ಮಂಗಳವಾರ, ಏಪ್ರಿಲ್ 23, 2013

ಹೃದಯ ಸಮ್ಮಿಲನ


ಟೋಕಿಯೋ, ಜಪಾನ್
೨೩ ಎಪ್ರಿಲ್ ೨೦೧೩

ನಾವೊಂದು ಜಾಗತಿಕ ಕುಟುಂಬವಾಗಿದ್ದೇವೆ. ನಾನು ಜಪಾನಿನಲ್ಲಿ ಸಂತೋಷದ ಅಲೆಗಳನ್ನು ಸೃಷ್ಟಿಸಲು ಬಯಸುತ್ತೇನೆ. ಈ ದೇಶದ ಯುವಜನತೆಗೆ ವೈಭವ ತರಲು ನೀವೆಲ್ಲರೂ ಒಟ್ಟಾಗಬೇಕು.
ಪ್ರಪಂಚದಲ್ಲಿ ನಾನು ಎಲ್ಲಿಗೆಲ್ಲಾ ಹೋಗುವೆನೋ ಅಲ್ಲೆಲ್ಲಾ ನಾನು ಯಾವತ್ತೂ ಹೇಳುತ್ತೇನೆ, ನಾವು ತಂಡದಲ್ಲಿದ್ದು ಕೆಲಸ ಮಾಡುವುದನ್ನು ಜಪಾನಿನಿಂದ ಕಲಿಯಬೇಕೆಂದು. ವಿಸ್ತೀರ್ಣದಲ್ಲಿ ಜಪಾನ್ ಒಂದು ಚಿಕ್ಕ ದೇಶವಾಗಿದೆ, ಆದರೆ ಜಗತ್ತಿನಲ್ಲಿ ಅದು ಬಹಳ ಪ್ರಮುಖವಾದುದಾಗಿದೆ. ಇದು ಯಾಕೆಂದರೆ, ಕೆಲಸದ ಗುಣಮಟ್ಟದ ಕಾರಣದಿಂದ ಹಾಗೂ ಜನರು ಮತ್ತು ಸಂಸ್ಕೃತಿಯು ಹೊಂದಿರುವ ಬದ್ಧತೆಯಿಂದ. ವಿವಿಧ ದೇಶಗಳ ನಡುವೆ ಜಪಾನ್ ಒಂದು ಮಿನುಗುವ ನಕ್ಷತ್ರವಾಗುವಂತೆ ಮಾಡಿದುದು ಈ ದೇಶದ ಸಂಸ್ಕೃತಿಯಾಗಿದೆ.

ಜಾಗತೀಕರಣಗೊಂಡ ಒಂದು ಪ್ರಪಂಚದಲ್ಲಿ, ಯುವಜನರು ತಮ್ಮ ಸಂಸ್ಕೃತಿಯನ್ನು ಕಳೆದುಕೊಳ್ಳುವ ಸಂಭವವಿರುತ್ತದೆ, ಅವರು ಪಾಶ್ಚಾತ್ಯ ಸಂಸ್ಕೃತಿಯ ಪ್ರಕಾರ ಸಾಗುವ ಸಂಭವವಿರುತ್ತದೆ. ನಾವು ನಮ್ಮ ಮೂಲ ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕು ಮತ್ತು ಒಂದು ವಿಶಾಲ ಹೊರನೋಟವನ್ನು ಕೂಡಾ ಹೊಂದಿರಬೇಕೆಂದು ನಾನು ಹೇಳುತ್ತೇನೆ.

