ಶನಿವಾರ, ಏಪ್ರಿಲ್ 13, 2013

ಅಚಲತೆ, ಮೃದುತ್ವ ಮತ್ತು ಪ್ರೀತಿ

ಮಾಂಟ್ರಿಯಾಲ್, ಕೆನಡಾ
ಎಪ್ರಿಲ್ ೧೩, ೨೦೧೩

ವತ್ತು ಬೈಸಾಖಿಯಾಗಿದೆ (ಭಾರತದಾದ್ಯಂತ, ವಿಶೇಷವಾಗಿ ಪಂಜಾಬ್ ಭಾಗದಲ್ಲಿ ಸಿಖ್ ಸಮುದಾಯದವರಿಂದ ಆಚರಿಸಲ್ಪಡುವ ಒಂದು ಹಬ್ಬ). ಅದು ಪಂಜಾಬಿನಲ್ಲಿ ಖಾಲ್ಸದ ದಿನವಾಗಿ ಆಚರಿಸಲ್ಪಡುತ್ತದೆ; ಧರ್ಮವನ್ನು ರಕ್ಷಿಸಲು, ದುಷ್ಟತೆಯನ್ನು ನಾಶಪಡಿಸಲು ಮತ್ತು ಮಾನವೀಯ ಮೌಲ್ಯಗಳನ್ನು ಮೇಲೆತ್ತಲು. ಗುರು ಗೋಬಿಂದ್ ಸಿಂಗ್ ಅವರಿಂದ ಖಾಲ್ಸ ಕುಲವು ಪ್ರಾರಂಭವಾದ ದಿನವಾಗಿದೆ ಇವತ್ತು.

ಗುರು ಗೋಬಿಂದ್ ಸಿಂಗರ ಸಂದೇಶವು ಇವತ್ತಿಗೆ ಬಹಳ ಪ್ರಸಕ್ತವಾಗಿದೆ. ಅವರಂದರು, "ನೀವು ಕ್ರಿಯಾಶೀಲರಾಗಿರಬೇಕು, ಮತ್ತು ಹಾಗಿದದ್ದೂ ಹೃದಯದಲ್ಲಿ ಮೃದುವಾಗಿರಬೇಕು. ನೀವು ಆಂತರಿಕವಾಗಿ ಆಧ್ಯಾತ್ಮಿಕವಾಗಿರಬೇಕು. ನೀವೊಬ್ಬ ಸಂತ ಸಿಪಾಯಿಯಾಗಿರಿ; ಒಬ್ಬ ಸಂತ ಮತ್ತು ಒಬ್ಬ ಸೈನಿಕ ಜೊತೆಯಲ್ಲಿ." ಅವರು ಹೇಳಿದುದರ ಅರ್ಥವೆಂದರೆ, ನೀವು ಅನ್ಯಾಯದ ವಿರುದ್ಧ ಎದ್ದು ನಿಲ್ಲಬೇಕು. ನೀವು ಕೇವಲ ಒಬ್ಬ ಸಂತನಾಗಿ, "ಸರಿ, ಏನೆಲ್ಲಾ ಆಯಿತೋ, ಅದಾಗಲಿ ಬಿಡಿ!" ಎಂದು ಹೇಳುವಂತಿಲ್ಲ. ನೀವು ಅನ್ಯಾಯದ ವಿರುದ್ಧ ಎದ್ದುನಿಲ್ಲಬೇಕು, ಮತ್ತು ಅದೇ ವೇಳೆಯಲ್ಲಿ ಒಬ್ಬ ಸಂತನಂತೆ ನಿಮ್ಮೊಳಗೆ ಸಹಾನುಭೂತಿಯಿರಬೇಕು. ಅಚಲತೆ ಮತ್ತು ಮೃದುತ್ವದ ಈ ವಿರಳವಾದ ಸಂಯೋಗವನ್ನು ಸ್ಥಾಪಿಸಿದ್ದು ಹತ್ತನೆಯ ಸಿಖ್ ಗುರುವಾದ ಗುರು ಗೋಬಿಂದ್ ಸಿಂಗ್ ಆಗಿದ್ದರು.

ಗುರು ಗೋಬಿಂದ್ ಸಿಂಗ್ ಈ ಪ್ರಪಂಚವನ್ನು ಬಿಟ್ಟು ಹೋಗುವಾಗ ಅವರಂದರು, "ನನ್ನ ನಂತರ, ಮುಂದಿನ ಗುರುವು ಗ್ರಂಥ್ ಪುಸ್ತಕವಾಗಿದೆ. ಎಲ್ಲಾ ಜ್ಞಾನವನ್ನು ಈ ಗ್ರಂಥದಲ್ಲಿ ಇರಿಸಲಾಗಿದೆ. ಇದು ಗುರುವಾಗಿದೆ; ನಿಮ್ಮ ಮಾರ್ಗದರ್ಶಿ ಬೆಳಕು."
ಹೀಗೆ, ಎಲ್ಲಾ ಗುರುದ್ವಾರಗಳಲ್ಲಿ (ಸಿಕ್ಖರ ಆರಾಧನಾ ಸ್ಥಳ) ನಿಮಗೆ ಗುರು ಗ್ರಂಥ್ ಸಾಹಿಬ್, ಪವಿತ್ರ ಗ್ರಂಥವು ಕಾಣಸಿಗುತ್ತದೆ. ಈ ಧರ್ಮಗ್ರಂಥಗಳು ಮಾನವಕುಲಕ್ಕೆ ತರುವ ಜ್ಞಾನವು ಅಮೂಲ್ಯವಾದುದು. ಹದಿನಾರು ಬೇರೆ ಬೇರೆ ಸಂತರ ಕಥೆ ಮತ್ತು ಅವರ ಬೋಧನೆಗಳು ಗುರು ಗ್ರಂಥ್ ಸಾಹಿಬ್ ನಲ್ಲಿ ಸಂಗ್ರಹವಾಗಿವೆ.

ಸಿಖ್ ಧರ್ಮದಲ್ಲಿ ಹತ್ತು ಗುರುಗಳಿದ್ದರು. ಸಿಖ್ ಸಂಪ್ರದಾಯದ ಎಲ್ಲಾ ಹತ್ತು ಗುರುಗಳ ಕಥೆಯು ಬಹಳ ಹೃದಯವಂತಿಕೆಯನ್ನು ಹೆಚ್ಚಿಸುವುದು ಮತ್ತು ಮೇಲೆತ್ತುವಂತದ್ದಾಗಿದೆ. ಅದು ತ್ಯಾಗದ ಕಥೆಯಾಗಿದೆ. ಒಳಿತಿನ, ಮುಗ್ಧತೆಯ ಮತ್ತು ನ್ಯಾಯದ ಸಂರಕ್ಷಣೆಯ ಸಲುವಾಗಿ ಗುರುಗಳು ತಮ್ಮಲ್ಲಿದ್ದ ಎಲ್ಲವನ್ನೂ ತ್ಯಾಗ ಮಾಡಿದರು. ಸರಳವಾದ, ಅರ್ಥವಾಗುವಂತಹ ಶಬ್ದಗಳಲ್ಲಿ ಜನರಿಗೆ ಜ್ಞಾನದ ಕೆನೆಯನ್ನು ನೀಡಲಾಯಿತು.

