ಗುರುವಾರ, ಏಪ್ರಿಲ್ 11, 2013

ಬದಲಾಗುವ ಆವರ್ತನಗಳು

ಮಾಂಟ್ರಿಯಾಲ್, ಕೆನಡಾ
೧೧ ಎಪ್ರಿಲ್ ೨೦೧೩

ಪ್ರಶ್ನೆ: ಗುರುದೇವ, ಆಧ್ಯಾತ್ಮಿಕತೆಯತ್ತ ವಾಲಿರುವ ಒಬ್ಬ ವಿಜ್ಞಾನಿಯು ಅಹಂ ತುಂಬಿದ ಒಂದು ವಿಭಾಗದಲ್ಲಿ  ಬದುಕುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಸಂತೋಷವಾಗಿ! ನೀನೊಬ್ಬ ವಿಜ್ಞಾನಿ, ಸಂತೋಷವಾಗಿರು. ’ಹೇ! ಇದೆಲ್ಲಾ ಬರೀ ತರಂಗ ಕ್ರಿಯೆಗಳು ಮಾತ್ರ’ ಎಂದು ಹೇಳು. ಯಾರಾದರೂ ಕೋಪಗೊಳ್ಳುತ್ತಿದ್ದರೆ, ಕೇವಲ, ’ಹೇ! ತರಂಗ ಕ್ರಿಯೆ! ಆವರ್ತನವು (ಫ್ರೀಕ್ವೆನ್ಸಿ) ಬದಲಾಗಿದೆ’ ಎಂದು ಹೇಳು. ಅಷ್ಟೇ.

ಒಬ್ಬರು ಸಂತೋಷವಾಗಿದ್ದಾರೆ, ಬೇರೆ ಆವರ್ತನ. ಅಲ್ಲಿ ಮಾತ್ಸರ್ಯವಿದ್ದರೆ, ’ಓ, ಅವರು ಮೂರನೆಯ ಆವರ್ತನಕ್ಕೆ ಬದಲಾಗಿದ್ದಾರೆ’; ಯಾರಾದರೂ ದುಃಖಗೊಂಡಿದ್ದರೆ ಅಥವಾ ಖಿನ್ನರಾಗಿದ್ದರೆ, ’ಆವರ್ತನವು ಮತ್ತೆ ಬದಲಾಗಿದೆ’ ಎಂದು ಹೇಳಿ. ಅದೆಲ್ಲವೂ ಕೇವಲ ಆವರ್ತನಗಳು, ಅಷ್ಟೆ.

ಬದಲಾಗುವ ಆವರ್ತನಗಳ ಬಗ್ಗೆ ಯಾರಾದರೂ ಕೋಪಗೊಳ್ಳುವರೇ? ಇಲ್ಲ. ಆದುದರಿಂದ ಎಲ್ಲರನ್ನೂ, ಆವರ್ತನಗಳಲ್ಲದೆ ಬೇರೇನೂ ಅಲ್ಲವೆಂಬಂತೆ ನೋಡಿ. ಆಗ ಯಾವುದೂ ನಿಮ್ಮನ್ನು ಮುಟ್ಟದು, ಸರಿಯಾ! ವೈವಿಧ್ಯತೆಯನ್ನು ಆನಂದಿಸಿ, ಅನೇಕತೆಯನ್ನು ಆನಂದಿಸಿ. ಅಲ್ಲಿರುವ ಯಾವುದಕ್ಕಾಗಿಯೂ ನಿಮ್ಮ ನಗುವನ್ನು ಕಳೆದುಕೊಳ್ಳುವುದು ಸರಿಯಲ್ಲ.

ಒಬ್ಬರಲ್ಲಿ ಅಹಂಕಾರವಿದೆ, ಆದರೆ ಏನಂತೆ? ಅವರಿಗೆ ಸಹಾನುಭೂತಿಯ ಅಗತ್ಯವಿದೆ. ಅವರು ಅಜ್ಞಾನಿಗಳು. ಅಜ್ಞಾನದಲ್ಲಿರುವ ಜನರಿಗಾಗಿ ನಿಮ್ಮಲ್ಲೇನಿದೆ? ಸಹಾನುಭೂತಿ, ಅಲ್ಲವೇ? ಒಬ್ಬರು ಅಹಂಕಾರದಲ್ಲಿದ್ದರೆ, ನೀವು, ’ಪಾಪ, ತಾನು ಯಾರೋ ಎಂದು ಅವನಂದುಕೊಂಡಿದ್ದಾನೆ. ಈಗಲ್ಲ ಮತ್ತೆ ಅವನು ಭೂಮಿಯಡಿಗೆ ಹೋಗಲಿದ್ದಾನೆ. ಅವನಿಗೆ ಇದು ತಿಳಿಯದು. ತಾನು, ಒಂದು ದೊಡ್ಡ ಶಕ್ತಿಯ ಅಲೆಯ ಕೇವಲ ಒಂದು ಮೆತ್ತನೆಯ ಬೊಂಬೆಯೆಂಬುದು ಅವನಿಗೆ ತಿಳಿಯದು’ ಎಂದು ಯೋಚಿಸಬೇಕು.

ಆದುದರಿಂದ ಅಹಂಭಾವವುಳ್ಳ ಜನರ ಬಗ್ಗೆ ಸಹಾನುಭೂತಿ ಹೊಂದಿರಿ.

ನೋಡಿ, ನೀವು ಇತರರಿಂದ ಗುರುತಿಸುವಿಕೆಯನ್ನು ಬಯಸುವಾಗಲೇ ನೀವು ಅಹಂಕಾರವನ್ನು ಗುರುತಿಸುವುದು ಮತ್ತು ಇದುವೇ ಸಮಸ್ಯೆಯಾಗಿದೆ. ಯಾರಲ್ಲಾದರೂ ಅಹಂಕಾರವಿದ್ದರೆ, ಅದು ನಿಮಗೆ ಹೇಗೆ ತೊಂದರೆ ಕೊಡುತ್ತದೆ? ನೀವು ಸಂತೋಷದಿಂದ ನಡೆಯಬೇಕು. ನಿಮ್ಮನ್ನು ನೋಡಿ ಅವರಿಗೆ ನಾಚಿಕೆಯೆನಿಸಬೇಕು. ಈ ವ್ಯಕ್ತಿಯನ್ನು ನೋಡು, ಅವನು ಎಷ್ಟೊಂದು ಸಂತೋಷವಾಗಿದ್ದಾನೆ! ನೀವು ಸಂತೋಷವಾಗಿರುವುದನ್ನು ನೋಡಿ ಅಹಂಭಾವವುಳ್ಳ ಜನರಿಗೆ ಮತ್ಸರವಾಗಬೇಕು. ಅದು ನಿಮ್ಮ ಮೇಲೆ ಅವಲಂಬಿಸಿದೆ.

