ಗುರುವಾರ, ಏಪ್ರಿಲ್ 4, 2013

ಪ್ರೇಮ ಮತ್ತು ಕ್ಷಮೆ


ಎಪ್ರಿಲ್ ೦೪, ೨೦೧೩
ಅಟ್ಲಾಂಟಾ, ಜಾರ್ಜಿಯಾ

ಓಂ ಶಾಂತಿಃ ಶಾಂತಿಃ ಶಾಂತಿಃ (ವೈಯಕ್ತಿಕವಾಗಿ ಮತ್ತು ಸಮಸ್ತ ಜಗತ್ತಾಗಿ, ದೇವರು ನಮಗೆ ಶಾಂತಿಯನ್ನು ತರಲಿ)
ಇವತ್ತು ಪ್ರೇಮ ಮತ್ತು ಕ್ಷಮಾಪಣೆಯ ಬಗ್ಗೆ ನಿಮ್ಮೊಂದಿಗೆ ಮಾತನಾಡುವುದು ನನಗೆ ಸಂತೋಷವನ್ನು ತರುತ್ತಿದೆ. ಈ ವಿಷಯವು ಬಹಳ ವಿಶಾಲವಾದುದು, ಬಹಳ ಮಹತ್ತಾದುದು ಮತ್ತು ಆದರೂ ನಮ್ಮ ಮಾನವೀಯ ಅಸ್ತಿತ್ವಕ್ಕೆ ಬಹಳ ಮೂಲಭೂತವಾದುದು. ಆದುದರಿಂದ, ಪ್ರೇಮ ಮತ್ತು ಕ್ಷಮಾಪಣೆಯ ವಿಷಯಕ್ಕೆ ನಾನು ಹೇಗೆ ನ್ಯಾಯವನ್ನು ಒದಗಿಸಬಹುದೆಂದು ನೋಡುತ್ತೇನೆ.

ಮೊದಲನೆಯದಾಗಿ, ಪ್ರೇಮವೆಂದರೆ ಅಡಗಿಸಿಡಲಾಗದ್ದು. ನಿಮಗೆ ಪ್ರೇಮವನ್ನು ಅಡಗಿಸಿಡಲೂ ಸಾಧ್ಯವಿಲ್ಲ, ಅದನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲೂ ಸಾಧ್ಯವಿಲ್ಲ. ಅದು ನಿಮ್ಮ ಕಣ್ಣುಗಳಲ್ಲಿ, ನಿಮ್ಮ ಮುಗುಳ್ನಗೆಯಲ್ಲಿ, ನಿಮ್ಮ ಹಾವಭಾವಗಳಲ್ಲಿ ಕಾಣಿಸಿಕೊಳ್ಳುತ್ತದೆ. ನಿಮಗೆ ಯಾವತ್ತಿಗೂ ಪ್ರೇಮವನ್ನು ಅಡಗಿಸಿಡಲು ಸಾಧ್ಯವಿಲ್ಲ; ಅದೇ ವೇಳೆ ನಿಮಗೆ ಪ್ರೇಮವನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲೂ ಸಾಧ್ಯವಿಲ್ಲ. ಜಗತ್ತಿನ ಸುತ್ತಲೂ ಇರುವ ಎಲ್ಲಾ ಪ್ರೇಮಿಗಳು ಅನುಭವಿಸಿರುವ ಸಂಕಟವು ಇದೇ. ಅವರು ಎಷ್ಟೇ ವ್ಯಕ್ತಪಡಿಸಿದರೂ ಕೂಡಾ, "ನಾನು ಬಯಸುವ ರೀತಿಯಲ್ಲಿ ನನಗೆ ಅದನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ" ಎಂದು ಭಾವಿಸುತ್ತಾರೆ. ಅದು ಪ್ರೇಮದ ಸ್ವಭಾವ.

ಅದೇ ರೀತಿಯಲ್ಲಿ, ಸತ್ಯವೆಂದರೆ ನೀವು ತಪ್ಪಿಸಲು ಸಾಧ್ಯವಾಗದೇ ಇರುವಂತಹದ್ದು. ನಿಮಗೆ ಸತ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಆದರೂ ನಿಮಗೆ ಸತ್ಯವನ್ನು ನಿರೂಪಣೆ ಮಾಡಲು ಸಾಧ್ಯವಿಲ್ಲ.

ಸೌಂದರ್ಯವೆಂದರೆ, ಯಾವುದನ್ನು ನಿಮಗೆ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲವೋ ಅದು, ಮತ್ತು ನಿಮಗೆ ಅದನ್ನು ತ್ಯಜಿಸಲು ಕೂಡಾ ಸಾಧ್ಯವಿಲ್ಲ. ನಿಮಗೆ ಯಾವತ್ತಿಗೂ ಸೌಂದರ್ಯವನ್ನು ತ್ಯಜಿಸಲು ಸಾಧ್ಯವಿಲ್ಲ. ಮತ್ತು ಜೀವನವು ಸತ್ಯ, ಪ್ರೇಮ ಮತ್ತು ಸೌಂದರ್ಯವಾಗಿದೆ; ಎಲ್ಲಾ ಮೂರು ವಿಷಯಗಳು ಜೊತೆಯಲ್ಲಿ. ಆದರೆ ನಮ್ಮ ಅನುಭವವು ಬೇರೇನೋ ಆಗಿದೆ.

ನಾವು ನಮ್ಮ ಜೀವನದಲ್ಲಿ ಎಲ್ಲಾ ವೇಳೆಯೂ ಪ್ರೇಮವನ್ನು ಅನುಭವಿಸುವುದಿಲ್ಲ. ನಮಗೆ ದ್ವೇಷ, ಮಾತ್ಸರ್ಯ, ಲೋಭ, ದುರಹಂಕಾರ, ಈ ಎಲ್ಲಾ ನಕಾರಾತ್ಮಕ ಭಾವನೆಗಳು ಕಂಡುಬರುತ್ತವೆ.

ಮಕ್ಕಳಾಗಿ, ನಾವೆಲ್ಲರೂ ಶುದ್ಧವಾದ ಪ್ರೇಮದೊಂದಿಗೆ ಹುಟ್ಟಿದೆವು. ನಾವು ದೊಡ್ಡವರಾಗಿ ಬೆಳೆಯುತ್ತಿದ್ದಂತೆ ಏನಾಯಿತು? ಈ ಮುಗ್ಧತೆಯನ್ನು ನಾವು ಎಲ್ಲಿ ಕಳೆದುಕೊಂಡೆವು? ನಮಗೇನಾಯಿತು?

