ಮಂಗಳವಾರ, ಮೇ 7, 2013

ವಿಶ್ರಾಂತಿ

ಬೆಂಗಳೂರು, ಭಾರತ
೭ ಮೇ ೨೦೧೩

ಪ್ರ: ದಯವಿಟ್ಟು ಸಮರ್ಪಣೆಯ ಬಗ್ಗೆ ತಿಳಿಸಿ.

ಶ್ರೀ ಶ್ರೀ ರವಿಶಂಕರ್: ಯಾವುದನ್ನು ನೀವು ಸಮರ್ಪಿಸಬೇಕು? ಎಲ್ಲವೂ ದೇವರಿಗೆ ಸಂಬಂಧಿಸಿದುದೇ. ಆದರೆ ಯಾವುದು ನಿಮ್ಮದೆಂದು ನಿಮಗನಿಸುವುದೋ ಆಗ ನಾವು ಹೇಳುವುದು, ‘ಬಿಟ್ಟುಬಿಡಿ’. ನೀವು ಯಾವುದನ್ನಾದರೂ ಗಟ್ಟಿಯಾಗಿ ಹಿಡಿದುಕೊಂಡರೆ, ಆಗ ನಾವೆನ್ನುವುದು, ‘ವಿಶ್ರಮಿಸಿ.’ ವಿಶ್ರಾಮವನ್ನೇ ಸಮರ್ಪಣೆಯೆನ್ನುವುದು; ಮತ್ತೇನೂ ಅಲ್ಲ.

ಯಾವುದಾದರೊಂದು ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಅದನ್ನು ಅರ್ಪಿಸುವುದಕ್ಕೆ ಸಮರ್ಪಣೆಯೆನ್ನುವುದು. ಆಹುತಿಯನ್ನು ಅರ್ಪಿಸಿದಂತೆ. ಆದ್ದರಿಂದ ಯಾವುದಾದರೊಂದು ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ, ಅದನ್ನು ದೇವರಿಗೆ ಆಹುತಿಯಂತೆ ಅರ್ಪಿಸಿಬಿಡಿ.

ಯಾವುದನ್ನು ನೀವು ನಿಭಾಯಿಸಲು ಸಾಧ್ಯವಾಗುತ್ತಿಲ್ಲವೋ, ಯಾವುದು ನಿಮಗೆ ಭಾರವೆನಿಸುತ್ತಿದೆಯೋ, ಯಾವುದನ್ನು ನಿಮ ತಲೆಯ ಮೇಲೆ ಹೊತ್ತಿಕೊಂಡು ಸಾಕಾಗಿದೆಯೋ, ಅಂತಹ ಸಮಸ್ಯೆಯನ್ನು ಕೆಳಗಿಡಿ, ಬಿಟ್ಟುಬಿಡಿ! ಇದನ್ನೇ ಸಮರ್ಪಣೆಯೆನ್ನುವುದು.

ಹಾಗಿಲ್ಲದಿದ್ದರೆ, ಏನಿದೆ ಸಮರ್ಪಿಸಲು? ನಿಮ್ಮ ಶರೀರ ದೇವರಿಗೆ ಸೇರಿದ್ದು. ನಿಮ್ಮ ಮನಸ್ಸೂ ಕೂಡ ದೇವರಿಗೆ ಸೇರಿದ್ದು. ಎಲ್ಲವೂ ಭಗವಂತನಿಗೆ ಸೇರಿದ್ದು. ಆದ್ದರಿಂದ ಬಿಟ್ಟುಬಿಡಿ, ವಿಶ್ರಮಿಸಿ ಮತ್ತು ಮುಗುಳ್ನಗೆಯಿರಲಿ. ಬಿಟ್ಟುಬಿಡುವುದು, ವಿಶ್ರಮಿಸುವುದು ಮತ್ತು ಮುಗುಳ್ನಗುವುದೇ ಸಮರ್ಪಣೆ.

