ಶನಿವಾರ, ಏಪ್ರಿಲ್ 6, 2013

ಏನೇ ಆದರೂ ಕುಗ್ಗದ ಮನೋಬಲ


ಬೂನ್, ನಾರ್ತ್ ಕೆರೋಲಿನಾ
೬ ಎಪ್ರಿಲ್ ೨೦೧೩

ನಿಮಗೆ ಗೊತ್ತಾ, ಜೀವನದಲ್ಲಿ ಯಾವತ್ತೂ ಸ್ವಲ್ಪ ತೊಂದರೆಯಿರುತ್ತದೆ, ಒಂದಲ್ಲ ಒಂದು ವಿಷಯದ ಬಗ್ಗೆ. ಅದಕ್ಕಾಗಿಯೇ ಇದು ಮಾಯೆ ಎಂದು ಕರೆಯಲ್ಪಡುವುದು. ಅದು ಅಂತಹ ಒಂದು ಭ್ರಮೆ. ಯಾವುದೇ ವಿಷಯವಾದರೂ ನಿಮಗೊಂದು ತೊಂದರೆಯಾಗಬಲ್ಲದು. ಯಾರಾದರೂ ನಿಮ್ಮನ್ನು ಪ್ರೀತಿಸಿದರೆ, ಅದೊಂದು ತೊಂದರೆಯಾಗುತ್ತದೆ, ಮತ್ತು ಅವರು ನಿಮ್ಮನ್ನು ಪ್ರೀತಿಸದೇ ಇದ್ದರೆ, ಆಗ ಕೂಡಾ ಅದೊಂದು ತೊಂದರೆಯಾಗುತ್ತದೆ.
ನಿಮ್ಮ ಮಿತ್ರರು ತೊಂದರೆಯ ಒಂದು ಮೂಲವಾಗಿದ್ದಾರೆ, ಮತ್ತು ನಿಮ್ಮ ಶತ್ರುಗಳೂ ಹಾಗೆಯೇ. ಅಲ್ಲವೇ? ಅದಕ್ಕಾಗಿಯೇ ಯೋಗ ಸೂತ್ರಗಳಲ್ಲಿ ಮಹಾಋಷಿ ಪತಂಜಲಿಯು, ’ಪರಿಣಾಮ ತಪ ಸಂಸ್ಕಾರ ದುಃಖೈ ಗುಣವೃತ್ತಿಃ, ವಿರೋಧತ್ ಚ ದುಃಖಮೇವ ಸರ್ವಂ ವಿವೇಕಿನಃ’ ಎಂದು ಹೇಳುತ್ತಾರೆ. (ಪತಂಜಲಿ ಯೋಗ ಸೂತ್ರಗಳು, ಅಧ್ಯಾಯ ೨, ಶ್ಲೋಕ ೧೫)
ಇದರರ್ಥವೇನೆಂದರೆ, ಯಾರಲ್ಲಿ ತೀಕ್ಷ್ಣವಾದ ವಿವೇಕವಿರುವುದೋ ಅವನಿಗೆ, ಈ ಪ್ರಪಂಚದಲ್ಲಿರುವ ಎಲ್ಲವೂ ಒಂದು ದುಃಖವೆಂಬುದು ಕಂಡುಬರುತ್ತದೆ. ನೀವು ಮಾತನಾಡಿದರೆ ಅದೊಂದು ಸಮಸ್ಯೆ; ನೀವು ಮಾತನಾಡದೇ ಇದ್ದರೆ, ಆಗ ಕೂಡಾ ಅದೊಂದು ಸಮಸ್ಯೆಯಾಗುತ್ತದೆ. ಜ್ಞಾನಿಯು ಇದನ್ನು ತಿಳಿದಿರುವಾಗ, ಅವನು ಅದರ ಬಗ್ಗೆ ಚಿಂತಿಸುವುದಿಲ್ಲ, ಯಾಕೆಂದರೆ ಅವನಿಗೆ ಯಾವುದೇ ಆಯ್ಕೆಯಿಲ್ಲವೆಂಬುದು ಅವನಿಗೆ ತಿಳಿದಿರುತ್ತದೆ. ಆದುದರಿಂದ, ಏನೇ ಆದರೂ ಪರವಾಗಿಲ್ಲ, ಅವನು ಸಂತೋಷವಾಗಿರುತ್ತಾನೆ.
