ಶುಕ್ರವಾರ, ಏಪ್ರಿಲ್ 19, 2013

ಭೌತಿಕ ನಿಯಮಗಳನ್ನು ಮೀರಿಸಿದ ಸ೦ಗತಿಯೊಂದಿದೆ

ಕ್ಯಾಲ್‍ಗರಿ, ಕ್ಯಾನಡ
೧೯ ಏಪ್ರಿಲ್ ೨೦೧೩

ಮೂವರು ಪತ್ನಿಯರನ್ನು ಹೊಂದಿದ್ದ, ಆದರೆ ಮಕ್ಕಳಿರದ ದಶರಥ ಮಹಾರಾಜನ ಮಹಾಕಾವ್ಯದ ಕತೆಯಿದೆ. ಆತ ಮತ್ತು ಆತನ ಪತ್ನಿಯರಲ್ಲೊಬ್ಬಳಾದ ಕೌಶಲ್ಯಾ ಜೊತೆಗೂಡಿ ಅಶ್ವಮೇಧ ಎಂಬ ಯಾಗವನ್ನು ಮಾಡಿ, ನಂತರ ನಾಲ್ಕು ಪುತ್ರರನ್ನು ಪಡೆದರು. ಮೇಧ ಎಂದರೆ ಪವಿತ್ರಗೊಳಿಸುವುದು; ಅಶ್ವವೆಂದರೆ ಇವತ್ತು, ಈಗ; ಯಾವುದು ನೆನ್ನೆಯಲ್ಲವೋ ಅದು, ನಾಳೆಯಲ್ಲ, ಇವತ್ತು.
ದಶರಥ ಪದದ ಅರ್ಥ ಯಾರು ಒಂದೇ ಬಾರಿಗೆ ಹತ್ತು ರಥಗಳ ಸಾರಥ್ಯವನ್ನು ವಹಿಸಬಲ್ಲನೋ ಅವನು. ಕೌಶಲ್ಯಾ ಎಂದರೆ ನಿಪುಣೆ. ಹೀಗೆ ದಶರಥ ಮತ್ತು ಕೌಶಲ್ಯಾ ಇಬ್ಬರೂ ಸೇರಿ ಅಶ್ವಮೇಧ ಯಜ್ಞವನ್ನು ನೆರವೇರಿಸಿದರು, ಅದರ ಅರ್ಥ ವರ್ತಮಾನವನ್ನು ಪವಿತ್ರಗೊಳಿಸಿದರು, ಆಗ ರಾಮನ ಜನನವಾಯಿತು. ಇದು ಶ್ರೀರಾಮನ ಜನನದ ಆಧ್ಯಾತ್ಮಿಕ ಮಹತ್ವ.

ನಿಮ್ಮ ದೇಹವೇ ದಶರಥ, ಹತ್ತು ರಥಗಳು - ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು. ಜ್ಞಾನೇಂದ್ರಿಯಗಳೆಂದರೆ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ. ಐದು ಕರ್ಮೇಂದ್ರಿಯಗಳೆಂದರೆ ಭೌತಿಕವಸ್ತುಗಳೊಂದಿಗೆ ಪ್ರತಿಕ್ರಿಯೆ ನಡೆಸಲು ಸಹಕಾರಿಯಾಗಿರುವುದು; ಕೈ-ಕಾಲುಗಳು, ಗುದದ್ವಾರ, ಜನನೇಂದ್ರಿಯ ಮತ್ತು ಬಾಯಿ. ಈ ಐದು ಜ್ಞಾನೇಂದ್ರಿಯಗಳು ಮತ್ತು ಐದು ಕರ್ಮೇಂದ್ರಿಯಗಳು ನಮ್ಮ ಮನಸ್ಸನ್ನು ಮತ್ತು ಜೀವನವನ್ನು ಹತ್ತು ಹತ್ತು ಬೇರೆ ಬೇರೆ ದಿಕ್ಕಿಗೆ ಎಳೆದೊಯ್ಯುತ್ತವೆ.

ಆಂಗ್ಲ ಭಾಷೆಯ ರೇ, ರೇಡಿಯನ್ಸ್ ಇವೆಲ್ಲ ಪದಗಳು ಸಂಸ್ಕೃತದ ಧಾತು ರಾ ಶಬ್ದದಿಂದ ಬಂದಿವೆ. ಅದರ ಅರ್ಥ ಹೊಳೆಯುವುದು, ಕಂಗೊಳಿಸುವುದು, ತೇಜಸ್ಸು, ಪ್ರಕಾಶ. ಮ ಎಂದರೆ ನನ್ನೊಳಗೆ; ನನ್ನ ಹೃದಯದೊಳಗೆ. ರಾಮ ಎಂದರೆ ನನ್ನ ಹೃದಯದಲ್ಲಿರುವ ಬೆಳಕು. ಯಾವಾಗ ಶರೀರದ ಕುಶಲತೆಯಿಂದ ಮನಸ್ಸು ವರ್ತಮಾನದಲ್ಲಿ ನೆಲೆಸಿ, ಮನಸ್ಸು ಮತ್ತು ಹೃದಯವನ್ನು ಶುದ್ಧಗೊಳಿಸುವುದೋ, ಆಗ ರಾಮ, ಅಂದರೆ ಹೃದಯದಲ್ಲಿರುವ ಬೆಳಕು ಪ್ರಕಾಶಮಾನವಾಗುತ್ತದೆ.
ಅಶ್ವಮೇಧವನ್ನು ಮಾಡಿದಾಗ ನಾಲ್ಕು ವಿಷಯಗಳು ನಿಮ್ಮಿಂದ ಹೊರಹೊಮ್ಮುವುದು.

