ಮಂಗಳವಾರ, ಮೇ 14, 2013

ಗೀತಾ ಜ್ಞಾನ - ೪


೧೪ ಮೇ ೨೦೧೩
ಬೆಂಗಳೂರು, ಭಾರತ

ಅಸತ್ಯ ವಾಸ್ತವ

ಗವಾನ್ ಶ್ರೀ ಕೃಷ್ಣ ಹೇಳುತ್ತಾನೆ, ’ಈ ಮೂರು ಗುಣಗಳು ನನ್ನಿಂದ ಬಂದಿವೆ, ಆದರೆ ಮಾಯೆಯಿಂದಾಗಿ ಇವೆಲ್ಲವನ್ನು ದಾಟುವದು ಸುಲಭವಲ್ಲ, ಈ ಮಾಯೆಯೂ ನನ್ನಿಂದಲೇ ಬಂದಿರುವುದು.’

ಮಾಯೆಯ ಪ್ರಭಾವವು ಎಷ್ಟು ಅಗಾಧವಾದುದು ಎಂದರೆ, ನೀವು ಎಲ್ಲೇ ಹೋಗಲಿ ಅದರ ಪ್ರಭಾವವನ್ನು ಅನುಭವಿಸುತ್ತೀರಿ. ನೀವು ಒಂದು ಮಾಯೆಯ ಜಾಲದಿಂದ ಮುಕ್ತರಾಗಿದ್ದೀರಿ ಎಂದುಕೊಂಡಾಕ್ಷಣ, ಇನ್ನೊಂದರಲ್ಲಿ ಸಿಕ್ಕಿಕೊಂಡಿರುವುದನ್ನು ಅನುಭವಿಸುತ್ತೀರಿ.

ಒಬ್ಬ ಮಹೋದಯ ನನ್ನ ಬಳಿ ಬಂದು ಒಮ್ಮೆ ಹೇಳಿದ, ’ಗುರುದೇವ, ದಯವಿಟ್ಟು ನನ್ನನ್ನು ಆಶೀರ್ವದಿಸಿ, ನನಗೆ ವಿವಾಹವಾಗಬೇಕು. ಇದು ನಾಲ್ಕನೆಯ ಸಲ, ನನ್ನ ಹಿಂದಿನ ಮೂರು ವಿವಾಹಗಳಲ್ಲಿ ವಿಚ್ಚೇದನೆಯಾಯಿತು. ಹಾಗಾಗಿ ದಯವಿಟ್ಟು ನನಗೆ ಸೂಕ್ತವಾದ ಹೆಣ್ಣು ಸಿಗಲಿ ಎಂದು ಆಶೀರ್ವದಿಸಿ.’

ನೋಡಿ, ಒಂದೋ ಎರಡೋ ಮದುವೆ ವಿಫಲವಾದರೆ ಪರವಾಗಿಲ್ಲ. ಆದರೆ ಮೂರು ಬಾರಿ ನಿಮ್ಮ ವಿವಾಹವು ವಿಚ್ಚೇದನೆಯಲ್ಲಿ ಕೊನೆಗೊಂಡಿದ್ದರೆ, ನಿಮ್ಮಲ್ಲೇನೋ ತಪ್ಪು ಇರುವುದನ್ನು ನೀವು ನೋಡಿಕೊಂಡು ಸರಿಪಡಿಸಬೇಕಾಗಿದೆ.

ಅಮೆರಿಕಾದಲ್ಲಿ ಒಬ್ಬ ಮಹಿಳೆಯು ’ನಿಮ್ಮ ವಿವಾಹವನ್ನು ಹೇಗೆ ಬೆಸೆಯುವುದು’ ಎಂಬ ಹಲವು ಕಾರ್ಯಾಗಾರಗಳನ್ನು ತೆಗೆದುಕೊಳ್ಳುತ್ತಿದ್ದಳು. ಜನರು ಅವಳ ಕಾರ್ಯಾಗಾರಗಳಲ್ಲಿ ಪಾಳ್ಗೊಳ್ಳಲು ಹಲವು ಸಾವಿರ ಡಾಲರ್ ಹಣ ಖರ್ಚು ಮಾಡುತ್ತಿದ್ದರು, ಆದರೆ ಆ ಮಹಿಳೆ ತಾನೇ ಎಂಟು ಬಾರಿ ವಿಚ್ಚೇದನೆ ಪಡೆದುಕೊಂಡಿದ್ದಳು!(ನಗು)

