ಶನಿವಾರ, ಏಪ್ರಿಲ್ 6, 2013

ಭಕ್ತಿಪಥವನ್ನು ಅನುಸರಿಸಿ


ಬೂನ್, ಉತ್ತರ ಕ್ಯಾರೋಲೀನ್
೬ ಏಪ್ರಿಲ್ ೨೦೧೩

ಪ್ರ: ನಮ್ಮಲ್ಲಿ ನೆಲೆಸಿರುವ ದೇವರು ಏನು ಬೇಕಾದರೂ ಮಾಡಲು ಸಮರ್ಥನಿರುವಾಗ, ನಾವೂ ಸಹ ಏನು ಬೇಕಾದರೂ ಮಾಡಲು ಸಮರ್ಥರಲ್ಲವೇ? ಹಾಗಾದರೆ, ವಿಧಿ ಮತ್ತು ದೈವೀಕತೆಯು ಹೇಗೆ ಕಾರ್ಯನಿರ್ವಹಿಸುತ್ತದೆ?

ಶ್ರೀ ಶ್ರೀ ರವಿಶಂಕರ್: ಅವೆರಡೂ ಸಮರ್ಪಕವಾಗಿ ಹೊಂದಿಕೊಳ್ಳುತ್ತವೆ. ನಿಮ್ಮ ಆಲೋಚನೆಗಳು ದಿವ್ಯತೆಯೊಂದಿಗೆ ಹೊಂದಿಕೊಂಡಾಗ, ಅದನ್ನು ಇಚ್ಛಾಸ್ವಾತಂತ್ರ್ಯವೆನ್ನುತ್ತಾರೆ. ನಿಮ್ಮ ಆಲೋಚನೆಗಳು ದೈವೀಕತೆಗೆ ವಿರುದ್ಧವಾಗಿದ್ದರೆ, ಅದನ್ನು ವಿಧಿಯೆನ್ನುತ್ತಾರೆ. ತಿಳಿಯಿತೇ?

ನೀವು ಪತಂಜಲಿಯ ಯೋಗಸೂತ್ರಗಳನ್ನು ಓದಿಲ್ಲದಿದ್ದರೆ, ಅದನ್ನು ಓದಬೇಕು. ಅದರಲ್ಲಿ ಮೊದಲಿಗೆ ಇದೇ ವಿಷಯವನ್ನು ಪ್ರಸ್ತಾಪಿಸಿರುವುದು. ಅದು ಮನಸ್ಸಿನ ಐದು ವಿಕಾರಗಳ ಬಗ್ಗೆ ತಿಳಿಸಿದೆ. ಅದರ ಬಗ್ಗೆ ಇನ್ನೊಮ್ಮೆ ಮಾತನಾಡುತ್ತೇವೆ. ಅದು ಬಹಳ ಮುಖ್ಯ.

ಮನಸ್ಸಿನ ಐದು ವಿಕಾರಗಳು ಹೀಗಿವೆ: ಪ್ರಮಾಣ. ಎಲ್ಲದಕ್ಕೂ ನಮಗೆ ಪ್ರಮಾಣ ಬೇಕು - ಪ್ರೀತಿ, ಸತ್ಯ, ಮತ್ತೊಬ್ಬರ ಪ್ರಾಮಾಣಿಕತೆ, ದೇವರು. ಎಲ್ಲವನ್ನೂ ಪ್ರಮಾಣೀಕರಿಸಬೇಕು.

ಎರಡನೆಯದು ವಿಪರ್ಯಾಯ (ತಪ್ಪು ಕಲ್ಪನೆ ಅಥವಾ ತಪ್ಪು ನಿರ್ಧಾರ). ವಿಪರ್ಯಾಯವೆಂದರೆ ಮನಸ್ಸು ತನ್ನದೇ ಆದ ಲೋಕವನ್ನು ಕಲ್ಪಿಸುವುದು, ವಾಸ್ತವವಾಗಿ ಇಲ್ಲದುದನ್ನು ಕಲ್ಪಿಸುವುದು. ಯೋಗಸೂತ್ರದಲ್ಲಿ ಹೀಗೆ ಹೇಳಲಾಗಿದೆ – ‘ವಿಪರ್ಯಾಯಾಹಮಿಥ್ಯಾಜ್ಞಾನಮೇತದ್ರೂಪಪ್ರತಿಷ್ಠಾಮ್.’ (ಯೋಗಸೂತ್ರ, ಅಧ್ಯಾಯ-1, ಶ್ಲೋಕ-8)
ನಿಮಗೆ ಗೊತ್ತೇ, 30 ವರ್ಷಗಳ ಹಿಂದೆ ‘ವಿಪರ್ಯಾಸ’ ಎನ್ನುವ ಪದವನ್ನು ಬಳಸುತ್ತಿದ್ದರು. ಅದರ ಅರ್ಥ ನೀವು ಆಲೋಚಿಸುವಂತೆ, ವಾಸ್ತವವಾಗಿ ನಡೆಯುತ್ತಿರಲಿಲ್ಲ. ಸತ್ಯದ ತಪ್ಪು ಕಲ್ಪನೆಯಿತ್ತು ನಿಮಗೆ. ಇವತ್ತು, ಆ ಪದಗಳು ಕಸದ ಬುಟ್ಟಿಗೆ ಸೇರಿದೆ, ಜನರು ಅದನ್ನು ಮರೆತಿದ್ದಾರೆ.

