ಶುಕ್ರವಾರ, ಏಪ್ರಿಲ್ 26, 2013

ಸ್ವರ್ಗದ ಬಾಗಿಲು

ಬಾಲಿ, ಇಂಡೊನೇಷಿಯಾ
೨೬  ಏಪ್ರಿಲ್ ೨೦೧೩

ಗತ್ತು ಅತ್ಯಂತ ಸುಂದರವಾಗಿದೆ. ಅನೇಕ ಬಗೆಯ ಹೂಗಳು, ಹಣ್ಣುಗಳು, ಮರಗಳು, ಪ್ರಾಣಿಗಳು, ಮನುಷ್ಯರು ಇಲ್ಲಿದ್ದಾರೆ; ಸಕಲ ವೈವಿಧ್ಯತೆಯೂ ನಿಮ್ಮನ್ನು ಹರ್ಷದಿಂದಿರಿಸುವ ಸಲುವಾಗಿ ಸೃಷ್ಟಿಸಲ್ಪಟ್ಟಿವೆ.

ಆದರೆ ನಿಮ್ಮ ಮನಸ್ಸು ನಿಮ್ಮನ್ನು ಸಂತಸದಿಂದಿರಲು ಬಿಡುತ್ತಿಲ್ಲ. ಅತ್ಯುತ್ತಮ ತಾಣವನ್ನೇ ಸಂದರ್ಶಿಸುತ್ತಿರುವಾಗಲೂ ಕಳೆದುಹೋದ ಕಹಿ ಘಟನೆಯೊಂದನ್ನು ನೆನೆಯುತ್ತ ಕೊರಗುತ್ತಿರುತ್ತದೆ, ಎಂಥ ವಿಚಿತ್ರ!

ಅತಿ ದೊಡ್ಡ ವಿಸ್ಮಯವೀ ಮನಸ್ಸು. ನಿಮ್ಮ ಮನಸ್ಸು ನಿಮ್ಮ ಮಿತ್ರನೂ, ಶತ್ರುವೂ ಆಗಬಲ್ಲುದು. ಮನಸ್ಸೇ ನಮ್ಮ ಸಂತೋಷಕ್ಕೂ ಸಂತಾಪಕ್ಕೂ ಕಾರಣೀಭೂತವಾದುದು. ಮನಸ್ಸು ವರ್ತಮಾನದಲ್ಲಿದ್ದಾಗ ಪ್ರತಿಯೊಂದೂ ಸುಂದರವಾಗಿಯೇ ಕಾಣುತ್ತದೆ. ಅದೇ ಗೊಂದಲದಲ್ಲಿದ್ದಾಗ, ಎಂಥ ಒಳ್ಳೆಯ ಯಾತ್ರಾಸ್ಥಳದಲ್ಲಿಯೂ ಸಾವಿರ ವಿಧದ ಕೊರತೆಗಳನ್ನು ಮನಸ್ಸು ಹುಡುಕುತ್ತಿರುತ್ತದೆ.

ಮನಃಸ್ಥಿತಿಯ ಐದು ಬಗೆಗಳಿವೆ.

ಮೊದಲಿಗೆ ಮನಸ್ಸು ಪ್ರತಿಯೊಂದಕ್ಕೂ ಆಧಾರವನ್ನು ಅಪೇಕ್ಷಿಸುತ್ತದೆ. ಪ್ರತಿಯೊಂದಕ್ಕೂ ನೀವು ಆಧಾರವನ್ನು ಹೇಗೆ ನೀಡಲಾದೀತು? ಅಸಾಧ್ಯ!

ಎರಡನೆಯದಾಗಿ ವಿಚಾರಗಳನ್ನು ಮನಸ್ಸು ನೇರವಾಗಿ ಅರ್ಥ ಮಾಡಿಕೊಳ್ಳದೆ, ಅವುಗಳ ಬಗ್ಗೆ ಬೇರೇನನ್ನೋ ಆಲೋಚಿಸುತ್ತದೆ. ನೀವು ಏನನ್ನು ನೆನೆಯುವಿರೋ ಅದು ಅಲ್ಲವೇ ಅಲ್ಲವೆಂಬುದು ಸ್ವಲ್ಪ ಸಮಯದ ನಂತರ ಗೋಚರಿಸುತ್ತದೆ; ಇನ್ನಷ್ಟು ಸಮಯದ ನಂತರ ನೆನೆದದ್ದನ್ನೂ ಗೋಚರಿಸಿದ್ದನ್ನೂ ಮನವು ತಿರಸ್ಕರಿಸುತ್ತದೆ. ಇದನ್ನು ವಿಪರ್ಯಾಯವೆನ್ನುತ್ತಾರೆ.

