ಶನಿವಾರ, ಏಪ್ರಿಲ್ 27, 2013

ಜ್ಞಾನ ಚಕ್ಷುವು ತೆರೆದಿರಲಿ

ನುಸಾ ದುವಾ, ಬಾಲಿ
೨೭ ಎಪ್ರಿಲ್ ೨೦೧೩

ಪ್ರಶ್ನೆ: ಪ್ರೀತಿಯ ಗುರುದೇವ, ನೀವು ನಮಗೆ ದೇವರ ತಾಯಿ ಮತ್ತು ತಂದೆಯ ಬಗ್ಗೆ ಹೇಳುವಿರಾ? ಮತ್ತು ದೇವರಿಗೆ ಎಷ್ಟು ಸಹೋದರ ಸಹೋದರಿಯರಿದ್ದಾರೆ?

ಶ್ರೀ ಶ್ರೀ ರವಿ ಶಂಕರ್: ಓ ದೇವರೇ! ಒಂದು ಟೆನ್ನಿಸ್ ಚೆಂಡು ಎಲ್ಲಿಂದ ಪ್ರಾರಂಭವಾಗುವುದೆಂದು ನೀನು ನನಗೆ ಹೇಳಿದರೆ, ದೇವರ ತಾಯಿ ಮತ್ತು ತಂದೆ ಯಾರೆಂಬುದನ್ನು ನಾನು ನಿನಗೆ ಹೇಳುವೆನು.

ಮೈ ಡಿಯರ್, ಹುಟ್ಟುವ ಅಥವಾ ಸಾಯುವ ಒಂದನ್ನು ನೀವು ದೇವರು ಎಂದು ಕರೆಯುವುದಿಲ್ಲ. ದೇವರೆಂದರೆ ಪ್ರಕಾಶ, ಪ್ರಜ್ಞೆ, ಯಾವುದಕ್ಕೆ ಜನ್ಮವಿಲ್ಲವೋ ಅದು.

ವಿಶ್ವದಲ್ಲಿ ಮೂರು ವಿಷಯಗಳು ಶಾಶ್ವತವಾಗಿವೆ.

ಒಂದನೆಯದು ವಿಶ್ವ. ಅದು ಯಾವತ್ತಿನಿಂದಲೂ ಅಲ್ಲಿದೆ. ಎರಡನೆಯದು ಆತ್ಮ; ಪ್ರತ್ಯೇಕ ಆತ್ಮವು ಶಾಶ್ವತವಾಗಿದೆ. ಮೂರನೆಯದು, ದೊಡ್ಡ ಮನಸ್ಸು ಅಥವಾ ದೇವರು; ಅದು ಯಾವತ್ತೂ ಇದೆ, ಅಲ್ಲದಿದ್ದರೆ ಅದು ದೇವರೆಂದು ಕರೆಯಲ್ಪಡದು.

ದೇವರು ಕೇವಲ ೨,೦೦೦ ವರ್ಷಗಳ ಮೊದಲು ಮಾತ್ರವಿದ್ದು, ಈಗ ಇಲ್ಲದೇ ಇರುವುದಾದರೆ, ಆಗ ಅದು ದೇವರಲ್ಲ. ಅಥವಾ ದೇವರು ಭವಿಷ್ಯಕಾಲದಲ್ಲಿ ಬರಲಿರುವುದಾದರೆ, ಅದು ದೇವರಲ್ಲ. ದೇವರೆಂದರೆ, ಯಾವುದು ಹಿಂದೆ ಇತ್ತೋ, ಈಗ ಇದೆಯೋ ಮತ್ತು ಮುಂದೆ ಇರುವುದೋ ಅದು; ಯಾವುದು ಸರ್ವವ್ಯಾಪಿಯಾದುದೋ ಅದು. ದೇವರೆಂದರೆ ಒಂದು ವ್ಯಕ್ತಿಯಲ್ಲ. ಅದು ಶಕ್ತಿ, ಅದು ಆಕಾಶ.

ಉಪನಿಷತ್ತುಗಳಲ್ಲಿ ಒಂದು ಸುಂದರವಾದ ಕಥೆಯಿದೆ.

ಎಂಟು ವರ್ಷಗಳ ಒಬ್ಬ ಹುಡುಗನು ತನ್ನ ತಂದೆಯಲ್ಲಿ ಕೇಳುತ್ತಾನೆ, ’ಅಪ್ಪಾ, ದೇವರು ಹೇಗಿರುತ್ತಾನೆ?’ ಅದಕ್ಕೆ ತಂದೆಯು ಹುಡುಗನ ಕೈಹಿಡಿದು ಮನೆಯಿಂದ ಹೊರಗೆ ಕರೆದುಕೊಂಡು ಹೋಗುತ್ತಾನೆ ಮತ್ತು ಅವನು ಕೇಳುತ್ತಾನೆ, ’ಕಟ್ಟಡವನ್ನು ಕಟ್ಟುವ ಮೊದಲು ಈ ಜಾಗದಲ್ಲಿ ಏನಿತ್ತು?’

