ಅಮೃತಬಿ೦ದು’ ಸರಣಿಯ ಬರಹಗಳು
ಹನ್ನೆರಡನೆಯ ಕ೦ತು
ಮೂರ್ತಿಪೂಜೆಯ ರಹಸ್ಯ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೮.೦೬.೨೦೦೩ರಂದು ಪ್ರಕಟವಾಗಿತ್ತು)
ಕಾಮದಿಂದ ಸೃಷ್ಟಿಯಾಯಿತು. ಅದು ಮೋಹದಿಂದ ಪರಿಪಾಲನೆಯಾಗುತ್ತೆ. ನಾವು ಯಾವುದನ್ನು ಹೀಯಾಳಿಸುತ್ತೇವೋ ಅದರ ಬಂಧನದಲ್ಲಿ ಸಿಕ್ಕಿಹಾಕಿಕೊಳ್ತೀವಿ. ಯಾವುದನ್ನು ನಾವು ಪೂಜೆ ಮಾಡ್ತೀವೋ ಅದರಿಂದ ನಮ್ಮ ಮನಸ್ಸು ಮುಕ್ತವಾಗುತ್ತೆ ಎಂಬುದನ್ನು ವಿಚಾರ ಮಾಡಿದೆವು.
ಸಂಸ್ಕೃತದಲ್ಲಿರುವ ಯಾವುದೇ ಅಷ್ಟೋತ್ತರ, ಸಹಸ್ರನಾಮ ಸ್ತೋತ್ರಗಳಲ್ಲೂ ಆಯಾ ದೇವರ ಅಂಗ ಪ್ರತ್ಯಂಗಗಳ ವರ್ಣನೆಗಳಿವೆ. ಹಾಗೆಯೇ ವರಲಕ್ಷ್ಮಿ, ಸ್ವರ್ಣಗೌರಿ, ಗಣಪತಿ ಹೀಗೆ ಯಾವುದೇ ವ್ರತದಲ್ಲಿಯೂ ಒಂದೊಂದು ಅಂಗಕ್ಕೂ ’ಅಂಗಪೂಜೆ’ ಮಾಡುವ ಪದ್ಧತಿ ಇದೆ ನಮ್ಮಲ್ಲಿ. ಹಾಗೆ ಪೂಜಿಸಿದಾಗ ಏನಾಗುತ್ತೆ? ಯಾವ ಅಂಗ ನಿಮ್ಮ ಮನಸ್ಸನ್ನು ಆಕರ್ಷಿಸುತ್ತದೆಯೋ ಅದರಿಂದ ಮುಕ್ತವಾಗಿ, ನಿಮ್ಮ ಮನಸ್ಸು ಶಾಂತವಾಗುತ್ತದೆ. ಅದಕ್ಕೇ ವಿಷ್ಣುಪೂಜೆ ಮಾಡಬೇಕಾದರೂ ಪಾದದಿಂದ ಪ್ರಾರಂಭಿಸಿ ಶಿರಸ್ಸಿನ ತನಕ ಎಲ್ಲಾ ಅಂಗಗಳ ಅರ್ಚನೆ ಮಾಡುತ್ತಾ ಬನ್ನಿ. ಮೂರ್ತಿಪೂಜೆಯ ದೊಡ್ಡ ರಹಸ್ಯ ಇದು. ಮೂರ್ತಿಪೂಜೆಯಿಂದ ಕಾಮದ ಜಯ ಉಂಟಾಗುತ್ತದೆ. ಯಾವುದನ್ನು ಗೆಲ್ಲಬೇಕೋ, ಯಾವುದರಿಂದ ಪಾರಾಗಿ ಮೇಲೆ ಹೋಗಬೇಕೋ ಅದನ್ನು ಪೂಜೆ ಮಾಡಿಯೇ ಮೇಲೆ ಹೋಗುವುದಕ್ಕೆ ಸಾಧ್ಯ. ಪೂಜ್ಯಭಾವನೆಯಿಂದ ಮೇಲೆ ಹೋಗಲು ಸಾಧ್ಯ.
ಹನುಮಂತ ರಾಮನ ಪೂಜೆ ಮಾಡಿದ; ಅದರಿಂದ ರಾಮನಿಗಿಂತ ದೊಡ್ಡವನಾದ. ರಾಮನ ಜೊತೆ ಯುದ್ಧ ಮಾಡಿದ ರಾವಣ ಕೆಳಗೆ ಬಿದ್ದ, ಸೋತ. ಹನುಮಂತನಿಗೆ ಹದಿನಾಲ್ಕು ’ಕಲೆ’ ಇದೆ, ರಾಮನಿಗೆ ಹನ್ನೆರಡು ಕಲೆ ಮಾತ್ರ! ಪರಶುರಾಮ ರಾಮನ ಜೊತೆ ಯುದ್ಧ ಮಾಡಲು ಬಂದಾಗ, ಪರಶುರಾಮ ಸೋತ. ಆದರೆ ರಾಮ ಅವನಿಗೆ ’ಭಾರ್ಗವ’ ಅಂದ. ನಮ್ರನಾಗಿ ನಮಸ್ಕಾರ ಮಾಡಿದ. ರಾಮ ಗೆದ್ದ. ಹಾಗೇ ಹನುಮಂತ ರಾಮನ ಭಕ್ತ. ರಾಮನಿಗೆ ತನ್ನನ್ನು ತಾನೇ ಅರ್ಪಿಸಿಕೊಂಡ. ಹಾಗೆ ಪೂಜ್ಯಭಾವವನ್ನು ಹೊಂದಿದಾಗ ಮೇಲೇರಲು, ಅಧಿಕ ಶಕ್ತಿಶಾಲಿಗಳಾಗಲು ಸಾಧ್ಯ. ಯಾವುದನ್ನು ಪೂಜಿಸುತ್ತೇವೆಯೋ ಅದು ನಮ್ಮನ್ನು ಬಂಧಿಸುವುದಿಲ್ಲ.
* * * * *
ಮೋಹದಿಂದ ಪಾಲನೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೯.೦೬.೨೦೦೩ರಂದು ಪ್ರಕಟವಾಗಿತ್ತು)
ಮುಂದಿನ ಸೂತ್ರ ಬಹಳ ಅದ್ಭುತವಾದ ಸೂತ್ರ. "ಮೋಹಾವರಣಾತ್ ಸಿದ್ಧಿಃ" - ಮೋಹದ ಆವರಣದಿಂದ ಸಿದ್ಧಿಯುಂಟಾಗುತ್ತದೆ. ಇಂತಹ ಅತ್ಯಮೂಲ್ಯವಾದ ಸೂತ್ರ ಪ್ರಪಂಚದಲ್ಲಿ ಎಲ್ಲಿಯೂ ಸಿಗುವುದಿಲ್ಲ.
ಕಾಮವನ್ನು ನಾವು ಹೀಯಾಳಿಸಿದ್ದೇವೆ, ಮೋಹವನ್ನು ಹೀಯಾಳಿಸಿದ್ದೇವೆ. ಮೋಹ ಇಟ್ಟುಕೊಳ್ಳಕೂಡದು... ನಿಜ, ಮೋಹದಿಂದ ದುಃಖ ಉಂಟಾಗುತ್ತದೆ, ಅದೇ ಮೋಹದಿಂದ ಪರಿಪಾಲನೆಯೂ ಆಗುತ್ತದೆ.