ಮೂರನೆಯದಾಗಿ ಮನವೇನನ್ನೋ ಕಲ್ಪಿಸಿಕೊಳ್ಳುತ್ತದೆ; ವಸ್ತುಸ್ಥಿತಿ ಹಾಗಿರುವುದೇ ಇಲ್ಲ.

ನಾಲ್ಕನೆಯದಾಗಿ ಮನವು ನಿದ್ರೆಗೆ ಜಾರುತ್ತದೆ. ಯಾವುದೇ ಆಲೋಚನೆಯಿಲ್ಲದಿದ್ದಾಗ ನಿದ್ದೆಯಲ್ಲಿ ಮುಳುಗಿರುತ್ತದೆ.

ಐದನೆಯದಾಗಿ ಗತಿಸಿದ ಸಂಗತಿಗಳ ನೆನೆಪಿಗೆ ಮನವು ಅಂಟಿಕೊಂಡಿರುತ್ತದೆ, ಅಥವ ಮುಂದಾಗುವುದರ ಬಗ್ಗೆ ಚಿಂತಿಸುತ್ತಿರುತ್ತದೆ.

ಮನದ ಈ ಐದು ಸ್ಥಿತಿಗಳು ಜಾಗೃತಾವಸ್ಥೆಗೆ ಅಡ್ಡಿಯುಂಟುಮಾಡುವ ಮೂಲಕ, ವರ್ತಮಾನವನ್ನು ಆನಂದಿಸಲು ಜನರನ್ನು ಬಿಡುವುದಿಲ್ಲ,

ಯೋಗವು ಇಂಥ ಮನಃಸ್ಥಿತಿಯನ್ನು ಬದಲಾಯಿಸುತ್ತದೆ, ಅನಗತ್ಯ ಚಿಂತನೆಗಳಿಂದ ದೂರಾಗಲು ಸಹಕರಿಸುತ್ತದೆ. ಅದು ಹೇಗೆನ್ನುವಿರಾ? .

ನೀವು ಎಲ್ಲವನ್ನೂ ಇಲ್ಲಿಯೇ ಬಿಟ್ಟು ಹೋಗುವವರಿದ್ದೀರಿ ಎ೦ಬುದನ್ನು ಅರಿಯಿರಿ. ಈ ಪ್ರಪಂಚವನ್ನು ಬಿಟ್ಟು ಹೋಗುವಾಗ ನೀವು ನಿಮ್ಮೊಂದಿಗೆ ಏನನ್ನೂ ಕೊಂಡೊಯ್ಯಲಾರಿರಿ. ಇದು ನನ್ನದು, ನನ್ನದು, ನನ್ನದೆನ್ನುತ್ತ ಪದಾರ್ಥಗಳತ್ತ ಒಲವನ್ನು ಬೆಳೆಸಿಕೊಳ್ಳುವುದೇ ಕಸಿವಿಸಿಯ ಮೂಲ ಕಾರಣ.

