ಬುಧವಾರ, ಏಪ್ರಿಲ್ 10, 2013

ಹೊಸ ವರ್ಷದ ಮಹತ್ವಗಳ ವಿಶ್ಲೇಷಣೆ

ಮಾಂಟ್ರಿಯಲ್, ಕೆನಡಾ
೧೦ ಎಪ್ರಿಲ್ ೨೦೧೩

ವತ್ತಿನ ದಿನವನ್ನು ಭಾರತದಲ್ಲಿ ಹೊಸ ವರ್ಷದ ದಿನವನ್ನಾಗಿ ಆಚರಿಸಲಾಗುತ್ತದೆ; ೨೦೭೦ನೆಯ ವರ್ಷ.

ಬಹಳ ಧಾರ್ಮಿಕನಾದ ಒಬ್ಬ ವ್ಯಕ್ತಿಯಿದ್ದನು. ಅವನೊಬ್ಬ ಚಕ್ರವರ್ತಿಯೂ ಆಗಿದ್ದನು. ಅವನು ೨೦೭೦ ವರ್ಷಗಳ ಹಿಂದೆ ಜೀವಿಸಿದ್ದನು. ಭಾರತದಲ್ಲಿ, ವರ್ಷಗಳಿಗೆ ಅವನ ಹೆಸರನ್ನು ಇಡಲಾಗಿದೆ. ಅದರ ನಂತರ ವಿಕ್ರಮ ವರ್ಷಗಳೆಂದು ಅವನ ಹೆಸರನ್ನು ವರ್ಷಗಳಿಗೆ ಇಡಲಾಯಿತು. ಹಾಗಾಗಿ ಈ ಹೊಸ ವರ್ಷವು ವಿಕ್ರಮ ೨೦೭೦ ಆಗಿದೆ.

ವಿಕ್ರಮನ ಮೊದಲು, ವರ್ಷಗಳಿಗೆ ಕೃಷ್ಣ ಪರಮಾತ್ಮನ ಹೆಸರನ್ನು ಇಡಲಾಗುತ್ತಿತ್ತು; ಹಾಗಾಗಿ ಇವತ್ತು ೫,೧೧೪ ವರ್ಷಗಳಾಗಿವೆ.
ಹೊಸ ವರ್ಷದ ವ್ಯವಸ್ಥೆಯು ಬ್ರಹ್ಮಾಂಡದ ಮೇಲೆ ಆಧರಿತವಾಗಿದೆ. ಸೂರ್ಯ ಅಥವಾ ಚಂದ್ರನು ಮೇಷ ರಾಶಿಯ ಮೊದಲ ಬಿಂದುವನ್ನು ಪ್ರವೇಶಿಸುವಾಗ ಅದು ಪ್ರಾರಂಭವಾಗುತ್ತದೆ. ಇವತ್ತು ಪ್ರವೇಶಿಸಿದುದು ಚಂದ್ರನಾಗಿದೆ ಮತ್ತು ಎರಡು ದಿನಗಳ ಬಳಿಕ, ಅಂದರೆ ಎಪ್ರಿಲ್ ೧೩ ರಂದು ಸೂರ್ಯನು ಮೇಷ ರಾಶಿಯ ಮೊದಲ ಬಿಂದುವನ್ನು ಪ್ರವೇಶಿಸುವನು. ನಾವು ಬೈಸಾಖಿಯನ್ನು ಆಚರಿಸುವುದು ಆಗಲೇ, ಹಾಗೆಯೇ ಅದೊಂದು ಹೊಸ ವರ್ಷದ ದಿನವಾಗಿದೆ. ಹೀಗೆ, ಭಾರತದ ಅರ್ಧದಷ್ಟು ಭಾಗದ ಜನರು ಚಂದ್ರನೊಂದಿಗೆ ಆಚರಿಸುತ್ತಾರೆ ಮತ್ತು ಉಳಿದ ಅರ್ಧದಷ್ಟು ಜನರು ಸೂರ್ಯನೊಂದಿಗೆ ಆಚರಿಸುತ್ತಾರೆ. ಅಲ್ಲಿ ಕೂಡಾ ಯಾವುದೇ ಏಕಸಮಾನತೆಯಿಲ್ಲ; ತಾವು ಯಾವುದನ್ನು ಬಯಸುತ್ತೇವೆಯೋ ಅದನ್ನು ಆಚರಿಸಲು ಎಲ್ಲರಿಗೂ ಸ್ವಾತಂತ್ರ್ಯವಿದೆ.

