ಭಾನುವಾರ, ಏಪ್ರಿಲ್ 14, 2013

ಸಾಧನೆಯಿ೦ದ ಪರಿವರ್ತನೆ


ಅಮೃತಬಿ೦ದು’ ಸರಣಿಯ ಬರಹಗಳು

ಹದಿನಾರನೆಯ ಕ೦ತು

ವಿಘ್ನಕ್ಕೆ ಬಾಗದಿರಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೮.೦೭.೨೦೦೩ರಂದು ಪ್ರಕಟವಾಗಿತ್ತು)

ಮುಂದಿನ ಸೂತ್ರ - "ಮಧ್ಯೇs..ವರ ಪ್ರಸವಃ".
ನೀವು ಸಾಧನೆಯಲ್ಲಿ ತೊಡಗಿರುವಾಗ ಮಧ್ಯೆ ವಿಘ್ನಗಳು ಬರುವುದು ಸಹಜ. ಅದರ ಬಗ್ಗೆ ಯೋಚನೆ ಮಾಡಬೇಡಿ. ನೀವು ಧ್ಯಾನ ಮುಂತಾದ ಸಾಧನೆಗಳನ್ನು ಮಾಡಿದರೂ ನಿಮ್ಮಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ನಿಮಗೇ ಅನ್ನಿಸಬಹುದು. ನಿಮ್ಮ ಮನೆಯವರೂ, ಮಕ್ಕಳೂ, ನಿಮ್ಮನ್ನು ನೋಡಿದವರೂ ಈ ಬಗ್ಗೆ ಟೀಕಿಸಬಹುದು. "ನೀವು ಸತ್ಸಂಗಕ್ಕೆ ಹೋಗಿ ಧ್ಯಾನ, ಸಾಧನೆ ಮಾಡಿ ಪ್ರಯೋಜನವೇನಾಯ್ತು? ಒಂದೆರಡು ತಿಂಗಳು ಸರಿಯಾಗಿದ್ದಿರಿ, ಈಗ ಮತ್ತೆ ಕೋಪ ಬರುತ್ತದೆಯಲ್ಲ, ಮತ್ತೆ ಯಥಾಪ್ರಕಾರ!" "ನಿಮ್ಮಲ್ಲೇನು ಪರಿವರ್ತನೆ ಆಗಿದೆ ಮೊದಲು ತೋರಿಸಿ. ನಾವು ಹೋಗಿ ಮಾಡೋದೇನು?" ಬೆಳೆದ ಮಕ್ಕಳು ದೊಡ್ಡವರಿಗೆ ಹಾಕುವ ಸವಾಲು ಇದೇನೇ!
ಈ ರೀತಿ ಆದರೆ ಆಶ್ಚರ್ಯ ಪಡಬೇಕಿಲ್ಲ. ಯಾರಾದರೂ ಹೀಗೆಂದಾಗ ಅಥವಾ ನಿಮಗೇ ಅನಿಸಿದಾಗಲೂ ನೀವು ಸಾಧನೆ ಮಾಡುವ ಉತ್ಸಾಹ ಕಳೆದುಕೊಳ್ಳಬೇಡಿ. ಅದನ್ನು ಸಾಧಾರಣವಾಗಿಯೇ ತೆಗೆದುಕೊಳ್ಳಿ. ಏಕೆಂದರೆ ಅದು ಮತ್ತೆ ಸರಿಹೋಗಿಬಿಡುತ್ತದೆ.
ಹಾಗೆಯೇ ಆಲಸ್ಯ ಕೂಡಾ ಬರುತ್ತೆ ಮತ್ತೆ ಹೋಗುತ್ತೆ. ಇದೂ ಕೂಡಾ ಸಹಜ. ನೋಡಿ, ನಾವು ದೇವಸ್ಥಾನಗಳಲ್ಲಿಯೂ ಶಯನೋತ್ಸವ ಮಾಡ್ತೀವಿ. ದೇವರನ್ನು ಮಲಗಿಸಿ ನಿದ್ದೆ ಮಾಡಿಸಿಬಿಡ್ತೀವಿ. ’ಅನಂತ ಶಯನ!’ ನಿಮಗೆ ಯಾವಾಗಲೂ ಆಲಸ್ಯವಿರಲು ಸಾಧ್ಯವೇ ಇಲ್ಲ. ಎಂಥಾ ಆಲಸಿ ವ್ಯಕ್ತಿ ಕೂಡಾ ಒಂದಲ್ಲ ಒಂದು ದಿನ ಲವಲವಿಕೆಯಿಂದ, ಚೇತನದಿಂದ ತುಂಬಿಬಿಟ್ಟಿರುತ್ತಾನೆ. ಹಾಗೆಯೇ ತುಂಬಾ ಸಚೇತನನಾಗಿರುವ ವ್ಯಕ್ತಿಗೂ ಕೂಡಾ ಒಂದಲ್ಲ ಒಂದು ದಿನ ಸ್ವಲ್ಪ ಆಲಸ್ಯ ಬರಬಹುದು. "ಮಧ್ಯೇs..ವರ ಪ್ರಸವಃ" ಮಧ್ಯೆ ಕೆಲವೊಮ್ಮೆ ಆ ತರಹ ವಿಘ್ನಗಳು ಬಂದರೂ ಬರಬಹುದು. ಅದು ಸಹಜ. ಸಾಧನೆಯಲ್ಲಿ ಉತ್ಸಾಹ ತುಂಬಿರಲಿ ಹಾಗೂ ಅದು ನಿರಂತರವಾಗಿರಲಿ.

