ಗುರುವಾರ, ಏಪ್ರಿಲ್ 11, 2013

ಧ್ಯಾನಾನ೦ದ ನಿಮಗ್ನ


ಅಮೃತಬಿ೦ದು’ ಸರಣಿಯ ಬರಹಗಳು

ಹದಿನಾಲ್ಕನೆಯ ಕ೦ತು

ಪ್ರೀತಿಯ ಹೆಸರಿನಲ್ಲಿ ಬೇಡಿ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೮.೦೬.೨೦೦೩ರಂದು ಪ್ರಕಟವಾಗಿತ್ತು)

’ನಮಗೆ ಯಾವುದೇ ಬಂಧನವಿಲ್ಲ, ನಾವು ಸ್ವತಂತ್ರರು’ ಈ ರೀತಿಯ ಸ್ವತಂತ್ರಭಾವ ನಮ್ಮಲ್ಲಿ ಎಷ್ಟು ಜನಕ್ಕೆ ಬಂದಿದೆ? ಎಷ್ಟು ಘಳಿಗೆ ಬಂದಿದೆ? ’ನಾವು ಸ್ವತಂತ್ರವಾಗಿದ್ದೇವೆ’ ಎನ್ನುವ ಭಾವ ಬಂದ ಕ್ಷಣಗಳಲ್ಲಿ ಮಾತ್ರವೇ ಸುಖವಾಗಿರಲು ಸಾಧ್ಯ. ಬಂಧನದಲ್ಲಿದ್ದುಕೊಂಡು ಸುಖವಾಗಿರಲು ಸಾಧ್ಯವಿಲ್ಲ, ಸ್ವಾತಂತ್ರ್ಯ ಬೇಕು. ’ಸಿದ್ಧಃ ಸ್ವತಂತ್ರ ಭಾವಃ’.
ಆದರೆ, ಪ್ರೀತಿ, ಪ್ರೇಮ, ವಿಶ್ವಾಸ ಎನ್ನುವ ಹೆಸರಿನಲ್ಲಿ ನಾವು ಇತರರ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತೀವಿ. ಅವರನ್ನು ಬಂಧಿಸಿಬಿಡ್ತೀವಿ. "ನೀನು ನನ್ನ ಮಗ, ನೀನು ನನ್ನ ಸೊಸೆ, ಆದ್ದರಿಂದ ನೀನು ನಾನು ಹೇಳಿದ ಹಾಗೆ ಕೇಳಬೇಕು ನೋಡು". "ನೀನು ನನ್ನ ಹೆಂಡತಿ. ನಾನೆಷ್ಟು ಪ್ರೀತಿ ಮಾಡಿದೀನಿ, ನೀನು ನಾನು ಹೇಳಿದ ಹಾಗೆ ಕೇಳಬೇಕು", ಹೀಗೆಲ್ಲಾ ಒಂದು ಅಂಕುಶವನ್ನು ಇಡ್ತೀವಿ. ಮೇಲೆ ಪ್ರೀತಿ ಅಂತ ಹೆಸರು, ಆದರೆ ಅಂಕುಶ ಇರುತ್ತೆ. "ನೋಡು, ನಾನು ನಿನ್ನನ್ನು ಎಷ್ಟು ಪ್ರೀತಿಸಿದೀನಿ, ನೀನು ಹೀಗೆ ಅನ್ನಬಹುದಾ? ಹೀಗೆ ಮಾಡಬಹುದಾ? ನಾನು ಹೇಳಿದ ಹಾಗೆ ಕೇಳಿಕೊಂಡು ಬಿದ್ದಿರು, ಏಕೆಂದರೆ ನಾನು ನಿನ್ನನ್ನು ತುಂಬಾ ಪ್ರೀತಿಸಿದೀನಿ, ನಾನು ನನ್ನ ಜೀವನವನ್ನೇ ಕೊಟ್ಟಿದೀನಿ. ಇನ್ನೇನು ಬೇಕು? ಈಗ, ನಾನು ಹೇಳಿದಂತೆ ಕೇಳು" - ಹೀಗೆ ಗುಲಾಮರನ್ನಾಗಿ ಮಾಡ್ತೀವಿ ನಾವು!!
ಪ್ರೀತಿ ತೋರಿಸಿ ನಾವೇನೋ ಉಪಕಾರ ಮಾಡ್ತೀವಿ ಅಂದುಕೊಳ್ಳಬೇಡಿ. ಗುಲಾಮರನ್ನಾಗಿಸಿಕೊಳ್ಳಲು ಇದೊಂದು ತುಂಬಾ ಸುಲಭವಾದ ಉಪಾಯ!
ಹಣ ನೀಡುವುದರಿಂದ, ಹೆದರಿಸುವುದರಿಂದ ಅಥವಾ ಅಧಿಕಾರದಿಂದ ಗುಲಾಮರನ್ನಾಗಿ ಮಾಡಿಕೊಳ್ಳುವುದು ದೊಡ್ಡ ವಿಷಯವಲ್ಲ. ಪ್ರೀತಿಯಿಂದ ಗುಲಾಮರನ್ನಾಗಿ ಮಾಡಿಕೊಳ್ಳುವವರು ತುಂಬಾ ನಿಪುಣರಾಗಿರುತ್ತಾರೆ. ಭಗವಂತನೂ ಭಕ್ತರ ಪ್ರೀತಿಗೆ ಗುಲಾಮನಾಗಿಬಿಡುತ್ತಾನೆ!!
ಜೀವನದಲ್ಲಿ ನಮಗೆ ಪ್ರಿಯವಾಗಿ ತೋರಿದ ಅದೇ ಪ್ರೀತಿ, ಅದೇ ವಿಶ್ವಾಸಗಳೇ ಮುಂದೆ ನಮಗೆ ಶ್ವಾಸವಾಡಲೂ ಬಿಡುವುದಿಲ್ಲ, ಬಂಧನವಾಗಿ ಬಿಡುತ್ತೆ ಏಕೆ? ಅಜ್ಞಾನದ ವಶದಿಂದ! ನಮ್ಮ ಭಾವನೆಯಿಂದ ನಮ್ಮನ್ನು ಬಂಧಿಸಿಕೊಳ್ತಾ ಇದೀವಿ. ಈ ಭಾವನೆಯ ಬೇಡಿಯನ್ನು ಕಿತ್ತುಹಾಕಿದಾಗಲೇ ನಿಜವಾದ ಸ್ವಾತಂತ್ರ್ಯ! ’ಸಿದ್ಧಃ ಸ್ವತಂತ್ರ ಭಾವಃ’.

