ಶುಕ್ರವಾರ, ಏಪ್ರಿಲ್ 12, 2013

ನರಕದ ಮೂರು ಬಾಗಿಲುಗಳು


೧೨.೦೪.೧೩
ಮಾಂಟ್ರಿಯಾಲ್, ಕೆನಡಾ


ಪ್ರ: ಆಪ್ತ ಗುರೂಜಿ, ನನಗೆ ಸಹಾಯವಾಗಿರುವ ವ್ಯಕ್ತಿಗೆ, ಅವರು ನನಗೆ ನೀಡಿರುವಂಥಹ ಎಲ್ಲಾ ಸಹಾಯ ಮತ್ತು ಕಾಳಜಿಗೆ ನಾನು ಹೇಗೆ ಕೃತಜ್ಞನಾಗಿರಲಿ? ನಾನು ನನ್ನ ಹಾದಿಯನ್ನು ಹಿಡಿದು ನಡೆಯಬಯಸುತ್ತೇನೆ ಎಂದು ಅವರಿಗೆ ನೋಯಿಸದೆ ಹೇಗೆ ಹೇಳಲಿ?

ಶ್ರೀ ಶ್ರೀ: ಅದನ್ನು ನೈಪುಣ್ಯದಿಂದ ಮಾಡಿ. ಈಗ ಅದೇನು ನೈಪುಣ್ಯ ಎಂದು ನನ್ನನ್ನು ಕೇಳಬೇಡಿ.
ಈ ಒಂದು ನುಡಿಯನ್ನು ನೆನಪಿನಲ್ಲಿಟ್ಟುಕೊಳ್ಳಿ, ಇದು ಬಹಳ ಉಪಯುಕ್ತ, ನರಕಕ್ಕೆ ಮೂರು ಬಾಗಿಲುಗಳು.
ನರಕ ಸೇರಲು ಮೂರು ಬಾಗಿಲುಗಳಿವೆ - ಕಾಮ, ಲೋಭ ಮತ್ತು ಕ್ರೋಧ. ಲೋಭ ನಿಮ್ಮನ್ನು ಆಳಿದರೆ, ಅದು ನಿಮ್ಮನ್ನು ನರಕಕ್ಕೆ ತಲುಪಿಸಲಿದೆ. ಅದಕ್ಕಾಗಿಯೇ, ಲೋಭವನ್ನು ಎಸೆದುಬಿಡಿ. ಕ್ರೋಧ ಮತ್ತು ಕಾಮಗಳೂ ಹೀಗೆಯೇ. ನೀವು ಬಹಳ ಕಾಮುಕರಾಗಿದ್ದರೆ, ನೀವು ಬೇರೆಯವರ ಭಾವನೆಗಳ ಬಗ್ಗೆ ಎಷ್ಟು ಕುರುಡಾಗುವಿರೆಂದರೆ ನೀವು ಅವರ ವೈಯಕ್ತಿಕತೆಯನ್ನು ಅತಿಕ್ರಮಿಸುತ್ತೀರಿ. ಕಾಮವೂ ನಿಮ್ಮನ್ನು ನರಕಕ್ಕೆಳೆಯುತ್ತದೆ. ಹಾಗಾಗಿ, ಕಾಮ, ಲೋಭ ಮತ್ತು ಕ್ರೋಧ, ಇವು ಮೂರು ನಿಮ್ಮ ಹಿಡಿತದಲ್ಲಿರದಿದ್ದರೆ, ಅವು ನಿಮ್ಮನ್ನು ವಶಪಡಿಸಿಕೊಳ್ಳುತ್ತವೆ ಮತ್ತು ನೀವು ನರಕ ಸೇರುತ್ತೀರಿ. ಅವು ನಿಮ್ಮ ವಶದಲ್ಲಿದ್ದರೆ ಆಗ ನೀವು ಭದ್ರವಾಗಿದ್ದೀರಿ. ಇದು ಸ್ಪಷ್ಟವಾಯಿತೇ?

ನಿಮ್ಮ ಸ್ವಂತ ಜೀವನದಲ್ಲಿ ಈ ಮೂರು ನಿಮ್ಮನ್ನು ಸೋಲಿಸಿವೆಯೋ ಎಂದು ನೋಡಿಕೊಳ್ಳಿ. ಹಾಗಿದ್ದರೆ ಅದು ನಿಮ್ಮನ್ನು ದೀನಗೊಳಿಸಿದೆ.

ನರಕ ಎಂದರೇನು? ದುಃಸ್ಥಿತಿ; ನಿಮ್ಮನ್ನು ಸಂಪೂರ್ಣವಾಗಿ ದುಃಖಕ್ಕೊಳಪಡಿಸುತ್ತದೆ. ಆದರೆ ಅವುಗಳು ನಿಮ್ಮ ಹತೋಟಿಯಲ್ಲಿದ್ದರೆ, ನೀವು ಹೇಳಿದಂತಿದ್ದರೆ, ನೀವು ಶಕ್ತಿವಂತರಾಗುತ್ತೀರಿ ಮತ್ತು ಅದು ನಿಮಗೆ ಹೆಚ್ಚಿನ ಸಂತೋಷವನ್ನು ತರುತ್ತದೆ.

ಪ್ರ: ಗುರುದೇವ, ನೀವು ಹೇಳಿದ್ದೀರಿ, ಒಬ್ಬ ವ್ಯಕ್ತಿ ತನಗೆ ಹಿಡಿಸದ ವ್ಯಕ್ತಿಯ ಬಗ್ಗೆ ಬಹಳ ಆಲೋಚಿಸುತ್ತಿದ್ದರೆ, ಆಗ ಆ ವ್ಯಕ್ತಿಯಂತೆ ಆಗಲಾರಂಭಿಸುತ್ತಾನೆ ಅಂತ. ನಾನು ನಿರಂತರವಾಗಿ ನನಗೆ ಇಷ್ಟವಾಗದಿರುವವರ ಬಗ್ಗೆ ಯೋಚಿಸುತ್ತಿರುತ್ತೇನೆ ಮತ್ತು ಅವರ ಗುಣಗಳು ಬೆಳೆಯುತ್ತಿವೆ. ನಾನು ಹೀಗೆ ಮಾಡುವುದನ್ನು ಹೇಗೆ ತಡೆಯಲಿ?

ಶ್ರೀ ಶ್ರೀ: ನೋಡಿ, ನಾನು ಇಷ್ಟು ಹೇಳುತ್ತೇನೆ, ವಿರಕ್ತಿಯಿಲ್ಲದೆ ಜೀವನದಲ್ಲಿ ಬೆಳವಣಿಗೆಯಿಲ್ಲ. ನಿಮಗೆ ಜೀವನದಲ್ಲಿ ಮುನ್ನಡೆಯಬೇಕಿದ್ದರೆ, ನಿಮ್ಮಲ್ಲಿ ವಿರಕ್ತಿಯಿರಬೇಕು. ವಿರಕ್ತಿಯು ನಿಮ್ಮ ಮನಸ್ಸಿಗೆ ಬಿಡುಗಡೆ ತರುತ್ತದೆ. ವಿರಕ್ತಿಯು ನಿಮ್ಮನ್ನು ವರ್ತಮಾನ ಕ್ಷಣದಲ್ಲಿರಿಸುತ್ತದೆ. ವಿರಕ್ತಿಯು ನಿಮ್ಮ ಮುಖದಲ್ಲಿ ಆ ಮುಗುಳ್ನಗೆಯನ್ನು ತರುತ್ತದೆ; ಅದು ನಿಮ್ಮಲ್ಲಿ ಆ ಶಕ್ತಿ ಮತ್ತು ಲವಲವಿಕೆಯನ್ನು ತರುತ್ತದೆ.

ನೀವು ಯಾವುದಕ್ಕೆ ಗಂಟು ಬಿದ್ದಿದ್ದೀರಿ? ಯಾರನ್ನೋ ದ್ವೇಷಿಸುತ್ತೀರಾ? ಯಾತಕ್ಕಾಗಿ?

