ಗುರುವಾರ, ಏಪ್ರಿಲ್ 11, 2013

ವಾಸ್ತವಿಕತೆಯ ವಿವಿಧ ಹಂತಗಳು

ಮಾಂಟ್ರಿಯಾಲ್, ಕೆನಡಾ
೧೧ ಎಪ್ರಿಲ್ ೨೦೧೩


ಪ್ರಶ್ನೆ: ಪ್ರೀತಿಯ ಗುರುದೇವ, ಪ್ರಜ್ಞೆಯು ಒಂದಾಗಿದ್ದರೆ, ನಾವಿರುವುದು ನಾವು ಅಂದುಕೊಂಡಿರುವಂತೆಯೇ? ಒಬ್ಬರಿಗೆ ಇನ್ನೊಬ್ಬರ ಶರೀರವನ್ನು ಅಥವಾ ಅನುಭವವನ್ನು ಅನುಭವಿಸಲು ಸಾಧ್ಯವೇ? ಒಬ್ಬರಿಗೆ ತಮ್ಮ ಆತ್ಮವನ್ನು ವರ್ಗಾಯಿಸಲು ಅಥವಾ ಇಚ್ಛಾನುಸಾರ ಹೊರಹಾಕಲು ಮತ್ತು ಉಳಿಸಲು ಸಾಧ್ಯವೇ? 

ಶ್ರೀ ಶ್ರೀ ರವಿ ಶಂಕರ್: ಈ ಕೋಣೆಯಲ್ಲಿ ಎಷ್ಟು ಬಲ್ಬುಗಳಿವೆ ಎಂಬುದು ನಿನಗೆ ಕಾಣಿಸುತ್ತಿದೆಯೇ? ಈ ಬಲ್ಬುಗಳು ಬೇರೆ ಬೇರೆಯೇ? ಹೌದು, ಅವುಗಳೆಲ್ಲವೂ ಬೇರೆ ಬೇರೆ ಬಲ್ಬುಗಳು, ಆದರೆ ಅವುಗಳ ಮೂಲಕ ಓಡುವ ವಿದ್ಯುತ್, ಅದು ಬೇರೆ ಬೇರೆಯೇ? ಅಲ್ಲ.

ಹೀಗೆ, ಒಂದು ಮಟ್ಟದಲ್ಲಿ ಅದೆಲ್ಲವೂ ಬೇರೆ ಬೇರೆಯಾಗಿದೆ ಮತ್ತು ಇನ್ನೊಂದು ಮಟ್ಟದಲ್ಲಿ, ಎಲ್ಲವೂ ಒಂದೇ. ಹಾಗೆಯೇ, ಹಲವಾರು ಹಂತಗಳ ತಿಳುವಳಿಕೆಯಿದೆ ಮತ್ತು ಹಲವಾರು ಹಂತಗಳ ವಾಸ್ತವಿಕತೆಯಿದೆ. ತಿಳುವಳಿಕೆಯ ಎಷ್ಟು ಹಂತಗಳಿವೆಯೋ ಅಷ್ಟೇ ಹಂತಗಳ ವಾಸ್ತವಿಕತೆಯೂ ಇದೆ. ನೀವು ಅವುಗಳನ್ನೆಲ್ಲ ಮಿಶ್ರ ಮಾಡಬಾರದು.
ಆದಿಶಂಕರರ ಒಂದು ಕಥೆಯಿದೆ.

ಒಮ್ಮೆ ಆದಿಶಂಕರರು ಹೀಗೆಂದು ಹಂಚಿಕೊಳ್ಳುತ್ತಿದ್ದರು, "ಈ ಸಂಪೂರ್ಣ ಪ್ರಪಂಚ, ಅಂದರೆ ಎಲ್ಲವೂ ಏನೂ ಅಲ್ಲ" ಎಂದು. ಹೀಗೆ, "ಇದೆಲ್ಲವೂ ಏನೂ ಅಲ್ಲ" ಎಂದು ಅವರು ಹೇಳುತ್ತಿದ್ದರು, ಆಧುನಿಕ ಕಾಲದ ವಿಜ್ಞಾನಿಗಳು, "ಈ ಪದಾರ್ಥಗಳೆಲ್ಲಾ ಏನೂ ಅಲ್ಲ, ಯಾಕೆಂದರೆ ಅವೆಲ್ಲವೂ ಕೇವಲ ತರಂಗಗಳು" ಎಂದು ಹೇಳುವಂತೆ. ಅವರು, "ಎಲ್ಲವೂ ಏನೂ ಅಲ್ಲ" ಎಂದು ಹೇಳುತ್ತಿರುವಂತೆಯೇ, ಒಂದು ಹುಚ್ಚು ಆನೆಯು ಅವರ ಕಡೆಗೆ ಓಡಲು ತೊಡಗಿತು. ಹಾಗಾಗಿ ರಕ್ಷಣೆ ಪಡೆಯಲು ಶಂಕರರು ಓಡಿದರು. ಆಗ ಯಾರೋ ಹೇಳಿದರು, "ಓ, ಆ ಆನೆಯು ಏನೂ ಅಲ್ಲ. ನೀವು ಯಾಕೆ ಓಡುತ್ತಿರುವಿರಿ?" ಆಗ ಶಂಕರರು ಹೇಳಿದರು, "ಆನೆಯು ಏನೂ ಅಲ್ಲ ಮತ್ತು ನನ್ನ ಓಡುವಿಕೆಯೂ ಏನೂ ಅಲ್ಲ" ಎಂದು.