ಇವತ್ತು ಬೆಳಗ್ಗೆ, ನಾನು ಶಿಂಟೋ ದೇಗುಲಕ್ಕೆ ಹೋದೆ. ಅಲ್ಲಿನ ಸಂಪ್ರದಾಯ, ಅವರು ಮಾಡುವ ಆಚಾರವಿಧಿಗಳು ನೋಡಲು ಬಹಳ ಸುಂದರವಾಗಿದ್ದವು. ನಾನು ಬಹಳ ಪ್ರಭಾವಿತನಾದೆ. ಅದು ನನಗೆ, ಬಹಳ ಸಾಮ್ಯತೆಯಿರುವ ಪ್ರಾಚೀನ ವೈದಿಕ ಸಂಪ್ರದಾಯವನ್ನು ನೆನಪಿಸಿತು. ಆದುದರಿಂದ ನಾವು ಬೇರುಗಳನ್ನು ಬಲಗೊಳಿಸಬೇಕಾಗಿದೆ ಮತ್ತು ಅದೇ ವೇಳೆಯಲ್ಲಿ, ಪ್ರಪಂಚದಲ್ಲಿ ಇತರ ಎಲ್ಲೆಡೆಗಳಿಂದಲೂ ಒಳ್ಳೆಯದನ್ನು ತೆಗೆದುಕೊಳ್ಳಬೇಕು.

ಜಪಾನ್ ಇದನ್ನು ಮಾಡಿದೆ. ಅದು ಶಿಂಟೋ ಸಂಪ್ರದಾಯವನ್ನು ಉಳಿಸಿಕೊಂಡಿದೆ, ಹಾಗೆಯೇ ಝೆನ್ ಬೌದ್ಧಮತವು ಭಾರತದಿಂದ ಬಂದಾಗ ಅದನ್ನು ಅಭಿವೃದ್ಧಿಪಡಿಸಿತು.

ಪೂರ್ವದಲ್ಲಿ ನಾವು ಎಂದಿಗೂ ಮತಾಂಧರಾಗಿರಲಿಲ್ಲ. ನಾವು ಬಹಳ ತೆರೆದ ಮನಸ್ಸಿನವರಾಗಿದ್ದೇವೆ, ಹೀಗಿದ್ದರೂ ನಮ್ಮದೇ ಸಂಸ್ಕೃತಿಯಲ್ಲಿ ಬಹಳ ಬಲವಾಗಿ ಬೇರೂರಿದ್ದೇವೆ.

ಬೌದ್ಧಮತವು ಮೊದಲಿಗೆ ಜಪಾನಿಗೆ ಬಂದುದು ಸುಮಾರು ೨೦೦೦ ವರ್ಷಗಳ ಹಿಂದೆ, ೭ನೆಯ ಶತಮಾನದಲ್ಲಿ, ಅಂದರೆ ೧,೩೦೦ ವರ್ಷಗಳ ಹಿಂದೆ ಎಂದು ನನಗನಿಸುತ್ತದೆ. ಧ್ಯಾನವೆಂಬುದು ಪ್ರಪಂಚದಾದ್ಯಂತವಿರುವ ಜನರಲ್ಲಿರುವ ಒಂದು ಸಾಮಾನ್ಯ ಅಂಶವಾಗಿದೆ.

ಶಿಂಟೋ ಗುಡಿಯಲ್ಲಿನ ೨ ಸಿಂಹಗಳ ಬಗೆಗಿನ ವಿಷಯವನ್ನು ಕೇಳಲು ನನಗೆ ಸಂತಸವಾಯಿತು. ಒಂದು ’ಆ’ ಎಂದು ಹೇಳುತ್ತದೆ, ಮತ್ತು ಇನ್ನೊಂದು ’ಮ್ಮ್’ ಎಂದು ಹೇಳುತ್ತದೆ. ಒಂದು ಪ್ರಾರಂಭವಾಗಿದೆ ಮತ್ತು ಇನ್ನೊಂದು ಅಂತ್ಯವಾಗಿದೆ. ಅದು ಓಂ ಶಬ್ದ.

