ಸೋಮವಾರ, ಏಪ್ರಿಲ್ 8, 2013

ಪೂರ್ವಾಚಾರಗಳ ಒಳಗುಟ್ಟು

ಬೂನ್, ಉತ್ತರ ಕ್ಯಾರೋಲಿನಾ
ಏಪ್ರಿಲ್ ೮, ೨೦೧೩

ಪ್ರಶ್ನೆ: ಗುರುದೇವ, ನಿಮ್ಮಂತಹ ಮಹಾತ್ಮರು ಈ ಪ್ರಪಂಚಕ್ಕೆ ಎಷ್ಟು ಬಾರಿ ಬರುತ್ತಾರೆ? ಯಾವಾಗ ಬರಬೇಕೆಂದು ಅವರು ಹೇಗೆ ನಿರ್ಧರಿಸುತ್ತಾರೆ?

ಶ್ರೀ ಶ್ರೀ ರವಿಶಂಕರ್: ಅದು ಒಂದು ಗೂಢ ರಹಸ್ಯ !

ಪ್ರಶ್ನೆ: ಗುರುದೇವ, ಸಪ್ತರ್ಷಿಗಳ ಬಗ್ಗೆ ವಿವರ ನೀಡುವಿರಾ?

ಶ್ರೀ ಶ್ರೀ ರವಿಶಂಕರ್: ಬ್ರಹ್ಮಾಂಡವು 'ಛಂದಸ್ಸು' ಎಂಬ ಲಯವನ್ನು ಹೊಂದಿದೆ. ಪ್ರಪಂಚದಲ್ಲಿ ಎಲ್ಲವೂ ತರಂಗಗಳ ನಿಯೋಗ; ಕೆಲವು ನಿರ್ದಿಷ್ಟವಾದ ತರಂಗಗಳನ್ನು ಸ್ವೀಕರಿಸುವವರನ್ನು 'ಋಷಿ' ಎನ್ನುತ್ತಾರೆ. ಋಷಿ ಎಂಬುದು ಒಂದು ಸ್ಥಾನ; ಅದು ಒಬ್ಬ ವ್ಯಕ್ತಿಯ ಹೆಸರಲ್ಲ ಹಾಗೂ ಸಾವಿರಕ್ಕಿಂತ ಹೆಚ್ಚು ಋಷಿಗಳಿದ್ದಾರೆ. ಇವರಲ್ಲಿ, ಏಳು ಚಕ್ರಗಳಿಗೆ ಸಂಬಂಧಿಸಿದಂತೆ ಏಳು ಋಷಿಗಳು ಪ್ರಮುಖರು. ಋಷಿಗಳು ಎಲ್ಲ ಕಾಲದಲ್ಲಿಯೂ ಇದ್ದಾರೆ; ಅವರ ಬಗ್ಗೆ ಅನೇಕ ಕಥೆಗಳಿವೆ. ಋಷಿಯು ಒಂದು ವಿಶ್ವವಿದ್ಯಾಲಯದ ಮುಖ್ಯಸ್ಥರಿದ್ದ ಹಾಗೆ. ಅವರು ತರಬೇತಿಯನ್ನು ಪಡೆದುಕೊಂಡು ಈ ಪರಂಪರೆಯ ಭಾಗವಾಗಿದ್ದಾರೆ. ನೀವು ' ನಾನು ಹಾರ್ವರ್ಡ್‍ನ ಹಳೆಯ ವಿದ್ಯಾರ್ಥಿ' ಅಥವಾ 'ನಾನು ಸ್ಟ್ಯಾನ್ಫೋರ್ಡ್‍ನ ಹಳೆಯ ವಿದ್ಯಾರ್ಥಿ' ಎಂದು ಹೇಳುವ ಹಾಗೆ ಇಲ್ಲಿ ಗೋತ್ರಗಳಾಗಿವೆ.

ಗೋ ಎಂದರೆ ಜ್ಞಾನ, ಗೋತ್ರ ಎಂದರೆ ನಿರ್ದಿಷ್ಟವಾದ ಜ್ಞಾನ ಸಮೂಹ ಅಥವಾ ಋಷಿ ಪರಂಪರೆಗೆ ಸೇರಿರುವ ಎಂದರ್ಥ. ಹಾಗಾಗಿ, ಹೇಗೆ ವಿಭಿನ್ನವಾದ ಡಿಎನ್‍ಎ ಮತ್ತು ರಕ್ತ ಸಮೂಹಗಳಿವೆಯೋ ಹಾಗೆಯೇ ವಿಭಿನ್ನವಾದ ಗೋತ್ರಗಳು ಅಥವಾ ಜ್ಞಾನ ಸಮೂಹಕ್ಕೆ ಸೇರಿರುವ ಪರಿವಾರಗಳಿವೆ.

ಪ್ರಶ್ನೆ: ಸಪ್ತರ್ಷಿಗಳ ಹೆಸರೇನು ?

ಶ್ರೀ ಶ್ರೀ ರವಿಶಂಕರ್: ಕಶ್ಯಪ, ಅತ್ರಿ, ವಸಿಷ್ಠ, ಭರದ್ವಾಜ, ಗೌತಮ, ಜಮದಗ್ನಿ ಮತ್ತು ವಿಶ್ವಾಮಿತ್ರ.

ಪ್ರಶ್ನೆ: ಗುರುದೇವ, ಶ್ರಾದ್ಧ ಕರ್ಮಗಳ ಆಚರಣೆಯ ಮಹತ್ವವೇನು?

ಶ್ರೀ ಶ್ರೀ ರವಿಶಂಕರ್: ಶ್ರಾದ್ಧವೆಂದರೆ ಇಹದಿಂದ ಪರಲೋಕಕ್ಕೆ ಸಾಗಿರುವವರ ನೆನಪಿನಲ್ಲಿ ಸತ್ಕಾರ್ಯಗಳನ್ನು ನಂಬಿಕೆಯೊಂದಿಗೆ ಮಾಡುವುದು. ಬಡವರಿಗೆ ಊಟ ಹಾಕುವುದು, ಅವರ ಪೋಷಣೆ ಮಾಡುವುದು, ಅವರಿಗೆ ಉಡುಗೊರೆಗಳನ್ನು ಕೊಡುವ ಚಟುವಟಿಕೆಗಳಿಂದ ಈ ಸಂಪ್ರದಾಯವು ಆರಂಭವಾಯಿತು. ನಿಧನರಾದವರ ನೆನಪಿನಲ್ಲಿ ಮಾಡಿದ ದಾನ ಮುಂತಾದ ಯಾವುದೇ ಸತ್ಕಾರ್ಯಗಳಿಗೆ ಶ್ರಾದ್ಧ ಎಂದು ಹೆಸರು. ಅವರಿಲ್ಲಿ ಇಲ್ಲದಿದ್ದರೂ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುವುದು ಇದರ ಉದ್ದೇಶ.

ಪ್ರಪಂಚದೆಲ್ಲೆಡೆ ನಿಧನರಾದವರಿಗಾಗಿ ವ್ರತಗಳನ್ನು ಅನುಸರಿಸುತ್ತಾರೆ. ಸಿಂಗಾಪುರದಲ್ಲಿ ಇದು ಹಬ್ಬದ ಹಾಗೆ, ಸಾರ್ವಜನಿಕ ರಜೆಯಂತೆ. ಚೀನಾದಲ್ಲಿಯೂ ಬಹು ದೊಡ್ಡ ಸಮಾರಂಭ.