ವಿಪರ್ಯಾಯ ಎಂದರೆ ಆಸತ್ಯವನ್ನು ಸತ್ಯವೆಂದು ಮತ್ತು ಸತ್ಯವನ್ನು ಅಸತ್ಯವೆಂದು ಕಾಣುವುದು. ಯಾವುದು ತಾತ್ಕಾಲಿಕ, ಅಸ್ಥಿರ ಹಾಗೂ ನಶ್ವರವೋ, ಅದನ್ನು ಸ್ಥಿರ ಮತ್ತು ಶಾಶ್ವತ ಎಂದು ಪರಿಗಣಿಸುವುದು.

ಅದು ಹೇಗೆಂದರೆ, ಕೆಲವೊಮ್ಮೆ ಇತರರು ನಿಮ್ಮ ಬಗ್ಗೆ ಏನೋ ತಿಳಿದುಕೊಂಡಿರುತ್ತಾರೆ, ಅವರೂ ಇರುವುದಿಲ್ಲ ಮತ್ತು ಆ ಆಲೋಚನೆಯು ಹೊರಟುಹೋಗಿರುತ್ತದೆ, ಆದರೆ ನೀವು ಮಾತ್ರ ನಿಮ್ಮ ಮನಸ್ಸಿನಲ್ಲಿ ಆ ಆಲೋಚನೆಯನ್ನು ಹಿಡಿದುಕೊಂಡು ದುಃಖಪಡುತ್ತೀರ, ತಿಳಿಯಿತ್ತೇ? ಇದು ವಿಪರ್ಯಾಯ.

ಉದಾಹರಣೆಗೆ, ನೀವು ಯಾರದೋ ಮನೆಗೆ ಹೋಗುತ್ತೀರ. ನೀವು ಬರುವುದನ್ನು ಅವರು ನೋಡುವುದಿಲ್ಲ. ಜೋರಾಗಿ ಗಾಳಿ ಬೀಸುತ್ತಿದೆಯೆಂದೋ, ಅಥವಾ ಹಲ್ಲಿ ಮನೆಯೊಳಗೆ ಬರುವುದೆಂದೋ ಬಾಗಿಲು ಹಾಕುತ್ತಾರೆ, ಆದರೆ ನಿಮ್ಮ ಮುಖದ ಮೇಲೆ ಬಾಗಿಲು ಹಾಕಿದರೆಂದು ನೀವು ತಿಳಿಯುತ್ತೀರ.

ನೀವು ಬಾಗಿಲತ್ತ ನಡೆಯುವುದಕ್ಕೂ, ಅವರು ಬಾಗಿಲು ಹಾಕುವುದಕ್ಕೂ, ಕಾಕತಾಳೀಯವಷ್ಟೇ. ನೀವು ಅವರನ್ನು ನೋಡಿದ್ದರಿಂದ, ಅವರು ನಿಮ್ಮನ್ನು ನೋಡಿದರೆಂದುಕೊಳ್ಳುತ್ತೀರ. ಇದು ವಿಪರ್ಯಾಯದ ಒಂದು ಚಿಕ್ಕ ಉದಾಹರಣೆ.
ನೀವು ಕುಳಿತು ಆಲೋಚಿಸಿ, ‘ಬೇರೆಯವರು ನನ್ನ ಬಗ್ಗೆ ಕೆಟ್ಟದಾಗಿ ಆಲೋಚಿಸುತ್ತಿದ್ದಾರೆ’ ಎಂದು. ಆದರೆ ನಿಜವಾಗಿಯೂ  ನೀವು ಅವರನ್ನು ಕೇಳಿದರೆ, ‘ನಾನು ನಿಮ್ಮ ಬಗ್ಗೆ ಎಂದೂ ಆಲೋಚಿಸಿಲ್ಲ. ನನ್ನ ಕೆಲಸದಲ್ಲಿ ನಿರತನಾಗಿದ್ದೆ’ ಎನ್ನುವರು. ಜನರಿಗೆ ನಿಮ್ಮ ಬಗ್ಗೆ ಚಿಂತಿಸಲು ಎಲ್ಲಿದೆ ಸಮಯ?

