ಶುಕ್ರವಾರ, ಏಪ್ರಿಲ್ 12, 2013

ಅಸೀಮ ಶಕ್ತಿಯ ಚೇತನ

ಅಮೃತಬಿ೦ದು’ ಸರಣಿಯ ಬರಹಗಳು

ಹದಿನೈದನೆಯ ಕ೦ತು


ಇರುವ ಬುದ್ಧಿ ಉಪಯೋಗಿಸಿಕೊಳ್ಳಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೮.೦೭.೨೦೦೩ರಂದು ಪ್ರಕಟವಾಗಿತ್ತು)

’ಸ್ವಮಾತ್ರಾ ನಿರ್ಮಾಣಮಾಪಾದಯತಿ’
ಚೇತನ ಶಕ್ತಿಯು ತನ್ನಿಂದ ತಾನೇ ಈ ಸೃಷ್ಟಿಯನ್ನು ನಿರ್ಮಿಸಿಕೊಂಡಿದೆ - ಬೇರೆ ಬೇರೆ ಪ್ರಮಾಣ, ಪರಿಮಿತಿಗಳಲ್ಲಿ. ಒಂದೇ ಚೇತನ ಇರುವೆಗೆಷ್ಟು ಬುದ್ಧಿ ಕೊಡಬೇಕೋ ಅಷ್ಟೇ ಕೊಟ್ಟಿದೆ. ಮಂಗನಿಗೆ ಎಷ್ಟು ಬುದ್ಧಿ ಬೇಕೋ ಅಷ್ಟೇ ಬುದ್ಧಿ ಮಂಗನಿಗೆ ಕೊಟ್ಟಿದೆ. ಕ್ರಿಮಿಕೀಟಗಳಿಂದ ಮನುಷ್ಯನ ವರೆಗೆ ಎಲ್ಲವೂ ಅವುಗಳಿಗೆ ಬೇಕಾಗುವಷ್ಟು, ಬೇರೆ ಬೇರೆ ಪ್ರಮಾಣದ ಬುದ್ಧಿಶಕ್ತಿಯನ್ನು ಹೊಂದಿವೆ. ಬೇರೆ ಬೇರೆ ಪ್ರಾಣಿಗಳು ಅವುಗಳಿಗೆ ಎಷ್ಟೆಷ್ಟು ಬುದ್ಧಿ ಕೊಟ್ಟಿದೆಯೋ ಅಷ್ಟಷ್ಟು ಚೆನ್ನಾಗಿ ಉಪಯೋಗಿಸುತ್ತವೆ. ಆದರೆ ನಾವು, ಈ ಮನುಷ್ಯ ಜನ್ಮದಲ್ಲಿ ಹೆಚ್ಚು ಬುದ್ಧಿ ಇದ್ದರೂ ಉಪಯೋಗಿಸುವುದಿಲ್ಲ! ತುಂಬಾ ಜಿಪುಣತನ ಮಾಡ್ತೀವಿ. ಬರೀ ಜೇಬಿಗಷ್ಟೇ ಅಲ್ಲ, ಬುದ್ಧಿಗೂ ಜಿಪುಣತನಾನೇ! ಈ ಬಗ್ಗೆ ಪ್ರಚಲಿತವಿರುವ ಒಂದು ಜೋಕ್ (ವಿನೋದ) ನೀವೂ ಕೇಳಿರಬಹುದು.
ಒಂದು ಸಲ ಮೆದುಳಿನ ’ವಸ್ತು ಪ್ರದರ್ಶನ’ ಇತ್ತಂತೆ. ’ಮೆದುಳು ಮಾರಾಟ!’ ಏಕೆಂದರೆ ದೇವರು ಕೊಡಲು ಮರೆತಿದ್ದರಿಂದಲೋ, ಅಥವಾ ಅವಸರದಲ್ಲಿ ಮರೆತು ಬಂದದ್ದರಿಂದಲೋ ಪ್ರಪಂಚಕ್ಕೆ ಮೆದುಳು ಇಲ್ಲದೆ ಬಂದವರು ತುಂಬಾ ಜನ ಇದ್ದರು! ಅಂತೂ ಒಂದು ದೊಡ್ಡ ಪ್ರದರ್ಶನ ನಡೆಯಿತು ಮೆದುಳಿನದು!
ಇದರಲ್ಲಿ ವಿಖ್ಯಾತ ವಿಜ್ಞಾನಿಗಳದು, ವಿಶ್ವೇಶ್ವರಯ್ಯನವರದು ಹೀಗೆ ಖ್ಯಾತನಾಮರಿಂದ ಹಿಡಿದು ಮಂಕುತಿಮ್ಮಪ್ಪನ ವರೆಗೆ ಎಲ್ಲ ರೀತಿಯ ಮೆದುಳೂ ಇತ್ತು - ಬೇರೆ ಬೇರೆ ಬೆಲೆಚೀಟಿಯೊಂದಿಗೆ. ಇದರಲ್ಲಿ ವಿಶ್ವೇಶ್ವರಯ್ಯನವರ ಮೆದುಳಿನ ಬೆಲೆ ಬರೇ ಐದು ರೂಪಾಯಿ ಹಾಕಿದ್ದರಂತೆ. ತಿಮ್ಮಪ್ಪನ ಮೆದುಳಿಗೆ ಐದು ಲಕ್ಷ ರೂಪಾಯಿ!
ಹಾಗೇ, ಪ್ರದರ್ಶನ ನೋಡಲು ಬಂದವರೊಬ್ಬರು ಇದನ್ನು ಗಮನಿಸಿ - ’ಏನೋ ತಪ್ಪಾಗಿರಬೇಕು, ನೀವು ಅಂಟಿಸಿರುವ ’ಬಿಲ್’ಗಳು ಅದಲುಬದಲಾಗಿವೆಯೇನೋ, ಪರಿಶೀಲಿಸಿ ನೋಡಿ’ ಎಂದು ಹೇಳಿದಾಗ; ಆ ವ್ಯವಸ್ಥಾಪಕರು "ಇಲ್ಲಪ್ಪ, ಎಲ್ಲಾ ಸರಿಯಾಗಿಯೇ ಇದೆ. ವಿಶ್ವೇಶ್ವರಯ್ಯನವರು ತಮ್ಮ ಮೆದುಳು ಪೂರಾ ಉಪಯೋಗಿಸಿಕೊಂಡುಬಿಟ್ಟಿದ್ದಾರೆ, ಅದಕ್ಕೇ ಕಡಿಮೆ ಬೆಲೆ. ಈ ಮಂಕುತಿಮ್ಮಪ್ಪ ಮೆದುಳನ್ನು ಉಪಯೋಗಿಸದೆಯೇ ಹಾಗೇ ವಾಪಸ್ ಕೊಟ್ಟಿದ್ದಾನೆ, ಹಾಗೇ ಚೆನ್ನಾಗಿದೆ. ಅದಕ್ಕೆ ಇದರ ಬೆಲೆ ಜಾಸ್ತಿ" ಎಂದರಂತೆ.
ಹೆಚ್ಚು ಮಂದಿ ಇದೇ ರೀತಿ ಜಿಪುಣತನ ಮಾಡ್ತಾರೆ. ಮೆದುಳು ಉಪಯೋಗಿಸದೇ ಹಾಗೇ ಭದ್ರವಾಗಿಟ್ಟುಕೊಂಡು ಹಿಂದಿರುಗಿಸೋಣ ಅಂತ!!