ಇತರರ ಅಹಂಕಾರವನ್ನು ನೀವು ಗುರುತಿಸಿದರೆ, ಅದು ನಿಮ್ಮೊಳಗೆ ಬರುತ್ತದೆ ಮತ್ತು ನೀವೊಂದು ಇಲಿಯಂತೆ ನಡೆಯುವಿರಿ. ಒಂದು ಸಿಂಹದಂತೆ ನಡೆಯಿರಿ ಮತ್ತು ಸಂತೋಷವಾಗಿರಿ. ಸಿಂಹದಂತೆ ಘರ್ಜಿಸುವುದು ಅಥವಾ ಹುಬ್ಬು ಗಂಟಿಕ್ಕಿಕೊಳ್ಳುವುದು ಮಾಡಬೇಡಿ, ಕೇವಲ ಮುಗುಳ್ನಗಿ ಮತ್ತು ಒಳಗಿನಿಂದ ಒಂದು ಸಿಂಹದ ಭಾವವನ್ನು ಹೊಂದಿರಿ.

ಪ್ರಶ್ನೆ: ಪ್ರೀತಿಯ ಗುರುದೇವ, ಈ ಪ್ರಪಂಚವು ಬಹಳ ಸ್ವಾರ್ಥಿಯಾಗಿದೆ. ಜನರು ಹಣಕ್ಕೆ ಮಾತ್ರ ಬೆಲೆ ಕೊಡುತ್ತಾರೆ. ನಿಜವಾದ ಪ್ರೀತಿಯನ್ನು ಕಂಡುಕೊಳ್ಳುವುದು ಹೇಗೆ?

ಶ್ರೀ ಶ್ರೀ ರವಿ ಶಂಕರ್: ಕೇಳು, ಹಾಗೆ ಹೇಳಬೇಡ. ಪ್ರಪಂಚದಲ್ಲಿ ಎಲ್ಲಾ ರೀತಿಯ ಜನರಿದ್ದಾರೆ. ಇಡೀ ಪ್ರಪಂಚವು ಸ್ವಾರ್ಥಿಯೆಂದು ದೂಷಿಸಬೇಡ ಅಥವಾ ಹಣೆಪಟ್ಟಿ ಹಚ್ಚಬೇಡ. ಇದು ಸರಿಯಲ್ಲ. ನಿನಗೆ ಗೊತ್ತಾ, ಭೂಮಿಯ ಮೇಲೆ ಒಳ್ಳೆಯ ಜನರಿದ್ದಾರೆ. ವಾಸ್ತವವಾಗಿ, ದೊಡ್ಡ ಸಂಖ್ಯೆಯಲ್ಲಿದ್ದಾರೆ. ಮೋಸಗಾರರಿರುವುದು ಕೇವಲ ಕಡಿಮೆ ಸಂಖ್ಯೆಯಲ್ಲಿ ಮಾತ್ರ.

ನೀನು ಕೂಡಾ ದಯೆಯಿಲ್ಲದ, ಕಠೋರ ಮತ್ತು ಸ್ವಾರ್ಥಿ ವ್ಯಕ್ತಿಗಳಲ್ಲೊಬ್ಬನೆಂಬುದಾಗಿ ಬ್ರಾಂಡ್ ಮಾಡಲ್ಪಟ್ಟಿದ್ದಿಯೆಂದು ಇಟ್ಟುಕೊಳ್ಳೋಣ. ಆ ಹಣೆಪಟ್ಟಿಯನ್ನು ಸ್ವೀಕರಿಸಲು ನೀನು ಇಷ್ಟಪಡುವಿಯೇ? ನಿನ್ನನ್ನೇ ಕೇಳಿಕೋ; ನಿನ್ನ ಹೃದಯವನ್ನು, ನಿನ್ನ ಮನಸ್ಸನ್ನು ಕೇಳಿಕೋ. ಇಲ್ಲ! ನೀನು ಬಹಳ ಒಳ್ಳೆಯವನು, ನೀನು ಬಹಳ ದಯಾಮಯಿಯೆಂದು ನಿನಗನ್ನಿಸುತ್ತದೆ, ಆದರೆ ಇತರರೆಲ್ಲರೂ ಕೆಟ್ಟವರೇ? ಅದು ಸರಿಯಲ್ಲ. ತಿಳಿಯಿತೇ?

ಈ ಪ್ರಪಂಚದಲ್ಲಿ, ಒಳ್ಳೆಯ ಜನರಿದ್ದಾರೆ ಮತ್ತು ಒಳ್ಳೆಯತನವನ್ನು ವ್ಯಕ್ತಪಡಿಸದ ಜನರಿದ್ದಾರೆ. ಅಷ್ಟೇ. ಆದರೆ ಅವರು ಕೂಡಾ ಒಳ್ಳೆಯವರು. ಈ ಭೂಮಿಯ ಮೇಲೆ ಯಾವುದೇ ಕೆಟ್ಟ ಜೀವಿಯಿಲ್ಲ. ಪ್ರತಿಯೊಬ್ಬರೂ, ಮೂಲತಃ ಒಳ್ಳೆಯವರು.