ಹಾಗೆ ಒಬ್ಬ ಭಕ್ತ ನನ್ನಲ್ಲಿ ಬಂದು ಹೇಳಿದನು, ’ಈ ಮಹಿಳೆ ತಾನೇ ಎಂಟು ಬಾರಿ ವಿಚ್ಚೇದಿತಳಾಗಿದ್ದಾಳೆ. ವಿವಾಹವನ್ನು ಹೇಗೆ ಪುಷ್ಟಿಸುವುದು ಎಂದು ಈಕೆ ಜನರಿಗೆ ಹೇಗೆ ಕಲಿಸಲು ಸಾಧ್ಯ?’

ನಾನು ಹೇಳಿದೆ, ’ಇಲ್ಲ, ಈ ವಿಷಯದಲ್ಲಿ ಅವಳು ಸರಿಯಾದ ವ್ಯಕ್ತಿಯಾಗಿದ್ದಾಳೆ! ಅವಳು ಆ ಎಂಟು ವಿವಾಹಗಳಿಂದ ಕಲಿತುಕೊಂಡಿರಬೇಕು! ಎಂಥ ತಪ್ಪುಗಳು ವಿವಾಹ ಸಂಬಂಧವನ್ನು ಮುರಿಯಬಹುದು ಎಂದು ಅವಳು ಜನರಿಗೆ ಕಲಿಸುತ್ತಿರಬೇಕು, ಹಾಗಾಗಿ ವಿವಾಹ ಸಂಬಂಧದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂದು ಹೇಳಲು ಆಕೆ ಸರಿಯಾದ ವ್ಯಕ್ತಿ.’

ನಮ್ಮ ಪರಿಸ್ಥಿತಿಗಳಿಗೆ ನಾವು ಸಾಮಾನ್ಯವಾಗಿ ಇನ್ನೊಬ್ಬರನ್ನು, ಈ ಜಗತ್ತನ್ನೋ ಅಥವಾ ನಮ್ಮನ್ನೇ ನಾವು ದೂರುತ್ತೇವೆ, ನಂತರ ದೋಷಪ್ರಜ್ಞೆಯಿಂದ ತುಂಬಿಕೊಳ್ಳುತ್ತೇವೆ. ಆದರೆ ಎಲ್ಲವೂ ಆ ಮೂರು ಗುಣಗಳಿಂದಾಗಿ ನಡೆಯುತ್ತದೆ, ಆ ಗುಣಗಳು ದೈವಿಕತೆಯ ಪ್ರಕಟಣೆ.

ತಮೋಗುಣವೂ(ಜಡತ್ವ ಮತ್ತು ನೇತ್ಯಾತ್ಮಕತೆಯ ಒಂದು ಅಸ್ತಿತ್ವದ ದೆಸೆ) ಕೂಡ ದೈವಿಕತೆಯ ಒಂದು ರೂಪವೆಂದು ನೋಡಲ್ಪಡುವುದು ಭಾರತದಲ್ಲೇ. ಇದು ಲೋಕದಲ್ಲಿ ಇನ್ನೆಲ್ಲೂ ಕಾಣಲು ಸಿಗುವುದಿಲ್ಲ. ಲೋಕದ ಇನ್ನುಳಿದ ಭಾಗಗಳಲ್ಲಿ ನೇತ್ಯಾತ್ಮಕವಾಗಿರುವ ಯಾವುದನ್ನಾದರೂ ಆಸುರೀ ಗುಣವೆಂದು ಕಾಣುತ್ತಾರೆ; ಅದು ಭಗವಂತನಲ್ಲದ ಪ್ರತ್ಯೇಕವಾಗಿರುವ ಶೈತಾನನ ಭಾಗವೆಂದು ಅನ್ನಿಸಲ್ಪಡುತ್ತದೆ. ಆದರೆ ಇದು ಭಾರತದಲ್ಲಿರುವ ನಂಬಿಕೆಯಲ್ಲ.