ಹಾಗಾಗಿ ವಾಸ್ತವದ ಬಗ್ಗೆ ಗೊಂದಲಗೊಳ್ಳಬೇಡಿ.

ಒಬ್ಬನು ಒಂದು ಹುಲಿಯ ಕನಸನ್ನು ಕಂಡನು ಮತ್ತು ಅರೆನಿದ್ರೆಯಲ್ಲಿ ಅವನು, ಹುಲಿಗೆ ಗುಂಡಿಕ್ಕುವುದಕ್ಕಾಗಿ ಬಂದೂಕನ್ನು ಹುಡುಕಲು ಶುರು ಮಾಡಿದನು. ಆದರೆ ಅವನ ಪಕ್ಕದಲ್ಲಿ ಅವನ ಪತ್ನಿಯಿದ್ದಳು. ಅವಳು ಅವನನ್ನು ಅಲ್ಲಾಡಿಸಿ, "ನಾನು ನಿಮ್ಮ ಪತ್ನಿ, ಹುಲಿಯಲ್ಲ!" ಎಂದು ಹೇಳಿದಳು. ಅವನು ಎದ್ದು ನೋಡಬೇಕಾಗಿ ಬಂತು.

ಒಂದು ಕನಸಿನ ಹುಲಿಗೆ ಗುಂಡಿಕ್ಕಲು ನಿಮಗೆ ಒಂದು ಕನಸಿನ ಬಂದೂಕು ಬೇಕು. ಕನಸಿನ ಹುಲಿಗೆ ಒಂದು ನಿಜವಾದ ಬಂದೂಕಿನಿಂದ ಗುಂಡಿಕ್ಕಲು ನಿಮಗೆ ಸಾಧ್ಯವಿಲ್ಲ. ಸರಿಯಾ? ಹೀಗೆ, ವಿವಿಧ ಹಂತಗಳ ವಾಸ್ತವಿಕತೆಯಿದೆ ಮತ್ತು ಅವುಗಳಲ್ಲಿ ಪ್ರತಿಯೊಂದನ್ನೂ ನಾವು ತಿಳಿದುಕೊಳ್ಳಬೇಕಾಗಿದೆ ಹಾಗೂ ಅದು ಜೀವನವನ್ನು ಸಮೃದ್ಧಗೊಳಿಸುತ್ತದೆ.

ಪ್ರಶ್ನೆ: ಪ್ರೀತಿಯ ಗುರುದೇವ, ನಾನು ಯಾರು ಎಂಬುದನ್ನು ನೋಡಲು ಅಸಮರ್ಥನಾಗುವ ಕಾರಣ ನಾನು ಕೆಲವೊಮ್ಮೆ ಅಳುತ್ತೇನೆ. ಈ ಪ್ರಶ್ನೆಯು ನನ್ನ ಜೀವನವನ್ನು ಬಹುತೇಕ ಮುಚ್ಚಿ ಹಾಕಿದೆ. ತಿಳುವಳಿಕೆಯ ಒಂದು ಸ್ಥಾನದಿಂದ ಕೆಲಸ ಮಾಡಲು ನಾನು ಸಮರ್ಥನಾಗುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೀನು ನಿನ್ನನ್ನೇ ಒಂದು ತಿಳಿಯಲಿರುವ ವಸ್ತುವನ್ನಾಗಿ ಮಾಡಲು ಸಾಧ್ಯವಿಲ್ಲ. ನೀನು ತಿಳಿಯುವವನಾಗಿರುವೆ.

ಒಂದು ಮಗುವು ತನ್ನ ತಾಯಿಯನ್ನು ಒಂದು ಅರಿಯಲಿರುವ ವಸ್ತುವನ್ನಾಗಿ ಮಾಡುವುದಿಲ್ಲ, ಮಾಡುತ್ತದೆಯೇ? ಒಂದು ಮಗುವು ಎದ್ದ ತಕ್ಷಣ ಅದು, "ಅಮ್ಮ, ನೀನು ಎಲ್ಲಿಂದ ಬಂದೆ? ನೀನು ಯಾವ ಶಾಲೆಗೆ ಹೋದೆ? ನಿನ್ನ ತಾಯಿ ಯಾರು? ನಿನ್ನ ತಂದೆ ಯಾರು? ನಿನ್ನ ಹೆಸರೇನು?" ಎಂದು ಕೇಳುವುದಿಲ್ಲ.

ಒಂದು ಮಗುವು ಯಾರಲ್ಲಾದರೂ ಈ ಪ್ರಶ್ನೆಗಳನ್ನು ಕೇಳುತ್ತದೆಯೇ? ಇಲ್ಲ, ಮಗುವು ಸುಮ್ಮನೇ ತಾಯಿಯನ್ನು ಪ್ರೀತಿಸುತ್ತದೆ. ತಾಯಿ ಯಾರು, ಅವಳು ಎಲ್ಲಿ ಹುಟ್ಟಿದಳು ಅಥವಾ ಬೆಳೆದಳು ಅಥವಾ ಅವಳ ಹೆಸರೇನು ಎಂಬುದರ ಬಗ್ಗೆ ಅವನಿಗೆ ಚಿಂತೆಯಿಲ್ಲ. ಅದು ತಾಯಿಯನ್ನು ಅರಿವಿನ ಅಥವಾ ತಿಳಿಯುವ ಒಂದು ವಸ್ತುವನ್ನಾಗಿ ಮಾಡುವುದಿಲ್ಲ.