ನೀವು ಹೋಗಿ ಸೆರೆಮನೆಯಲ್ಲಿರುವ ಅತ್ಯಂತ ಕೆಟ್ಟ ಅಪರಾಧಿಗಳನ್ನು ಮಾತನಾಡಿಸಿದರೆ, ಅವರು ಕೂಡಾ ಒಳ್ಳೆಯ ಮನುಷ್ಯರು ಎಂಬುದನ್ನು ನೀವು ಅವರ ಕಣ್ಣುಗಳಲ್ಲಿ ಕಾಣುವಿರಿ. ಎಲ್ಲೋ ಅವರು ಎಡವಿದರು, ಎಲ್ಲೋ ಅವರೊಂದು ತಪ್ಪು ಮಾಡಿದರು. ಅತ್ಯಂತ ಕೆಟ್ಟ ಭಯೋತ್ಪಾದಕರು ಕೂಡಾ, ನೀವು ಹೋಗಿ ಅವರನ್ನು ಭೇಟಿಯಾದರೆ, ಅವರೊಳಗೆ ಒಬ್ಬ ಒಳ್ಳೆಯ ಮನುಷ್ಯನು ಅಡಗಿರುವನೆಂಬುದು ನಿಮಗೆ ಕಾಣಿಸುವುದು.    

ನನ್ನ ಕಣ್ಣುಗಳ ಮೂಲಕ ನೀವು ನೋಡಿದರೆ, ಈ ಭೂಮಿಯ ಮೇಲೆ ಕೆಟ್ಟ ಜನರಿಲ್ಲ. ಒಳ್ಳೆಯತನವನ್ನು ವ್ಯಕ್ತಪಡಿಸುವ ಜನರಿದ್ದಾರೆ ಮತ್ತು ಯಾರ ಒಳ್ಳೆಯತನವು ಮುಚ್ಚಿಹೋಗಿದೆಯೋ, ವ್ಯಕ್ತಪಡುತ್ತಿಲ್ಲವೋ ಅಂತಹ ಜನರಿದ್ದಾರೆ. ಅಷ್ಟೇ. ತಮ್ಮ ಒಳ್ಳೆಯತನವನ್ನು ಹೊರ ತರಲು ನೀವು ಅವರಿಗೆ ಸಹಾಯ ಮಾಡಬಹುದು. ಅವರು ತಮ್ಮ ಒಳ್ಳೆಯತನವನ್ನು ವ್ಯಕ್ತಪಡಿಸಲು ನೀವು ಅವರಿಗೆ ಸಹಾಯ ಮಾಡಬಹುದು. ನೀವು ಪ್ರಪಂಚವನ್ನು ನೋಡಬೇಕಾದುದು ಹಾಗೆ.

ಪ್ರಪಂಚಕ್ಕೆ ಕೆಟ್ಟ ಜನರೆಂದು ಯಾವತ್ತೂ ಹಣೆಪಟ್ಟಿ ಹಚ್ಚಬೇಡಿ. ಆಗ ಪ್ರಪಂಚದ ಕಡೆಗಿರುವ ನಿಮ್ಮ ಮನೋಭಾವ ಕೂಡಾ ಬಹಳ ಕೆಟ್ಟದಾಗಿರುವುದು.

ಪ್ರಶ್ನೆ: ನಾನು ಆರ್ಟ್ ಆಫ್ ಲಿವಿಂಗಿಗೆ ಸೇರಿದಂದಿನಿಂದ ನೀವು ನನ್ನೆಲ್ಲಾ ಚಿಂತೆಗಳನ್ನು ನೋಡಿಕೊಂಡಿರುವಿರಿ. ನನ್ನ ಒಂದೇ ಪ್ರಶ್ನೆಯೆಂದರೆ, ನಾನು ನಿಮ್ಮನ್ನು ನೋಡುವಾಗಲೆಲ್ಲಾ ನನ್ನ ಕಣ್ಣುಗಳು ಯಾವತ್ತೂ ಕಣ್ಣೀರಿನಿಂದ ತುಂಬಿಕೊಳ್ಳುವುದು ಯಾಕೆ?

ಶ್ರೀ ಶ್ರೀ ರವಿ ಶಂಕರ್: ಅದು ಸರಿ. ಅದು ಹಾಗೆಯೇ ಇರುವುದು.

ನಿಮ್ಮ ಪ್ರೀತಿಪಾತ್ರರ ಒಂದು ನೋಟದಿಂದ ಏನಾಗುವುದೆಂಬುದರ ಬಗ್ಗೆ ಉಪನಿಷತ್ತುಗಳಲ್ಲೊಂದರಲ್ಲಿ ಅವರು ಹೇಳಿದ್ದಾರೆ.
ನೀವು ಜ್ಞಾನದ ಸಂಪರ್ಕಕ್ಕೆ ಬರುವಾಗ, ನಿಮ್ಮ ಹೃದಯವು ತೆರೆದುಕೊಳ್ಳುತ್ತದೆ ಮತ್ತು ಹೃದಯವು ತೆರೆದುಕೊಂಡಾಗ, ಮನಸ್ಸಿನಲ್ಲಿರುವ ಎಲ್ಲಾ ಸಂಶಯಗಳು ಮಾಯವಾಗುತ್ತವೆ, ಕಣ್ಣೀರು ಕೆಳಕ್ಕುರುಳುತ್ತದೆ ಮತ್ತು ಎಲ್ಲಾ ಕರ್ಮಗಳು ಮಾಯವಾಗುತ್ತವೆ.

’ಬಿಧ್ಯಂತಿ ಹೃದಯಗ್ರಂಥಿ’, ಹೃದಯದಲ್ಲಿರುವ ಗಂಟುಗಳು ಬಿಚ್ಚುತ್ತವೆ.

’ಛಿದ್ಯಂತೆ ಸರ್ವಸಂಶಯಃ’, ಮನಸ್ಸಿನಲ್ಲಿರುವ ಎಲ್ಲಾ ಸಂಶಯಗಳು ಮಾಯವಾಗುತ್ತವೆ.

’ಕ್ಷೀಣತೇ ಚಾಸ್ಯಕರ್ಮಣಿ’, ಎಲ್ಲಾ ಕರ್ಮಗಳು ಕ್ಷೀಣಿಸುತ್ತವೆ ಮತ್ತು ಅವುಗಳು ಮಾಯವಾಗುತ್ತವೆ.