* * * * *

ಪರಿಣಾಮಿಗಳಾಗಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೯.೦೭.೨೦೦೩ರಂದು ಪ್ರಕಟವಾಗಿತ್ತು)

ಗವಂತ ತುಂಬ ವಿನೋದಪ್ರಿಯ. ಅದಕ್ಕೇ ಇಷ್ಟೊಂದು ತರಹ ವೈವಿಧ್ಯತೆಯುಳ್ಳ ಪ್ರಕೃತಿ, ಪ್ರಾಣಿಗಳು, ಮನುಷ್ಯರು ಎಲ್ಲವನ್ನೂ ಸೃಷ್ಟಿ ಮಾಡಿದ್ದಾನೆ. ಈ ಪ್ರಕೃತಿ ನೋಡಿ, ಇದರಲ್ಲಿ ಎಲ್ಲವೂ ಪರಿಣಾಮಕಾರಿಯಾಗಿದೆ. ಅದೇ ಇದರಲ್ಲಿರತಕ್ಕಂಥ ರಹಸ್ಯ, ಸೌಂದರ್ಯ! ಹಾಗೇ ಆತ್ಮ ಪರಿಣಾಮಕಾರಿ. ಹಾಗೆಯೇ ನಾವು ಪರಿಣಾಮಿಗಳಾಗಿರಬೇಕು. ಹಾಗಿದ್ದರೆ ಮಾತ್ರ ನಾವು ನಮ್ಮ ಸಾಧನೆಯಲ್ಲಿ ಪ್ರಗತಿ ಹೊಂದುವುದು. ಅಕ್ಕ ಮಹಾದೇವಿಯವರು, "ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು" ಎಂದಿದ್ದಾರೆ. ನೈವೇದ್ಯ ಅಂತ ಯಾಕೆ ಹೇಳ್ತಾರೆ? ಅದು ತಿಂದ ತಕ್ಷಣ ಹೊಟ್ಟೆಯಲ್ಲಿ ಹಾಗೆಯೇ ಕೂತಿರುವುದಿಲ್ಲ ನೋಡಿ. ಈಗ ಒಂದು ಬಾಳೇಹಣ್ಣು ಬಾಯೊಳಗೆ ಹೋದ ತಕ್ಷಣವೇ ಅದು ಬದಲಾವಣೆ ಆಗುತ್ತೆ. ರಾಸಾಯನಿಕ ಮಿಶ್ರಣಗಳುಂಟಾಗಿ ಗಂಟಲಲ್ಲಿ ಬದಲಾಗಿ, ಹೊಟ್ಟೇಗೆ ಹೋಗಿ ಮತ್ತೆ ಬದಲಾಗಿ ಚಿಕ್ಕ ಕರುಳನ್ನು ಸೇರಿ, ದೊಡ್ಡ ಕರುಳಲ್ಲಿ ಹೋಗುವ ವೇಳೆಗೆ ಆ ಬಾಳೆಹಣ್ಣು ತಿಂದದ್ದು ಪೂರ್ಣ ಪರಿಣಾಮಕಾರಿಯಾಗಿರುತ್ತದೆ.
ನೈವೇದ್ಯ ಹೇಗೆ ಪರಿಣಾಮಕಾರಿಯೋ, ತಿಂದಿದ್ದೆಲ್ಲಾ ಹೇಗೆ ಪರಿವರ್ತನೆ ಆಗುತ್ತದೆಯೋ ಹಾಗೆ ಕಾಲ ಅನ್ನುವ ತತ್ವ ನಮ್ಮ ಜೀವನವನ್ನು ನುಂಗಿ ಹಾಕುತ್ತಿದೆ. ಅಂತಹ ಈ ಜೀವನದಲ್ಲಿ ನಾವು ಪರಿವರ್ತನೆಗೊಳ್ಳುತ್ತಾ, ಪರಿಣಾಮಿಗಳಾಗಬೇಕು. ಹಾಗೆ ನಮ್ಮಲ್ಲಿ ಪರಿವರ್ತನೆ ಪರಿಣಾಮ ಉಂಟಾಗುತ್ತಾ ಹೋದಂತೆ "ಪರಮ ಸುಖ"ದ ಪ್ರಾಪ್ತಿಯಾಗುತ್ತದೆ. ಅದಕ್ಕೇ ಅಕ್ಕನವರು ಹೇಳಿರುವುದು - ಪರಿಣಾಮಿಗಳಾಗಬೇಕೆಂದು.