ನಾನು ಅನೇಕ ಸಂದರ್ಭಗಳಲ್ಲಿ ಪ್ರಸ್ತಾಪಿಸಿದ ಘಟನೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿಚ್ಛಿಸುತ್ತೇನೆ.
ಒಮ್ಮೆ ನಾನು ಕೆನಡಾದಲ್ಲಿದ್ದಾಗ, ಸುಮಾರು ಅರವತ್ತು ವರ್ಷ ದಾಟಿದ್ದ ಮಹಿಳೆಯೋರ್ವಳು, ನಾನು ಉಳಿದುಕೊಂಡಿದ್ದ ಮನೆಯ ಬಾಗಿಲನ್ನು ತಟ್ಟಿದಳು. ಆಗ ಸಮಯ ರಾತ್ರಿ ೧೧.೩೦ - ೧೨ ಆಗಿದ್ದಿತಾದರೂ ಆ ಕ್ಷಣವೇ ನೋಡಬೇಕೆನಿಸಿದ್ದರಿಂದ ಬಂದೆನೆಂದಳು. ನನ್ನನ್ನು ಕಂಡ ತಕ್ಷಣ ನೂರು ಡಾಲರಿನ ಒಂದು ಚೆಕ್ ನನ್ನ ಕೈಗಿತ್ತು, ಶಾಲಾ ವಿದ್ಯಾರ್ಥಿಗಳ ಯೋಜನೆಗೆ ಅದು ತನ್ನ ಕೊಡುಗೆಯೆಂದಳು. ’ಅ೦ಥ ತುರ್ತೇನು, ಅದನ್ನು ನಾಳೆ ಕೊಟ್ಟರಾಗಿತ್ತು’ ಎಂದೆ ನಾನು.

’ಯಾರನ್ನಾದರೂ ನಾನು ನಂಬಿಯೇನು, ನನ್ನ ಮನಸ್ಸನ್ನು ಮಾತ್ರ ನಂಬಲಾರೆ’ ಎಂದು ಆಕೆ ಉತ್ತರಿಸಿದಳು.

ನಾನು ಉಳಿದುಕೊಂಡಿದ್ದ ಸ್ಥಳದಿಂದ ಸುಮಾರು ಒಂದು ತಾಸು ಪ್ರಯಾಣದ ದೂರದಿಂದ ಬಂದಿದ್ದ ಆಕೆಯೆಂದಳು, ’ಇದರ ಆಲೋಚನೆ ಮನಸ್ಸಿನಲ್ಲಿ ಮೂಡಿದಾಗ ಕೂಡಲೇ ಮಾಡಿಬಿಡಬೇಕು, ಮರುದಿನಕ್ಕೆ ಇಟ್ಟುಕೊಂಡರೆ ಮನಸ್ಸು ಬದಲಾಯಿಸೀತು ಎಂದು ತೋರಿತು. ಮರುದಿನ ನಾನು ಏನನ್ನೂ ಕೊಡದಿರಬಹುದು, ಅಥವ ಅದು ಹತ್ತು ಡಾಲರಿಗೆ ಕ್ಷೀಣಿಸಬಹುದೆನಿಸಿತು.’

ಆನಂತರ, ಆ ಮಧ್ಯ ರಾತ್ರಿಯಲ್ಲಿ ನನಗೊಂದು ಕಥೆಯನ್ನು ಆಕೆ ಹೇಳಿದಳು.

ಓರ್ವ ವರ್ತಕ ಒಮ್ಮೆ ನದಿಯೊಂದರಲ್ಲಿ ಮುಳುಗೇಳುತ್ತಿದ್ದ. ದೋಣಿಯಲ್ಲಿ ಸಾಗುತ್ತಿದ್ದ ಬೆಸ್ತನೋರ್ವನನ್ನು ಆತ ಕರೆದ. ನಂತರ ಆ ಬೆಸ್ತನನ್ನು ಕುರಿತು, ’ಹೇಗಾದರೂ ಮಾಡಿ ನನ್ನನ್ನು ಬದುಕಿಸು. ನನ್ನನ್ನು ನೀನು ಬದುಕಿಸಿದರೆ, ನನ್ನ ಸಮಸ್ತ ಆಸ್ತಿಯನ್ನೂ ನಿನಗೆ ಕೊಡುತ್ತೇನೆ’ ಎಂದ. ಬೆಸ್ತ ಮರು ಮಾತನಾಡದೆ ವರ್ತಕನನ್ನು ದೋಣಿಯ ಮೇಲಕ್ಕೆ ಏರಿಸಿಕೊಂಡ.