ಈ ಜಗತ್ತು ಅಂಥ ಜನರನ್ನು ಖಂಡಿತ ಹೊಂದಿರುತ್ತದೆ, ಯಾವಾಗಲೂ. ಈ ಭೂಮಿ ಮೇಲೆ, ಇತಿಹಾಸದಲ್ಲಿ ದುಷ್ಟರು ಇಲ್ಲದೇ ಇದ್ದಂಥ ಒಂದು ಸಮಯವನ್ನು ನನಗೆ ಹೇಳಿ ಅಥವಾ ಇತರರಿಗೆ ತೊಂದರೆ ಕೊಡದಂಥ  ಜನರು ಇದ್ದುದನ್ನು ಹೇಳಿ? ಅಂಥ ಜನರು ಯಾವತ್ತೂ ಇದ್ದು ಬಂದಿದ್ದಾರೆ, ಮತ್ತು ಈ ಜಗತ್ತು ಅಂಥ ಜನರನ್ನು ಹೊಂದುವುದನ್ನು ಮುಂದುವರಿಸುತ್ತದೆ.

ಈಗ ನೀವವರನ್ನು ನಿಮ್ಮ ಜಗತ್ತಿನಲ್ಲಿಟ್ಟು ಕೊಳ್ಳಬಯಸುತ್ತೀರಾದರೆ, ನಾವೇನು ಮಾಡಬಹುದು? ಇದನ್ನು ಸಾಧ್ಯವಾಗಿಸುತ್ತಿರುವುದು ನೀವು, ನಿಮ್ಮ ತಲೆಯಲ್ಲಿ ಅವರನ್ನು ಇಟ್ಟುಕೊಳ್ಳುವುದರಿಂದ. ದುರದೃಷ್ಟಕರ ಘಟನೆಯೊಂದು ನಡೆಯಿತು, ಅದು ನಡೆದಾಯಿತು, ನೀವು ಮುನ್ನಡೆಯಬೇಕು. ಕುಳಿತು ಅದನ್ನೇ ಮೆಲ್ಲುತ್ತಿರಬೇಡಿ.

ವಿರಕ್ತಿಯೆಂದರೆ ಹಿಂದೆ ನಡೆದುದನ್ನು ಬಿಟ್ಟುಬಿಡುವುದು ಮತ್ತು ಎಲ್ಲವೂ ಒಂದು ದಿನ ಕೊನೆಗೊಳ್ಳಲಿದೆ, ಅವರನ್ನೂ ನಿಮ್ಮನ್ನೂ ಸೇರಿಸಿ ಎಲ್ಲರೂ ಎಲ್ಲರೂ ಕಾಲಾಧೀನವಾಗಲಿದ್ದಾರೆ, ಕನಿಷ್ಟ ಪಕ್ಷ ಅದಕ್ಕಾಗಿಯಾದರೂ ನಿಮ್ಮ ಮನಸ್ಸನ್ನು ಖಾಲಿಯಾಗಿಟ್ಟುಕೊಳ್ಳಿ. ಇವೆಲ್ಲ ವಿವಿಧ ಪಾತ್ರಗಳ ನಿರ್ವಹಣೆ ಎಂದು ತಿಳಿದಿರಿ. ಕೆಲವೊಮ್ಮೆ, ಇದೊಂದು ಭಯಾನಕ ಚಲನಚಿತ್ರದಂತೆ, ಏನ್ನು ಮಾಡಬಹುದು? ಅದರ ಅರ್ಥ, ಭಯಾನಕ ಘಟನೆಗಳಾಗುತ್ತಿರುವಾಗ ನೀವು ಜಡವಾಗಿರಿ ಎಂದಲ್ಲ.

ದರೋಡೆ ನಡೆಯುತ್ತಿರುವಾಗ, ಬಲಾತ್ಕಾರ ನಡೆಯುತ್ತಿರುವಾಗ, ಅಥವಾ ಸಮಾಜದಲ್ಲೇನೋ ದುಷ್ಕೃತ್ಯ ನಡೆಯುತ್ತಿರುವಾಗ, ಅದನ್ನು ನಿಲ್ಲಿಸುವುದಕ್ಕಾಗಿ ನೀವು ಎದ್ದು ನಿಲ್ಲಬೇಕು. ಇದನ್ನು ಮಾಡುವ ಶಕ್ತಿ ನಿಮಗೆ ಯಾವಾಗ ಸಿಗುತ್ತದೆ? ನಿಮ್ಮ ಮನಸ್ಸಿನಲ್ಲಿ ವಿರಕ್ತಿಯಿದ್ದಾಗ. ಆಗ ನೀವು ಎದ್ದು ನಿಲ್ಲಬಹುದು, ಇಲ್ಲವಾದರೆ ನೀವೆಂಥ ಕೃತ್ಯ ನಡೆಸುತ್ತೀರೆಂದರೆ ಅದರಿಂದ ನೀವು ತೊಳಲಾಟ ಅನುಭವಿಸುತ್ತೀರಿ. ನೀವು ಸ್ವತಃ ಒಬ್ಬ ಅಪರಾಧಿಯಾಗುತ್ತೀರಿ.

ಒಬ್ಬ ಅಪರಾಧಿ ಇನ್ನೊಬ್ಬ ಅಪರಾಧಿಯಿಂದ ನಾಶವಾಗುವುದಿಲ್ಲ. ನೀವು ಆ ಅಪರಾಧಿಯನ್ನು ತೊಲಗಿಸಲು ಪ್ರಯತ್ನಿಸುತ್ತೀರಿ ಮತ್ತು ನೀವು ಇನ್ನೊಬ್ಬ ಅಪರಾಧಿಯಾಗುತ್ತೀರಿ. ಒಬ್ಬ ಬಲಿಪಶುವು ಇನ್ನೊಬ್ಬ ಬಲಿಪಶುವನ್ನು ತೊಲಗಿಸಲಾಗುವುದಿಲ್ಲ. ನಿಮ್ಮ ಸ್ವಂತ ಕ್ರೋಧ ಮತ್ತು ಸಿಟ್ಟಿಗೆ ನೀವು ತುತ್ತಾದವರಾಗಿದ್ದರೆ, ನೀವು ಇನ್ನೊಬ್ಬ ತುತ್ತಾದವರಿಗೆ ಹೇಗೆ ಸಹಾಯ ಮಾಡಬಹುದು?

ಅಪರಾಧಿಗಳನ್ನು ತೊಲಗಿಸುವುದಕ್ಕಾಗಿ ನೀವೂ ಒಬ್ಬ ಅಪರಾಧಿಯಾದರೆ, ನೀವು ಕೂಡಾ ಕಾರಾಗೃಹ ಸೇರಿಕೊಳ್ಳುತ್ತೀರಿ.
ಬಹಳ ಮಂದಿಗೆ ಆಗಿರುವುದು ಇದೇ. ಕಾರಾಗೃಹ ಸೇರಿಕೊಳ್ಳುವ ಬಹಳಷ್ಟು ಜನ ಅಷ್ಟೊಂದು ನೈತಿಕ ಆಚಾರದವರಾಗಿರುತ್ತಾರೆ. ಅವರು ಹೇಳುತ್ತಾರೆ, ’ಆ ವ್ಯಕ್ತಿ ನನಗೆ ಹಾಗೆ ಮಾಡಿದ್ದರಿಂದ ನಾನು ಇದನ್ನು ಮಾಡಿದ್ದು.’ ಇಲ್ಲ!