ಇಲ್ಲಿ ತಮೋಗುಣವೂ ಭಗವಂತನಿಂದ ಬಂದಿದ್ದು ಅದರ ಅಧಿಪತಿಯೂ ಅವನೇ ಎಂದು ನಂಬಲಾಗುತ್ತದೆ. ಇದರಿಂದಲೇ ಕಾಳೀ ಮಾತೆಯ ಭಯಂಕರ ರೂಪವನ್ನು ದೈವಿಕತೆಯ ರೂಪವೆಂದು ಹೇಳಲಾಗುತ್ತದೆ. ಹೀಗೇಕೆ? ಯಾಕೆಂದರೆ ಚಲನಚಿತ್ರದ ಒಬ್ಬ ನಿರ್ದೇಶಕನಿಗೆ, ಚಲನಚಿತ್ರದ ಪ್ರತಿಯೊಂದು ಪಾತ್ರವೂ ಅವನಿಗೆ ಸೇರಿದ್ದು. ಅದು ನಾಯಕನೋ, ನಾಯಕಿಯೋ ಅಥವಾ ಕೇಡಿಯೋ, ಒಬ್ಬ ನಿರ್ದೇಶಕನು ಎಲ್ಲಾ ಪಾತ್ರಗಳನ್ನು ಸಮಾನವೆಂದು ನೋಡುತ್ತಾನೆ. ಅವರಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಬೇರೆ ಬೇರೆ ಸಂಬಳವಿದ್ದರೂ, ಅವರಲ್ಲಿ ಎಲ್ಲಾರೂ ಮುಖ್ಯ, ಯಾಕೆಂದರೆ ಆ ಚಲನಚಿತ್ರವನ್ನು ನಿರ್ಮಿಸಲು ಅವರೆಲ್ಲರೂ ಅಗತ್ಯ.

ಇದೇ ರೀತಿಯಲ್ಲಿ, ಸೃಷ್ಟಿಕರ್ತನು ಈ ಸೃಷ್ಟಿಯನ್ನು ಆ ಮೂರು ಗುಣಗಳನ್ನು ಉಪಯೋಗಿಸಿ ಸೃಷ್ಟಿಸಿದನು. ಹಾಗಾಗಿ ಶ್ರೀ ಕೃಷ್ಣನು ಹೇಳುವುದು ಏನೆಂದರೆ ಈ ಮೂರು ಗುಣಗಳು ಅವನಿಗೆ ಸೇರಿರುವವು(ಅವನ ದಿವ್ಯ ಶಕ್ತಿಗಳದ್ದೇ ಒಂದು ವಿಸ್ತರಣೆ).
ಅವನು ಹೇಳುತ್ತಾನೆ, ’ಈ ಮೂರು ಗುಣಾಗಳು ನನ್ನ ಮೂಲಕ ಕೆಲಸಮಾಡುತ್ತವೆ, ಮತ್ತು ಕೇವಲ ನನ್ನ ಮೂಲಕವಷ್ಟೇ ನಿಮಗೆ ಅವನ್ನು ಅಧಿಗಮಿಸಲು ಸಾಧ್ಯ. ನಿಮಗೆ ಅವನ್ನು ತಾವಾಗಿಯೇ ಅಧಿಗಮಿಸಲು ಆಗುವುದಿಲ್ಲ. ನನ್ನ ಕೃಪೆಯಿಲ್ಲದೇ ನಿಮಗೆ ಅವುಗಳ ಪ್ರಭಾವದಿಂದ(ಮಾಯೆಯಿಂದ) ಮುಕ್ತರಾಗಲು ಆಗುವುದಿಲ್ಲ.’ ಶ್ರೀ ಕೃಷ್ಣನು ಇದನ್ನೂ ಅರ್ಜುನನಿಗೆ ಹೇಳುತ್ತಾನೆ.