ಹುಡುಗನಂದನು, ’ಖಾಲಿ ಆಕಾಶ.’

ತಂದೆಯು ಕೇಳುತ್ತಾನೆ, ’ಮತ್ತೆ ಈ ಕಟ್ಟಡವು ಎಲ್ಲಿ ನಿಂತಿದೆ?’

ಹುಡುಗನನ್ನುತ್ತಾನೆ, ’ಆಕಾಶದಲ್ಲಿ.’

’ಕಟ್ಟಡವನ್ನು ಕೆಡವಿ ಹಾಕುವಾಗ, ಅಲ್ಲಿ ಏನಿರುವುದು?’

ಹುಡುಗನಂದನು, ’ಆಕಾಶ.’

ತಂದೆಯಂದನು, ’ಹಾಗಾದರೆ, ಆಕಾಶವೆಂದರೆ ಯಾವುದು ಯಾವತ್ತೂ ಅಲ್ಲಿರುವುದೋ ಅದು, ಸರಿಯಾ?’

ಹುಡುಗನಂದನು, ’ಹೌದು.’

ತಂದೆಯಂದನು, ’ದೇವರಿರುವುದು ಹಾಗೆಯೇ.’

ದೇವರೆಂದರೆ, ಯಾವುದರಲ್ಲಿ ಎಲ್ಲವೂ ಬರುವುದೋ, ಯಾವುದರಲ್ಲಿ ಎಲ್ಲವೂ ಉಳಿಯುವುದೋ, ಯಾವುದರೊಳಗೆ ಎಲ್ಲವೂ ವಿಲೀನವಾಗುವುದೋ ಅಂತಹ ಆಕಾಶದಂತೆ. ಅದನ್ನು ನಾಶಪಡಿಸಲು ಸಾಧ್ಯವಿಲ್ಲ, ಮತ್ತು ಅದು ಯಾವತ್ತೂ ಇದೆ. ನಿಮಗೆ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.  ನಿಮಗೆ ದೇವರಿಂದ ದೂರ ಹೋಗಲು ಸಾಧ್ಯವೇ ಇಲ್ಲ. ಅಸಾಧ್ಯ!

ನಂತರ ಈ ಪ್ರಶ್ನೆ ಬರುತ್ತದೆ, ’ದೇವರು ಪೂರ್ತಿ ಒಳ್ಳೆಯದಾಗಿದ್ದರೆ, ಕೆಟ್ಟ ಜನರು ದೇವರಾಗಿರಲು ಹೇಗೆ ಸಾಧ್ಯ? ಒಳ್ಳೆಯ ಜನರಿದ್ದಾರೆ ಮತ್ತು ಕೆಟ್ಟ ಜನರಿದ್ದಾರೆ, ಅವರೆಲ್ಲರನ್ನೂ ನೀವು ದೇವರೆಂದು ಕರೆಯಲು ಹೇಗೆ ಸಾಧ್ಯ?’

ನಾನು ನಿಮಗೆ ಇನ್ನೊಂದು ಉದಾಹರಣೆಯನ್ನು ಕೊಡಲು ಬಯಸುತ್ತೇನೆ; ಒಂದು ಸಿನೆಮಾದ್ದು. ಒಂದು ಸಿನೆಮಾವನ್ನು ಹೇಗೆ ಪ್ರದರ್ಶಿಸಲಾಗುತ್ತದೆ? ಚಿತ್ರಸುರುಳಿಯ ಹಿಂದಿನಿಂದ ಒಂದು ಪ್ರಕಾಶದ ಕಿರಣವನ್ನು ಬೀರುವುದರ ಮೂಲಕ ಅದನ್ನು ಪ್ರದರ್ಶಿಸಲಾಗುತ್ತದೆ, ಸರಿಯಾ? ಪ್ರೊಜೆಕ್ಟರ್‌ನಲ್ಲಿ ಹೇಗೆ ರೀಲ್ ಚಲಿಸುತ್ತದೆ ಮತ್ತು ಅದರ ಹಿಂದೆ ಬೆಳಕು ಇರುವುದನ್ನು ನೀವು ನೋಡಿದ್ದೀರಾ? ಈ ಬೆಳಕಿನ ಕಾರಣದಿಂದಲೇ ಸಿನೆಮಾವು ಪರದೆಯ ಮೇಲೆ ಬಿಂಬಿಸಲ್ಪಡುವುದು. ಆದುದರಿಂದ, ಅದು ಯಾವುದೇ ಸಿನೆಮಾವಾದರೂ ಪರವಾಗಿಲ್ಲ, ನಾಯಕನೇ ಬರಲಿ ಅಥವಾ ಖಳನಾಯಕನೇ ಬರಲಿ, ಬೆಳಕು ಒಂದೇ ಆಗಿರುವುದು, ಅಲ್ಲವೇ? ಬೆಳಕು ದೇವರು ಮತ್ತು ನಾಯಕ, ಖಳನಾಯಕ ಹಾಗೂ ನೀವು ನೋಡುವ ಯಾವುದೇ ಒಳ್ಳೆಯದು ಅಥವಾ ಕೆಟ್ಟದ್ದು; ಆಗುವುದೆಲ್ಲವೂ ಕೇವಲ ಒಂದು ಸಂಭವ ಮಾತ್ರ. ಅದಕ್ಕೂ ಬೆಳಕಿಗೂ ಯಾವುದೇ ಸಂಬಂಧವಿಲ್ಲ. ನಿಮಗೆ ಅವುಗಳನ್ನು ನೋಡಲು ಸಾಧ್ಯವಾಗುವುದು ಕೂಡಾ ಬೆಳಕಿನಿಂದಾಗಿಯೇ. ನಿಮಗಿದು ಅರ್ಥವಾಗುತ್ತಿದೆಯೇ?

