ಬುಧವಾರ, ಏಪ್ರಿಲ್ 17, 2013

ಆಶೀರ್ವಾದ

೧೭ ಎಪ್ರಿಲ್ ೨೦೧೩
ಕಾಲ್ಗರಿ, ಕೆನಡ


ಪ್ರಶ್ನೆ: ನಾನು ನನ್ನ ಅಹಂಕಾರವನ್ನು ತೊಡೆದುಹಾಕುವುದು ಹೇಗೆ? ಅದು ಬಹಳ ಶಕ್ತಿಯುತವಾಗಿದೆ.

ಶ್ರೀ ಶ್ರೀ ರವಿ ಶಂಕರ್: ಓ, ದೇವರ ಸಲುವಾಗಿಯೂ ನೀನು ಅದನ್ನು ಮಾಡಬೇಡ! ನಿನ್ನ ಅಹಂಕಾರವನ್ನು ತೊಡೆದುಹಾಕಲು ಪ್ರಯತ್ನಿಸಬೇಡ.

ನಿನ್ನ ಅಹಂಕಾರವು ನಿನ್ನ ಅತೀ ದೊಡ್ಡ ಸಮಸ್ಯೆಯೆಂದು ನಿನಗನ್ನಿಸಿದರೆ; ಅದನ್ನು ನಿನ್ನ ಜೇಬಿನಲ್ಲಿ ಅಥವಾ ನಿನ್ನ ಪರ್ಸಿನಲ್ಲಿ ಇಟ್ಟುಕೋ. ಅದಿರಲಿ.

ನಿನ್ನ ಅಹಂಕಾರವು ನಿನಗೆ ತೊಂದರೆ ನೀಡುತ್ತಿರುವುದಾದರೆ, ನಿನ್ನನ್ನು ಚೆನ್ನಾಗಿ ಅವಮಾನಿತನಾಗಲು ಬಿಡು. ನೀನದನ್ನು ಮಾಡುವೆಯಾ? ಅಷ್ಟೇ! ಅತ್ಯಂತ ದೊಡ್ಡ ಸಮಸ್ಯೆಯೆಂದರೆ, ನೀನು ಅವಮಾನಿತನಾಗಲು ಬಯಸುವುದಿಲ್ಲ. ಅವಮಾನಿತನಾಗು, ಮತ್ತು ಅಹಂಕಾರವು ಮಾಯವಾಗುವುದನ್ನು ನೀನು ಕಾಣುವೆ.

ಜೀವನದಲ್ಲಿ ಯಾರಾದರೂ ಎಲ್ಲಾದರೂ ನಿನ್ನನ್ನು ಅವಮಾನಪಡಿಸಿದರೆ, ಅದು ನಿನ್ನನ್ನು ಮೃದುಗೊಳಿಸಲಿರುವ ಒಂದು ಉಪಾಯ ಮಾತ್ರ ಎಂಬುದನ್ನು ತಿಳಿ. ಅದೊಂದು ಅನುಗ್ರಹ; ನೀನೊಂದು ಮುಗುಳ್ನಗೆಯೊಂದಿಗೆ ಆ ಪರಿಸ್ಥಿತಿಯಿಂದ ದೂರ ಹೋಗಬೇಕು ಅಥವಾ ಅದರ ಮೂಲಕ ಹಾದುಹೋಗಬೇಕು.

ಆರಂಭದಲ್ಲಿ ನಿನಗೆ ಬಹಳ ಅಹಿತಕರವೆನಿಸಲೂಬಹುದು, ಆದರೆ ನಿನ್ನಲ್ಲೊಂದು ಮಾರ್ಪಾಟು ಉಂಟಾಗುವುದು. ಅದರಿಂದ ನೀನು ಬಹಳ ಆಶ್ಚರ್ಯಚಕಿತನಾಗುವೆ. ನಂತರ, ಯಾರಿಗೂ ಯಾವತ್ತೂ ನಿನ್ನೊಳಗಿನಿಂದ ನಗೆಯನ್ನು, ಪ್ರೀತಿಯನ್ನು ಮತ್ತು ಸಹಾನುಭೂತಿಯನ್ನು ಕಸಿದುಕೊಳ್ಳಲು ಸಾಧ್ಯವಾಗದು.

ಅವಮಾನ ಅಥವಾ ಟೀಕೆಗೊಳಗಾಗಲು ನಾವು ಯಾವತ್ತೂ ನಾಚಿಕೆಪಡಬಾರದು. ಟೀಕೆಯು ಬಂದರೆ ಅದನ್ನು ತೆಗೆದುಕೊಳ್ಳಿ.
ನಿಮಗೆ ಗೊತ್ತಾ, ಹಲವು ಸಾರಿ ನಾವು ನಮ್ಮ ಕೈಗಳನ್ನು ಬಹಳ ಬಿಗಿಯಾಗಿ ಹಿಡಿಯುತ್ತೇವೆ; ನಾನು ಹೀಗೇ ಇರುವುದು, ಇದು ನನ್ನದು, ನನ್ನದು, ನನ್ನದು! ಮತ್ತು ಯಾರಾದರೂ ನಮ್ಮನ್ನು ಟೀಕಿಸಿದ ಕ್ಷಣವೇ ನಾವು ಹಿಮ್ಮೆಟ್ಟುತ್ತೇವೆ. ಇತರರ ಟೀಕೆಯ ಬಗ್ಗೆ ನಾವು ಬಹಳ ಭ್ರಮಿತರಾಗುತ್ತೇವೆ. ಇವರು ಅತ್ಯಂತ ಬಲಹೀನರಾದ ಜನರೆಂದು ನಾನು ಹೇಳುತ್ತೇನೆ.

ಯಾರಾದರೂ ನಿಮ್ಮನ್ನು ಟೀಕಿಸಿದರೆ, ಅದನ್ನು ಸ್ವಾಗತಿಸಿ! ಅದರಲ್ಲೇನಾದರೂ ಇದ್ದರೆ, ಅದನ್ನು ತೆಗೆದುಕೊಳ್ಳಿ. ಅವರು ನಿಮ್ಮ ಸ್ನೇಹವನ್ನು ಕಳೆದುಕೊಳ್ಳುವ ಅಪಾಯವನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ನಿಮಗೊಂದು ವ್ಯಾಖ್ಯಾನ ಅಥವಾ ಟೀಕೆಯನ್ನು ನೀಡುತ್ತಿದ್ದಾರೆ.

ಪ್ರಪಂಚದಲ್ಲಿ ನಿಮಗೆ ಸಹಾಯ ಮಾಡಲು ಜನರಿದ್ದಾರೆ ಎಂಬುದನ್ನು ನೀವು ತಿಳಿಯಬೇಕು. ಜನರನ್ನು ಶತ್ರುಗಳಾಗಿ ನೋಡಬೇಡಿ. ಮೂರ್ಖರು ಪ್ರಪಂಚವನ್ನು, ಶತ್ರುಗಳಿಂದ ಮತ್ತು ಪ್ರತಿಕೂಲ ಜನರಿಂದ ತುಂಬಿರುವಂತೆ ನೋಡುವರು. ಜ್ಞಾನಿಗಳು ಪ್ರಪಂಚವನ್ನು, ಮಿತ್ರರಿಂದ ತುಂಬಿರುವಂತೆ ನೋಡುತ್ತಾರೆ ಮತ್ತು ಸಹಾಯ ಮಾಡಲು ಜನರಿದ್ದಾರೆ ಎಂದು ಯೋಚಿಸುತ್ತಾರೆ.  

