ಶನಿವಾರ, ಏಪ್ರಿಲ್ 27, 2013

ಮಾನವ ಜೀವನ ಅತ್ಯಮೂಲ್ಯವಾದದ್ದು

ನುಸಾ ದುವಾ, ಬಾಲಿ
೨೭ ಎಪ್ರಿಲ್ ೨೦೧೩

ಜೀವನದಲ್ಲಿ ಮೂರು ವಿಷಯಗಳು ಬಹಳ ಮುಖ್ಯವಾದವು: ಆಸಕ್ತಿ, ವಿರಕ್ತಿ ಮತ್ತು ಸಹಾನುಭೂತಿ.

ಆಸಕ್ತಿಯು ಜೀವನದಲ್ಲಿ ಅಗತ್ಯವಿದೆ. ನಿಮ್ಮಲ್ಲಿ ಆಸಕ್ತಿಯಿದ್ದಾಗ ಮಾತ್ರ, ನಿಮಗೆ ಯಾವುದಾದರೂ ಕೆಲಸವನ್ನು ಮಾಡಲು, ಏನನ್ನಾದರೂ ಸಾಧಿಸಲು ಸಾಧ್ಯವಾಗುವುದು. ಆದುದರಿಂದ ನಮ್ಮಲ್ಲಿ ಆಸಕ್ತಿಯಿರಬೇಕು.

ಆಸಕ್ತಿಯೊಂದಿಗೆ ವಿರಕ್ತಿ ಕೂಡಾ ಇರಬೇಕು. ಆಸಕ್ತಿಯೊಂದೇ ಕೆಲಸ ಮಾಡದು. ಬಹಳಷ್ಟು ಆಸಕ್ತಿಯಿರುವ ಜನರಿದ್ದಾರೆ, ಆದರೆ ಅದು ಅವರನ್ನು ಬಹಳ ಬೇಗನೇ ಬಳಲಿಸುತ್ತದೆ, ಸೊರಗಿಸುತ್ತದೆ. ಈಗಲೇ ಅಲ್ಲ  ಆಮೇಲೆ, ಅವರು ದಹಿಸಿ ಹೋಗಿರುತ್ತಾರೆ ಮತ್ತು ಕೆಲವೊಮ್ಮೆ ಅವರು ಖಿನ್ನರಾಗುತ್ತಾರೆ. ಇದು ಯಾಕೆಂದರೆ ಅವರಲ್ಲಿ ಬಹಳಷ್ಟು ಆಸಕ್ತಿಯಿರುತ್ತದೆ, ಆದರೆ ಅವರು ಬಯಸಿದ ಫಲಿತಾಂಶವನ್ನು ಪಡೆಯುವುದಿಲ್ಲ.

ಹೀಗೆ, ಆಸಕ್ತಿಯೊಂದಿಗೆ ನಿಮ್ಮಲ್ಲಿ ವಿರಕ್ತಿಯಿರಬೇಕು. ಅದೊಂದು ರಕ್ಷಣಾ-ಕವಾಟವಿದ್ದಂತೆ. ಅದು ವಿವೇಕವನ್ನು ತರುತ್ತದೆ ಮತ್ತು ನಿಮ್ಮ ಬುದ್ಧಿಯನ್ನು ಸ್ವಸ್ಥವಾಗಿರಿಸುತ್ತದೆ. ಅದು ಹೇಗೆಂದರೆ, ಉಸಿರನ್ನು ಒಳಕ್ಕೆಳೆಯುವುದು ಆಸಕ್ತಿ ಮತ್ತು ಉಸಿರನ್ನು ಹೊರಕ್ಕೆ ಬಿಡುವುದು ವಿರಕ್ತಿ.