ಆದುದರಿಂದ, ದೇವರೆಂದರೇನು ಮತ್ತು ಪ್ರಕೃತಿಯೆಂದರೇನು ಎಂಬುದನ್ನು ನೀವು ನಿಜವಾಗಿಯೂ ತಿಳಿದುಕೊಳ್ಳಬೇಕಾದರೆ, ನೀವೊಬ್ಬ ವಿಜ್ಞಾನಿಯಾಗಿರಬೇಕು. ನೀವೊಬ್ಬ ಭೌತವಿಜ್ಞಾನಿಯಾಗಿದ್ದರೆ, ನೀವು ತಿಳಿದುಕೊಳ್ಳಬಹುದು. ನೀವು ಕ್ವಾಂಟಮ್ ಭೌತಶಾಸ್ತ್ರವನ್ನು ಅರ್ಥಮಾಡಿಕೊಂಡರೆ, ನೀವು ಅಧ್ಯಾತ್ಮಿಕತೆಯನ್ನು, ದೇವರನ್ನು ಇನ್ನೂ ಉತ್ತಮವಾಗಿ ಅರ್ಥ ಮಾಡಿಕೊಳ್ಳಬಹುದು.

ಈಗ, ದೇವರು ಎಲ್ಲೆಡೆ ಇರುವುದಾದರೆ, ಅವನು ಇಲ್ಲಿರುವನೇ? ಹೌದು.

ದೇವರು ಎಲ್ಲರಿಗೂ ಸೇರಿದವನಾಗಿದ್ದರೆ, ಅವನು ನಿನಗೆ ಸೇರಿದವನೇ? ಹೌದು.

ದೇವರು ಎಲ್ಲೆಡೆಯೂ ಇರುವುದಾದರೆ, ಅವನು ಇಲ್ಲಿಯೂ ಇರುವನೇ? ಅವನು ಯಾವತ್ತಿಗೂ ಇದ್ದನು, ಆದುದರಿಂದ ಅವನು ಈಗ ಇಲ್ಲಿರುವನು! ಅವನು ಎಲ್ಲರಿಗೂ ಸೇರಿದವನು, ಆದುದರಿಂದ ಅವನು ನನಗೆ ಸೇರಿದವನು.

ಅವನು ಎಲ್ಲಾ ಸಾಧ್ಯತೆಗಳ ಕ್ಷೇತ್ರವಾಗಿರುವನು. ಅವನು ಎಲ್ಲವನ್ನೂ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾನೆ, ಆದುದರಿಂದ ನನಗೇನೆಲ್ಲಾ ಬೇಕೋ ಅದನ್ನು ಅವನು ಪೂರೈಸುವನು.

ನೀವು ಈ ನಾಲ್ಕು ಅಂಶಗಳನ್ನು ತಿಳಿದುಕೊಂಡರೆ, ಅದು ಸಾಕು. ನಿಮಗೆ ಬೇರೇನೂ ಬೇಕಾಗಿಲ್ಲ.

ಹಾಗಾದರೆ ನೀವು ನೆನಪಿನಲ್ಲಿಡಬೇಕಾದುದು ಏನು?

ದೇವರು ಸರ್ವವ್ಯಾಪಿ, ಆದುದರಿಂದ ಅವನು ಇಲ್ಲಿ, ಈಗ ಇರುವನು. ಅವನು ನನಗೆ ಸೇರಿದವನು, ಅವನು ನನ್ನಲ್ಲಿರುವನು ಮತ್ತು ನನ್ನಲ್ಲಿ ಯಾವುದರದ್ದೆಲ್ಲಾ ಕೊರತೆಯಿದೆಯೋ ಅದನ್ನು ಪೂರೈಸಲು ಅವನು ಇರುವನು.ಅಷ್ಟೇ!

