ಬುಧವಾರ, ಏಪ್ರಿಲ್ 24, 2013

ಬದುಕಿಗೆ ಸಂತೋಷ, ಪ್ರೀತಿ ಮತ್ತು ಜ್ಞಾನ ಅತ್ಯಗತ್ಯ

ಟೋಕಿಯೋ, ಜಪಾನ್
೨೪ ಎಪ್ರಿಲ್ ೨೦೧೩

ನಾವು ಜೀವನವನ್ನು ಒಂದು ವಿಶಾಲ ದೃಷ್ಟಿಕೋನದಿಂದ ನೋಡಬೇಕು.

ಜೀವನವೆಂದು ಹಾಗೂ ಈ ಇಡೀ ಜಗತ್ತೆಂದು ನಾವು ಯಾವುದನ್ನು ತಿಳಿದಿರುವೆವೋ, ಅದನ್ನು ನಾವು ತಿಳಿಯುವುದು ನಮ್ಮ ಇಂದ್ರಿಯಗಳ ಮೂಲಕ. ಅದು, ನೋಡುವ, ಕೇಳುವ, ಸ್ಪರ್ಶಿಸುವ ಮತ್ತು ಅರ್ಥ ಮಾಡಿಕೊಳ್ಳುವ ಮೂಲಕ. ಐದು ಇಂದ್ರಿಯಗಳ ಮೂಲಕ ನಾವು ಪಡೆದುಕೊಳ್ಳುವ ಜ್ಞಾನವು ಒಂದು ಹಂತದ್ದಾಗಿದೆ. ಐದು ಇಂದ್ರಿಯಗಳ ಮೂಲಕ ನಾವು ಪಡೆದುಕೊಳ್ಳುವ ಜ್ಞಾನಕ್ಕಿಂತ ಉನ್ನತವಾದ ಇನ್ನೊಂದು ಮಟ್ಟವಿದೆ, ಅಂದರೆ, ಬುದ್ಧಿಯ ಮೂಲಕವಾಗಿರುವ ಜ್ಞಾನ.
ಬುದ್ಧಿಯಿಂದ ಬಂದಿರುವ ಜ್ಞಾನವು ಇಂದ್ರಿಯಗಳ ಮೂಲಕದ ಜ್ಞಾನಕ್ಕಿಂತ ಶ್ರೇಷ್ಠವಾದುದಾಗಿದೆ.

ನಾವು ಸೂರ್ಯನು ಉದಯಿಸುವುದನ್ನು ಮತ್ತು ಸೂರ್ಯನು ಅಸ್ತಮಿಸುವುದನ್ನು ನೋಡುತ್ತೇವೆ. ಆದರೆ, ಸೂರ್ಯನು ಉದಯಿಸುವುದೂ ಇಲ್ಲ, ಅಸ್ತಮಿಸುವುದೂ ಇಲ್ಲ, ಅದು ಭೂಮಿಯು ತಿರುಗುವುದಾಗಿದೆ ಎಂಬುದು ಬುದ್ಧಿಯ ಮೂಲಕ ನಮಗೆ ತಿಳಿದಿದೆ.

ಬುದ್ಧಿಗಿಂತಲೂ ಶ್ರೇಷ್ಠವಾದ ಇನ್ನೊಂದು ಜ್ಞಾನವಿದೆ. ಅದು ಅಂತರ್ಬೋಧೆಯ ಜ್ಞಾನವಾಗಿದೆ. ಮಾನವರಾಗಿ, ನಮಗೆಲ್ಲರಿಗೂ ಅಂತರ್ಬೋಧೆಯ ಜ್ಞಾನವನ್ನು ಸ್ಪರ್ಶಿಸುವ ಸಾಮರ್ಥ್ಯವಿದೆ, ಮತ್ತು ಅದುವೇ ಆಧ್ಯಾತ್ಮಿಕ ಜ್ಞಾನ. ನೀವು ಸಮಯ ಮತ್ತು ಆಕಾಶಗಳನ್ನು ಮೀರಿ ಹೋಗುವಿರಿ ಹಾಗೂ ಅಲ್ಲಿಂದ ನೀವು ವಾಸ್ತವಿಕತೆಯನ್ನು ನೋಡುವಿರಿ. ನಿಮ್ಮಲ್ಲಿ ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಈ ಅನುಭವ ಆಗಿರಬಹುದೆಂದು ನನಗನ್ನಿಸುತ್ತದೆ: ನಿಮ್ಮ ಬುದ್ಧಿಯು ಏನೇ ಹೇಳಲಿ, ನಿಮ್ಮ ಬಲವಾದ
ಅನಿಸಿಕೆ ಬೇರೆಯದಾಗಿರುತ್ತದೆ. ನಿಮಗೆ ಈ ಅನುಭವವಾಗಿದೆಯೇ?