ಮೊದಲನೆಯ ಗುರುವಾದ ಗುರು ನಾನಕ್ ದೇವ್ ಅವರ ಬಗ್ಗೆ ಒಂದು ಸುಂದರವಾದ ಕಥೆಯಿದೆ. ಅವರ ಹೆತ್ತವರು ಅವರಲ್ಲಿ, ಹೋಗಿ ವಸ್ತುಗಳನ್ನು ಮಾರಲು ಹೇಳುವಾಗ ಅವರು ಅದನ್ನು ಮಾಡುತ್ತಿದ್ದರು. ಹೀಗಿದ್ದರೂ, ಅವರು ಒಂದರಿಂದ ಲೆಕ್ಕ ಹಾಕಲು ಶುರು ಮಾಡುವಾಗ, ಅವರು ೧೩ರಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದರು, ಯಾಕೆಂದರೆ ತೇರಾ (ಹಿಂದಿಯಲ್ಲಿ ಸಂಖ್ಯೆ ೧೩ ಹಾಗೂ ’ನಿನ್ನ’ ಎಂಬ ಅರ್ಥವಿದೆ) ಎಂದರೆ ’ನಿನ್ನ’ ಎಂದು ಅರ್ಥ.

ಆದುದರಿಂದ, ಕೆಲಸ ಮಾಡುವಾಗಲೂ ಕೂಡಾ, ಅವರ ಮನಸ್ಸು ಯಾವತ್ತೂ ಕೆಲಸದಲ್ಲಿರುತ್ತಿರಲಿಲ್ಲ, ಅದು ಯಾವತ್ತೂ ದೇವರಲ್ಲಿ ಮುಳುಗಿರುತ್ತಿತ್ತು. ಗುರು ನಾನಕರು ಅಂದರು, "ನಾನು ನಿನ್ನವನು, ನಾನು ನಿನ್ನವನು, ನಾನು ನಿನ್ನವನು." ಗುರು ನಾನಕರ ಜೀವನವು ಶುದ್ಧವಾದ ಪ್ರೀತಿ, ಜ್ಞಾನ ಮತ್ತು ಶೌರ್ಯಗಳಿಂದ ತುಂಬಿತ್ತು.

ಸಿಖ್ ಸಂಪ್ರದಾಯದಲ್ಲಿ ಒಂದು ಸುಂದರವಾದ ಅಭಿವಂದನೆಯಿದೆ, ’ಸತ್  ಶ್ರೀ ಅಕಾಲ್’. ಇದು ಜಗತ್ತಿನ ಅತ್ಯುತ್ತಮ ಅಭಿವಂದನೆಗಳಲ್ಲಿ ಒಂದಾಗಿದೆ. ಸತ್ ಎಂದರೆ ಸತ್ಯ, ಶ್ರೀ ಎಂದರೆ ಸಂಪತ್ತು ಮತ್ತು ಅಕಾಲ್ ಎಂದರೆ ಅನಂತ. ಅಂದರೆ, ಸತ್ಯವೇ ನಿಜವಾದ ಸಂಪತ್ತು, ಅದು ನಿಜವಾಗಿ ಅನಂತವಾದುದು. ಅನಂತವಾದ ಅತೀಂದ್ರಿಯ ದೈವತ್ವವು ಸತ್ಯವಾಗಿದೆ, ಮತ್ತು ಅದುವೇ ನಿಜವಾದ ಸಂಪತ್ತಾಗಿದೆ. ಆದುದರಿಂದ, ಧ್ಯಾನ ಮಾಡುವುದರ ಮೂಲಕ, ಆ ಆಂತರಿಕ ಆಕಾಶವನ್ನು ಪ್ರವೇಶಿಸುವ ಮೂಲಕ ನೀವೆಲ್ಲರೂ ಇಲ್ಲಿ ನಿಜವಾದ ಸಂಪತ್ತನ್ನು ಗಳಿಸಿರುವಿರಿ. ಅದು ಸತ್ಯ. ಅದುವೇ ಸತ್ ಶ್ರೀ ಅಕಾಲ್.
ಹಲವಾರು ಜನರು ಅದರ ಅರ್ಥವನ್ನು ತಿಳಿಯದೆಯೇ ಸುಮ್ಮನೇ ’ಸತ್ ಶ್ರೀ ಅಕಾಲ್’ ಎಂದು ಹೇಳುತ್ತಾರೆ. ಇದು ಅತ್ಯುತ್ತಮ ಶುಭಾಶಯಗಳಲ್ಲಿ ಒಂದಾಗಿದೆ, ಯಾಕೆಂದರೆ ನೀವು ಯಾರನ್ನಾದರೂ ಭೇಟಿಯಾಗುವಾಗ, ಸತ್ಯವೇ  ನಿಜವಾದ ಶಾಶ್ವತವಾದ ಸಂಪತ್ತು ಎಂಬುದನ್ನು ಅದು ನಿಮಗೆ ನೆನಪಿಸುತ್ತದೆ. ನೀವು ಅದಲು ಬದಲು ಮಾಡಿಕೊಳ್ಳುವ ಶುಭಾಶಯವು ಅಧ್ಯಾತ್ಮಿಕತೆಯ, ಶಾಶ್ವತ ಜ್ಞಾನದ ಬಗ್ಗೆಯಾಗಿದೆ ಹಾಗೂ ಅದು ನಿಮಗೆ ನಿಜವಾದ ಸಂಪತ್ತಿನ ಬಗ್ಗೆ ನೆನಪಿಸುತ್ತದೆ. ಅದು ಬಹಳ ಸುಂದರವಲ್ಲವೇ?

ಜೋ ಬೋಲೆ ಸೋ ನಿಹಾಲ್! ಸತ್ ಶ್ರೀ ಅಕಾಲ್: ಇದನ್ನು ಯಾರು ಹೇಳುವರೋ ಅವರು ಉನ್ನತಿಗೇರುವರು. ನಿಹಾಲ್ ಎಂದರೆ ಮೇಲಕ್ಕೆತ್ತುವುದು; ನೀವು ಮೇಲಕೆತ್ತಲ್ಪಡುವಿರಿ. ’ಸತ್ ಶ್ರೀ ಅಕಾಲ್’  ಎಂದು ಹೇಳುವುದರಿಂದ, ಅದು ನಿಮ್ಮಲ್ಲಿ ಶೌರ್ಯವನ್ನು ತುಂಬುವುದು ಮಾತ್ರವಲ್ಲ, ಅದು ಶಾಶ್ವತವಾದ ಇರುವಿಕೆಯ ಚೈತನ್ಯವನ್ನು ಕೂಡಾ ನಿಮ್ಮಲ್ಲಿ ತುಂಬುತ್ತದೆ.

ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮನು, "ಓಂ ಇತ್ಯೇಕಾಕ್ಷರಂ ಬ್ರಹ್ಮ ವ್ಯಾಹರನ್ಮಾಮನುಸ್ಮರನ್ ಯಃ ಪ್ರಯಾತಿ ತ್ಯಜನ್ ದೇಹಂ ಸ ಯಾತಿ ಪರಮಾಂ ಗತಿಮ್"  (ಅಧ್ಯಾಯ ೮, ಶ್ಲೋಕ ೧೩). ಬ್ರಹ್ಮನು, ಎಲ್ಲಾ ಕಡೆಯಲ್ಲಿ ವ್ಯಾಪಿಸಿರುವ ದೇವರು, ಓಂ ಎಂದು ಕರೆಯಲ್ಪಡುತ್ತಾನೆ. ಗುರು ಗ್ರಂಥ್ ಸಾಹಿಬ್ ನಲ್ಲಿ, ’ಏಕ್ ಓಂಕಾರ್ ಸತ್ ನಾಮ್’ ಎಂದು ಹೇಳಲಾಗಿದೆ; ಒಂದೇ ಒಂದು ಓಂ ಇರುವುದು, ಅದು ಅನಂತತೆಗಿರುವ ನಿಜವಾದ ಹೆಸರಾಗಿದೆ.