ಧ್ಯಾನದಲ್ಲಿ, ’ನಾನು’ ಎಂಬುದು ಕರಗಿಹೋಗುವಾಗ, ಜ್ಞಾನವು ಕರಗಿಹೋಗುವುದು. (ನೀವು ಯಾವುದೆಲ್ಲಾ ಜ್ಞಾನವನ್ನು ಹೊಂದುವಿರೋ ಅದು ಬಹಳ ಸೀಮಿತವಾದುದು ಎಂಬುದು ನಿಮಗೆ ತಿಳಿದಿದೆಯೇ? ಆದುದರಿಂದ, ಜ್ಞಾನವು ಕರಗಬೇಕು. ಆಳವಾದ ನಿದ್ರೆಯಲ್ಲಿ ಏನಾಗುವುದು? ಜ್ಞಾನವು ಕರಗುವುದು).

ಜ್ಞಾನವು ಕರಗುವಾಗ, ನಾನು ಎಂಬ ಪ್ರಜ್ಞೆಯು ಕರಗುವಾಗ, ಏನು ಉಳಿಯುವುದೋ, ಅದು ಮಾತ್ರ ಉಳಿಯುವುದು! ಅದುವೇ ನಿಜವಾದ ಸತ್ಯ, ಅದುವೇ ಶಿವ  ಮತ್ತು ಅದುವೇ ಭೈರವ.

ಎಲ್ಲಿ ನೀವು ಶಿವನೊಂದಿಗೆ, ಶಿವೋಹಂನೊಂದಿಗೆ ಒಂದಾಗುವಿರೋ, ಎಲ್ಲಿ ನಾನು ಎಂಬುದು ಕರಗಿರುವುದೋ, ಜ್ಞಾನವು ಕರಗಿರುವುದೋ, ಆದರೂ ಎಲ್ಲವೂ ಇರುವುದೋ, ಅದು ಭೈರವ. ನೀವದನ್ನು ಹೇಗೆ ಪಡೆಯುವಿರಿ? ನೀವದನ್ನು ಆಸಕ್ತಿ, ವಿರಕ್ತಿ ಮತ್ತು ಸಹಾನುಭೂತಿಗಳ ಮೂಲಕ ಪಡೆಯಬಹುದು. ಸಾಧನೆಗಾಗಿ ಆಸಕ್ತಿ, ಉಳಿದ ಎಲ್ಲದರ ಕಡೆಗೆ ವಿರಕ್ತಿ ಮತ್ತು ನಿಮ್ಮ ಹಾಗೂ ಇತರರ ಕಡೆಗೆ ಸಹಾನುಭೂತಿ. ಕೆಲವೊಮ್ಮೆ, ನಾವು ಇತರರ ಕಡೆಗೆ ಸಹಾನುಭೂತಿಯಿಂದ ಇರುತ್ತೇವೆ ಮತ್ತು ನಮ್ಮ ಮೇಲೆ ತುಂಬಾ ಕಠಿಣವಾಗಿರುತ್ತೇವೆ; ಅದು ಕೂಡಾ ಒಳ್ಳೆಯದಲ್ಲ.

ಪ್ರಶ್ನೆ: ಪ್ರೀತಿಯ ಗುರುದೇವ, ಅಂಗ ದಾನ, ಸಲಿಂಗ ವಿವಾಹಗಳು, ರಕ್ತದಾನಗಳು ಮತ್ತು ಗರ್ಭಪಾತಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಶ್ರೀ ಶ್ರೀ ರವಿ ಶಂಕರ್: ಅಂಗದಾನ ಪರವಾಗಿಲ್ಲ, ನೀವದನ್ನು ಮಾಡಬಹುದು; ಅದರಲ್ಲೇನೂ ತಪ್ಪಿಲ್ಲ.

ಈ ಎಲ್ಲಾ ವಿಷಯಗಳು ಬಹಳ ಸಾಪೇಕ್ಷವಾಗಿವೆ. ನೀವದಕ್ಕೆ ಒಳ್ಳೆಯದು, ಕೆಟ್ಟದ್ದು, ನಾನದನ್ನು ಬಯಸುತ್ತೇನೆ ಮತ್ತು ನಾನದನ್ನು ಬಯಸುವುದಿಲ್ಲವೆಂಬ ಲೇಬಲ್ ಹಚ್ಚಬೇಕಾಗಿಲ್ಲ. ನೀವು ಯಾವುದೇ ಆಯ್ಕೆಯನ್ನು ಮಾಡಿಕೊಂಡರೂ, ಚಿಂತಿಸಬೇಡಿ, ಪರವಾಗಿಲ್ಲ. ಹೀಗಿದ್ದರೂ, ಜೀವನವು ಈ ಚಿಕ್ಕ ಆಗುಹೋಗುವಿಕೆಗಳಿಂದ ಎಷ್ಟೋ ಹೆಚ್ಚಿನದೆಂಬುದನ್ನು ನೀವು ಮರೆಯಬಾರದು, ಅದು ಮುಖ್ಯವಾದುದು. ವಸ್ತು ಪ್ರಪಂಚದಾಚೆ ಇರುವುದರಲ್ಲಿ ಕೆಲವು ಕ್ಷಣಗಳು, ಇದರಲ್ಲಿ ಕೇವಲ ಒಂದು ಶೇಕಡಾ ನಂಬಿಕೆಯಿದ್ದರೂ ಕೂಡಾ, ಅದು ನೀವು ಮೇಲಕ್ಕೇರಲು ಸಾಕು.