ನಿಮ್ಮನ್ನು ಟೀಕಿಸುವ ಯಾರೇ ಆದರೂ ನಿಮಗೆ ಏನೋ ಒಳ್ಳೆಯದನ್ನು ಮಾಡುತ್ತಿದ್ದಾನೆ ಎಂದು ಒಬ್ಬ ಜ್ಞಾನಿಯ ದೃಷ್ಟಿಕೋನದಿಂದ ನೋಡಿ. ಅವರು ನಿಮ್ಮೊಂದಿಗಿನ ತಮ್ಮ ಸ್ನೇಹವನ್ನು ಕಳೆದುಕೊಳ್ಳುವ ಅಪಾಯಕ್ಕೊಡ್ಡಿ, ನಿಮಗೆ ನಿಮ್ಮ ತಪ್ಪನ್ನು ತೋರಿಸುತ್ತಿದ್ದಾರೆ.

ಇಲ್ಲದಿದ್ದರೆ, ಸಮಾನ್ಯ ವ್ಯಕ್ತಿಯು ಸುಮ್ಮನೆ, "ಸರಿ, ಇಂತಿಂತಹ ಒಬ್ಬ ವ್ಯಕ್ತಿಯ ಸ್ನೇಹವನ್ನು ನಾನು ಯಾಕೆ ಕಳೆದುಕೊಳ್ಳಬೇಕು? ಕೇವಲ ಒಳ್ಳೆಯ ವಿಷಯಗಳನ್ನು ಮತ್ತು ಟಾಟಾ ಮಾತ್ರ ಹೇಳುವುದು. ನಿಮ್ಮ ಬಲಹೀನತೆಗಳನ್ನು ಎತ್ತಿತೋರಿಸುವ ಅಗತ್ಯವಿಲ್ಲ" ಎಂದು ಹೇಳುವನು.

ಆದುದರಿಂದ, ಯಾವಾಗೆಲ್ಲಾ ಒಬ್ಬರು ನಿಮ್ಮನ್ನು ಟೀಕಿಸುವರೋ, ಅದನ್ನು ಕೇಳಿಸಿಕೊಳ್ಳಿ. ಟೀಕೆಯಲ್ಲಿ ಏನಾದರೂ ಹುರುಳಿದ್ದರೆ ಅದನ್ನು ತೆಗೆದುಕೊಳ್ಳಿ. ಅದು ಮಾತ್ಸರ್ಯದಿಂದ ಬರುತ್ತಿದ್ದರೆ, ಅವರ ಕಡೆಗೆ ಸಹಾನುಭೂತಿಯಿಂದಿರಿ. ಅದು ಅವರ ಸಮಸ್ಯೆ; ತಮ್ಮದೇ ಆದ ಮಾತ್ಸರ್ಯವು ಅವರಿಂದ ಈ ರೀತಿ ಮಾಡಿಸುತ್ತಿದೆ. ಅವರು ತಮ್ಮ ಹತಾಶೆಯನ್ನು ನಿಮ್ಮ ಮೇಲೆ ಸುರಿಯುತ್ತಿದ್ದಾರೆ. ಮತ್ತು ಒಂದು ಅರ್ಥದಲ್ಲಿ, ತಮ್ಮ ಮನಸ್ಸಿನಿಂದ ಹತಾಶೆಯನ್ನು ಖಾಲಿಗೊಳಿಸಲು ನೀವು ಅವರಿಗೆ ಕೇವಲ ಸಹಾಯ ಮಾಡುತ್ತಿದ್ದೀರಿ.

ಅವರದನ್ನು ಸಹಾನುಭೂತಿಯಿಂದಾಗಿ, ಸ್ನೇಹ ಮತ್ತು ಪ್ರೀತಿಯಿಂದಾಗಿ ಹೇಳುತ್ತಿದ್ದರೆ, ಆಗ ನೀವದನ್ನು ಆ ಅರ್ಥದಲ್ಲಿ ತೆಗೆದುಕೊಳ್ಳಿ. ಆದುದರಿಂದ, ಒಂದು ಸಂತೋಷಕರವಾದ ಪ್ರಶಾಂತವಾದ ಮನಸ್ಸಿನಿಂದ ರಚನಾತ್ಮಕ ಟೀಕೆಯನ್ನು ನೀಡಲು ನಿಮಗೆ ಸಾಧ್ಯವಾಗಬೇಕು ಮತ್ತು ಅದೇ ಮನಸ್ಸಿನಿಂದ ಟೀಕೆಯನ್ನು ತೆಗೆದುಕೊಳ್ಳಲು ಸಾಧ್ಯವಾಗಬೇಕು. ಇದು ನಿಮ್ಮ ಅಹಂಕಾರವನ್ನು ಪರಿವರ್ತಿಸುವುದು.

ಪ್ರಶ್ನೆ: ಗುರುದೇವ, ನೀವು ದಯವಿಟ್ಟು ವೈರಾಗ್ಯದ ಬಗ್ಗೆ ಮಾತನಾಡುವಿರಾ?

ಶ್ರೀ ಶ್ರೀ ರವಿ ಶಂಕರ್: ನೋಡಿ, ನಮ್ಮ ಇಂದ್ರಿಯಗಳು ಸ್ವಾಭಾವಿಕವಾಗಿ ಭಾಹ್ಯ ವಸ್ತುಗಳತ್ತ ಆಕರ್ಷಿತವಾಗುವಂತವು. ನೀವು ನಿದ್ದೆಯಿಂದ ಎದ್ದಾಗ ಸ್ವಾಭಾವಿಕ ಪ್ರವೃತ್ತಿಯೆಂದರೆ, ಕಣ್ಣುಗಳು ನೋಡಲು ಬಯಸುತ್ತವೆ, ಕಿವಿಗಳು ಕೇಳಲು ಬಯಸುತ್ತವೆ, ಮೂಗು ಆಘ್ರಾಣಿಸಲು ಬಯಸುತ್ತದೆ, ಚರ್ಮವು ಸ್ಪರ್ಶವನ್ನು ಬಯಸುತ್ತದೆ ಮತ್ತು ನಾಲಿಗೆಯು ರುಚಿನೋಡಲು ಬಯಸುತ್ತದೆ. ಹೀಗೆ, ಇಂದ್ರಿಯಗಳ ಸ್ವಾಭಾವಿಕ ಪ್ರವೃತ್ತಿಯು ಬಹಿರ್ಮುಖವಾಗಿ ಹೋಗಿ ಸಂಪೂರ್ಣ ಸೃಷ್ಟಿಯನ್ನು ಆನಂದಿಸುವುದಾಗಿದೆ. ಆದರೆ ಇಂದ್ರಿಯಗಳ ಆನಂದಿಸುವ ಸಾಮರ್ಥ್ಯವು ಸೀಮಿತವಾಗಿದೆ.