* * * * *

ವಿದ್ಯೆ - ಅವಿದ್ಯೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೯.೦೭.೨೦೦೩ರಂದು ಪ್ರಕಟವಾಗಿತ್ತು)

ಮುಂದಿನ ಸೂತ್ರ "ವಿದ್ಯಾ ಅವಿನಾಶೇ ಜನ್ಮ ವಿನಾಶಃ"
ಕುರುಚಲು ಗಿಡ, ಕಳೆ, ಬೆಳೆಯನ್ನು ತಿಂದುಹಾಕುವ ಹಾಗೆ ’ಅವಿದ್ಯೆ’ಯು ನಮ್ಮಲ್ಲಿರತಕ್ಕಂಥ ವಿದ್ಯೆಯನ್ನು ತಿಂದುಹಾಕುತ್ತದೆ. ಎಲ್ಲರಲ್ಲೂ ವಿವೇಕ ಇದೆ, ಪ್ರಜ್ಞೆ ಇದೆ. ಎಲ್ಲರಿಗೂ ಗೊತ್ತು ’ಎಲ್ಲರೂ ಸಾಯುವವರೇ’ ಅಂತ! ಆದರೂ, ಬೇರೆಯವರ ಸಾವಿನ ಸುದ್ದಿ ಕೇಳಿದಾಗ ’ಅಯ್ಯೋ ಪಾಪ, ಸತ್ತುಹೋಗಿಬಿಟ್ಟರು ನೋಡಿ’ ಅನ್ನುತ್ತೀವಿ. ಹಾಗೆಯೇ ನಾವೂ ಒಂದು ದಿನ ಸಾಯುವವರೇ! ಅದು ಜ್ಞಾಪಕಕ್ಕೆ ಬರುವುದಿಲ್ಲ!! ಯಾಕೆ? ’ವಿದ್ಯೆ’ಯ ಅರಿವಿಲ್ಲ. ’ಎಲ್ಲವೂ ನಶ್ವರ’ ಎನ್ನುವುದನ್ನು ಮರೆತುಬಿಡುತ್ತೀವಿ.
’ಅವರು ಹೀಗಂದರು. ಇವರು ಹಾಗಂದರು’ ಯಾಕೆ ಅವನ್ನೆಲ್ಲಾ ತಲೆಯಲ್ಲಿ ಹಿಡಿದಿಟ್ಟುಕೊಂಡು ಅವಸ್ಥೆ ಪಡಬೇಕು? ಅಂದಿದ್ದೆಲ್ಲಾ ಗಾಳೀಲಿ ತೂರಿಹೋಯ್ತು ಅಂತ ಈ ಕಿವಿಯಲ್ಲಿ ಕೇಳಿ ಆ ಕಿವಿಯಿಂದ ಬಿಟ್ಟುಬಿಡಿ. ಜನರ ಮಾತು, ಭಾವನೆ ಇವುಗಳಿಗೆ ಬೆಲೆಕಟ್ಟಿಕೊಂಡು ಇರೋದು ’ಅವಿದ್ಯೆ’, ಇದು ವಿದ್ಯೆಯ ವಿನಾಶ. ನಮ್ಮಲ್ಲಿರುವ ಸ್ವಲ್ಪವಾದರೂ ’ವಿದ್ಯೆ’ಯನ್ನು ನಾಶ ಮಾಡುವುದು ಹೀಗೇ! ಬೇಡದಿರುವ ಮಾತಾಡಿಕೊಂಡು ಹರಟೆಯಲ್ಲಿ, ಕಲಹದಲ್ಲಿ ಕಾಲಹರಣ ಮಾಡಿಕೊಂಡಿರೋದು. ಚಾಡಿಯಿಂದ, ಕಲಹದಿಂದ ಏನಾಗುತ್ತೆ? ನಮ್ಮಲ್ಲಿರತಕ್ಕಂಥ ಅಲ್ಪಸ್ವಲ್ಪ ವಿದ್ಯೆಯೂ ವಿನಾಶವಾಗುತ್ತೆ. ಜನರು ಸತ್ಸಂಗಕ್ಕೆ ಬಂದು ಎಲ್ಲ ಕೇಳಿಕೊಂಡು ಹೋಗುತ್ತಾರೆ, ಅದರಿಂದುಂಟಾದ ಉತ್ಸಾಹ, ಸಂತೋಷ ಎಲ್ಲವನ್ನೂ, ಏನೋ ಬೇಡದಿರುವ ಚಾಡಿಮಾತು, ಹರಟೆಯಿಂದಾಗಿ ಕಳೆದುಕೊಂಡುಬಿಡ್ತಾರೆ. ಮನಸ್ಸಿನಲ್ಲಿ ಎಲ್ಲಾ ತರಹದ ಭಯ, ಶಂಕೆ, ತಾಪತ್ರಯಗಳು ಎಲ್ಲ ಹುಟ್ಟಿಕೊಂಡುಬಿಡುತ್ತವೆ. ಮತ್ತೆ ಕುರುಚಲು(ಕಳೆ)ಗಿಡ ನೋಡಿ. ಕುರುಚಲು ಗಿಡಕ್ಕೆ ಏನೂ ಪ್ರಯಾಸ ಪಡಬೇಕಾಗಿಲ್ಲ, ತನ್ನಷ್ಟಕ್ಕೆ ತಾನೇ ಹುಟ್ಟಿಕೊಂಡು ಬಿಡುತ್ತೆ ಅದು! ಬೆಳೆ ಬೆಳೆಯಬೇಕಿದ್ದರೆ ಪ್ರಯತ್ನ ಪಡಬೇಕು, ಅಲ್ಲವಾ?