ಓಂ ಎಂಬುದು ಅತ್ಯಂತ ಪ್ರಾಚೀನ ಶಬ್ದವಾಗಿದೆ. ಅದು, ಎಲ್ಲಾ ಪೌರಾತ್ಯ ಸಂಸ್ಕೃತಿಗಳ ಭಾಗವಾಗಿರುವ ಆದಿಸ್ವರೂಪದ ಧ್ವನಿಯಾಗಿದೆ.

ಪಾಶ್ಚಾತ್ಯ ಸಂಸ್ಕೃತಿಗಳಲ್ಲಿ ಕೂಡಾ ಅದು ಒಂದು ಸ್ವಲ್ಪ ಬೇರೆ ರೀತಿಯಲ್ಲಿ ಇದೆ; ಆಮೆನ್, ಆಮೀನ್  ಆಗಿ. ಅಲ್ಲೂ ಕೂಡಾ ಒಂದು ರೂಪದಲ್ಲಿ ಓಂ ಇದೆ. ಅದೊಂದು ಸಾರ್ವತ್ರಿಕ ಧ್ವನಿ.

ನಿಮಗೆ ಗೊತ್ತಾ, ನನ್ನ ಕನಸೆಂದರೆ ಸಂಪೂರ್ಣ ಜಗತ್ತನ್ನು ಒಂದು ಕುಟುಂಬವಾಗಿ ನೋಡುವುದು. ಪ್ರತಿಯೊಂದು ಮುಖದ ಮೇಲೂ ಒಂದು ಮುಗುಳ್ನಗೆಯನ್ನು ನೋಡಲು ನಾನು ಬಯಸುತ್ತೇನೆ.

ಮೆಟ್ರೋ ಸ್ಟೇಷನ್ನುಗಳಲ್ಲಿ ಹಳಿಗಳ ಮೇಲಕ್ಕೆ ಹಲವಾರು ಜನರು ಜಿಗಿಯುತ್ತಾರೆಂಬುದನ್ನು ಇವತ್ತು ನನಗೆ ಹೇಳಲಾಯಿತು. ಎಷ್ಟರ ಮಟ್ಟಿಗೆ ಎಂದರೆ, ಟ್ರೈನು ಬರುವ ಮೊದಲು ಜನರು ಹಳಿಗಳ ಬಳಿಗೆ ಹೋಗುವುದನ್ನು ತಡೆಗಟ್ಟಲು ಅವರು ಒಂದು ತಡೆಯನ್ನು ಹಾಕಬೇಕಾಯಿತು. ಅದೊಂದು ಒಳ್ಳೆಯ ಆಲೋಚನೆ, ಆದರೆ ಅದು ಅತ್ಯುತ್ತಮವಾದ ಆಲೋಚನೆಯಲ್ಲ,
ಯಾಕೆಂದರೆ ಜನರು ಹಾರಲು ಬಯಸಿದರೆ ಅವರಿನ್ನೂ ಹಾರಲು ಸಾಧ್ಯವಿದೆ.

ಆದುದರಿಂದ, ತಮ್ಮನ್ನು ತಾವೇ ಕೊಲ್ಲುವುದಕ್ಕಾಗಿ ಜನರು ಹಳಿಗಳ ಮೇಲೆ ಹಾರುವುದನ್ನು ತಡೆಯಲಿರುವ ಅತ್ಯುತ್ತಮವಾದ ಮಾರ್ಗವು ಕೇವಲ ತಡೆಗಳಲ್ಲ. ಆದರೆ, ಅವರು ಅಂತರ್ಮುಖವಾಗಿ ಹೋಗಿ ಧ್ಯಾನ ಮಾಡುವಂತೆ ನಾವು ಮಾಡಬೇಕಾಗಿದೆ. ಜನರು ಪುನಃ ಮುಗುಳ್ನಗುವಲ್ಲಿ ಸಹಾಯ ಮಾಡಬಲ್ಲಂತಹ ಧ್ಯಾನದ ಬಹಳ ಸರಳವಾದ ತಂತ್ರಗಳೊಂದಿಗೆ ನಾವು ಬಂದಿದ್ದೇವೆ. ಪ್ರತಿಯೊಬ್ಬರ ಮುಖದ ಮೇಲೂ ಒಂದು ಮುಗುಳ್ನಗೆಯನ್ನು ನೋಡಲು ನಾನು ಬಯಸುತ್ತೇನೆ. ಹಾಗಾದರೆ, ಸಂತೋಷದ ಅಲೆಗಳನ್ನು ಸೃಷ್ಟಿಸಲು ನಾವೆಲ್ಲರೂ ಬದ್ಧರಾಗೋಣವೇ?