’ಏನೇ ಬರಲಿ, ನಾನು ನನ್ನ ಸಂತೋಷವನ್ನು ಕಳೆದುಕೊಳ್ಳುವುದಿಲ್ಲ’ ಎಂದು ಅವನು ಯೋಚಿಸುತ್ತಾನೆ. ಇದನ್ನೇ ಒಬ್ಬನು ಬಲವಾಗಿ ನಂಬಿಕೊಂಡಿರಬೇಕಾದುದು - ಏನೇ ಬರಲಿ, ನಾನು ನನ್ನ ಸಂತೋಷವನ್ನು ಕಳೆದುಕೊಳ್ಳಬಾರದು. ಉದಾಹರಣೆಗೆ, ನೀವೇನೋ ಮಾಡುತ್ತಿರುತ್ತೀರ ಮತ್ತು ಅದು ಚೆನ್ನಾಗಿ ಆಗುವುದಿಲ್ಲ. ನೀವು ಅದರ ಬಗ್ಗೆ ನಿಮ್ಮ ಸಂತೋಷವನ್ನು ಕೂಡಾ ಯಾಕೆ ಕಳೆದುಕೊಳ್ಳಬೇಕು? ಆಗ ಅದೊಂದು ಇಮ್ಮಡಿ ನಷ್ಟ, ಅಲ್ಲವೇ? ನೀವು ನಿಮ್ಮ ವ್ಯಾಪಾರದಲ್ಲಿ ನಷ್ಟಕ್ಕೀಡಾಗುವಿರಿ ಎಂದು ಇಟ್ಟುಕೊಳ್ಳೋಣ. ಈಗ ಹೇಗಿದ್ದರೂ ನಷ್ಟ ಸಂಭವಿಸಿದೆ. ಕಡಿಮೆಪಕ್ಷ ಅದರೊಂದಿಗೆ ನೀವು ನಿಮ್ಮ ಸಂತೋಷವನ್ನು ಕೂಡಾ ಕಳೆದುಕೊಳ್ಳಬಾರದು. ಇದು ಜ್ಞಾನ. ಈ ಆಧ್ಯಾತ್ಮಿಕ ಜ್ಞಾನವು ನಿಮ್ಮನ್ನು ತರಬೇಕಾದುದು ಈ ಸ್ಥಿತಿಗೇ. ಇದು ನಿಮ್ಮ ಬೆಳವಣಿಗೆಯ ಅಳತೆಯಾಗಿದೆ.
ನೀವು ನಿಮ್ಮ ವ್ಯಾಪಾರದಲ್ಲಿ ಅಥವಾ ಒಂದು ಸಂಬಂಧದಲ್ಲಿ ನಷ್ಟ ಅನುಭವಿಸಿರಲಿ; ಅಥವಾ ಜೀವನದ ಇತರ ಯಾವುದೇ ವಿಷಯದಲ್ಲಿ ಒಂದು ನಷ್ಟವನ್ನು ಅನುಭವಿಸಿರಲಿ; ನೀವು ನಿಮ್ಮ ಸಂತೋಷವನ್ನು ಕಳೆದುಕೊಳ್ಳಬಾರದು. ಆಗ ನೀವು ನಿಜವಾದ ವಿಷಯವನ್ನು ಹಿಡಿದುಕೊಂಡಿರುತ್ತೀರ.
ಸ್ವಾಮಿ ರಾಮದಾಸರು, ವೇದಾಂತದ (ಭಾರತೀಯ ತತ್ವಜ್ಞಾನದ ಒಂದು ಶಾಖೆ. ಇದರ ಅಕ್ಷರಶಃ ಅರ್ಥವೆಂದರೆ, ’ವೇದಗಳ ಗುರಿ ಅಥವಾ ಅಂತ್ಯ’ವೆಂದು) ಬಗ್ಗೆ ಮಾತನಾಡುವುದಕ್ಕಾಗಿ ಟೋಕಿಯೋಕ್ಕೆ ಆಮಂತ್ರಿಸಲ್ಪಟ್ಟರು. ಆದುದರಿಂದ ಅವರು ಭಾರತದಿಂದ ಬಹಳ ದೂರ ಹಡಗಿನಲ್ಲಿ ಪ್ರಯಾಣಿಸಿದರು, ಯಾಕೆಂದರೆ ಆ ದಿನಗಳಲ್ಲಿ ಅಷ್ಟೊಂದು ದೂರವನ್ನು ನೀವು ಹಡಗಿನ ಮೂಲಕ ಮಾತ್ರ ಪ್ರಯಾಣಿಸಬಹುದಿತ್ತು ಮತ್ತು ಅದು ಒಂದು ತಿಂಗಳು ತೆಗೆದುಕೊಳ್ಳುತ್ತಿತ್ತು. ಅವರೊಬ್ಬ ಸನ್ಯಾಸಿಯಾಗಿದ್ದರು ಮತ್ತು ತಾವು ಹೋದಲ್ಲೆಲ್ಲಾ ಕೇವಲ ಒಂದು ಜೊತೆ ಬಟ್ಟೆಗಳನ್ನು ಮಾತ್ರ ಕೊಂಡೊಯ್ಯುತ್ತಿದ್ದರು.
