ಗುರುವಾರ, ಏಪ್ರಿಲ್ 4, 2013

ಚಿತ್ತವೃತ್ತಿಗಳ ನಿಯ೦ತ್ರಣ

ಅಮೃತಬಿ೦ದು’ ಸರಣಿಯ ಬರಹಗಳು

ಹನ್ನೊ೦ದನೆಯ ಕ೦ತು

ಸುಖದ ಕನಸು
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೯.೦೫.೨೦೦೩ರಂದು ಪ್ರಕಟವಾಗಿತ್ತು)

ಜೀವನದಲ್ಲಿ ಪ್ರತಿಯೊಂದು ಘಳಿಗೆಯೂ ನಾವು ಸಾವಿನ ಕಡೆಗೆ ಮುಂದುವರಿಯುತ್ತಿರುತ್ತೇವೆ. ಈ ಶರೀರ ಮಣ್ಣಾಗಿಯೋ ಬೂದಿಯಾಗಿಯೋ ಒಂದು ದಿನ ಮುಗಿದುಹೋಗಿಬಿಡುತ್ತೆ. ಈ ಅರಿವು ’ವಿದ್ಯೆ’ಯನ್ನು ತಂದುಕೊಡುತ್ತದೆ ನಮಗೆ. ’ವಿದ್ಯಾ ಸಂಹಾರೇ ತದುತ್ತ ಸ್ವಪ್ನದರ್ಶನಂ’. ವಿದ್ಯೆಯು ನಷ್ಟವಾದಾಗ ಸ್ವಪ್ನ ಕಾಣುವುದು ಹೆಚ್ಚಾಗುತ್ತದೆ. ನಾನಾ ಬಗೆಯ ಕನಸು..ಯಶಸ್ಸಿನ ಕನಸು, ಹೆಸರಿನ ಕನಸು, ಅಧಿಕಾರದ ಕನಸು.. ಹೀಗೇ ಇಂದ್ರಿಯ ಸುಖದ ಕನಸು ಅದರಲ್ಲಿ ಒಂದು ಬಗೆ.
ಮದುವೆಯಾದರೂ ಕೆಲವರು ಬೇರೆ ಬೇರೆ ವ್ಯವಹಾರವಿಟ್ಟುಕೊಳ್ಳುವುದು ಯಾಕೆ? ಮದುವೆಯಾದ ಮೇಲೂ ಕೆಲವರಿಗೆ ಯೋಚನೆ ಇರುತ್ತೆ, "ಓ! ಈ ತರಹ ಇರುವ ಹುಡುಗಿ ನಮಗೆ ಸಿಕ್ಕಿಬಿಟ್ಟಿದ್ದರೆ ಚೆನ್ನಾಗಿತ್ತು." "ಅಯ್ಯೋ ಮೊದಲು ಬಂದಿತ್ತಲ್ಲ, ಅವರನ್ನು ಮಾಡಿಕೊಂಡಿದ್ದರೆ ಚೆನ್ನಾಗಿತ್ತು", ಈ ರೀತಿ. ತೃಪ್ತಿ ಇರಲ್ಲ! ಈ ವಿಷಯದಲ್ಲಿ ಹೆಂಗಸರು ಪಾಲಿಗೆ ಬಂದದ್ದು ಪಂಚಾಮೃತ ಅಂದುಕೊಂಡಿರುತ್ತಾರೆ, ಆದರೆ ಗಂಡಸರ ಮನಸ್ಸು ಹೆಚ್ಚು ಚಂಚಲ. ಹಿಂದಿನ ಕಾಲದ ರಾಜರು ಎಷ್ಟೆಷ್ಟೋ ಮದುವೆಗಳನ್ನು ಮಾಡಿಕೊಂಡರು. ಈಗಲೂ ಅರಬ್ ದೇಶದಲ್ಲೆಲ್ಲಾ ಬೇಕಾದಷ್ಟು ಮದುವೆ ಮಾಡಿಕೊಳ್ತಾರೆ.
ಸುಖದ ಬಗೆಗಿನ ಆಲೋಚನೆಗಳಿಗೆ, ಕನಸುಗಳಿಗೆ ಮನಸ್ಸಿನಲ್ಲಿ ಉತ್ತೇಜನ ಕೊಡುವುದರಿಂದಲೇ ತೀವ್ರವಾದ ಬಯಕೆಗಳುಂಟಾಗುವುದು. ಪ್ರಾಪಂಚಿಕವಾದ ಆಲೋಚನೆಗಳಾಗಲೀ ಅಥವಾ ದೈವಿಕವಾದ, ಆಧ್ಯಾತ್ಮಿಕವಾದ ಆಲೋಚನೆಗಳಾಗಲೀ ನೀವು ಯಾವುದಕ್ಕೆ ಪ್ರೋತ್ಸಾಹ ಕೊಟ್ಟರೂ ನಿಮ್ಮ ಮನಸ್ಸಿಗೆ ಆ ಕ್ಷಣದಲ್ಲಿ ಆ ಆಲೋಚನೆಗಳೇ ಹಿತವೆನಿಸುವುದು. ಆದರೆ ಪ್ರಾಪಂಚಿಕವಾದ ಸುಖದ ಬಯಕೆಗಳು ನಿಮ್ಮನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು, ಕಡೆಗೆ ಹತಾಶೆ, ಖಿನ್ನತೆ ಹೀಗೆ ಕೆಳಮುಖವಾಗಿ ಸಾಗುವಂತೆ ಮಾಡಿದರೆ, ದೈವಿಕವಾದ ಆಲೋಚನೆಗಳು ಸಂತೋಷದಿಂದ ತೃಪ್ತಿಯೆಡೆಗೂ, ಪರಮಾನಂದದೆಡೆಗೂ ನಿಮ್ಮನ್ನು ಮೇಲೆತ್ತುತ್ತವೆ.
ಚಿತ್ತವನ್ನು ’ಈ ಕ್ಷಣ’ದಲ್ಲಿ ಇಟ್ಟುಕೊಂಡಾಗ ನಾನೇ ಸ್ವಯಂ ’ಸುಖಸಂಪೂರ್ಣ’ನಾಗಿದ್ದೇನೆ. ನಾನೇ ಸುಖ, ನಾನೇ ಆನಂದ, ಈ ಅನುಭವ ಉಂಟಾಗುವುದು.

