ಗುರುವಾರ, ಏಪ್ರಿಲ್ 18, 2013

ಯೋಗ ವಿಜ್ಞಾನದ ಒಂದು ವಿಚಾರ ಸಂಕಿರಣ


ಎಪ್ರಿಲ್ ೧೮, ೨೦೧೩
ಕಾಲ್ಗರಿ, ಕೆನಡಾ

ಶ್ರೀ ಶ್ರೀಯವರು ೨೦೦ಕ್ಕೂ ಹೆಚ್ಚು ವೈದ್ಯಕೀಯ ವೃತ್ತಿಪರರನ್ನು, ಕಾಲ್ಗರಿಯ ವೈದ್ಯಕೀಯ ಮಂಡಲದ ವಿಚಾರ ಸಂಕಿರಣದ ಮೂಲಕ, ಆರೋಗ್ಯ ವಿಜ್ಞಾನಗಳ ಕೇಂದ್ರದ ಲಿಬಿನ್ ಥಿಯೇಟರಿನಲ್ಲಿ ಸಂಬೋಧಿಸಿ ಮಾತನಾಡಿದರು. 

ಹಾಜರಾಗಿದ್ದ ಆರೋಗ್ಯ ಪೂರೈಕೆದಾರರು ವಿವಿಧ ರೀತಿಯ ಆರೋಗ್ಯ ವೃತ್ತಿಗಳವರಾಗಿದ್ದರು; ವೈದ್ಯರು, ದಾದಿಗಳು, ಸಾಮಾಜಿಕ ಕಾರ್ಯಕರ್ತರು, ಮನೋವಿಜ್ಞಾನಿಗಳು, ಆಂತರಿಕ ಔಷಧ ತಜ್ಞರು, ಪ್ರಕೃತಿ ಚಿಕಿತ್ಸೆ, ಹೋಮಿಯೋಪತಿ, ಹಾಗೆಯೇ ಪರಿಣತರೊಂದಿಗೆ, ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಮತ್ತು ನಿವಾಸಿಗಳೊಂದಿಗೆ ಕೆಲಸ ಮಾಡುವ ಕೆಲವರು. ಶ್ರೀ ಶ್ರೀಯವರು ಹೇಳಿದುದು ಈ ಕೆಳಗಿನಂತಿದೆ.

ನೀವು ಧ್ಯಾನ ಮತ್ತು ಪ್ರಾಣಾಯಾಮಗಳ ಬಗ್ಗೆ ಬಹಳಷ್ಟು ಕೇಳಿರಬೇಕು. ಈ ಪುರಾತನ ವಿಜ್ಞಾನವು ಭಾರತದಲ್ಲಿ ಕಳೆದ ೫,೦೦೦ ವರ್ಷಗಳಿಂದ ೮,೦೦೦ ವರ್ಷಗಳ ವರೆಗೆ ಇತ್ತೆಂಬುದು ನಿಮಗೆ ಗೊತ್ತಿದೆಯಾ? ಈ ವಿಜ್ಞಾನವು ಆಯುರ್ವೇದದೊಂದಿಗೆ ಸೇರಿಕೊಂಡು, ಹಲವಾರು ಪೀಳಿಗೆಗಳ ಜನರ ಆರೋಗ್ಯ ಮತ್ತು ಕ್ಷೇಮಗಳನ್ನು ನೋಡಿಕೊಳ್ಳುವುದಕ್ಕೆ ಕಾರಣವಾಗಿದೆ.

ಈ ಪುರಾತನ ವಿಜ್ಞಾನದಿಂದ ಲಕ್ಷಾಂತರ ಜನರು ಲಾಭ ಪಡೆದಿದ್ದಾರೆ, ಆದರೆ ದುರದೃಷ್ಟವಶಾತ್, ಅಲ್ಲಿ ಯಾವುದೇ ವೈಜ್ಞಾನಿಕ ದಾಖಲಾತಿಗಳು ಇರಲಿಲ್ಲ. ಹಾಗೆ, ನಾವು ಈ ದಿಕ್ಕಿನಲ್ಲಿ ಒಂದು ಹೆಜ್ಜೆಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ. ನಮ್ಮ ಸ್ಥಾಪನೆ, ಆರ್ಟ್ ಆಫ್ ಲಿವಿಂಗ್, ಜನರಿಗೆ ಅನುಭವವಾಗುತ್ತಿರುವ ಲಾಭಗಳನ್ನು ದಾಖಲಿಸುವಲ್ಲಿ ಒಂದು ಚಿಕ್ಕ ಪ್ರಯತ್ನವನ್ನು ಮಾಡುತ್ತಿದೆ. ಈಗಿನ ವರೆಗೆ, ಏನು ಕಳೆದುಹೋಗಿತ್ತೆಂದರೆ, ಈ ದಾಖಲಾತಿ. ವಾಸ್ತವವಾಗಿ, ಭಾರತ ಸರಕಾರವು ಈಗ ಒಂದು ಆಯುರ್ವೇದ ಸಂಶೋಧನಾ ಶಾಖೆಯನ್ನು ಕೂಡಾ ಕಲೆಹಾಕುತ್ತಿದೆ.

ನಾವು ಆಯುರ್ವೇದವನ್ನು ಆಧರಿಸಿದ ಒಂದು ವೈದ್ಯಕೀಯ ಕಾಲೇಜನ್ನು ಹೊಂದಿದ್ದೇವೆ. ಅದು ಐದು ವರ್ಷಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬರುತ್ತಾ ಇದೆ ಮತ್ತು ನಾವು ಬೆಂಗಳೂರಿನ ನಮ್ಮ ಕ್ಯಾಂಪಸ್ಸಿನಲ್ಲಿ (ಪರಿಸರದಲ್ಲಿ) ಒಂದು ಆಯುರ್ವೇದ ಆಸ್ಪತ್ರೆಯನ್ನು ಕೂಡಾ ಪ್ರಾರಂಭಿಸಿದ್ದೇವೆ. ಅದು ಏಷಿಯಾದ ಅತ್ಯುತ್ತಮ ಆಯುರ್ವೇದ ಆಸ್ಪತ್ರೆಗಳಲ್ಲಿ ಒಂದಾಗಿದೆ. ಆಸ್ಪತ್ರೆಯನ್ನು ಮತ್ತು ಹಾಗೆಯೇ ನಮ್ಮ ಆಯುರ್ವೇದ ವೈದ್ಯಕೀಯ ಕಾಲೇಜನ್ನು ಭೇಟಿ ಮಾಡಲು ನಿಮ್ಮೆಲ್ಲರನ್ನೂ ನಾನು ಆಮಂತ್ರಿಸಬಯಸುತ್ತೇನೆ.

ನಮ್ಮ ಕಾಲೇಜಿನಲ್ಲಿ ಅನೇಕ ಬೇರೆ ಬೇರೆ ಸಂಶೋಧನಾ ಅಧ್ಯಯನಗಳು ನಡೆಯುತ್ತಿವೆ. ನಾವು, ಉಬ್ಬಿರುವ ರಕ್ತನಾಳಗಳು (ವೆರಿಕೋಸ್ ವೈನ್ಸ್) ಮತ್ತು ಮೂಲವ್ಯಾಧಿಗಳಿಗೆ ಹತ್ತಿರ ಹತ್ತಿರ ೧೦೦% ಯಶಸ್ಸಿನ ಪ್ರಮಾಣದಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಪುರಾತನವಾದ ಶರ ತಂತ್ರಗಳನ್ನು ಬಳಸಿ ಮಾಡಲಾದ ಶಸ್ತ್ರಚಿಕಿತ್ಸೆಯಿಂದ, ಕೇವಲ ೦.೧% ಜನರಿಗೆ ಮಾತ್ರ ಮೂಲವ್ಯಾಧಿ ಹಿಂದಿರುಗಿದೆಯಷ್ಟೆ. ಅಲೋಪತಿ ಮತ್ತು ಆಯುರ್ವೇದ ಔಷಧ ಸಂಶೋಧಕರು ಹಾಗೂ ವೃತ್ತಿಗಾರರ ನಡುವೆ, ವಿಚಾರ ವಿನಿಮಯ ಮಾಡುವುದಕ್ಕಾಗಿ ನಾವೊಂದು ಸಂಭಾಷಣೆ ನಡೆಸಲು ಸಾಧ್ಯವಾದರೆ ಅದು ಒಳ್ಳೆಯದು. ಅದು ಪ್ರಪಂಚದ ಜನತೆಗೆ ಲಾಭದಾಯಕವಾಗಬಹುದೆಂದು ನನಗನ್ನಿಸುತ್ತದೆ.

 ಧ್ಯಾನ ಮತ್ತು ಪ್ರಾಣಾಯಾಮದ ಕಡೆಗೆ ಹಿಂದಿರುಗೋಣ, ನೀವು ಈಗಾಗಲೇ ಸಂಶೋಧನಾ ನಿಪುಣರಿಂದ ಬಹಳಷ್ಟು ಕೇಳಿರುವಿರಿ. ನಾನೊಬ್ಬ ಸಾಧಾರಣ ವ್ಯಕ್ತಿ. ಆದರೆ ನಾನು ಹೇಳಲು ಬಯಸುವ ಒಂದು ವಿಷಯವೆಂದರೆ, ನೀವೊಂದು ಶಿಶುವನ್ನು ಗಮನಿಸಿದರೆ, ಅದು ಹುಟ್ಟಿದ ಸಮಯದಿಂದ ಮೂರು ವರ್ಷ ವಯಸ್ಸಿನ ವರೆಗೆ, ಅದು ಎಲ್ಲಾ ಯೋಗದ ಭಂಗಿಗಳನ್ನು ಮಾಡುತ್ತದೆ. ಇದನ್ನು ಗುರುತಿಸಲು ನಿಮ್ಮಲ್ಲಿ ಗಮನಿಸುವ ಗುಣವಿರಬೇಕಷ್ಟೆ, ಒಬ್ಬ ಯೋಗ ಹೇಳಿಕೊಡುವವನಲ್ಲ.