ನೀವು ನೀರಿನಲ್ಲಿ, ಸಾಗರದಲ್ಲಿರುವಾಗ, ನಿಮಗೆ ಬೇಕಾಗಿರುವುದೆಂದರೆ ಒಂದು ರಬ್ಬರ್ ತೆಪ್ಪ; ಅಷ್ಟು ಸಾಕು. ಹಾಗೆಯೇ ನೀವು ಈಜಲು ಕಲಿಯುವುದು, ಸರಿಯಾ? ಅದೇ ರೀತಿಯಲ್ಲಿ, ಏನೋ ಆಚೆಗಿರುವುದರಲ್ಲಿ ಸ್ವಲ್ಪ ನಂಬಿಕೆಯಿದ್ದರೆ ಸಾಕು.

ಸಂಸ್ಕೃತದಲ್ಲಿ, ಶ್ರಾಧ್ ಎಂದು ಕರೆಯಲ್ಪಡುವ ಒಂದು ಪದವಿದೆ. ಅಂದರೆ, ಯಾವುದು ಶ್ರದ್ಧೆಯೊಂದಿಗಿದೆಯೋ, ನಂಬಿಕೆಯೊಂದಿಗಿದೆಯೋ ಅದು ಎಂದರ್ಥ.

ಒಬ್ಬರು ತೀರಿ ಹೋದಾಗ, ನೀವು ಅವರನ್ನು ನೆನೆಯುತ್ತೀರಿ. ಅವರು ಅಲ್ಲಿದ್ದರೋ ಇಲ್ಲವೋ ಎಂದು ನೀವು ಸಂಶಯ ಪಡುವುದಿಲ್ಲ. ಅವರು ನಿಮ್ಮೊಂದಿಗಿದ್ದರು ಮತ್ತು ಅವರು ಹೋಗಿರುವರು ಎಂಬುದು ನಿಮಗೆ ತಿಳಿದಿರುತ್ತದೆ. ಅವರು ಹೋಗಿರುವಾಗ, ನೀವು ಅವರನ್ನು ನೆನೆಯುವ ದಿನವು ಶ್ರಾದ್ಧ ಎಂದು ಕರೆಯಲ್ಪಡುತ್ತದೆ; ಅಂದರೆ ನಂಬಿಕೆ.

ಅವರು ಇನ್ನೂ ಅಲ್ಲಿರುವರೆಂದು ನಿಮಗೆ ನಂಬಿಕೆಯಿದೆ ಮತ್ತು ನೀವೇನು ಮಾಡುತ್ತೀರಿ? ನೀವು ಕೆಲವು ಎಳ್ಳಿನ ಬೀಜಗಳನ್ನು ತೆಗೆದುಕೊಂಡು, ಅದರ ಮೇಲೆ ನೀರನ್ನೆರೆದು, ಅವರಿಗೆ ಈ ಸಂದೇಶವನ್ನು ನೀಡುತ್ತೀರಿ, ’ತೃಪ್ತರಾಗಿರಿ, ತೃಪ್ತರಾಗಿರಿ, ತೃಪ್ತರಾಗಿರಿ. ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ಬಯಕೆಗಳಿದ್ದರೆ, ಅದೆಲ್ಲವೂ ಒಂದು ಎಳ್ಳುಬೀಜದಷ್ಟು ಚಿಕ್ಕವು, ಸುಮ್ಮನೆ ಅವುಗಳನ್ನು ಬಿಟ್ಟುಬಿಡಿ. ನಿಮ್ಮ ಬಯಕೆಗಳನ್ನು ಪೂರೈಸಲು ನಾನಿಲ್ಲಿರುವೆನು. ನೀವು ಮುಂದೆ ಸಾಗಿ, ಸಂತೋಷವಾಗಿರಿ ಮತ್ತು ತೃಪ್ತರಾಗಿರಿ.’