ಇವತ್ತು ನಾವು ಉದ್ಯಾನಕ್ಕೆ ಹೋದೆವು ಮತ್ತು ದೃಶ್ಯವು ಸುಂದರವಾಗಿತ್ತು, ಆದರೆ ನೀವು ಸುಂದರವಾದ ದೃಶ್ಯವನ್ನು ಎಷ್ಟು ಹೊತ್ತು ನೋಡುವಿರಿ?

ಇಂದ್ರಿಯಗಳ ಮೂಲಕ ಸುಖಿಸುವ ಬಯಕೆಯು ಮೊದಲು ಮನಸ್ಸಿನಲ್ಲಿ ಬರುತ್ತದೆ, ಆದರೆ ಇಂದ್ರಿಯಗಳ ಆನಂದಿಸುವ ಸಾಮರ್ಥ್ಯವು ಸೀಮಿತವಾಗಿದೆ.

ನಿಮಗೆ ಆಪಲ್-ಪೈ ಅಥವಾ ಪಾಯಸ ಇಷ್ಟವೆಂದಿಟ್ಟುಕೊಳ್ಳಿ; ನಿಮಗೆ ಎಷ್ಟು ತಿನ್ನಲು ಸಾಧ್ಯ? ಒಂದು ತುಂಡು, ಎರಡು ತುಂಡುಗಳು, ಮೂರು ಬಾರಿಯಷ್ಟು? ನೀವು ಮೂರನೆಯ ಸಾರಿಗೆ ತಿನ್ನುವ ಹೊತ್ತಿಗೆ, ನಿಮಗೆ ಸುಖವನ್ನು ಕೊಡುತ್ತಿದ್ದ ಅದೇ ವಿಷಯವು, ನೋವನ್ನು ತರುತ್ತದೆ. ಇದು ಯಾಕೆಂದರೆ, ಆನಂದಿಸಲಿರುವ ನಮ್ಮ ಸಾಮರ್ಥ್ಯವು ನಮ್ಮ ಇಂದ್ರಿಯಗಳಿಗೆ ಸೀಮಿತವಾಗಿದೆ.

ಹೆಚ್ಚಾಗಿ ಒಬ್ಬರಿಗೆ ಈ ಅಸಮತೋಲನವು ಕಾಣಿಸುತ್ತದೆ - ಮನಸ್ಸು ಹೆಚ್ಚಿನದನ್ನು ಬಯಸುವುದು, ಆದರೆ ಇಂದ್ರಿಯಗಳಿಗೆ ಆನಂದಿಸುವ ಸಾಮರ್ಥ್ಯ ಇಲ್ಲದಿರುವುದು.

ಮೂರು ಪರಿಸ್ಥಿತಿಗಳಿರುವ ಸಾಧ್ಯತೆಯಿದೆ:

೧. ಯಾವುದಾದರೂ ಲಭ್ಯವಿಲ್ಲದಿರುವಾಗ; ಮನಸ್ಸು ಆಹಾರ ಸೇವಿಸಲು ಬಯಸುತ್ತದೆ, ಆದರೆ ಅದು ಲಭ್ಯವಿರುವುದಿಲ್ಲ.

೨. ಆಹಾರವು ಲಭ್ಯವಿದೆ, ಆದರೆ ಮನಸ್ಸಿನಲ್ಲಿ ಅದನ್ನು ಆನಂದಿಸುವ ಬಯಕೆಯಿರುವುದಿಲ್ಲ.

೩. ಮನಸ್ಸಿನಲ್ಲಿ ಬಯಕೆಯಿದೆ, ಆಹಾರ ಕೂಡಾ ಲಭ್ಯವಿದೆ, ಆದರೆ ಇಂದ್ರಿಯಗಳಿಗೆ ಅದನ್ನು ಆನಂದಿಸುವ ಸಾಮರ್ಥ್ಯವಿರುವುದಿಲ್ಲ.

ಈ ಮೂರು ಪರಿಸ್ಥಿತಿಗಳು ನಿಮಗೆ ಕಾಣಿಸುತ್ತವೆಯೇ?

ಒಬ್ಬ ಸಜ್ಜನ ನನ್ನ ಬಳಿಗೆ ಬಂದು, "ಗುರುದೇವ, ನನಗೆ ೫೦ ವರ್ಷ ವಯಸ್ಸು ಮತ್ತು ನಾನೊಂದು ಸಂಬಂಧವನ್ನು ಹುಡುಕುತ್ತಿದ್ದೇನೆ, ಆದರೆ ನನಗೆ ಸರಿಯಾದ ವ್ಯಕ್ತಿಯು ಸಿಗುತ್ತಿಲ್ಲ" ಎಂದು ಹೇಳಿದನು.

ನಾನಂದೆ, "ಇರು, ಇನ್ನೊಂದು ೨೦ ವರ್ಷಗಳ ವರೆಗೆ ಹುಡುಕು!"

ನೀವು ಅದರ ಬಗ್ಗೆ ಅಷ್ಟೊಂದು ಎಚ್ಚರವಹಿಸಿ ಆಯ್ಕೆಮಾಡುವವರಾಗಿದ್ದರೆ ಮತ್ತು ಯಾವುದಕ್ಕಾಗಿಯೋ ಹುಡುಕುತ್ತಾ ಇದ್ದರೆ, ಆಗ ನಿಮಗದು ಸಿಕ್ಕುವಾಗ ಕೂಡಾ, ನೀವದನ್ನು ಆನಂದಿಸುವುದಿಲ್ಲ. ಯಾಕೆ? ಇದು ಯಾಕೆಂದರೆ ನಿಮ್ಮ ಮನಸ್ಸು ಅಲ್ಲಿರುವುದಿಲ್ಲ. ಲಭ್ಯವಿರುವ ವಸ್ತುಗಳು, ಮನೋಭಾವ ಮತ್ತು ಇಂದ್ರಿಯಗಳ ಸಾಮರ್ಥ್ಯ ಇವುಗಳ ನಡುವೆ ಒಂದು ಅಸಂತುಲನವಿರುತ್ತದೆ; ಇವುಗಳೆಲ್ಲವೂ ಹೊಂದಾಣಿಕೆಯಾಗಬೇಕು. ಆಗ ಮಾತ್ರ ನಿಮಗೆ ಭೂಮಿಯಲ್ಲಿರುವ ಏನನ್ನಾದರೂ ಆನಂದಿಸಲು ಸಾಧ್ಯ.

ಮನಸ್ಸಿನಲ್ಲಿರುವ ಜ್ವರತೆ, ಸರಕುಗಳ ಲಭ್ಯತೆ ಮತ್ತು ಇಂದ್ರಿಯಗಳ ಸಾಮರ್ಥ್ಯ, ಅವುಗಳೆಲ್ಲವೂ ಹೆಚ್ಚಾಗಿ ಹೊಂದಿಕೆಯಾಗುವುದಿಲ್ಲ.