ಒಂದು ಶಿಶುವು ಜನಿಸುವಾಗ, ಅದೊಂದು ನಿರ್ದಿಷ್ಟ ಮುದ್ರೆಯಲ್ಲಿ ಹುಟ್ಟುತ್ತದೆ. ಯೋಗ ಪಠ್ಯಗಳ ವಿಜ್ಞಾನದಲ್ಲಿ ಅದು ಆದಿ ಮುದ್ರೆ (ಹೆಬ್ಬೆರಳು ಅಂಗೈಯೊಳಗೆ ಮತ್ತು ಇತರ ಬೆರಳುಗಳು ಒಂದು ಮುಷ್ಠಿಯಂತೆ ಸುತ್ತಿಕೊಂಡು) ಎಂದು ಕರೆಯಲ್ಪಡುತ್ತದೆ.
ಶಿಶುಗಳು ನಿದ್ರಿಸುವಾಗ, ನೀವು ಗಮನಿಸಿದರೆ, ಅವರು ತಮ್ಮ ಕೈಗಳನ್ನು ಚಿನ್ ಮುದ್ರೆಯಲ್ಲಿ (ಹೆಬ್ಬೆರಳು ಮತ್ತು ತೋರುಬೆರಳುಗಳ ತುದಿಗಳು ಪರಸ್ಪರ ತಾಗಿಕೊಂಡು ಹಾಗೂ ಇತರ ಬೆರಳುಗಳು ನೀಡಿಕೊಂಡು) ಮತ್ತು ಚಿನ್ಮಯಿ ಮುದ್ರೆಯಲ್ಲಿ (ಹೆಬ್ಬೆರಳು ಮತ್ತು ತೋರುಬೆರಳುಗಳ ತುದಿಗಳು ಪರಸ್ಪರ ತಾಗಿಕೊಂಡು ಹಾಗೂ ಇತರ ಬೆರಳುಗಳು ಒಳಕ್ಕೆ ಮಡಚಿ ಅಂಗೈಯನ್ನು ತಾಗಿಕೊಂಡು) ಇಟ್ಟುಕೊಂಡು ನಿದ್ರಿಸುತ್ತಾರೆ.

ತಮ್ಮ ಹೆಬ್ಬೆರಳನ್ನು ಚೀಪುವಾಗ ಅವರು ಮೇರುದಂಡ ಮುದ್ರೆಯನ್ನು (ಹೆಬ್ಬೆರಳು ಮೇಲಕ್ಕೆ ಮುಖ ಮಾಡಿಕೊಂಡು ಮತ್ತು ಇತರ ಬೆರಳುಗಳು ಒಳಕ್ಕೆ ಮಡಚಿಕೊಂಡು) ಕೂಡಾ ಮಾಡುತ್ತಾರೆ.

ಒಂದು ಮುದ್ರೆಯು (ಕೈಯ ನಿಲುವು) ಮೆದುಳಿನ ನಿರ್ದಿಷ್ಟ ಭಾಗಗಳನ್ನು ಮತ್ತು ಶರೀರದ ನಿರ್ದಿಷ್ಟ ಭಾಗಗಳನ್ನು ಉತ್ತೇಜಿಸುತ್ತದೆ. ಹೀಗೆ ಶಿಶುಗಳು ಈ ಎಲ್ಲಾ ವಿಭಿನ್ನ ಮುದ್ರೆಗಳನ್ನು ಮಾಡುತ್ತವೆ.

ನೀವು ಗಮನಿಸಿದರೆ, ಯಾವಾಗಲೆಲ್ಲಾ ಒಬ್ಬರಿಗೆ ಛಳಿಯಾಗುವುದೋ, ಮೊದಲನೆಯ ಸ್ವಾಭಾವಿಕ ಪ್ರವೃತ್ತಿಯೆಂದರೆ, ಹೆಬ್ಬೆರಳುಗಳನ್ನು ಬೆಚ್ಚಗಾಗಿರಿಸಲು ಕಂಕುಳುಗಳ ಅಡಿಯಲ್ಲಿ ಅಡಗಿಸುವುದು. ನಿಜವಾಗಿ, ಯೋಗದಲ್ಲಿ ಹೆಬ್ಬೆರಳುಗಳು ಬಹಳ ಪ್ರಧಾನವಾದವು. ನೀವು ಹೆಬ್ಬೆರಳನ್ನು ಬೆಚ್ಚಗಿರಿಸಿದರೆ, ಸಂಪೂರ್ಣ ಶರೀರವು ಬೆಚ್ಚಗಾಗಿರುತ್ತದೆ ಎಂದು ಹೇಳಲಾಗುತ್ತದೆ.
ಯೋಗದಲ್ಲಿ, ನಮ್ಮ ಬೆರಳುಗಳ ತುದಿಗಳು ಚೈತನ್ಯ ಬಿಂದುಗಳಾಗಿವೆ ಎಂದು ಕೂಡಾ ಹೇಳಲಾಗುತ್ತದೆ. ಅದೇ ರೀತಿಯಲ್ಲಿ ನಮ್ಮ ಕಿವಿಗಳು ಕೂಡಾ ಶಕ್ತಿ ಬಿಂದುಗಳಾಗಿವೆ. ಆಯುರ್ವೇದದಲ್ಲಿ ಇವುಗಳು ಮರ್ಮ ಬಿಂದುಗಳು ಎಂದು ಕರೆಯಲ್ಪಡುತ್ತವೆ; ಶರೀರದಲ್ಲಿನ ಶಕ್ತಿಯ ರಹಸ್ಯ ಬಿಂದುಗಳು. ಈ ಬಿಂದುಗಳು ಉತ್ತೇಜಿಸಲ್ಪಟ್ಟಾಗ, ಅವುಗಳು ವ್ಯವಸ್ಥೆಗೆ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಇದು ಆಯುರ್ವೇದದ ಪದ್ಧತಿಯಾಗಿದೆ.

ಮಕ್ಕಳನ್ನು ಗಮನಿಸುವುದರ ಕಡೆಗೆ ತಿರುಗಿ ಬರೋಣ. ನೀವು ಗಮನಿಸಿದರೆ, ಅವರು ನಾಗ ಭಂಗಿಯನ್ನು ಕೂಡಾ ಮಾಡುತ್ತಾರೆ; ಅಲ್ಲಿ ಅವರು ತಮ್ಮ ಹೊಟ್ಟೆಯ ಮೇಲೆ ಮಲಗುತ್ತಾರೆ ಮತ್ತು ತಮ್ಮ ಕತ್ತನ್ನು ಮೇಲೆತ್ತುತ್ತಾರೆ. ನಂತರ ಅವರು ದೋಣಿಯ ಭಂಗಿಯನ್ನು ಮಾಡುತ್ತಾರೆ; ಅಲ್ಲಿ ಅವರು ತಮ್ಮ ಬೆನ್ನಿನ ಮೇಲೆ ಮಲಗುತ್ತಾರೆ ಹಾಗೂ ಅವರ ಕೈಗಳು ಮತ್ತು ಕಾಲುಗಳು ನೆಲವನ್ನು ತಾಗದೆ ಮೇಲಿರುತ್ತವೆ.

ಮೂರು ವರ್ಷ ವಯಸ್ಸಿನ ಮೊದಲು ಅವರು ಬಹುತೇಕ ಎಲ್ಲಾ ಯೋಗ ಭಂಗಿಗಳನ್ನು ಮಾಡುತ್ತಾರೆ. ನಾವು ಕೇವಲ ಅವರನ್ನು ಗಮನಿಸಬೇಕಷ್ಟೆ. ಹಾಗೆಯೇ, ಮಕ್ಕಳು ಉಸಿರಾಡುವ ರೀತಿಯು ಭಿನ್ನವಾಗಿದೆ; ಅವರು ಹೊಟ್ಟೆಯಿಂದ ಉಸಿರಾಡುತ್ತಾರೆ.