ನಾವು ದುರ್ಗಾಸಪ್ತಶತಿಯನ್ನು(ಮಾರ್ಕಂಡೇಯ ಪುರಾಣಾದ ದೇವಿ ಮಾಹಾತ್ಯಂ ನಲ್ಲಿ ಬರುವದೇವಿ ಮಾತೆಯ ಸ್ತುತಿಯಾಗಿರುವ ೭೦೦ ಶ್ಲೋಕಗಳು) ಪಠಿಸುವಾಗ, ಅದರಲ್ಲಿ ಹೀಗೊಂದು ಶ್ಲೋಕವಿದೆ,

’ಯಾ ದೇವಿ ಸರ್ವಭೂತೇಷು ಭ್ರಾಂತಿ ರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ || ’
(ಭಾವಾರ್ಥ: ಓ ದೇವಿ ಮಾತೆಯೇ! ಭ್ರಾಂತಿಯ ವ್ಯಕ್ತ ರೂಪವಾಗಿರುವ ನಿನಗೆ ನಮಸ್ಕಾರ).

ಅದರ ಅರ್ಥ ನಿಮ್ಮೊಳಗೆ ಭ್ರಾಂತಿ ರೂಪದಲ್ಲಿರುವುದು ಆ ದೇವಿ ಮಾತೆಯೇ.

ಎಲ್ಲರೂ ತನ್ನ ವಿರುದ್ಧವಾಗಿರುವರು ಎಂದು ಕೆಲವರಿಗೆ ಈ ಭ್ರಮೆ ಇರುತ್ತದೆ. ಇದು ಬಹಳ ಸಾಧಿಸಿರುವ ಜನರಿಗೂ ಆಗುತ್ತದೆ. ಈಗ ಯೋಚಿಸಿ ಈ ಜಗತ್ತಿನಲ್ಲಿ ಯಾರಿಗೆ ತಾನೆ ಅವರ ವಿರುದ್ಧ ಹೋಗಲು ಸಮಯವಿದೆ? ಎಲ್ಲರೂ ತಮ್ಮದೇ ಕೆಲಸಗಳಿಂದ ತುಂಬಿಕೊಂಡು ಮಗ್ನರಾಗಿದ್ದಾರೆ, ಮತ್ತು ತಮ್ಮ ಬಗ್ಗೆಯೇ ಯೋಚಿಸುತ್ತಿದ್ದಾರೆ. ಆದರೆ ಅಂಥ ವ್ಯಕ್ತಿ ಹಾಗಿದ್ದರೂ ಎಲ್ಲರೂ ತನ್ನ ವಿರುದ್ಧವಾಗಿದ್ದಾರೆ ಎಂದು ಯೋಚಿಸುತ್ತಾನೆ/ಯೋಚಿಸುತ್ತಾಳೆ, ಮತ್ತು ಈ ಯೋಚನೆಗಳಿಂದ ಬಹಳ ತೊಂದರೆಗೊಳಪಡುತ್ತಾರೆ.

ಹಾಗಾಗಿ ಭ್ರಮೆಯೂ ದೇವಿ ಮಾತೆಯ ಒಂದು ಅಭಿವ್ಯಕ್ತಿ ಮತ್ತು ದೈವಿಕತೆಯ ಒಂದು ರೂಪ.

ಇಂಥ ಒಂದು ವಿಚಾರವನ್ನು ಹೇಳಲು ಒಬ್ಬರಿಗೆ ಅಪಾರ ಧೈರ್ಯ ಬೇಕಾಗುತ್ತದೆ. ಒಬ್ಬ ಬಹಳ ಧೀರನಾಗಿರುವ ಮತ್ತು ಎಲ್ಲಾ ವಾಸ್ತವಾಶಗಳನ್ನು ಸರಿಯಾಗಿ ಪರಿಶೀಲಿಸಿರುವ ವ್ಯಕ್ತಿಗೆ ಮಾತ್ರ ಅಂಥ ವಿಚಾರವನ್ನು ಹೇಳಲು ಸಾಧ್ಯ.