ನಿಮಗೊಂದು ಬಲವಾದ ಅಂತಃಸ್ಫುರಣೆಯುಂಟಾಯಿತು, ಆದರೆ ನಿಮ್ಮ ತರ್ಕವು ಬೇರೆಯದೇನನ್ನೋ ಹೇಳಿತು. ನಿಮ್ಮ ಅಂತಃಸ್ಫುರಣೆಯು ಸಂಪೂರ್ಣವಾಗಿ ವ್ಯತ್ಯಸ್ತವಾದುದಾಗಿತ್ತು, ಮತ್ತು ಅದುವೇ ಆಯಿತು. ನಿಮ್ಮಲ್ಲಿ ಎಷ್ಟು ಮಂದಿಗೆ ಆ ಅನುಭವವಾಗಿದೆ?

(ಹಲವರು ತಮ್ಮ ಕೈಗಳನ್ನು ಮೇಲೆತ್ತಿದರು)

ಪ್ರತಿಯೊಬ್ಬರಲ್ಲೂ ಈ ಶಕ್ತಿಯಿದೆ, ಆದರೆ ಅದನ್ನು ಉಪಯೋಗಿಸುವುದು ಹೇಗೆಂಬುದು ತಿಳಿಯದು.

ಅದು ಹೇಗೆಂದರೆ, ನಿಮ್ಮಲ್ಲೊಂದು ನಿಧಿಯ ಪೆಟ್ಟಿಗೆಯಿದೆ, ಆದರೆ ನೀವದಕ್ಕೆ ಬೀಗ ಹಾಕಿರುವಿರಿ ಮತ್ತು ನಿಮ್ಮಲ್ಲಿ ಅದರ ಕೀಲಿಕೈಯಿಲ್ಲ ಹಾಗೂ ಅದನ್ನೇನು ಮಾಡಬೇಕೆಂಬುದು ನಿಮಗೆ ತಿಳಿಯದು. ಹಾಗೆಯೇ ಅದು, ಒಂದು ಕಂಪ್ಯೂಟರನ್ನು ಹೊಂದಿದ್ದು, ಅದರ ಸಂಕೇತ ಪದ (ಪಾಸ್ ವರ್ಡ್) ತಿಳಿಯದೇ ಇರುವಂತೆ. ನಿಮ್ಮ ಫೋನ್ ಲಾಕ್ ಆಗಿದೆ, ಮತ್ತು ನಿಮಗೆ ಅದರ ಕೀ ವರ್ಡ್ ತಿಳಿಯದು, ಅದನ್ನು ತೆರೆಯುವುದು ಹೇಗೆಂಬುದು ನಿಮಗೆ ತಿಳಿಯದು. ನಮ್ಮಲ್ಲಿ ಫೋನ್ ಇದ್ದರೂ ನಮಗದನ್ನು ಬಳಸಲು ಸಾಧ್ಯವಾಗುವುದಿಲ್ಲ, ಯಾಕೆಂದರೆ ಅದು ಲಾಕ್ ಆಗಿದೆ. ನಮ್ಮಲ್ಲಿ ಐಪ್ಯಾಡ್ ಇದ್ದರೂ, ಅದು ತೆರೆಯುವುದಿಲ್ಲ ಯಾಕೆಂದರೆ ಅದು ಲಾಕ್ ಆಗಿದೆ ಮತ್ತು ನಾವು ಕೀ ವರ್ಡನ್ನು ಮರೆತಿದ್ದೇವೆ. ನಮ್ಮ ಜೀವನದಲ್ಲೂ ಹಾಗೆಯೇ.
ನಮ್ಮ ಶರೀರಕ್ಕೆ, ವಾಸ್ತವಿಕತೆಯ ಹಲವಾರು ಆಯಾಮಗಳಿಗೆ ಪ್ರವೇಶ ಸಾಧ್ಯವಿದೆ, ಮತ್ತು ಈ ಹಂತಗಳನ್ನು ತಲಪುವ, ಇತರರ ಬಯಕೆಗಳನ್ನು ಈಡೇರಿಸುವ ಸಾಮರ್ಥ್ಯ ನಮಗಿದೆ; ನಾವು ಪಾಸ್ ವರ್ಡನ್ನು ಹೊಂದಿದ್ದರೆ ಮಾತ್ರ. ಅಷ್ಟೊಂದು ಸರಳವಾದುದು, ಹಾಗಿದ್ದರೂ ಬಹಳ ಅಗಾಧವಾದುದು.