ಸಿಂಗಾಪುರದಲ್ಲಿ ಪೂರ್ವಜರಿಗೆ ಅರ್ಪಿಸುವುದೆಲ್ಲ ಆಶೀರ್ವಾದದ ರೂಪದಲ್ಲಿ ಹಿಂದಿರುಗುವುದೆಂಬ ನಂಬಿಕೆಯಿದೆ. ಉದಾಹರಣೆಗೆ ಯಾರಿಗಾದರೂ ಕಾರ್ ಅಥವಾ ಫ್ರಿಡ್ಜ್‍ನ ಅವಶ್ಯಕತೆಯಿದ್ದರೆ ಅವರು ಕಾಗದದ ಕಾರ್ ಅಥವಾ ಫ್ರಿಡ್ಜ್ ತಯಾರಿಸಿ ಅದನ್ನು ರಸ್ತೆಯ ಮೇಲಿಟ್ಟು ಸುಡುತ್ತಾರೆ. ಒಂದು ಲಕ್ಷ ರೂಪಾಯಿಗಳು ಬೇಕಿದ್ದರೆ ಒಂದು ಲಕ್ಷ ನಕಲಿ ನೋಟುಗಳನ್ನು ಸುಡುತ್ತಾರೆ.
ಮನುಷ್ಯರು ಹೇಗೆ ತಮ್ಮ ಮೂರ್ಖತೆಯನ್ನು ಪ್ರದರ್ಶಿಸಿ ಆಶೀರ್ವಾದಗಳನ್ನು ಪಡೆಯಬಯಸುತ್ತಾರೆ ಎಂದು ಆಶ್ಚರ್ಯವಾಗುತ್ತದೆ. ಆದರೆ ಇದು ಸಾಂಪ್ರದಾಯಿಕ ಆಚರಣೆ.

ಭಾರತದಲ್ಲಿಯೂ ಕೂಡ ಇಂತಹ ಆಚರಣೆಗಳು ನಡೆಯುತ್ತವೆ. ಜನರು ಭಗವತಿ ಅಥವಾ ದೇವಿಮಾತೆಯನ್ನು ಪ್ರಾರ್ಥಿಸಿ ತೆಂಗಿನಕಾಯಿಯನ್ನು ಅರ್ಪಿಸುತ್ತಾರೆ. 'ನಾನು ೨೧ ತೆಂಗಿನಕಾಯಿಗಳನ್ನು ಅರ್ಪಿಸುತ್ತೇನೆ, ದಯವಿಟ್ಟು ನನ್ನ ಮದುವೆ ಸರಿಯಾದ ವ್ಯಕ್ತಿಯೊಂದಿಗೆ ಆಗಲಿ' ಎನ್ನುತ್ತಾರೆ. ದೇವಿಯು ಇವರಿಂದ ೨೧ ತೆಂಗಿನಕಾಯಿಗಳನ್ನು ಅಪೇಕ್ಷಿಸುವಳೆಂದು ತಿಳಿಯುತ್ತಾರೆ !

ಅಜ್ಞಾನಿಗಳು ಏನನ್ನಾದರೂ ಪಡೆಯಲು ಇನ್ನೇನ್ನಾದರೂ ಮಾಡುತ್ತಾರೆ. ಇದನ್ನು 'ಹರಕೆ' ಎನ್ನುತ್ತಾರೆ. ಎಂದರೆ ಏನಾದರೂ ವರವನ್ನು ಪಡೆಯಲು ಮಾಡುವ ಕ್ರಿಯೆ.

ಪ್ರಶ್ನೆ: ಶ್ರಾದ್ಧ ಕರ್ಮಗಳನ್ನು ಎಷ್ಟು ವರ್ಷಗಳವರೆಗೆ ಮಾಡಬೇಕು?

ಶ್ರೀ ಶ್ರೀ ರವಿಶಂಕರ್: ಪುರಾತನ ಕಾಲದಲ್ಲಿ ಆತ್ಮವು ಪುನರ್ಜನ್ಮ ಪಡೆಯುವವರೆಗೆ ಶ್ರಾದ್ಧ ಕರ್ಮಗಳನ್ನು ಮಾಡುತ್ತಿದ್ದರು. ಹಾಗಾಗಿ, ೧೫ ವರ್ಷಗಳವರೆಗೆ ಮಾಡುತ್ತಿದ್ದರು, ನಂತರ ಆತ್ಮವು ಮತ್ತೆ ಹುಟ್ಟಿದೆ ಎಂದು ಅವರಿಗೆ ತಿಳಿಯುತ್ತಿತ್ತು, ಆಗ ಅವರು ಶ್ರಾದ್ಧ ಕರ್ಮ ಮಾಡುವುದನ್ನು ನಿಲ್ಲಿಸುತ್ತಿದ್ದರು. ಇಂದು, ಅವರು ಇನ್ನೂ ಇದ್ದಾರೆಯೋ ಅಥವಾ ಪುನರ್ಜನ್ಮ ಪಡೆದಿದ್ದಾರೆಯೋ ಎಂದು ತಿಳಿಯುವ ಸಾಮರ್ಥ್ಯವನ್ನು ನಾವು ಕಳೆದುಕೊಂಡಿರುವುದರಿಂದ ನಾವು ಮಾಡುತ್ತಲೇ ಇರುತ್ತೇವೆ.

ಪ್ರಶ್ನೆ: ಈ ಕ್ರಿಯಾವಿಧಿಗಳ ಸಂಕೇತವೇನು?

ಶ್ರೀ ಶ್ರೀ ರವಿಶಂಕರ್: ಬ್ರಾಹ್ಮಣರ ಮನೆಯಲ್ಲಿ ಶ್ರಾದ್ಧವು ಒಂದು ವಿಸ್ತಾರವಾದ ಆಚರಣೆ. ಮನೆಯಲ್ಲಿನ ಮಹಿಳೆಯರು ಬೆಳಗಿನಜಾವದಿಂದಲೇ ಅಡುಗೆ ಮಾಡುತ್ತಾರೆ, ಹಾಗೂ ಆ ದಿನ ಕೇವಲ ಕೆಲವು ರೀತಿಯ ಆಹಾರ ಪದಾರ್ಥಗಳು ಮಾತ್ರ ಸೇವಿಸಲಾಗುತ್ತವೆ. ನಂತರ ಪುರೋಹಿತರು ಬಂದು ಇಹವನ್ನು ದಾಟಿದ ಪಿತೃಗಳನ್ನು ಕರೆತರಲು ದೇವತೆಗಳನ್ನು ಆವಾಹಿಸುತ್ತಾರೆ. ಮೂರು ತಲೆಮಾರಿನ ಪೂರ್ವಜರನ್ನು ಸ್ಮರಿಸುತ್ತಾರೆ. ಅನ್ನದ ಉಂಡೆಗಳನ್ನು ಮಾಡಿ ಕಾಗೆಗಳಿಗೆ ಹಾಕುತ್ತಾರೆ. ನಂತರ ಅವರು ಅಲ್ಲಿ ನಿಂತು ಕಾಗೆಗಳು ಯಾವ ದಿಕ್ಕಿನಿಂದ ಬಂದವು, ಹೇಗೆ ಅನ್ನವನ್ನು ಸ್ವೀಕರಿಸಿದವು, ಎಲ್ಲಿ ಹೋದವು, ಅವು ತೃಪ್ತರಾದವೇ ಎಂದೂ ಗಮನಿಸುತ್ತಾರೆ.

