ಮಂಗಳವಾರ, ಏಪ್ರಿಲ್ 9, 2013

ಪ್ರತ್ಯಕ್ಷ, ಪರೋಕ್ಷ

ಅಮೃತಬಿ೦ದು’ ಸರಣಿಯ ಬರಹಗಳು

ಹದಿಮೂರನೆಯ ಕ೦ತು

ಮೋಹದಿಂದ ಮುಕ್ತಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೮.೦೬.೨೦೦೩ರಂದು ಪ್ರಕಟವಾಗಿತ್ತು)

"ಜಾಗೃತ್ ದ್ವಿತೀಯ ಕರಃ"
ಯಾವಾಗ ಮನಸ್ಸು ಬೇಸತ್ತು ಯಾರ ಮೇಲೋ ಮನಸ್ಸಿನಲ್ಲಿ ದ್ವೇಷ, ಅಸಹ್ಯ, ಅಸೂಯೆ ಹೀಗೆ ಏನು ಶುರುವಾದರೂ, ಆಗ ಇದೊಂದು ಸೂತ್ರ ಸಾಕು.... "ಜಾಗೃತಾವಸ್ಥೆಯಲ್ಲಿ ತಾನೇ ಇದೆಲ್ಲಾ ಆಯ್ತು?" ಅಂದುಕೊಳ್ಳಬೇಕು.
ಉದಾಹರಣೆಗೆ - ಕನಸಿನಲ್ಲಿ ಕಂಡ ಹುಲಿಗೆ ಎಚ್ಚರವಾದ ಮೇಲೆ ನಾವು ಭಯಪಡುವುದಿಲ್ಲ. ಪಟ್ಟರೆ ಅದು ಇನ್ನೂ ಜಾಸ್ತಿ ಮೌಢ್ಯತೆ! ಕನಸಿನಲ್ಲಿ ಹುಲಿ ಕಾಣಿಸಿದರೆ ಆಗ ಕನಸಿನ ಬಂದೂಕವೇ ಬೇಕು. ನಿಜವಾದ ಬಂದೂಕದಲ್ಲಿ ಕನಸಿನ ಹುಲಿಯನ್ನು ಸುಡುವುದಕ್ಕೆ ಆಗುವುದಿಲ್ಲ, ಅಲ್ವಾ? ಹಾಗೇ, ಕನಸಿನಲ್ಲಿ ಹಲಸಿನ ಹಣ್ಣು ಕಾಣಿಸಿತು ಅಂದರೆ ಅದಕ್ಕೆ ಕನಸಿನದೇ ಚಾಕು ಬೇಕು. ನಿಜವಾದ ಚಾಕು ತೆಗೆದುಕೊಂಡು ಕನಸಿನಲ್ಲಿ ಕಾಣಿಸಿದ ಹಣ್ಣು ಕೊಯ್ಯುವುದಕ್ಕೆ ಆಗುತ್ತಾ?
ಈ ಜಾಗೃತಾವಸ್ಥೆಯಲ್ಲಿ ನೀನು ಅಂದುಕೊಳ್ತಾ ಇದೀಯಲ್ಲಪ್ಪಾ, "ನನ್ನ ಮಗ, ನನ್ನ ಮನೆ, ನನ್ನ ಕೆಲಸ" ಅಂತ, ಇದೆಲ್ಲಾ ಎಚ್ಚೆತ್ತಿದ್ದಾಗ ತಾನೇ? ನಿದ್ರೆಯಲ್ಲಿ ಇದೆಲ್ಲಾ ಎಲ್ಲಿರುತ್ತೆ? ಇದೆಲ್ಲಾ ಜಾಗೃತಾವಸ್ಥೆಯಲ್ಲಿ ಮಾತ್ರ. ಇದು ಎರಡನೆಯ ಕೈ. ನೀನು ಧ್ಯಾನದಲ್ಲಿ ನಿನ್ನ ಶುದ್ಧ ಚೇತನಕ್ಕೆ ಹೋದಾಗ, ತುರೀಯಾವಸ್ಥೆಗೆ ಹೋದಾಗ, ಅಲ್ಲಿ ಅರಿವಾಗುತ್ತೆ - ಎಷ್ಟೋ ಸಲ, ಎಷ್ಟೋ ಜನ್ಮಗಳಲ್ಲಿ ನೀನು ಇದೇ ತರಹದ ಜೀವನವನ್ನು ನಡೆಸಿಬಿಟ್ಟಿದೀಯ. ಎಷ್ಟೋ ಈ ತರಹ ಮಕ್ಕಳಾಗಿದಾರೆ, ಎಷ್ಟೋ ಸಂಸಾರವಾಗಿದೆ... ಎಷ್ಟೋ ಜನಗಳ ಮೇಲೆ ಮೋಹ ಉಂಟಾಗಿದೆ... "ಅಯ್ಯೋ ಅವರನ್ನು ಬಿಟ್ಟು ನಾನು ಜೀವನ ನಡೆಸುವುದಕ್ಕೇ ಆಗಲ್ಲ" ಅಂತ ನೀನು ಅತ್ತಿದ್ದೀಯ. ಅವರೂ ಹೋಗಿದ್ದಾರೆ, ನೀನೂ ಹೋಗಿದ್ದೀಯ!! ಈಗ ಅವರೆಲ್ಲೋ ಯಾವುದೋ ದೇಶದಲ್ಲಿ ಹುಟ್ಟಿದ್ದಾರೆ, ನೀನೆಲ್ಲೋ ಇಲ್ಲಿ ಭಾರತದಲ್ಲಿ ಇದೀಯಾ... ಎಷ್ಟೋ ಈ ತರಹ ಮೋಹದಲ್ಲಿ ಸಿಕ್ಕಿಹಾಕಿಕೊಂಡು ಸಿಕ್ಕಿಹಾಕಿಕೊಂಡು ಮೇಲೆ ಬಂದಿದೀಯ. ಜಾಗೃತ್ ಅವಸ್ಥೆ ಇಷ್ಟೆ. ಇದನ್ನು ತಿಳಿದುಕೋ. ತುರಿಯಾವಸ್ಥೆಯಲ್ಲಿ ಇದು ವ್ಯಾಪಕವಾಗಿ, ವಿಶಾಲವಾಗಿ ಅಭಿವ್ಯಕ್ತವಾಗುತ್ತದೆ. ಇದರಿಂದ ಮೋಹವನ್ನು ಜಯಿಸಲು, ಮೋಹದಿಂದ ಪಾರಾಗಲು ಸಾಧ್ಯ. "ಜಾಗೃತ್ ದ್ವಿತೀಯ ಕರಃ".