ಒಬ್ಬ ಅನುಭವಿಸಿರುವ ಮತ್ತು ಈ ಸೃಷ್ಟಿಯಲ್ಲಿ ಎಲ್ಲವನ್ನೂ ಕ್ರಿಯಾಶೀಲವಾಗಿಸುತ್ತಿರುವ, ಈ ಭೌತಿಕ ಜಗತ್ತನ್ನು ಮೀರಿರುವ ಆ ಅವ್ಯಕ್ತ ದೈವೀ ತತ್ತ್ವವನ್ನು ಬಲ್ಲವನಿಗೆ ಮಾತ್ರ ಅಂಥ ಗಹನ ವಿಚಾರವನ್ನು ಹೇಳಲು ಸಾಧ್ಯ. ಎಲ್ಲರಿಂದಲೂ ಇದನ್ನು ಮಾಡಲು ಸಾಧ್ಯವಿಲ್ಲ. ಇದರಿಂದಲೇ ಶ್ರೀ ಕೃಷ್ಣನಿಗೆ ’ಭಗವಾನ್’ ಎಂಬ ಬಿರುದನ್ನು ನೀಡಲಾಗಿದೆ.

ಜನರು ಶ್ರೀ ರಾಮನು ’ಮರ್ಯಾದಾ ಪುರುಷೋತ್ತಮ’(ಧರ್ಮ ಮತ್ತು ನ್ಯಾಯ-ನೀತಿನಿಷ್ಠರಲ್ಲಿ ಅತ್ಯುತ್ತಮರಾಗಿರುವ) ಎಂದು ಪರಿಗಣಿಸಲಾಗಿದ್ದಾನೆ ಎಂದು ಹೇಳುವಂತೆ ಶ್ರೀ ಕೃಷ್ಣನು ಯೋಗೇಶ್ವರನೆಂದು(ಯೋಗದ ಪರಿಪೂರ್ಣ ಆದರ್ಶ) ಕರೆಯಲ್ಪಡುತ್ತಾನೆ.

ಅವರು ಭಗವಾನ್ ಎಂದು ಏಕೆ ಕರೆಯಲ್ಪಡುತ್ತಾರೆ? ಯಾಕೆಂದರೆ ಅವರಲ್ಲಿ ಆಧಾರವೂ ಮತ್ತು ಪಂಚಭೂತಗಳನ್ನು ಹಾಗೂ ಮಾಯೆಯನ್ನು ಮೀರಿರುವ ಅವ್ಯಕ್ತ ಹಾಗು ಸರ್ವವ್ಯಾಪಿ ತತ್ತ್ವದ ಜ್ಞಾನವಿದೆ.

ಹಾಗಾಗಿ ಶ್ರೀ ಕೃಷ್ಣನು ಹೇಳುತ್ತಾನೆ, ’ಎಲ್ಲಾ ಮೂರು ಗುಣಗಳು ಮತ್ತು ಮಾಯೆಯು ದೈವೀ ಗುಣಗಳಾಗಿವೆ. ಹಾಗಾಗಿ ಅವೆಲ್ಲವನ್ನೂ ನಾವು ಆದರಿಸಬೇಕು, ಯಾಕೆಂದರೆ ಅವು ದೈವಿಕತೆಯ ರೂಪವಾಗಿವೆ’.

ಈ ಸೃಷ್ಟಿಯ ಲಯಕ್ಕೆ ಕಾರಣವಾಗಿರುವ ದೈವಿಕತೆಯ ಅಂಶವು, ಈ ಸೃಷ್ಟಿಯ ರಕ್ಷಣೆಗೆ ಕಾರಣವಾಗಿರುವ ಅಂಶದಷ್ಟೆ ಆದರಿಸಲ್ಪಡುತ್ತದೆ. ಎರಡಕ್ಕೂ ಸಮಾನ ಪ್ರಾಮುಖ್ಯವಿದೆ.