ಸೇಡು ತೀರಿಸಿಕೊಳ್ಳುವಿಕೆ ಏನನ್ನೂ ಸುಧಾರಿಸುವುದಿಲ್ಲ. ಅದು ಸಂಪೂರ್ಣ ಜಗತ್ತನ್ನು ಕುರುಡಾಗಿಸುತ್ತದೆ. ನಾವು ವಿರಕ್ತಿಯೊಂದಿಗೆ ಎದ್ದೇಳಬೇಕು ಮತ್ತು ಉನ್ನತ ಸಮಾಜಕ್ಕಾಗಿ ಕಾರ್ಯನಿರತರಾಗಬೇಕು; ಹಿಂಸಾ ಮುಕ್ತ ಸಮಾಜಕ್ಕಾಗಿ, ಇನ್ನೂ ಆಧ್ಯಾತ್ಮಿಕವಾಗಿರುವ ಸಮಾಜಕ್ಕಾಗಿ ಕೆಲಸ ಮಾಡಬೇಕು.

ಈ ಸಂಪೂರ್ಣ ಸಮಾಜವನ್ನು ಹೇಗೆ ಅಕ್ಷರಸ್ಥವನ್ನಾಗಿಸಿದ್ದೀರೋ ಹಾಗೆಯೇ. ಓದುವುದು ಮತ್ತು ಬರೆಯುವುದು ಹೇಗೆಂದು ಎಲ್ಲರಿಗೂ ಗೊತ್ತು. ಅವರು ಪ್ರಕಟಣಾ ಫಲಕಗಳನ್ನು ಓದಬಲ್ಲರು. ಕೆನಡಾದಲ್ಲಿ ಪ್ರಕಟಣಾ ಫಲಕಗಳನ್ನು ಓದಲು ತಿಳಿಯದ ಒಬ್ಬ ವ್ಯಕ್ತಿಯಿಲ್ಲ. ಯಾರಾದರೂ ಇದ್ದಾರೆಯೇ? ಇಲ್ಲ. ಅವರು ಯಾವ ವಿಷಯದಲ್ಲೂ ವಿದ್ವಾಂಸರಲ್ಲದಿದ್ದರೂ, ಕನಿಷ್ಠ ಪಕ್ಷ ಪ್ರಕಟಣಾ ಫಲಕಗಳನ್ನು ಓದಬಲ್ಲರು. ಅವರು ಓದುವುದು ಹೇಗೆ ಮತ್ತು ಬರೆಯುವುದು ಹೇಗೆ ಎಂದು ಬಲ್ಲರು. ನಾನು ಆಧ್ಯಾತ್ಮಿಕತೆಯು ಹಾಗೆ ಆಗಬೇಕೆಂದು ಬಯಸುತ್ತೇನೆ.

ನಾವು ಸರಿಯಾಗಿ ನಡೆದುಕೊಳ್ಳಬೇಕು ಮತ್ತು ಜನರಿಗೆ ಅನುಕಂಪ ಮತ್ತು ಸ್ನೇಹಮಯರಾಗಿರಬೇಕು. ನಾವು ಈ ದಿಕ್ಕಿನಲ್ಲಿ ಸಾಗಲು ನಮ್ಮ ಪ್ರಯತ್ನ ಹಾಕಬೇಕು. ಅದು ೧೦೦% ನೆರವೇರದಿರಬಹುದು, ಎಲ್ಲಾ ಜನರೂ ಹಾಗಾಗುವುದಿಲ್ಲ, ಆದರೆ ಕನಿಷ್ಠ ಪಕ್ಷ ಈ ಸಮಾಜದ ದೊಡ್ಡ ಭಾಗ ಒಳಿತಿಗಾಗಿ ಪರಿವರ್ತಿತವಾಗುತ್ತದೆ ಮತ್ತು ಅದು  ಸಾಕಷ್ಟು ಒಳ್ಳೆಯದು.

ಮತ್ತೊಮ್ಮೆ ನಾನು ಹೇಳುತ್ತೇನೆ, ನಾವು ಅಂಥ ಸಮಾಜದ ಕನಸು ಕಾಣಬಹುದು, ಆದರೆ ಅದು ವಾಸ್ತವವಾಗಬೇಕಾದರೆ ಸಮಯ ತೆಗೆದುಕೊಳ್ಳುತ್ತದೆ. ಅಪರಾಧವೇ ಇಲ್ಲದಂಥ ಒಂದು ಸಮಾಜವು ವಾಸ್ತವವಾಗುವುದು ಒಂದು ದೂರದ ಮಾತು; ಅದು ಸಮಯ ತೆಗೆದುಕೊಳ್ಳುತ್ತದೆ, ಆದರೆ ನಾವು ಕನಿಷ್ಠ ಆ ದಿಕ್ಕಿನಲ್ಲಿ ನಡೆಯಬೇಕು.

ಪ್ರ: ನನ್ನ ಪ್ರೀತಿಪಾತ್ರರಿಗೆ ನಾನು ಧಾರಾಳವಾಗಿ ನೀಡುತ್ತೇನೆ. ಆದರೆ, ಸಾಮಾನ್ಯವಾಗಿ ನನ್ನ ಬಗ್ಗೆ ಕಾಳಜಿ ತೆಗೆದುಕೊಳ್ಳುವ ಮೊದಲು ನಾನು ಇತರರ ಕಾಳಜಿವಹಿಸುತ್ತೇನೆ, ನಂತರ ನಾನು ವ್ಯಥಿಸುತ್ತಾ ಮುನಿಸಿಕೊಳ್ಳುತ್ತೇನೆ. ನಾನು ಇನ್ನೂ ಒಳ್ಳೆಯ ರೀತಿಯಲ್ಲಿ ಹೇಗೆ ನೀಡುವುದು?

ಶ್ರೀ ಶ್ರೀ: ನೋಡಿ, ನಿಮಗೆ ಬಹಳ ಬಿಡುವಿದ್ದಂತೆ ಕಾಣುತ್ತದೆ. ನೀವು ಯಾಕಷ್ಟು  ಯೋಚಿಸುತ್ತೀರಿ? ನಿಮಗೆ ಕೊಡಬೇಕನ್ನಿಸಿತೋ, ಹಾಗಾದರೆ ಕೊಡಿ ಮತ್ತು ಅದರ ಬಗ್ಗೆ ಮರೆತು ಬಿಡಿ! ಹಿಂದಿಯಲ್ಲಿ ಒಂದು ಹೇಳಿಕೆಯಿದೆ, ’ನೇಕಿ ಕರ್ ಔರ್ ದರಿಯಾ ಮೈ ಡಾಲ್’, ಅದರ ಅರ್ಥ ಏನೆಂದರೆ, ಒಳ್ಳೆಯ ಕೆಲಸಗಳನ್ನು ಮಾಡಿ ಅದನ್ನು ಸಾಗರದಲ್ಲಿ ಬಿಟ್ಟುಬಿಡಿ. ಅದರ ಬಗ್ಗೆ ಚಿಂತಿಸಬೇಡಿ.

’ನಾನು ಮಾಡಿದ್ದೇನೆ, ನಾನು ಮಾಡಿದ್ದೇನೆ’ ಎಂದು ನೀವು ಯೋಚಿಸುತ್ತಿದ್ದರೆ, ನೀವೇನು ಮಾಡಿದ್ದೀರಿ? ಬೇರೆಯವರಿಗೆಂದು ನಿಶ್ಚಯವಾಗಿರದ ಯಾವುದನ್ನೂ ನೀವು ಕೊಡಲು ಸಾಧ್ಯವಿಲ್ಲ. ಅದು ಅಸಾಧ್ಯ. ನೀವು ಕೊಡಬೇಕೆಂದಿದ್ದರೂ, ಆ ವ್ಯಕ್ತಿಗೆ ಅದನ್ನು ತೆಗೆದುಕೊಳ್ಳುವ ಸಮಯ ಬಂದಿರದಿದ್ದರೆ, ಅವರಿಗೆ ಅದನ್ನು ತೆಗೆದುಕೊಳ್ಳಲಾಗುವುದಿಲ್ಲ. ಹಾಗಾಗಿ ನೀವು ಕೊಡಿ, ನಂತರ ಮರೆತು ಬಿಡಿ.