* * * * *

ತುರೀಯ(ಸೂಕ್ಷ್ಮ) ಮೊದಲನೆಯದು, 
ಜಾಗೃತ್(ಸ್ಥೂಲ) ಎರಡನೆಯದು
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೯.೦೬.೨೦೦೩ರಂದು ಪ್ರಕಟವಾಗಿತ್ತು)

ಜಾಗೃತಾವಸ್ಥೆಯಲ್ಲಿ ಏನೇನು ನಡೆಯುತ್ತಾ ಇದೆ, ಇದು ಒಂದು ತರಹದ ’ಸೆಕೆಂಡ್ ಹ್ಯಾಂಡ್ ಇನ್ಫರ್ಮೇಷನ್’. ಪರೋಕ್ಷವಾಗಿ ನಡೆಯುವಂತಹುದು. ಎಂದರೆ ಮೊದಲೇ ಮುದ್ರಿತವಾದ ಧ್ವನಿ ಸುರುಳಿಯನ್ನು ಮತ್ತೆ ಕೇಳಿದಂತೆ, ಅಥವಾ ಮೊದಲೇ ಚಿತ್ರೀಕರಣವಾದ ದೃಶ್ಯವನ್ನು ಪ್ರದರ್ಶಿಸಿದಾಗ ಆ ದೃಶ್ಯ ಮತ್ತೆ ಕಾಣಿಸುವಂತೆ. ನಾವು ಜಾಗೃತಾವಸ್ಥೆಯಲ್ಲಿ ನೋಡುತ್ತಾ ಇರುವ ಜೀವನ ಕೇವಲ ಪ್ರತಿಬಿಂಬ ಮಾತ್ರ. ಇವೆಲ್ಲಾ ಒಂದು ಸೂಕ್ಷ್ಮ ಸ್ತರದಲ್ಲಿ ಮೊದಲೇ ಆಗಿಹೋಗಿಬಿಟ್ಟಿದೆ. ಈಗ ನಡೆಯುತ್ತಿರುವುದು ಸುಮ್ಮನೆ ರೀ ಪ್ಲೇ (ಪುನಃ ಪ್ರದರ್ಶನ) ಮಾಡಿದಂತೆ!
ಸೂಕ್ಷ್ಮ ಸ್ತರದಲ್ಲಿ ಮೊದಲು ಘಟನೆಗಳು ನಡೆಯುತ್ತವೆ, ಆಮೇಲೆ ಸ್ಥೂಲಕ್ಕೆ ಬರುತ್ತದೆ. ಇದು ವಿಧಿವಾದ ಅಲ್ಲ, ’ಸೂಕ್ಷ್ಮ ಮತ್ತು ಸ್ಥೂಲದಲ್ಲಿ ಇರತಕ್ಕಂಥ ಸಂಬಂಧ ಮತ್ತು ಭೇದ’. ಪ್ರತಿಯೊಬ್ಬರ ಸುತ್ತಲೂ ಸೂಕ್ಷ್ಮವಾಗಿ ಒಂದು ಪ್ರಭೆಯಿದೆ. ಈಗ ’ಕಿರ್ಲಿಯನ್ ಫೋಟೋಗ್ರಫಿ’ಯಿಂದ ತೆಗೆದು ತೋರಿಸುತ್ತಾರೆ. ಸ್ಥೂಲದಲ್ಲಿ ನಮ್ಮ ಶರೀರದಲ್ಲಿ ಬರುವ ರೋಗಗಳು ಆರು ತಿಂಗಳು ಮೊದಲೇ ಸೂಕ್ಷ್ಮದಲ್ಲಿ ಬರುತ್ತವೆ. ಅದನ್ನು ಮೊದಲೇ ಕಂಡುಹಿಡಿಯಬಹುದು. ಸ್ಥೂಲದಲ್ಲಿ ಬರುವುದು ದ್ವಿತೀಯ ಕರಃ, ಎಂದರೆ ಎರಡನೆಯ ಸಾರಿ, ಪ್ರತಿಬಿಂಬ. ಬಿಂಬ ಇದ್ದರಲ್ಲವೆ ಪ್ರತಿಬಿಂಬ ಬರುವುದು? ನಾವು ಪ್ರತಿಬಿಂಬವನ್ನೇ ಬಿಂಬವೆಂದು ತಿಳಿದುಕೊಂಡಿರುವೆವು. ಇದೇ ಅಜ್ಞಾನ. ’ಇದು ಪ್ರತಿಬಿಂಬ’ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಲೆಂದೇ ’ಜಾಗೃತ್ ದ್ವಿತೀಯ ಕರಃ’ ಎನ್ನುವ ಸೂತ್ರ ಹೇಳಿರುವುದು. ಇದಕ್ಕೆ ಯೋಗದಲ್ಲಿ ಮಹತ್ವವಿದೆ.
ಬುದ್ಧಿವಂತರಾದವರು ಖಾಹಿಲೆ ಬರುವ ಮುನ್ನವೇ ವ್ಯಾಕ್ಸಿನೇಷನ್ ಹಾಕಿಸಿಕೊಂಡು ಖಾಹಿಲೆಯೇ ಬರದಂತೆ ತಡೆಗಟ್ಟುತ್ತಾರೆ. ಹಾಗೆ, "ಹೇಯಂ ದುಃಖ ಅನಾಗತಾ", ಇನ್ನೂ ದುಃಖ ಬಂದಿಲ್ಲ... ಬರುವ ಮುನ್ನವೇ ಧ್ಯಾನ ಜಪಾದಿಗಳನ್ನು ಮಾಡುವುದರಿಂದ ಸೂಕ್ಷ್ಮ ಶರೀರದಲ್ಲಿ ಉಂಟಾಗಿರತಕ್ಕಂಥ ಆಘಾತಗಳು ವಾಸಿಯಾಗಿ ಸರಿಹೋಗಿಬಿಡುತ್ತದೆ. ಹಾಗೇ ತುಂಬ ಚಿಂತೇನೇ ತಲೇಲಿ ಹೊತ್ತುಕೊಂಡು ಸತ್ಸಂಗಕ್ಕೆ ಬಂದು ಕುಳಿತಾಗ ಆ ವಾತಾವರಣದಿಂದಾಗಿ ನಮ್ಮ ಸೂಕ್ಷ್ಮ ಪ್ರಭೆಯಲ್ಲಿರತಕ್ಕಂಥ ಛಿದ್ರಗಳು ಮುಚ್ಚಿಕೊಂಡು ಸರಿಹೋಗಿಬಿಡುತ್ತೆ. ಹಾಗೆ ಸರಿಹೋದ ತಕ್ಷಣ ಮನಸ್ಸು ಉಲ್ಲಾಸದಿಂದ ತುಂಬಿಬಿಡುತ್ತದೆ. ಸೂಕ್ಷ್ಮ ಪ್ರಥಮ - ಸ್ಥೂಲ ದ್ವಿತೀಯ; ಹಾಗೇ ತುರೀಯ ಪ್ರಥಮ - ಜಾಗೃತ್ ದ್ವಿತೀಯ, ಎರಡನೆಯದು. ಅದಕ್ಕೇ "ಜಾಗೃತ್ ದ್ವಿತೀಯ ಕರಃ" ಅಂತ ಸೂತ್ರ ಬಂದಿತು.