ಈಗ ಎಲ್ಲವೂ ಲಭ್ಯವಿದೆ ಎಂದಿಟ್ಟುಕೊಳ್ಳಿ. ನಿಮಗೆ ಹಸಿವಾಗುತ್ತಿದೆ, ನೀವು ಆಹಾರ ಸೇವಿಸಲು ಬಯಸುತ್ತೀರಿ ಮತ್ತು ನೀವದನ್ನು ಆನಂದಿಸಬಲ್ಲಿರಿ, ಆದರೆ ಅದು ಕೂಡಾ ಕ್ಷಣಿಕ. ಅದು ಕೆಲವು ಕ್ಷಣಗಳವರೆಗೆ ಉಳಿಯುತ್ತದೆ ಮತ್ತು ನಂತರ ಪುನಃ ನೀವು ಮೊದಲಿದ್ದಲ್ಲಿಗೇ ಹಿಂದಿರುಗುತ್ತೀರಿ. ವಿಷಯಗಳಿರುವುದು ಹೀಗೆಯೇ! ಮತ್ತು ಅದು ಏನನ್ನು ಉಂಟುಮಾಡುತ್ತದೆ? ಹತಾಶೆಯನ್ನು!

ಈಡೇರಿದ ಒಂದು ಬಯಕೆಯು ಹತಾಶೆಯನ್ನುಂಟುಮಾಡುತ್ತದೆ, ಈಡೇರದ ಒಂದು ಬಯಕೆ ಕೂಡಾ ಹತಾಶೆಯನ್ನುಂಟುಮಾಡುತ್ತದೆ. ನಾವೇನು ಮಾಡಬೇಕಾಗಿದೆ? ಉತ್ತರವೇನು? ಉತ್ತರವೆಂದರೆ ಒಳಗಡೆ ನೋಡುವುದು. ಆನಂದವೆಲ್ಲಿಂದ ಬರುವುದೋ ಆ ಸಂತೋಷದ ಮೂಲಕ್ಕೆ ಹೋಗಿ.

ನೀವು ಸಂತೋಷದ ಮೂಲಕ್ಕೆ ಹೋದಾಗ, ಇಂದ್ರಿಯಗಳು ಶಕ್ತವಾಗುತ್ತವೆ, ಮನಸ್ಸಿಗೆ ತೃಪ್ತಿ ಬರುತ್ತದೆ ಮತ್ತು ನೀವು ಬಯಸುವ ರೀತಿಯಲ್ಲಿ ವಿಷಯಗಳು ಲಭ್ಯವಾಗುತ್ತವೆ. ಇಂದ್ರಿಯಗಳನ್ನು ಒಳಮುಖವಾಗಿ ತಿರುಗಿಸಿದಾಗ ಎಲ್ಲಾ ಮೂರೂ ಸಂಭವಿಸುತ್ತವೆ ಮತ್ತು ಇಂದ್ರಿಯಗಳ ಆ ಅಂತರ್ಮುಖವಾಗಿ ತಿರುಗಿಸುವಿಕೆಯು ವೈರಾಗ್ಯವೆಂದು ಕರೆಯಲ್ಪಡುತ್ತದೆ.  

ಜೀವನದಲ್ಲಿ ನಮಗೆ ಮೂರು ವಿಷಯಗಳು ಬೇಕು, ವೈರಾಗ್ಯ, ಅನುರಾಗ ಮತ್ತು ಸಹಾನುಭೂತಿ. ಹೆಚ್ಚಾಗಿ ನಾವು, ವಿರಕ್ತಿಯೆಂದರೆ ಬಹಳ ಮಂಕಾಗಿರುವುದು, ಬೇಜಾರು ಹುಟ್ಟಿಸುವಂತಿರುವುದು ಮತ್ತು ನೀರಸವಾಗಿರುವುದು ಎಂದು ಯೋಚಿಸುತ್ತೇವೆ; ಈ ವೈರಾಗಿಗಳು ಎಂದು ಕರೆಯಲ್ಪಡುವವರು ಇರುವುದು ಹಾಗೆಯೇ, ಜೀವವಿಲ್ಲದಂತೆ. ಅಲ್ಲ, ಅದು ವಿರಕ್ತಿಯಲ್ಲ. ನನ್ನ ಪ್ರಕಾರ, ವಿರಕ್ತಿಯೆಂದರೆ, ಯಾವುದು ಜೀವಂತಿಕೆಯಿಂದ ತುಂಬಿರುವುದೋ, ಉತ್ಸಾಹದಿಂದ ತುಂಬಿರುವುದೋ ಅದು. ಸಂಸ್ಕೃತದಲ್ಲಿ ಒಂದು ಹಳೆಯ ಮಾತಿದೆ, "ವಿರಕ್ತಿಯು ನಿಮಗೆ ತರದಿರುವಂತಹ ಸುಖ, ಆನಂದ ಯಾವುದಿದೆ?" ಇದರರ್ಥವೇನೆಂದರೆ, ಜೀವನದಲ್ಲಿ ನಿಮಗೆ ಯಾವೆಲ್ಲಾ ಆನಂದದ ಬಯಕೆಯಿದೆಯೋ, ಅದನ್ನೆಲ್ಲಾ ವೈರಾಗ್ಯವು ನಿಮಗೆ ತರುತ್ತದೆ.

ನಿಮ್ಮಲ್ಲಿ ಅನುರಾಗವಿರಬೇಕು. ನೀವು ಉಸಿರನ್ನು ಒಳಕ್ಕೆಳೆದುಕೊಳ್ಳುವುದು ಅನುರಾಗವಾಗಿದೆ, ನೀವು ಉಸಿರನ್ನು ಹೊರಕ್ಕೆ ಬಿಡುವುದು ವಿರಕ್ತಿಯಾಗಿದೆ ಮತ್ತು ನಡುವೆಯಿರುವುದು ಸಹಾನುಭೂತಿಯಾಗಿದೆ.

ನಿಮ್ಮಲ್ಲಿ ಅನುರಾಗ ಮಾತ್ರವಿದ್ದರೆ, ನೀವು ಸುಸ್ತಾಗುತ್ತೀರಿ ಮತ್ತು ಹತಾಶರಾಗುತ್ತೀರಿ. ಅತಿಯಾದ ಅನುರಾಗವಿರುವ ಜನರು ಕೆಲಸಗಳನ್ನು ಮಾಡುತ್ತಾರೆ ಮತ್ತು ಬಳಲುತ್ತಾರೆ. ಯಾಕೆಂದು ನಿಮಗೆ ಗೊತ್ತೇ? ಅದು ಯಾಕೆಂದರೆ ಅವರು ಅದನ್ನು ಹಿಡಿದಿಟ್ಟುಕೊಳ್ಳುವುದರಿಂದ. ಅವರು ಅದಕನ್ನು ಮನಸ್ಸಿಟ್ಟು ಮಾಡುತ್ತಾರೆ. ಅವರು ಬಹಳಷ್ಟು ಶಕ್ತಿ ವ್ಯಯಿಸುತ್ತಾರೆ ಮತ್ತು ಆದರೂ ಅವರ ಕೈಗಳಿಗೆ ಏನೂ ಸಿಗುವುದಿಲ್ಲ. ಅದೊಂದು ಚಿಂತಾಜನಕ ಸ್ಥಿತಿ.

ವಿರಕ್ತಿಯೊಂದಿಗೆ ಇದು ಬದಲಾಗಬಲ್ಲದು ಮತ್ತು ಅದಕ್ಕಾಗಿಯೇ ವಿರಕ್ತಿಯು ಒಂದು ದೊಡ್ಡ ವ್ಯತ್ಯಾಸವನ್ನು ಮಾಡುವುದು.
ಹಾಗಾಗಿ, ನೀವು ಕೆಲಸ ಮಾಡುವಾಗ ಅನುರಾಗ, ನೀವು ಅಂತರ್ಮುಖವಾಗಿ ತಿರುಗುವಾಗ ವೈರಾಗ್ಯ ಮತ್ತು ಎಲ್ಲಾ ಸಮಯದಲ್ಲೂ ಸಹಾನುಭೂತಿ - ಇದು ಉಪಾಯ.