* * * * *

ಸ್ವತಂತ್ರ ಭಾವ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೨೯.೦೬.೨೦೦೩ರಂದು ಪ್ರಕಟವಾಗಿತ್ತು)

’ಸಿದ್ಧಃ ಸ್ವತಂತ್ರ ಭಾವಃ’. ’ಸಿದ್ಧ’ ಎಂದರೆ ಏನೂ ಭಾವನೆಯೇ ಇಲ್ಲದಿರುವಂತಹ ಬೊಂಬೆ ಅಲ್ಲ. ಸಿದ್ಧನಲ್ಲೂ, ಸಿದ್ಧಾವಸ್ಥೆಯಲ್ಲಿಯೂ ಭಾವ ಇರುತ್ತೆ. ನಮ್ಮ ಜೀವನ ಸಿದ್ಧವಾಯಿತು, ಪೂರ್ಣವಾಯಿತು, ಎನ್ನುವುದರ ಲಕ್ಷಣ ಏನು? ಸ್ವತಂತ್ರ ಭಾವ, ಮುಕ್ತ ಭಾವ.
ಒಂದು ಜೈಲಿಗೆ ಖೈದಿಗಳೂ ಹೋಗ್ತಾರೆ, ಜೈಲರ್ ಸಹ ಹೋಗ್ತಾನೆ. ಆದರೆ, ಆ ಜೈಲರಿಗೂ, ಖೈದಿಗಳಿಗೂ ಎಷ್ಟು ವ್ಯತ್ಯಾಸವಿರುತ್ತೆ ಅಲ್ಲವೆ? ಆ ಜೈಲರ್ ಇಷ್ಟ ಬಂದಾಗ ಹೊರಗೆ ಬರಬಹುದು, ಒಳಗೆ ಹೋಗಬಹುದು. ಆದರೆ ಖೈದಿಗೆ ಹಾಗಾಗುವುದಿಲ್ಲ. ಇಬ್ಬರೂ ಅದೇ ಜೈಲಿನಲ್ಲಿರುತ್ತಾರೆ, ಅಲ್ಲಿಯೇ ಊಟ, ಅಲ್ಲಿಯೇ ಕೆಲಸ ಮಾಡ್ತಾರೆ. ಖೈದಿಗಳಾದರೆ ’ಸಮಯ ಆಯ್ತು’ ಅಂತ ಹೋಗಿ ಮಲಗಬಹುದು, ಆದರೆ ಜೈಲರಿಗೆ ಹಾಗೆ ಮಾಡಲಾಗುವುದಿಲ್ಲ. ಇನ್ನೂ ಹೆಚ್ಚಿನ ಕೆಲಸ ಇರುತ್ತೆ. ಜೈಲಿನಲ್ಲಿರುವ ಖೈದಿಗಳಿಗೂ, ಗಾರ್ಡುಗಳಿಗೂ ಏನು ವ್ಯತ್ಯಾಸ? ಗಾರ್ಡುಗಳಲ್ಲಿ ’ಸ್ವತಂತ್ರ ಭಾವ’ವಿದೆ! ಹೊರಗೆ ಹೋಗಲು ಅವರನ್ನು ಯಾರೂ ತಡೆಗಟ್ಟುವುದಿಲ್ಲ. ಆದರೆ, ಖೈದಿಗಳು ಬಂಧಿಗಳಾಗಿರುತ್ತಾರೆ.
ಹಾಗೆಯೇ ಮುಕ್ತಪುರುಷನಿಗೂ ಶರೀರ ಇರುತ್ತೆ, ಬದ್ಧಪುರುಷನಿಗೂ ಶರೀರ ಇರುತ್ತೆ. ಶರೀರ ಎಲ್ಲ ಕೆಲಸ ಮಾಡುತ್ತೆ, ಊಟ ಮಾಡುತ್ತೆ, ನಿದ್ದೆ ಮಾಡುತ್ತೆ, ಶರೀರಕ್ಕೆ ಹಸಿವು ಆಗುತ್ತೆ, ಎಲ್ಲಾ ಆಗುತ್ತೆ. ಆದರೆ ಭಾವ....?! ಸಿದ್ಧನ ಭಾವ ಸ್ವತಂತ್ರ ಭಾವ, ಮುಕ್ತ ಭಾವ!
ನಮ್ಮ ಭಾವನೆಯನ್ನು ನಾವು ಗಮನಿಸಿದಾಗ, ಅದು ಕ್ಷಣಕ್ಷಣಕ್ಕೂ ಬರುವಂಥಹುದು, ನೀರ ಮೇಲೆ ಬರುವಂಥಹ ಗುಳ್ಳೆಯ ಹಾಗೆ ಅಂತ ಅರಿವಾಗುತ್ತೆ. ಪುರಂದರ ದಾಸರು ಜೀವನವನ್ನೇ ’ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೆ’ ಎಂದು ಹಾಡಿದರು. ಇನ್ನು ಭಾವನೆಗಳದೇನು ಲೆಕ್ಕ...! ನೀರಿನ ಮೇಲೆ ಬರತಕ್ಕಂಥ ಅಲೆಯಿದ್ದ ಹಾಗೆ ನಮ್ಮ ಭಾವನೆಗಳು, ಹಾಗೆಯೇ ಬೇರೆಯವರಲ್ಲಿರತಕ್ಕಂಥ ಭಾವನೆಗಳು.... ಇದು ಮನವರಿಕೆಯಾದಾಗ, ನಮ್ಮ ಭಾವನೆಯಿಂದ ನಮಗೆ ಮುಕ್ತಿ ಸಿಕ್ಕಾಗ ನಾವು ’ಸಿದ್ಧ’ರಾಗುತ್ತೀವಿ.

* * * * *

ಪ್ರೇಕ್ಷಕರಾದ ಇಂದ್ರಿಯಗಳು
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೩೦.೦೬.೨೦೦೩ರಂದು ಪ್ರಕಟವಾಗಿತ್ತು)