* * * * *

ಸೀಮಿತ ಕರ್ಮಫಲ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೦.೦೭.೨೦೦೩ರಂದು ಪ್ರಕಟವಾಗಿತ್ತು)

’ವಿದ್ಯಾ ಅವಿನಾಶೇ ಜನ್ಮ ವಿನಾಶಃ’
ಚಿಂತೆ ಮಾಡುವುದನ್ನು ಯಾರಿಗೂ ಯಾರೂ ಕಲಿಸಿಕೊಡುವುದಿಲ್ಲ. ತನ್ನಷ್ಟಕ್ಕೇ ಬಂದು ಬಿಡುತ್ತೆ. ಆದರೆ, ಸಂತೋಷವಾಗಿರುವುದು ಹೇಗೆ ಅಂತ ಕಲಿಸಿಕೊಡಬೇಕಾಗುತ್ತೆ. ’ವಿದ್ಯೆ’ಯಿದ್ದರೆ, ’ಜನ್ಮ ವಿನಾಶಃ’ ಮತ್ತೆ ಮತ್ತೆ ಜನ್ಮವೆತ್ತಿಕೊಂಡು ಬರುವುದಿಲ್ಲ. ನಮ್ಮ ಜನ್ಮ ಬಂದಿರುವುದು ಯಾವುದೋ ’ಅವಿದ್ಯೆ’ಯ, ಇಚ್ಛೆಯ, ದ್ವೇಷದ, ಕಲಹದ, ಕ್ಲೇಶದ ಕಾರಣದಿಂದ. ಇಲ್ಲಿ ಜನ್ಮ-ವಿನಾಶ ಅಂದರೇನು? ಮತ್ತೆ ಮತ್ತೆ ಮನಸ್ಸಿನಲ್ಲಿ ಉದ್ವೇಗ, ಆತಂಕ, ಅತೃಪ್ತಿ ಇವುಗಳು ಬರದೆ ನಿಶ್ಚಲವಾದ ನಿತ್ಯತತ್ವದಲ್ಲಿ ಸ್ಥಿರವಾಗಿರುತ್ತದೆ. ’ವಿದ್ಯಾ ಅವಿನಾಶೇ ಜನ್ಮ ವಿನಾಶಃ’ ಜನ್ಮ ಸಾರ್ಥಕವಾಗುತ್ತದೆ ಅಂತ.
ಮುಂದಿನ ಸೂತ್ರ ಹೇಳ್ತಾರೆ - "ಕವರ್ಗಾದಿಷು ಮಹೇಶ್ವರ್ಯಾಧ್ಯಾಃ ಪಶುಮಾತರಃ"..... ಬೇರೆ ಎಲ್ಲಾ ತರಹದ, ನಾವು ಮಾಡತಕ್ಕಂಥ ಪ್ರಯೋಗಗಳು, ಮಂತ್ರಗಳು ಇವೆಲ್ಲದಕ್ಕೂ ಸೀಮಿತವಾದ ಶಕ್ತಿಯಿದೆ. ಆದರೆ ಚೇತನಕ್ಕೆ ಮಾತ್ರ ಅಸೀಮವಾದ ಶಕ್ತಿಯಿದೆ.
ನಾವು ಮಾಡುವಂತಹ ಕರ್ಮ ಸೀಮಿತವಾದದ್ದು, ಆ ಕರ್ಮಫಲವೂ ಸೀಮಿತವಾಗಿರುತ್ತದೆ. ಯಾವುದೋ ಒಂದು ಒಳ್ಳೆಯ ಕೆಲಸ ಮಾಡಿದರೆ, ಅದರ ಫಲ ಒಂದಷ್ಟು ದಿನ ಇರುತ್ತದೆ. ಕೆಟ್ಟ ಕೆಲಸ ಮಾಡಿದ್ದೂ ಅಷ್ಟೆ.... ಅದರ ಫಲವೂ ಒಂದಷ್ಟು ದಿನ ಇರುತ್ತದೆ. ಇದನ್ನು ಚೆನ್ನಾಗಿ ತಿಳಿದುಕೊಳ್ಳಿ, ವಿಶ್ರಾಮ ಮಾಡಿ.... ’ಆತ್ಮನಲ್ಲಿ ವಿಶ್ರಾಮ ಮಾಡಿ’ ಅಂತ ಮತ್ತೆ ಮತ್ತೆ ಹೇಳ್ತಾರೆ. ಆಗಲೇ ಮನಸ್ಸಿನಲ್ಲಿ ದ್ವಂದ್ವ ನಿವಾರಣೆಯಾಗುತ್ತೆ. ಮನಸ್ಸು ಶಾಂತವಾಗುತ್ತೆ. ಆಗ ’ಸ್ವಾತ್ಮಾನಂದ ಪ್ರಕಾಶ ವಪುಷೇ’ ಮೊದಲನೆಯ ಸೂತ್ರಕ್ಕೆ ಮತ್ತೆ ನಾವು ಬಂದುಬಿಡುತ್ತೀವಿ.