ಇದು ಗಿಣಿಶಾಸ್ತ್ರವಿದ್ದ ಹಾಗೆ. ಈ ಸಂಕೇತಗಳ ಮೂಲಕ ಜನರು ಏನಾಗುತ್ತಿದೆ ಅಥವಾ ಏನು ನಡೆದಿತ್ತು ಎಂದು ಕಂಡುಹಿಡಿಯುತ್ತಿದ್ದರು. ಇದು ಸ್ವಲ್ಪ ಕ್ಲಿಷ್ಟಕರ, ಕಲವೊಮ್ಮೆ ಅತಿ ಕ್ಲಿಷ್ಟಕರ. ಸಾಂಗೋಪಾಂಗವಾದ ಅಡುಗೆಯನ್ನು ಮಾಡಿ ಎಲ್ಲರಿಗೂ ಊಟ ಹಾಕುವುದು ಪ್ರಮುಖವಾದುದು. ಇದೆಲ್ಲವೂ ಮಾನವ ನಿರ್ಮಿತ ಎಂದು ನಮಗೆನಿಸುತ್ತದೆ. ಇದರಲ್ಲಿ ವೈಜ್ಞಾನಿಕವಾದ ಅಂಶ ಇರಬಹುದು. ನಾವು ಪರಿಶೀಲಿಸಬೇಕು.

'ತಿಳ ತರ್ಪಣ' ಎಂಬ ಒಂದು ಆಚರಣೆಯಿದೆ. ನೀರಿನ ಜೊತೆಯಲ್ಲಿ ಎಳ್ಳನ್ನು ಅರ್ಪಿಸುವುದು. ಈ ಆಚರಣೆಯ ಉದ್ದೇಶ ಪರಲೋಕಕ್ಕೆ ತೆರಳಿರುವವರಿಗೆ 'ನಿಮ್ಮ ಮನಸ್ಸಿನಲ್ಲಿ ಇನ್ನೂ ಯಾವುದಾದರೂ ಇಚ್ಛೆಗಳು ಬಾಕಿ ಇದ್ದಲ್ಲಿ ಅವುಗಳನ್ನು ತ್ಯಜಿಸಿ, ಏಕೆಂದರೆ ಇಚ್ಛೆಯು ಈ ಎಳ್ಳಿನ ಬೀಜದಷ್ಟು ಕ್ಷುಲ್ಲಕ ಹಾಗೂ ಚಿಕ್ಕದು. ನಿಮ್ಮ ಮಕ್ಕಳಾದ ನಾವು ನಿಮ್ಮ ಇಚ್ಛೆಗಳನ್ನು ಈಡೇರಿಸಲು ಇಲ್ಲಿ ಇದ್ದೇವೆ. ನೀವು ಅದನ್ನು ತ್ಯಜಿಸಿ ಮುನ್ನಡೆಯಿರಿ' ಎಂದು ಸೂಚಿಸುವುದು. ಭಾರತದಲ್ಲಿ ತಿಳ ಎಂದರೆ ಅತ್ಯಂತ ಸಣ್ಣ ವಸ್ತು ಮತ್ತು ತರ್ಪಣ ಎಂದರೆ ತೃಪ್ತಿ, ಸಾಫಲ್ಯ.

ನಿರ್ಗಮಿಸಿರುವವರಿಗೆ ನಾವು ಮೂರು ಬಾರಿ 'ತೃಪ್ತರಾಗಿ' ಎಂದು ಹೇಳುತ್ತೇವೆ !

ಇಲ್ಲಿನ ಸಂದೇಶ, 'ನೀವು ಈ ಪ್ರಪಂಚವನ್ನು ಬಿಟ್ಟು ತೆರಳಿದ್ದೀರಿ. ಅಲ್ಲಿ ಹೋದ ಮೇಲೆ ಹಾತೊರೆಯಬೇಡಿ. ಏನಾದರೂ ಅತೃಪ್ತಿ ಇದ್ದಲ್ಲಿ ಅದನ್ನು ಬಿಟ್ಟುಬಿಡಿ. ಮುನ್ನಡೆಯಿರಿ. ಈ ಜಗತ್ತು ಅಗಾಧ ಹಾಗೂ ಬೃಹತ್ತಾಗಿದೆ. ನೀವು ಬೆಳಕಿನೆಡೆಗೆ ನಡೆದು ಈ ಎಲ್ಲ ಬಂಧನಗಳನ್ನು ಇಲ್ಲಿಯೇ ಬಿಟ್ಟುಬಿಡಿ. ನಿಮ್ಮ ಯಾವುದಾದರೂ ಇಚ್ಛೆ ಈಡೇರದೆ ಹಾಗೆಯೇ ಉಳಿದುಕೊಂಡಿದ್ದಲ್ಲಿ ನಾವು ಅದನ್ನು ನೋಡಿಕೊಳ್ಳುತ್ತೇವೆ. ನೀವು ತೃಪ್ತರಾಗಿರಿ' ಎಂಬುದು. ಈ ಮಂತ್ರಗಳು ಎಷ್ಟೊಂದು ಸುಂದರ.

ಪ್ರಶ್ನೆ: ಅಂತಿಮ ಸಂಸ್ಕಾರ ಕ್ರಿಯೆಗಳ ಮಹತ್ವವೇನು?

ಶ್ರೀ ಶ್ರೀ ರವಿಶಂಕರ್: ಅಂತ್ಯಕ್ರಿಯೆಗಳೂ ಒಂದು ಸೊಗಸಾದ ಉದ್ದೇಶವನ್ನು ಹೊಂದಿವೆ. ಶವದ ಕಿವಿಯಲ್ಲಿ ಒಂದು ಮಂತ್ರವನ್ನು ಹೇಳುತ್ತಾರೆ ಏಕೆಂದರೆ ಆತ್ಮವು ಕೆಲಕಾಲ ಅಲ್ಲಿಯೇ ಇರುತ್ತದೆ, ಅದು ಇನ್ನೂ ಹೊರಟಿರುವುದಿಲ್ಲ. 'ನೋಡಿ, ಈ ಶರೀರವು ತನ್ನ ಮೂಲ ಪಂಚಭೂತಗಳಿಗೆ ಹಿಂತಿರುಗಲಿದೆ. ನೀವು ಈ ಶರೀರವಲ್ಲ. ನೀವು ಜ್ಯೋತಿ. ಮುನ್ನಡೆಯಿರಿ' ಎಂದು ತಿಳಿಸುತ್ತಾರೆ. ಅವರ ಮಗ ಅಥವಾ ಮಗಳು ಇದನ್ನು ಹೇಳುತ್ತಾರೆ. ಇಂದು ಈ ಆಚಾರವು ಪುರುಷ ಪ್ರಧಾನವಾಗಿಬಿಟ್ಟಿದೆ.