ಕೇವಲ ಒಂದು ಪಾಸ್ ವರ್ಡ್ ಮತ್ತು ನಿಮ್ಮ ಕಂಪ್ಯೂಟರ್ ತೆರೆಯುತ್ತದೆ. ಒಮ್ಮೆ ಕಂಪ್ಯೂಟರ್ ತೆರೆದರೆ, ನಿಮಗೆ ಎಲ್ಲಾ ಮಾಹಿತಿ ದೊರೆಯುತ್ತದೆ. ನಮ್ಮೊಳಗಿನಿಂದ ಸಾರ್ವತ್ರಿಕ ಚೈತನ್ಯ; ಸಾರ್ವತ್ರಿಕ ಶಕ್ತಿಯೊಂದಿಗಿನ ಸಂಪರ್ಕ ಆವಶ್ಯಕವಾಗಿದೆ. ಒಮ್ಮೆ ಆ ಸಂಪರ್ಕವುಂಟಾದರೆ, ವಿಶ್ವದಲ್ಲಿರುವ ಯಾವುದಕ್ಕೂ ನಿಮ್ಮ ಮುಗುಳ್ನಗೆಯನ್ನು, ಚೈತನ್ಯವನ್ನು, ಉತ್ಸಾಹವನ್ನು, ಆನಂದವನ್ನು ಮತ್ತು ನಿಮ್ಮ ಬೌದ್ಧಿಕ ಪ್ರಭೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿಯೇ ಆಧ್ಯಾತ್ಮಿಕ ತಂತ್ರಗಳು ಇರುವುದು; ನಿಮ್ಮ ಸ್ವಂತ ಜೀವನದ ಅಮೂಲ್ಯ ಕ್ಷೇತ್ರಗಳಿಗೆ ನಿಮ್ಮನ್ನು ತಲುಪಿಸಲು.

ಸುಮ್ಮನೆ ಯೋಚಿಸಿ, ನಿಮ್ಮ ಜೀವನದಲ್ಲಿ ನೀವು ಬಯಸುವುದು ಏನನ್ನು? ನಿಮಗೆ ಮೂರು ಉತ್ತರಗಳು ದೊರೆಯುವುವು.
ಮೊದಲನೆಯದು ಮತ್ತು ಅಗ್ರಗಣ್ಯವಾದುದೆಂದರೆ, ನೀವು ’ಸಂತೋಷ’ ಎಂದು ಹೇಳುವಿರಿ. ನೀವು ಕೆಲಸ ಮಾಡಲು ಯಾಕೆ ಬಯಸುವಿರಿ? ನೀವು ಹಣ ಗಳಿಸಲು ಯಾಕೆ ಬಯಸುವಿರಿ? ನೀವು ಆರಾಮವಾಗಿರಲು ಸಾಧ್ಯವಾಗಲೆಂದು, ನೀವು ಸಂತೋಷವಾಗಿರಲು ಸಾಧ್ಯವಾಗಲೆಂದು.

