ಎಂಬ ಬಗ್ಗೆ ನನಗೆ ಖಾತ್ರಿಯಿದೆ.
ನೀವೇನು ಹೇಳುವಿರಿ?! (ಸಭಿಕರಲ್ಲಿ ಎಲ್ಲರೂ ’ಹೌದು’ ಎಂದು ಹೇಳುತ್ತಾರೆ).
೧ ಮಾರ್ಚ್ ೨೦೦೯ರಂದು, ನನಗೆ ನೆನಪಿದೆ, ಭಯೋತ್ಪಾದನೆಯ ವಿರುದ್ಧ ಭಾರತವನ್ನು ಪ್ರಾರಂಭಿಸಿದುದು ನೀವು ಸ್ವಯಂಸೇವಕರು ಮತ್ತು ಯೆಸ್ ಪ್ಲಸ್ ವಿದ್ಯಾರ್ಥಿಗಳು, ಯಾಕೆಂದರೆ ೨೦೦೮ರಲ್ಲಿ ಭಾರತವು, ೧೨ ತಿಂಗಳುಗಳಲ್ಲಿ ೧೩ ಭಯೋತ್ಪಾದಕ ದಾಳಿಗಳನ್ನು ನೋಡಿತು ಹಾಗೂ ನೂರಾರು ಜನರು ಈ ದಾಳಿಗಳಲ್ಲಿ ತಮ್ಮ ಜೀವಗಳನ್ನು ಕಳೆದುಕೊಂಡಿದ್ದರು. ಇದು ಬಹಳ ದುಃಖದಾಯಕವಾಗಿತ್ತು. ನಮ್ಮಲ್ಲಿ ಇಂತಹ ಘಟನೆಗಳಾದುದು ಬಹಳ ದುಃಖದಾಯಕವಾಗಿತ್ತು, ಮತ್ತು ಅದು ನೀವು, ಇಲ್ಲಿ ದಿಲ್ಲಿಯಲ್ಲಿನ ಯುವಜನತೆ, ಎದ್ದುನಿಂತು ಈ ಚಳುವಳಿಯನ್ನು ಪ್ರಾರಂಭಿಸಿದುದು ಹಾಗೂ ಕಿರಣ್ ಬೇಡಿ, ಕೇಜ್ರೀವಾಲ್ ಮತ್ತು ಇತರರನ್ನು ಆಮಂತ್ರಿಸಿದುದು. ೨೦೧೦ರಲ್ಲಿ ಭ್ರಷ್ಟಾಚಾರದ ವಿರುದ್ಧ ಭಾರತದ ಬೀಜವನ್ನು ಬಿತ್ತಿದುದು ಇದೇ ಚಳುವಳಿ. ಆದುದರಿಂದ ಸ್ವಯಂಸೇವಕರಿಗೆ ಬಹಳಷ್ಟು ಮಾಡಲು ಸಾಧ್ಯವಿದೆ ಮತ್ತು ನೀವೇ ನಿಜವಾದ ಸ್ಫೂರ್ತಿದಾಯಕ ಶಕ್ತಿ.
ಭಾರತದ ಯುವಜನತೆಯು, ಕನ್ಯಾ ಭ್ರೂಣಹತ್ಯೆ, ಮಾದಕ ದ್ರವ್ಯ ವ್ಯಸನ-ಮುಕ್ತ ಕಾರ್ಯಕ್ರಮಗಳು, ಮದ್ಯ ವ್ಯಸನ-ಮುಕ್ತ ಕಾರ್ಯಕ್ರಮಗಳು ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮ - ಈ ಸಮಸ್ಯೆಗಳನ್ನು ತೆಗೆದುಕೊಳ್ಳಲು ಮುಂದೆ ಬಂದರೆ, ನೀವು ಈ ಸಮಸ್ಯೆಗಳನ್ನು ತಿರುಗಿಸಬಹುದು.