ಭಾರತದಲ್ಲಿ ಒಂದು ನಂಬಿಕೆಯಿದೆ - ಮೋಕ್ಷ ದೊರೆಯಬೇಕಾದರೆ ನಿಮಗೆ ಮಗ ಇರಲೇಬೇಕು, ಏಕೆಂದರೆ ನೀವು ತೀರಿಹೋದ ಮೇಲೆ ಮಗನೇ ಈ ಎಲ್ಲ ಮಂತ್ರಗಳನ್ನು ಪಠಿಸುವುದು, ಜ್ಞಾನವನ್ನು ನೀಡಿ ನಿಮ್ಮನ್ನು ಮುಕ್ತಗೊಳಿಸುವುದು. ಮಗನಿಲ್ಲದೆ ಮೋಕ್ಷವಿಲ್ಲ ! ಆದರೆ ಇದು ಸತ್ಯವಲ್ಲ ! ಪುರಾತನ ಕಾಲದಲ್ಲಿ ಹೆಣ್ಣು ಮಕ್ಕಳಿಗೂ ಈ ಹಕ್ಕು ಇರುತ್ತಿತ್ತು.

ಜೀವನ ಕಲಾ ಕೇಂದ್ರವು ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ಹೋರಾಡುತ್ತಿದೆ. ನಾವು ಯುನಿಸೆಫ್ ಹಾಗೂ ಯುನೈಟೆಡ್ ನೇಷನ್ಸ್ ಫ್ಯಾಮಿಲಿ ಫಂಡ್‍ನೊಂದಿಗೆ ಕೆಲಸ ಮಾಡುತ್ತಿದ್ದೇವೆ. ಹಿಂದೂ ಧರ್ಮಗ್ರಂಥಗಳಲ್ಲಿ ಲಿಂಗದ ಸಮಾನತೆಯ ಬಗ್ಗೆ ಉಲ್ಲೇಖವಿದೆ ಆದರೆ ನಂತರದ ಕಾಲದಲ್ಲಿ ಇದು ಬದಲಾಗಿದೆ.

ಪ್ರಾಚೀನ ಹಿಂದೂ ಸಂಸ್ಕೃತಿಯನ್ನು ಹೊಂದಿರುವ ಬಾಲಿ ದೇಶಕ್ಕೆ ನೀವು ಹೋದರೆ, ಅಲ್ಲಿ ಮಹಿಳಾ ಪುರೋಹಿತರನ್ನು ಕಾಣಬಹುದು (ಬಾಲಿಯ ಹಿಂದೂ ಸಂಸ್ಕೃತಿಯು ಭಾರತಕ್ಕಿಂತ ಪ್ರಾಚೀನವಾದುದು). ಭಾರತದಲ್ಲಿ, ಈ ಪದ್ಧತಿಯು ಮಾಯವಾಗಿ ಹೋಗಿದೆ. ಮಹಿಳೆಯರಿಗೆ ಅರ್ಚಕರಾಗಲು ಅವಕಾಶವಿಲ್ಲ.

ಈ ಪ್ರಪಂಚವನ್ನು ದಾಟಿ ಹೋದವರಿಗೆ 'ತೃಪ್ತರಾಗಿ! ಸಂತುಷ್ಟರಾಗಿ! ಅಲ್ಲಿ ಸಂತೋಷವಾಗಿರಿ' ಎಂದು ಹೇಳುವುದು ಒಳ್ಳೆಯದಲ್ಲವೇ? ಮಾನಸಿಕವಾಗಿ ಹೇಳಿದರೂ, ಇದು ಅದ್ಭುತವಾದ ಸಂದೇಶವೆಂದು ನಮಗೆನಿಸುತ್ತದೆ. ಮಾನಸಿಕ ಕೃತಿಗಳಿರುವುದು ಸ್ವಲ್ಪ ಉನ್ನತವಾದ ಬುದ್ಧಿಮತ್ತೆ ಇರುವವರಿಗೆ. ಕಡಿಮೆ ಬುದ್ಧಿಮತ್ತೆ ಇರುವವರಿಗಾಗಿ ಕೆಲವು ಭೌತಿಕ ಕ್ರಿಯೆಗಳನ್ನು ಮಾಡಬೇಕಾಗುತ್ತದೆ.

ಜಾಣರಾದವರಿಗೆ ನೀವು ಹೂವನ್ನು ತಂದುಕೊಡಬೇಕಿಲ್ಲ. ಆದರೆ, ಮೂಢರು ಕ್ರಿಯಾತ್ಮಕವಾದುದನ್ನು ಮಾಡಲು ಬಯಸುತ್ತಾರೆ. ಹಾಗಾಗಿ, ಕೃತಿಯಲ್ಲಿಯೂ ಕೂಡ ಪೂರ್ವಜರು ಇದನ್ನು ಅರ್ಥಪೂರ್ಣವಾಗಿರುವಂತೆ ಮಾಡಿದ್ದಾರೆ. ಕೆಲವು ಎಳ್ಳಿನ ಬೀಜಗಳನ್ನು ಕೈಯಲ್ಲಿಟ್ಟುಕೊಂಡು, ಕೈ ಮೇಲೆ ನೀರು ಸುರಿದು ಅಗಲಿರುವವರನ್ನು ನೆನೆಸಿಕೊಳ್ಳಿ, ಅಷ್ಟೇ. ಇದೇ ಶ್ರಾದ್ಧ, ಇನ್ನೇನೂ ಇಲ್ಲ.

ನಂತರದ ದಿನಗಳಲ್ಲಿ ಪುರೋಹಿತರು 'ಹೇಗಿದ್ದರೂ ಜನ ಅರ್ಪಣೆ ಮಾಡುತ್ತಾರೆ, ಒಂದೆರಡು ನಾಣ್ಯಗಳನ್ನೂ ಏಕೆ ಹಾಕಬಾರದು?' ಎಂದು ಯೋಚಿಸಿದರು. ಹಾಗಾಗಿ, ಅವರು ನಾಣ್ಯಗಳನ್ನು ಹಾಕಿದಾಗ ಅವರು ಅವುಗಳನ್ನು ತೆಗೆದುಕೊಳ್ಳುತ್ತಾರೆ. ನಾಣ್ಯಗಳ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ! ಕೇವಲ ಎಳ್ಳು ಮಾತ್ರ! ನೀವು ಕೇವಲ ಈ ಭಾವದಿಂದ ಮಾಡಿ- 'ತೃಪ್ತರಾಗಿ! ನಿಮ್ಮೆಲ್ಲ ವ್ಯಾಮೋಹಗಳನ್ನು ತ್ಯಜಿಸಿ; ಇನ್ನೂ ಯಾವುದಾದರೂ ಆಕಾಂಕ್ಷೆಗಳಿದ್ದರೆ, ಅವುಗಳನ್ನು ನನಗೆ ಬಿಟ್ಟುಬಿಡಿ.'

ಪ್ರಶ್ನೆ: ಜ್ಞಾನೋದಯವಾಗಿರುವ ಎಲ್ಲ ಗುರುಗಳಿಗೆ ಭಾರತವೇ ಏಕೆ ಪ್ರಿಯವಾದ ನಾಡು? ಈ ಭೂಮಿಯಲ್ಲಿ ಏನಾದರೂ ರಹಸ್ಯವಿದೆಯೇ?