ಮೂರನೆಯದು ವಿಕಲ್ಪ (ಭ್ರಮೆ ಅಥವಾ ಕಲ್ಪನೆ). ಮನಸ್ಸು ಯಾವುದು ಇಲ್ಲವೋ ಅದರ ಬಗ್ಗೆ ಚಿಂತಿಸುವುದು ಅಥವಾ ಅದರತ್ತ ಓಡುವುದು.

ಮುಂದಿನದು ನಿದ್ರೆ ಮತ್ತು ಕೊನೆಯದು ಸ್ಮೃತಿ (ನೆನಪು/ಜ್ಞಾಪಕ ಶಕ್ತಿ), ಅಂದರೆ ಯಾವುದರ ಬಗ್ಗೆಯೋ ಸ್ಮರಣೆಯಲ್ಲಿ ತೊಡಗಿರುವುದು ಅಥವಾ ಹಿಂದೆಂದೋ ನಡೆದ ಘಟನೆಯ ಬಗ್ಗೆ ಸದಾ ಚಿಂತಿಸುತ್ತಿರುವುದು.

ಮನಸ್ಸು ಈ ಐದು ವಿಕಾರಗಳಿಂದ ಹೊರಬರಬೇಕು.  ಅದನ್ನು ಯೋಗವೆನ್ನುವರು. ಆದ್ದರಿಂದಲೇ, ‘ಯೋಗ: ಚಿತ್ತವೃತ್ತಿನಿರೋಧ:’ ಎನ್ನುವುದು. (ಚಿತ್ತವನ್ನು ಅದರ ವಿಕಾರಗಳಿಂದ ಮುಕ್ತಗೊಳಿಸುವುದನ್ನೇ ಯೋಗ ಎಂದು ಕರೆಯುವುದು).
ಈ ವಿಕಾರಗಳನ್ನು ನಾಶಪಡಿಸಲು ಸಾಧ್ಯವಿಲ್ಲ; ಅವು ಇದ್ದೇ ಇರುತ್ತವೆ. ಆದರೆ ಅವುಗಳಿಂದ ಮನಸ್ಸನ್ನು ಹೊರತರಬಹುದು; ಆ ಕೌಶಲ್ಯವನ್ನೇ ಯೋಗವೆನ್ನುವುದು. ಅವುಗಳ ಹಿಡಿತಕ್ಕೆ ಸಿಕ್ಕಿಹಾಕಿಕೊಳ್ಳದಿರುವ ಕೌಶಲ್ಯವೇ ಯೋಗ.

ಪ್ರ: ದೇವರ ಬಗ್ಗೆ ಅಜ್ಞಾನವೂ ಹೇಗೆ ದೈವವಾಗುವುದು? ಹಿಂಸೆ, ಒತ್ತಡ, ಅಜ್ಞಾನ, ದ್ವೇಷ ಇತ್ಯಾದಿ ಎಲ್ಲವೂ ದೇವರ ಸ್ವರೂಪವಾದರೆ, ಆ ದೇವರಿಂದ ಶಾಂತಿಯ ಕಡೆಗೇಕೆ ಚಲಿಸಬೇಕು? ನಾವೇಕೆ ದೇವರ ಕೆಲವು ಅಂಶದೆಡೆಗೆ ಚಲಿಸುತ್ತೇವೆ ಮತ್ತು ಇತರ ಅಂಶದಾಚೆಗೆ ಸರಿಯುತ್ತೇವೆ?

ಶ್ರೀ ಶ್ರೀ ರವಿಶಂಕರ್: ಮನುಷ್ಯರಾಗಿ ಹೀಗೆ ವರ್ತಿಸುವುದು ಸ್ವಾಭಾವಿಕ. ಒಂದು ಬ್ರೆಡ್ ತುಂಡು ಮತ್ತು ಹುಲ್ಲಿನ ಕಂತೆಯೊಂದು ನಿಮ್ಮ ಮುಂದಿದ್ದರೆ, ನೀವು ಹಸುವಾಗಿದ್ದರೆ ಹುಲ್ಲಿನೆಡೆಗೆ ನಡೆಯುತೀರ, ಮನುಷ್ಯರಾಗಿದ್ದರೆ ಬ್ರೆಡ್‍ನ ಕಡೆಗೆ ನಡೆಯುತ್ತೀರ.