ಒಂದು ಮಗುವು ಸುಮ್ಮನೆ ತಾಯಿಯನ್ನು ಪ್ರೀತಿಸುತ್ತದೆ. ಅದೇ ರೀತಿಯಲ್ಲಿ ನೀನು ದೇವರನ್ನು ಅಥವಾ ಪರಮಾತ್ಮನನ್ನು ಒಂದು ತಿಳಿಯುವ ವಸ್ತುವನ್ನಾಗಿ ಮಾಡಲು ಸಾಧ್ಯವಿಲ್ಲ. ನೀನು ಕೇವಲ ಅದರೊಂದಿಗೆ ಇರಬಹುದಷ್ಟೆ. ಮತ್ತು ಅದಕ್ಕಾಗಿ ನೀನು ಸರಿಯಾದ ಜಾಗದಲ್ಲಿರುವೆ. ನೀನು ಮಾಡುತ್ತಿರುವ ಧ್ಯಾನ ಮತ್ತು ಈ ಅಭ್ಯಾಸಗಳು, ನಿಜವಾಗಿ ಅದಕ್ಕಿರುವ ಉತ್ತರವಾಗಿದೆ. ಸುಮ್ಮನೆ ಹಾಯಾಗಿರು.

ಪ್ರಶ್ನೆ: ಪ್ರೀತಿಯ ಗುರುದೇವ, ನಾನು ಯಾವತ್ತೂ ದೇವರನ್ನು ಅಸಂತುಷ್ಟಗೊಳಿಸುವ ಭಯದಲ್ಲಿರುತ್ತೇನೆ. ನನ್ನ ಕೆಲಸಗಳು ದೇವರನ್ನು ಸಂತುಷ್ಟಗೊಳಿಸುವುದೇ ಎಂಬುದರ ಬಗ್ಗೆ ನನಗೆ ಖಾತ್ರಿಯಿಲ್ಲ. ಇದನ್ನು ನಾನು ಬಗೆಹರಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ಚಿಂತಿಸಬೇಡ. ನಾನು ನಿನ್ನ ಪರವಾಗಿ ವಕಾಲತ್ತು ಮಾಡುವೆ. ನೀನು ವಿಶ್ರಾಮ ಮಾಡು. ಆದರೆ ನಿನ್ನದೇ ಆತ್ಮಸಾಕ್ಷಿಯನ್ನು ಚುಚ್ಚುವ ಯಾವುದೇ ಕೆಲಸವನ್ನು ಮಾಡಬೇಡ. ಹಲವು ಸಲ, ನಿಮ್ಮದೇ ಆತ್ಮಸಾಕ್ಷಿಯು ನಿಮ್ಮನ್ನು ಚುಚ್ಚುತ್ತದೆ. ಅದು ನಿಮಗೆ, "ಇಲ್ಲ, ನೀನಿದನ್ನು ಮಾಡಬಾರದು" ಅಥವಾ "ನೀನು ಅದನ್ನು ಯಾಕೆ ಮಾಡಲೇಬೇಕು?" ಎಂದು ಹೇಳುತ್ತದೆ.

ನಿನಗೆ ಯಾವುದನ್ನು ಮಾಡಲು ಹಿತವೆನಿಸುವುದೋ ಅದನ್ನು ಮಾತ್ರ ಮಾಡು.

ಪ್ರಶ್ನೆ: ಗುರುದೇವ, ತನ್ನ ಮಗುವಿನ ಗರ್ಭ ಧರಿಸುವ ಮೊದಲು ಮತ್ತು ನಂತರ ಒಬ್ಬಳು ಸ್ತ್ರೀಯು ತನ್ನನ್ನು ಆಧ್ಯಾತ್ಮಿಕವಾಗಿ ಹೇಗೆ ತಯಾರು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಯಾವುದಾದರೂ ಸಲಹೆಯಿದೆಯೇ?

ಶ್ರೀ ಶ್ರೀ ರವಿ ಶಂಕರ್: ಇಲ್ಲ, ನೀವು ಆಧ್ಯಾತ್ಮಿಕವಾಗಿರುವಿರಿ ಎಂಬುದನ್ನು ನೀವು ಸುಮ್ಮನೆ ನೆನಪಿಟ್ಟುಕೊಳ್ಳಬೇಕು.
ನೋಡು, ದೇವರ ಗುಣಗಳೇನು, ಅಥವಾ ದೈವಿಕತೆಯೆಂದರೇನು? ಯಾವುದು ಅಲ್ಲಿರುವುದೋ ಅದು; ಯಾವುದು ಸರ್ವವ್ಯಾಪಿಯೋ ಅದು. ಅದು ಎಲ್ಲೆಡೆಯಲ್ಲೂ ಇದೆ. ಅದು ನಿನ್ನಲ್ಲಿ ಇಲ್ಲವಾದರೆ, ಅದು ದೇವರಾಗುವುದೇ? ದೇವರ ಮೊದಲ ಲಕ್ಷಣವೇನು? ಸರ್ವವ್ಯಾಪಿತ್ವ! ಹಾಗಾದರೆ, ದೇವರು ಕೆಲವು ಸ್ಥಳಗಳಲ್ಲಿದ್ದು ಕೆಲವು ಸ್ಥಳಗಳಲ್ಲಿ ಇಲ್ಲದಿರಲು ಸಾಧ್ಯವೇ? ಇಲ್ಲ!
ಸರ್ವ್ಯಾಪಿಯೆಂದರೆ, ಎಲ್ಲೆಡೆಯೂ ಇರುವುದು. ಹಾಗಾಗಿ ಅದು ನಿನ್ನೊಳಗೂ ಇದೆ; ನಿನ್ನಲ್ಲಿ, ಹೌದು!
ಒಂದು ವಿಷಯ ಪಕ್ಕಾ ಆಯಿತು, ದೇವರು ನಿನ್ನಲ್ಲಿದ್ದಾನೆ.