ವಿರಕ್ತಿ ಮತ್ತು ಆಸಕ್ತಿಗಳೊಂದಿಗೆಯೇ ಸಹಾನುಭೂತಿ ಕೂಡಾ ಅಗತ್ಯವಾಗಿದೆ. ವಿರಕ್ತಿಯೊಂದಿಗೆ ನೀವು ಒಳ್ಳೆಯ ನಿದ್ರೆಯನ್ನು ಪಡೆಯಬಹುದು, ಆಸಕ್ತಿಯೊಂದಿಗೆ ನೀವು ಕೆಲಸಗಳನ್ನು ಉತ್ತಮವಾಗಿ ಸಾಧಿಸಬಹುದು ಮತ್ತು ಸಹಾನುಭೂತಿಯೊಂದಿಗೆ ನಿಮ್ಮ ವ್ಯಕ್ತಿತ್ವವು ಪ್ರಕಾಶಿಸುವುದು. ನಮ್ಮಲ್ಲಿ ಸಹಾನುಭೂತಿ, ವಿರಕ್ತಿ ಮತ್ತು ಆಸಕ್ತಿಗಳಿರಬೇಕು; ಈ ಎಲ್ಲದರ ಸಂತುಲನವು ಜೀವನದಲ್ಲಿ ಬಹಳ ಅತ್ಯಾವಶ್ಯಕವಾಗಿದೆ.

ಮತ್ತೆ, ಎಲ್ಲಿ ನೀವು ಸಹಾನುಭೂತಿಯಿಂದಿರಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಎಂಬುದು ನಿಮಗೆ ತಿಳಿದಿರಬೇಕು.

ನಿಮ್ಮ ಮಗುವು ಶಾಲೆಗೆ ಹೋಗುವುದಿಲ್ಲವೆಂದು ಅಳುತ್ತಿರುವುದಾದರೆ, ಅಲ್ಲಿ ನೀವು ಸಹಾನುಭೂತಿಯುಳ್ಳವರಾಗಿ, "ಓ, ನಾನು ಬಹಳ ಕರುಣಾಮಯಿ, ಮಗುವು ಶಾಲೆಗೆ ಹೋಗುವುದು ಬೇಡ, ಅವನು ಮನೆಯಲ್ಲಿರಲಿ" ಎಂದು ಹೇಳಲು ಸಾಧ್ಯವಿಲ್ಲ. ಇಲ್ಲ!
ಯಾರಾದರೂ ಕೆಟ್ಟ ಕೆಲಸಗಳನ್ನು ಮಾಡುತ್ತಿರುವುದಾದರೆ, ಯಾರಾದರೂ ಮಾದಕವಸ್ತುಗಳು ಅಥವಾ ಮದ್ಯಸಾರಕ್ಕೆ ತುತ್ತಾಗಿ ತಮ್ಮ ಜೀವನವನ್ನು ಹಾಳುಮಾಡುತ್ತಿರುವುದಾದರೆ, ನೀವು, "ಓ ನನಗೆ ಅವರ ಬಗ್ಗೆ ಬಹಳ ಸಹಾನುಭೂತಿಯಿದೆ" ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ, ನಿಮ್ಮ ಸಹಾನುಭೂತಿಯು, ದೃಢವಾಗಿರುವುದರಲ್ಲಿದೆ. ನೀವು ದೃಢವಾಗಿರಬೇಕು. ಹಾಗಾಗಿ ಇದೆಲ್ಲವೂ ಜೀವನದ ಬಗ್ಗೆ; ನಾವು ಹೇಗೆ ಒಡನಾಡಬಹುದು ಎಂಬುದರ ಬಗ್ಗೆಯಾಗಿದೆ.