ನಿಮ್ಮ ಶಕ್ತಿಯನ್ನು ಅಲ್ಪವಾಗಿ ತಿಳಿಯಬೇಡಿ. ನಾನು ಹೇಳುತ್ತೇನೆ, ನಿಮಗೆ ಪವಾಡಗಳನ್ನು ಮಾಡಲು ಸಾಧ್ಯವಿದೆ. ನಿಮಗೆ ವಿಷಯಗಳನ್ನು ೧೮೦ ಡಿಗ್ರಿಗಳಷ್ಟು ತಿರುಗಿಸಲು ಸಾಧ್ಯವಿದೆ. ಈ ದೇಶದ ಯುವಜನತೆ ಮತ್ತು ಯುವ ಪೀಳಿಗೆ - ಶಕ್ತಿಯಿರುವುದು ನಿಮ್ಮಲ್ಲಿ. ನಾನು ಯುವಜನತೆ ಎಂದು ಹೇಳುವಾಗ, ಅದು ಇಲ್ಲಿರುವ ಹಲವಾರು ಹಿರಿಯ ಯುವಜನತೆಯನ್ನು ಕೂಡಾ ಒಳಗೊಂಡಿದೆ (ನಗು).
ಅಂತಹ ಒಬ್ಬ ಯುವಕನು ನಿನ್ನೆಯಷ್ಟೇ ತನ್ನ ೫೬ನೆಯ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದನು. ಈ ದಂಪತಿಯು, ತಮ್ಮ ಎಂಭತ್ತರ ಹರೆಯದಲ್ಲಿದ್ದಾರೆ ಮತ್ತು ಅವರಲ್ಲಿರುವ ಉತ್ಸಾಹ ಹಾಗೂ ಶಕ್ತಿಯು ನಂಬಲಾಗದಂತಹುದು. ಇದು ಆಂತರಿಕ ಶಕ್ತಿ. ಒಂದು ಆಂತರಿಕ ಶಕ್ತಿಯಿರುವಾಗ ಮಾತ್ರ ಸಮಗ್ರತೆ ಮತ್ತು ಅಂತಃಸ್ಫುರಣೆ ಬರಲು ಸಾಧ್ಯ. ಆಂತರಿಕ ಶಕ್ತಿಯೆಂದರೆ, ಜೀವನವನ್ನು ಒಂದು ವಿಶಾಲ ದೃಷ್ಟಿಕೋನದಿಂದ, ಪ್ರೀತಿಯಿಂದ ಮತ್ತು ಕಾಳಜಿಯಿಂದ ನೋಡುವುದು. ಜೀವನವನ್ನು, ನಾವಿಲ್ಲಿರುವ, ಈ ಗ್ರಹದ ಮೇಲಿರುವ ಒಂದು ಅಲ್ಪಾವಧಿಯ ಸಮಯವಾಗಿ ನೋಡಿ ಅದಕ್ಕನುಸಾರವಾಗಿ ಆದ್ಯತೆಗಳನ್ನು ನಿಗದಿಪಡಿಸುವುದು.