"ಪ್ರೇಕ್ಷಕಃ ಇಂದ್ರಿಯಾಣಿ", ನಮ್ಮಲ್ಲಿರತಕ್ಕಂಥ ಇಂದ್ರಿಯಗಳೆಲ್ಲ ಪ್ರೇಕ್ಷಕರು. ಈ ಇಡೀ ಪ್ರಪಂಚದಲ್ಲಿ ಆಗತಕ್ಕಂಥ ನಾಟಕವನ್ನು ನೋಡತಕ್ಕಂಥ ಪ್ರೇಕ್ಷಕರು - ಹೊರಗೂ ನೋಡಬಹುದು, ಒಳಗೂ ನೋಡಬಹುದು. ಪ್ರೇಕ್ಷಕರು ಸುಮ್ಮನೆ ಒಂದು ಆಟವನ್ನು ನೋಡಿ ಆನಂದಿಸುತ್ತಾರೆ ಅಷ್ಟೆ. ಅವರು ಆಟ ಆಡ್ತಾ ಇಲ್ಲ.
ನಿಮ್ಮ ಕಣ್ಣು ನೋಡ್ತಾ ಇಲ್ಲ, ಮನಸ್ಸು ಕಣ್ಣಿನಿಂದ ನೋಡುತ್ತಿದೆ. ನಿಮ್ಮ ಆತ್ಮ ನೋಡುತ್ತಿದ್ದಾನೆ. ನಿಮ್ಮ ನಾಲಿಗೆ ತನ್ನಷ್ಟಕ್ಕೆ ತಾನೇ ಮಾತನಾಡುವುದಿಲ್ಲ. ಶವದಲ್ಲೂ ನಾಲಿಗೆ ಇರುತ್ತದೆ, ಒಂದು ಶಬ್ದ ಹೊರಗೆ ಬರುವುದಿಲ್ಲ, ಏಕೆ? ಆತ್ಮ ಇಲ್ಲ! ಆತ್ಮನೇ ಮಾತನಾಡ್ತಾನೆ, ಕೇಳ್ತಾನೆ, ಮೂಸಿನೋಡ್ತಾನೆ, ಆತ್ಮನೇ ಸ್ಪರ್ಷವನ್ನೂ ಮಾಡುತ್ತಾನೆ. ಆತ್ಮನೇ ಎಲ್ಲಾ ಕೆಲಸವನ್ನೂ ಮಾಡುತ್ತಾನೆ. ಆತ್ಮನ ನಾಟಕವನ್ನು ನೋಡಿ ಪ್ರೇಕ್ಷಕರಾಗಿ ಇಂದ್ರಿಯಗಳು ಸಂತೋಷಪಡುತ್ತವೆ. ಈ ನಾಟಕದಲ್ಲಿ ಆತ್ಮ ಸಂತೋಷಪಟ್ಟಾಗ ಇಂದ್ರಿಯಗಳೆಲ್ಲ ಸಂತೋಷಪಡುತ್ತವೆ. ಜೀವಾತ್ಮ ದುಃಖಿಯಾದಾಗ ಇಂದ್ರಿಯಗಳೆಲ್ಲ ದುಃಖವನ್ನು ಅನುಭವಿಸುತ್ತವೆ. "ಪ್ರೇಕ್ಷಕಃ ಇಂದ್ರಿಯಾಣಿ", ತುಂಬ ಅದ್ಭುತವಾದ ಸೂತ್ರ ಇದು.
ಮುಗ್ಧರಾದ ಎಷ್ಟೋ ಜನರು; ಸಿನಿಮಾ ನೋಡುವಾಗ, ಅಲ್ಲಿ ತೆರೆಯ ಮೇಲಿನ ಆ ಪಾತ್ರಧಾರಿಗಳಿಗೆ ಕಷ್ಟ ಬಂದಾಗ ಇವರೆಲ್ಲಾ ದುಃಖಿಸುತ್ತಾರೆ. ಏಕೆ? ತಾದಾತ್ಮ್ಯ ಉಂಟಾಗುತ್ತೆ; ತಲ್ಲೀನತೆ, ಏಕಾತ್ಮಭಾವ ಉಂಟಾಗಿಬಿಟ್ಟಿರುತ್ತದೆ. ಇದೇ ರೀತಿಯಲ್ಲಿ ಪ್ರೇಕ್ಷಕರಾದ ನಮ್ಮ ಇಂದ್ರಿಯಗಳೂ ಸಹ ದುಃಖಿಸುತ್ತವೆ. ಹೀಗೆ ಯಾವುದೇ ಭಾವಗಳುಂಟಾದರೂ ಅವುಗಳೆಲ್ಲಾ ಆತ್ಮನಿಂದ ಹೊರಹೊಮ್ಮತಕ್ಕಂಥ ಭಾವಗಳು ಎಂದು ತಿಳಿದುಕೊಳ್ಳಿ. ಇಂದ್ರಿಯಗಳು ಪ್ರೇಕ್ಷಕರು ಅಷ್ಟೆ!
ಕೆಲವು ಸಲ ಸಿನಿಮಾ ಅಥವಾ ನಾಟಕ ನಡೆಯುತ್ತಿರುವಾಗಲೇ ಪ್ರೇಕ್ಷಕರು ಅಲ್ಲಿಹೋಗಿ ಕುಳಿತುಕೊಂಡು ಚೆನ್ನಾಗಿ ನಿದ್ದೆ ಮಾಡಿಬಿಡುತ್ತಾರೆ. ಹಾಗೆ, ನಾವು ಪೂರ್ಣವಾಗಿ ಎಚ್ಚೆತ್ತುಕೊಂಡಿಲ್ಲದಿರುವಾಗಲೂ ಮತ್ತು ತಾದಾತ್ಮ್ಯ ಮಾಡಿಕೊಂಡು ದುಃಖಿಸುತ್ತಾ ಇರುವಾಗಲೂ ಆತ್ಮನ ನರ್ತನವನ್ನು ನೋಡಿ ಆನಂದಿಸಲು ಸಾಧ್ಯವಾಗುವುದಿಲ್ಲ.

* * * * *

ನವರಸಭರಿತ ಜೀವನ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೧.೦೭.೨೦೦೩ರಂದು ಪ್ರಕಟವಾಗಿತ್ತು)