ಭಗವಾನ್ ಶಿವನು ವಿನಾಶದ ಕಾರಣವಾಗಿರುವ ಭಗವಂತನೆಂದು ಎಲ್ಲೆಲಿಯೂ ಆದರಿಸಲ್ಪಡುತ್ತಾನೆ. ಭಗವಾನ್ ಬ್ರಹ್ಮ ತನ್ನ ಸೃಜಿಸುವ ಕರ್ತವ್ಯವನ್ನು ಸುಮಾರಾಗಿ ಪೂರೈಸಿಯಾಗಿದೆ. ಆದರೆ ಭಗವಾನ್ ವಿಷ್ಣು ಮತ್ತು ಭಗವಾನು ಶಿವ ಇವರು ಭಗವಾನ್ ಬ್ರಹ್ಮನಿಗಿಂತ ಹೆಚ್ಚು ಆರಾಧಿಸಲ್ಪಡುತ್ತಾರೆ.

ಹಾಗಾಗಿ ಈ ಮೂರು ಗುಣಗಳು ದೈವೀ ಪ್ರಕೃತಿಯನ್ನು ಹೊಂದಿವೆ ಮತ್ತು ಅವುಗಳ ಮಾಯೆಯನ್ನು ಮೀರುವುದು ಬಹಳ ಕಷ್ಟ. ಭಗವಾನ್ ಶ್ರೀ ಕೃಷ್ಣನು ಹೀಗೆ ಹೇಳುತ್ತಿರುವುದು.

ಒಬ್ಬ ಬಹಳ ಗಹನ ಜ್ಞಾನವಿರುವ ವ್ಯಕ್ತಿಗೇ ಮಾತ್ರ ಇದನ್ನು ಹೇಳಲು ಸಾಧ್ಯ. ಯಾರಾದರೂ ಇದನ್ನು ಸಾಮಾನ್ಯವಾಗಿ ಹೇಳಿದರೆ, ಜನರು ಅವನ ಮಾತಿಗೆ ಮಹತ್ವ ಕೊಡುವುದಿಲ್ಲ. ಅವರು ಹೇಳುತ್ತಾರೆ, ’ಅವನು ನಿರರ್ಥಕ ಮಾತುಗಳನ್ನಾಡುತ್ತಿದ್ದಾನೆ’.

ಆದರೆ ಮಾಯೆಯನ್ನು ಮೀರುವುದು ಖಂಡಿತವಾಗಿ ಕಷ್ಟ ಎಂಬುದನ್ನು ನಾವು ಅನುಭವಿಸಿದ್ದೇವೆ. ಆಧ್ಯಾತ್ಮಿಕ ಮಾರ್ಗದಲ್ಲಿರುವ ಭಕ್ತನಿಗೆ ಇದೇ ಅನುಭವವಿರುತ್ತದೆ.

ಇಲ್ಲಿ ಗುರು(ಶ್ರೀ ಕೃಷ್ಣ) ಈ ವಸ್ತುಸ್ಥಿತಿಯನ್ನು ಗುರುತಿಸುತ್ತಿದ್ದಾನೆ. ಆದ್ದರಿಂದಲೇ ಶ್ರೀ ಕೃಷ್ಣನು ಅರ್ಜುನನಿಗೆ ಹೇಳುತ್ತಾನೆ, ’ಇದು ನಿನಗೆ ಬಹಳ ಕಷ್ಟವೆಂದು ನನಗೆ ಗೊತ್ತು’.

ಹಾಗಾಗಿ ಶ್ರೀ ಕೃಷ್ಣನು ಅರ್ಜುನನ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾನೆ.

ಒಬ್ಬ ಗುರುವಿನ ಕರ್ತವ್ಯವೆಂದರೆ ಮೊದಲು ತನ್ನ ಶಿಷ್ಯನ ಸ್ಥಿತಿಯನ್ನು ಅರ್ಥಮಾಡಿಕೊಂಡು ಮತ್ತೆ ನಂತರ ಅವನಿಗೆ ಮಾರ್ಗದರ್ಶನ ನೀಡುವುದು. ಅರ್ಜುನನಿಗೆ ಇದನ್ನು ದಾಟುವುದು ಕಷ್ಟವೆಂದು ಶ್ರೀ ಕೃಷ್ಣನು ಗುರುತಿಸಿದ್ದಾನೆ ಮತ್ತು ಅದನ್ನು ಅಂಗೀಕರಿಸುತ್ತಾನೆ.