ರಾಮ ಎಂದರೆ ಹೃದಯದಲ್ಲಿ ಜ್ಯೋತಿಯು ಬೆಳಗುವುದು; ಲಕ್ಷ್ಮಣ ಎಂದರೆ ಅರಿವು, ಜಾಗೃತಿ; ಭರತ ಎಂದರೆ ಪ್ರತಿಭೆ ಹಾಗೂ ಶತ್ರುಘ್ನ ಎಂದರೆ ಶತ್ರುಗಳೇ ಇಲ್ಲದವನು. ಅಶ್ವ ಎಂದರೆ ಕುದುರೆ, ಮತ್ತು ಮೇಧ ಎಂದರೆ ಶುದ್ಧೀಕರಣ. ಹಾಗಾದರೆ ಕುದುರೆಯೆಂದರೇನು? ನಿಮ್ಮ ಇಂದ್ರಿಯಗಳು. ನಿಮ್ಮ ಇಂದ್ರಿಯಗಳು ಶುದ್ಧಗೊಂಡಾಗ, ನಿಮ್ಮ ಹೃದಯದಲ್ಲಿ ಬೆಳಗುವುದು ಜ್ಯೋತಿ (ರಾಮ), ಮತ್ತು ಜಾಗೃತಿ (ಲಕ್ಷ್ಮಣ). ಆಗ ನಿಮಗೆ ಯಾವ ಶತ್ರು (ರಾವಣ ಎಂದರೆ ಅಹಂ)ಗಳೂ ಇರುವುದಿಲ್ಲ (ಶತ್ರುಘ್ನ) ಮತ್ತು ಸರ್ವ ಸಾಮಥ್ರ್ಯವೂ ನಿಮ್ಮ ಬಳಿಗೆ ಬರುವವು (ಭರತ).

ಮೂರು ಬಗೆಯ ಆಲೋಚನೆಗಳು ಅಥವಾ ಆಕ್ಷೇಪಣೆಗಳು ನಿಮ್ಮನ್ನು ಕಾಡುತ್ತವೆ.

ಮೊದಲನೆಯದಾಗಿ, ನಿಮಗೆ ಪ್ರತಿಭೆಯಿದ್ದರೂ ಅದನ್ನು ಉಪಯೋಗಿಸಲು ಅಥವಾ ಹೊರತರಲು ಸಾಧ್ಯವಾಗುತ್ತಿಲ್ಲ, ನೀವು ಉಪಯುಕ್ತರಲ್ಲವೆಂದು ಭಾಸವಾಗುವುದು; ಅದು ನಿಮನ್ನು ಹತಾಶೆಗೊಳಿಸುತ್ತದೆ.

ಎರಡನೆಯದಾಗಿ, ನಿಮಗೆ ತಿಳಿದಿದೆಯೆಂದು ಅನಿಸಿದರೂ ಯಾರೂ ನಿಮ್ಮನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇದು ಮತ್ತೊಂದು ವಿವಾದನೀಯ ವಿಷಯವಾಗಿದ್ದು, ಅದರಿಂದ ಸಂಕಟಪಡುವಿರಿ.

ಮೂರನೆಯದಾಗಿ, ಎಲ್ಲೋ ಕಳೆದುಹೋದಂತೆ, ಇನ್ನಷ್ಟು ಉನ್ನತವಾಗಿ ಅಥವಾ ಬೇರೆಯ ರೀತಿಯಲ್ಲಿ ಮಾಡಬಹುದಾಗಿತ್ತು ಎಂಬ  ಭಾವ; ಆ ನಂತರ ಕಳೆದುಹೋದುದನ್ನು ಆಕ್ಷೇಪಿಸುವಿರಿ, ನಿಮ್ಮನ್ನು ನೀವೇ ಆಕ್ಷೇಪಿಸುವಿರಿ ಮತ್ತು ನಿಮ್ಮ ಸುತ್ತಮುತ್ತಲಿರುವವರೆಲ್ಲರನ್ನೂ ಆಕ್ಷೇಪಿಸುವಿರಿ.

ಈ ಮೂರು ಬಗೆಯ ಆಲೋಚನೆಗಳು ಅಥವಾ ಆಕ್ಷೇಪಣೆಗಳು ನಿಮ್ಮ ಚೈತನ್ಯವನ್ನು ಕುಗ್ಗಿಸುತ್ತವೆ. ಭೂಮಿಯಲ್ಲಿ ದುಃಖಪಡಲು ನಿಮಗೆ ಮಿಲಿಯನ್ ಕಾರಣಗಳಿರಬಹುದು. ಯಾವುದಾದರೂ ನಿಮ್ಮನ್ನು ಕೆಳಗೆಳೆಯುತ್ತಿದ್ದರೆ, ಅದಕ್ಕೆ ಕಾರಣ ನಿಮಗಿಷ್ಟ ಬಂದಂತೆ ಯಾವುದೂ ನಡೆಯುತ್ತಿಲ್ಲ.

ಜ್ಞಾನದಿಂದ ಇವೆಲ್ಲವನ್ನು ದಾಟಿಬಿಡಿ, ಮರೆತುಬಿಡಿ, ಚಿಂತೆಯಿಲ್ಲ, ಏನಾದರಾಗಲಿ! ಅನೇಕ ಜನರು ತಮ್ಮ ಪ್ರತಿಭೆಯನ್ನು ಉಪಯೋಗಿಸುತ್ತಾರೆ, ಅವರೆಲ್ಲರೂ ಸತ್ತಿದ್ದಾರೆ ಮತ್ತು ಮರೆಯಲ್ಪಟ್ಟಿದ್ದಾರೆ!

ಯಾರು ತಾನೆ ನಿತ್ಯ ಮೈಕೆಲ್ ಏಂಜಿಲೊ ಚಿತ್ರಗಳನ್ನು ಕುಳಿತು ನೋಡುತ್ತಾರೆ? ಒಮ್ಮೆ ನೀವದನ್ನು ನೋಡಿ, ನಂತರ ಮರೆತುಬಿಡುತ್ತೀರ. ಬೀತೋವನ್ ಎಂತಹ ಪ್ರತಿಭಾವಂತ ಸಂಗೀತಗಾರ. ದಿನನಿತ್ಯವೂ ಜನರು ಅವನ ಸಂಗೀತವನ್ನು ಕೇಳುತ್ತಿರುತ್ತಾರೆಂದು ನಿಮಗನಿಸುತ್ತಿದೆಯೇ? ಜನರು ಕೇಳುತ್ತಾರೆ, ಮತ್ತು ಮರೆತುಬಿಡುತ್ತಾರೆ.

ಇಲ್ಲಿ ಯಾವುದೂ ಶಾಶ್ವತವಲ್ಲ; ಈ ಪ್ರಪಂಚದಲ್ಲಿ ಎಲ್ಲವೂ ಬದಲಾಗುತ್ತಿರುತ್ತದೆ. ಈ ಬದಲಾಗುತ್ತಿರುವ ಜಗತ್ತಿನಲ್ಲಿ ನಿಮ್ಮ ನೋಟವನ್ನು ಬದಲಾಗದೇ ಇರುವತ್ತ ತಿರುಗಿಸಿ. ಇಲ್ಲವಾದರೆ, ‘ನಾನು ಸರಿ, ನಾನು ಇದಕ್ಕೇ ಅಂಟಿಕೊಂಡಿರುತ್ತೇನೆ’ ಎಂಬ ಧರ್ಮನಿಷ್ಠೆಯಲ್ಲಿ ಬಂಧಿತರಾಗುತ್ತೇವೆ.