ನಾನು ನಿಮಗೊಂದು ಉದಾಹರಣೆಯನ್ನು ಕೊಡಲು ಬಯಸುತ್ತೇನೆ. ಆರ್ಟ್ ಆಫ್ ಲಿವಿಂಗಿನ ಶಿಕ್ಷಕರಲ್ಲೊಬ್ಬರು ಗುಜರಾತಿನಲ್ಲಿ ಐ.ಎ.ಎಸ್. ಅಧಿಕಾರಿಯಾಗಿದ್ದಾರೆ. ಈಗ, ಈ ಸಂಭಾವಿತರಿಗೆ, ಒಂದು ಕಾಗದದಲ್ಲಿ ಕೇವಲ ತಮ್ಮ ಸಹಿ ಮಾಡುವುದಕ್ಕಾಗಿ ೫೧ ಕೋಟಿ ರೂಪಾಯಿಗಳ ಆಮಿಷ ತೋರಿಸಲಾಯಿತು. ೫೧ ಕೋಟಿಗಳು! ಒಬ್ಬ ಅಧಿಕಾರಿಗೆ ಒಂದು ಜೀವಮಾನದಲ್ಲಿ ೫೧ ಕೋಟಿ ರೂಪಾಯಿಗಳನ್ನು ಮಾಡುವ ಕನಸು ಕಾಣಲು ಸಾಧ್ಯವಿಲ್ಲ. ಒಂದು ಜೀವಮಾನ ಬಿಡಿ, ಮೂರು ಜೀವಮಾನಗಳಲ್ಲಿ ಕೂಡಾ ಅವನಿಗೆ ೫೧ ಕೋಟಿ ಗಳಿಸಲು ಸಾಧ್ಯವಿಲ್ಲ. ಯಾವುದೇ ಅಧಿಕಾರಿಯು ೫೧ ಕೋಟಿ; ಅಂದರೆ ೧೦ ಮಿಲಿಯನ್ ಡಾಲರ್ ಸಂಪಾದಿಸುವುದನ್ನು ನಾನು ನೋಡಲಿಲ್ಲ. ಹಾಗೆ, ಈ ಸಂಭಾವಿತನಿಗೆ ೫೧ ಕೋಟಿಗಳ ಪ್ರಸ್ತಾಪ ಬಂತು ಮತ್ತು ಅವನಂದನು, "ಇಲ್ಲ, ನಾನು ನನ್ನ ಸಹಿಯನ್ನು ಹಾಕುವುದಿಲ್ಲ." ಅವನು ತನ್ನ ಸಹಿಯನ್ನು ಹಾಕಿರುತ್ತಿದ್ದರೂ, ಯಾರೂ ಅದನ್ನು ಗಮನಿಸುತ್ತಿರಲಿಲ್ಲ. ಆ ಹಣವನ್ನು ತೆಗೆದುಕೊಳ್ಳುವುದಕ್ಕೆ ಅವನು ಹಲವಾರು ಸಮರ್ಥನೆಗಳನ್ನು ನೀಡಬಹುದಾಗಿತ್ತು. ಅವನು ಹೇಳಬಹುದಿತ್ತು, "ಓ, ನಾನೀ ಹಣವನ್ನು ತೆಗೆದುಕೊಂಡು ಬಡ ಜನರಿಗೆ ನೀಡುವೆನು, ಅಥವಾ ನಾನು ಸಮಾಜದಲ್ಲಿ ಏನಾದರೂ ಒಳ್ಳೆಯ ಕೆಲಸವನ್ನು ಮಾಡುವೆನು." ೧೦ ಮಿಲಿಯನ್ ಡಾಲರ್ ಎಂಬುದು ಒಂದು ದೊಡ್ಡ ವಿಷಯ, ಆದರೆ ಈ ವ್ಯಕ್ತಿಯ ಸಮಗ್ರತೆಯನ್ನು ನೋಡಿ. ಅವನು ಅದಕ್ಕೆ ಇಲ್ಲವೆಂದು ಹೇಳಿದ. ಈ ಸಂಭಾವಿತನ ಬಗ್ಗೆ ನನಗೆ ಬಹಳ ಹೆಮ್ಮೆಯಿದೆ.
ಈಗ, ಯಾವುದು ನಿಮಗೆ ಅಂತಹ ಆಂತರಿಕ ಶಕ್ತಿಯನ್ನು ಕೊಡಬಲ್ಲದು?