ಕೇವಲ ಸಹಜವಾಗಿರಿ, ನೀವು ಅದರ ಬಗ್ಗೆ ಜಾಸ್ತಿ ಯೋಚಿಸಬೇಕಾಗಿಲ್ಲ.

ನಿಮಗೇನಾದರೂ ಅಗತ್ಯವಿದ್ದಾಗ, ಪಾಪ ಪ್ರಜ್ಞೆ ತಾಳಬೇಕಾಗಿಲ್ಲ, ಸುಮ್ಮನೆ ಹೋಗಿ ಅದನ್ನು ಖರೀದಿಸಿ. ಅಷ್ಟೇ.

ನೀವು ಪ್ರತಿಯೊಬ್ಬರ ಆಸೆಗಳನ್ನು ಯಾವಾಗಲೂ ತೃಪ್ತಗೊಳಿಸಲು ನಿಮಗಾಗುವುದಿಲ್ಲ, ಆದರೆ ನಿಮಗೆ ಏನೇನು ಮಾಡಲು ಸಾಧ್ಯವಾಗುತ್ತದೋ, ನೀವು ಮಾಡಬೇಕು. ಹಾಗೆಂದು ’ಇಲ್ಲ, ನನಗೆ ಮಾಡಲು ಇಷ್ಟವಿಲ್ಲ’ ಎಂದು ನಿಮಗೆ ಹೇಳಲಾಗುವುದಿಲ್ಲ. ಆಗ ಅದು ನಿಮ್ಮನ್ನು ಚುಚ್ಚುತ್ತದೆ.

ನಿಮಗೇನೋ ನಿಜವಾಗಿಯೂ ಅಗತ್ಯವಿದೆ, ಮತ್ತು ಬೇರೆಯವರಿಗೆ ಕೊಡಲಾಗುವುದಿಲ್ಲ ಎಂದಿರುವಾಗ, ಅದು ನಿಮ್ಮನ್ನು ಚುಚ್ಚುವುದಿಲ್ಲ. ಅದು ನಿಮ್ಮನ್ನು ಯಾವಾಗ ಚುಚ್ಚುತ್ತದೆ? ನಿಮಗೆ ಮಾಡಲು ಸಾಧ್ಯವಿದೆ ಮತ್ತು ನೀವು ಅದನ್ನು ಮಾಡದಿರುತ್ತೀರಿ, ಆಗ.

ಪ್ರ: ಪ್ರಿಯ ಗುರೂಜಿ, ಉಪನಿಷತ್ತುಗಳಿಂದ ಕೆಲವು ರಹಸ್ಯಗಳನ್ನು ದಯವಿಟ್ಟು ನಮ್ಮೊಂದಿಗೆ ಹಂಚಿಕೊಳ್ಳಿ.

ಶ್ರೀ ಶ್ರೀ: ಉಪನಿಷತ್ತಿನ ರಹಸ್ಯವೆಂದರೆ, ನೀನು ಓಂ. ನಿನ್ನ ನಿಜವಾದ ಹೆಸರು ಓಂ. ನಿಮ್ಮ ಹೆಸರೇನಿದ್ದರೂ, ಅದನ್ನು ಈ ಜೀವನದಲ್ಲಿ ನಿಮ್ಮ ಪೋಷಕರಿಂದ ಕೊಡಲಾಯಿತು, ಆದರೆ ಈ ಜೀವಕ್ಕಿಂತ ಮೊದಲು ನೀವೇನಾಗಿದ್ದಿರಿ? ನಿಮ್ಮ ಹೆಸರೇನಾಗಿತ್ತು? ಓಂ. ಮತ್ತು ಭವಿಷ್ಯದಲ್ಲಿ, ಈ ಶರೀರ ತೊರೆದ ನಂತರ ನಿಮ್ಮ ಹೆಸರು ಏನಾಗಿರುತ್ತದೆ? ಓಂ.

ಹೀಗೆ ಎಲ್ಲವೂ ಓಂನಿಂದ ಸೃಜನವಾಗಿದೆ, ಚೈತನ್ಯದಲ್ಲಿ ಎಂದಿಗೂ ಅನುರಣಿಸುತ್ತಿರುವ ಆ ಒಂದು ವಿಶ್ವವ್ಯಾಪ್ತ  ಶಬ್ದದಿಂದ, ಮತ್ತು ನೀವೆಲ್ಲರೂ ಆ ಶಬ್ದದಿಂದ ಜನಿಸಿದ್ದೀರಿ, ಮತ್ತು ನಾವದರಲ್ಲಿ ವಾಸವಾಗಲು ಮುಂದುವರಿಯುತ್ತಿದ್ದೇವೆ. ಈ ಕ್ಷಣದಲ್ಲೂ,  ಅದು ಎಂದೆಂದೂ ಇದೆ.

ನೀವು ಈ ಶರೀರವನ್ನು ತೊರೆದಾಗ, ನೀವು ನಿಮ್ಮ ಹೆಸರನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗುತ್ತೀರೆಂದು ಯೋಚಿಸದಿರಿ. ನಿಮ್ಮ ಹೆಸರು ಈ ಶರೀರದೊಂದಿಗೆ ಹೋಗುತ್ತದೆ. ಆದರೆ ನೀವು ಯಾವ ಪ್ರಕಾಶವಾಗಿದ್ದೀರೋ, ಯಾವ ಚೈತನ್ಯವಾಗಿದ್ದೀರೋ, ಅದಕ್ಕೆ ಕೇವಲ ಒಂದೇ ಹೆಸರಿದೆ, ಮತ್ತದು, ಓಂ.

ಪ್ರಾರ್ಥನೆಗಳಲ್ಲಿ ಹೇಳಿರುವುದು ಅದನ್ನೇ, ’ಎಕ್ ಓಂಕಾರ್(ಭಗವಂತ ಒಬ್ಬ), ಸತ್ನಾಮ್(ಅವನ ಹೆಸರು ಸತ್ಯ), ಕರ್ತ-ಪೂರಕ್(ಅವನು ಸೃಷ್ಟಿಕರ್ತ), ನಿರ್ಭಯ್(ಅವನು ಭಯವಿಲ್ಲದವನು), ನಿರ್ವೈರ್(ಅವನು ಯಾರಿಗೂ ಶತ್ರುತ್ವ ಉಂಟುಮಾಡದವನು), ಅಕಾಲ್-ಮೂರತ್(ಅವನು ಎಂದೂ ಸಾಯುವುದಿಲ್ಲ), ಅಜುನಿ ಸಭಮ್(ಅವನು ಜನನ ಮತ್ತು ಮರಣವನ್ನು ಮೀರಿದವನು), ಗುರು ಪರ್ಸಾದ್(ಅವನು ಪರಮ ಗುರುಗಳ ಕೃಪೆಯ ಸಾಕ್ಷಾತ್ಕಾರದಿಂದ ಗುರುತಿಸಲ್ಪಟ್ಟವನು), ಜಪ್(ಅವನ ಹೆಸರನ್ನು ಪುನರಾವರ್ತಿಸಿ), ಆದ್ ಸಚ್(ಅವನು ಸತ್ಯ, ಏನಾದರೂ ಸೃಷ್ಟಿಯಾಗುವುದಕ್ಕಿಂತ ಮೊದಲಿನಿಂದಲೇ), ಜುಗಾದ್ ಸಚ್(ಅವನು ಎಂದಿನಿಂದಲೂ ಸತ್ಯವಾಗಿದ್ದಾನೆ), ಹೈ ಭೀ ಸಚ್(ಅವನು ಈಗ ಸತ್ಯ), ನಾನಕ್ ಹೋಸೇ ಭೀ ಸಚ್(ಅವನು ಭವಿಷ್ಯದಲ್ಲಿ ಸತ್ಯವಾಗಿರುತ್ತಾನೆ)’. ಇರುವುದು ಒಂದೇ ಓಂಕಾರ, ಅವನು ಎಲ್ಲವನ್ನೂ ಮಾಡುವವನು, ಮತ್ತು ಅವನು ಪ್ರಾಚೀನ ಕಾಲದಿಂದಲೂ ಆ ಸೃಷ್ಟಿಕರ್ತ, ಅವನಲ್ಲೇ ಎಲ್ಲವೂ ಸೃಷ್ಟಿಯಾಗುತ್ತಿದೆ.