ಓಂ ಎಂಬುದು ಒಬ್ಬರ ಪ್ರಜ್ಞೆಯ ಆಳದಲ್ಲಿ ಅಸ್ತಿತ್ವದಲ್ಲಿರುವ ಶಾಶ್ವತ ಶಬ್ದವಾಗಿದೆ. ನೀವು ಸಮುದ್ರಕ್ಕೆ ಹೋಗಿ ಅಲೆಗಳನ್ನು ಗಮನವಿಟ್ಟು ಆಲಿಸಿದರೆ, ನಿಮಗೆ ಅದೇ ಶಬ್ದವು ಕೇಳಿಸುತ್ತದೆ, ಓಂ. ನೀವೊಂದು ಬೆಟ್ಟದ ತುದಿಗೆ ಹೋಗಿ ಗಾಳಿ ಬೀಸುವುದನ್ನು ಆಲಿಸಿದರೆ, ನಿಮಗೆ ಓಂ ಶಬ್ದವು ಕೇಳಿಸುತ್ತದೆ. ಈ ಜನ್ಮದ ಮೊದಲು, ನಾವೆಲ್ಲರೂ ಓಂನಲ್ಲಿದ್ದೆವು. ಈ ಜನ್ಮದ ಬಳಿಕ, ನಾವೆಲ್ಲರೂ ಮರಣ ಹೊಂದಿದ ಬಳಿಕ, ನಾವು ಆ ಬ್ರಹ್ಮಾಂಡ (ಕಾಸ್ಮಿಕ್) ಶಬ್ದ, ಓಂನೊಳಕ್ಕೆ ವಿಲೀನಗೊಳ್ಳುವೆವು. ಈಗಲೂ ಕೂಡಾ, ಸೃಷ್ಟಿಯ ಆಳದಲ್ಲಿ ಆ ಶಬ್ದವು ಇನ್ನೂ ಅನುರಣಿಸುತ್ತಿದೆ.

ಆದುದರಿಂದ, ಬೌದ್ಧ ಧರ್ಮದಲ್ಲಿ, ಜೈನ ಧರ್ಮದಲ್ಲಿ, ಸಿಖ್ ಧರ್ಮದಲ್ಲಿ, ಹಿಂದೂ ಧರ್ಮದಲ್ಲಿ, ಟಾವೋ ಧರ್ಮದಲ್ಲಿ, ಶಿಂಟೋ ಧರ್ಮದಲ್ಲಿ; ಈ ಎಲ್ಲಾ ಧರ್ಮಗಳಲ್ಲಿ ಓಂಕಾರಕ್ಕೆ ಬಹಳಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದೆ.

ಆಮೆನ್ (ಕ್ರಿಶ್ಚಿಯನ್ ಧರ್ಮದಲ್ಲಿ) ಮತ್ತು ಆಮೀನ್ (ಇಸ್ಲಾಂ ಧರ್ಮದಲ್ಲಿ) ಕೂಡಾ ಓಂ ನದ್ದೇ ಇನ್ನೊಂದು ರೂಪವೆಂದು ನನಗನ್ನಿಸುತ್ತದೆ. ಹೀಗೆ, ಓಂ ಎಂಬುದು ಅನಂತವಾದ, ವೈವಿಧ್ಯಮಯ ಪ್ರಜ್ಞೆಗಿರುವ ಈ ಒಂದು ಪದವಾಗಿದೆ.

ಬಂಗಾಳ, ಕೇರಳ ಮತ್ತು ತಮಿಳುನಾಡುಗಳಲ್ಲಿ ಇವತ್ತಿನ ದಿನವನ್ನು ಹೊಸವರ್ಷವಾಗಿ ಕೂಡಾ ಆಚರಿಸಲಾಗುತ್ತಿದೆ.

ಪ್ರಶ್ನೆ: ಪ್ರೀತಿಯ ಗುರುದೇವ, ನನ್ನ ಪತಿಯು ನನ್ನನ್ನು ಬಹಳ ಪ್ರೀತಿಸುತ್ತಾರೆ, ಮತ್ತು ಹಾಗಿದ್ದರೂ ನನ್ನ ನಕಾರಾತ್ಮಕ ಗುಣಗಳನ್ನು ಲೆಕ್ಕ ಹಾಕಲು ದೊರೆಯುವ ಒಂದೇ ಒಂದು ಅವಕಾಶವನ್ನೂ  ಅವರು ತಪ್ಪಿಸಿಕೊಳ್ಳುವುದಿಲ್ಲ. ನನ್ನ ಉತ್ಸಾಹವು ಕೆಳಕ್ಕಿಳಿಯುತ್ತದೆ. ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ನೀನು ವಿಭಿನ್ನವಾಗಿ ವರ್ತಿಸಬೇಕು. ಅವನಿಗೊಂದು ಅಚ್ಚರಿಯನ್ನು ನೀಡು. ಅವನು ನಿನ್ನ ಋಣಾತ್ಮಕ ಗುಣಗಳನ್ನು ಲೆಕ್ಕ ಹಾಕಿದರೆ, ನೀನು ಅವನ ಮೇಲೆ ಬಹಳಷ್ಟು ಪ್ರೀತಿ, ಮಮತೆ ಮತ್ತು ಹೊಗಳಿಕೆಗಳ ಸುರಿಮಳೆಗೈ! ಅವನಿಗೆ ಹೀಗೆಂದು ಹೇಳು, "ವಾಹ್, ನೀನಿದನ್ನು ಸರಿಯಾಗಿಯೇ ಹೇಳಿದೆ! ಇದನ್ನೇ ನಾನು ಕೇಳಿಸಿಕೊಳ್ಳಲು ಬಯಸಿದ್ದು!" ಎಲ್ಲಾ ಸಮಯವೂ ಒಂದೇ ರೀತಿಯಲ್ಲಿ ಪ್ರತಿಕ್ರಿಯಿಸಬೇಡ. ನಿನಗೆ ಯಾವ ರೀತಿಯಲ್ಲಿ ವರ್ತಿಸಬೇಕೋ ಆ ರೀತಿಯಲ್ಲಿ ವರ್ತಿಸುವ ಒಂದು ಅವಕಾಶವು ನಿನಗಿದೆ, ಅಲ್ಲವೇ?

ಒಂದು ದಿನ ಅವನು ನಿನಗೆ ಹೂಗಳನ್ನು ತಂದು ನಿನ್ನನ್ನು ಹೊಗಳುವಾಗ ಅವನನ್ನು ನೋಡಿ ಹುಬ್ಬು ಗಂಟಿಕ್ಕಿ, "ನೀವೇಕೆ ಇದನ್ನು ಮಾಡಿದಿರಿ?" ಎಂದು ಹೇಳು. ಅವನು ನಿನ್ನನ್ನು ಬೈಯುವಾಗ, ಅದರ ಬಗ್ಗೆ ಸಂತೋಷಪಡು.