ಪ್ರಶ್ನೆ: ನಾವು ಪ್ರೀತಿಸುವವರೊಬ್ಬರು ಬೇರೊಬ್ಬರೊಂದಿಗೆ ಪ್ರೇಮದಲ್ಲಿರುವಾಗ ನಾವೇನು ಮಾಡುವುದು?

ಶ್ರೀ ಶ್ರೀ ರವಿ ಶಂಕರ್: ನಿನ್ನ ಪ್ರೀತಿಯು ಬೇಷರತ್ತಿನದಾಗಿರಲು ಅದೊಂದು ಪರೀಕ್ಷೆ ಎಂಬುದಾಗಿ ತಿಳಿ. ಬೇಷರತ್ತಾಗಿ ಪ್ರೇಮದಲ್ಲಿರಲು ಅವರು ನಿನಗೊಂದು ಅವಕಾಶವನ್ನು ಕೊಡುತ್ತಿರುವರು.

ನೀನದನ್ನು, ಬಲಶಾಲಿಯಾಗಲು ಮತ್ತು ಪ್ರೇಮದಲ್ಲಿ ಬೆಳೆಯಲು, ನಿನ್ನ ಲಾಭಕ್ಕಾಗಿ ಉಪಯೋಗಿಸಬಹುದು ಅಥವಾ ನೀನು ಅಸಮಾಧಾನ, ಕೋಪ, ಹತಾಶೆ ಹಾಗೂ ಮತ್ಸರಗೊಳ್ಳಬಹುದು.

ನೀನು ಯಾವುದನ್ನು ಆಯ್ಕೆ ಮಾಡುವೆ? ಮಾತ್ಸರ್ಯದಲ್ಲಿ ಬೆಳೆದು, ನಿನ್ನೊಳಗೆ ಆ ಎಲ್ಲಾ ಮಾತ್ಸರ್ಯದ ಭಾವನೆಗಳನ್ನು ತುಂಬಿ, ನೊಂದು, ನಿನ್ನ ಕಂಪನಗಳನ್ನು ಹಾಳುಗೆಡವಿ ಬೆಳೆಯುವೆಯೋ ಅಥವಾ ಬೇರೊಬ್ಬರಿಗಾಗಿ ಸಂತೋಷಪಟ್ಟು, ನೀನು ಪ್ರೀತಿಸುವ ವ್ಯಕ್ತಿಗಾಗಿ ಒಳ್ಳೆಯದನ್ನು ಹಾರೈಸುವುದನ್ನೇ!

ಎರಡನೆಯ ಆಯ್ಕೆ ಕಷ್ಟವೆಂಬುದು ನನಗೆ ತಿಳಿದಿದೆ, ಆದರೆ ಮೊದಲನೆಯದು ಕೂಡಾ ಸುಲಭವೇನಲ್ಲ. ಮಾತ್ಸರ್ಯವನ್ನು ಹೊತ್ತುಕೊಂಡು ಅದರೊಂದಿಗೆ ನಡೆದಾಡುವುದು ಇನ್ನೂ ಹೆಚ್ಚು ಕಷ್ಟ, ಅಲ್ಲವೇ? ಇದರ ಬಗ್ಗೆ ಯೋಚಿಸು.

ಹೇಗಿದ್ದರೂ, ಜೀವನವು ಚಿಕ್ಕದು. ಎಲ್ಲವೂ ಒಂದು ದಿನ ಮುಕ್ತಾಯವಾಗಲಿದೆ. ಇದರ ಬಗ್ಗೆ ಯೋಚಿಸು, ನೀನು ಹೆಚ್ಚಿನ ಶಾಂತಿಯನ್ನು ಹೊಂದುವೆ.

ಯಾವಾಗೆಲ್ಲಾ ಏನಾದರೂ ನಿನಗೆ ತೊಂದರೆಯನ್ನುಂಟುಮಾಡುವುದೋ, ನಿನಗೆ ಅನ್ಯಾಯ, ಅಹಿತಕರದ ಅನುಭವವಾಗುವುದೋ ಅಥವಾ ನಿನಗೆ ನಿದ್ರಿಸಲು ಸಾಧ್ಯವಿಲ್ಲವೆಂದು ಅಥವಾ ಅದನ್ನು ನಿಭಾಯಿಸಲು ಸಾಧ್ಯವಿಲ್ಲವೆಂದು ನಿನಗನ್ನಿಸುವುದೋ ಆಗ, ಇದೆಲ್ಲವೂ ಕೊನೆಯಾಗಲಿದೆ ಎಂಬುದನ್ನು ಜ್ಞಾಪಿಸಿಕೋ! ಎಲ್ಲವೂ ಮುಕ್ತಾಯವಾಗಲಿದೆ, ಮತ್ತು ನೀನು ಇಲ್ಲಿಂದ ಹೋಗಿರುವೆ. ನಿನಗೆ ಚೆನ್ನಾಗಿ ನಿದ್ರಿಸಲು ಸಾಧ್ಯವಾಗುವುದು. ಮತ್ತೆ, ಇದು ವಿರಕ್ತಿ.

ಪ್ರಶ್ನೆ: ಐದರಿಂದ ಹದಿಮೂರನೆಯ ಆಯಾಮದ ವರೆಗೆ ಮತ್ತು ಕ್ವಾಂಟಮ್ ಭೌತಶಾಸ್ತ್ರ ಹಾಗೂ ಆಧ್ಯಾತ್ಮಿಕತೆಯ ಸಂಬಂಧದ ಬಗ್ಗೆ ದಯವಿಟ್ಟು ಚರ್ಚಿಸಿ.

ಶ್ರೀ ಶ್ರೀ ರವಿ ಶಂಕರ್: ವೇದಾಂತವು ಶುದ್ಧ ಕ್ವಾಂಟಮ್ ಭೌತಶಾಸ್ತ್ರವಾಗಿದೆ. ವೇದಾಂತ ಹೇಳುವುದು ಅಥವಾ ವೇದಗಳಲ್ಲಿನ ಜ್ಞಾನವು ಹೇಳುವುದೇನೆಂದರೆ, ಸಂಪೂರ್ಣ ಸೃಷ್ಟಿಯು ಒಂದೇ ಒಂದು ವಸ್ತುವಿನಿಂದ ಮಾಡಲ್ಪಟ್ಟಿದೆ, ಅಲ್ಲಿ ಎರಡಿಲ್ಲ. ಮತ್ತು ಸರಿಯಾಗಿ ಅದನ್ನೇ ಕ್ವಾಂಟಮ್ ಭೌತಶಾಸ್ತ್ರ ಹೇಳುವುದು, ಎಲ್ಲವೂ ಒಂದು ತರಂಗ ಪ್ರಕ್ರಿಯೆ ಎಂದು. ಹೀಗೆ, ಯಾವುದು ವಿಭಿನ್ನವಾಗಿ ತೋರುವುದೋ, ಅದು ಕೇವಲ ವಿಭಿನ್ನವಾಗಿ ಕಾಣಿಸುವುದಷ್ಟೆ, ಆದರೆ ವಾಸ್ತವವಾಗಿ, ಅದೆಲ್ಲವೂ ಒಂದು ಮಾತ್ರ.