ಈಗ, ಈ ಘಟನೆಗಳಿಗಿಂತ, ಈ ಸಂಭವಗಳಿಂದ ಮತ್ತು ಈ ಜೀವನಕ್ಕಿಂತ ಎಷ್ಟೋ ಹೆಚ್ಚು ಮಹತ್ತರವಾದುದು ಏನೋ ಇದೆ. ಎಷ್ಟೋ ಹೆಚ್ಚು ಗೂಢವಾದುದು ಏನೋ ಇದೆ. ನಿಜ ಜಗತ್ತೆಂದು ಕರೆಯಲ್ಪಡುವುದಕ್ಕಿಂತ ಎಷ್ಟೋ ಹೆಚ್ಚು ನಿಜವಾದುದು ಏನೋ ಇದೆ. ಅದನ್ನು ಸ್ವೀಕರಿಸುವುದು, ಜೀವನಕ್ಕೆ ಇನ್ನೂ ದೊಡ್ಡದಾದ ಒಂದು ಆಯಾಮವನ್ನು ಕೊಡುತ್ತದೆ. ಅದು ನಿಮ್ಮ ಕಣ್ಣುಗಳನ್ನು, ಸಾಮಾನ್ಯವಾದ ದಿನನಿತ್ಯದ ಲೌಕಿಕ ಜೀವನದಿಂದ, ಎತ್ತರದಲ್ಲಿರುವ ಒಂದು ಸತ್ಯಕ್ಕೆ ಎತ್ತುತ್ತದೆ.

ಸುಮ್ಮನೆ ಕಲ್ಪಿಸಿಕೊಳ್ಳಿ, ಈ ಚಂದ್ರ ಹಲವಾರು ಬಿಲಿಯಗಟ್ಟಲೆ ವರ್ಷಗಳಿಂದ ಅಲ್ಲಿದೆ; ಭೂಮಿಯು ೧೯ ಬಿಲಿಯನ್ ವರ್ಷಗಳಿಂದ ಇದೆ ಮತ್ತು ನೀವು ಇಲ್ಲಿ ಎಷ್ಟು ಸಮಯದಿಂದ ಇರುವಿರಿ? ಒಂದು ಅಲ್ಪಾವಧಿಯ ಕಾಲದಿಂದ. ಅದರ ಬಗ್ಗೆ ಯೋಚಿಸಿ, ೫೦ ವರ್ಷಗಳು, ೬೦ ವರ್ಷಗಳು ಅಥವಾ ೩೦ ವರ್ಷಗಳು ಇರಬಹುದು. ನೀವಿಲ್ಲಿ ಇನ್ನು ಎಷ್ಟು ಕಾಲ ಇರುವಿರಿ? ಇನ್ನೊಂದು ೩೦-೪೦ ವರ್ಷಗಳು, ಅಷ್ಟೇ! ಮುಗಿಯಿತು! ಹೀಗಿದ್ದರೂ, ನಮ್ಮ ಮನಸ್ಸು, "ಇಲ್ಲ! ನಾನು ಎಂದೆಂದಿನಿಂದಲೂ ಇಲ್ಲಿರುವೆನು" ಎಂದು ಹೇಳುತ್ತದೆ!

ಹೆಚ್ಚಾಗಿ, ಮಕ್ಕಳು ಬೆಳೆಯುತ್ತಿರುವುದನ್ನು ನೀವು ನೋಡುತ್ತಿರುವಿರಾದರೂ ನೀವು ಹಾಗೆಯೇ ಇರುವಿರಿ ಎಂಬುದಾಗಿ ನಿಮಗೆ ಕಾಣಿಸುತ್ತದೆ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ಅನುಭವವಾಗಿದೆ? "ಮಕ್ಕಳೆಲ್ಲರೂ ಬೆಳೆದು ದೊಡ್ಡವರಾದರು, ಆದರೂ ನಾನು ಹಾಗೆಯೇ ಇದ್ದೇನೆ, ನನಗೆ ವಯಸ್ಸೇ ಆಗಲಿಲ್ಲ." ಇದು ನಿಜ. ನಿಮ್ಮಲ್ಲೇನೋ ಇದೆ, ನೀವು ಹುಟ್ಟಿರುವಿರೆಂಬುದನ್ನು ಅಥವಾ ನೀವು ಸಾಯುವಿರೆಂಬುದನ್ನು ಅದು ಒಪ್ಪುವುದಿಲ್ಲ.