ಒಂದು ವಿಷಯವನ್ನು ನೆನಪಿನಲ್ಲಿಟ್ಟುಕೋ, ನಿನ್ನ ಸಂತೋಷಕ್ಕೆ ನೀನೇ ಹೊಣೆಯಾಗಿರುವೆ. ಏನೇ ಬರಲಿ, ಯಾರೇ ಏನೇ ಹೇಳಲಿ, ನೀನು ನಿನ್ನ ಮನಸ್ಸನ್ನು ಕಾಪಾಡು ಮತ್ತು ನಿನ್ನನ್ನು ಸಂತೋಷವಾಗಿರಿಸು. ನೀನು ಹೀಗೆಂದು ನಿರ್ಧಾರ ಮಾಡು, "ಯಾರೇ ಆಗಲಿ ನನ್ನ ಸಂತೋಷವನ್ನು ತೆಗೆದೊಯ್ಯಲು ನಾನು ಬಿಡುವುದಿಲ್ಲ! ದೇವರೇ ಬಂದು ನನ್ನ ಮೇಲೆ ಕೂಗಾಡಿದರೂ ನಾನು ದೇವರಲ್ಲಿ, ’ನಿಮಗೆ ಧನ್ಯವಾದಗಳು, ಇದು ನನಗೆ ನಿಮ್ಮ ಉಡುಗೊರೆ’ ಎಂದು ಹೇಳುವೆನು." ಇವತ್ತೇ ಈ ನಿರ್ಧಾರವನ್ನು ಮಾಡು.

ಇವತ್ತು ಬೈಸಾಖಿಯಾಗಿದೆ. ಅದು ನಿಮಗೊಂದು ಉಡುಗೊರೆಯಾಗಿದೆ. ಉಡುಗೊರೆ ಯಾವುದು? ಏನೇ ಬರಲಿ, ಮಾಯೆಯಲ್ಲಿ; ಈ ಎಂದಿಗೂ ಬದಲಾಗುತ್ತಿರುವ ಜಗತ್ತಿನಲ್ಲಿ ನನ್ನ ಮನಸ್ಸು ಜಾರಿಬೀಳಲು ನಾನು ಬಿಡುವುದಿಲ್ಲ. ನನ್ನ ಸಾಂತೋಷಕ್ಕೆ ನಾನೇ ಹೊಣೆಯಾಗಿದ್ದೇನೆ. ನನ್ನ ಸಂತೋಷವನ್ನು ಕಡಿಮೆ ಮಾಡಲು ನಾನು ಯಾರಿಗೂ ಬಿಡುವುದಿಲ್ಲ. ನೀವು ಈ ನಿರ್ಧಾರದೊಂದಿಗೆ ಹೋಗಿ ಮತ್ತು ನೋಡಿ ಏನಾಗುವುದೆಂದು. ಹೇಗಿದ್ದರೂ, ಮತ್ತೆ, ಮತ್ತೆ, ಮತ್ತೆ ಮರಳಿ ಬರಲು ಈ ಜಾಗವು ನಿಮಗಾಗಿ ಇರುತ್ತದೆ.

ಬಟ್ಟೆಗಳು ಕೊಳೆಯಾಗುವಾಗ, ನಾವು ಅವುಗಳನ್ನು ತೊಳೆಯಲು ಅಥವಾ ಡ್ರೈ-ಕ್ಲೀನಿಂಗಿಗೆ ಕೊಡುತ್ತೇವೆ. ಇದು (ಆಶ್ರಮ) ಒಂದು ಒಳ್ಳೆಯ ವಾಷಿಂಗ್ ಮೆಶಿನ್ ಆಗಿದೆ, ಇದು ಎಲ್ಲವನ್ನೂ ಸ್ವಚ್ಛಗೊಳಿಸುತ್ತದೆ.

ಪ್ರಶ್ನೆ: ನಾನು ಪ್ರೀತಿಯಲ್ಲಿರಲು ಬಯಸುತ್ತೇನೆ, ಆದರೆ ಪ್ರೀತಿ ಮತ್ತು ಜ್ಞಾನದ ನಡುವೆ ಒಂದು ಸಂಘರ್ಷವಿದೆಯೆಂದು ತೋರುತ್ತದೆ. ಎರಡನ್ನೂ ಒಂದುಗೂಡಿಸುವುದು ಹೇಗೆ? ನನ್ನೆಲ್ಲಾ ಪ್ರೀತಿಯೊಂದಿಗೆ!

ಶ್ರೀ ಶ್ರೀ ರವಿ ಶಂಕರ್: ನೀನದನ್ನು ಈಗಾಗಲೇ ಮಾಡಿರುವೆ! ನಿನಗೆ ಜ್ಞಾನದ ಬಗ್ಗೆ ಪ್ರೀತಿಯಿಲ್ಲದಿದ್ದರೆ, ಅದನ್ನು ನೀನು ಯಾಕೆ ಕೇಳುವೆ? ಮತ್ತು ನಿನಗದು ತಿಳಿದಿರುವುದಾದರೆ, ನೀನು ಪ್ರೀತಿಯಲ್ಲಿರಲು ಸಾಧ್ಯವಾಗದಿರಲು ಹೇಗೆ ಸಾಧ್ಯ? ತಿಳಿದಿರುವುದು ನಿಮ್ಮಲ್ಲಿ ಪ್ರೀತಿಯನ್ನು ತರುತ್ತದೆ ಮತ್ತು ಪ್ರೀತಿಯು ತಿರುಗಿ, ಹೆಚ್ಚು ತಿಳಿಯಲಿರುವ ಆಸಕ್ತಿಯನ್ನು ಸೃಷ್ಟಿಸುತ್ತದೆ.

ಪ್ರಶ್ನೆ: ಐದು ಕೋಶಗಳು ಯಾವುವು? ಅವುಗಳ ಆಧ್ಯಾತ್ಮಿಕ ಮಹತ್ವವೇನು?

ಶ್ರೀ ಶ್ರೀ ರವಿ ಶಂಕರ್: ಕೋಶವೆಂದರೆ ಪೊರೆ, ಆವರಣ.