* * * * *

ನಿಂದೆ - ಬೇಡ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೩೦.೦೫.೨೦೦೩ರಂದು ಪ್ರಕಟವಾಗಿತ್ತು)

ಟ್ಟೆ ಬಿಳಿಯಾಗಿದ್ದಷ್ಟೂ ಅದರಲ್ಲಿರುವ ಕೊಳೆ ಎತ್ತಿ ಕಾಣುತ್ತೆ. ಕಣ್ಣಲ್ಲಿ ಒಂದು ಚೂರು ಧೂಳು ಹೋದರೂ ಇರಿತ, ಕಡಿತ ಶುರುವಾಗುತ್ತೆ. ಆದರೆ ತಲೆಮೇಲೆ ಒಂದಷ್ಟು ಮಣ್ಣು ಹೊತ್ತರೂ ಏನೂ ಗೊತ್ತಾಗುವುದಿಲ್ಲ. ಹಾಗೆಯೇ ನಮ್ಮ ಮನಸ್ಸು ಹೆಚ್ಚು ಸೂಕ್ಷ್ಮವಾಗಿದ್ದಷ್ಟೂ ಯಾರಾದರೂ ಏನಾದರೂ ಚಿಕ್ಕಪುಟ್ಟ ಮಾತುಗಳನ್ನು ಅಂದರೆ ಮನಸ್ಸಿಗೆ ಬೇಜಾರಾಗುತ್ತೆ. ಈಗ ಯಾವುದೋ ಒಂದು ಸ್ಥಳಕ್ಕೆ ಹೋಗುತ್ತೀರ, ಸ್ವಲ್ಪ ಮುಂಚೆ ಅಲ್ಲಿ ಜಗಳವಾಡಿರುತ್ತಾರೆ ಜನ. ನೀವು ಹೋದ ತಕ್ಷಣ ನಿಮಗೂ ಟೆನ್ಶನ್ ಶುರುವಾಗಿಬಿಡುತ್ತೆ. ಚಿತ್ತ ಶುದ್ಧವಾಗಿದ್ದಷ್ಟೂ ಪರಿಸರದ ಪ್ರಭಾವ ಹೆಚ್ಚಾಗಿರುತ್ತೆ.
ಯಾವಾಗ ಚಿತ್ತ ಪ್ರಸನ್ನವಾಗಿರುತ್ತದೆಯೋ ಆಗ ಅದರಲ್ಲಿ ಲೋಭವೋ, ಈರ್ಷೆಯೋ, ಮೋಹವೋ, ಕಾಮ ಅಥವಾ ಕ್ರೋಧವೋ ಬಂದರೆ ಸಹಿಸುವುದು ಕಷ್ಟ. ನೀವು ಖುಷಿಯಾಗಿರ್ತೀರ - ಇದ್ದಕ್ಕಿದ್ದಂತೆ ಯಾರನ್ನಾದರೂ ನೋಡ್ತೀರಾ...ನಿಮ್ಮ ಮನಸ್ಸಿನಲ್ಲಿ ಹೊಟ್ಟೆಕಿಚ್ಚು ಶುರುವಾಗುತ್ತೆ ಅಂತ ಇಟ್ಕೊಳ್ಳಿ, ಎಷ್ಟು ಅಸಹ್ಯವಾಗುತ್ತೆ ಅಲ್ವಾ ಆಗ? ಆಗ ನೀವು ನಿಮ್ಮ ಚಿತ್ತವನ್ನು ಹೀಯಾಳಿಸುವುದಕ್ಕೆ ಶುರುಮಾಡ್ತೀರ. ನಮ್ಮನ್ನು ನಾವು ಹೀಯಾಳಿಸುವುದಕ್ಕೆ ಶುರುಮಾಡಿಕೊಂಡ ಕೂಡಲೇ ನಮ್ಮ ಪತನ ಶುರುವಾಗುತ್ತೆ. ಹೇಗೆ? ಮೊದಲು ನಮ್ಮನ್ನು ಬೈದುಕೊಳ್ತೀವಿ. ನಂತರ ಬೇರೆಯವರು ಸರಿಯಿಲ್ಲ - ’ಅವರು ಸರಿ ಇಲ್ಲ, ಇವರು ಸರಿ ಇಲ್ಲ’, ಬೇರೆಯವರು ಮಾಡಿದ್ದು ತಪ್ಪು ಅಂತ ಬೇರೆಯವರಲ್ಲಿ ದೋಷ ಕಂಡುಹಿಡಿಯುವುದಕ್ಕೆ, ಹೀಯಾಳಿಸುವುದಕ್ಕೆ ಸಿದ್ಧರಾಗಿಬಿಡ್ತೀವಿ. ಇದರಿಂದ ದ್ವೇಷ ಉಂಟಾಗುತ್ತೆ. ಸ್ವ-ದ್ವೇಷ, ಪರದ್ವೇಷದಿಂದ ಸಾಧನೆ ನುಚ್ಚುನೂರಾಗಿ ಬಿಡುತ್ತೆ. ಮನಸ್ಸಿನ ಪ್ರಫುಲ್ಲತೆ ಎಲ್ಲವೂ ಹಾಳಾಗುತ್ತೆ.
ಪ್ರಪಂಚವನ್ನಾಗಲೀ, ಸಾಧನೆಯ ಪಥವನ್ನಾಗಲೀ, ತನ್ನನ್ನೇ ತಾನಾಗಲೀ ನಿಂದಿಸದೆ ಪ್ರತಿಯೊಂದನ್ನೂ ಹೇಗಿದೆಯೋ ಹಾಗೆಯೇ ಕಾಣಲು ಒಂದು ನಿರ್ದಿಷ್ಟ ಮಟ್ಟದ ಪರಿಪಕ್ವತೆ ಉಂಟಾಗಬೇಕು. ಅದನ್ನು ಸಾಧನೆಯಿಂದ ಬೆಳೆಸಿಕೊಳ್ಳಬೇಕು.

* * * * *

ಚಿತ್ತವೇ ಆತ್ಮ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೩೧.೦೫.೨೦೦೩ರಂದು ಪ್ರಕಟವಾಗಿತ್ತು)