ಚೈತನ್ಯದಲ್ಲಿ, ಮನಸ್ಸಿನಲ್ಲಿ, ನಿಮ್ಮೊಳಗೆ ಆಳದಲ್ಲಿ ಏನೋ ಇದೆ - ಆತ್ಮ, ಅದಕ್ಕೆ ವಯಸ್ಸಾಗುವುದಿಲ್ಲ. ನಿಮ್ಮ ಸುತ್ತಲಿರುವ ಎಲ್ಲವೂ ಬದಲಾಗುವುದಾದರೂ ಕೂಡಾ, ಅದು ಬದಲಾಗುವುದೇ ಇಲ್ಲ. ಈ ಜನ್ಮದ ಮೊದಲು ಕೂಡಾ ಆತ್ಮವು ಅಲ್ಲಿತ್ತು. ಇದೊಂದೇ ಜನ್ಮವಲ್ಲ; ನಾವಿಲ್ಲಿ ಹಲವು, ಹಲವು ಜನ್ಮಗಳಲ್ಲಿದ್ದೆವು.

ಒಬ್ಬರು ಒಂದು ಸಮಯದಲ್ಲಿ ಕೇವಲ ಒಂದು ದಿನವನ್ನು ಮಾತ್ರ ನೆನಪಿನಲ್ಲಿಟ್ಟುಕೊಳ್ಳುವರು ಎಂದಿಟ್ಟುಕೊಳ್ಳೋಣ. ಮುಂದಿನ ದಿನ, ಹಿಂದಿನ ದಿನ ತಾವೇನಾಗಿದ್ದೆವು ಎಂಬುದನ್ನು ಅವರು ಮರೆಯುತ್ತಾರೆ. ಅಥವಾ ಒಬ್ಬರ ಸ್ಮರಣಾಶಕ್ತಿಯು ಎಷ್ಟೊಂದು ಕಡಿಮೆಯೆಂದರೆ, ತಾವು ಬೆಳಗ್ಗಿನಿಂದ ರಾತ್ರಿಯ ವರೆಗೆ ಏನು ಮಾಡಿದ್ದೇವೆಂಬುದು ಮಾತ್ರ ಅವರಿಗೆ ನೆನಪಿರುತ್ತದೆಯೆಂದು ಕಲ್ಪಿಸಿಕೊಳ್ಳಿ; ಅವರಿಗೆ ನಿನ್ನೆಯದೇನೂ ನೆನಪಿರುವುದಿಲ್ಲ ಅಥವಾ ಒಂದು ನಾಳೆಯಿರುವುದೆಂದು ಅವರು ಯೋಚಿಸುವುದಿಲ್ಲ. ಅದು, ಅಮ್ನೀಷಿಯಾದಿಂದ (ಮರೆವಿನ ರೋಗ) ಬಳಲುವ ಜನರಂತೆ. ಅವರಿಗೆ ಯಾವುದೂ ನೆನಪಿರುವುದಿಲ್ಲ. ನಾವೆಲ್ಲರೂ ಅಂತಹದ್ದೇ ಒಂದು ಮನಃಸ್ಥಿತಿಯಲ್ಲಿದ್ದೇವೆ. ಒಬ್ಬರು ಸಂಪೂರ್ಣವಾಗಿ ಮದ್ಯಪಾನ ಮಾಡಿದಾಗ, ಅವರು ಬೇರೆಲ್ಲವನ್ನೂ ಮರೆತುಬಿಡುತ್ತಾರೆ. ಅವರಿಗೆ ಯಾವುದೂ ನೆನಪಿರುವುದಿಲ್ಲ. ಅದೇ ರೀತಿಯಲ್ಲಿ, ನಾವಿಲ್ಲಿ ಮೊದಲು ಇದ್ದೆವು ಎಂಬುದು ಮತ್ತು ನಾವಿಲ್ಲಿ ಮತ್ತೆ ಇರಲಿದ್ದೇವೆಂಬುದು ಹಾಗೂ ಸಾವಿರಾರು ವರ್ಷಗಳ ಕಾಲ ನಾವಿಲ್ಲಿರುವುದನ್ನು ಮುಂದುವರಿಸಲಿದ್ದೇವೆಂಬುದು ನಮಗೆ ನೆನಪಿನಲ್ಲಿಲ್ಲ. ನಾವು ಈ ಸತ್ಯತೆಯ ಕಡೆಗೆ ನೋಡಬೇಕಾಗಿದೆ. ಆಗ ಜೀವನವು ನಿಜಕ್ಕೂ ಒಂದು ವಿಶಾಲವಾದ ಆಯಾಮವನ್ನು ತೆಗೆದುಕೊಳ್ಳುತ್ತದೆ.