ಅದು ಬುದ್ಧಿವಂತಿಕೆಯ, ಜ್ಞಾನದ ಮತ್ತು ಆತ್ಮಸಾಕ್ಷಾತ್ಕಾರದ ಲಕ್ಷಣವಾಗಿದೆ. ನೀವು ಆತ್ಮಸಾಕ್ಷಾತ್ಕಾರದ ಒಂದು ಮಿನುಗುನೋಟವನ್ನು ಹೊಂದಿದಾಗ, ಇವೆಲ್ಲವೂ ಆಗುವುವು. ನನಗೆ ನೆನಪಿದೆ, ನಾನೊಮ್ಮೆ ಇಲ್ಲಿ ಮಾಂಟ್ರಿಯಾಲ್ ಆಶ್ರಮದಲ್ಲಿದ್ದೆ, (ಆಗ ಅದನ್ನಿನ್ನೂ ಕಟ್ಟಿ ಆಗಿರಲಿಲ್ಲ. ನಾವು ನೆಲವನ್ನು ಖರೀದಿಸಿಯಾಗಿತ್ತಷ್ಟೆ ಮತ್ತು ನಾನು ಫ್ಲೋರ್ರಾಬೆಲ್ ಎಂಬಲ್ಲಿ ಉಳಕೊಂಡಿದ್ದೆ). ಒಬ್ಬಳು ಪತ್ರಕರ್ತೆ ಬಂದಳು ಮತ್ತು ಅವಳು ನನ್ನನ್ನು ಸಂದರ್ಶಿಸಲು ಬಯಸಿದ್ದಳು. ಅವಳು ನನ್ನೊಂದಿಗೆ ಕುಳಿತುಕೊಂಡ ಕೂಡಲೇ ಅವಳಂದಳು, ’ಓ ದೇವರೇ! ನನಗೇನಾಗುತ್ತಿದೆ? ನನಗೆ ಎಲ್ಲವೂ
ಮರೆತುಹೋಗುತ್ತಿದೆ! ನನ್ನನ್ನು ಕ್ಷಮಿಸಿ, ನನ್ನನ್ನು ಕ್ಷಮಿಸಿ.’

ಅವಳ ಕಣ್ಣುಗಳಿಂದ ಕಣ್ಣೀರು ಹರಿಯುತ್ತಿತ್ತು ಮತ್ತು ಅವಳಂದಳು, ’ಮೊದಲು ಯಾವತ್ತೂ ನನಗೆ ಹೀಗೆ ಆಗಿರಲಿಲ್ಲ. ನನ್ನನ್ನು ಕ್ಷಮಿಸಿ.’ ಅವಳು ಬಹಳಷ್ಟು ಕ್ಷಮೆ ಯಾಚಿಸಿದಳು. ಅವಳು ಅಳುತ್ತಾ ಇದ್ದಳು.

ನಾನಂದೆ, ’ಪರವಾಗಿಲ್ಲ, ಚಿಂತಿಸಬೇಡ, ಹೀಗಾಗುತ್ತದೆ.’

ತಾನು ಕೇಳಲು ಬಯಸಿದ್ದ ಎಲ್ಲಾ ಪ್ರಶ್ನೆಗಳನ್ನು ಅವಳು ಮರೆತಳು ಮತ್ತು ಇದು ಹಲವಾರು ಸಲ ಆಗುತ್ತದೆ.

ಪ್ರಶ್ನೆ:ಪ್ರೀತಿಯ ಗುರುದೇವ, ನಾನು ನನಗೆ ಚೆನ್ನಾಗಿ ಸಂಬಳ ನೀಡುವ ಒಂದು ಅನುಕೂಲಕರವಾದ ನೌಕರಿಯಲ್ಲಿರುವೆನು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವೊಮ್ಮೆ ನನಗೆ, ’ನಾನಿಲ್ಲಿ ಏನು ಮಾಡುತ್ತಿದ್ದೇನೆ? ನಾನು ಹೆಚ್ಚು ಉಪಯುಕ್ತವಾದುದೇನನ್ನಾದರೂ ಮಾಡುತ್ತಿರಬೇಕಾಗಿದೆಯೇ?’ ಎಂಬಂತಹ ಬಲವಾದ ಯೋಚನೆಗಳು ಬರುತ್ತವೆ. ನಾನೇನು ಮಾಡಬೇಕು?

ಶ್ರೀ ಶ್ರೀ ರವಿ ಶಂಕರ್: ಹೌದು, ನಿನ್ನ ವಿರಾಮದ ವೇಳೆಯನ್ನು, ಯಾವುದಾದರೂ ಒಳ್ಳೆಯ ಸೇವೆ, ಸಾಧನೆ (ಆಧ್ಯಾತ್ಮಿಕ ಅಭ್ಯಾಸಗಳು) ಮತ್ತು ಸತ್ಸಂಗಗಳನ್ನು ಮಾಡಲು ವಿನಿಯೋಗಿಸು. ಇವುಗಳೆಲ್ಲವೂ ಒಬ್ಬರ ಜೀವನಕ್ಕೆ ಬಹಳ ಅಮೂಲ್ಯವಾದವು. ಪ್ರತಿದಿನವೂ ಕುಳಿತುಕೊಂಡು ಸಿನೆಮಾ ನೋಡುತ್ತಾ ಇರಬೇಡ ಅಥವಾ ದಿನವೂ ಟಿವಿ ಧಾರಾವಾಹಿಗಳನ್ನು ನೋಡುತ್ತಾ ಇರಬೇಡ.

ಇದನ್ನೇ ನಾವು ಮಾಡುವುದು. ಮನೆಗೆ ಮರಳಿ ಬರುತ್ತೇವೆ, ಟಿವಿ ಹಚ್ಚುತ್ತೇವೆ ಮತ್ತು ದಿನವೂ ನೋಡುತ್ತಾ ಇರುತ್ತೇವೆ. ನಾವು ಮಾಡುವುದು ಇಷ್ಟನ್ನೇ ಮತ್ತು ಅದು ಎಷ್ಟೊಂದು ವ್ಯರ್ಥ! ನಾನು ನೀವು ಟಿವಿ ನೋಡುವುದರ ವಿರೋಧವಲ್ಲ. ನೋಡಿ, ಆದರೆ ಕೆಲವೊಮ್ಮೆ. ವಾರದಲ್ಲೊಮ್ಮೆ ಅಥವಾ ವಾರದಲ್ಲಿ ಎರಡು ಸಾರಿ ಸಾಕು, ಆದರೆ ಪ್ರತಿದಿನವೂ ಅಲ್ಲ. ಅದು ಸಮಯವನ್ನು ವ್ಯರ್ಥಮಾಡುವುದಾಗಿದೆ. ಅಥವಾ ದಿನದಲ್ಲಿ ಒಂದು ಅಥವಾ ಎರಡು ಗಂಟೆಗಳನ್ನು ಸಮಾಜ ಸೇವೆಗಾಗಿ ಇಟ್ಟುಕೊಳ್ಳಿ.