ನಿರ್ಭಯ ಎಂದರೆ, ಭಯವಿಲ್ಲದ, ದ್ವೈತವಿಲ್ಲದ, ಅಲ್ಲಿ ಎರಡೆಂಬುದಿಲ್ಲ. ಅದು ನಿರ್ಮಲವಾದದ್ದು, ಅದು ಪರಿಪೂರ್ಣವಾಗಿ ಶುದ್ಧ.
ಆದ್ ಸಚ್, ಜುಗಾದ್ ಸಚ್, ಹೈ ಭೀ ಸಚ್, ಅದು ಸಂಪೂರ್ಣ ಸತ್ಯ, ಅದು ನಿಜವಾದುದು. ನಮ್ಮ ಸೃಜನ ಆ ಸತ್ಯದಿಂದಾಗಿದೆ. ಆದಿ ಎಂದರೆ, ನಿಮ್ಮ ಮೂಲ; ಯಾವುದರಿಂದ ಎಲ್ಲವೂ ಉಂಟಾಗಿದೆಯೋ ಅಥವಾ ಎಲ್ಲವೂ ಸೇರಿಕೊಂಡಿದೆಯೋ ಅದು.

ನಮ್ಮ ಮೂಲವು ಸತ್ಯ, ನಮ್ಮ ಗುರಿಯು ಸತ್ಯ, ಮತ್ತು ಇದು ವಾಸ್ತವ, ’ಎಕ್ ಓಂಕಾರ್, ಸತ್ನಾಮ್...’

ಇದು ಉಪನಿಷತ್ತುಗಳ ಸಾರ, ಮತ್ತು ಉಪನಿಷತ್ತುಗಳು ಹೇಳುವುದು ಇದನ್ನೆ.

’ಶಿವಂ ಶಾಂತಂ ಅದ್ವೈತಂ ಚತುರ್ಥಂ ಮಾನ್ಯಂತೇ, ಸ ಆತ್ಮಾ, ಸ ವಿಜ್ಞೇಯಃ’

ಆ ಸತ್ಯ, ಯಾವುದು ಶಿವವೋ, ಯಾವುದು ಶಾಂತವೋ, ಆ ಅಪಾರ ಶಾಂತಿ; ಯಾವುದು ಅದ್ವೈತವೋ, ಅವಿಭಾಜಿತವೋ, ಅದನ್ನು ಚತುರ್ಥವೆಂದು ಹೇಳಲಾಗುತ್ತದೆ. ಅದು ಚೈತನ್ಯದ ಮೂರು ಅವಸ್ಥೆಗಳನ್ನು ಮೀರಿದುದು; ಜಾಗೃತ ಅವಸ್ಥೆ, ಸ್ವಪ್ನಾವಸ್ಥೆ ಮತ್ತು ನಿದ್ರಾವಸ್ಥೆ, ಆ ನಾಲ್ಕನೆಯ ಅವಸ್ಥೆಯು ಆತ್ಮ, ಅದು ತಿಳಿಯತಕ್ಕದ್ದು(ಸ ವಿಜ್ಞೇಯಃ).

ತಿಳಿಯಲು ಯೋಗ್ಯವಾದುದೆಂದರೆ ಆ ನಾಲ್ಕನೆಯ ಸ್ಥರ, ಯಾವುದು ಜಾಗೃತಿಯೂ ಅಲ್ಲ, ಸ್ವಪ್ನವೂ ಅಲ್ಲ ಅಥವಾ ನಿದ್ರೆಯೂ ಅಲ್ಲ, ಆದರೆ ಈ ಸಂಪೂರ್ಣ ಸೃಷ್ಟಿಯ ಆಧಾರವಾಗಿರುವಂಥ ನಾಲ್ಕನೆಯ ಸ್ಥಿತಿ. ಅದು ತಿಳಿದುಕೊಳ್ಳಬೇಕಾದುದು; ಗಮನಿಸಬೇಕಾದುದು.

ಪ್ರ: ಪೂಜ್ಯ ಗುರುದೇವ, ನನ್ನ ಅಮ್ಮ ಹೇಳುವುದು ದೇವರು ನಮ್ಮ ಹೃದಯಗಳಲ್ಲಿ ಇದ್ದಾನೆ, ಮತ್ತು ಏನಾದರೂ ತೊಂದರೆ ಇದ್ದಾಗ, ನಾನು ಕೇವಲ ನನ್ನೊಳಗೆ ನೋಡಿ ಪ್ರಾರ್ಥಿಸಬೇಕು ಅಷ್ಟೆ ಎಂದು. ಆದರೆ ಸಾವಿರಗಟ್ಟಲೆ ಮಕ್ಕಳು ಪ್ರಾರ್ಥಿಸಿಯೂ ಬದುಕುವುದಿಲ್ಲ, ಅಂಥವರ ಬಗ್ಗೆ ಏನು?

ಶ್ರೀ ಶ್ರೀ: ಹೌದು, ಇದು ಪ್ರಕೃತಿಯ ಒಂದು ಭಾಗ. ಅದರಲ್ಲಿ ಇನ್ನೂ ರಹಸ್ಯಗಳಿವೆ.

ಒಂದು ಮಗು ಹೇಗೆ ಹುಟ್ಟುತ್ತದೆ, ಮತ್ತು ಅದು ಕೇವಲ ಸ್ವಲ್ಪ ಕಾಲವಷ್ಟೇ ಏಕೆ ಬದುಕುತ್ತದೆ, ಇದು ಬಹಳ ಸಂರಕ್ಷಿತ ರಹಸ್ಯ. ನಿನಗೊಂದು ದಿನ ಅವು ಅರ್ಥವಾಗುತ್ತವೆ.

ಹಲವು ಬಾರಿ, ಮಗುವೊಂದು ಜನಿಸಿದ ನಂತರ, ಪತಿ ಹಾಗೂ ಪತ್ನಿಯ ನಡುವಿನ ಪ್ರೀತಿ ಕಾಣೆಯಾಗುತ್ತದೆ. ಯಾವಾಗಲೂ ಅಲ್ಲ, ಆದರೆ ಕೆಲವು ಸಲ. ಹೀಗಾಗುವುದು ಯಾಕೆಂದರೆ, ಆತ್ಮವು ಎರಡು ಜನರನ್ನು ಆಕರ್ಷಿಸುತ್ತದೆ. ಅವರಲ್ಲಿ ಹೊಂದಿಕೆ ಇಲ್ಲದೇ ಇರಬಹುದು, ಆದರೆ ಅವರಿಬ್ಬರು ಹತ್ತಿರ ಬರುವಂತೆ ಆತ್ಮವು ಅಂಥ ಗಾಢ ಆಕರ್ಷಣೆಯನ್ನು ಮಾಡುತ್ತದೆ, ಅವರು ಮದುವೆಯಾಗಿ ಮಗುವನ್ನು ಪಡೆಯುತ್ತಾರೆ, ಮತ್ತೆ ಮಗು ಜನಿಸಿದ ನಂತರ ಅಷ್ಟೆ, ಅವರ ನಡುವಿನ ಎಲ್ಲಾ ಬಂಧುತ್ವ ಕಾಣೆಯಾಗುತ್ತದೆ.

ನೀವಿದನ್ನು ಸಮಾಜದಲ್ಲಿ ಆಗುತ್ತಿರುವುದನ್ನು ನೋಡಿದ್ದೀರಾ? ಇದು ಏಕೆಂದರೆ, ಆ ಆತ್ಮವು ಅವರಿಬ್ಬರನ್ನು ಜೊತೆಗೂಡಿಸಿದೆ. ಅದು ತನಗೆ ಬೇಕಾದುದನ್ನು ನಡೆಸಿತು, ಕೇವಲ ಅಷ್ಟೆ. ಹೀಗಾಗುತ್ತದೆ, ಮತ್ತು ಇದು ಬಹಳ ಕುತೂಹಲಕಾರಿ.