ಇವತ್ತು ಪ್ರಪಂಚದಲ್ಲಿರುವ ಶ್ರೇಷ್ಠ ಭೌತವಿಜ್ಞಾನಿಗಳಲ್ಲೊಬ್ಬರು ಬೆಂಗಳೂರು ಆಶ್ರಮದಲ್ಲಿ ಮಾತನಾಡಿದರು. ಅವರಂದರು, "ನಾನು ಪದಾರ್ಥದ ಬಗ್ಗೆ ೪೦ ವರ್ಷಗಳ ಕಾಲ ಅಧ್ಯಯನ ಮಾಡಿದೆ, ಆದರೆ ತಿಳಿದಿದ್ದೇನೆಂದರೆ ಅದು ಅಸ್ತಿತ್ವದಲ್ಲೇ ಇಲ್ಲವೆಂಬುದು. ಅದು ಇಲ್ಲ!"

ಅವರು ಹೇಳುತ್ತಿದ್ದರು, "ನಾನು ಮಾತನಾಡುವಾಗ ಜನರು ಯೋಚಿಸುತ್ತಾರೆ, ನಾನು ಯಾವುದೋ ಪ್ರಾಚೀನ ತತ್ವಜ್ಞಾನವನ್ನು ಮಾತನಾಡುತ್ತಿರುವೆನೆಂದು. ಅದು ಸರಿಯೇ, ಯಾಕೆಂದರೆ ಇದೆಲ್ಲವೂ ಏನೂ ಅಲ್ಲ! ಇದನ್ನೇ ಆಧ್ಯಾತ್ಮಿಕ ಜ್ಞಾನವು ಹೇಳುವುದು, ಎಲ್ಲವೂ ಏನೂ ಅಲ್ಲ ಹಾಗೂ ಏನೂ ಅಲ್ಲದಿರುವುದು ಎಲ್ಲವೂ ಎಂದು.

ನಿಮ್ಮ ಧ್ಯಾನವು ಏನೂ ಅಲ್ಲದುದರೊಂದಿಗೆ ಇರುವ ಭೇಟಿ (ಅಪಾಯಿಂಟ್‌ಮೆಂಟ್) ಆಗಿದೆ!

ಪ್ರಶ್ನೆ: ಗುರುದೇವ, ಕಪಿಲ ಋಷಿಗಳ ಬಗ್ಗೆ ನೀವು ನಮಗೆ ಇನ್ನೂ ಹೆಚ್ಚು ಹೇಳಬಲ್ಲಿರಾ? ಅವರ ಬಗ್ಗೆ ಸ್ವಲ್ಪವೇ ಸ್ವಲ್ಪ ತಿಳಿದಿದೆಯಷ್ಟೆ.

ಶ್ರೀ ಶ್ರೀ ರವಿ ಶಂಕರ್: ಕಪಿಲ ಋಷಿಗಳು ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದರು. ಕ್ಯಾಲಿಫೋರ್ನಿಯಾವೆಂಬ ಹೆಸರು ಬಂದಿದ್ದು ಹಾಗೆ. ಕಪಿಲಾರಣ್ಯ ಎಂಬುದು ಕ್ಯಾಲಿಫೋರ್ನಿಯಾದ ವೈದಿಕ ಹೆಸರಾಗಿದೆ.

ಒಂದು ಕಾಲದಲ್ಲಿ, ಇಡಿಯ ದಕ್ಷಿಣ ಅಮೇರಿಕಾ ಮತ್ತು ಉತ್ತರ ಅಮೇರಿಕಾಗಳಲ್ಲಿ ವೈದಿಕ ಜ್ಞಾನವು ಪ್ರಚಲಿತವಾಗಿತ್ತು. ಕಪಿಲಾರಣ್ಯ ಮತ್ತು ಭಾರತದ ನಡುವಣ ಸಮಯದ ವ್ಯತ್ಯಾಸವು ೧೨ ಗಂಟೆಗಳಷ್ಟು ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಅಲ್ಲಿ ಹಗಲಾಗಿರುವಾಗ, ಇಲ್ಲಿ ರಾತ್ರಿಯಾಗಿರುತ್ತದೆ ಹಾಗೂ ಪ್ರತಿಕ್ರಮದಲ್ಲೂ ಹಾಗೆಯೇ; ಅದು ಕಪಿಲಾರಣ್ಯವೆಂದು ಕರೆಯಲಾದ ಕ್ಯಾಲಿಫೋರ್ನಿಯಾಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ.

ಕಪಿಲರು ದೇವಾಹುತಿಯೆಂಬ ಸ್ತ್ರೀಯ ಮಗನಾಗಿದ್ದರು. ಇವತ್ತಿನ ಡೆಟ್ರಾಯಿಟ್‌ಗೆ ದೇವಾಹುತಿಯೊಂದಿಗೆ ಸ್ವಲ್ಪ ಸಂಬಂಧವಿದೆ ಮತ್ತು ಡೆಟ್ರಾಯಿಟ್ ತನ್ನ ಹೆಸರನ್ನು ಪಡೆದುದು ಅಲ್ಲಿಂದಲೇ - ದೇವಾಹುತಿ.

ದೇವಾಹುತಿಯ ಮಗ ಕಪಿಲರು ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದರು. ಅವರು ಕೃಷ್ಣ ಪರಮಾತ್ಮನ ಮೊದಲಿನ ಅವತಾರವಾಗಿದ್ದರು. ಅವರು, ಸಾಂಖ್ಯ ದರ್ಶನವೆಂದು ಕರೆಯಲ್ಪಡುವ ತತ್ವಜ್ಞಾನದ ಸ್ಥಾಪಕರು.

ಸಾಂಖ್ಯವೆಂದರೆ, ಸಂಪೂರ್ಣ ವಿಶ್ವವು ಯಾವ ವಿವಿಧ ವಸ್ತುಗಳು ಮತ್ತು ತತ್ವಗಳಿಂದ ಮಾಡಲ್ಪಟ್ಟಿವೆಯೋ ಅವುಗಳನ್ನು; ಅಂದರೆ ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ, ಮನಸ್ಸು, ಬುದ್ಧಿ, ಮೊದಲಾದವುಗಳನ್ನು ಎಣಿಸುವುದು. ಅದರಂತೆ, ಅವರ ಸಿದ್ಧಾಂತದಲ್ಲಿ ೨೪ ವಿವಿಧ ತತ್ವಗಳಿವೆ. ಅದಕ್ಕಾಗಿಯೇ ಅದು ಸಾಂಖ್ಯ ಯೋಗವೆಂದು ಕರೆಯಲ್ಪಡುತ್ತದೆ.