ಅದಲ್ಲದಿದ್ದರೆ, ಒಂದು ಗಂಟೆಯನ್ನು ಬದಿಗಿಟ್ಟುಕೊಂಡು, ಏನಾದರೂ ಜ್ಞಾನವನ್ನು ಬರೆಯಿರಿ; ಅಥವಾ ಫೇಸ್ ಬುಕ್ ಅಥವಾ ಸಾಮಾಜಿಕ ಮಾಧ್ಯಮಕ್ಕೆ ಹೋಗಿ, ಆ ಸೇವೆಯನ್ನು ಮಾಡಿ; ಜ್ಞಾನವನ್ನು ಹರಡಿ. ನೀವೇನು ಹೇಳುವಿರಿ? ಒಳ್ಳೆಯ ಯೋಚನೆಯೇ? ಅದು ಸೃಜನಾತ್ಮಕವಾದುದು ಮತ್ತು ಅದನ್ನು ಮಾಡುವುದರಿಂದ ನೀವು ತೃಪ್ತಿ ಹೊಂದುವಿರಿ.

ಕೇವಲ ಒಬ್ಬ ಪ್ರೇಕ್ಷಕನಾಗುವುದರ ಬದಲಾಗಿ, ವಿಶ್ವವೆಂದು ಕರೆಯಲ್ಪಡುವ ಈ ಆಗುವಿಕೆಯಲ್ಲಿ ಒಬ್ಬ ಭಾಗಿಯಾಗಿ. ಪ್ರತಿದಿನವೂ ಕೇವಲ ಟಿವಿ ನೋಡಿಕೊಂಡು ಏನಾಗುತ್ತಿದೆಯೆಂದು ನೋಡುವುದರ ಬದಲಾಗಿ, ನೀವು ಸಮಾಜದಲ್ಲಿನ ಬದಲಾವಣೆಯಲ್ಲಿ ಭಾಗವಹಿಸುವವರು ಅಥವಾ ಮಧ್ಯವರ್ತಿ ಆಗಬೇಕು. ತಿಳಿಯಿತೇ?

ನೀವು ಟಿವಿ ನೋಡಬಹುದು, ಆದರೆ ಎರಡು-ಮೂರು ಗಂಟೆಗಳ ಕಾಲವಲ್ಲ. ಬದಲಾಗಿ, ಒಂದು ಗಂಟೆಯನ್ನು ಯಾವುದಾದರೂ ಸೃಜನಾತ್ಮಕ ಕೆಲಸವನ್ನು ಮಾಡುವುದಕ್ಕಾಗಿ ಮೀಸಲಾಗಿಡಿ.

ಪ್ರಶ್ನೆ: ಒಬ್ಬನು ಆಧ್ಯಾತ್ಮಿಕ ಗುರುವಿಗೆ ನಿಕಟವಾದಾಗ ಅವನಿಗೆ ಜೀವನದಲ್ಲಿ ಹೆಚ್ಚು ಕಷ್ಟಗಳು ಎದುರಾಗುವುದು ಯಾಕೆ ಮತ್ತು ಅವನು ಯಾಕೆ ಬಿಟ್ಟುಬಿಡುವುದಿಲ್ಲ?

ಶ್ರೀ ಶ್ರೀ ರವಿ ಶಂಕರ್: ಹೌದು, ಸವಾಲುಗಳನ್ನು ಇಷ್ಟಪಡುವ ಕೆಲವರಿದ್ದಾರೆ, ಅವರು ಸವಾಲುಗಳನ್ನು ಪ್ರೀತಿಸುತ್ತಾರೆ. ಇಲ್ಲದಿದ್ದರೆ ಜನರು ಪ್ರಪಂಚದ ಸುತ್ತಲೂ ಒಂದು ಹಾಯಿದೋಣಿಯಲ್ಲಿ ಯಾಕೆ ಹೋಗುವರು? ಅವರು ಹೋಗಿ ಎವರೆಸ್ಟ್ ಶಿಖರವನ್ನು ಹತ್ತಲು ಯಾಕೆ ಶುರು ಮಾಡುವರು? ಯಾಕೆಂದರೆ ಜನರು ಸವಾಲುಗಳನ್ನು ಇಷ್ಟಪಡುತ್ತಾರೆ.

ಯಾವುದಾದರೂ ದೊಡ್ಡ ಸವಾಲುಗಳನ್ನು ಬಯಸುವುದು ಅಹಂ ಆಗಿದೆ. ಆದುದರಿಂದ, ಕೆಲವು ಜನರು ಅದನ್ನು ಮಾಡಲು ಬಯಸಲೂಬಹುದು ಮತ್ತು ಅವರು ಆ ಕಷ್ಟಕರವಾದ ದಾರಿಗಳನ್ನು ಆಯ್ಕೆ ಮಾಡಿಕೊಂಡಿರುವರು.

ಚಿಂತಿಸಬೇಡಿ, ನೀವು ಈ ಪಥದಲ್ಲಿರುವಾಗ, ನೀವು ಎಲ್ಲವನ್ನೂ ಒಂದು ಮುಗುಳ್ನಗೆಯೊಂದಿಗೆ ಮಾಡುವಿರಿ. ಅದು ಈ ಪಥದ ಶಕ್ತಿಯಾಗಿದೆ.