ದೋಣಿ ಸಾಗುತ್ತಿದ್ದಾಗ ವರ್ತಕನೆಂದ, ’ನೋಡು, ನನ್ನ ಆಸ್ತಿಯೆಲ್ಲವನ್ನೂ ನಿನಗೆ ನಾನು ಕೊಡಲಾರೆ, ಅರ್ಧ ಕೊಡುತ್ತೇನೆ. ನನಗೇನೂ ಬೇಡ, ಆದರೆ ನನ್ನ ಹೆಂಡತಿ ಮತ್ತು ಮಕ್ಕಳು ಎಲ್ಲವನ್ನೂ ಬಿಟ್ಟುಕೊಡಲು ಒಪ್ಪುವುದಿಲ್ಲ; ಅವರಿಗೋಸ್ಕರ ನಾನು ಏನನ್ನಾದರೂ ಉಳಿಸಲೇ ಬೇಕಾಗುತ್ತದೆ.’

ಬೆಸ್ತ ಕೇವಲ ಮುಗುಳ್ನಕ್ಕ, ಏನೂ ಮಾತನಾಡಲಿಲ್ಲ.

ದೋಣಿ ನದಿಯ ದಡವನ್ನು ಸಮೀಪಿಸುವಂತಾದಾಗ ವರ್ತಕ ಮರುನುಡಿದ, ’ನೋಡು, ನಿನಗೆ ಅರ್ಧವನ್ನು ಕೊಟ್ಟ ಬಳಿಕ ನಾನೇನು ಮಾಡಲಾದೀತು? ಇನ್ನರ್ಧ ಭಾಗವನ್ನು ಹೆಂಡತಿ ಮತ್ತು ಮಕ್ಕಳಿಗೆ ಕೊಟ್ಟಿರುವೆನಲ್ಲಾ. ಕಾಲು ಭಾಗವನ್ನು ನಿನಗೆ ಕೊಡಲು ಸಾಧ್ಯವಾಗಬಹುದೇನೋ.’

ಅಲ್ಲಿಂದ ದೋಣಿ ನದಿಯ ದಡವನ್ನು ಮುಟ್ಟುವ ವರೆಗೆ ಮೊತ್ತವು ಪದೇಪದೇ ಕಡಿಮೆಯಾಗತೊಡಗಿತು. ದಡಕ್ಕೆ ಕಾಲಿಟ್ಟ ಮರುಕ್ಷಣ ವರ್ತಕ ಕೇವಲ ಐದು ಡಾಲರನ್ನು ಬೆಸ್ತನ ಕಡೆಗೆ ಚಾಚಿದ.

ಪ್ರತಿಕ್ರಿಯಿಸುತ್ತ ಬೆಸ್ತನೆಂದ, ’ನಿನ್ನ ಮೌಲ್ಯ ಕೇವಲ ಐದು ಡಾಲರ್ ಎಂದು ನಾನು ಭಾವಿಸಿರಲಿಲ್ಲ."

ವರ್ತಕ ಮರುನುಡಿದ, ’ನನ್ನನ್ನು ಅಲ್ಲಿಂದಿಲ್ಲಿಗೆ ಕರೆತರಲು ನಿನಗೆಷ್ಟು ವೆಚ್ಚವಾದೀತು? ಮೂರು ಡಾಲರ್; ಅದಕ್ಕಿಂತ ಹೆಚ್ಚು ಹಣವನ್ನೇ ನಾನು ನಿನಗೆ ನೀಡಿದ್ದೇನೆ.’

ಮನ ಬದಲಾಗುತ್ತದೆ! ಒಂದು ಒಳ್ಳೆಯ ಕೆಲಸ ಮಾಡುವ ಮನವಿದ್ದರೆ ತಕ್ಷಣ ಮಾಡಿಬಿಡಬೇಕು, ಮುಂದೂಡಿಕೆ ಮನಸ್ಸನ್ನು ಬದಲಾಯಿಸಿಬಿಡುತ್ತದೆ.

ಒಳ್ಳೆಯ ಕೆಲಸಗಳನ್ನು ಮುಂದೂಡುವ ನಾವು, ದುಷ್ಕಾರ್ಯವೆಸಗಲು ತಡ ಮಾಡುವುದೇ ಇಲ್ಲ.