(ಸಭಿಕರು ಕೈಚಪ್ಪಾಳೆ ತಟ್ಟುತ್ತಾರೆ ಮತ್ತು ’ಹೌದು’ ಎಂದು ಹೇಳುತ್ತಾರೆ)

ಪ್ರತಿಯೊಬ್ಬರ ಮುಖದ ಮೇಲೂ ನಾವೊಂದು ಮುಗುಳ್ನಗೆಯನ್ನು ತರೋಣ. ನಾವು ಮಾಡಬೇಕಾದುದು ಇದನ್ನೇ.
ನಾವೆಲ್ಲರೂ ಇದರ ಕಡೆಗೆ ಒಟ್ಟಾಗಿ ಕೆಲಸ ಮಾಡಿದರೆ, ಪ್ರತಿಯೊಬ್ಬರ ಮುಖದ ಮೇಲೂ ನಾವೊಂದು ಮುಗುಳ್ನಗೆಯನ್ನು ತರಬಹುದು. ಹಣವೊಂದಕ್ಕೇ ಇದನ್ನು ಮಾಡಲು ಸಾಧ್ಯವಿಲ್ಲ. ನಾವು ಅನೌಪಚಾರಿಕವಾಗಿರಬೇಕು ಮತ್ತು ಪರಸ್ಪರರೊಂದಿಗೆ ಜೋಡಬೇಕು. ಅದು ಆವಶ್ಯಕವಾಗಿದೆ.

ಪ್ರತಿಯೊಬ್ಬರೂ ಪ್ರತಿ ಭಾನುವಾರವೂ ಒಂದು ಗಂಟೆಗಳ ವರೆಗೆ ತಮ್ಮ ಅಪಾರ್ಟ್ಮೆಂಟುಗಳಿಂದ ಹೊರಬಂದು, ಪರಸ್ಪರರೊಂದಿಗೆ ಕುಳಿತುಕೊಂಡು, ಪರಸ್ಪರರೊಂದಿಗೆ ಮಾತನಾಡಿ, ಹಾಡಿ, ಬೆಳಗಿನ ಉಪಹಾರಕ್ಕೆ ಒಂದು ತಿಂಡಿಯನ್ನು ಹಂಚಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಇದೊಂದು ವ್ಯತ್ಯಾಸವನ್ನು ಉಂಟುಮಾಡಬಲ್ಲದು.

ಕೆಲವು ಹಾಡುಗಳನ್ನು ಜೊತೆಯಲ್ಲಿ ಹಾಡಿ, ನಿಮಗೆ ಬೇಕಿರುವ ಯಾವುದೇ ಹಾಡುಗಳಾದರೂ. ಸ್ವಲ್ಪ ಗುಂಪು ಗಾಯನ ಮಾಡಿ, ಜೊತೆಯಲ್ಲಿ ಕುಳಿತುಕೊಳ್ಳಿ ಮತ್ತು ೧೦-೧೫ ನಿಮಿಷಗಳ ವರೆಗೆ ಧ್ಯಾನ ಮಾಡಿ. ಸ್ವಲ್ಪ ಯೋಗ ಅಥವಾ ವ್ಯಾಯಾಮಗಳನ್ನು ಜೊತೆಯಲ್ಲಿ ಮಾಡಿ, ಒಂದು ಊಟವನ್ನು ಜೊತೆಯಲ್ಲಿ ಮಾಡಿ; ಈ ಎಲ್ಲಾ ವಿಷಯಗಳನ್ನು ನಾವು ೪೫ ನಿಮಿಷಗಳಿಂದ ಒಂದು ಗಂಟೆಯಲ್ಲಿ ಮಾಡಬಹುದು.