ಪಂಜಾಬ್, ಬಂಗಾಳ, ಒರಿಸ್ಸಾ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಅವರು ಹೊಸ ವರ್ಷವನ್ನು ಸೌರಮಾನ ಪಂಚಾಂಗದೊಂದಿಗೆ, ಅಂದರೆ ಬೈಸಾಖಿಯೊಂದಿಗೆ ಆಚರಿಸುತ್ತಾರೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಭಾರತದ ಹಲವಾರು ಇತರ ರಾಜ್ಯಗಳಲ್ಲಿ, ಅವರು ಇವತ್ತು ಆಚರಿಸುತ್ತಾರೆ, ಅಂದರೆ ಚಾಂದ್ರಮಾನ ಪಂಚಾಂಗದ ಪ್ರಕಾರ. ಆರ್ಟ್ ಆಫ್ ಲಿವಿಂಗಿನಲ್ಲಿ ನಾವು ಪ್ರತಿದಿನವೂ ಆಚರಿಸುತ್ತೇವೆ!

ಹೊಸ ವರ್ಷದ ದಿನದಂದು, ಸಂಪ್ರದಾಯವೆಂದರೆ ಬಹಳ ಕಹಿಯಾಗಿರುವ ಬೇವಿನ ಎಲೆಗಳನ್ನು ಮತ್ತು ಸಿಹಿಯಾಗಿರುವ ಬೆಲ್ಲವನ್ನು ಸ್ವಲ್ಪ ತಿನ್ನುವುದು. ಇದು, ಜೀವನವು ಕಹಿ, ಸಿಹಿ ಎರಡೂ ಆಗಿದೆ ಎಂಬುದನ್ನು ಸೂಚಿಸಲು ಇರುವುದಾಗಿದೆ. ನೀವು ಎರಡನ್ನೂ ನುಂಗಬೇಕು, ಅದು ಇರುವ ಸಂದೇಶ. ಸಮಯವು ನಿಮಗೆ  ಕಹಿ ಮತ್ತು ಸಿಹಿ ಎರಡೂ ಅನುಭವಗಳನ್ನು ಕೊಡುತ್ತದೆ. ಸಿಹಿತನವನ್ನು ತರುವುದು ಕೇವಲ ಮಿತ್ರರು ಎಂಬುದಾಗಿ ಯೋಚಿಸಬೇಡಿ, ಮಿತ್ರರು ಕಹಿತನವನ್ನು ಕೂಡಾ ತರಬಲ್ಲರು. ಹಾಗೆಯೇ ಶತ್ರುಗಳು ಯಾವತ್ತೂ ಕಹಿತನವನ್ನೇ ತರುವರು ಎಂದು ಯೋಚಿಸಬೇಡಿ, ಶತ್ರುಗಳು ಸ್ವಲ್ಪ ಸಿಹಿತನವನ್ನು ಕೂಡಾ ತರಬಲ್ಲರು. ಹೀಗೆ, ಜೀವನವು ಎಲ್ಲಾ ವಿರೋಧಾತ್ಮಕತೆಗಳ ಒಂದು ಮಿಶ್ರಣವಾಗಿದೆ; ಇಲ್ಲಿರುವಂತೆ, ಛಳಿಯಿದೆ ಮತ್ತು ಹಾಗಿದ್ದರೂ ಬೆಚ್ಚಗಿದೆ, ಅಲ್ಲವೇ? ಸುತ್ತಲೂ ಹಿಮವಿದೆ, ಆದರೂ ಹಿತಕರವಾಗಿದೆ. ಹೊಸ ವರ್ಷವು ಆ ರೀತಿಯಲ್ಲಿ ಪ್ರಾರಂಭವಾಗುತ್ತದೆ.