* * * * *

ಆತ್ಮನೇ ನರ್ತಕ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೦.೦೬.೨೦೦೩ರಂದು ಪ್ರಕಟವಾಗಿತ್ತು)

ಗ ಮುಂದಿನ ಸೂತ್ರ. ಇದು ಅಮೋಘವಾದ ಸೂತ್ರ. "ನರ್ತಕಃ ಆತ್ಮಾ"; "ರಂಗೋ ಅಂತರಾತ್ಮ". ಆತ್ಮ ನರ್ತಕನ ಹಾಗೆ ಅಂತ, ನಾಟಕದಲ್ಲಿ ಪಾತ್ರಧಾರಿ. ಒಬ್ಬ ನರ್ತಕ ಅಥವಾ ನಟ ಎಲ್ಲ ವಿಧವಾದ ಹಾವಭಾವಗಳನ್ನೂ ನವರಸಗಳನ್ನೂ ವ್ಯಕ್ತಪಡಿಸುತ್ತಾನೆ. ಒಬ್ಬ ಒಳ್ಳೆಯ ನರ್ತಕ ಭಾವನೆಯನ್ನು ಹೇಗೆ ವ್ಯಕ್ತಪಡಿಸುತ್ತಾನೆ? ಕೋಪ ತೋರಿಸುವಾಗ.... ಕಣ್ಣೆಲ್ಲಾ ಕೆಂಪು! ಯಾವುದೇ ಭಾವವನ್ನೂ ಪೂರ್ಣವಾಗಿ, ತುಂಬಾ ಚೆನ್ನಾಗಿ ತೋರಿಸುತ್ತಾನೆ. ಹಾಗೆಯೇ ನರ್ತಕನಿಗೆ ಒಂದು ಭಾವದಿಂದ ಇನ್ನೊಂದು ಭಾವಕ್ಕೆ ಬದಲಾಯಿಸಿಕೊಳ್ಳಬೇಕಿದ್ದರೂ ಹೆಚ್ಚು ಸಮಯ ಬೇಕಿಲ್ಲ. ಕ್ಷಣಮಾತ್ರದಲ್ಲಿ ಬದಲಾಯಿಸಿಕೊಂಡುಬಿಡುತ್ತಾನೆ, ಹೌದಲ್ಲ? ಹಾಗೇ ನೋಡಿ... ನೀವು ಜೀವನದಲ್ಲಿ ನಿಜವಾಗಿ ಕೋಪಿಸಿಕೊಂಡಾಗ ಆ ಕೋಪ ಶಾಂತವಾಗಲು ಎಷ್ಟು ಸಮಯ ಬೇಕು? ಮತ್ತೆ ನಗಲು ಎಷ್ಟು ಸಮಯ ಆಗುತ್ತದೆ? ಚಿಂತಿತರಾಗಿದ್ದಾಗ ಆ ಚಿಂತೆ ಮರೆಯಲು ಎಷ್ಟು ಸಮಯ ಆಗುತ್ತದೆ? ಆದರೆ ನರ್ತಕನಿಗೆ ಸಮಯವೇ ಬೇಕಿಲ್ಲ. ಕ್ಷಣಕ್ಷಣಕ್ಕೂ ಬದಲಾಗುತ್ತಾನೆ. ಹಾವಭಾವ ಎಲ್ಲವನ್ನೂ ಬದಲಾಯಿಸಿಕೊಳ್ಳುತ್ತಾನೆ. ಇದು ಸೂಕ್ಷ್ಮವಾದ ಜ್ಞಾನ... ಮನಸ್ಸಿಟ್ಟು ಗಮನಿಸಿ.
ಪ್ರತಿಯೊಬ್ಬರ ಮನಸ್ಸಿನಲ್ಲೂ ಹೊಸ ಹೊಸ ಭಾವ ಉತ್ಪತ್ತಿಯಾಗುತ್ತಾ ಇರುತ್ತದೆ. ಆದರೆ ನಾವೇನು ಮಾಡ್ತೀವಿ? ನಮ್ಮಲ್ಲಿ ಹೊಸದಾಗಿ ಪ್ರಕಟವಾದ ಇವತ್ತಿನ ಭಾವವನ್ನು ನಾವು ವೀಕ್ಷಿಸುವುದೇ ಇಲ್ಲ; ಹಳೆಯ ಭಾವಗಳನ್ನು ಎಂದರೆ ಹಿಂದೆಂದೋ ಘಟಿಸಿಹೋದ ಭಾವನೆಗಳನ್ನು ಮುಂದುವರೆಸಿಕೊಂಡು ಬಂದು ಇದಕ್ಕೆ ಬೆರೆಸುತ್ತಿರುತ್ತೇವೆ. ಚೆನ್ನಾಗಿ ತಯಾರಾಗಿರುವ ಪಾಯಸಕ್ಕೆ ಹಳಸಿಹೋಗಿರುವ ಹಳೆಯ ಉಸಲೀನ ತಂದು ಅದರಲ್ಲಿ ಸುರಿದು ಬಿಡುವುದು! ಈ ರೀತಿ. ಆ ನರ್ತಕನಲ್ಲಿರುವ ವೈಶಿಷ್ಟ್ಯವೆಂದರೆ ಅವನಲ್ಲಿ ಈಗ ಯಾವ ಭಾವ ಪ್ರಕಟವಾಗುತ್ತದೋ ಅದು ಈ ಕ್ಷಣದ ಭಾವವೇ ಆಗಿರುತ್ತದೆ.
"ಆತ್ಮ ನರ್ತಕಃ, ನರ್ತಕಃ ಆತ್ಮ" ಅಂದರೆ, ಆತ್ಮನಲ್ಲಿ ಸ್ಥಿರವಾಗಿದ್ದಾಗ ಕ್ಷಣಕ್ಷಣಕ್ಕೂ, ಪ್ರತಿ ಘಳಿಗೆಗೂ ಹೊಸ ಹೊಸ ಭಾವನೆಗಳು ಪ್ರಕಟವಾಗುತ್ತವೆ. ಆತ್ಮಸ್ಥರಾಗಿರುವ ಆತ್ಮಜ್ಞಾನಿಗಳು ಪ್ರಕಟವಾಗುವ ಆ ಭಾವನೆಗಳನ್ನು ಹಾಗೆಯೇ ವ್ಯಕ್ತಪಡಿಸುತ್ತಾರೆ.  

* * * * *

ಜೀವನವೊಂದು ನಾಟಕ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೧.೦೬.೨೦೦೩ರಂದು ಪ್ರಕಟವಾಗಿತ್ತು)