ಕೋಪಿಸಿಕೊಳ್ಳುವುದನ್ನು ನಾವು ಒಂದು ವಾರ ತಪ್ಪಿದರೆ ಒಂದೆರಡು ದಿನಗಳಷ್ಟು ಮುಂದಕ್ಕೆ ಹಾಕಿದರೆ, ಆ ನಂತರ ನಮಗೆ ಕೋಪಿಸಿಕೊಳ್ಳಬೇಕಾದ ಅಗತ್ಯವೇ ಏರ್ಪಡಲಾರದೇನೋ. ಯಾರನ್ನಾದರೂ ಬರಮಾಡಿಕೊಂಡು ಅವರ ಮೇಲೆ ರೇಗುವಂಥ ಸಂದರ್ಭವಿದ್ದಾಗ, ರೇಗುವಿಕೆಯನ್ನು ಒಂದೆರಡು ತಾಸುಗಳಷ್ಟು ಮುಂದೂಡಿ. ಆವೇಶದ ತೀವ್ರತೆ ತಗ್ಗುತ್ತದೆ.

ಹೀಗೆ ಕಥೆಯನ್ನು ಮುగిಸಿದ ಆ ಮಹಿಳೆ, ’ವೇಳೆ ಮೀರಿದ್ದರೂ ನಾನು ಬಂದಿರುವುದು ಈ ಕಾರಣದಿಂದಲೇ. ಅಷ್ಟು ಹಣವನ್ನು ಸ್ವಂತ ವೆಚ್ಚಕ್ಕೆ, ನನ್ನ ಒಡವೆಗಳ ಮೇಲೆ, ಆಹಾರದ ಸಲುವಾಗಿ ಹಾಗೂ ಮನರಂಜನೆಗಾಗಿ ವ್ಯಯಿಸಲು ನಾನು ಹಿಂದೆಮುಂದೆ ನೋಡುವುದಿಲ್ಲ; ಆದರೆ ನಾನೊಂದು ಒಳ್ಳೆಯ ಕೆಲಸ ಮಾಡಲು ಹೊರಟರೆ ಅಡಚಣೆ ಎದುರಾಗುತ್ತದೆ.’ ಈ ಸಂದರ್ಭದಲ್ಲಿ ಹಾಗಾಗುವುದು ಬೇಡ.

ಈ ಜನ್ಮದಿಂದ ಮುಕ್ತವಾಗುವ ವೇಳೆಯಲ್ಲಿ ನಾವು ಒಳ್ಳೆಯ ಕೆಲಸಗಳಿಂದ ಗಳಿಸಿದ ಫಲಗಳು ಮಾತ್ರ ನಮ್ಮೊಂದಿಗೆ ಸಾಗುತ್ತವೆ. ಬಂಧನ ಮತ್ತು ಸ್ವಾತಂತ್ರ್ಯದ ವಿಚಾರಗಳಲ್ಲಿ ಮನಸ್ಸು ಬಹಳ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ.

ಭಗವದ್ಗೀತೆಯಲ್ಲಿ ನರಕಕ್ಕೆ ಮೂರು ಬಾಗಿಲುಗಳಿವೆಯೆಂಬ ಉಲ್ಲೇಖವಿದೆ. ಕ್ರೋಧ ಮೊದಲನೆಯ ಬಾಗಿಲು. ಕ್ರೋಧವನ್ನು ನಿಯಂತ್ರಿಸುವುದೆಂತು? ಕ್ರೋಧ ಪ್ರಕಟಣೆಯನ್ನು ಮುಂದೂಡುವ ಮೂಲಕ. ಎರಡನೇ ಬಾಗಿಲು ದುರಾಸೆ. ಮೂರನೇ ಬಾಗಿಲು ಕಾಮಾತುರತೆ. ಕಾಮದೆಡೆಗೆ ಬಾಗಿದ ಚಿತ್ತ ಇತರರನ್ನು ಲಕ್ಷಿಸುವುದಿಲ್ಲ; ಅದು ಭಯಂಕರ ಪರಿಣಾಮಗಳನ್ನು ಸೃಷ್ಟಿಸುತ್ತದೆ.
ಸ್ವರ್ಗದ  ಬಾಗಿಲುಗಳು ಯಾವುವು?