ಪ್ರ: ನನ್ನ ಅಮ್ಮ ನನ್ನನ್ನು ಟೀಕಿಸುತ್ತಿರುತ್ತಾರೆ, ನಾನು ಏನು ಮಾಡಲಿ?

ಶ್ರೀ ಶ್ರೀ: ಹಾ, ಅದು ಅವರ ಕೆಲಸ. ಅಮ್ಮ ಕೇವಲ ನೀನೆಷ್ಟು ಬಲಿಷ್ಠವಾಗಿದ್ದೀಯ, ಎಷ್ಟು ತಾಳ್ಮೆ ಹೊಂದಿದ್ದೀಯ ಎಂದು ನೋಡುತ್ತಿರುವುದು. ಅಮ್ಮಂದಿರು ಸಾಮಾನ್ಯವಾಗಿ ನಿಮಗೆ ಹೆಚ್ಚು ತಾಳ್ಮೆಯಿಂದಿರಲು ಸಹಾಯವಾಗುತ್ತಾರೆ.  ಒಂದಾ ನೀವು ನಿಮ್ಮಮ್ಮನಿಗೆ  ಹಾಗೆ ಮಾಡುತ್ತೀರಿ, ಇಲ್ಲವಾದರೆ ನಿಮ್ಮಮ್ಮ ನಿಮಗೆ ಹಾಗೆ ಮಾಡುತ್ತಾರೆ. ನಿಜವೆಂದರೆ ನೀವು ಒಬ್ಬರ ನಂತರ ಒಬ್ಬರಂತೆ ಈ ಕೆಲಸ ಮಾಡುತ್ತಿರುತ್ತೀರಿ!

ಪ್ರ: ಗುರುದೇವ, ನನ್ನ ತಂದೆ-ತಾಯಿಯರಿಗೆ ವಯಸ್ಸಾಗಿದೆ, ಆದರೂ ಅವರು ವಾದ ಮತ್ತು ಜಗಳ ಮಾಡುತ್ತಿರುತ್ತಾರೆ, ಮದುವೆಯಾಗಿ ೫೦ವರ್ಷಗಳಾದ ಮೇಲೆ. ಅವರು ಎಂದಾದರೂ ಬದಲಾಗುತ್ತಾರೆಯೇ?

ಶ್ರೀ ಶ್ರೀ: ಓಹ್, ಅವರು ತಮ್ಮ ಜೀವನದಲ್ಲಿ ವಿನೋದದಿಂದಿದ್ದಾರೆ, ನೀವೇಕೆ ಅದನ್ನು ನಿಲ್ಲಿಸಬಯಸುತ್ತೀರಿ? ವಾದ ಮತ್ತು ಜಗಳಗಳಿಲ್ಲದೆ ಜೀವನವು ಅಷ್ಟು ಬೇಸರವುಳ್ಳದ್ದಾಗುತ್ತದೆ, ರುಚಿಯಿಲ್ಲದ್ದಾಗುತ್ತದೆ. ಅವರು ಒಂದು ಮಸಾಲಾ ಭೋಜನವನ್ನು ಭೋಗಿಸುತ್ತಿದ್ದಾರೆ, ಅವರು ಅದನ್ನು ಅನುಭವಿಸಲಿ. ನೀವೇಕೆ ಅದನ್ನು ಸಪ್ಪೆಯಾಗಿಸ ಬಯಸುತ್ತೀರಿ? ಅದು ತುಂಬಾ ಖಾರವಾದರೆ, ನಡುವಿನಲ್ಲ ಸ್ವಲ್ಪ ತುಪ್ಪ, ಸ್ವಲ್ಪ ಬೆಣ್ಣೆ ಹಾಕಿ. ಅದು ಆಗುತ್ತದೆ, ಏನು ಮಾಡುವುದು?

ಯಾರೋ ಒಬ್ಬ ಸಭ್ಯನನ್ನು ಕೇಳಿದನು, ’ನೀನು ನಿನ್ನ ಹೆಂಡತಿಯೊಡನೆ ಏಕಷ್ಟು ಜಗಳವಾಡುತ್ತೀಯ?’ ಅವನು ಹೇಳಿದನು, ’ಹಾಗಂದರೆ? ನಾನು ಅವಳನ್ನು ಪ್ರೀತಿಸುತ್ತೇನೆ, ಹಾಗಾಗಿ ಜಗಳವಾಡುತ್ತೇನೆ. ಮತ್ತೆ ಯಾರೊಡನೆ ನಾನು ಜಗಳವಾಡಲಿ’, ಮತ್ತು ಅದು ಸತ್ಯ. ಅದು ಕೆಲವೊಮ್ಮೆ ಆಗುತ್ತದೆ.

ಪ್ರ: ಪ್ರೀತಿಯ ಗುರೂಜಿ, ನಾನು ಈ ಜ್ಞಾನವನ್ನು ಬಹಳ ಜನರಿಗೆ ಹರಡಬೇಕೆಂದಿದ್ದೇನೆ, ಆದರೆ ನನ್ನ ಗೆಳೆಯರಿಗೆ ಇದನ್ನು ಹೇಳಬೇಕಾದಾಗ ಬಹಳ ಅಂಜುತ್ತೇನೆ. ನಾನಿದರಿಂದ ಹೇಗೆ ಹೊರಬರಲಿ?

ಶ್ರೀ ಶ್ರೀ: ನಿನ್ನ ಭಯವೇನು? ಅವರು ನಿನ್ನನ್ನು ಗೇಲಿ ಮಾಡುತ್ತಾರೆಂದೆ? ಸರಿ, ಅದನ್ನು ವಿನೋದದಿಂದ ಅನುಭವಿಸು, ಅವರು ನಿನ್ನ ಮೇಲೆ ನಗಲಿ, ಅದಕ್ಕೇನು? ನೀನು ಅವರ ಹಾಸ್ಯಕ್ಕೊಳಗಾಗಲು ತಯಾರಿದ್ದರೆ,  ಮತ್ತು ಅದನ್ನು ಇಚ್ಚಿಸಿದರೆ, ಆಗ ಅದು ನಿನ್ನನ್ನು ನೀನು ಅನುಭವಿಸುತ್ತಿರುವ ಸಂಕೋಚದಿಂದ ಹೊರಬರುವಂತೆ ಮಾಡುತ್ತದೆ.

ಅದನ್ನು ಸುಮ್ಮನೆ ಮಾಡಿ ನೋಡು ಏನಾಗುತ್ತದೆಂದು.

ಪ್ರ: ಪೂಜ್ಯ ಗುರೂಜಿ, ನಾನು ಜ್ಞಾನವನ್ನು ಓದುತ್ತಿದ್ದರೂ, ನನ್ನ ಸಾಧನೆಯನ್ನು ಮತ್ತು ಸೇವೆಗಳನ್ನು ಮಾಡುತ್ತಿದ್ದರೂ, ನನ್ನ ಮನಸ್ಸು ಕೆಲವೊಮ್ಮೆ ಸ್ಮಾರ್ಟ್ ಫೋನ್, ಬಟ್ಟೆಗಳು ಇಂಥ ಐಹಿಕ ವಸ್ತುಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ದಯವಿಟ್ಟು ಇವೆಲ್ಲವುಗಳಿಂದ ಮುಕ್ತವಾಗುವಂತೆ ನನ್ನನ್ನು ಅನುಗ್ರಹಿಸಿ.