ಎರಡನೆಯದು ಪ್ರೀತಿ. ನಿಮ್ಮ ಜೀವನದಲ್ಲಿ ಯಾವುದೇ ಪ್ರೀತಿಯಿಲ್ಲವೆಂಬುದಾಗಿ ಊಹಿಸಿ, ನೀವು ಈ ಭೂಮಿಯ ಮೇಲೆ ಜೀವಿಸಲು ಇಷ್ಟಪಡುವಿರೇ? ನೀವು ಇಷ್ಟಪಡಲಾರಿರಿ. ಈ ಭೂಮಿಯ ಮೇಲೆ ಯಾರೂ ನಿಮ್ಮನ್ನು ಪ್ರೀತಿಸುವುದಿಲ್ಲವೆಂದು ಮತ್ತು ನೀವೂ ಯಾರನ್ನೂ ಪ್ರೀತಿಸುವುದಿಲ್ಲವೆಂದು ಸುಮ್ಮನೆ ಕಲ್ಪಿಸಿಕೊಳ್ಳಿ. ಹಾಗಾದರೆ ನೀವು ಇಲ್ಲಿ ಯಾಕಿರಬೇಕು? ಆದುದರಿಂದ, ಸಂತೋಷ, ಪ್ರೀತಿ ಮತ್ತು ಮೂರನೆಯದೆಂದರೆ ಜ್ಞಾನ.

ಎಲ್ಲರೂ ಬದುಕುವುದು ಈ ಮೂರು ವಿಷಯಗಳಿಗಾಗಿ ಮತ್ತು ಅವುಗಳ ಆದ್ಯತೆಯು ಹೀಗಿದೆ - ಪ್ರೀತಿ, ಸಂತೋಷ ಮತ್ತು ಜ್ಞಾನ.
ಪ್ರೀತಿಯೆಂಬುದು ನೀವು ಅಡಗಿಸಿಡಲು ಸಾಧ್ಯವಾಗದೇ ಇರುವಂತಹುದು. ನಿಮ್ಮ ಹೃದಯದಲ್ಲಿ ಪ್ರೀತಿಯಿದ್ದರೆ, ನೀವದನ್ನು ನಿಮ್ಮ ಕಾರ್ಯಗಳಲ್ಲಿ ಕಾಣಬಹುದು; ಅದು ನಿಮ್ಮ ಅಭಿವ್ಯಕ್ತಿಗಳಲ್ಲಿ, ನಿಮ್ಮ ಮುಖದ ಮೇಲೆ ಹೊರಬರುತ್ತದೆ ಮತ್ತು ನೀವದನ್ನು ಕಣ್ಣುಗಳಲ್ಲಿ ಕಾಣಬಹುದು.

ನೀವು ಸುಮ್ಮನೆ ಯಾರದ್ದಾದರೂ ಕಣ್ಣುಗಳೊಳಕ್ಕೆ ನೋಡಿ ಮತ್ತು ಅವರು ಚಿಂತಿತರಾಗಿರುವರೇ, ಉದ್ವಿಗ್ನರಾಗಿರುವರೇ, ಕ್ರೋಧಗೊಂಡಿರುವರೇ ಅಥವಾ ಪ್ರೀತಿಯಲ್ಲಿರುವರೇ ಎಂಬುದನ್ನು ನೀವು ಕಾಣಬಹುದು. ನೀವೊಂದು ಚಿಕ್ಕ ಮಗುವಿನ, ಒಂದು ನಾಯಿಮರಿಯ, ಒಂದು ನಾಯಿಯ ಕಣ್ಣುಗಳೊಳಕ್ಕೆ ನೋಡಿ, ಅವುಗಳೆಲ್ಲವೂ ಆ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ. ಇಡೀ ವಿಶ್ವದಲ್ಲಿ ಒಂದು ಬಂಧಕ ಶಕ್ತಿಯಿದೆ, ಅದರಲ್ಲಿ ಎಲ್ಲಾ ಪರಮಾಣುಗಳು ಬಂಧಿಸಲ್ಪಟ್ಟಿವೆ, ಅದರಲ್ಲಿ ಮರಗಳು ಬೆಳೆಯುತ್ತಿವೆ, ಪ್ರಾಣಿಗಳು ಅಸ್ತಿತ್ವದಲ್ಲಿವೆ, ಗಾಳಿಯು ಬೀಸುತ್ತಿದೆ, ಭೂಮಿಯು ಸುತ್ತುತ್ತಿದೆ ಮತ್ತು ಆ ಶಕ್ತಿಯೇ ಪ್ರೀತಿ.