ಶ್ರೀ ಶ್ರೀ ರವಿಶಂಕರ್: ಕೇವಲ ಭಾರತದಲ್ಲಿ ಮಾತ್ರ ಸದ್ಗುರುಗಳಿದ್ದರು ಎಂದೇನಿಲ್ಲ! 'ಕ್ಯಾಲಿಫೋರ್ನಿಯಾ' ಎಂಬ ಪದವು ಕಪಿಲ ಎಂಬ ಋಷಿಗಳಿಂದ ಬಂದಿದೆ. ಅವರು ಶ್ರೀ ಕೃಷ್ಣನ ಹಿಂದಿನ ಅವತಾರವಾಗಿದ್ದರು. ಅವರು ಕ್ಯಾಲಿಫೋರ್ನಿಯಾದಲ್ಲಿ ಹುಟ್ಟಿ ಅಲ್ಲಿಯೇ ಬಹಳ ಕಾಲ ನೆಲೆಸಿದ್ದರು. ಆ ಪ್ರದೇಶವನ್ನು 'ಕಪಿಲಾರಣ್ಯ' ಎಂದು ಕರೆಯುತ್ತಿದ್ದರು. ಪುರಾತನ ಗ್ರಂಥಗಳಲ್ಲಿ
ಕಪಿಲಾರಣ್ಯವು ಭಾರತದಿಂದ ೧೨ ಗಂಟೆಗಳ ಕಾಲ ವ್ಯತ್ಯಾಸವಿರುವ ಪ್ರದೇಶದಲ್ಲಿತ್ತು ಎಂಬ ಉಲ್ಲೇಖವಿದೆ.
ಕೆನಡಾದಲ್ಲಿನ 'ನೋವಾ ಸ್ಕೋಷಿಯಾ' ಕೂಡ ಸಂಸ್ಕೃತ ಹೆಸರು. ನವಕೋಶ, ಎಂದರೆ ಭಾರತದಿಂದ ೯ ಗಂಟೆಯ ವ್ಯತ್ಯಾಸ. ಒಂದು ಕೋಶವೆಂದರೆ ಒಂದು ಗಂಟೆಯ ವ್ಯತ್ಯಾಸ. ಇಲ್ಲಿಗೂ ಅಲ್ಲಿಗೂ ಸರಿಯಾಗಿ ೯ ಗಂಟೆಗಳ ಸಮಯದ ವ್ಯತ್ಯಾಸ.

ಪ್ರಶ್ನೆ: ಗುರುದೇವ, ನೀವು ಈ ಹೆಸರುಗಳಿಗೆ ಸಂಸ್ಕೃತವೇ ಮೂಲ ಎಂದು ಹೇಳಿದಿರಿ. ಯಾವ ಇತರ ಹೆಸರುಗಳು ಸಂಸ್ಕೃತದಿಂದ ಬಂದಿವೆ?

ಶ್ರೀ ಶ್ರೀ ರವಿಶಂಕರ್: ಎಲ್ಲ ಆಂಗ್ಲ ತಿಂಗಳುಗಳ ಹೆಸರುಗಳು ಸಂಸ್ಕೃತದಲ್ಲಿವೆಯೆಂದು ನಿಮಗೆ ಗೊತ್ತೇ? ಕೆಲವು ಶತಮಾನಗಳ ಹಿಂದೆ ಸೂರ್ಯನು ಮೇಷ ರಾಶಿಯ ಮೊದಲ ಪಾದವನ್ನು ಪ್ರವೇಶಿಸುವ ಸಮಯದಲ್ಲಿ ಮಾರ್ಚ್ ತಿಂಗಳಿನಲ್ಲಿ ಹೊಸ ವರ್ಷವನ್ನು ಆಚರಿಸಲಾಗುತ್ತಿತ್ತು. ನಂತರ, ಲಂಡನ್ನಿನ ಕಿಂಗ್ ಜಾರ್ಜ್ ಹೊಸ ವರ್ಷವನ್ನು ಜನವರಿ ೧ರಂದು ಆಚರಿಸಬೇಕೆಂದು ನಿರ್ಧರಿಸಿದನು. ಅವನು ಹೊಸ ವರ್ಷವನ್ನು ಜನವರಿಯಲ್ಲಿ ಘೋಷಿಸಿದರೂ ಜನರು ಅದನ್ನು ಅನುಸರಿಸಲಿಲ್ಲ. ಅವರು ಮಾರ್ಚ್‍ನ ಕೊನೆ ಹಾಗೂ ಏಪ್ರಿಲ್‍ನಲ್ಲಿಯೇ ಆಚರಿಸಲು ಮುಂದುವರೆಸಿದರು. ಇದನ್ನು ತಡೆಯಲು ಆ ರಾಜನು ಏಪ್ರಿಲ್ ಒಂದನೆಯ ತಾರೀಖನ್ನು ಮೂರ್ಖರ ದಿನವನ್ನಾಗಿ ಘೋಷಿಸಿದನು.

ಈಗ ತಿಂಗಳುಗಳ ಅರ್ಥವನ್ನು ನೋಡೋಣ. 'ಫಗುನ' ಎಂದರೆ ಕಡೆಯ ಭಾಗ, ಕೊನೆಯದು ಎಂದರ್ಥ. ಫೆಬ್ರವರಿಯು ಕೊನೆಯ ತಿಂಗಳು. ಮಾರ್ಚ್ ಎಂದರೆ ಹೊಸ ಆರಂಭ. ಆಗಸ್ಟ್ - ಷಷ್ಟ, ಆರನೆಯ ತಿಂಗಳು.

ಅಂಬರ ಎಂದರೆ ಆಕಾಶ, ಸಪ್ತ ಎಂದರೆ ಏಳು, ಸಪ್ತಂಬರ ಎಂದರೆ ಏಳನೆಯ ಆಕಾಶ. ಅಕ್ಟೋಬರ್ - ಅಷ್ಟ, ಎಂಟನೆಯ ಆಕಾಶ. ನವೆಂಬರ್ - ನವ (ಒಂಭತ್ತು) ಅಂಬರ, ಎಂದರೆ ಒಂಭತ್ತನೆಯ ಆಕಾಶ. ಡಿಸೆಂಬರ್ - ದಶ (ಹತ್ತು) ಅಂಬರ, ಎಂದರೆ ಹತ್ತನೆಯ ಆಕಾಶ ಅಥವಾ ಹತ್ತನೆಯ ತಿಂಗಳು. ಜನವರಿ ಹನ್ನೊಂದನೆಯ ತಿಂಗಳು ಹಾಗೂ ಫೆಬ್ರವರಿ ಹನ್ನೆರಡನೆಯ ತಿಂಗಳು. ಮೊದಲಿನ ದಿನಗಳಲ್ಲಿ ಕ್ಯಾಲೆಂಡರ್ ಹೀಗೆಯೇ ಇತ್ತು. ಭಾರತೀಯ, ಇರಾನಿ, ಅಫ್ಘಾನಿ ಹಾಗೂ ಇಜಿಪ್ತಿನ ಕ್ಯಾಲೆಂಡರುಗಳೆಲ್ಲ ಇದೇ ವ್ಯವಸ್ಥೆಯನ್ನು ಅನುಸರಿಸುತ್ತವೆ. ಚೀನಾದ ಹೊಸ ವರ್ಷವೂ ಸಹ ಫೆಬ್ರವರಿಯ ಕೊನೆಯಲ್ಲಿ ಅಥವಾ ಮಾರ್ಚಿನ ಆದಿಯಲ್ಲಿ ಪ್ರಾರಂಭವಾಗುತ್ತದೆ.