ಸಾಮಾನ್ಯವಾಗಿ ನಾವಂದುಕೊಂಡುಬಿಡ್ತೀವಿ, ಆತ್ಮಜ್ಞಾನಿ ಅಂದರೆ, ಆತ್ಮಸ್ಥರಾಗಿರೋದು ಎಂದರೆ, ನಾವು ನೋಡಿರುವ ಬುದ್ಧ, ಮಹಾವೀರ, ಶಂಕರಾಚಾರ್ಯ, ಈ ವಿಗ್ರಹಗಳ ಹಾಗೆ ಗಂಭೀರವಾಗಿ ಕುಳಿತುಕೊಂಡಿರಬೇಕು ಅಂತ. ಏಕೆಂದರೆ ಶಾಸ್ತ್ರಗಳು ಹೇಳುತ್ತವೆ, ಆತ್ಮಜ್ಞಾನಿ ’ಏಕರಸ’ದಿಂದಿರಬೇಕು ಅಂತ. ಇದನ್ನು ತಪ್ಪಾಗಿ ಅರ್ಥಮಾಡಿಕೊಂಡುಬಿಟ್ಟಿದೀವಿ ನಾವು. ಬೇರೆ ಬೇರೆ ಭಾವಗಳು ಅದೇ ಆತ್ಮನಲ್ಲಿ ಪ್ರಕಟವಾಗುತ್ತವೆ. ’ಆತ್ಮ ನರ್ತಕಃ’ - ಜ್ಞಾನಿಯು ನಾಟಕ ರೂಪದಿಂದ ಅವನ್ನೆಲ್ಲ ಪ್ರಕಟಿಸುತ್ತಾನೆ! ನಾಟಕದಲ್ಲಿ ಕೋಪಿಸಿಕೊಂಡವನಿಗೆ ನಿಜವಾಗಿ, ತಲೆಬಿಸಿಯಾಗುವುದಿಲ್ಲ. ಹಾಗೇ ಆತ್ಮನಲ್ಲಿ ಎಲ್ಲ ಭಾವನೆಗಳು ಬಂದರೂ ಸಹ ಆತ್ಮನಿಗೆ ಅದೊಂದು ಚೂರೂ ತಾಗುವುದಿಲ್ಲ, ಆತ್ಮನಲ್ಲಿ ಅದು ಲವಲೇಶವೂ ಲಿಪ್ತವಾಗುವುದಿಲ್ಲ. ಅಷ್ಟು ನಿರ್ಲಿಪ್ತವಾಗಿ ಇರುತ್ತಾನೆ. ಹಾಗಿದ್ದರೂ, ನಾನಾ ತರಹದ ಭಾವನೆಗಳಲ್ಲಿ ಅವನ ಲೀಲೆ ನಡೆಯುತ್ತಿರುತ್ತದೆ.
ಈ ಇಡೀ ಜಗತ್ತು ನಾಟಕ ಅಷ್ಟೇನೇ. ನಮ್ಮ ಜೀವನದಲ್ಲಿ ಆಗತಕ್ಕಂಥ ಆಗುಹೋಗುಗಳೆಲ್ಲವೂ ನಾಟಕವೇ! ಪ್ರೀತಿಯಿಂದ ಕಣ್ಣೀರು ಹಾಕ್ತೀವಿ, ಕೋಪದಲ್ಲಿ ಕಣ್ಣು ಕೆಂಪು ಮಾಡಿಕೊಳ್ಳೋದು, ಮುಷ್ಠಿ ಬಿಗಿಹಿಡಿಯೋದು, ಜಗಳಕ್ಕೆ ಹೋಗೋದು, ಚಿಂತೆ ಮಾಡೋದು, ಕೂಗಾಡೋದು, ರೇಗಾಡೋದು.... ; ಪ್ರತಿದಿನಾ ನಾವು ಈ ರೀತಿ ಎಲ್ಲಾ ಭಾವನೆಗಳಿಗೂ ಒಳಗಾಗುತ್ತಾ, ಹಾಗೇ ಸಮಯ ಸರಿದಂತೆ ಮರೆಯುತ್ತಾ ಬಂದಿದ್ದೀವಿ. ಸಮಯ ಎಲ್ಲವನ್ನೂ ನುಂಗಿಹಾಕುತ್ತೆ. ಕಾಲಾಂತರದಲ್ಲಿ ನಮ್ಮ ಹಳೆಯ ಚಿಂತೆಗಳೆಲ್ಲವೂ ಬದಲಾಗಿ ಹೊಸ ಹೊಸ ಚಿಂತೆಗಳನ್ನು ಮಾಡುತ್ತಿರುತ್ತೀವಿ. ಸ್ವಲ್ಪ ಜಾಗೃತರಾಗಿ, ಎಚ್ಚೆತ್ತುಕೊಂಡು ನೋಡಿದಾಗ ’ಕಾಲ’ದ ಅವಶ್ಯಕತೆ ಇರುವುದಿಲ್ಲ. ತಕ್ಷಣವೇ ನಿರ್ಲಿಪ್ತತೆ ಬರುತ್ತದೆ. "ನರ್ತಕಃ ಆತ್ಮ" ಎಂದು ತಿಳಿದುಕೊಂಡ ತಕ್ಷಣ, ಎಷ್ಟೇ ಲಿಪ್ತರಾಗಿದ್ದರೂ ಆ ಲಿಪ್ತತೆ ಕಡಿಮೆಯಾಗುತ್ತೆ, ನಿರ್ಲಿಪ್ತತೆ ಉಂಟಾಗುತ್ತೆ. ಕಾಲದ ಅಪೇಕ್ಷೆ ಇರುವುದಿಲ್ಲ. ಅದಕ್ಕೇ ಕಾಲಾತೀತ ಅಂತ ಹೇಳಿದರು. ಕಾಲಕ್ಕೆ ಕಾಲ ’ಮಹಾಕಾಲ’ ಅಂತ ಹೇಳಿದರು. ಆತ್ಮತತ್ವವನ್ನು, ಶಿವತತ್ವವನ್ನು ಮಹಾಕಾಲ ಅನ್ನುತ್ತೀವಿ. ಯಾವುದಕ್ಕೆ ಕಾಲದ ಅಪೇಕ್ಷೆ ಇರುವುದಿಲ್ಲವೋ ಅದು ’ಕಾಲಾತೀತ’ವೆನಿಸುತ್ತದೆ. ನೀನು ’ಕಾಲಾತೀತ’ ಆಗಿದ್ದೀಯ.

* * * * *

ಅಂತರಂಗವೇ ರಂಗಮಂಚ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೨.೦೬.೨೦೦೩ರಂದು ಪ್ರಕಟವಾಗಿತ್ತು)

"ನರ್ತಕಃ ಆತ್ಮ". "ರಂಗೋಂತರಾತ್ಮ"
ನಿನ್ನ ಆತ್ಮ ನರ್ತಿಸುತ್ತಾ ಇದೆ ಅಂತ ನೋಡು, ನೀನೇ ಪಾತ್ರ ಮಾಡ್ತಾ ಇದೀಯ. ಈ ಇಡೀ ಜಗತ್ತು ಹಾಗೂ ಇದರಲ್ಲಿನ ನಮ್ಮ ಜೀವನದ ಆಗುಹೋಗುಗಳೆಲ್ಲವೂ ಕೇವಲ ನಾಟಕವೇ! ನಿನಗಾಗಿರತಕ್ಕಂಥ ದುಃಖ ಕಾಲಕ್ರಮೇಣ ಕಡಿಮೆಯಾಗಬೇಕು ಅಂತ ಕಾಯುತ್ತಾ ಕುಳಿತಿರಬೇಡ, ಎಚ್ಚೆತ್ತುಕೊಂಡು ಇವೆಲ್ಲಾ ನಾಟಕ ಅಂತ ನೋಡು, ಈ ಕ್ಷಣವೇ ಅದೆಲ್ಲವೂ ಹೋಗಿಬಿಡುತ್ತೆ. ಏನೋ ಸಾಧನೆ ಮಾಡಿ ಎಷ್ಟೋ ವರ್ಷದ ನಂತರ ಹೋಗಿಸಿಕೊಳ್ಳುತ್ತೀನಿ ’ನನ್ನ ಸಂಸ್ಕಾರ’ ಅಂತ ಅಂದುಕೊಂಡು ಕೂತಿರಬೇಡ. ನಿನಗೆ ಸಂಸ್ಕಾರ ಎಲ್ಲಿಂದ ಬಂತು? ಜನ ಹೇಳ್ತಾರೆ, ’ತುಂಬಾ ಸಂಸ್ಕಾರಗಳಿವೆ, ಎಷ್ಟೋ ಜನ್ಮಗಳಿಂದ ಬಂದದ್ದು. ಯಾವಾಗ ಹೋಗುತ್ತೋ ಏನೋ, ಇವೆಲ್ಲಾ ಸಾಧ್ಯಾನಾ?’ ಅಂತ. ನೀನೂ ಹಾಗಂತ ಅಂದುಕೊಂಡು ಕುಳಿತುಕೋಬೇಡ. "ನರ್ತಕಃ ಆತ್ಮ" - ನೀನೇ ಪಾತ್ರ ವಹಿಸುತ್ತಾ ಇದೀಯ ಜೀವನದ ಈ ನಾಟಕದಲ್ಲಿ, ಇದನ್ನು ತಿಳಿದುಕೋ.
ಒಬ್ಬ ನರ್ತಕನಿಗೆ ರಂಗಮಂಚ ಬೇಕು, ಅಲ್ಲಿ ನರ್ತನ ನಡೆಯುತ್ತದೆ. "ರಂಗೋ ಅಂತರಾತ್ಮ" ರಂಗಮಂಚ ನರ್ತಕನ ಒಳಗಿದೆ. ಅಂತರಾತ್ಮವೇ ಮಂಚ, ಅಂತರಂಗವೇ ಮಂಚ. ಅತಿ ಅದ್ಭುತವಾದ ದೃಷ್ಟಿಕೋನ ಇದು. ಸ್ಥೂಲದಲ್ಲಿ, ರಂಗಮಂಟಪ ದೊಡ್ಡದಾಗಿ ಕಾಣುತ್ತೆ, ನರ್ತಕ ಚಿಕ್ಕವನಾಗಿರ್ತಾನೆ. ಆದರೆ, ಇಲ್ಲಿ ರಂಗಮಂಚಕ್ಕಿಂತ ನರ್ತಕ ದೊಡ್ಡವನಾಗಿದ್ದಾನೆ. ರಂಗಮಂಚ ಒಳಗಿದ್ದು, ನೀನಾಡತಕ್ಕಂಥ ನಾಟಕ ಒಳಗೇ ಅಳವಡಿಸಿಕೊಳ್ಳಬೇಕಾಗಿದೆ. ನಾಟಕದ ಪರದೆ, ದೀಪ, ಯಾವ ತಯಾರಿಯೂ ನೀನು ಹೊರಗಡೆ ಹೋಗಿ ಮಾಡಬೇಕಾಗಿಲ್ಲ. ಹೊರಗಡೆ ನೀನು ಕಾಣತಕ್ಕಂಥಹುದು ಬರೀ ಪ್ರತಿಬಿಂಬ. ಅಂತರಾತ್ಮವೇ ರಂಗಮಂಚವಾಗಿದೆ. ಈ ಸೂತ್ರದ ಬಗ್ಗೆ ಇನ್ನೂ ವಿವರವಾಗಿ ವಿಚಾರ ಮಾಡೋಣ, ನಾಳೆ.