ಪ್ರಜ್ಞೆ ಮತ್ತು ಪದಾರ್ಥಗಳು ಹೇಗೆ ಬೇರೆ ಬೇರೆಯಾಗಿವೆ ಎಂಬುದರ ಬಗ್ಗೆ ಅವರು ಮಾತನಾಡುತ್ತಾರೆ ಹಾಗೂ ಪ್ರಜ್ಞೆ ಮತ್ತು ವಸ್ತುಗಳ ನಡುವಣ ಸಂಬಂಧದ ಬಗ್ಗೆ ವಿವರವಾಗಿ ಚರ್ಚಿಸಲಾಗಿದೆ.

ಭಗವದ್ಗೀತೆಯ ಎರಡನೆಯ ಅಧ್ಯಾಯ ಕೂಡಾ ಸಾಂಖ್ಯ ಯೋಗ ಎಂದು ಕರೆಯಲ್ಪಡುತ್ತದೆ. ಇಲ್ಲಿ ಕೃಷ್ಣ ಪರಮಾತ್ಮನು, ಮನಸ್ಸು ಮತ್ತು ಆತ್ಮಗಳು ಹೇಗೆ ವಸ್ತುವಿನಿಂದ ವ್ಯತ್ಯಸ್ತವಾಗಿವೆ ಹಾಗೂ ಆತ್ಮವು ಅಮರ ಎಂಬುದರ ಬಗ್ಗೆ ಮಾತನಾಡುತ್ತಾನೆ. ಈ ಆತ್ಮಜ್ಞಾನವು ಕೊಡಲ್ಪಟ್ಟಿದೆ.

ಪ್ರಶ್ನೆ: ಸಂಸ್ಕೃತಿಗಳು ಯಾಕೆ ಘರ್ಷಣೆಗೊಳಗಾಗುತ್ತವೆ? ಮನುಷ್ಯತ್ವವು ಮಾಯವಾಗುವುದು ಯಾಕೆ? ನೀವು ದಯವಿಟ್ಟು ಸ್ವಲ್ಪ ಬೆಳಕು ಚೆಲ್ಲುವಿರಾ?

ಶ್ರೀ ಶ್ರೀ ರವಿ ಶಂಕರ್: ಅದೊಂದು ಒಳ್ಳೆಯ ಪ್ರಶ್ನೆ. ಇವತ್ತು ಬೆಂಗಳೂರು ಮತ್ತು ಬೋಸ್ಟನ್‌ನಲ್ಲಿ ಒಂದು ಬಾಂಬ್ ಸ್ಫೋಟವಾಯಿತು. ಇದು ಅಸಹಿಷ್ಣುತೆಯಾಗಿದೆ; ಅಹಿಂಸಾ ಸಂಸ್ಕೃತಿಯು ಕಳೆದುಹೋಗುತ್ತಿದೆ. ಅದಕ್ಕಾಗಿಯೇ ನಾವೆಲ್ಲರೂ ನಮ್ಮ ಕೆಲಸವನ್ನು ಮಾಡಬೇಕಾದುದು. ನಿಮಗೆ ಹಾಗೆ ಅನ್ನಿಸುವುದಿಲ್ಲವೇ? ನಾವೆಲ್ಲರೂ ಜೊತೆಯಲ್ಲಿ ಸ್ವಲ್ಪ ಕೆಲಸ ಮಾಡೋಣವೇ?

ಭಾರತದಲ್ಲಿ ಕೂಡಾ, ದುರದೃಷ್ಟವಶಾತ್, ರಾಜಕಾರಣಿಗಳು ಈ ಪರಿಸ್ಥಿತಿಯನ್ನು ಹಾಳುಮಾಡಿದ್ದಾರೆ. ಜನರಿಗೆ ಸಾಮಾನ್ಯ ಶಿಕ್ಷಣ ಒದಗಿಸುವುದರ ಬದಲಾಗಿ ಅವರು, ಜಾತಿ ಆಧಾರಿತ ಶೈಕ್ಷಣಿಕ ಸಂಸ್ಥೆಗಳನ್ನು ಪ್ರೋತ್ಸಾಹಿಸುತ್ತಾರೆ, ಅವುಗಳು ಕೇವಲ ಅಂತಹ ಅತಿರೇಕತೆಯನ್ನು ಪಾಲನೆ-ಪೋಷಣೆ ಮಾಡುತ್ತವೆಯಷ್ಟೆ. ಇದು ಬಹಳ ದುರದೃಷ್ಟಕರವಾಗಿದೆ.

ಈ ರೀತಿಯ ಧಾರ್ಮಿಕ ಅತಿರೇಕತೆಯು ಕೊನೆಯಾಗಬೇಕು, ಅಲ್ಲವಾದಲ್ಲಿ ಪ್ರಪಂಚವು ಒಂದು ಸುರಕ್ಷಿತ ಜಾಗವಾಗಿರದು.

ಸತ್ಯದ ಬಗ್ಗೆ, ವಾಸ್ತವದ ಬಗ್ಗೆ ಒಂದು ವಿಶಾಲವಾದ ತಿಳುವಳಿಕೆಯು ಆವಶ್ಯಕವಾಗಿದೆ. ಪ್ರತಿಯೊಂದು ಧರ್ಮವನ್ನೂ ಗೌರವಿಸಿ, ಪ್ರತಿಯೊಬ್ಬರನ್ನೂ ಗೌರವಿಸಿ. ನನ್ನ ದಾರಿ ಮಾತ್ರ ದೇವರ ಕಡೆಗಿರುವ ದಾರಿ, ಉಳಿದವರೆಲ್ಲರೂ ನರಕಕ್ಕೆ ಹೋಗುತ್ತಾರೆ, ನಾನು ಮಾತ್ರ ಸ್ವರ್ಗಕ್ಕೆ ಹೋಗುತ್ತೇನೆಂದು ನೀವು ಹೇಳಬೇಕಾಗಿಲ್ಲ. ಈ ರೀತಿಯ ಜನರು ಇತರ ಎಲ್ಲರಿಗೂ ನರಕವನ್ನು ಸೃಷ್ಟಿಸುತ್ತಾರೆ. ಧಾರ್ಮಿಕರಲ್ಲದವರನ್ನು ತೆಗೆದುಹಾಕುವುದರ ಮೂಲಕ ತಾವು ದೇವರ ಸೇವೆ ಮಾಡುತ್ತಿರುವೆವೆಂದು ಯೋಚಿಸುವುದು ಈ ಜನರೇ. ಇದು ಬಹಳ ದುರದೃಷ್ಟಕರವಾಗಿದೆ.

ಮಕ್ಕಳಿಗೆ ಶಿಕ್ಷಣ ನೀಡುವುದರ ಅಗತ್ಯವಿದೆ. ಇಲ್ಲದಿದ್ದರೆ, ಇದು ಮಾತ್ರ ಸತ್ಯ; ಇತರ ಎಲ್ಲರೂ ನಾಸ್ತಿಕರು ಮತ್ತು ಅವರಿಗೆ ಅಸ್ತಿತ್ವದಲ್ಲಿರುವ ಹಕ್ಕಿಲ್ಲವೆಂದು ಯೋಚಿಸುತ್ತಾ ಅವರು ಬೆಳೆಯುತ್ತಾರೆ. ಈ ರೀತಿಯ ಮನೋಭಾವವು ಅಪಾಯಕಾರಿಯಾಗಿದೆ.