ಮುಂದಿನ ಗುಣವೆಂದರೆ, ಅವನು ಶಾಶ್ವತನು. ಅವನು ಇದ್ದನು, ಅವನು ಇದ್ದಾನೆ ಮತ್ತು ಅವನು ಯಾವತ್ತೂ ಇರಲಿದ್ದಾನೆ. ಹಾಗಾದರೆ, ದೇವರು ವರ್ತಮಾನದ ಕ್ಷಣದಲ್ಲಿ ಇರುವುದಾದರೆ, ಅವನು ಈಗ ಇರುವನೇ? ಹೌದು! ಅವನು ನಿನ್ನಲ್ಲಿರುವನು ಮತ್ತು ಅವನು ಈಗ ಇರುವನು.

ನಂತರ, ಅವನು ಎಲ್ಲರಿಗೂ ಸೇರಿದವನು. ಹಾಗಾದರೆ, ಅವನು ನಿನಗೆ ಸೇರಿದವನೇ? ಹೌದು ಅವನು ನಿನಗೆ ಸೇರಿದ್ದಾನೆ!
ಮತ್ತು ಅವನು ಶಕ್ತನು.

ಕೇವಲ ಈ ನಾಲ್ಕು ಅಂಶಗಳನ್ನು ತೆಗೆದುಕೊಳ್ಳುವುದು ಮತ್ತು ವಿಶ್ರಾಮ ಮಾಡುವುದು, ಅಷ್ಟೇ ಇದು.

ಹಲವಾರು ಸಾರಿ, ದೇವರ ಬಗ್ಗೆ ಮಾತನಾಡುವಾಗ ನಾವು ’ಅವನು’ ಎಂದು ಹೇಳುತ್ತೇವೆ. ಆದರೆ ದೇವರು ಅವನೂ ಅಲ್ಲ, ಅವಳೂ ಅಲ್ಲ. ಹಾಗಾಗಿ ಪ್ರಾಚೀನ ಋಷಿಗಳು ’ಬ್ರಹ್ಮನ್’ ಎಂಬ ಒಂದು ಪದವನ್ನು ಆವಿಷ್ಕರಿಸಿದರು. ’ಬ್ರಹ್ಮನ್’ ಎಂಬುದು ಅವನೂ ಅಲ್ಲ, ಅವಳೂ ಅಲ್ಲ, ಅದೂ ಅಲ್ಲ, ಆದರೆ ಎಲ್ಲವೂ.

ನೀವದನ್ನು ಅವನು, ಅವಳು ಅಥವಾ ಅದು ಎಂದು ಕರೆಯಬಹುದು. ಆ ಬ್ರಹ್ಮನ್ ಎಲ್ಲೆಡೆಯೂ ಇದೆ; ಎಂದಿಗೂ ನಿಮ್ಮಲ್ಲಿದೆ ಮತ್ತು ಎಲ್ಲಾ ಸಮಯದಲ್ಲೂ ಇದೆ. ಬ್ರಹ್ಮನ್ ಎಲ್ಲರಿಗೂ ಸೇರಿದುದು, ನಿಮಗೆ ಸೇರಿದುದು ಮತ್ತು ಅದು ಶಕ್ತವಾಗಿದೆ. ನಿನಗೆ ಯೋಚಿಸಲು ಮತ್ತು ವಿಶ್ರಾಮ ಮಾಡಲು ಇಷ್ಟು ಸಾಕು.

ದೇವರು ನನ್ನಲ್ಲಿದ್ದಾನೆ, ದೇವರು ಈಗ ಇದ್ದಾನೆ, ದೇವರು ನನಗೆ ಸೇರಿದವನು ಮತ್ತು ಶಕ್ತನು.

ಪ್ರಶ್ನೆ: ಗುರುದೇವ, ಬ್ರಹ್ಮನನ್ನು ಅನುಭವಿಸುವುದಕ್ಕಾಗಿ ಬುದ್ಧಿಯನ್ನು ಅಂತರ್ಮುಖವಾಗಿ ತಿರುಗಿಸಬೇಕೆಂಬುದರ ಬಗ್ಗೆ ನೀವು ಉಪನಿಷತ್ತುಗಳಲ್ಲಿ ಹೇಳುತ್ತಿದ್ದಿರಿ. ಬಯಕೆಗಳಿರುವಾಗ ಇದು ಸಾಧ್ಯವೇ? ಈಗಲೂ ನಾನು, ಯಾವುದು ಸರಿಯಾದುದೋ ಅದರ ಬದಲಾಗಿ ಯಾವುದು ಚೆನ್ನಾಗಿರುವುದೋ ಅದನ್ನು ಆರಿಸಿಕೊಳ್ಳಲು ಪ್ರೇರಿತನಾಗುತ್ತೇನೆ. ನಾನೇನು ಮಾಡುವುದು? ನಿಮ್ಮನ್ನು ಪ್ರೀತಿಸುತ್ತೇನೆ. 

ಶ್ರೀ ಶ್ರೀ ರವಿ ಶಂಕರ್: ನನಗನ್ನಿಸುತ್ತದೆ, ನಿನ್ನನ್ನೇ ಪರೀಕ್ಷಿಸಿಕೊಳ್ಳಲು ನಿನ್ನಲ್ಲಿ ಬಹಳ ಸಮಯವಿದೆಯೆಂದು. ಹೇ, ವ್ಯಸ್ತನಾಗು. ಸ್ವಲ್ಪ ಸೇವೆ ಮಾಡು, ಯಾವುದಾದರೂ ಒಳ್ಳೆಯ ಕೆಲಸಗಳನ್ನು ಮಾಡು ಮತ್ತು ಸಹಜವಾಗಿರು.