ಇದನ್ನು ಪ್ರತಿಯೊಂದು ಅಪಾರ್ಟ್ಮೆಂಟ್ ಕಟ್ಟಡದಲ್ಲೂ ಮಾಡಿದರೆ, ಒಂದು ಸಂತೋಷದ ಅಲೆಯು ಸೃಷ್ಟಿಯಾಗುವುದು. ಆತ್ಮೀಯತೆಯ ಒಂದು ಭಾವವು ಬೆಳೆಯುವುದು. ನೀವೇನು ಹೇಳುವಿರಿ? ಕೆಲವು ಒಳ್ಳೆಯ ಜೋಕುಗಳನ್ನು ಹಂಚಿಕೊಳ್ಳಿರಿ!

ನಮ್ಮೆಲ್ಲರೊಳಗೆ ಬೃಹತ್ತಾದ ಆಕಾಶವಿದೆ. ಎಲ್ಲಾ ಅಂತಃಸ್ಫುರಣೆ ಮತ್ತು ಸೃಜನಶೀಲತೆ ಬರುವುದು ಆ ಆಕಾಶದಿಂದ.
ಇವತ್ತು ಮಹಾವೀರ ಎಂದು ಕರೆಯಲ್ಪಡುವ, ಭಾರತದ ಒಬ್ಬರು ಮಹಾನ್ ಸಂತರ ಜನ್ಮದಿನವಾಗಿದೆ. ಅವರು ಪರಮಾತ್ಮ ಬುದ್ಧನ ಸಮಕಾಲೀನರಾಗಿದ್ದರು. ಬುದ್ಧ ಪೂರ್ಣಿಮೆ, ಅಂದರೆ ಬುದ್ಧನ ಜನ್ಮದಿನವು ಶೀಘ್ರದಲ್ಲೇ ಬರಲಿದೆ.

ಭಗವಾನ್ ಮಹಾವೀರನು ಅಹಿಂಸೆಗಾಗಿ ಎದ್ದುನಿಂತನು. ಅವನು, ’ಅನೇಕಾಂತ್ ವಾದ’  ಎಂದು ಕೂಡಾ ಹೇಳಿದನು. ಅಂದರೆ, ಹಲವಾರು ಸಾಧ್ಯತೆಗಳಿವೆ ಎಂದು ಅರ್ಥ. ಜಗತ್ತು ಸಾಧ್ಯತೆಗಳಿಂದ ತುಂಬಿದೆ. ನಿಜಕ್ಕೂ ಇವತ್ತು ಇದರ ಅಗತ್ಯವಿದೆ. ಜನರು ಇದನ್ನು ಅರ್ಥ ಮಾಡಿಕೊಂಡರೆ, ಜಗತ್ತಿನಲ್ಲಿ ಯಾವುದೇ ಭಯೋತ್ಪಾದನೆ ಇರಲಾರದು. ಅಲ್ಲಿ ಯಾವುದೇ ಮತಾಂಧತೆಯಿರಲಾರದು.

ಬುದ್ಧ ಮತ್ತು ಮಹಾವೀರರು ಒಂದೇ ಊರಿನವರಾಗಿದ್ದರೆಂಬುದು ನನ್ನ ನಂಬಿಕೆ. ಅವರು ಪರಸ್ಪರರ ಬಗ್ಗೆ ತಿಳಿದಿದ್ದರು, ಆದರೆ ಅವರು ಯಾವತ್ತೂ ಭೇಟಿಯಾಗಿರಲಿಲ್ಲ. ಯಾರೋ ಒಬ್ಬರು ಅವರಲ್ಲಿ ಕೇಳಿದರು, ’ನೀವು ಯಾಕೆ ಭೇಟಿಯಾಗಬಾರದು?"
ಅವರು ಉತ್ತರಿಸಿದರು, "ಯಾವುದೇ ಅಗತ್ಯವಿಲ್ಲ, ಯಾಕೆಂದರೆ ನಾವು ಈಗಾಗಲೇ ಸಂಬಂಧ ಹೊಂದಿದ್ದೇವೆ."