ಸಾಮಾನ್ಯವಾಗಿ, ಜನರು ಯಾವುದನ್ನಾದರೂ ದಾಟಬೇಕೆಂದಿದ್ದರೆ ಅವರು ಅದನ್ನು ಟೀಕಿಸಿ ದಾಟುತ್ತಾರೆ. ಆಗಲೇ ಅದನ್ನು ದಾಟುವುದು ಸುಮಾರಾಗಿ ಅಸಾಧ್ಯವೇ ಆಗುತ್ತದೆ.

ನಿಮಗೆ ಯಾರಿಂದಲಾದರೂ ದೂರವಾಗಬೇಕಿದ್ದರೆ ಮತ್ತು ನೀವು ಅವರನ್ನು ಟೀಕಿಸುತ್ತಲೇ ಇದ್ದರೆ, ಆಗ ನಿಮಗೆ ಅವರಿಂದ ದೂರ ಸರಿಯಲು ಸಾಧ್ಯವಾಗುವುದೇ ಇಲ್ಲ. ನೀವು ಅವರೊಂದಿಗೆ ಇನ್ನೂ ಸಿಲುಕಿಕೊಂಡುಬಿಡುತ್ತೀರಿ. ನೀವು ಯಾರನ್ನು ಹೊಗಳುತ್ತೀರೋ ಅವರಿಗಿಂತ ಹೆಚ್ಚು ನೀವು ಯೋಚಿಸುವುದು ನೀವು ಯಾರನ್ನು ಟೀಕಿಸುತ್ತೀರೋ ಅವರ ಬಗ್ಗೆ. ನೀವು ಯಾರನ್ನಾದರೂ ಹೊಗಳಿ ನಂತರ ಅದರ ಬಗ್ಗೆ ಮರೆಯುತ್ತೀರಿ. ಆದರೆ ನೀವು ಯಾರನ್ನು ದ್ವೇಷಿಸುತ್ತೀರೋ ಅಥವಾ ಯಾರೊಂದಿಗೆ ನಿಮಗೆ ಘರ್ಷಣೆ ಇದೆಯೋ, ಅವರು ನಿಮ್ಮ ಮನಸ್ಸಿನಲ್ಲೇ ಇರುತ್ತಾರೆ. ಅಂಥವರು ನಿಮ್ಮ ಮನಸ್ಸಿನಲ್ಲಿ ಒಂದು ಸಣ್ಣ ಸ್ಥಳವನ್ನು ಬಾಡಿಗೆ ಕೊಡದೇ ಪಡೆದುಕೊಂಡು ಇರುತ್ತಾರೆ! ಒಬ್ಬ ಅಧಿಕಾರಿಯು ಅಲ್ಲಿ ಬಾಡಿಗೆಗಾಗಿ ಹೋದರೂ ಅವರು ನಿಮ್ಮ ಮನಸ್ಸನ್ನು ಬಿಟ್ಟು ಹೋಗುವಂತೆ ಕಾಣುವುದೇ ಇಲ್ಲ(ನಗು).

ಹಾಗಾಗಿ ನೀವು ಯಾರನ್ನು ಟೀಕಿಸುತ್ತೀರೋ ಅವರು ನಿಮ್ಮ ಮನಸ್ಸನ್ನು ತುಂಬಿಕೊಳ್ಳುತ್ತಾಎ ಮತ್ತು ನೀವು ಸಂಪೂರ್ಣವಾಗಿ ಅವರೊಂದಿಗೆ ಸಿಲುಕಿಕೊಳ್ಳುತ್ತೀರಿ. ಇದೇ ರೀತಿಯಲ್ಲಿ ಮಾಯೆಯನ್ನು ಟೀಕಿಸುತ್ತಲೇ ಇರುವ ಜನರು ಅದರಲ್ಲಿ ಇನ್ನೂ ಇನ್ನೂ ಸಿಲುಕಿಕೊಳ್ಳುತ್ತಾರೆ. ನೀವು ಮೊದಲು ಮಾಯೆಯನ್ನು ಸಂಪೂರ್ಣವಾಗಿ ಆದರಿಸಬೇಕು (ಯಾಕೆಂದರೆ ಅದು ದೈವಿಕತೆಯ ಒಂದು ವ್ಯಕ್ತ ರೂಪವಾಗಿದೆ).