ಪ್ರಶ್ನೆ: ಯೋಗ ಮತ್ತು ಹಿಂದೂ ಧರ್ಮಗಳು ಸ್ತ್ರೀಯರನ್ನು ಹೊರಗಿಡುತ್ತವೆಯೆಂಬುದಾಗಿ ಹೆಚ್ಚಾಗಿ ಅನ್ನಿಸುತ್ತದೆ ಮತ್ತು ಕಾಣಿಸುತ್ತದೆ ಹಾಗೂ ಇದು, ನಾವು ಒಂದು ಆಧ್ಯಾತ್ಮಿಕ ಕ್ರಾಂತಿಗೆ ಇನ್ನೂ ಸಿದ್ಧರಾಗಿಲ್ಲವೆಂದು ನಾನು ಯೋಚಿಸುವಂತೆ ಮಾಡುತ್ತದೆ. ಇದರ ಬಗ್ಗೆ  ಮತ್ತು ಸ್ತ್ರೀಯರು ಆಡುವ ಪಾತ್ರದ ಬಗ್ಗೆ ನೀವು ನಮಗೆ ಏನು ಹೇಳುವಿರಿ? ಮಹಿಳೆಯರು ಅಡುಗೆ ಮಾಡುವುದು ಮತ್ತು ಸ್ವಚ್ಛಗೊಳಿಸುತ್ತಿರಬೇಕಾದರೆ, ನಿಮ್ಮ ಸುತ್ತಲೂ ಹೆಚ್ಚಾಗಿ ಪುರುಷರು ಯಾಕಿರುವರು?

ಶ್ರೀ ಶ್ರೀ ರವಿ ಶಂಕರ್: ಕೇಳು, ಅಂತಹದ್ದೇನೂ ಇಲ್ಲ. ಯೋಗ, ಹಿಂದೂ ಧರ್ಮ ಮತ್ತು ವೈದಿಕ ಜ್ಞಾನದಲ್ಲಿ, ಅವರು ಮಹಿಳೆಯರನ್ನು ಹೊರಗಿಡುವುದೇ ಇಲ್ಲ. ಪುರುಷರು ಮತ್ತು ಮಹಿಳೆಯರಿಗೆ ಸಮಾನ ಸ್ಥಾನವನ್ನು ನೀಡಲಾಗಿದೆ.

ಭಾರತದಲ್ಲಿ, ಸಂಪ್ರದಾಯವೆಂದರೆ, ತಾಯಿ ಮೊದಲು ಬರುವುದು ಮತ್ತು ನಂತರ ಬರುವುದು ತಂದೆ. ’ಮಾತೃ ದೇವೋಭವ’ ಎಂದು ಅವರು ಹೇಳುತ್ತಾರೆ.

ಹಾಗೆಯೇ, ಬರೆಯುವುದರಲ್ಲಿ ನೀವು ನೋಡಿದರೆ, ಭಾರತದಲ್ಲಿ ಅವರು ಶ್ರೀ ಮತ್ತು ಶ್ರೀಮತಿ ಎಂದು ಬರೆಯುವುದಿಲ್ಲ, ಅದು ಶ್ರೀಮತಿ ಮತ್ತು ನಂತರ ಶ್ರೀ ಎಂದಾಗಿದೆ.

ಹಿಂದೂ ಧರ್ಮವು ರಾಧೇಶ್ಯಾಮ  ಎಂದು ಹೇಳುತ್ತದೆ, ಶ್ಯಾಮ ಮತ್ತು ನಂತರ ರಾಧೇ ಎಂದಲ್ಲ. ಹೆಸರಿರುವುದು ಸೀತಾರಾಮ  ಎಂದು, ಮೊದಲು ಸೀತಾ ಮತ್ತು ನಂತರ ರಾಮ. ಅದೇ ರೀತಿಯಲ್ಲಿ, ಲಕ್ಷ್ಮಿ ಮತ್ತು ನಂತರ ನಾರಾಯಣ. ಹೀಗೆ ಯಾವತ್ತೂ ಮಹಿಳೆಯರು ಮೊದಲು.

ನೀವು ಅರ್ಧನಾರೀಶ್ವರನನ್ನು ನೋಡಿರುವಿರಾ? ನಿಮಗೆ ಕಥೆ ಗೊತ್ತಿದೆಯೇ?

ಮಹಿಳೆಯರ ಕಡೆಗೆ ತಿರಸ್ಕಾರವಿದ್ದ ಒಬ್ಬರು ಋಷಿಯಿದ್ದರು. ಸಾಮಾನ್ಯವಾಗಿ, ಮುನಿಗಳಾಗುವ ಹಲವು ಜನರು ಮಹಿಳೆಯರಿಂದ ದೂರ ಓಡುತ್ತಾರೆ. ಯಾವುದಾದರೂ ಮಹಿಳೆಯು ಅವರನ್ನು ಬಿಟ್ಟಿರಬೇಕು ಅಥವಾ ಏನೋ ಆಗಿರಬೇಕು, ನನಗೆ ತಿಳಿಯದು. ಆದರೆ ಅವರು ಮಹಿಳೆಯರ ಕಡೆಗೆ ಬಹಳ ತಿರಸ್ಕಾರವನ್ನು ಹೊಂದಿದ್ದರು. ಅವರು ಮಹಿಳೆಯರ ಕಡೆಗೆ ನೋಡುತ್ತಿರಲಿಲ್ಲ, ದೇವತೆಗಳ ಕಡೆಗೆ ಕೂಡಾ. ಅವರು, ’ಶಿವ, ಶಿವ, ಶಿವ’  ಎಂದು ಮಾತ್ರ ಹೇಳುತ್ತಿದ್ದರು ಮತ್ತು ಶಕ್ತಿಯನ್ನು ಪೂಜಿಸುತ್ತಿರಲಿಲ್ಲ. ಆದುದರಿಂದ ನಂತರ ಶಿವನು ಅವರ ಮುಂದೆ ಅರ್ಧ ಸ್ತ್ರೀಯಾಗಿ ಮತ್ತು ಅರ್ಧ ಪುರುಷನಾಗಿ ಪ್ರತ್ಯಕ್ಷನಾದನು, ಮತ್ತು ಅದು ಅರ್ಧನಾರೀಶ್ವರ ಎಂದು ಕರೆಯಲ್ಪಡುತ್ತದೆ. ಇದಿರುವುದು, ಪ್ರತಿಯೊಬ್ಬರ ಒಳಗೂ, ನಿಮ್ಮಲ್ಲಿ ಅರ್ಧ ಪುರುಷ ಮತ್ತು ನಿಮ್ಮಲ್ಲಿ ಅರ್ಧ ಮಹಿಳೆಯಾಗಿದೆ ಎಂದು ಸೂಚಿಸುವುದಕ್ಕಾಗಿ.