* * * * *

ಸಾಕ್ಷಿತ್ವ ಅಥವಾ ನಾಲ್ಕನೆಯ ಅವಸ್ಥೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೧.೦೭.೨೦೦೩ರಂದು ಪ್ರಕಟವಾಗಿತ್ತು)

ಮುಂದಿನ ಸೂತ್ರ "ತ್ರಿಷು ಚತುರ್ಥಂತೈಲವದಾಸೇಚ್ಯಂ" ಎಂದರೆ ಮೂರೂ ಅವಸ್ಥೆಗಳಲ್ಲಿ ನಾಲ್ಕನೆಯದನ್ನು ತೈಲದಂತೆ ಸಿಂಪಡಿಸಿಕೊಳ್ಳಬೇಕು ಅಂತ. ನಾವು ಮಾಡತಕ್ಕಂಥ ಎಲ್ಲಾ ತರಹದ ಚಟುವಟಿಕೆಗಳೂ ಬರೀ ಜಾಗೃತ್ ಅವಸ್ಥೆಗೆ ಮಾತ್ರ ಸೇರಿದೆ. ಆದರೆ ಧ್ಯಾನದಲ್ಲಿ ನಮಗೆ ಆಗುವಂತಹ ಅನುಭವ ಬರೀ ಜಾಗೃತ್ ಅವಸ್ಥೆ ಅಲ್ಲ. ಅದು ಸುಷುಪ್ತಿಗೂ ಹೋಗುತ್ತೆ. ಧ್ಯಾನ ಮಾಡಿದ ನಂತರ ನೀವು ಮಲಗಿ ನಿದ್ದೆ ಮಾಡಿದರೆ ಆ ನಿದ್ದೆಯ ತರಹ, ಗುಣಮಟ್ಟವೇ ಬೇರೆಯಾಗಿರುತ್ತೆ. ಜಾಗೃತ್, ಸ್ವಪ್ನ, ಸುಷುಪ್ತಿ ಈ ಮೂರೂ ಅವಸ್ಥೆಯಲ್ಲಿಯೂ ಚತುರ್ಥಾವಸ್ಥೆಯಾದ ಧ್ಯಾನದಲ್ಲಿ ಅನುಭವಿಸುವ ಆ ಶಾಂತವಾದ ಅವಸ್ಥೆಯ ಸೇಚನವಾಗುತ್ತದೆ. ನಾವೇನೂ ಮಾಡಬೇಕಾಗಿಲ್ಲ! ಅಂದರೇನು? ಈಗ ನೀವು ಮಾತನಾಡುತ್ತಾ ಇದ್ದರೂ, ನಿಮ್ಮಲ್ಲಿ ಸಾಕ್ಷಿತ್ವ ಇರುತ್ತೆ. ನಿದ್ದೆ ಮಾಡುವಾಗಲೂ ’ನಾನು ನಿದ್ದೆ ಮಾಡ್ತಾ ಇದೀನಿ’ ಅಂತ ಗೊತ್ತಾಗುತ್ತೆ. ಹಾಗೇ ಕನಸು ಕಾಣಬೇಕಾದರೂ ಸಾಕ್ಷಿತ್ವ ಇರುತ್ತದೆ. ಎಷ್ಟೋ ಸಲ ನಿಮಗೂ ಆಗಿರಬೇಕಲ್ಲವೆ ಈ ರೀತಿಯ ಅನುಭವ!
ಹಾಗೇ ಜಾಗೃತಾವಸ್ಥೆಯಲ್ಲಿ ಚಟುವಟಿಕೆ ಮಾಡುತ್ತಿರುವಾಗ, ’ಮಾಡ್ತಾ ಇದೀನಿ’ ಎನ್ನುವ ಸಾಕ್ಷೀಭಾವ ಬರುತ್ತೆ. ತಲೆಯಲ್ಲಿ ವಿಚಾರ ಬರುತ್ತಿದೆ, ಹೋಗುತ್ತಿದೆ ಅಂತ ಗೊತ್ತಾಗುತ್ತಿರುತ್ತೆ. ಹೌದಾ? ಯಾವುದೇ ತರಹದ ರಾಗ ದ್ವೇಷಗಳನ್ನು, ವಿಚಾರಗಳನ್ನು, ಅನುಭವಗಳನ್ನು ಸಾಕ್ಷಿಯಾಗಿ ನೋಡುತ್ತಾ ಬರಬೇಕು. ಆಗ ಮೂರು ಅವಸ್ಥೆಯನ್ನು ದಾಟಿ ಚೇತನ ವಿಸ್ತಾರವಾಗುತ್ತದೆ.

* * * * *

ಸ್ವಚಿತ್ತದಲ್ಲಿ ಮಗ್ನತೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೨.೦೭.೨೦೦೩ರಂದು ಪ್ರಕಟವಾಗಿತ್ತು)