ಮೊದಲನೆಯ ಆವರಣವೆಂದರೆ ಪರಿಸರ. ಪರಿಸರವು ವಿಷಕಾರಿ ಅನಿಲದಿಂದ ತುಂಬಿದ್ದರೆ, ನಿಮ್ಮ ಶರೀರವು ಅಸ್ತಿತ್ವದಲ್ಲಿರಲು ಸಾಧ್ಯವೇ? ಇಲ್ಲ! ಗಾಳಿಯಿರುವ ಕಾರಣದಿಂದ, ನಿಮ್ಮ ಶರೀರ ಅಸ್ತಿತ್ವದಲ್ಲಿರಲು ಸಾಧ್ಯ. ಆದುದರಿಂದ, ಪರಿಸರವು ನಿಮ್ಮ ಮೊದಲ ಶರೀರವಾಗಿದೆ. ಅನ್ನರಸಮಯಕೋಶ, ಅನ್ನವೆಂದರೆ ಆಹಾರ, ರಸ ಎಂದರೆ ದ್ರವ್ಯ. ಬಾಹ್ಯ ಪರಿಸರವು ರಸಭರಿತವಾಗಿದೆ; ಅದು ನಿಮ್ಮ ಕಣ್ಣುಗಳನ್ನು ಆಕರ್ಷಿಸುತ್ತದೆ, ಸುವಾಸನೆಯಿಂದ ನಿಮ್ಮ ಮೂಗನ್ನು ಸೆರೆಹಿಡಿಯುತ್ತದೆ ಮತ್ತು ಶಬ್ದದಿಂದ ನಿಮ್ಮನ್ನು ವಶಮಾಡಿಕೊಳ್ಳುತ್ತದೆ. ಇದೆಲ್ಲವೂ ರಸವಾಗಿದೆ, ಅಂದರೆ ರಸಭರಿತವಾದುದು. ಪರಿಸರವು ರಸದಿಂದ ಮತ್ತು ಆಹಾರದಿಂದ ತುಂಬಿದೆ. ಅವುಗಳು ಕೂಡಾ ಶರೀರಕ್ಕಿರುವ ಆಹಾರಗಳಾಗಿವೆ. ಉದಾಹರಣೆಗೆ, ನೋಟ ಕಣ್ಣುಗಳಿಗಿರುವ ಆಹಾರವಾಗಿದೆ. ಆದುದರಿಂದ, ನಮ್ಮ ಪರಿಸರ, ಅನ್ನರಸಮಯಕೋಶವು ಮೊದಲನೆಯ ಕೋಶವಾಗಿದೆ. ಕೆಲವರು, ಅದು ಭೌತಿಕ ಶರೀರವೆಂದು ಯೋಚಿಸುತ್ತಾರೆ, ಆದರೆ ಮೊದಲನೆಯ ಕೋಶವು ಪರಿಸರವೆಂದು ನನಗನ್ನಿಸುತ್ತದೆ.

ಎರಡನೆಯ ಆವರಣವು ಭೌತಿಕ ಶರೀರವಾಗಿದೆ, ಪ್ರಾಣಮಯಕೋಶ.

ಮೂರನೆಯ ಆವರಣವು ಮನೋಮಯಕೋಶವಾಗಿದೆ. ಅದು ಮನಸ್ಸು, ಯೋಚನೆಗಳು ಮತ್ತು ಭಾವನೆಗಳು.

ನಾಲ್ಕನೆಯ ಆವರಣವು ವಿಜ್ಞಾನಮಯಕೋಶವಾಗಿದೆ. ಅದು ಮನಸ್ಸಿಗಿಂತ ಸೂಕ್ಷ್ಮವಾದುದು; ಅಂತರ್ಬೋಧೆಯ ಭಾವನೆಗಳು. ಅದು ಯೋಚನೆಯನ್ನು ಮೀರಿದುದು, ಕಾರಣವನ್ನು ಮೀರಿರುವುದಾಗಿದೆ. ನಿಮ್ಮೊಳಗೆ ಒಂದು ಶರೀರವಿದೆ. ಅಲ್ಲಿಂದಲೇ ಎಲ್ಲಾ ನವೀನೀಕರಣ ಮತ್ತು ಸೃಜನಶೀಲತೆಯು ಬರುವುದು. ಪ್ರತಿಯೊಂದು ಅನ್ವೇಷಣೆ, ಹೊಸ ಕಲ್ಪನೆ, ಹೊಸ ಕಲೆ, ಕವಿತೆಗಳು ಬರುವುದು ವಿಜ್ಞಾನಮಯಕೋಶದಿಂದಾಗಿದೆ, ಮತ್ತು ಮನೋಮಯಕೋಶದಿಂದಲ್ಲ.

ಐದನೆಯ ಆವರಣವು ಆನಂದಮಯಕೋಶವಾಗಿದೆ, ಆನಂದಮಯ ಶರೀರ. ನಿಜವಾಗಿ, ಆನಂದಮಯ ಶರೀರವು ಭೌತಿಕ ಶರೀರಕ್ಕಿಂತ ಎಷ್ಟೋ ಹೆಚ್ಚು ದೊಡ್ಡದಾಗಿದೆ. ಆದ ಕಾರಣವೇ, ನೀವು ಯಾವಾಗೆಲ್ಲಾ ಸಂತೋಷವಾಗಿರುವಿರೋ ಆಗ ನೀವು ವಿಸ್ತರಿಸುವಿಕೆಯ ಒಂದು ಭಾವನೆಯನ್ನು ಅನುಭವಿಸುವಿರಿ. ಅಲ್ಲವೇ? ನೀವು ದುಃಖಿತರಾಗಿರುವಾಗ, ನಿಮಗೇನನ್ನಿಸುತ್ತದೆ? ನಿಮ್ಮನ್ನು ಚೂರು ಚೂರು ಮಾಡಲಾಗುತ್ತಿದೆಯೆಂದು ನಿಮಗನ್ನಿಸುತ್ತದೆ.

ಪ್ರಶ್ನೆ: ಗುರುದೇವ, ಗುರು ಗ್ರಂಥ್ ಸಾಹಿಬ್ ನ ಉಪಸ್ಥಿತಿಯಲ್ಲಿ ತಲೆಯನ್ನು ಮುಚ್ಚಿಕೊಳ್ಳುವುದರ ಪ್ರಸಕ್ತತೆಯ ಬಗ್ಗೆ ದಯವಿಟ್ಟು ವಿವರಿಸಿ. 

ಶ್ರೀ ಶ್ರೀ ರವಿ ಶಂಕರ್: ಇದು ಒಂದು ದೀರ್ಘ ಕಾಲದಿಂದ ಪ್ರಚಲಿತದಲ್ಲಿರುವ ಒಂದು ಸಂಪ್ರದಾಯವಾಗಿದೆ.

ಸಿಖ್ ಸಂಪ್ರದಾಯದೊಂದಿಗೆ ನಡೆದುಕೊಂಡು ಬಂದಿರುವ ಐದು ವಿಷಯಗಳಿವೆ. ಕತ್ತರಿಸದ ಕೂದಲು (ಒಂದು ಮುಂಡಾಸಿನಿಂದ ಮುಚ್ಚಿದ), ಒಂದು ಬಾಚಣಿಗೆ, ಒಂದು ಕಠಾರಿ, ಒಂದು ಕಡಗ ಮತ್ತು ಒಂದು ನಿರ್ದಿಷ್ಟ ಶೈಲಿಯ ಬಟ್ಟೆಗಳು.