’ಆತ್ಮ ಚಿತ್ತಂ’, ಚಿತ್ತವೇ ಆತ್ಮ - ಬಹಳ ಅಮೂಲ್ಯವಾದ ಸೂತ್ರವಿದು. ಇದನ್ನು ತಿಳಿದುಕೊಂಡಾಗ ವಿವೇಕಜ್ಞಾನ ಉಂಟಾಗುತ್ತದೆ. ನಿನ್ನ ಚಿತ್ತವೂ ಆತ್ಮವೇ. ಈ ಒಂದೇ ಆಕಾಶದಲ್ಲೇ ಹಗಲೂ ಆಗುತ್ತೆ ರಾತ್ರಿಯೂ ಆಗುತ್ತೆ, ಮೋಡ ಬರುತ್ತೆ, ಬಣ್ಣಗಳು ಬರುತ್ತವೆ, ಮತ್ತೆ ಎಲ್ಲಾ ಸರಿದುಹೋಗಿಬಿಡುತ್ತೆ. ಹಾಗೆಯೇ ನಮ್ಮ ಚಿತ್ತದಲ್ಲಿ ಹಲವಾರು ಭಾವನೆಗಳು ಬರುತ್ತವೆ. ಬಂದ ಹಾಗೆ, ಹಾಗೆಯೇ ಹೋಗಿಬಿಡುತ್ತೆ ಅಲ್ವಾ?
ಇದೇ ರೀತಿ ನಿಮಗೆ ಕೋಪ ಎಷ್ಟೋ ಸಲ ಬಂದಿದೆ. ಆದರೆ ಯಾವಾಗಲೂ ಹಾಗೇ ಇರುತ್ತಾ ಕೋಪ? ಅದಕ್ಕೂ ಒಂದು ಉಚ್ಛ ಸ್ಥಿತಿ ಬರುತ್ತೆ, ಮತ್ತೆ ಸಂಜೆ ಆಗ್ತಾ ಬೆಳಕು ಕಡಿಮೆ ಆಗುವಂತೆ ಇಳೀತಾ ಹೋಗುತ್ತೆ. ಹೊಟ್ಟೇಕಿಚ್ಚೂ ಹಾಗೇ. ಪ್ರತಿಯೊಂದು ರಾಗಕ್ಕೂ, ದ್ವೇಷಕ್ಕೂ ಒಂದು ಕಾಲ ಇದೆ, ಒಂದು ನಿಯಮ ಇದೆ. ಒಂದು ಏಳುತ್ತೆ ಮತ್ತೊಂದು ಕುಸಿದು ಬೀಳುತ್ತೆ. ಎಲ್ಲಿ ಏಳುತ್ತೆ? ಎಲ್ಲಿ ಬೀಳುತ್ತೆ? ಎಲ್ಲಾ ನಮ್ಮ ಚಿತ್ತದಲ್ಲಿ. ಆ ಚಿತ್ತವೇ ಆತ್ಮ!
ಈ ಆಕಾಶದಲ್ಲಿ ಎಷ್ಟೋ ಮೋಡಗಳು ಬಂದರೂ ಹೋದರೂ, ಮೋಡ ಎಷ್ಟೇ ಕವಿದರೂ ಆಕಾಶದ ಶುದ್ಧತೆಗೆ ಸ್ವಲ್ಪವೂ ಕುಂದು ಬರುವುದಿಲ್ಲ. ಹಾಗೆಯೇ ಏನೇ ಭಾವನೆ ಬಂದರೂ ನಿನ್ನ ಮನಸ್ಸು ನಿನ್ನ ಚೇತನ ಕೆಟ್ಟು ಹೋಗುವುದಕ್ಕೆ ಸಾಧ್ಯವೇ ಇಲ್ಲ. ’ದುರಾತ್ಮ’ ಅನ್ನುವುದೇ ಇಲ್ಲ. ಕೋಪವೂ, ತಾಪವೂ, ಎಲ್ಲವೂ ಆತ್ಮನ ಸ್ವಭಾವವೇ! ಸ್ವಾಭಾವಿಕವೇ. ಈ ಮನಸ್ಸೂ ಪರಮಾತ್ಮನಿಗೆ ಸೇರಿದ್ದೇ. ಈ ಮನಸ್ಸಿನ ಗೊಂದಲಗಳೆಲ್ಲವೂ ಪರಮಾತ್ಮನದೇ ಆಟ, ಲೀಲೆ, ನಾಟಕ ಅಂತ ತೆಗೆದುಕೊಳ್ಳಬೇಕು. ನಿನ್ನನ್ನು ನೀನು ಬೈದುಕೊಳ್ಳಬೇಡ. ಈ ನಿನ್ನ ಚಿತ್ತವನ್ನು ಸಮರ್ಪಣೆ ಮಾಡಿಬಿಡು. ಚಿತ್ತವೂ ಪರಮಾತ್ಮನ ಅಂಗವೇ ಆಗಿದೆ. ಆತ್ಮ ಚಿತ್ತಂ - ಚಿತ್ತವೇ ಆತ್ಮ.

* * * * *

ಸಾಧನೆಯ ನಿರಂತರತೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧.೬.೨೦೦೩ರಂದು ಪ್ರಕಟವಾಗಿತ್ತು)

ಸಾಧನೆ ಮಾಡಬೇಕೆಂದರೆ, ಪ್ರತಿದಿನವೂ ಸಾಧನೆ ಮಾಡಬೇಕೆಂದು ಹೇಳುತ್ತೀವಿ. ಏಕೆ ಗೊತ್ತಾ? ನಮ್ಮ ತಲೆಯಲ್ಲಿ ಕೋಟ್ಯಾಂತರ ತಂತುಗಳು, ಜೀವಾಣುಗಳು ಇವೆ. ಒಂದು ನಿರ್ದಿಷ್ಟ ಸಮಯದಲ್ಲಿ ಕೆಲವೇ ತಂತುಗಳು ಕೆಲಸ ಮಾಡುತ್ತವೆ. ಇವತ್ತು ಕೆಲವು ಮಾಡುತ್ತವೆ, ನಾಳೆ ಕೆಲವು ಮಾಡುತ್ತವೆ, ಫ್ಯಾಕ್ಟರಿ ಷಿಫ್ಟ್ ತರಹ. ಫ್ಯಾಕ್ಟರಿ ಏನೋ ನಡೆಯುತ್ತಲೇ ಇರುತ್ತೆ. ಆದರೆ ಬೇರೆ ಬೇರೆ ಜನ ಬಂದು ಕೆಲಸ ಮಾಡಿಕೊಂಡು ಹೋಗುತ್ತಿರುತ್ತಾರೆ. ಹಾಗೆಯೇ ನಮ್ಮ ಚೇತನದಲ್ಲಿ ನ್ಯೂರಾನ್ಸ್ ಷಿಫ್ಟಿನಲ್ಲಿ ಕೆಲಸ ಮಾಡುತ್ತವೆ, ಬೇರೆ ಬೇರೆ ಸರದಿಯಲ್ಲಿ.
ಈಗ ’ಒಂದು ಊರಿನಲ್ಲಿ ಎಲ್ಲರೂ ವಿದ್ಯಾವಂತರು’ ಎನ್ನಬೇಕಾದರೆ - ಅಲ್ಲಿರುವ ಪ್ರತಿಯೊಬ್ಬರಿಗೂ ಶಿಕ್ಷಣ ಕೊಟ್ಟಾಗ ಮಾತ್ರ ಹಾಗೆ ಹೇಳಬಹುದು, ಅಲ್ಲವೇ? ಕೋಟ್ಯಾಂತರ ಅಣುಗಳಿವೆ ನಮ್ಮ ತಲೆಯಲ್ಲಿ. ಈಗ ನಾವು ಯಾವುದೋ ಒಂದು ಜ್ಞಾನದ ಅರಿವನ್ನು ತರಬೇಕಾದರೆ ಎಲ್ಲಾ ಅಣುಗಳಿಗೂ ಶಿಕ್ಷಣ ಕೊಡಬೇಕು. ಉದಾಹರಣೆಗೆ, ಇವತ್ತು ’ಓಂ ನಮಃ ಶಿವಾಯ’ ಅಂತ ಒಂದಷ್ಟು ಸಲ ಉಚ್ಛಾರಣೆ ಮಾಡುತ್ತೀವಿ. ಇವತ್ತು ಕೆಲವೆಲ್ಲಾ ಶಿಕ್ಷಿತರಾಗುತ್ತವೆ. ಮರುದಿನ ಮಾಡಿದಾಗ, ನಮ್ಮ ಚೇತನದ ಬೇರೆ ಕಣಗಳಿಗೆ ಶಿಕ್ಷಣ ಸಿಗುತ್ತೆ. ನಾಡಿದ್ದು ಪುನಃ ಬೇರೆ ಬೇರೆ ಕಣಗಳಿಗೆ.. ಹೀಗೆ ಸಾಧನೆ ಆಗ್ತಾ ಇದ್ದಾಗ ಸಿದ್ಧಿಯುಂಟಾಗುತ್ತದೆ. ಜಪ ಅಥವಾ ಧ್ಯಾನ ಪ್ರತಿದಿನ ಮಾಡಬೇಕು ಅನ್ನುವುದು ಏಕೆ ಗೊತ್ತಾ? ಒಂದು ದಿನ ಬಿಟ್ಟುಬಿಟ್ಟರೆ ಅಂದಿನ ಸರದಿಯಲ್ಲಿರುವವರಿಗೆ ನೀವು ಶಿಕ್ಷಣ ಕೊಟ್ಟಂತಾಗುವುದಿಲ್ಲ. ಅವರಿಗೆ ಒಂದು ವರ್ಷದ ವರೆಗೆ ಸರದಿ ಬರುವುದಿಲ್ಲ. ಅಲ್ಲಿಯವರೆಗೆ ಅವರು ಅಶಿಕ್ಷಿತರಾಗಿ ಒಳಗೆ ಕೂತಿರುತ್ತಾರೆ. ಅದಕ್ಕೇ ಪ್ರತಿದಿನವೂ ಶಿಕ್ಷಣ ಕೊಡಬೇಕು, ಅದಕ್ಕಾಗಿಯೇ ಪ್ರತಿದಿನವೂ ಸಾಧನೆ ಮಾಡಬೇಕು, ಆಗಲೇ ಸಿದ್ಧಿಯುಂಟಾಗುವುದು.