* * * * *

ಮಾಯೆ ಹಾಗೂ ಆತ್ಮಾನುಭವ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೩.೦೬.೨೦೦೩ರಂದು ಪ್ರಕಟವಾಗಿತ್ತು)

"ರಂಗೋಂತರಾತ್ಮ".
ರಂಗಮಂಚದ ಮೇಲೆ ನರ್ತಕ ಇಲ್ಲ, ನರ್ತಕನ ಒಳಗೆ ರಂಗಮಂಚ ಇದೆ. ಈಗ ನೋಡೀಪ್ಪ, ನೀವು ಒಂದು ದೃಶ್ಯ ಕಾಣ್ತೀರ. ದೂರದಲ್ಲಿರುವ ಬೆಟ್ಟ, ಮರ, ಚಂದ್ರ, ನಕ್ಷತ್ರಗಳು, ಸೂರ್ಯಾಸ್ತ ಎಲ್ಲ ನೋಡ್ತೀರ. ಇವೆಲ್ಲಾ ನಮ್ಮ ಕಣ್ಣಿನ ಒಳಗಿರುವ ರೆಟಿನಾ (ಅಕ್ಷಿಪಟಲ) ದೊಳಗೆ ಪ್ರತಿಬಿಂಬಿತವಾಗುತ್ತೆ. ಈ ರೆಟಿನಾ ಒಳಗೆ ಪ್ರತಿಬಿಂಬಿತವಾಗಬೇಕಿದ್ದರೆ ಯಾವುದು ದೊಡ್ಡದಾಗಿದೆ? ಈ ದೃಶ್ಯವೋ, ಅಥವಾ ಆ ದೃಶ್ಯ ಪ್ರತಿಬಿಂಬಿತವಾಗುವ ಇಂದ್ರಿಯವೋ? ಕಣ್ಣು ದೊಡ್ಡದೋ, ಬಿಂಬ (ದೃಶ್ಯ) ದೊಡ್ದದೋ? ಕಣ್ಣು ದೊಡ್ಡದು, ಏಕೆಂದರೆ ಎಲ್ಲ ದೃಶ್ಯವೂ ಕಣ್ಣಿನೊಳಗೆ ಬರುತ್ತದೆ. ದೃಶ್ಯಕ್ಕಿಂತ ಕಣ್ಣು ದೊಡ್ಡದು. ಆದರೆ ಕಾಣಿಸುವುದು ಏನು? ಕಣ್ಣು ಚಿಕ್ಕದು, ದೃಶ್ಯ ದೊಡ್ಡದು. ಇದಕ್ಕೆ ’ಮಾಯೆ’ ಅನ್ನುತ್ತೀವಿ. ’ಶರೀರ’ ದೃಷ್ಟಿಗೆ ಚೆನ್ನಾಗಿ ಕಾಣಿಸುತ್ತದೆ. ಆದರೆ ಶರೀರದ ಅಸ್ತಿತ್ವಕ್ಕೆ ಕಾರಣವಾಗಿರುವ ’ಚೇತನ’ ದೃಷ್ಟಿಗೋಚರವಲ್ಲ. ಯಾರದಾದರೂ ಮನಸ್ಸು, ಜೀವ, ಆತ್ಮ ಹೊರಗೆ ಕಾಣಿಸುತ್ತಾ? "ನನ್ನ ಆತ್ಮವನ್ನು ನಾನು ಕಂಡುಕೊಂಡೆ" ಎನ್ನುತ್ತಾರೆ. ’ಆತ್ಮದರ್ಶನ’ ಎನ್ನುವ ಶಬ್ದವನ್ನು ನಾವು ದುರುಪಯೋಗಮಾಡಿಕೊಂಡು ಬಿಟ್ಟಿದೀವಿ. ’ಆತ್ಮ’ ಎಂದ ತಕ್ಷಣ ಜನರಿಗೆ ಹೆದರಿಕೆ ಆಗಿಬಿಡುತ್ತದೆ. ಏನು ’ಆತ್ಮ’ ಅಂದರೆ ಸತ್ತುಹೋಗಿರುವವರದ್ದು ಅಂತ ಅಂದುಕೊಂಡುಬಿಡ್ತೀವಿ. ’ಬದುಕಿರುವವರಿಗೆ ಆತ್ಮ ಇದೆ’ ಅಂತ ಅನಿಸುವುದೇ ಇಲ್ಲ, ’ಭ್ರಮೆ’! ಆತ್ಮ ಯಾವಾಗಲೂ ದೃಶ್ಯವಾಗುವುದಕ್ಕೆ ಸಾಧ್ಯವೇ ಇಲ್ಲ! ’ನೀನು’ ದೃಶ್ಯವಾಗಲು ಸಾಧ್ಯವೇ ಇಲ್ಲ! ನೀನು ಕನ್ನಡಿ ಮುಂದೆ ನಿಂತುಕೊಂಡರೂ ಸಹ, ನಿನ್ನ ಪ್ರತಿಬಿಂಬವೇ ಕಂಡರೂ ಸಹ, ಅದು ಪ್ರತಿಬಿಂಬವೇ ಹೊರತು "ನೀನಲ್ಲ"! ಆತ್ಮನ ಅನುಭವ ಆಗುತ್ತದೆಯೇ ಹೊರತು ಆತ್ಮದರ್ಶನ ಆಗುವುದಿಲ್ಲ.