ಇದೂ ಕೂಡ ಅಷ್ಟೇ ಸ್ವಾಭಾವಿಕ. ಆದರೆ ಹಸುವೂ ಸಹ ದೇವರೇ, ಹುಲ್ಲೂ ಸಹ ದೇವರೆ, ಬ್ರೆಡ್ ಸಹ ದೇವರೆ ಮತ್ತು ನೀವೂ ಸಹ ದೇವರೆ. ವಸ್ತುಸ್ಥಿತಿಯಿರುವುದೇ ಹೀಗೆ. ಅಗ್ನಿಯು ಮೇಲ್ಮುಖವಾಗಿ ಚಲಿಸುತ್ತದೆ, ಜಲ ಕೆಳಮುಖವಾಗಿ ಹರಿಯುತ್ತದೆ, ಎರಡೂ ದೈವವೇ. (ದೈವವು) ಅಗ್ನಿಯಂತೆ ಮೇಲ್ಮುಖವಾಗಿ ಮತ್ತು ಜಲದಂತೆ ಕೆಳಮುಖವಾಗಿ ಚಲಿಸುತ್ತದೆ. ಇದು ವಸ್ತುವಿಷಯಗಳ ನೈಜ ಸ್ವರೂಪ.

ಪ್ರಕೃತಿ (ಸೃಷ್ಟಿಯ ಅಸ್ತಿತ್ವ ಮತ್ತು ಕಾರ್ಯಗತಿಯನ್ನು ನಿಯಂತ್ರಿಸುವ ದಿವ್ಯಶಕ್ತಿ ಮತ್ತು ಬೌದ್ಧಿಕತೆ) ಹಾಗೂ ಪುರುಷ (ಸರ್ವವ್ಯಾಪಿಯಾದ ವಿಶ್ವ ಚೈತನ್ಯ) ರಿಂದ ನೀವು ರಚಿಸಲ್ಪಟ್ಟಿದ್ದೀರ. ಇದು ನಮ್ಮನ್ನು ಇನ್ನೊಂದು ವಿಷಯಕ್ಕೆ ಕರೆದೊಯ್ಯುತ್ತದೆ. ಸತ್ವ, ರಜಸ್ಸು ಮತ್ತು ತಾಮಸ ಎಂಬ ಗುಣಗಳಿರುತ್ತವೆ, ನೀವು ಈ ಗುಣಗಳಂತೆ ಕ್ರಿಯಾಶೀಲರಾಗುತ್ತೀರ.

ನಿಮ್ಮಲ್ಲಿ ತಮೋಗುಣ ಹೆಚ್ಚಿದ್ದರೆ, ಹಿಂಸೆಯತ್ತ ಚಲಿಸುತ್ತೀರ. ಸತ್ವ ಹೆಚ್ಚಿದಷ್ಟೂ ಸಾಮರಸ್ಯತೆಯತ್ತ ಸಾಗುತ್ತೀರ. ರಜೋಗುಣ ಹೆಚ್ಚು ತುಂಬಿದ್ದರೆ, ಕೆಲಸಕಾರ್ಯಗಳಲ್ಲಿ ಕಷ್ಟಪಡುತ್ತೀರ; ಇವೆರಡು ಸ್ಥಿತಿಗಳ ನಡುವೆ,  ಸ್ವಲ್ಪ ಶಾಂತಿ ಮತ್ತು ಸ್ವಲ್ಪ ಹಿಂಸೆಯಿರಬಹುದು. ಇದು ಸ್ವಾಭಾವಿಕ.

ಪ್ರ: ನಾವು ‘ಓಂ’ (ಸೃಷ್ಟಿಯ ಪ್ರಣವ ಶಬ್ದ) ಸ್ವರೂಪವಾಗಿದ್ದರೆ, ‘ಓಂ’ ಎನ್ನುವುದು ಶಬ್ದದ ಕಂಪನವೇ ಅಥವಾ ‘ಓಂ’ ಅನ್ನು ಪ್ರತಿನಿಧಿಸುವ ತತ್ವವೇ ಅಥವಾ ‘ಓಂ’ ಕಂಪನವು ಅಂತ್ಯಗೊಂಡ ನಂತರದ ಪರಿಣಾಮವೇ? ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ‘ಓಂ’ ಶಾಂತಿಯನ್ನು ಸ್ಥಾಪಿಸುವುದರಿಂದ, ನಾವೇ ಶಾಂತಿಯೇ ಅಥವಾ ಆ ಶಾಂತಿಯ ಪರಿಣಾಮವೇ?