ಶ್ರೀ ಶ್ರೀ: ಅದು ಸಾಮಾನ್ಯವೇ. ಅದು ಸಮಯ ತೆಗೆದುಕೊಳ್ಳುತ್ತದೆ. ನೀವು ಸ್ವಲ್ಪ ಅಂಟಿಕೊಳ್ಳುವ ಸ್ವಭಾವದವರಾಗಿದ್ದರೆ, ನಿಮ್ಮನ್ನು ಕದಡಿಸಲು ಇನ್ನೂ ಸ್ವಲ್ಪ ಶಾಖ ಅಗತ್ಯ. ನಿಮಗೆ ಗೊತ್ತೆ, ನಾವು ಹಲ್ವಾ ಮಾಡುವಾಗ, ಅದು ಮೊದಲು ಪಾತ್ರೆಗೆ ಅಂಟಿಕೊಳ್ಳುತ್ತಿರುತ್ತದೆ, ಆದರೆ ನೀವದನ್ನು ಉರಿಯ ಮೇಲೆ ಕಲಕುತ್ತಿದ್ದಂತೆ, ಅದು ನಿಧಾನವಾಗಿ ಅಂಟುವುದನ್ನು ಬಿಡುತ್ತದೆ.

ಪ್ರ: ಪೂಜ್ಯ ಗುರೂಜಿ, ನಾನು ಇನ್ನುಳಿದ ಜೀವನವನ್ನು ಆಶ್ರಮದಲ್ಲಿ ಬಂದು ಜೀವಿಸಬೇಕೆಂಬ ಆಳವಾದ ಇಚ್ಚೆ ನನಗಿದೆ. ನಾನು ಆಶ್ರಮದಲ್ಲಿ ಸೇವೆ ಮಾಡುತ್ತಾ ನನ್ನನ್ನು ಪೂರ್ತಿಯಾಗಿ ತೊಡಗಿಸಿಕೊಳ್ಳಲು ಬಯಸುತ್ತೇನೆ. ನನ್ನ ಪತ್ನಿಯೂ ಹೀಗೆ ಮಾಡಲು ಒಪ್ಪಿಕೊಂಡಿದ್ದಾಳೆ. ದಯವಿಟ್ಟು ನಮಗೆ ಉಪದೇಶ ನೀಡಿ.

ಶ್ರೀ ಶ್ರೀ: ಅದು ಸರಿ, ಬನ್ನಿ.

ನಿಮ್ಮಲ್ಲಿ ಯಾರು ಇಲ್ಲಿ, ಅಥವಾ ಬೂನ್ ಆಶ್ರಮದಲ್ಲಿ ಪೂರ್ತಿ ಸಮಯ ಇರಲು ಇಚ್ಚಿಸುತ್ತೀರೋ, ಅವರಿಗೆ ಸ್ವಾಗತ.  ಆದರೆ ನಿಮಗೆ ಬಹಳ ಅವಶ್ಯಕತೆಯಿದ್ದರೆ, ಆಗ ಅದು  ಕಷ್ಟ.  ನಿಮ್ಮ ಅವಶ್ಯಕತೆಗಳು ಸರಳವಾಗಿದ್ದರೆ, ಆಗ ಆಶ್ರಮದ ಜೀವನ ಬಹಳ ಒಳ್ಳೆಯದು.

ನಿಮ್ಮ ಬದುಕು ಸರಳ ಮತ್ತು ಯೋಚನೆ ಶ್ರೇಷ್ಠವಾಗಿದ್ದರೆ, ಆಗ ಆಶ್ರಮದ ಜೀವನ ಒಳ್ಳೆಯದು. ನಿಮ್ಮ ಬದುಕು ಶ್ರೇಷ್ಠ ಮಟ್ಟದ್ದು ಮತ್ತು ಆಲೋಚನೆ ಸಾಮಾನ್ಯದ್ದಾಗಿದ್ದರೆ, ಆಗ ಆಶ್ರಮದ ಜೀವನ ನಿಮಗೆ ಕಷ್ಟವಾಗಬಹುದು.

ಪ್ರ: ಪೂಜ್ಯ ಗುರೂಜಿ, ನಾವು ನಮ್ಮ ಆತ್ಮನೆಡೆಗೆ ನಡೆಯುತ್ತಿದ್ದೇವೆ ಎಂಬುದಕ್ಕೆ ಸೂಚನೆ ಏನು?

ಶ್ರೀ ಶ್ರೀ: ನೀವು ನಿಮ್ಮ ಆತ್ಮನೆಡೆಗೆ ನಡೆಯಬೇಕಾಗಿಲ್ಲ, ಆತ್ಮವೂ ಆಗಲೇ ಇದೆ, ಎಲ್ಲೆಲ್ಲೂ ಇದೆ.  ನಿಮ್ಮೊಳಗೇನೋ ಒಂದು ನಿಶ್ಚಲವಾದದ್ದು, ಸದಾ ಅಖಂಡವಾದ್ದದ್ದು ಇದೆ; ಅದು ಆತ್ಮ.

ಪ್ರ: ಪೂಜ್ಯ ಗುರೂಜಿ, ನನಗೆ ಬಹುಕಾಲ ಶಾಖಾಹಾರ ಸೇವಿಸುತ್ತಿರಲು ಕಷ್ಟವಾಗುತ್ತದೆ. ನಾನು ಸಸ್ಯಾಹಾರಿ ಪ್ರೋಟೀನ್ ಸೇವಿಸುತ್ತಿದ್ದರೂ, ಅದು ನನಗೆ ಸಾಲುತ್ತಿಲ್ಲ. ನಾನು ಮತ್ತೂ ಮಾಂಸದ ಪ್ರೋಟೀನಿಗಾಗಿ ಹಾತೊರೆಯುತ್ತೇನೆ, ಮತ್ತು ನಾನದನ್ನು ತಿಂದಾಗ, ನನಗೆ ಒಳ್ಳೆಯದೆನಿಸುತ್ತದೆ. ನಾನು ದೃಢನಿಷ್ಠೆಯ ಸಸ್ಯಾಹಾರಿಯಾಗಿರಲು ಬಯಸುತ್ತೇನೆ, ಯಾಕೆಂದರೆ ನಾನು ದೃಢವಾಗಿ ಅಹಿಂಸೆಯ ಮಾರ್ಗದಲ್ಲಿದ್ದೇನೆ. ನಿಮ್ಮಲ್ಲಿ ನನಗೇನಾದರೂ ಉಪದೆಶವಿದೆಯೇ?

ಶ್ರೀ ಶ್ರೀ: ಇದು ಕೇವಲ ನಿಮ್ಮ ಮನಸ್ಸಿನಲ್ಲಿರುವುದು, ನಿಮಗೆ ಪ್ರೋಟೀನ್ ಬೇಕೆಂಬುದು. ನಿಮಗೆ ಗೊತ್ತೇ, ಕುದುರೆಗಳಿಗೆ ಬಹಳ ಶಕ್ತಿಯಿದೆ, ಅವುಗಳಲ್ಲಿ ಬಹಳ ಪ್ರೋಟೀನ್ ಇದೆ ಮತ್ತು ಅವು ಸಸ್ಯಾಹಾರಿಗಳಾಗಿವೆ. ಆನೆಗಳು ಸಸ್ಯಾಹಾರಿಗಳು. ಆನೆಗಳಿಗೆ ಅದೆಂಥ ಶಕ್ತಿಯಿದೆ! ನಿಮಗೆ ಊಹಿಸಲೂ ಸಾಧ್ಯವಿಲ್ಲ. ಗೂಳಿಗಳು ಸಸ್ಯಾಹಾರಿಗಳು. ನಾವು ಹಾರ್ಸ್ ಪವರ್ ಎಂದು ಹೇಳುತ್ತೇವೆ. ಶಕ್ತಿಯನ್ನು ಯಾವಾಗಲೂ ಕುದುರೆಯ ಶಕ್ತಿಯ ಆಧಾರದಿಂದ ಅಳೆಯಲಾಗುತ್ತದೆ. ಕುದುರೆಗಳು ಕೇವಲ ಹೆಸರು ಕಾಳು ಮತ್ತು ಹುಲ್ಲನ್ನು ತಿನ್ನುತ್ತವೆ. ಸಸ್ಯಾಹಾರದಲ್ಲಿ ಬಹಳ ಪ್ರೋಟೀನ್ ಇರುವುದು. ಅದೆಲ್ಲ ಇರುವುದು ನಿಮ್ಮ ಮನಸ್ಸಿನಲ್ಲಿ, ನಿಮ್ಮ ಯೋಚನಾ ಲಹರಿಯಲ್ಲಿ, ಆದರೆ ವಾಸ್ತವವಾಗಿ ಅಲ್ಲ. ಬೀಜ ಕಾಯಿಗಳನ್ನು, ಮತ್ತು ಧಾನ್ಯಗಳನ್ನು ಸೇವಿಸಿ, ಅವುಗಳಲ್ಲೆಲ್ಲಾ ಪ್ರೋಟೀನ್ ಇದೆ. ನೀವು ಗೋಧಿ ಹುಲ್ಲಿನ ರಸವನ್ನು ಅಥವಾ ಸ್ಪಿರುಲೀನಾ ಸೇವಿಸಬಹುದು. ಇಲ್ಲಿ ಉತ್ತರ ಅಮೇರಿಕಾದಲ್ಲಿ ಇದೆಲ್ಲ ಬಹಳ ಸಾಮಾನ್ಯ.