* * * * *

ಬುದ್ಧಿಯಿಂದ ಸತ್ವಸಿದ್ಧಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೪.೦೬.೨೦೦೩ರಂದು ಪ್ರಕಟವಾಗಿತ್ತು)

ಮುಂದಿನ ಸೂತ್ರ ಹೇಳ್ತಾರೆ - "ಧೀವಶಾತ್ ಸತ್ವಸಿದ್ಧಿಃ"
ಬುದ್ಧಿಯಿಂದ ಸತ್ವಸಿದ್ಧಿ ಉಂಟಾಗುತ್ತದೆ. ಈಗ ಇದನ್ನೆಲ್ಲಾ ಹೇಗೆ ತಿಳಿದುಕೊಳ್ತಾ ಇದೀರಾ ನೀವು? ಕಣ್ಣಿನ ಮೂಲಕ ನೋಡಿ ಓದುತ್ತೀರ ಅಥವಾ ಕಿವಿಯಿಂದ ಕೇಳಿಸಿಕೊಳ್ಳುತ್ತೀರ. ಮನಸ್ಸು ಎಲ್ಲೋ ಇದ್ದರೆ, ಬುದ್ಧಿ ಎಲ್ಲೋ ಇದ್ದುಬಿಟ್ಟರೆ ತಿಳಿದುಕೊಳ್ಳಲು ಆಗುತ್ತದಾ? ಮನಸ್ಸಿನಿಂದ ಓದುತ್ತೀರ ಅಥವಾ ಕೇಳುತ್ತೀರ, ಅದನ್ನು ಬುದ್ಧಿ ಮೆಲುಕು ಹಾಕಿ ’ಹಾ! ಇದು ಹೀಗೇ’ ಎಂದು ನಿರ್ಣಯಿಸಿ ನೆನಪಿನಲ್ಲಿಟ್ಟುಕೊಳ್ಳುತ್ತದೆ.
ಒಂದು ಸಲ ಬೆಂಕಿಯಲ್ಲಿ ಕೈಯಿಟ್ಟು ಸುಟ್ಟುಕೊಂಡಾಗ ಮನಸ್ಸಿಗೆ ಅರಿವಾಯ್ತು, ’ಬೆಂಕೀಲಿ ಕೈ ಇಡಬಾರದು, ಇಟ್ಟರೆ ಸುಡುತ್ತೆ’ ಅಂತ. ಬುದ್ಧಿ ಇಲ್ಲದಿರುವವರು ಅಥವಾ ತೀರಾ ಮಾನಸಿಕ ರೋಗದಿಂದ ಪೀಡಿತರಾದವರು ಮತ್ತೆ ಮತ್ತೆ ಬೆಂಕಿಯಲ್ಲಿ ಕೈಯಿಟ್ಟು ಸುಟ್ಟುಕೊಳ್ತಾರೆ. ಅವರಿಗೆ ಏಕೆ ಗೊತ್ತಾಗುವುದಿಲ್ಲ? ಮನಸ್ಸೇನೋ ಇದೆ, ಆದರೆ ಬುದ್ಧಿ ಇಲ್ಲ. ಹಾಗೇ ನಾವು ಜೀವನದಲ್ಲಿ ಮಾಡಿದ ತಪ್ಪುಗಳನ್ನೇ ಮತ್ತೆ ಮತ್ತೆ ಮಾಡುತ್ತಾ ಇರ್ತೀವಿ, ಯಾಕೆ? ಬುದ್ಧಿಯಿಂದ ಸತ್ವಸಿದ್ಧಿಯಾಗಿಲ್ಲ! ಸತ್ವದಿಂದ ಜ್ಞಾನದ ಪ್ರಕಾಶ ಉಂಟಾಗುತ್ತೆ ನಮ್ಮಲ್ಲಿ. "ಧೀವಶಃ" ಬುದ್ಧಿಯಿಂದ ಅರಿತುಕೊಳ್ಳಪ್ಪ ಅಂತ ಶಿವ ಹೇಳ್ತಾ ಇದಾನೆ ಈ ಸೂತ್ರದಲ್ಲಿ. ಮನಸ್ಸು ಕಣ್ಣಿನಿಂದ ನೋಡುತ್ತೆ, ಮೂಗಿನಿಂದ ಸುಗಂಧವನ್ನು ಅನುಭವಿಸುತ್ತದೆ, ನಾಲಿಗೆಯಿಂದ ರುಚಿಯನ್ನು ಕಾಣುತ್ತದೆ.
ರುಚಿಯಾದ ಯಾವುದೋ ತಿನಿಸು ತಿನ್ನುತ್ತಿರ್ತೀರ. ಯಾವುದೋ ಕೆಟ್ಟ ಸುದ್ದಿ ಬಂತು.... ಯಾರೋ ನಿಮಗೆ ಬೇಕಾಗಿದ್ದವರಿಗೆ ಏನೋ ಅಪಘಾತ ಆಯ್ತು ಅಂತ. ಆ ರುಚಿಯಾಗಿರುವ ಊಟ ಒಳಗೆ ಹೋಗುತ್ತಾ? ರುಚಿ ಕಾಣಿಸುತ್ತಾ? ಎರಡು ನಿಮಿಷದ ಹಿಂದೆ ಸವಿಯಾಗಿದ್ದ ಆ ವಸ್ತು ಈಗ ಕಹಿ ಆಗುವುದಕ್ಕೆ ಶುರುವಾಯ್ತು. ಈ ಎರಡೂ ರೀತಿಯ ಅನುಭವ ಯಾವುದಕ್ಕೆ ಉಂಟಾಗುತ್ತಿದೆ? ಯಾರಿಗೆ ಆಗ್ತಿದೆ? "ಧೀವಶಾತ್ ಸತ್ವಸಿದ್ಧಿಃ" ಬುದ್ಧಿಯಿಂದ ಯಾವುದು ಹೇಗಿದೆಯೋ ಅದನ್ನು ಹಾಗೆಯೇ ಅರಿತುಕೊಂಡಾಗ ಸತ್ವಸಿದ್ಧಿಯುಂಟಾಗುತ್ತದೆ.

* * * * *

ಪೂರ್ವಾಗ್ರಹ ಬೇಡ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೫.೦೬.೨೦೦೩ರಂದು ಪ್ರಕಟವಾಗಿತ್ತು)