ಈ ನಕಾರಾತ್ಮಕ ಭಾವನೆಗಳ ಶಾಸ್ತ್ರದ ಒಳಕ್ಕೆ ಆಳವಾಗಿ ನಾವು ನೋಡಿದರೆ, ಈ ನಕಾರಾತ್ಮಕ ಭಾವನೆಗಳ ಕೆಳಗೆ ಕೂಡಾ ಪ್ರೇಮವಿದೆಯೆಂಬುದು ನಮಗೆ ಕಂಡುಬರುತ್ತದೆ. ನಾವು ಕೋಪಗೊಳ್ಳುತ್ತೇವೆ ಯಾಕೆಂದರೆ ನಾವು ಪರಿಪೂರ್ಣತೆಯನ್ನು ಪ್ರೀತಿಸುತ್ತೇವೆ. ಯಾರೆಲ್ಲಾ ಪರಿಪೂರ್ಣತೆಯನ್ನು ಪ್ರೀತಿಸುವರೋ ಅವರೆಲ್ಲಾ ಕೋಪಕ್ಕೆ ಒಳಗಾಗುತ್ತಾರೆ. ವಿಷಯಗಳು ಪರಿಪೂರ್ಣವಾಗಿರಬೇಕೆಂದು ನೀವು ಬಯಸುವ ಕಾರಣ, ಅವುಗಳು ಪರಿಪೂರ್ಣವಾಗಿಲ್ಲದಿರುವಾಗ, ನೀವು ಕೋಪಗೊಳ್ಳುತ್ತೀರಿ.

ಅದೇ ರೀತಿಯಲ್ಲಿ ಲೋಭವೆಂದರೇನು? ವಸ್ತುಗಳು ಜನರಿಗಿಂತ ಹೆಚ್ಚು ಮುಖ್ಯವಾದವು ಎಂದು ನೀವು ಯೋಚಿಸುವಾಗ, ನೀವದನ್ನು ಲೋಭವೆಂದು ಕರೆಯುವಿರಿ. ಒಬ್ಬ ವ್ಯಕ್ತಿಯ ಕಡೆಗೆ ನಿಮಗಿರುವ ಪ್ರೇಮವು, ಆ ವ್ಯಕ್ತಿಯ ಕ್ಷೇಮಕ್ಕಿಂತ ಹೆಚ್ಚಾಗಿರುವಾಗ, ನೀವದನ್ನು ಮಾತ್ಸರ್ಯವೆಂದು ಕರೆಯುವಿರಿ. ನೀವು ನಿಮ್ಮನ್ನೇ ಅತಿಯಾಗಿ ಪ್ರೀತಿಸುವಾಗ, ನೀವದನ್ನು ದುರಹಂಕಾರವೆಂದು ಕರೆಯುವಿರಿ.

ಪ್ರೇಮದಿಂದ ಜ್ಞಾನವನ್ನು ಕಳೆದರೆ, ಈ ಎಲ್ಲಾ ನಕಾರಾತ್ಮಕ ಭಾವನೆಗಳು ಏಳುತ್ತವೆ. ಜ್ಞಾನದೊಂದಿಗಿನ ಪ್ರೇಮವು ನಿಮ್ಮ ಬುದ್ಧಿಯನ್ನು ಸ್ವಸ್ಥವಾಗಿರಿಸುವುದು ಮತ್ತು ದೈವತ್ವದ ಪಥದಲ್ಲಿರಿಸುವುದು. ಮತ್ತು ಅದುವೇ ಇಲ್ಲಿರುವ ಎಲ್ಲಾ ಪೂಜ್ಯರ ಸಂದೇಶವಾಗಿದೆ; ನಿಮ್ಮನ್ನು ಜ್ಞಾನದೊಂದಿಗೆ ಒಂದುಗೂಡಿಸುವುದು.

ಪ್ರೀತಿಸುವುದು ಹೇಗೆಂಬುದನ್ನು ನಾವು ಕಲಿಯಬೇಕಾಗಿಲ್ಲ. ಪ್ರೀತಿಯು ನಮ್ಮ ಸ್ವಭಾವವಾಗಿದೆ. ನಮ್ಮ ಶರೀರಗಳು ಅಮಿನೋ ಆಸಿಡ್, ಸಸಾರಜನಕಗಳು, ಕಾರ್ಬೋಹೈಡ್ರೇಟುಗಳು, ಮೊದಲಾದವುಗಳಿಂದ ಮಾಡಲ್ಪಟ್ಟಿರುವಂತೆ, ನಮ್ಮ ಆತ್ಮವು ಪ್ರೀತಿಯಿಂದ ಮಾಡಲ್ಪಟ್ಟಿದೆ. ನಾವು ಪ್ರೀತಿಯೇ ಆಗಿದ್ದೇವೆ. ಪ್ರೀತಿಯು ಕೇವಲ ಒಂದು ಭಾವನೆಯಲ್ಲ, ಯಾವುದೋ ರೀತಿಯ ಭಾವನಾತ್ಮಕ ಪ್ರಕೋಪವಲ್ಲ. ಪ್ರೀತಿಯು ನಮ್ಮ ಸ್ವಭಾವವೇ ಆಗಿದೆ. ದೇವರು ನಮಗದನ್ನು ದಯಪಾಲಿಸಿದ ರೀತಿಯಲ್ಲಿ ಅದನ್ನಿರಿಸಲು ನಮಗೆ ಜ್ಞಾನದ ಅಗತ್ಯವಿದೆ, ಮತ್ತು ಅದನ್ನೇ ಜಗತ್ತಿನಲ್ಲಿರುವ ಎಲ್ಲಾ ಧರ್ಮಗ್ರಂಥಗಳು ನಮಗೆ ಹೇಳುವುದು.

ಹಿಂದೂ ಧರ್ಮಗ್ರಂಥದಲ್ಲಿ, ದೇವರ ಸ್ವಭಾವವನ್ನು ಅಸ್ತಿ, ಭಾತಿ, ಪ್ರೀತಿ ಅಂದರೆ ಅಸ್ತಿತ್ವ, ಪ್ರಭೆ ಮತ್ತು ಪ್ರೀತಿಯೆಂದು ವಿವರಿಸಲಾಗಿದೆ.