ಬೌದ್ಧ ಧರ್ಮದಲ್ಲಿ, ‘ಬುದ್ಧಂ ಶರಣಂ ಗಚ್ಛಾಮಿ’ ಎನ್ನುತ್ತಾರೆ. ಇದರ ಅರ್ಥ ಯಾವುದನ್ನು ನಿಮಗೆ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೋ, ಹೊರೆಯೆನಿಸುತ್ತಿದೆಯೋ, ಅದನ್ನು ಬುದ್ಧನಿಗೆ ಅಥವಾ ದೇವರಿಗೆ ಅರ್ಪಿಸಿ, ಅಥವಾ ಗುರುಗಳಿಗೆ ಅರ್ಪಿಸಿ ಇಲ್ಲವೇ ನಿಮಗೆ ಯಾರು ಪ್ರಿಯರೋ ಅವರಿಗೆ ಅರ್ಪಿಸಿ. ಇದರಿಂದ ನಿಮಗೆ ಸೇರಿದವರು ಯಾರೋ ಇದ್ದಾರೆ, ಅವರು ನಿಮಗೆ ಪ್ರಿಯರಾಗಿದ್ದರೆ ಮತ್ತು ನೀವು ಅವರಿಗೆ ಪ್ರಿಯರಾಗಿದ್ದೀರ ಎಂಬ ಭಾವನೆ ಬರಲಿ ಎಂಬುದಕ್ಕಾಗಿ.

ನಿಮಗೊಂದು ಉದಾಹರಣೆ ಕೊಡುತ್ತೇನೆ.

ಅಮ್ಮ ಮನೆಯಲ್ಲಿದ್ದಾಳೆಂದು ಮಗುವಿಗೆ ತಿಳಿದರೆ ಬಹಳ ಹಿತವೆನಿಸುತ್ತದೆ. ಎಲ್ಲ ಕಡೆ ಓಡಾಡುತ್ತಾ ಸಂತೋಷದಿಂದ ಆಟವಾಡುತ್ತಿರುತ್ತದೆ. ಆದರೆ ಅಮ್ಮನನ್ನು ಕಾಣದಿದ್ದರೆ, ಎಲ್ಲೋ ಹೊರಗೆ ಹೋಗಿದ್ದಾಳೆಂದು ತಿಳಿದರೆ, ಆ ಮಗು ಎಲ್ಲ ಕಡೆ ಅಮ್ಮನನ್ನು ಹುಡುಕುತ್ತಾ ಅಳಲಾರಂಭಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಅಮ್ಮನಿಲ್ಲದಿದ್ದರೆ ಮಕ್ಕಳಿಗೆ ಬಹಳ ಆನಂದ (ನಗೆ). ಆಗ ಅವರು ಇನ್ನೊಂದಿಷ್ಟು ಚೇಷ್ಟೆ ಮಾಡಬಹುದು. ಹೀಗೆ ನಡೆಯುವುದು ಮಕ್ಕಳು ಸ್ವಲ್ಪ ಬೆಳೆದಾಗ.

ಸಾಮಾನ್ಯವಾಗಿ ಚಿಕ್ಕ ಮಕ್ಕಳು ತಾಯಿಯ ಮೇಲೊಂದು ಕಣ್ಣಿಟ್ಟಿರುತ್ತಾರೆ, ಅಲ್ಲವೇ? ಒಂದು ಕಣ್ಣು ಅಮ್ಮನ ಮೇಲಿರುತ್ತದೆ. ಏಕೆಂದರೆ ಯಾರೋ ನನ್ನ ಬಳಿಯಿದ್ದಾರೆ, ನನಗಾಗಿ ಎಂದು ತಿಳಿದು ಆರಾಮವಾಗಿರುತ್ತದೆ.

ಈಗ ತಂದೆತಾಯಂದಿರು ಮಕ್ಕಳನ್ನು ಟಿವಿ ಮುಂದೆ ಬಿಟ್ಟುಬಿಡುತ್ತಾರೆ (ಅವರಿಗೆ ತೊಂದರೆ ಕೊಡದಿದ್ದ ಹಾಗೆ ಮಕ್ಕಳ ಗಮನವನ್ನು ಬೇರೆ ಕಡೆಗೆ ತಿರುಗಿಸುವುದು). ಇದು ಹಾನಿಕಾರಕ. ಮಕ್ಕಳು ದೂರದರ್ಶನವನ್ನು ನೋಡಬಾರದು ಏಕೆಂದರೆ ಅದರಿಂದ ಮೆದುಳಿಗೆ ಬಹಳ ಶ್ರಮವಾಗುತ್ತದೆ.