* * * * *

ಪರಿವರ್ತನಶೀಲತೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೦.೦೭.೨೦೦೩ರಂದು ಪ್ರಕಟವಾಗಿತ್ತು)

ಜೀವನದಲ್ಲಿ ಪರಿವರ್ತನಶೀಲರಾಗಬೇಕು, ಪರಿಣಾಮಿಗಳಾಗಿರಬೇಕು. ಆಗಲೇ ನಾವು ನಮ್ಮ ಸಾಧನೆಯಲ್ಲಿ ಮುಂದುವರಿಯಲು ಸಾಧ್ಯ.
"ಪರಿಣಾಮಿಗಳಲ್ಲದವರಲಿ ನೈವೇದ್ಯವನೊಲ್ಲೆಯಯ್ಯಾ ನೀನು..." ಕಲ್ಲನ್ನು ಯಾರೂ ತಿನ್ನುವುದಕ್ಕೆ ಹೋಗಲ್ಲ, ಯಾಕೆ? ಕಲ್ಲು ಏನೂ ಪರಿಣಾಮಹೊಂದುವುದಿಲ್ಲ! ಮರಳು? ಯಾವ ರಾಸಾಯನಿಕ ಕ್ರಿಯೆಗೂ ಒಳಗಾಗುವುದೇ ಇಲ್ಲ. ’ಮರಳು’ ನೈವೇದ್ಯವಾಗುವುದಿಲ್ಲ. ಹಾಗೆ ಜೀವನದಲ್ಲಿ ನೀನು ಮರಳಿನಂತಿದ್ದರೆ ಏನೂ ಪ್ರಯೋಜನವಿಲ್ಲ. ಜೀವನದಲ್ಲಿ ಹಣ್ಣಿನಂತೆ, ಪತ್ರದಂತಿರು, ನೀನು ನೈವೇದ್ಯವಾಗಿರು.
’ಪತ್ರಂ ಪುಷ್ಪಂ ಫಲಂ ತೋಯಂ ಯೋಮೇ ಭಕ್ತ್ಯಾ ಪ್ರಯಚ್ಛತಿ...’
ನಿನ್ನ ಜೀವನ ಹೇಗಾದರೂ ಇರಲಿ, ಪತ್ರವಾಗಿರಲಿ, ನೀರಾಗಿರಲಿ, ಫಲವಾಗಿರಲಿ, ಹೂವಾಗಿರಲಿ ಅದನ್ನು ಭಕ್ತಿಯಿಂದ ಸಮರ್ಪಣೆ ಮಾಡು... ನಿನ್ನ ಜೀವನವೇ ಫಲ. ಸುಮ್ಮನೆ ಅಂಗಡಿಯಿಂದ ಬಾಳೆಹಣ್ಣು ತಂದು ದೇವರಿಗೆ ಸಮರ್ಪಣೆ ಮಾಡುವುದಲ್ಲ, ನೀನೇ ’ನೈವೇದ್ಯ’ವಾಗು. ನೀನು ಯಾವಾಗ ಪರಿಣಾಮಕಾರಿಯಾಗಿರುತ್ತೀಯೋ ಆಗ ನೀನು ಅರ್ಹನಾಗಿರುತ್ತೀಯ!
ಹಳೇದು, ನಿನ್ನೇದು, ಮೊನ್ನೇದು, ಹತ್ತು ವರ್ಷದ ಹಿಂದಿನದನ್ನೆಲ್ಲ ತಲೆಯಲ್ಲಿ ಹೊತ್ತುಕೊಂಡು ಕುಳಿತುಕೊಂಡರೆ ’ಮರಳು’ ನೀನು.... ಮರಳು ಜಡ! ಪ್ರತಿನಿತ್ಯ ನಿತ್ಯನೂತನ ಜೀವನವನ್ನು ನಾವು ಅನುಭವಿಸುತ್ತಿರಬೇಕು... ಅದೇ ನೈವೇದ್ಯ!!

* * * * *

ಶರೀರ ಶೋಷಣೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೧.೦೭.೨೦೦೩ರಂದು ಪ್ರಕಟವಾಗಿತ್ತು)