ದೇವರು ಅಸ್ತಿತ್ವದಲ್ಲಿರುವರು. ಅವನು ಸ್ವಯಂ-ಪ್ರಭೆಯಾಗಿರುವನು ಮತ್ತು ಅವನು ಪ್ರೀತಿಯಾಗಿರುವನು. ಒಬ್ಬನೇ ಒಬ್ಬ ದೇವರಿರುವುದು, ಹಲವಾರಲ್ಲ. ಹೆಚ್ಚಾಗಿ ಜನರು, ಹಿಂದುತ್ವವೆಂದರೆ ಹಲವಾರು ದೇವರುಗಳೆಂದು ಯೋಚಿಸುತ್ತಾರೆ. ವಿಷಯ ಅದಲ್ಲ. ಅದು, ಒಬ್ಬ ದೇವರು ಹಲವಾರು ವೇಷಭೂಷಣಗಳಲ್ಲಿ, ತನ್ನನ್ನೇ ಹಲವಾರು ರೂಪಗಳಲ್ಲಿ ವ್ಯಕ್ತಪಡಿಸುವುದು. ಆದರೆ ಅದು ಒಬ್ಬನೇ ಒಬ್ಬ ದೇವರು. ನಿಮಗೆ ನಾನೊಂದು ಉದಾಹರಣೆಯನ್ನು ಕೊಡುತ್ತೇನೆ. ಒಂದೇ ಗೋಧಿಯಿಂದ ನಾವು ಕಾಲ್ಜ಼ೋನ್, ಕಪ್ ಕೇಕ್, ಬ್ರೆಡ್ ಮತ್ತು ಬೇಗಲ್ ಗಳನ್ನು ತಯಾರಿಸುತ್ತೇವೆ. ಇವುಗಳೆಲ್ಲವೂ ಗೋಧಿಯ ವಿವಿಧ ಅಭಿವ್ಯಕ್ತಿಗಳಾಗಿವೆ. ಅದೇ ರೀತಿಯಲ್ಲಿ, ಹಲವಾರು ರೂಪಗಳಲ್ಲಿ ವ್ಯಕ್ತಗೊಂಡಿರುವುದು ಒಂದೇ ದೈವತ್ವವಾಗಿದೆ.

ದೇವರೆಂದರೆ ಪ್ರೀತಿ ಮತ್ತು ನಾವು ಕೂಡಾ. ಎಲ್ಲೋ ನಾವು ಈ ಜ್ಞಾನವನ್ನು ಕಳಕೊಂಡೆವು. ನಾವು ಮುಗ್ಧತೆಯನ್ನು ಕಳಕೊಂಡೆವು. ನಾವು ನಮ್ಮ ನಡುವೆ ಗೋಡೆಗಳನ್ನು ಕಟ್ಟಲು ಪ್ರಾರಂಭಿಸಿದೆವು. ಆಗಲೇ ಪ್ರಪಂಚದಲ್ಲಿ ಎಲ್ಲಾ ನಕಾರಾತ್ಮಕ ಭಾವನೆಗಳು ಮತ್ತು ಪ್ರವೃತ್ತಿಗಳು ಶುರುವಾದುದು.

ನಮ್ಮನ್ನು ಅಭಿವೃದ್ಧಿಗೊಳಿಸಲು, ಮತ್ತು ಪ್ರಾರ್ಥನೆಯ ಆಳಕ್ಕೆ ಹೋಗಲು, ನಾವು ಐದು ವಿರಾಮದ ದಿನಗಳನ್ನು ತೆಗೆದುಕೊಳ್ಳಬೇಕು ಮತ್ತು ಐದು ಅನುಭವಗಳನ್ನು ಹೊಂದಬೇಕು.

ಮೊದಲನೆಯ ಅನುಭವವೆಂದರೆ, ನಾವು ಒಂದು ದಿನವನ್ನು  ಒಂದು ಸೆರೆಮನೆಯಲ್ಲಿ ಕಳೆಯಬೇಕು. ಸೆರೆಮನೆಯಲ್ಲಿ ಒಂದು ದಿನವನ್ನು ಕಳೆಯಲು ನೀವೊಂದು ಅಪರಾಧವನ್ನೆಸಗಬೇಕಾಗಿಲ್ಲ. ಸುಮ್ಮನೆ ಹೋಗಿ ಅಲ್ಲಿ ಒಂದು ದಿನವನ್ನು ಕಳೆಯಿರಿ ಮತ್ತು ಖೈದಿಗಳೊಂದಿಗೆ ಮಾತನಾಡಿ. ಈ ಜನರೊಂದಿಗೆ; ಉಳಿದ ಸಮಾಜದಿಂದ ಮತ್ತು ಜಗತ್ತಿನಿಂದ ನಿಂದಿಸಲ್ಪಟ್ಟವರೊಂದಿಗೆ ನೀವು ಮಾತನಾಡುವಾಗ, ಅವರಲ್ಲಿ ಪ್ರತಿಯೊಬ್ಬರೊಳಗೂ ಒಬ್ಬ ಸುಂದರವಾದ ವ್ಯಕ್ತಿಯು ಅಡಗಿರುವನು ಎಂಬುದನ್ನು ನೀವು ತಿಳಿಯುವಿರಿ, ಹಾಗೂ ಕ್ಷಮಾಪಣೆಯು ನಿಮ್ಮೊಳಗೆ ಸಹಜವಾಗಿ ಬರುವುದೆಂಬುದನ್ನು ನೀವು ಕಂಡುಕೊಳ್ಳುವಿರಿ.

ಪ್ರತಿಯೊಬ್ಬ ಅಪರಾಧಿಯೊಳಗೆ, ಅಲ್ಲೊಬ್ಬ ಸಹಾಯಕ್ಕಾಗಿ ಕೂಗುವ ನಿರಪರಾಧಿಯಿರುತ್ತಾನೆ. ನೀವೊಂದು ವಿಶಾಲ ಕೋನವಿರುವ ಲೆನ್ಸಿನಿಂದ ನೋಡಿದಾಗ, ಒಬ್ಬ ಅಪರಾಧಿಯೂ ಕೂಡಾ ಒಬ್ಬ ನಿರಪರಾಧಿಯೆಂಬುದು ನಿಮಗೆ ಕಾಣಿಸುತ್ತದೆ.

ಅಪರಾಧಿಯೊಳಗಿರುವ ಆ ನಿರಪರಾಧಿಯನ್ನು ನೀವು ನೋಡುವಾಗ, ನೀವು ಕ್ಷಮಿಸುವ ಅಗತ್ಯವಿರುವುದಿಲ್ಲ, ಕ್ಷಮಾಪಣೆಯು ಆಗುತ್ತದೆ; ವಾಸ್ತವವಾಗಿ ಸಹಾನುಭೂತಿಯು ಸಹಜವಾಗಿ ನಿಮ್ಮ ಹೃದಯದಲ್ಲಿ ಉದಯಿಸುತ್ತದೆ. ಅಪರಾಧ ಸಂಭವಿಸುವುದು ತಿಳುವಳಿಕೆಯ ಕೊರತೆಯಿಂದ, ತಪ್ಪಾದ ಶಿಕ್ಷಣದಿಂದ, ತಪ್ಪಾದ ಉಪದೇಶದಿಂದ, ಭಾವನಾತ್ಮಕ ಪ್ರಕೋಪದಿಂದ; ಯಾಕೆಂದರೆ ನಮ್ಮ ಆಕ್ರೋಶವನ್ನು, ಕ್ರೋಧವನ್ನು ಮತ್ತು ನಿರಾಶೆಗಳನ್ನು ನಿಯಂತ್ರಿಸುವುದು ಹೇಗೆಂಬುದು ನಮಗೆ ತಿಳಿಯದು. ಅನಿಯಂತ್ರಿತವಾದ ಭಾವನೆಗಳು ಕಾರ್ಯಗತವಾಗುವಾಗ, ಅದೊಂದು ಅಪರಾಧವಾಗುತ್ತದೆ. ಈ ಅನಿಯಂತ್ರಿತ ಭಾವನೆಗಳನ್ನು ತಡೆಹಿಡಿಯುವುದು ಜ್ಞಾನವಾಗಿದೆ. ನೀವು ಕಾರ್ಯ ಮಾಡುವ ಮುನ್ನ ನೀವು ಯೋಚಿಸುವಂತೆ ಮಾಡುವುದು ಜ್ಞಾನವಾಗಿದೆ. ನೀವು ಮೊದಲು ಕಾರ್ಯ ಮಾಡಿ, ಅದರ ಬಗ್ಗೆ ನಂತರ ಯೋಚಿಸುವಾಗ ಅಪರಾಧವಾಗುತ್ತದೆ.