ಒಂದು ನಾಯಿ ಅಥವಾ ಬೆಕ್ಕು ಮರಿ ಹಾಕುತ್ತೆ. ಮರಿ ಹಾಕಿ ಎಲ್ಲೋ ಹೋಗಿಬಿಡುತ್ತಾ? ಅದು ’ತನ್ನ ಮರಿಗಳನ್ನು’ ಕಾಪಾಡುತ್ತೆ. ಹೇಗೆ? ಮೋಹವಿಲ್ಲದಿದ್ದರೆ ಕಾಪಾಡಲು ಸಾಧ್ಯವೇ?
ಒಂದು ಗುಬ್ಬಚ್ಚಿ ಮೊಟ್ಟೆಯೊಡೆದು ಬಂದ ತನ್ನ ಪುಟ್ಟ ಮರಿಗಳಿಗೆ; ತನಗೆ ಆಹಾರವಿಲ್ಲದಿದ್ದರೂ ಆ ಮರಿಗಳಿಗೆ ’ಗುಟುಕು’ ಕೊಟ್ಟು ಪಾಲಿಸುತ್ತೆ. ಯಾಕೆ? ಮೋಹದಿಂದ ತನ್ನ ಮರಿಗಳನ್ನು ಪಾಲಿಸುತ್ತದೆ! ಅಲ್ಲವಾ?
ಹಾಗೇ ಪ್ರಾಣಿಗಳು ಸಹ. ಹಸು, ಯಾರಾದರೂ ತನ್ನ ಕರುವನ್ನು ಮುಟ್ಟಿದರೆ ದುರುಗುಟ್ಟಿಕೊಂಡು ನೋಡುತ್ತೆ. ’ಇದು ನನ್ನ ಮರಿ, ಇದನ್ನು ಸಾಕಬೇಕು, ಪಾಲನೆ ಮಾಡಬೇಕು’ ಎನ್ನುವ ಮೋಹವಿದ್ದರೇ ಪಾಲನೆ ಮಾಡಲು ಸಾಧ್ಯ!
ಹಾಗೇ ಒಂದು ಗಿಡ ಮರ ಸಹ ತನ್ನ ಬೀಜವನ್ನು ಎಷ್ಟೊಂದು ಜೋಪಾನವಾಗಿ ಪ್ರಸಾರ ಮಾಡುತ್ತೆ! ತೆಂಗಿನಕಾಯಿ ಮರದ ಮೇಲಿಂದ ಬಿದ್ದಾಗ ಒಡೆದುಹೋಗದಂತೆ, ನೀರಿನಲ್ಲಿ ತೇಲುವಂತೆ ಹಗುರಾದ ಸಿಪ್ಪೆಯೊಂದಿಗೆ ಬೀಳಿಸುತ್ತೆ. ಕೆಲವು ಸಸ್ಯಗಳು ತಮ್ಮ ಬೀಜವನ್ನು "ಗಾಳಿಯಲ್ಲಿ ತೂರಿಕೊಂಡು ಹೋಗು" ಎನ್ನುವಂತೆ ಬಿಡುತ್ತವೆ. ಪ್ರಕೃತಿಯಲ್ಲಿಯೇ ಇಂತಹ ವ್ಯವಸ್ಥೆ ಇದೆ.
ಹಾಗೆಯೇ ಪ್ರಪಂಚದಲ್ಲಿ ಯಾವುದಾದರೂ ಕೆಲಸ ಮಾಡಬೇಕಾದರೆ ಮೋಹ ಇದ್ದರೇ ಸಾಧ್ಯ... ನಿಮಗೆ ಜ್ಞಾನದ ಬಗ್ಗೆ ಮೋಹವಿದ್ದರೆ ತಾನೇ ಸತ್ಸಂಗಕ್ಕೆ ಮತ್ತೆ ಮತ್ತೆ ಬರುತ್ತೀರ. ಅಯ್ಯೋ ಭಜನೆ, ಸತ್ಸಂಗ ಇದೆಲ್ಲಾ ನಮಗೇಕೆ? ಹೇಗೋ ಆಗುತ್ತೆ ಬಿಡಿ, ಎನ್ನುವ ತಾತ್ಸಾರವುಂಟಾದರೆ ಸಿದ್ಧಿಯುಂಟಾಗುವುದಿಲ್ಲ. ಅದರಲ್ಲಿ ಒಂದು ಪೂರ್ಣತೆ ಸಿಗೋದಿಲ್ಲ.
* * * * *
ಮೋಹದಿಂದ ಸಿದ್ಧಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೦.೦೬.೨೦೦೩ರಂದು ಪ್ರಕಟವಾಗಿತ್ತು)
"ಮೋಹಾವರಣಾತ್ ಸಿದ್ಧಿಃ"
ಮೋಹದ ಆವರಣದಿಂದ ಸಿದ್ಧಿಯುಂಟಾಗುತ್ತದೆ. ಅದ್ಭುತವಾದ ಈ ಸೂತ್ರದ ಬಗ್ಗೆ ಇನ್ನೂ ಚೆನ್ನಾಗಿ ತಿಳಿದುಕೊಳ್ಳೋಣ.
ನಿಮಗೆ ಜ್ಞಾನದ ಬಗೆಗೆ ಮೋಹವಿದ್ದಾಗ ಅದನ್ನು ಆಸಕ್ತಿಯಿಂದ ತಿಳಿದುಕೊಳ್ಳುತ್ತೀರ. ಒಂದು ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾದರೂ ಆ ವಿದ್ಯೆಯ ಬಗ್ಗೆ ಮೋಹ ಇರಬೇಕು.
ಆಯುರ್ವೇದ ನೀವು ಓದುತ್ತಾ ಇದ್ದೀರಾ ಅಂದರೆ, ಆಯುರ್ವೇದದ ಬಗ್ಗೆ ಅಷ್ಟು ಮೋಹ ಇರಬೇಕು. ಅದರ ಬಗ್ಗೆ ಮೋಹ ಇದ್ದಷ್ಟೂ ನಿಮಗೆ ಅದರಲ್ಲಿ ಸಿದ್ಧಿಯುಂಟಾಗುತ್ತೆ.
ಈಗ ವೀಣೆ ಕಲಿಯುತ್ತೀರ, ತಂಬೂರಿ ಇಟ್ಕೊಂಡು ಹಾಡ್ತೀರ, ತಬಲ ನುಡಿಸುತ್ತೀರ, ಇದರ ಮೇಲೆ ಮೋಹ ಇದ್ದರೆ ಮಾತ್ರ ಕಲಿಯಲು ಸಾಧ್ಯ. ಕಂಪ್ಯೂಟರ್ ಕಲಿಯುತ್ತೀರ. ಅದರ ಮೇಲೆ ಎಷ್ಟು ಮೋಹ ಇರುತ್ತದೋ ಅಷ್ಟು ಸಿದ್ಧಿಯುಂಟಾಗುತ್ತದೆ ಅದರಲ್ಲಿ. ಏನೋ ಸಮಯ ಕಳೆಯಲು ನಾವೂ ಸ್ವಲ್ಪ ಕಲಿಯೋಣ ಎಂದು ಮಾಡುವ ಯಾವುದರಲ್ಲೂ ಪರಿಪೂರ್ಣತೆ ಇರುವುದಿಲ್ಲ. ಕಾಲಹರಣ ಮಾಡುವುದಕ್ಕೋಸ್ಕರ ಮಾಡುವುದರಲ್ಲಿ ಮೋಹ ಇರುವುದಿಲ್ಲ. ಅದರಿಂದ ಸಿದ್ಧಿಯಾಗಲೀ, ಸಫಲತೆಯಾಗಲೀ ಉಂಟಾಗುವುದಿಲ್ಲ.