ಅವರು ಅಲ್ಲಿಗೆ ತಲುಪಿದಾಗ, ಕಾರ್ಯಕ್ರಮದ ಸಂಘಟಕರು ಮಾಯವಾಗಿದ್ದರು, ಮತ್ತು ಅಲ್ಲಿ ಯಾವುದೇ ಸಭಿಕರಿರಲಿಲ್ಲ. ಅವರು ಅಲ್ಲಿ ಸಾಗರ ತೀರದ ಬಳಿ ನಿಂತರು ಮತ್ತು ತಮ್ಮನ್ನೇ ಉದ್ದೇಶಿಸಿ ಮಾತನಾಡಿದರು. ಅವರು ತಮಗೇ ಒಂದು ಪ್ರವಚನವನ್ನು ನೀಡಿದರು ಮತ್ತು ಸಂತೋಷವಾಗಿ ಹಿಂತಿರುಗಿ ಬಂದರು (ನಗು). ಅವರು ಯಾರನ್ನೂ; ಸಂಘಟಕರನ್ನಾಗಲೀ, ಬರದೇ ಇದ್ದಂತಹ ಸಭಿಕರನ್ನಾಗಲೀ ದೂಷಿಸಲಿಲ್ಲ. ಅವರು ಹೇಳುವುದನ್ನು ಕೇಳಿಸಿಕೊಳ್ಳಲು ಯಾರೂ ಇರಲಿಲ್ಲ, ಮತ್ತು ಅವರಿಗೆ ಜಪಾನೀಸ್ ಭಾಷೆ ತಿಳಿದಿರಲಿಲ್ಲ.
ಇದು ನಡೆದುದು ಹಲವಾರು ದಶಕಗಳ ಹಿಂದೆ, ಮತ್ತು ಆ ಕಾಲದಲ್ಲಿ, ಈಗಿರುವಂತೆ ಸತತ ಪ್ರವಾಸ ಯೋಜನೆಗಳು (ಫ್ರೀಕ್ವೆಂಟ್ ಟ್ರಾವೆಲರ್ ಪ್ರೋಗ್ರಾಮ್ಸ್) ಇರಲಿಲ್ಲ. ಆದುದರಿಂದ ಅವರು ತಮ್ಮ ಟಿಕೆಟಿನ ವೆಚ್ಚವನ್ನು ತಾವೇ ಭರಿಸಿಕೊಂಡರು ಮತ್ತು ಅಲ್ಲಿಗೆ ತಾವಾಗಿಯೇ ಹೋದರು. ಈ ಘಟನೆಯು ಸ್ವಾಮಿಗಳ ವಲಯದಲ್ಲಿ ಜನಪ್ರಿಯವಾದ ಒಂದು ದಂತಕತೆಯಾಗಿದೆ - ಸ್ವಾಮಿ ರಾಮದಾಸರು ಹೇಗೆ ವೇದಾಂತದ ಬಗ್ಗೆ ತಮಗೆ ತಾವೇ ಒಂದು ಪ್ರವಚನವನ್ನು ನೀಡಿದರು ಮತ್ತು ಭಾರತಕ್ಕೆ ಮರಳಿದರು ಎಂಬುದು.
ಇದೇ ರೀತಿಯದೊಂದು ಭಾರತದಲ್ಲಿ ಕೂಡಾ ಆಯಿತು.