ಶ್ರೀ ಶ್ರೀ ರವಿಶಂಕರ್: ಎಲ್ಲ ಉಕ್ತ ಮತ್ತು ಅನುಕ್ತವೆಲ್ಲವೂ ‘ಓಂ’. ಸರ್ವ ಸ್ಪಷ್ಟ ಮತ್ತು ಸರ್ವ ಗೊಂದಲಮಯವೂ ‘ಓಂ’. ಈಗ ಸ್ಪಷ್ಟವಾಯಿತೇ, ಅಥವಾ ಇನ್ನೂ ಗೊಂದಲವಿದೆಯೇ? ಆಗಲೂ ಎಲ್ಲವೂ ‘ಓಂ’ (ನಗೆ).

ನೀವು ಯಾವುದನ್ನು ಹೇಳುತ್ತೀರೋ ಅಥವಾ ಹೇಳುವುದಿಲ್ಲವೋ ಎಲ್ಲವೂ ‘ಓಂ’ ಆಗುತ್ತದೆ. ಕಂಪನವೋ ಅಥವಾ ಕಂಪನವಿಲ್ಲದಿದ್ದರೂ, ಆದಿಯೋ ಅಂತ್ಯವೋ, ಎಲ್ಲವೂ ‘ಓಂ’ ಆಗಿದೆ.

ಆದ್ದರಿಂದ ‘ಓಂ’ ಆದಿಯಾಗಿದೆ, ಅಂತ್ಯವಾಗಿದೆ ಮತ್ತು ಮಧ್ಯ ಸ್ಥಿತಿಯೂ ಆಗಿದೆ. ಕಾಲಾತೀತವಾದುದೆಲ್ಲವೂ - ಭೂತಕಾಲ, ವರ್ತಮಾನ ಮತ್ತು ಭವಿಷ್ಯತ್‍ಕಾಲವೂ –ಓಂ ಆಗಿದೆ. ಇದನ್ನೇ ಹೇಳಲಾಗಿದೆ ಮತ್ತು ಇದೇ ಸತ್ಯ ಕೂಡ. ಆದ್ದರಿಂದಲೇ ಏನೇ ಶುಭವಾಗಲಿ, ನಾವು ‘ಓಂ’ ಎನ್ನುತ್ತೇವೆ. ಹಿರಿಯ ಋಷಿಗಳು ಶರೀರದಲ್ಲಿ ಯಾವುದೇ ನೋವಿದ್ದರೂ, ‘ಓಂ’ ಉಚ್ಚರಿಸುತ್ತಾರೆ.

ಇದು ನಮಗೆ ಒಬ್ಬ ಹಿರಿಯ ಸಾಧುವಿನ ಕತೆಯನ್ನು ಜ್ಞಾಪಿಸುತ್ತದೆ. ಬಹುಶಃ ನಾವಿದನ್ನು ಅಷ್ಟಾವಕ್ರ ಗೀತೆಯ ವಿವರಣೆಯನ್ನು ನೀಡುವ ಸಂದರ್ಭದಲ್ಲಿ ಹೇಳಿರಬಹುದು.

ಇದು ತೊಂಬತ್ತರ  ಮೊದಲ ಭಾಗದಲ್ಲಿ ಅಥವಾ ಎಂಬತ್ತರ ಮಧ್ಯ ಭಾಗದಲ್ಲಿ, ನಮ್ಮ ಆಶ್ರಮವು ಬಹಳ ಚಿಕ್ಕದಾಗಿದ್ದಾಗ ನಡೆದಂತಹ ಘಟನೆ. ನಮ್ಮ ಕೊಠಡಿಯನ್ನು ಒಬ್ಬ ಹಿರಿಯ ಸ್ವಾಮೀಜೀಗೆ ಉಳಿದುಕೊಳ್ಳಲು ಕೊಟ್ಟೆವು, ಅವರು ಅದನ್ನು ನಿರಾಕರಿಸಿದರು. ಅವರಿಗೆ ಸುಮಾರು 85 ವರ್ಷಗಳಾಗಿತ್ತು, ಆದರೂ ಎಂದೂ ಅನಾರೋಗ್ಯಕ್ಕೆ ತುತ್ತಾಗಿರಲಿಲ್ಲ. ಅವರಿಗೆ ತಾವು ಹೊರಗೆ ಮಲಗಬಹುದೆಂಬ ವಿಶ್ವಾಸ.