ಉದ್ದೇಶಪೂರ್ವಕವಾಗಿ ತಪ್ಪುಗಳನ್ನು ಮಾಡಿದವರಿದ್ದಾರೆ (ತಪ್ಪು ತಿಳುವಳಿಕೆ ಅಥವಾ ಸಿದ್ಧಾಂತಗಳ ಕಾರಣದಿಂದ), ಉದ್ದೇಶರಹಿತವಾಗಿ ತಪ್ಪುಗಳನ್ನು ಮಾಡಿದವರಿದ್ದಾರೆ (ತಿಳುವಳಿಕೆಯ ಕೊರತೆಯಿಂದ). ಒಬ್ಬರು ಒಂದು ಅಪರಾಧವನ್ನೆಸಗುವುದು ಅಥವಾ ಒಂದು ತಪ್ಪನ್ನು ಮಾಡುವುದು ಈ ಎರಡು ಸ್ಥಿತಿಗಳಿಂದಾಗಿದೆ. ಜನರು ತಪ್ಪುಗಳನ್ನೆಸಗುವುದು ಜ್ಞಾನದ ಕೊರತೆಯಿಂದ, ಸಂತೋಷದ ಕೊರತೆಯಿಂದ ಅಥವಾ ದೇವರೊಂದಿಗಿನ ಆಂತರಿಕ ಸಂಪರ್ಕದ ಕೊರತೆಯಿಂದ. ಸಂತೋಷವಾಗಿರುವ, ತೃಪ್ತರಾಗಿರುವ ಮತ್ತು ಪ್ರೀತಿಯಲ್ಲಿರುವ ಒಬ್ಬರು ಯಾರಿಗೂ ತೊಂದರೆಯನ್ನುಂಟುಮಾಡರು. ಅದು ಅಸಾಧ್ಯ.

ಒಬ್ಬರು ಇನ್ನೊಬ್ಬರಿಗೆ ತೊಂದರೆ ನೀಡಿದರೆ, ಅದು ಯಾಕೆಂದರೆ ಅವರೊಳಗೆ ಗುಣಮುಖವಾಗಬೇಕಾಗಿರುವ ಒಂದು ಆಳವಾದ ಗಾಯ ಅಥವಾ ಗಾಯದ ಗುರುತು ಇರುತ್ತದೆ. ಆದುದರಿಂದ ಒಂದು ದಿನವನ್ನು ಸೆರೆಮನೆಯಲ್ಲಿ ಕಳೆಯುವುದು ಒಂದು ಬಹಳ ಒಳ್ಳೆಯ ವಿಷಯ. ಅದು ನಮ್ಮ ಅರಿವನ್ನು ವಿಸ್ತಾರಗೊಳಿಸುವುದು ಮತ್ತು ಕ್ಷಮಾಪಣೆಯ ಅಗತ್ಯವಿರುವ ಆ ಜನರನ್ನು ನಾವು ಅರ್ಥಮಾಡಿಕೊಳ್ಳುವಂತೆ ಮಾಡುವುದು. ಆಗ ನಮಗೆ ಕ್ಷಮಾಪಣೆಯು ಸುಲಭವಾಗುತ್ತದೆ.

ಎರಡನೆಯ ಅನುಭವವೆಂದರೆ, ಆಸ್ಪತ್ರೆಯಲ್ಲಿ ಒಂದು ದಿನವನ್ನು ಕಳೆಯುವುದು. ಯಾತನೆಯನ್ನು ಅನುಭವಿಸುತ್ತಿರುವ ರೋಗಿಗಳನ್ನು ನೀವು ನೋಡುವಾಗ, ನಿಮ್ಮ ಉತ್ತಮ ಆರೋಗ್ಯಕ್ಕಾಗಿ ನೀವು ದೇವರಿಗೆ ಧನ್ಯವಾದವನ್ನರ್ಪಿಸುವಿರಿ. ಸಹಾನುಭೂತಿ ಮತ್ತು ಕೃತಜ್ಞತೆಗಳು ನಿಮ್ಮೊಳಗೆ ಏಳುತ್ತವೆ.

ಮೂರನೆಯ ಅನುಭವವೆಂದರೆ, ಒಂದು ದಿನವನ್ನು ಒಬ್ಬ ಶಾಲಾ ಶಿಕ್ಷಕನಾಗಿ ಕಳೆಯುವುದು, ವಿಶೇಷವಾಗಿ ಸವಾಲುಗಳನ್ನೆದುರಿಸುತ್ತಿರುವ ಮಕ್ಕಳೊಂದಿಗೆ. ನೀವು ಅವರಿಗೆ ಕಲಿಸಬೇಕಿದ್ದರೆ ಮತ್ತು ಅವರು ಕಲಿಯದಿದ್ದರೆ, ಅವರನ್ನು ಸ್ವೀಕರಿಸಲು ಹಾಗೂ ಅವರು ಅದನ್ನು ಕಲಿಯುವ ವರೆಗೆ ಒಂದೇ ವಿಷಯವನ್ನು ಪುನಃ ಪುನಃ ಆವರ್ತಿಸಲು ಅದು ನಿಮಗೆ ತಾಳ್ಮೆಯನ್ನು ಕೊಡುತ್ತದೆ. ತಾಳ್ಮೆಯೊಂದಿಗೆ ಇತರರಿಗೆ ಅರ್ಥಮಾಡಿಸುವುದು ಹೇಗೆಂಬುದನ್ನು ನಾವು ಕಲಿಯಬಹುದು. ಒಬ್ಬ ಶಾಲಾಶಿಕ್ಷಕನಾಗುವುದು ಒಂದು ದೊಡ್ಡ ಸವಾಲಾಗಿದೆ.