* * * * *

ಜ್ಯೋತಿಷ್ಯ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨.೬.೨೦೦೩ರಂದು ಪ್ರಕಟವಾಗಿತ್ತು)

ಮ್ಮಲ್ಲಿ ಜ್ಯೋತಿಷ್ಯ ಏಕಿದೆ? ಅದರ ಅರ್ಥವೇನು ಗೊತ್ತಾ?
ಯಾವುದೋ ಒಂದು ಘಟನೆ ಉಂಟಾಗಿದೆಯಪ್ಪ ನಿಮಗೆ ಸಂಬಂಧಿಸಿದಂತೆ. ಅದನ್ನು ಒಂದು ವಿಶಾಲವಾದ, ವಿಸ್ತಾರವಾದ ದೃಷ್ಟಿಯಿಂದ ನೋಡುವುದು.
"ಓ, ನನಗೆ ಈಗ ಶನಿಕಾಟ" ಅಂತ ಅಂದುಕೊಂಡಾಗ, ’ಬೇರೆಯವರು ಕಷ್ಟಕೊಟ್ಟರು’ ಎನ್ನದೆ, ’ಅವನು ಮನೆಹಾಳ’ ಎನ್ನದೆ, "ನನ್ನ ಗ್ರಹಚಾರ ಹೀಗಾಯ್ತು, ಅವನಿಂದ ಈ ತರಹ ಮಾತು ಕೇಳಬೇಕಾಯ್ತು" ಅಂತ ನಾವು ತೆಗೆದುಕೊಳ್ತೀವಿ. ಅಂದರೇನು? ಯಾವುದೇ ಘಟನೆಯನ್ನೂ ಸೀಮಿತವಾದ ದೃಷ್ಟಿಕೋನದಿಂದ ನೋಡದೆ ವಿಶಾಲವಾದ ದೃಷ್ಟಿಕೋನದಿಂದ ನೋಡುತ್ತೀವಿ. ಕನ್ನಡದಲ್ಲಿ ನಾವು ಉಪಯೋಗಿಸುತ್ತೇವಲ್ಲ "ನನ್ನ ಗ್ರಹಚಾರ" ಅಂತ, ತುಂಬ ಅರ್ಥಪೂರ್ಣವಾದ ಶಬ್ದ. ಏನೋ ಗ್ರಹಚಾರ ಅಂದುಕೊಂಡು ಬಿಟ್ಟುಬಿಡ್ತೀವಿ.
ಯಾವುದೋ ಗ್ರಹಗಳ ಗತಿಯಿಂದ ತಲೆಯಲ್ಲಿ ಈ ವಿಚಾರ ಬಂದಿದೆ, ಈ ತರಹ ವ್ಯವಹಾರ ನಡೆದಿದೆ ಎಂದು ಕಾರಣವನ್ನು ಮಹತ್ಕಾರಣವನ್ನಾಗಿ ನೋಡುವುದು ಜ್ಯೋತಿಷ್ಯದ ಉದ್ದೇಶ. ನಂತರ ಅದನ್ನು ಹೋಗಲಾಡಿಸಿಕೊಳ್ಳಲು ಪರಿಹಾರೋಪಾಯವನ್ನೂ ಹೇಳ್ತಾರೆ. ನಿನ್ನ ತರಂಗವನ್ನು ಬದಲಾಯಿಸಿಕೋ, ಅದಕ್ಕೆ ಧ್ಯಾನ ಮಾಡು, ಜಪ ಮಾಡು. ನಿನ್ನ ತಲೆಯಲ್ಲಿ ಕೋಟ್ಯಾಂತರ ಅಣುಗಳಿವೆ. ಎಲ್ಲರನ್ನೂ ಶಿಕ್ಷಿತರನ್ನಾಗಿ ಮಾಡು.
ನಮ್ಮ ಶರೀರವೂ ಒಂದು ನಗರ. ನಮಗೆ ಗೊತ್ತಿಲ್ಲದಿದ್ದರೂ, ನಮ್ಮೊಳಗೇ ಕೋಟ್ಯಾನುಕೋಟಿ ಅಣುಜೀವಿಗಳಿಂದ ಕೂಡಿರುವ ವ್ಯವಸ್ಥಿತವಾದ ಒಂದು ಪುರವಿದೆ. ಹಾಗೇ ಹಲವಾರು ತತ್ವಗಳು ನಮ್ಮ ಶರೀರದಲ್ಲಿ ಉಂಟಾಗುತ್ತಿರುತ್ತವೆ. ಅಗ್ನಿತತ್ವ, ವಾಯುತತ್ವ, ಜಲತತ್ವ...ನಮ್ಮ ಚೇತನದಲ್ಲಿ ಪ್ರತಿನಿತ್ಯವೂ ಉಂಟಾಗತಕ್ಕಂಥ ಘಟನೆಗಳನ್ನು ’ಕಲಾ ಕಾಷ್ಟ ಕಾಲ’ ಅಂದರೆ ತತ್ವಗಳ ಮೂಲಕ ತಿಳಿದುಕೊಳ್ಳಬಹುದು. ಇದರ ಬಗ್ಗೆ ಇನ್ನೂ ವಿವರವಾಗಿ ತಿಳಿದುಕೊಳ್ಳೋಣ.