ಇಲ್ಲಿ ಬಾಲಿಯಲ್ಲಿ, ಈ ಎಲ್ಲಾ ಚಿಕ್ಕ ದೇವಾಲಯಗಳಿರುವುದನ್ನು ನೀವು ನೋಡಿದ್ದೀರಾ? ದೇವಾಲಯದೊಳಗೆ ಯಾವುದೇ ಮೂರ್ತಿಯಿಲ್ಲ. ಯಾಕೆಂಬುದು ನಿಮಗೆ ಗೊತ್ತಾ? ಯಾಕೆಂದರೆ ಅದು ನಮ್ಮ ಪೂರ್ವಿಕರಿಗಾಗಿ ಇರುವುದು. ಪೂರ್ವಿಕರ ಆತ್ಮಕ್ಕಾಗಿ ಅವರು, ಸರಿಯಾದ ಒಂದು ಚಿಕ್ಕ ಆಸನವನ್ನು ಇಡುತ್ತಾರೆ.

ದೇವರಿಗಾಗಿರುವ ದೇವಾಲಯಗಳು ಕೂಡಾ ಇವೆ. ಹಲವಾರು ದೇವರುಗಳಿದ್ದಾರೆ, ಅವರೆಲ್ಲರೂ ಬರುತ್ತಾರೆ, ಅಲ್ಲಿ ಕುಳಿತುಕೊಳ್ಳುತ್ತಾರೆ, ನಿಮ್ಮನ್ನು ಹರಸುತ್ತಾರೆ ಮತ್ತು ನಿಮ್ಮನ್ನು ನೋಡಿಕೊಳ್ಳುತ್ತಾರೆ. ಇದು ಇಲ್ಲಿನ ನಂಬಿಕೆ. ನಿಜವಾಗಿ, ಇದು ಕೇವಲ ಒಂದು ನಂಬಿಕೆಯಲ್ಲ, ಅದೊಂದು ವಾಸ್ತವವೂ ಆಗಿದೆ.

ಹಲವಾರು ಹಂತಗಳ ವಾಸ್ತವಿಕತೆಯಿದೆ:

ಮೊದಲನೆಯದು ಪ್ರಕಾಶ, ಸರ್ವೋಚ್ಛ, ಒಬ್ಬ ದೇವರು, ಹಲವಾರು ದೇವರುಗಳಲ್ಲ, ಒಂದೇ ಒಂದು, ಅದು ಪರಮಾತ್ಮ.
ಪರಮಾತ್ಮನ ಕೆಳಗೆ, ಹಲವಾರು ವಿವಿಧ ಶಕ್ತಿಗಳು ಅಥವಾ ದೇವದೂತರು ಅಥವಾ ದೇವ ದೇವಿಯರು.

ಈ ಶಕ್ತಿಗಳ ಅಥವಾ ದೇವದೂತರ ಅಥವಾ ದೇವತೆಗಳ ಕೆಳಗೆ ಹಲವಾರು ಶಕ್ತಿಗಳಿವೆ.

ಈ ಶಕ್ತಿಗಳ ಕೆಳಗೆ ನಾವು ನೋಡುವ ವ್ಯಕ್ತವಾದ ಪ್ರಪಂಚವಿದೆ.