ಪ್ರತಿಯೊಂದು ಭಾವನೆಗೂ ಅನುಗುಣವಾದ ಒಂದು ಲಯ ಉಸಿರಾಟದಲ್ಲಿದೆ. ನೀವು ಸಂತೋಷವಾಗಿರುವಾಗ ನಿಮ್ಮ ಉಸಿರಾಟವು, ನೀವು ದುಃಖದಲ್ಲಿರುವಾಗಿನ ನಿಮ್ಮ ಉಸಿರಾಟಕ್ಕೆ ಹೋಲಿಸಿದರೆ ಒಂದು ಭಿನ್ನವಾದ ಲಯದಲ್ಲಿ ಚಲಿಸುವುದು ಎಂಬುದನ್ನು ನೀವು ಗಮನಿಸಿರಬಹುದು. ನಿಮ್ಮ ಉಸಿರಾಟದ ಉಷ್ಣತೆ, ವೇಗ, ಉದ್ದ ಮತ್ತು ಗಾತ್ರ ವ್ಯತ್ಯಸ್ತವಾಗಿರುತ್ತದೆ (ಇದನ್ನು ರಂಗಭೂಮಿಯ ತರಗತಿಗಳಲ್ಲಿ ಕೂಡಾ ಕಲಿಸಲಾಗುತ್ತದೆ; ಉಸಿರಾಟವನ್ನು ಬದಲಾಯಿಸುವುದರ ಮೂಲಕ ವಿವಿಧ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುವುದು ಎಂದು). ಹೀಗೆ, ನಮ್ಮ ಭಾವನೆಗಳು ಉಸಿರಾಟ ಮತ್ತು ಶರೀರದ ಕೆಲವು ಭಾಗಗಳೊಂದಿಗೆ ಸಂಬಂಧ ಹೊಂದಿವೆ.

ಆರ್ಟ್ ಆಫ್ ಲಿವಿಂಗಿನ ಉನ್ನತ ಧ್ಯಾನ ಶಿಬಿರಗಳಲ್ಲಿ ನಾವು ಚಕ್ರಗಳ; ಶರೀರದಲ್ಲಿರುವ ಶಕ್ತಿಯ ಕೇಂದ್ರಗಳ ಬಗ್ಗೆ ಕಲಿಸುತ್ತೇವೆ.
ಈ ಶಕ್ತಿಯ ಕೇಂದ್ರಗಳಿಗೆ ನಿರ್ದಿಷ್ಟ ಗುಣಗಳು ಮತ್ತು ನಿರ್ದಿಷ್ಟ ಲಯಗಳಿವೆ ಹಾಗೂ ಅವುಗಳು ನಿರ್ದಿಷ್ಟ ಅಂಶಗಳೊಂದಿಗೆ ಸಂಬಂಧ ಹೊಂದಿವೆ ಎಂದು ಯೋಗದಲ್ಲಿ ಹೇಳಲಾಗುತ್ತದೆ. ಆದುದರಿಂದ ಚಕ್ರಗಳೊಂದಿಗೆ ಕೆಲಸ ಮಾಡುವುದು ಬಹಳಷ್ಟು ಲಾಭವನ್ನು ತರುತ್ತದೆ.

ಇಡೀ ಶರೀರದಲ್ಲಿ ೧೦೮ ಚಕ್ರಗಳಿವೆ. ಇವುಗಳಲ್ಲಿ ೧೨ ಬಹಳ ಮುಖ್ಯವಾದವು ಮತ್ತು ಅವುಗಳಲ್ಲಿ ಏಳು ಇನ್ನೂ ಹೆಚ್ಚು ಮುಖ್ಯವಾದವು. ಉನ್ನತ ಧ್ಯಾನ ಶಿಬಿರದಲ್ಲಿ, ಈ ಕೇಂದ್ರಗಳ ಮೇಲೆ ನಮ್ಮ ಗಮನವನ್ನು ಇರಿಸುವುದರ ಮೂಲಕ, ನಾವು ಈ ಕೇಂದ್ರಗಳನ್ನು ಉತ್ತೇಜಿಸುತ್ತೇವೆ ಮತ್ತು ಅವುಗಳಿಗೆ ವಿಶ್ರಾಮ ನೀಡುತ್ತೇವೆ.

ಪ್ರಶ್ನೆ: ನಾವೆಲ್ಲರೂ ಯೋಗ ಮಾಡಬೇಕೆಂದೂ, ಏರೋಬಿಕ್ಸ್ ಅಥವಾ ಟ್ರೆಡ್ ಮಿಲ್ಲಿನ ಮೇಲೆ ನಡೆಯುವಂತಹ ಬೇರೆ ಯಾವುದೇ ರೀತಿಯ ವ್ಯಾಯಾಮವನ್ನಲ್ಲವೆಂದೂ ನೀವು ಹೇಳುತ್ತಿರುವಿರೇ?

ಶ್ರೀ ಶ್ರೀ ರವಿ ಶಂಕರ್: ನೀವು ಕೇವಲ ಯೋಗವನ್ನು ಮಾತ್ರ ಮಾಡಬೇಕೆಂದು ನಾನು ಹೇಳುತ್ತಿಲ್ಲ. ನಾನು ಹೇಳುತ್ತಿರುವುದೆಂದರೆ, ಯೋಗವು ಒಂದು ಸ್ವಾಭಾವಿಕ ಆಗುವಿಕೆಯಾಗಿದೆ. ಅದು ಸೃಷ್ಟಿಯಲ್ಲಿ ಪ್ರಪಂಚದ ಎಲ್ಲೆಡೆಯಲ್ಲಿ ಸಂಭವಿಸುತ್ತದೆ. ಮಕ್ಕಳಾಗಿ ನಾವೆಲ್ಲರೂ ಅದನ್ನು ಮಾಡಿದ್ದೇವೆ. ನೀವು ಬೆಳೆದಂತೆ, ನಿಮಗೆ ಏರೋಬಿಕ್ಸ್ ಬೇಕಾಗಬಹುದು; ಮತ್ತು ನೀವು ಅತಿಯಾಗಿ ತಿಂದರೆ, ಆ ಕ್ಯಾಲರಿಗಳನ್ನು ಸುಡಲು ನೀವೊಂದು ಟ್ರೆಡ್ ಮಿಲ್ಲಿನ ಮೇಲೆ ಏರಬೇಕಾಗಬಹುದು.

ಪ್ರಶ್ನೆ: ಧ್ಯಾನ ಮತ್ತು ದೇವರ ನಡುವಿರುವ ಸಂಬಂಧವೇನು? ನಾನು ಅದ್ವೈತ ತತ್ವಜ್ಞಾನದ ಬಗ್ಗೆ ಓದಿದ್ದೇನೆ. 

ಶ್ರೀ ಶ್ರೀ ರವಿ ಶಂಕರ್: ದೇವರೆಂದರೆ ಸತ್ಯ, ಸೌಂದರ್ಯ ಮತ್ತು ಪ್ರೇಮವೆಂದು ನೀವು ಯೋಚಿಸಿದರೆ; ಹೌದು, ಅವುಗಳು ಸಂಬಂಧ ಹೊಂದಿವೆ.

ದೇವರು ಸಂಪೂರ್ಣ ಸೃಷ್ಟಿಯಲ್ಲಿ ಅತಿ-ಉತ್ತಮವಾದುದಾದರೆ, ಸಂಪೂರ್ಣ ಸೃಷ್ಟಿಯು ಒಂದು ವಸ್ತುವಿನಿಂದ ಮಾಡಲ್ಪಟ್ಟದ್ದಾಗಿದ್ದರೆ, ಆ ಒಂದು ಶಕ್ತಿಯನ್ನು ದೇವರೆಂದು ಕರೆಯಬಹುದು. ಎಲ್ಲವೂ ಮಾಡಲ್ಪಟ್ಟಿರುವುದು ಅದರಿಂದಲೇ ಮತ್ತು ಅದು ಎಲ್ಲದರೊಂದಿಗೂ ಸಂಬಂಧ ಹೊಂದಿದೆ.

ದೇವರೊಂದಿಗೆ ಸಂಬಂಧ ಹೊಂದಿರದೇ ಇರುವ ಒಂದೇ ಒಂದು ವಸ್ತುವೂ ಪ್ರಪಂಚದಲ್ಲಿಲ್ಲ. ಹೀಗಿದ್ದರೂ, ದೇವರೆಂದರೆ ಮೇಲೆ, ಎಲ್ಲೋ ಒಂದು ಕಡೆ ಕುಳಿತುಕೊಂಡು, ಅವನನ್ನು ನೀವು ಹಿಡಿದುಕೊಳ್ಳಲು ನಿಮಗೊಂದು ಬೆರಳನ್ನು ಕೊಡಲು ಪ್ರಯತ್ನಿಸುವ ಹಾಗೂ ನಂತರ ದೂರ ಹೋಗುವ ಒಬ್ಬ ವ್ಯಕ್ತಿಯೆಂದು ನೀವು ಯೋಚಿಸಿದರೆ; ಅಂತಹ ರೀತಿಯ ದೇವರಿಗೂ ನಾವು ಯಾವುದರ ಬಗ್ಗೆ ಮಾತನಾಡುತ್ತಿರುವೆವೋ ಅದಕ್ಕೂ ಯಾವುದೇ ಸಂಬಂಧವಿಲ್ಲ. ನೀವು ದೇವರನ್ನೊಂದು ಶಕ್ತಿಯಾಗಿ, ಒಂದು ಸಾನ್ನಿಧ್ಯವಾಗಿ, ಪ್ರೇಮವಾಗಿ, ಆ ಬೃಹತ್ತಾದ ಚೈತನ್ಯದ ಕ್ಷೇತ್ರವಾಗಿ ನೋಡಿದರೆ; ಆಗ ಹೌದು, ಅದರಿಂದ ಯಾರಿಗೂ ಬಿಡುಗಡೆಯಿಲ್ಲ. ನಾವೆಲ್ಲರೂ ಅದರೊಳಗಿದ್ದೇವೆ ಮತ್ತು ಮುಂದೆ ಅದರಲ್ಲಿರುವೆವು. ನಾವು ಅದರಲ್ಲಿದ್ದೆವು; ಮತ್ತು ನಾವು ಅಲ್ಲಿ ಇರದೇ ಇದ್ದರೂ ಕೂಡಾ, ಅದು ಅಲ್ಲಿರುವುದು.