ನಿಮಗೆ ಗೊತ್ತಾ, ಆತ್ಮಸಾಕ್ಷಾತ್ಕಾರದ ಸ್ಥಿತಿಯಲ್ಲಿ, ಮಾರ್ಗಗಳು ವಿಭಿನ್ನವಾಗಿದ್ದರೂ, ಆತ್ಮವು ಒಂದೇ ಆಗಿದೆ. ಅಲ್ಲಿ ಯಾವುದೇ ದೂರವಿಲ್ಲ.

ಅವರು ಭೇಟಿಯಾದರು, ಆದರೆ ಪರಸ್ಪರರೊಂದಿಗೆ ಮಾತನಾಡಲೇ ಇಲ್ಲ ಎಂದು ಹೇಳುವ ಇನ್ನೊಂದು ರೂಪಾಂತರ ಚರಿತ್ರೆಯಲ್ಲಿದೆ. ಅವರು ಸುಮ್ಮನೆ ಭೇಟಿಯಾದರು ಮತ್ತು ತಮ್ಮ ದಾರಿಗಳಲ್ಲಿ ಹೋದರು. ಇಲ್ಲಿ ಕೂಡಾ, ಮೌಖಿಕ ಸಂಪರ್ಕದ ಯಾವುದೇ ಅಗತ್ಯವಿರಲಿಲ್ಲ ಎಂದು ಹೇಳಲಾಗಿದೆ. ಹೃದಯವು ಹೃದಯವನ್ನು ಭೇಟಿಯಾಗುವಾಗ ಮತ್ತು ಆತ್ಮವು ಆತ್ಮವನ್ನು ಭೇಟಿಯಾಗುವಾಗ, ಮಾತನಾಡುತ್ತಾ ಇರಬೇಕಾದ ಯಾವುದೇ ಅಗತ್ಯವಿರುವುದಿಲ್ಲ.

ಹೃದಯಗಳ ಮಿಲನವಾಗುವಾಗ, ಅಲ್ಲಿ ಯಾವುದೇ ತಡೆಯಿರುವುದಿಲ್ಲ. ಯಾವುದೇ ಭಾಷಾ ತಡೆ, ಯಾವುದೇ ಶಬ್ದಗಳು, ಯಾವುದೂ ಮಧ್ಯೆ ಬರುವುದಿಲ್ಲ. ಇಬ್ಬರು ವ್ಯಕ್ತಿಗಳು ಬೌದ್ಧಿಕ ಮಟ್ಟದಲ್ಲಿರುವಾಗ, ಅವರು ಒಂದೇ ವಿಷಯದ ಬಗ್ಗೆ ಮಾತನಾಡುತ್ತಿರಬಹುದು, ಆದರೆ ಅದೊಂದು ಜಗಳದಂತೆ ತೋರುತ್ತದೆ.

ಇಲ್ಲಿರುವ ವಿದ್ಯಾರ್ಥಿಗಳಿಗೆ ನಾನೊಂದು ಉಜ್ವಲ ವೃತ್ತಿಜೀವನವನ್ನು ಮತ್ತು ಒಂದು ಉಜ್ವಲ ಭವಿಷ್ಯವನ್ನು ಕೋರುತ್ತೇನೆ. ನೀವೆಲ್ಲರೂ ಒಳ್ಳೆಯ ರಾಜಕಾರಣಿಗಳು, ಒಳ್ಳೆಯ ಉದ್ಯಮಿಗಳು, ಒಳ್ಳೆಯ ವೃತ್ತಿಪರರು, ವೈದ್ಯರು ಮತ್ತು ಇಂಜಿನಿಯರುಗಳಾಗಬೇಕು.