ಜರ್ಮನಿಯಲ್ಲಿ ೪೦% ಶಾಲಾ ಶಿಕ್ಷಕರು ಖಿನ್ನತೆಗೊಳಗಾಗಿರುವರು ಎಂದು ಹೇಳುವ ಅಂಕಿ ಅಂಶಗಳ ಬಗ್ಗೆ ನಾನು ಕೇಳಿದ್ದೇನೆ.

ಶಾಲೆಗೆ ಹೋಗುವ ಚಿಕ್ಕ ಮಕ್ಕಳಿಗೆ ಏನಾಗಬಹುದೆಂದು ಸುಮ್ಮನೆ ಊಹಿಸಿ. ಅವರು ದಿನವಿಡೀ ಒಂದು ಖಿನ್ನತೆಗೊಳಗಾದ ಮುಖವನ್ನು ನೋಡಬೇಕು ಮತ್ತು ಖಿನ್ನರಾಗಿ ಮನೆಗೆ ಮರಳಿ ಬರಬೇಕು.

ನಿಮ್ಮಲ್ಲೇನಿದೆಯೋ ಅದನ್ನು ಮಾತ್ರ ನಿಮಗೆ ಕೊಡಲು ಸಾಧ್ಯ. ನಿಮ್ಮಲ್ಲಿ ಆನಂದವಿದ್ದರೆ, ನೀವು ಆನಂದವನ್ನು ಕೊಡುವಿರಿ.

ನಿಮ್ಮಲ್ಲಿ ಪ್ರೀತಿಯಿದ್ದರೆ, ನೀವು ಪ್ರೀತಿಯನ್ನು ಕೊಡುವಿರಿ. ನೀವು ಖಿನ್ನರಾಗಿದ್ದರೆ, ನೀವು ಖಿನ್ನತೆಯನ್ನು ಮಾತ್ರ ಕೊಡಲು ಸಾಧ್ಯ.

ಇದು ದುರದೃಷ್ಟಕರ ಯಾಕೆಂದರೆ ನಮ್ಮ ಮನಸ್ಸು ಮತ್ತು ಭಾವನೆಗಳನ್ನು ನಿರ್ವಹಿಸುವುದು ಹೇಗೆಂಬುದು ನಮಗೆ ತಿಳಿಯದು.

ಒಬ್ಬ ಶಿಕ್ಷಕನಾಗಿ ಶಾಲೆಯಲ್ಲಿರುವುದು ನಮಗೆ, ಅಜ್ಞಾನವನ್ನು ಸಹಿಸಲಿರುವ ಮತ್ತು ಪ್ರೀತಿಯಿಂದ ಕಲಿಸಲಿರುವ ಅಗಾಧವಾದ ತಾಳ್ಮೆಯನ್ನು ನೀಡುವುದು. ಯಾರು ಪ್ರೀತಿಯನ್ನು ಬೇಷರತ್ತಾಗಿ ನೀಡುವನೋ ಅವನು ಒಬ್ಬ ಶಿಕ್ಷಕ.

ಒಬ್ಬರು ಒಮ್ಮೆ ನನ್ನಲ್ಲಿ ಕೇಳಿದರು, "ನೀವು ಮಾಡುತ್ತಿರುವ ಎಲ್ಲವನ್ನೂ ಮಾಡುವುದರಿಂದ ನಿಮಗೇನು ಸಿಗುತ್ತದೆ? ನೀವು ಯಾಕೆ ಹಗಲು ರಾತ್ರಿ ಜನರೊಂದಿಗೆ ಮಾತನಾಡುತ್ತಾ, ಉಸಿರಾಟ ವ್ಯಾಯಾಮದ ಕಾರ್ಯಾಗಾರಗಳನ್ನು ಮಾಡುತ್ತಾ ಅಷ್ಟೊಂದು ದೇಶಗಳಿಗೆ ಪ್ರಯಾಣ ಮಾಡುವಿರಿ? ನಿಮಗೇನು ಸಿಗುವುದು?"

ನಾನು ಅವನಲ್ಲಿ ಕೇಳಿದೆ, "ನೀನು ಲೈಫ್ ಆಫ್ ಪೈ ಸಿನೆಮಾವನ್ನು ನೋಡಿದ್ದೀಯಾ?"

ಅವನಂದನು, "ಹೌದು."

ನಾನು ಅವನಲ್ಲಿ ಕೇಳಿದೆ, "ಸಿನೆಮಾವನ್ನು ನೋಡಿದ ಮೇಲೆ, ನೀನು ಯಾರಿಗಾದರೂ ಕರೆ ಮಾಡಿ, ಅದೊಂದು ಒಳ್ಳೆಯ ಸಿನೆಮಾವೆಂದು ಹೇಳಿದ್ದೀಯಾ?"

ಅವನು ಉತ್ತರಿಸಿದನು, "ಹೌದು, ನಾನು ನನ್ನ ಹಲವಾರು ಮಿತ್ರರಿಗೆ ಕರೆ ಮಾಡಿ, ಅದೊಂದು ಉತ್ತಮ ಸಿನೆಮಾವೆಂದೂ, ಅವರದನ್ನು ನೋಡಬೇಕೆಂದೂ ಹೇಳಿದೆ."

ಹಾಗೆ ಮಾಡಲು ಅವನಿಗೆ ನಿರ್ಮಾಪಕರು ಏನಾದರೂ ಪ್ರೋತ್ಸಾಹಕ ಧನ ಅಥವಾ ಕಮಿಷನ್ ನೀಡಿದ್ದರೇ ಎಂದು ನಾನು ಅವನಲ್ಲಿ ಕೇಳಿದೆ.

ಅವನು ಉತ್ತರಿಸಿದನು, "ಇಲ್ಲ."

ನಾನು ಉತ್ತರಿಸಿದೆ, "ಆನಂದದ ಸ್ವಭಾವವೆಂದರೆ ಹಂಚುವುದು. ನಿನಗೆ ನಿನ್ನೊಳಗೆ ಸ್ವಲ್ಪ ಸಂತೋಷವು ಕಂಡುಬಂದರೆ, ನೀನದನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುವೆ. ಅದನ್ನೇ ನಾನು ಮಾಡುತ್ತಿರುವುದು. ಹಂಚುವುದು ಮತ್ತು ಕಾಳಜಿ ವಹಿಸುವುದು.

ನಾವು ಹೊಂದಬೇಕಾದ ನಾಲ್ಕನೆಯ ಅನುಭವವೆಂದರೆ, ಒಂದು ಮಾನಸಿಕ ಆಸ್ಪತ್ರೆಯಲ್ಲಿ ಒಂದು ದಿನವನ್ನು ಕಳೆಯುವುದು.