ಪ್ರಶ್ನೆ: ಧ್ಯಾನವು, ಆ ಸಂಬಂಧವನ್ನು ಮೇಳೈಸಲಿರುವ ಅತ್ಯಂತ ಪರಿಣಾಮಕಾರಿ ಮಾರ್ಗವೇ?

ಶ್ರೀ ಶ್ರೀ ರವಿ ಶಂಕರ್: ಯಾವುದೇ ತಂತ್ರವಾದರೂ ನಿಮ್ಮನ್ನು ಧ್ಯಾನದ ಕಡೆಗೆ ಕರೆದೊಯ್ಯಲೇಬೇಕು.
ನಿಮ್ಮ ಬಾಯಾರಿಕೆಯನ್ನು ತಣಿಸಲು ಒಂದೇ ಒಂದು ಮಾರ್ಗವಿರುವುದು, ಅಂದರೆ ದ್ರವಗಳ ಮೂಲಕ. ನಿಮ್ಮ ಬಾಯಾರಿಕೆಯನ್ನು ಕೇವಲ ದ್ರವಗಳು ಮಾತ್ರ ನೀಗಿಸಬಲ್ಲವು, ಸರಿಯಾ? ಅದು ಯಾವುದೇ ದ್ರವವಾಗಬಹುದು, ಆದರೆ ಅದು ದ್ರವವಾಗಿರಲೇಬೇಕು, ಸರಿಯಾ? ಧ್ಯಾನವೆಂದರೆ ಎಚ್ಚರದಲ್ಲಿ, ನಿದ್ರೆಯಲ್ಲಿ ಅಥವಾ ಸ್ವಪ್ನದಲ್ಲಿ ಇರದ ಒಂದು ಅವಸ್ಥೆಯಾಗಿದೆ; ಅದು ನಾಲ್ಕನೆಯ ಅವಸ್ಥೆಯಾಗಿದೆ. ಅದರಲ್ಲಿ ನಿಮ್ಮ ಶರೀರವು ವಿಶ್ರಾಂತಿಯಲ್ಲಿರುತ್ತದೆ ಮತ್ತು ಮನಸ್ಸು ಜಾಗೃತವಾಗಿರುತ್ತದೆ.
ಪ್ರಾರ್ಥನೆ ಮತ್ತು ಧ್ಯಾನಗಳು ಬಹಳ ನಿಕಟವಾಗಿವೆ. ಪ್ರಾರ್ಥನೆಯಲ್ಲಿ ನೀವು ಧನ್ಯವಾದಗಳನ್ನು ಅರ್ಪಿಸುತ್ತೀರಿ ಅಥವಾ ಏನನ್ನಾದರೂ ಬೇಡುತ್ತೀರಿ; ಹಾಗೆಯೇ, ಒಬ್ಬ ಸಾಧಾರಣ ವ್ಯಕ್ತಿಯ ದೃಷ್ಟಿಯಲ್ಲಿ, ಧ್ಯಾನದಲ್ಲಿ ಒಬ್ಬನು ಕೇಳಿಸಿಕೊಳ್ಳಲು ಸಿದ್ಧನಿರುತ್ತಾನೆ. ಆದುದರಿಂದ, ಧ್ಯಾನವನ್ನು ನೀವೊಂದು ಶ್ರೇಷ್ಠ ರೀತಿಯ ಪ್ರಾರ್ಥನೆಯೆಂದು ಕರೆಯಬಹುದು.
ಧ್ಯಾನವು ಮನಸ್ಸಿನ ಒಂದು ಸ್ಥಿತಿಯಾಗಿದೆ; ಅದು ಕೇವಲ ಒಂದು ಪ್ರಕ್ರಿಯೆಯಲ್ಲ. ಅದು ಅಂತಿಮ ಉತ್ಪನ್ನ ಕೂಡಾ ಆಗಿದೆ.

ಪ್ರಶ್ನೆ: ನಾವು ಯಾವತ್ತೂ ಕುಳಿತಿರುವ ಭಂಗಿಯಲ್ಲಿಯೇ ಧ್ಯಾನ ಮಾಡಬೇಕೇ ಅಥವಾ ಅದನ್ನು ಬೇರೆ ಯಾವುದೇ ಭಂಗಿಯಲ್ಲಾದರೂ ಮಾಡಬಹುದೇ? 

ಶ್ರೀ ಶ್ರೀ ರವಿ ಶಂಕರ್: ಕುಳಿತಿರುವ ಭಂಗಿಯು ಧ್ಯಾನ ಮಾಡಲು ಉತ್ತಮವಾಗಿದೆ. ನೀವು ಮಲಗಿಕೊಂಡು ಕೂಡಾ ಅದನ್ನು ಮಾಡಬಹುದು, ಆದರೆ ಅಪಾಯವೆಂದರೆ, ನೀವು ನಿದ್ರಿಸಬಹುದು. ನೀವು ಧ್ಯಾನದಲ್ಲಿರುವಿರೆಂದು ನೀವು ಯೋಚಿಸಬಹುದು, ಆದರೆ ನಿಜವಾಗಿ ನೀವು ಆಳವಾದ ನಿದ್ರೆಯಲ್ಲಿರಬಹುದು.

ಪ್ರಶ್ನೆ: ಒಬ್ಬನು ಧ್ಯಾನವನ್ನು ಒಂದು ನಿಯಮಿತ ಅಭ್ಯಾಸವನ್ನಾಗಿ ಹೇಗೆ ಮಾಡಿಕೊಳ್ಳಬಹುದು?

ಶ್ರೀ ಶ್ರೀ ರವಿ ಶಂಕರ್: ನಾನು ಹಲವಾರು ಧ್ಯಾನದ ಸಿ.ಡಿ.ಗಳನ್ನು ಮಾಡಿದ್ದೇನೆ. ಆರಂಭಿಸಲು, ಕೆಲವು ದಿನಗಳ ಅಥವಾ ವಾರಗಳ ವರೆಗೆ ನೀನು ಈ ಸಿ.ಡಿ.ಗಳನ್ನು ಬಳಸಬಹುದು ಮತ್ತು ಧ್ಯಾನದ ಅಭ್ಯಾಸವನ್ನು ಮಾಡಿಕೊಳ್ಳಬಹುದು. ಒಮ್ಮೆ ನೀನು ಅದನ್ನು ನಿಯಮಿತವಾಗಿ ಅಭ್ಯಾಸ ಮಾಡಲು ತೊಡಗಿದ ಬಳಿಕ, ನಿನಗೆ ಒಂದು ಸಿ.ಡಿ.ಯು ಬೇಕಾಗದು, ನಿನಗೆ ಅದನ್ನು ನೀನಾಗಿಯೇ ಮಾಡಲು ಸಾಧ್ಯವಾಗುವುದು. ನಿನಗೆ ಬೇಕಾಗಿರುವುದೇನೆಂದರೆ, ಸ್ವಲ್ಪ ಧ್ಯಾನ ಮಾಡುವ ಅಭ್ಯಾಸ; ಹೋಗಲು ಬಿಡುವುದರ ಅಭ್ಯಾಸ. ಇದೆಲ್ಲಾ ಹೋಗಲು ಬಿಡುವುದರ ಬಗ್ಗೆ ಇರುವುದು.

ಪ್ರಶ್ನೆ: ಟ್ರಾನ್ಸೆಂಡೆಂಟಲ್ ಮೆಡಿಟೇಷನ್ ಅಥವಾ ಇತರ ವಿಧಾನಗಳ ಎದುರಾಗಿ ಆರ್ಟ್ ಆಫ್ ಲಿವಿಂಗ್ ವಿಧಾನಗಳಿಗೆ ಯಾವುದಾದರೂ ಲಾಭವಿದೆಯೇ?

ಶ್ರೀ ಶ್ರೀ ರವಿ ಶಂಕರ್: ನಾನೊಬ್ಬ ಒಳ್ಳೆಯ ಮಾರಾಟಗಾರನಲ್ಲ! ವಿಧಾನಗಳನ್ನು ಹೋಲಿಸುವುದು ಹೇಗೆಂಬುದನ್ನು ನಿನಗೆ ಹೇಗೆ ಹೇಳುವುದು ಎಂಬುದು ನನಗೆ ತಿಳಿಯದು. ಹಲವಾರು ಧ್ಯಾನದ ತಂತ್ರಗಳಿವೆ. ನಿನಗೆ ಯಾವುದು ಅತ್ಯುತ್ತಮವಾಗಿ ಹೊಂದಿಕೆಯಾಗುವುದೋ ಅದನ್ನು ನೀನು ಆಯ್ಕೆ ಮಾಡಿಕೊಳ್ಳಬೇಕು.

ಕೆಲವು ತಂತ್ರಗಳು, ಉದಾಹರಣೆಗೆ ಬೌದ್ಧರ ಧ್ಯಾನ ತಂತ್ರಗಳು - ವಿಪಾಸನ, ದೀರ್ಘವಾದ ಮೌನ ಧ್ಯಾನ ಶಿಬಿರದಲ್ಲಿ, ದೀರ್ಘ ಕಾಲದ ವರೆಗೆ ಹಲವಾರು ಗಂಟೆಗಳ ಅಭ್ಯಾಸ  ಬೇಕಾಗುತ್ತದೆ.