ದಿನಾಂಕಗಳು, ದಿನಗಳು ಹಾಗೂ ಮಾಸಗಳೆಲ್ಲವೂ ಸೌರಮಾನ ಅಥವಾ ಚಾಂದ್ರಮಾನ ಪಂಚಾಂಗಗಳ ಪ್ರಕಾರ ವಿನ್ಯಾಸಗೊಂಡಿದ್ದವು.

ಸೌರಮಾನ ಪಂಚಾಂಗದಲ್ಲಿ, ಆಂಗ್ಲ ಕ್ಯಾಲೆಂಡರಿನಲ್ಲಿರುವಂತೆಯೇ ಒಂದು ಅಧಿಕ ದಿನವಿದೆ. ಹಾಗೂ ಚಾಂದ್ರಮಾನ ಪಂಚಾಂಗದಲ್ಲಿ ನಾಲ್ಕು ವರ್ಷಕ್ಕೊಮ್ಮೆ ಬರುವ ಒಂದು ಅಧಿಕ ಮಾಸವಿದೆ. ಈ ವರ್ಷ ಅಧಿಕ ಮಾಸವಿರುವುದರಿಂದ ಸೌರಮಾನ ಮತ್ತು ಚಾಂದ್ರಮಾನ ಪಂಚಾಂಗಗಳು ಬಹುತೇಕ ಸಮಾನವಾಗಿವೆ.

ಈ ವರ್ಷ, ಚಂದ್ರನು ಮೇಷ ರಾಶಿಯ ಮೊದಲ ಪಾದವನ್ನು ಪ್ರವೇಶಿಸಿದಾಗ, ಏಪ್ರಿಲ್ ೧೦ರಂದು ಚಾಂದ್ರಮಾನ ಹೊಸ ವರ್ಷವಿದೆ. ಸೂರ್ಯನು ಮೇಷ ರಾಶಿಯ ಮೊದಲ ಪಾದವನ್ನು ಪ್ರವೇಶಿಸಿದಾಗ, ಏಪ್ರಿಲ್ ೧೩ರಂದು ಸೌರಮಾನ ಹೊಸ ವರ್ಷವಿದೆ.

ನಿಮ್ಮ ಉಸಿರಿಗೂ ಸೂರ್ಯ ಹಾಗೂ ಚಂದ್ರನ ಚಲನೆಗಳಿಗೂ ಸಂಬಂಧವಿದೆ ಎಂದು ನಿಮಗೆ ಗೊತ್ತೇ? ಇಂದು ಬಹಳ ಅದ್ಭುತವಾದ ವಿಜ್ಞಾನ. ಚಾಂದ್ರಮಾನ ಮಾಸದ ಮೊದಲನೆಯ ದಿನದ ನಿಮ್ಮ ಉಸಿರಾಟವು ಸೌರಮಾನ ಮಾಸದ ಮೊದಲನೆಯ ದಿನದ ಉಸಿರಾಟಕ್ಕಿಂತ ಭಿನ್ನವಾಗಿರುತ್ತದೆ. ನಿಮ್ಮ ಮೂಗಿನ ಬಲ ಹೊಳ್ಳೆ (ಸೂರ್ಯನಾಡಿ) ಹಾಗೂ ಎಡ ಹೊಳ್ಳೆ (ಚಂದ್ರನಾಡಿ)ಗಳು ಇದರ ಅರಿವನ್ನು ಮೂಡಿಸುತ್ತವೆ. ಹಾಗಾಗಿ, ಸ್ಥೂಲ ಜಗತ್ತು ಹಾಗೂ ಸೂಕ್ಷ್ಮ ಜಗತ್ತುಗಳು ಒಂದು ಅದ್ಭುತವಾದ ರೀತಿಯಲ್ಲಿ ಸಂಬಂಧವನ್ನು ಹೊಂದಿವೆ.

ಪ್ರಶ್ನೆ: ಗುರುದೇವ, ಇರುವುದು ಒಂದೇ ಆಕಾಶ. ಈ ಏಳನೆಯ ಆಕಾಶ, ಎಂಟನೆಯ ಆಕಾಶದ ಅರ್ಥವೇನು?

ಶ್ರೀ ಶ್ರೀ ರವಿಶಂಕರ್: ಆಕಾಶಗಂಗೆಯಲ್ಲಿ ೩೬೦ ಡಿಗ್ರಿಗಳಿವೆ. ಅವು ೧೨ ಭಾಗಗಳಲ್ಲಿ ವಿಂಗಡಿಸಲಾಗಿವೆ. ಪ್ರತಿಯೊಂದು ಭಾಗವೂ ಒಂದು ರಾಶಿಯಾಗಿದೆ. ಭೂಮಿಯು ಚಲಿಸುತ್ತಿರುವಾಗ ಸೂರ್ಯನನ್ನು ಯಾವುದಾದರೂ ಒಂದು ರಾಶಿಯಲ್ಲಿರುವಂತೆ ಗ್ರಹಿಸುತ್ತದೆ, ಅದು ಒಂದು ಆಕಾಶವಾಗುತ್ತದೆ. ನೋಡಿ, ನಕ್ಷತ್ರಗಳು ಸ್ಥಿರವಾಗಿವೆ, ಆದರೆ ಭೂಮಿಯು ಚಲಿಸುತ್ತಿದೆ. ಭೂಮಿಯು ಸೂರ್ಯನ ಸುತ್ತ ಸುತ್ತುವಾಗ ಅದು ಸೂರ್ಯನನ್ನು ಭಿನ್ನ ಸ್ಥಾನದಲ್ಲಿ ಕಾಣುತ್ತದೆ. ಅದನ್ನು ಮೇಷವೆಂದು ಕರೆಯುತ್ತಾರೆ. ಭೂಮಿಯು ಪುನಃ ಚಲಿಸಿದಾಗ ಅದು ಮಕರ ರಾಶಿಯನ್ನು ಕಾಣುತ್ತದೆ. ಇನ್ನೂ ಮುಂದೆ ಚಲಿಸಿದಾಗ ಕನ್ಯಾರಾಶಿಯನ್ನು ಸೇರುತ್ತದೆ. ಇದುವೇ ಏಳನೆಯ ಆಕಾಶ, ಎಂಟನೆಯ ಆಕಾಶ ಮುಂತಾದವು.

ಪ್ರ: ವಾರದ ದಿನಗಳು ಯಾವುದನ್ನು ಅವಲಂಬಿಸಿವೆ?

ಶ್ರೀ ಶ್ರೀ ರವಿಶಂಕರ್: ವಾರದ ದಿನಗಳನ್ನು ಸೌರಮಂಡಲದಲ್ಲಿನ ಪ್ರಮುಖವಾದ ಗ್ರಹಗಳ ಪ್ರಕಾರ ಹೆಸರಿಸಲಾಗಿದೆ. ಪ್ರತಿ ದಿನವೂ ಒಂದೊಂದು ಗ್ರಹಕ್ಕೆ ಸಂಬಂಧಿಸಿದೆ. ಭಾನುವಾರ ಸೂರ್ಯನಿಗೆ, ಸೋಮವಾರ ಚಂದ್ರನಿಗೆ, ಮಂಗಳವಾರ ಮಂಗಳ ಗ್ರಹಕ್ಕೆ, ಬುಧವಾರ ಬುಧ ಗ್ರಹಕ್ಕೆ, ಗುರುವಾರ ಗುರು ಗ್ರಹಕ್ಕೆ, ಶುಕ್ರವಾರ ಶುಕ್ರ ಗ್ರಹಕ್ಕೆ ಹಾಗೂ ಶನಿವಾರ ಶನಿ ಗ್ರಹಕ್ಕೆ ಸಂಬಂಧಿಸಿವೆ.