ಸಮಯದಿಂದ ಸಮಯಕ್ಕೆ ನಾವು ಹಲವಾರು ಸಮ್ಮೇಳನಗಳನ್ನು ಇಟ್ಟಿರುತ್ತೇವೆ. ಜನರನ್ನು ಒಗ್ಗೂಡಿಸುವ ಮೂಲಕ ಸಮ್ಮೇಳನಗಳು ಸಾರ್ವಜನಿಕ ಬಾಂಧವ್ಯಗಳನ್ನು ನಿರ್ಮಿಸುವಲ್ಲಿ ಮತ್ತು ಪರಿಚಯ ಬೆಳೆಸುವಲ್ಲಿ ಸಹಾಯ ಮಾಡುತ್ತವೆ. ಜನರು ಬರುತ್ತಾರೆ, ಅವರು ಪರಸ್ಪರರನ್ನು ತಿಳಿಯುತ್ತಾರೆ, ಅವರು ಚರ್ಚಿಸುತ್ತಾರೆ ಮತ್ತು ಅವರು ಪರಸ್ಪರರಿಗೆ ವಿದಾಯ ಹೇಳುತ್ತಾರೆ. ಈ ಸಮ್ಮೇಳನಗಳಿಂದ ಹೆಚ್ಚೇನೂ ಫಲಿತಾಂಶವಿರುವುದಿಲ್ಲ, ಯಾಕೆಂದರೆ ಚರ್ಚಿಸಲ್ಪಟ್ಟ ವಿಷಯದ ಬಗ್ಗೆ ಆಳವಾದ ಜ್ಞಾನವಿರುವುದಿಲ್ಲ. ಹೀಗೆ ಒಂದು ಸಾರಿ ಏನಾಯಿತೆಂದರೆ, ಒಂದು ಸಮ್ಮೇಳನದಲ್ಲಿ ಜನರ ಈ ಒಂದು ದಳವಿತ್ತು ಮತ್ತು ಒಬ್ಬ ಸಜ್ಜನನು ನೆರೆದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದನು. ಎಂ ಸಿ (ಕಾರ್ಯಕ್ರಮ ನಿರ್ವಾಹಕ)ಯು ಗಂಟೆಯನ್ನು ಬಾರಿಸುತ್ತಿದ್ದನು, ಆದರೆ ಭಾಷಣಕಾರನು ಅದನ್ನು ನಿರ್ಲಕ್ಷಿಸಿ ಮಾತನಾಡುವುದನ್ನು ಮುಂದುವರಿಸಿದನು. ಕೆಲವು ಜನರು, ಒಮ್ಮೆ ತಮಗೆ ಮೈಕ್ ಸಿಕ್ಕಿದರೆ ಅದನ್ನು ಬಿಡುವುದೇ ಇಲ್ಲ. ಅಂತಹ ಭಾಷಣಕಾರರಿಗೆ, ತಯಾರಾಗಲು ಅರ್ಧ ಘಂಟೆ ಬೇಕಾಗುತ್ತದೆ, ಮತ್ತು ನಂತರ ನಿಜವಾದ ಭಾಷಣ ಶುರುವಾಗುತ್ತದೆ. ಆದುದರಿಂದ, ನಂತರ ಎಂ ಸಿ ಹೋಗಿ ಭಾಷಣಕಾರನ ಅಂಗಿಯನ್ನು ಹಿಂದಿನಿಂದ ಎಳೆದನು, ಆದರೂ ಆ ಸಜ್ಜನನು ನಿಲ್ಲಿಸಲಿಲ್ಲ. ಎಂ ಸಿ ಯು ಇದನ್ನು ಮೂರನೇ ಬಾರಿಗೆ ಮಾಡಿದಾಗ, ಭಾಷಣಕಾರನು ತನ್ನ ಅಂಗಿಯನ್ನು ತೆಗೆದು ಎಂ ಸಿ ಗೆ ಕೊಟ್ಟನು ಮತ್ತು ಮಾತನಾಡುವುದನ್ನು ಮುಂದುವರಿಸಿದನು! (ನಗು) ಅವನು ತನ್ನ ಅಂಗಿಯಿಂದ ಬೇರೆಯಾಗಲು ಸಿದ್ಧನಿದ್ದನು ಆದರೆ ಮೈಕಿನಿಂದಲ್ಲ.

ಪ್ರಶ್ನೆ: ಒಲವಿನ ಗುರುದೇವ, ಸಾಧಾರಣವಾಗಿ ನಾನು ಸಂಪೂರ್ಣನೆಂದು ನನಗನ್ನಿಸುವುದು ನಾನೊಂದು ಸಂಬಂಧದಲ್ಲಿರುವಾಗ ಮಾತ್ರ. ಈ ಪ್ರವೃತ್ತಿಯಿಂದ ನಾನು ಹೊರಬರುವುದು ಹೇಗೆ, ಯಾಕೆಂದರೆ ಇದರಿಂದ ನನಗೆ ದುಃಖವುಂಟಾಗುವುದು. 