ಹೀಗೆ, ನಾವು ನೋಡುವುದೇನೆಂದರೆ ವ್ಯಕ್ತ ಜಗತ್ತು; ನಂತರ ಸೂಕ್ಷ್ಮ ಶಕ್ತಿಗಳಿವೆ, ಅವುಗಳು ಒಳ್ಳೆಯದು ಮತ್ತು ಕೆಟ್ಟದು ಆಗಿವೆ. ಅದರ ಮೇಲೆ ಇರುವುದು ದೇವತೆಯರು, ಪೂರ್ವಿಕರು; ಮತ್ತು ನಂತರ ಇರುವುದು ಪರಮಾತ್ಮ ಅಥವಾ ದೇವರು ಅಥವಾ ನೀವದನ್ನು ಏನು ಕರೆಯುತ್ತೀರೋ ಅದು.

ಈ ಪ್ರಪಂಚವು ಹಲವಾರು ಪದರಗಳಷ್ಟು ವಾಸ್ತವಿಕತೆಯಾಗಿದೆ; ಸತ್ಯವಾಗಿದೆ. ಆದುದರಿಂದ, ನೀವು ಈ ಶರೀರವನ್ನು ಬಿಟ್ಟುಹೋಗುವಾಗ, ನಿಮ್ಮ ಆತ್ಮವು ಹೋಗಿ, ಮರಳಿ ಬರಲು ಅದು ಇನ್ನೊಂದು ಶರೀರವನ್ನು ಪಡೆಯುವಲ್ಲಿಯವರೆಗೆ,  ಇನ್ನೊಂದು ಲೋಕದಲ್ಲಿ ಸ್ವಲ್ಪ ಸಮಯ ಉಳಿಯುತ್ತದೆ; . ಈ ಜೀವನ, ನಮ್ಮ ಮಾನವ ಜನ್ಮವು ಬಹಳ ಅಮೂಲ್ಯವಾದುದು ಯಾಕೆಂದರೆ, ಈ ಜನ್ಮದಿಂದ ನೀವು ಪ್ರಕಾಶದೊಂದಿಗೆ ವಿಲೀನಗೊಳ್ಳಬಹುದು. ಈ ಜನ್ಮದಲ್ಲಿ ನೀವು ಪ್ರೀತಿಯನ್ನು ವ್ಯಕ್ತಪಡಿಸಬಹುದು. ಮಾನವ ಶರೀರವು ಬಹಳ, ಬಹಳ ಅಮೂಲ್ಯವಾದುದು.

ನಾನು ಹೇಳಿದಂತೆ, ನಿಮ್ಮಲ್ಲಿ ಈ ಎಲ್ಲಾ ಚಿಕ್ಕ ಗುಡಿಗಳಿವೆಯಲ್ಲಾ? ಅದಿರುವುದು, ದೇವರು ನಿರಾಕಾರಿ, ಆದರೂ ಇಲ್ಲಿ ತನ್ನ ಇರುವಿಕೆಯ ಅನುಭವವಾಗುವಂತೆ ಮಾಡುತ್ತಾನೆ ಎಂಬುದನ್ನು ಸೂಚಿಸಲು. ಅದಕ್ಕಾಗಿಯೇ, ಇರುವಿಕೆಯನ್ನು ಅನುಭವಿಸುವುದು ಎಂದು ಹೇಳಲಾಗಿರುವುದು; ನೆನಪಿನಂತೆಯೇ. ನೀವು ತೀರಿ ಹೋದ ನಿಮ್ಮ ತಾಯಿಯನ್ನು ಅಥವಾ ತಂದೆಯನ್ನು  ಅಥವಾ ತಾತನನ್ನು ನೆನಪಿಸಿಕೊಳ್ಳುವಾಗ, ಅವರು ಯಾವತ್ತೂ ಅಲ್ಲಿ, ನಿಮ್ಮ ಮನಸ್ಸಿನಲ್ಲಿ ಇರುತ್ತಾರೆ, ಸರಿಯಾ? ಅವರ ಇರುವಿಕೆಯನ್ನು ಅನುಭವಿಸಬಹುದು, ಸ್ಮರಣೆಯು ಅವರನ್ನು ಅನುಭವಿಸುತ್ತದೆ; ಅವರು ನಿಮ್ಮ ಸ್ಮರಣೆಯಲ್ಲಿ ಇರುತ್ತಾರೆ. ಅದೇ ರೀತಿಯಲ್ಲಿ, ಬೇರೆ ಬೇರೆ ದೇವತೆಯರು, ದೇವದೂತರು ಅಥವಾ ದೇವ ದೇವಿಯರು, ನಮ್ಮ ಶರೀರದ ಪ್ರತಿಯೊಂದು ಭಾಗಕ್ಕಾಗಿ ಇದ್ದಾರೆ.