ಜನರಿಂದ ನಾನು ಏನು ಕೇಳಿರುವೆನೋ ಅದರ ಪ್ರಕಾರ, ಆರ್ಟ್ ಆಫ್ ಲಿವಿಂಗಿನ ತಂತ್ರಗಳ ಪ್ರಯೋಜನವೇನೆಂದರೆ ಅದು ಅಷ್ಟೊಂದು ದೀರ್ಘ ಸಮಯ ತೆಗೆದು ಕೊಳ್ಳುವುದಿಲ್ಲ. ನಿಮಗೆ ಫಲಿತಾಂಶಗಳು ಬಹಳ ಬೇಗನೇ ಸಿಗುತ್ತವೆ, ಯಾಕೆಂದರೆ ನೀವು ಉಸಿರಾಟದ ಲಯವನ್ನು ಬದಲಾಯಿಸುತ್ತಿರುತ್ತೀರಿ. ತಮ್ಮ ಜೀವನದಲ್ಲಿ ಬಹಳ ವ್ಯಸ್ತರಾಗಿರುವ ಜನರಿಗೆ ಈ ವಿಧಾನವು ಅತ್ಯಂತ ಹೆಚ್ಚು ಹೊಂದಿಕೆಯಾಗುತ್ತದೆ. ಅದೊಂದು ಶಕ್ತಿಯುತವಾದ ಚಿಕ್ಕ ನಿದ್ರೆಯಂತೆ. ಅದು ಬೇಗನೇ ನಿಮಗೆ ಒಂದು ಆಳವಾದ ಧ್ಯಾನದ ಅನುಭವವನ್ನು ನೀಡುತ್ತದೆ.  

ಟಿ ಎಮ್ ಕೂಡಾ ನಿಮಗೆ ಆ ಆಂತರಿಕ ಶಾಂತಿಯನ್ನು ತರುತ್ತದೆ. ಟಿ ಎಮ್ ಮಾಡಿದ ಜನರು ಕೂಡಾ, ಸುದರ್ಶನ ಕ್ರಿಯೆ ಮತ್ತು ಉಸಿರಾಟದ ತಂತ್ರಗಳನ್ನು ಅಭ್ಯಾಸ ಮಾಡಿದಾಗ, ಅದು ಇನ್ನೂ ಹೆಚ್ಚು ಲಾಭದಾಯಕವಾಗಿದೆಯೆಂಬುದನ್ನು ಕಂಡುಕೊಳ್ಳುತ್ತಾರೆ. ತಮ್ಮ ಅಭ್ಯಾಸಕ್ಕೆ ಅದು ಬಹಳ ಪೂರಕವಾಗಿರುವುದಾಗಿ ಅವರು ಕಂಡುಕೊಳ್ಳುತ್ತಾರೆ ಮತ್ತು ಅದು ಅವರಿಗೆ ತಮ್ಮ ಧ್ಯಾನದಲ್ಲಿ ಇನ್ನೂ ಆಳವಾಗಿ ಹೋಗುವುದಕ್ಕೆ ಸಹಾಯ ಮಾಡುತ್ತದೆ.

ಆರ್ಟ್ ಆಫ್ ಲಿವಿಂಗ್ ತಂತ್ರಗಳಲ್ಲಿ, ಅಷ್ಟೊಂದು ಪ್ರಯತ್ನ ಒಳಗೊಂಡಿರುವುದಿಲ್ಲ. ಅದು ಆಧುನಿಕ ದಿನದ ಜೀವನಶೈಲಿಗೆ ಹೊಂದಿಕೆಯಾಗುತ್ತದೆ. ಕೆಲವು ಯೋಗದ ಅಭ್ಯಾಸಗಳಿಗೆ, ಬಹಳ ಶಿಸ್ತುಬದ್ಧವಾದ ಜೀವನಶೈಲಿಯ ಅಗತ್ಯವಿರುತ್ತದೆ; ನೀವು ಬೆಳಗ್ಗೆ ೫ ಗಂಟೆಗೆ ಎದ್ದು ಧ್ಯಾನ ಮಾಡಬೇಕು, ಸರಿಯಾದ ಆಹಾರವನ್ನು ಸೇವಿಸಬೇಕು (ಆಹಾರ, ವಿಶ್ರಾಂತಿ ಮತ್ತು ಧ್ಯಾನದ ಸಮಯದ ಬಗ್ಗೆ ಒಂದು ಸಂಪೂರ್ಣ ಮಾರ್ಗದರ್ಶಿ ಇದೆ). ಆರ್ಟ್ ಆಫ್ ಲಿವಿಂಗ್ ವಿಧಾನದಲ್ಲಿ ಕೆಲವೇ ಕೆಲವು ನಿರ್ಬಂಧಗಳಿರುವುದು; ನಗರಗಳಲ್ಲಿರುವ ಬಿಡುವಿಲ್ಲದ ಜೀವನಶೈಲಿಯ ಜನರಿಗೆ ಸುಲಭವಾಗುವಂತೆ ಮಾಡುತ್ತದೆ. ಅವುಗಳನ್ನು ಅಭ್ಯಾಸ ಮಾಡುವುದು ಕೂಡಾ ಸುಲಭವೆಂದು ಅವರಿಗೆ ಅನ್ನಿಸುತ್ತದೆ.

ಪ್ರಶ್ನೆ: ಆರ್ಟ್ ಆಫ್ ಲಿವಿಂಗ್ ತಂತ್ರಗಳನ್ನು, ಪರಮಹಂಸ ಯೋಗಾನಂದರ ಕ್ರಿಯಾ ಯೋಗದೊಂದಿಗೆ ನೀವು ಹೇಗೆ ಹೋಲಿಸುವಿರಿ?

ಶ್ರೀ ಶ್ರೀ ರವಿ ಶಂಕರ್: ಹೌದು, ಆ ವಿಧಾನದಲ್ಲಿ, ವಿವಿಧ ಚಕ್ರಗಳ ಮೇಲೆ ಹೆಚ್ಚು ಧ್ಯಾನ ಮಾಡುವುದಾಗಿದೆ.

ಪ್ರಶ್ನೆ: ನೀವು ಹೇಳುತ್ತಿರುವ ಪ್ರಕಾರ, ಧ್ಯಾನವೆಂಬುದು ಮನಸ್ಸಿನ ಒಂದು ಅವಸ್ಥೆ. ನಾನು ಮನಸ್ಸಿನ ಆ ಅವಸ್ಥೆಯಲ್ಲಿರುವೆನೇ ಎಂಬುದನ್ನು ನಾನು ತಿಳಿಯುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಅದು ಒಂದು ಒಳ್ಳೆಯ ಚಿಕ್ಕ ನಿದ್ರೆಯನ್ನು ಮಾಡುವ ಹಾಗೆಯೇ. ನೀನೊಂದು ಒಳ್ಳೆಯ ಚಿಕ್ಕ ನಿದ್ರೆಯನ್ನು ಮಾಡಿದ್ದರೆ ಅದು ನಿನಗೆ ತಿಳಿಯುತ್ತದೆ, ಸರಿಯಾ? ಮತ್ತು ನೀನು ಆಹಾರವನ್ನು ಸೇವಿಸಿದಾಗ, ನೀನು ಆಹಾರವನ್ನು ಸೇವಿಸಿರುವೆಯೆಂಬುದು ನಿನಗೆ ತಿಳಿದಿರುತ್ತದೆ. ಇದು ಅಷ್ಟೊಂದು ಸ್ಪಷ್ಟವಾದುದು. ನೀವು ಒಳಗಿನಿಂದ ಬಹಳ ವಿಶ್ರಾಮವನ್ನು ಅನುಭವಿಸುವಿರಿ; ಅದು ವಿವರಿಸಲು ಕಷ್ಟವಾದುದು. ನಿಮಗೆ ಬಹಳ ಒಳ್ಳೆಯದಾಗಿ ಮತ್ತು ಹಿತಕರವಾಗಿ ಅನ್ನಿಸುತ್ತದೆ. ಅಲ್ಲಿ ಒಳಗಿನಿಂದ ಬರುವ, ಹಿತಕರವಾಗಿರುವಿಕೆಯ ಒಂದು ಭಾವವಿರುತ್ತದೆ ಮತ್ತು ಒಬ್ಬನು ಸಂಪೂರ್ಣವಾಗಿ ನಿರಾಳವಾಗಿರುತ್ತಾನೆ.

ಪ್ರಶ್ನೆ: ನಾನು ನಿಜವಾಗಿ ಕಷ್ಟಪಟ್ಟು ಪ್ರಯತ್ನಿಸುತ್ತೇನೆ, ಆದರೆ ನನಗೆ ನಕಾರಾತ್ಮಕ ಯೋಚನೆಗಳನ್ನು ತೊಡೆದುಹಾಕಲು ಸಾಧ್ಯವಾಗುವಂತೆ ತೋರುತ್ತಿಲ್ಲ. 