ನೀವು ಸರಿಯೆಂದು ನಿಮಗೆ ಅನಿಸಿದಾಗ, ಬಹಳ ಬಾರಿ ಇತರರು ತಪ್ಪೆಂದು ಆಲೋಚಿಸುವಿರಿ. ಆಗ ನಿಮಗೆ ಕೋಪ ಬರುವುದು. ಇತರರು ಸರಿಯೆಂದೆನಿಸಿದರೆ, ಅನೇಕ ಬಾರಿ ನೀವು ತಪ್ಪೆಂದು ಆಲೋಚಿಸುವಿರಿ. ಆಗ ನಿಮಗೆ ಅಪರಾಧಿ ಮನೋಭಾವ, ದುಃಖ ಮತ್ತು ತೊಂದರೆಯುಂಟಾಗುವುದು. ಇವೆರಡು ಸಂದರ್ಭಗಳಲ್ಲಿಯೂ, ನಿಮ್ಮ ಸಮತೋಲನವನ್ನು ಕಳೆದುಕೊಳ್ಳುವಿರಿ.
ಮನಸ್ಸು ಈ ದ್ವಂದ್ವದಲ್ಲಿ (ಸರಿ ಮತ್ತು ತಪ್ಪುಗಳಲ್ಲಿ) ತೂಗುಯ್ಯಾಲೆಯಾಡುತ್ತದೆ. ಈ ದ್ವಂದ್ವದಿಂದ ಹೊರಬರುವುದೇ ಜೀವನದ ಉದ್ದೇಶ; ಅದನ್ನೇ ಮೋಕ್ಷ ಎನ್ನುವುದು. ಮೋಕ್ಷ ಅಂದರೆ ಈ ದ್ವಂದ್ವದಿಂದ ಉನ್ನತಕ್ಕೇರುವುದು; ಆದ್ದರಿಂದ ಜೀವನದಲ್ಲಿ ಈ ಕಹಿ ಔಷಧಿಯನ್ನು ನುಂಗಿ; ಅವು ಬರುತ್ತವೆ, ಘಟನೆಗಳು ನಡೆಯುತ್ತವೆ.

ರುದ್ರದಲ್ಲಿ ಇದನ್ನು ಬಹಳ ಸುಂದರವಾಗಿ ವರ್ಣಿಸಲಾಗಿದೆ. ಜಗತ್ತಿನಲ್ಲಿ ಎಲ್ಲ ಬಗೆಯ ಜನರಿರುವರೆಂದು ಹೇಳಲಾಗಿದೆ. ವಂಚಕರು, ನಿಷ್ಠೆಯಿಲ್ಲದವರು, ವಚನ ಭ್ರಷ್ಟರು, ಬುದ್ಧಿವಂತರಾಗಿದ್ದರೂ ಪರಿಪೂರ್ಣರಲ್ಲ, ಪೆದ್ದರು ಮತ್ತು ಎಲ್ಲ ಬಗೆಯವರು.
ಇತರರನ್ನು ಬಿಡಿ, ಕೆಲವೊಮ್ಮೆ ನಿಮ್ಮ ಸ್ವಂತ ಮನಸ್ಸು ಮೇಲೆ ಕೆಳಗೆ ಹೊಯ್ದಾಡುತ್ತದೆ. ಹಾಗಾದರೆ ಅಂತಹ ಸಮಯದಲ್ಲಿ ಏನು ಮಾಡಬೇಕು? ಅಶ್ವಮೇಧ, ವರ್ತಮಾನವನ್ನು ಪರಿಶುದ್ಧಗೊಳಿಸಬೇಕು.

ಮೇಧ ಪದಕ್ಕೂ ಅನೇಕ ಅರ್ಥಗಳಿವೆ, ಬುದ್ಧಿ ಎನ್ನುವ ಅರ್ಥವೂ ಇದೆ. ಅಶ್ವಮೇಧವೆಂದರೆ ಬುದ್ಧಿಯನ್ನು ವರ್ತಮಾನಕ್ಕೆ ತರುವುದು. ಶ್ವ ಎಂದರೆ ನೆನ್ನೆ ಅಥವಾ ನಾಳೆ. ಅಶ್ವ ಎಂದರೆ ನೆನ್ನೆಯಲ್ಲ ಅಥವಾ ನಾಳೆಯಲ್ಲ, ಶಾಶ್ವತ ಮತ್ತು ವರ್ತಮಾನ ಕ್ಷಣ. ನಿಮ್ಮ ಮೇಧ ಅಥವಾ ಬುದ್ಧಿಯು ವರ್ತಮಾನದಲ್ಲಿ ಆಳವಾಗಿದ್ದಾಗ, ಯಾವುದೂ ನಿಮ್ಮನ್ನು ಅಲುಗಾಡಿಸಲು ಸಾಧ್ಯವಾಗುವುದಿಲ್ಲ. ಯಾವುದು ನಿಮ್ಮ ಬುದ್ಧಿಯನ್ನು ಅಲುಗಾಡಿಸಬಹುದೆಂದರೆ, ಅದು ಕಳೆದುಹೋದುದು (ಭೂತಕಾಲ) ಮಾತ್ರ. ಪ್ರತಿ ಕ್ಷಣವೂ ಭೂತಕಾಲದಿಂದ ಹೊರಬರುತ್ತಿದ್ದರೆ, ನೀವು ಮುಕ್ತರು, ಅದೇ ಮುಕ್ತಿ. ನಿಮಗೆ ಮುಕ್ತಿ ಸಿಕ್ಕಿದೆ, ಏಕೆಂದರೆ ನೀವು ಭೂತಕಾಲದಿಂದ ಹೊರಬಂದಿದ್ದೀರಿ.

ಅಶ್ವಮೇಧವೆಂದರೆ ಬುದ್ಧಿಯು ವರ್ತಮಾನ ಕ್ಷಣದಲ್ಲಿರುವುದು. ಇನ್ನೊಂದು ಅರ್ಥ ಶುದ್ಧಗೊಳಿಸುವುದು. ವರ್ತಮಾನ ಕ್ಷಣದಲ್ಲಿದ್ದುಕೊಂಡು, ಆತ್ಮವನ್ನು, ಇಂದ್ರಿಯಗಳನ್ನು, ತನು-ಮನಗಳನ್ನು ಶುದ್ಧಗೊಳಿಸುತ್ತಾ, ಆಂತರ್ಯದೊಳಗೆ ಹೋಗುವುದು.