"ಪ್ರೇಕ್ಷಕಃ ಇಂದ್ರಿಯಾಣಿ".
ಪ್ರೇಕ್ಷಕರಾಗಿ ವೀಕ್ಷಿಸಿ. ಜನಸಂದಣಿಯಿರುವ ಯಾವುದೋ ಒಂದು ಸ್ಥಳದಲ್ಲಿ ನೀವಿದ್ದಾಗ ಸ್ವಲ್ಪ ಹೊತ್ತು ನಿಂತುಕೊಂಡು ಗಮನಿಸಿ ನೋಡಿ. ಇಲ್ಲಿರುವ ಇಷ್ಟೊಂದು ತಲೆಗಳಲ್ಲಿ ಯಾವಯಾವ ತಲೆಯಲ್ಲಿ ಯಾವಯಾವ ಭಾವನೆಗಳು ಬಂದಿರಬಹುದು? ಒಂದರಲ್ಲಿ ಕೋಪ, ಒಂದರಲ್ಲಿ ಸಂತೋಷ... ಒಂದೊಂದೂ ಒಂದೊಂದು ತರಹ! ಭಾರೀ ವಿಚಿತ್ರವಾಗಿ ಕಾಣುತ್ತದೆ ಹೀಗೆ ವೀಕ್ಷಿಸಿದಾಗ. ನಿಮ್ಮ ಮನೆಯಲ್ಲೇ ಸ್ವಲ್ಪ ಹೊತ್ತು ಕೂತುಕೊಂಡು ಕಣ್ಣುಹಾಯಿಸಿ ಒಬ್ಬೊಬ್ಬರ ಮುಖವನ್ನೇ ನೋಡಿ, ಇವತ್ತು ಇವರ ತಲೆಯಲ್ಲಿ ಏನೇನು ಭಾವನೆ ಓಡ್ತಾ ಇದೆ ಅಂತ!
ಸಾಮಾನ್ಯವಾಗಿ ಮಕ್ಕಳು ಗಮನಿಸುತ್ತಾರೆ. ಮನೆಗೆ ಬಂದ ತಕ್ಷಣ ಇವತ್ತು ಅಪ್ಪನ ’ಮೂಡ್’ (ಮನಃಸ್ಥಿತಿ) ಹೇಗಿದೆ, ಅಮ್ಮನ ಮೂಡ್ ಹೇಗಿದೆ ಅಂತ. ಅದರಲ್ಲೂ ಶಾಲೆಯಲ್ಲಿ ಪ್ರವಾಸ ಹೋಗಬೇಕಿದ್ದರೆ, ಮನೆಯಲ್ಲಿ ಒಪ್ಪಿಗೆ ಪಡೆಯಲು ಏನೆಲ್ಲಾ ಕುಶಲತೆಯನ್ನುಪಯೋಗಿಸುತ್ತಾರೆ! ಮೊದಲು ನಿಮ್ಮನ್ನು ಪ್ರಸನ್ನಗೊಳಿಸಲು ಪ್ರಯತ್ನಿಸುತ್ತಾರೆ. ನಂತರ, "ಮತ್ತೇ, ಮತ್ತೇ, ಅಣ್ಣ ಬರುವ ಭಾನುವಾರ ಎಲ್ಲಾ ಟ್ರಿಪ್ ಹೋಗ್ತಾ ಇದಾರೆ. ನಾನೂ ಹೋಗಲಾ? ನೀನು ಹೋಗು ಅಂದರೆ ಹೋಗ್ತೀನಿ, ಬೇಡಾ ಅಂದರೆ ಹೋಗಲ್ಲ" ಸೂಕ್ಷ್ಮ ತಿಳಿದುಕೊಂಡು ಹೇಳ್ತಾರೆ. "ನೋಡಣ್ಣ, ಎಲ್ಲರೂ ಹೋಗ್ತಿದಾರೆ. ನಾನೂ ಹೋಗಿಬಿಟ್ಟು ಬಂದುಬಿಡ್ತೀನಿ ಏನೀಗ.. ಒಂದು ದಿನ ತಾನೆ? ನಾನು ಹೋಗಲ್ಲ ಅಂದರೆ ನನ್ನ ಫ್ರೆಂಡ್ಸ್ (ಗೆಳೆಯರು) ಸಹ ಹೋಗಲ್ಲ ಅಂತಾರೆ, ನನಗಲ್ಲದಿದ್ದರೂ ಅವರಿಗಾಗಿ ಹೋಗ್ತೀನಿ, ಅಷ್ಟೆ" ಎಂದೋ... ಇಲ್ಲದಿದ್ದರೆ, "ಮೇಡಂ ಕೋಪ ಮಾಡ್ಕೋತಾರೆ, ನೀನು ಯಾವುದಕ್ಕೂ ಸೇರುವುದಿಲ್ಲ, ಪ್ರತಿಸಲ ಹೀಗೇ ಮಾಡ್ತೀಯ ಅಂತಾರೆ", ಹೀಗೆ ನಾನಾ ಉಪಾಯ ಮಾಡಿ ಮನೆಯಲ್ಲಿ ಹಿರಿಯರನ್ನು ಒಪ್ಪಿಸಿಬಿಟ್ಟು ಹೋಗ್ತಾರೆ!
ಈ ಆತ್ಮನ ನರ್ತನ, ನಾಟಕವನ್ನು ನೋಡಿ. ಏನು ತರತರದ ನಾಟಕ ನಡೀತಾ ಇದೆ! ನಿಮ್ಮ ಮನೆಯಲ್ಲೇ ನಡೀತಾ ಇದೆ, ವೀಕ್ಷಿಸಿ. ರೌದ್ರ, ಗಂಭೀರ, ತಾತ್ಸಾರ, ಮಾತ್ಸರ್ಯ,..... ಎಲ್ಲಾ ತರಹದ ರಸಗಳು. ನವರಸಪೂರ್ಣವಾಗಿದೆ ಜೀವನ. ನವರಸಭರಿತ ಭಾವನೆಗಳು! ಏನೂ ಮಾಡಬೇಕಿಲ್ಲ, ಸುಮ್ಮನೆ ಗುರುತಿಸಿ. ಇವತ್ತು ಅಪ್ಪ ಗಂಭೀರರಸ, ಅಮ್ಮ ಹಾಸ್ಯರಸ, ತಮ್ಮ ಮಾತ್ಸರ್ಯರಸ, ಯಜಮಾನರು ಶೃಂಗಾರರಸ ಅಂತ ಲೇಬಲ್ ಹಚ್ಚಿ. ನೀವು ಹೀಗೇ ನಗ್ತಾ ಇರ್ತೀರ. ಆಗ ನೀವು ಹಾಸ್ಯರಸಕ್ಕೆ ಬರುತ್ತೀರ!
"ರಂಗೋಂತರಾತ್ಮ, ನರ್ತಕಃ ಆತ್ಮ".

* * * * *

ಬೀಜಾವಧಾನ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೨.೦೭.೨೦೦೩ರಂದು ಪ್ರಕಟವಾಗಿತ್ತು)

ಇಂದಿನ ಸೂತ್ರ "ಬೀಜಾವಧಾನ" - ಅಂದರೆ ಬೀಜವನ್ನು ಧಾರಣೆ ಮಾಡಿಕೋ ಎಂದು.
ಒಂದು ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತುತ್ತೀವಿ. ಅದರ ಜೊತೆಗೆ ಬೇಡದಿದ್ದ ಕಳೆ, ಕುರುಚಲು ಗಿಡ ಬಿತ್ತದಿದ್ದರೂ ತನ್ನಷ್ಟಕ್ಕೆ ತಾನೇ ಬೆಳೆದುಕೊಳ್ಳುತ್ತದೆ. ತೋಟಗಾರರು, ವ್ಯವಸಾಯ ಮಾಡುವವರು ಏನು ಮಾಡ್ತಾರೆ? ಕಳೆ, ಕುರುಚಲು ಗಿಡ ಎಲ್ಲವನ್ನೂ ಕಿತ್ತುಹಾಕ್ತಾರೆ, ಆಗ ಫಸಲು ಚೆನ್ನಾಗಿ ಬರುತ್ತೆ. ಇದೇ ರೀತಿಯಲ್ಲಿ ನಮ್ಮಲ್ಲಿಯೂ ಹಲವಾರು ತರಹದ ಬೀಜಗಳಿವೆ. ಸಂತೋಷದ ಬೀಜ ಇದೆ, ಅಸಂತೋಷದ ಬೀಜ ಇದೆ, ಸುಖದ ಬೀಜ ಇದೆ, ದುಃಖದ ಬೀಜ ಇದೆ, ತೃಪ್ತಿಯ ಬೀಜ ಇದೆ, ಅತೃಪ್ತಿಯ ಬೀಜ ಇದೆ.
’ಬೀಜಾವಧಾನ’ ಎಂದರೆ ಬೀಜವನ್ನು ನೋಡು, ಧಾರಣೆ ಮಾಡಿಕೋ, ಯಾವುದಾದರೂ ಕುರುಚಲು ಬೀಜ ಇದ್ದರೆ ಅದನ್ನು ಕಿತ್ತುಹಾಕು. ಶಿವತತ್ವದ ಬೀಜ, ಶಾಂತ ತತ್ವದ ಬೀಜ, ಪ್ರಸನ್ನ ತತ್ವದ ಬೀಜ, ಪ್ರೇಮದ ಬೀಜವನ್ನು ಗುರುತಿಸು. ಅದು ಚೆನ್ನಾಗಿ ಬೆಳೆಯದೇ ಇದ್ದರೆ, ಚೆನ್ನಾಗಿ ನೀರು ಹಾಕಿ ಬೆಳೆಸು. ಅದಕ್ಕೆ ಬೇಕಾಗಿರುವ ಸಾಧನೆಗಳನ್ನು ಮಾಡು, ಸೇವೆ, ಸತ್ಸಂಗಗಳನ್ನು ಮಾಡು.
’ಆನಂದಮಯೇಭ್ಯಾಸ’ - ಎಂದರೆ ಆನಂದವಾಗಿರುವುದನ್ನು, ಪ್ರಸನ್ನವಾಗಿರುವುದನ್ನು ಅಭ್ಯಾಸ ಮಾಡಿಕೋ. ಆನಂದ, ಕರುಣೆ, ಪ್ರೀತಿ, ಉದಾರತೆ ಮುಂತಾದ ಎಲ್ಲಾ ದೈವಿಕ ಗುಣಗಳೂ ನಿನ್ನಲ್ಲಿಯೇ ಇವೆ, ಬೀಜರೂಪದಲ್ಲಿ. ಅದನ್ನು ಗುರುತಿಸು, ಪೋಷಣೆ ಮಾಡು.