ಹೆಚ್ಚಿನ ಸಮಯ ತಂದೆತಾಯಂದಿರು ಮಕ್ಕಳಿಗೆ ದೂರದರ್ಶನದಲ್ಲಿ ಕಾರ್ಟೂನ್ ಶೋಗಳನ್ನು ನೋಡಲು ಬಿಡುತ್ತಾರೆ. ಇದು ಒಳ್ಳೆಯದಲ್ಲ, ಕಾರಣ ಮಕ್ಕಳ ಮನಸ್ಸಿನಲ್ಲಿ ಬಹಳ ಪ್ರಭಾವ ಬೀರುತ್ತದೆ. ಅದರ ಪರಿಣಾಮದಿಂದ ಅವರು ಮಂಕಾಗುತ್ತಾರೆ. ಅನೇಕ ಮಕ್ಕಳಿಗೆ ಎಣಿಸಲು ಬರುವುದಿಲ್ಲ, ಮತ್ತು ಅಟೆನ್ಷನ್ ಡಿಫಿಶಿಯನ್ಸಿ ಸಿಂಡ್ರೋಮ್ ನಂತಹ ಅಸ್ವಸ್ಥತೆಯಿಂದ ಬಳಲುತ್ತಾರೆ. ಇಂದು ಅಮೇರಿಕಾದಲ್ಲಿ ಇದು ಸಾಮಾನ್ಯವಾಗಿಬಿಟ್ಟಿದೆ.

ಪ್ರ: ಪ್ರಾಣ ಎಂದರೇನು? ಅದು ಉಸಿರಾಟಕ್ಕಿಂತ ಸೂಕ್ಷ್ಮವೆಂದು ಮಾತ್ರ ನನಗೆ ಗೊತ್ತು. ಈ ಕ್ಷೇತ್ರದಲ್ಲಿ ವೈಜ್ಞಾನಿಕ ಸಂಶೋಧನೆಯಾಗಿದೆಯೇ? ವಿಜ್ಞಾನವೂ ಒಪ್ಪಿಕೊಳ್ಳುವಂತಹ ನಮ್ಮ ಜೀವನದ ಇತರ ಆಯಾಮಗಳಿವೆಯೇ?

ಶ್ರೀ ಶ್ರೀ ರವಿಶಂಕರ್: ಹೌದು.

ಇತ್ತೀಚೆಗೆ ಒಬ್ಬ ನ್ಯೂರಾಲಜಿಸ್ಟ್ ಬರೆದಿರುವಂತಹ ‘ದ ಪ್ರೂಫ್ ಆಫ್ ಹೆವನ್’ ಎಂಬ ಪುಸ್ತಕವನ್ನು ಓದುತ್ತಿದ್ದೆ. ಅವನು ಕೋಮಾ ಸ್ಥಿತಿಗೆ ಹೋದಾಗ ಅವನಿಗಾದಂತಹ ಅನುಭವಗಳನ್ನು ಹಂಚಿಕೊಂಡಿದ್ದಾನೆ. ವೈದ್ಯಕೀಯವಾಗಿ ಅವನು ಮರಣ ಹೊಂದಿದನು ಮತ್ತು ಶರೀರದಾಚೆಯ ಅನುಭವವಾಯಿತು. ಆ ಅನುಭವವನ್ನು ಬರೆದಿದ್ದಾನೆ. ಇದನ್ನೇ ನಿಖರವಾಗಿ ನಾವೂ ಸಹ ಹೇಳುತ್ತಿರುವುದು.

ಅವನೊಂದು ದೊಡ್ಡ ಬೆಳಕನ್ನು ಕಂಡನು. ಆ ಬೆಳಕಿನ ಹೆಸರು ಓಂ. ಭಾರತದ ಆಧ್ಯಾತ್ಮದ ಬಗ್ಗೆ ಏನೂ ತಿಳಿಯದಿದ್ದರೂ, ತನ್ನ ಸ್ವಂತ ಅನುಭವದಿಂದ ಅದನ್ನು ಓಂ ಎಂದನು. ಅದು ಬಹಳ ಶಾಂತಿದಾಯಕ ಮತ್ತು ಪ್ರಿಯವಾದುದು.

‘ಊರ್ಧ್ವ-ಮೂಲಂ ಅಧಃ-ಸಖಂ’ ಎಂದು ಗೀತೆಯಲ್ಲಿ ಹೇಳಿರುವಂತೆ ಬೇರುಗಳು ಮೇಲಿದೆ ಮತ್ತು ಕೊಂಬೆಗಳು ಕೆಳಗಿವೆಯೆಂದು ವರ್ಣಿಸಿದ್ದಾನೆ (ನಿಮ್ಮ ಹುಟ್ಟು ದಿವ್ಯತೆಯಿಂದ, ಚೈತನ್ಯದಿಂದ ಎನ್ನುವುದನ್ನು ಸೂಚಿಸುವುದು. ಅದೇ ನಿಮ್ಮ ಬೇರುಗಳು)