ಪ್ರೀತಿಯನ್ನು ಅಡಗಿಸಿಡಲು ಸಾಧ್ಯವಿಲ್ಲ, ಅದೇ ಸಮಯದಲ್ಲಿ ನೀವದನ್ನು ಪೂರ್ಣವಾಗಿ ವ್ಯಕ್ತಪಡಿಸಲೂ ಸಾಧ್ಯವಿಲ್ಲ. ಯಾರಿಗೂ ಅದನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ನೀವು ಹೆಚ್ಚು ಹೆಚ್ಚು ವ್ಯಕ್ತಪಡಿಸಿದಷ್ಟೂ, ಏನೋ ಒಂದು ಕೊರತೆಯಿದೆ ಎಂಬುದಾಗಿ ನಿಮಗನಿಸುತ್ತದೆ. ನೀವದನ್ನು ನೂರು ಶೇಕಡಾ ವ್ಯಕ್ತಪಡಿಸಲು ಸಾಧ್ಯವಿಲ್ಲ.

ನಂತರ ಬರುವುದು ಸತ್ಯ - ನೀವು ಸತ್ಯದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಒಂದು ದಿನ ನೀವದನ್ನು ಎದುರಿಸಲೇ ಬೇಕು. ಕೇವಲ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳುವುದರಿಂದ, ಹಗಲು ರಾತ್ರಿಯಾಗಿ ಬದಲಾಗುವುದಿಲ್ಲ ಮತ್ತು ರಾತ್ರಿ ಹಗಲಾಗಿ ಬದಲಾಗುವುದಿಲ್ಲ. ಸತ್ಯವು ಅಲ್ಲಿದೆ ಮತ್ತು ನೀವದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಮತ್ತು ನೀವು ಸತ್ಯವನ್ನು ನಿರೂಪಿಸಲು ಸಾಧ್ಯವಿಲ್ಲ. ಅದು ಎಷ್ಟೊಂದು ದೊಡ್ಡದೆಂದರೆ ನೀವದನ್ನು ನಿರೂಪಿಸಲು ಸಾಧ್ಯವಿಲ್ಲ.

ಅದೇ ರೀತಿ ಸಾವು; ನಾವೆಲ್ಲರೂ ಒಂದು ದಿನ ಸಾಯಲಿದ್ದೇವೆ. ನಮಗೆಲ್ಲರಿಗೂ ವಯಸ್ಸಾಗಲಿದೆ, ನೀವದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಮೂರನೆಯ ವಿಷಯವೆಂದರೆ ಸೌಂದರ್ಯ. ಸೌಂದರ್ಯವನ್ನು ತ್ಯಜಿಸಲು ಅಥವಾ ತನ್ನದಾಗಿಸಿಕೊಳ್ಳಲು ಸಾಧ್ಯವಿಲ್ಲ.
ಜಗತ್ತಿನಲ್ಲಿ ಉಂಟಾಗುವ ಎಲ್ಲಾ ಸಮಸ್ಯೆಗಳು ಈ ಕಾರಣದಿಂದಾಗಿದೆ. ನಾವು ಸತ್ಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಮತ್ತು ನಾವು ಸಮಸ್ಯೆಗಳಲ್ಲಿ ಸಿಕ್ಕಿಬೀಳುತ್ತೇವೆ; ನಾವು ಪ್ರೀತಿಯನ್ನು ಪೂರ್ಣವಾಗಿ ವ್ಯಕ್ತಪಡಿಸಲು ಪ್ರಯತ್ನಿಸುತ್ತೇವೆ ಮತ್ತು ನಾವು ಸಮಸ್ಯೆಗಳಲ್ಲಿ ಸಿಕ್ಕಿಬೀಳುತ್ತೇವೆ; ನಾವು ಸೌಂದರ್ಯವನ್ನು ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಮತ್ತು ನಾವು ಸಮಸ್ಯೆಗಳಲ್ಲಿ ಸಿಕ್ಕಿಬೀಳುತ್ತೇವೆ.