ಒಂದಾನೊಂದು ಕಾಲದಲ್ಲಿ ಪ್ರಪಂಚದಾದ್ಯಂತ ಎಲ್ಲರೂ ಒಂದೇ ಪಂಚಾಂಗವನ್ನು ಅನುಸರಿಸುತ್ತಿದ್ದರು; ಚಾಂದ್ರಮಾನ ಪಂಚಾಂಗ. ಇವತ್ತು ಕೂಡಾ ಟರ್ಕಿ ಮತ್ತು ಇರಾನಿನಲ್ಲಿ ಜನರು ಚಾಂದ್ರಮಾನ ಪಂಚಾಂಗವನ್ನು ಅನುಸರಿಸುತ್ತಾರೆ; ಹೊಸ ವರ್ಷವು ಮಾರ್ಚ್ ಆಗಿದೆ.

ಲಂಡನಿನ ಜಾರ್ಜ್ ಚಕ್ರವರ್ತಿಯು, ಹೊಸ ವರ್ಷವು ಜನವರಿಯಲ್ಲಿ ಪ್ರಾರಂಭವಾಗಬೇಕೆಂದು ಬಯಸಿದನು, ಯಾಕೆಂದರೆ ಅವನು ಆ ತಿಂಗಳಿನಲ್ಲಿ ಜನಿಸಿದ್ದನು. ಅದು ಅವನ ಹೊಸ ವರ್ಷವಾಗಿತ್ತು, ಸಂಶಯವಿಲ್ಲ, ಆದರೆ ಅವನು ಅದನ್ನು ಇಡೀ ಬ್ರಿಟಿಷ್ ಸಾಮ್ರಾಜ್ಯದ ಮೇಲೆ ಹೇರಿದನು! ಈಗ, ಇದಾದುದು ಎಂಟನೆಯ ಅಥವಾ ಒಂಭತ್ತನೆಯ ಶತಮಾನದಲ್ಲಿ ಯಾವಾಗಲೋ, ಆದರೆ ಜನರು ಎಪ್ರಿಲಿನಲ್ಲಿ ಹೊಸವರ್ಷವನ್ನು ಆಚರಿಸುವುದನ್ನು ನಿಲ್ಲಿಸಲಿಲ್ಲ. ಹಾಗಾಗಿ ಜೋರ್ಜ್ ಚಕ್ರವರ್ತಿಯು ಅದನ್ನು ಎಪ್ರಿಲ್ ಫೂಲ್ಸ್ ಡೇ (ಮೂರ್ಖರ ದಿನಾಚರಣೆ) ಎಂದು ಕರೆದನು. ಎಪ್ರಿಲಿನಲ್ಲಿ ಯಾರು ಆಚರಿಸುವರೋ ಅವರು ಮೂರ್ಖರು ಎಂದು ಅವನು ಹೇಳಿದನು ಮತ್ತು ಎಪ್ರಿಲ್ ೧ ಮೂರ್ಖರ ದಿನಾಚರಣೆಯೆಂದು ಕರೆಯಲ್ಪಟ್ಟುದು ಹೀಗೆಯೇ.

ಎಲ್ಲಾ ತಿಂಗಳುಗಳು ಮತ್ತು ದಿನಗಳ ಹೆಸರುಗಳು ಸಂಸ್ಕೃತದಲ್ಲಿರುವುದು ಎಂಬುದು ನಿಮಗೆ ಗೊತ್ತಿತ್ತೇ? ವಾರದ ದಿನಗಳಿಗೆ ಏಳು ಗ್ರಹಗಳ ಹೆಸರುಗಳನ್ನಿಡಲಾಗಿದೆ. ನೀವು ಸಂಡೇ (ರವಿವಾರ) ಎಂದು ಹೇಳಿದರೆ, ಅದು ಸೂರ್ಯನ ದಿನ. ಮಂಡೇ(ಸೋಮವಾರ)ಯು ಚಂದ್ರನ (ಮೂನ್) ದಿನ. ಟ್ಯೂಸ್ಡೇ(ಮಂಗಳವಾರ)ಯು ಮಂಗಳ, ವೆನಸ್ಡೇಯು ಬುಧ, ತರ್ಸ್ಡೇಯು ಗುರು, ಫ್ರೈಡೇಯು ಶುಕ್ರ ಮತ್ತು ಸೇಟರ್ಡೇಯು ಶನಿವಾರ. ವಾರದ ದಿನಗಳಿಗೆ ಯಾವ ಏಳು ಗ್ರಹಗಳ ಹೆಸರುಗಳನ್ನಿಡಲಾಯಿತೋ ಅವುಗಳೇ ಇವು. ನಿಜವಾಗಿ, ಇದೆಲ್ಲವೂ ಸಂಸ್ಕೃತದಲ್ಲಿದೆ! ಮೂಲ ಪಂಚಾಂಗವು ಪ್ರಾಚೀನ ಭಾರತದಲ್ಲಿ ಸಂಸ್ಕೃತದಲ್ಲಿ ಮಾಡಲ್ಪಟ್ಟಿತು; ಅಲ್ಲಿಂದ ಅದು ಈಜಿಪ್ಟಿಗೆ ಹೋಯಿತು.