ಶರೀರದ ಪ್ರತಿಯೊಂದು ಭಾಗವು ಒಂದು ನಿರ್ದಿಷ್ಟ ದೇವತೆಯಿಂದ ಆಳಲ್ಪಡುತ್ತದೆ. ನಾವು ಅವರನ್ನು ನೆನಪಿಸಿಕೊಂಡಂತೆ, ಇರುವಿಕೆಯು ಮೇಲೆ ಬರುತ್ತದೆ; ಇರುವಿಕೆಯನ್ನು ನಾವು ಅನುಭವಿಸುತ್ತೇವೆ.

ಈ ನಂಬಿಕೆಯು ಪ್ರಪಂಚದ ಬಹುತೇಕ ಎಲ್ಲಾ ಸಂಪ್ರದಾಯಗಳಲ್ಲಿ ಇದೆ; ಮೆಕ್ಸಿಕೋ, ದಕ್ಷಿಣ ಅಮೇರಿಕಾದಿಂದ ಹಿಡಿದು ಮಂಗೋಲಿಯಾದ ವರೆಗೆ. ಹೀಗಿದ್ದರೂ, ಕೇವಲ ನಂಬಿಕೆಯೊಂದೇ ಕೆಲಸ ಮಾಡದು. ನೀವು ಧ್ಯಾನ ಮಾಡುವಾಗ ಏನಾಗುತ್ತದೆಯೆಂಬುದು ನಿಮಗೆ ಗೊತ್ತೇ? ವಾಸ್ತವಿಕತೆಯ ಇತರ ಲೋಕಗಳೊಂದಿಗೆ ನೀವೊಂದು ಸಂಬಂಧವನ್ನು ಸೃಷ್ಟಿಸುತ್ತಿರುತ್ತೀರಿ.

ನಿಮ್ಮ ಮನಸ್ಸು ಸ್ಥಿರವಾಗಿರುವಾಗ, ಧ್ಯಾನವು ಆಗುತ್ತಿರುವಾಗ ನೀವು ನಿಮ್ಮ ಸ್ವಂತ ಶರೀರದ ಎಲ್ಲಾ ಕೋಶಗಳನ್ನು ಶುದ್ಧಗೊಳಿಸುತ್ತಿರುವುದು ಮಾತ್ರವಲ್ಲ, ನಿಮ್ಮ ಸುತ್ತಲೂ ಧನಾತ್ಮಕ ಶಕ್ತಿಯನ್ನು ಹರಡುತ್ತಿರುತ್ತೀರಿ. ನಿಮ್ಮ ಧ್ಯಾನವು, ಈಗಾಗಲೇ ತೀರಿ ಹೋಗಿ ಇನ್ನೊಂದು ಬದಿಯನ್ನು ಸೇರಿದ ಜನರಿಗೆ ಶಾಂತಿ ಮತ್ತು ಆನಂದವನ್ನು ತರುತ್ತದೆ, ಇದು ಬಹಳ ಬಹಳ ಮುಖ್ಯವಾದುದು.