ಪ್ರಾಚೀನ ಕಾಲದಲ್ಲಿ, ಯಾಗದಲ್ಲಿ ಒಂದು ಸುದೀರ್ಘವಾದ ಆಚರಣೆ ರೂಢಿಯಲ್ಲಿತ್ತು; ಒಂದು ಕುದುರೆಯನ್ನು ಧ್ವಜಗಳಿಂದ ಮತ್ತು ಒಡವೆಗಳಿಂದ ಕಟ್ಟಿ, ಮುಕ್ತವಾಗಿ ಬಿಡುವುದು. ಕುದುರೆಯು ಎಲ್ಲೆಡೆ ಅಲೆದಾಡುತ್ತಿದ್ದು, ಅದು ಎಲ್ಲಿಗೆ ಹೋಗುವುದೋ ಆ ಭೂಪ್ರದೇಶವನ್ನು ರಾಜನು ವಶಪಡಿಸಿಕೊಳ್ಳುತ್ತಿದ್ದನು. ಕುದುರೆಯೇನಾದರೂ ಇನ್ನೊಂದು ರಾಜ್ಯದ ಒಂದು ಭಾಗಕ್ಕೆ ಹೋದರೆ ಆ ರಾಜ್ಯದ ಆ ಭಾಗವನ್ನು, ಅಶ್ವಮೇಧ ಯಾಗವನ್ನು ಆಚರಿಸಿದ ರಾಜನ ಪಾಲಾಗುತ್ತಿತ್ತು. ಇದು ಅಶ್ವಮೇಧದ ಕತೆ.                                                            
ಅಶ್ವಮೇಧಯಾಗದಿಂದ ದಶರಥನು ಪುತ್ರರನ್ನು ಪಡೆದನು.

ದಶರಥನ ಮೂವರು ರಾಣಿಯರ ಹೆಸರೂ ಬಹಳ ಸ್ವಾರಸ್ಯಕರವಾಗಿದೆ. (ರಾಮಾಯಣವೆಂದರೆ ಕೇವಲ ಇತಿಹಾಸದ ಒಂದು ಕತೆಯಲ್ಲ; ಅದಕ್ಕೆ ತಾತ್ತ್ವಿಕ ಹಾಗೂ ಆಧ್ಯಾತ್ಮಿಕ ಮಹತ್ವವೂ ಇದೆ).

ಮೊದಲನೆಯ ಪತ್ನಿಯ ಹೆಸರು ಕೌಶಲ್ಯಾ, ಎಂದರೆ ಕುಶಲತೆ.

ಎರಡನೆಯ ಪತ್ನಿಯ ಹೆಸರು ಸುಮಿತ್ರ, ಎಂದರೆ ಒಳ್ಳೆಯ ಸ್ನೇಹಿತ/ಸ್ನೇಹಿತೆ. ಅನೇಕ ಮಿತ್ರರಿರಬಹುದು, ಆದರೆ ಎಲ್ಲರೂ ಒಳ್ಳೆಯ ಮಿತ್ರರಾಗಿರಬೇಕೆಂದೇನಿಲ್ಲ. ಎಷ್ಟೋ ವೇಳೆ, ಸ್ನೇಹಿತರು ನಿಮ್ಮನ್ನು ತಪ್ಪು ದಾರಿಗೆಳೆಯ್ಯುತ್ತಾರೆ. ಸುಮಿತ್ರ ಎಂದರೆ ಒಳ್ಳೆಯ ದಾರಿಗೆ ಕರೆದೊಯ್ಯುವವಳು.

ಮೂರನೆಯ ಪತ್ನಿಯ ಹೆಸರು ಕೈಕೇಯಿ, ಎಂದರೆ ತನ್ನನ್ನೇ ತ್ಯಾಗ ಮಾಡಿ ಪರೋಪಕಾರ ಮಾಡುವವಳು. ಕೈಕೇಯಿಯು ನಿಮಗಾಗಿ ನಿಲ್ಲುವಳು, ಅದಕ್ಕೆ ವಿರುದ್ಧಾರ್ಥವಾಗಿ ಅನಿಸಿದರೂ, ಆಳವಾಗಿ ನೋಡಿದಾಗ, ರಹಸ್ಯವಾಗಿ ಒಳ್ಳೆಯದನ್ನು ಮಾಡುವಳು. ವೈದ್ಯರು ನಿಮಗೆ ಕಹಿ ಔಷಧಿ ಅಥವಾ ಚುಚ್ಚು ಮದ್ದನ್ನು  ಕೊಡುವ ಹಾಗೆ. ವೈದ್ಯರನ್ನು ನೋಡುತ್ತಿದ್ದಂತೆ ಮಕ್ಕಳು ಕಿರುಚುತ್ತಾರೆ, ಅಳುತ್ತಾರೆ, ಆದರೆ ಚುಚ್ಚು ಮದ್ದು ಅವರಿಗೆ ಒಳ್ಳೆಯದನ್ನೇ ಮಾಡುತ್ತದೆ. ಹಾಗೆಯೇ, ಕೈಕೇಯಿ ಬಹಿರ್ಮುಖವಾಗಿ ಒಳ್ಳೆಯವಳಲ್ಲದಿದ್ದರೂ, ಆಂತರ್ಯದಲ್ಲಿ ಒಳ್ಳೆಯವಳೇ.

ರಾಮಯಣವನ್ನು ಹೀಗೆ ಆಧ್ಯಾತ್ಮಿಕ ದೃಷ್ಟಿಕೋನದಿಂದ ವಿಶ್ಲೇಷಿಸಬಹುದು. ಇದರಿಂದ ನಿಮಗೆ ಜ್ಞಾನ, ಆಧ್ಯಾತ್ಮದ ಮಹತ್ವ ತಿಳಿಯುವುದು. ಈ ಕತೆಗಳನ್ನು ರಚಿಸಿರುವುದು ಎಲ್ಲರಿಗಾಗಿ - ಮಕ್ಕಳು, ಹಿರಿಯರು, ಸಾಮಾನ್ಯ ಜನರು, ಯಾರು ಇದನ್ನು ಓದಿದರೂ ಏನಾದರೊಂದು ಸಿಗುವುದು, ಜೀವನದ ತತ್ವವನ್ನು ತಿಳಿಯಬಹುದು. ಆಧ್ಯಾತ್ಮದ ದೃಷ್ಟಿಯಿಂದ ನೋಡಿದರೆ ಅದರಲ್ಲಿ ಗಾಢವಾದ ಸತ್ಯವಿದೆ.