* * * * *

ಧ್ಯಾನಾನಂದದಲ್ಲಿ ಮಗ್ನವಾಗು
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೩.೦೭.೨೦೦೩ರಂದು ಪ್ರಕಟವಾಗಿತ್ತು)

’ಆಸನಸ್ಥ ಸುಖಂ, ಹೃದೇ ನಿಮಚ್ಚತಿ’ - ಇದು ಮುಂದಿನ ಸೂತ್ರ.
ಆಸನದಲ್ಲಿ ಕುಳಿತುಕೊಂಡು ಹೃದಯದಲ್ಲಿರತಕ್ಕಂಥ ಸುಖದಲ್ಲಿ ಮಗ್ನನಾಗು. ಸುಖ ಸಿಕ್ಕಾಗ ನಾವು ಚಟುವಟಿಕೆಯಲ್ಲಿದ್ದರೆ ಸುಖದ ಅನುಭವ ಆಗುವುದಿಲ್ಲ. ಸುಖದ ಜೊತೆ ವಿಶ್ರಾಂತಿ ಆದರೆ ಮಾತ್ರ ಸುಖದ ಅನುಭವ ಉಂಟಾಗುವುದು. ಇಲ್ಲದಿದ್ದರೆ ಬರೀ ಸುಖದ ಇಚ್ಛೆಯಲ್ಲೇ ನಾವು ಜೀವನವನ್ನು ಕಳೆದುಬಿಡ್ತೀವಿ. ಸುಖ ಬಂತು, ಅನುಭವಿಸುವುದೇ ಇಲ್ಲ! ಸುಖ ಅನುಭವಿಸದೇ ಇದ್ದರೆ ತೃಪ್ತಿ ಇಲ್ಲ ಜೀವನದಲ್ಲಿ. ಅದಕ್ಕೇ ಸುಖವಾಗಿರತಕ್ಕಂಥ ಯಾವುದೇ ಆಸನದಲ್ಲಿ, ವಿಶ್ರಾಂತಿಯಲ್ಲಿರತಕ್ಕಂಥ ಒಂದು ಸ್ಥಾನದಲ್ಲಿ ಕುಳಿತುಕೊಂಡು ಧ್ಯಾನದಲ್ಲಿ ಮೈಮರೆಯುವುದನ್ನು ಕಲಿ. ಮಹಾದೇವಿ ಅಕ್ಕನವರ ವಚನ ಕೇಳಿದ್ದೀರಲ್ಲ... "ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು..". ತನು ಕರಗೋದು ಅಂದರೇನು? ನಾವು ಸುಖವಾಗಿದ್ದಾಗ ಶರೀರದ ಪರಿವೆಯೇ ಇರುವುದಿಲ್ಲ. ನೀವು ತಲ್ಲೀನತೆಯಿಂದ ಸಿನಿಮಾ ನೋಡುತ್ತಿರುವಾಗ ನಿಮಗೆ ಮೈ ಕೈ ನೋವು ಏನೂ ಗೊತ್ತೇ ಆಗಿರುವುದಿಲ್ಲ. ಸಿನಿಮಾ ಮುಗಿದು ಎದ್ದಾಗ ಕಾಲು ಜೋಮು ಹಿಡಿದಿರುವುದು ಗೊತ್ತಾಗುತ್ತೆ. ಮೂರು ಘಂಟೆ ಕಾಲ ಥಿಯೇಟರಿನಲ್ಲಿ ಕೂತಿದ್ದು, ಸಿನಿಮಾ ಮುಗಿದ ಮೇಲೇ ಕಾಲು ನೋವು ಗೊತ್ತಾಗುವುದು. ಯಾರಿಗಾದರೂ ರುಮಾಟಿಕ್ (ಸಂಧಿವಾತ) ನೋವು ಇದ್ದರೂ, ಸಿನಿಮಾ ತುಂಬಾ ಮಗ್ನರಾಗಿ ನೋಡ್ತಾ ಇದ್ದಾಗ ಏನೂ ಗೊತ್ತಾಗಿರುವುದಿಲ್ಲ, ಮೈಮರೆತಿರುತ್ತದೆ. ’ತನು ಕರಗುವುದು’ ಅಂದರೆ ಅದೇನೇ.
ಸುಖದ ಇಚ್ಛೆ ಏಕಿದೆ ಅಂದರೆ, ನಮಗೆ ’ನಮ್ಮ ಸ್ವಭಾವ’ದಲ್ಲಿ ಮಗ್ನರಾಗುವ ಇಚ್ಛೆ ಇದೆ. ಅದಕ್ಕೇ ಸುಖದ ಇಚ್ಛೆ ಬರುತ್ತೆ. ಸ್ವಭಾವದಲ್ಲಿ ಮಗ್ನರಾದವರಿಗೆ ಸುಖದ ಇಚ್ಛೆ ಬರುವುದಿಲ್ಲ. "ನಾನೇ ಸುಖ ಸ್ವರೂಪ" ಅನ್ನುವ ಅನುಭವ ಬರುತ್ತದೆ.

* * * * *

ಸುಖ ಅಂತರಂಗದಲ್ಲೇ ಇದೆ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೪.೦೭.೨೦೦೩ರಂದು ಪ್ರಕಟವಾಗಿತ್ತು)