ಇದನ್ನೇ ಮಕ್ಕಳು, ಇನ್ನೊಂದು ಬದಿಗೆ ಹಾದುಹೋಗಿರುವ ತಮ್ಮ ಹೆತ್ತವರಿಗೆ ಹೇಳುವುದು. ಅದು ಮಕ್ಕಳು ಮಾತ್ರ ಆಗಬೇಕೆಂದೇನಿಲ್ಲ; ಯಾರಾದರೂ, ಯಾವುದೇ ಮಿತ್ರ, ಯಾವುದೇ ಸಂಬಂಧಿಯು ಅದನ್ನು ಮಾಡಬಹುದು. ಇಲ್ಲಿ ಬಾಲಿಯಲ್ಲಿ ಕೂಡಾ ಮಾಡಲಾಗುವ ಒಂದು ಸಮಾರಂಭವಾಗಿದೆ ಅದು; ಅದು ಬಹಳ ಪ್ರಚಲಿತವಾಗಿದೆ.

ಈ ಸಮಾರಂಭದಲ್ಲಿ, ಎಲ್ಲ ಐದು ಇಂದ್ರಿಯಗಳನ್ನು ತೃಪ್ತಿಪಡಿಸಲಾಗುತ್ತದೆ; ರುಚಿಗೆ ಆಹಾರವಿದೆ, ಆಘ್ರಾಣಿಸಲು ಊದುಬತ್ತಿಗಳಿವೆ, ಶಬ್ದಕ್ಕೆ ಗಾಯನವಿದೆ ಮತ್ತು ನೋಡಲು ಒಂದು ದೀಪ ಅಥವಾ ಪ್ರಕಾಶವಿದೆ. ಇನ್ನೊಂದು ಬದಿಗೆ ಹಾದುಹೋದ ಜನರಿಗೆ ಒಬ್ಬರ ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ರೀತಿಯಾಗಿದೆ ಇದು. ಅಸ್ತಿತ್ವದಲ್ಲಿ ಇನ್ನೊಂದು ಪ್ರಪಂಚವಿದೆ, ಇನ್ನೊಂದು ಲೋಕವಿದೆ ಮತ್ತು ಇನ್ನೊಂದು ಬಯಲು ಇದೆ, ಕೇವಲ ಇದೊಂದೇ ಅಲ್ಲ ಎಂಬುದನ್ನು ನಿಮಗೆ ನೆನಪಿಸಲಿಕ್ಕಾಗಿಯೂ ಕೂಡಾ ಇದನ್ನು ಮಾಡಲಾಗುತ್ತದೆ. ಹೀಗೆ, ಜೀವನವು ಇನ್ನೂ ದೊಡ್ಡ ಆಯಾಮವನ್ನು ಗಳಿಸುತ್ತದೆ. ನಿಮ್ಮ ಕಣ್ಣುಗಳು ಮೆಲಿನದ್ದನ್ನು ನೋಡುತ್ತವೆ.

ಪ್ರಶ್ನೆ: ಗುರುದೇವ, ನೀವು ನಮಗೆ ಈ ಜೀವನದಲ್ಲಿ ಇಷ್ಟೊಂದು ನೀಡಲು, ನಾವು ನಮ್ಮ ಕಳೆದ ಜನ್ಮದಲ್ಲಿ ಏನು ಮಾಡಿದ್ದೇವೆ ಎಂದು ನನಗೆ ಅಚ್ಚರಿಯಾಗುತ್ತದೆ. ಬಯಸುವ ಮೊದಲೇ ಅದನ್ನು ಕೊಡಲಾಗುತ್ತದೆ. ಎಲ್ಲದಕ್ಕೂ ನಿಮಗೆ ಬಹಳ ಧನ್ಯವಾದಗಳು.

ಶ್ರೀ ಶ್ರೀ ರವಿ ಶಂಕರ್: ಬಹಳ ಒಳ್ಳೆಯದು. ನಾವು ಹೆಚ್ಚು ಕೃತಜ್ಞರಾಗಿದ್ದಷ್ಟೂ, ಹೆಚ್ಚು ಉಡುಗೊರೆಗಳು ನಮ್ಮ ದಾರಿಯಲ್ಲಿ ಬರುತ್ತವೆ. ನಿಮ್ಮಲ್ಲಿ ಎಷ್ಟು ಮಂದಿಗೆ ಇದರ ಅನುಭವವಾಗಿದೆ? ನೀವು ಏನನ್ನೆಲ್ಲಾ ಬಯಸುವಿರೋ, ಅದೆಲ್ಲವೂ ನಿಜವಾಗುತ್ತವೆ. ನಿಮಗೆ ಏನೋ ಬೇಕು ಮತ್ತು ಅದೆಲ್ಲವೂ ಪ್ರಕಟವಾಗುತ್ತದೆ. ಅಷ್ಟೇ! ನಿಮಗೇನು ಬೇಕು ಅದು ನಿಮ್ಮ ಬಳಿಗೆ ಬರುತ್ತದೆ; ಅದು ನಮ್ಮ ಪಥದಲ್ಲಿರುವ ಸೌಂದರ್ಯವಾಗಿದೆ.