ಯಾವುದೇ ಸಿದ್ಧಿಯಾಗಬೇಕಿದ್ದರೂ ಮಧ್ಯದಲ್ಲಿ ಸ್ವಲ್ಪ ತೊಂದರೆ ಉಂಟಾಗಿಯೇ ಆಗುತ್ತೆ. ಕಷ್ಟ ಆಗಿಯೇ ಆಗುತ್ತೆ. ಅದೇ ಪರೀಕ್ಷೆ! ಕೆಲವರಿಗೆ ಸ್ವಲ್ಪ ಆಗಬಹುದು. ಕೆಲವರಿಗೆ ಸ್ವಲ್ಪ ಜಾಸ್ತಿ ಆಗಬಹುದು. ಆದರೆ ಮೋಹ ಹೆಚ್ಚಿದ್ದಷ್ಟೂ ಅದರ ಬಗ್ಗೆ ನಮಗೆ ಚಿಂತೇನೇ ಆಗುವುದಿಲ್ಲ. ಅದನ್ನು ನಾವು ಗಣನೆಗೇ ತೆಗೆದುಕೊಳ್ಳುವುದಿಲ್ಲ.
* * * * *
ಮೋಹ ಉಪ್ಪಿನಷ್ಟಿರಲಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೧.೦೬.೨೦೦೩ರಂದು ಪ್ರಕಟವಾಗಿತ್ತು)
"ಮೋಹಾವರಣಾತ್ ಸಿದ್ಧಿಃ"
ಯಾವುದೇ ಕಲೆಯನ್ನಾಗಲೀ, ವಿದ್ಯೆಯನ್ನಾಗಲೀ ಸಾಧನೆ ಮಾಡಬೇಕಾದರೆ ಅದರಲ್ಲಿ ’ಮೋಹ’ ಇರಬೇಕು. ಆ ಜ್ಞಾನದ ಬಗ್ಗೆ ಎಷ್ಟು ಮೋಹ ಇರುತ್ತದೆಯೋ ಅಷ್ಟು ಸಿದ್ಧಿಯುಂಟಾಗುತ್ತದೆ. ಹಾಗೂ ಸೃಷ್ಟಿಯಲ್ಲಿ ಪಶು, ಪಕ್ಷಿ, ಪ್ರಾಣಿ, ಸಸ್ಯ ಈ ಎಲ್ಲದರಲ್ಲೂ ಮೋಹದಿಂದಲೇ ಹೇಗೆ ಪರಿಪಾಲನೆಯಾಗುತ್ತಿದೆ ಎನ್ನುವುದರ ಬಗೆಗೆ ವಿವರವಾಗಿ ವಿಚಾರ ಮಾಡಿದೆವು.
ಇದೇ ರೀತಿ ಸಂಸಾರದಲ್ಲಿ ಸಂಬಂಧಗಳು ಸ್ಥಿರವಾಗಿರಬೇಕಾದರೆ ಮೋಹ ಅವಶ್ಯವಾಗಿರಬೇಕು. ಪಾಶ್ಚಿಮಾತ್ಯ ದೇಶದಲ್ಲಿ ಇರತಕ್ಕಂಥ ಒಂದು ದೊಡ್ಡ ಕೊರತೆ ಎಂದರೆ ಪರಿವಾರದಲ್ಲಿ ಮೋಹವಿಲ್ಲ, ಬಂಧನವಿಲ್ಲ. ಅದಕ್ಕೇ ಪರಿವಾರ ಇರುವುದೇ ಇಲ್ಲ! ಅಲ್ಲಿ ಕಾಮ ಇದೆ. ಆದರೆ, ಕಾಮದ ಹಿಂದೆ ಮೋಹ ಇಲ್ಲ. ವ್ಯಭಿಚಾರ ಅಂತ ಅಂದರೆ ಇದೇನೇ. ಯಾವುದರಲ್ಲಿ ಸಂಬಂಧ ಸ್ಥಿರವಾಗಿಲ್ಲವೋ, ಸ್ಥಾಯಿಯಾಗಿಲ್ಲವೋ ಅದೇನೇ. ಅದರಿಂದ ಸುಖ ಇಲ್ಲ.
ಒಂದು ಸಂಸಾರ, ಪರಿವಾರ ಅಭಿವೃದ್ಧಿ ಹೊಂದಬೇಕಾದರೆ ಪತಿ ಪತ್ನಿಯರಲ್ಲಿ ಮೋಹವಿರಬೇಕು. ಮಕ್ಕಳ ಮೇಲಿರಬೇಕು ಮೋಹ. ಇಲ್ಲದಿದ್ದರೆ ಸಂಸಾರ ಪಾಲನೆಯಾಗುವುದಿಲ್ಲ, ಮುಂದುವರಿಯುವುದಿಲ್ಲ.
ಆದರೆ, ಈ ಮೋಹ ಹೆಚ್ಚಾದರೂ ಕಷ್ಟ, ಮೋಹ ಇಲ್ಲದಿದ್ದರೂ ಕಷ್ಟ. ಊಟದಲ್ಲಿ ಉಪ್ಪೇ ಇಲ್ಲದಿದ್ದರೂ ಕಷ್ಟ, ಒಂದು ಚಿಟಿಕೆ ಹೆಚ್ಚಾದರೂ ಕಷ್ಟ! ಅಲ್ಲವೆ? ಸಂಸಾರದಲ್ಲಿ ಮೋಹ ಉಪ್ಪಿನಂತಿರಬೇಕು, ಉಪ್ಪಿನಷ್ಟಿರಬೇಕು. ಈ ಉಪ್ಪಿನಂತಹ ಮೋಹ ವಿಪರೀತ ಜಾಸ್ತಿಯಾದಾಗ ಏನಾಗಬಹುದು? ನಡೆದ ಘಟನೆಯೊಂದನ್ನು ನಾಳೆ ತಿಳಿದುಕೊಳ್ಳೋಣ.