ನೀವು ಭೌತಿಕವಾಗಿ ಏನೇ ಆಗಿರಲಿ, ಪುರುಷ ಅಥವಾ ಸ್ತ್ರೀ, ಒಳಗಿನಿಂದ ನೀವು ಎರಡೂ ಆಗಿರುವಿರಿ, ಯಾಕೆಂದರೆ ನೀವು ಅಂಡಾಣು ಮತ್ತು ವೀರ್ಯಾಣು ಎರಡರಿಂದಲೂ ಮಾಡಲ್ಪಟ್ಟಿರುವಿರಿ. ನೀವು ತಾಯಿ ಮತ್ತು ತಂದೆ ಇಬ್ಬರ ಡಿ.ಎನ್.ಎ.ಗಳಿಂದಲೂ ಮಾಡಲ್ಪಟ್ಟಿರುವಿರಿ. ಎರಡೂ ನಿಮ್ಮೊಳಗಿವೆ ಮತ್ತು ಎರಡೂ ಸಮಾನವಾಗಿವೆ. ಹೀಗೆ, ಶಿವನು ಅರ್ಧ ಪುರುಷ, ಅರ್ಧ ಸ್ತ್ರೀಯಾಗಿ ಪ್ರತ್ಯಕ್ಷವಾದಾಗ, ಮಹಿಳೆಯರ ವಿರುದ್ಧ ಅವರಿಗಿದ್ದ ಭೇದಭಾವವು ಬಿಟ್ಟುಹೋಯಿತು ಮತ್ತು ಅವರಿಗೆ ಮೋಕ್ಷ ಪ್ರಾಪ್ತಿಯಾಯಿತು. ಅದು ಕಥೆ. ಅದೊಂದು ದೀರ್ಘವಾದ ಕಥೆ, ಆದರೆ ಅದನ್ನು ಚಿಕ್ಕದಾಗಿ ಹೇಳುವುದಾದರೆ, ಕೊನೆಯಲ್ಲಿ ಮಹಿಳೆಯರ ವಿರುದ್ಧವಿದ್ದ ತಮ್ಮ ಭೇದಭಾವವನ್ನು ಅವರು ಕಳೆದುಕೊಂಡಾಗ ಅವರು ಮೋಕ್ಷವನ್ನು ಗಳಿಸಿದರು.

ಈಗ, ಇದು ಇರುವ ವಿಷಯ.

ಮಧ್ಯಯುಗಗಳಲ್ಲಿ ಯಾವಾಗಲೋ, ಭಾರತವು ಇಸ್ಲಾಮಿನ ಪ್ರಭಾವದಲ್ಲಿದ್ದಾಗ ಅದು ಬದಲಾಯಿತು. ಮಹಿಳಾ ಅರ್ಚಕರನ್ನು ನಿಷೇಧಿಸಲಾಯಿತು. ನೀವು ಇಂಡೋನೇಷ್ಯಾದ ಬಾಲಿಗೆ ಹೋದರೆ, ಅಲ್ಲಿ ಇವತ್ತು ಮಹಿಳಾ ಅರ್ಚಕರಿದ್ದಾರೆ. ಅದು ಮೂಲ ಹಿಂದೂ ಧರ್ಮವಾಗಿದೆ. ಆದರೆ ಭಾರತದಲ್ಲಿ, ಸ್ವಲ್ಪ ಕಾಲದ ಬಳಿಕ, ಮಧ್ಯಯುಗಗಳಲ್ಲಿ, ಇಸ್ಲಾಂ, ಮಹಿಳೆಯರು ಪರದೆಯಲ್ಲಿರುವಂತೆ ಮಾಡಿತು ಮತ್ತು ಈ ಪ್ರಭಾವವು ಭಾರತಕ್ಕೆ ಬಂದಿತ್ತು. ಆ ಸಮಯದಲ್ಲಿ ಮಹಿಳೆಯರು ಮನೆಯೊಳಗೆ ಉಳಿಯುವಂತೆ ಹೇಳಲಾಯಿತು.

ವೈದಿಕ ಕಾಲದಲ್ಲಿ, ಮಹಿಳೆಯರಿಗೆ ಎಲ್ಲಾ ಅಧಿಕಾರಗಳೂ ಇರುತ್ತಿದ್ದವು. ಅವರು ಅರ್ಚಕರಾಗಿರುತ್ತಿದ್ದದ್ದು ಮತ್ತು ಅದನ್ನೆಲ್ಲಾ ನೀವು ನೋಡಬಹುದಿತ್ತು. ಹೀಗೆ, ಇವುಗಳು ಆಗಿರುವ ಬದಲಾವಣೆಗಳಾಗಿವೆ ಮತ್ತು ಒಮ್ಮೆ ಒಂದು ಬದಲಾವಣೆ ಉಂಟಾದರೆ ಅದು ಸಾಕಷ್ಟು ದೀರ್ಘಕಾಲ ಉಳಿಯುತ್ತದೆ. ಆದರೆ ಮಹಿಳೆಯರನ್ನು ಕಡಿಮೆಯೆಂದು ಅಂದಾಜು ಮಾಡಲಾಗಿದೆಯೆಂದು ಯೋಚಿಸಬೇಡಿ.