ನೀವೊಬ್ಬ ಏಕಾಕಿಯಾಗಿರಬೇಕಾಗಿಲ್ಲ; ಖಂಡಿತಾ ಒಬ್ಬ ಏಕಾಕಿಗೆ ಅದನ್ನು ಮಾಡಲು ಸಾಧ್ಯವಿದೆ. ಆದರೆ, ಆ ಆಂತರಿಕ ಶಕ್ತಿ ಮತ್ತು ತೃಪ್ತಿಯಿಲ್ಲದಿದ್ದರೆ ಒಬ್ಬ ಗೃಹಸ್ಥನಿಗೆ ಇಂತಹ ಒಂದು ದೊಡ್ಡ ಕೊಡುಗೆಯನ್ನು ತಿರಸ್ಕರಿಸುವುದು ಸುಲಭವಲ್ಲ.
ತೃಪ್ತಿ, ಸಹಾನುಭೂತಿ, ಸಮಗ್ರತೆ, ಅಂತಃಸ್ಫುರಣೆ, ಈ ಎಲ್ಲಾ ಮೌಲ್ಯಗಳು ನಿಮ್ಮ ಒಳಗಿನಿಂದ ಹೊರಗೆ ಚಿಮ್ಮುತ್ತವೆ, ಮತ್ತು ಯಾವುದು ಈ ಮೌಲ್ಯಗಳು ನಿಮ್ಮ ಜೀವನದಲ್ಲಿ ಅರಳುವಂತೆ ಮಾಡುವುದೋ ಅದನ್ನು ನಾನು ಆಧ್ಯಾತ್ಮ ಎಂದು ಕರೆಯುತ್ತೇನೆ. ಕೇವಲ ಕೆಲವು ಪ್ರಾರ್ಥನೆಗಳನ್ನು ಪುನರುಚ್ಛರಿಸುವುದಲ್ಲ ಮತ್ತು ಕೇವಲ ಕೆಲವು ಪವಿತ್ರ ಸ್ಥಳಗಳನ್ನು ಸಂದರ್ಶಿಸುವುದಲ್ಲ, ಆದರೆ ಮೌಲ್ಯಗಳನ್ನು ಜೀವಿಸುವುದೇ ಆಧ್ಯಾತ್ಮವಾಗಿದೆ. ನಿಜವಾದ ನಂಬಿಕೆಯೆಂಬುದರ ಅರ್ಥ ಇದುವೇ ಆಗಿದೆ ಮತ್ತು ನಂಬಿಕೆಯು ಆವಶ್ಯಕವಾಗಿದೆ; ತನ್ನಲ್ಲಿ ನಂಬಿಕೆ ಮತ್ತು ನಿಮ್ಮ ಸುತ್ತಲಿರುವ ಜನರ ಒಳ್ಳೆಯತನದಲ್ಲಿ ನಂಬಿಕೆ.
ಅರ್ಧದಷ್ಟು ಸಮಯ ನಾವು, ಎಲ್ಲರೂ ಕೆಟ್ಟವರು, ನಾನು ಮಾತ್ರ ಈ ಸಮಾಜದಲ್ಲಿ ಸರಿಯಾಗಿರುವುದು ಹೇಗೆ ಎಂದು ಯೋಚಿಸುತ್ತೇವೆ. ಎಲ್ಲರೂ ಕೆಟ್ಟವರೆಂದು ನೀವು ನೋಡುವಾಗ ನಿಮ್ಮ ಅಜಾಗೃತ ಮನಸ್ಸಿನಲ್ಲಿ , ನೀವು ಭ್ರಷ್ಟಾಚಾರವನ್ನು ಸ್ವೀಕರಿಸುವುದನ್ನು ನೀವು ಸಮರ್ಥಿಸಿಕೊಳ್ಳುವಿರಿ. ನೀವು, "ಇದು ಜೀವನದ ರೀತಿ, ನಾವು ಪ್ರವಾಹದೊಂದಿಗೆ ಹೋಗಬೇಕು" ಎಂದು ಯೋಚಿಸುವಿರಿ. ಇಂತಹ ರೀತಿಯ ವಿಷಯಗಳು ಉಳಿಯುವುದಕ್ಕಾಗಿ ನಿಮ್ಮ ಬಳಿಗೆ ಬರುತ್ತವೆ.