* * * * *
ಮೋಹ ಮಿತಿಯಲ್ಲಿರಲಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೨.೦೬.೨೦೦೩ರಂದು ಪ್ರಕಟವಾಗಿತ್ತು)
ಸ್ವಾಮೀಜಿಯೊಬ್ಬರು ಕಾನ್ಪುರದಲ್ಲಿ ಒಬ್ಬರ ಮನೆಗೆ ಅತಿಥಿಯಾಗಿ ಹೋಗಿದ್ದಾಗ ನಡೆದ ಘಟನೆ ಇದು. ಸಂಸಾರದಲ್ಲಿ ವಿಪರೀತ ಮೋಹ ಇಟ್ಟುಕೊಂಡಿದ್ದ ಆ ಮನೆಯ ಹಿರಿಯರಾದ ವಯೋವೃದ್ಧರ ಮನಃಸ್ಥಿತಿಯನ್ನು ಬಿಂಬಿಸುವಂತಿದೆ ಈ ಪ್ರಸಂಗ.
ಆ ಹಿರಿಯರ ಕುಟುಂಬದಲ್ಲಿ ಅವರ ಮಗ ಸೊಸೆ ಇಬ್ಬರೂ ನೌಕರಿಯಲ್ಲಿದ್ದರು. ಮನೆಯಲ್ಲಿ ಕಸಗುಡಿಸುವುದರಿಂದ ಮೊಮ್ಮಕ್ಕಳ ಪಾಲನೆಯವರೆಗೆ ಎಲ್ಲಾ ಕೆಲಸವನ್ನೂ ಆ ಹಿರಿಯರು ವಹಿಸಿಕೊಂಡು ಮಾಡುತ್ತಿದ್ದರು. ಇಷ್ಟೆಲ್ಲಾ ಮಾಡಿದರೂ ಆ ವೃದ್ಧರಿಗೆ ಅವರ ಮುಂಗೋಪಿಯಾದ ಮಗನಿಂದ ಸಿಕ್ಕಾಪಟ್ಟೆ ಬೈಗುಳ ಕೇಳುವುದು ತಪ್ಪಿರಲಿಲ್ಲ! ಒಂದು ಸಲ ಆ ಮಗ ತನ್ನ ತಂದೆಗೆ ಈ ಸ್ವಾಮೀಜಿ ಎದುರಿಗೇ ಕಪಾಳಕ್ಕೆ ಹೊಡೆದುಬಿಟ್ಟನಂತೆ!ಸ್ವಾಮೀಜಿಗೆ ತುಂಬಾ ಕರುಣೆಯುಂಟಾಗಿ, ನಂತರ ಆ ಹಿರಿಯರಿಗೆ, "ಏನಪ್ಪಾ, ನೀನ್ಯಾಕೆ ಈ ವಯಸ್ಸಿನಲ್ಲಿ ಇಷ್ಟು ಕಷ್ಟ ಪಡ್ತೀಯ. ನನಗೆ ತುಂಬಾ ಪರಿತಾಪವಾಗುತ್ತೆ. ನಾಲ್ಕೈದು ಆಶ್ರಮವಿದೆ. ನಮ್ಮ ಆಶ್ರಮಕ್ಕೆ ಬಂದುಬಿಡು. ನಿನ್ನನ್ನು ತುಂಬಾ ಚೆನ್ನಾಗಿ ನೋಡ್ಕೋತೀನಿ. ಈ ವಯಸ್ಸಿನಲ್ಲಿ ವದೆಗಿದೆ ತಿನ್ಕೊಂಡು ಯಾಕಿರ್ತೀರ ಈ ಮಕ್ಕಳ ಜೊತೆ! ಯಾಕಿಂಥ ಜೀವನ ಮಾಡಬೇಕು ಬಂದುಬಿಡು" ಅಂದರಂತೆ.
ಇಲ್ಲಿಯತನಕ ತನ್ನ ಕೊರಗನ್ನೆಲ್ಲಾ ಹೇಳಿಕೊಳ್ಳುತ್ತಿದ್ದ ಆ ಮನುಷ್ಯ ಒಂದೇ ಸಲ ಕಣ್ಣೆಲ್ಲಾ ಕೆಂಪು ಮಾಡಿಕೊಂಡು ಸ್ವಾಮೀಜೀನ ಕೇಳಿದರಂತೆ "ಏನು, ನಿಮಗೆ ಹಾಳು ಮಾಡೋಕೆ ಬೇರೆ ಯಾವುದೂ ಮನೆ ಸಿಕ್ಕಲಿಲ್ಲವಾ? ನಮ್ಮನೇನೇ ಆಗಬೇಕಾ? ಹೋಗಿ, ಬೇರೆ ಯಾವುದಾದರೂ ಮನೆ ಹುಡುಕಿಕೊಳ್ಳಿ, ಹಾಳುಮಾಡಿ. ನಾನು ಈ ಮನೆ ಬಿಟ್ಟು ಹೋಗಿಬಿಟ್ಟರೆ ಮಕ್ಕಳ ಮೊಮ್ಮಕ್ಕಳ ಗತಿ ಏನಾಗಬೇಕು? ಮಗ ಸೊಸೆ ಇಬ್ಬರೂ ಕೆಲ್ಸಕ್ಕೆ ಹೋಗಿಬಿಟ್ಟರೆ, ಮನೆಯ ಎಲ್ಲಾ ಕೆಲಸ ಮಾಡೋರು ಯಾರು? ಸುಮ್ಮನೆ ನಮ್ಮನೆ ಹಾಳುಮಾಡಬೇಡಿ. ನಿಮ್ಮ ದಾರಿ ನೋಡ್ಕೊಂಡು ಹೋಗಿ" ಅಂದರಂತೆ. ಸ್ವಾಮೀಜಿಗೆ ಏಕ್ದಂ ಗಾಬರಿಯಾಗಿ ಹೋಯ್ತು!!...
’ಮೋಹ’! ಆ ಮೋಹದಲ್ಲಿ ವದೆ ತಿಂದುಕೊಂಡಾದ್ರೂ ಅಲ್ಲೇ ಇರಬೇಕು. ಸತ್ತರೂ ಪರವಾಗಿಲ್ಲ, ಅಲ್ಲೇ ಇರಬೇಕು.
ಕೆಲವರು ಹಾಗೇ ತಮ್ಮ ಹಳೇಮನೆ ಬಿಟ್ಟು ಬೇರೆ ಮನೆಗೆ ಹೋಗಲ್ಲ. ’ನಾನು ಸತ್ತರೂ ಪರವಾಗಿಲ್ಲ, ಇದೇ ಮನೇಲಿರ್ತೀನಿ’, ಅಥವಾ ’ಇದೇ ಊರಲ್ಲಿರುತ್ತೀನಿ’ ಅಂತಾರೆ! ಊರಿನ ಬಗ್ಗೆ ಮೋಹ, ವ್ಯಕ್ತಿಗಳ ಬಗ್ಗೆ ಮೋಹ! ಈ ಮೋಹ ಒಂದು ಮಿತಿಯಲ್ಲಿ ಇದ್ದರೆ ಸಿದ್ಧಿಯುಂಟಾಗುತ್ತದೆ. ಅದೇ ಮೋಹ ಮಿತಿಮೀರಿದಾಗ, ಅತೀವ ದುಖಕ್ಕೆ ಕಾರಣವಾಗುತ್ತೆ. "ಮೋಹಾವರಣಾತ್ ಸಿದ್ಧಿಃ"
* * * * *
ಮೋಹದಿಂದ ಪಾರಾಗು
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೩.೦೬.೨೦೦೩ರಂದು ಪ್ರಕಟವಾಗಿತ್ತು)
ಮುಂದಿನ ಸೂತ್ರ - "ಮೋಹ ಜಯಾತ್ ಅನಂತ ಭೋಗಾತ್ ಸಹಜ ವಿದ್ಯಾ ಜಯಃ"
ಮೋಹದ ಜಯ ಸಂಪಾದಿಸಿಕೊಂಡಾಗ ಅನಂತ ಭೋಗ ಉಂಟಾಗುತ್ತದೆ. ಮೋಹದ ಸಿದ್ಧಿಯಲ್ಲಿ ಉಂಟಾಗುವ, ಕಾಣುವ ಸುಖ ತೀರಾ ಚಿಕ್ಕದು. ಅನಂತವಾದ ಸುಖ ನಿಮ್ಮದಾಗಿದೆ. ನಿಮ್ಮ ಚೇತನ ಅನಂತವಾಗಿದೆ, ವಿಸ್ತೃತವಾಗಿದೆ. ಆ ಪಾರವಿಲ್ಲದ ಆನಂದವನ್ನು ಅನುಭವಿಸಬೇಕಾದರೆ ಮೋಹದಿಂದ ಪಾರಾಗಲೇಬೇಕು, ಚಿಕ್ಕ ಸುಖವನ್ನು ಬಿಡಲೇಬೇಕು.