ಶ್ರೀ ಶ್ರೀ ರವಿ ಶಂಕರ್: ಅದುವೇ ಸಮಸ್ಯೆ. ನಕಾರಾತ್ಮಕ ಯೋಚನೆಗಳು ಬರುವಾಗ, ಅವುಗಳನ್ನು ಬೆನ್ನಟ್ಟಬೇಡಿ. ನೀವು ಅವುಗಳನ್ನು ಬೆನ್ನಟ್ಟಿದರೆ, ಅವುಗಳು ಒಂದು ದೊಡ್ಡ ಸೈನ್ಯದೊಂದಿಗೆ ಹಿಂದಿರುಗಿ ಬರುತ್ತವೆ. ಸುಮ್ಮನೆ ಅವುಗಳೊಂದಿಗೆ ಕೈಗಳನ್ನು ಕುಲುಕಿ ಮತ್ತು "ಬನ್ನಿ, ನನ್ನೊಂದಿಗೆ ಕುಳಿತುಕೊಳ್ಳಿ" ಎಂದು ಹೇಳಿ. ಆಗ ಅವುಗಳು ಮಾಯವಾಗುವುವು.

ನಾವು ಧ್ಯಾನ ಮಾಡುವುದನ್ನು ಕಲಿಯಬೇಕಾಗಿರುವ ಕಾರಣಗಳು ಇವು. ನಾವು ಧ್ಯಾನ ಮಾಡುವಾಗ, ನಕಾರಾತ್ಮಕ ಯೋಚನೆಗಳನ್ನು; ಅಥವಾ ಹೇಳುವುದಾದರೆ ಯಾವುದೇ ಯೋಚನೆಗಳನ್ನು ನಿರ್ವಹಿಸುವುದು ಹೇಗೆಂಬುದನ್ನು ನಾವು ಕಲಿಯುತ್ತೇವೆ.

ಧ್ಯಾನವನ್ನು ನಿದ್ರೆ ಅಥವಾ ಹಗಲುಗನಸಿನಿಂದ ವ್ಯತ್ಯಸ್ತವಾಗಿ ತಿಳಿಯುವುದು ಹೇಗೆ? ಮೂರು ದಿನಗಳ ಆರ್ಟ್ ಆಫ್ ಲಿವಿಂಗ್ ಧ್ಯಾನ ಶಿಬಿರದಲ್ಲಿ ತಿಳಿಸಿ ಕೊಡಲಾಗುವ ವಿಷಯಗಳು ಇವು.

ಪ್ರಶ್ನೆ: ಗಾಳಿಯಲ್ಲಿ ತೇಲಾಡುವಿಕೆಯು ಏನೋ ಕಲ್ಪನೆಯೇ ಅಥವಾ ಅದು ನಿಜವಾಗಿ ನಡೆಯುವಂತಹುದೇ? ಗಾಳಿಯಲ್ಲಿ ತೇಲಾಡುವಿಕೆಯ ಲಾಭಗಳೇನು?

ಶ್ರೀ ಶ್ರೀ ರವಿ ಶಂಕರ್: ನಿಜ ಹೇಳಬೇಕೆಂದರೆ, ಯಾರಾದರೂ ತೇಲಾಡುವುದನ್ನು ನಾನು ನೋಡಿಲ್ಲ. ಖಂಡಿತವಾಗಿ, ಶರೀರದಲ್ಲಿ ಥಟ್ಟನೆಯ ಸ್ನಾಯುಗಳ ಸೆಳವು ಇರುವ ಸಾಧ್ಯತೆಯಿದೆ ಮತ್ತು ಶರೀರವು ನೆಲಬಿಟ್ಟು ಜಿಗಿಯಬಹುದು. ಧ್ಯಾನದ ಸ್ವಲ್ಪ ದೀರ್ಘ ಅಭ್ಯಾಸದ ಬಳಿಕ ಅದು ಆಗಬಹುದು. ಶರೀರವು ಬಹಳ ಹಗುರವಾಗಿದೆಯೆಂದು ನಿಮಗೆ ಇದ್ದಕ್ಕಿದ್ದಂತೆ ಅನ್ನಿಸುತ್ತದೆ. ಇದು ಪ್ರತಿಯೊಂದು ಧ್ಯಾನದಲ್ಲೂ ಆಗುತ್ತದೆ.

ಪ್ರಶ್ನೆ: ಶರೀರಕ್ಕೆ ನಿದ್ರೆಯ ಅಗತ್ಯವಿದೆಯೇ? ನಿದ್ರೆಯ ಬದಲಾಗಿ ಧ್ಯಾನ ಮಾಡಬಹುದೇ?

ಶ್ರೀ ಶ್ರೀ ರವಿ ಶಂಕರ್: ನಿಮ್ಮ ಶರೀರಕ್ಕೆ ನಿರ್ದಿಷ್ಟ ಪ್ರಮಾಣದ ನಿದ್ರೆಯ ಅಗತ್ಯವಿದೆ. ನೀವು ದೇಹದಿಂದ ನಿದ್ರೆಯನ್ನು ಕಸಿದುಕೊಂಡರೆ, ಅದು ಅದನ್ನು ತೆಗೆದುಕೊಳ್ಳುವುದು. ನಿರ್ದಿಷ್ಟ ಪ್ರಮಾಣದ ನಿದ್ರೆಯ ಬಳಿಕ, ಧ್ಯಾನವು ಹೆಚ್ಚು ಆಳವಾಗುತ್ತದೆ. ಮೊದಲನೆಯದಾಗಿ ನೀವು ವಂಚಿತ ನಿದ್ರೆಯನ್ನು ದೇಹಕ್ಕೆ ಪೂರೈಸಬೇಕು. ಸಾಲ ಮುಗಿದ ಬಳಿಕ ಮಾತ್ರ ಲಾಭವನ್ನು ಲೆಕ್ಕ ಹಾಕಲಾಗುವುದು!

ಪ್ರಶ್ನೆ: ಧ್ಯಾನವು ಜನರನ್ನು ಅಹಿಂಸಾತ್ಮಕವಾಗಿ ಮಾಡಬಲ್ಲದೇ? ಅದು ಬಂಧನದಲ್ಲಿರುವ ಜನರಿಗೆ ಸಹಾಯ ಮಾಡಬಲ್ಲದೇ?

ಶ್ರೀ ಶ್ರೀ ರವಿ ಶಂಕರ್: ನಾವು ನಮ್ಮ ಕಾರ್ಯಕ್ರಮಗಳನ್ನು ಪ್ರಪಂಚದ ಸುತ್ತಲಿನ ಸೆರೆಮನೆಗಳಲ್ಲಿ ಮಾಡುತ್ತಾ ಬಂದಿದ್ದೇವೆ. ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಖೈದಿಗಳ ಅನುಭವವನ್ನು ಓದಲು ನೀವು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಲ್ಲಿರಾದರೆ, ಅದು ಅವರ ಮೇಲೆ ಬೀರಿರುವ ಪ್ರಭಾವವನ್ನು ನೀವು ನೋಡುವಿರಿ. ಪ್ರಪಂಚದಾದ್ಯಂತದ ಸುಮಾರು ೪೦೦,೦೦೦ ಖೈದಿಗಳು ಶಿಬಿರವನ್ನು ಮಾಡಿದ್ದಾರೆ ಮತ್ತು ಅವರ ನಕಾರಾತ್ಮಕ ಮನೋಭಾವವು, ಒಂದು ಅಪರಾಧಿ ಮನೋಭಾವದಿಂದ ಒಂದು ಸಹಾನುಭೂತಿಯುಳ್ಳ ಮನೋಭಾವದ ಕಡೆಗೆ ಸಂಪೂರ್ಣವಾಗಿ ಬದಲಾಗಿದೆ.

ನಾವು ಈ ಕಾರ್ಯಕ್ರಮವನ್ನು ಶಾಲೆಗಳಲ್ಲಿ ಕೂಡಾ ಮಾಡುತ್ತಿದ್ದೇವೆ. ಎಲ್ಲಿ ಸವಾಲುಗಳಿರುವ ಮಕ್ಕಳಿರುವರೋ ಮತ್ತು ಹಿಂಸೆಯ ಹಲವಾರು ಘಟನೆಗಳಿರುವುವೋ, ಅಲ್ಲಿ ಕೂಡಾ ಇದು ಸಹಾಯಕವಾಗಿದೆ. ೨೬೦ ಹಿಂಸೆಯ ಘಟನೆಗಳಿದ್ದ, ಶಿಕಾಗೋದ ಒಂದು ಶಾಲಾ ಜಿಲ್ಲೆಯಲ್ಲಿ, ಎಲ್ಲಾ ಮಕ್ಕಳಿಗೆ ಕಾರ್ಯಕ್ರಮವನ್ನು ಕಲಿಸಿದ ಬಳಿಕ ಅಲ್ಪ ಕಾಲಾವಧಿಯಲ್ಲಿ ಅದು ೬೨ ಘಟನೆಗಳಿಗೆ ಇಳಿಯಿತು. ಆದುದರಿಂದ, ಪ್ರಭಾವವು ಬಹಳ ಸ್ಪಷ್ಟವಾಗಿದೆ. ಧ್ಯಾನವು ಜನರನ್ನು ಒಳಗಿನಿಂದ ಅಹಿಂಸಾತ್ಮಕವಾಗಿ ಮಾಡಬಲ್ಲದು ಎಂಬುದು ಸ್ಪಷ್ಟವಾಗಿದೆ.  

ಪ್ರಶ್ನೆ: ಅಪಸ್ಮಾರ ರೋಗವಿರುವ ಜನರು ಪ್ರಾಣಾಯಾಮಗಳನ್ನು ಮಾಡಬಹುದೇ?