ಹನ್ನೆರಡು ತಿಂಗಳುಗಳು ಹನ್ನೆರಡು ರಾಶಿಗಳ ತಾರಾಪುಂಜಗಳಿಂದ; ಅಂದರೆ, ಪ್ರತಿಯೊಂದು ನಕ್ಷತ್ರ ಸಮೂಹದಲ್ಲಿ ಸೂರ್ಯನ ಸ್ಥಾನದಿಂದ (ಅದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ ಆಗಿರಲಿ; ಇದರ ಪ್ರಕಾರವಾಗಿ ತಿಂಗಳುಗಳ ಹೆಸರುಗಳನ್ನು ನೀಡಲಾಯಿತು) ಹೆಸರಿಸಲ್ಪಟ್ಟವು. ಹೀಗೆ, ತಿಂಗಳುಗಳ ಹೆಸರುಗಳು ಸಂಸ್ಕೃತದಲ್ಲಿರುವ ಪದಗಳಿಗೆ ಸಂಬಂಧಿಸಿವೆ.  

ದಶಂಬರವು ಡಿಸೆಂಬರ್ ಆಗಿದೆ; ಸಂಸ್ಕೃತದಲ್ಲಿ ದಶ ಅಂದರೆ ಹತ್ತು ಎಂದು ಅರ್ಥ. ಅಂಬರವೆಂದರೆ ಆಕಾಶವೆಂದು ಅರ್ಥ, ದಶಂಬರವೆಂದರೆ ಹತ್ತನೆಯ ಆಕಾಶ. ನವಂಬರ್ ನವೆಂಬರ್ ಆಗಿದೆ, ಅಂದರೆ ಒಂಭತ್ತನೆಯ ಆಕಾಶ. ಅಶ್ಟಂಬರ್ ಎಂಬುದು ಒಕ್ಟೋಬರ್ ಆಗಿದೆ, ಅಂದರೆ ಎಂಟನೆಯ ಆಕಾಶ. ಸೆಪ್ಟೆಂಬರ್ ಅಂದರೆ ಏಳನೆಯ ಆಕಾಶ ಎಂದು ಅರ್ಥ. ನೋಡಿ, ಒಂದು ಪದವು ಆಕಸ್ಮಿಕವಾಗಿರಬಹುದು, ಆದರೆ ಎಲ್ಲಾ ಹೆಸರುಗಳು ಹೊಂದಿಕೆಯಾದರೆ ಆಗ ಅದು ಆಕಸ್ಮಿಕವಲ್ಲ.

ಶಷ್ಠ್ ಅಂದರೆ ಆರನೆಯದು ಎಂದು ಅರ್ಥ, ಅಂದರೆ ಆಗಸ್ಟ್. ಅದು ಎಂಟನೆಯ ತಿಂಗಳಲ್ಲ. ಆಗಸ್ಟ್ ಆರನೆಯ ತಿಂಗಳಾಗಿದೆ (ನೀವು ಮಾರ್ಚಿನಿಂದ ಪ್ರಾರಂಭಿಸಿದರೆ).