ಮೋಹದ ಜಯ ಇಲ್ಲದಿದ್ದರೆ ಚಿಕ್ಕ ಮನಸ್ಸು ’ನಾನು’ ’ನನ್ನ ಮಗ’, ’ನನ್ನ ಮಗಳು’, ’ನನ್ನ ಮನಸ್ಸು’... ಇಷ್ಟರಲ್ಲೇ ಸೀಮಿತವಾಗಿರ್ತೀವಿ. ಬೇರೆಯ ಮಕ್ಕಳೂ ಸಹ ನನ್ನ ಮಕ್ಕಳಂತೆಯೇ, ಇವರೆಲ್ಲಾ ನಮ್ಮವರೇ ಎನ್ನುವ ವಿಶಾಲ ಭಾವ ಮೋಹದ ಜಯದಿಂದ ಮಾತ್ರ ಸಾಧ್ಯ. ’ನಿರ್ಮೋಹಿಗಳಾಗಿ’ ಅಂತ ತುಂಬ ಕೇಳಿದೀರ. ಪೈಗಂಬರರಾದಿಯಾಗಿ ಎಲ್ಲರೂ ಮೋಹದಿಂದ ದೂರವಾಗಿ ಅಂತ ಹೇಳ್ತಾ ಬಂದಿದಾರೆ.
ಮೋಹವನ್ನು ಜಯಿಸಿದಾಗ ಸಿದ್ಧಿಯುಂಟಾದರೂ, ಅದರಲ್ಲೇ ಸಿಕ್ಕಿಹಾಕಿಕೊಳ್ಳುವುದರಿಂದ ಪ್ರಯೋಜನವಿಲ್ಲ.
ಯಾವುದೋ ಒಂದು ಸಿದ್ಧಿಯಾಯ್ತು. ಈಗ ನೀವು ವೀಣೆ ನುಡಿಸುವುದನ್ನು ಕಲಿಯುತ್ತೀರ. ಅದರಲ್ಲಿ ಪರಿಣಿತರಾಗ್ತೀರ. ಆಗ ಅದನ್ನೇ ಹಿಡಿದುಕೊಂಡು "ನನ್ನಂಥಹವರಿಲ್ಲ" ಅಂತ ಅಂದುಕೊಂಡರೆ ಅಹಂಕಾರ ಉಂಟಾಗುತ್ತೆ. ಬೇರೆ ಯಾರಾದರೂ ನಿಮಗಿಂತ ಚೆನ್ನಾಗಿ ವೀಣೆ ನುಡಿಸುವವರು ಸಿಕ್ಕಿದರೆ... ಅಷ್ಟೆ! ಅಸೂಯೆ ಉಂಟಾಗುತ್ತೆ. ನಿಮ್ಮ ಪ್ರಸನ್ನತೆ, ಶಾಂತತೆ ಎಲ್ಲಾ ಭಂಗವಾಯಿತು! ಮೋಹದಿಂದ, ಯಾವುದೇ ಸಿದ್ಧಿ ಸೀಮಿತವಾಗಿದೆ, ಯಾವುದೇ ಸುಖ ಸೀಮಿತವಾಗಿದೆ. ಸೀಮಿತವಾಗಿದ್ದಾಗ ಅದರೊಂದಿಗೆ ಬಾಲಂಗೋಚಿ ಇರುತ್ತದೆ. ಅದೇ ದುಃಖ. ನಿಮ್ಮ ಪ್ರತಿಯೊಂದು ಸುಖದ ಜೊತೆಯಲ್ಲಿಯೂ ಸ್ವಲ್ಪ ದುಃಖ ಬೆರೆತಿರುತ್ತದೆ. ಮೋಹ ಜಯದಿಂದ ಅನಂತ ಭೋಗ ಎಂದರೆ ’ಕೊನೆಯಿಲ್ಲದಂತಹ ಆತ್ಮನ ಅನುಭೂತಿ’ ಉಂಟಾಗುತ್ತದೆ.
* * * * *
ಮೋಹ ವಿಸ್ತರಿಸಿಕೊಳ್ಳಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೪.೦೬.೨೦೦೩ರಂದು ಪ್ರಕಟವಾಗಿತ್ತು)
"ಮೋಹ ಜಯಾತ್ ಅನಂತ ಭೋಗಾತ್"
ಶ್ರೀಕೃಷ್ಣನಿಗೆ ’ಮೋಹನ’ ಅಂತ ಏಕೆ ಕರೆದಿದ್ದಾರೆ ಗೊತ್ತಾ? ’ಮನಮೋಹನ’ ಅಂದರೆ ಮನಸ್ಸನ್ನು ಆಕರ್ಷಿಸತಕ್ಕಂಥಹ, ಸಂಪೂರ್ಣವಾಗಿ ಬಂಧಿಸತಕ್ಕಂಥಹವನು ಅಂತ. ಇದು ಗೃಹಸ್ಥರ ಮಾರ್ಗ. ನಿಮ್ಮ ಮೋಹವನ್ನು ವಿಸ್ತಾರ ಮಾಡಿಕೊಂಡು ಹೋಗಿ. 'ಆ ಆತ್ಮ ಚೇತನದಲ್ಲಿ ಮೋಹ ಬಂದುಬಿಡಲಿ. ಅತಿದೊಡ್ಡ, ಅನಂತವಾದ ಸುಖಕ್ಕೆ ಮೋಹ ಉಂಟಾಗಲಿ’ ತೃಪ್ತಿ ಆಗಿಬಿಡುವುದು ಬೇಡ ಚಿಕ್ಕಚಿಕ್ಕದರಲ್ಲಿ! ನೋಡಿ ಇದು ವಿರೋಧಾತ್ಮಕವಾಗಿದೆ. ಒಂದು ಕಡೆ ಹೇಳ್ತೀವಿ ತೃಪ್ತಿಯಾಗಿರಬೇಕು ಅಂತ, ಇನ್ನೊಂದು ಕಡೆ ಹೇಳ್ತೀವಿ ’ತೃಪ್ತಿಯಾಗಿದ್ದು ಬಿಡಬೇಡಿ’ ಅಂತ. ಎರಡೂ ಒಟ್ಟಿಗೇ ಆಗಬೇಕು. ಒಂದಾದರ ಮೇಲೊಂದಲ್ಲ. ಒಟ್ಟಿಗೆ ’ತೃಪ್ತಿ, ಅತೃಪ್ತಿ’ ಎರಡೂ ಇರಬೇಕು!! ಅರ್ಥ ಆಗ್ತಾ ಇದೆಯಾ? ತುಂಬಾ ಸೂಕ್ಷ್ಮವಾದುದು ಈ ಜ್ಞಾನ.