ಮುಂದಿನ ಸೂತ್ರ "ಮಗ್ನಃ ಸ್ವಚಿತ್ತೇನ ಪ್ರವಿಶೇತ್".
ನಾವು ಯಾವಾಗಲೂ ಬೇರೆಯವರ ಚಿತ್ತವನ್ನು ಪ್ರವೇಶ ಮಾಡುತ್ತಿರುತ್ತೇವೆ. ಬೇರೆಯವರು ನಮ್ಮ ಬಗ್ಗೆ ಏನು ಅಂದುಕೊಳ್ಳುತ್ತಾರೆ ಅಂತ, ನಮ್ಮ ಬಗ್ಗೆ ಏನು ಯೋಚನೆ ಮಾಡುತ್ತಿರುತ್ತಾರೆ ಅಂತ ಯೋಚನೆ ಮಾಡ್ತೀವಿ. ಬೆಳಿಗ್ಗೆ ಎದ್ದ ಕೂಡಲೇ ’ನಾನು ಅವರಿಗೇನು ಹೇಳಲಿ, ಅವರು ನನ್ನ ಬಗ್ಗೆ ಏನಂದುಕೋತಾರೆ, ಇವರಿಗೇನು ಜವಾಬು ಕೊಡಲಿ’ - ನಿಮ್ಮ ಚಿತ್ತದಲ್ಲಿ ಆಗತಕ್ಕಂಥ ಮುಕ್ಕಾಲು ಪಾಲು ವಿಚಾರವೆಲ್ಲವೂ ಬೇರೆಯವರ ಸಂಬಂಧವಾಗಿಯೇ ಇರುತ್ತದೆ.
’ಮಗ್ನಃ ಸ್ವಚಿತ್ತೇನ ಪ್ರವಿಶೇತ್’ - ಮಗ್ನರಾಗೋದು ಅಂದರೆ ಏನು? ಲೀನವಾಗುವುದು. ನಮ್ಮ ಚಿತ್ತದಲ್ಲೇ ನಾವು ಲೀನವಾಗುವುದು. ಬೇರೆಯವರು ಏನನ್ನುತ್ತಾರೆ ಅನ್ನುವ ಯೋಚನೆಯಿಲ್ಲ. ನಾವು ಯಾವಾಗ ಮಗ್ನರಾಗ್ತೀವಿ ಗೊತ್ತಾ? ಮನಸ್ಸು ತುಂಬಾ ಪ್ರಸನ್ನವಾದಾಗ ಮಾತ್ರ ನಾವು ಮಗ್ನರಾಗ್ತೀವಿ.
ಚಿಕ್ಕ ಮಗುವಿನ ಕೈಗೊಂದು ಲಾಲಿಪಪ್ಪು ಕೊಟ್ಟು ನೋಡಿ. ಆ ಲಾಲಿಪಪ್ಪು ತಿನ್ನುವಾಗ ಪೂರ್ಣವಾಗಿ ಮಗ್ನವಾಗಿರುತ್ತದೆ. "ಏನು ಪಾಪೂ ನಿನ್ನ ಹೆಸರು?" ಬಾಯಿ ಬಿಡೋದಿಲ್ಲ ಮಗು. ಬಾಯಿ ಬಿಟ್ಟರೂ ಶಬ್ದ ಬರೋದಿಲ್ಲ. ಏನು ಮಾತನಾಡಿಸಿದರೂ ಕೇಳಿಸಿಕೊಳ್ಳುವುದೇ ಇಲ್ಲ. ಆ ತಿನಿಸಿನಲ್ಲೇ ಅಷ್ಟು ಮಗ್ನವಾಗಿರುತ್ತೆ.
ಮಗು ಮಾಡತಕ್ಕಂಥ ಪ್ರತಿಯೊಂದು ಕೆಲಸದಲ್ಲಿಯೂ ಮಗ್ನತೆಯಿದೆ, ಅದಕ್ಕೇ ಮಗುವಿನಲ್ಲಿ ಆನಂದ ತುಂಬಿರುತ್ತದೆ. ಅದು ಸ್ವಚಿತ್ತದಲ್ಲಿರುತ್ತದೆ.

* * * * *

ಲೀಲೆ!
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೩.೦೭.೨೦೦೩ರಂದು ಪ್ರಕಟವಾಗಿತ್ತು)

’ಮಗ್ನಃ ಸ್ವಚಿತ್ತೇನ’..... ’ಸ್ವಚಿತ್ತೇನ ಪ್ರವಿಶೇತ್’
ಗುರಿ, ಲಕ್ಷ್ಯ ಇರುವಂಥಹ ಉದ್ದೇಶಪೂರ್ಣವಾದ ಚಟುವಟಿಕೆ ಬೇರೆ. ಉದ್ದೇಶ ರಹಿತವಾದ ಚಟುವಟಿಕೆ ಬೇರೆ. ಅನುದ್ದೇಶಪೂರ್ಣವಾದ ಚಟುವಟಿಕೆಯನ್ನು ’ಲೀಲೆ’ ಅಂತ, ’ಆಟ’ ಅಂತ ಕರೆಯುತ್ತೀವಿ. ಮಗು ಮಾಡುವುದೆಲ್ಲಾ ಲೀಲೆ!
ಮಗುವಿಗೆ ಯಾವಾಗಲೂ ಬೇರೆಯವರು ಏನಂದುಕೊಳ್ಳುತ್ತಾರೆ ಎನ್ನುವ ಯೋಚನೆ ಇಲ್ಲ. ಎಲ್ಲಿರುತ್ತದೋ ಅಲ್ಲೇ ಮೂತ್ರ ವಿಸರ್ಜನೆ ಮಾಡುತ್ತೆ. ಮಾಡಿ ಅದರಲ್ಲೇ ತಾಳಾನೂ ಹಾಕ್ತಾ ಇರುತ್ತೆ. ಅದನ್ನೆಲ್ಲಾ ಅಲ್ಲಿ ಸಾರಿಸಿಬಿಡುತ್ತೆ ಪೂರ್ತಿಯಾಗಿ! ಅದಕ್ಕೇನೂ ಗೊತ್ತಾಗೋದೇ ಇಲ್ಲ ಯಾಕೆ? ಭೇದ ಭಾವನೆಯೇ ಇಲ್ಲ, ಬೇರೆಯವರು ಅನ್ನುವ ಯೋಚನೆ ಇಲ್ಲ. ತನ್ನಿಷ್ಟ ಬಂದಿದ್ದನ್ನು ತಾನು ಮಾಡೋದು. ಆ ಚಟುವಟಿಕೆಗೆ ಒಂದು ಗುರಿ, ಒಂದು ಲಕ್ಷ್ಯ ಏನಿಲ್ಲ. ಈ ರೀತಿಯ ಉದ್ದೇಶರಹಿತ ಚಟುವಟಿಕೆಯನ್ನೇ ಆಟ, ಲೀಲೆ ಎನ್ನುವುದು. ಮಗು ಮಾಡುವುದೆಲ್ಲವೂ ಆಟ, ಲೀಲೆ. ಹಾಗೆಯೇ ಒಬ್ಬ ಜ್ಞಾನಿ ಮಾಡುವುದೆಲ್ಲವೂ ಲೀಲೆ. ಜ್ಞಾನಿಗೆ ಗುರಿಯಿಲ್ಲ. ತಾನೇ ಗುರಿ. ’ಸ್ವಚಿತ್ತೇ ಮಗ್ನಃ’ ನಿನ್ನ ಗುರಿ ಬೇರೆಲ್ಲೋ ಇದೆ ಅಂತ ನೀನು ಅಲ್ಲೆಲ್ಲೋ ಆಕಾಶ ನೋಡುತ್ತಾ ಕುಳಿತಿರಬೇಡ. ನಿನ್ನ ಚಿತ್ತದಲ್ಲಿ ಪ್ರವೇಶ ಮಾಡು. ಮಗ್ನನಾಗು. ಹಾಗೆ ಮಗ್ನರಾದವರು ತನ್ನ ಚಿತ್ತದಲ್ಲಿ, ತನ್ನ ಆತ್ಮನಲ್ಲಿ, ತನ್ನ ಶಾಂತವಾದ ಸ್ವಭಾವದಲ್ಲಿ ಪ್ರವೇಶ ಮಾಡಿ ಶಾಂತಿಯನ್ನು ಪಡೆಯುತ್ತಾರೆ. ನಮಗೆ ಶಾಂತಿ ಸಿಗಬೇಕಾದರೆ ಸ್ವಚಿತ್ತದಲ್ಲಿ ಪ್ರವೇಶವಾದಾಗಲೇ, ಮಗ್ನರಾದರೆ ಮಾತ್ರ ಶಾಂತಿ ಸಿಗುವುದು.