ನೀವು ಫೆಬ್ರುವರಿಗೆ ಬಂದರೆ, ನಾವು ಹೆಚ್ಚಾಗಿ ವರ್ಷದ ಫ್ಯಾಗ್ ಎಂಡ್ (ಕಟ್ಟ ಕಡೆಯ ಭಾಗ) ಎಂದು ಹೇಳುತ್ತೇವೆ! ಫೆಬ್ರುವರಿಯು ಹನ್ನೆರಡನೆಯ ತಿಂಗಳಾಗಿದೆ, ವರ್ಷದ ಕೊನೆಯ ತಿಂಗಳು. ಮಾರ್ಚ್ ಎಂಬುದು ಹೊಸ ವರ್ಷದ ಮೊದಲನೆಯ ತಿಂಗಳಾಗಿದೆ.

ಸಾಮಾನ್ಯವಾಗಿ, ಚಾಂದ್ರಮಾನ ಹೊಸ ವರ್ಷವು ಮಾರ್ಚ್ ೨೦ ರಂದು ಬರುತ್ತದೆ, ಆದುದರಿಂದ ಹೊಸ ವರ್ಷವು ಪ್ರಾರಂಭವಾಗುವುದು ಆಗಲೇ. ಹೀಗಿದ್ದರೂ, ಇದೆಲ್ಲವೂ ಒಬ್ಬ ಬ್ರಿಟಿಷ್ ಚಕ್ರವರ್ತಿಯಿಂದ ವಿಕೃತಗೊಳಿಸಲ್ಪಟ್ಟಿತು. ಅವನು, ಅಮೇರಿಕಾದ ಸಂಯುಕ್ತ ಸಂಸ್ಥಾನಗಳು ಮತ್ತು ಕೆನಡಾವನ್ನೊಳಗೊಂಡು ಬಹುತೇಕ ಅರ್ಧ ಜಗತ್ತನ್ನು ಹಿಡಿತದಲ್ಲಿರಿಸಿದನು ಮತ್ತು ಪ್ರಭಾವ ಬೀರಿದನು. ಹೀಗೆ, ಜಾರ್ಜ್ ಚಕ್ರವರ್ತಿಯು ತನ್ನ ಸ್ವಂತ ಜನ್ಮದಿನಕ್ಕನುಗುಣವಾಗಿ ಹೊಸವರ್ಷವನ್ನು
ಬದಲಾಯಿಸಿದನು. ಇದು ನಡೆದ ಕಥೆ!

ದುರದೃಷ್ಟವಶಾತ್, ಭಾರತದಲ್ಲಿ ಹಲವಾರು ಜನರು ತಿಂಗಳುಗಳ ಸಾಂಪ್ರದಾಯಿಕ ಹೆಸರುಗಳನ್ನು ಮತ್ತು ಹೆಸರುಗಳ ಅರ್ಥಗಳನ್ನು ಮರೆತಿದ್ದಾರೆ. ಚಾಂದ್ರಮಾನ ಪಂಚಾಂಗದಂತೆ ಹೆಸರುಗಳು ಹೀಗಿವೆ: ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಿನ, ಕಾರ್ತಿಕ, ಮಾರ್ಘಶಿರ, ಪುಷ್ಯ, ಮಾಘ ಮತ್ತು ಫಾಲ್ಗುಣ.

ಚಾಂದ್ರಮಾನ ಪಂಚಾಂಗದಲ್ಲಿರುವ ಪ್ರತಿಯೊಂದು ತಿಂಗಳಿನ ಹೆಸರು, ಬ್ರಹ್ಮಾಂಡದಲ್ಲಿರುವ, ನಮ್ಮ ಆಕಾಶಗಂಗೆಯಲ್ಲಿನ ೨೭ ನಕ್ಷತ್ರಗಳಿಗೆ ಅನುರೂಪವಾಗಿದೆ. ಎರಡೂಕಾಲು ನಕ್ಷತ್ರಗಳು ಒಂದು ನಕ್ಷತ್ರಸಮೂಹವನ್ನು ರೂಪಿಸುತ್ತವೆ. ಅದನ್ನು ೧೨ ನಕ್ಷತ್ರಸಮೂಹಗಳಿಂದ ಗುಣಿಸಿ. ಅದು ೨೭ ನಕ್ಷ್ತ್ರಗಳಿಗೆ ಸಮಾನವಾಗುತ್ತದೆ.