ಈಗ ನೀವು ಎದ್ದುನಿಲ್ಲಬೇಕಾದರೆ, ನಿಮಗೆ ಆಂತರಿಕ ಶಕ್ತಿ ಬೇಕು ಮತ್ತು ಧ್ಯಾನವೆಂದರೆ ಅದುವೇ ಆಗಿದೆ. ಧ್ಯಾನವು ನಿಮಗೆ ಆ ಆಂತರಿಕ ಶಕ್ತಿಯನ್ನು ನೀಡುತ್ತದೆ, ನಿಮ್ಮ ವ್ಯಕ್ತಿತ್ವದಲ್ಲಿ ಸಮಗ್ರತೆಯನ್ನು ತರುತ್ತದೆ ಮತ್ತು ನಿಮ್ಮಲ್ಲಿ ಈಗಾಗಲೇ ಇರುವ ಅಂತಃಸ್ಫುರಣೆಯು ಜೀವನದಲ್ಲಿ ಪ್ರಕಟವಾಗಲು ಅನುವು ಮಾಡುತ್ತದೆ. ಇದು ಆವಶ್ಯಕವೆಂದು ನನಗನಿಸುತ್ತದೆ.
ನಾನು ಹೇಳುತ್ತಿದ್ದಂತೆ, ಈ ಅಪರಾಧಿ ಅಂಶಗಳೊಂದಿಗೆ; ನಾನು ಅವರನ್ನು ನಿಜವಾಗಿ ಅಪರಾಧಿ ಅಂಶಗಳು ಎಂದು ಕೂಡಾ ಕರೆಯಬಾರದು; ಈ ದಾರಿ ತಪ್ಪಿದ ಯುವಕರೊಂದಿಗೆ ನಾನು ಮಾತಾಡುತ್ತಿದ್ದಾಗ, ಅವರಲ್ಲಿ ಪ್ರತಿಯೊಬ್ಬರಲ್ಲೂ ಸೌಂದರ್ಯವಿದೆ ಎಂಬುದನ್ನು ನಾನು ನೋಡಿದೆ. ಅದು ಕೇವಲ, ತಮ್ಮಲ್ಲಿರುವ ಒತ್ತಡವನ್ನು ಮತ್ತು ತಪ್ಪುಗ್ರಹಿಕೆಗಳನ್ನು ಕಳೆಯಲು ಅವರಿಗೆ ಅವಕಾಶವನ್ನು ನೀಡಲಾಗಲಿಲ್ಲ ಎಂದು ಮಾತ್ರ. ತಮ್ಮಲ್ಲಿರುವ ಆತಂಕ ಮತ್ತು ಒತ್ತಡಗಳನ್ನು ತೊಡೆದು ಹಾಕಲು ಹಾಗೂ ಸಮಾಜದಲ್ಲಿ ಸಾಕಷ್ಟು ಪ್ರೀತಿಯಿದೆ, ಭೂಮಿಯಲ್ಲಿ ಒಳ್ಳೆಯ ಜನರಿದ್ದಾರೆ ಮತ್ತು ತಾವು ತೊಂದರೆಯಲ್ಲಿರುವಾಗ ಬಂದು ತಮ್ಮ ಜೊತೆ ನಿಲ್ಲಲು ಒಳ್ಳೆಯ ಜನರು ಸುತ್ತುಮುತ್ತಲಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಅವಕಾಶ ನೀಡಲಾಗಲಿಲ್ಲ. ನಿಮ್ಮ ಜೊತೆ ಹೆಗಲಿಗೆ ಹೆಗಲು ಸೇರಿಸಿ ನಿಂತು ನಿಮಗೆ ಸಹಾಯ ಮಾಡುವ ಜನರಿದ್ದಾರೆ. ಸಮಾಜದ ಒಳ್ಳೆಯತನದಲ್ಲಿರುವ ಈ ವಿಶ್ವಾಸವನ್ನು ಪುನಃ ಸ್ಥಾಪಿಸಬೇಕಾಗಿದೆ. ಇದನ್ನು ಮಾಡದಿದ್ದರೆ, ಸಮಾಜದಲ್ಲಿ ನೈತಿಕತೆಯು ಉಳಿಯದು. ಮಾನವೀಯ ಮೌಲ್ಯಗಳಲ್ಲಿ ಯಾವುದೇ ನಂಬಿಕೆಯಿಲ್ಲದಿರುವಾಗ ಅಥವಾ ಜನರ ನಡುವೆ, ಸಮುದಾಯಗಳ ನಡುವೆ ಯಾವುದೇ ನಂಬಿಕೆಯಿಲ್ಲದಿರುವಾಗ ಒಂದು ಸಮಾಜದಲ್ಲಿ ಯಾವುದೇ ನೈತಿಕತೆಯು ಅರಳಲು ಸಾಧ್ಯವಿಲ್ಲ.