ಮಹಾತ್ಮ ಗಾಂಧೀಜೀಯವರಿಗೆ ರಾಮ ಧ್ಯಾನ ಬಹಳ ಪ್ರಿಯವಾಗಿತ್ತು. ಅವರೊಮ್ಮೆ ಹೀಗೆ ಹೇಳಿದ್ದರು ‘ನನ್ನಿಂದ ಸರ್ವಸ್ವವನ್ನೂ ತೆಗೆದುಕೊಂಡುಬಿಡಿ, ನಾನು ಬದುಕಬಲ್ಲೆ, ಆದರೆ ರಾಮನನ್ನು ನನ್ನಿಂದ ತೆಗೆದುಕೊಂಡರೆ ನಾನು ಉಳಿಯಲಾರೆ.’ ಗಾಂಧೀಜೀಯವರನ್ನು ಕೊಂದಾಗ, ಅವರ ಬಾಯಿಂದ ಹೊರಬಂದ ಕೊನೆಯ ಮಾತು ‘ಹೇ ರಾಮ್’. ಅವರು ಯಾರನ್ನೂ ದೂರಲ್ಲಿಲ್ಲ, ಕೂಗಾಡಲಿಲ್ಲ ಅಥವಾ ಅಳಲಿಲ್ಲ, ‘ಹೇ ರಾಮ್!’ ಎಂದಷ್ಟೇ ಹೇಳಿದ್ದು. (‘ರಾಮ’ ಪದ ನಾಭಿಯ ಕೇಂದ್ರದೊಂದಿಗೆ ಸಂಬಂಧ ಹೊಂದಿರುವುದು)

ನಿಮಗೆ ರಾಮಾಯಣದಿಂದ ಇನ್ನೊಂದು ಕತೆಯನ್ನು ಹೇಳಲು ಬಯಸುತ್ತೇನೆ. ವಾಸ್ತವವಾಗಿ ಅದರಲ್ಲಿ ಎರಡು ಕತೆಗಳು ಸೇರಿವೆ.

ಶ್ರೀಲಂಕೆಗೆ ಸೇತುವೆಯನ್ನು ನಿರ್ಮಿಸಲು ರಾಮನಿಗೆ ಬಹಳಷ್ಟು ವಾನರರು ಸಹಾಯ ಮಾಡುತ್ತಿದ್ದರು. ಆ ವಾನರರು ಕಲ್ಲುಗಳನ್ನೆತ್ತಿಕೊಂಡು, ಅದರ ಹಿಂದೆ ಶ್ರೀರಾಮ ಎಂದು ಬರೆದು ನೀರಲ್ಲಿ ಹಾಕುತ್ತಿದ್ದರು. ಹಾಗೆ ಮಾಡಿದಾಗ, ಆ ಕಲ್ಲುಗಳು ನೀರಿನಲ್ಲಿ ತೇಲುತ್ತಿದ್ದವು. ಇದಕ್ಕೊಂದು ಆಧ್ಯಾತ್ಮದ ಮಹತ್ವವಿದೆ. ಭಗವಂತನ ನಾಮಸ್ಮರಣೆಯು ನಿಮ್ಮೊಂದಿಗಿದ್ದಾಗ, ನೀವು ಸಮಾಜದಲ್ಲಿ ಮುಳುಗುವುದಿಲ್ಲ, ದೈನ್ಯತೆಯ ಸಾಗರದಲ್ಲೂ ತೇಲುವಿರಿ; ದೈನ್ಯತೆಯ ಪ್ರಪಂಚದಲ್ಲಿ ಮುಳುಗುವುದಿಲ್ಲ.
ಎಲ್ಲಾ ವಾನರರು ಶ್ರೀರಾಮ ಎಂದು ಬರೆಯುತ್ತಿದ್ದರು, ಅವರೆಲ್ಲರ ಕಲ್ಲುಗಳು ತೇಲುತ್ತಿದ್ದವು.

ಇದನ್ನು ಕಂಡು ರಾಮನು ಬೆರಗಾದನು. ‘ಇದೇನು? ಈ ಕಲ್ಲುಗಳು ತೇಲುತ್ತಿವೆಯಲ್ಲ!’ ಎಂದು ಯೋಚಿಸಿದನು. ಇದನ್ನು ತಾನೇ ಸ್ವತಃ ಪ್ರಯತ್ನಿಸಬೇಕೆಂದುಕೊಂಡು ಒಂದು ಕಲ್ಲು ತೆಗೆದುಕೊಂಡು ಶ್ರೀರಾಮ ನಾಮ ಬರೆದು ನೀರಿಗೆ ಬಿಟ್ಟನು. ಆ ಕಲ್ಲು ಮುಳುಗಿತು! ಶ್ರೀರಾಮನಿಗೆ ಆಶ್ಚರ್ಯವಾಯಿತು.

ಇವೆಲ್ಲವನ್ನೂ ಕಪಿಯೊಂದು ಗಮನಿಸುತ್ತಿತ್ತು. ಶ್ರೀರಾಮನು ಯಾರೂ ಗಮನಿಸದೇ ಇರುವಂತಹ ಸ್ಥಳದಲ್ಲಿ ಕೂರಬೇಕೆಂದು ಆ ಸ್ಥಳವನ್ನು ಆಯ್ದುಕೊಂಡಿದ್ದನು (ನಾವು ಎಂದಾದರೂ ಯಾರೂ ನಮ್ಮನ್ನು ನೋಡುತ್ತಿಲ್ಲವೆಂದುಕೊಂಡಾಗಲೇ ಯಾರೋ ನಮ್ಮನ್ನು ಗಮನಿಸುತ್ತಿರುತ್ತಾರೆ). ಹೀಗೆ ಗಮನಿಸುತ್ತಿದ್ದ ಕಪಿಯು ನಕ್ಕುಬಿಟ್ಟಿತು. ಇದರಿಂದ ರಾಮನಿಗೆ ಮುಜುಗರವಾಯಿತು.