’ಶರೀರ ವೃತ್ತಿರ್ ವ್ರತಂ’ - ಇದು ಮುಂದಿನ ಸೂತ್ರ. ಮುಂದುವರೆದ ಸಾಧಕರಿಗೆ ಹಾಗೂ ಕೆಲವರು ತೀರಾ ಹಠದಿಂದ ವ್ರತ, ನಿಯಮ, ಉಪವಾಸ ಮಾಡಿ ಶರೀರವನ್ನು ಶೋಷಣೆಗೀಡುಮಾಡಿಕೊಳ್ಳುತ್ತಿರುತ್ತಾರಲ್ಲ ಅಂಥವರಿಗೆ.
ಪ್ರಪಂಚದಲ್ಲಿ ಜನ ಬೇರೆಯವರಿಗೆ ಕಷ್ಟ ಕೊಡ್ತಾರೆ, ತಮಗೆ ತಾವು ಕಷ್ಟ ಕೊಟ್ಟುಕೊಳ್ಳುತ್ತಾರೆ. ತುಂಬ ಜನ ವಿಪರೀತ ಉಪವಾಸ ಮಾಡೋದು, ತಮ್ಮ ಶರೀರಕ್ಕೆ ಪೀಡೆ ಮಾಡಿಕೊಳ್ಳುವುದು ಮಾಡ್ತಾರೆ. ಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ ’ಶರೀರದಲ್ಲಿ ನಾನಿದ್ದೀನಿ. ನನಗೇ ಹಿಂಸೆ ಕೊಡ್ತಾರೆ ಇವರು, ಈ ಮೂಢ ಜನರು!’ ಅಂತ.
ನಾವು ಧರ್ಮ ಅನ್ನುವ ಹೆಸರಿನಲ್ಲಿ ನಮ್ಮನ್ನು ನಾವು ಶೋಷಣೆ ಮಾಡಿಕೊಳ್ತೀವಿ. ನಮ್ಮ ಶರೀರಕ್ಕೆ ತೀರಾ ತೊಂದರೆ ಉಂಟುಮಾಡಿಕೊಳ್ಳುತ್ತಿರುತ್ತೀವಿ. ವ್ಯಕ್ತಿ ನೋಡಿದರೆ ಗಾಳಿಗೆ ಹಾರಿಕೊಂಡು ಹೋಗುವ ಹಾಗಿರುತ್ತಾರೆ. ಸೋಮವಾರ ಶಿವನಿಗಾಗಿ ಉಪವಾಸ, ಗುರುವಾರ ಗುರುವಿಗೆ, ಶುಕ್ರವಾರ ದೇವಿಗೋಸ್ಕರ, ಶನಿವಾರ ರಾಮನಿಗಾಗಿ, ಆಂಜನೇಯನಿಗಾಗಿ, ಈ ರೀತಿ... ಉಪವಾಸ ಮಾಡೋದು! ಏನು, ಅನ್ನ ಒಂದು ತಿನ್ನಕೂಡದು ಅಷ್ಟೆ. ಬೇರೆ ಎಲ್ಲವನ್ನೂ ತಿನ್ನೋದು ಅಥವಾ ತೀರಾ ಉಪವಾಸ ಮಾಡಿ ಶರೀರವನ್ನು ದಂಡಿಸುವುದು. ಈ ಶರೀರವನ್ನು ನೀನು ದಂಡಿಸುತ್ತಾ ಇದರಲ್ಲಿರತಕ್ಕಂಥ ವೃತ್ತಿಗಳಿಗೆ ಆಘಾತ ಉಂಟು ಮಾಡ್ತಾ ಇದ್ದರೆ ’ಶಿವತುಲ್ಯೋ ಜಾಯತೆ...’ ಇಂತಹ ಆತ್ಮಪ್ರಕಾಶ ಉಂಟಾಗುವುದು ಹೇಗೆ ಸಾಧ್ಯ?
ಎಷ್ಟೋ ಜನ ಸಾಧಕರನ್ನು, ಸಾಧುಗಳನ್ನು ನೋಡಿ. ಅವರ ಮುಖದಲ್ಲಿ ಒಂದು ಪ್ರಸನ್ನತೇನೋ, ಶಾಂತಿಯೋ, ಶೋಭೇನೋ, ಮುಗ್ಧತೇನೋ ಕಾಣಿಸುವುದಿಲ್ಲ, ಯಾಕೆ? ಅವರು ಶರೀರದ ವೃತ್ತಿಯನ್ನು ಪೀಡೆ ಮಾಡಿಕೊಳ್ಳುತ್ತಿರುತ್ತಾರೆ. ಶರೀರವನ್ನು ದಂಡಿಸಿಕೊಳ್ಳುತ್ತಿರುತ್ತಾರೆ.

* * * * *

ವ್ರತ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೨.೦೭.೨೦೦೩ರಂದು ಪ್ರಕಟವಾಗಿತ್ತು)

’ಶರೀರ ವೃತ್ತಿರ್ ವ್ರತಂ’
ಎರಡು ತರಹೆಯ ಜನ ಇರುತ್ತಾರೆ. ಒಂದು: ಶರೀರವನ್ನೇ ಸರ್ವಸ್ವ ಎಂದು ತಿಳಿದುಕೊಂಡು ಅದರ ಪೋಷಣೆಯಲ್ಲೇ ಜೀವನವೆಲ್ಲಾ ಕಳೆದು ಬಿಡುವುದು. ಇನ್ನೊಂದು: ಈ ಶರೀರವನ್ನು ತೀರಾ ಸತಾಯಿಸಿ ಅದನ್ನು ದಂಡಿಸುವುದು ಹಾಗೂ ಅದರಲ್ಲೇ ತೃಪ್ತಿಪಡುವುದು ಇಂತಹವರಿರ್ತಾರೆ. ಈ ಎರಡೂ ತರಹೆಯ ಜನರಿಗೆ ’ಆತ್ಮಜ್ಞಾನ’ ಉಂಟಾಗುವುದು ಸಾಧ್ಯವೇ ಇಲ್ಲ. ಶರೀರ ಅಂದ ಮೇಲೆ ಅದಕ್ಕೆ ಹಸಿವಾಗುತ್ತಪ್ಪ, ಬಾಯಾರಿಕೆ ಆಗುತ್ತೆ, ನಿದ್ದೆ ಬರುತ್ತೆ, ಎಲ್ಲಾ ಮಾಡಬೇಕು ತಾನೆ?
’ಶರೀರ ವೃತ್ತಿರ್ ವ್ರತಂ’. ವ್ರತ ಅಂದರೇನು? ಯಾವುದನ್ನು ಇಷ್ಟಪಟ್ಟು, ಪ್ರೀತಿಯಿಂದ ಮಾಡ್ತೀವೋ ಅದು ವ್ರತ. ’ಅಯ್ಯೋ ಮಾಡಬೇಕಲ್ಲಪ್ಪಾ’ ಅಂತ ಮಾಡೋದು ವ್ರತ ಅಲ್ಲ. ವ್ರತ ಯಾವುದು? ಎಲ್ಲಿ ಮನಸ್ಸು ಮಗ್ನವಾಗಿ ಸಂತೋಷದಿಂದ ತುಂಬಿಬಿಡುತ್ತದೋ ಅದು. ಮನೆಯಲ್ಲಿ ಶುಭಕಾರ್ಯ, ಸಂತೋಷ ಸಮಾರಂಭವಿದ್ದಾಗ, ಮನೆಗೆ ಬಂದವರನ್ನೆಲ್ಲಾ ನೋಡಿಕೊಳ್ಳುವುದರಲ್ಲೇ ತೃಪ್ತಿಯಾಗಿ ಬಿಡುತ್ತೆ. ಅವತ್ತು ಮನೆಯವರು ಸರಿಯಾಗಿ ಊಟ ಮಾಡಿರುವುದಿಲ್ಲ, ಮಾಡಲು ಮನಸ್ಸಾಗಲ್ಲ! ಮನಸ್ಸಂತೋಷವಾಗಿದ್ದಾಗ, ಪ್ರೇಮದಿಂದ ಮನಸ್ಸು ತುಂಬಿದ್ದಾಗ ಮಾಡತಕ್ಕಂಥಹುದು ವ್ರತ. ಈ ಸೂತ್ರವನ್ನು ಮುಂದೆ ಇನ್ನೂ ಚೆನ್ನಾಗಿ ತಿಳಿದುಕೊಳ್ಳೋಣ.