ಆದುದರಿಂದ ನಿಮ್ಮಲ್ಲಿ ನಂಬಿಕೆಯಿರಿಸಿ, ನಿಮ್ಮ ಸುತ್ತಲಿರುವ ಜನರಲ್ಲಿ ನಂಬಿಕೆಯಿರಿಸಿ ಮತ್ತು ಕಾಣದಿರುವ, ಕೇಳದಿರುವ ಹಾಗೂ ನಮಗೆ ಸಹಾಯ ಮಾಡುತ್ತಿರುವ ತಿಳಿಯದಿರುವ ಕೈಗಳ ಮೇಲೆ ನಂಬಿಕೆಯಿರಿಸಿ. ನೀವಿದನ್ನು ದೇವರಲ್ಲಿ ನಂಬಿಕೆ, ಪ್ರಕೃತಿಯಲ್ಲಿ ನಂಬಿಕೆ ಅಥವಾ ಅತಿಮಾನುಷ ಶಕ್ತಿಯಲ್ಲಿನ ನಂಬಿಕೆ ಎಂದು ಕರೆಯಬಹುದು. ಒಂದು ನ್ಯಾಯವಾದ, ಮುಕ್ತವಾದ ಮತ್ತು ಸಂತೋಷವಾದ ಸಮಾಜಕ್ಕೆ ಇವೆಲ್ಲವೂ ಆವಶ್ಯಕವಾಗಿವೆ.
ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ ಎಂಬುದು ಸಮಾಜದ ಅಸ್ವಸ್ಥತೆಗಳನ್ನು ಮತ್ತು ಕೆಡುಕುಗಳನ್ನು ಶುದ್ಧಪಡಿಸುವುದು ಮಾತ್ರವಲ್ಲ, ಅದಕ್ಕೆ, ಒಂದು ಹೆಚ್ಚಿನ ಪ್ರಧಾನವಾದ ಪಾತ್ರವನ್ನು ನಿರ್ವಹಿಸಲಿದೆ ಮತ್ತು ಅದುವೇ ಸಂತೋಷದ ಅಲೆಗಳನ್ನು ಸೃಷ್ಟಿಸುವುದು.
ಇಂದು, ವಿಶ್ವಸಂಸ್ಥೆಯು ಜಿ.ಡಿ.ಹೆಚ್. (ಗ್ರಾಸ್ ಡೊಮೆಸ್ಟಿಕ್ ಹ್ಯಾಪ್ಪಿನೆಸ್ = ತಲಾ ರಾಷ್ಟ್ರೀಯ ಸಂತೋಷ) ಪರಿಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸಿದೆ. ಇನ್ನು ಮುಂದೆ ಜಿ.ಡಿ.ಪಿ. (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ = ತಲಾ ರಾಷ್ಟ್ರೀಯ ಉತ್ಪನ್ನ) ಇಲ್ಲ. ನಿಮಗೆ ಗೊತ್ತಾ, ನಮ್ಮ ಪಕ್ಕದ ದೇಶವಾದ ಭೂತಾನಿನಲ್ಲಿ ಅತ್ಯಂತ ಹೆಚ್ಚು ಜಿ.ಡಿ.ಹೆಚ್. ಇದೆ. ಇತ್ತೀಚೆಗಿನ ವರೆಗೆ ಅದು ಬಹಳ ನಿಯಂತ್ರಣದಲ್ಲಿದ್ದ ಸಮಾಜವಾಗಿದ್ದರೂ, ಅದು ತನ್ನ ಸಂತೋಷವನ್ನು ಉಳಿಸಿಕೊಂಡಿದೆ.