ಆಗ ಡಿಸೆಂಬರ್ ಸಮಯ, ಚಳಿ ಕೊರೆಯುತಿತ್ತು. ಆದರೂ ಅವರು ಹೊರಗೆ ಮಲಗಬೇಕೆಂದು ಇಚ್ಛಿಸಿದರು. ಹಾಗೆಯೇ ಮಾಡಿದರು. ಬೆಳಗಿನ ಹೊತ್ತಿನಲ್ಲಿ, ‘ಓಂ, ಓಂ’ ಎಂದು ಜೋರಾಗಿ ಪಠಿಸುತ್ತಿರುವುದು ಕೇಳಿಸುತ್ತಿತ್ತು. ಏಕೆ ಹೀಗೆ ಇಷ್ಟೊಂದು ಬಾರಿ ‘ಓಂ’ ಜಪಿಸುತ್ತಿದ್ದಾರೆಂದು ನಮಗೆಲ್ಲ ಅನಿಸಿತು. ಅದಕ್ಕಾಗಿ ನಾವೆಲ್ಲರೂ ಒಟ್ಟಾಗಿ ಅಲ್ಲಿಗೆ ಹೋಗಿ ನೋಡಿದರೆ, ಅವರು ಚಳಿಯಿಂದ ಗಡ್ಡೆಯಾಗಿದ್ದರು! ಚಳಿಯಿಂದ ಅವರ ಭುಜ ಮತ್ತು ಕಾಲುಗಳು ಹೆಪ್ಪುಗಟ್ಟಿತ್ತು. ಅವರಿಗೆ ತಮ್ಮ ಶರೀರವನ್ನು ಅಲುಗಾಡಿಸಲಾಗುತ್ತಿರಲ್ಲಿಲ್ಲ. ಅವರ ಬೆನ್ನು ಗಡ್ಡೆಯಂತೆ ಸೆಟೆದುಕೊಂಡಿತ್ತು, ನಮಗೆ ಒಂದೇ ಒಂದು ಅವರಿಂದ ಕೇಳಿಸುತ್ತಿದ್ದುದ್ದೆಂದರೆ ಅದು ‘ಓಂ’ ಜಪ.

ಎಲ್ಲದಕ್ಕೂ ‘ಓಂ’ ಎನ್ನುವ ಈ ಶತಮಾನದ ಜನರಿದ್ದಾರೆ ಮತ್ತು ಅದನ್ನು ಭಾವುಕತೆಗೆ ತಕ್ಕಂತೆ ಬೇರೆ ಬೇರೆ ಧ್ವನಿಯಲ್ಲಿ ಉಚ್ಚರಿಸುತ್ತಾರೆ. ಅತಿ ತೀವ್ರ ಮತ್ತು ದೊಡ್ಡ ಧ್ವನಿಯಲ್ಲಿ ‘ಓಂ’ ಉಚ್ಚರಿಸಿದರೆ, ಅದರ ಅರ್ಥ ಸ್ವಾಮೀಜೀಗೆ  ಕೋಪ ಬಂದಿದೆಯೆಂದು, ಅದೇ ಸುಮಧುರವಾದ ಧ್ವನಿಯಲ್ಲಿ ‘ಓಂ’ ಉಚ್ಚರಿಸಿದರೆ, ಅವರು ಶಾಂತವಾಗಿದ್ದಾರೆ ಮತ್ತು ಸಂತೋಷವಾಗಿದ್ದಾರೆಂದು ಅರ್ಥ. ಹೀಗೆ, ಆ ಕಾಲದಲ್ಲಿ, ಏನೇ ಬರಲಿ ಕುಶಲೋಪರಿಗಳನ್ನು ವಿನಿಮಯ ಮಾಡಿಕೊಳ್ಳುವ ಒಂದು ರೀತಿಯಾಗಿತ್ತು. ನೋವಿನಲ್ಲೂ, ‘ಓಂ’ ಜಪಿಸುತ್ತಿದ್ದರು.