* * * * *

ಸ್ವಚಿತ್ತದಲ್ಲಿ ಪ್ರವೇಶಿಸು
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೪.೦೭.೨೦೦೩ರಂದು ಪ್ರಕಟವಾಗಿತ್ತು)

"ಮಗ್ನಃ ಸ್ವಚಿತ್ತೇನ ಪ್ರವಿಶೇತ್"
ಮಗ್ನವಾದಾಗ ಮಾತ್ರ ನಿನ್ನ ಚಿತ್ತದಲ್ಲಿ ನೀನು ಪ್ರವೇಶ ಮಾಡಲು ಸಾಧ್ಯ. ಇಷ್ಟೆಲ್ಲಾ ಜ್ಞಾನವನ್ನು ತಿಳಿದುಕೊಂಡ ನಂತರವೂ ನಿನ್ನ ಚಿತ್ತ ಶಾಂತವಾಗಲಿಲ್ಲವೆಂದರೆ ಅದಕ್ಕೆ ಕಾರಣ ನಿನ್ನ ಆತ್ಮನಲ್ಲಿ ನೀನು ಮಗ್ನನಾಗಿಲ್ಲದಿರುವುದೇ. ಮಗ್ನನಾಗು, ಮುಳುಗು. ಇಲ್ಲಿ ಯಾರು ಮುಳುಗುತ್ತಾರೋ ಅವರು ತೇಲುತ್ತಾರೆ, ಪಾರಾಗುತ್ತಾರೆ. ಯಾವ ಕೆಲಸ ಮಾಡಿದರೂ, ಏನು ಮಾಡಿದರೂ ಅದರಲ್ಲಿ ಮುಳುಗುವುದನ್ನು ಕಲಿ. "ಮನಕರಗದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು" ... ಮನಕರಗುವುದೆಂದರೆ ಮಗ್ನರಾಗುವುದು, ಸ್ವಚಿತ್ತದಲ್ಲಿ ಪ್ರವೇಶ ಮಾಡುವುದು.
ನಮ್ಮ ಚೇತನಕ್ಕೆ ಬಾಧೆ ತರುವಂತಹುದು ಯಾವುದು? ನಮ್ಮ ಮನಸ್ಸು. ಅದು ಚೇತನದ್ದೇ ಅಂಗವಾಗಿದೆ. ಆ ಚೇತನದ ರೂಪದಲ್ಲಿ ಬರುವ ಶಕ್ತಿಯನ್ನು ನಾವು ಮನಸ್ಸಿನಲ್ಲಿ ವಿಚಾರ ರೂಪದಲ್ಲಿ ಹೊರಗೆ ಹಾಕುತ್ತಿರುತ್ತೀವಿ. ಅದು ವ್ಯಯವಾಗಿ ಹೋಗಿ ಬಿಡುತ್ತೆ. ಒಬ್ಬ ಮಗ್ನನಾಗಿರುವ, ಪ್ರಸನ್ನವಾಗಿರುವ ವ್ಯಕ್ತಿ ತುಂಬ ಯೋಚನೆ ಮಾಡೋದಿಲ್ಲ. ಆ ವ್ಯಕ್ತಿಯ ಮುಖದಲ್ಲಿ ಎಷ್ಟು ಚೈತನ್ಯ, ತೇಜಸ್ಸು, ಕಾಂತಿ, ಲವಲವಿಕೆ ಇರುತ್ತದೆ! ಅದೇ ವ್ಯಕ್ತಿ ಚಿಂತೆ ಮಾಡುತ್ತಾ ಇದ್ದರೆ ಮುಖದಲ್ಲಿ ಗೆರೆ, ಸುಕ್ಕು ಬಂದು ಬಾಡಿ ಹೋಗಿರುತ್ತದೆ.
ಮನುಷ್ಯ ಚಿಂತೆಯಿಂದ ತುಂಬಾ ಬಾಡಿಹೋಗ್ತಾನೆ, ಕೆಲಸದಿಂದ ಬಾಡಲ್ಲ... ಅಲ್ವಾ! ಕೆಲಸ ಮಾಡುವುದರಿಂದ ದಣಿವಾಗುತ್ತದೆ. ಆದರೆ ಚಿಂತೆ ಮಾಡೋದರಿಂದ ಅದರ ನೂರರಷ್ಟು ಹೆಚ್ಚು ಸುಸ್ತಾಗುತ್ತದೆ. ಅದಕ್ಕೇ ಮಗ್ನವಾಗುವುದನ್ನು ಕಲಿ. "ಮಗ್ನಃ ಸ್ವಚಿತ್ತೇನ ಪ್ರವಿಶೇತ್".