ಕೆಲವೊಮ್ಮೆ, ನಾವು ಸ್ವಲ್ಪ ತುಂಟತನವನ್ನು ಕೂಡಾ ಮಾಡಬೇಕು; ಅತಿಯಾಗಿ ಗಂಭೀರವಾಗಬಾರದು. ಈ ಸುಂದರ ಜ್ಞಾನವು ಬಹಳ ಆಳವಾಗಿದೆ, ಆದರೂ ಇದನ್ನು ವಿನೋದವಾಗಿ ತೆಗೆದುಕೊಳ್ಳಬೇಕು; ಅಂದರೆ ಅತಿಯಾದ ಗಂಭೀರತೆಯಿಂದಲ್ಲ.

ಅದಕ್ಕಾಗಿಯೇ ಇದು ಲೀಲೆ ಎಂದು ಕರೆಯಲ್ಪಡುವುದು, ಅಂದರೆ ಆಟ ಅಥವಾ ನಾಟಕ ಎಂದರ್ಥ. ಇದು ದೇವರ ಆಟ ಎಂದು ಕರೆಯಲ್ಪಡುವುದು; ರಾಮ ಲೀಲೆ, ಕೃಷ್ಣ ಲೀಲೆ.

ಹೀಗೆ, ಸಂಪೂರ್ಣ ವಿಶ್ವವು ಪ್ರಜ್ಞೆಯ ಒಂದು ಆಟ ಮತ್ತು ಪ್ರದರ್ಶನವಾಗಿದೆ; ದೇವರ ಆಟ. ಜೀವನ ಕೂಡಾ ಒಂದು ಆಟವಾಗಿದೆ; ಅದೊಂದು ನಾಟಕವಾಗಿದೆ, ಒಂದು ಯುದ್ಧ ಅಥವಾ ಹೋರಾಟವಲ್ಲ. ನೀವದನ್ನು ನೆನಪಿನಲ್ಲಿಡಬೇಕು.

ಹೇಗಾದರೂ, ಕೊನೆಯಲ್ಲಿ ಆಟವು ಮುಗಿಯುವುದು ಮತ್ತು ಎಲ್ಲರೂ ಸಾಯುವರು. ಎಲ್ಲರೂ ಸಾಯಲಿದ್ದಾರೆ. ಕೆಲವು ಸಲ ಸುತ್ತು ಹಾಕುತ್ತಾ, ಒಂದಲ್ಲ ಒಂದು ದಿನ ಎಲ್ಲರೂ ಪ್ರಕಾಶದೊಂದಿಗೆ ವಿಲೀನವಾಗುವರು. ಆದುದರಿಂದ, ಜೀವನವು ಆಳವಾಗಿದೆ ಮತ್ತು ಅದೇ ಸಮಯದಲ್ಲಿ, ಮೋಜು, ಆನಂದ ಮತ್ತು ಲೀಲೆ; ಇವೆರಡೂ ಆಗಿದೆ.

ಪ್ರಶ್ನೆ: ಪ್ರೀತಿಯ ಗುರುದೇವ, ನಾವೊಂದು ಮಾಹಾಭಾರತದಲ್ಲಿ ಸಿಲುಕಿಹಾಕಿಕೊಂಡಿರುವೆವೇ ಎಂಬುದನ್ನು ನಾವು ತಿಳಿಯುವುದು ಹೇಗೆ? ಅದರಿಂದ ನಾವು ಹೊರಬರುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಇದು, ’ನನಗೆ ಛಳಿಯಾದರೆ ನನಗೆ ತಿಳಿಯುವುದು ಹೇಗೆ?’ ಎಂದು ಕೇಳುವಂತೆ. ನಿಮಗೆ ಛಳಿಯಾಗುವಾಗ, ನಿಮಗೆ ಛಳಿಯ ಅನುಭವವಾಗುವುದು. ಆದುದರಿಂದ, ನೀವು ಮಹಾಭಾರತದಲ್ಲಿರುವಾಗ, ಅಂದರೆ ನೀವೊಂದು ದೊಡ್ಡ ಜಗಳದ ಮಧ್ಯೆಯಿರುವಾಗ, ಅದು ಬಹಳ ಸ್ಪಷ್ಟವಾಗಿರುತ್ತದೆ, ನೀವು ನಿಮ್ಮ ನಿದ್ರೆಯನ್ನು ಕಳೆದುಕೊಳ್ಳುತ್ತೀರಿ.