* * * * *

ತತ್ವ-ವಿವೇಕ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೩.೬.೨೦೦೩ರಂದು ಪ್ರಕಟವಾಗಿತ್ತು)

ಗ ತತ್ವಗಳ ಬಗ್ಗೆ ತಿಳಿದುಕೊಳ್ಳೋಣ.
ಒಂದು ತತ್ವ ನಮ್ಮ ಶರೀರದಲ್ಲಿ ಉಂಟಾಗುತ್ತೆ, ಇನ್ನೊಂದು ವಾತಾವರಣದಲ್ಲಿ ಉಂಟಾಗುತ್ತೆ. ವಾತಾವರಣದಲ್ಲಿ ’ಅಗ್ನಿತತ್ವ’ ಬರುತ್ತಿರುವಾಗ, ಎಲ್ಲರೂ ಸುಮ್ಮನೇ ಶಾಂತವಾಗಿದ್ದರೂ, ಪ್ರಸನ್ನವಾಗಿದ್ದಾಗಲೂ, ಅವರ ಮಧ್ಯದಲ್ಲೇ ಒಂದು ಜಗಳ ಪ್ರಾರಂಭವಾಗಿಬಿಡುತ್ತೆ. ತತ್ವಜ್ಞಾನಿಗಳಿಗೆ ಇದು ಮೊದಲೇ ಗೊತ್ತಾಗುತ್ತದೆ. "ಇವರೆಲ್ಲಾ ಕಿತ್ತಾಡಿಕೊಳ್ತಾರೆ ನೋಡಿ" ಎಂದು ಮೊದಲೇ ಹೇಳಿಬಿಡುತ್ತಾರೆ! ಇದೇ ರೀತಿ ’ವಾಯುತತ್ವ’ದ ಸಂಚಾರವಾದಾಗ ಸುಮ್ಮನೆ ಕುಳಿತಿರುವವರಿಗೆಲ್ಲ ಎದ್ದು ಹೋಗೋಣ ಅಂತ ಮನಸ್ಸಾಗುತ್ತೆ. ಸುಮ್ಮನೆ ಕುಳಿತಿರಲು ಆಗುವುದಿಲ್ಲ. ಕುಳಿತ ಕಡೆಯೇ ಕೈಕಾಲು ಆಡಿಸುವುದು, ಚಲನವಲನ ಶುರುವಾಗುತ್ತೆ. ಯಾರಾದರೂ ಬರೀತಾ ಕೂತಿದ್ದರೂ ಅವರ ಎದುರು ಇರುವ ಮೇಜಿನ ಮೇಲೇ ತಬಲಾ ಬಾರಿಸುತ್ತಿರುತ್ತಾರೆ, ಸಮಯ, ಸಂದರ್ಭ ಏನೂ ನೋಡುವುದಿಲ್ಲ. ಇವರಲ್ಲಿ ವಾಯುತತ್ವ ಹೆಚ್ಚಾಗಿರುತ್ತೆ. ಹಾಗೆಯೇ ಪಿತ್ಥ ಹೆಚ್ಚಾದಾಗ ವಿಪರೀತ ಯೋಚನೆಗಳು ಬರುತ್ತಿರುತ್ತವೆ. ಸುಮ್ಮಸುಮ್ಮನೆ ಚಿಂತೆ ಮಾಡೋದು.
ಮನೆಯವರು ಬರುವುದು ಒಂದು ಅರ್ಧ ಘಂಟೆ ತಡವಾದರೆ ಏನೇನೋ ಯೋಚನೆ ಮಾಡೋದು, "ಆಕ್ಸಿಡೆಂಟ್ ಆಯ್ತೋ ಏನೋ...!" ಊರಲ್ಲಿರುವ ಯೋಚನೆಯೆಲ್ಲಾ, ಮಾಡಬಾರದ ಯೋಚನೆಯೆಲ್ಲಾ ಮಾಡುವುದು. ಅಯ್ಯೋ ಈ ಯೋಚನೆ ಮಾಡಬಾರದು ಅಂತ ಅಂದುಕೊಳ್ಳುವುದು, ಮತ್ತೆ ಮತ್ತೆ ಅದನ್ನೇ ಮಾಡುವುದು. ಇದು ಏತಕ್ಕೆ...? ಅವಿವೇಕ! ಅವಿವೇಕದಿಂದ, ಅಜ್ಞಾನದಿಂದ ಈ ತರಹ ಚಿಂತೆ ಉಂಟಾಗುತ್ತಾ ಇರುತ್ತೆ.
ಯಾವುದೋ ಒಂದು ಘಟನೆಗೆ ಯಾರೋ ಒಬ್ಬರನ್ನು ಹೊಣೆಗಾರರನ್ನಾಗಿ ಮಾಡಬೇಡಿ. ಪರಿಸರ, ಅವರ ಮನಃಸ್ಥಿತಿ, ಪರಿಸ್ಥಿತಿ, ಹಲವಾರು ವಿಷಯಗಳು ಅದರ ಹಿನ್ನೆಲೆಯಲ್ಲಿ ಇರುತ್ತವೆ. ಇದೆಲ್ಲವನ್ನೂ ತಿಳಿದುಕೊಳ್ಳತಕ್ಕಂಥಹುದು ವಿವೇಕ.

* * * * *

ಮಾಯೆ-ಅವಿವೇಕ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೪.೬.೨೦೦೩ರಂದು ಪ್ರಕಟವಾಗಿತ್ತು)