ನೀವು ಸೌಂದರ್ಯವನ್ನು ತ್ಯಜಿಸಬಲ್ಲಿರೇ? ನೀವದನ್ನು ತ್ಯಜಿಸಬಲ್ಲಿರಾದರೆ, ಆಗ ಅದು ಸೌಂದರ್ಯವಲ್ಲ. ನೀವು ಸೌಂದರ್ಯವನ್ನು ನಿಮ್ಮದಾಗಿಸಿಕೊಳ್ಳಬಲ್ಲಿರೇ? ನೀವದನ್ನು ನಿಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲ.

ಹೀಗೆ, ಇದು ಇವತ್ತಿನ ಜ್ಞಾನದ ಸಾರವಾಗಿದೆ. ನೀವು ಕೇವಲ ಇದನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಇದು ನಿಮ್ಮ ದೈನಂದಿನ ಜೀವನದಲ್ಲಿ ಒಂದು ದೊಡ್ಡ ಮಟ್ಟಿಗೆ ನಿಮಗೆ ಸಹಾಯ ಮಾಡುತ್ತದೆ ಎಂಬುದನ್ನು ನೀವು ಕಂಡುಕೊಳ್ಳುವಿರಿ. ಸತ್ಯದಿಂದ ತಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ, ಅದನ್ನು ನಿರೂಪಿಸಲೂ ಸಾಧ್ಯವಿಲ್ಲ. ಸೌಂದರ್ಯವನ್ನು ತ್ಯಜಿಸಲೂ ಸಾಧ್ಯವಿಲ್ಲ, ಅದನ್ನು ಹೊಂದಲೂ ಸಾಧ್ಯವಿಲ್ಲ. ಪ್ರೀತಿಯನ್ನು ಅಡಗಿಸಿಡಲೂ ಸಾಧ್ಯವಿಲ್ಲ, ಅದನ್ನು ಸಂಪೂರ್ಣವಾಗಿ ವ್ಯಕ್ತಪಡಿಸಲೂ ಸಾಧ್ಯವಿಲ್ಲ. ಈ ಅಂಶಗಳ ಬಗ್ಗೆ ಆಳವಾಗಿ ಯೋಚಿಸಿ ಮತ್ತು ಹೆಚ್ಚಿನ ಜ್ಞಾನವು ನಿಮ್ಮೊಳಗೆ ಅರಳುವುದು.

ಪ್ರಶ್ನೆ: ಸದ್ಯಕ್ಕೆ ನಾನು ಯೋಗ ಶಿಕ್ಷಕನಾಗಿರುವೆನು. ನನ್ನ ದೊಡ್ಡ ಸಮಸ್ಯೆಯೆಂದರೆ, ಜನರಿಗೆ ಸ್ಫೂರ್ತಿ ನೀಡುವುದು ಹೇಗೆಂಬುದು. ಜನರು ಸ್ಫೂರ್ತಿಗೊಳ್ಳುವುದಿಲ್ಲ. ಜನರಿಗೆ ಸ್ಫೂರ್ತಿ ನೀಡಲು ಒಬ್ಬ ಶಿಕ್ಷಕನಿಗೆ ನೀವು ನೀಡಬಹುದಾದ ಅತ್ಯುತ್ತಮ ಸಲಹೆ ಯಾವುದು? 