ಶ್ರೀ ಶ್ರೀ ರವಿ ಶಂಕರ್: ಅದು ಅಪಸ್ಮಾರದ ರೋಗಿಗಳಲ್ಲಿ ಹಲವರಿಗೆ ಲಾಭದಾಯಕವಾಗಿದೆಯಾದರೂ, ಅವರಿಗೆ ಪ್ರಾಣಾಯಾಮ ಮಾಡಿಸುವುದರಲ್ಲಿ ನಾನು ಸ್ವಲ್ಪ ಜಾಗ್ರತೆಯಾಗಿರುವೆನು. ಮೊದಲನೆಯದಾಗಿ, ಅವರಿಗೆ ಅಪಸ್ಮಾರದ ಯಾವುದಾದರೂ ಚರಿತ್ರೆಯಿರುವುದೇ  ಎಂದು ನಾವು ಜನರಲ್ಲಿ ಕೇಳುವೆವು. ಹಾಗಿದ್ದರೆ, ಆಗ ಅವರು ನಿಧಾನವಾಗಿ ಮಾಡಬೇಕೆಂದು, ಅವರನ್ನು ಸಾಧಾರಣ ಪ್ರಕ್ರಿಯೆಗೆ ಕೊಂಡೊಯ್ಯುವ ಮೊದಲು ಕೆಲವು ಸರಳ ಪ್ರಾಣಾಯಾಮ ಮತ್ತು ಉಸಿರಾಟದ ವ್ಯಾಯಾಮಗಳೊಂದಿಗೆ ಪ್ರಾರಂಭಿಸಲು ಹೇಳಲಾಗುತ್ತದೆ.

ಸರಳವಾದ ಧ್ಯಾನದ ಬಗ್ಗೆ ಹೇಳುವುದಾದರೆ, ಅದು ವಿಶ್ರಾಮದಂತೆ, ಅದು ಯಾವುದೇ ಹಾನಿಯನ್ನು ಮಾಡುವುದಿಲ್ಲ. ಹೀಗಿದ್ದರೂ, ಮುಂದುವರಿದ ಧ್ಯಾನವನ್ನು ಮಾಡಲು ನಿಮಗೆ ಹೆಚ್ಚಿನ ತ್ರಾಣದ ಅಗತ್ಯವಿದೆ. ಅದು, ವಿವಿಧ ಶಕ್ತಿಯ ಕೇಂದ್ರಗಳು ಅಥವಾ ಚಕ್ರಗಳನ್ನು ಉತ್ತೇಜಿಸುವುದನ್ನು ಒಳಗೊಂಡಿದೆ.

ನಮ್ಮ ಕಾರ್ಯಕ್ರಮಗಳನ್ನು ಮಾಡಿ ಮನೋವಿಕೃತರಾದ ಯಾರನ್ನೂ ನಾನು ಭೇಟಿಯಾಗಿಲ್ಲ. ಹೀಗಿದ್ದರೂ, ಅವರು ಈಗಾಗಲೇ ಬೈ-ಪೋಲಾರ್ ಅಥವಾ ಛಿದ್ರಮನಸ್ಕರಾಗಿದ್ದರೆ ಹಾಗಾಗುವ ಸಾಧ್ಯತೆಗಳಿವೆ. ಅದಕ್ಕಾಗಿ, ನಾವು ಅವರಿಗೆ ಉನ್ನತ ಶಿಬಿರ ಕಾರ್ಯಕ್ರಮಗಳನ್ನು ಮಾಡದಿರಲು ಹೇಳುತ್ತೇವೆ. ಮೂಲಭೂತವಾದವುಗಳಿಗೆ; ಸರಳ ಧ್ಯಾನ, ಯೋಗಾಸನಗಳು ಮತ್ತು ಸರಳ ಪ್ರಾಣಾಯಾಮಗಳಿಗೆ ಅಂಟಿಕೊಂಡಿರಲು ನಾವು ಅವರಿಗೆ ಹೇಳುತ್ತೇವೆ. ಅದರಿಂದ ಏನೂ ತೊಂದರೆಯಿಲ್ಲ.  

ಅಭ್ಯಾಸಗಳನ್ನು ಅತಿಯಾಗಿ ಮಾಡದಿರಲು ನಾವು ಜನರಿಗೆ ಹೇಳುತ್ತೇವೆ. ಅವುಗಳನ್ನು ಮಾಡುವುದರಿಂದ ಜನರಿಗೆ ಬಹಳ ಒಳ್ಳೆಯದನ್ನಿಸುವುದರಿಂದ, ಅವರಿಗೆ ಅದು ಎಷ್ಟೊಂದು ಆಹ್ಲಾದಕಾರಿಯಾಗಿ ಮತ್ತು ಉತ್ತೇಜನಕಾರಿಯಾಗಿ ಕಂಡುಬರುತ್ತದೆಯೆಂದರೆ, ಕೆಲವೊಮ್ಮೆ ಅವರದನ್ನು ಮಿತಿ ಮೀರಿ ಮಾಡುವತ್ತ ಒಲವು ತೋರುತ್ತಾರೆ. ಅವರು ೬ ಗಂಟೆಗಳಿಂದ ೮ ಗಂಟೆಗಳ ವರೆಗೆ ಧ್ಯಾನ ಮಾಡಲು ಪ್ರಾರಂಭಿಸಬಹುದು. ಇಲ್ಲಿಯೇ ಸಮಸ್ಯೆ ಉಂಟಾಗುವುದು. ಅದಕ್ಕಾಗಿಯೇ ನಿಮಗೆ ಸರಿಯಾದ ತರಬೇತಿಯ ಹಾಗೂ ಅದನ್ನು ಮಿತಿಯಲ್ಲಿ ಮಾಡಲು ಮಾರ್ಗದರ್ಶನ ನೀಡುವ ಒಬ್ಬರು ಒಳ್ಳೆಯ ತರಬೇತುದಾರನ ಅಗತ್ಯವಿರುವುದು. ಎಷ್ಟನ್ನು ಶಿಫಾರಸು ಮಾಡಲಾಗಿದೆಯೋ ಕೇವಲ ಅಷ್ಟನ್ನು ಮಾತ್ರ ನಾವು ಮಾಡಬೇಕು. ಯಾವುದನ್ನೇ ಆದರೂ ಅತಿಯಾಗಿ ಮಾಡುವುದು ಒಳ್ಳೆಯದಲ್ಲ. ಅದು, ಬಹಳಷ್ಟು ವಿಟಾಮಿನುಗಳನ್ನು ಒಂದೇ ಸಮಯಕ್ಕೆ ಸೇವಿಸುವಂತೆ. ಅದು ಒಬ್ಬನ ಸಮತೋಲನವನ್ನು ಹಾಳು ಮಾಡುತ್ತದೆ.

ಇಪ್ಪತ್ತು ನಿಮಿಷಗಳ ವರೆಗೆ, ೩೦ ನಿಮಿಷಗಳ ವರೆಗೆ ಅಥವಾ ಒಂದು ಗಂಟೆಯ ವರೆಗೆ ಧ್ಯಾನ ಮಾಡುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ನಂತರ, ಜನರು ಸ್ವಲ್ಪ ಎಡೆ ಬಿಟ್ಟವರಂತಾಗುತ್ತಾರೆ ಅಥವಾ ವಾಸ್ತವಿಕತೆಯೊಂದಿಗಿನ ಸಂಬಂಧವನ್ನು ಕಳೆದುಕೊಳ್ಳುತ್ತಾರೆ. ಅದನ್ನು ಅತಿಯಾಗಿ ಮಾಡಿದರೆ ಜನರಿಗೆ ಆ ರೀತಿ ಆಗಬಹುದು.

ಪ್ರಶ್ನೆ: ಧ್ಯಾನ ಮತ್ತು ಸಾಕ್ಷಾತ್ಕಾರಗಳ ನಡುವಿನ ವ್ಯತ್ಯಾಸವೇನು? ಧ್ಯಾನವೆಂಬುದು ಸಾಕ್ಷಾತ್ಕಾರದ ಕಡೆಗೆ ಇರುವ ಒಂದು ಪ್ರಕ್ರಿಯೆಯೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಧ್ಯಾನವೆಂಬುದು ಒಂದು ಪ್ರಕ್ರಿಯೆ ಮತ್ತು ಆತ್ಮ ಸಾಕ್ಷಾತ್ಕಾರವೆಂಬುದು ಪರಿಣಾಮ. ನೋಡು, ನೀನು ನನಗೊಂದು ಪ್ರಶ್ನೆಯನ್ನು ಕೇಳುತ್ತಿರುವೆ ಮತ್ತು ನಾನು ನಿನಗೆ ಉತ್ತರವನ್ನು ನೀಡುತ್ತಿರುವೆ. ನೀನು ಉತ್ತರವನ್ನು ಕೇಳಿಸಿಕೊಳ್ಳುತ್ತಿರುವೆ ಮತ್ತು ಒಳಗೆ ’ಹೌದು’ ಎಂದು ಹೇಳುತ್ತಾ ನೀನು ತಲೆದೂಗುತ್ತಿರುವೆ. ಅದು ಸಾಕ್ಷಾತ್ಕಾರ.