* * * * *

ಸೂಕ್ಷ್ಮ ಸಂವೇದನೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೩.೦೭.೨೦೦೩ರಂದು ಪ್ರಕಟವಾಗಿತ್ತು)

"ಶರೀರ ವೃತ್ತಿರ್ ವ್ರತಂ"
ಈ ಶರೀರದಲ್ಲಿ ಉಂಟಾಗತಕ್ಕಂಥ ವೃತ್ತಿಗಳನ್ನು ಆದರದಿಂದ, ಪ್ರೇಮದಿಂದ ನೋಡತಕ್ಕಂಥಹುದೇ ವ್ರತ. ಹಸಿವಾಯ್ತಾ...? ಈ ಶರೀರದಲ್ಲಿರುವ ಭಗವಂತನೇ ’ಸ್ವಲ್ಪ ಊಟ ಬೇಕು’ ಅಂತ ಹೇಳುತ್ತಿದ್ದಾನೆ - ಎನ್ನುವ ಭಾವದಿಂದ ಊಟ ಕೊಡೋಣ, ಏಕೆಂದರೆ ಈ ಶರೀರ ನನ್ನ ಹತ್ತಿರದಲ್ಲಿದೆ. ಹತ್ತಿರದಲ್ಲಿದೆ, ಎಂಬ ಕಾರಣದಿಂದ ’ಈ’ ಶರೀರವೇ ’ನಾನು’ ಆಗುವುದಿಲ್ಲ. ಇದು ಹತ್ತಿರವಿರುವುದರಿಂದ ಇದರ ಸುಖ-ದುಃಖಗಳು, ಕಷ್ಟ-ಸುಖಗಳು ಹೆಚ್ಚು ಅನುಭವಕ್ಕೆ ಬರುತ್ತವೆ. ಹಾಗೆಯೇ ಮತ್ತೊಂದು ಶರೀರ ನನ್ನಿಂದ ದೂರ ಇದೆ ಎನ್ನುವ ಕಾರಣದಿಂದ ಅದು ’ನಾನಲ್ಲ’, ಬೇರೆಯದು ಎನಿಸುವುದಿಲ್ಲ - ಸೂಕ್ಷ್ಮತೆಯುಳ್ಳವರಿಗೆ.
ನೀವು ಎಲ್ಲಾದರೂ ಹೋಗುತ್ತಿರುತ್ತೀರ, ದಾರಿಯಲ್ಲಿ ಯಾರಿಗೋ ಅಪಘಾತವಾದುದನ್ನು ನೋಡುತ್ತೀರ ಎಂದುಕೊಳ್ಳೋಣ. ತಕ್ಷಣ ’ಅಯ್ಯೋ ದೇವರೇ...’ ಎಂದು ಮಿಡುಕಾಡುತ್ತೀರಿ, ಏನೋ ನಿಮಗೇ ಆದ ಹಾಗೆ ಎನಿಸಿಬಿಡುತ್ತೆ!
ಹೆಚ್ಚು ಸೂಕ್ಷ್ಮವಾದಷ್ಟೂ ವ್ಯಕ್ತಿಗೆ ಬೇರೆಯವರ ಕಷ್ಟ ಸುಖಗಳು ’ತನ್ನದೇ’ ಎನ್ನುವ ಭಾವನೆ ಉಂಟಾಗುತ್ತೆ. ಹಾಗೇನೇ ’ಈ’ ಶರೀರದಲ್ಲಿ ಉಂಟಾಗತಕ್ಕಂಥ ವೃತ್ತಿಗಳು, ಆಗುಹೋಗುಗಳು ನನ್ನದಲ್ಲ, ಹಾಗಿರುವಾಗ ಅದನ್ನು ದಂಡಿಸುವ ಅಧಿಕಾರವೂ ನನಗಿಲ್ಲ ಎಂದುಕೊಳ್ಳಿ. ’ಶರೀರ ವೃತ್ತಿರ್ ವ್ರತಂ’ ಆದ್ದರಿಂದ ಶರೀರಕ್ಕೆ ತೀರಾ ತೊಂದರೆಯುಂಟುಮಾಡಬೇಡಿ, ಸತಾಯಿಸಬೇಡಿ ಅನ್ನುವ ದೃಷ್ಟಿಯಿಂದ ಈ ಸೂತ್ರವನ್ನು ಹೇಳಿರುತ್ತಾರೆ.