"ಆಸನಸ್ಥ ಸುಖಂ, ಹೃದೇ ನಿಮಚ್ಚತಿ"
ಆಸನದಲ್ಲಿ ಕುಳಿತುಕೊಂಡಾಗ ಸುಖವನ್ನು ಅನುಭವಿಸುವವರು, ಎಲ್ಲಿ ಕಾಣುತ್ತಾರೆ ಸುಖವನ್ನು ಎಂದರೆ ತಮ್ಮ ’ಹೃದಯ’ದಲ್ಲಿ, ’ಚಿತ್ತ ಸರೋವರದಲ್ಲಿ’ ಸುಖ ಕಾಣುತ್ತಾರೆ. ಸುಖದ ಅನುಭವ, ಸುಖದ ಸ್ನಾನ ಉಂಟಾಗುತ್ತದೆ. ಸುಖ ಹೊರಗಿನಿಂದ ಬಂದಂತೆನಿಸಿದರೂ ಕೂಡ ಅದು ನಮ್ಮ ಒಳಗಿನಿಂದಲೇ ಬರುತ್ತಾ ಇದೆ. ಹೊರಗಿನದು ಕೇವಲ ನಿಮಿತ್ತ ಮಾತ್ರ ಅಷ್ಟೆ. ’ಇದರಿಂದ ಸುಖ ಸಿಕ್ಕಿತು, ಅದರಿಂದ ಸುಖ ಸಿಕ್ಕಿತು’ ಅಂತ ಅಂದುಕೊಳ್ತೀವಿ. ಆದರೆ ನಿಜವಾಗಲೂ ಸುಖ ಉಂಟಾಗಿರುವುದು ನಮ್ಮಿಂದಲೇ, ನಮ್ಮ ಹೃದಯದಿಂದಲೇ. ಆ ಹೃದಯದಲ್ಲಿ, ಆಸನದಲ್ಲಿ ಕುಳಿತುಕೊಂಡಾಗ ಉಂಟಾಗುವುದೇ ಸುಖ!
ಬೆಂಗಳೂರಿನಲ್ಲಿರುವವರಿಗೆ ಹಿಮಾಲಯಕ್ಕೆ, ಕಾಶ್ಮೀರಕ್ಕೆ ಹೋಗಬೇಕು ಅಂತ ಆಸೆ ಇರುತ್ತೆ. ’ಓ! ಆ ಮಂಜಿನ ಪರ್ವತಗಳು, ಹಿಮಪರ್ವತಗಳು ಎಷ್ಟು ಸುಂದರ! ಹೋಗಿ ಅಲ್ಲಿಯೇ ಇರಬೇಕು’ ಎನ್ನುವ ಕನಸು ಕಾಣೋದು! ಆದರೆ ಅಲ್ಲಿಯೇ ಇರುವವರಿಗೆ ’ಸಾಕಪ್ಪಾ ಸಾಕು! ಬೊಂಬಾಯಿಗೆ ಹೋಗೋಣ’ ಅನಿಸಿರುತ್ತೆ. ನಾವು ಇಲ್ಲಿರುವ ಊಟಿಗೆ ಹೋಗ್ತೀವಿ. ಊಟಿಯಲ್ಲಿರುವವರಿಗೆಲ್ಲ ಸುಖ ಇರುತ್ತೋ? ಛಳಿಯಲ್ಲಿ ಒದ್ದಾಡ್ತಾ, ಏನೋ ಇರಬೇಕಲ್ಲ ಅಂತ ಇರ್ತಾರೆ. ಅವರು ಅನ್ನುತ್ತಾರೆ ಬೆಂಗಳೂರೇ ಪರವಾಗಿಲ್ಲ ಅಂತ!
ಪರಿವರ್ತನೆಯಲ್ಲಿ ಸುಖದ ಅನುಭವ ಆಗುತ್ತೆ. ಆಗ ಮನಸ್ಸು ಒಂದು ವಸ್ತುವನ್ನು ಬಿಟ್ಟು ಬೇರೆ ವಸ್ತುವಿಗೆ ಹೋಗುತ್ತದೆ. ಒಂದು ವಸ್ತುವನ್ನು ಬಿಟ್ಟುಬಿಡ್ತು. ಇನ್ನೊಂದನ್ನು ಇನ್ನೂ ಪೂರ್ಣವಾಗಿ ಹಿಡಿದುಕೊಂಡಿಲ್ಲ.... ಈ ಮಧ್ಯದ ಒಂದು ಅವಧಿ ಇದೆಯಲ್ಲ, ಅಲ್ಲಿ ಸುಖದ ಅನುಭವ ಉಂಟಾಗುತ್ತದೆ. ಸ್ವಲ್ಪ ಸಮಯ ಆದ ಮೇಲೆ ಆ ಬೇರೆಯ ಅನುಭವಕ್ಕೂ ಮನಸ್ಸು ಒಗ್ಗಿಹೋಗಿಬಿಟ್ಟರೆ ಅಲ್ಲಿಯೂ ಸುಖ ಸಿಗುವುದಿಲ್ಲ. ಯಾವುದೇ ಸುಖವೂ ಹೀಗೆಯೇ ಏಕೆ? ಎರಡು ವಸ್ತುಗಳ ಮಧ್ಯದಲ್ಲಿ ಮನಸ್ಸು ತನ್ನಲ್ಲಿ ತಾನು ನಿಮಗ್ನವಾಗಿರುತ್ತೆ. ನೀವು ಕುಳಿತುಕೊಂಡು ಅನುಭವಿಸಿ ಒಂದು ಸಲ.

* * * * *

ಸುಖ ಸಂಪೂರ್ಣ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೫.೦೭.೨೦೦೩ರಂದು ಪ್ರಕಟವಾಗಿತ್ತು)

"ಆಸನಸ್ಥ ಸುಖಂ, ಹೃದೇ ನಿಮಚ್ಚತಿ"
ಧ್ಯಾನದಲ್ಲಿ ಕುಳಿತು ಹೃದಯದಲ್ಲಿ ಸುಖವನ್ನು ಕಂಡುಕೊಳ್ಳಿ. ಯಾವುದೇ ವಿಷಯ ವಸ್ತುವಿನಿಂದಾಗಲೀ, ಯಾವುದೇ ವಿಚಾರದಿಂದಾಗಲೀ ಮನಸ್ಸನ್ನು ನಿಬಂಧಿಸಬಹುದು. ಈ ಆತ್ಮಜ್ಞಾನದಲ್ಲಿ ಅದು ಮುಖ್ಯವಾದುದು. ನಿಮಗೆ ಪ್ರಿಯವಾದ ಒಂದು ವಸ್ತುವನ್ನು ಇಟ್ಟುಕೊಂಡು ಅದರ ಬಗ್ಗೆಯೇ ಚಿಂತನೆ ಮಾಡಿ. ಹಾಗೆ ಚಿಂತನೆ ಮಾಡಿದಾಗ ಚಿಂತೆ ಬಿಟ್ಟುಹೋಗುತ್ತೆ, ವಸ್ತು ಬಿಟ್ಟುಹೋಗುತ್ತೆ, ಮನಸ್ಸು ಶಾಂತವಾಗುತ್ತದೆ. ಹೃದಯದಲ್ಲಿ ಬರೀ ಒಂದು ತರಂಗ ಉಂಟಾಗುತ್ತೆ. ನೀವು ಜೀವನದಲ್ಲಿ ಪ್ರೇಮವನ್ನೋ, ಒಂದು ಸುಖವನ್ನೋ ಅನುಭವಿಸಿದಾಗ ಏನಾಗುತ್ತೆ? ಗಮನಿಸಿದೀರಾ? ಮೈಯೆಲ್ಲಾ ತರಂಗ ಉಂಟಾಗುತ್ತೆ, ಕಂಪನ ಉಂಟಾಗುತ್ತೆ. ಇಡೀ ಮೈಯೆಲ್ಲಾ ಒಂದು ಥರ ’ಝುಂ’ ಅನ್ನುತ್ತೆ. ನಾವೇನು ಮಾಡಿಬಿಡ್ತೀವಿ, ಆ ಸಂವೇದನೆಯನ್ನು ಗಮನಿಸದೆ ವಸ್ತುವನ್ನು ಹಿಡಿದುಕೊಳ್ತೀವಿ. ಆ ವಸ್ತುವನ್ನು ಹಿಡಿದುಕೊಂಡು ಕುಳಿತಾಗ ದುಃಖ ಬರುತ್ತೆ, ಆ ಸಂವೇದನೆ ಹೋಗಿಬಿಡುತ್ತೆ. ಇಲ್ಲೇನು ಹೇಳ್ತಾರೆ... ಆ ಸಂವೇದನೆಯನ್ನು ಗಮನಿಸು. ಆ ಸಂವೇದನೆಯನ್ನು ಗಮನಿಸಿದಾಗ ಆ ಬೀಜ ಚೆನ್ನಾಗಿ ಬೆಳೆಯುತ್ತೆ. ಆಗ ನೀನು ಏನೇ ಮಾಡಿದರೂ ಸುಖಪೂರ್ವಕವಾಗಿ ಮಾಡ್ತೀಯ. ಕುಳಿತುಕೊಂಡರೂ, ನಡೆದರೂ, ನಕ್ಕರೂ, ಸ್ನಾನ ಮಾಡಿದರೂ, ಊಟ ಮಾಡಿದರೂ ಸುಖಪೂರ್ವಕವಾಗಿರುತ್ತೆ. ಏನೇನು ಮಾಡ್ತಾ ಇದ್ದರೂ ಆ ಸುಖ ನಿನ್ನನ್ನು ಬಿಟ್ಟುಹೋಗುವುದಿಲ್ಲ. ಈ ಜೀವನದ ಪರಾಕಾಷ್ಠೆ ಅದೇ "ಶಿವತತ್ವ". "ಸುಖಸಂಪೂರ್ಣನಿದ್ದಾನೆ.... " ಆ ಹಾಡಿದೆಯಲ್ಲ, ಸತ್ಸಂಗದಲ್ಲಿ ಹಾಡುತ್ತೀವಲ್ಲ! ಆ ಸಂಪೂರ್ಣ ಸುಖದ ಅನುಭವ ಉಂಟಾಗುತ್ತದೆ.