ನಿಮ್ಮ ಸುತ್ತಲಿರುವ ಎಲ್ಲಾ ಅಸಂಬದ್ಧ ಮಾತುಗಳನ್ನು ಕೇಳಿಸಿಕೊಳ್ಳಿ. ಸಂಪೂರ್ಣ ಜಗತ್ತು ಹಾಗೇ ಎಂಬುದು ನಿಮಗೆ ಅರ್ಥವಾಗುವುದು. ಪ್ರತಿಯೊಬ್ಬರೂ ಬಾಹ್ಯ ರೀತಿಯಲ್ಲೇ ಮಾತಾಡುತ್ತಾರೆ. ಒಮ್ಮೆ ನೀವಿದನ್ನು ಅರ್ಥಮಾಡಿಕೊಂಡರೆ, ನಂತರ ಮುಂದೆಂದೂ ನಿಮ್ಮನ್ನು ಕೆರಳಿಸಲು ಸಾಧ್ಯವಿಲ್ಲ. ನೀವು ಒಳಗಿನಿಂದ ಬಹಳ ಬಲವನ್ನು ಅನುಭವಿಸುವಿರಿ. ಯಾರಾದರೂ ನಿಮ್ಮ ಬಗ್ಗೆ ಒಂದು ಅವಹೇಳನಕಾರಿ ಹೇಳಿಕೆಯನ್ನು ಹೇಳಿದರೆ, ನೀವು ಸಮ ಭಾವ ಕಳೆದು ಕೊಳ್ಳಲಾರಿರಿ. ನೀವು ಟೀಕೆಗೆ ಎದ್ದು ನಿಲ್ಲುವಿರಿ. ಅದರಲ್ಲೇನಾದರೂ ಸತ್ಯವಿದ್ದರೆ, ನೀವು ಟೀಕೆಯನ್ನು ಸ್ವೀಕರಿಸುವಿರಿ. ಎಲ್ಲೆಲ್ಲಾ ಆವಶ್ಯಕತೆಯಿದೆಯೋ ಅಲ್ಲೆಲ್ಲಾ ರಚನಾತ್ಮಕ ಟೀಕೆಯನ್ನು ನೀಡಲು ನಿಮಗೆ ಸಾಧ್ಯವಾಗುವುದು. ಜನರು ಅಪ್ರಸ್ತುತ ವಿಷಯಗಳನ್ನು ಮಾತನಾಡುತ್ತಿರುವರೆಂಬುದನ್ನು ತಿಳಿದುಕೊಂಡು ನೀವು ಒಂದು ದಿನವನ್ನು ಕಳೆಯಲು ಸಾಧ್ಯವಾದರೆ, ಟೀಕೆಯನ್ನು ತೆಗೆದುಕೊಳ್ಳುವ ಹಾಗೂ ನೀಡುವ ಧೈರ್ಯವು ನಿಮಗೆ ಬರುತ್ತದೆ.

ಐದನೆಯ ಅನುಭವವೆಂದರೆ, ಒಂದು ಇಡೀ ದಿನವನ್ನು ಒಬ್ಬ ರೈತನೊಂದಿಗೆ ಒಂದು ಹೊಲದಲ್ಲಿ ಕಳೆಯುವುದು. ನೀವು ಈ ಗ್ರಹದ; ಈ ಭೂಮಿಯ ಬಗ್ಗೆ ಕಾಳಜಿ ವಹಿಸಲು ತೊಡಗುವಿರಿ. ನೀವು ಪರಿಸರದ ಬಗ್ಗೆ ಕಾಳಜಿ ವಹಿಸುವಿರಿ. ನಾವು ಇವತ್ತು ನಮ್ಮ ಗ್ರಹದ ಬಗ್ಗೆ ಕಾಳಜಿ ವಹಿಸದೇ ಇದ್ದರೆ, ಅದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸಲು ನಮಗೆ ಸಾಧ್ಯವಾಗದು. ಮುಂಬರುವ ಪೀಳಿಗೆಯು ಉತ್ತಮ ಸ್ಥಿತಿಗಳನ್ನು ಹೂಂದಲು : ಶುದ್ಧವಾದ ಗಾಳಿ, ನೀರು ಮತ್ತು ಭೂಮಿ. ರೋಗಗಳು ಹೆಚ್ಚಾಗುತ್ತಿವೆ ಯಾಕೆಂದರೆ ನಾವು ಹಲವಾರು ಅಪಾಯಕಾರಿ ರಾಸಾಯನಿಕಗಳು, ಗೊಬ್ಬರಗಳು ಮತ್ತು ಕ್ರಿಮಿನಾಶಕ ಔಷಧಿಗಳನ್ನು ಉಪಯೋಗಿಸಿದ್ದೇವೆ. ಪೋಷಕಾಂಶಗಳು ಭೂಮಿಯಿಂದ ಬರಿದಾಗಿದೆ.

ಅಮೇರಿಕಾದಲ್ಲಿ ಇವತ್ತು ಬೆಳೆಯಲಾಗುವ ಬಾಳೆಹಣ್ಣುಗಳಲ್ಲಿ, ೩೦ರ ಮತ್ತು ೪೦ರ ದಶಕಗಳಿಗೆ ಹೋಲಿಸಿದರೆ ಹೇಗೆ ಬಹಳ ಕಡಿಮೆ ಪೋಷಕಾಂಶಗಳಿವೆ ಎಂಬುದರ ಬಗ್ಗೆ ಅಮೇರಿಕಾದ ಪೌಷ್ಟಿಕತೆಯ ಸಂಸ್ಥೆಯು ಮಾತನಾಡುತ್ತದೆ. ನಮ್ಮ ತರಕಾರಿಗಳು ಗಾತ್ರದಲ್ಲಿ ದೊಡ್ಡದಾಗಿರಬಹುದು, ಆದರೆ ಅವುಗಳಲ್ಲಿ ಬಹಳ ಕಡಿಮೆ ಪೌಷ್ಟಿಕಾಂಶವು ಒಳಗೊಂಡಿರುತ್ತದೆ. ಇದು ಯಾಕೆಂದರೆ, ನಾವು ಕೀಟನಾಶಕಗಳು ಮತ್ತು ರಾಸಾಯನಿಕಗಳಿಂದ ಮಣ್ಣನ್ನು ಬರಿದು ಹಾಗೂ ಖಾಲಿಯಾಗಿಸಿದ್ದೇವೆ.

ನಾವು ಭೂಮಿತಾಯಿಯ ಬಗ್ಗೆ ಕಾಳಜಿ ವಹಿಸಬೇಕಾಗಿದೆ. ಭೂಮಿಗಾಗಿರುವ ಪ್ರೀತಿ, ಜನರ ಬಗ್ಗೆ ಪ್ರೀತಿಯು ದೇವರ ಬಗ್ಗೆಯಿರುವ ಪ್ರೀತಿಗೆ ಸಮಾನವಾದುದಾಗಿದೆ. ಅವುಗಳು ಒಂದೇ ನಾಣ್ಯದ ಎರಡು ಬದಿಗಳಾಗಿವೆ. ನೀವು ದೇವರನ್ನು ಪ್ರೀತಿಸುವಿರೆಂದೂ, ಆದರೆ ಅವನ ಜನರ ಕಡೆಗೆ ಕಾಳಜಿಯಿಲ್ಲವೆಂದೂ ಹೇಳಿದರೆ, ಆಗ ಅದಕ್ಕೆ ಯಾವುದೇ ಅರ್ಥವಿಲ್ಲ.