ಅದು ರಾಮನಿಗೆ ಹೀಗೆ ಹೇಳಿತು, ‘ನಿನ್ನ ಕೈಗಳಿಂದ ಎಸೆದ ಕಲ್ಲು ಹೇಗೆ ತಾನೆ ತೇಲಲು ಸಾಧ್ಯ? ಅದು ಮುಳುಗಲೇಬೇಕು!’
ಭಗವಂತನಿಗಿಂತ ಭಕ್ತರೇ ಹೆಚ್ಚು ಬಲಶಾಲಿಗಳೆಂದು ಈ ಕತೆಯಿಂದ ತಿಳಿಯುತ್ತದೆ; ದೇವರಿಗಿಂತ ಭಕ್ತರೇ ಹೆಚ್ಚು ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವೆಂದು ತಿಳಿಯುತ್ತದೆ.

 ಈ ಘಟನೆಯು ನಡೆಯುತ್ತಿರುವಾಗ ಒಂದು ಚಿಕ್ಕ ಅಳಿಲೂ ಸಹ ಓಡಾಡುತ್ತಿತ್ತು. ಅದು ಚಿಕ್ಕ ಚಿಕ್ಕ ಕಲ್ಲುಗಳನ್ನೆತ್ತಿಕೊಂಡು ನೀರಿಗೆ ಹಾಕುತ್ತಿತ್ತು. ಕೆಲವರು ಅಳಿಲನ್ನು ನೋಡಿ ನಕ್ಕರು, ‘ಒಂದು ಅಳಿಲು ಹೇಗೆ ತಾನೆ ಯೋಗದಾನ ನೀಡಬಲ್ಲುದು?’
ಅಳಿಲೆಂದಿತು, ‘ನನ್ನ ಸಂತೋಷಕ್ಕಾಗಿ ಯೋಗದಾನವನ್ನು ನೀಡುತ್ತೇನೆ. ರಾಮನು ನಡೆಸುತ್ತಿರುವ ಈ ಬೃಹತ್ ಕಾರ್ಯದಲ್ಲಿ ನಾನೂ ಸಹ ಒಂದು ಭಾಗವಾಗಿದ್ದೇನೆ, ಇದರ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ.’

ಇಂದಿಗೂ ಭಾರತದಲ್ಲಿ ‘ಅಳಿಲು ಸೇವೆ’ ಎನ್ನುತ್ತೇವೆ; ಅದು ನಮ್ರತೆಯ ಸಂಕೇತ. ನಾವೊಂದು ಚಿಕ್ಕ ಪಾತ್ರ ವಹಿಸಿದರೂ ಬೃಹತ್ ಕೊಡುಗೆಯಾಗುವುದಿಲ್ಲ; ಆದರೆ ಒಂದು ಬೃಹತ್ ಕಾರ್ಯದಲ್ಲಿ ಭಾಗಿಯಾದರೆ, ‘ನಾನೂ ಏನೋ ಮಾಡಿದ್ದೇನೆ’ ಎನ್ನುವ ಒಂದು ಆಂತರಿಕ ತೃಪ್ತಿ ಸಿಗುತ್ತದೆ.

ಈ ಕತೆಯಿಂದ ತಿಳಿಯುವುದೇನೆಂದರೆ ಸ್ವತಃ ರಾಮನಿಗಿಂತ ಅವನ ಭಕ್ತರೇ ಹೆಚ್ಚು ಬಲಶಾಲಿಗಳು.

ಇದರ ಅರ್ಥ ನಿಮ್ಮ ಹೃದಯವು ಪ್ರೀತಿ ಮತ್ತು ಅನುಕಂಪದಿಂದ ತುಂಬಿದ್ದರೆ, ನೀವು ಬಹಳ ಬಲಶಾಲಿಗಳು. ಎಂದೂ ನಿಮ್ಮನ್ನು ನೀವೇ ಕಡಿಮೆಯೆಂದು ಪರಿಗಣಿಸಬೇಡಿ.

ಕಳೆದ ಅಕ್ಟೋಬರಿನಲ್ಲಿ ಇಂತಹುದೇ ಒಂದು ಘಟನೆ ಆರ್ಟ್ ಆಫ್ ಲಿವಿಂಗ್‍ನಲ್ಲಿ ನಡೆಯಿತು. ಸೆಲ್ ಫ಼ೋನ್ ಕತೆ ನಿಮಗೆ ಗೊತ್ತೇ?

ನಾನೊಂದು ಹಳ್ಳಿಗೆ ಹೋಗಬೇಕಾಗಿತ್ತು. ಅಲ್ಲಿ ಬಹಳ ವರ್ಷಗಳಿಂದ ೨೦೦೦ ಯುವಕರು ಕೆಲಸ ಮಾಡುತ್ತಿದ್ದರು. ಅಲ್ಲಿಗೆ ತೆರಳುವಾಗ ನನ್ನೊಂದಿಗೆ ಬರುತ್ತಿದ್ದ ವ್ಯಕ್ತಿಗೆ ಮೂರು ಸೆಲ್ ಫ಼ೋನ್ ತೆಗೆದುಕೊಂಡು ಬರಲು ಹೇಳಿದೆ.
ಅಲ್ಲಿಗೆ ಹೋದ ಮೇಲೆ  ‘ಇಲ್ಲಿ ಎಷ್ಟು ಮಂದಿ ಸೆಲ್ ಫ಼ೋನ್ ಕಳೆದುಕೊಂಡಿದ್ದೀರ?’

ಮೂವರು ಮಾತ್ರ ಎದ್ದು ನಿಂತರು. ಅವರು ಕೆಲಸ ಮಾಡುತ್ತಿದ್ದ ಹಳ್ಳಿಯಲ್ಲಿ ಆ ಸೆಲ್ ಫ಼ೋನ್ ತುಂಬಾ ಬೆಲೆ ಬಾಳುವಂತಹುದಾಗಿತ್ತು.  ಒಂದೆರಡು ತಿಂಗಳ ಆದಾಯದಷ್ಟಿರಬಹುದು. ಆದ್ದರಿಂದ ಅವರಿಗೆ ಬಹಳ ದುಃಖವಾಗಿತ್ತು. ಆದ್ದರಿಂದ ನಾನು ಆ ಊರು ಜನರಿಗೆ ಸೆಲ್ ಫ಼ೋನ್ಗಳನ್ನು ನೀಡಿದೆ. ನಿಜವಾಗಲೂ, ಇದು ಕಾಕತಾಳೀಯ!