* * * * *

ಜಪ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೪.೦೭.೨೦೦೩ರಂದು ಪ್ರಕಟವಾಗಿತ್ತು)

’ಕಥಾ ಜಪಃ’ ಯಾವುದು ನಮ್ಮ ಮನಸ್ಸಿನಲ್ಲಿ ಹುಟ್ಟುವುದರಿಂದ ಮನಸ್ಸು ಪ್ರಸನ್ನವಾಗುತ್ತದೋ ಅದು ಜಪ. ’ಜ’ ಎಂದರೆ ಹುಟ್ಟುವುದು, ’ಪ’ ಎಂದರೆ ಪಾಲನೆ ಮಾಡುವುದು. ಯಾವುದು ಮನಸ್ಸಿನಲ್ಲಿ ಹುಟ್ಟಿದಾಗ ಜೀವನದ ಪಾಲನೆಯಾಗುತ್ತದೆಯೋ, ಆಧ್ಯಾತ್ಮದ ಉತ್ಥಾನವಾಗುತ್ತದೆಯೋ ಅದು ಜಪ. ನಾವು ಆಡುವಂತಹ ಪ್ರತಿಯೊಂದು ಮಾತೂ ನಮ್ಮ ಜೀವನವನ್ನು ಊರ್ಧ್ವಗಾಮಿಯಾಗಿ ತೆಗೆದುಕೊಂಡು ಹೋದಾಗ ನಮ್ಮ ಪ್ರತಿಯೊಂದು ಮಾತೂ ಜಪವಾಯಿತು. ಬೇರೆ ಹಾಳೂಮೂಳೂ ವಿಚಾರ ತಲೆಗೆ ಬರದಿರಲಿ, ಜಪ ಮಾಡಿ. ಆಗ ನೀವು ಮೇಲೇರುತ್ತೀರ, ಶರೀರದಲ್ಲಿ ಚೈತನ್ಯದ ಸಂಚಾರವಾಗುತ್ತೆ. ಅದಕ್ಕಾಗಿ ಜಪ ಮಾಡಿ ಅಂತ ಹೇಳ್ತಾರೆ. ಯಾವ ಶಬ್ದವನ್ನು ಮತ್ತೆ ಮತ್ತೆ ಹೇಳುವುದರಿಂದ ಮನಸ್ಸಿನಲ್ಲಿ, ಶರೀರದಲ್ಲಿ ಊರ್ಧ್ವಗಾಮಿ ಚೇತನ, ಪ್ರೇಮಮಯಿ ಚೇತನ ಉಂಟಾಗುತ್ತದೆಯೋ ಅದು ಜಪ.
ಯಾವುದರಲ್ಲಿ ಮನಸ್ಸು ತಲ್ಲೀನವಾಯ್ತೋ, ಪ್ರೀತಿಯುಂಟಾಯ್ತೋ ಅದೇ ಮತ್ತೆ ಮತ್ತೆ ಬರುತ್ತಾ ಇರುತ್ತೆ, ಅನಾಯಾಸವಾಗಿ. ಇದಕ್ಕೇ ಜಪ ಅನ್ನುತ್ತೀವಿ. ಹಾಗಲ್ಲದೆ... ತಲೆಯಲ್ಲಿ ಬೇರೆ ಏನೋ ಓಡ್ತಾ ಇರುತ್ತೆ, ಮೇಲೆ ಮೇಲೆ ರಾಮ ರಾಮ ಅಥವಾ ಶಿವ ಶಿವಾ ಅಂತ ಹೇಳುತ್ತಾ ಇರೋದು... ಭಾವಕ್ಕೂ ಶಬ್ದಕ್ಕೂ ಯಾವುದೇ ಸಂಬಂಧವಿಲ್ಲದಿದ್ದಾಗ ಅದು ಜಪವಾಗುವುದಿಲ್ಲ. ಭಾವಪೂರ್ಣವಾಗಿ, ಅರ್ಥಪೂರ್ಣವಾಗಿ ಮತ್ತೆ ಮತ್ತೆ ಸಹಜವಾಗಿ ಪುನರುಕ್ತಿಯಾಗತಕ್ಕಂಥ ಶಬ್ದವನ್ನು ಜಪ ಅನ್ನುತ್ತೀವಿ.

* * * * *

ಸಹಜತೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೫.೦೭.೨೦೦೩ರಂದು ಪ್ರಕಟವಾಗಿತ್ತು)