‘ಓಂ’ ಶಬ್ದ ಹಿಂದೂ ಸ್ವಾಮೀಜೀಗಳಿಗಷ್ಟೇ ಸೀಮಿತವಾಗಿಲ್ಲ. ಅದನ್ನು ಬೌದ್ಧ, ಜೈನ, ಸಿಖ್ಖ, ಟಾಓ ಮತ್ತು ಷಿಂಟೋ ಧರ್ಮದವರೂ ಜಪಿಸುತ್ತಾರೆ. ಇದಕ್ಕೆ ಕಾರಣ ಇವೆಲ್ಲಾ ಧರ್ಮಗಳಲ್ಲೂ ಧ್ಯಾನದ ಅಭ್ಯಾಸವಿದ್ದು, ಆಳವಾದ ಧ್ಯಾನದಲ್ಲಿ ಅವರಿಗೆ ಇದೊಂದೇ ಶಬ್ದ ಕೇಳಿಸಿತ್ತು. ಆದ್ದರಿಂದ ಅವರು ಜೈನರಾಗಲಿ, ಸಿಖ್ಖರಾಗಲಿ ಅಥವಾ ಲಾಓ-ಟ್ಜು (ಟಾಓ ಧರ್ಮೀಯರು)ರಾಗಲಿ, ‘ಓಂ’ ಶಬ್ದವನ್ನು ಜಪಿಸುತ್ತಾರೆ ಮತ್ತು ಒಂದು ಕೈಯಿಂದ ಚಪ್ಪಾಳೆ ತಟ್ಟುವುದನ್ನು ಅಭ್ಯಾಸ ಮಾಡುತ್ತಾರೆ. ‘ಆಮೆನ್’ (ಹಾಗೆಯೇ ಆಗಲಿ) ಪದ ‘ಓಂ’ ಶಬ್ದದ ಅಪಭ್ರಂಶವೆಂದು ನಮಗೆನಿಸುತ್ತದೆ. ಇಸ್ಲಾಂನಲ್ಲಿ ಹೇಗೆ ‘ಆಮೀನ್’ (ಹಾಗೆಯೇ ಆಗಲಿ) ಎನ್ನುವರೋ, ಅದು ಇದೇ ಎಂದು ನಮ್ಮ ಭಾವನೆ.

ಪ್ರ: ಗುರುದೇವ, ಆಕಾಶ ಮತ್ತು ಬ್ರಹ್ಮದ ಬಗ್ಗೆ ಇನ್ನಷ್ಟು ವಿವರವಾಗಿ ತಿಳಿಸುತ್ತೀರ?

ಶ್ರೀ ಶ್ರೀ ರವಿಶಂಕರ್: ಯಾವುದರಿಂದ ನಮ್ಮ ಮಾತು ಮತ್ತು ಮನಸ್ಸನ್ನು ಪುನಃ ಪಡೆಯಬಹುದೋ (ಅವುಗಳ ಆಕರ ಮತ್ತು ಸಾರಾಂಶ); ಯಾವುದನ್ನು ಮಾತು ಮತ್ತು ಮನಸ್ಸು ಹಿಡಿಯಲಾಗದೇ ಸೋಲುವುದೋ – ಅದೇ ಬ್ರಹ್ಮ.
ಇದನ್ನು ನಾವು ಸದಾ ಮೂಕನ ಸ್ವಾದಕ್ಕೆ ಹೋಲಿಸಿದ್ದೇವೆ. ಮೂಕನು ಏನನ್ನಾದರೂ ತಿಂದಾಗ ಅದನ್ನು ಹೇಗೆ ವ್ಯಕ್ತಪಡಿಸಲು ಸಾಧ್ಯ? ಅವನು ಮೂಗ, ಆದರೆ ಅವನೇನ್ನನ್ನೋ ರುಚಿ ನೋಡಿದ್ದಾನೆ. ಅದನ್ನು ಹೇಗೆ ವ್ಯಕ್ತಪಡಿಸಬಲ್ಲ? ಹಾಗೆಯೇ, ಮಾತು ಮತ್ತು ಮನಸ್ಸು ಬ್ರಹ್ಮವನ್ನು ಪಡೆಯಲಾಗದು. ಸ್ವಲ್ಪ ಮಟ್ಟಿಗೆ ಆಕಾಶವನ್ನು ವರ್ಣಿಸಬಹುದು, ಆದರೆ ಬ್ರಹ್ಮವನ್ನು ವರ್ಣಿಸಲು ಪದಗಳೂ ಸೋಲುವುದು, ಏಕೆಂದರೆ ಅದು ಪದಗಳಿಂದ ಮತ್ತು ವರ್ಣನೆಯಿಂದ ಅತೀತವಾಗಿದೆ.