* * * * *

ಪ್ರಾರಬ್ಧ ಪುರುಷಾರ್ಥ
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೬.೦೭.೨೦೦೩ರಂದು ಪ್ರಕಟವಾಗಿತ್ತು)

’ಸ್ವಮಾತ್ರಾ ನಿರ್ಮಾಣಮಾಪಾದಯತಿ’
ಪ್ರತಿಯೊಬ್ಬರೂ ಅವರವರ ಸುಖವನ್ನು ಹೆಚ್ಚು ಮಾಡಿಕೊಳ್ಳುವುದಕ್ಕೂ ಕಮ್ಮಿ ಮಾಡಿಕೊಳ್ಳುವುದಕ್ಕೂ ಅವರವರೇ ಕಾರಣ. ಅವರು ಎಷ್ಟು ಆತ್ಮಸ್ಥರಾಗಿರುತ್ತಾರೋ, ಆ ಆತ್ಮನಲ್ಲಿ ಲೀನವಾಗಿರುತ್ತಾರೋ ಅಷ್ಟು ಜೀವನದಲ್ಲಿ ಸುಖ ಸಿಗುತ್ತೆ. ಇಲ್ಲದಿದ್ದರೆ ಸುಖವಾಗಿರತಕ್ಕಂಥ ಪರಿಸ್ಥಿತಿಯಲ್ಲಿಯೂ ಸಹ ದುಃಖವನ್ನು ಕಲ್ಪನೆ ಮಾಡಿಕೊಳ್ಳಲು ಸಾಧ್ಯ. ನಾವೇ ನಮ್ಮ ಚೇತನವನ್ನು ವೃದ್ಧಿ ಮಾಡಿಕೊಳ್ಳಬೇಕು. ನಾವೇನು ಹೇಳ್ತೀವಿ ’ದೇವರಿಗೇ ಬಿಟ್ಟು ಬಿಟ್ಟಿದೀನಪ್ಪ, ದೇವರ ಇಚ್ಛೆ ಇದ್ದರೆ, ಬೇಕಾದರೆ, ಅವನೇ ಕರೆಸಿಕೋತಾನೆ’ - ಅನ್ನುತ್ತೇವೆ. ಅದೇ ಬಟ್ಟೆ ಅಂಗಡಿಗೆ ಹೋಗಬೇಕಾದರೆ, ಒಡವೆ ಮಾಡಿಸಿಕೋಬೇಕಾದರೆ ಹಾಗೆಂದು ಹೇಳೋದಿಲ್ಲ! ಬೇರೆ ಏನಾದರೂ ನಮಗೆ ಬೇಕಾಗಿರುವ ಕೆಲಸ ಮಾಡಬೇಕಾದರೆ ಪ್ರಯತ್ನಪಡ್ತೀವಿ, ಪುರುಷಾರ್ಥ ಮಾಡ್ತೀವಿ. ದಿನಾ ಹಗಲೂ ರಾತ್ರಿ ದುಡೀತೀವಿ. ಬೇರೆ ಏನಾದರೂ ಧ್ಯಾನ, ಸತ್ಸಂಗ, ಆಧ್ಯಾತ್ಮಿಕ ಸಾಧನೆ ಮಾಡಬೇಕಾದರೆ ’ದೇವರ ಇಚ್ಛೆ ಇದ್ದರೆ ಆಗುತ್ತೆ’ ಅನ್ನುತ್ತೀವಿ.
ಪ್ರಪಂಚದಲ್ಲಿ ಮಾಡುವ ಎಲ್ಲಾ ಕೆಲಸಕ್ಕೂ ನಾವು ಪುರುಷಾರ್ಥವನ್ನು ಉಪಯೋಗಿಸುತ್ತೀವಿ. ಧರ್ಮ, ಅರ್ಥ, ಕಾಮ ಎಲ್ಲವನ್ನೂ ಉಪಯೋಗಿಸುತ್ತೀವಿ. ಧರ್ಮಾನೂ ಗಮನಿಸೋದಿಲ್ಲ ನಮಗೆ ಬೇಕಾದಾಗ!! ಒಂದು ಮದುವೆ ಮಾಡಬೇಕಾದರೆ ಅಥವಾ ಇನ್ನೇನಾದರೂ ಮಾಡಬೇಕಿದ್ದರೆ ಇರೋ ದುಡ್ಡೆಲ್ಲಾ ಹಾಕಿ ಖರ್ಚು ಮಾಡ್ತೀವಿ. ಆದರೆ, ಒಂದು ಐದು ದಿನ, ಮೂರು ದಿನ ರಜೆ ತೆಗೆದುಕೊಂಡು ಧ್ಯಾನದ ಶಿಬಿರದಲ್ಲಿ ಕುಳಿತುಕೊಳ್ಳಬೇಕಿದ್ದರೆ ’ಅಯ್ಯೋ ಐದು ದಿನ ರಜಾ ಹೇಗೆ ತೆಗೆದುಕೊಳ್ಳೋದು, ರಜಾ ಹಾಕಿ ಮಾಡೋದಾದ್ರೂ ಏನು? ದೇವರಿಗೆ ಇಷ್ಟ ಇದ್ರೆ ಆಮೇಲೆ ಯಾವಾಗಲೋ ರಿಟೈರ್ (ನಿವೃತ್ತಿ) ಆದ ಮೇಲೆ ನಮಗೆ ಕೂತಿದ್ದಲ್ಲೇ ಧ್ಯಾನ ಬರಿಸ್ ಬಿಡ್ತಾನೆ’ ಅನ್ನುತ್ತೀವಿ. ಕೂತಿದ್ದಲ್ಲೇ ಆಗಿಬಿಡಬೇಕು ನಮಗೆ! ಸಾಧನೆಗೆ, ಮೋಕ್ಷಕ್ಕೆ ನಾವೇನು ಮಾಡ್ತೀವಿ? ’ನನ್ನ ಹಣೆಬರಹ ಇಷ್ಟೆ. ಸತ್ಸಂಗಕ್ಕೆ ಹೋಗಬೇಕು ಅಂತ ಬರೆದಿದ್ದರೆ ತನ್ನಷ್ಟಕ್ಕೇ ಆಗುತ್ತೆ’. ಅದನ್ನು ಪ್ರಾರಬ್ಧದ ಮೇಲೆ ಬಿಡ್ತೀವಿ.