ಶ್ರೀ ಶ್ರೀ ರವಿ ಶಂಕರ್: ಇದು ಬಹಳ ಕಷ್ಟ. ನೀನೊಂದು ಕಷ್ಟಕರವಾದ ಸ್ಥಿತಿಯಲ್ಲಿರುವಾಗ, ಯಾವುದೇ ಸಲಹೆಯು ನಿನ್ನನ್ನು ಮುಳ್ಳುಗಳಂತೆ ಚುಚ್ಚುವುದಾಗಿ ತೋರುತ್ತದೆ ಮತ್ತು ಯಾವುದೂ ನಿಜವಾಗಿ ಸಾಕಷ್ಟು ಸಮಂಜಸವಾಗಿರುವುದಿಲ್ಲ. ನೀನು ಸುಮ್ಮನೇ ಒಂದು ಪ್ರಶ್ನೆಯನ್ನು ಕೇಳಿರುವೆ; ನಾವು ನಿನ್ನ ಮೇಲೆ ಸಹಾನುಭೂತಿ ತೋರಿಸುತ್ತೇವೆ.
ನಿಮಗೆ ಗೊತ್ತಾ, ಜನರು ಸಾಮಾನ್ಯವಾಗಿ ಕೇಳುವ ಐದು ರೀತಿಯ ಪ್ರಶ್ನೆಗಳಿವೆ. ನಾನು ಇದರ ಬಗ್ಗೆ ಮಾತನಾಡುವುದನ್ನು ನೀವು ಮೊದಲು ಕೂಡಾ ಕೇಳಿದ್ದೀರಿ. ನಾವದನ್ನು ಬೇರೆ ಯಾವಾಗಲಾದರೂ ತೆಗೆದುಕೊಳ್ಳೋಣ.
ಯಾರಾದರೂ ದುಃಖಿತರಾಗಿರುವಾಗಲೆಲ್ಲಾ ಅವರು ಮತ್ತೆ ಮತ್ತೆ ಈ ಪ್ರಶ್ನೆಯನ್ನು ಕೇಳುತ್ತಾರೆ, "ನನಗೆ ಯಾಕೆ? ಈ ಕಷ್ಟ ನನಗೆ ಯಾಕೆ? ದೇವರು ಯಾಕೆ ನನಗೆ ಅನ್ಯಾಯ ಮಾಡುತ್ತಿದ್ದಾರೆ? ನಾನು ಬಹಳ ದುಃಖಿತನಾಗಿರುವೆನು", ಮುಂತಾಗಿ.
ಒಬ್ಬರು ಇಂತಹ ಒಂದು ಸ್ಥಿತಿಯಲ್ಲಿರುವಾಗ, ನೀವವರಿಗೆ ಏನನ್ನಾದರೂ ಹೇಳಲು ಪ್ರಯತ್ನಿಸಿದರೂ ಕೂಡಾ, ತಾವು ಕಿವುಡರೇನೋ ಎಂಬಂತೆ ಅವರು ವರ್ತಿಸುವರು. ಅವರು ನೀವು ಹೇಳುವುದನ್ನು ಕೇಳಲಾರರು. ಮನೆಯಲ್ಲಿರುವ ಜನರೊಂದಿಗೆ ನಿಮಗೆ ಈ ಅನುಭವವಾಗಿದೆಯೇ? ವಯಸ್ಸಾದ ಜನರು ಬಹಳ ಅಸಂತುಷ್ಟರಾಗಿರುವಾಗ ಅವರು ಪ್ರಶ್ನೆಗಳನ್ನು ಕೇಳುತ್ತಾರೆ, ಆದರೆ ನೀವವರಿಗೆ ಯಾವುದೇ ಉತ್ತರವನ್ನು ಕೊಡಿ, ಅವರು ಬೇರೆಲ್ಲೋ ನೋಡುತ್ತಾರೆ. ಅವರು ನಿಮ್ಮ ಉತ್ತರವನ್ನು ತೆಗೆದುಕೊಳ್ಳುವುದೇ ಇಲ್ಲ. ಹೀಗೆ, ದುಃಖಿತರಾಗಿರುವಾಗ ಜನರೊಳಗೆ ಒಂದು ಪ್ರಶ್ನೆಯಿರುತ್ತದೆ. ಅಂತಹ ಒಂದು ಸಂದರ್ಭದಲ್ಲಿ, ನೀವು ಸುಮ್ಮನಿರುವುದು ಒಳ್ಳೆಯದು.