ನಾನು, "ಓ, ನೀನು ತಿನ್ನುವುದಕ್ಕೆಲ್ಲಾ ಸ್ವಲ್ಪ ಕಹಿಯನ್ನು ಸೇರಿಸಿಕೊಳ್ಳಬೇಕು ಮತ್ತು ನೀನು ಒಳ್ಳೆಯ ಆಹಾರವನ್ನು ತಿನ್ನಲು ಯಾಕೆ ಬಯಸುವೆ?" ಎಂದು ಹೇಳುವವರಲ್ಲಿ ಒಬ್ಬನಲ್ಲ. ಇಲ್ಲ. ನೀನು ಒಳ್ಳೆಯ ಆಹಾರವನ್ನು ಇಷ್ಟಪಡುವುದಾದರೆ, ನೀನು ಒಳ್ಳೆಯ ಆಹಾರವನ್ನು ಸೇವಿಸಬೇಕು. ಆದರೆ ಅದಕ್ಕಾಗಿ ಹಾತೊರೆಯುವುದು, ಯಾವಾಗಲೂ ಅದರ ಬಗ್ಗೆ ಯೋಚಿಸುತ್ತಿರುವುದು ಒಳ್ಳೆಯದಲ್ಲ.

ಪ್ರಶ್ನೆ: ಪ್ರೀತಿಯ ಗುರುದೇವ, ಕಾಣುವುದನ್ನು ಮೀರಿ ಹೋಗಲು ಅಥವಾ ಜ್ಞಾನೋದಯವನ್ನು ಪಡೆಯಲು ಒಬ್ಬನು ಎಲ್ಲಾ ೫ ಶರೀರಗಳನ್ನು ಅನುಭವಿಸಬೇಕೆಂಬುದಾಗಿ ನಾನು ಒಮ್ಮೆ ಓದಿದ್ದೆ. ಇದು ಯಾಕೆ ಒಂದು ಭಯಾನಕ ಯೋಚನೆಯಾಗಿದೆ? ನಾನು ವಿಸ್ತರಿಸುವುದನ್ನು ಕಲ್ಪಿಸಿಕೊಳ್ಳುವಾಗ ಅಥವಾ ನಿಜವಾಗಿ ನಾನದನ್ನು ಅನುಭವಿಸುವಾಗ, ನನಗೆ ಭಯವಾಗುತ್ತದೆ.

ಶ್ರೀ ಶ್ರೀ ರವಿ ಶಂಕರ್: ಚಿಂತಿಸಬೇಡ, ಸುಮ್ಮನೆ ವಿಶ್ರಾಮ ಮಾಡು. ಇದಕ್ಕಾಗಿಯೇ ನಿಮಗೆ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಒಬ್ಬರು ಗುರುವಿನ ಅಗತ್ಯವಿರುವುದು; ಗುರುವು, "ಚಿಂತಿಸಬೇಡ, ನಾನಿಲ್ಲಿರುವೆನು" ಎಂದು ಹೇಳಲೆಂದು.

"ಚಿಂತಿಸಬೇಡ, ನಾನಿಲ್ಲಿರುವೆನು" ಎಂಬುದನ್ನು ನೀವು ಗುರುವಿನಿಂದ ಕೇಳುವಾಗ, ನೀವು ಮುಂದೆ ಸಾಗಲಿರುವ ವಿಶ್ವಾಸವನ್ನು ಪಡೆಯುತ್ತೀರಿ.

ಪ್ರಶ್ನೆ: ಗುರುದೇವ, ಇತರ ಗ್ರಹಗಳ ಮೇಲೆ ಜೀವವಿದೆಯೆಂದು ನೀವು ಹೇಳಿದ್ದೀರಿ. ಒಂದು ಆತ್ಮವು ಪುನರ್ಜನ್ಮ ಪಡೆಯುವಾಗ, ಯಾವತ್ತೂ ಅದು, ಯಾವ ಗ್ರಹದಿಂದ ಸಂಸ್ಕಾರಗಳನ್ನು ಪಡೆದಿರುವುದೋ ಅದೇ ಗ್ರಹಕ್ಕೆ ಹಿಂದಿರುಗಿ ಹೋಗುವುದೇ ಅಥವಾ ಅದು ಇನ್ನೊಂದು ಗ್ರಹಕ್ಕೆ ದಾರಿ ಬದಲಾಯಿಸಬಲ್ಲದೇ? 

ಶ್ರೀ ಶ್ರೀ ರವಿ ಶಂಕರ್: ಎಲ್ಲವೂ ಸಾಧ್ಯವಿದೆ. ದಾರಿ ಬದಲಾವಣೆಯು ಬಹಳ ಮಟ್ಟಿಗೆ ಸಾಧ್ಯವಿದೆ.

ಪ್ರಶ್ನೆ: ನಾವೆಲ್ಲರೂ ಜ್ಞಾನೋದಯದ ಕಡೆಗಿರುವ ಪಥದ ಮೇಲಿದ್ದೇವೆ. ಈ ಜನ್ಮದಲ್ಲಿ ನಾವದನ್ನು ಸಾಧಿಸದೇ ಇದ್ದರೆ, ನಾವೆಲ್ಲಿ ಬಿಟ್ಟೆವೋ ಅಲ್ಲಿಂದಲೇ ನಾವು ಹೆಕ್ಕಿಕೊಳ್ಳುವೆವೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಸರಿ.