ಮೋಹನ - ತನ್ನ ಕಡೆಗೆ ಆಕರ್ಷಿಸತಕ್ಕಂಥ ಆ ಶಕ್ತಿ. ಆ ದಿವ್ಯಶಕ್ತಿ, ಜ್ಞಾನಶಕ್ತಿ, ಗುರುಶಕ್ತಿ, ಅದಕ್ಕೆ ’ಮೋಹನ’ ಅಂತ ಹೆಸರು. ಆ ಆಕರ್ಷಣೆ ಎಷ್ಟು ಪ್ರಬಲವಾಗಿದೆ ಎಂದರೆ ಬೇರೆ ಎಲ್ಲಾ ಸುಖವೂ ಅದರ ಮುಂದೆ ಕ್ಷೀಣವಾಗಿ ಕಾಣಿಸುತ್ತದೆ.
ಸತ್ಸಂಗದ ಸುಖ, ಭಕ್ತಿಯ ರಸ, ಭಕ್ತಿಯ ಆನಂದ ಒಂದು ಸಲ ಸಿಕ್ಕಿಬಿಟ್ಟರೆ ಸಾಕು, ಮಿಕ್ಕಿದ್ದೆಲ್ಲ ಏನೂ ರುಚಿಸುವುದಿಲ್ಲ. ಆ ಭಕ್ತಿಯಲ್ಲಿ ಮೈಮರೆತು ನೃತ್ಯ ಮಾಡಿದಾಗ, ಹಾಡಿದಾಗ, ಪೂರ್ಣವಾಗಿ ಶರಣಾಗತಿ ಆದಾಗ ನಮ್ಮಲ್ಲಿ ಉಂಟಾಗತಕ್ಕಂಥ ಅನಂತ ಭೋಗ, ಆನಂದ, ಸುಖ ಇವುಗಳನ್ನು ಮಿಕ್ಕೆಲ್ಲ ಸುಖಕ್ಕೆ ಹೋಲಿಸಿದಾಗ, ಮಿಕ್ಕೆಲ್ಲ ಸುಖವೂ ತೀರಾ ಸಪ್ಪೆಯಾಗಿ, ಚಿಕ್ಕದಾಗಿ ಕಾಣುತ್ತದೆ.
ಮುಂದಿನದು - ’ಸಹಜ ವಿದ್ಯಾ ಜಯ’. ಇದರ ಬಗ್ಗೆ ನಾಳೆ ವಿಚಾರ ಮಾಡೋಣ.
* * * * *
ಸಹಜ ವಿದ್ಯಾ ಜಯ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೫.೦೬.೨೦೦೩ರಂದು ಪ್ರಕಟವಾಗಿತ್ತು)
"ಮೋಹ ಜಯಾತ್ ಅನಂತ ಭೋಗಾತ್ ಸಹಜ ವಿದ್ಯಾ ಜಯಃ"
ಅನಂತ ಭೋಗ ಉಂಟಾಗಬೇಕಾದರೆ, ಹೆಚ್ಚು ಸುಖ ಪಡೆಯಬೇಕಾದರೆ ಚಿಕ್ಕ ಸುಖಗಳಿಂದ ಮೇಲೇಳಬೇಕು. ಅದರಲ್ಲಿಯೇ ಮುಳುಗಿದ್ದರೆ ಪ್ರಯೋಜನವಿಲ್ಲ. ’ಸಹಜ ವಿದ್ಯಾ ಜಯ’ ಉಂಟಾದಾಗ ನಿಮ್ಮಲ್ಲಿ ಸಹಜತೆ ತಾನಾಗಿಯೇ ಉಂಟಾಗುತ್ತದೆ. ’ಸಹಜ ವಿದ್ಯಾ ಜಯ’ ಎಂದರೆ ಏನೂ ಪ್ರಯತ್ನ ಮಾಡಬೇಕಾಗಿಲ್ಲ. ಸಹಜವಾಗಿಯೇ, ’ನೀರು ಕುಡಿದ ಹಾಗೆ’ ನೀವು ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುತ್ತೆ. ಸಹಜ ವಿದ್ಯಾ ಜಯ ಉಂಟಾದಾಗ ನಿಮ್ಮ ಅಂತಃಸ್ಫುರಣ ಶಕ್ತಿ ಹೆಚ್ಚಾಗುತ್ತದೆ. ಆಗ ಯಾವ ಕೆಲಸ ಮಾಡಿದರೂ ಆ ಕೆಲಸಕ್ಕೆ ಸಿದ್ಧಿ, ಫಲ ತನ್ನಷ್ಟಕ್ಕೆ ತಾನೇ ಉಂಟಾಗುತ್ತಾ ಹೋಗುತ್ತದೆ. ಸಧ್ಯಃಫಲ - ತಕ್ಷಣವೇ ಫಲ ಸಿಗುವ ಹಾಗಾಗುತ್ತದೆ.
ಕೆಲವರು ವರ್ಷಾನುಗಟ್ಟಲೆ ಕಲಿತುಕೊಂಡು ಟಿ ವಿ ರಿಪೇರಿ ಮಾಡ್ತಾರೆ. ಸಹಜ ವಿದ್ಯಾ ಜಯ ಇರುವವರು ಏನೂ ಕಲಿತುಕೊಂಡಿರುವುದಿಲ್ಲ. ಏನೋ ನೋಡೋಣ ಅಂತ ಸುಮ್ಮನೆ ಹೋಗಿ ಈ ಬಟನ್ ಆ ಬಟನ್ ಅದುಮಿ ಏನೋ ಒಂದಷ್ಟು ಮಾಡುವುದರಲ್ಲಿ ಸರಿಹೋಗಿ ರಿಪೇರಿ ಆಗಿಬಿಡುತ್ತದೆ ನೋಡಿ! ಹಾಗೇ ಕಾರು ಅಥವಾ ವ್ಯಾನ್ ರಿಪೇರಿ - ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿಕೊಂಡು ಬಂದಿರುವವರು ಪುಸ್ತಕ ಹೊರಳಿಸಿ ಹೊರಳಿಸಿ ಬೇಕಾದ ಉಪಕರಣಗಳು, ಸಾಕಷ್ಟು ಸಮಯ ಎಲ್ಲ ತೆಗೆದುಕೊಂಡು ಸರಿ ಮಾಡ್ತಾರೆ. ಕೆಲವರು ಒಳ್ಳೆಯ ಡ್ರೈವರುಗಳು, ಮೆಕ್ಯಾನಿಕುಗಳು - ಅವರು ಏನನ್ನೂ ಓದಿ ತಿಳಿದುಕೊಂಡಿರುವುದಿಲ್ಲ. ಗಾಡಿ ನಿಂತು ಹೋದಾಗ ಏನೋ ಅಲ್ಲಿ ಇಲ್ಲಿ ವೈರ್ ಎಳೆದು, ಸೇರಿಸಿ ಏನೋ ಮಾಡ್ತಾರೆ, ಗಾಡಿ ಸರಿಹೋಗಿ ಬಿಡುತ್ತದೆ!