ಎರಡನೆಯ ರೀತಿಯ ಪ್ರಶ್ನೆಯೆಂದರೆ, ಕೋಪದಲ್ಲಿರುವಾಗ ಜನರು ಕೇಳುವಂತಹುದು. ಅವರು, "ನನ್ನ ಕಡೆಗೆ ಯಾಕೆ ಈ ಅನ್ಯಾಯ?" ಎಂದು ಕೇಳುವರು. ಅವರು ಬಹಳ ತಾರ್ಕಿಕವಾಗಿರುತ್ತಾರೆ, ಆದರೆ ಅವರು ಕೋಪದಲ್ಲಿರುತ್ತಾರೆ. ಹೀಗೆ ಅವರಲ್ಲೂ ಒಂದು ದೊಡ್ಡ ಪ್ರಶ್ನೆಯಿರುತ್ತದೆ. ಪುನಃ, ಅವರಿಗೆ ಉತ್ತರಿಸುವುದರಲ್ಲಿ ಅರ್ಥವಿಲ್ಲ.
ಮೂರನೆಯ ರೀತಿಯ ಪ್ರಶ್ನೆಯು, ಮೊದಲೇ ಉತ್ತರ ತಿಳಿದರೂ ಕೇಳಲು ಬಯಸುವ ಜನರಿಂದ ಕೇಳಲ್ಪಡುತ್ತದೆ. ನಿಮಗೆ ಕೂಡಾ ಅದು ತಿಳಿದಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಅವರಿದನ್ನು ಮಾಡುತ್ತಾರೆ. ಅವರು ನಿಮಗೆ, "ಇಂತಿಂತಹ ಉಪನಿಷತ್ತಿನ ಮೂರನೆಯ ಶ್ಲೋಕದಲ್ಲಿ ಏನು ಹೇಳಲಾಗಿದೆಯೆಂದು ಹೇಳಿ" ಎಂಬಂತಹ ಪ್ರಶ್ನೆಗಳನ್ನು ಕೇಳುವರು. ಅವರಿಗಿದರ ಉತ್ತರ ತಿಳಿದಿದ್ದರೂ ಸಹ, ನಿಮಗೆ ತಿಳಿದಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಅವರಿದನ್ನು ಮಾಡುತ್ತಾರೆ.
ನಾಲ್ಕನೆಯ ರೀತಿಯ ಪ್ರಶ್ನೆಯು, ಕೇವಲ ತಮ್ಮ ಇರುವಿಕೆಯನ್ನು ತೋರಿಸಲು ಬಯಸುವ ಜನರಿಂದ ಕೇಳಲ್ಪಡುತ್ತದೆ. ಅವರು ಎದ್ದು ನಿಂತು ನಿಮಗೆ ಪ್ರಶ್ನೆಯನ್ನು ಕೇಳುವರು, ಮತ್ತು ನೀವು ಪ್ರಾಮಾಣಿಕವಾಗಿ ಪ್ರಶ್ನೆಗೆ ಉತ್ತರಿಸಲು ತೊಡಗುವಾಗ, ಅವರು ಬೇರೇನನ್ನೋ ಮಾಡಲು ತೊಡಗುವರು. ನಿಮ್ಮ ಉತ್ತರದ ಬಗ್ಗೆ ಅವರಿಗೆ ಯಾವುದೇ ಆಸ್ಥೆಯಿರುವುದಿಲ್ಲ. ಅವರಲ್ಲಿರುವರೆಂದು ಎಲ್ಲರೂ ಗಮನಿಸಲೆಂದು ಮತ್ತು ನಿಮಗೆ ಕೂಡಾ ಅವರಲ್ಲಿರುವರೆಂಬುದು ತಿಳಿಯಲೆಂದು ಅವರು ಕೇವಲ ಎದ್ದು ನಿಂತರು ಮತ್ತು ತಮ್ಮ ಅಂಶವನ್ನು ಮುಂದಿಟ್ಟರು.
ಐದನೆಯ ರೀತಿಯ ಪ್ರಶ್ನೆಯು ಯಾರಿಂದ ಕೇಳಲ್ಪಡುವುದೆಂದರೆ, ಯಾರು ಪ್ರಾಮಾಣಿಕವಾಗಿ ಉತ್ತರವನ್ನು ಬಯಸುವರೋ ಅವರಿಂದ; ಮತ್ತು ನಿಮಗದು ತಿಳಿದಿದೆಯೆಂಬುದು ಅವರಿಗೆ ತಿಳಿದಿರುತ್ತದೆ. ನೀವು ಹೇಳಲಿರುವ ಉತ್ತರವನ್ನು ಅವರು ತೆಗೆದುಕೊಳ್ಳುವರು.