ಇವತ್ತಿಗೂ ಗ್ರಾಮೀಣ ಭಾರತದಲ್ಲಿ, ಜನರು ಎಷ್ಟೋ ಹೆಚ್ಚು ಸಂತೋಷದಿಂದಿರುವಂತೆ ಕಾಣಿಸುತ್ತದೆ. ತಮ್ಮಲ್ಲಿ ಕೇವಲ ಒಂದು ಲೋಟ ಮಜ್ಜಿಗೆಯಿದ್ದರೂ ಅವರದನ್ನು ನಿಮ್ಮೊಂದಿಗೆ ಹಂಚುವರು. ಅವರಲ್ಲಿ ಬಹಳಷ್ಟು ಹೃದಯವಂತಿಕೆ ಮತ್ತು ಆತ್ಮೀಯತೆಯ ಭಾವವಿದೆ. ಅವರು ನಿಮ್ಮಲ್ಲಿ ನಿಮ್ಮ ಹಿನ್ನೆಲೆ ಅಥವಾ ನೀವು ಯಾರೆಂದು, ನೀವು ಎಲ್ಲಿಯವರೆಂದು, ನಿಮ್ಮ ವಿದ್ಯಾರ್ಹತೆಯೇನೆಂದು ಅಥವಾ ನಿಮ್ಮ ಹೆಸರೇನೆಂದು ಕೇಳುವುದಿಲ್ಲ. ಅವರು ಮೊದಲು, "ಒಳಗೆ ಬನ್ನಿ, ಒಂದು ಲೋಟ ಚಹಾ ಅಥವಾ ಮಜ್ಜಿಗೆ ತೆಗೆದುಕೊಳ್ಳಿ" ಎಂದು ಹೇಳುತ್ತಾರೆ. ನಂತರ ಅವರು, ನೀವು ಎಲ್ಲಿಯವರು, ನೀವೇನು ಮಾಡುವಿರಿ ಎಂಬುದನ್ನು ಕೇಳುತ್ತಾರೆ. ಹೀಗೆ, ಮೊದಲು ಅವರು ತಮ್ಮ ಕೈನೀಡಿ ತಮ್ಮಲ್ಲಿರುವುದನ್ನು ನಿಮ್ಮ ಜೊತೆ ಹಂಚುತ್ತಾರೆ ಮತ್ತು ಆ ಎಲ್ಲಾ ಪ್ರಶ್ನೆಗಳು ನಂತರದಲ್ಲಿ ಬರುತ್ತವೆ.