ಸಹಜ ವಿದ್ಯಾ ಪ್ರಾಪ್ತಿಯಾದವರಿಗೆ ಸಹಜವಾಗಿಯೇ ಅವರು ಮಾಡತಕ್ಕ ಕೆಲಸಗಳಲ್ಲಿ ಸಿದ್ಧಿಯುಂಟಾಗಲು ಶುರುವಾಗುತ್ತದೆ, ಜೀವನ ಸುಗಮವಾಗುತ್ತೆ. ಎಂತೆಂಥಹ ಕಷ್ಟಕರವಾದ ಪರಿಸ್ಥಿತಿಯಲ್ಲಿ ಕೂಡಾ ನಗುನಗುತ್ತಾ, ಪ್ರಸನ್ನತೆಯಿಂದ ಸಹಜವಾಗಿ ಮುಂದೆ ಹೋಗುವುದಕ್ಕೆ ಸಾಧ್ಯವಾಗುತ್ತದೆ.
* * * * *
ಸನ್ಯಾಸ; ’ಭಯ ಭಕ್ತಿ’
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೬.೦೬.೨೦೦೩ರಂದು ಪ್ರಕಟವಾಗಿತ್ತು)
ಸನ್ಯಾಸ ಎಂದರೇನು?
’ನಾನು ಯಾರೂ ಅಲ್ಲ, ನನಗೇನೂ ಬೇಕಾಗಿಲ್ಲ' ಅಥವಾ 'ನಾನೇ ಎಲ್ಲವೂ, ಎಲ್ಲವೂ ನನ್ನದೇ ಆಗಿದೆ’ ಅಂಬ ಅನುಭಾವ.
ತುಂಬಾ ಜನ ಸನ್ಯಾಸ ತೆಗೆದುಕೊಳ್ಳುವುದು ಯಾಕೆ? ಮೋಹದ ಭಯ! ಎಲ್ಲಾ ಬಿಟ್ಟುಬಿಟ್ಟು ಮನೆಯಿಂದ ಎಲ್ಲೋ ಓಡಿ ಹೊರಟುಹೋದರೆ ಮೋಹದಿಂದ ತಪ್ಪಿಸಿಕೊಳ್ತೀನಿ ಅಂತ! ಮನೆಯಿಂದ ಓಡಿ ಹೋದರೆ ಮೋಹ ಬಿಟ್ಟು ಹೋಗುತ್ತಾ? ಆಗ ದಂಡ, ಕಮಂಡಲಗಳ ಮೇಲೆ, ಕಾಷಾಯ ವಸ್ತ್ರದ ಮೇಲೆ, ಅವರು ಪೂಜೆ ಮಾಡುವ ವಿಗ್ರಹಗಳ ಮೇಲೆ, ವಸ್ತುಗಳ ಮೇಲೆ ಮೋಹ ಉಂಟಾಗುತ್ತೆ...!
ಅವುಗಳನ್ನು ಬೇರೆ ಯಾರಾದರೂ ಮುಟ್ಟಿಬಿಟ್ಟರೆ, ಅಥವಾ ತೆಗೆದುಕೊಂಡು ಹೋಗಿಬಿಟ್ಟರೆ, ಅಷ್ಟೆ, ಮುಗೀತು ಕಥೆ! ದುಃಖ ಉಕ್ಕಿ ಬರುತ್ತೆ, ಇನ್ನು ಕೋಪ ತಾಪ.... ಎಲ್ಲರಿಗೂ ಶಾಪ ಹಾಕುವುದಕ್ಕೆ ಶುರುಮಾಡಿ ಬಿಡ್ತಾರೆ ಅಷ್ಟೆ. ಮಠಗಳಲ್ಲಿ ಎಷ್ಟೋ ಜನ ಗುರುಗಳನ್ನು ಕಂಡರೆ ಹೆದರಿಕೊಂಡು ಕೂತಿರುತ್ತಾರೆ. ಯಾಕೆ? ಎಲ್ಲಾದರೂ ಶಾಪಗೀಪ ಹಾಕಿಬಿಟ್ಟರೆ ಅಂತ ಭಯ!! ಭಯವಿದ್ದಾಗ ಭಕ್ತಿ ಎಲ್ಲೋ ಹೊರಟು ಹೋಗಿರುತ್ತದೆ. ಮನಸ್ಸಿನಲ್ಲಿ ಪ್ರೇಮದಿಂದಿರುವವರು ತುಂಬಾ ಕಡಿಮೆ ಜನ ಇರುತ್ತಾರೆ.
ವಾಡಿಕೆಯಲ್ಲಿ ಹೇಳುವುದುಂಟು ’ಭಯ ಭಕ್ತಿ ಇರಬೇಕ್ರಿ, ದೊಡ್ಡೋರು ಅಂದ್ರೆ. ಏನಂದುಕೊಂಡಿದೀರ! ಏನು ಭಯ ಬೇಡವಾ?!’ ಎಲ್ಲರೂ ಸಾಮಾನ್ಯವಾಗಿ ಅದೇ ಧೋರಣೇಲಿ ಮಾತಾಡ್ತಾರೆ. ತಪ್ಪು! ಭಯ ಇದ್ದರೆ ಭಕ್ತಿ ಇರುವುದಕ್ಕಾಗುವುದಿಲ್ಲ. ಭಕ್ತಿಯಿದ್ದರೆ ಭಯ ಇರುವುದಕ್ಕಾಗುವುದಿಲ್ಲ. ಅವೆರಡೂ ಒಟ್ಟಿಗೇ ಸೇರುವುದಿಲ್ಲ. ಬೆಳಕು ಕತ್ತಲೆ ಎರಡೂ ಒಟ್ಟಿಗಿರುವುದು ಹೇಗೆ ಸಾಧ್ಯವಿಲ್ಲವೋ ಹಾಗೆ ’ಭಯ ಭಕ್ತಿ’ ಎರಡೂ ಒಟ್ಟಿಗೇ ಇರುವುದಕ್ಕೆ ಸಾಧ್ಯವೇ ಇಲ್ಲ. ಭಕ್ತಿ ಇದ್ದರೆ ಭಯ ಹೇಗೆ ಇರೋಕೆ ಸಾಧ್ಯಾಪ್ಪಾ? ರೂಢಿ ಮಾತಿನಲ್ಲಿ ನಾವು ಹೇಳ್ತೀವಿ ’ಭಯ ಭಕ್ತಿ’ ಅಂತ ಅಷ್ಟೆ.