ಪ್ರಶ್ನೆ: ಅತ್ಯಂತ ಪ್ರೀತಿಯ ಶ್ರೀ ಶ್ರೀ, ನಾವು ಶಾಶ್ವತವೆಂಬುದಾಗಿ ನಾನು ನಂಬುತ್ತೇನೆ. ಆದರೆ ಶಾಶ್ವತ ಎಂಬುದರ ಅರ್ಥವೇನು?

ಶ್ರೀ ಶ್ರೀ ರವಿ ಶಂಕರ್: ಕೇಳು, ಸೂರ್ಯನು ಒಂದು ದೀರ್ಘಕಾಲದಿಂದ ಅಲ್ಲಿರುವನು, ಸರಿಯಾ? ಮತ್ತು ಅವನು ಅಲ್ಲಿರುವುದು ಮುಂದುವರಿಯಲಿದೆ. ಹಾಗಾಗಿ ಸೂರ್ಯನು ಶಾಶ್ವತ; ಭೂಮಿಯು ಶಾಶ್ವತ. ಸಮಯವನ್ನು ಮೀರಿದುದೆಲ್ಲವೂ ಶಾಶ್ವತವಾದುದು.

ಉದಾಹರಣೆಗೆ, ನೀನು ನಿನ್ನೆ, ಇಂದು ಮತ್ತು ನಾಳೆ ಅದೇ ವ್ಯಕ್ತಿಯಾಗಿರುವೆ. ಶಾಲೆಗೆ ಹೋದವನೊಬ್ಬನು ನೀನಾಗಿರುವೆ ಮತ್ತು ಕಾಲೇಜಿಗೆ ಹೋದವನೊಬ್ಬನು ನೀನಾಗಿರುವೆ. ಮುಂದುವರಿಯುತ್ತಿರುವುದು ಏನೋ ಒಂದು ನಿನ್ನಲ್ಲಿದೆ, ಆದರೆ ನಿನ್ನ ಶರೀರವು ಬದಲಾಗಿದೆ. ಶರೀರವು ಅದೇ ಅಲ್ಲ, ನಿನ್ನ ಶರೀರದಲ್ಲಿರುವ ಪ್ರತಿಯೊಂದು ಜೀವಕೋಶವೂ ಬದಲಾಗುತ್ತಿದೆ. ಹಳೆಯ ಜೀವಕೋಶಗಳು ಹೋಗುತ್ತಿವೆ, ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತಿವೆ. ಆದರೂ ಒಳಗೆ ಮುಂದುವರಿಯುತ್ತಿರುವುದು ಏನೋ ಇದೆ, ಅಲ್ಲವೇ?

ಪ್ರಶ್ನೆ: ಗುರುದೇವ, ನನ್ನ ಕರೆಯನ್ನು ಅಂದಾಜು ಮಾಡಲು ದಯವಿಟ್ಟು ನನಗೆ ಸಹಾಯ ಮಾಡಿ.

ಶ್ರೀ ಶ್ರೀ ರವಿ ಶಂಕರ್: ನೀನು ಯಾಕೆ ಕುಳಿತುಕೊಂಡು ಹೆಚ್ಚಿನ ಕರೆಗಾಗಿ ಕಾಯುತ್ತಿರುವೆ? ಮಧ್ಯಾಹ್ನದ ಸಮಯದಲ್ಲಿ ಸೂರ್ಯನನ್ನು ಹುಡುಕಲು ತೊಡಗಬೇಡ. ನೀನು ಈಗಾಗಲೇ ಸರಿಯಾದ ಜಾಗದಲ್ಲಿರುವೆ. ಇದುವೇ ನಿನ್ನ ಕರೆ!
ಒಂದು ಜಾಗತಿಕ ವಿದ್ಯಮಾನವು ನಡೆಯುತ್ತಿದೆ; ಲಕ್ಷಾಂತರ ಜನರು ಲೌಕಿಕ ಮನಸ್ಸಿನಿಂದ ಒಂದು ಆಧ್ಯಾತ್ಮಿಕ ಹಂತದ ಕಡೆಗೆ ತಿರುಗುತ್ತಿದ್ದಾರೆ. ಪ್ರಪಂಚದ ಸುತ್ತಲೂ ಒಂದು ಕ್ರಾಂತಿಯಾಗುತ್ತಿದೆ.