ಶ್ರೀ ಶ್ರೀ ರವಿ ಶಂಕರ್: ಅವರಲ್ಲಿ ಈ ಮೂರು ವಿಷಯಗಳನ್ನು ಕೇಳು: ನೀವು ಸಂತೋಷವಾಗಿರಲು ಬಯಸುವಿರೇ? ನೀವು ಆರೋಗ್ಯವಂತರಾಗಿರಲು ಬಯಸುವಿರೇ?ನಿಮ್ಮ ದೈನಂದಿನ ಜೀವನದಲ್ಲಿ ನೀವು ಹೆಚ್ಚಿನ ಸಮಯವನ್ನು ಹೊಂದಲು ಬಯಸುವಿರೇ? ಹೌದಾಗಿದ್ದರೆ, ಬಂದು ಯೋಗ ಮಾಡಿ.

ನೀವು ನನಗೆ ೧೦ ನಿಮಿಷಗಳನ್ನು ನೀಡಿ, ನಾನು ನಿಮಗೆ ಎರಡು ಗಂಟೆಗಳನ್ನು ನೀಡುವೆನು. ನೀವು ೧೦ ನಿಮಿಷಗಳ ಯೋಗವನ್ನು ಮಾಡಿದರೆ, ನಿಮಗೆ ಎರಡು ಗಂಟೆಗಳು ಅಥವಾ ಹೆಚ್ಚಿನದಕ್ಕೆ ಸಮಾನವಾದ ಚೈತನ್ಯವು ದೊರೆಯುವುದು.
ಯೋಗದ ಅಭ್ಯಾಸದೊಂದಿಗೆ ಒಬ್ಬರು ಕಡಿಮೆ ಮತ್ತು ಆಳವಾಗಿ ನಿದ್ರಿಸಬಹುದು, ಚೈತನ್ಯವನ್ನು, ಸಂತೋಷವನ್ನು, ಮತ್ತು ಎಲ್ಲರ ಕಡೆಗೂ ಬಹಳಷ್ಟು ಪ್ರೀತಿಯನ್ನು ಅನುಭವಿಸಬಹುದು. ನಿಮಗೆ ಇದಕ್ಕಿಂತ ಹೆಚ್ಚು ಏನು ಬೇಕು?

ಮೊದಲನೆಯದಾಗಿ, ಈ ಕಲ್ಪನೆಯನ್ನು ನಿಮ್ಮ ಮನಸ್ಸಿನಿಂದ ತೆಗೆದುಹಾಕಿ, "ಓ, ಯಾರೂ ಪ್ರೇರಿತರಾಗಿಲ್ಲ, ಯಾರೂ ಬರುವುದಿಲ್ಲ", ನಿಮ್ಮ ಮನಸ್ಸಿನಲ್ಲಿ ನೀವು ಹೀಗೆ ಯೋಚಿಸಬಾರದು. ಎಲ್ಲರೂ ಬಯಸುವ ಮತ್ತು ಎಲ್ಲರಿಗೂ ಅಗತ್ಯವಿರುವ ಏನೋ ಒಂದು ನಿಮ್ಮ ಬಳಿ ಇದೆಯೆಂಬುದನ್ನು ನೀವು ತಿಳಿದಿರಬೇಕು, ಮತ್ತು ಅವರು ಬರುವರು.

ನಾವು ನಮ್ಮ ಮನಸ್ಸಿನಲ್ಲಿ, "ಓ, ಯಾರೂ ಪ್ರೇರಿತರಾಗಿಲ್ಲ, ಯಾರೂ ಬರಲು ಬಯಸುವುದಿಲ್ಲ" ಎಂದು ಯೋಚಿಸಿದರೆ, ಆಗ ಯಾರೂ ಬರುವುದಿಲ್ಲ. ಪ್ರತಿದಿನವೂ ಟೋಕಿಯೋದಲ್ಲಿ ಹೊಸ ಯೋಗ ಕೇಂದ್ರಗಳು ತೆರೆಯುತ್ತಿವೆ, ಅದರರ್ಥ ಜನರಿಗೆ ಅದು ಬೇಕು ಎಂದು.