ಬೇರುಗಳೊಳಗೆ ಹೋಗಿ, ಅವುಗಳಿಂದಾಚೆಗೆ ಅಂಧಕಾರದ ಆಕಾಶವನ್ನು ಪ್ರವೇಶಿಸಿ, ನಂತರ ಅಂಧಕಾರದ ಆಕಾಶದಿಂದಾಚೆಗೆ ಹಿರಣ್ಯಗರ್ಭದೊಳಗೆ (ವಿಶ್ವದ ಸೃಷ್ಟಿಗೆ ಉಗಮ ಅಥವಾ ಭಾರತದ ಸಿದ್ಧಾಂತದಲ್ಲಿ ಪ್ರಕಟಿತವಾದ ಜಗತ್ತು) ಹೋಗಿದ್ದಾನೆ. ಇದನ್ನು ಉಪನಿಷತ್ತಿನಲ್ಲಿ ಚಿನ್ನದ ತತ್ತಿ, ಹೊಳೆಯುವ ಚಿನ್ನದ ಅಂಡಾಶಯ ಎಂದು ತಿಳಿಸಿದ್ದಾರೆ.

ಈ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆ ಹೇಳಿರುವುದನ್ನೇ, ಸಾವನ್ನು ಸಮೀಪಿಸಿ ಮರಳಿ ಬಂದವರು ಅನುಭವಿಸಿರುವುದು. ಇದು ಬಹಳ ಕುತೂಹಲಕರವಾದ ವಿಷಯ.

ಆ ಗ್ರಂಥಕರ್ತ ನಾಸ್ತಿಕ; ಯಾವ ಧರ್ಮವನ್ನೂ ನಂಬಿದವನಲ್ಲ. ಅವನೊಬ್ಬ ಅಪ್ಪಟ ವಿಜ್ಞಾನಿ. ಪುಸ್ತಕದಲ್ಲಿ, ತನ್ನ ಅನುಭವದಿಂದ, ನಾವು ನೋಡುತ್ತಿರುವ ಲೋಕಕ್ಕಿಂತ ಪರಲೋಕವು ಎಷ್ಟು ನಿಜವೆಂದು ತಿಳಿಸಿದ್ದಾನೆ.

ಇದನ್ನೇ ನಾವು ದರ್ಶನಗಳಲ್ಲಿ ಕೇಳಿರುವುದು (ಹಿಂದೂ ಸಿದ್ಧಾಂತವನ್ನು ಸಾಂಪ್ರದಾಯಿಕವಾಗಿ ಆರು ದರ್ಶನಗಳನ್ನಾಗಿ  ವಿಭಾಗಿಸಲಾಗಿದೆ. ಅವು ವೇದಗಳನ್ನು ಸರ್ವೋತ್ಕೃಷ್ಟವಾದ ಸಾಕ್ಷಾತ್ಕಾರ ಗ್ರಂಥಗಳೆಂದು ಒಪ್ಪಿವೆ).

ನೋಡಿ, ಪಂಚೇಂದ್ರಿಯಗಳಿಂದ ಪಡೆಯುವ ಜ್ಞಾನವು ಬೌದ್ಧಿಕ ಜ್ಞಾನಕ್ಕಿಂತ ಕೆಳಮಟ್ಟದ್ದು. ಸೂರ್ಯ ಮುಳುಗುವುದು ಮತ್ತು ಉದಯಿಸುವುದ್ನ್ನು ನೋಡುತ್ತೀರ, ಆದರೆ ಬುದ್ಧಿಯಿಂದ ನಿಮಗೆ ತಿಳಿದಿದೆ ಸೂರ್ಯ ಮುಳುಗುವುದೂ ಇಲ್ಲ, ಉದಯಿಸುವುದೂ ಇಲ್ಲ.

ಹೀಗೆ ಪಂಚೇಂದ್ರಿಯಗಳಿಂದ ಪಡೆಯುವ ಜ್ಞಾನವು ಬೌದ್ಧಿಕ ಜ್ಞಾನಕ್ಕಿಂತ ಕೆಳಮಟ್ಟದ್ದು. ಆದರೆ ಬುದ್ಧಿಗಿಂತ ಯಾವುದೋ ಒಂದು ಜ್ಞಾನ ಅತೀತವಾಗಿದೆ; ಅದು ಅಂತಃಸ್ಫುರಣ, ಶುದ್ಧ ಚೈತನ್ಯದಿಂದ ಉದಯಿಸುವ ಜ್ಞಾನ, ಬೌದ್ಧಿಕ ಜ್ಞಾನಕ್ಕಿಂತ ಉನ್ನತವಾದುದು.