ನಿನಗೆ ಗೊತ್ತಾ, ಕಳೆದ ಸೆಪ್ಟೆಂಬರ್‌ನಲ್ಲಿ ನಾನು ದಕ್ಷಿಣ ಅಮೇರಿಕಾದಲ್ಲಿದ್ದಾಗ, ನಾನು ಅರ್ಜೆಂಟೀನಾಕ್ಕೆ ಹೋದೆ. ಅಲ್ಲೊಂದು ಸೆರೆಮನೆಯಿದೆ, ಅಲ್ಲಿ ೫,೨೦೦ ಅರ್ಜೆಂಟೀನಾದ ಕೈದಿಗಳು ಕೋರ್ಸನ್ನು ಮಾಡಿದ್ದಾರೆ. ಬ್ರೆಝಿಲ್‌ನಲ್ಲಿ ಕೂಡಾ ಹಾಗೆಯೇ.
ನಾನು ರಿಯೋಕ್ಕೆ ಹೋಗಿದ್ದಾಗ, ಅಲ್ಲಿನ ಸೆರೆಮನೆಯಲ್ಲಿ, ’ದ ಆರ್ಟ್ ಆಫ್ ಲಿವಿಂಗ್ ಸೆಂಟರ್’ ಎಂದು ಬರೆದಿದ್ದ ಒಂದು ಕೋಣೆ ನನಗೆ ಕಾಣಿಸಿತು. ಸೆರೆಮನೆಯೊಳಗೆ ಅವರು ನನ್ನ ಚಿತ್ರವನ್ನು, ಆರ್ಟ್ ಆಫ್ ಲಿವಿಂಗ್ ಪುಸ್ತಕಗಳು ಮತ್ತು ಟೇಪ್‌ಗಳನ್ನು ಇಟ್ಟಿದ್ದಾರೆ. ಜನರು ಪ್ರತಿದಿನವೂ ಬಂದು ಆಂತರಿಕ ಶಾಂತಿಯನ್ನು ಕಂಡುಕೊಳ್ಳುವುದು ಇಲ್ಲಿಯೇ. ನಾನು ಅಲ್ಲಿಗೆ ಹೋದಾಗ, ಅವರೆಲ್ಲರೂ ಗದ್ಗದಿತರಾಗಿದ್ದರು. ಅವರು ಅಳುತ್ತಿದ್ದರು. "ನಮ್ಮ ಜೀವನವು ಸಂಪೂರ್ಣವಾಗಿ ಪರಿವರ್ತನೆಗೊಂಡಿದೆ" ಎಂದು ಅವರು ಹೇಳುತ್ತಿದ್ದರು. ಅಲ್ಲಿ ಒಳ್ಳೆಯ ಜನರಿದ್ದಾರೆ.

ಅರ್ಜೆಂಟೀನಾದಲ್ಲೂ ಹಾಗೆಯೇ. ಅಲ್ಲಿ ಕಣ್ಣುಗಳು ಶುಷ್ಕವಾಗಿದ್ದ ಒಬ್ಬನೇ ಒಬ್ಬ ವ್ಯಕ್ತಿಯೂ ಇರಲಿಲ್ಲ. ನಗರದಿಂದ, ಪರಮೋಚ್ಛ ನ್ಯಾಯಾಲಯದಿಂದ ಬಂದ ನ್ಯಾಯಾಧೀಶರು, ಆಗಿರುವ ದೊಡ್ಡ ಮಾರ್ಪಾಟನ್ನು ತಾವು ಬಂದು ನೋಡಲು ಬಯಸಿದುದಾಗಿ ಹೇಳಿದರು. ಸೆರೆಯಾಳುಗಳನ್ನು ನೋಡಲು ಮತ್ತು ಅವರ ಅನುಭವಗಳನ್ನು ಕೇಳಲು ಅವರು ನನ್ನೊಂದಿಗೆ ಬಂದರು. ಜಗಳವಾಡುತ್ತಿದ್ದ, ಪರಸ್ಪರರಿಗೆ ಹೊಡೆಯುತ್ತಿದ್ದ ಅದೇ ಸೆರೆಯಾಳುಗಳು ಬದಲಾಗಿದ್ದರು.

ಸೆರೆಮನೆಯಲ್ಲಿ ಶಾಂತಿಯನ್ನು ಕಾಪಾಡುವುದು ಸೆರೆಮನೆ ಅಧಿಕಾರಿಗಳಿಗೆ ಬಹಳ ಕಷ್ಟವಾಗಿತ್ತು. ಈಗ ಅದು ಸಂಪೂರ್ಣವಾಗಿ ಬದಲಾಗಿದೆ.

ಈಗ, ಅವರೆಲ್ಲರೂ ಒಂದು ಬಿಲ್ಲೆಯನ್ನು ಧರಿಸುತ್ತಾರೆ ಮತ್ತು ಅಹಿಂಸೆಗಾಗಿ ಪಣ ತೊಡುತ್ತಾರೆ. "ನಾವು ಜಗಳ ಮಾಡೆವು; ನಾವು ಶಾಂತಿಯನ್ನು ಬೆಂಬಲಿಸುತ್ತೇವೆ" ಎಂದು ಅವರು ಹೇಳುತ್ತಾರೆ.

ಮಾಡಬೇಕಾದ ಕೆಲಸ ಬಹಳಷ್ಟಿದೆ. ಕುಳಿತುಕೊಂಡು, ಒಂದು ದಿನ ಒಳಗಿನಿಂದ ಯಾರೋ ಒಬ್ಬರು ನಿಮ್ಮನ್ನು ಕರೆಯುವರು ಎಂಬ ಒಂದು ಕಾಲ್ಪನಿಕ ಕರೆಗಾಗಿ ಕಾಯಬೇಡಿ. ಕರೆಯು ಗಟ್ಟಿಯಾಗಿಯೂ ಸ್ಪಷ್ಟವಾಗಿಯೂ ಇದೆ, ಸುಮ್ಮನೇ ಸೇರಿಕೊಳ್ಳಿ. ಇಲ್ಲಿ ಬಹಳಷ್ಟು ಕೆಲಸವಿದೆ. ಸೇವಾ ಯೋಜನೆಗಳಲ್ಲಿ ಯಾವುದನ್ನಾದರೂ ತೆಗೆದುಕೊಳ್ಳಿ.