* * * * *

ನಾವೆ ಹೊಣೆ ಎಲ್ಲಕು...
(ಈ ಬರಹವು ’ವಿಜಯ ಕರ್ನಾಟಕ’ ದಿನಪತ್ರಿಕೆಯಲ್ಲಿ ದಿ. ೦೭.೦೭.೨೦೦೩ರಂದು ಪ್ರಕಟವಾಗಿತ್ತು)

ಜೀವನದಲ್ಲಿ ನಮಗೆ ಎಷ್ಟು ಪ್ರಶಂಸೆ, ಎಷ್ಟು ಯಶಸ್ಸು ಸಿಗಬೇಕೋ, ಎಷ್ಟು ಧನ ಸಿಗಬೇಕೋ ಇವೆಲ್ಲಾ ನಮ್ಮ ಪ್ರಾರಬ್ಧದಿಂದ ಸಿಗುತ್ತೆ. ಪ್ರಾರಬ್ಧದಿಂದ ಮಾಯೆ ಸಿಗುತ್ತೆ. ಪುರುಷಾರ್ಥದಿಂದ ಜೀವನದಲ್ಲಿ ಸುಖ, ಸಂತೋಷ ಹೆಚ್ಚಾಗುತ್ತದೆ. ನಾವು ಸುಖ, ಸಂತೋಷವನ್ನು ಪ್ರಾರಬ್ಧಕ್ಕೆ ಬಿಟ್ಟುಬಿಟ್ಟು ಮಾಯೆಗೋಸ್ಕರ ಪುರುಷಾರ್ಥ ಮಾಡ್ತಾ ಇರುತ್ತೀವಿ. ನಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು.
"ಸ್ವಮಾತ್ರಾ ನಿರ್ಮಾಣಮಾಪಾದಯತಿ" ನಮ್ಮಲ್ಲಿ ಎಷ್ಟು ’ಮಾತ್ರ’ದಲ್ಲಿ ಜೀವನ ಇದೆ, ಎಷ್ಟು ಚೇತನ ಇದೆ, ಇದನ್ನು ನಾವೇ ನಿರ್ಮಾಣ ಮಾಡಿಕೊಳ್ಳುತ್ತೇವೆ. ನಮ್ಮಲ್ಲಿ ಇಷ್ಟು ಜಡತೆ ಇರಲು ಯಾರು ಕಾರಣ? ನಾವೇ ಕಾರಣ!
ದಿನವೆಲ್ಲಾ ಸಿಕ್ಕಾಪಟ್ಟೆ ತಿನ್ನೋದು, ನಂತರ ’ಭಗವಂತ ಧ್ಯಾನ ಕೊಟ್ಟರೆ ಆಗುತ್ತೆ’ ಎಂದರೆ ಹೇಗಾಗುತ್ತೆ? ನಿದ್ದೆ ಬರುತ್ತೆ ಅಷ್ಟೆ! ಚೆನ್ನಾಗಿ, ಎಣ್ಣೇಲಿ ಕರಿದ ಪದಾರ್ಥ ತಿನ್ನುವುದು, ನಂತರ ಯಾವುದರಲ್ಲೂ ಮನಸ್ಸು ಸ್ಥಿರವಾಗಿರಲ್ಲ ಅನ್ನುವುದು! ಇಲ್ಲಾ ವಿಪರೀತ ಖಾರ ತಿನ್ನೋದು... ನಾಲಿಗೆ ಚಪಲ! ಹೊಟ್ಟೆ ಸಾಕಪ್ಪಾ ಸಾಕು ಎನ್ನುತ್ತೆ. ನಾಲಿಗೆ ಬೇಕಪ್ಪಾ ಬೇಕು ಎನ್ನುತ್ತೆ. ಆಹಾರದ ಮೇಲೂ ಒಂದು ದೃಷ್ಟಿ ಇಡಬೇಕು ತಾನೇ? ಆಹಾರದಲ್ಲಿ ಶರೀರ ಹಗುರವಾಗಿರತಕ್ಕಂಥ ಆಹಾರವನ್ನು ನಾವು ಬಳಕೆಗೆ ತಂದರೆ ಮನಸ್ಸು ಹಗುರವಾಗಿರುತ್ತದೆ. ನಮ್ಮ ಮನಸ್ಸು, ಬುದ್ಧಿ, ಚಿತ್ತ, ಶರೀರ ಇವೆಲ್ಲಕ್ಕೂ ಹೊಣೆಗಾರರು ನಾವೇ. ಆಹಾರದಲ್ಲಿ ಸ್ವಲ್ಪ ಮಿತಿ ಇರಲಿ. ನಮ್ಮಲ್ಲಿರುವ ಚಪಲಕ್ಕೆ ಮಿತಿಯೇ ಇಲ್ಲ. ಅದೇ ಕಾಯಿಲೆ! ಕಾಯಿಲೆ ಇನ್ನೇನಿಲ್ಲ ಸ್ವಲ್ಪ ಮೈ ಬಗ್ಗಿಸಿ ನಾಲ್ಕು ಆಸನ ಮಾಡಬೇಕೆಂದರೆ ಬೇಸರಿಕೆಯಾಗಿ ಬಿಡುತ್ತೆ. "ಅಯ್ಯೋ ಬಿಡು, ಏನೋ ಪ್ರಾರಬ್ಧ, ದೇವರಿಟ್ಟ ಹಾಗಾಗುತ್ತೆ, ಆಯುಸ್ಸಿದ್ದಷ್ಟು ದಿನ ಬದುಕಿಕೊಂಡು ಹೋಗ್ತೀವಿ. ಇವೆಲ್ಲಾ ಮಾಡೋರು ಯಾರು? ಕಾಯಿಲೆ ಬಂದಾಗ ನೋಡಿಕೊಳ್ಳೋಣ, ಮಾತ್ರೆ ನುಂಗಿದರಾಯ್ತು!" ನುಂಗೋದು, ಯೋಗಾಸನ ಮಾಡುವುದಕ್ಕಿಂತ ಸುಲಭ ನೋಡಿ! ಈಗಂತೂ ತೂಕ ಕಡಿಮೆ ಮಾಡಿಕೊಳ್ಳಲು ನಾನಾ ಉಪಾಯ ಬಂದಿದೆ ಎಲ್ಲಾ ಕಡೆ. ಕೃತ್ರಿಮ ಉಪಾಯಕ್ಕೆ ನಾವೆಷ್ಟು ಶ್ರಮವಹಿಸುತ್ತೀವಿ! ಸಹಜವಾಗಿ ಜೀವನದಲ್ಲಿ ಉಪಲಬ್ಧವಾಗಿರತಕ್ಕಂಥ ನಮ್ಮ ಚೇತನವನ್ನು ಬೆಳೆಸಿಕೊಳ್ಳುವುದರ ಬಗ್ಗೆ ಧ್ಯಾನ ಕೊಡಬೇಕು, ಗಮನ ಹರಿಸಬೇಕು.