ಜೀವನದಲ್ಲಿ, ಒಂದು ಹೋರಾಟವಿದೆ, ಜಗಳವಿದೆಯೆಂದು ನಿಮಗೆ ಕಾಣಿಸಿದರೆ ಮತ್ತು ಅದೊಂದು ಒಳ್ಳೆಯ ಉದ್ದೇಶಕ್ಕಾಗಿ ಆಗಿದ್ದರೆ, ಸುಮ್ಮನೆ ಎದ್ದುನಿಲ್ಲಿ ಹಾಗೂ ಅದನ್ನು ಮಾಡಿ. ಒಂದು ಹೋರಾಟವನ್ನು ಮಾಡುವುದು ಲಾಭಕರವಲ್ಲ, ಅದರಿಂದೇನೂ ಪ್ರಯೋಜನವಿಲ್ಲ ಎಂದು ನಿಮಗೆ ಅನ್ನಿಸಿದರೆ, ಆಗ ನೀವು ನಿಮ್ಮ ತಂತ್ರವನ್ನು ಬದಲಾಯಿಸಬೇಕು; ಸಿಲುಕಿಹಾಕಿಕೊಂಡಿರಬೇಡಿ ಮತ್ತು ಮುಂದೆ ಸಾಗಿ.

ಪ್ರಶ್ನೆ: ಯಾವ ಹಂತದಲ್ಲಿ ಜೀವನದ ಸೃಷ್ಟಿಯಾಗುತ್ತದೆ? ಜನಿಸುವ ಸಮಯದಲ್ಲೇ ಅಥವಾ ಅಂಡಾಣುವಿನ ಫಲೀಕರಣದ ಸಮಯದಲ್ಲೇ ಅಥವಾ ಮಧ್ಯೆಯಿರುವ ಯಾವುದಾದರೂ ಹಂತದಲ್ಲೇ?

ಶ್ರೀ ಶ್ರೀ ರವಿ ಶಂಕರ್: ಎಲ್ಲಾ ಮೂರು ಸಾಧ್ಯವಿದೆ. ಒಂದು ಆತ್ಮವು, ಗರ್ಭಧಾರಣೆಯ ಸಮಯದಲ್ಲಿ ಅಥವಾ ಐದನೆಯ ತಿಂಗಳಿನಲ್ಲಿ ಮತ್ತು ಕೆಲವು ಅಪರೂಪದ ಸಂದರ್ಭಗಳಲ್ಲಿ, ಜನನದ ಸಮಯದಲ್ಲಿ ಕೂಡಾ ಬರಬಹುದು.

ಇದೆಲ್ಲವೂ ಜನನದ ರಹಸ್ಯವೆಂದು ಕರೆಯಲ್ಪಡುತ್ತದೆ ಮತ್ತು ನಾವು ಅವುಗಳ ಬಗ್ಗೆ ಮಾತನಾಡುವ ಹಾಗಿಲ್ಲ. ಐದು ಮಹತ್ತರವಾದ ರಹಸ್ಯಗಳಲ್ಲಿ ಒಂದಾದ - ಜನನ ರಹಸ್ಯ, ಮರಣ ರಹಸ್ಯ, ಇವುಗಳನ್ನೆಲ್ಲಾ ಅತಿಯಾಗಿ ಚರ್ಚೆ ಮಾಡಬಾರದು. ಹೀಗಿದ್ದರೂ, ನೀವದನ್ನು ಅನ್ವೇಷಿಸಬಹುದು; ಅದನ್ನು ಅನ್ವೇಷಿಸಲು ನೀವು ಧ್ಯಾನದಲ್ಲಿ ಆಳಕ್ಕೆ ಹೋಗಬಹುದು.
     
ಪ್ರಶ್ನೆ: ಪ್ರೀತಿಯ ಗುರುದೇವ, ಇತರ ಗ್ರಹಗಳಲ್ಲಿ ಯಾವ ರೀತಿಯ ಜೀವಿಗಳು ಅಸ್ತಿತ್ವದಲ್ಲಿವೆ? ಅವರ ಆಧ್ಯಾತ್ಮಿಕ ಪ್ರಪಂಚವು ನಮ್ಮ ರೀತಿಯದ್ದೇ ಆಗಿದೆಯೇ?

ಶ್ರೀ ಶ್ರೀ ರವಿ ಶಂಕರ್: ಹೌದು, ನಮ್ಮ ಭೂಮಿಯಂತೆ ಹಲವಾರು ಗ್ರಹಗಳಿವೆ. ನಿಜವಾಗಿ, ನಮ್ಮ ಹಳೆಯ ಧರ್ಮಗ್ರಂಥಗಳು ಹೇಳುವುದೇನೆಂದರೆ, ವಿಶ್ವದಲ್ಲಿ; ಬೇರೆ ಬೇರೆ ಪ್ರಪಂಚದಲ್ಲಿ ನಿಮ್ಮದೇ ರೀತಿಯ ಐದು ಪ್ರತಿರೂಪಿ ಜೀವಿಗಳಿವೆಯೆಂದು.