’ಯತೀನಾಂ ಯಥ ಚಿತ್ತಾನಾಂ ಶಬ್ದಂ ಅರ್ಥಾನೊ ಧಾವತೆ’ ಎಂದರೆ ನಮ್ಮ ಚೇತನ ಪೂರ್ಣವಾಗಿ ಪ್ರಕಾಶವಾಗಿದ್ದಾಗ ಹೇಳಿದ ಒಂದು ಶಬ್ದದಲ್ಲಿ, ಮಾತಿನಲ್ಲಿ ಬೆಲೆಯಿರುತ್ತದೆ. ಸುಮ್ಮನೆ ಯಾರೋ ನಿಮಗೆ ’ನನಗೆ ನಿಮ್ಮ ಮೇಲೆ ತುಂಬ ಪ್ರೀತಿ ಇದೆ’ ಎನ್ನುತ್ತಾರೆ; ಬಾಯಿ ಉಪಚಾರದ ಮಾತಾದರೆ ಪ್ರಯೋಜನವಿಲ್ಲ. ಸಿನಿಮಾದಲ್ಲಿ ಅಭಿನಯ ಮಾಡೋರೆಲ್ಲ ಬೇಕಾದಷ್ಟು ಪ್ರೀತಿ, ಪ್ರೇಮ ತೋರಿಸ್ತಾರೆ. ಆದರೆ ಒಳಗಡೆ ಹನಿಯಷ್ಟೂ ಪ್ರೇಮ ಇರಲ್ಲ. ಪ್ರೀತಿ ಇರಲ್ಲ. ನಾಟಕ!
’ಕಥಾ ಜಪಃ’ ಆಡುವ ಪ್ರತಿಯೊಂದು ಶಬ್ದವೂ ಪ್ರೇಮಪೂರ್ವಕವಾಗಿ ಬರುತ್ತದೆ. ಇದು ಸಿದ್ಧರ ಲಕ್ಷಣ. ಇನ್ನೊಂದು ದೃಷ್ಟಿಯಿಂದ ನೋಡಿದರೆ ಈ ಸೂತ್ರಗಳೆಲ್ಲವೂ ಸಿದ್ಧರ ಲಕ್ಷಣ, ಅಂದರೆ ಸಾಧನೆ ಸಂಪೂರ್ಣವಾಗಿ ಯಾರದ್ದಾಗಿದೆಯೋ, ಅವರ ಲಕ್ಷಣ ಅಂತ ಹೇಳಬಹುದು. ಅವರು ಶರೀರದಲ್ಲಿ ಆಗತಕ್ಕಂತಹ ವೃತ್ತಿಗಳನ್ನು ವ್ರತವನ್ನಾಗಿ ಆದರಿಸುತ್ತಾರೆ. ಅವರು ಶರೀರವನ್ನು ದೂಷಣೆ ಮಾಡುವುದಿಲ್ಲ ಮತ್ತು ಅವರು ಆಡತಕ್ಕಂಥ ಪ್ರತಿಯೊಂದು ಮಾತಿನಲ್ಲಿಯೂ ಪೂರ್ಣವಾಗಿ ಪ್ರೇಮವೇ ತುಂಬಿರುತ್ತದೆ.

* * * * *

ಪ್ರೀತಿಯಿರಲಿ ಮಾತಿನಲಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೬.೦೭.೨೦೦೩ರಂದು ಪ್ರಕಟವಾಗಿತ್ತು)

’ಕಥಾ ಜಪಃ’
ನಮ್ಮ ಜೀವನದಲ್ಲಿ ನಾವಾಡುವ ಸಾಕಷ್ಟು ಮಾತುಗಳೆಲ್ಲ ನಾಟಕೀಯವಾಗಿರುತ್ತವೆ. ಔಪಚಾರಿಕವಾದ ಜೀವನ ಆಗಿಬಿಟ್ಟಿದೆ. ಜೀವನದಲ್ಲಿ ಆಳವೇ ಬರ್ತಾ ಇಲ್ಲ ಜನಕ್ಕೆ. ’ಏನ್ರೀ ಹೇಗಿದ್ದೀರ, ಚೆನ್ನಾಗಿದೀರ?’ ಅಂತ ಕೇಳೋದರಲ್ಲೂ ಜೀವ ಇರಲ್ಲ.
ಮೇಲೆ ಮೇಲೆ ಕೇಳಿರುತ್ತಾರೆ, ಔಪಚಾರಿಕವಾಗಿ. ಮತ್ತೆ ಮತ್ತೆ ಕೇಳಿದ್ದನ್ನೇ ಕೇಳ್ತಾ ಇರ್ತಾರೆ. ಇವರು ಕೇಳಿದ್ದೂ ಜ್ಞಾಪಕ ಇರಲ್ಲ. ಅವರು ಹೇಳಿದ್ದನ್ನೂ ಸರಿಯಾಗಿ ಕೇಳಿಸಿಕೊಂಡಿರಲ್ಲ! ಹೆಚ್ಚು ಕಮ್ಮಿ ಎಲ್ಲಾ ಉತ್ಸವಗಳಲ್ಲಿ, ಸಮಾರಂಭದಲ್ಲಿ ಇದೇ ಆಗುತ್ತೆ. ಔಪಚಾರಿಕವಾದ ಮಾತುಕತೆ, ಔಪಚಾರಿಕವಾದ ವ್ಯವಹಾರ, ಔಪಚಾರಿಕವಾದ ಜೀವನ....!!
ಆದರೆ, ಒಬ್ಬ ಜ್ಞಾನಿಯ ಜೀವನ ಆ ತರಹ ಇರುವುದಿಲ್ಲ. ಜ್ಞಾನಿ ಒಂದು ಮಾತು ಕೇಳಿದರೆ ಅದರಲ್ಲಿ ಪೂರ್ಣಪ್ರೇಮ ತುಂಬಿರುತ್ತೆ. ಕಥಾ ಜಪ... ಆಡತಕ್ಕಂಥ ಪ್ರತಿಯೊಂದು ಮಾತೂ ಜಪಮಯವಾಗಿರುತ್ತದೆ. ಅದರಲ್ಲಿ ಸಹಜತೆ, ಸತ್ಯ ತುಂಬಿರುತ್ತೆ, ಪ್ರೇಮ ತುಂಬಿರುತ್ತೆ. ಹಾಗೆ ನೀವು ಆಡತಕ್ಕಂಥ ಪ್ರತಿಯೊಂದು ಮಾತನ್ನೂ ಜಾಗರೂಕವಾಗಿ ಆಡಿ, ಪ್ರೇಮಪೂರ್ವಕವಾಗಿ, ನೈಜತೆಯಿಂದ ಆಡಿ. ಏನೋ ಸುಮ್ಮನೆ ಉಪಚಾರಕ್ಕೆ ಅಂತ ಮಾತನಾಡಬೇಡಿ. ಅದನ್ನು ’ಕಥಾ ಜಪ’ ಎಂದು ಭಾವಿಸಿ.