ಬೌದ್ಧಿಕ ಜ್ಞಾನವನ್ನು ಸಾಬೀತುಪಡಿಸಬಹುದು ಮತ್ತು ಅಲ್ಲಗಳೆಯಬಹುದು, ಆದರೆ ಬೌದ್ಧಿಕ ಲೆಕ್ಕಾಚಾರಕ್ಕಿಂತ ಅತೀತವಾದುದರ ಸಂಶೋಧನೆ ಭಿನ್ನವಾದುದು.

ಪ್ರ: ಪ್ರೀತಿಯ ಗುರೂಜೀ, ಜ್ಞಾನಪತ್ರವೊಂದರಲ್ಲಿ, ಗುರು ಒಬ್ಬ ವ್ಯಕ್ತಿಯಲ್ಲ, ಸಾನಿಧ್ಯ ಎಂದು ಹೇಳಿದ್ದೀರ. ನನ್ನ ಗುರುವನ್ನು ಸಾನಿಧ್ಯ, ವ್ಯಕ್ತಿಯಲ್ಲ ಎಂದು ಹೇಗೆ ಕಾಣುವುದು?

ಶ್ರೀ ಶ್ರೀ ರವಿಶಂಕರ್: ಪ್ರತಿಯೊಬ್ಬ ಮನುಷ್ಯನು ದೇಹಾನೋ ಅಥವಾ ಮನಸ್ಸೋ? ದೇಹವಾಗಿದ್ದರೆ, ಆತ್ಮ ನಿರ್ಗಮಿಸಿದಾಗ ದೇಹವನ್ನೇಕೆ ಯಾರೂ ಜೋಪಾನ ಮಾಡುವುದಿಲ್ಲ? ಆತ್ಮಕ್ಕೆ ಮಹತ್ವ ನೀಡುತ್ತೇವೆ. ಆತ್ಮವನ್ನು ದೇಹದಿಂದ ಬೇರ್ಪಡಿಸಿ ನೋಡಿ.

ಪ್ರ: ಸೂಕ್ಷ್ಮ ಅಹಂ ಎಂದರೇನು? ಅದನ್ನು ಹೇಗೆ ನಿವಾರಿಸುವುದು?

ಶ್ರೀ ಶ್ರೀ ರವಿಶಂಕರ್: ‘ನನಗೆ ಅಹಂ ಇಲ್ಲ’ ಎಂದು ನೀವಂದುಕೊಂಡಾಗ ಅದು ಸೂಕ್ಷ್ಮ ಅಹಂ.  ‘ನಾನು ಬದುಕಿರುವ, ಅತ್ಯಂತ ಸರಳ ಹಾಗೂ ನಮ್ರ ವ್ಯಕ್ತಿ’ ಎಂದೆನಿಸಿದಾಗ ಅದು ಸೂಕ್ಷ್ಮ ಅಹಂ.

ನೋಡಿ, ನಿಮ್ಮಲ್ಲಿ ಅಹಂ ಇದ್ದರೆ ಇರಲಿ, ನಿಮ್ಮ ಜೇಬಿನಲ್ಲಿಟ್ಟುಕೊಳ್ಳಿ. ಪರವಾಗಿಲ್ಲ. ಅದನ್ನೇಕೆ ತೊಲಗಿಸಬೇಕು?

ಅಹಂ ಅನ್ನು ತೊಲಗಿಸಲು ಯತ್ನಿಸಿದರೆ ಆಗ ಇನ್ನೊಂದು ಭಾರಿ ಸಮಸ್ಯೆಯುಂಟಾಗುತ್ತದೆ. ಆಗ ‘ನೋಡಿ, ನಾನು ಅಹಂ ಅನ್ನು ಹತ್ತಿಕ್ಕಿದ್ದೇನೆ!’ ಎನ್ನುವಿರಿ. ಅದು ಸೂಕ್ಷ್ಮ ಅಹಂ.

ಅಹಂ ಅನ್ನು ನಾಶಪಡಿಸುವುದರಿಂದ ಅದನ್ನು ಹತ್ತಿಕ್ಕಲಾರಿರಿ. ಸಹಜವಾಗಿರಿ. ಸಹಜತೆಯಲ್ಲಿ ನಿಮ್ಮ ಅಹಂ ಕರಗಿ ಹೋಗುವುದು.