"ಧೀವಶಃ ಸತ್ವಸಿದ್ಧಿಃ" ಯಾರೋ ಒಬ್ಬರ ಬಗ್ಗೆ ಬುದ್ಧಿಯ ವಶದಿಂದ ಮನಸ್ಸು ನಿಶ್ಚಯ ಮಾಡಿಕೊಂಡುಬಿಡುತ್ತೆ, ’ಇವರು ತುಂಬಾ ಕೆಟ್ಟವರು, ದುರಹಂಕಾರಿ’ ಅಂತ. ಇದರಿಂದಾಗಿ ಅವರನ್ನು ನೋಡಿದಾಗಲೆಲ್ಲಾ ಇದೇ ಭಾವನೆ ಮತ್ತೆ ಮತ್ತೆ ಉಂಟಾಗುತ್ತಿರುತ್ತೆ. ಅವರು ಒಳ್ಳೆಯದು ಮಾಡಿದರೂ ಅದರಲ್ಲಿ ಕೆಟ್ಟದ್ದೇ ಹುಡುಕುತ್ತೀವಿ. ಅವರು ’ಆ ಕ್ಷಣ’ ದುರಹಂಕಾರಿ ಅಲ್ಲದಿರಬಹುದು. ಆದರೂ ನಮ್ಮ ಮನಸ್ಸು ಅವರನ್ನು ಕಂಡಾಗಲೆಲ್ಲಾ ಹೇಳುತ್ತೆ - ’ನೋಡು ಇವನು ದುರಹಂಕಾರಿ’ ಅಂತ.
ವ್ಯಕ್ತಿಗಳನ್ನು, ಪರಿಸ್ಥಿತಿಯನ್ನು ನಮ್ಮ ಮನಸ್ಸು, ಬುದ್ಧಿ ನಿರ್ಣಯ ಮಾಡಿಟ್ಟುಕೊಳ್ಳುತ್ತದೆ. ಇದು ಅಶುದ್ಧವಾದ ಸತ್ವಕ್ಕೆ ಕಾರಣ. ಸತ್ವ ಎಂದರೆ - ಯಾವುದು ಹೇಗಿದೆಯೋ ಅದನ್ನು ಹಾಗೆಯೇ ತಿಳಿದುಕೊಳ್ಳುವಂತಹ ಸ್ವಭಾವ. ಮನಸ್ಸಿನಲ್ಲಿ ಯಾವುದರ ಬಗ್ಗೆಯೂ, ಯಾರ ಬಗ್ಗೇನೂ ನಿರ್ಣಯ ಮಾಡಿಟ್ಟುಕೊಳ್ಳಬೇಡಿ.
ಕೊಲೆಗಡುಕನೂ, ದರೋಡೆಕೋರನೂ ಆಗಿದ್ದ ವ್ಯಕ್ತಿ ವಾಲ್ಮೀಕಿ ಮಹರ್ಷಿಯಾಗಿ ಪರಿವರ್ತನೆಗೊಳ್ಳಲು ಬಹಳ ಕಾಲ ಬೇಕಾಗಲಿಲ್ಲ!
ಹಾಗೆಂದೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ:
ಅಪಿ ಚೇತ್ಸುದುರಾಚಾರೋ ಭಜತೇ ಮಾಮನನ್ಯಭಾಕ್ I
ಸಾಧುರೇವ ಸ ಮನ್ತವ್ಯಃ ಸಮ್ಯಗ್ ವ್ಯವಸಿತೋ ಹಿ ಸಃ II
ಅತಿ ದುರಾಚಾರಿಯಾಗಿದ್ದರೂ ಕೂಡಾ ನನ್ನನ್ನು ಸ್ಮರಣೆ ಮಾಡುವುದರಿಂದ ಕೆಲವೇ ಕ್ಷಣಗಳಲ್ಲಿ ಅವನ ಮನಸ್ಸು ಪರಿವರ್ತನೆ ಆಗೋಕೆ ಸಾಧ್ಯ. ಅವನು ಹಿಂದಿನ (ಭೂತಕಾಲದ) ಎಲ್ಲಾ ಸಂಸ್ಕಾರಗಳಿಂದ ಮುಕ್ತನಾಗಿ ವರ್ತಮಾನದಲ್ಲಿ ಪ್ರಸನ್ನ ಚಿತ್ತದಿಂದ ಶಾಶ್ವತವಾದ ಶಾಂತಿಯನ್ನು ಪಡೆಯಬಹುದು. ಆತ್ಮಸ್ಥನಾಗುವುದು ಸಾಧ್ಯ. ಒಂದು ಕ್ಷಣ ಎಚ್ಚತ್ತುಕೊಂಡು ತಿಳಿದುಕೊಳ್ಳಬೇಕು ’ನರ್ತಕಃ ಆತ್ಮ’, ನಾನು ನರ್ತಕ ಮಾತ್ರ. ಜೀವನವೊಂದು ನಾಟಕ ಅಂತ.

* * * * *

ಸತ್ವಸಿದ್ಧಿ ಸುಖವೃದ್ಧಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೬.೦೬.೨೦೦೩ರಂದು ಪ್ರಕಟವಾಗಿತ್ತು)

ಜೀವನದಲ್ಲಿ ಯಾರುಯಾರಿಗೆ ಯಾವಯಾವ ಪಾತ್ರ ಬಂದಿದೆಯೋ ಅವರವರು ಅವರವರ ಪಾತ್ರ ಸರಿಯಾಗಿ ನಿರ್ವಹಣೆ ಮಾಡಿದರೆ ಅದರಲ್ಲಿ ಸಿದ್ಧಿ ಇದ್ದೇ ಇದೆ. ಈಗ ಒಂದು ನಾಟಕದಲ್ಲಿ ಎಲ್ಲರೂ ತಮಗೆ ರಾಮನ ಪಾತ್ರವೇ ಬೇಕು ಅಂದರೆ ರಾಮಾಯಣವೇ ನಡೆಯುವುದಿಲ್ಲ!
ಒಂದು ಸಲ ನಾವು ಕೆನಡಾಗೆ ಹೋಗಿದ್ದಾಗ ಈ ರೀತಿಯ ಒಂದು ಘಟನೆ ನಿಜವಾಗಿ ಆಯಿತು. ಅಲ್ಲಿ ಸೇಂಟ್ ಜಾನ್ಸ್ ನಲ್ಲಿದ್ದ ಸುಮಾರು ಇನ್ನೂರು ಮುನ್ನೂರು ಭಾರತೀಯರು ’ಗಣರಾಜ್ಯೋತ್ಸವ’ದ ಅಂಗವಾಗಿ ’ರಾಮಾಯಣ’ ನಾಟಕ ಮಾಡಬೇಕು ಅಂತ ಮಕ್ಕಳನ್ನು ತಯಾರು ಮಾಡಿದ್ದರು. ಎಲ್ಲರ ಮನೆಯ ಮಕ್ಕಳು ಸೇರಿದರೂ ಇಪ್ಪತ್ತೈದು, ಮೂವತ್ತು ಮಕ್ಕಳಿರಬಹುದು. ಅದರಲ್ಲಿ ನಾಟಕ ಹೇಳಿಕೊಡುವಾಕೆಯ ಮಗ ಲಕ್ಷಣವಾಗಿದ್ದ - ರಾಮನ ಪಾತ್ರಕ್ಕೆ ತಕ್ಕ ಹಾಗೆ. ಆಕೆ ಅವನಿಗೆ ರಾಮನ ಪಾತ್ರ ಕೊಟ್ಟರು. ಮತ್ತೆ, ರಾವಣನ ಪಾತ್ರಕ್ಕೆ ಅಲ್ಲಿರುವ ಯಾವ ಮಕ್ಕಳ ತಂದೆ ತಾಯಂದಿರೂ ಒಪ್ಪಲೇ ಇಲ್ಲ! ’ನನ್ನ ಮಗನನ್ನು ರಾವಣನಾಗಿ ಮಾಡಬೇಡಿ, ಬೇರೆ ಪಾತ್ರ ಕೊಡಿ’ ಎನ್ನುತ್ತಿದ್ದರು. ರಾವಣನೇ ಇಲ್ಲದೆ ರಾಮಾಯಣ ಮಾಡೋದು ಹೇಗೆ? ಹನುಮಂತನ ಪಾತ್ರಕ್ಕೂ ಹೀಗೇ... ದೊಡ್ಡ ರಗಳೆಯೇ ಉಂಟಾಯ್ತು ಅವರವರಲ್ಲಿ. ಕಡೆಗೆ ಆಕೆ ಬೇರೆ ದಾರಿಯೇ ಇಲ್ಲದೆ, ರಾಮನ ಪಾತ್ರಕ್ಕೆ ಚೆನ್ನಾಗಿ ಒಪ್ಪುತ್ತಿದ್ದ ತನ್ನ ಮಗನಿಗೇ ರಾವಣನ ಪಾತ್ರ ಕೊಟ್ಟು, ರಾವಣನ ಪಾತ್ರಕ್ಕೆ ಒಪ್ಪುವಂತಿದ್ದ ಹುಡುಗನಿಗೇ ರಾಮನ ಪಾತ್ರ ಕೊಡಬೇಕಾಯ್ತು!!
ಈ ನಾಟಕವನ್ನು ಹೇಳಿಕೊಟ್ಟ ಹೆಣ್ಣುಮಗಳು, ’ಗುರೂಜಿ, ಹೀಗಾಯ್ತು’ ಎಂದು ತರಬೇತಿಯ ಸಮಯದಲ್ಲಿ ನಡೆದದ್ದನ್ನು ತಿಳಿಸಿದರು.
ನಾವು ನಾಟಕವನ್ನು ಕೂಡಾ, ನಾಟಕ ಎನ್ನುವ ಭಾವನೆಯಿಂದ ನೋಡುವುದಿಲ್ಲ, ಇನ್ನು ಜೀವನವನ್ನು ನಾಟಕ ಅಂತ ನೋಡುವ ಗತಿ ಎಲ್ಲಿ ಬಂತು? ಆ ಮಟ್ಟಕ್ಕೆ ನಾವು ಅಜ್ಞಾನದಲ್ಲಿ ಹೋಗಿಬಿಟ್ಟಿದ್ದೀವಿ. ಸತ್ವಸಿದ್ಧಿ ಇಲ್ಲದಿದ್ದರೆ ಸುಖವೇ ಇಲ್ಲ. ಜೀವನದಲ್ಲಿ ಎಷ್ಟು ಸತ್ವ ಹೆಚ್ಚಾಗುತ್ತದೆಯೋ ಅಷ್ಟು ಸುಖ. ಸುಖ ಕಡಿಮೆಯಾಯ್ತು ಎಂದರೆ ಎಲ್ಲೋ ಸತ್ವ ಕಡಿಮೆಯಾಗಿದೆ, ಲೋಪವಾಗಿದೆ ಅಂತ ಅರ್ಥ. ಸತ್ವ ವೃದ್ಧಿಯಾದರೆ ಸುಖ ವೃದ್ಧಿಯಾಗುತ್ತದೆ. ಸತ್ವವೃದ್ಧಿಗೋಸ್ಕರವೇ ಇವೆಲ್ಲವೂ.