ನೀವು ಮೌನವಾಗಿರುವಾಗ, ನೀವು ಪ್ರಪಂಚದಿಂದ ಮನಸ್ಸಿನೊಳಕ್ಕೆ ವಿಷಯಗಳನ್ನು ಹಾಕುತ್ತಿರುವುದಿಲ್ಲ; ಶರೀರವನ್ನು ಮತ್ತು ಮನಸ್ಸನ್ನು ಶುದ್ಧೀಕರಿಸುವುದರೊಂದಿಗೆ, ನೀವು ನಿಮ್ಮನ್ನು ಮುಕ್ತವಾಗಿರಲು ಬಿಡುತ್ತೀರಿ. ಈ ಸಮಯದಲ್ಲಿ ನಿಮ್ಮ ಮನಸ್ಸಿನ ಮೇಲೆ ಕೆಲವು ಯೋಚನೆಗಳ ಸುರಿಮಳೆಯಾಗಬಹುದು. ಕೆಲವು ಹಳೆಯ ವಿಷಯಗಳು ಸುಮ್ಮನೆ ಬಂದು ನಿಮಗೆ ತೊಂದರೆ ಕೊಡಬಹುದು. ಪರವಾಗಿಲ್ಲ, ಹೆದರಬೇಡಿ. ನೀವು ಕುಳಿತಿರುವುದಷ್ಟೇ ಸಾಕು. ಏನೆಲ್ಲಾ ಆಗುವುದೋ ಅದೆಲ್ಲವೂ ಒಳ್ಳೆಯದಕ್ಕೇ.

ಹಳೆಯ ಯೋಚನೆಗಳು ಬಂದು ನಿಮಗೆ ತೊಂದರೆ ಕೊಡುತ್ತಿರುವುದಾದರೆ, ಪರವಾಗಿಲ್ಲ, ಅವುಗಳು ಸುಮ್ಮನೆ ಬರುತ್ತವೆ ಮತ್ತು ಹೋಗುತ್ತವೆ. ಹಾಗಿದ್ದರೂ, ಮೌನವನ್ನು ಕಾಪಾಡುವುದು ಬಹಳ ಬಹಳ ಅಮೂಲ್ಯವಾದುದು, ಕೇವಲ ನಿಮಗಾಗಿಯಲ್ಲ, ಆದರೆ ಸೂಕ್ಷ್ಮ ಲೋಕಕ್ಕಾಗಿ ಕೂಡಾ. ಪ್ರಪಂಚಕ್ಕಾಗಿ ಕೂಡಾ, ಯಾಕೆಂದರೆ ನೀವು ಮೌನವಾಗಿರುವ ಪ್ರತಿ ನಿಮಿಷವೂ, ನೀವು ಧ್ಯಾನ ಮಾಡುತ್ತಿರುವ ಪ್ರತಿ ನಿಮಿಷವೂ ನೀವು ಅಂತಹ ಧನಾತ್ಮಕ ಕಂಪನಗಳನ್ನು ಸೃಷ್ಟಿಸುತ್ತಿರುತ್ತೀರಿ!

ಜೊತೆಗೆ, ಪೂರ್ಣ ಚಂದ್ರ, ಸಾಗರ ಮತ್ತು ಧ್ಯಾನ, ಇವುಗಳೆಲ್ಲವೂ ಚೆನ್ನಾಗಿ ಹೊಂದಿಕೆಯಾಗುತ್ತವೆ. ಅತಿಯಾದ ಚಟುವಟಿಕೆಯಲ್ಲಿ ತೊಡಗಿದ್ದರೆ ಮನಸ್ಸು ಕ್ಷೋಭೆಗೊಳಗಾಗುವುದು. ಸಮಯದಿಂದ ಸಮಯಕ್ಕೆ, ನೀವು ನಿಮ್ಮನ್ನು ಚಟುವಟಿಕೆಯಿಂದ ಹಿಂದಕ್ಕೆ ತೆಗೆದುಕೊಂಡಾಗ ಕ್ಷೋಭೆಯು ಮಾಯವಾಗುತ್ತದೆ, ಧ್ಯಾನವು ಉಕ್ಕುತ್ತದೆ.