* * * * *

ತಲ್ಲೀನರಾಗುವುದು ಹೇಗೆ?
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೫.೦೭.೨೦೦೩ರಂದು ಪ್ರಕಟವಾಗಿತ್ತು)

"ಮಗ್ನಃ ಸ್ವಚಿತ್ತೇನ ಪ್ರವಿಶೇತ್"
ಧ್ಯಾನದ ಮೂಲಕವಾಗಿ ಸ್ವಚಿತ್ತದಲ್ಲಿ ಪ್ರವೇಶ ಮಾಡು. ಆಗ ತಕ್ಷಣ ನೀನು ಮಗ್ನನಾಗಿಬಿಡುತ್ತೀಯ. ಧ್ಯಾನದಲ್ಲಿ ’ಅದು ಕಾಣಬೇಕು, ಇದು ಕಾಣಬೇಕು’ ಅಂದುಕೊಳ್ಳಬೇಡ. ಏನೂ ಕಾಣಬೇಕಿಲ್ಲ. ನಾನೆಲ್ಲಿದ್ದೀನಿ ಅನ್ನುವುದೇ ಗೊತ್ತಾಗಬೇಕಿಲ್ಲ. ಹಾಗೆ ಮಗ್ನರಾಗಿರಬೇಕು, ಮೈಮರೆತಿರಬೇಕು. ಮನಕರಗಿರಬೇಕು! ಆಗ ಪರಿಣಾಮ ತನ್ನಷ್ಟಕ್ಕೆ ತಾನೇ ಉಂಟಾಗುತ್ತೆ.
ಇಲ್ಲವೇ ಭಾವದಲ್ಲಿ ಮಗ್ನನಾಗು. ಆಗಲೂ ಸ್ವಚಿತ್ತದಲ್ಲಿ ಪ್ರವೇಶ ಮಾಡುತ್ತೀಯ. ಮನೆಯಲ್ಲಿ ಒಂದು ಆಸನದಲ್ಲಿ ಆರಾಮವಾಗಿ ಕುಳಿತುಕೊಳ್ಳಿ. ಒಂದು ಒಳ್ಳೆಯ ಮಧುರವಾದ ಗೀತೆಯನ್ನೋ, ಭಕ್ತಿಪೂರ್ವಕವಾದ ಭಜನೆಯನ್ನೋ ಹಾಕಿಕೊಂಡು ಹಾಗೇ ವಿಶ್ರಾಮಪೂರ್ವಕವಾಗಿ ಕೇಳಿ, ಕಣ್ಣು ತೆರೆದುಕೊಂಡು ಯಾವ ಚಟುವಟಿಕೆಯನ್ನೂ ಮಾಡಬೇಡಿ, ತಬಲಗಿಬಲ ಹೊಡೆಯಬೇಡಿ. ಆ ಸಂಗೀತದಲ್ಲೇ ಮುಳುಗಿಹೋಗಿಬಿಡಿ! ಹಾಗೆ ಮಗ್ನವಾಗಿದ್ದಾಗ ಒಂದು ಅಲೌಕಿಕ ಅನುಭವ, ಆನಂದ ಉಂಟಾಗುತ್ತೆ. ಆ ಸಂಗೀತ ಮುಗಿಯುತ್ತಿದ್ದಂತೆಯೇ ನಿಮ್ಮ ಚೇತನ ಧ್ಯಾನಮಯವಾಗಿರುತ್ತದೆ. ಹಾಗೆ ಸ್ವಚೇತನದಲ್ಲಿ ಮಗ್ನರಾದವರು ತಲ್ಲೀನರಾಗಿರುತ್ತಾರೆ. ಸ್ವಚಿತ್ತದಲ್ಲಿ ಪ್ರವೇಶ ಮಾಡುತ್ತಾರೆ. ಇದನ್ನು ಇಂದೇ ಮಾಡಿ ನೋಡಿ. ಒಂದೊಂದೇ ಸೂತ್ರವನ್ನು ಮತ್ತೆ ಮತ್ತೆ ಮನಸ್ಸಿನಲ್ಲಿ ಮೆಲುಕುಹಾಕಬೇಕು. ಮುಂದಿನ ಸೂತ್ರವೂ ಬಹಳ ಸೊಗಸಾದ ಸೂತ್ರ.

* * * * *

ಪ್ರಾಣಶಕ್ತಿ ಹೆಚ್ಚಿಸಿಕೊಳ್ಳಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೬.೦೭.೨೦೦೩ರಂದು ಪ್ರಕಟವಾಗಿತ್ತು)

"ಪ್ರಾಣ ಸಮಾಚಾರೇ ಸಮದರ್ಶನಮ್"
ಪ್ರಾಣಾಯಾಮದಿಂದ ಶರೀರದಲ್ಲಿರುವ ಪ್ರಾಣಚೈತನ್ಯವನ್ನು ಹೆಚ್ಚು ಮಾಡಿಕೊಳ್ಳಿ. ಮನಸ್ಸಿನಲ್ಲಿ ತೀರಾ ಅಲ್ಲೋಲಕಲ್ಲೋಲ ಇದೆ. ಧ್ಯಾನದಲ್ಲಿಯೇ ಆಗಲಿ, ಭಾವದಲ್ಲಿಯೇ ಆಗಲಿ ಮಗ್ನರಾಗಲು ಸಾಧ್ಯವಾಗಲಿಲ್ಲ, ಈಗೇನು ಮಾಡೋದು? ಎಂದರೆ - "ಪ್ರಾಣ ಸಮಾಚಾರೇ ಸಮದರ್ಶನಮ್". ಪ್ರಾಣಶಕ್ತಿ ಹೆಚ್ಚಿಸಿಕೊಳ್ಳಲು ಗಮನ ಕೊಡಿ. "ಸುದರ್ಶನ ಕ್ರಿಯೆ" ಮಾಡಿದಾಗ ನೋಡಿ, ಮನಸ್ಸಿನಲ್ಲಿ ಎಂತಹ ಆತಂಕ, ಶೋಕ, ದುಃಖ ಇದ್ದರೂ ಎಷ್ಟು ಹಗುರವಾಗಿಬಿಡುತ್ತದೆ! ಮನಸ್ಸು ಎಲ್ಲಿಂದೆಲ್ಲಿಗೋ ಬಂದ ಹಾಗೆ, ಹೊಸ ಜೀವನವೇ ಬಂದ ಹಾಗಾಗುತ್ತೆ. ಲಕ್ಷಾಂತರ ಜನ ಇದನ್ನು ಅನುಭವಿಸಿದ್ದಾರೆ. ಪ್ರಾಣ ಚೇತನ ಹೆಚ್ಚಾಗಬೇಕು, ಪ್ರಾಣ ಸಂಚಾರ ಸಮವಾಗಿರಬೇಕು.
ಈಗ, ನಮ್ಮಲ್ಲಿ ದುಃಖ ಇದ್ದಾಗ, ಒಳಗೆ ತೆಗೆದುಕೊಳ್ಳುವ ಉಸಿರು ಚಿಕ್ಕದಾಗಿರುತ್ತೆ. ಹೊರಗೆ ಬಿಡುವಾಗ ’ಹ್ಞು... ಹಾ...’ ನಿಟ್ಟುಸಿರು, ಜೋರಾಗಿ ಉಸಿರು ಬಿಡ್ತೀರ. ಸುಖ ಇದ್ದಾಗ ದೊಡ್ಡದಾಗಿ ಉಸಿರು ತೆಗೆದುಕೊಳ್ತೀವಿ, ಬಿಡೋದೇ ಗೊತ್ತಾಗೋದಿಲ್ಲ. ಸಂತೋಷ ಇದ್ದಾಗ, ಒಂದು ಸುಗಂಧಭರಿತವಾದ ಹೂವನ್ನು ಆಘ್ರಾಣಿಸಬೇಕಾದರೆ ಜೋರಾಗಿ ಉಸಿರು ತಗೋತೀರ. ’ಹಾ...’ ಎನ್ನುತ್ತೀರ, ಆದರೆ ಹೊರಗೆ ಬರುವ ಉಸಿರು ಕರಗಿಹೋಗಿರುತ್ತದೆ.
ಈಗೇನಾಯ್ತು? ಸುಖದಲ್ಲಿದ್ದಾಗಲೂ ದುಃಖದಲ್ಲಿದ್ದಾಗಲೂ ಪ್ರಾಣದ ಚಲನೆ ಸಮಾನವಾಗಿಲ್ಲ. ಆದ್ದರಿಂದ ಪ್ರಾಣವನ್ನು ಸಮಾನವಾಗಿ ಹರಿಯುವಂತೆ ಮಾಡಿ. ಶರೀರದಾದ್ಯಂತ ಪ್ರಾಣ ಸಮಾನವಾಗಿ ಚಲಿಸಬೇಕು.