ಹಿಂದೆ ನಡೆದದ್ದೆಲ್ಲವನ್ನೂ ಜೀರ್ಣಿಸಿಕೊಳ್ಳಬಲ್ಲಂಥ ವಿಶಾಲವಾದ ಮನಸ್ಸು, ಇತರರು ಮಾಡಿದ ತಪ್ಪುಗಳಿಗೆ ವಿಶೇಷ ಅರ್ಥ ಕಲ್ಪಿಸಿ ಭಿನ್ನಾಭಿಪ್ರಾಯ ಉಂಟುಮಾಡದಂಥ ಔದಾರ್ಯವುಳ್ಳ ಮನಸ್ಸೇ ಸ್ವರ್ಗದ  ಬಾಗಿಲು. ಮನಸ್ಸಿನಲ್ಲಿ ಒಂದು ಕಹಿಯನ್ನಿರಿಸಿಕೊಂಡು ಅದನ್ನೇ ಮೆಲುಕು ಹಾಕುತ್ತಿರಬಾರದು. ವೈರಾಗ್ಯವೆನ್ನುವುದು ಇದನ್ನೇ. ಹಳತು, ಅದೆಷ್ಟೇ ದುಃಖಮಯವಾಗಿದ್ದರೂ ಅದನ್ನು ಮರೆತುಬಿಡಬೇಕು.

ಆನೆಯ ಹಾಗಿರಬೇಕು. ಆನೆಗಳು ಎಲೆ, ತೊಗಟೆ, ಹಣ್ಣು ತಿನ್ನುತ್ತವೆಯೆಂಬುದನ್ನು ನೀವು ಬಲ್ಲಿರಿ; ತೆಂಗಿನೆಲೆ, ಬಿದಿರು, ಬಾಳೆಹಣ್ಣು ಮೊದಲುಗೊಂಡು ಏನು ಬೇಕಾದರೂ ತಿನ್ನಲು ಅವು ಸಿದ್ಧ. ಬಾಳೆಹಣ್ಣು ಅದೆಷ್ಟು ಮೃದು, ಬಿದಿರು ಅದೆಷ್ಟು ಕಠೋರ, ಆದರೂ ತಿಂದು ಅವೆಲ್ಲವನ್ನೂ ಆನೆಗಳು ಜೀರ್ಣಿಸಿಕೊಳ್ಳುತ್ತವೆ.

ಅಂತೆಯೇ ಬದುಕಿನಲ್ಲಿ ಸಂತೋಷದ, ನಿರಾಶೆಯ ಕ್ಷಣಗಳಿರುತ್ತವೆ; ಶಿಷ್ಟರು, ದುಷ್ಟರು ಎದುರಾಗುತ್ತಾರೆ (ನನ್ನ ಜೀವನದಲ್ಲಿ ದುಷ್ಟರ ಸುಳುಹಿಲ್ಲ. ಒಳ್ಳೆಯವರೇ ದೊರೆತಿದ್ದಾರೆ, ಅವರು ಕೆಲವೊಮ್ಮೆ ಕೆಟ್ಟದಾಗಿ ವರ್ತಿಸಿರಬಹುದು).

ತನ್ನಿಮಿತ್ತ, ಆದದ್ದು ಆಯಿತು, ಎಲ್ಲವನ್ನೂ ಜೀರ್ಣಿಸಿಕೊಳ್ಳೋಣ. ಭೂತಕಾಲವನ್ನು ಮರೆಯುವ ಪ್ರಕ್ರಿಯೆ ವರ್ತಮಾನದಲ್ಲಿ ಹರ್ಷ ಮತ್ತು ನೆಮ್ಮದಿಯನ್ನು ಏರ್ಪಡಿಸುತ್ತದೆ.

ನಾವು ಶಕ್ತಿಶಾಲಿಗಳಾಗಬೇಕು, ಆನೆಯ ಥರ; ಎಲ್ಲವನ್ನೂ ಜೀರ್ಣಿಸಿಕೊಳ್ಳಬೇಕು - ಮೃದುವಾದ, ಕಠೋರವಾದ ಭೂತಕಾಲದ ಸಮಸ್ತವನ್ನೂ. ನಿರಂತರವಾಗಿ ಅದೇ ಸ್ಥಿತಿಯಲ್ಲಿ ಮುನ್ನಡೆಯಬೇಕು, ವೈರಾಗ್ಯವೆನ್ನುವುದು ಇದನ್ನೇ.