ನೋಡಿ, ನಿಮಗೆ ಉತ್ತರ ತಿಳಿದಿದೆಯೆಂಬ ನಂಬಿಕೆಯಿಲ್ಲದೇ ಒಬ್ಬರು ಒಂದು ಪ್ರಶ್ನೆಯನ್ನು ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ.
ನೀವು ನಾರ್ತ್ ಕೆರೋಲಿನಾದವರೆಂದು ಇಟ್ಟುಕೊಳ್ಳೋಣ, ಮತ್ತು ಒಬ್ಬರು ನಿಮ್ಮಲ್ಲಿ ಕೇಳುತ್ತಾರೆ, "ರೇಲೈಗೆ ಪ್ರಯಾಣಿಸಲು ಎಷ್ಟು ಸಮಯ ಬೇಕಾಗುತ್ತದೆ?" ನಿಮಗೆ ಉತ್ತರ ತಿಳಿದಿರುವುದು. ಆದುದರಿಂದ, ಅವರು ಪ್ರಶ್ನೆಯನ್ನು ಕೇಳುವಾಗ, ನಿಮಗೆ ಉತ್ತರ ತಿಳಿದಿದೆಯೆಂಬುದು ಅವರಿಗೆ ಖಚಿತವಾಗಿ ಗೊತ್ತಿರುತ್ತದೆ, ಮತ್ತು ಉತ್ತರವನ್ನು ಪಡೆಯುವೆವೆಂಬ ಪ್ರಾಮಾಣಿಕತೆಯೊಂದಿಗೆ ಅವರು ಈ ಪ್ರಶ್ನೆಯನ್ನು ಕೇಳುತ್ತಾರೆ.
ಇದು ಉತ್ತರಿಸಲು ಯೋಗ್ಯವಾದ ಪ್ರಶ್ನೆ. ಇತರ ನಾಲ್ಕು ರೀತಿಗಳ ಪ್ರಶ್ನೆಗಳಿಗೆ, ಕೇವಲ ಒಂದು ಮುಗುಳ್ನಗೆಯೊಂದಿಗೆ ಪ್ರತಿಕ್ರಿಯಿಸಿರಿ, ಮತ್ತು ಆ ಮುಗುಳ್ನಗೆಯು ಒಂದು ಅಳೆದ ಮುಗುಳ್ನಗೆಯಾಗಿರಬೇಕು. ಎಲ್ಲಾ ನಾಲ್ಕು ಪ್ರಶ್ನೆಗಳಿಗೆ ನೀವು ಒಂದೇ ಮುಗುಳ್ನಗೆಯನ್ನು  ಕೊಡಬಾರದು.
ಮೊದಲನೆಯ ರೀತಿಯ ಪ್ರಶ್ನೆಗೆ, ಮುಗುಳ್ನಗೆಯು ಸ್ವಲ್ಪವೇ ಇರಬೇಕು, ೨% ದಷ್ಟು. ಒಬ್ಬರು ದುಃಖಿತರಾಗಿರುವಾಗ, ಒಂದು ದೊಡ್ಡ ಮುಗುಳ್ನಗೆಯನ್ನು ಕೊಡಬೇಡಿ, ಇಲ್ಲದಿದ್ದರೆ ನೀವು ಕೂಡಾ ಏನಾದರೂ ’ದೊಡ್ಡದನ್ನು’ ತಿರುಗಿ ಪಡೆಯುವಿರಿ (ನಗೆ). ಒಬ್ಬರು ಕೋಪದಲ್ಲಿರುವಾಗ, ನಿಮ್ಮ ಮುಗುಳ್ನಗೆಯು ಕೇವಲ ೩% ಏನಾದರೂ ಇರಬೇಕು. ನಿಮ್ಮ ಮುಗುಳ್ನಗೆಯು, "ನನಗೆ ತಿಳಿಯದು" ಎಂಬ ಒಂದು ಮುಗ್ಧ ಭಾವನೆಯನ್ನು ತಿಳಿಯಪಡಿಸುವಂತಿರಬೇಕು. ಆದರೆ ಮೂರನೆಯ ಮತ್ತು ನಾಲ್ಕನೆಯ ರೀತಿಯ ಪ್ರಶ್ನೆಗೆ, ನೀವು ಸ್ವಲ್ಪ ದೊಡ್ಡದಾಗಿ ಮುಗುಳ್ನಗಬಹುದು.