ಹಿಂದಿನ ಸೂತ್ರದಲ್ಲಿ ’ಮೋಹ ಜಯಾತ್’ ಅಂತ ಹೇಳಿದರು. ಆದರೆ ’ನನಗೆ ಮೋಹವನ್ನು ಜಯಿಸುವುದಕ್ಕೆ ಆಗೋದೇ ಇಲ್ಲ. ಮೋಹವನ್ನು ಹೇಗೆ ಜಯಿಸೋದು?’ ಎನಿಸಿದಾಗ - ಅದಕ್ಕೆ ಮುಂದಿನ ಸೂತ್ರ ಹೇಳ್ತಾರೆ "ಜಾಗೃತ್ ದ್ವಿತೀಯ ಕರಃ" ಎಂದು.
* * * * *
ಜಾಗೃತ್ ಅವಸ್ಥೆ ಪ್ರಮುಖವಲ್ಲ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೭.೦೬.೨೦೦೩ರಂದು ಪ್ರಕಟವಾಗಿತ್ತು)
ಮುಂದಿನ ಸೂತ್ರ - "ಜಾಗೃತ್ ದ್ವಿತೀಯ ಕರಃ" - ಅಂದರೆ ಈ ಜಾಗೃತಾವಸ್ಥೆ ಎಡಗೈ ಇದ್ದ ಹಾಗೆ. ತೀರಾ ಸುಲಭವಾಗಿ ಉಪಲಭ್ಧವಾಗುವಂತಹುದು. ನಾವು ಈ ಜಾಗೃತಾವಸ್ಥೆಯನ್ನೇ ದೊಡ್ಡದು ಅಂದುಕೊಂಡಿದ್ದೀವಿ. ಹಾಗೇನಿಲ್ಲ, ಇದೂ ಒಂದು ಅವಸ್ಥೆ, ಅಷ್ಟೇನೇ. ಜಾಗೃದವಸ್ಥೆ ಒಂದೇನಾ ಜೀವನ? ಸ್ವಪ್ನ ಕಾಣುತ್ತೀರ, ಅದೊಂದು ಜೀವನ ಇದೆ. ನಿದ್ರೆ ಮಾಡ್ತೀರ, ಅದೊಂದು ಬೇರೆಯೇ ಆದ ಜೀವನ. ಜೀವನದಲ್ಲಿ ಬೇರೆ ಬೇರೆ ಅವಸ್ಥೆಗಳ ಬೇರೆ ಬೇರೆ ಕಂಪಾರ್ಟ್ಮೆಂಟ್ (ಕೊಠಡಿ)ಗಳಿವೆ. ಒಂದು ರೂಮಿನಿಂದ ಇನ್ನೊಂದಕ್ಕೆ ಕಿಟಿಕಿ ಇಲ್ಲ, ಬಾಗಿಲು ಇಲ್ಲ, ಸಂಪರ್ಕ ಇಲ್ಲ. ಇಲ್ಲಿಂದಲ್ಲಿಗೆ ನೀವು ಹೇಗೋ ಹೊರಟುಹೋಗ್ತೀರ. ಆದರೆ, ಒಂದು ಅವಸ್ಥೆಯಲ್ಲಿದ್ದಾಗ ಇನ್ನೊಂದನ್ನು ನೋಡುವುದಕ್ಕೆ ಆಗ್ತಾ ಇಲ್ಲ. ಅನುಭವಿಸುವುದಕ್ಕೆ ಆಗ್ತಾ ಇಲ್ಲ. ಆದ್ದರಿಂದ ಜಾಗೃತಾವಸ್ಥೆಯಲ್ಲಿ ನಡೆಯುವ ಚಟುವಟಿಕೆಗಳೆಲ್ಲ ತುಂಬಾ ಮಹತ್ವಪೂರ್ಣವಾದದ್ದೇನಲ್ಲ. ’ಜಾಗೃತ್ ದ್ವಿತೀಯ ಕರಃ’.
ಒಂದು ಚಿಕ್ಕ ಉದಾಹರಣೆ - ’ಹೋದ ಗುರುವಾರ ಏನು ಊಟ ಮಾಡಿದಿರಿ?’ ಎಂದು ನಿಮ್ಮನ್ನು ಯಾರಾದರೂ ಕೇಳಿದರೆ ಜ್ಞಾಪಕ ಬರುತ್ತಾ? ಮದುವೆ, ಮುಂಜಿ... ಹೀಗೆ ವಿಶೇಷವಾದ ಔತಣವಿದ್ದರೆ ಜ್ಞಾಪಕವಿರುತ್ತೆ ಅಷ್ಟೆ. ಆದರೆ ಸಾಧಾರಣವಾದ ದಿನಗಳಲ್ಲಿ ಯಾವುದು ಸಹಜವಾಗಿ, ಸಾಧಾರಣವಾಗಿರುತ್ತದೆಯೋ ಅದನ್ನು ನಾವು ತಲೆಯಲ್ಲಿ ನೆನಪಿಟ್ಟುಕೊಳ್ಳುವುದಿಲ್ಲ, ಅಲ್ಲವಾ?
ಹಾಗೆಯೇ ಜೀವನದಲ್ಲಿ ಬರುವಂತಹ ಕೆಲವು ಒಳ್ಳೆಮಾತು, ಕೆಲವು ಕೆಟ್ಟಮಾತು, ಕೆಲವು ಒಳ್ಳೆ ಘಳಿಗೆ, ಕೆಲವು ಕೆಟ್ಟ ಘಳಿಗೆ, ರಾಗ, ದ್ವೇಷ, ನಿಂದೆ, ಹೊಗಳಿಕೆ, ಕೆಲವು ವಿರೋಧ, ಕೆಲವು ಪ್ರೀತಿಯ ಮಾತುಗಳು ಇಂತಹವಕ್ಕೆಲ್ಲಾ ನಾವು ಹೆಚ್ಚು ಪ್ರಾಮುಖ್ಯತೆ ಕೊಡಬೇಕಾಗಿಲ್ಲ. ಏಕೆಂದರೆ ಜೀವನದಲ್ಲಿ ಜಾಗೃತಾವಸ್ಥೆ ’ಎರಡನೆಯ ಕೈ’ ಆಗಿ ಬಿಡಬೇಕು. ಮನಸ್ಸು ಅಷ್ಟು ನಿರ್ಲಿಪ್ತವಾಗಿರಬೇಕು, ನಿರ್ಲಿಪ್ತವಾಗಿರುತ್ತದೆ. ಯಾವಾಗ? "ಸಹಜ ವಿದ್ಯಾ ಜಯ" ಉಂಟಾದಾಗ. ಆಗಲೇ "ಸ್ವಾತ್ಮಾನಂದ ಪ್ರಕಾಶವಪುಷಯೇ"... ಮೊದಲನೆಯ ಸೂತ್ರಕ್ಕೆ ಮತ್ತೆ ನಾವು ಬಂದುಬಿಡ್ತೀವಿ. ಮುಗ್ಧತೆ, ಆನಂದ, ಸರಳತನ ಜೀವನದಲ್ಲಿ ಹೊಮ್ಮಿ ಬರುತ್ತೆ.