ವೈರಾಗ್ಯ ಯಾವ ಆನಂದವನ್ನು ಉಂಟುಮಾಡುವುದಿಲ್ಲ? ಸಮಸ್ತ ವಿಧದ ಸಂತೋಷ ಪ್ರಾಪ್ತವಾಗುವುದು ವೈರಾಗ್ಯದಿಂದಲೇ.
ಜನ ಎರಡು ಬಗೆಯ ಪ್ರವೃತ್ತಿಗಳುಳ್ಳವರಾಗಿರಬಹುದು:

ಮೊದಲನೇ ಪ್ರವೃತ್ತಿಯ ಮೇರೆಗೆ, ’ನನ್ನ ಗತಿಯೇನು’, ’ಇದರಿಂದ ನನಗಾಗುವ ಉಪಯೋಗವೇನು’ ಎಂಬ ಆಲೋಚನೆಗಳ ಲಹರಿಯಲ್ಲಿ ನಾವಿರಬಹುದು. ಕ್ಷಣಿಕವಾದ ಆನಂದ ಅದರಿಂದ ದೊರಕಬಹುದು.

ಎರಡನೆಯದಾಗಿ, ’ಈ ಪ್ರಪಂಚಕ್ಕೆ ನಾನು ಹೇಗೆ ಉಪಯುಕ್ತನಾಗಬಹುದು’ ಎಂದು ನಾವು ಯೋಚಿಸಬಹುದು. ನಿರಂತರ ಹರ್ಷಕ್ಕೆ ಅದು ಕಾರಣವಾಗಬಹುದು.

ಆದ್ದರಿಂದ, ’ಪ್ರಪಂಚದಿಂದ ಏನನ್ನು ನಾನು ಪಡೆಯಬಹುದು; ನನಗೆ ದೊರಕಬಹುದಾದ ಸಂತೋಷವೆಷ್ಟು’ ಎಂಬ ಧಾಟಿಯನ್ನು ತೊರೆದು, ’ಪ್ರಪಂಚಕ್ಕೆ ಇನ್ನೂ ಹೆಚ್ಚಿನದನ್ನು ನಾನೇನು ನೀಡಬಹುದು; ಪ್ರಪಂಚಕ್ಕೆ ನಾನೆಷ್ಟು ಉಪಯುಕ್ತನಾಗಬಹುದು’ ಎಂದು ಆಲೋಚಿಸುವ ಮಟ್ಟಕ್ಕೆ ಪ್ರವೃತ್ತಿಯನ್ನು ಬದಲಿಸಿಕೊಳ್ಳಿ.

ವ್ಯತ್ಯಾಸವನ್ನು ಗುರ್ತಿಸಿದಿರಾ?

ಸ್ವಾರ್ಥವನ್ನು ತೊರೆದು ನಿಃಸ್ವಾರ್ಥದೆಡೆಗೆ ಸಾಗುವುದನ್ನು ಅದು ಸೂಚಿಸುತ್ತದೆ. ಎರಡನೇ ಪ್ರವೃತ್ತಿಗೆ ನಮ್ಮನ್ನು ನಾವು ಅಳವಡಿಸಿಕೊಂಡರೆ ದುಃಖಗಳು ಇನ್ನಿಲ್ಲದಂತೆ ಮಾಯವಾಗುತ್ತವೆ, ಸಮೃದ್ಧಿ ಪ್ರವಹಿಸಲಾರಂಭಿಸುತ್ತದೆ.

ಸ್ವರ್ಗದ ಬಾಗಿಲಿರುವುದು ವಿಶಾಲವಾದ ಮನೋಭಾವದಲ್ಲಿ, ಅನ್ಯರು ಎಸಗಿದ ತಪ್ಪುಗಳನ್ನು ನುಂಗಿಕೊಳ್ಳುವಂಥ ಸೌಜನ್ಯದಲ್ಲಿ, ಗತಿಸಿದ ಲೋಪಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮೆಲುಕು ಹಾಕದಿರುವಲ್ಲಿ. ಭೂತಕಾಲ ಅದೆಷ್ಟು ಗಂಭೀರವಾಗಿದ್ದರೂ ಮರೆತು ಹೊಸ ಉತ್ಸಾಹದಿಂದ ವರ್ತಮಾನವನ್ನು ಬರಮಾಡಿಕೊಳ್ಳುವುದೇ ವೈರಾಗ್ಯ.