* * * * *

ದಾ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೭.೦೭.೨೦೦೩ರಂದು ಪ್ರಕಟವಾಗಿತ್ತು)

’ದಾನಂ ಆತ್ಮಜ್ಞಾನಂ’
ಈ ಪ್ರಪಂಚದಲ್ಲಿ ನಾವಿರಬೇಕಾದರೆ ’ಆದಾನ-ಪ್ರದಾನ’ ಆಗುತ್ತಲೇ ಇರಬೇಕು, ಆಗುತ್ತಲೇ ಇರುತ್ತದೆ. ಉಸಿರು ಒಳಕ್ಕೆ ತೆಗೆದುಕೊಳ್ತೀವಿ. ಅಲ್ಲಿಯೇ ಇಟ್ಟುಕೊಳ್ಳಲಾಗುವುದಿಲ್ಲ. ಅದನ್ನು ಹೊರಗೆ ಬಿಟ್ಟು ಮತ್ತೆ ತೆಗೆದುಕೊಳ್ಳಬೇಕಾಗುತ್ತದೆ. ಹಾಗೆಯೇ ನಾವು ಪ್ರತಿಯೊಬ್ಬರೂ ನಮ್ಮಿಂದ ಬೇರೆಯವರಿಗೆ ಏನೋ ಕೊಡುತ್ತಿರುತ್ತೀವಿ. ಬೇರೆಯವರಿಂದ ಏನೋ ತೆಗೆದುಕೊಳ್ಳುತ್ತಿರುತ್ತೀವಿ. ಸ್ಥೂಲವಾಗಿಯೋ, ಸೂಕ್ಷ್ಮದಲ್ಲಿಯೋ ’ಆದಾನ-ಪ್ರದಾನ’ ಸತತವಾಗಿ ನಡೆಯುತ್ತಲೇ ಇರುತ್ತೆ. ಆದರೆ ಬೇರೆಲ್ಲಕ್ಕಿಂತ ಉತ್ತಮವಾದ ದಾನ, ಶ್ರೇಷ್ಠವಾದ ಕೊಡುಗೆ ಯಾವುದು? ಅದು ’ಆತ್ಮಜ್ಞಾನ’.
ಎಷ್ಟೋ ಸಲ ಜನರು ಮದುವೆ ಮುಂತಾದ ಸಮಾರಂಭಗಳಲ್ಲಿ ಯಾರು ಎಷ್ಟು ಬೆಲೆಯ ಉಡುಗೊರೆ ಕೊಟ್ಟಿದ್ದಾರೆ ಅಂತ ನೋಡಿಕೊಂಡು, ಅವರಿಗೆ ಅದೇ ರೀತಿ ಉಡುಗೊರೆ ಕೊಡುತ್ತಾರೆ. ಇದು ದಾನ ಅಲ್ಲ.
ದಾನ ಇಲ್ಲದೆ ನಮ್ಮ ದೇಶದ ಸಂಸ್ಕೃತಿಯಲ್ಲಿ ಯಾವುದೇ ಕೆಲಸ ನಡೆಯುವುದಿಲ್ಲ. ಒಂದು ಶುಭಕಾರ್ಯವಾಗಲೀ, ಅಶುಭ ಕಾರ್ಯವಾಗಲೀ ದಾನ ಕೊಡ್ತೀವಿ. ಕೊಡುವುದು, ಹಂಚಿಕೊಳ್ಳುವುದು ನಮ್ಮ ಸಂಸ್ಕೃತಿಯ ಬುನಾದಿ ಹಾಗೂ ಒಂದು ಅವಿಭಾಜ್ಯ ಅಂಗವಾಗಿದೆ. ಒಂದು ಹಬ್ಬ ಹುಣ್ಣಿಮೆ ಅಂದರೆ ಕೊಡುಗೆ ಇದ್ದೇ ಇರುತ್ತೆ. ಅಕ್ಕಪಕ್ಕದವರಿಗೋ, ಸಮೀಪದ ಬಂಧುಬಾಂಧವರಿಗೋ ಯಾರಿಗಾದರೂ ಏನಾದರೂ ಕೊಡಬೇಕು ಅನ್ನುವ ಪದ್ಧತಿ ಇದೆ. ಇದರಲ್ಲಿ ಬಹಳ ಶ್ರೇಯಸ್ಸಿದೆ, ರಹಸ್ಯವೂ ಇದೆ.