ಪ್ರ: ಗುರೂಜೀ, ಶರಣಾಗತರನ್ನು ಸಂಕಲ್ಪ ತೆಗೆದುಕೊಳ್ಳಲು ಏಕೆ ಹೇಳುವಿರಿ? ಇದು ಹೇಗೆ ಸಾಧ್ಯ? ನಿಮ್ಮ ವಿನಾ ನಮಗೆ ಯಾವುದರ ಅವಶ್ಯಕತೆಯೂ ಇಲ್ಲ. ಹಾಗಿದ್ದಲ್ಲಿ ಸಂಕಲ್ಪ ತೆಗೆದುಕೊಳ್ಳುವುದಾದರೂ ಏಕೆ?

ಶ್ರೀ ಶ್ರೀ ರವಿಶಂಕರ್: ಸಂಕಲ್ಪ ತೆಗೆದುಕೊಳ್ಳುವಂತೆ ನಾವು ಯಾರಿಗೂ ಒತ್ತಾಯ ಮಾಡುವುದಿಲ್ಲ. ಚಿಕ್ಕ ಚಿಕ್ಕ ವಿಷಯಗಳಿಗೆ ಸಂಕಲ್ಪ ತೆಗೆದುಕೊಳ್ಳಲು ಹೇಳುವುದಿಲ್ಲ. ನಿಮ್ಮ ಚಿಕ್ಕ ಚಿಕ್ಕ ಆಸೆ-ಆಕಾಂಕ್ಷೆಗಳು ಹೇಗಾದರೂ ಪೂರ್ಣಗೊಳ್ಳುತ್ತವೆಯಲ್ಲವೇ?

ಏನೇ ಆದರೂ ಎಲ್ಲವೂ ನಡೆಯುತ್ತದೆ ಅಲ್ಲವೇ. ಆದ್ದರಿಂದ ಸಂಗತಿಗಳು ನಡೆಯುತ್ತಿರುವಾಗ, ಚಿಕ್ಕ ಚಿಕ್ಕ ಆಸೆಗಳನ್ನಿಟ್ಟುಕೊಳ್ಳದೇ ದೊಡ್ಡ ವಿಷಯಗಳಿಗಾಗಿ ಹಂಬಲಿಸಿ. ರಾಷ್ಟ್ರದ ಬಗ್ಗೆ, ವಿಶ್ವದ ಅಭಿವೃದ್ಧಿಯ ಬಗ್ಗೆ ಯೋಚಿಸಿ.

ಸಾಮಾನ್ಯವಾಗಿ, ನೀವು ನಿಮಗಾಗಿ ಚಿಕ್ಕ ಆಸೆಗಳನ್ನಿಟ್ಟುಕೊಂಡಿರುತ್ತೀರಿ. ಎಲ್ಲರಿಗೂ ಪ್ರಯೋಜನವಾಗುವಂತಹ ಸಂಕಲ್ಪವನ್ನು ತೆಗೆದುಕೊಳ್ಳಿ. ಇದನ್ನೇ ಸನಾತನ ಧರ್ಮದಲ್ಲಿ ಹೇಳಿರುವುದು, ‘ತನ್ಮೇ ಮನಃ ಶಿವ ಸಂಕಲ್ಪಮಸ್ತು’ ಅಂದರೆ ನನ್ನ ಮನಸ್ಸು ಸದಾ ಎಲ್ಲರ ಏಳಿಗೆಯನ್ನೇ ಸಂಕಲ್ಪವಾಗಿ ಹೊಂದಿರಲಿ.

ಪ್ರ: ಗುರೂಜೀ, ಸಹಜ್ ಮಿಲೇ ಅವಿನಾಶಿ (ಸಹಜತೆಯಿಂದ ಸುಲಭವಾಗಿ ದಿವ್ಯತೆಯನ್ನು ಪಡೆಯಬಹುದು) ಎಂದು ಆಗ್ಗಾಗ್ಗೆ ಹೇಳುತ್ತೀರಿ. ಸಹಜತೆಯೊಂದಿಗೆ ನಮಗೆ ವಿಶಾಲವಾದ ದೃಷ್ಟಿಕೋನವೂ  ಇರಬೇಕು. ನಮ್ಮ ಜೀವನದ ದೃಷ್ಟಿಕೋನವನ್ನು ಹೇಗೆ ವಿಸ್ತಾರಗೊಳಿಸುವುದು?

ಶ್ರೀ ಶ್ರೀ ರವಿಶಂಕರ್: ನಿಮಗೆ ಹೆಚ್ಚು ತಿಳಿಯಬೇಕೆನ್ನುವ ಆಸೆ ಇದೆ. ಇಷ್ಟೇ ಸಾಕು.