ಹಾಗಾಗಿ, ಯಾವುದು ನಿಜವಾಗಿಯೂ ಅಸ್ತಿತ್ವದಲ್ಲಿಲ್ಲವೋ ಅದನ್ನು ಆದರಿಸಿ, ಯಾಕೆಂದರೆ ಮಾಯೆಯೆಂದರೆ ಅದೇ ಆಗಿದೆ - ಯಾವುದು ಸತ್ಯವೆಂದು ತೋರುತ್ತದೋ ಆದರೆ ನಿಜವಾಗಿ ಅಸ್ತಿತ್ವದಲ್ಲಿಲ್ಲ.

ಹಾಗಾಗಿ ಶ್ರೀ ಕೃಷ್ಣನು ಹೇಳುತ್ತಾನೆ, ’ಯಾವುದು ಇರುವಂತೆ ಕಾಣುತ್ತದೋ ಆದರೆ ನಿಜವಾಗಿ ಅಸ್ತಿತ್ವದಲ್ಲಿಲ್ಲವೋ ಅದನ್ನೂ ಆದರಿಸು, ಯಾಕಾಗಿ ಷ್ನಾಎಂದರೆ ಅದೂ ನನ್ನಿಂದಲೇ ಬಂದಿರುವುದು’.

ಭ್ರಾಂತಿಯ ಮೂಲ ಯಾವುದು? ನೀವು ಮೊದಲು ಕಂಡುಕೊಳ್ಳಬೇಕಾಗಿರುವುದು ಇದನ್ನೇ.

ಭ್ರಾಂತಿ ಉಂಟಾಗುವ ಮೊದಲು ನೀವು ಹೇಗೆ ಇದ್ದಿರಿ ಎಂಬುದರ ಮೇಲೆ ವಿಚಾರಿಸಿ, ಆಗ ಭ್ರಾಂತಿಯು ತಾನಾಗಿಯೇ ಕಳಚಿಕೊಳ್ಳುತ್ತದೆ ಎಂದು ನೀವು ಅರಿಯುತ್ತದೆ.

ಶ್ರೀ ಕೃಷ್ಣನು ಹೇಳುತ್ತಾನೆ, ’ಆ ಮೂರು ಗುಣಗಳ ಮೂಲಕ ವ್ಯಕ್ತವಾಗುತ್ತಿರುವ ಈ ಭ್ರಾಂತಿಯ ಮೂಲದತ್ತ ನಿಮ್ಮ ಗಮನವನ್ನು ಹರಿಸಿ, ಆಗ ಅದು ನನ್ನಿಂದ ಬರುತ್ತಿರುವುದೆಂದು ನಿಮಗೆ ತಿಳಿಯುವುದು. ಹಾಗಾಗಿ ಕೇವಲ ನನ್ನ ಕೃಪೆಯಿಂದ ನಿಮಗೆ ಅದನ್ನು ದಾಟಲು ಸಾಧ್ಯವಾಗುವುದು. ನಿಮ್ಮ ಸ್ವಂತ ಪ್ರಯತ್ನದಿಂದ ನೀವು ಭ್ರಾಂತಿಯಿಂದ ಮುಕ್ತರಾಗಲು ಸಾಧ್ಯವಿಲ್ಲ. ಸುಮ್ಮನೆ ನನ್ನಲ್ಲಿ ಶರಣಾಗತರಾಗಿ ಮತ್ತು ಅರ್ಪಿಸಿಬಿಡಿ. ಅದು ಮಾತ್ರ ನಿಮಗೆ ಈ ಭ್ರಾಂತಿಯನ್ನು ದಾಟಲು ಸಹಾಯವಾಗುತ್ತದೆ’.