ಪ್ರ: ದೇಹದ ವಿವಿಧ ಭಾಗಗಳು ಸೂಕ್ಷ್ಮ ದೇವತೆಗಳಿಗೆ ಹೇಗೆ ಸಂಪರ್ಕ ಹೊಂದಿದೆಯೆಂದು ತಿಳಿಸುವಿರಾ?

ಶ್ರೀ ಶ್ರೀ ರವಿಶಂಕರ್: ದೇಹದ ಪ್ರತಿಯೊಂದು ಭಾಗವೂ ಪ್ರತ್ಯೇಕ ದೇವತೆಗೆ ಸಂಬಂಧಿಸಿದೆ.

‘ಪ್ರಜನನೇ ಬ್ರಹ್ಮ ತಿಷ್ಠತು’ ಬ್ರಹ್ಮನು ಜನನಾಂಗಗಳಲ್ಲಿ ನೆಲೆಸಿರುವನೆಂದು ಹೇಳುತ್ತಾರೆ.

ನಂತರ, ‘ಪಾದ್ಯೋ ವಿಷ್ಣು ತಿಷ್ಠತು’ ಮಹಾವಿಷ್ಣುವು ಪಾದಗಳಲ್ಲಿ ನೆಲೆಸಿರುವನೆಂದು ಹೇಳಿದ್ದಾರೆ.

ಹಾಗೆಯೇ, ‘ಹಸ್ತಯೋ ಹರ ತಿಷ್ಠತು’ ಹರನು ಕೈಗಳಲ್ಲಿ ವಾಸಿಸಿರುವನೆಂದು ಹೇಳುತ್ತಾರೆ.

‘ಕರ್ಣಯೋ ಅಶ್ವಿನೋತಿಷ್ಠತು’ ಅವಳಿ ಅಶ್ವಿನೀ ಕುಮಾರರು (ಸೂರ್ಯೋದಯ ಮತ್ತು ಸೂರ್ಯಾಸ್ತದ ಸಂಕೇತವಾಗಿರುವರು, ಮನುಷ್ಯರಿಗೆ ಐಶ್ವರ್ಯವನ್ನು ಮತ್ತು ಔಷಧಿಯನ್ನು ನೀಡುವ ವೈದಿಕ ದೇವತೆಗಳು) ಎರಡು ಕಿವಿಗಳಲ್ಲಿ ನೆಲೆಸಿರುವರು.

ಔಷಧೀಯ ಕಾಣಿಕೆಗೆ ಮತ್ತು ಆಯುರ್ವೇದ ಶಾಸ್ತ್ರಕ್ಕೆ ಕಾರಣಭೂತರಾದ ದೇವತೆಗಳು. ಆಯುರ್ವೇದ ಶಾಸ್ತ್ರವನ್ನು ಪ್ರತಿಪಾದಿಸಿದರೆಂದು ಹೇಳಲಾಗಿದೆ.

ಹಾಗೆಯೇ, ನಮ್ಮಕಣ್ಣುಗಳಿಗೆ ಸಂಬಂಧಿಸಿದ ದೇವತೆ ಸೂರ್ಯ.

ಹಣೆಯು ರುದ್ರನ ಸ್ಥಾನವೆಂದು ಹೇಳಲಾಗಿದೆ.

ಶ್ರೀರಾಮನು ನಾಭಿಯಲ್ಲಿ ನೆಲೆಸಿರುವನೆಂದು, ಅದನ್ನು ಅಗ್ನಿಯ ಸ್ಥಾನೆವೆಂದು ಹೇಳಲಾಗಿದೆ (ಇಲ್ಲಿ ಅಗ್ನಿಯೆಂದರೆ ಜಠರಾಗ್ನಿ).

ರುದ್ರ ಮತ್ತು ಶಿವ ಒಂದೇ ದೇವರ (ಶಿವನ) ಎರಡು ರೂಪಗಳು, ಆದರೆ ರುದ್ರ ಹಣೆಯಲ್ಲಿ ಸ್ಥಿತನಾಗಿದ್ದರೆ, ಶಿವ ಹೃದಯದಲ್ಲಿ ವಾಸಿಸುತ್ತಾನೆ.

ಹೀಗೆ, ಮನುಷ್ಯನ ಪ್ರತಿಯೊಂದು ಭಾಗಗಳೂ ಪ್ರತ್ಯೇಕ ದೇವತೆಯೊಂದಿಗೆ ಜೊತೆಗೂಡಿದೆ.