ಪ್ರ: ಗುರುದೇವ್, ಪ್ರೀತಿಯುಂಟಾಗಲು ಇಬ್ಬರೂ ಒಂದೇ ರೀತಿಯಲ್ಲಿ ಆಲೋಚಿಸುವುದು ಆವಶ್ಯಕವೇ? ಭಿನ್ನಾಭಿಪ್ರಾಯಗಳಿದ್ದರೂ ಪ್ರೀತಿಯಿರಲು ಸಾಧ್ಯವಿಲ್ಲವೇ?

ಶ್ರೀ ಶ್ರೀ ರವಿಶಂಕರ್: ನೋಡಿ, ನಿಮ್ಮ ಮನಸ್ಸಿನಲ್ಲೇನೋ ಇದೆ, ಆದರೆ ಇನ್ನೇನನ್ನೋ ಕೇಳುತ್ತಿರುವಿರಿ. ನಾನು ನಿಮಗೆ ಉತ್ತರ ಕೊಟ್ಟರೆ, ಅದನ್ನು ಇನ್ಯಾವುದಕ್ಕೋ ಬಳಸಿಕೊಳ್ಳುತ್ತೀರ. ಇಂತಹ ಬಲೆಗೆ ನಾನು ಸಿಕ್ಕಿಹಾಕಿಕೊಳ್ಳುವುದಿಲ್ಲ. ನೀವು ಚಾಣಾಕ್ಷರಾದರೆ, ನಾನೂ ಚಾಣಾಕ್ಷನೇ.

ಒಂದು ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

ಒಮ್ಮೆ ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ, ಸೆಕ್ಯೂರಿಟಿ ಮೂಲಕ ಸಾಗುತ್ತಿದ್ದೆನು. ಅಲ್ಲಿ ಸುಮಾರು ೨೦೦ ರಿಂದ ೩೦೦ ಜನರು ನನ್ನನ್ನು ಬೀಳ್ಕೊಡಲು ನೆರೆದಿದ್ದರು. ಆಗ ಸುಮಾರು ೬೦ ದಾಟಿದ ಮಹಿಳೆಯೊಬ್ಬರು ನನ್ನ ಬಳಿಗೆ ಬಂದು, ತಮ್ಮ ಕೈಯಲ್ಲಿನ ಉಂಗುರವನ್ನು ತೋರಿಸಿ ‘ಇದರ ಅವಶ್ಯಕತೆಯಿದೆಯೇ?’ ಎಂದು ಕೇಳಿದರು. ಕಲ್ಲಿನ ಉಂಗುರವನ್ನು ನೋಡಿ, ‘ಇಲ್ಲ ಅದರ ಅಗತ್ಯವಿಲ್ಲ’ ಎಂದೆನು. ನಂತರ ನ್ಯೂಯಾರ್ಕ್‍ಗೆ ತೆರಳಿದೆನು.

ಎರಡು ದಿನಗಳ ನಂತರ ನನಗೆ ಅವರ ಪತಿ ಕರೆ ಮಾಡಿ ಕೇಳಿದರು, ‘ಗುರುದೇವ್, ನನ್ನನ್ನು ಡೈವೋರ್ಸ್ ಮಾಡಲು ನನ್ನ ಪತ್ನಿಗೆ ಹೇಳಿದಿರಾ?’ ‘ಇಲ್ಲ’ ಎಂದೆನು.

ಎಪ್ಪತ್ತು ವರ್ಷಗಳ ಆಸುಪಾಸಿನ ವ್ಯಕ್ತಿ. ಅವರಿಬ್ಬರು ೪೦ ವರ್ಷಗಳಿಂದ ಮದುವೆಯಾಗಿದ್ದರು. ಇಬ್ಬರೂ ನನ್ನ ಭಕ್ತರೇ. ಅವರು, ‘ಗುರುದೇವ್, ನೀವು ಹಾಗೆ ಹೇಳುವುದಿಲ್ಲವೆಂದು ನನಗೆ ಗೊತ್ತು, ಆದರೆ ನನ್ನ ಪತ್ನಿ ನನಗೆ ಡೈವೋರ್ಸ್ ಪೇಪರುಗಳನ್ನು ಕಳುಹಿಸಿದ್ದಾಳೆ, ಏಕೆಂದರೆ ನಾವಿನ್ನು ಮದುವೆಯಾಗಿರುವ ಅಗತ್ಯವಿಲ್ಲವೆಂದು ನೀವು ಹೇಳಿರುವಿರಂತೆ.’