ನಾವು ಪ್ರೀತಿಗೆ ಬೇಡಿಕೆಯನ್ನೊಡ್ಡಲು ಪ್ರಾರಂಭಿಸಿದಾಗ, ಅದು ನಾಶವಾಗುತ್ತದೆ. ಸಂಬಂಧಗಳಲ್ಲಿ ಸಾಧಾರಣವಾಗಿ ಆಗುವುದು ಇದುವೇ. ನಾವು ಪ್ರೀತಿಯಲ್ಲಿ ಬೀಳುತ್ತೇವೆ ಮತ್ತು ನಾವು ಬಹಳ ಬೇಗನೇ ಪ್ರೀತಿಯಿಂದ ಹೊರಬೀಳುತ್ತೇವೆ. ಅದು ಉಸಿರನ್ನು ಒಳಕ್ಕೆಳೆಯುವಂತೆ ಮತ್ತು ಉಸಿರನ್ನು ಹೊರಕ್ಕೆ ಬಿಡುವಂತೆ. ಯಾಕೆ? ಅದು ಯಾಕೆಂದರೆ ನಾವು ಬೇಡಿಕೆಯನ್ನೊಡ್ಡಲು ಪ್ರಾರಂಭಿಸುತ್ತೇವೆ.

ಇಲ್ಲಿರುವ ದಂಪತಿಗಳಿಗೆ ನನ್ನದೊಂದು ಸಲಹೆಯಿದೆ. ನಿಮ್ಮ ಕಡೆಗಿರುವ ನಿಮ್ಮ ಸಂಗಾತಿಯ ಗಮನ ಅಥವಾ ಪ್ರೇಮದ ಅಭಿವ್ಯಕ್ತಿಯು ಕಡಿಮೆಯಾಗಿದೆಯೆಂದು ನಿಮಗೆ ಅನ್ನಿಸಿದಾಗ, "ನೀವು ನಿಜವಾಗಿ ನನ್ನನ್ನು ಪ್ರೀತಿಸುವಿರಾ?" ಎಂದು ಅವರಲ್ಲಿ ಕೇಳಬೇಡಿ. ಬದಲಾಗಿ, "ನೀವು ಯಾಕೆ ನನ್ನನ್ನು ಅಷ್ಟೊಂದು ಪ್ರೀತಿಸುವಿರಿ?" ಎಂದು ಅವರಲ್ಲಿ ಕೇಳಿ. ಅವರು ನಿಮ್ಮನ್ನು ಪ್ರೀತಿಸದೇ ಇದ್ದರೂ ಕೂಡಾ, ಆಗ ನಿಮ್ಮ ಕಡೆಗಿರುವ ಅವರ ಪ್ರೀತಿಯು ಹೆಚ್ಚಾಗುವುದು.

ನೀವು ನಿಜವಾಗಿ ಒಬ್ಬರನ್ನು ಪ್ರೀತಿಸುವಿರೆಂಬುದನ್ನು ಸಾಬೀತುಪಡಿಸುವುದು ಒಂದು ದೊಡ್ಡ ಹೊರೆಯಾಗಿದೆ. ಪ್ರೀತಿಯನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ.

ನಾನು ಜಗತ್ತಿನಲ್ಲಿ ಒಂದು ವಿಚಿತ್ರ ವಿಷಯವನ್ನು ಗಮನಿಸಿದ್ದೇನೆ. ಪೂರ್ವದಲ್ಲಿ, ಅವರು ಪ್ರೀತಿಯನ್ನು ವ್ಯಕ್ತಪಡಿಸುವುದೇ ಇಲ್ಲ.

ಅವರು ಪ್ರೀತಿಯನ್ನು ಶಬ್ದಗಳಲ್ಲಿ ಹೇಳುವುದೇ ಇಲ್ಲ. ಮತ್ತು ಪಶ್ಚಿಮದಲ್ಲಿ, ನಾವು ಪ್ರೀತಿಯನ್ನು ಬಹಳವಾಗಿ ಶಬ್ದಗಳಲ್ಲಿ ಹೇಳುತ್ತೇವೆ. ನಾವು ’ಹನೀ, ಹನೀ’ ಎಂದು ಹೇಳುತ್ತಾ ಇರುತ್ತೇವೆ, ಮತ್ತು ನಂತರ ನಾವು ಸಿಹಿಮೂತ್ರ ರೋಗಿಗಳಾಗುತ್ತೇವೆ.

ಪೂರ್ವದಲ್ಲಿ, ಪತಿಯು ಯಾವತ್ತೂ, "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂದು ತನ್ನ ಪತ್ನಿಗೆ ತನ್ನ ಜೀವನಪರ್ಯಂತ ಹೇಳುವುದಿಲ್ಲ. ನಾವೊಂದು ಮಧ್ಯಮ ಬಿಂದುವನ್ನು ಕಂಡುಕೊಳ್ಳಬೇಕು; ಪೂರ್ವ ಮತ್ತು ಪಶ್ಚಿಮಗಳ ಒಂದು ಒಳ್ಳೆಯ ಸಂಯೋಗ.

ನನಗನ್ನಿಸುತ್ತದೆ, ಪ್ರೀತಿಯನ್ನು ವ್ಯಕ್ತಪಡಿಸಬೇಕು, ಆದರೆ ಅದೇ ಸಮಯದಲ್ಲಿ ಅದು ಅಡಗಿರಲೂಬೇಕು. ನೀವು ಪ್ರೀತಿಯನ್ನು ಶಬ್ದಗಳಲ್ಲಿ ಅತಿಯಾಗಿ ಹೇಳದಿರುವಾಗ, ಅದು ನಿಮ್ಮ ಕಾರ್ಯಗಳಲ್ಲಿ ಕಂಡುಬರುತ್ತದೆ. ಒಂದು ಬೀಜದಂತೆ. ನೀವೊಂದು ಬೀಜವನ್ನು ಮಣ್ಣಿನಲ್ಲಿ ಬಹಳ ಆಳದಲ್ಲಿ ಬಿತ್ತಿದರೆ, ಅದು ಮೊಳಕೆಯೊಡೆಯಲು ಸಾಧ್ಯವಿಲ್ಲ. ಅದನ್ನು ನೀವು ಮೇಲ್ಮೈಯಲ್ಲಿರಿಸಿದರೂ ಕೂಡಾ ಅದು ಮೊಳಕೆಯೊಡೆಯದು. ಅದು ಮೊಳ್ಕೆಯೊಡೆದು ಒಂದು ಗಿಡವಾಗಲು ನೀವದನ್ನು ಮಣ್ಣಿನಲ್ಲಿ ಸ್ವಲ್ಪ ಕೆಳಗೆ ಬಿತ್ತಬೇಕು. ನಮ್ಮ ಕ್ರಿಯೆಗಳಲ್ಲಿ ಧಾರಾಳವಾಗಿ ಪ್ರಕಟಗೊಳ್ಳಲು, ನಾವು ಪ್ರೀತಿಯನ್ನು ವ್ಯಕ್ತಪಡಿಸಬೇಕು, ಆದರೆ ಅದನ್ನು ಸ್ವಲ್ಪ ಒಳಮುಖವಾಗಿರಿಸಬೇಕು.