* * * * *

ಇರಲಿ ಪ್ರಾಣದಲ್ಲಿ ಸ್ಥಿರತೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೧೭.೦೭.೨೦೦೩ರಂದು ಪ್ರಕಟವಾಗಿತ್ತು)

"ಪ್ರಾಣ ಸಮಾಚಾರೇ ಸಮ ದರ್ಶನಮ್"
’ಪಂಚಪ್ರಾಣ’ ಅಂತ ಹೇಳುತ್ತೀವಿ. ಐದು ಭಾಗದಲ್ಲಿ ಪ್ರಾಣ ಸಂಚಾರ ಇರುತ್ತದೆ. ಒಂದು ಮಗು ಉಸಿರಾಡುವುದನ್ನೂ ನೋಡಿ, ನೀವು ಉಸಿರಾಡುವುದನ್ನೂ ನೋಡಿ, ತುಂಬಾ ವ್ಯತ್ಯಾಸ ಇದೆ. ಮಗು ಉಸಿರು ಒಳಗೆ ಎಳೆದುಕೊಂಡಾಗ ಹೊಟ್ಟೆ ಹೊರಗೆ ಬರುತ್ತೆ, ಹೊರಗೆ ಬಿಟ್ಟಾಗ ಒಳಗೆ ಹೋಗುತ್ತದೆ. ನಾವು ಉಸಿರಾಡುವಾಗ ಇದಕ್ಕೆ ವಿರುದ್ಧವಾಗಿಯೇ ಮಾಡ್ತೀವಿ. ಅದೂ ನಮ್ಮಲ್ಲಿ ಹೆಚ್ಚು ಆತಂಕ, ಶಂಕೆ, ಭಯ ಇದ್ದರೆ ನಮ್ಮ ಉಸಿರಿನಲ್ಲೇ ಗೊತ್ತಾಗುತ್ತದೆ. ನಾವು ತೆಗೆದುಕೊಳ್ಳುವ ಉಸಿರಿನಲ್ಲೂ ನಡುಕ, ಬಿಡುವ ಉಸಿರಿನಲ್ಲೂ ನಡುಕ ಇರುತ್ತದೆ. ಉಸಿರಿನಲ್ಲೇ ಕಂಪನವಿದ್ದರೆ ಜೀವನ ಇನ್ನೆಲ್ಲಿ ಸ್ಥಿರವಾಗಿರುತ್ತೆ? ಜೀವನವೇ ಕಂಪಿಸುತ್ತಾ ಇರುತ್ತದೆ. ಮನಸ್ಸು, ಚೇತನ ಎಲ್ಲಾ ಕಂಪಿತವಾಗಿರುತ್ತದೆ. ಆದರೆ, ಜೀವನ ಹಾತೊರೆಯುತ್ತಾ ಇದೆ; ಸಮತ್ವಕ್ಕೆ, ಪ್ರಸನ್ನತೆಗೆ, ಶಾಂತಿಗೆ. ನದಿ ಎಲ್ಲೀತನಕ ಸಾಗರವನ್ನು ಸೇರುವುದಿಲ್ಲವೋ, ಅಲ್ಲಿಯತನಕ ಅದು ಸುಮ್ಮನೆ ಇರುವುದಕ್ಕಾಗುವುದಿಲ್ಲ. ಅದು ಹರಿಯುತ್ತಲೇ ಇರಬೇಕು. ಹರಿಯುವುದು ನಿಲ್ಲಿಸಿದಾಗ ಅದು ನದಿಯಲ್ಲ, ಸರೋವರ ಆಯಿತು. ಹಾಗೆ ನಮ್ಮ ಚೇತನದಲ್ಲಿ ಸ್ಥಿರತೆ, ಆ ಶಾಂತತೆ ಬರಬೇಕಾದರೆ ’ಪ್ರಾಣ ಸಮಾಚಾರೇ ಸಮ ದರ್ಶನಮ್’ ಪ್ರಾಣವನ್ನು ನೋಡಿಕೊಳ್ಳಿ. ಆಗ ನಿಮ್ಮಲ್ಲಿ ಸಮತೆ ಉಂಟಾಗುತ್ತೆ ಎನ್ನುತ್ತದೆ ಈ ಸೂತ್ರ.