‘ನಿಮ್ಮ ಪತ್ನಿಯೊಂದಿಗೆ ಮಾತನಾಡುತ್ತೇನೆ’ ಎಂದೆನು.

ಆಕೆ, ‘ಗುರುದೇವ್, ನಾನು ನಿಮಗೆ ನಮ್ಮ ಮದುವೆಯ ಉಂಗುರವನ್ನು ತೋರಿಸಿ ಇದರ ಅಗತ್ಯವಿದೆಯೇ ಎಂದು ಕೇಳಿದಾಗ, ನೀವು ಇಲ್ಲವೆಂದಿರಿ.’

ಈ ಪ್ರಸಂಗದ ಬಳಿಕ ನಾನೂ ಕೂಡ ಬುದ್ಧಿವಂತನಾಗಿದ್ದೇನೆ, ಮಾತನಾಡುವಾಗ ಜಾಗ್ರತೆವಹಿಸುತ್ತೇನೆ! (ನಗೆ) ನಿಮ್ಮ ಪ್ರಶ್ನೆಗೆ ನಾನು ಉತ್ತರ ನೀಡುವುದಿಲ್ಲ. ಇಲ್ಲದಿದ್ದರೆ, ನಿಮ್ಮ ಮನಸ್ಸು ಎಲ್ಲ ಬಗೆಯ ಆಲೋಚನೆಗಳುಂಟು ಮಾಡುವುದು. ಆ ಕತೆಯಂತೆ, ತನ್ನ ಪತಿಯಿಂದ ಡೈವೋರ್ಸ್ ಬಯಸಿದ್ದ ಆ ಮಹಿಳೆ, ಉಂಗುರವನ್ನು ತೋರಿಸಿ ನನ್ನ ಒಪ್ಪಿಗೆಯನ್ನು ಕೇಳಿದರು.

ಇತ್ತೀಚಿನ ದಿನಗಳಲ್ಲಿ ಜನರು ಎಲ್ಲ ಬಗೆಯ ಕಲ್ಲುಗಳನ್ನು ಧರಿಸುತ್ತಾರೆ. ನೋಡಿ, ಈ ರತ್ನಗಳ ಮೇಲೆ ಅಷ್ಟೊಂದು ನಂಬುವ ಅಗತ್ಯವಿಲ್ಲ. ಯಾವುದೇ ರತ್ನಕ್ಕಿಂತ ನಿಮ್ಮ ಚೈತನ್ಯ ಹೆಚ್ಚು ಶಕ್ತಿಯುತವಾದುದು. ರತ್ನಗಳಿಗೆ ಪ್ರಾಮುಖ್ಯತೆ ಕೊಡಬೇಡಿ. ಯಾವುದೇ ರತ್ನಕ್ಕಿಂತ ನೀವು ಹೆಚ್ಚು ಬಲಶಾಲಿಗಳು.

ಪ್ರ: ಗುರುದೇವ್, ನನ್ನ ಅರ್ಹತೆಗಿಂತ ಹೆಚ್ಚಿಗೆ ನನಗೆ ನೀಡಿದ್ದೀರಿ. ನಾನು ನಿಮಗೇನು ಮಾಡಿದರೂ ಅದೇನೂ ಅಲ್ಲವೆಂದೆನಿಸುತ್ತದೆ. ಆದರೆ ನಿಮ್ಮ ಬೇಡಿಕೆ ಏನ್ನನ್ನಾದರೂ ನೀವು ಹೇಳಬೇಕೆಂಬುದು ನನ್ನ ಆಸೆ.

ಶ್ರೀ ಶ್ರೀ ರವಿಶಂಕರ್: ಹೌದು. ನೀವು ಸಂತೋಷವಾಗಿರಿ ಮತ್ತು ಎಲ್ಲರನ್ನೂ ಸಂತೋಷಪಡಿಸಿರಿ.

ಈ ಜಗತ್ತಿನಲ್ಲಿ ನೀವು ಅನೇಕ ಕೆಲಸಗಳನ್ನು ಮಾಡಬಹುದು. ಜ್ಞಾನವನ್ನು ಹರಡಿ, ಮುಗುಳ್ನಗೆಯನ್ನು ಹರಡಿ, ಸಂತೋಷವನ್ನು ಹರಡಿ. ಈ ಜ್ಞಾನ ಎಷ್ಟು ಸುಂದರ ಹಾಗೂ ಸಮರ್ಪಕ. ಇದನ್ನು ಹೆಚ್ಚು ಜನರಿಗೆ ತಲುಪುವಂತೆ ಮಾಡಿ.