ಇವುಗಳೆಲ್ಲವೂ ಸಿಖ್ ಸಂಪ್ರದಾಯದ ಐದು ಚಿಹ್ನೆಗಳಾಗಿವೆ. ಅವುಗಳನ್ನು ಗೌರವಿಸಬೇಕು ಯಾಕೆಂದರೆ ಗುರುವು ನಿಮ್ಮಲ್ಲಿ ಇವುಗಳನ್ನು ಮಾಡಲು ಹೇಳಿರುವರು, ನಿಮಗಾಗಿ ಒಂದು ಗುರುತನ್ನು ಮಾಡಲು. ಆ ದಿನಗಳಲ್ಲಿ, ಪ್ರತಿಯೊಂದು ಕುಟುಂಬವೂ ಒಬ್ಬ ಹುಡುಗನನ್ನು, ಹೆಚ್ಚಾಗಿ ತಮ್ಮ ಮೊದಲ ಪುತ್ರನನ್ನು ಗುರುವಿಗೆ ಕೊಡುತ್ತಿದ್ದರು ಮತ್ತು ಗುರುವು ಅವರೆಲ್ಲರಿಗೂ ತರಬೇತಿಯನ್ನು ನೀಡುತ್ತಿದ್ದರು. ಪ್ರತಿಯೊಬ್ಬರ ಪುತ್ರರಿಗೂ ಆಗುತ್ತಿದ್ದುದು ಇದೇ. ಹೀಗೆ, ಅವರೆಲ್ಲರೂ ಸೈನಿಕರ ಪಾತ್ರ ನಿರ್ವಹಿಸಲು, ಹಾಗೆಯೇ ಅಂತರ್ಮುಖವಾಗಿ ಹೋಗಲು ತರಬೇತಿಗೊಳ್ಳುತ್ತಿದ್ದರು. ಪ್ರಾರ್ಥಿಸಲು ಮತ್ತು ಕ್ರಿಯಾಶೀಲರಾಗಲು, ಹಾಗೂ ಧರ್ಮವನ್ನು ರಕ್ಷಿಸಲು.

ಪ್ರಶ್ನೆ: ಪ್ರೀತಿಯ ಗುರುದೇವ, ದೇವರು ಮತ್ತು ದೈವಿಕತೆಯು ಗ್ರಹಿಕೆಯ ವಸ್ತುಗಳಲ್ಲದೇ ಇದ್ದರೆ ನೀವು ಯಾರು?

ಶ್ರೀ ಶ್ರೀ ರವಿ ಶಂಕರ್: ಅದನ್ನು ನೀನು ಕಂಡುಹಿಡಿ. ನಾನು ಯಾರು ಎಂಬುದನ್ನು ತಿಳಿಯಲು, ಮೊದಲು, ನೀನು ಯಾರು ಎಂಬುದನ್ನು ನೀನು ಕಂಡುಹಿಡಿಯಬೇಕು. ನೀನೆಲ್ಲಿರುವೆಯೋ ಅಲ್ಲಿಂದ ಪ್ರಾರಂಭಿಸು. ನೀನು ನಿನ್ನನ್ನೇ ತಿಳಿದರೆ, ಆಗ ನೀನು ನನ್ನನ್ನು ತಿಳಿಯುವೆ. ನಿನಗೆ ನಿನ್ನನ್ನೇ ತಿಳಿಯದಿದ್ದರೆ, ನಿನಗೆ ನನ್ನನ್ನು ತಿಳಿಯಲು ಸಾಧ್ಯವಿಲ್ಲ.

ಪ್ರಶ್ನೆ: ಪ್ರೀತಿಯ ಗುರುದೇವ, ಜನರು ತಮ್ಮ ಅನಾರೋಗ್ಯವನ್ನು ಅಥವಾ ತಮ್ಮ ನಿಕಟವರ್ತಿಗಳ ಅಥವಾ ತಮ್ಮ ಕುಟುಂಬದ ಸದಸ್ಯರ ಅನಾರೋಗ್ಯವನ್ನು ಸ್ವೀಕರಿಸಲು ಅವರಿಗೆ ನಾವು ಸಹಾಯ ಮಾಡುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಅದರ ಬಗ್ಗೆ ಏನೂ ಮಾಡಬೇಡಿ; ಸುಮ್ಮನೆ ನಿಮ್ಮ ಮನಸ್ಸಿನಲ್ಲಿ ಶಾಂತಿಯನ್ನಿಟ್ಟುಕೊಂಡು ಅಲ್ಲಿರಿ. ಅನಾರೋಗ್ಯದಲ್ಲಿರುವ ಜನರಿಗೆ, ಮಾತಿನ ಮೂಲಕ ನೀವು ಸುಖವನ್ನು ತರಲೂ ಸಾಧ್ಯವಿಲ್ಲ, ಅವರು ತಮ್ಮ ಅನಾರೋಗ್ಯವನ್ನು ಸ್ವೀಕರಿಸುವಂತೆ ಮಾಡಲೂ ಸಾಧ್ಯವಿಲ್ಲ. ಆದರೂ, ನಿಮ್ಮ ಧನಾತ್ಮಕ ಕಂಪನಗಳು ಪರಿಸರವನ್ನು ಬದಲಾಯಿಸಬಲ್ಲವು.

ಪ್ರಶ್ನೆ: ಪ್ರೀತಿಯ ಗುರುದೇವ, ಜನರು ನಿಮ್ಮ ಪಾದಗಳನ್ನು ಬಹಳವಾಗಿ ಪ್ರೀತಿಸುವಂತೆ ತೋರುತ್ತದೆ, ಯಾಕೆ? ಅದೊಂದು ಸಂಸ್ಕೃತಿಯ ವಿಷಯವೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಅದೊಂದು ಸಂಸ್ಕೃತಿಯ ವಿಷಯ.

ಜಪಾನಿನಲ್ಲಿ, ಜನರಿಗೆ ಅಭಿವಂದಿಸಲು ಅವರು ಅರ್ಧ ಬಾಗುತ್ತಾರೆ. ಭಾರತದಲ್ಲಿ, ಅವರು ಪೂರ್ತಿಯಾಗಿ ಬಾಗುತ್ತಾರೆ ಮತ್ತು ಪಾದಗಳನ್ನು ಸ್ಪರ್ಶಿಸುತ್ತಾರೆ.

ಕಿರಣಗಳು, ಚೈತನ್ಯವು ಪಾದಗಳಿಂದ ಬರುತ್ತದೆ ಎಂದು ಹೇಳಲಾಗಿದೆ. ಅದು ಹಳೆಯ ನಂಬಿಕೆಯ ವ್ಯವಸ್ಥೆ, ಅದಕ್ಕಾಗಿಯೇ ಅವರದನ್ನು ಮಾಡುತ್ತಾರೆ. ಕೆಲವೊಮ್ಮೆ, ಅದು ನನಗೆ ನಡೆಯಲು ಬಹಳ ಕಷ್ಟವನ್ನುಂಟುಮಾಡುತ್ತದೆ.

ಒಮ್ಮೆ ನಾನು ಒಂದು ಜನಸಂದಣಿಯಲ್ಲಿ ನಡೆಯುತ್ತಿದ್ದಾಗ, ಇಬ್ಬರು ವ್ಯಕ್ತಿಗಳು ಹಿಂದಿನಿಂದ ನನ್ನ ಪಾದಗಳನ್ನು ಹಿಡಿದುಕೊಂಡರು. ನಾನು ಧುಮುಕುವ ಭಂಗಿಯಲ್ಲಿದ್ದೆ, ವೇದವದ್ರಾಸನದಲ್ಲಿ, ನನ್ನ ಕೈಗಳು ಆಕಾಶದಲ್ಲಿ ನೇತಾಡುತ್ತಿದ್ದವು.

ಅದೃಷ್ಟವಶಾತ್, ನಾನು ಬೀಳಲಿಲ್ಲ, ಇಲ್ಲದಿದ್ದರೆ ಊರುಗೋಲಿನ ಜೊತೆ ನಡೆಯುತ್ತಿರುವ ಗುರುವನ್ನು ಅವರು ಕಾಣುತ್ತಿದ್ದರು.