ಪ್ರಶ್ನೆ: ಪ್ರೀತಿಯ ಗುರುದೇವ, ನೀವೇನು ಹೇಳಿದಿರೋ, ಅದನ್ನು ನಾನು ಕೆಲವೊಮ್ಮೆ ಮೊದಲು ಅನುಭವಿಸಿದ್ದೇನೆ. ಆದರೆ ಈಗ ನನಗೆ ಅದನ್ನು ಅನುಭವಿಸಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣವೇನು ಮತ್ತು ನಾನೇನು ಮಾಡಬೇಕು?
ಶ್ರೀ ಶ್ರೀ ರವಿ ಶಂಕರ್: ಸುಮ್ಮನೆ ವಿಶ್ರಾಮ ಮಾಡು. ನೀನು ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿರುವೆ. ನೋಡು, ಈ ಅನುಭವಗಳು ಬರುತ್ತವೆ ಮತ್ತು ಹೋಗುತ್ತವೆ. ಸುಮ್ಮನೆ ಅವುಗಳು ಬರುತ್ತಿರುವಂತೆ ಅವುಗಳನ್ನು ತೆಗೆದುಕೋ. ನೀನು ಅವುಗಳಿಗಾಗಿ ಹಾತೊರೆಯಲೂ ಬಾರದು, ಅವುಗಳನ್ನು ತಡೆಯಲು ಪ್ರಯತ್ನಿಸಲೂ ಕೂಡಾ ಬಾರದು. ಇದು ನಮ್ಮ ಸುವರ್ಣ ತತ್ವ.

ಪ್ರಶ್ನೆ: ಎಲ್ಲವೂ ಒಂದೇ ವಿಷಯವನ್ನು ಹೇಳುವಾಗ, ಅಷ್ಟೊಂದು ಉಪನಿಷತ್ತುಗಳಿರುವುದರ ಉದ್ದೇಶವೇನು?
ಶ್ರೀ ಶ್ರೀ ರವಿ ಶಂಕರ್: ಪ್ರತಿಯೊಂದರ ನಡುವೆ ಚಿಕ್ಕ ವ್ಯತ್ಯಾಸಗಳಿವೆ. ಅವುಗಳೆಲ್ಲವೂ ಒಂದೇ ವಿಷಯವನ್ನು ಹೇಳುವುದಾದರೂ, ಶೈಲಿಯು ಬಹಳ ಅನನ್ಯವಾಗಿದೆ ಮತ್ತು ಅದು ಒಂದೇ ವಿಷಯವಲ್ಲ.
ಪ್ರತಿಯೊಂದಕ್ಕೂ ಅದರದ್ದೇ ಆದ ನಿರ್ದಿಷ್ಟ ಸ್ವಾದವಿದೆ. ಅದು, ನೀವೊಂದು ಐಸ್ ಕ್ರೀಂ ಅಂಗಡಿಗೆ ಹೋಗಿ, "ನೀವು ಯಾಕೆ ಇಷ್ಟೊಂದು ವಿವಿಧ ಸ್ವಾದಗಳ ಐಸ್ ಕ್ರೀಂ ಇಟ್ಟಿರುವಿರಿ?" ಎಂದು ಕೇಳುವಂತೆ. ಆದುದರಿಂದ, ಮೂಲತಃ ಅವುಗಳು ಐಸ್ ಕ್ರೀಂ, ಆದರೆ ಪ್ರತಿಯೊಂದರದೂ ವಿಭಿನ್ನ ಸ್ವಾದ. ಒಂದು ಚಾಕೊಲೇಟ್, ಒಂದು ಪಿಸ್ಟಾಚಿಯೋ, ಇನ್ನೊಂದು ಬಟರ್ ಸ್ಕೋಚ್, ಮೊದಲಾದವು. ನಿಜವಾಗಿ ಅದೆಲ್ಲವೂ ಸಕ್ಕರೆ ಮತ್ತು ಹಾಲು. ಬೇಕಾಗುವ ಸಾಮಗ್ರಿಗಳು ನಿಜವಾಗಿ ಒಂದೇ, ಆದರೆ ಪ್ರತಿಯೊಂದಕ್ಕೂ ಒಂದು ಬೇರೆಯ ಸ್ವಾದವಿದೆ.