ಪ್ರಶ್ನೆ: ಭಾರತದಲ್ಲಿ ಅಷ್ಟೊಂದು ವಿರೋಧಾತ್ಮಕತೆಗಳು ಯಾಕಿವೆ?

ಶ್ರೀ ಶ್ರೀ ರವಿ ಶಂಕರ್: ಭಾರತವು ವಿರೋಧಾತ್ಮಕತೆಗಳಿಂದ ತುಂಬಿದೆ. ನಮ್ಮಲ್ಲಿ ಹಿಮ-ಪರ್ವತಗಳು ಮತ್ತು ಮರುಭೂಮಿಗಳಿವೆ. ಅದೇ ರೀತಿಯಲ್ಲಿ, ನಾವು ಜೀವನದಲ್ಲಿ ವೈಪರೀತ್ಯಗಳನ್ನು ಹೊಂದಿದ್ದೇವೆ. ನಮ್ಮಲ್ಲಿ ಬಹಳ ಶಾಂತವಾದ ಮನಸ್ಸುಗಳಿವೆ ಮತ್ತು ಸಂಪೂರ್ಣವಾಗಿ ಕ್ಷೋಭೆಗೊಂಡ ಮನಸ್ಸುಗಳನ್ನು ಕೂಡಾ ನೀವು ಕಾಣಬಹುದು. ಭಾರತವು ಮರಳು ಮತ್ತು ಸಕ್ಕರೆಗಳ ಒಂದು ಮಿಶ್ರಣವಾಗಿದೆ. ನೀವೊಂದು ಇರುವೆಯಂತಿರಬೇಕು; ಸಕ್ಕರೆಯನ್ನು ಆರಿಸಿಕೊಳ್ಳಲು ವಿನಮ್ರರಾಗಿರಬೇಕು.

ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯಿಂದ ಇತ್ತೀಚೆಗೆ ಆದ ಅಭಿವೃದ್ಧಿಯನ್ನು ನಾನು ಹಂಚಿಕೊಳ್ಳಲು ಬಯಸುತ್ತೇನೆ. ಯಾರಾದರೂ ಒಬ್ಬರು ಮೇಲೆ ಬರಬೇಕು. ೮೦-೯೦ ಕಿಲೋಗಳ ಮಾನವ ಶರೀರವನ್ನು ನಾಶಪಡಿಸಲು ಎಷ್ಟು ವಿಷ ಬೇಕಾಗುತ್ತದೆಯೆಂದು ನನಗೆ ಹೇಳಿ? ವಿಷದ ಒಂದು ಹನಿಯು ಶರೀರವನ್ನು ನಾಶಪಡಿಸಬಲ್ಲದು, ಸರಿಯಾ?

ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯು, ಕೆಲವು ಆಯುರ್ವೇದದ ಮೂಲಿಕೆಗಳ ಭಟ್ಟಿಯಿಳಿಸಿದ ನೀರನ್ನು ತಯಾರಿಸಿದ್ದಾರೆ, ಅದರಲ್ಲಿ ಒಂದು ಅಮೃತ ಬಳ್ಳಿ ಎಂದು ಕರೆಯಲ್ಪಡುತ್ತದೆ. ಅದು ಶರೀರದಲ್ಲಿನ ರೋಗನಿರೋಧಕ ವ್ಯವಸ್ಥೆಯ ಶಕ್ತಿಯನ್ನು ವರ್ಧಿಸುತ್ತದೆ. ಅದು ಶಕ್ತಿ ಡ್ರಾಪ್ಸ್ ಎಂದು ಕರೆಯಲ್ಪಡುತ್ತದೆ.

ಮುಂಬೈಯ ಟಾಟಾ ಮೆಮೋರಿಯಲ್ ಕ್ಯಾನ್ಸರ್ ಆಸ್ಪತ್ರೆಯು ಶಕ್ತಿ ಡ್ರಾಪ್ಸ್ ಮೇಲೆ ಸಂಶೋಧನೆಯನ್ನು ನಡೆಸುತ್ತಿದೆ ಮತ್ತು ಈ ವರ್ಷದ ಕೊನೆಯೊಳಗೆ ಒಂದು ಪ್ರಬಂಧವನ್ನು ಪ್ರಕಟಿಸಲಿದೆ. ೪೮ ಗಂಟೆಗಳಲ್ಲಿ, ಈ ಹನಿಗಳಿಗೆ ಶರೀರದಲ್ಲಿನ ಕ್ಯಾನ್ಸರ್ ಕೋಶಗಳನ್ನು ೪೦%ದಷ್ಟು ಕಡಿಮೆ ಮಾಡಲು ಸಾಧ್ಯವಾಗಿವೆಯೆಂದು ಅವರು ಕಂಡುಹಿಡಿದಿದ್ದಾರೆ. ಕೀಮೋಥೆರಪಿಯ ಮೂಲಕ ಹಾದುಹೋಗುತ್ತಿದ್ದ ಬಹಳಷ್ಟು ಜನರಿಗೆ ಇದು, ಅಡ್ದ ಪರಿಣಾಮಗಳಿಲ್ಲದೆಯೇ ಸಹಾಯ ಮಾಡಿದೆ. ಶರೀರದಲ್ಲಿನ ಕ್ಯಾನ್ಸರ್ ಕೋಶಗಳ ಮೊತ್ತವನ್ನು ಕಡಿಮೆ ಮಾಡಲು ಅದಕ್ಕೆ ಸಾಧ್ಯವಿದೆ ಮತ್ತು ಅದು ನೋವನ್ನು ಕಡಿಮೆಗೊಳಿಸುವಂತಹ ಹಲವಾರು ವಿಷಯಗಳಲ್ಲಿ ಜನರಿಗೆ ಸಹಾಯ ಮಾಡಿದೆ.

ಪ್ರಶ್ನೆ: ಒಬ್ಬರು ಸಮಯಪ್ರಜ್ಞೆಯನ್ನು ಹೇಗೆ ಉತ್ತಮಗೊಳಿಸಬಹುದು? ಒಬ್ಬರಿಗೆ ಈ ದಿನಗಳಲ್ಲಿ ಎಷ್ಟೊಂದು ದೀರ್ಘ ಸಮಯದ ಕೆಲಸ ಮತ್ತು ಬಹಳಷ್ಟು ಪ್ರಯಾಣ ಮಾಡುವುದಿರುತ್ತದೆ.

ಶ್ರೀ ಶ್ರೀ ರವಿ ಶಂಕರ್: ಕೆಲವು ಉಸಿರಾಟದ ತಂತ್ರಗಳು, ಪ್ರಾಣಾಯಾಮ ಮತ್ತು ಧ್ಯಾನಗಳು ನಿಮಗೆ ನಿಮ್ಮ ಸಮಯ ಪ್ರಜ್ಞೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತವೆ. ಬೆಳಗ್ಗೆ ಮತ್ತು ಸಂಜೆ ಪ್ರಾಣಾಯಾಮ ಮಾಡುವುದು ನಿಮ್ಮನ್ನು ನಿಜವಾಗಿ ತಾಜಾವಾಗಿಡುತ್ತದೆ. ನಾನು ಪ್ರತಿದಿನವೂ ಸುಮಾರು ೧೯ ಗಂಟೆಗಳ ವರೆಗೆ ಕೆಲಸ ಮಾಡುತ್ತೇನೆ ಮತ್ತು ನಾನು ಸಾಕಷ್ಟು ಪ್ರಯಾಣವನ್ನು ಕೂಡಾ ಮಾಡುತ್ತಿರುತ್ತೇನೆ. ನಾನು ಬಳಲಿರುವಂತೆ ಕಾಣಿಸುತ್ತಿರುವೆನೇ? ಅದು ಖಂಡಿತವಾಗಿ ಸಹಾಯ ಮಾಡುತ್ತದೆ!

ಪ್ರಶ್ನೆ: ಅಲೋಪತಿ ಔಷಧಿ ಮತ್ತು ಆ ಕ್ಷೇತ್ರದಲ್ಲಿರುವ ವೃತ್ತಿಪರರು ಆಯುರ್ವೇದದ ವೃತ್ತಿಪರರೊಂದಿಗೆ ಸಹಕರಿಸುವುದನ್ನು ನೀವು ಹೇಗೆ ನೋಡಲು ಬಯಸುವಿರಿ?

ಶ್ರೀ ಶ್ರೀ ರವಿ ಶಂಕರ್: ಭಾರತ ಸರಕಾರವು ಆಯುಷ್ ಎಂದು ಕರೆಯಲ್ಪಡುವ ಒಂದು ಸಂಸ್ಥೆಯನ್ನು ಸ್ಥಾಪಿಸಿದೆ. ಅದು ಈ ಸಹಯೋಗದ ಕಡೆಗೆ ಕೆಲಸ ಮಾಡುತ್ತಿದೆ. ಖಂಡಿತವಾಗಿಯೂ, ಔಷಧ ಶಾಸ್ತ್ರದ ಈ ಎರಡು ವಿಭಾಗಗಳ ನಡುವೆ ನಾವೊಂದು ಜೊತೆಗಾರಿಕೆ ಹೊಂದಿದರೆ, ಮಾಡಬಹುದಾದದ್ದು ಬಹಳಷ್ಟಿದೆ. ಪ್ರಪಂಚಕ್ಕೆ ಮಹತ್ತರವಾದ ಪ್ರಯೋಜನವಾಗಲಿದೆ.