ನೋಡಿ, ಪ್ರತಿಯೊಂದು ಪರಿಸ್ಥಿತಿಯಲ್ಲಿ ನಾನು ನನ್ನ ಸಂತುಲನವನ್ನು ಇಟ್ಟುಕೊಳ್ಳುತ್ತೇನೆ. ಅದು ಸಾಕಷ್ಟು ಸಲ ಆಗುತ್ತದೆ; ಅದೊಂದು ಸಂಸ್ಕೃತಿಯ ವಿಷಯವಾದುದರಿಂದ.

ಪ್ರಶ್ನೆ: ನನ್ನ ಪ್ರೀತಿಯ ಗುರುದೇವ, ನಾನು ಹೆಚ್ಚು ನಿಮ್ಮಂತೆ ಆಗುವುದು ಹೇಗೆ? ನನ್ನ ನಿಜವಾದ ಸ್ವಭಾವದಲ್ಲಿ ಬೆಳೆಯಲು ನೀವು ನನಗೆ ಯಾವ ಸಲಹೆಗಳನ್ನು ನೀಡುವಿರಿ?

ಶ್ರೀ ಶ್ರೀ ರವಿ ಶಂಕರ್: ಸುಮ್ಮನೆ ಹಿಂತಿರುಗಿ ನೋಡು, ನೀನು ಎಷ್ಟು ಬೆಳೆದಿರುವೆಯೆಂದು. ಹಿಂತಿರುಗಿ ನೋಡು, ನೀನು ಬೇಸಿಕ್ ಕೋರ್ಸ್ ಮಾಡುವ ಮೊದಲು ನಿನ್ನ ಮನಸ್ಸಿನ ಸ್ಥಿತಿ ಏನಾಗಿತ್ತೆಂದು. ಯಾವತ್ತೂ ಧ್ಯಾನವನ್ನೇ ಮಾಡದ ಆ ವ್ಯಕ್ತಿಗೂ ಮತ್ತು ನೀನು ಈಗ ಏನಾಗಿರುವೆಯೋ ಅದಕ್ಕೂ ಸಂಬಂಧ ಕಲ್ಪಿಸಲು ನಿನಗೆ ಸಾಧ್ಯವೇ? ಆ ದೊಡ್ಡ ವ್ಯತ್ಯಾಸವನ್ನು ಗಮನಿಸು!

ಮುಂದಕ್ಕೆ ಸಾಗಲು ನಿನಗೆ ಇಷ್ಟು ಸಾಕು. ಹಾಗೂ, ಒಂದು ಮುಗುಳ್ನಗೆಯೊಂದಿಗೆ ವಿಶ್ರಾಮ ಮಾಡು, ನಿನ್ನಲ್ಲೇ ವಿಶ್ರಾಂತಿ ತೆಗೆದುಕೋ ಮತ್ತು ಸಕ್ರಿಯನಾಗಿರು. ಅಷ್ಟೇ. ಸೇವೆ, ಸಾಧನೆ ಮತ್ತು ಸತ್ಸಂಗಗಳನ್ನು ಮಾಡುತ್ತಾ ಇರು.

ಪ್ರಶ್ನೆ: ಪ್ರೀತಿಯ ಗುರುದೇವ, ಕಳೆದ ೯ ತಿಂಗಳುಗಳಿಂದ, ನಾನು ಆಧ್ಯಾತ್ಮಿಕವಾಗಿ ಸಂಪರ್ಕ ಕಡಿದುಕೊಂಡಿರುವೆನೆಂದು ನನಗನ್ನಿಸುತ್ತಿದೆ. ಯಾವುದೇ ಆಸಕ್ತಿಯಿಲ್ಲ, ಯಾವುದೇ ಅಭ್ಯಾಸವಿಲ್ಲ, ಯಾವುದೇ ಸೇವೆಯಿಲ್ಲ ಮತ್ತು ಯಾವುದೇ ಹಾತೊರೆತವಿಲ್ಲ. ಇದು ಸಾಕಷ್ಟು ನೋವುಂಟುಮಾಡುತ್ತಿದೆ. ಏನಾದರೂ ಸಲಹೆ ನೀಡುವಿರೇ?

ಶ್ರೀ ಶ್ರೀ ರವಿ ಶಂಕರ್: ಇಂತಹ ವಿಷಯಗಳು ಜನರಿಗೆ ಆಗಬಹುದು, ಇದು ಆತ್ಮದ ಕತ್ತಲೆಯ ರಾತ್ರಿ (ಡಾರ್ಕ್ ನೈಟ್ ಆಫ್ ದಿ ಸೋಲ್) ಎಂದು ಕರೆಯಲ್ಪಡುತ್ತದೆ. ಇದ್ದಕ್ಕಿದ್ದಂತೆ, ನೀವು ಆಧ್ಯಾತ್ಮದಲ್ಲಿನ ಅಥವಾ ಒಳ್ಳೆಯದಾದ ಯಾವುದರಲ್ಲಾದರೂ ಆಸಕ್ತಿಯನ್ನು ಕಳೆದುಕೊಳ್ಳುತ್ತೀರಿ. ನಿಜವಾಗಿ ವಿಕಾಸಾತ್ಮಕವಲ್ಲದ ವಿಷಯಗಳೊಳಕ್ಕೆ ನಿಮ್ಮ ಮನಸ್ಸು ಹೋಗುತ್ತದೆ ಅಥವಾ ಒಂದು ವಿನಾಶಕಾರಿ ದಿಶೆಯನ್ನು ಪ್ರವೇಶಿಸಬಹುದು.

ಇಂತಹ ವಿಷಯಗಳು ೧೨ ವರ್ಷಗಳಿಗೊಮ್ಮೆ ಅಥವಾ ೩೦ ವರ್ಷಗಳಿಗೊಮ್ಮೆ ಸಂಭವಿಸಬಹುದು. ಅದು ೧೨ ವರ್ಷಗಳಿಗೊಮ್ಮೆ  ಬಂದರೆ, ಅದು ಒಂದು ವರ್ಷದ ವರೆಗೆ ಉಳಿಯುತ್ತದೆ, ಮತ್ತು ಅದು ೩೦ ವರ್ಷಗಳಿಗೊಮ್ಮೆ ಬಂದರೆ, ಅದು ಸುಮಾರು ೨.೫ ವರ್ಷಗಳ ವರೆಗೆ ಉಳಿಯುತ್ತದೆ.

ಇದನ್ನು ನಿವಾರಿಸಲಿರುವ ಅತ್ಯುತ್ತಮವಾದ ಮಾರ್ಗವೆಂದರೆ, ನಿಮ್ಮ ಸಾಧನೆಯನ್ನು ಅವಲಂಬಿಸಿರುವುದು ಮತ್ತು ಓಂ ನಮಃ ಶಿವಾಯ ಮಂತ್ರವನ್ನು ಜಪಿಸುವುದು. ಅಂತಹ ಅಹಿತಕರ ಕಂಪನಗಳು ಅಥವಾ ಮನೋಭಾವಗಳ ಮೂಲಕ ಹಾದುಹೋಗಲು ಇದು ಅತ್ಯುತ್ತಮವಾದ ಮಂತ್ರವಾಗಿದೆ.