ಇತ್ತೀಚೆಗೆ ನಾನು ಭಾರತದಲ್ಲಿ, ದೂರದ ಬುಡಕಟ್ಟು ಪ್ರದೇಶಗಳಲ್ಲಿ ಶಾಲೆಗಳಲ್ಲೊಂದಕ್ಕೆ (ಆರ್ಟ್ ಆಫ್ ಲಿವಿಂಗ್) ಹೋದೆ. ಆ ಶಾಲೆಯಲ್ಲಿನ ಮಕ್ಕಳ ಹೆತ್ತವರು ಯಾವತ್ತೂ ಒಂದು ಶಾಲೆಯನ್ನು ನೋಡಿಲ್ಲ. ಮಕ್ಕಳು, ಶಾಲೆಗೆ ಹೋಗುವ ಮೊದಲ ಪೀಳಿಗೆಯವರು. ನಾನು ಅಲ್ಲಿಗೆ ಹೋದಾಗ, ಅವರೊಂದು ಕಂಪ್ಯೂಟರ್‌ನ ಬಳಿ ಕುಳಿತಿದ್ದರು; ಒಂದು ದೂರದ ಹಳ್ಳಿಯಲ್ಲಿ. ಆ ಬದಲಾವಣೆಯನ್ನು ನೋಡುವುದು ಬಹಳ ಹೃದಯಸ್ಪರ್ಷಿಯಾಗಿತ್ತು.

ಬಹಳಷ್ಟು ಕೆಲಸ ನಡೆಯುತ್ತಿದೆ. ನಮಗೆ ಹೆಚ್ಚಿನ ಕೈಗಳು ಬೇಕಾಗಿವೆ.

ನೀನು ಯಾಕೆ ಇಲ್ಲಿಗೆ, ಈ ಆಶ್ರಮಕ್ಕೆ ಬರಬಾರದು ಮತ್ತು ಕಾಲಕಾಲಕ್ಕೆ ಜನರನ್ನು ಕರೆತರಬಾರದು? ಅದನ್ನು ಉಪಯೋಗಿಸು. ಗುರುದೇವ ಬರುವಾಗ ಮಾತ್ರವಲ್ಲ ನಾವು ಬರಬೇಕಾದುದು. ೧೦-೧೫ ಜನರ ಒಂದು ಗುಂಪನ್ನು ಮಾಡು ಮತ್ತು ಒಂದು ವಾರಾಂತ್ಯದಲ್ಲಿ ಅವರನ್ನು ಇಲ್ಲಿಗೆ ಕರೆತಾ. ಅವರು ಕೋರ್ಸನ್ನು ಮಾಡದೇ ಇದ್ದರೂ ಕೂಡಾ, ಪರವಾಗಿಲ್ಲ, ಆದರೂ ಅವರು ಬರಬಹುದು. ಸುಲಭವಾಗಿ ೨೦೦ ಜನರಿಗೆ ಇಲ್ಲಿ ಅವಕಾಶವಿದೆ.

ಅವರನ್ನು ತಂಡಗಳಲ್ಲಿ ಕರೆದುತನ್ನಿ. ಕುಳಿತುಕೊಂಡು ಸ್ವಲ್ಪ ಜ್ಞಾನವನ್ನು ಮಾತನಾಡಿ, ಒಂದು ಚಿಕ್ಕ ನಿರ್ದೇಶಿತ ಧ್ಯಾನವನ್ನು ಮಾಡಿ, ಒಳ್ಳೆಯ ಆಹಾರವನ್ನು ಸೇವಿಸಿ ಮತ್ತು ಅವರನ್ನು ಹಿಂದಕ್ಕೆ ಕರೆದುಕೊಂಡು ಹೋಗಿ. ಅಡುಗೆ ಶಾಲೆಯಲ್ಲಿ ಮುಂಚಿತವಾಗಿ ಹೇಳಿ, ಅವರು ನಿಮಗಾಗಿ ಕಡಿಮೆಯೆಂದರೂ ೪-೫ ವ್ಯಂಜನಗಳನ್ನು ತಯಾರು ಮಾಡುವರು. ಸ್ವಲ್ಪ ಒಳ್ಳೆಯ ಆಹಾರ, ಸ್ವಲ್ಪ ಹಾಡು, ನೃತ್ಯ ಮತ್ತು ನಂತರ ಅವರನ್ನು ಸುತ್ತಲೂ ಕರೆದುಕೊಂಡು ಹೋಗಿ.

ನೋಡಿ, ನೀವು ಮಾಡಬಹುದಾದ ಹಲವಾರು ವಿಷಯಗಳಿವೆ. ಹಲವಾರು ಜನರು ಖಿನ್ನತೆಗೊಳಗಾಗುತ್ತಿರುವರು ಮತ್ತು ದುಃಖಿತರಾಗಿರುವರು. ತಮ್ಮನ್ನು ತಮ್ಮ ಕೋಣೆಗಳಲ್ಲಿ ಬಂಧಿಸಿಟ್ಟು, ಕಾಲ್ಪನಿಕ ಪ್ರಪಂಚದಲ್ಲಿ ಕೇವಲ ಅಂತರ್ಜಾಲ ಮತ್ತು ದೂರದರ್ಶನಗಳೊಂದಿಗೆ ಇರುವರು. ಅವರನ್ನು ಅಲ್ಲಿಂದ ಹೊರತನ್ನಿ. ಬಂದು ನಿಮ್ಮ ಜೀವನವನ್ನು ಜೀವಿಸಿ ಎಂದು ಅವರಲ್ಲಿ ಹೇಳಿ.

"ನಾವು ಸಂತೋಷದ ಒಂದು ಅಲೆಯನ್ನು ಸೃಷ್ಟಿಸೋಣ" ಎಂದು ಅವರಿಗೆ ಹೇಳಿ. ಅವರಿಗೆ ತಿಳಿಸಿ ಕರೆತನ್ನಿ. ಇತರ ಜನರ ಜೀವನಗಳಲ್ಲಿ ಅಂತಹ ಒಂದು ಆಚರಣೆಯನ್ನು ತನ್ನಿ.