"ಕಲಾದೀನಾಂ ತತ್ವಾನಾಂ ಅವಿವೇಕೋ ಮಾಯಾ"
ಒಂದು ಘಟನೆ ನಡೆಯಬೇಕಾದರೆ ಹಲವಾರು ವಿಷಯಗಳು ಸೇರಿ ನಡೆಯುತ್ತದೆ. ನಮ್ಮ ಪ್ರಯತ್ನ, ಪರಿಸರದ ಅನುಕೂಲತೆ, ದೈವೀಸಹಾಯ, ಕ್ಷಮತೆ ಹಾಗೂ ಕಾಲ. ಬೀಜ ಬಿತ್ತಬೇಕಾದರೆ ಯಾವ ಕಾಲ ಎಂದು ನೋಡಿ ಬಿತ್ತಬೇಕು. ಎಲ್ಲರೂ ಫಸಲು ಕುಯ್ಯುವ ಕಾಲದಲ್ಲಿ ಹೋಗಿ ಬೀಜ ಬಿತ್ತಿ ಏನೂ ಫಲ ಬಂದಿಲ್ಲ ಅಂದುಕೊಂಡರೆ ಏನು ಪ್ರಯೋಜನ? ದೋಷ ಯಾರದಾಗುತ್ತೆ? ಇದು ಕಾಲದ ಪರಿಗಣನೆಯಲ್ಲ, ಹೌದಾ? ಸಕಾಲದಲ್ಲಿ ಬೀಜ ಬಿತ್ತಿದೆ, ಆದರೆ ನೀರು ಹಾಕಲಿಲ್ಲ. ಪುನಃ ತಪ್ಪಾಯ್ತು, ಅವಿವೇಕ ಉಂಟಾಯ್ತು, ಅಲ್ಲಿ ಪೂರಾ ಪ್ರಯತ್ನ ಮಾಡಿಲ್ಲ.
ಈ ಪ್ರಪಂಚ ಸರಳವಾಗಿಲ್ಲ, ನಿಗೂಢವಾಗಿದೆ. ಸೃಷ್ಟಿ ರಹಸ್ಯಮಯ, ಜಟಿಲವಾಗಿದೆ. ಅದನ್ನು ಸರಿಯಾಗಿ ತಿಳಿದುಕೊಳ್ಳಬೇಕು.
ಯಾವುದೋ ಒಂದು ಘಟನೆಗೆ ಬೇರೆಯವರು ಜವಾಬ್ದಾರರು ಅನ್ನುವುದನ್ನು ಬಿಟ್ಟು, ನಾನೇ ಜವಾಬ್ದಾರ ಅಂತ ಅಂದುಕೊಂಡು; ಒಂದು - ನಿಮ್ಮ ಮೇಲೆ ಜವಾಬ್ದಾರಿ ತೆಗೆದುಕೊಳ್ಳಿ ಅಥವಾ ಎಲ್ಲೋ ದೂರದಲ್ಲಿರುವ ’ಗ್ರಹ ನಕ್ಷತ್ರ’ದ ಮೇಲೆ ಬಿಡಿ. ಎರಡು ರೀತಿ ಮಾಡಿದಾಗಲೂ ನೀವು ಬೇರೆಯವರ ಜೊತೆ ಜಗಳ ಕಾಯುವುದು, ದ್ವೇಷ ಮಾಡೋದು ನಿಲ್ಲುತ್ತೆ.
ನಮ್ಮ ದೇಶದಲ್ಲಿ ಈ ಜ್ಯೋತಿಷ್ಯ ಶಾಸ್ತ್ರದ ದುರುಪಯೋಗ ಮಾಡಿಕೊಂಡು ಈ ವಿಜ್ಞಾನವನ್ನು ಹಾಳುಮಾಡಿಹಾಕಿಬಿಟ್ಟಿದೀವಿ ನಾವು. ’ನನಗೆ ಒಳ್ಳೆಯ ಸಮಯ ಮುಂದೆ ಬರುತ್ತೆ...’ ಅಂತ ಕಾಯ್ತಾ ಇರೋದು. ಯಾವಾಗಲೋ ಒಳ್ಳೆಯ ಕಾಲ ಬರುತ್ತೆ ಅಂತ ಮಾಡುವ ಪ್ರಯತ್ನ ಬಿಟ್ಟುಬಿಟ್ಟು ಸೋಮಾರಿಯಾಗಿ ಕುಳಿತುಕೊಳ್ಳುವುದು. ಜ್ಯೋತಿಷ್ಯ ಅನ್ನುವುದು ನಿಜವಾದ ವಿಜ್ಞಾನ. ಆದರೆ ಇದರ ಗೂಡಾರ್ಥ ಏನು ಅನ್ನುವ ಕಲ್ಪನೆ ಕೂಡಾ ಇಲ್ಲ. ಒಂದು - ಯಾವ ಜ್ಯೋತಿಷಿ ಏನು ಹೇಳಿದರೂ ಕಣ್ಮುಚ್ಚಿ ಅದನ್ನೇ ನಂಬಿಕೊಂಡು ಹೋಗುವುದು. ಇನ್ನೊಂದು - ಜ್ಯೋತಿಷ್ಯದ ಬಗ್ಗೆ ಏನೂ ಸರಿಯಾಗಿ ತಿಳಿದುಕೊಳ್ಳದೆ ’ಇವೆಲ್ಲ ಸುಳ್ಳು’ ಎಂದು ಒದರಿಬಿಡುವುದು. ನಿಜವಾದ ಸತ್ಯಾನ್ವೇಷಕರು ಬಹಳ ಕಡಿಮೆ ಜನ ಇರುವುದರಿಂದಲೇ ನಮ್ಮ ದೇಶದಲ್ಲಿ ಈ ವಿಜ್ಞಾನ ಕುಂದಿಹೋಗುತ್ತಾ ಇದೆ.

* * * * *

ನಿನ್ನ ಪ್ರಾಣ - ನಿನ್ನಲ್ಲಿರಲಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೫.೬.೨೦೦೩ರಂದು ಪ್ರಕಟವಾಗಿತ್ತು)