ಪ್ರಶ್ನೆ: ಪ್ರೀತಿಯ ಗುರುದೇವ, ನಾನು ನನ್ನ ಜೀವನದಲ್ಲಿ ಸಮೃದ್ಧಿಯನ್ನು ಆಕರ್ಷಿಸುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ನೀನು ಸಮೃದ್ಧಿಗಾಗಿ ಹಂಬಲಿಸದೇ ಇರುವಾಗ, ಅದು ನಿನ್ನ ಬಳಿಗೆ ಬರುತ್ತದೆ. ನೀನು ಅದಕ್ಕಾಗಿ ಹಾತೊರೆಯುತ್ತಿದ್ದರೆ, "ಓ, ನನಗೆ ಸಮೃದ್ಧಿ ಬೇಕು" ಎಂದು ಹೇಳುತ್ತಾ ಇದ್ದರೆ, ಆಗ ಅದು ದೂರ ಉಳಿಯುತ್ತದೆ. ಸುಮ್ಮನೆ ವಿಶ್ರಾಮ ಮಾಡು! ನಿನಗೇನು ಬೇಕೋ, ಅದು ನಿನಗೆ ಲಭಿಸುವುದು ಎಂಬುದನ್ನು ತಿಳಿ.

ಸಮೃದ್ಧಿಯು ನಿಮ್ಮ ಬಳಿಗೆ ಬರುವಂತೆ ಮಾಡುವುದು ಹೇಗೆ ಎಂಬುದಕ್ಕೆ ಸಂಸ್ಕೃತದಲ್ಲಿ ಒಂದು ಮಾತಿದೆ. ಅದು ಹೇಳುತ್ತದೆ, ’ಉದ್ಯೋಗಿನಂಪುರುಷಸಿಂಹಮುಪೈತಿಲಕ್ಷ್ಮಿ.’

ಉದ್ಯೋಗಿನಂ ಎಂದರೆ ೧೦೦% ಪ್ರಯತ್ನವನ್ನು ಹಾಕುವುದು. ಪುರುಷಸಿಂಹಮುಪೈತಿಲಕ್ಷ್ಮಿ ಎಂದರೆ, ಒಂದು ಸಿಂಹದಂತೆ ವಿಶ್ವಾಸವನ್ನು ಮತ್ತು ಕೇಂದ್ರೀಕೃತ ಮನಸ್ಸು  ಹೊಂದಿರುವುದು.

ನೋಡಿ, ಒಂದು ಸಿಂಹವು ಒಂದು ಕೋಳಿಮರಿಯಂತೆ ಅತ್ತಿತ್ತ ಓಡಾಡುತ್ತಿರುವುದಿಲ್ಲ. ಒಂದು ಸಿಂಹವು ಹೇಗೆ ಕುಳಿತುಕೊಳ್ಳುವುದು ಎಂಬುದನ್ನು ನೀವು ನೋಡಿರುವಿರಾ? ನಿಮ್ಮಲ್ಲಿ ಆ ಕೇಂದ್ರೀಕೃತ ಮನಸ್ಸು ಮತ್ತು ವಿಶ್ವಾಸಗಳಿರಬೇಕು.

ಒಂದು ಸಿಂಹವು ಮಾಡದಿರುವ ಒಂದು ವಿಷಯವೆಂದರೆ, ಪ್ರಯತ್ನ ಹಾಕುವುದು; ಅದು ಕಠಿಣ ಪರಿಶ್ರಮಿಯಲ್ಲ.

ಉದ್ಯೋಗಿನಂಪುರುಷಸಿಂಹಮುಪೈತಿಲಕ್ಷ್ಮಿ. ನೀವು ಕಠಿಣ ಪರಿಶ್ರಮಿಯೂ, ಕೇಂದ್ರೀಕೃತವೂ ಆಗಿದ್ದರೆ, ನೀವು ನಿಮ್ಮ ಆಂತರಿಕ ಆಧ್ಯಾತ್ಮಿಕ ಶಕ್ತಿಯೊಂದಿಗೆ ಸಂಪರ್ಕದಲ್ಲಿರುವಾಗ, ಸಂಪತ್ತಿನ ದೇವತೆಯಾದ ಲಕ್ಷ್ಮಿಯು ಸುಮ್ಮನೆ ನಿಮ್ಮ ಬಳಿಗೆ ಬರುವಳು.

ಆದುದರಿಂದ, ಸಮೃದ್ಧಿಯು ಬರುವುದು ನೀವು ಕೇಂದ್ರೀಕೃತರಾಗಿರುವಾಗ, ಆತ್ಮವಿಶ್ವಾಸ ಹೊಂದಿರುವಾಗ, ನಿಮ್ಮ ಆಂತರಿಕ ಆಧ್ಯಾತ್ಮಿಕ ಶಕ್ತಿಯೊಂದಿಗೆ ಸಂಪರ್ಕದಲ್ಲಿರುವಾಗ ಮತ್ತು ಕಠಿಣ ಪರಿಶ್ರಮಿಗಳಾಗಿರುವಾಗ, ಅದಕ್ಕಿಂತ ಹೆಚ್ಚಾಗಿ ಜಾಣರಾಗಿ ಕೆಲಸ ಮಾಡುವಾಗ.

ಪ್ರಶ್ನೆ: ಗುರುದೇವ, ಎಲ್ಲಾ ನಕಾರಾತ್ಮಕ ಯೋಚನೆಗಳು ದೂರ ಹೋಗುವುದು ಯಾವಾಗ?

ಶ್ರೀ ಶ್ರೀ ರವಿ ಶಂಕರ್: ಅವುಗಳು ದೂರ ಹೋಗಲಾರವು, ಅವುಗಳು ಉಳಿಯುವುವು! ನೀನೇನು ಮಾಡುವೆ? ನೀನು ಅವುಗಳೊಂದಿಗೆ ಜೀವಿಸಬೇಕು! ಅವುಗಳನ್ನು ತೊಡೆದು ಹಾಕಲು ಯಾವುದೇ ಅವಕಾಶವಿಲ್ಲ. ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಅವುಗಳೊಂದಿಗೆ ಸ್ನೇಹ ಬೆಳೆಸುವುದು, ಅವುಗಳೊಂದಿಗೆ ಕೈಗಳನ್ನು ಕುಲುಕುವುದು ಮತ್ತು ಅವುಗಳು ನಿಮ್ಮ ಪಕ್ಕ ಕುಳಿತುಕೊಳ್ಳುವಂತೆ ಮಾಡುವುದು.

ಅವುಗಳು ನಿಮ್ಮ ಮಡಿಲಿನ ಮೇಲಿದ್ದರೆ, "ದಯವಿಟ್ಟು ನನ್ನ ಪಕ್ಕದಲ್ಲಿ ಕುಳಿತುಕೊಳ್ಳಿ, ನನ್ನ ತಲೆಯ ಮೇಲೆ ಅಥವಾ ನನ್ನ ಮಡಿಲಿನ ಮೇಲೆ ಅಲ್ಲ. ಬಹಳ ಭಾರವಿದೆ, ಬಹಳ ಹೊತ್ತಾಯಿತು" ಎಂದು ಅವುಗಳಿಗೆ ಹೇಳಿ. ಅವುಗಳನ್ನು ತೊಡೆದುಹಾಕಲು ಯಾವುದೇ ಅವಕಾಶವಿಲ್ಲ. ಏನು ಮಾಡುವುದು?