ಪ್ರಶ್ನೆ: ಗುರುದೇವ, ನಮ್ಮ ಆರೋಗ್ಯದ ಮೇಲೆ ಗ್ರಹಗಳು ಬೀರಬಲ್ಲ ಪರಿಣಾಮವನ್ನು ವಿವರಿಸುವಿರಾ?

ಶ್ರೀ ಶ್ರೀ ರವಿಶಂಕರ್: ಸ್ಥೂಲ ಜಗತ್ತು ಹಾಗೂ ಸೂಕ್ಷ್ಮ ಜಗತ್ತುಗಳ ಸಂಬಂಧ ದೊಡ್ಡದು. ಪ್ರತಿ ಗ್ರಹವನ್ನೂ ನಿರ್ದಿಷ್ಟ ಧಾನ್ಯ, ವರ್ಣ, ಆಕಾರ, ಪಕ್ಷಿ ಹಾಗೂ ಪ್ರಾಣಿಗೆ ಹೋಲಿಸಬಹುದು. ಒಂದಕ್ಕೊಂದು ಸಂಬಂಧಿಸತಕ್ಕ ಇವು ಪ್ರತಿಯೊಂದೂ, ಶರೀರದ ನಿರ್ದಿಷ್ಟ ಅಂಗವೊಂದಕ್ಕೆ ಅನ್ವಯವಾಗುತ್ತವೆ. ಒಂದೊಂದು ಬೆರಳು ಒಂದೊಂದು ಗ್ರಹಕ್ಕೆ ಅನ್ವಯಿಸಲ್ಪಡುತ್ತದೆಯೆಂಬುದನ್ನು ನೀವು ಬಲ್ಲಿರಾ? ಸ್ಥೂಲ ಜಗತ್ತು ಹಾಗೂ ಸೂಕ್ಷ್ಮ ಜಗತ್ತುಗಳನ್ನು ಒಂದುಗೂಡಿಸುವ ವಿಜ್ಞಾನ ಕುತೂಹಲಕರವಾದದ್ದು.

ಉದಾಹರಣೆಗೆ ಕುಜ ಗ್ರಹವು ಪಿತ್ತಜನಕಾಂಗಕ್ಕೆ ಅನ್ವಯವಾದರೆ, ಪಿತ್ತವು ಕಡಲೇಬೇಳೆಗೆ ಅನ್ವಯಿಸುತ್ತದೆ. ಕಡಲೇಬೇಳೆಯ ಅಧಿಕ ಸೇವನೆ ಪಿತ್ತವನ್ನು ನೆತ್ತಿಗೇರಿಸುತ್ತದೆ!

ಇದೇ ರೀತಿ ಕುಜ ಗ್ರಹಕ್ಕೂ ಕುರಿಗಳಿಗೂ ಸಂಬಂಧವಿದೆ. ಉಷ್ಣಾಧಿಕ್ಯಕ್ಕೆ ಕುಜ ಗ್ರಹ ಹೇಗೆ ಹೆಸರುವಾಸಿಯೋ ಹಾಗೆ, ಕುರಿಯ ಉತ್ಪಾದನೆಯಾದಂಥ ಉಲ್ಲನ್ ಬೆಚ್ಚಗಿನ ಬಟ್ಟೆ ತಯಾರಿಕೆಗೆ ಮೂಲವಸ್ತು.

ಕಾಕ ಪಕ್ಷಿ ಶನಿ ಗ್ರಹಕ್ಕೆ ಅನ್ವಯಿಸುವಂಥದ್ದು. ಶನಿ ಗ್ರಹ ಕರಿ ಎಳ್ಳಿಗೂ, ನಿಮ್ಮ ಹಲ್ಲುಗಳಿಗೂ ಅನ್ವಯವಾಗುತ್ತದೆ.
ವೈದ್ಯಕೀಯ ಜ್ಯೋತಿಶ್ಶಾಸ್ತ್ರವೆಂಬುದಿದೆ. ಅದರಲ್ಲಿ ಲಭ್ಯವಿರುವ ಒಂದು ಪಟ್ಟಿ, ಯಾವ ಗ್ರಹ ಯಾವ ದಿಕ್ಕಿಗೆ ಅಭಿಮುಖವಾದಾಗ ಯಾವ ನಕ್ಷತ್ರ-ರಾಶಿಯವರಿಗೆ ಯಾವ ರೀತಿಯ ಖಾಯಿಲೆಯ ಅಪಾಯವಿರುತ್ತದೆ ಎಂಬುದನ್ನು ವಿವರಿಸುತ್ತದೆ.

ದುರದೃಷ್ಟವಶಾತ್ ಇಂಥ ಪ್ರಚಂಡ ಜ್ಞಾನದ ಬಹು ಭಾಗ ನಾಶವಾಗಿದೆ. ತಾಳೆ ಗರಿಗಳ ಮೇಲೆ ಬರೆದಿಡಲಾಗಿದ್ದ ಸಂಬಂಧಿತ ಸಾಹಿತ್ಯ, ಸುರಕ್ಷತಾ ಸೌಲಭ್ಯದ ಅಭಾವದಿಂದಾಗಿ ಬಹುತೇಕ ನಶಿಸಿದೆ. ಅಗಾಧವಾದ ಆ ಜ್ಞಾನಭಂಡಾರದಲ್ಲಿ ಇಂದಿನ ಪೀಳಿಗೆಗೆ ಲಭ್ಯವಿರುವುದು ಸ್ವಲ್ಪ ಭಾಗ ಮಾತ್ರ.

ಜ್ಯೋತಿಶ್ಶಾಸ್ತ್ರ ಅತ್ಯುಪಕಾರಿಯಾದರೂ ಅದನ್ನು ಜ್ಯೋತಿಷಿಗಳು ಸಮರ್ಪಕವಾಗಿ ಅಭ್ಯಸಿಸಿಲ್ಲ. ಆದ್ದರಿಂದ ಇಂದು ಸಮುದಾಯಕ್ಕೆ ಜ್ಯೋತಿರ್ಮಾರ್ಗದರ್ಶನ ನೀಡುತ್ತಿರುವವರ ಬಗ್ಗೆ ನನಗೆ ಪೂರ್ಣ ತೃಪ್ತಿಯಿಲ್ಲ. ಆದರೆ ವ್ಯವಸ್ಥಿತ ರೀತಿಯಲ್ಲಿ ನಿರೂಪಿಸಲ್ಪಟ್ಟ ಜ್ಯೋತಿಶ್ಶಾಸ್ತ್ರ ವೈಜ್ಞಾನಿಕವಾಗಿ ಅದೆಷ್ಟು ಸಮ್ಮತವೆಂದು ನಾನು ಬಲ್ಲೆ.