ನಾನು ಹೀಗೆ ಮಾಡುತ್ತಿರುವಾಗ, ಒಂದು ಗುಂಪಿನಿಂದ ಹುಡುಗನೊಬ್ಬ ಬಂದು ತನ್ನ ಕತೆಯನ್ನು ಹಂಚಿಕೊಂಡ. ಅವನು ಅಡ್ವಾನ್ಸ್ ಕೋರ್ಸ್ ನಲ್ಲಿದ್ದಾಗ, ಮನೆಯಲ್ಲಿದ್ದ ಹೆಂಡತಿಯೊಂದಿಗೆ ಅವನು ಮಾತನಾಡಬೇಕಿತ್ತು. ಅವನ ಫ಼ೋನಿನಲ್ಲಿ ಬ್ಯಾಟರಿ ಇರಲಿಲ್ಲ ಮತ್ತು ಚಾರ್ಜರ್ ತರಲು ಮರೆತಿದ್ದ. ಅದಕ್ಕಾಗಿ ಅವನು ತನ್ನ ಫ಼ೋನ್ ಅನ್ನು ನನ್ನ ಫ಼ೋಟೋ ಮುಂದಿಟ್ಟು, ‘ಗುರೂಜೀ, ನನ್ನ ಫ಼ೋನ್ ಚಾರ್ಜ್ ಆಗಲಿ’ ಎಂದು ಕೇಳಿಕೊಂಡನು.

ಮರುದಿನ ಬೆಳಿಗ್ಗೆ ಅವನೆದ್ದು ನೋಡಿದಾಗ ಅವನ ಫ಼ೋನ್ ಚಾರ್ಜ್ ಆಗಿತ್ತು.

ಆ ಹುಡುಗ ಅವನ ಫ಼ೋನ್ ತೋರಿಸಿ ಹೇಳಿದ, ‘ನೋಡಿ, ಕಳೆದ ಒಂದೂವರೆ ವರ್ಷದಿಂದ ನಾನು ಚಾರ್ಜರ್ ಅನ್ನು ಬಿಸಾಕಿ, ಫ಼ೋನ್ ಅನ್ನು ನಿಮ್ಮ ಭಾವಚಿತ್ರದ ಮುಂದಿಡುತ್ತಿದ್ದೇನೆ, ಅದು ಚಾರ್ಜ್ ಆಗುತ್ತೆ.’

ಚಾರ್ಜರ್ ಅನ್ನು ಬಿಸಾಕಿದ್ದಾನೆ!

ನಾನು ನುಡಿದೆ, ‘ಇದೊಂದು ಅಚ್ಚರಿಯ ಸಂಗತಿ. ನನ್ನ ಫ಼ೋನಿಗೂ ಚಾರ್ಜರ್ ಬೇಕು! ನನ್ನ ಫ಼ೋನ್ ಅನ್ನು ನನ್ನ ಕೈಯಲ್ಲಿಟ್ಟು ಅಥವಾ ಭಾವಚಿತ್ರದ ಮುಂದಿಟ್ಟು ಚಾರ್ಜ್ ಮಾಡಲು ಸಾಧ್ಯವಿಲ್ಲ!’

ಆ ಮುಗ್ಧ ಹಳ್ಳಿಯ ಕೆಲಸಗಾರನು ಒಂದೂವರೆ ವರ್ಷಗಳ ಹಿಂದೆ  ಚಾರ್ಜರ್ ಬಿಸಾಕಿದ್ದಾನೆ; ಪೂರ್ತಿ ಚಾರ್ಜ್ ಆಗಿರುವ ತನ್ನ ಫ಼ೋನ್ ಎಲ್ಲರಿಗೂ ತೋರಿಸಿದನು.

ಇದೊಂದು ರೋಚಕವಾದ ಕತೆಯೆಂದೆನಿಸಿತು. ಬೆಂಗಳೂರು ಆಶ್ರಮದಲ್ಲಿ ಸುಮಾರು 150 ವಿದೇಶೀಯರೊಂದಿಗೆ ಇದನ್ನು ಹಂಚಿಕೊಂಡೆವು. ರಷ್ಯಾ ಮತ್ತು ಯೂರೋಪಿನಿಂದ ಬಂದಿದ್ದರು.

ಬಹಳ ಉತ್ಸುಕತೆಯಿಂದ ಹೇಳಿದೆವು, ‘ನೋಡಿ, ಭಕ್ತನ ಶಕ್ತಿ ಎಷ್ಟಿದೆಯೆಂದು. ಪ್ರೀತಿ ಎಷ್ಟಿದೆಯೆಂದು’ ಅವರು ನಮಗೂ ಈ ರೀತಿಯ ಅನುಭವವಾಗಿದೆ, ಇದೇನು ಮಹಾ! ಸ್ಕ್ಯಾಂಡಿನೇವಿಯಾ, ಸ್ವೀಡನ್, ರಷ್ಯಾದಿಂದ ಬಂದಿದ್ದವರೆಲ್ಲರೂ, ‘ನಮಗೂ ಇಂತಹ ಅನುಭವವಾಗಿದೆ!’ ಎಂದರು.

ಚಮತ್ಕಾರಗಳು ಹೇರಳವಾಗಿವೆ! ಎಲ್ಲರಿಗೂ ಯಾವುದಾದರೊಂದು ಚಮತ್ಕಾರವಾಗಿರಲೇಬೇಕೆಂದೆನಿಸುತ್ತದೆ. ಅದನ್ನು ಹುಡುಕುವುದಿಲ್ಲ, ಅವು ತಂತಾನೆ ನಡೆಯುತ್ತವೆ.

ಇನ್ನೊಂದು ಘಟನೆಯನ್ನು ನಿಮಗೆ ತಿಳಿಸೋಣ.

ಮಹಾರಾಷ್ಟ್ರದಲ್ಲಿ ಮೂಢನಂಬಿಕೆಗಳನ್ನು ನಿವಾರಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಈ ಸಮಿತಿಗೊಬ್ಬ ಅಧ್ಯಕ್ಷನಿದ್ದಾನೆ, ಅವನು ಹಳ್ಳಿಯಿಂದ ಹಳ್ಳಿಗಳಿಗೆ ಹೋಗಿ ‘ಎಲ್ಲಾ ಸಾಧುಗಳು, ಗುರುಗಳು ವಂಚಕರು, ಅವರನ್ನು ನಂಬಬೇಡಿ’ ಎಂದು ಪ್ರಚಾರ ಮಾಡುತ್ತಾನೆ.