ಉತ್ತರ ಅಮೇರಿಕಾದ ದೊಡ್ಡ ಭಾಗದಷ್ಟು ಜನಸಂಖ್ಯೆ ಸಸ್ಯಾಹಾರಿಗಳಾಗುತ್ತಿದ್ದಾರೆ. ಹಾಗಾಗಿ ನಿಮ್ಮ ತಲೆಯೊಳಗಿಂದ ಇದು ಅಗತ್ಯ ಎಂಬುದನ್ನು ಹೊರ ತೆಗೆಯಿರಿ. ನಿಮಗೆ ನಿಜವಾಗಿಯೂ ಇದರ ಅಗತ್ಯವಿಲ್ಲ. ನಿಮ್ಮ ಶರೀರವು ಸಸ್ಯಾಹಾರಕ್ಕಾಗಿ ರಚಿಸಲ್ಪಟ್ಟಿದೆ. ನಿಮ್ಮ ಎಂಜಲಿನಲ್ಲಿ ’ಟ್ಯಾಲ್ಲಿನ್’ ಎಂದು ಒಂದು ಪದಾರ್ಥವಿದೆ. ಅದು ಕೇವಲ ಸಸ್ಯಾಹಾರಿ ಜೀವಿಗಳಲ್ಲಿ ಇದೆ. ನೀವದನ್ನು ಸಿಂಹಗಳಲ್ಲಿ, ತೋಳಗಳಲ್ಲಿ ಅಥವಾ ಹುಲಿಗಳಲ್ಲಿ ಪಡೆಯುವುದಿಲ್ಲ.

ಸಸ್ಯಾಹಾರಿ ಪ್ರಾಣಿಗಳಿಗೆ ದೊಡ್ಡ ಕರುಳಿದೆ, ನಿಮಗೂ ದೊಡ್ಡ ಕರುಳಿದೆ. ಸಿಂಹಗಳಿಗೆ ಅದಿಲ್ಲ, ನಾಯಿಗಳಿಗೆ ಅದಿಲ್ಲ.
ನಿಮ್ಮ ಶರೀರ ಅದನ್ನು ತೋರಿಸುತ್ತದೆ. ಮಾನವ ಶರೀರ ರಚನೆಯ ಪ್ರತಿ ಚಿಹ್ನೆಯೂ ಸಸ್ಯಾಹಾರ ಶೈಲಿಗಾಗಿ ಮಾಡಲ್ಪಟ್ಟಿದೆ.

ನಿಮಗೆ ಮಾಂಸಾಹಾರಿ ಪ್ರಾಣಿಗಳಿಗಿರುವಂಥ ಹಲ್ಲುಗಳಿಲ್ಲ. ನಿಮಗೆ ನಿಮ್ಮ ನೇರ ಪೂರ್ವಜರಾದ ಮಂಗಗಳು, ದನಗಳು ಮತ್ತು ಆನೆಗಳಿಗಿರುವ ಥರದ ಹಲ್ಲುಗಳಿವೆ. ನಾನು ಆನೆಯ ಕೋರೆ ಹಲ್ಲಿನ ಬಗ್ಗೆ ಮಾತನಾಡುತ್ತಿಲ್ಲ, ಆನೆಯ ಬಾಯೊಳಗಿನ ಹಲ್ಲುಗಳು ನಮ್ಮ ಹಲ್ಲುಗಳಂತಿವೆ.

ಇದು ಮನಸ್ಸೊಳಗಿನ ತಪ್ಪು ತಿಳುವಳಿಕೆ - ನಾನು ಮಾಂಸ ತಿನ್ನುವುದನ್ನು ನಿಲ್ಲಿಸಿದ್ದರಿಂದ ನನಗೆ ನಿತ್ರಾಣವೆನಿಸುತ್ತಿದೆ ಎಂಬುದು, ಇಲ್ಲ! ಇದು ಮನಸ್ಸಿನಲ್ಲಿರುವ ಸಾಮಾನ್ಯ ಭಾವನೆಯಷ್ಟೇ ಆಗಿದೆ.

ಪ್ರ: ಪೂಜ್ಯ ಗುರೂಜಿ, ನಾನು ಸುದರ್ಶನ ಕ್ರಿಯೆಯೊಂದಿಗೆ ಇತರ ಮಾರ್ಗಗಳನ್ನು ಅನುಸರಿಸಬಹುದೇ, ಉದಾಹರಣೆಗೆ ಪರಮಹಂಸ ಯೋಗಾನಂದರ ಕ್ರಿಯಾ ಯೋಗ?

ಶ್ರೀ ಶ್ರೀ: ನೀವು ಕೇವಲ ಒಂದನ್ನು ಮಾಡಿ, ಅದು ಸಾಕಾಗುವುದು.

ನೀವು ಬಹಳ ಮಾರ್ಗಗಳನ್ನು ಅನುಸರಿಸಿದರೆ, ಅದೊಂದು ದೊಡ್ಡ ಗೊಂದಲವಾಗಿ ಬಿಡುತ್ತದೆ. ಬೇರೆ ಬೇರೆ ಕಡೆಗೆ ಹೋಗಿ ಅತಿ ಹೆಚ್ಚು ಸಾಧನೆಗಳನ್ನು ಮಾಡುವವರು ಮತ್ತು ಅವರ ಶಕ್ತಿ ಸಂಪೂರ್ಣವಾಗಿ ಅಸ್ತವ್ಯಸ್ತವಾಗುವುದನ್ನು ನಾನು ನೋಡಿದ್ದೇನೆ. ಅದು ಅಗತ್ಯವಿಲ್ಲ.

ನೀವದನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದ್ದರೆ, ಸರಿ, ಸುದರ್ಶನಕ್ರಿಯೆ ಮಾಡಿದನಂತರ ನೀವು ಧ್ಯಾನಕ್ಕೆ ಕುಳಿತಿಕೊಳ್ಳಬಹುದು. ಏನಾದರೂ ಆದರೆ, ಅದು ಆಗುತ್ತದೆ, ಅದು ಸಾಮಾನ್ಯ. ಆ ಮಂತ್ರಗಳು ಬಂದರೆ, ಚಿಂತೆಯಿಲ್ಲ, ಆದರೆ ನೀವು ಪ್ರಯತ್ನಪೂರ್ವಕವಾಗಿ ಮಾಡಿದರೆ, ಅಥವಾ ಹೆಚ್ಚು ಕಲಿತರೆ, ಅದು ಬಹಳ ಗೊಂದಲವನ್ನು ಸೃಷ್ಟಿಸಬಹುದು.