* * * * *

ಭಾವನೆಯ ಬೇಡಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೭.೦೬.೨೦೦೩ರಂದು ಪ್ರಕಟವಾಗಿತ್ತು)

"ಧೀವಶಾತ್ ಸತ್ವ ಸಿದ್ಧಿಃ"
ಬುದ್ಧಿಯನ್ನು ವಶದಲ್ಲಿಟ್ಟುಕೋ. ಯಾರನ್ನೂ ನಿರ್ಣಯ ಮಾಡಬೇಡ. ಯಾರ ಬಗ್ಗೆಯೂ ನಿಶ್ಚಿತಾಭಿಪ್ರಾಯವನ್ನೂ, ಧೋರಣೆಯನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡ.
ಈ ಪ್ರಪಂಚ ನೀರಿದ್ದ ಹಾಗೆ, ಎಲ್ಲರ ಮನಸ್ಸೂ ನೀರಿದ್ದ ಹಾಗೆ, ಚಂಚಲ. ನೀರಿನಲ್ಲಿ ಯಾವ ಅಲೆಯೂ ಸ್ಥಿರವಾಗಿ ಇರುವುದಕ್ಕೆ ಸಾಧ್ಯವಿಲ್ಲ. ನೀರಿನಲ್ಲಿ ಅಲೆಗಳು ಏಳುತ್ತವೆ ಮತ್ತೆ ಶಾಂತವಾಗುತ್ತವೆ. ನಿನ್ನೆ ಇದ್ದ ಅಲೆ ಇವತ್ತು ಇರುವುದಿಲ್ಲ, ಇವತ್ತು ಎದ್ದ ಅಲೆ ನಾಳೆ ಇರುವುದಿಲ್ಲ. ಹಾಗೆ ಪ್ರತಿಕ್ಷಣವೂ ಜನಗಳ ಮನಸ್ಸು, ಅವರ ಭಾವನೆಗಳು, ಅವರ ವ್ಯವಹಾರ, ಅವರ ವ್ಯಕ್ತಿತ್ವ ಎಲ್ಲವೂ ಬದಲಾಗುತ್ತಾ ಇರುತ್ತೆ. ಈ ಸತ್ಯವನ್ನು ಮನಗಾಣು. ’ಧೀವಶಃ ಸತ್ವ ಸಿದ್ಧಿಃ’.
ಮುಂದಿನ ಸೂತ್ರ ’ಸಿದ್ಧಃ ಸ್ವತಂತ್ರ ಭಾವ’. ನಮ್ಮ ಭಾವನೆಯಿಂದ ನಮಗೆ ಮುಕ್ತಿ ಸಿಕ್ಕಾಗ ನಾವು ’ಸಿದ್ಧ’ರಾಗ್ತೀವಿ. ನಮ್ಮ ಭಾವನೆಯೇ ನಮಗೆ ಬೇಡಿ. ಇದರಿಂದ ನಮಗೆ ಮುಕ್ತಿಯಾಗಬೇಕು ಅಂದರೆ, ನಮ್ಮ ಭಾವನೆ ಒಂದು ನಾಟಕದಂತೆ ಕ್ಷಣಿಕವಾದದ್ದು ಎಂದು ತಿಳಿದುಕೊಳ್ಳಬೇಕು.
ಕ್ಷಣಕ್ಷಣಕ್ಕೂ ಬರುವ ಭಾವನೆಗಳು ಬಂದ ಹಾಗೆ ಹಾಗೇ ಹೋಗುತ್ತಾ ಇವೆ. ಆದರೆ ನಾವು ಹಾಗೆ ಬಂದ ಭಾವನೆ ಹಾಗೆಯೇ ಹೊರಟುಹೋಗಲು ಬಿಡದೆ ಅದನ್ನೇ ಹಿಡಿದಿಟ್ಟುಕೊಂಡು ಅದನ್ನೇ ಬೇಡಿಯಂತೆ ಮಾಡಿಕೊಂಡು ಬಂಧಿಸಿಕೊಂಡುಬಿಡುತ್ತೀವಿ. ಈ ಬೇಡಿಯನ್ನು ನಾವೇ ಕಿತ್ತುಹಾಕಬೇಕು. ಆಗಲೇ ಸ್ವತಂತ್ರರಾಗ್ತೀವಿ. ’ಸಿದ್ಧ’ ಅಂದರೆ ನಾವು ಸ್ವತಂತ್ರವಾಗಿ ಹಕ್ಕಿಯ ಹಾಗೆ ಹಾರಾಡ್ತಾ ಇರ್ತೀವಿ. ಯಾವುದೇ ಬಂಧನವಿಲ್ಲ, ನಿಬಂಧನೆಯಿಲ್ಲ. ಯಾವುದೇ ತರಹೆಯ ಕ್ಲೇಶವಿಲ್ಲ, ಸಹಜ, ಸರಳ, ಸುಲಭ!