"ಕಲಾದೀನಾಂ ತತ್ವಾನಾಂ ಅವಿವೇಕೋ ಮಾಯಾ" - ಮಾಯೆಯ ಕಾರಣದಿಂದ ’ನಾನು ಆತ್ಮ’ ಅನ್ನುವ ಜ್ಞಾನ ನನಗಿಲ್ಲ.
ನಾವು ’ಚಂದಮಾಮ’ದಲ್ಲಿ ಓದಿರುತ್ತೀವಲ್ಲ... ಯಾರೋ ಒಬ್ಬ ಮಹಾರಾಜ. ಅವನ ಪ್ರಾಣ, ಪಂಜರದಲ್ಲಿರುವ ಗಿಳಿಯೊಂದರಲ್ಲಿ, ಅದು ಏಳು ಸಮುದ್ರ, ಏಳು ಪರ್ವತಗಳಾಚೆಗಿರುವ ಕೋಟೆಯಲ್ಲಿ! ಅಲ್ಲಿ ಆ ಪಂಜರದಲ್ಲಿ ಆ ಗಿಳಿಯ ಕತ್ತು ಹಿಸುಕಿದರೆ ಇಲ್ಲಿ ರಾಜ ಸತ್ತು ಹೋಗ್ತಾನೆ... ಅಂತ.
ಹಾಗೆ ನಾವು ನಮ್ಮ ಆತ್ಮವನ್ನು, ನಮ್ಮ ಪ್ರಾಣವನ್ನು ಬೇರೆ ಎಲ್ಲೆಲ್ಲೋ ಇಟ್ಟುಕೊಂಡುಬಿಟ್ಟಿರುತ್ತೀವಿ. ಕೆಲವರು ಚುನಾವಣೆ ಟಿಕೆಟಿನಲ್ಲಿ! ಆ ಟಿಕೆಟ್ ಸಿಗಲಿಲ್ಲ ಅಂದರೆ ಇವರಿಗೆ ಪ್ರಾಣ ಹೋಯ್ತು. ಕೆಲವರು ಮಕ್ಕಳ ಹತ್ತಿರ... ಆ ಮಗನೋ, ಮಗಳೋ, ಮುಖ ತಿರುಗಿಸಿದರೆ; ಅಥವಾ ಸೊಸೆ ಬಂದು ಮಗನನ್ನು ಎಳೆದುಕೊಂಡು ಹೋದಳು ಅಂದರೆ ಇವರ ಪ್ರಾಣ ಹೋಗಿಬಿಡುತ್ತೆ.
ನಾವು ನಮ್ಮ ಪ್ರಾಣವನ್ನು ನಮ್ಮಲ್ಲಿ ಇಟ್ಟುಕೊಂಡೇ ಇಲ್ಲ. ಆಗಾಗ ಅದನ್ನು ಬದಲಾಯಿಸಿ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಇಡ್ತಾ ಇರ್ತೀವಿ. ಆಟದ ಸಾಮಾನಿನಲ್ಲಿ, ನೆರೆಹೊರೆಯವರಲ್ಲಿ, ಮಕ್ಕಳುಮರಿಯಲ್ಲಿ, ಲಾಟರಿ ಟಿಕೆಟಿನಲ್ಲಿ, ಹೀಗೆ ಎಲ್ಲೆಲ್ಲೋ ಬೇರೆ ಬೇರೆ ಕಡೆ ಇಟ್ಟಿರುತ್ತೀವಿ. ಅದಕ್ಕೇ ಜನರ ಮುಖದಲ್ಲಿ ಚೈತನ್ಯಜ್ಯೋತಿ ಕಾಣಿಸುವುದೇ ಇಲ್ಲ. ಏಕೆಂದರೆ ನಮ್ಮ ಪ್ರಾಣ ನಮ್ಮಲ್ಲಿಲ್ಲ!
’ಆತ್ಮ ಚಿತ್ತಂ’ ನಿನ್ನ ಚಿತ್ತವೇ ಆತ್ಮ. ನೀನು ಪರಮಾತ್ಮನ ಸ್ವರೂಪನೇ ಆಗಿದ್ದೀಯ. ನೀನು ಎಲ್ಲೋ ಹೋಗಿ ದೇವಸ್ಥಾನದಲ್ಲಿ, ಚರ್ಚಿನಲ್ಲಿ, ಮಸೀದಿಯಲ್ಲಿ ಘಂಟೆ ಬಾರಿಸಬೇಕಾಗಿಲ್ಲ. ನೀನು ಎಲ್ಲಿದ್ದೀಯೋ ಅಲ್ಲೇ ಪ್ರಸನ್ನ ಚಿತ್ತನಾಗು. ನಿನ್ನ ಚಿತ್ತದಲ್ಲಿ ವಿಶ್ರಾಮ ಮಾಡು. ಆ ಚಿತ್ತದ ತಪ್ಪುಗಳನ್ನು ತಿಳಿದುಕೋ. ನೀನೇ ಆತ್ಮ. ನಿನ್ನ ಶರೀರ, ನಿನ್ನ ವಾತಾವರಣ ಪರಮಾತ್ಮನಿಂದಾಗಿದೆ. ನೀನು ನೋಡುವ ಜನರೂ ಪರಮಾತ್ಮನಿಂದ ಆಗಿದ್ದಾರೆ. ಇದರಲ್ಲಿ ಆಗತಕ್ಕಂಥ ರಾಗ, ದ್ವೇಷ, ಅಸೂಯಾದಿ ಗುಣದೋಷಗಳೆಲ್ಲವೂ ಪರಮಾತ್ಮನಿಂದಲೇ ಉಂಟಾಗಿವೆ. ಆತ್ಮ ಚಿತ್ತಂ, ಇದನ್ನು ತಿಳಿದುಕೋ. ಇದನ್ನು ತಿಳಿದುಕೊಳ್ಳದಿರುವುದು ಅವಿವೇಕ, ಅದೇ ಮಾಯೆ. ಇವೆಲ್ಲಾ ಚಿತ್ತದಲ್ಲಿ ನಡೆಯುತ್ತಿವೆ.

* * * * *

ತತ್ವಮಯವೀ ಜಗವು
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೬.೬.೨೦೦೩ರಂದು ಪ್ರಕಟವಾಗಿತ್ತು)

ಮ್ಮಲ್ಲಿರುವ ಒಂದೇ ಮನಸ್ಸು ಕಣ್ಣಿನಿಂದ ನೋಡುತ್ತೆ, ಕಿವಿಯಿಂದ ಕೇಳುತ್ತೆ, ನಾಲಿಗೆಯಿಂದ ರುಚಿಯನ್ನು ಕಂಡುಕೊಳ್ಳುತ್ತದೆ. ಇದೇ ಮನಸ್ಸೇ ನಮ್ಮ ಶರೀರದ ಕಣಕಣದಿಂದ ಸ್ಪರ್ಷವನ್ನು ಅನುಭವಿಸುತ್ತದೆ. ಈ ಐದೂ ಕೆಲಸವನ್ನು ಮಾಡುವುದು ಯಾವುದು? ಒಂದೇ ಮನಸ್ಸು ಐದು ತರಹದಲ್ಲಿ, ಐದು ಬಾಗಿಲಿನ ಮೂಲಕ ಪ್ರಪಂಚವನ್ನು ಅನುಭವಿಸುತ್ತದೆ. ಇವು ಸ್ಥೂಲವಾಗಿ ಅನುಭವಿಸುವ ಐದು ತತ್ವಗಳು.
ಹಾಗೇ ಮನಸ್ಸು ಯೋಚನೆ ಮಾಡುತ್ತೆ, ಬುದ್ಧಿ ವಿಚಾರ ಮಾಡುತ್ತೆ, ಚಿತ್ತ ಅದನ್ನು ಜ್ಞಾಪಕ ಇಟ್ಟುಕೊಳ್ಳುತ್ತೆ. ಅದನ್ನು ಅಹಂಕಾರವು, ನಾನು ಹಾಗೆ ಮಾಡಬೇಕು, ಹೀಗೆ ಮಾಡಬೇಕು, ಹೀಗಿರಬೇಕು, ಹಾಗಿರಬೇಕು ಅಂತ ತನ್ನ ಬಗ್ಗೆ ಧೋರಣೆಯನ್ನು ವ್ಯಕ್ತಪಡಿಸುತ್ತೆ.
ಹೀಗೆ ಇಡೀ ಪ್ರಪಂಚ ಇಪ್ಪತ್ನಾಲ್ಕು ತತ್ವಗಳಿಂದ ಉಂಟಾಗಿದೆ. ಈ ತತ್ವಗಳ ಕೆಲಸವೆಲ್ಲ ತನ್ನಷ್ಟಕ್ಕೆ ತಾನೇ ನಡೆಯುತ್ತಾ ಹೋಗುತ್ತದೆ.
ಅಣುಶಕ್ತಿ ಎಲ್ಲದರಲ್ಲೂ ಒಂದೇ ಆಗಿದ್ದರೂ, ವಜ್ರದಲ್ಲಿ ಬೇರೆ ತರಹ ಇದೆ. ಇದ್ದಿಲಲ್ಲಿ ಬೇರೆ ತರಹ ಇದೆ.
ಒಂದೇ ಅಕ್ಕಿಯಿಂದ ಅನ್ನ, ದೋಸೆ, ಚಿತ್ರಾನ್ನ, ಇಡ್ಲಿ, ಸೇವಿಗೆ ಮುಂತಾದ ಖಾದ್ಯಗಳನ್ನು ಮಾಡ್ತೀವಿ. ಅವುಗಳೆಲ್ಲದರಲ್ಲಿ ಇರುವುದು ಅಕ್ಕಿಯೇ ಆದರೂ ಅವುಗಳನ್ನು ಒಂದಕ್ಕೊಂದು ಬೆರೆಸದೆ ಬೇರೆ ಬೇರೆಯಾಗಿಯೇ ಗುರುತಿಸುತ್ತೇವೆ, ಹಾಗೆಯೇ ಊಟ ಮಾಡುತ್ತೇವೆ.
ಹಾಗೆಯೇ ಈ ಪ್ರಪಂಚವೆಲ್ಲವೂ ಒಂದೇ ತತ್ವದಿಂದ ಉಂಟಾಗಿದ್ದರೂ ಕೂಡಾ, ಇದರಲ್ಲಿ ಬೇರೆ ಬೇರೆ ತತ್ವಗಳೂ, ಅವುಗಳ ಕೆಲಸಗಳು, ಕಾರ್ಯಗಳು ಇವೆ. ಅದರ ಬಗ್ಗೆ ತಿಳಿದುಕೊಳ್ಳದೇ ಇರುವುದು ಮಾಯೆ, "ತತ್ವಗಳ ಅವಿವೇಕ ಮಾಯೆ". ತಾತ್ವಿಕ ದೃಷ್ಟಿಯಿಂದ ನೋಡಿದರೆ ಎಲ್ಲವೂ ತತ್ವಗಳೇ ಅಂತ ಅರಿವಾಗುತ್ತದೆ.