ಪೂರ್ಣ ಚಂದ್ರನು ನಕ್ಷತ್ರಗಳಲ್ಲಿ ಒಂದಕ್ಕೆ ಸ್ಪಷ್ಟವಾಗಿ ಬರುವಾಗ, ಆ ತಿಂಗಳು ಆ ನಕ್ಷತ್ರದ ಹೆಸರಿನಿಂದ ಕರೆಯಲ್ಪಡುತ್ತದೆ.

ಉದಾಹರಣೆಗೆ, ಚಿತ್ರ ಎಂಬ ಹೆಸರಿನ ಒಂದು ನಕ್ಷತ್ರವಿದೆ. ಪೂರ್ಣ ಚಂದ್ರನು ಚಿತ್ರ ನಕ್ಷತ್ರಕ್ಕೆ ಬರುವಾಗ, ಅದು ಚಾಂದ್ರಮಾನ ಪಂಚಾಂಗದ ಮೊದಲನೆಯ ತಿಂಗಳಾಗಿದೆ, ಅಂದರೆ ಚೈತ್ರ. ಅದರ ಮುಂದಿನ ತಿಂಗಳು ವೈಶಾಖವಾಗಿರುವುದು.

ಚಂದ್ರನು ಯಾವ ನಕ್ಷತ್ರದ ಕೆಳಗೆ ಬರುತ್ತಾನೆ ಎಂಬುದನ್ನು ನೋಡಲು ಹೇಗೆ ಕರಾರುವಕ್ಕಾದ ಲೆಕ್ಕಾಚಾರಗಳನ್ನು ಮಾಡಲಾಯಿತು ಎಂಬುದು ಮತ್ತು ತಿಂಗಳುಗಳನ್ನು ಹೇಗೆ ಲೆಕ್ಕ ಹಾಕಲಾಯಿತು ಎಂಬುದು ಆಶ್ಚರ್ಯಕರವಾಗಿದೆ.

ಚಾಂದ್ರಮಾನ ಪಂಚಾಂಗದಲ್ಲಿ, ಒಂದು ತಿಂಗಳಿನಲ್ಲಿ ಕೇವಲ ೨೭ ದಿನಗಳಿರುವುದು. ಆದುದರಿಂದ, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಅಲ್ಲೊಂದು ಅಧಿಕ ಮಾಸವಿರುತ್ತದೆ, ಅಂದರೆ ಒಂದು ತಿಂಗಳು ಹೆಚ್ಚಿಗೆ. ಅಧಿಕ ವರ್ಷದಲ್ಲಿ, ಫೆಬ್ರುವರಿಯಲ್ಲಿ ನಿಮಗೆ ಹೇಗೆ ೨೯ ದಿನಗಳು ಸಿಗುವುವೋ ಹಾಗೆಯೇ; ಚಾಂದ್ರಮಾನ ಪಂಚಾಂಗದಲ್ಲಿ ನಿಮಗೊಂದು ಅಧಿಕ ಮಾಸ, ಅಂದರೆ ಒಂದು ತಿಂಗಳು ಹೆಚ್ಚಿಗೆ ಸಿಗುತ್ತದೆ.

ಸೌರಮಾನ ಪಂಚಾಂಗದಲ್ಲಿ ನಿಮಗೆ ಒಂದು ಅಧಿಕ ದಿನ ಮಾತ್ರ ಸಿಗುತ್ತದೆ; ಆಂಗ್ಲ ಕ್ಯಾಲೆಂಡರಿನಂತೆಯೇ.
ಕೆಲವೊಮ್ಮೆ, ಬೈಸಾಖಿಯು ಎಪ್ರಿಲ್ ೧೩ರಂದು ಬರುತ್ತದೆ. ಕೆಲವೊಮ್ಮೆ ಅದು ಎಪ್ರಿಲ್ ೧೪ರಂದು ಬರುತ್ತದೆ. ನಾಲ್ಕು ವರ್ಷಗಳಿಗೊಮ್ಮೆ, ಒಂದು ದಿನದ ವ್ಯತ್ಯಾಸವಾಗುತ್ತದೆ.