ನೋಡಿ, ಕೇವಲ ದೇವಿಮಾತೆಯ ಆರಾಧನೆಗಾಗಿಯೇ ಒಂಭತ್ತು ದಿನಗಳಿವೆ ಮತ್ತು ಇಲ್ಲಿ ಮಹಿಳೆಯರು ನನಗಾಗಿ ಬಹಳಷ್ಟು ಕೆಲಸಗಳನ್ನು ಮಾಡುತ್ತಾರೆ. ನಮ್ಮಲ್ಲಿ ಹಲವಾರು ಮಹಿಳಾ ಶಿಕ್ಷಕಿಯರು ಮತ್ತು ಪುರುಷ ಶಿಕ್ಷಕರಿದ್ದಾರೆ. ಅವರೆಲ್ಲರೂ ನಮ್ಮ ಟ್ರಸ್ಟ್‌ನಲ್ಲಿದ್ದಾರೆ. ಆದುದರಿಂದ ಹಾಗೇನೂ ಇಲ್ಲ. ವಾಸ್ತವವಾಗಿ, ನಮ್ಮ ಕೆನಡಾ ಆಶ್ರಮದ ಅಧ್ಯಕ್ಷೆ ಒಬ್ಬಳು ಮಹಿಳೆ (ಡೆಬ್ರಾ). ದೀರ್ಘ ಕಾಲದವರೆಗೆ, ಕೆನಡಾ ಆಶ್ರಮದಲ್ಲಿ ಮಹಿಳೆಯರು ಆಡಳಿತ ನಡೆಸುತ್ತಿದ್ದರು. ಬಹುಶಃ ಇದೊಂದು ರಾಣಿಯ ಪ್ರದೇಶವಿರಬಹುದು.

ಪ್ರಶ್ನೆ: ಜೈ ಗುರುದೇವ್, ಚೈತ್ರ ನವರಾತ್ರಿ ಮತ್ತು ಅದರ ಮಹತ್ವದ ಬಗ್ಗೆ ನೀವು ಮಾತನಾಡುವಿರೇ?

ಶ್ರೀ ಶ್ರೀ ರವಿ ಶಂಕರ್: ನವರಾತ್ರಿಯೆಂದರೆ ಒಂಭತ್ತು ರಾತ್ರಿಗಳು ಎಂದರ್ಥ. ಒಂಭತ್ತು ರಾತ್ರಿಗಳಲ್ಲಿ ನೀವು ಒಳಮುಖವಾಗಿ ತಿರುಗುವಿರಿ. ಅದು ಧ್ಯಾನಕ್ಕಾಗಿರುವ, ನೀವು ಒಳಮುಖವಾಗಿ ತಿರುಗಲಿರುವ ಮತ್ತು ನಂತರ ಸೃಜನಾತ್ಮಕತೆಯೊಂದಿಗೆ ಹೊರಬರಲಿರುವ ಒಂದು ಸಮಯವಾಗಿದೆ. ಅದು ಇದಕ್ಕಿರುವ ಮಹತ್ವ.

ಚೈತ್ರವೆಂದರೆ ಒಂದು ಹೊಸವರ್ಷದ ಆರಂಭ. ಹೀಗೆ ಹೊಸ ವರ್ಷವು, ಒಳಮುಖವಾಗಿ ತಿರುಗುವ ಒಂಭತ್ತು ದಿನಗಳು, ಪ್ರಾರ್ಥನೆ, ಧ್ಯಾನ ಮತ್ತು ಮಂತ್ರೋಚ್ಛಾರಣೆಯೊಂದಿಗೆ ಆರಂಭವಾಗುತ್ತದೆ. ಸಂಪೂರ್ಣ ಸೃಷ್ಟಿಯಲ್ಲಿ ದೈವತ್ವವನ್ನು ಗುರುತಿಸುವುದು ಮತ್ತು ಆ ಮಗ್ಗುಲಿಗೆ ಜೀವತುಂಬುವುದು.

ಪ್ರಶ್ನೆ: ನಾವು ಜಾತಿ ವ್ಯವಸ್ಥೆಯನ್ನು ತೊಡೆದುಹಾಕುವುದು ಹೇಗೆ? ನನಗೆ ವಿವಾಹವಾಗಲು ಸಾಧ್ಯವಾಗುತ್ತಿಲ್ಲ ಯಾಕೆಂದರೆ, ನನ್ನ ಹೆತ್ತವರು ಮತ್ತು ಅವನ ಹೆತ್ತವರು, ತಾವು ಸಮಾಜದಿಂದ ಬಹಿಷ್ಕೃತಗೊಳ್ಳುವೆವು ಎಂದು ಯೋಚಿಸುತ್ತಾರೆ. ನಾವು ಕೇವಲ ಎರಡು ಬೇರೆ ಬೇರೆ ಜಾತಿಗಳಿಗೆ ಸೇರಿದವರು. ಏನು ಮಾಡಬೇಕು ಗುರುದೇವ?

ಶ್ರೀ ಶ್ರೀ ರವಿ ಶಂಕರ್: ತಾಳ್ಮೆ ಮತ್ತು ಶಿಕ್ಷಣ.

ಅದೀಗ ಬಹಳ, ಬಹಳ, ಬಹಳ ಕಡಿಮೆಯೆಂದು ನನಗನ್ನಿಸುತ್ತದೆ. ಜನರು ಎಷ್ಟೋ ಹೆಚ್ಚು ತೆರೆದಿದ್ದಾರೆ. ಕೆಲವೊಮ್ಮೆ ಜನರನ್ನು ಕಾಡುವ ಒಂದೇ ವಿಷಯವೆಂದರೆ ಆಹಾರದ ಅಭ್ಯಾಸಗಳು; ಸಸ್ಯಾಹಾರ ಮತ್ತು ಮಾಂಸಾಹಾರ. ಅದೊಂದು ದೊಡ್ಡ ತಡೆಯಾಗುವುದು ನೋಡಿ? ಆದರೆ, ಚಿಂತಿಸಬೇಡ. ನಿನ್ನಲ್ಲಿ ರಾಜಿಮಾಡಿಸುವ ಶಕ್ತಿಯಿರಬೇಕು; ಅವರನ್ನು ರಾಜಿ ಮಾಡಿಸಲು, ನಿನ್ನ ಹೆತ್ತವರು ಒಪ್ಪುವಂತೆ ಮಾಡಲು.

ಮೊದಲು ಅವರು ಆರ್ಟ್ ಆಫ್ ಲಿವಿಂಗ್ ಮಾಡುವಂತೆ ಮಾಡು. ಮೊದಲಿಗೆ ಹಾಗೆ ಮಾಡುವುದು ಉತ್ತಮ.