* * * * *

ಕಾಮದಿಂದ ಮುಕ್ತಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೭.೬.೨೦೦೩ರಂದು ಪ್ರಕಟವಾಗಿತ್ತು)

ಲ್ಲವೂ ಪರಿವರ್ತನಶೀಲವಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಜ್ಞಾನ. ಜ್ಞಾನ ನಮಗೆ ಉಂಟಾಗದೆ ಇರುವುದರ ಕಾರಣ ಮೋಹ! ಈ ಪ್ರಪಂಚದ ಸೃಷ್ಟಿ ಮತ್ತು ಸ್ಥಿತಿಗೆ ಕಾರಣೀಭೂತವಾಗಿರುವುದು ಎರಡು: ’ಕಾಮ ಮತ್ತು ಮೋಹ’. ಕಾಮ ಇಲ್ಲದಿದ್ದರೆ ಸೃಷ್ಟಿಯೇ ಇಲ್ಲ. ಪ್ರತಿಯೊಂದು ಪಶು, ಪಕ್ಷಿ, ಪ್ರಾಣಿ, ಸಸ್ಯ, ಮನುಷ್ಯರು ಎಲ್ಲದರಲ್ಲೂ ಕಾಮ ವ್ಯಾಪ್ತವಾಗಿದೆ. ನಿಮ್ಮ ಸ್ರೋತ ಕಾಮದಿಂದ ಆಗಿದೆ. ಕಾಮದಿಂದ ಪ್ರತಿನಿತ್ಯವೂ ಸೃಷ್ಟಿಯಾಗುತ್ತಿದೆ ಈ ಪ್ರಪಂಚದಲ್ಲಿ. ಇದರ ಪಾಲನೆಯಾಗುವುದು ಮೋಹದಿಂದ. ಪ್ರಪಂಚದಲ್ಲಿ ಕಾಮವನ್ನು ಹೀಯಾಳಿಸದೆ ಇರುವ ಒಂದೇ ಒಂದು ಸಂಸ್ಕೃತಿಯೆಂದರೆ ಅದು ಭಾರತೀಯ ಸನಾತನ ಸಂಸ್ಕೃತಿ! ಅದಕ್ಕೇ ಲಿಂಗವನ್ನು ಪೂಜೆ ಮಾಡ್ತೀವಿ. ಲಿಂಗದಲ್ಲಿ ಏನು, ಯೋನಿ ಮತ್ತು ಲಿಂಗ! ಕಾಮ ದೇವ ಅಂತ ಮನ್ಮಥನ ಪೂಜೆ ಮಾಡ್ತೀವಿ. ಕಾಮನ ಹಬ್ಬ ಮಾಡ್ತೀವಿ.
ಯಾವುದನ್ನು ಪೂಜಿಸುತ್ತೇವೆಯೋ ಅದು ನಮ್ಮನ್ನು ಬಂಧಿಸುವುದಿಲ್ಲ. ಯಾರೊಂದಿಗೆ ಜಗಳ, ಘರ್ಷಣೆ, ಮನಸ್ತಾಪವಾಗಿರುತ್ತದೆಯೋ ಅವರನ್ನು ನಮ್ಮ ತಲೆಯಲ್ಲಿಯೇ ತುಂಬಿಕೊಂಡಿರುತ್ತೇವೆ. ಆಗ ನೀವು ದೇವಸ್ಥಾನಕ್ಕೆ ಹೋದರೂ ದೇವರು ತಲೆಯಲ್ಲಿರೋಲ್ಲ. ಪೂಜೆ ಮಾಡಿ, ಬಿಟ್ಟು ಬಿಡ್ತೀರ. ನಾವು ಯಾವುದನ್ನು ಪೂಜೆ ಮಾಡ್ತೀವೋ ಅದರಿಂದ ಮನಸ್ಸು ದೂರವಾಗುತ್ತೆ. ಇದು ಬಹಳ ಮನೋವೈಜ್ಞಾನಿಕವಾದ ದಾರಿ.
ನಮ್ಮಲ್ಲಿ ಪಕ್ವತೆ, ಭಕ್ತಿ ಪೂರ್ಣವಾಗಿ ಉದಯವಾಗುವವರೆಗೆ ಯಾವುದನ್ನು ನಾವು ಪೂಜೆ ಮಾಡ್ತೀವೋ ಅದರಿಂದ ನಮ್ಮ ಮನಸ್ಸು ಮುಕ್ತವಾಗುತ್ತದೆ. ಗೊತ್ತಾಗ್ತಾ ಇದೆಯಾ? ಯಾವುದನ್ನು ನಾವು ಹೀಯಾಳಿಸುತ್ತೇವೋ ಅದರ ಬಂಧನದಲ್ಲಿ ಸಿಕ್ಕಿಹಾಕಿಕೊಳ್ತೀವಿ. ಮೇಲಿಂದ ಮೇಲೆ ಕಾಮವನ್ನು ದೂರುತ್ತಾ ಇರತಕ್ಕಂಥ ಜನ ಒಳಗೆ ಕಾಮವನ್ನು ಯೋಚನೆ ಮಾಡ್ತಾ ಇರ್ತಾರೆ. ಮೇಲ್ಗಡೆ ದೂಷಣೆ ಮಾಡ್ತಾರೆ.