ಇದೆಲ್ಲದರ (ಆಧ್ಯಾತ್ಮಿಕ ಅಭ್ಯಾಸಗಳು) ಮೂಲತತ್ವವೆಂದರೆ, ನಿಮ್ಮ ದೃಷ್ಟಿಯನ್ನು ವಿಶಾಲಗೊಳಿಸುವುದು ಮತ್ತು ನಿಮ್ಮೊಳಗೆ ಸಂತೋಷದ ಅಂಶವನ್ನು ಇಟ್ಟುಕೊಳ್ಳುವುದು. ಯುವಕರು ಎಂತಹ ಮುಗುಳ್ನಗೆಗಳನ್ನು ಮತ್ತು ವಿಶ್ವಾಸವನ್ನು ಹೊರಹೊಮ್ಮಬೇಕೆಂದರೆ, ಅದನ್ನು ಯಾರಿಂದಲೂ ದೂರ ಕೊಂಡೊಯ್ಯಲು ಸಾಧ್ಯವಾಗಬಾರದೆಂಬುದು ನನ್ನ ಬಯಕೆ.

ನಿಮಗೆ ಮಾರ್ಗದರ್ಶನ ನೀಡಲು ಇಲ್ಲಿ ಹಲವಾರು ಶ್ರೇಷ್ಠ ವ್ಯಕ್ತಿಗಳಿದ್ದಾರೆ.

ನಾನು ನಿಮಗೆ ಒಂದನ್ನು ಹೇಳಲು ಬಯಸುತ್ತೇನೆ. ಇದನ್ನು ನೀವು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಿಮ್ಮ ವ್ಯಕ್ತಿತ್ವವನ್ನು ಯಾವ ರೀತಿ ರೂಪಿಸಿಕೊಳ್ಳಿರೆಂದರೆ, ನಿಮ್ಮನ್ನು ನಿಮ್ಮ ಸಂತುಲನದಿಂದ ದೂರ ಮಾಡಲು, ನಿಮಗೆ ತೊಂದರೆ ನೀಡಲು ಅಥವಾ ನಿಮ್ಮ ಮುಗುಳ್ನಗೆಯನ್ನು ದೂರ ಮಾಡಲು ಯಾವುದಕ್ಕೂ ಸಾಧ್ಯವಾಗಬಾರದು. ನೀವು ನಿಮ್ಮ ವ್ಯಕ್ತಿತ್ವವನ್ನು ಆ ರೀತಿ ಮಾಡಿಕೊಂಡರೆ, ಜಗತ್ತಿನ ಎಲ್ಲೆಡೆಗಳಲ್ಲಿಯೂ ನೀವು ಸ್ವಾಗತಿಸಲ್ಪಡುವಿರಿ. ಅದು ಯಶಸ್ಸಿನ ಒಂದು ಚಿಹ್ನೆಯಾಗಿದೆ.

ನಿಮಗೆ ಸಹಾಯ ಮಾಡಲು ಮತ್ತು ನಿಮಗೆ ಮಾರ್ಗದರ್ಶನ ನೀಡಲು, ಅಂತಹ ಒಂದು ವ್ಯಕ್ತಿತ್ವವನ್ನು ತರಲು ಆರ್ಟ್ ಆಫ್ ಲಿವಿಂಗ್ ಇದೆ. ಯುವಕರಿಗೆ ಮತ್ತು ಹಾಗೆಯೇ ಹಿರಿಯ  ವ್ಯಕ್ತಿಗಳಿಗಾಗಿ ನಮ್ಮಲ್ಲಿ ಹಲವಾರು ಒಳ್ಳೆಯ ಕಾರ್ಯಾಗಾರಗಳಿವೆ.