ಇರುವ ಸಮಸ್ಯೆ ಇದು ಎಂದು ನಿಮ್ಮಲ್ಲಿ ಎಷ್ಟು ಮಂದಿಗೆ ಅನ್ನಿಸುತ್ತದೆ? ನಾವು ಈ ಮನೋಭಾವವನ್ನು ಬದಲಾಯಿಸಬೇಕಾಗಿದೆ, ಒಂದು ವಿಶಾಲ ಶ್ರೇಣಿಯ ತಿಳುವಳಿಕೆಯನ್ನು ತರಬೇಕಾಗಿದೆ, ಮತ್ತು ಅದಕ್ಕಾಗಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ.

ನಾವು ಮಾತನಾಡುತ್ತಿರುವಂತೆಯೇ, ಇರಾಕಿನಲ್ಲಿ ಒಂದು ಕಾರ್ಯಕ್ರಮ ನಡೆಯುತ್ತಿದೆ. ಆರೋಗ್ಯ ಸಚಿವರು ಮತ್ತು ಕ್ರೀಡಾ ಸಚಿವರು ಬಂದು, ಇರಾಕಿನಲ್ಲಿ ಯುವಕರು ಸಂಘಟಿಸಿದ್ದ ನಮ್ಮ ಕೋರ್ಸನ್ನು ಉದ್ಘಾಟಿಸಿದರು.

ಇವತ್ತು ಅವರು ಎರಡನೆಯ ಸುದರ್ಶನ ಕ್ರಿಯೆಯನ್ನು ಮಾಡಿದರು ಮತ್ತು ಅವರ ತಿಳುವಳಿಕೆಯಲ್ಲಿ ಒಂದು ಸಂಪೂರ್ಣ ಪರಿವರ್ತನೆಯಾಗಿದೆ. ಈ ಯುವಕರು ಈಗ ಸಾರ್ವಜನಿಕರನ್ನು ತಲುಪಲು, ಅವರು ಯೋಗ, ಧ್ಯಾನ ಮತ್ತು ಸುದರ್ಶನ ಕ್ರಿಯೆಗಳನ್ನು ಮಾಡುವಂತೆ ಮಾಡಲು ಬಯಸುತ್ತಿದ್ದಾರೆ. ಇದು ಬಹಳ ಒಳ್ಳೆಯ ಸಮಾಚಾರ. ನಾವಿದನ್ನು ಮಾಡಬೇಕು; ನಾವು ಇನ್ನೂ ಹೆಚ್ಚಿನ ಜನರನ್ನು ತಲುಪಬೇಕು.

ಪ್ರಶ್ನೆ: ಒಂದು ಕೆಲಸದ ಅಥವಾ ಒಂದು ಸಂಬಂಧದ ಆರಂಭವು ಯಾವತ್ತೂ ಅದ್ಭುತವಾಗಿರುತ್ತದೆ; ಅದನ್ನು ಉಳಿಸುವುದು ಕಷ್ಟ. ಅದು ಕೊನೆಯಾಗುತ್ತದೆಯೆಂಬಷ್ಟರಲ್ಲಿಯೇ ನಾನು ಆ ವ್ಯಕ್ತಿ ಅಥವಾ ಆ ಪರಿಸ್ಥಿತಿಯಿಂದ ನನ್ನನ್ನೇ ಬಿಡಿಸಿಕೊಳ್ಳುವತ್ತ ಒಲವು ತೋರುತ್ತೇನೆ. ನಾನು ನನ್ನ ಶಕ್ತಿಯನ್ನು ಉದ್ದಕ್ಕೂ ಉಳಿಸಿಕೊಳ್ಳುವುದು ಹೇಗೆ?------

ಶ್ರೀ ಶ್ರೀ ರವಿ ಶಂಕರ್: ಆ ಸಂಪೂರ್ಣ ಭೂತಕಾಲವನ್ನು ಬಿಟ್ಟುಬಿಡು, ಈಗ ಎಚ್ಚೆತ್ತುಕೋ! "ಓ, ನಾನು ಬಲಹೀನ, ನನಗಿದನ್ನು ಮಾಡಲು ಸಾಧ್ಯವಿಲ್ಲ, ನನಗೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ" ಎಂದು ನಿನಗೆ ನೀನೇ ಗುರುತುಪಟ್ಟಿ ಹಚ್ಚಿಕೊಳ್ಳಬೇಡ. ಅದೆಲ್ಲವೂ ಹಿಂದಿನದಾಗಿತ್ತು!

ನೀನು ಏನಾಗಿರುವೆ ಅಥವಾ ನೀನು ಯಾರು ಎಂಬುದು ನಿನಗೆ ತಿಳಿಯದೆಂಬುದನ್ನು ಸ್ವೀಕರಿಸು. ನಿನ್ನಲ್ಲಿ ಎಷ್ಟು ಶಕ್ತಿಯಿದೆ ಎಂಬುದು ನಿನಗೆ ತಿಳಿಯದು; ನಿನಗೇನು ಮಾಡಲು ಸಾಧ್ಯವಿದೆಯೆಂಬುದು ನಿನಗೆ ತಿಳಿಯದು ಎಂಬುದನ್ನು ಸ್ವೀಕರಿಸು ಮತ್ತು ಅಷ್ಟೇ! ನಿನ್ನ ಮೂಲಕ ಶಕ್ತಿಯ ಒಂದು ಹೊಸ ಅಲೆಯು ಪ್ರವಹಿಸುವುದನ್ನು ನೀನು ಕಾಣುವೆ ಮತ್ತು ನಿನ್ನ ಸಂಪೂರ್ಣ ಮನೋಭಾವ, ನಿನ್ನ ವರ್ತನೆ, ನಿನ್ನ ಗ್ರಹಿಕೆ ಹಾಗೂ ನಿನ್ನ ಅಭಿವ್ಯಕ್ತಿ ಎಲ್ಲವೂ ಬದಲಾಗುವುದು.

ನೀನು ಸ್ವ-ಇಚ್ಛೆಯಿಂದಲೋ ಅಥವಾ ಇಚ್ಛೆಯಿಲ್ಲದೆಯೋ ನಿನ್ನ ಮೇಲೆ ಹಾಕಿಕೊಂಡಿರುವ ಎಲ್ಲಾ ಗುರುತುಪಟ್ಟಿಗಳನ್ನು ನೀನು ಸುಮ್ಮನೇ ತೆಗೆದುಹಾಕಬೇಕು. ತಿಳಿಯಿತೇ?

ಪ್ರಶ್ನೆ: ಒಬ್ಬರು ಗುರುವು ಒಬ್ಬ ವ್ಯಕ್ತಿಯನ್ನು ನೋಡುವಾಗ ಅವರು ಆ ವ್ಯಕ್ತಿಯನ್ನು ನೋಡುವುದಿಲ್ಲವೆಂದೂ, ಬದಲಾಗಿ ಅವನ ಪ್ರಭಾವಲಯವನ್ನು ನೋಡುವರೆಂದೂ ನನಗೆ ಹೇಳಲಾಗಿದೆ. ಇದು ನಿಜವೇ?

ಶ್ರೀ ಶ್ರೀ ರವಿ ಶಂಕರ್: ನೀನು ಊಹಿಸುತ್ತಾ ಇರೆಂದು ನಾನು ಬಯಸುತ್ತೇನೆ.