ಸೂರ್ಯ ನಕ್ಷತ್ರ ನಿಮ್ಮ ಕಣ್ಣುಗಳಿಗೆ ಅನ್ವಯಿಸುವಂಥದ್ದು. ಅಂತೆಯೇ ಗುರು ಮೂಗಿಗೆ ಸಂಬಂಧಪಟ್ಟ ಗ್ರಹ. ಶನಿಯು ಹಲ್ಲುಗಳಿಗೆ ಅನ್ವಯಿಸುವಂತೆ, ಕೆನ್ನೆಗಳು ಶುಕ್ರ ಗ್ರಹಕ್ಕೆ ಅನ್ವಯಿಸುತ್ತವೆ. ಹಣೆ ಬುಧ ಗ್ರಹಕ್ಕೆ ಅನ್ವಯವಾಗುತ್ತದೆ. ಹೀಗೆ, ವಸ್ತುಸ್ಥಿತಿಗಳ ಪರಿಣಾಮದ ಬಗ್ಗೆ ಕರಾರುವಾಕ್ಕಾದ ಅರಿವು ಮೂಡಿಸುವಂಥ ಮನಮೋಹಕ ವಿಜ್ಞಾನ ಜ್ಯೋತಿಷ್ಯ.

ಮೂರ್ನಾಲ್ಕು ದಶಕಗಳ ಮುನ್ನ ವಾಸ್ತುಶಾಸ್ತ್ರ ಯಾರಿಗೂ ಗೊತ್ತಿರಲಿಲ್ಲ. ಅದರ ಬಗ್ಗೆ ಭಾರತದಲ್ಲಿಯೂ ಅಂದು ಯಾರೂ ಕೇಳಿ ಬಲ್ಲವರಿರಲಿಲ್ಲ, ಆದರೀಗ ಅದು ಪ್ರಮುಖವಾಗಿದೆ. ನೇಪಥ್ಯದಲ್ಲಿದ್ದ ಈ ಜ್ಞಾನ ಮೊಟ್ಟಮೊದಲಿಗೆ ಸಮಾಜಕ್ಕೆ ಮರಳುವಂತೆ ಮಾಡಿದ್ದು ಮಹರ್ಷಿ ಮಹೇಶ್ ಯೋಗಿ. ಆವರ ನೇತೃತ್ವದಲ್ಲಿ ಪ್ರಚಾರ ಆರಂಭಗೊಂಡ ತರುವಾಯ, ಪ್ರಪಂಚದಾದ್ಯಂತ ವಾಸ್ತು ಶಾಸ್ತ್ರಕ್ಕೆ ಬೇಡಿಕೆ ಹೆಚ್ಚಾಯಿತು. ಆ ಮುನ್ನ ದೇವಸ್ಥಾನಗಳ ವಿನ್ಯಾಸಕರು ಮತ್ತು ನಿರ್ಮಾಣ ತಂಡದವರು ಮಾತ್ರ.ವಾಸ್ತು ಶಾಸ್ತ್ರದ ಕೌಶಲ್ಯವನ್ನು ಹೊಂದಿದ್ದರು.

ವಾಸ್ತು ಶಾಸ್ತ್ರದ ಪುಸ್ತಕಗಳೂ ಅನೇಕವೇನಿಲ್ಲ. ಒಂದು ಪ್ರದೇಶದಲ್ಲಿ ಪ್ರಚಲಿತವಿರುವ ವಾಸ್ತು ಶಾಸ್ತ್ರ ಮತ್ತೊಂದು ಪ್ರದೇಶಕ್ಕೆ ಅನ್ವಯವಾಗುವುದಿಲ್ಲ. ಭಾರತದ ವಾಸ್ತು ಶಾಸ್ತ್ರವನ್ನು ಅಮೆರಿಕ, ರಷ್ಯಾದ ವಾಸ್ತು ಶಾಸ್ತ್ರಗಳೊಂದಿಗೆ ಹೋಲಿಸಲಾಗುವುದಿಲ್ಲ.

ಪ್ರಶ್ನೆ: ಚಾಕಲೇಟುಗಳು ನಾಡಿಗಳನ್ನು ತಡೆಯುತ್ತವೆಯೇ?

ಶ್ರೀ ಶ್ರೀ ರವಿಶಂಕರ್: ನಮಗೆ ಚಾಕಲೇಟುಗಳ ಬಗ್ಗೆ ತಿಳಿದಿಲ್ಲ. ಆಹಾರ ತಜ್ಞರಲ್ಲಿ ವಿಚಾರಿಸಿ. ಯಾವುದೇ ಅತಿಯಾದರೂ ಒಳ್ಳೆಯದಲ್ಲ.

ನಮಗಾಗಿ ಚಾಕಲೇಟು ಅಥವಾ ಯಾವುದೇ ಸಿಹಿತಿನಿಸುಗಳನ್ನು ತರಬೇಡಿ ಎಂದು ನಾವು ಹೇಳಬಯಸುತ್ತೇವೆ. ನೀವು ನಸುನಗುತ್ತಾ ಇರಿ. ಅಷ್ಟು ಸಾಕು. ಎಷ್ಟೊಂದು ತಿಂಡಿಗಳು, ಚಾಕಲೇಟುಗಳನ್ನೆಲ್ಲ ತರುತ್ತಾರೆ. ಅವಶ್ಯಕತೆಯಿಲ್ಲ. ಸುಮ್ಮನೆ ಏಕೆ ಅವುಗಳಿಗೆಲ್ಲ ಹಣ ಖರ್ಚು ಮಾಡುವುದು? ಅದೇ ಹಣವನ್ನು ಒಳ್ಳೆಯದಕ್ಕಾಗಿ ಉಪಯೋಗಿಸಬಹುದು. ನಾವು ಸಾಮಾನ್ಯವಾಗಿ ಹೇಳುತ್ತೇವೆ, 'ನೀವು ನಮಗೆ ಸಿಹಿಯನ್ನು ತಂದುಕೊಟ್ಟರೆ ಅದರ ಅರ್ಥ ನಾವು ಸಾಕಷ್ಟು ಸಿಹಿಯಿಲ್ಲ, ಇನ್ನೂ ಸಿಹಿಯಾಗಬೇಕೆಂದು. ನೀವು ನಮಗೆ ಹೂವುಗಳನ್ನು ತಂದುಕೊಟ್ಟರೆ ನಮಗನಿಸುತ್ತದೆ ನಾವಿನ್ನೂ ಸಾಕಷ್ಟು ಅರಳಿಲ್ಲ, ಇನ್ನೂ ಅರಳಬೇಕೆಂದು ನೀವು ಸಂಕೇತಿಸುತ್ತಿದ್ದೀರೆಂದು'. ನೀವು ಆ ರೀತಿಯ ಸಂದೇಶಗಳನ್ನು ಕೊಡಬೇಕಿದ್ದರೆ ಹೂವು, ಮಾಲೇ, ಸಿಹಿಗಳನ್ನು ತನ್ನಿರಿ. ಇಲ್ಲವಾದರೆ ಕೇವಲ ನಿಮ್ಮ ಮಂದಹಾಸವನ್ನು ತನ್ನಿರಿ. ಹೂವು ಮತ್ತು ತಿಂಡಿಗಳ ಮೇಲೆ ಹಣ ಖರ್ಚು ಮಾಡುವ ಬದಲು ಅದನ್ನು ಯಾವುದಾದರೂ ಸೇವಾ ಯೋಜನೆಗೆ ವಿನಿಯೋಗಿಸಿ.