ದಿಲ್ಲಿ, ಮುಂಬೈ ಮುಂತಾದ ಮಹಾನಗರಗಳಲ್ಲಿ, ನಮ್ಮ ಪಕ್ಕದ ಮನೆಯವರು ಯಾರೆಂಬುದು ಕೂಡಾ ನಮಗೆ ತಿಳಿದಿರುವುದಿಲ್ಲ. ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ - ಇದು ಈ ಅಡೆತಡೆಯನ್ನು, ಈ ಮಂಜುಗಡ್ಡೆಯನ್ನು ಒಡೆಯುವುದು ಮತ್ತು ನೆರೆಹೊರೆಯವರನ್ನು, ಸಮುದಾಯಗಳನ್ನು ಒಂದುಗೂಡಿಸುವುದು. ಸಮುದಾಯಗಳು ಒಂದುಗೂಡಿ ಕೆಲಸ ಮಾಡುವುದು ಒಂದು ದೊಡ್ಡ ಆನಂದ ತರುತ್ತದೆ. ಕನ್ಯಾ ಭ್ರೂಣಹತ್ಯೆ ಮತ್ತು ಒಂದು ಭ್ರಷ್ಟಾಚಾರ-ರಹಿತ ಸಮಾಜಕ್ಕಾಗಿ ಕೆಲಸ ಮಾಡುವುದು ಮಾತ್ರವಲ್ಲ, ಆದರೆ ಇದು, ಬಹಳ ವೇಗವಾಗಿ ಬೆಳೆಯುತ್ತಿರುವ ರೋಗವಾದ ಖಿನ್ನತೆಗೆ ಚುಚ್ಚುಮದ್ದಾಗಿರುವ ಒಂದು ಸಂತೋಷದ ಅಲೆಯನ್ನು ತರುವಲ್ಲಿ ಸಹಾಯ ಮಾಡುತ್ತದೆ.
ಈ ಮಾತುಗಳೊಂದಿಗೆ, ಈ ಕೆಲಸ; ಒಂದು ಉತ್ತಮ ಭಾರತಕ್ಕಾಗಿ ಸ್ವಯಂಸೇವಕರಾಗಿ ಇದನ್ನು ಮುಂದುವರಿಸಲು ನಿಮಗೆಲ್ಲರಿಗೂ ಬಹಳ ಶಕ್ತಿ ಮತ್ತು ಚೈತನ್ಯವನ್ನು ಕೊಟ್ಟು ದೇವರು ನಿಮ್ಮನ್ನು ಆಶೀರ್ವದಿಸಲೆಂದು ನಾನು ಪ್ರಾರ್ಥಿಸುತ್ತೇನೆ. ಆರ್ಟ್ ಆಫ್ ಲಿವಿಂಗ್ ಕೇವಲ ಒಂದು ಸರ್ಕಾರೇತರ ಸಂಸ್ಥೆಯಾಗಿದೆ. ನಾನು ಆರ್ಟ್ ಆಫ್ ಲಿವಿಂಗಿನೊಳಗೆ ಸಿಕ್ಕಿಬಿದ್ದಿಲ್ಲವೆಂದು ನನಗನಿಸುತ್ತದೆ. ಹಲವಾರು ಸಂಸ್ಥೆಗಳಲ್ಲಿ ಅದೂ ಒಂದಷ್ಟೆ ಮತ್ತು ನಾನು ಹಲವಾರು ಸಂಸ್ಥೆಗಳಿಗೆ ಸೇರಿದವನು, ಕೇವಲ ಆರ್ಟ್ ಆಫ್ ಲಿವಿಂಗಿಗೆ ಮಾತ್ರವಲ್ಲ.
ಆದುದರಿಂದ ನೀವು ಕೂಡಾ ಅದೇ ರೀತಿ ಭಾವಿಸುವಿರೆಂದು ನಾನು ಆಶಿಸುತ್ತೇನೆ. ಇಲ್ಲಿರುವ ಇತರ ಎಲ್ಲಾ ಸರ್ಕಾರೇತರ ಸಂಸ್ಥೆಗಳಿಗೆ: ನಾವೆಲ್ಲರೂ ಒಂದು ಉದ್ದೇಶದೊಂದಿಗೆ ಒಂದು ಮಾನವ ಕುಟುಂಬಕ್ಕೆ ಸೇರಿದವರು; ಅದೇನೆಂದರೆ, ಭೂಮಿಯ ಮೇಲೆ ಹೆಚ್ಚು ಸಂತೋಷ ಮತ್ತು ಹೆಚ್ಚು ನಗುಗಳನ್ನು ತರುವುದು.
ನಿಮಗೆ ಧನ್ಯವಾದಗಳು!