ನಾನೊಬ್ಬ ಚಿಕ್ಕ ಹುಡುಗನಾಗಿದ್ದಾಗ, ನನ್ನ ಷರ್ಟನ್ನು ಹೊಲಿಸಲು ನಾನೊಬ್ಬ ದರ್ಜಿಯ ಬಳಿಗೆ ಹೋದೆ. ಆ ದಿನಗಳಲ್ಲಿ ಅವರಲ್ಲಿ ಯಂತ್ರಗಳಿರಲಿಲ್ಲ, ಅವರದನ್ನು ಕೈಗಳಿಂದ ಹೊಲಿಯುತ್ತಿದ್ದರು. ಟೈಲರನು ಸೂಜಿಯನ್ನು ತನ್ನ ಟೊಪ್ಪಿಯಲ್ಲೂ, ಕತ್ತರಿಯನ್ನು ತನ್ನ ಪಾದಗಳ ಕೆಳಗೂ ಇಟ್ಟುಕೊಳ್ಳುತ್ತಿದ್ದನು. ಈ ವ್ಯಕ್ತಿಯು ಒಂದು ಸಂದೇಶವನ್ನು ನೀಡುತ್ತಿದ್ದನೆಂದು ನನಗನ್ನಿಸಿತು.

ಯಾವುದು ಕತ್ತರಿಸುವುದೋ, ಅದನ್ನು ಅವನು ತನ್ನ ಪಾದಗಳ ಕೆಳಗೆ ಇರಿಸಿದನು, ಮತ್ತು ಯಾವುದು ಹೊಲಿಯುವುದು ಹಾಗೂ ಒಂದುಗೂಡಿಸುವುದೋ, ಅದನ್ನವನು ತನ್ನ ತಲೆಯ ಮೇಲೆ ಇರಿಸುವುದರ ಮೂಲಕ ಅದಕ್ಕೆ ಗೌರವವನ್ನಿತ್ತನು.

ಜಗತ್ತಿನಲ್ಲಿನ, ಜನರನ್ನು ವಿಭಜಿಸುವ ಶಕ್ತಿಗಳನ್ನು ಕೆಳಕ್ಕೆ ಹಾಕಬೇಕು, ಮತ್ತು ಜನರನ್ನು ಒಂದುಗೂಡಿಸುವ ಶಕ್ತಿಗಳು ಗೌರವಿಸಲ್ಪಡಬೇಕು.

ಒಬ್ಬ ದರ್ಜಿಯು ಈ ಸಂದೇಶವನ್ನು ತಿಳಿಯಪಡಿಸಬಲ್ಲನು.

ಸಂಪೂರ್ಣ ಜಗತ್ತು, ಪ್ರೀತಿಯ ಸಂದೇಶಗಳಿಂದ ತುಂಬಿದೆ. ನಮಗೆ ಅದನ್ನು ನೋಡುವ ದೃಷ್ಟಿಯಿರಬೇಕು ಮತ್ತು ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ನಿಮ್ಮ ಸಂಗಾತಿಯಿಂದ ಪ್ರೀತಿಗೆ ಬೇಡಿಕೆಯನ್ನೊಡ್ಡಬೇಡಿ; ನೀವು ಅವರಿಗಾಗಿರುವಿರಿ ಎಂಬುದನ್ನು ಅವರು ತಿಳಿಯಲು ಬಿಡಿ.

ತಮ್ಮ ಸಾಮೂಹಿಕ ಪ್ರಾರ್ಥನೆ, ಧರ್ಮೋಪದೇಶಗಳನ್ನು ನಡೆಸುವಾಗ ನಮ್ಮ ಪೂಜ್ಯರು ಮಾಡುವುದು ಅದನ್ನೇ. ಅವರು ಕೇವಲ ದೇವರ ಪ್ರೀತಿಯನ್ನು ಪ್ರವಹಿಸುತ್ತಾರೆ. ಅವರು ಆತ್ಮೀಯತೆಯ ಭಾವವನ್ನು ವ್ಯಕ್ತಪಡಿಸುತ್ತಾರೆ. ಅದೊಂದು ಸರ್ವೋಚ್ಛ ಕ್ರಿಯೆ, ಮತ್ತು ಮನೋಭಾವ.

ಆದುದರಿಂದ ಪ್ರೀತಿ ಮತ್ತು ಕ್ಷಮಾಪಣೆಗಳು ಕೈ ಕೈ ಹಿಡಿದುಕೊಂಡು ಸಾಗುತ್ತವೆ. ಕ್ಷಮಾಪಣೆಯು ಸಹಾನುಭೂತಿಯಾಗುವಾಗ ಅದು ಬಹಳಷ್ಟು ಸುಲಭವಾಗುತ್ತದೆ.

ನೀವು ಮನೆಗೆ ಹೋಗುವಾಗ, ನಿಮ್ಮ ಮನೆಯಲ್ಲಿರುವ ಒಂದು ನಾಯಿಮರಿ ಅಥವಾ ನಾಯಿ ಹೇಗೆ ಹುಚ್ಚೆದ್ದು ಕುಣಿಯುತ್ತದೆ; ತನ್ನ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತದೆ ಎಂಬುದನ್ನು ನೋಡಿದ್ದೀರಾ? ಅದು ಯಾವುದನ್ನೂ ಶಬ್ದಗಳಲ್ಲಿ ಹೇಳುವುದಿಲ್ಲ, ಆದರೆ ನಿಮ್ಮ ಕಡೆಗಿರುವ ಅದರ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ಅದೇ ಪ್ರೀತಿಯು ಸಂಪೂರ್ಣ ಸೃಷ್ಟಿಯಲ್ಲಿ; ಮರಗಳಿಂದ, ಪ್ರಕೃತಿಯಿಂದ ವ್ಯಕ್ತವಾಗುತ್ತಿದೆ.

ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಾನು ನಿಮ್ಮೊಂದಿಗಿದ್ದೇನೆ. ದೇವರು ನಿಮ್ಮನ್ನು ಹರಸಲಿ.