ಪ್ರಶ್ನೆ: ಗುರುದೇವ, ನಮಗೆ ಹೊಸ ವರ್ಷದ ಬಗ್ಗೆ ಹೇಳಿ, ಇದೊಂದು ಒಳ್ಳೆಯ ವರ್ಷವೇ?

ಶ್ರೀ ಶ್ರೀ ರವಿ ಶಂಕರ್: ಹೌದು, ಇದೊಂದು ಒಳ್ಳೆಯ ವರ್ಷವಾಗಿದೆ. ಈ ವರ್ಷವು ವಿಜಯದ ವರ್ಷ ಎಂದು ಕರೆಯಲ್ಪಡುತ್ತದೆ. ಕೆಟ್ಟತನದ ಮೇಲೆ ಒಳ್ಳೆಯತನದ ಮೇಲುಗೈಯಾಗುವುದು. ದುಷ್ಟರ ಮೇಲೆ ಜ್ಞಾನಿಗಳ ಮೇಲುಗೈಯಾಗುವುದು. ಯಾರೆಲ್ಲಾ ಕೆಟ್ಟ ಕೆಲಸಗಳನ್ನು ಮಾಡುತ್ತಿರುವರೋ, ಜನರಿಗೆ ಮೋಸ ಮಾಡುತ್ತಿರುವರೋ, ಅವರೆಲ್ಲರೂ ಹೊರಹೋಗುತ್ತಾರೆ. ಈಗ ಒಳಿತಿಗೆ ಮೇಲುಗೈಯಾಗುವ ಸಮಯವಾಗಿದೆ.

ಎಲ್ಲದಕ್ಕೂ ಒಂದು ಚಕ್ರವಿದೆ. ಬೇರೆ ಬೇರೆ ವಿಷಯಗಳು ಬೇರೆ ಬೇರೆ ಸಮಯಗಳಲ್ಲಿ ಆಗುತ್ತವೆ. ಹೀಗೆ, ಈ ಸಲ ಹೆಚ್ಚಿನ ಸತ್ವ ಬರುತ್ತಿದೆ.

ಪ್ರಶ್ನೆ: ಗುರುದೇವ, ನಮ್ಮ ಒರಿಸ್ಸಾ ವಿಶ್ವವಿದ್ಯಾಲಯದಲ್ಲಿ ನಾವು ಕಲಿಸಬಹುದೇ?

ಶ್ರೀ ಶ್ರೀ ರವಿ ಶಂಕರ್: ಹೌದು, ನೀವು ಉಪಕುಲಪತಿಯವರಿಗೆ ಬರೆಯಬಹುದು.
ಅಲ್ಲಿ ನಾವೊಂದು ಮೂಳೆವೈದ್ಯ ಪದ್ಧತಿಯನ್ನು ಪ್ರಾರಂಭಿಸಲಿದ್ದೇವೆ ಎಂಬುದು ನಿಮಗೆ ಗೊತ್ತೇ? ಅದು ಬಹಳ ಚೆನ್ನಾಗಿ ಬಂದಿದೆ. ನಮ್ಮ ಆಯುರ್ವೇದ ಕಾಲೇಜು ಕೂಡಾ ಬಹಳ ಚೆನ್ನಾಗಿ ನಡೆಯುತ್ತಿದೆ. ಅದು ಹತ್ತರಲ್ಲಿ ಆರು ಡಿಸ್ಟಿಂಕ್ಷನುಗಳನ್ನು ಪಡೆದಿದೆ. ಅಲ್ಲಿರುವ ಅತ್ಯುತ್ತಮ ಆಯುರ್ವೇದ ಆಸ್ಪತ್ರೆಗಳಲ್ಲಿ ಒಂದೆಂದು ಅದು ತಿಳಿಯಲ್ಪಡುತ್ತದೆ ಎಂಬುದು ನಿಮಗೆ ಗೊತ್ತಿದೆಯೇ? ಉಬ್ಬಿರುವ ರಕ್ತನಾಳಗಳು ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವ ಜನರನ್ನು, ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆಯೇ ಅದು ಗುಣಪಡಿಸುತ್ತದೆ.