ಹಳ್ಳಿಯ ಹುಡುಗನೊಬ್ಬ ಚಾರ್ಜರ್ ಇಲ್ಲದೇ ತನ್ನ ಫ಼ೋನ್ ಚಾರ್ಜ್ ಮಾಡಿದ ಘಟನೆಯನ್ನು ತಿಳಿಸಿದ ಕಾರ್ಯಕ್ರಮದಲ್ಲಿ ಈ ಸಮಿತಿಯ ಅಧ್ಯಕ್ಷನ ಮಗ ಉಪಸ್ಥಿತನಿದ್ದನು.

ಹೀಗೆ ಕಳೆದ ಫೆಬ್ರವರಿಯಂದು ಸಮಿತಿಯ ಅಧ್ಯಕ್ಷನು ತನ್ನ ಕ್ಯಾಲ್‍ಕ್ಯುಲೇಟರ್ ಕೆಟ್ಟು ಹೋದ ಕಾರಣ ಗೊಂದಲಕ್ಕೊಳಗಾಗಿದ್ದನು; ಅದರ ಬೆಲೆ ೩೦೦೦೦ ರೂಗಳಾಗಿತ್ತು. ಅವನ ಮಗ ‘ಅಪ್ಪ, ನೀನೇಕೆ ಅದನ್ನು ಗುರೂಜೀಯವರ ಚಿತ್ರದ ಮುಂದಿಡಬಾರದು? ನಂತರ ಪ್ರಾರ್ಥಿಸೋಣ’ ಎಂದನು.

ಎರಡು ದಿನಗಳವರೆಗೆ ಅದನ್ನು ಚಿತ್ರದ ಮುಂದಿಟ್ಟಿದ್ದನು. ಏನೂ ಆಗಲಿಲ್ಲ. ತಂದೆಯು ಹೇಳಿದನು, ‘ನೋಡು, ನಾನು ಹೇಳಿರಲಿಲ್ಲವೇ! ಇವೆಲ್ಲ ಅಸಂಬದ್ಧವಾದುದು.’

ಆದರೂ ಕೂಡ, ಮಗನು, ‘ಅಪ್ಪ, ಅದು ಹಾಗಲ್ಲ. ನೀವದನ್ನು ಗುರೂಜೀಯವರ ಚಿತ್ರದ ಮುಂದಿಟ್ಟು ಅದಕ್ಕಾಗಿ ಪ್ರಾರ್ಥಿಸಬೇಕು. ಕೇಳಿ, ಪಡೆಯಿರಿ. ಕೇಳಿ! ವಿಶ್ವಾಸದೊಂದಿಗೆ ನೀವು ಕೇಳಲಿಲ್ಲ’ ಎಂದನು.

ಅಪ್ಪನು ಹಾಗೆಯೇ ಆಗಲಿ ಎಂದನು.

ಮಗನು ಹೇಳಿದಂತೆ ಕೇಳಿಕೊಂಡನು. ಮರುದಿನ ಬೆಳಿಗ್ಗೆ ಆ ಕ್ಯಾಲ್‍ಕ್ಯುಲೇಟರ್ ಸರಿಯಾಗಿ ಕೆಲಸಮಾಡುತ್ತಿತ್ತು!
ಈಗ ಅಪ್ಪನು ಹೇಳಿದನು, ‘ನಾನೇನು ಮಾಡಲಿ ಈಗ! ನಾನು ಈ ಸಮಿತಿಯ ಅಧ್ಯಕ್ಷ ಮತ್ತು ಇಂತಹ ಘಟನೆ ನನ್ನೊಂದಿಗೆ ನಡೆಯಿತು!. ಅವನಿಗೆ ತುಂಬಾ ಆಶ್ಚರ್ಯವಾಗಿತ್ತು!

ಆದ್ದರಿಂದ ಜೀವನವನ್ನು ಲಘುವಾಗಿ ತೆಗೆದುಕೊಳ್ಳಬೇಡಿ!

ನೀವು ಯಾವುದನ್ನೂ ಹಗುರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ಕ್ಷಣವೂ ಚಮತ್ಕಾರ ನಡೆಯುತ್ತಿರುತ್ತದೆ; ಪ್ರತಿ ಕ್ಷಣವೂ ಅನುಗ್ರಹವಿರುತ್ತದೆ; ಮತ್ತು ಹೊಸದೇನೋ ಇರುತ್ತದೆ.

ಆ ಕ್ಷಣದಲ್ಲಿ ಯಾವುದೋ ಚೆನ್ನಾಗಿಲ್ಲವೆಂದೆನಿಸಿದರೂ, ದೀರ್ಘ ಕಾಲದಲ್ಲಿ, ಏನೋ ಒಳ್ಳೆಯದು ಸಂಭವಿಸುತ್ತದೆ.

ವಸ್ತುನಿಷ್ಠೆಯಲ್ಲೇ ಸಿಕ್ಕಿಹಾಕಿಕೊಳ್ಳಬೇಕಾಗಿಲ್ಲ. ವಸ್ತುನಿಷ್ಠ ನಿಯಮಗಳಿವೆ, ಭೌತಿಕ ನಿಯಮಗಳಿವೆ, ಆದರೆ ಭೌತಿಕ ನಿಯಮಗಳಿಗಿಂತ ಉನ್ನತವಾದುದು ಯಾವುದೋ ಇದೆ. ಕಣ್ಣಿಗೆ ಗೋಚರಿಸುವ ಭೌತಿಕ ಸೃಷ್ಟಿಯ ನಾಮರೂಪಗಳಿಗಿಂತ ಉನ್ನತವಾದುದಿದೆ. ಪ್ರಜ್ಞೆಯನ್ನು ಅರಿಯುವುದು; ವಸ್ತುಗಿಂತ ಮನಸ್ಸು, ಮತ್ತು ಭೌತಿಕ ಸತ್ಯತೆಗಿಂತ ಪ್ರಜ್ಞೆ, ಇವುಗಳನ್ನು ಅರಿಯಬೇಕಾಗಿದೆ. ಆದ್ದರಿಂದ ನಿಮ್ಮ ಪ್ರೀತಿ, ವಿಶ್ವಾಸ ಮತ್ತು ನಿಮ್ಮ ಶಕ್ತಿಯನ್ನು ಕಡಿಮೆಯೆಂದು ಪರಿಗಣಿಸಬೇಡಿ.. ನಾವೇನು ಮಾಡಬೇಕೆಂದರೆ ನಮ್ಮ ಹೃದಯವನ್ನು ಶುದ್ಧವಾಗಿಟ್ಟುಕೊಳ್ಳಬೇಕು.