ಪ್ರಶ್ನೆ: ಗುರುದೇವ, ನಮ್ಮ ಆಯುರ್ವೇದದ ಆಸ್ಪತ್ರೆಯಲ್ಲಿ ಕ್ಯಾನ್ಸರನ್ನು ಗುಣಪಡಿಸಲಾಗಿದೆಯೆಂದು ನಾನು ಕೇಳಿದ್ದೇನೆ.

ಶ್ರೀ ಶ್ರೀ ರವಿ ಶಂಕರ್: ಹೌದು, ಅವರ ಔಷಧಿಯಿಂದ ಕ್ಯಾನ್ಸರನ್ನು ಗುಣಪಡಿಸಲಾಗಿದೆ. ನಮ್ಮ ಶಕ್ತಿ ಡ್ರಾಪ್ಸ್ ಕೂಡಾ ಹಾಗೆಯೇ, ಅದು ಆಶ್ಚರ್ಯಕರ ಫಲಿತಾಂಶಗಳನ್ನು ನೀಡಿದೆ. ಅವರೀಗ ಶಕ್ತಿ ಡ್ರಾಪ್ಸುಗಳ ಮೇಲೆ ಬಹಳಷ್ಟು ಸಂಶೋಧನೆಯನ್ನು ಮಾಡುತ್ತಿದ್ದಾರೆ. ಅದು ಹಲವಾರು ವಿಷಯಗಳಲ್ಲಿ; ಬೀಕ, ನೋವುಗಳಲ್ಲಿ ಪ್ರಯೋಜನಕಾರಿಯಾಗಿದೆ.

ಆ ಎಲ್ಲಾ ಮಾಹಿತಿಯನ್ನು ಪಡೆಯಲು, ಸಂಶೋಧನೆಯು ಸುಮಾರು ಒಂದು ವರ್ಷವನ್ನು ತೆಗೆದುಕೊಳ್ಳಬಹುದು.

ಪ್ರಶ್ನೆ: ಗುರುದೇವ, ನನ್ನ ಮಗಳಿಗೆ ಕಾಯಿಗಳ (ನಟ್ಸ್) ಒಂದು ಗಂಭೀರವಾದ ಅಲರ್ಜಿಯಿತ್ತು. ನಾನು ನವರಾತ್ರಿಯ ಸಮಯದಲ್ಲಿ ಆಶ್ರಮಕ್ಕೆ ಬಂದೆ ಮತ್ತು ನಮ್ಮ ಆಯುರ್ವೇದದ ಆಸ್ಪತ್ರೆಯಲ್ಲಿ ಅವಳಿಗೆ ಚಿಕಿತ್ಸೆ ಮಾಡಿಸಿದೆ. ಈಗ, ೬೦ ಶೇಕಡಾಕ್ಕಿಂತ ಹೆಚ್ಚು ಗುಣವಾಗಿದೆ. ಹಾಗೆಯೇ, ಅವಳ ಇಸಬು ಹೋಗುತ್ತಾ ಇದೆ.

ಶ್ರೀ ಶ್ರೀ ರವಿ ಶಂಕರ್: ಅಲರ್ಜಿಗಳು, ಚರ್ಮರೋಗ, ಇವುಗಳನ್ನೆಲ್ಲಾ ಬಹಳ ಚೆನ್ನಾಗಿ ಗುಣಪಡಿಸಲು ಸಾಧ್ಯವಿದೆ. ಅಲೋಪತಿಯಲ್ಲಿ ಗುಣಪಡಿಸಲು ಸಾಧ್ಯವಿಲ್ಲದಿರುವ ಹಲವಾರು ರೋಗಗಳನ್ನು ನಮ್ಮ ಆಯುರ್ವೇದ ಆಸ್ಪತ್ರೆಯ ವೈದ್ಯರು ಗುಣಪಡಿಸಬಲ್ಲರು ಮತ್ತು ಶಕ್ತಿ ಡ್ರಾಪ್ಸ್ ಕೂಡಾ ಈ ಕೆಲಸವನ್ನು ಚೆನ್ನಾಗಿ ಮಾಡುತ್ತವೆ. ಹಲವಾರು ಜನರು ಮಹತ್ತರವಾದ ಬದಲಾವಣೆಗಳನ್ನು ಅನುಭವಿಸಿರುವರು.